Site icon Vistara News

ಲೋಕಾಯುಕ್ತ | ಕಾವಲು ವ್ಯವಸ್ಥೆ ಮತ್ತು ಬಿಲದೊಳಗಿನ ಹೆಗ್ಗಣಗಳು

lokayuktha

| ಮೋಹನದಾಸ ಕಿಣಿ

ಬಹಳ ವರ್ಷಗಳ ಹಿಂದೆ ಕನ್ನಡ ದಿನಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ, ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರು ಲೋಕಾಯುಕ್ತರಾಗಿದ್ದ ಅವಧಿಯಲ್ಲಿ ಲೋಕಾಯುಕ್ತ ಪೋಲೀಸ್ ಅಧೀಕ್ಷಕರಾಗಿದ್ದ ಮಧುಕರ ಶೆಟ್ಟಿಯವರ ಸಂದರ್ಶನವನ್ನು ಇತ್ತೀಚೆಗೆ ಯಾರೋ ಒಬ್ಬರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದರು ಮಧುಕರ ಶೆಟ್ಟಿ ಲೋಕಾಯುಕ್ತ ತಂಡದಲ್ಲಿದ್ದ ಖಡಕ್ ಅಧಿಕಾರಿಗಳಲ್ಲೊಬ್ಬರು. ಅವರು ಸಂದರ್ಶನದಲ್ಲಿ ಹೇಳಿದ್ದು ಹೀಗೆ: “ಲೋಕಾಯುಕ್ತದಲ್ಲಿ ನೋಡಿದಷ್ಟು ಮೋಸಗಾರರನ್ನು ಭ್ರಷ್ಟರಲ್ಲೂ ನೋಡಿಲ್ಲ, ಅಲ್ಲಿರುವವರು ಭ್ರಷ್ಟರಿಗಿಂತಲೂ ಡೇಂಜರ್!” ಹೌದು, ಅವರು ಹೇಳಿರುವುದರಲ್ಲಿ ಸತ್ಯಾಂಶವಿದೆ!

ವ್ಯವಸ್ಥೆಯಲ್ಲಿ ಲೋಪಗಳು ಸಹಜ. ಆದರೆ ಲೋಕಾಯುಕ್ತವೆಂಬುದು ಭ್ರಷ್ಟಾಚಾರ ನಿರ್ಮೂಲನೆಗಿರುವ ಕಾವಲು ಸಂಸ್ಥೆ. ಆದರೆ ಅದನ್ನೂ ತಮಗಾಗದವರನ್ನು ದಮನಿಸಲು ಅಸ್ತ್ರವಾಗಿ ಬಳಸುವವರಿದ್ದಾರೆ ಎಂಬುದು ಬಹುಶಃ ಹೆಚ್ಚಿನವರಿಗೆ ತಿಳಿದಿಲ್ಲ. ಒಂದು ಕಾಲದಲ್ಲಿ ದೇಶದಲ್ಲೇ ಅತ್ಯುತ್ತಮವೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಲೋಕಾಯುಕ್ತವನ್ನು ಜಾಗೃತ ದಳ ಸ್ಥಾಪಿಸುವ ಮೂಲಕ ದುರ್ಬಲಗೊಳಿಸಿದ್ದು, ಉಚ್ಚ ನ್ಯಾಯಾಲಯ ತರಾಟೆಗೆ ತೆಗೆದುಕೊಂಡ ಬಳಿಕ ಲೋಕಾಯುಕ್ತದ ಅಧಿಕಾರ ಮರುಸ್ಥಾಪನೆ ಮಾಡಿದ್ದು, ಅಲ್ಲಿಂದೀಚೆಗೆ ಅದರ ಕಾರ್ಯಾಚರಣೆ ವೇಗ ಪಡೆದಿದ್ದು ಇದೆಲ್ಲಾ ಇತ್ತೀಚಿನ ಸುದ್ದಿಗಳು. ಮಧುಕರ ಶೆಟ್ಟಿ, ಸಂತೋಷ್ ಹೆಗ್ಡೆಯಂತಹವರು ತಮ್ಮ ಹುದ್ದೆಗಳಿಗೆ ನ್ಯಾಯ ಒದಗಿಸಲು ಪ್ರಾಮಾಣಿಕವಾಗಿ ದುಡಿದವರು. ಮಧುಕರ ಶೆಟ್ಟಿಯವರು ದೊಡ್ಡ ಹುದ್ದೆಯಲ್ಲಿದ್ದು ದೊಡ್ಡ ಮೋಸಗಳ ಬಗ್ಗೆ ಹೇಳಿದ್ದರು. ನನ್ನ ಸರ್ಕಾರಿ ಸೇವೆಯ ಅವಧಿಯಲ್ಲಿ ನೋಡಿದಂತಹ ಕೆಲವು ಸಣ್ಣ ಉದಾಹರಣೆಗಳು ಹೀಗಿವೆ.

