Site icon Vistara News

ಗ್ರಾಹಕ ಜಾಗೃತಿ | ನ್ಯಾಯಾಧೀಶರು ಸಾಧ್ಯತೆ ಕಲ್ಪಿಸಿಕೊಂಡು ತೀರ್ಪು ನೀಡಬಾರದು

grahaka

ತನ್ನ ನಿರೀಕ್ಷಣೆಯನ್ನು ಸಮರ್ಥಿಸುವಂಥ ಪುರಾವೆಗಳನ್ನು ಕಂಡುಕೊಳ್ಳಬೇಕಾಗುತ್ತದೆ

ವೈದ್ಯರ ನಿರ್ಲಕ್ಷ್ಯ ಆರೋಪಿಸಿದ ಎಲ್ಲ ಪ್ರಕರಣಗಳೂ ಗ್ರಾಹಕ ನ್ಯಾಯಾಲಗಳಲ್ಲಿ ಸಿಂಧುವಾಗಲಾರವು. ಚಿಕಿತ್ಸೆಯ ಬಳಿಕ ರೋಗಿಯೂ ಪಾಲಿಸಬೇಕಾದ ಹಲವು ಸಂಗತಿಗಳು ಇರುತ್ತವೆ. ಅವು ಪಾಲನೆಯಾಗಿದೆಯೋ ಇಲ್ಲವೋ ಎಂಬುದನ್ನೂ ಗ್ರಾಹಕ ನ್ಯಾಯಾಲಯಗಳು ಗಮನಿಸುತ್ತವೆ. ಇಲ್ಲಿ ಅಂಥ ಒಂದು ಪ್ರಕರಣ ಇದೆ.

ಉತ್ತರ ಪ್ರದೇಶದ ಪರಗಣದ ಗಾಯತ್ರಿ ಮೊಹಲ್ಲಾದ ರಾಜಕುಮಾರ ಎಂಬಾತ 10-04-2010ರಂದು ರಸ್ತೆ ಅಪಘಾತದಲ್ಲಿ ಗಾಯಗೊಳ್ಳುತ್ತಾನೆ. ಆತನ ಎಡಗಾಲು ತೀವ್ರ ಜಖಂಗೊಂಡಿರುತ್ತದೆ. ಆತನನ್ನು ಬೀರೌತ್‌ನ ಡಾ.ನರೇಂದರ್‌ ಮೆಮೋರಿಯಲ್‌ ಮೂರ್ತಿ ನರ್ಸಿಂಗ್‌ ಹೋಂನಲ್ಲಿ ಮೂಳೆ ತಜ್ಞ ಡಾ. ರಾಜೀವ ಜೈನ್‌ ಎಂಬವರು ತಪಾಸಣೆ ನಡೆಸುತ್ತಾರೆ. 17-04-2010ರಂದು ಅವರು ಶಸ್ತ್ರಚಿಕಿತ್ಸೆ ನಡೆಸುತ್ತಾರೆ. ಆದರೆ ರಾಜಕುಮಾರ ಸರಿಹೋಗುವುದಿಲ್ಲ. ಒಳಗೆ ಅಳವಡಿಸಿದ್ದ ಪ್ಲೇಟ್‌ ಸರಿಯಾಗಿರಲಿಲ್ಲ. ಈ ಕಾರಣಕ್ಕೆ 9-11-20110ರಂದು ಮತ್ತೊಮ್ಮೆ ಶಸ್ತ್ರಚಿಕಿತ್ಸೆಯನ್ನು ನಡೆಸುತ್ತಾರೆ. ಆದರೂ ಅಪೇಕ್ಷಿತ ಫಲ ದೊರೆಯಲಿಲ್ಲ. ಅದಾದ ಬಳಿಕ ಡಾ.ಜೈನ್‌ ಅವರು ರಾಜಕುಮಾರನಿಗೆ ಚಿಕಿತ್ಸೆ ಮುಂದುವರಿಸಲು ನಿರಾಕರಿಸುತ್ತಾರೆ. ಬಳಿಕ ಆತ ಬಾಗಪತ್‌ನ ರಕ್ಷಾ ಆಸ್ಪತ್ರೆಯಲ್ಲಿ ಡಾ.ತೋಮರ್‌ ಎಂಬವರನ್ನು ಸಂಪರ್ಕಿಸುತ್ತಾನೆ. ಅಲ್ಲಿ ಅವರು 3ನೆ ಶಸ್ತ್ರಚಿಕಿತ್ಸೆಯನ್ನು ನಡೆಸುತ್ತಾರೆ. ಅದಕ್ಕಾಗಿ ರಾಜಕುಮಾರ ಒಂದು ಲಕ್ಷ ರುಪಾಯಿಗಳಷ್ಚು ವೆಚ್ಚಮಾಡಬೇಕಾಗುತ್ತದೆ. ಮೊದಲ ವೈದ್ಯರ ನಿರ್ಲಕ್ಷ್ಯದ ಕಾರಣ ಅಸಮಾಧಾನಗೊಂಡಿದ್ದ ರಾಜಕುಮಾರ ಅವರ ವಿರುದ್ಧ ಬಾಗಪತ್‌ ಜಿಲ್ಲಾ ಗ್ರಾಹಕ ವೇದಿಕೆಯಲ್ಲಿ ದೂರನ್ನು ದಾಖಲಿಸುತ್ತಾನೆ.

ಡಾ.ಜೈನ್‌ ಅವರು ಲಿಖಿತ ಹೇಳಿಕೆಯನ್ನು ಸಲ್ಲಿಸುತ್ತಾರೆ. ತಾವು ತಪ್ಪು ಚಿಕಿತ್ಸೆ ನೀಡಿದ್ದಾಗಿ ಮಾಡಿರುವ ಆರೋಪವನ್ನು ಅಲ್ಲಗಳೆಯುತ್ತಾರೆ. ಶಸ್ತ್ರಚಿಕಿತ್ಸೆಯ ಬಳಿಕ ಪ್ರತಿ ವಾರ ಆಸ್ಪತ್ರೆಗೆ ಭೇಟಿ ನೀಡಬೇಕು ಎಂದು ಹೇಳಿದ್ದನ್ನು ಆತ ಪಾಲಿಸಲಿಲ್ಲ. ಆರು ತಿಂಗಳ ನಂತರವಷ್ಟೇ ಆತ ತಮ್ಮನ್ನು ಭೇಟಿ ಮಾಡಿದ್ದು. ಅಲ್ಲಿ ರಸಿಕೆಯಾಗಿ ಎಲುವು ಜೋಡಣೆಯಾಗಿರಲಿಲ್ಲ. ಈ ಕಾರಣಕ್ಕೆ ಎರಡನೆ ಬಾರಿ ಶಸ್ತ್ರಚಿಕಿತ್ಸೆಯನ್ನು ಮಾಡಲಾಯಿತು. ಶಸ್ತ್ರಚಿಕಿತ್ಸೆಯ ನಂತರ ತೆಗೆದ ಎಕ್ಸರೇಯಲ್ಲಿ ಎಲುವು ಸರಿಯಾಗಿ ಹೊಂದಿಕೊಂಡಿರುವುದನ್ನು ತೋರಿಸುತ್ತಿತ್ತು ಎಂದು ವಿವರಿಸುತ್ತಾರೆ.

ಸಾಕ್ಷಿಗಳು ಮತ್ತು ಸಲ್ಲಿಸಿದ ಪುರಾವೆಗಳ ಆಧಾರದ ಮೇಲೆ ಜಿಲ್ಲಾ ವೇದಿಕೆಯು ದೂರನ್ನು ಭಾಗಶಃ ಪುರಸ್ಕರಿಸುತ್ತದೆ. ಮತ್ತು ಪ್ರತಿವಾದಿ ಡಾ.ಜೈನ್‌ ಅವರು ದೂರುದಾರರಿಗೆ 2 ಲಕ್ಷ ರು. ಪರಿಹಾರ ನೀಡಬೇಕು. ಅದಕ್ಕೆ 01-04-2011ರಿಂದ ಅನ್ವಯವಾಗುವಂತೆ ಶೇ.8ರಂತೆ ಬಡ್ಡಿಯನ್ನೂ ನೀಡಬೇಕು ಮತ್ತು 5 ಸಾವಿರ ರು.ಗಳನ್ನು ಅರ್ಜಿಯ ವೆಚ್ಚವೆಂದು ನೀಡಬೇಕು ಎಂದು ಆದೇಶಿಸುತ್ತದೆ.

ಇದನ್ನೂ ಓದಿ | ಗ್ರಾಹಕ ಜಾಗೃತಿ | ವಾಣಿಜ್ಯ ವ್ಯವಹಾರ ಗ್ರಾಹಕ ರಕ್ಷಣೆ ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲ

ಇದರ ವಿರುದ್ಧ ಡಾ.ಜೈನ್‌ ಉತ್ತರಪ್ರದೇಶ ರಾಜ್ಯ ಗ್ರಾಹಕ ಆಯೋಗದಲ್ಲಿ ಮೇಲ್ಮನವಿಯನ್ನು ಸಲ್ಲಿಸುತ್ತಾರೆ. ವೈದ್ಯರು ಶಸ್ತ್ರಚಿಕಿತ್ಸೆಯನ್ನು ನಡೆಸುವಾಗ ವೈದ್ಯಕೀಯ ಮಾನದಂಡಗಳನ್ನು ಅನುಸರಿಸಲಿಲ್ಲ ಎನ್ನುವುದಕ್ಕೆ ಪರಿಣತರ ಅಭಿಪ್ರಾಯಗಳನ್ನು ಜಿಲ್ಲಾ ವೇದಿಕೆಯು ಪಡೆದುಕೊಳ್ಳಲಿಲ್ಲ. ಮೇಲ್ಮನವಿದಾರರು ವೈದ್ಯಕೀಯ ಚಿಕಿತ್ಸೆ ನೀಡುವಲ್ಲಿ ಲೋಪವೆಸಗಿದ್ದಾರೆ ಎಂದು ಜಿಲ್ಲಾ ವೇದಿಕೆ ಕೇವಲ ಕಲ್ಪನೆಯನ್ನು ಮಾಡಿಕೊಂಡಿದೆ. ತನ್ನ ನಿರೀಕ್ಷಣೆಯನ್ನು ಸಮರ್ಥಿಸುವಂಥ ಯಾವದೇ ವೈದ್ಯಕೀಯ ಸಂಗತಿಯನ್ನು ಅದು ಬಹಿರಂಗಪಡಿಸಿಲ್ಲ. ಜಿಲ್ಲಾ ವೇದಿಕೆಯ ಅಧ್ಯಕ್ಷರಾಗಲಿ ಸದಸ್ಯರಾಗಲೀ ವೈದ್ಯಕೀಯದ ಯಾವುದೇ ವಿಭಾಗದಲ್ಲೂ ಪರಿಣತರಲ್ಲ. ಹೀಗಿರುವಾಗ ಅವರ ಅನಿಸಿಕೆ, ಅಭಿಪ್ರಾಯಗಳು ಮೇಲ್ಮನವಿ ಸಲ್ಲಿಸಿರುವ ವೈದ್ಯರು ತಮ್ಮ ಚಿಕಿತ್ಸೆಯಲ್ಲಿ ನಿರ್ಲಕ್ಷ್ಯ ತೋರಿಸಿದ್ದಾರೆ ಎಂದು ನಿರ್ಧರಿಸುವುದಕ್ಕೆ ಸಾಕಾಗುವುದಿಲ್ಲ. ಭೌತಿಕವಾಗಿ ಲಭ್ಯವಿರುವ ದಾಖಲೆಗಳು ವೈದ್ಯರ ನಿರ್ಲಕ್ಷ್ಯವನ್ನು ಸಾಬೀತುಪಡಿಸುವುದಿಲ್ಲ. ಕಾರಣ ಮೇಲ್ಮನವಿಯನ್ನು ಪುರಸ್ಕರಿಸುವುದಾಗಿ ಹೇಳಿ ಜಿಲ್ಲಾ ವೇದಿಕೆಯ ತೀರ್ಪನ್ನು ರದ್ದುಪಡಿಸಿತು.

ಇದರಿಂದ ಅಸಮಾಧಾನಗೊಂಡ ಮೂಲ ದಾವೆದಾರ ರಾಜಕುಮಾರ ರಾಷ್ಟ್ರೀಯ ಗ್ರಾಹಕ ಆಯೋಗದಲ್ಲಿ ಮೇಲ್ಮನವಿಯನ್ನು ಸಲ್ಲಿಸುತ್ತಾನೆ. ತನ್ನ ಮೂಳೆ ಬಿರುಕುಬಿಟ್ಟಿದ್ದು ತುಂಬ ಸೂಕ್ಷ್ಮವಾಗಿತ್ತು. ಇದನ್ನು ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಹಾಕಿ 4ರಿಂದ 6 ತಿಂಗಳೊಳಗೆ ಗುಣಪಡಿಸಬಹುದಿತ್ತು. ಆದರೆ ಪ್ರತಿವಾದಿ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಒಳಗೆ ಪ್ಲೇಟನ್ನು ಅಳವಡಿಸುತ್ತಾರೆ. ಯಾವುದೇ ಗುಣ ಕಾಣದ್ದರಿಂದ ಏಳು ತಿಂಗಳ ಬಳಿಕ ಎರಡನೆ ಬಾರಿ ಶಸ್ತ್ರಚಿಕಿತ್ಸೆ ನಡೆಸುತ್ತಾರೆ. ಒಂದು ವರ್ಷದ ಬಳಿಕವೂ ಎಲುವು ನೇರವಾಗಿ ಜೋಡಣೆಯಾಗಿರಲೇ ಇಲ್ಲ. ಅದಕ್ಕೆ ಕಾರಣ ವೈದ್ಯರು ಮೊದಲ ಶಸ್ತ್ರಚಿಕಿತ್ಸೆಯನ್ನು ಸರಿಯಾಗಿ ಮಾಡದೇ ಇದ್ದುದು. ಈಗ ಮೂರನೆ ಶಸ್ತ್ರಚಿಕಿತ್ಸೆ ಮಾಡಿದ ಮೇಲೂ ತನಗೆ ನಡೆಯುವಾಗ ತೊಂದರೆಯಾಗುತ್ತಿದೆ ಎಂದು ಮೇಲ್ಮನವಿಯಲ್ಲಿ ರಾಜಕುಮಾರ ವಿವರಿಸಿದನು.

ಇದನ್ನೂ ಓದಿ | ಗ್ರಾಹಕ ಜಾಗೃತಿ | ದೂರುದಾರರ ಪರವಾಗಿ ಗ್ರಾಹಕ ಆಯೋಗದ ಸ್ವಯಂ ಊಹೆ ಕಾನೂನು ಸಮ್ಮತವಲ್ಲ

