ಅಂಕಣ
ನಿರ್ಣಾಯಕ ಹಂತದಲ್ಲಿ ಹನುಮನ ಬಾಲಕ್ಕೆ ಬೆಂಕಿ ಹಚ್ಚಿದ ಕಾಂಗ್ರೆಸ್; ಇದು ಚುನಾವಣೆಯ ಟರ್ನಿಂಗ್ ಪಾಯಿಂಟ್!
ಐಪಿಎಲ್ ಪಂದ್ಯ ನಡೆಯುತ್ತಿದೆ. ಹದಿನೈದೇ ಓವರ್‌ನೊಳಗೆ ಒಂದು ಟೀಮ್ ಗೆದ್ದೇ ಬಿಡುತ್ತದೆ ಎನ್ನುವಷ್ಟರಲ್ಲಿ ಒಂದೇ ಒಂದು ಓವರ್ ಪಂದ್ಯದ ಗತಿಯನ್ನೇ ಬದಲಿಸಿಬಿಡುತ್ತಿದೆ. ಹಾಗೆಯೇ, ಬಜರಂಗದಳ ನಿಷೇಧ ಘೋಷಣೆ ಈಗ ಕರ್ನಾಟಕ ಎಲೆಕ್ಷನ್‌ನ ದಿಕ್ಕನ್ನೇ ಬದಲಿಸುತ್ತಿದೆ!
| ರಮೇಶ್ ಕುಮಾರ್ ನಾಯಕ್
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಒಂದು ವಾರವಷ್ಟೇ ಬಾಕಿ ಇದೆ. ಆಡಳಿತ ಪಕ್ಷ ಬಿಜೆಪಿಯ ಅಧಿಕಾರ ಮತ್ತು ಧನಬಲದಿಂದ ಕೂಡಿದ ಅಬ್ಬರದ ಪ್ರಚಾರದ ನಡುವೆಯೂ ಕಾಂಗ್ರೆಸ್ ಜನಮಾನಸದಲ್ಲಿ ಮುನ್ನಡೆಯಲ್ಲೇ ಇತ್ತು. ಈವರೆಗಿನ ಬಹುತೇಕ ಚುನಾವಣೆ ಪೂರ್ವ ಸಮೀಕ್ಷೆಗಳ ಪ್ರಕಾರ, ಸರಳ ಬಹುಮತಕ್ಕೆ ಹತ್ತಿರದ ಸ್ಥಾನಗಳನ್ನು ಕಾಂಗ್ರೆಸ್ ಗಳಿಸುತ್ತದೆ ಎನ್ನಲಾಗಿತ್ತು. ಆದರೆ ಎಲೆಕ್ಷನ್‌ನ ಕ್ಲೈಮ್ಯಾಕ್ಸ್ ಹಂತದಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿನ ಒಂದೇ ಒಂದು ಸಾಲು ಟರ್ನಿಂಗ್ ಪಾಯಿಂಟ್ ಆಗಲಿದೆ.
ಅನಿರೀಕ್ಷಿತವಾಗಿ ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಬದಲಾವಣೆ, 40 ಪರ್ಸೆಂಟ್ ಭ್ರಷ್ಟಾಚಾರದ ಆರೋಪ, ಆಡಳಿತ ವಿರೋಧಿ ಅಲೆ, ದಶಕಗಳ ಕಾಲ ಜತೆಗಿದ್ದ ಜಗದೀಶ್ ಶೆಟ್ಟರ್‌ರಂಥ ಹಿರಿಯ ಲಿಂಗಾಯತ ನಾಯಕರ ಪಕ್ಷಾಂತರ ಇತ್ಯಾದಿಗಳು ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ವರವಾಗಿ ಪರಿಣಮಿಸಿದ್ದವು. ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ನಾಯಕತ್ವದಲ್ಲಿ ಕೈ ಪಾಳಯ ಸಲೀಸಾಗಿ 115 ಪ್ಲಸ್ ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ದಟ್ಟವಾಗಿತ್ತು. ಆದರೀಗ, ಅಧಿಕಾರಕ್ಕೆ ಬಂದರೆ ಬಜರಂಗದಳವನ್ನು ನಿಷೇಧ ಮಾಡುತ್ತೇವೆ ಎಂದು ತನ್ನ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಘೋಷಿಸಿರುವುದು ಚುನಾವಣೆಯ ದಿಕ್ಕನ್ನೇ ಬದಲಿಸುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಅಧಿಕಾರ ಹಿಡಿಯುವ ಮೊದಲು ಬಜರಂಗ ದಳ, ಶ್ರೀರಾಮ ಸೇನೆಯಂಥ ಸಂಘಟನೆಗಳ ಕಾರ್ಯಕರ್ತರು ಮತ್ತು ಬಿಜೆಪಿ ನಡುವೆ ಅನ್ಯೋನ್ಯ ಸಂವಹನ-ಸಂಬಂಧ ಇತ್ತು. ಆದರೆ ಬಿಜೆಪಿ ಅಧಿಕಾರ ಹಿಡಿದ ಬಳಿಕ ನಾನಾ ಕಾರಣಗಳಿಂದ ಸಂಘ ಪರಿವಾರದ ಕೆಲವು ಸಂಘಟನೆಗಳು ಮತ್ತು ಬಿಜೆಪಿ ನಡುವೆ ಭಿನ್ನಾಭಿಪ್ರಾಯ ಬೆಳೆಯುತ್ತಿದೆ. ಈ ಬಾರಿಯ ಚುನಾವಣೆಯಲ್ಲಂತೂ, ರಾಜ್ಯದ ಹಲವು ಕಡೆ ಸಂಘ ಪರಿವಾರದ ಸಂಘಟನೆಗಳ ಪ್ರಮುಖರು ಬಿಜೆಪಿ ಅಭ್ಯರ್ಥಿಗಳ ವಿರುದ್ಧವೇ ಸ್ಪರ್ಧಿಸುತ್ತಿದ್ದಾರೆ. ಪುತ್ತೂರು, ಚಿಕ್ಕಮಗಳೂರಿನಂಥ ಬಿಜೆಪಿ ಪ್ರಾಬಲ್ಯದ ಕ್ಷೇತ್ರಗಳಲ್ಲೇ ಸಂಘ ಪರಿವಾರದ ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿಗಳ ವಿರುದ್ಧ ತಿರುಗಿ ಬಿದ್ದಿದ್ದಾರೆ. ಮುಸ್ಲಿಂ ಮೂಲಭೂತವಾದಿ ಕಿಡಿಗೇಡಿಗಳು ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರನ್ನು ಬರ್ಬರವಾಗಿ ಕೊಲೆ ಮಾಡಿದ ಸಂದರ್ಭದಲ್ಲಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಕಾರನ್ನೇ ಸಂಘ ಪರಿವಾರದ ಹುಡುಗರು ಅಲುಗಾಡಿಸಿದ್ದರು. ನಳಿನ್ ಕುಮಾರ್ ಎಸಿ ಕಾರಿನೊಳಗೇ ಬೆವರುವಂತೆ ಮಾಡಿದ್ದರು. ಈ ಬಾರಿ ಸಂಘ ಪರಿವಾರದ ಸಾಕಷ್ಟು ಕಾರ್ಯಕರ್ತರು, ರಾಜ್ಯ ಬಿಜೆಪಿಗೆ ಒಂದು ಪಾಠ ಕಲಿಸಬೇಕು ಎಂಬ ನಿರ್ಧಾರ ಮಾಡಿದ್ದನ್ನು ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಆದರೆ ಬಜರಂಗದಳವನ್ನು ನಿಷೇಧಿಸುತ್ತೇವೆ ಎಂಬ ಕಾಂಗ್ರೆಸ್ ಹೇಳಿಕೆ ಸಂಘ ಪರಿವಾರದ ಸಂಘಟನೆಗಳನ್ನು ರೊಚ್ಚಿಗೆಬ್ಬಿಸಿದೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿನ ಒಂದೇ ಒಂದು ಸಾಲು, ಮುನಿಸಿಕೊಂಡಿದ್ದ ಸಂಘ ಪರಿವಾರದ ಎಲ್ಲ ಕಾರ್ಯಕರ್ತರು ಮತ್ತೆ ಬಿಜೆಪಿ ಪರ ಅನಿವಾರ್ಯವಾಗಿ ಒಗ್ಗೂಡುವಂತೆ ಮಾಡಿದೆ. ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಮಗೆ ಉಳಿಗಾಲವಿಲ್ಲ ಎಂದವರು ಭಾವಿಸುವುದು ಸಹಜ.
ಹಲವಾರು ಉಚಿತ ಕೊಡುಗೆಗಳ ಭರವಸೆ ಮೂಲಕ ಗೆಲುವಿನತ್ತ ಮುನ್ನುಗ್ಗುತ್ತಿದ್ದ ಕಾಂಗ್ರೆಸ್, ಚುನಾವಣೆ ಪ್ರಣಾಳಿಕೆ ಪರಿಣತರ ಮೂರ್ಖ ನಿರ್ಧಾರದಿಂದಾಗಿ ದುಬಾರಿ ಬೆಲೆ ತೆರಬೇಕಾಗಿ ಬರಲಿದೆ. ಸಮಾಜದ ಸೌಹಾರ್ದ ಹಾಳು ಮಾಡುವ ಎಲ್ಲ ಧರ್ಮದ ಮೂಲಭೂತವಾದಿ ಸಂಘಟನೆಗಳನ್ನು ನಿಷೇಧಿಸಲಾಗುವುದು ಎಂದು ಘೋಷಿಸಿದ್ದರೆ ವಿವಾದದ ಕಿಡಿ ಏಳುತ್ತಲೇ ಇರಲಿಲ್ಲ. ಪಿಎಫ್‌ಐ ಸಂಘಟನೆಯನ್ನು ಈಗಾಗಲೇ ಕೇಂದ್ರದ ಬಿಜೆಪಿ ಸರ್ಕಾರವೇ ಬ್ಯಾನ್ ಮಾಡಿದೆ. ಹೀಗಿರುವಾಗ, ತಾವು ಅಧಿಕಾರಕ್ಕೆ ಬಂದರೆ ಪಿಎಫ್‌ಐ ಬ್ಯಾನ್ ಮಾಡಲಾಗುವುದು ಎಂದು ಪ್ರಣಾಳಿಕೆಯಲ್ಲಿ ಹೇಳಿದ್ದು ಕೂಡ ಸ್ಪಷ್ಟ ಎಡವಟ್ಟು.
ಬಜರಂಗದಳ ನಿಷೇಧ ಪ್ರಸ್ತಾಪದ ಹಿಂದಿತ್ತು ಲೆಕ್ಕಾಚಾರ
ಬಜರಂಗದಳವನ್ನು ನಿಷೇಧ ಮಾಡಲಾಗುವುದು ಎಂಬ ಕಾಂಗ್ರೆಸ್ ಘೋಷಣೆ ಆಕಸ್ಮಿಕವಲ್ಲ. ಇದು ಲೆಕ್ಕಾಚಾರದ ಘೋಷಣೆ. ಇದಕ್ಕೂ ಕೆಲವು ಕಾರಣಗಳಿವೆ. ಮುಸ್ಲಿಂ ಬಾಹುಳ್ಯದ ಪ್ರದೇಶಗಳಲ್ಲಿ ಕಾಂಗ್ರೆಸ್‌ಗೆ ಮುಸ್ಲಿಂ ಮೂಲಭೂತವಾದಿ ಸಂಘಟನೆ ಎಂಬ ಆರೋಪ ಹೊತ್ತಿರುವ ಎಸ್‌ಡಿಪಿಐ ದೊಡ್ಡ ಬೆದರಿಕೆ ಆಗಿದೆ. ಮುಖ್ಯವಾಗಿ ಕರಾವಳಿ ಪ್ರದೇಶಗಳಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಎಸ್‌ಡಿಪಿಐ ಭಾರಿ ಏಟು ನೀಡಿತ್ತು. ಬಿಜೆಪಿಯ ನಿರಾಯಾಸ ಗೆಲುವಿಗೆ ಎಸ್‌ಡಿಪಿಐ ಸ್ಪರ್ಧೆ ಹಾದಿಮಾಡಿ ಕೊಟ್ಟಿತ್ತು. ಈ ಬಾರಿಯೂ ಅದು ಕಾಂಗ್ರೆಸ್ ಪಕ್ಷದ ಗಣನೀಯ ಸಂಖ್ಯೆಯ ಮತಗಳನ್ನು ಸೆಳೆಯುವ ಸಾಧ್ಯತೆ ಇದೆ. ಅಲ್ಪಸಂಖ್ಯಾತರ ಪಾಲಿಗೆ ಕಾಂಗ್ರೆಸ್ ಕೂಡ ಹೇಗೆ ಶತ್ರು ಎನ್ನುವುದನ್ನು ಎಸ್‌ಡಿಪಿಐ ಮುಖಂಡರು ಮುಸ್ಲಿಮರ ಗಲ್ಲಿಗಲ್ಲಿಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಇನ್ನೊಂದೆಡೆ ಜೆಡಿಎಸ್ ಕೂಡ ಕೆಲವು ಕ್ಷೇತ್ರಗಳಲ್ಲಿ ಮುಸ್ಲಿಂ ಮತಗಳನ್ನು ಸೆಳೆಯುತ್ತಿದೆ. ಟಿಕೆಟ್ ವಂಚಿತ ಕೆಲವು ಮುಸ್ಲಿಂ ಮುಖಂಡರು ಜೆಡಿಎಸ್ ಟಿಕೆಟ್ ಪಡೆದು ಸ್ಪರ್ಧಿಸಿ ಕಾಂಗ್ರೆಸ್‌ಗೆ ನಡುಕ ಹುಟ್ಟಿಸಿದ್ದಾರೆ. ಎಸ್‌ಡಿಪಿಐ ಮತ್ತು ಜೆಡಿಎಸ್ ಮುಸ್ಲಿಂ ಮತ ಸೆಳೆಯುವುದನ್ನು ತಪ್ಪಿಸಲು ಕಾಂಗ್ರೆಸ್ ರೂಪಿಸಿದ ತಂತ್ರವೇ ಬಜರಂಗದಳ ನಿಷೇಧ ಪ್ರಸ್ತಾಪ! ಈ ಮೂಲಕ ಕಾಂಗ್ರೆಸ್ ಪರ ಮುಸ್ಲಿಂ ಮತಗಳನ್ನು ಕ್ರೋಡೀಕರಿಸುವ ಲೆಕ್ಕಾಚಾರ. ಬಿಜೆಪಿ ಕಿತ್ತುಕೊಂಡಿರುವ ಮೀಸಲನ್ನು ಮುಸ್ಲಿಮರಿಗೆ ವಾಪಸ್ ಕೊಡುತ್ತೇವೆ ಎಂದಿರುವುದೂ ಇದಕ್ಕೆ ಪೂರಕ.