ಬಹಳ ಹಿಂದೆ ಕೆಲವು ಕಡತಗಳನ್ನು ಹಸ್ತಾಂತರಿಸಲು ಲೋಕಾಯುಕ್ತದ ಕೇಂದ್ರ ಕಚೇರಿಗೆ ಹೋಗಿದ್ದೆ. ಕಚೇರಿ ತೆರೆದಾದ ಸ್ವಲ್ಪ ಹೊತ್ತಿನಲ್ಲಿ ಓರ್ವ ಮಹಿಳಾ ಅಟೆಂಡರ್ ಬಂದು “ಸರ್, ಕಾಫಿ ತರಲು ಹೋಗುತ್ತಿದ್ದೇನೆ” ಎಂದು ಕೈ ಮುಂದೆ ಚಾಚಿದರು. ನನಗೆ ಅವರ ನಡವಳಿಕೆ ಅರ್ಥವಾಗದೆ, ನನಗೆ ಕಾಫಿ ಬೇಡ ಎಂದೆ. ವಿಷಯ ಅದಲ್ಲವಂತೆ, ಕಚೇರಿಯ ಸಿಬಂದಿಗಳಿಗೆ ಬೆಳಗಿನ ಕಾಫಿ ತರಲು ನಾನು ಹಣ ಕೊಡಬೇಕಂತೆ! ದೊಡ್ಡ ಕಚೇರಿಯವರು ಕೇಳಿದರೆ ಇಲ್ಲವೆನ್ನಲಾದೀತೇ? ಅವರು ಕೇಳಿದಷ್ಟು ಕೊಟ್ಟೆ. ಮಧ್ಯಾಹ್ನದವರೆಗೆ ಕಾದು ಕುಳಿತರೂ ನಾನು ಏಕೆ ಬಂದಿದ್ದೇನೆ ಎಂದು ಯಾರೂ ವಿಚಾರಿಸಲೇ ಇಲ್ಲ. ಕಚೇರಿಯ ಮೇಲಧಿಕಾರಿ ಒಬ್ಬರ ಬಳಿ ವಿಚಾರಿಸಿದಾಗ ಬಂದ ಉತ್ತರ: “ಸ್ವಲ್ಪ ಕುಳಿತುಕೊಳ್ಳಿ”; ಕುಳಿತೆ. ಮಧ್ಯಾಹ್ನ ಊಟದ ವೇಳೆ ಸಮೀಪಿಸುತ್ತಿದ್ದಂತೆ ಬೆಳಿಗ್ಗೆ ಬಂದ ಅದೇ ಮಹಿಳೆ ಬಂದು, ಸಣ್ಣ ಸ್ವರದಲ್ಲಿ “ಸಾಹೇಬರನ್ನು (ಕಚೇರಿಯ ಒಬ್ಬ ಅಧಿಕಾರಿ) ಮಧ್ಯಾಹ್ನ ಊಟಕ್ಕೆ (ಒಂದು ಹೋಟೆಲ್ ಹೆಸರು ಹೇಳಿ) ಕರೆದುಕೊಂಡು ಹೋಗಿ, ನಂತರ ಅವರಿಗೆ ʻಏನಾದರೂʼ ಕೊಡಿ.” ನಾನು ಕೊಂಡೊಯ್ದ ಕಡತಕ್ಕೂ ತನಿಖೆ ನಡೆಯುತ್ತಿರುವ ಪ್ರಕರಣಕ್ಕೂ ಏನೇನೂ ಸಂಬಂಧವಿರದಿದ್ದರೂ ಇಷ್ಟೆಲ್ಲಾ ಖರ್ಚು! ಇದು ನಡೆದದ್ದು ಭ್ರಷ್ಟಾಚಾರದ ತನಿಖೆ ನಡೆಸಲು ಇರುವ ಸಂಸ್ಥೆಯ ಮುಖ್ಯ ಕಚೇರಿಯ ನೆರಳಿನಲ್ಲಿ! ಅವರು ಕೇಳಿದಷ್ಟು ಕೊಡದಿದ್ದರೆ ಏನಾಗುತ್ತದೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು. ಹೌದು ಬೇರೇನೂ ಆಗುವುದಿಲ್ಲ, ಅವರು ಕಡತಗಳಿಗೆ ಸ್ವೀಕೃತಿ ಪತ್ರ ಕೊಡುವುದಿಲ್ಲ. ಮರುದಿನ ಪುನಃ ಬರಬೇಕು. ಆಗಲೂ ಕೊಡದಿದ್ದರೆ? ಒಂದು ದಿನ ಬೆಂಗಳೂರಿನಲ್ಲಿ ಉಳಿದುಕೊಳ್ಳಲು ದಿನವೊಂದಕ್ಕೆ ಕನಿಷ್ಠ 1000/- ಖರ್ಚು ಮಾಡಬೇಕಾಗುತ್ತದೆ. ಅದರ ