Site icon Vistara News

Corruption: ʼಸೇವೆʼಯು ʼವ್ಯವಹಾರʼಕ್ಕೆ ಬದಲಾದಾಗಲೇ ಭ್ರಷ್ಟಾಚಾರದ ಬೀಜಾಂಕುರ!

corruption

:: ಮೋಹನದಾಸ ಕಿಣಿ, ಕಾಪು

ಸ್ವತಂತ್ರ ಭಾರತದ ಆರಂಭಿಕ ವರ್ಷಗಳಲ್ಲಿ ರಾಜಕೀಯ ವ್ಯವಸ್ಥೆ ಈಗಿರುವಷ್ಟು ಭ್ರಷ್ಟವಾಗಿರಲಿಲ್ಲ. ರಾಷ್ಟ್ರ ಮಟ್ಟದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ, ರಾಜ್ಯಕ್ಕೆ ಅನ್ವಯಿಸಿ ಅಬ್ದುಲ್ ನಜೀರ್ ಸಾಬ್, ಮಂಗಳೂರಿನ ಯು.ಶ್ರೀನಿವಾಸ ಮಲ್ಯ ಮುಂತಾದ ರಾಜಕಾರಣಿಗಳು ನಿಜಾರ್ಥದಲ್ಲಿ ಜನಸೇವಕರಾಗಿದ್ದರು. (ಹೆಸರುಗಳು ಉದಾಹರಣೆಗೆ ಮಾತ್ರ). ಇಂತಹವರು ದೊಡ್ಡ ಸಂಖ್ಯೆಯಲ್ಲಿದ್ದರು, ಈಗಲೂ ಕೆಲವರಾದರೂ ಇದ್ದಾರೆ. ವಿಷಾದನೀಯವೆಂದರೆ ಯಾವಾಗ ರಾಜಕೀಯವು ʼಸೇವೆʼಯಿಂದ ʼವ್ಯವಹಾರʼವಾಗಿ ಬದಲಾಯ್ತೋ ಆಗಲೇ ಭ್ರಷ್ಟಾಚಾರದ (corruption) ವೃಕ್ಷದ ಬೀಜಾಂಕುರವಾಯಿತು.

ಮೊದಲಿದ್ದ ರಾಜಕೀಯದ ಕುರಿತು ಅವಲೋಕನ ಮಾಡುವುದಾದರೆ: ಲಾಲ್ ಬಹದ್ದೂರ್ ಶಾಸ್ತ್ರಿಯವರು ರೈಲ್ವೆ ಸಚಿವರಾಗಿದ್ದಾಗ ದೇಶದ ಯಾವುದೋ ಮೂಲೆಯಲ್ಲಾದ ಅಪಘಾತದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು. ಸ್ವಂತಕ್ಕಾಗಿ ಬ್ಯಾಂಕ್ ಸಾಲದಿಂದ ಖರೀದಿಸಿದ ಕಾರಿನ ಸಾಲದ ಬಾಕಿಯನ್ನು, ಶಾಸ್ತ್ರಿಯವರ ನಿಧನಾನಂತರ ಮನ್ನಾ ಮಾಡುವುದಾಗಿ ಸರ್ಕಾರ ಹೇಳಿದರೂ ಅವರ ಪತ್ನಿ ಒಪ್ಪದೆ, ಪಿಂಚಣಿಯಿಂದ ಮರುಪಾವತಿ ಮಾಡಿದ್ದರು. ಕುಟುಂಬದವರೂ ಅವರಷ್ಟೇ ಪ್ರಾಮಾಣಿಕರೆನ್ನುವುದಕ್ಕೆ ಶಾಸ್ತ್ರಿಯವರು ಮಾದರಿ. ʼನೀರ್ ಸಾಹೇಬ್ʼ ಎಂದು ಖ್ಯಾತಿ ಪಡೆದಿದ್ದ ಅಬ್ದುಲ್ ನಜೀರ್ ಸಾಬ್ ಗಂಭೀರ ಅನಾರೋಗ್ಯದಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿಯವರು ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಬಂದಿದ್ದರಂತೆ. ಅಂತಿಮ ಕ್ಷಣಗಳನ್ನು ಎಣಿಸುತ್ತಿದ್ದ ನಜೀರ್ ಸಾಬ್ ಅವರನ್ನು ಬೊಮ್ಮಾಯಿಯವರು “ನಿಮ್ಮ ಕುಟುಂಬದ ಸಮಸ್ಯೆ ಏನಾದರೂ ಇದ್ದರೆ ಹೇಳಿ, ವ್ಯವಸ್ಥೆ ಮಾಡುತ್ತೇನೆ” ಎಂದಾಗ ಅವರ ಉತ್ತರ ಹೀಗಿತ್ತು: ʼʼನನ್ನ ಮನೆ ಸಮಸ್ಯೆ ಯಾವುದೂ ಇಲ್ಲ. ಆದರೆ ʼಸಾವಿರ ಮನೆಗಳ ಕಾರ್ಯಕ್ರಮʼವೊಂದನ್ನು ರೂಪಿಸಿದ್ದೇನೆ. ಪ್ರತಿ ತಾಲೂಕಿನ ಬಡವರಿಗೆ ವರ್ಷಕ್ಕೆ ಸಾವಿರ ಮನೆಗಳಂತೆ ಕಟ್ಟಿಸಿದರೆ ಇನ್ನೈದು ವರ್ಷಗಳಲ್ಲಿ ವಸತಿರಹಿತರೇ ಇರದಂತಾಗುತ್ತೆ. ನಿಮಗೆ ಒಳ್ಳೆಯ ಹೆಸರು ಬರುತ್ತೆ. ಇದಕ್ಕಾಗಿ ಐಆರ್‌ಡಿಪಿಯಲ್ಲಿ 13 ಕೋಟಿ ರೂಪಾಯಿ ವಿನಿಯೋಗಿಸುವ ಬಗ್ಗೆ ನಮ್ಮ ಕಾರ್ಯದರ್ಶಿಯವರಿಂದ ನಿಮ್ಮ ಕಚೇರಿಗೆ ಬರೆಸಿದ್ದೇನೆ. ದಯವಿಟ್ಟು ನೋಡಿ. ಸರಕಾರಕ್ಕೆ ಪುಣ್ಯ ಬರುತ್ತೆ.” ಮರಣಶಯ್ಯೆಯಲ್ಲೂ ಎಂತಹ ಉದಾತ್ತ ಮನಸ್ಥಿತಿ!

ಮಂಗಳೂರು ಸಂಸದರಾಗಿದ್ದ ಯು.ಶ್ರೀನಿವಾಸ ಮಲ್ಯ, ಉಡುಪಿ ಶಾಸಕರಾಗಿದ್ದ ಯು.ಎಸ್.ನಾಯಕ್ ಹಲವಾರು ಜನಪರ ಯೋಜನೆಗಳನ್ನು ತರುವಲ್ಲಿ ಯಶಸ್ವಿಯಾದರು. ಇವರೆಲ್ಲರೂ ಸ್ವಂತಕ್ಕೆ ಏನನ್ನೂ ಅಪೇಕ್ಷಿಸದೆ ಜನಪರ ಕಾಳಜಿಯನ್ನು ಮೆರೆದವರು. ಜಾರ್ಜ್ ಫರ್ನಾಂಡಿಸ್ ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಜೈಲಿನಲ್ಲಿ ಇದ್ದುಕೊಂಡೇ ದಾಖಲೆ ಅಂತರದಲ್ಲಿ ಗೆದ್ದಿದ್ದರು. ಬಂಗಾರಪ್ಪ ನಾಮಪತ್ರ ಸಲ್ಲಿಕೆ ಮತ್ತು ಫಲಿತಾಂಶ ಈಯೆರಡು ದಿನಗಳ ಹೊರತು ಉಳಿದಂತೆ ಕ್ಷೇತ್ರದ ಹೊರಗೆ ಪ್ರಚಾರದಲ್ಲಿ ಇರುತ್ತಿದ್ದರು. ಏಕೆಂದರೆ ಅವರು ಕ್ಷೇತ್ರದ ಜನರಿಗೆ ಅಷ್ಟು ಆಪ್ತರಾಗಿದ್ದರು!

ಕ್ರಮೇಣ ದೇಶದ ರಾಜಕೀಯದ ಚಿತ್ರಣ ಬದಲಾಗತೊಡಗಿತು. ಏಕೆಂದರೆ ಎಲ್ಲರೂ ಶಾಸ್ತ್ರಿ, ನಜೀರ್ ಸಾಬ್, ಮಲ್ಯರಂತೆ ಇಲ್ಲವಲ್ಲ? 2014ರಲ್ಲಿ ಮೋದಿಯವರು ಪ್ರಧಾನಿಯಾದ ಬಳಿಕ ದೇಶದ ಉದ್ದಗಲಕ್ಕೆ ಬಹಳಷ್ಟು ಬದಲಾಣೆಗಳಾಗಿದ್ದರೂ ಈಗಾಗಲೇ ವ್ಯಾಪಿಸಿರುವ ಭ್ರಷ್ಟಾಚಾರವೆಂಬ ಪೆಡಂಭೂತ ದೇಶದ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಯ ಮೇಲೆ ಬೀರಿರುವ ದುಷ್ಪರಿಣಾಮ ಶುದ್ಧೀಕರಣಗೊಳ್ಳಲು ಇನ್ನೂ ಬಲುದೂರ ಕ್ರಮಿಸಬೇಕಾಗಿದೆ. ಅಷ್ಟು ಶುದ್ಧವಿದ್ದ ರಾಜಕೀಯ ಇಷ್ಟು ಕಲುಷಿತಗೊಳ್ಳಲು ಕಾರಣವೇನು? ಕಾರಣಕರ್ತರು ಯಾರು? ಶುದ್ಧೀಕರಣಕ್ಕಿರುವ ಅಡ್ಡಿಯಾದರೂ ಏನು? ಭ್ರಷ್ಟಾಚಾರದ ಮೂಲ ರಾಜಕಾರಣಿಯೇ? ಅಧಿಕಾರಿಗಳೇ? ಮದ್ಯವರ್ತಿಗಳೇ? ಇವರ್ಯಾರೂ ಅಲ್ಲ, ಮತದಾರರೇ, ಅಂದರೆ ಜನಸಾಮಾನ್ಯರೇ! ಅದು ಹೇಗೆ? ಇಲ್ಲಿದೆ ನೋಡಿ ಉತ್ತರ.

ಮೊದಲೆಲ್ಲ ಸ್ಥಳೀಯ ನಾಯಕತ್ವ ಮತ್ತು ಕೇಂದ್ರ ನಾಯಕತ್ವದ ಮೇಲಿನ ಹಿಡಿತ ಮಾತ್ರ ಸಾಕಿತ್ತು. ಜನರೊಡನೆ ಬೆರೆತು, ಸಮಸ್ಯೆಗಳಿಗೆ ಧ್ವನಿಯಾಗಿ ಹೊರಹೊಮ್ಮುವ ಸ್ಥಳೀಯ ನಾಯಕರು ಯಾವುದೇ ಸ್ಪರ್ಧೆಯಿಲ್ಲದ ಗೆದ್ದು ಬರುತ್ತಿದ್ದರು. ಸಾರ್ವಜನಿಕ ಕ್ಷೇತ್ರದಲ್ಲಿನ ಅವಕಾಶಗಳನ್ನು ಆರ್ಥಿಕ ದೃಷ್ಟಿಯಿಂದ ನೋಡಲು ಆರಂಭಿಸಿದಾಗ ಸ್ಪರ್ಧೆ ಆರಂಭವಾಯಿತು. ಜನರೊಡನೆ ಬೆರೆತು ಕೆಲಸ ಮಾಡುವ ಬದಲು ಉನ್ನತ ನಾಯಕರನ್ನು ಓಲೈಸುವತ್ತ ಗಮನ ಕೇಂದ್ರೀಕರಿಸಿ ಟಿಕೆಟ್‌ಗಾಗಿ ಪೈಪೋಟಿ, ಅಂತಿಮವಾಗಿ ಚುನಾವಣೆಯಲ್ಲಿ ಗೆಲ್ಲಲು ಅನೈತಿಕ ತಂತ್ರಗಾರಿಕೆಯನ್ನು ಮೈಗೂಡಿಸಿಕೊಂಡರು. ಈ ಹಿಂದೆ ಯಾವುದೇ ಸ್ವಾರ್ಥವಿಲ್ಲದೆ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸುತ್ತಿದ್ದ ಕಾರ್ಯಕರ್ತರು ನಾಯಕರೆನಿಸಿಕೊಂಡವರ ಥೈಲಿಯತ್ತ ಕಣ್ಣಿಡುವಂತಾಯಿತು, ಜಾತಿ ವ್ಯವಸ್ಥೆಯೂ ಬಹುಮುಖ್ಯ ಪಾತ್ರವನ್ನು ವಹಿಸುವಂತಾಯ್ತು.

ಸ್ಪರ್ಧಿಸಿದವರು ಯಾರೇ ಇರಲಿ ಅವರ ಯೋಗ್ಯತೆಯ ಬಗ್ಗೆ ಒಂದಿಷ್ಟೂ ತಲೆಕೆಡಿಸಿಕೊಳ್ಳದೆ, ಕೇವಲ ಜಾತಿಯನ್ನು ಮತ್ತು ಅವರು ಕೊಡುವ ಹಣವನ್ನು ದೃಷ್ಟಿಯಲ್ಲಿಟ್ಟುಕೊಂಡು ಮತ ನೀಡುವ ಮೂಲಕ ರೋಗಗ್ರಸ್ತ ಆಡಳಿತ ವ್ಯವಸ್ಥೆಯನ್ನು ಹುಟ್ಟು ಹಾಕಲಾಗುತ್ತದೆ. ನಂತರದ ದಿನಗಳಲ್ಲಿ ಈ ರೋಗಾಣು, ವ್ಯವಸ್ಥೆಯನ್ನು ಹೇಗೆ ಹಾಳುಗೆಡವುತ್ತದೆ ಎಂಬುದಕ್ಕೆ ಸ್ವಾನುಭವ ಮತ್ತು ನೈಜ ಘಟನೆಗಳ ಕೆಲವು ಉದಾಹರಣೆಗಳು ಹೀಗಿದೆ.

*** ಇಲಾಖೆಯೊಂದಕ್ಕೆ ಮಂಜೂರಾಗಿದ್ದ ಕಾಮಗಾರಿಯೊಂದರ ಪ್ರಕ್ರಿಯೆಗಳನ್ನು ಮುಗಿಸಿ ಕಾರ್ಯಾದೇಶ ನೀಡಲಾಗಿತ್ತು. ಕೆಲವು ದಿನಗಳ ನಂತರ ಸ್ಥಳೀಯ ಶಾಸಕರ ಕಚೇರಿಯಿಂದ ಗುತ್ತಿಗೆ ಪಡೆದವರಿಗೆ ಕರೆ ಬರುತ್ತದೆ. ಕರೆ ಮಾಡಿದಾಗ ಹೋಗಲೇಬೇಕಲ್ಲ, ಹೋಗಿ ಭೇಟಿಯಾದರು. ಶಾಸಕರ ಫರ್ಮಾನು ಹೀಗಿತ್ತು: ಗುತ್ತಿಗೆ ಮೊತ್ತದಲ್ಲಿ 25% ಇಟ್ಟುಕೊಂಡು ಉಳಿದ 75%ನ್ನು ನಗದು ರೂಪದಲ್ಲಿ ಶಾಸಕರಿಗೆ ಕೊಡಬೇಕಂತೆ. ಹಾಗಾದರೆ ಕಾಮಗಾರಿ? ಕಡತದಲ್ಲಿ ಮಾತ್ರ. ಇದು ಉತ್ತರ ಕರ್ನಾಟಕದಲ್ಲಿ ನಡೆದಿದ್ದು.

ಇದನ್ನೂ ಓದಿ: ವಿಸ್ತಾರ ಅಂಕಣ: ಜನಕಲ್ಯಾಣದ ಕನಸಿಗೆ ಕಾರ್ಯಾಂಗವೂ ಕೈ ಜೋಡಿಸಲಿ

*** ಸರ್ಕಾರದ ಇಲಾಖೆಗಳಿಗೆ ಸಿಬ್ಬಂದಿಯನ್ನು ಹೊರಗುತ್ತಿಗೆ ಮೂಲಕ ಒದಗಿಸಲಾಗುತ್ತದೆ. ಟೆಂಡರ್ ಕರೆದು ನಿಯಮಾನುಸಾರ ಕನಿಷ್ಠ ವೇತನ, ಪಿಎಫ್, ಇಎಸ್ಐ ಸೌಲಭ್ಯ ಕೊಡಲು ಬೇಕಾಗುವ ಮೊತ್ತ, ಗುತ್ತಿಗೆದಾರರ ಸೇವಾ ಶುಲ್ಕ ಸೇರಿ, ನಮೂದಿಸುವ ಮೊತ್ತದ ಆಧಾರದಲ್ಲಿ ಗುತ್ತಿಗೆ ನೀಡಲಾಗುತ್ತದೆ. ಬುದ್ಧಿವಂತರೊಬ್ಬರು ಸೇವಾ ಶುಲ್ಕವೆಂದು ಕೇವಲ ಒಂದು ರೂಪಾಯಿ ನಮೂದಿಸುತ್ತಾರೆ. ಹಾಗಾದರೆ ಅವರಿಗೆ ಏನು ಲಾಭ? ವೇತನವನ್ನು ಅವರವರ ಖಾತೆಗೆ ಹಾಕಿದ ನಂತರ ಎಲ್ಲಾ ನೌಕರರು ನಗದಾಗಿ ನಿರ್ದಿಷ್ಟ ಮೊತ್ತವನ್ನು ಗುತ್ತಿಗೆದಾರರಿಗೆ ವಾಪಸ್ ಕೊಡಬೇಕು. ತಕರಾರು ಮಾಡಿದರೆ ಗೇಟ್ ಪಾಸ್. ಇದರಲ್ಲಿ ರಾಜಕೀಯ ನಾಯಕರಿಗೂ ಪಾಲು ಸಿಗುವುದರಿಂದ ದೂರು ಕೊಡುವುದಾದರೂ ಯಾರಿಗೆ? ಮೊದಲೇ ಅಲ್ಪ ವೇತನ, ಅದರಲ್ಲೂ ಕಡಿತ ಮಾಡಿದರೆ ಅವರು ಬದುಕು ಸಾಗಿಸುವುದು ಹೇಗೆ? ಅವರ ಉತ್ತರ: “ಮೇಲು ಸಂಪಾದನೆ ಮಾಡಿ, ನಾವು ಅಡ್ಡಿ ಬರೋದಿಲ್ಲ”! ಅದರ ಅರ್ಥ ಲಂಚ ತೆಗೆದುಕೊಳ್ಳಿ. ಅಡ್ಡದಾರಿಯಲ್ಲಿ ನೇಮಕವಾದ ಪೋಲೀಸರು, ದುರ್ಬಲ ಸೆಕ್ಷನ್ ಹಾಕುವ ಅಥವಾ ನಿಗದಿತ ಅವಧಿಯೊಳಗೆ ದೋಷಾರೋಪಣಾ ಪಟ್ಟಿ ಹಾಕದೆ ಅಪರಾಧಿಗಳಿಗೆ ಪರೋಕ್ಷವಾಗಿ ಸಹಕರಿಸುವುದು; ಹೀಗೆ ಅದೆಷ್ಟೋ ಉದಾಹರಣೆಗಳಿವೆ.

ಮೃತ ಪಟ್ಟಿರುವ ಅಥವಾ ಬೇರೆ ದೇಶಕ್ಕೆ ಹೋದವರ ಹೆಸರಿನಲ್ಲಿ ಅನರ್ಹರಿಗೆ ಪ್ರಮಾಣಪತ್ರ ಕೊಟ್ಟು ಚಿಕಿತ್ಸೆಗೆ ಅವಕಾಶ ನೀಡುವವರು, ಹಳೆಯ ವಾಹನಗಳನ್ನು ಸುಸ್ಥಿತಿಯಲ್ಲಿ ಇಲ್ಲದಿದ್ದರೂ ಇರುವಂತೆ ಪ್ರಮಾಣಪತ್ರ ನೀಡಿ ಆ ಮೂಲಕ ಪರೋಕ್ಷವಾಗಿ ವಾಹನ ಅಪಘಾತ, ಜೀವಹಾನಿಗೆ ಕಾರಣರಾಗುವ ಸಾರಿಗೆ ಅಧಿಕಾರಿಗಳು, ಇಂತವರಿಗೆ ರಕ್ಷಣೆ ನೀಡುವ ರಾಜಕಾರಣಿಗಳು, ಮತವನ್ನು ಪಡೆಯಲು ವಿನಿಯೋಗಿಸಿದ ಬಂಡವಾಳವನ್ನು ಹಿಂಪಡೆಯುವ ವಿಷವರ್ತುಲದ ಸುತ್ತುಗಳಲ್ಲಿ ಕೆಲವು. ಹೀಗೆ ಭ್ರಷ್ಟಾಚಾರವೆಂಬ ವೃಕ್ಷ ಬೆಳೆಯುತ್ತಿದೆ!

ಇದನ್ನೂ ಓದಿ: ರಾಜ ಮಾರ್ಗ ಅಂಕಣ : ನಮ್ಮ ನಮ್ಮ ಇಮೇಜ್‌ಗಳಿಂದ ಹೊರಬರುವುದು ಅಷ್ಟು ಸುಲಭದ ಮಾತೇನೂ ಅಲ್ಲ

ಕಾನೂನೇನೋ ಇದೆ. ಆದರೆ ಪ್ರಾಮಾಣಿಕವಾಗಿ ಜಾರಿಗೆ ತರುವ ಮನಸ್ಸು, ಕಾನೂನುಬಾಹಿರವಾಗಿ ವ್ಯವಹರಿಸುವವರ ವಿರುದ್ಧ ಕ್ರಮ ಕೈಗೊಳ್ಳದವರು ಇರುವವರೆಗೆ ಯಾರೂ ಏನೂ ಮಾಡಲಾಗದು. ಬಡತನವೋ, ದುರಾಸೆಯೋ, ಅಜ್ಞಾನವೋ, ಒಟ್ಟಿನಲ್ಲಿ ಅವ್ಯವಸ್ಥೆಯು ಅನರ್ಹರನ್ನು ಆಯ್ಕೆ ಮಾಡುವಲ್ಲಿಂದ ಆರಂಭವಾಗುತ್ತದೆ. ಆದ್ದರಿಂದಲೇ “ಸೇವೆಯೆಂಬ” ಪವಿತ್ರ ಸ್ಥಾನದಲ್ಲಿದ್ದ ರಾಜಕೀಯ “ವ್ಯವಹಾರವಾಗಿ” ಬದಲಾಯಿತು. ಭ್ರಷ್ಟಾಚಾರದ ಬೀಜಾಂಕುರವಾಯಿತು. ಅರ್ಧ ಶತಕಕ್ಕೂ ಹೆಚ್ಚಿನ ಅವಧಿಯಲ್ಲಿ ಸಾಮಾಜಿಕ ವ್ಯವಸ್ಥೆಯನ್ನು ಆವರಿಸಿದ ವಿಷದ ಶುದ್ಧೀಕರಣಕ್ಕೆ ಶತಮಾನವೇ ಬೇಕಾದೀತು. ಅದೂ ಈಗಾಗಲೇ ಆರಂಭಿಸಿರುವ ಶುದ್ಧೀಕರಣವನ್ನು ಹೀಗೆಯೇ ಮುಂದುವರಿಸಿದರೆ ಮಾತ್ರ! ಮತಪಟ್ಟಿಗೆ ಆಧಾರ್ ಜೋಡಣೆ ಪ್ರಗತಿಯಲ್ಲಿರುವುದು, ಜನಪ್ರತಿನಿಧಿಗಳ ಆಯ್ಕೆಯಲ್ಲಿ ಯುವ ಜನಾಂಗ ನಿರ್ಣಾಯಕ ಪಾತ್ರವನ್ನು ವಹಿಸುತ್ತಿರುವುದು ಅಂಧಕಾರದ ನಡುವಿನ ಆಶಾಕಿರಣವಾಗಿದೆ. ಎಲ್ಲರೂ ಜವಾಬ್ದಾರಿಯಿಂದ ಮತಚಲಾವಣೆ ಮಾಡಿ, ಸಾಮಾಜಿಕ ವ್ಯವಸ್ಥೆಯ ತಳಮಟ್ಟದ ಶುದ್ಧೀಕರಣಕ್ಕೆ ಕೈ ಜೋಡಿಸಿದರೆ, ಅದೇ ವೇಳೆ ಕ್ರಿಯಾಶೀಲ ಮತ್ತು ಜನಪರ ಕಾಳಜಿಯುಳ್ಳ ಯೋಗ್ಯ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ರಾಜಕೀಯ ಪಕ್ಷಗಳೂ ಗಂಭೀರವಾಗಿ ಚಿಂತಿಸಿದರೆ, ವ್ಯವಸ್ಥೆ ಸರಿಹೋದೀತು.

(ಲೇಖಕರು ಆರೋಗ್ಯ ಇಲಾಖೆಯ ನಿವೃತ್ತ ಕಚೇರಿ ಅಧೀಕ್ಷಕರು ಮತ್ತು ಹವ್ಯಾಸಿ ಬರಹಗಾರ)

Exit mobile version