ಬಿಜೆಪಿಗೆ ಅಯಾಚಿತವಾಗಿ ಸಿಕ್ಕ ಅಸ್ತ್ರ
ಕಾಂಗ್ರೆಸ್ ಪ್ರಣಾಳಿಕೆ ಘೋಷಿಸಿದ ಕೆಲವೇ ನಿಮಿಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಜರಂಗ ದಳ ನಿಷೇಧ ವಿವಾದವನ್ನು ಕ್ಯಾಚ್ ಮಾಡಿದ್ದಾರೆ. ಹಿಂದೆ ರಾಮನನ್ನು ಪೀಡಿಸಿದ ಕಾಂಗ್ರೆಸ್‌ನವರು ಈಗ ಹನುಮನನ್ನು ಬಂಧಿಸಲು ಹೊರಟಿದ್ದಾರೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಈಗಾಗಲೇ ಬಿಜೆಪಿ ಈ ಸಂಗತಿಯನ್ನು ವ್ಯಾಪಕವಾಗಿ ಬಳಸಿಕೊಳ್ಳುತ್ತಿದೆ. “ಹೌದು, ನಾನು ಬಜರಂಗಿʼ ಎಂಬ ಅಭಿಯಾನ ನಡೆಸುತ್ತಿದೆ. ಬಜರಂಗ ನಿಷೇಧಿಸುತ್ತೇವೆ ಎಂಬ ಕಾಂಗ್ರೆಸ್ ಘೋಷಣೆಯ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ಆಯೋಜಿಸುತ್ತಿದೆ. ನರೇಂದ್ರ ಮೋದಿ ಅವರು ಬುಧವಾರ ಕರಾವಳಿಯಲ್ಲಿ ಬೃಹತ್ ಸಮಾವೇಶ ನಡೆಸುತ್ತಿದ್ದಾರೆ. ಹಾಗಾಗಿ ಕಾಂಗ್ರೆಸ್‌ನ ಎಡವಟ್ಟು, ಹಿಂದುತ್ವದ ಪ್ರಯೋಶಾಲೆ ಎನ್ನಲಾಗುವ ಕರಾವಳಿಯಲ್ಲಿ ಬಿಜೆಪಿಗೆ ವರದಾನ ಆಗುವುದು ಖಚಿತ. ಕಾಂಗ್ರೆಸ್ ವಿರುದ್ಧ ಹಿಂದೂ ಮತಗಳ ಧ್ರುವೀಕರಣಕ್ಕೆ ಈ ವಿವಾದ ಕಾರಣವಾಗಲಿದೆ.
ಇದನ್ನೂ ಓದಿ: Congress Manifesto : ವಿನಾಶಕಾಲೇ ವಿಪರೀತ ಬುದ್ಧಿ; ಬಜರಂಗ ದಳ ನಿಷೇಧ ಪ್ರಸ್ತಾಪಕ್ಕೆ ವಿಜಯೇಂದ್ರ ಖಂಡನೆ
ರಾವಣನು ಸೀತೆಯನ್ನು ಅಪಹರಿಸಿಕೊಂಡು ಹೋದಾಗ, ಆಕೆಯನ್ನು ಅರಸುತ್ತ ಲಂಕೆಗೆ ಹೋದ ಆಂಜನೇಯನ ಬಾಲಕ್ಕೆ ರಾವಣನ ಬಂಟರು ಬೆಂಕಿ ಹಚ್ಚಿದ್ದು ಮುಂದೆ ಎಂಥ ಅನಾಹುತಕ್ಕೆ ಕಾರಣವಾಯಿತು ಎನ್ನುವುದು ಜನಜನಿತ. ಇದೀಗ, ಎಲ್ಲವೂ ತಮ್ಮ ಪರವಾಗಿಯೇ ಇದೆ ಎಂಬ ವಾತಾವರಣದ ಮಧ್ಯೆ ಕಾಂಗ್ರೆಸ್ ಸುಖಾಸುಮ್ಮನೆ ಬಜರಂಗದಳ ನಿಷೇಧದ ಉಸಾಬರಿಗೆ ಹೋಗಿರುವುದು ಖಂಡಿತವಾಗಿ ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ.
ಅಂಕಣ
ರಾಜಮಾರ್ಗ ಅಂಕಣ: ಇವರ ಬದುಕು ಒಂದು ಥ್ರಿಲ್ಲರ್ ಸಿನೆಮಾಗಿಂತ ರೋಚಕ ಆಗಿದೆ!
ಸಾವು ಬದುಕಿನ ಹೋರಾಟವನ್ನು ನಡೆಸುವ ವೃತ್ತಿಗೆ ನಾನು ಅನಿವಾರ್ಯವಾಗಿ ಬಂದಾಗಿತ್ತು. ಒಬ್ಬ ಸಾಮಾನ್ಯ ಹುಡುಗಿ ಆಗಿದ್ದ ನಾನು ಸ್ಟಂಟ್ ಹುಡುಗಿ ಆದ ಕತೆ ಅದು. ಧೈರ್ಯ ಮಾತ್ರ ನನಗೆ ಅಂದು ಬಂಡವಾಳ ಆಗಿತ್ತು. ನನ್ನಲ್ಲಿ ಫೈಟಿಂಗ್ ಸ್ಪಿರಿಟ್ ಇದೆ ಅಂತ ನನಗೆ ಗೊತ್ತಿತ್ತು. ಆದರೆ ನನಗೆ ಸ್ಟಂಟ್ ಮಾಡಲು ಯಾವುದೇ ವೃತ್ತಿಪರ ತರಬೇತಿ ಕೂಡ ಆಗಿರಲಿಲ್ಲ.
ಇವರ ಬದುಕು ಯಾವ ಥ್ರಿಲ್ಲರ್ ಸಿನೆಮಾದ ಕಥೆಗಿಂತ ಕಡಿಮೆ ಇಲ್ಲ ಅನ್ಸುತ್ತೆ! ಒಬ್ಬ ಸಾಮಾನ್ಯರಲ್ಲಿ ಸಾಮಾನ್ಯರಾದ ಈ ‘ಸಲ್ವಾರ್ ಕಮೀಜ್’ ಹುಡುಗಿಯು ಇಂದು ಬಾಲಿವುಡ್ ಸಿನೆಮಾರಂಗದಲ್ಲಿ ಲೀಡ್ ಸ್ಟಂಟ್ ಹುಡುಗಿಯಾಗಿ ಬೆಳೆದದ್ದು ನಿಜಕ್ಕೂ ಅದ್ಭುತವೇ ಸರಿ.
ಆಕೆ ಗೀತಾ ಟಂಡನ್ – ಬಾಲಿವುಡ್ ಸಿನೆಮಾ ರಂಗದ ಲೀಡ್ ಸ್ಟಂಟ್ ವುಮನ್.
ನಾವು ಸಿನೆಮಾ ನೋಡುವಾಗ ಹೀರೋ ಅಥವಾ ಹೀರೋಯಿನ್ ಎತ್ತರದ ಬಿಲ್ಡಿಂಗ್ ಮೇಲಿಂದ ಕೆಳಗೆ ಹಾರುವಾಗ, ಫೈಟ್ ಮಾಡುವಾಗ, ಗ್ಲಾಸು ಒಡೆದು ಹಾರುವಾಗ, ವೇಗವಾಗಿ ಬೈಕ್ ಅಥವಾ ಕಾರನ್ನು ಓಡಿಸುವಾಗ, ಬೆಂಕಿಯ ಕೆನ್ನಾಲಿಗೆಯ ಮೂಲಕ ಹಾರುವಾಗ ಶಿಳ್ಳೆ ಹೊಡೆದು ಖುಷಿಪಡುತ್ತೇವೆ. ಆದರೆ ತೆರೆಯ ಹಿಂದೆ ಆ ಸಾಹಸವನ್ನು ಮಾಡುವವರು ಬೇರೆ ಯಾರೋ ಆಗಿರುತ್ತಾರೆ. ಜೀವದ ಹಂಗು ತೊರೆದು ಅವರು ಈ ಸಾಹಸಗಳನ್ನು ಮಾಡುತ್ತಾರೆ. ಅವರನ್ನು ‘ಸ್ಟಂಟ್ ಮಾಸ್ಟರ್’ ಅನ್ನುತ್ತಾರೆ. ಇದೀಗ ಈ ಕ್ಷೇತ್ರದಲ್ಲಿ ಒಬ್ಬಳು ಮಹಿಳೆಯು ದೊಡ್ಡ ಸುದ್ದಿ ಮಾಡುತ್ತಿದ್ದಾರೆ. ಅವರೇ ಇಂದಿನ ಕಥಾ ನಾಯಕಿ ಗೀತಾ ಟಂಡನ್!
ಆಕೆಯ ಕಥೆಯನ್ನು ಆಕೆಯ ಬಾಯಿಂದ ಕೇಳುವುದೇ ಒಳ್ಳೆಯದು. ಓವರ್ ಟು ಗೀತಾ.
ನನಗೂ ಬ್ರಹ್ಮಾಂಡ ಕನಸುಗಳು ಇದ್ದವು
ನಾನು ಹುಟ್ಟಿದ್ದು ಮುಂಬೈಯ ಒಂದು ಸಾಮಾನ್ಯವಾದ ಕುಟುಂಬದಲ್ಲಿ. ನನಗೂ ದೊಡ್ಡ ದೊಡ್ಡ ಕನಸುಗಳು ಇದ್ದವು. ನನಗೆ ನಾಲ್ಕು ಜನ ಒಡಹುಟ್ಟಿದವರು. 7ನೆಯ ವರ್ಷಕ್ಕೆ ನನ್ನ ಅಮ್ಮ ತೀರಿದರು. 10ನೆಯ ವರ್ಷದಲ್ಲಿ ಅಪ್ಪ ಸತ್ತರು. ನನ್ನ ಚಿಕ್ಕಪ್ಪ ನನ್ನನ್ನು 10ನೇ ತರಗತಿಯವರೆಗೆ ಓದಿಸಿದರು. ನನಗೆ 14ನೆಯ ವರ್ಷಕ್ಕೆ ಬದುಕು ಅರ್ಥ ಆಗುವ ಮೊದಲೇ ಮದುವೆ ಆಗಿ ಹೋಯಿತು. ಅಲ್ಲಿಂದ ನನಗೆ ದಿನವೂ ನರಕ ದರ್ಶನವೆ ಆರಂಭ ಆಯಿತು.
ನನ್ನ ಗಂಡ ಅನ್ನಿಸಿಕೊಂಡವನು ಮಹಾಕುಡುಕ ಮತ್ತು ಲಂಪಟ. ಅತ್ತೆ ಮಹಾ ಕ್ರೂರಿ. ಕೈ ಹಿಡಿದ ಗಂಡ ದಿನವೂ ನನ್ನನ್ನು ಹೊಡೆದು, ಬಡಿದು ದೌರ್ಜನ್ಯ ಮಾಡಿ ‘ ನಾನು ಗಂಡಸು’ ಎಂದು ಪ್ರೂವ್ ಮಾಡುತ್ತಿದ್ದ. ಅತ್ತೆಯಂತು ಯಾವಾಗಲೂ ತನ್ನ ಮಗನಿಗೆ ಸಪೋರ್ಟ್ ಆಗಿ ನಿಂತು ಬಿಡುತ್ತಿದ್ದರು. “ಹೋಗು, ನಿನ್ನ ಹೆಂಡತಿಯ ಮೇಲೆ ಬಲಾತ್ಕಾರ ಮಾಡು” ಎಂದು ಹೇಳೋರು!
ನಾನು ಏನು ಮಾಡಬಹುದಿತ್ತು?
ಪೋಲಿಸ್ ಸ್ಟೇಷನ್ನಿಗೆ ಒಮ್ಮೆ ದೂರು ಕೊಡಲು ಹೋಗಿದ್ದೆ.
ಪೊಲೀಸರು ” ಹೋಗಮ್ಮ ಹೋಗು. ಇದು ಗಂಡ ಹೆಂಡತಿ ಜಗಳ. ಇವತ್ತು ನೀವು ಹೊಡೆದಾಡುತ್ತೀರಿ. ನಾಳೆ ಒಂದಾಗುತ್ತೀರಿ. ಸದ್ಯಕ್ಕೆ ನಿನ್ನ ಅಕ್ಕನ ಮನೆಗೆ ಹೋಗು” ಅಂದಿದ್ದರು. ಅಕ್ಕನ ಮನೆಗೆ ಹೋದರೆ ತಿರಸ್ಕಾರದ ಭಾವನೆಯಿಂದ ಉಸಿರು ಕಟ್ಟಿತು. ಅಲ್ಲಿಂದ ಮತ್ತೆ ಗಂಡನ ಮನೆಗೆ ಬಂದಾಗ ಹಿಂಸೆ ಮತ್ತೂ ಹೆಚ್ಚಾಯಿತು. ನಾನು ಇಷ್ಟ ಪಡದೇ ಎರಡು ಮಕ್ಕಳು ಬಂದು ನನ್ನ ಮಡಿಲಲ್ಲಿ ಕೂತವು! ನಾನು ಬೇರೆ ಏನು ಮಾಡಲು ಸಾಧ್ಯವಿತ್ತು?
ನಾನು ಜೀವ ಉಳಿಸಿಕೊಳ್ಳಲು ಮನೆ ಬಿಟ್ಟು ಓಡಿದ್ದೆ!
ಒಂದು ದಿನ ನನ್ನ ಗಂಡ ಕುಡಿದು ಬಂದು ನನ್ನ ಜುಟ್ಟು ಹಿಡಿದು ಹೊಡೆಯಲು ತೊಡಗಿದ್ದ. ಆಗ ಪ್ರಾಣವನ್ನು ಉಳಿಸಲು ನನ್ನ ಎರಡು ಪುಟ್ಟ ಮಕ್ಕಳನ್ನು ಗಟ್ಟಿಯಾಗಿ ಹಿಡಿದು ಓಡಲು ತೊಡಗಿದೆ. ಬೀದಿಯಲ್ಲಿ ನಿಂತವರು ಎಲ್ಲರೂ ನನ್ನನ್ನು ನೋಡುವರೆಂದು ನನಗೆ ಗೊತ್ತಿತ್ತು. ಆದರೆ ನನಗೆ ನನ್ನ ಮಕ್ಕಳ ಪ್ರಾಣವನ್ನು ಉಳಿಸುವುದು ಮುಖ್ಯ ಆಗಿತ್ತು. ರಸ್ತೆ ಬದಿಯಲ್ಲಿ ಮಲಗಲು ಭಯ. ಕೊನೆಗೆ ಒಂದು ಗುರುದ್ವಾರದಲ್ಲಿ ಮಲಗುವ ವ್ಯವಸ್ಥೆ ಆಯಿತು. ಆಗ ನನಗೆ ಕೇವಲ 20 ವರ್ಷ!
ಒಬ್ಬ ಗೆಳತಿಯು ನನ್ನ ಸಹಾಯಕ್ಕೆ ಬಂದಳು. ” ಒಂದು ಕೆಲ್ಸ ಇದೆ ಗೀತಾ. ಮಾಡ್ತೀಯಾ? ” ಅಂದಳು.
“ನನ್ನ ಮಕ್ಕಳಿಗಾಗಿ ಯಾವ ಕೆಲಸವನ್ನು ಬೇಕಾದರೂ ಮಾಡುತ್ತೇನೆ” ಎಂದು ಚೀರಿ ಹೇಳಿದ್ದೆ. ಕೇವಲ ಎಸೆಸೆಲ್ಸಿ ಕಲಿತ ನನಗೆ ಯಾರು ಕೆಲಸ ಕೊಡುತ್ತಾರೆ? ಹಸಿವು, ಹತಾಶೆ ಎರಡೂ ಜೊತೆಗೆ ಸೇರಿ ನಾನು ದೊರೆತ ಯಾವ ಕೆಲಸವನ್ನು ಬೇಕಾದರೂ ಮಾಡಲು ಸಿದ್ಧ ಎಂದಿದ್ದೆ. ಸ್ವಾಭಿಮಾನದ ಬದುಕು ಕಟ್ಟುವುದು ನನಗೆ ಮುಖ್ಯವಾಗಿತ್ತು. ಆತ್ಮಹತ್ಯೆಯನ್ನು ಮಾಡುವ ಯೋಚನೆ ಬಂದಾಗಲೆಲ್ಲ ಮಕ್ಕಳ ಮುಖ ನೋಡುತ್ತಿದ್ದೆ. ಆಗ ಆತ್ಮಹತ್ಯೆಯ ಯೋಚನೆ ಮರೆತುಹೋಗ್ತಿತ್ತು.
ನಾನು ಆರಿಸಿಕೊಂಡದ್ದು ಸ್ಟಂಟ್ ಮಾಸ್ಟರ್ ವೃತ್ತಿ!
ಸಾವು ಬದುಕಿನ ಹೋರಾಟವನ್ನು ನಡೆಸುವ ವೃತ್ತಿಗೆ ನಾನು ಅನಿವಾರ್ಯವಾಗಿ ಬಂದಾಗಿತ್ತು. ಒಬ್ಬ ಸಾಮಾನ್ಯ ಹುಡುಗಿ ಆಗಿದ್ದ ನಾನು ಸ್ಟಂಟ್ ಹುಡುಗಿ ಆದ ಕತೆ ಅದು. ಧೈರ್ಯ ಮಾತ್ರ ನನಗೆ ಅಂದು ಬಂಡವಾಳ ಆಗಿತ್ತು. ನನ್ನಲ್ಲಿ ಫೈಟಿಂಗ್ ಸ್ಪಿರಿಟ್ ಇದೆ ಅಂತ ನನಗೆ ಗೊತ್ತಿತ್ತು. ಆದರೆ ನನಗೆ ಸ್ಟಂಟ್ ಮಾಡಲು ಯಾವುದೇ ವೃತ್ತಿಪರ ತರಬೇತಿ ಕೂಡ ಆಗಿರಲಿಲ್ಲ. ಮೊದಲು ಬೈಕ್,ಕಾರ್ ಅತ್ಯಂತ ವೇಗವಾಗಿ ಓಡಿಸುವುದನ್ನು ಕಲಿತೆ. ಮಾರ್ಷಿಯಲ್ ಆರ್ಟ್ ಕಲಿತೆ. ಫಿಸಿಕಲ್ ಫಿಟ್ನೆಸ್ ತಂತ್ರಗಳನ್ನು ಕಲಿತೆ. ಹಸಿವು ನನಗೆ ಎಲ್ಲವನ್ನೂ ಕಲಿಸಿತು. ಹಲವು ಸಿನೆಮಾ ಮಂದಿಯ ಪರಿಚಯ ಆಯಿತು. ಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿ ನನಗೆ ದೇವರಂತೆ ಅವಕಾಶಗಳನ್ನು ಕೊಟ್ಟರು. ನನ್ನ ಬದುಕಿನಲ್ಲಿ ನಾನು ತಿಂದ ಪೆಟ್ಟುಗಳು ನನ್ನನ್ನು ಗಟ್ಟಿ ಮಾಡಿದವು.
ಹೆಜ್ಜೆ ಹೆಜ್ಜೆಗೂ ಅಪಾಯ, ಪ್ರಾಣ ಭಯ
ನಾನೀಗ ನಿತ್ಯ ಮಾಡುತ್ತಿರುವುದು ತುಂಬಾ ಅಪಾಯದ ಕೆಲಸ! ಹಲವು ಬಾರಿ ನನಗೆ ಗಾಯ ಆಗಿದೆ. ಎಲುಬು ಮುರಿದಿದೆ. ಲಡಾಕ್ ಶೂಟಿಂಗ್ ಹೊತ್ತಿಗೆ ಬೆಂಕಿಯ ನಡುವಿಂದ ಹಾರುವಾಗ ನನ್ನ ಮುಖ, ಅರ್ಧ ದೇಹ ಸುಟ್ಟು ಹೋಗಿತ್ತು. ಆದರೆ ಬದುಕಿ ಬಂದೆ! ದೀಪಿಕಾ ಪಡುಕೋಣೆ, ಕತ್ರೀನಾ ಕೈಫ್, ಪರಿಣಿತಾ ಚೋಪ್ರ, ಬಿಪಾಶಾ ಬಸು, ಐಶ್ವರ್ಯ ರೈ ಇವರಿಗೆಲ್ಲ ಸ್ಟಂಟ್ ಮಾಡಿದ್ದೇನೆ. ಚೆನ್ನೈ ಎಕ್ಸಪ್ರೆಸ್, ಸಿಂಗ್ ಸಾಬ್ ಗ್ರೇಟ್, ಹಸೀ ತೋ ಫಸೀ, ಲಮ್ಹಾ, ರಾಗಿಣಿ ಎಂಎಂಎಸ್……….. ಮೊದಲಾದ ಹಲವು ಸಿನೆಮಾಗಳಲ್ಲಿ ಫೈಟ್ ಕಂಪೋಸ್ ಮಾಡಿದ್ದೇನೆ. ಮೊದಲೆಲ್ಲ ಫೈಟ್ ಮಾಡುವಾಗ ಭಯ ಆಗುತಿತ್ತು. ಆದರೆ ಈಗ ನಾನೊಬ್ಬ ವೃತ್ತಿನಿರತ ಸ್ಟಂಟ್ ವುಮನ್!
ಕಲರ್ಸ್ ಟಿವಿ ವಾಹಿನಿಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಆದ ‘ಖತರೊಂ ಕಾ ಖಿಲಾಡಿ’ ಯಲ್ಲಿ ಭಾಗವಹಿಸಿ ನಾನು ಬಹುಮಾನ ಗೆದ್ದಿದ್ದೆ. ಆಗ ನನ್ನ ಫೈಟಿಂಗ್ ಸಾಮರ್ಥ್ಯವನ್ನು ಇಡೀ ದೇಶವೇ ನೋಡಿತು.
ಇದನ್ನೂ ಓದಿ: ರಾಜಮಾರ್ಗ ಅಂಕಣ: ಗಣಿತ ಕಲಿಸಿದ ಜೀವನದ ಪಾಠ – ಎಲ್ಲ ಸಮಸ್ಯೆಗಳಿಗೂ ಪರಿಹಾರ ಇದೆ!
ಇಂದು ನಾನೊಬ್ಬ ಸ್ವಾವಲಂಬಿ ಮಹಿಳೆ ಆಗಿದ್ದೇನೆ. ಮುಂಬೈಯಲ್ಲಿ ಸ್ವಂತ ಮನೆ ಇದೆ. ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ನನಗೀಗ ನನ್ನದೇ ಆದ ಕನಸುಗಳಿವೆ.
ಭರತ ವಾಕ್ಯ
‘ಯಾವುದೇ ಹೆಣ್ಣು ಮಕ್ಕಳು ಜೀವನದಲ್ಲಿ ಸೋಲನ್ನು ಒಪ್ಪಿಕೊಳ್ಳಬೇಡಿ. ಕೊನೆಯ ಕ್ಷಣದವರೆಗೂ ಎದ್ದು ನಿಂತು ಹೋರಾಡಿ. ಆಗ ಮಾತ್ರ ನಿಮ್ಮ ಬದುಕಿನಲ್ಲಿ ಬಣ್ಣ ಬಣ್ಣದ ಕಾಮನಬಿಲ್ಲು ಮೂಡುವುದು’ ಎಂದು ಆಕೆ ಹೇಳುವಾಗ ಅವರ ಕಣ್ಣಲ್ಲಿ ಗೆದ್ದ ಖುಷಿ ಇತ್ತು!
ಅಂದ ಹಾಗೆ ಗೀತಾ ಅವರಿಗೆ ಈಗ 37 ವರ್ಷ!
ಅಂಕಣ
ಮೊಗಸಾಲೆ ಅಂಕಣ: AIIMS ಸಂಸ್ಥೆ ಹೆಸರಿನಲ್ಲಿ ರಾಯಚೂರು v/s ಕಲಬುರಗಿ ಶೀತಲ ಸಮರ ಶುರು
ಎಐಐಎಂಎಸ್ ಸಂಸ್ಥೆ ರಾಯಚೂರಿಗೆ ಬೇಕು ಎಂದು ಕಾಂಗ್ರೆಸ್‌ನ ಒಂದು ಬಣದ ಬೇಡಿಕೆ; ಕಲಬುರಗಿಯಲ್ಲಿ ಆಗಬೇಕು ಎಂದು ಇನ್ನೊಂದು ಬಣ. ಇದು ಶೀತಲ ಸಮರಕ್ಕೆ ಕಾರಣವಾಗಲಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಯೆಂದರೆ ಕಲಬುರಗಿ ಅಭಿವೃದ್ಧಿಯೊಂದೇ ಅಲ್ಲ ಎಂಬ ನಿಲುವಿಗೆ ರಾಜ್ಯ ಸರ್ಕಾರ ಬರಬೇಕಿದೆ.
ಸುಭದ್ರ ಸರ್ಕಾರ ರಚಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ರಚನೆ ಪ್ರಕ್ರಿಯೆಯಲ್ಲಿ ಮುಳುಗಿದ್ದಾರೆ. ಜುಲೈ ಏಳರಂದು ವಿಧಾನ ಮಂಡಲದಲ್ಲಿ ಅವರ ಹೆಸರಿನಲ್ಲಿ ಹದಿನಾಲ್ಕನೇ ಬಜೆಟ್ ಮಂಡನೆಯಾಗಲಿದೆ. ಸಹಜ ಕುತೂಹಲ ಕೆರಳಿಸಿರುವ ಈ ಮುಹೂರ್ತಕ್ಕೆ ಸಾರ್ವಜನಿಕರು ಎದುರು ನೋಡುತ್ತಿದ್ದಾರೆ. ಹಲವು ಸವಾಲನ್ನು ಮೈಮೇಲೆ ಪಕ್ಷವಾಗಿ ಎಳೆದುಕೊಂಡಿರುವ ಕಾಂಗ್ರೆಸ್ಸು ಅವೆಲ್ಲವನ್ನೂ ಸರ್ಕಾರವಾಗಿ ನಿಭಾಯಿಸಬೇಕಾಗಿದೆ. ಈ ನಿಭಾವಣೆ ಹೇಗೆ ಎನ್ನುವುದಕ್ಕೆ ಒಂದಿಷ್ಟು ಉತ್ತರ ಬಜೆಟ್‍ನಲ್ಲಿ ಸಿಗುವ ಸಾಧ್ಯತೆ ಇದೆಯೆಂದೇ ಕುತೂಹಲ ಗರಿಗೆದರಿದೆ.
ರಾಜಧಾನಿ ಬೆಂಗಳೂರು ಮಟ್ಟದಲ್ಲಿ ನಡೆದಿರುವ ಬೇಕು ಬೇಡಗಳ ಪಟ್ಟಿ ಬಹಳ ಉದ್ದನೆಯದು. ಯಾವುದೇ ಪಕ್ಷದ ಸರ್ಕಾರ ಅಧಿಕಾರಕ್ಕೆ ಬರಲಿ, ಹತ್ತಿರದಲ್ಲಿರುವವರನ್ನು ಇನ್ನಷ್ಟು ಹತ್ತಿರಕ್ಕೆ ಒಳಬಿಟ್ಟುಕೊಂಡು, ದೂರದಲ್ಲಿರುವವರನ್ನು ಮತ್ತಷ್ಟು ದೂರವೇ ಇಡುವ ಜಾಯಮಾನ ಅನೂಚಾನ. ಈ ಮಾತಿಗೆ ಸಿದ್ದರಾಮಯ್ಯ ಸರ್ಕಾರ ಒಂದು ಅಪವಾದವಾಗಿ ನಡೆದುಕೊಂಡೀತೇ ಎಂಬ ಆಶಾಭಾವನೆ ಇದೀಗ ಕಲ್ಯಾಣ ಕರ್ನಾಟಕದಲ್ಲಿ ಗರಿಗೆದರಿದೆ.
ಹೈದರಾಬಾದ್ ಕರ್ನಾಟಕವೆಂದಿದ್ದುದು ಕಲ್ಯಾಣ ಕರ್ನಾಟಕವಾಗಿದ್ದು ಒಂದು ಇತಿಹಾಸವಾದರೆ, ಅಭಿವೃದ್ಧಿ ಮಾನದಂಡದಲ್ಲಿ ತೀವ್ರ ಅಸಮತೋಲನಕ್ಕೆ ಒಳಗಾದ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆಂದೇ ಸಂವಿಧಾನಕ್ಕೆ 371 (ಜೆ) ವಿಶೇಷ ತಿದ್ದುಪಡಿ ತಂದು ಅಭಿವೃದ್ಧಿಗೆ ಚುರುಕು ಗತಿ ತಂದಿದ್ದು ಮತ್ತೊಂದು ಇತಿಹಾಸ.
ಇದಕ್ಕೂ ಪೂರ್ವದಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ರಚನೆಯಾಗಿದ್ದರೂ ಆದ ಅಭಿವೃದ್ಧಿ ಶೂನ್ಯಕ್ಕಿಂತ ಅತ್ತತ್ತ. ಪ್ರದೇಶದ ಎಲ್ಲ (ಎಂಎಲ್‍ಸಿ ಒಳಗೊಂಡಂತೆ) ಶಾಸಕರು, ರಾಜ್ಯಸಭೆ, ಲೋಕಸಭೆಯ ಎಲ್ಲ ಸದಸ್ಯರು ಮಂಡಳಿಯ ಸದಸ್ಯರು. ಅವರಲ್ಲೇ ಒಬ್ಬರು (ಸಾಮಾನ್ಯವಾಗಿ ಅವರು ಆಡಳಿತ ಪಕ್ಷದ ಶಾಸಕರೇ ಆಗಿರುತ್ತಾರೆ!) ಅಧ್ಯಕ್ಷರು. ಮಂಡಳಿಗೆ ಒಂದಿಷ್ಟು ಜನರನ್ನು ನಾಮನಿರ್ದೇಶನ ಮಾಡುವ ಅಧಿಕಾರ ಸರ್ಕಾರಕ್ಕೆ ಇದೆ, ಅದರಂತೆ ನಾಮಕರಣಗೊಳ್ಳುವವರು ಆಡಳಿತ ಪಕ್ಷಕ್ಕೆ ಸೇರಿದ ಮುಖಂಡರು. ಐಎಎಸ್ ಅಧಿಕಾರಿಯೊಬ್ಬರು ವ್ಯವಸ್ಥಾಪಕ ನಿರ್ದೇಶಕರು. ಯಥಾ ಪ್ರಕಾರ ಸರ್ಕಾರದ ಸಿಬ್ಬಂದಿ. ಸರ್ಕಾರದ ಕೆಲಸವೆಂದರೆ ತಾನು ಘೋಷಿಸಿದ ಹಣವನ್ನು ಕಾಲಕಾಲಕ್ಕೆ ಬಿಡುಗಡೆ ಮಾಡುವುದು. ತಮ್ಮ ಅಭಿವೃದ್ಧಿಗೆ ಏನೆಲ್ಲ ಅಗತ್ಯವೆಂದು ಮಂಡಳಿ ಮಂಡಿಸುವ ಪ್ರಸ್ತಾವಗಳಿಗೆ ಅನುಮೋದನೆ ಕೊಟ್ಟು ಜಾರಿಗೆ ಬೇಕಾದ ವ್ಯವಸ್ಥೆ ಕಲ್ಪಿಸುವುದು.
ಘೋಷಿತ ಮೊತ್ತವನ್ನು ಯಾವ ಸರ್ಕಾರವೂ ಒಮ್ಮೆಯೂ ಬಿಡುಗಡೆ ಮಾಡಲಿಲ್ಲ ಎನ್ನುವುದು ಹೈಕ ಅಭಿವೃದ್ಧಿ ಮಂಡಳಿಯ ಕಹಿ ವೃತ್ತಾಂತ. ಮಂಡಳಿ ಮುಂದಿಟ್ಟ ಎಷ್ಟೋ ಯೋಜನೆ ಕಾರ್ಯಾನುಷ್ಟಾನವಾಗಿದ್ದು ಇಲ್ಲವೇ ಇಲ್ಲ ಎಂಬಷ್ಟು ಕಡಿಮೆ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ಪ್ರಸ್ತಾಪ ಬಂದಾಗ ಈ ನತದೃಷ್ಟ ಪ್ರದೇಶದ ವಿಚಾರದಲ್ಲಿ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತದೆಂಬ ಒಕ್ಕೊರಲ ಕೂಗು ಮಂಡಳಿಯಲ್ಲಿ ಏಕಧ್ವನಿಯಾಗಿ ಮೊಳಗಲಿಲ್ಲ. ಸರ್ಕಾರದ ನಕಾರಾತ್ಮಕ ನಿಲುವನ್ನು ಖಂಡಿಸುವ ಒಮ್ಮತದ ಠರಾವು ಮೂಡಲಿಲ್ಲ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹೀಗೆ ಆಡಳಿತ ಪಕ್ಷದ ಶಾಸಕರು ತಂತಮ್ಮ ಸರ್ಕಾರದ ಇಲ್ಲವೇ ತಂತಮ್ಮ ಪಾಲುದಾರಿಕೆ ಸರ್ಕಾರದ ಪರವಾಗಿ ಬಾಯಿ ಮುಚ್ಚಿ ಕುಳಿತರೇ ಹೊರತೂ ತಮ್ಮನ್ನು ಆಯ್ಕೆ ಮಾಡಿದ ಮತಕ್ಷೇತ್ರದ ಜನರ ಪರವಾಗಿ ನಿಂತಿದ್ದು ಅಪರೂಪ. ಹೈಕ ಪ್ರದೇಶ ಅಭಿವೃದ್ಧಿ ಮಂಡಳಿ ಸೋತು ಕೈಚೆಲ್ಲಿದ್ದರ ಹಿಂದೆ ಈ ಮತ್ತು ಇಂಥ ಎಷ್ಟೋ ಕಥಾನಕಗಳಿವೆ. ನೌಟಂಕಿ ಕಾರಣವಾಗಿ ಭ್ರಮನಿರಸನಗೊಂಡ ಜನ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸುವಂತಾಗಿದ್ದು; ಸಂವಿಧಾನದ ತಿದ್ದುಪಡಿಗೆ ಒತ್ತಾಯಿಸಿ ಬೀದಿಗೆ ಇಳಿಯುವಂತಾಗಿದ್ದು. ಪ್ರತ್ಯೇಕ ರಾಜ್ಯವೊಂದೇ ಪರಿಹಾರವೆಂಬ ಕೂಗು ತಾತ್ಕಾಲಿಕವಾಗಿಯಾದರೂ ಶಮನವಾಗಿದೆ. ಅದು ಶಾಂತಸ್ಥಿತಿಯಲ್ಲಿರುವ ಅಶಾಂತ ಜ್ವಾಲಾಮುಖಿಯಂತೆ ಎನ್ನುವುದನ್ನು ಆಡಳಿತ ನಡೆಸುವವರು ಉಪೇಕ್ಷಿಸಬಾರದು.
ಬೀದರ್, ಕಲಬುರಗಿ, ಯಾದಗೀರ್, ರಾಯಚೂರು, ಕೊಪ್ಪಳ, ವಿಜಯನಗರ, ಬಳ್ಳಾರಿ… ಏಳು ಜಿಲ್ಲೆ ಒಳಗೊಂಡ ಕಲ್ಯಾಣ ಕರ್ನಾಟಕ, ಡಾ.ಡಿ.ಎಂ. ನಂಜುಂಡಪ್ಪ ವರದಿ (ಆಗಿನ್ನೂ ವಿಜಯನಗರ, ಯಾದಗೀರ್ ಪ್ರತ್ಯೇಕ ಜಿಲ್ಲೆ ಆಗಿರಲಿಲ್ಲ) ಪ್ರಕಾರ ಅಭಿವೃದ್ಧಿ ಹೀನ ಪ್ರದೇಶ. ಈ ಅಸಮತೋಲನದ ನಿವಾರಣೆಗೆ ಡಿಎಂಎನ್ ವರದಿ ಸೂಚಿಸಿರುವ ಬಹುತೇಕ ಪರಿಹಾರ ಇನ್ನೂ ಕಾಗದದಲ್ಲೇ ಉಳಿದಿರುವುದಕ್ಕೆ ಕಲಬುರಗಿ ಹೊರತಾದ ಜಿಲ್ಲೆಗಳಲ್ಲಿ ಕಣ್ಣಿಗೆ ರಾಚುವಷ್ಟು ನಿದರ್ಶನಗಳಿವೆ. ನ್ಯಾಯದ ಉಡುಗೊರೆ ಕೊಡುವ ಅವಕಾಶ ಸಿಕ್ಕ ಸಂದರ್ಭದಲ್ಲೆಲ್ಲ ಆಯಾ ಸಂದರ್ಭದಲ್ಲಿದ್ದ ಸರ್ಕಾರ ಅನ್ಯಾಯವನ್ನು ಬಳುವಳಿಯಾಗಿ ನೀಡಿದ್ದಕ್ಕೂ ಸಾಕಷ್ಟು ಉದಾಹರಣೆಗಳಿವೆ. ಇವುಗಳನ್ನು ಗಮನಿಸುವ ಮುನ್ನ ರಾಯಚೂರಿನಿಂದ ಕೇಳಿಬರುತ್ತಿರುವ ಕೂಗಿನತ್ತ ಕಿವಿಗೊಡುವುದು ಅಗತ್ಯವಾಗಿದೆ. ಸಿದ್ದರಾಮಯ್ಯ ಸರ್ಕಾರ ಆಲಿಸಲೇಬೇಕಿರುವ ಕೂಗು ಇದು. ರಾಯಚೂರು ಜಿಲ್ಲೆಯಿಂದ ಕೇಳಿಬಂದು ನಿರರ್ಥಕವಾದ ಮತ್ತೊಂದು ಅರಣ್ಯರೋದನ ಇದಾಗದಂತೆ ನೋಡಿಕೊಳ್ಳುವ ಜಮೇದಾರಿ ಪ್ರಸಕ್ತ ಸರ್ಕಾರದ ಮೇಲಿದೆ ಎನ್ನುವುದನ್ನು ಒತ್ತಿ ಹೇಳುತ್ತಿರುವ ಕೂಗು ಇದು.
ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು (ಎಐಐಎಂಎಸ್- AIIMS) ಕರ್ನಾಟಕದಲ್ಲಿ ಸ್ಥಾಪಿಸುವುದಾಗಿ ಕೇಂದ್ರ ಸರ್ಕಾರ ಪ್ರಕಟಿಸಿದೆ. ಎಲ್ಲಿ ಅದನ್ನು ಸ್ಥಾಪಿಸಬೇಕೆಂಬ ಸ್ವಾತಂತ್ರ್ಯವನ್ನು ಅದು ರಾಜ್ಯ ಸರ್ಕಾರಕ್ಕೆ ಬಿಟ್ಟುಕೊಟ್ಟಿದೆ. ಅದನ್ನು ರಾಯಚೂರಿನಲ್ಲಿ ಸ್ಥಾಪಿಸಬೇಕೆಂಬ ಕೂಗು ಈಗ ಜೋರಾಗಿದೆ. ಅದಕ್ಕಾಗಿ ಬರೋಬ್ಬರಿ 400 ದಿನಗಳ ಹಕ್ಕೊತ್ತಾಯ ಚಳವಳಿಯೂ ನಡೆದಿದೆ. ಇದನ್ನು ಮನಗಂಡಿರುವ ಕಾಂಗ್ರೆಸ್ಸು ವಿಧಾನ ಸಭೆ ಚುನಾವಣೆ ಪ್ರಣಾಳಿಕೆಯಲ್ಲಿ “ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು ರಾಯಚೂರಿನಲ್ಲಿ ಸ್ಥಾಪಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು” ಎಂಬ ಭರವಸೆಯನ್ನೂ ನೀಡಿದೆ.
ವಿಪರ್ಯಾಸವೆಂದರೆ ಅಧಿಕಾರಕ್ಕೆ ಬಂದ ನಂತರದಲ್ಲಿ ಕಾಂಗ್ರೆಸ್ ಮುಖಂಡರಲ್ಲಿ ಕೆಲವರು ರಾಗದ ಪ್ಲೇಟನ್ನು ಬದಲಾಯಿಸುತ್ತಿರುವ ಲಕ್ಷಣ ಕಾಣುತ್ತಿದೆ. ಶರಣ ಪ್ರಕಾಶ ಪಾಟೀಲರು ಸಿದ್ದರಾಮಯ್ಯ ಸಂಪುಟದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರು. ಈ ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲೂ ಅವರು ಇದೇ ಖಾತೆ ಹೊಂದಿದ್ದರು. ಕಲಬುರ್ಗಿ ಜಿಲ್ಲೆ ಸೇಡಂ ವಿಧಾನ ಸಭೆ ಕ್ಷೇತ್ರದ ಶಾಸಕರಾಗಿರುವ ಅವರು ಏಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಖಾಸಾ ಬಳಗದ ಮುಖ್ಯಸ್ಥರಲ್ಲಿ ಒಬ್ಬರು ಮಾತ್ರವೇ ಅಲ್ಲ ಪ್ರಮುಖರು ಕೂಡಾ. ಪಾಟೀಲರು ಸಚಿವರಾದ ಬಳಿಕ ತಮ್ಮದೇ ಪಕ್ಷದ ಪ್ರಣಾಳಿಕೆಯನ್ನು ಮರೆತವರಂತೆ “ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು ಕಲಬುರ್ಗಿಯಲ್ಲಿ ಸ್ಥಾಪಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಲಾಗುವುದು” ಎಂದಿದ್ದಾರೆ. ಈ ಸಂಸ್ಥೆಯನ್ನು ರಾಯಚೂರಿನಲ್ಲಿ ಸ್ಥಾಪಿಸಲು ಆಗ್ರಹಿಸಲಾಗುವುದು ಎನ್ನುವುದು ಪ್ರಣಾಳಿಕೆ ಭರವಸೆಯಷ್ಟೇ ಆಗಿರದೆ ಚುನಾವಣಾ ಪ್ರಚಾರಕ್ಕೆಂದು ರಾಯಚೂರಿಗೆ ಬಂದಾಗ ಸ್ವತಃ ಸಿದ್ದರಾಮಯ್ಯ ಜನತೆಗೆ ಇತ್ತ ವಚನವೂ ಹೌದು. ಇದ್ಯಾವುದರ ನಜರೇ ಇಲ್ಲದವರಂತೆ ಶರಣಪ್ರಕಾಶ ಪಾಟೀಲರು ರಾಗ ಬದಲಿಸಿ ಹೊಸ ಪ್ಲೇಟು ಹಾಕಿರುವುದಕ್ಕೆ ಏನಾದರೂ ಬಲವತ್ತರ ಕಾರಣ ಇರಬೇಕಲ್ಲವೇ….? ಸಿದ್ದರಾಮಯ್ಯನವರನ್ನು ವಚನಭ್ರಷ್ಟರ ಸಾಲಿಗೆ ಸೇರಿಸುವ ಕರಾಮತ್ತು ಒಳಗಿಂದೊಳಗೇ ಕೆಲಸ ಮಾಡುತ್ತಿರಬಹುದೇ…?
ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು ಕಲಬುರಗಿಯಲ್ಲಿ ಸ್ಥಾಪಿಸುವಂತೆ ಕೇಂದ್ರದ ಮನವೊಲಿಸುವ ಇರಾದೆ ಮಲ್ಲಿಕಾರ್ಜುನ ಖರ್ಗೆಯವರಲ್ಲಿರುವುದು ಗುಟ್ಟಿನ ಸಂಗತಿಯಲ್ಲ. ಈ ವಿಚಾರವಾಗಿ ಸಂದರ್ಭ ಸಿಕ್ಕಾಗಲೆಲ್ಲ ಅವರು ಇದನ್ನು ಪ್ರತಿಪಾದಿಸಿದ್ದಾರೆ. ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದ ಮಾತ್ರಕ್ಕೆ ಅದೇ ವೇದವಾಕ್ಯವಲ್ಲ ಎಂದು ಈಗಾಗಲೇ ಸಚಿವ ಚೆಲುವರಾಯಸ್ವಾಮಿಯಂಥವರು ಹೇಳುತ್ತಿರುವುದನ್ನು ಶರಣಪ್ರಕಾಶ ಪಾಟೀಲರು ಕೂಡಾ ಹೇಳಲಾರರು ಎನ್ನುವುದಕ್ಕೆ ಖಾತ್ರಿಯೇನೂ ಇಲ್ಲ. ಇಷ್ಟಕ್ಕೂ ಖರ್ಗೆಯವರು ಸಾರ್ವಜನಿಕವಾಗಿ ಹೇಳಲಾಗದ ಅವರ ಅಂತರಂಗದ ಭಾವನೆಗಳನ್ನು ಒಡೆದು ಹೇಳುವವರ ಸಾಲಿನಲ್ಲಿ ಶರಣಪ್ರಕಾಶ ಪಾಟೀಲರು ಇದ್ದಾರೆ. ಎಂದೇ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು ಕಲಬುರಗಿಯಲ್ಲಿ ಸ್ಥಾಪಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂಬ ಮಾತು ಅವರ ಬಾಯಿಂದ ಹೊರಬಂದಿದೆ ಎಂಬ ಅನುಮಾನ ರಾಯಚೂರು ಜನರಲ್ಲಿ ಹೆಚ್ಚುತ್ತಿದೆ.
ಕಲಬುರಗಿಯಲ್ಲಿ ಮತ್ತಷ್ಟು ಹೊಸ ಯೋಜನೆಗಳ ಅನುಷ್ಟಾನಕ್ಕೆ ಜಾಗವೇ ಇಲ್ಲ ಎಂಬ ಜನರ ಮಾತಿನಲ್ಲಿ ತುಸು ಉತ್ಪ್ರೇಕ್ಷೆ ಇರುವುದು ನಿಜ; ಆದರೆ ಬಹಳಷ್ಟು ತಥ್ಯವಿರುವುದೂ ನಿಜ. ಅಂಥ ಜಿಲ್ಲೆಗೆ ಮತ್ತೊಂದು ಕೇಂದ್ರದ ಯೋಜನೆಯಾಗಿ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು ತಂದು ಕೂರಿಸುವುದು ಅಸಮತೋಲನ ನಿವಾರಿಸುವ ಕ್ರಮವಂತೂ ಅಲ್ಲವೇ ಅಲ್ಲ. ಸಂಭವನೀಯ ಈ ಅನ್ಯಾಯದತ್ತ ಸ್ವತಃ ಕಾಂಗ್ರೆಸ್ ಮುಖಂಡರೂ, ಕೆಪಿಸಿಸಿ ಕಾರ್ಯಕಾರಿ ಸಮಿತಿ ಸದಸ್ಯರೂ ಆಗಿರುವ ಪಾರಸಮಲ್ ಸುಖಾಣಿ, ಮುಖ್ಯ ಮಂತ್ರಿಯ ಗಮನ ಸೆಳೆದಿದ್ದಾರೆ. ಶರಣಪ್ರಕಾಶ ಪಾಟೀಲರ ಹೇಳಿಕೆ ಪಕ್ಷದ ಚುನಾವಣಾ ಪ್ರಣಾಳಿಕೆಗೆ ತದ್ವಿರುದ್ಧವಾಗಿರುವ ನಿಲುವಿನಿಂದ ಕೂಡಿದೆ ಎಂದು ಎಂದು ಪ್ರತಿಪಾದಿಸಿದ್ದಾರೆ. ಚುನಾವಣಾ ಪ್ರಚಾರಕ್ಕೆ ಎರಡು ಬಾರಿ ಬಂದಾಗಲೂ ಸಿದ್ದರಾಮಯ್ಯನವರು ರಾಯಚೂರು ಜನತೆಗೆ ನೀಡಿದ್ದ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು ರಾಯಚೂರಿನಲ್ಲೇ ಸ್ಥಾಪಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ಜನರಿಗೆ ನೀಡಿದ್ದ ವಚನವನ್ನು ನೆನಪಿಸಿಕೊಟ್ಟಿದ್ದಾರೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 2013-18ರ ಅವಧಿಯಲ್ಲಿ ಆಡಳಿತ ನಡೆಸಿದಾಗ ರಾಯಚೂರಿಗೆ ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಒಂದಾದ ಐಐಟಿ ಸಂಸ್ಥೆಯನ್ನು ಮಂಜೂರು ಮಾಡಿಸುವ ಅವಕಾಶ ಸಿಕ್ಕಿತ್ತು. ನಂಜುಂಡಪ್ಪ ಸಮಿತಿ ರಾಯಚೂರಿನಲ್ಲಿ ಐಐಟಿ ಸ್ಥಾಪಿಸಬೇಕೆಂದು ಶಿಫಾರಸು ಮಾಡದೆ. ಆಗಲೂ ಸ್ಥಳದ ಹೆಸರನ್ನು ಸೂಚಿಸುವಂತೆ ರಾಜ್ಯ ಸರ್ಕಾರಕ್ಕೆ ಕೇಳಿತ್ತು. ರಾಜ್ಯ ಸರ್ಕಾರ ಔಚಿತ್ಯ ಜ್ಞಾನ ಮರೆತು ರಾಯಚೂರು ಇಲ್ಲವೇ ಧಾರವಾಡದಲ್ಲಿ ಸ್ಥಾಪಿಸಬಹುದೆಂದು ಡೋಲಾಯಮಾನ ನಿಲುವಿಗೆ ಬಂದ ಕಾರಣ ಸ್ಥಳದ ಆಯ್ಕೆ ಸ್ವಾತಂತ್ರ್ಯ ಕೇಂದ್ರದ್ದಾಗಿ ಐಐಟಿ ಧಾರವಾಡಕ್ಕೆ ಹೋಯಿತು. ಇಂಥದೇ ಎಡವಟ್ಟುತನ ಪುನರಾವರ್ತನೆ ಆಗಬಾರದು; ಆಗಕೂಡದು ಎಂಬುದು ಸುಖಾಣಿ ಪತ್ರದ ಆಶಯ. ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು ಸ್ಥಾಪಿಸುವುದಕ್ಕೆ ಏಕೈಕ ಹೆಸರಾಗಿ ರಾಯಚೂರು ಮಾತ್ರವೇ ಕೇಂದ್ರಕ್ಕೆ ಶಿಫಾರಸು ಆದಲ್ಲಿ ಕಿಂಚಿತ್ ನ್ಯಾಯವಾದರೂ ಸಂದಂತೆ ಆಗಬಹುದೆಂಬ ಸದಾಶಯ ರಾಯಚೂರು ಜಿಲ್ಲೆಯ ಹತ್ತೂ ಸಮಸ್ತರದಾಗಿದೆ.
ಇದನ್ನೂ ಓದಿ: ಮೊಗಸಾಲೆ ಅಂಕಣ: ಸಿಎಂ ಪದವಿ ಹಂಚಿಕೆ: ʼಕೈʼಕಮಾಂಡ್ ಮೌನದ ಹಿಂದೆ ಏನು ಸಂದೇಶವಿದೆ?
ರಾಯಚೂರು ಜಿಲ್ಲೆ ಆರು ವಿಧಾನ ಸಭಾ ಕ್ಷೇತ್ರ ಒಳಗೊಂಡಿದೆ. ಆರರಲ್ಲಿ ಮೂವರು ಕಾಂಗ್ರೆಸ್ ಶಾಸಕರು. ರಾಯಚೂರು ಜಿಲ್ಲೆಯವರೇ ಆಗಿರುವ ಏಐಸಿಸಿ ಕಾರ್ಯದರ್ಶಿ ಎನ್. ಎಸ್. ಬೋಸರಾಜು, ಸಿದ್ದರಾಮಯ್ಯ ಸಂಪುಟದಲ್ಲಿ ಸಣ್ಣ ನೀರಾವರಿ, ವಿಜ್ಞಾನ ತಂತ್ರಜ್ಞಾನ ಖಾತೆ ಸಚಿವರು. ವಿಧಾನ ಸಭೆ ಅಥವಾ ವಿಧಾನ ಪರಿಷತ್ ಸದಸ್ಯರಲ್ಲದ ಅವರು ಇಷ್ಟರಲ್ಲಿಯೇ ಎಂಎಲ್‍ಸಿ ಆಗಲಿದ್ದಾರೆ. ವಿಧಾನ ಪರಿಷತ್‍ನಿಂದ ಏಕೈಕ ಸಚಿವರಾಗಿರುವುದರಿಂದ ಅವರೇ ಸಭಾ ನಾಯಕರೂ ಆಗಲಿದ್ದಾರೆ. ಸಂಪುಟದಲ್ಲಿ ಕೇವಲ ಕಲಬುರಗಿಯದಷ್ಟೇ ಅಲ್ಲದೆ ರಾಯಚೂರಿನ ಗಟ್ಟಿ ಧ್ವನಿಯಾಗಿ ಬೋಸರಾಜು ಕೆಲಸ ಮಾಡಲಿದ್ದಾರೆನ್ನುವುದು ಜಿಲ್ಲೆಯ ಜನರ ಸಮಾಧಾನಕ್ಕೆ ಕಾರಣವಾಗಿರುವ ಬೆಳವಣಿಗೆ. ಶರಣಪ್ರಕಾಶ ಪಾಟೀಲರ ಹೇಳಿಕೆ ಹಿಂದೆ ಯಾರೇ ಇರಲಿ ಅದು ಸಿದ್ದರಾಮಯ್ಯನವರಿಗೆ ಮುಖ್ಯವಾಗುವುದಿಲ್ಲ ಎಂದು ನಂಬಬಹುದು.
ಕಲಬುರಗಿಯಲ್ಲಿ ಮೂರು ವೈದ್ಯಕೀಯ ಕಾಲೇಜು; ವಿಮಾನ ನಿಲ್ದಾಣ; ರೈಲ್ವೆ ವಿಭಾಗೀಯ ಕೇಂದ್ರ; ಇಎಸ್‍ಐ ಆಸ್ಪತ್ರೆ; ಜಯದೇವ ಹೃದ್ರೋಗ ಚಿಕಿತ್ಸಾ ಕೇಂದ್ರ, ಕ್ಯಾನ್ಸರ್ ಚಿಕಿತ್ಸಾ ಆಸ್ಪತ್ರೆ ಮುಂತಾದ ಯೋಜನೆಗಳಿವೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಯೆಂದರೆ ಕಲಬುರಗಿ ಅಭಿವೃದ್ಧಿಯೊಂದೇ ಅಲ್ಲ ಎಂಬ ನಿಲುವಿಗೆ ರಾಜ್ಯ ಸರ್ಕಾರ ಬರಬೇಕಿದೆ.
ಇದನ್ನೂ ಓದಿ: ಮೊಗಸಾಲೆ ಅಂಕಣ : ಮುಂಬರುವ ಚುನಾವಣೆ ಗೆಲ್ಲಲು ಕಾಂಗ್ರೆಸ್ ಸರ್ಕಾರದಿಂದ ‘ಗ್ಯಾರಂಟಿ’ಗಳ ಚಲಾವಣೆ!
ಅಂಕಣ
Consumerism: ಮಿತಿಯಿಲ್ಲದ ಖರೀದಿ; ಮನೋರೋಗಕ್ಕೆ ನಾಂದಿ, ಪರಿಸರ ವಿನಾಶದ ಹಾದಿ!
ಕ್ರಿಸ್ಮಸ್ ಹಬ್ಬದಂದು ನ್ಯೂಯಾರ್ಕ್, ವಾಷಿಂಗ್ಟನ್, ಫ್ಲೋರಿಡಾದಂತಹ ನಗರಗಳ ಬೀದಿಗಳು ಮರ, ದೀಪಾಲಂಕಾರ, ಪ್ಲಾಸ್ಟಿಕ್ ಕೈ ಚೀಲ, ವಸ್ತುಮಳಿಗೆಗಳ ಜೊತೆಯಲ್ಲೇ, ನಿರ್ವಿಘಟಿತ ಮಟ್ಟಕ್ಕೆ ತಲುಪಿದ ತ್ಯಾಜ್ಯಗಳಿಂದ ಭರಪೂರವಾಗಿ ಕಂಗೊಳಿಸುತ್ತವೆ.
ಸೋಮೇಶ್ವರ ಗುರುಮಠ
ಇತ್ತೀಚಿನ ದಿನಮಾನಗಳಲ್ಲಿ ಮನುಷ್ಯ ಜನಾಂಗವು ತಾನೆಂದುಕೊಂಡಂತೆ ಅತ್ಯಂತ ಪ್ರಗತಿಯ ಹಾದಿಯಲ್ಲಿದೆ. ಆದರೆ ಗಮನಿಸಿ, ತಾನೇ ಎಂದುಕೊಂಡ ಆ ಪ್ರಗತಿಯ ಪಥ ನಿರಂತರವಾದ ಪ್ರಕೃತಿವಿನಾಶಕ್ಕೆ ದ್ಯೋತಕವೆನ್ನಿಸಿದೆ. ಇದರಲ್ಲಿ ತನ್ನತನದ ಮುನ್ನೆಲೆಯ ಹೊರತಾಗಿ ಮತ್ತೇನನ್ನೂ ಕಾಣಲಾರೆವು. ತನ್ನ ಮೂಗಿನ ನೇರಕ್ಕೆ ಇತರೆ ಜೀವವೈವಿಧ್ಯ ಮತ್ತು ಪ್ರಕೃತಿಯ ಸ್ಥಿತಿಗತಿಗಳು ಕಾರ್ಯನಿರ್ವಹಿಸಬೇಕೆನ್ನುವುದೇ ಪರಮೋಚ್ಚ ಗುರಿಯೆನ್ನುವಂತಿದೆ. ಇದರ ಮಧ್ಯೆ ಆಧುನಿಕ ನಾಗರೀಕತೆಗಳೆಲ್ಲವೂ ಏಕಸ್ವರೂಪಿ ಹಿನ್ನೆಲೆಯನ್ನು ಹೊಂದಿರುವುದು ಸರ್ವತೋಮುಖ ಅಭಿವೃದ್ಧಿಯ ಸಂಕೇತವೆಂಬಂತೆ ಕಾಣುವ ಮುಂದುವರಿದ ದೇಶಗಳ ಪರಿಸ್ಥಿಯನ್ನೊಮ್ಮೆ ಗಮನಿಸಿ.