ರಾಷ್ಟ್ರೀಯ ಆಯೋಗವು ಮೇಲ್ಮನವಿಯನ್ನು ಪರಿಶೀಲಿಸಿ ಮೂಳೆಗಳ ಚಿಕಿತ್ಸೆಯ ಸಂಬಂಧದ ಕ್ಯಾಂಬೆಲ್ಲರ ಆಪರೇಟಿವ್‌ ಆರ್ಥೋಪಿಡಿಕ್ಸ್‌ನ 14ನೆ ಆವೃತ್ತಿಯನ್ನು ಪರಿಶೀಲಿಸಿತು. ಅದರಲ್ಲಿ ಮೂಳೆ ಮುರಿತವಾದಾಗ ಹೇಗೆ ಚಿಕಿತ್ಸೆ ನೀಡಬೇಕು ಎಂಬ ವಿವರಗಳಿವೆ. ಅದರಲ್ಲಿ ಪ್ರಸ್ತುತ ಪ್ರಕರಣಗಳಂಥದ್ದು ಇದ್ದಲ್ಲಿ ಅದಕ್ಕೆ ಪಿಓಪಿ ಅಥವಾ ಒಳಗೆ ಮೊಳೆ ಅಥವಾ ಪ್ಲೇಟ್‌ ಅಳವಡಿಸುವ ಬಗ್ಗೆ ಹೇಳಿದೆ. ಇದರಲ್ಲಿ ವೈದ್ಯರು ಪ್ಲೇಟ್‌ ಅಳವಡಿಸುವುದನ್ನು ಮಾಡಿದ್ದಾರೆ. ಇದು ಸ್ಥಾಪಿತ ಮಾನದಂಡದಿಂದ ಹೊರತಾದುದಲ್ಲ. ಶಸ್ತ್ರಚಿಕಿತ್ಸೆ ಮಾಡಿದ ಜಾಗದಲ್ಲಿ ರಸಿಕೆಯಾಗಿ ದೀರ್ಘಕಾಲ ಹಾಗೇ ಇದ್ದುದರಿಂದ ಎಲುವು ಜೋಡಣೆಯಾಗಲಿಲ್ಲ. ಇಲ್ಲಿ ರೋಗಿಯು ಶಸ್ತ್ರಚಿಕಿತ್ಸೆಯ ಬಳಿಕ ಅನುಸರಿಸಬೇಕಾದ ಕ್ರಮಗಳನ್ನು ಅನುಸರಿಸದೆ ಇದ್ದುದರಿಂದಲೇ ಹೀಗಾಗಿದೆ. ನಂಜುನಿರೋಧಕಗಳನ್ನು ಸರಿಯಾಗಿ ಬಳಸದೇ ಇದ್ದುದೇ ರಸಿಕೆಯಾಗಲು ಕಾರಣ. ಡಾ.ತೋಮರ್‌ ಅವರು ತಮ್ಮ ಹೇಳಿಕೆಯಲ್ಲಿ ತುಂಬ ಕಾಲದಿಂದ ಸೋಂಕು ಇದ್ದರಿಂದ ಪ್ಲೇಟ್‌ ಹೊರತೆಗೆಯಬೇಕಾಯಿತು ಎಂದು ಹೇಳಿರುವುದು ವೈದ್ಯರ ನಿರ್ಲಕ್ಷ್ಯವನ್ನು ಹೇಳುವುದಿಲ್ಲ. ಅಳವಡಿಸಿದ್ದ ಪ್ಲೇಟ್‌ನ ಗುಣಮಟ್ಟದಲ್ಲಿ ದೋಷವಿತ್ತು ಎಂಬುದನ್ನು ಸೂಕ್ತವಾದ ಪ್ರಯೋಗಾಲಯದಿಂದ ಪ್ರಮಾಣೀಕರಿಸಿಲ್ಲ. ದೀರ್ಘ ಕಾಲದ ಸೋಂಕು ಇದ್ದಾಗ ವೈದ್ಯಕೀಯ ನಿರ್ಲಕ್ಷ್ಯವನ್ನು ಆರೋಪಿಸಲು ಬರುವುದಿಲ್ಲ. ಹೀಗಿರುವಾಗ ಪ್ರಸ್ತುತ ಪ್ರಕರಣದಲ್ಲಿ ನ್ಯಾಯದ ವಂಚನೆಯಾಗಿದೆ ಎಂದು ತೀರ್ಮಾನಿಸಲು ಆಗುವುದಿಲ್ಲ ಎಂದು ಹೇಳಿ ಮೇಲ್ಮನವಿಯನ್ನು ವಜಾ ಮಾಡಿತು ಮತ್ತು ರಾಜ್ಯ ಆಯೋಗದ ತೀರ್ಪನ್ನು ಎತ್ತಿಹಿಡಿಯಿತು.

ತೀರ್ಪು- 21 Jan 2022

(ಲೇಖಕರು ಹಿರಿಯ ಪತ್ರಕರ್ತರು, ಗ್ರಾಹಕ ಹಕ್ಕುಗಳ ಪ್ರತಿಪಾದಕರು. ಗ್ರಾಹಕರ ಹಕ್ಕುಗಳ ವಿಚಾರದಲ್ಲಿ ಕೆಲಸ ಮಾಡುತ್ತ ಬಂದಿದ್ದಾರೆ)

Exit mobile version