ಜಾಗತೀಕರಣದ ಛಾಯೆಯ ಪ್ರಮುಖ ಭಾಗವೊಂದರಂತಿರುವ ‘ಗ್ರಾಹಕೀಕರಣ’ ಇತ್ತೀಚಿನ ದಿನಮಾನಗಳಲ್ಲಿ ಹವ್ಯಾಸದಿಂದ ವ್ಯಸನಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಅದರ ಪ್ರಭಾವ ಎಷ್ಟರ ಮಟ್ಟಿಗೆ ತೆರಳಿ ನಿಂತಿದೆಯೆಂದರೆ, ತ್ಯಾಗ ಮತ್ತು ಉಳಿತಾಯವೆಂಬ ಕಲ್ಪನೆಗಳಿಲ್ಲಿ ಸಂಪೂರ್ಣವಾಗಿ ಮಾಯವಾಗಿದೆಯೆಂದರೆ ಅತಿಶಯೋಕ್ತಿಯೆನಿಸಿದು. 2009ರಲ್ಲಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದಂತೆ ದಕ್ಷಿಣ ಕೋರಿಯಾದ ಸರ್ಕಾರವು ತನ್ನ ಜಿ.ಡಿ.ಪಿಯ ಒಟ್ಟಾರೆ 2% ಭಾಗವನ್ನು ಅಂದರೆ ಸರಿಸುಮಾರು 28.1 ಬಿಲಿಯನ್ ಡಾಲರ್ ಮೊತ್ತವನ್ನು ಪರಿಸರ ಸಂರಕ್ಷಣೆ ನಿಮಿತ್ತ ನಿರ್ವಹಿಸಲಾಗುವ ಗ್ರೀನ್ ಯೋಜನೆಗಳಿಗಾಗಿ ಮುಡಿಪಾಗಿಟ್ಟಿತ್ತು. ಅದರ ಮಗದೊಂದು ಪ್ರಮುಖೋದ್ದೇಶವೆಂದರೆ ಕನಿಷ್ಠವೆಂದರೂ ಒಂದು ಮಿಲಿಯನ್ ಗ್ರೀನ್ ಉದ್ಯೋಗವನ್ನು ಈ ಯೋಜನೆಗಳು ಸೃಷ್ಟಿಸುವುದರ ಜೊತೆಯಲ್ಲೇ, ಕಾರ್ಬನ್ ಹೊರಸೂಸುವಿಕೆಯ ಮೇಲಿನ ನಿಯಂತ್ರಣ ಮತ್ತು ಆರ್ಥಿಕ ಪ್ರಗತಿಯನ್ನು ಹೊಂದಬೇಕೆನ್ನುವುದು ಅದರಿಚ್ಛೆಯಾಗಿತ್ತು. ಅಂದುಕೊಂಡಂತೆ ಕೆಲಕಾಲ ಎಲ್ಲವೂ ನಡೆಯಿತು ಆದರೆ ಯೋಜನೆಯ ಅಂತಸ್ಸತ್ವ ಬಹುಕಾಲ ಉಳಿಯಲಿಲ್ಲ. 2009ರಿಂದ 2014ರ ಮಧ್ಯೆ ಕೋರಿಯಾದ ಕಾರ್ಬನ್ ಉತ್ಸರ್ಜನವು ಮೊದಲಿಗಿಂತ 11.8 % ಏರಿಕೆಯಾಯಿತು. ಸ್ವಚ್ಛ ಶಕ್ತಿಕೇಂದ್ರ ಸ್ಥಾಪನೆ, ಸುಸ್ಥಿರ ಅಭಿವೃದ್ಧಿ ಹಾಗೂ ಪರಿಸರ ಸ್ನೇಹಿ ರೇಲ್ವೆ ವ್ಯವಸ್ಥೆ ನಿರ್ಮಾಣಗಳೆಲ್ಲವೂ ಜೊತೆಗೂಡಿದರೂ ‘ಹಸಿರು ಅಭಿವೃದ್ಧಿ ಯೋಜನೆಯ’ ತಂತ್ರಗಾರಿಕೆ ಅಂದುಕೊಂಡಂತೆ ಕೈಗೂಡಲಿಲ್ಲ. ಇದಕ್ಕೆ ಪ್ರಮುಖ ಕಾರಣವೇನಿರಬಹುದು? ಹಸಿರು ಶಕ್ತಿ ಕ್ರಾಂತಿಯನ್ನು ದುರ್ಬಲಗೊಳಿಸಿದ ಅಂಶಗಳಾವುವು?
ಇದಕ್ಕೆ ಪ್ರಮುಖ ಕಾರಣವೇ ನಿರಂತರ ಖರೀದಿಸುವ, ಸ್ವೀಕರಿಸುವ ಮತ್ತು ಬಳಸುವ ಮಾನಸಿಕತೆ! ಕನ್ಸೂಮರಿಸಮ್ ಎಂದು ಸಂಬೋಧಿಸಲ್ಪಡುವ ಈ ಮಾನಸಿಕತೆ ನವನಾಗರೀಕತೆಯನ್ನು ಹೇಗೆ ಕಾಡುತ್ತಿದೆ ಎಂಬುದಕ್ಕೆ ‘ಹವಾಮಾನ ಬದಲಾವಣೆಗಿಂತ’ ವರ್ತಮಾನದಲ್ಲಿ ಮಗದೊಂದು ಉದಾಹರಣೆ ಬೇಕೇ? ಪ್ರತೀ ಕ್ರಿಸ್ಮಸ್ ಹಬ್ಬದಂದು ನ್ಯೂಯಾರ್ಕ್, ವಾಷಿಂಗ್ಟನ್, ಫ್ಲೋರಿಡಾದಂತಹ ನಗರಗಳ ಬೀದಿಗಳು ಮರ, ದೀಪಾಲಂಕಾರ, ಪ್ಲಾಸ್ಟಿಕ್ ಕೈ ಚೀಲ, ವಸ್ತುಮಳಿಗೆಗಳ ಜೊತೆಯಲ್ಲೇ, ನಿರ್ವಿಘಟಿತ ಮಟ್ಟಕ್ಕೆ ತಲುಪಿದ ತ್ಯಾಜ್ಯಗಳಿಂದ ಭರಪೂರವಾಗಿ ಕಂಗೊಳಿಸುತ್ತವೆ. ಕ್ರಿಸ್ಮಸ್ ರೀತಿಯ ಹಬ್ಬಗಳನ್ನು ಅಲ್ಲಿನ ಬೃಹತ್ ಕಂಪನಿಗಳು ತಮ್ಮ ವಾರ್ಷಿಕ ಉತ್ಪನ್ನಗಳ ಮಾರಾಟಕ್ಕೆ ಸುಗ್ಗಿಕಾಲವೆಂದೇ ಪರಿಗಣಿಸಿವೆ. ಇದರ ಪರಿಣಾಮವಾಗಿ ಒಬ್ಬ ಸಾಮಾನ್ಯ ಅಮೇರಿಕನ್ ವ್ಯಕ್ತಿಯು ವರ್ಷಕ್ಕೆ 650 ಕಿಲೋ ಕಾರ್ಬನ್ ಡೈ ಆಕ್ಸೈಡ್ ಅನ್ನು ವಾತಾವರಣಕ್ಕೇರಿಸುವ ಮತ್ತಲ್ಲಿನ ಒಟ್ಟಾರೆ ಸಮುದಾಯ 2.6 ಬಿಲಿಯನ್ ಡಾಲರ್ ಮೊತ್ತವನ್ನು ರ‍್ಯಾಪಿಂಗ್ ಪೇಪರ್ಗಳ ಮೇಲೆ ಅದೊಂದೇ ಹಬ್ಬದ ಸಂದರ್ಭದಲ್ಲಿ ವಿನಿಯೋಗಿಸುತ್ತದಂತೆ. ಸ್ಥಳೀಯರೇ ಹೇಳುವಂತೆ 150 ವರ್ಷಗಳ ಹಿಂದೆ ಈಗಿನ ರೀತಿಯಲ್ಲಿ ರ‍್ಯಾಪ್ ಮಾಡಿದ ಉಡುಗೊರೆಗಳನ್ನು ನೀಡುವ ಪದ್ದತಿಯೇ ಇರಲಿಲ್ಲವಂತೆ. ಬ್ಲಾಕ್ ಫ್ರೈಡೆಯಂತಹ ಸಂದರ್ಭದಲ್ಲಿ ‘ಮೇಸಿ’ಯಂತಹ ಅರ್ಬನ್ ಸ್ಟೋರ್‌ಗಳು, ಇತರೆ ಉತ್ಪನ್ನ ತಯಾರಕ ಸಂಸ್ಥೆಗಳು ವಿಶೇಷವಾಗಿ ‘ಮೊಬೈಲ್, ಆಟೋಮೊಬೈಲ್, ಗೃಹೋಪಯೋಗಿ ವಸ್ತುಗಳ’ ನಿರ್ಮಾಣಕಾರರು ಜಾಹಿರಾತಿನ, ವಿಶೇಷ ಅವಧಿಗಾಗಿ ಮೀಸಲಿರಿಸುವ ಇ.ಎಂ.ಐ, ಹಬ್ಬಗಳಿಗೋಸ್ಕರವಾಗಿಯೇ ಇರುವ ರಿಯಾಯಿತಿ ದರದ ಮುಖಾಂತರ ಮೇಲ್ಕಂಡ ಸ್ವರೂಪದ ಉಡುಗೊರೆಗಳನ್ನು ನೀಡುವುದು ಪ್ರೀತಿ ಮತ್ತು ಕಾಳಜಿಯನ್ನು ವ್ಯಕ್ತಪಡಿಸುವ ಮಹೋನ್ನತ ರೀತಿ ಹಾಗೂ ಇಂತಹುದೇ ಸಿದ್ಧ ಮಾದರಿಯು ಸೂಕ್ತವಾದುದೆಂದು ಈ ಹಂತಗಳಲ್ಲಿ ಹೇಳುತ್ತಾ ಹೋದರು. ಅವಾವುವೆಂದರೆ ಮೃದುಮನೋಒತ್ತಡ, ಸಾಮಾನ್ಯ ಸಮಾಜವೆಂಬ ತಂತ್ರಗಾರಿಕೆ, ಜಾಹೀರಾತು , ಸಾಮಾಜಿಕ ಒತ್ತಡ ಮತ್ತು ತನ್ನ ಬಳಿ ಇಂತಹ ಉತ್ಪನ್ನಗಳಿವೆ ಎಂಬುದು ವೈಯುಕ್ತಿಕ ಸಾಧನೆಯ ಪ್ರತೀಕವೆಂಬ ಭ್ರಮಾ ಲೋಕದ ಪರಿಕಲ್ಪನೆಗಳನ್ನು ಮೇಲ್ಕಂಡ ಹಂತಗಳಲ್ಲಿ ಬಿತ್ತುತ್ತಾ ಹೊರಟರು.
ಇಂತಹ ಪ್ರಯತ್ನಗಳಿಂದ ಮನುಷ್ಯ ಜೀವನ ಮಟ್ಟ ಸುಧಾರಿಸಿದ್ದಕ್ಕಿಂತ ಹೆಚ್ಚಾಗಿ ಕಾರ್ಪೊರೇಟ್ ಕಂಪನಿಗಳ ಜೇಬು ತುಂಬಿದ್ದೇ ಹೆಚ್ಚು. ರಸ್ತೆಗಳಲ್ಲಿನ ಬಿಲ್ಬೋರ್ಡ್, ವೃತ್ತಪತ್ರಿಕೆಗಳ ಮುಖಪುಟಗಳು, ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ಪ್ರದರ್ಶನಗೊಳ್ಳುವ ಜಾಹೀರಾತುಗಳು ನಮ್ಮನ್ನೆತ್ತ ಕರೆದೊಯ್ಯುತ್ತಿವೆ? ಆ ಉತ್ಪನ್ನ ನಮ್ಮ ಬಳಿಯಿಲ್ಲದಿದ್ದಲ್ಲಿ ಏನೋ ಕಳೆದುಕೊಂಡಿದ್ದೇವೆಂಬ ಭಾವಸೃಷ್ಟಿಯಾಗುವಂತೆ ಮಾಡಿದ್ದಾರೆ ಅಲ್ಲವೇ? ಅಮೆರಿಕನ್ ಸೈಕಾಲಜಿಸ್ಟ್ ಅಸೋಸಿಯೇಷನ್ ವರದಿಯೇ ಹೇಳುವಂತೆ ಅವಶ್ಯಕತೆಗಿಂತ ಹೆಚ್ಚು ಖರೀದಿಸುವುದು ಮಾನಸಿಕ ಕ್ಷೋಭೆಗೆ ಕಾರಣವಾಗುವುದರ ಜೊತೆಯಲ್ಲೇ ‘ಪರಿಸರನಾಶದ ಬೆಲೆ’ ತೆರುವಂತಹ ಪರಿಸ್ಥಿತಿಗೂ ಮುನ್ನುಡಿ ಬರೆಯಬಹುದೆನ್ನುತ್ತಾರೆ. ದಿ ಗಾರ್ಡಿಯನ್ ಪತ್ರಿಕೆ 2017ರಲ್ಲಿ ಪ್ರಕಟಿಸಿದ ವರದಿಯೊಂದರ ಪ್ರಕಾರ ವಿಶ್ವದಲ್ಲಿ ವಾಯುಮಂಡಲವನ್ನು ಸೇರುತ್ತಿರುವ ಹಾನಿಕಾರಕ ಹಸಿರುಮನೆ ಅನಿಲಗಳ ಒಟ್ಟಾರೆ ಪ್ರಮಾಣದ ಶೇಕಡಾ 71 ರಷ್ಟು ಭಾಗ ಕೊಡುಗೆ ನೀಡುತ್ತಿರುವುದು ಕೇವಲ ನೂರು ಕಂಪನಿಗಳು ಮಾತ್ರ. ವಿಪರ್ಯಾಸವೆಂದರೆ ಜನಮಾನಸವು ಬಳಸುವ ಬಹುಪಾಲು ಉತ್ಪನ್ನಗಳನ್ನು ತಯಾರಿಸುವುದು ಅವೇ ಕಂಪೆನಿಗಳಂತೆ! ಇದರಲ್ಲಿ ಮತ್ತಷ್ಟು ಅಚ್ಚರಿ ಹುಟ್ಟಿಸುವ ಸಂಗತಿಯೆಂದರೆ, ಭಾರತಕ್ಕೆ ಹೋಲಿಕೆ ಮಾಡಿ ನೋಡಿದಾಗ ಅಮೇರಿಕಾದ ಒಬ್ಬ ವ್ಯಕ್ತಿಯು ಇಲ್ಲಿನ ಸಾಮಾನ್ಯನಿಗಿಂತ ನೂರುಪಟ್ಟು ಹೆಚ್ಚಿನ ಶಕ್ತಿ ಸಂಪನ್ಮೂಲಗಳನ್ನು ಬಳಸುತ್ತಿದ್ದಾನಂತೆ. ಅವನದೇ ರೀತಿಯಲ್ಲಿ ಜಗತ್ತಿನ ಪ್ರತೀ ರಾಷ್ಟ್ರದ ವ್ಯಕ್ತಿಯೂ ಬದುಕಲು ಆರಂಭಿಸಿದರೆ ನಿಸರ್ಗದ ಅಧೋಗತಿಯು ಅಷ್ಟೇ ವೇಗದಲ್ಲಿ ಬಂದಪ್ಪಳಿಸಲಿದೆ.
ಹೀಗಿರುವಾಗ ಖರೀದಿಸುವ ಈ ಗುಣಸ್ವಭಾವಗಳಿಗೆ ವ್ಯಕ್ತಿಯೋರ್ವನನ್ನು ದೂಷಿಸುವುದು ತರವಲ್ಲ. ಆತ ಇಂತಹ ಮಾನಸಿಕತೆಯನ್ನು ಹೊಂದಲೆಂದೇ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಿದ, ಅಂತಹ ವಾತಾವರಣವನ್ನು ನಿರ್ಮಿಸುತ್ತಿರುವ ಕಂಪನಿಗಳ ಅಂತರ್ಯವನ್ನೊಮ್ಮೆ ಅರಿತು, ಅದರ ಕುರಿತಂತೆ ಅರಿವು ಮೂಡಿಸುವ ಪ್ರಯತ್ನಗಳಾಗಬೇಕು. ಕಾರ್ಬನ್ ಫೂಟ್ಪ್ರಿಂಟ್ ತಗ್ಗಿಸುವ ನಿಟ್ಟಿನಲ್ಲಿ ಪರಿಸರಸ್ನೇಹಿ ಮುಖವಾಡವನ್ನು ಹೊತ್ತುಬರುವ ಹಲವಾರು ಉತ್ಪನ್ನಗಳು ಮತ್ತಷ್ಟು ಅಪಾಯಕಾರಿಯೆಂದು ಅಮೇರಿಕೆಯ ನಿರ್ಮಾಪಕ ಮತ್ತು ಚಿತ್ರೋದ್ಯಮದ ಪ್ರಮುಖರಾದ ಮಾರ್ಕ್ ಕೌಫ್ಮ್ಯಾನ್ ಹೇಳುತ್ತಾರೆ. ಅದೊಂದು ಉತ್ಪನ್ನ ಮಾರಾಟದ ಜಾಹೀರಾತಿನ ತಂತ್ರಗಾರಿಕೆಯೆಂದೂ ಆರೋಪಿಸುತ್ತಾರೆ. ಆರ್ಥಿಕ ಪ್ರಗತಿ ಎಂಬ ಮಾಯಾಜಾಲದಲ್ಲಿ ಸಿಲುಕಿರುವ ನಾವು ಪ್ರತೀ ಜಿ.ಡಿ.ಪಿ ಹೆಚ್ಚಳ ಕೂಡ ಪರಿಸರಕ್ಕೆ ಹೇಗೆ ಮಾರಕವಾಗಬಲ್ಲದೆಂಬುದನ್ನು ಅರಿಯುವಲ್ಲಿ ಸೋತಿದ್ದೇವೆ. ಕೇವಲ ಒಂದು ಶೇಕಡಾ ಜಿ.ಡಿ.ಪಿ ಬೆಳವಣಿಗೆ 0.5 ರಿಂದ 0.8% ಮಾಲಿನ್ಯ ಹೆಚ್ಚಳಕ್ಕೆ ಕಾರಣವಾಗಬಲ್ಲದು. 2043ರಕ್ಕೆ ವಿಶ್ವ ಆರ್ಥಿಕ ದೈತ್ಯನಾಗಲು ಹೊರಟ ರಾಷ್ಟ್ರಗಳು, ತಮ್ಮ ಪ್ರಜೆಗಳ ಖರೀದಿಸುವ ಶಕ್ತಿಯನ್ನು ಹೆಚ್ಚಿಸುವತ್ತ ದೃಷ್ಟಿಯನ್ನು ನೆಟ್ಟಿದ್ದಾರೆಯೇ ಹೊರತಾಗಿ ಅದರಿಂದ ತಮ್ಮದೇ ನೈಸರ್ಗಿಕ ಸಂಪನ್ಮೂಲಗಳು, ಅರಣ್ಯ ಮತ್ತು ಜಾಗತಿಕ ತಾಪಮಾನ ಹೆಚ್ಚಳಕ್ಕೆ ಕಾರಣವಾಗಬಹುದಾದ ಅಂಶಗಳನ್ನು ಗಮನಿಸುವಲ್ಲಿ ಸೋತಿದ್ದಾರೆ. ನಮ್ಮೆಲ್ಲ ಹಸಿರುಅಭಿವೃದ್ಧಿ ಯೋಜನೆಗಳು, ರಾಜತಾಂತ್ರಿಕ ನೀತಿಗಳು, ಆರ್ಥಿಕತೆಯನ್ನೇ ಕೇಂದ್ರವಾಗಿರಿಸಿಕೊಂಡು ನಿರ್ಮಿಸಲ್ಪಡುತ್ತಿವೆಯೇ ವಿನಃ ಪರಿಸರವನ್ನಲ್ಲ. ಅದೇ ಕಾರಣಕ್ಕಾಗಿಯೇ ‘ರಾಯ್ ಟರ್ಸ್’ ಸೂಕ್ಶ್ಮವಾಗಿ 2009ರಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆದ ಯೋಜನೆಯ ವೈಫಲ್ಯಕ್ಕೆ ಪ್ರಮುಖ ಕಾರಣವೊಂದನ್ನು ವರದಿಯ ಮುಖಾಂತರ ಪ್ರಕಟಿಸಿತು. ಜೀರೋ -ಕಾರ್ಬನ್ ಹೊರಸೂಸುವಿಕಾ ಯೋಜನೆ, ಸುಸ್ಥಿರ ಅಭಿವೃದ್ಧಿಯತ್ತ ಮುಖಮಾಡಿದ ತೈಲರಹಿತ ವಿದ್ಯುತ್ ಉತ್ಪಾದನೆ ಮತ್ತು ಇನ್ನೂ ಅನೇಕ ಯೋಜನೆಗಳ ಮುಖಾಂತರ ಯಾವುದನ್ನೆಲ್ಲ ಉಳಿತಾಯ ಮಾಡಿತ್ತೋ ಅವುಗಳನ್ನೆಲ್ಲ ಅದೇ ಐದು ವರ್ಷಗಳಲ್ಲಿನ ಜನಮಾನಸದ ‘ವಿಪರೀತ ಖರೀದಿ ಪ್ರವೃತ್ತಿಯ’ ಹೆಚ್ಚಳಕ್ಕಾಗಿ ಕಳೆದುಕೊಳ್ಳಬೇಕಾದ ಸ್ಥಿತಿ ಬಂದೊದಗಿತು.
ಜಾಗತಿಕ ಮಟ್ಟದ ಈ ಸಮಸ್ಯೆಗೆ ನಾವೂ ಹೇಗೆ ಕೊಡುಗೆಯನ್ನು ನೀಡುತ್ತಿದ್ದೇವೆಂಬುದನ್ನೊಮ್ಮೆ ಆತ್ಮಾವಲೋಕನದ ಮುಖಾಂತರ ಅರಿಯುವ ಪ್ರಯತ್ನ ಮಾಡಬಹುದೇ? ಕಳೆದ ವರ್ಷದ ಜುಲೈನಲ್ಲಿ ಜೀ ಫೈವ್ ಸಂಸ್ಥೆ ನಡೆಸಿದ ಸಾಮಾಜಿಕ ಸಮೀಕ್ಷೆಯ ವರದಿ ಹೇಳುವುದೇನೆಂದರೆ ನಗರ ಪ್ರದೇಶದ, ಅದರಲ್ಲೂ ವಿಶೇಷವಾಗಿ ಟೆಕ್ಕಿಗಳು ಮತ್ತು ಯುವಕರ ಸಮುದಾಯ ತಾವು ಖರೀದಿಸಿದ ಮೊಬೈಲ್ ಅನ್ನು ಕೇವಲ ಆರು ತಿಂಗಳ ಅಥವಾ ಹೆಚ್ಚೆಂದರೆ ವರ್ಷದ ಅವಧಿಯಲ್ಲೇ ಬದಲಾಯಿಸಿ ಮತ್ತೊಂದು ಮೊಬೈಲ್ ಕೊಂಡುಕೊಳ್ಳುತ್ತಿದ್ದಾರಂತೆ. ನಮ್ಮ ಸುತ್ತಮುತ್ತಲಿನ ಸ್ನೇಹಿತರ ವರ್ಗವನ್ನೇ ಒಮ್ಮೆ ಗಮನಿಸಿ. ಕೊಂಡ ಮೊಬೈಲ್, ಲ್ಯಾಪ್ಟಾಪ್, ವಾಚ್, ಬಟ್ಟೆ, ದ್ವಿಚಕ್ರ ವಾಹನ ಇತ್ಯಾದಿಗಳೆಲ್ಲ ಕೆಲ ತಿಂಗಳುಗಳಲ್ಲೇ, ದಿನಗಳಲ್ಲೇ, ಅಥವಾ ಬಂದ ಕ್ಷಣದಲ್ಲೇ ಔಟ್ ಡೇಟ್ ಎಂದು ದೂರಿ ಮಗದೊಂದನ್ನು ಖರೀದಿಸಲು ಕಾದ ಬಕಪಕ್ಷಿಗಳಂತೆ ನಿಂತ ಜೀವನ ಅವರದಾಗಿರುತ್ತದೆ. ಮುಂದೊಮ್ಮೆ ಅವರ ಜೀವನದಿಂದ ನಾವೂ ಬೆಲೆ ತೆರಬೇಕಾಗಿ ಬರಬಹುದು.
ಹಾಗಿದ್ದಲ್ಲಿ ಇದನ್ನೆಲ್ಲಾ ನಿಯಂತ್ರಿಸಲು ಆಯ್ಕೆಗಳೇ ಇಲ್ಲವೇ? ಹಾಗೇನಿಲ್ಲ ಖಂಡಿತಾ ಇದೆ. ಅ ಗ್ಲೋಬಲ್ ಸಿನಾರಿಯೋ ಎಂಬ ಜೋಯೆಲ್ ಎಂ ಹೋಪ್ಕಿನ್ಸ್, ಜೆ.ಕೆ. ಸ್ಟೀನ್ ಬೆರ್ಗೆರ್, ನರಸಿಂಹ ಡಿ ರಾವ್ ಮತ್ತು ಯಾನ್ನಿಕ್ ಆಸ್ವಾಲ್ಡ್ ಎಂಬ ನಾಲ್ಕು ತಜ್ಞರ ವರದಿಯ ಪ್ರಕಾರ 2050 ರ ಹೊತ್ತಿಗೆ ಸದ್ಯದ ಜನಸಂಖ್ಯೆ ಹೆಚ್ಚಿ, ಈಗಿನ ಪರಿಸ್ಥಿತಿಗಿಂತಲೂ ಹೆಚ್ಚು ಖರೀದಿಸುವ ಪ್ರವೃತ್ತಿ ಹಾಗೇ ಉಳಿದರೆ ನಿಸರ್ಗದ ಸ್ಥಿತಿ ಅಧೋಗತಿಗಿಳಿವುದಂತೂ ಖಚಿತ. ಇಂತಿರುವಾಗ 1960 ರ ದಶಕದಲ್ಲಿ ಒಬ್ಬ ಸಾಮಾನ್ಯನ ಬದುಕು ಹೇಗಿತ್ತೋ (ಆತನ ಜೀವನವಿಧಾನ ಮಿತಿಯಾದ ಖರೀದಿಸುವ ಪ್ರವೃತ್ತಿ) ಅದರಂತೆಯೇ ಕೋಟ್ಯಂತರ ನಾಗರೀಕಪ್ರವರ್ಗ ಬದುಕಿ ತೋರಿದಾಗ ಮಾತ್ರವೇ ನಿಸರ್ಗವನ್ನುಳಿಸಿಕೊಳ್ಳಲು ಸಾಧ್ಯವೆಂದಿದ್ದಾರೆ. ಮುಂದುವರಿದ ದೇಶಗಳ ಜನರಂತೂ ತಮ್ಮ ಖರೀದಿಸುವ ಪ್ರವೃತ್ತಿಯನ್ನು ಶೇಕಡಾ 95 ರಷ್ಟು ಇಳಿಸಬೇಕೆಂದು ವರದಿ ಹೇಳಿದೆ. ಇಂತಿರುವಾಗ ಭಾರತೀಯರಾದ ನಮ್ಮ ಪೂರ್ವಜರು ಹಾಕಿಕೊಟ್ಟ ಸರಳ ಜೀವನದ ಪರಿಕಲ್ಪನೆಯನ್ನು ಮತ್ತೆ ಮುನ್ನೆಲೆಗೆ ತರುವುದರ ಮುಖಾಂತರವಾಗಿ ಖರೀದಿಸುವ ಪ್ರವೃತ್ತಿಯನ್ನು ವ್ಯಸನಸ್ವರೂಪಕ್ಕೆ ತಿರುಗುವ ಮುನ್ನವೇ ತಡೆಹಿಡಿಯೋಣ. ಅಷ್ಟೇ ಅಲ್ಲದೇ, ನಮ್ಮ ಜೀವನ ಶೈಲಿ ಇತರ ದೇಶಗಳಿಗೂ ಮಾದರಿಯಾಗುವಂತಿರಲಿ. ಇಲ್ಲದಿದ್ದರೆ ಮಿತಿಯಿಲ್ಲದ ಖರೀದಿ ಮನೋರೋಗಕ್ಕೆ ಹಾದಿಯಾಗುವುದಲ್ಲದೇ, ನಿಸರ್ಗ ವಿನಾಶಕ್ಕೂ ಬುನಾದಿಯಾದೀತು ಎಚ್ಚರ!
ಇದನ್ನೂ ಓದಿ: Team India : ಟೀಮ್ ಇಂಡಿಯಾದ ಹೊಸ ಜೆರ್ಸಿ ರೇಟ್ ದುಬಾರಿ, ಆದ್ರೂ ಖರೀದಿಗೆ ಮುಗಿಬಿದ್ದ ಅಭಿಮಾನಿಗಳು!
ಅಂಕಣ
ರಾಜಮಾರ್ಗ ಅಂಕಣ: ಗಣಿತ ಕಲಿಸಿದ ಜೀವನದ ಪಾಠ – ಎಲ್ಲ ಸಮಸ್ಯೆಗಳಿಗೂ ಪರಿಹಾರ ಇದೆ!
ನಾನೊಬ್ಬ ಗಣಿತ ಅಧ್ಯಾಪಕ. ಗಣಿತವು ಜೀವನಕ್ಕೆ ಹಲವು ಪಾಠಗಳನ್ನು ಕೊಡುತ್ತದೆ. ಅದರಲ್ಲಿ ಒಂದು ಪ್ರಮುಖ ಪಾಠ ಎಂದರೆ – ಎಲ್ಲ ಸಮಸ್ಯೆಗಳಿಗೂ ಪರಿಹಾರ ಇದೆ ಎನ್ನುವುದು.
ಜೀವನದಲ್ಲಿ ನಮಗೆ ಬರುವ ಕೆಲವು ಸಮಸ್ಯೆಗಳು ನಮಗೆ ಹೇಳಿ ಬರುತ್ತವೆ. ಕೆಲವು ಹೇಳದೇ ಬರುತ್ತವೆ. ಕೆಲವು ಅದರಷ್ಟಕ್ಕೆ ಬರುತ್ತವೆ. ಇನ್ನೂ ಕೆಲವನ್ನು ನಾವು ನಮ್ಮದೇ ತಪ್ಪುಗಳಿಂದ ಮೈಮೇಲೆ ಎಳೆದುಕೊಳ್ಳುತ್ತೇವೆ.
ಆದರೆ ಸ್ವಲ್ಪ ತಾಳ್ಮೆಯಿಂದ ಯೋಚನೆ ಮಾಡಿ ನೋಡಿದರೆ ಹೆಚ್ಚಿನ ಸಮಸ್ಯೆಗಳು ಅದರಷ್ಟಕ್ಕೆ ಪರಿಹಾರ ಆಗುತ್ತವೆ. ಹೇಳದೇ ಬರುವ ಸಮಸ್ಯೆಗಳಿಗೆ ನಾವು ಹೆಚ್ಚು ಪ್ರಿಪೇರ್ ಆಗಿರಬೇಕು.
ಸಮಸ್ಯೆಗಳು ಬರಲು ಕಾರಣಗಳು ಯಾವುವು?
1) ನಮ್ಮ ದುಡುಕುತನ
2) ತಪ್ಪು ಕಲ್ಪನೆಗಳು.
3) ನಮ್ಮ ಬೇಜವಾಬ್ದಾರಿ.
4) ನಮ್ಮ ತಪ್ಪು ಯೋಜನೆಗಳು.
5) ತಪ್ಪುಗ್ರಹಿಕೆ.
6) ತಪ್ಪು ಯೋಚನೆಗಳು.
7) ಕೆಲವರನ್ನು ತುಂಬಾ ಅವಲಂಬನೆ ಮಾಡುವುದು ಮತ್ತು ನಂಬುವುದು.
8) ಹೆಚ್ಚು ಆತಂಕ ಮಾಡುವುದು.
9) ಕೆಲಸಗಳನ್ನು ಮುಂದೂಡುವುದು.
10) ಆತ್ಮವಿಶ್ವಾಸದ ಕೊರತೆ.
11) ಆರಂಭದಲ್ಲಿ ಉದಾಸೀನ ಮಾಡುವುದು ಮತ್ತು ಬೇಜವಾಬ್ದಾರಿ.
12) ನಿರ್ಧಾರ ತೆಗೆದುಕೊಳ್ಳಲು ತುಂಬಾ ಹೆದರುವುದು.
13) ಇಚ್ಛಾಶಕ್ತಿಯ ಕೊರತೆ.
14) ಯಾವಾಗಲೂ ಕಲ್ಪನೆಯಲ್ಲಿ ತೇಲುವುದು.
15) ತಪ್ಪುಗಳನ್ನು ರಿಪೀಟ್ ಮಾಡುತ್ತಲೇ ಹೋಗುವುದು.
16) ತುಂಬಾ ಭಾವನಾತ್ಮಕವಾಗಿ ಯೋಚನೆ ಮಾಡುವುದು.
17) ಪ್ರಾಕ್ಟಿಕಲ್ ಆಗಿ ಯೋಚನೆ ಮಾಡದೇ ಇರುವುದು.
18) ಅತಿಯಾದ ನಿರೀಕ್ಷೆಗಳು.
19) ಅತಿಯಾದ ಆತ್ಮವಿಶ್ವಾಸ ಮತ್ತು ಭಂಡ ಧೈರ್ಯ.
20) ನೆಗೆಟಿವ್ ಯೋಚನೆಗಳು…..
ಇನ್ನೂ ನೂರಾರು ಕಾರಣಗಳು ಇರಬಹುದು. ಆದರೆ ಹೆಚ್ಚಿನ ಸಮಸ್ಯೆಗಳಿಗೆ ನಮ್ಮ ನೆಗೆಟಿವ್ ಯೋಚನೆಗಳು ಕಾರಣ ಆಗಿರುತ್ತವೆ ಎಂದರೆ ನಿಮಗೆ ನಂಬುವುದು ಕಷ್ಟ ಆಗಬಹುದು. ಆದರೆ ಅದು ಹೌದು.
ಸಮಸ್ಯೆಗಳನ್ನು ಎದುರಿಸಲು ಬೇಕಾದದ್ದು ಮೂರೇ ಮೂರು ಅಂಶಗಳು. ಬೆಟ್ಟದಷ್ಟು ತಾಳ್ಮೆ, ಸರಿಯಾದ ಪ್ಲಾನಿಂಗ್ ಮತ್ತು ಜೀವನ ಪ್ರೀತಿ ಮಾತ್ರ. ಅದು ಹೇಗೆ?
ಇಲ್ಲಿವೆ ಸಮಸ್ಯೆಗಳಿಗೆ ಕೆಲವು ಸಿಂಪಲ್ ಆದ ಪರಿಹಾರಗಳು
1) ಉದಾಹರಣೆಗೆ ಇಂದಿನ ಹೆಚ್ಚು ಸಮಸ್ಯೆಗಳು ದುಡ್ಡಿನ ಕಾರಣಕ್ಕೆ ಬರುವಂಥದ್ದು. ನಮ್ಮ ಅಮ್ಮ ಪ್ರೈಮರಿ ಸ್ಕೂಲ್ ಟೀಚರ್ ಆಗಿದ್ದು ಯಾರ ಹೆಚ್ಚು ಸಪೋರ್ಟ್ ಇಲ್ಲದೆ ತನ್ನ ನಾಲ್ಕು ಮಕ್ಕಳನ್ನು ವಿದ್ಯಾವಂತರಾಗಿ ಮಾಡಿದ್ದರು. ಅವರ ಆರಂಭಿಕ ವೇತನ ಕೇವಲ 60ರೂಪಾಯಿ ಮಾತ್ರ ಆಗಿತ್ತು. ಪಕ್ಕಾ ಯೋಜನೆ ಮತ್ತು ಹಣಕಾಸಿನ ನಿರ್ವಹಣೆ ಮಾಡುವುದರಿಂದ ಅದು ಸಾಧ್ಯವಾಗಿತ್ತು. ಅದರಲ್ಲಿ ಕೂಡ ಅವರು ಐದು ರೂಪಾಯಿ ಉಳಿತಾಯ ಮಾಡುತ್ತಿದ್ದರು ಅಂದರೆ ಗ್ರೇಟ್ ಅಲ್ವಾ? ಈ ದುಡ್ಡಿನ ಸಮರ್ಪಕ ಯೋಜನೆ ಮತ್ತು ನಿರ್ವಹಣೆಯು ನಮ್ಮನ್ನು ಖಂಡಿತವಾಗಿ ಗೆಲ್ಲಿಸುತ್ತದೆ.
2) ಕೆಲವರು ಸಣ್ಣ ಸಣ್ಣ ಸಮಸ್ಯೆಗಳನ್ನು ದೊಡ್ಡದು ಮಾಡಿ ನೋಡುತ್ತಾರೆ. ಸ್ವಲ್ಪ ತಾಳ್ಮೆಯಿಂದ ಅವಲೋಕನ ಮಾಡಿದರೆ ಅವುಗಳು ಕರಗುವ ಮೋಡಗಳ ಹಾಗೆ ಅದರಷ್ಟಕ್ಕೆ ಕರಗಿ ಬಿಡುತ್ತವೆ.
3) ಇನ್ನೂ ಕೆಲವು ಸಮಸ್ಯೆಗಳಿಗೆ ನಾವು ತೆಗೆದುಕೊಳ್ಳುವ ನಿರ್ಧಾರಗಳು ಕಾರಣ ಆಗಿರುತ್ತವೆ. ನಾವು ಕ್ಷಿಪ್ರ ನಿರ್ಧಾರ ತೆಗೆದುಕೊಳ್ಳಬೇಕಾದ ಕಡೆ ನಿಧಾನ ಮಾಡುತ್ತೇವೆ. ನಿಧಾನವಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವ ಕಡೆ ದುಡುಕು ನಿರ್ಧಾರ ತೆಗೆದುಕೊಳ್ಳುತ್ತೇವೆ. ಇದು ಸರಿಯಾಗಬೇಕು.
4) ನಾವು ತಪ್ಪು ವ್ಯಕ್ತಿಗಳನ್ನು ತುಂಬಾ ನಂಬುತ್ತೇವೆ ಮತ್ತು ನಮ್ಮ ಹತ್ತಿರ ಎಳೆದುಕೊಳ್ಳುತ್ತೇವೆ. ಸರಿಯಾದ ವ್ಯಕ್ತಿಗಳನ್ನು ಸಂಶಯದಿಂದ ನೋಡುತ್ತೇವೆ ಮತ್ತು ದೂರ ಮಾಡುತ್ತೇವೆ. ಇದು ನಮ್ಮ ಹೆಚ್ಚಿನ ಸಮಸ್ಯೆಗಳಿಗೆ ಕಾರಣ.
5) ನಮ್ಮ ಕೆಲಸವನ್ನು ಮುಂದೂಡುವ ಗುಣ( ಪೋಸ್ಟ್ ಪೋನಮೆಂಟ್)ವು ನಮ್ಮನ್ನು ಸಮಸ್ಯೆಗಳ ಬಾಗಿಲಿನವರೆಗೆ ಕರೆದುಕೊಂಡು ಹೋಗುತ್ತದೆ.
6) ಕೆಲವರು ನಮ್ಮ ಎಲ್ಲ ಸಮಸ್ಯೆಗಳಿಗೆ ವಿಧಿಯೇ ಅಥವಾ ದೇವರೇ ಕಾರಣ ಎಂದು ದೂರುತ್ತಾ ಸಮಯ ಕಳೆಯುತ್ತಾರೆ. ಸಮಸ್ಯೆಗಳ ಪರಿಹಾರಕ್ಕೆ ದಾರಿಯನ್ನು ಹುಡುಕುವುದಿಲ್ಲ.
7) ಒಂದು ಒಳ್ಳೆಯ ಟೀಮನಲ್ಲಿ ಕೆಲಸ ಮಾಡುವುದರಿಂದ, ಸಂಘಟಿತ ಪ್ರಯತ್ನ ಮಾಡುವುದರಿಂದ ಮತ್ತು ಎಲ್ಲರ ಜೊತೆ ಸೇರಿ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಸಮಸ್ಯೆಗಳನ್ನು ಎದುರಿಸಲು ಭಾರೀ ಶಕ್ತಿ ಬರುತ್ತದೆ.
8)ಆತ್ಮೀಯರಲ್ಲಿ ಮನಸ್ಸು ಬಿಚ್ಚಿ ಮಾತಾಡುವುದರಿಂದ ಮನಸ್ಸು ಹಗುರ ಆಗ್ತದೆ ಮತ್ತು ಸಮಸ್ಯೆ ಎದುರಿಸಲು ಧೈರ್ಯ ಬರುತ್ತದೆ. ಅಂತರ್ಮುಖಿ ವ್ಯಕ್ತಿಗಳು ಹೆಚ್ಚು ಸಮಸ್ಯೆಗಳನ್ನು ಎದುರಿಸುತ್ತಾರೆ.
9) ಸಮಸ್ಯೆಗಳು ಬಂದಾಗ ತಣ್ಣಗೆ ಒಂದು ಕಡೆ ಕೂತು ಆ ಸಮಸ್ಯೆಗಳಿಗೆ ಹಲವು ಪರ್ಯಾಯ ಪರಿಹಾರಗಳನ್ನು ಹುಡುಕಿದಾಗ ಮತ್ತು ಅವುಗಳಲ್ಲಿ
ಸೂಕ್ತವಾದದ್ದನ್ನು ಮತ್ತು ಕಡಿಮೆ ರಿಸ್ಕ್ ಇರುವುದನ್ನು ಆರಿಸಿಕೊಂಡು ಅನುಷ್ಟಾನ ಮಾಡಿದಾಗ ಯಾವ ಸಮಸ್ಯೆಯನ್ನು ಬೇಕಾದರೂ ಬಿಡಿಸಬಹುದು.
10) ನಾನು ಆರಂಭದಲ್ಲಿಯೇ ಹೇಳಿದ ಹಾಗೆ ತಾಳ್ಮೆಯಿಂದ ಅವಲೋಕನ ಮಾಡಿದರೆ, ಸಮಸ್ಯೆಗೆ ಕಾರಣಗಳನ್ನು ಪಟ್ಟಿ ಮಾಡಿದಾಗ ಮತ್ತು ಪಾಸಿಟಿವ್ ಥಿಂಕಿಂಗ್ ಮಾಡಿದರೆ ಯಾವ ಸಮಸ್ಯೆಯೂ ನಮಗೆ ತೊಂದರೆ ಕೊಡದೇ ಹಾಗೇ ಮಾಯವಾಗುತ್ತದೆ.
ಇದನ್ನೂ ಓದಿ: ರಾಜಮಾರ್ಗ ಅಂಕಣ: ತೋಚಿದ್ದನ್ನು ಗೀಚಿ ಮಹಾನ್ ಸಾಹಿತಿ ಆದ ಬೀಚಿ
ಭರತ ವಾಕ್ಯ
ಸಮಸ್ಯೆಗಳನ್ನು ಎದುರಿಸುವ ಶಕ್ತಿಯು ನಮ್ಮ ಒಳಗೆ ಇರುತ್ತದೆ. ನಾವು ಒಳಗಿನಿಂದ ಸ್ಟ್ರಾಂಗ್ ಆದರೆ ಯಾವ ಸಮಸ್ಯೆಯನ್ನೂ ಪರಿಹಾರ ಮಾಡಬಹುದು. ಪ್ರಯತ್ನ ಮಾಡೋಣ ಅಲ್ಲವೇ..?
-
ಸುವಚನ12 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
South Cinema24 hours ago
Priya Prakash Varrier: ಕಣ್ಣು ಹೊಡೊಯೊ ಐಡಿಯಾ ಕೊಟ್ಟಿದ್ದು ನಾನೆ ಎಂದ ಪ್ರಿಯಾ; ಆಕೆಗೆ ತೈಲ ಕೊಡ್ರಪ್ಪ ಎಂದ ನಿರ್ದೇಶಕ!
-
South Cinema22 hours ago
Kannada New Movie: ಹಿಮಾಲಯದ ಕೊರೆಯುವ ಚಳಿಯಲ್ಲಿ ‘ಎಲ್ಲೋ ಜೋಗಪ್ಪ ನಿನ್ನರಮನೆ’ ಶೂಟಿಂಗ್!
-
South Cinema22 hours ago
Nandamuri Balakrishna: ‘ಐ ಡೋಂಟ್ ಕೇರ್ʼ ಎಂದು ಮಾಸ್ ಅವತಾರವೆತ್ತ ನಂದಮೂರಿ ಬಾಲಕೃಷ್ಣ; ಟೈಟಲ್ ರಿವೀಲ್!
-
ಪ್ರಮುಖ ಸುದ್ದಿ18 hours ago
ವಿಸ್ತಾರ ಸಂಪಾದಕೀಯ: ಇಂದಿರಾ ಗಾಂಧಿ ಹತ್ಯೆಯ ಸಂಭ್ರಮ; ಕೆನಡಾದಲ್ಲಿ ಖಲಿಸ್ತಾನಿಗಳ ಉದ್ಧಟತನ ಖಂಡನೀಯ
-
ಪ್ರಮುಖ ಸುದ್ದಿ23 hours ago
ವಿಧವೆ ಅನ್ನೋದಕ್ಕೆ ರಾಷ್ಟ್ರಪತಿಯನ್ನು ಸಂಸತ್ ಭವನ ಉದ್ಘಾಟನೆಗೆ ಮೋದಿ ಆಹ್ವಾನಿಸಿಲ್ಲವೆಂದ ಕುಂ. ವೀರಭದ್ರಪ್ಪ
-
ಪ್ರಮುಖ ಸುದ್ದಿ24 hours ago
Textbook Revision: ಬುದ್ಧಿಜೀವಿ ಎಂದು ಹೇಳಿಕೊಂಡು ಕೆಲವರು ಓಡಾಡುತ್ತಿದ್ದಾರೆ!: ಸರ್ಕಾರಕ್ಕೆ ಹಿಗ್ಗಾಮುಗ್ಗಾ ಜಾಡಿಸಿದ ಮಾಜಿ ಸಚಿವ ಬಿ.ಸಿ. ನಾಗೇಶ್
-
ಕರ್ನಾಟಕ21 hours ago
Fraud Case: ಬೆಳದಿಂಗಳ ಬಾಲೆ ಪ್ರಕರಣಕ್ಕೆ ಟ್ವಿಸ್ಟ್; ಸ್ವಾಮೀಜಿ ವಂಚನೆ ಕೇಸಲ್ಲಿ ಎ2 ಆರೋಪಿ ಈಗ ಎ1!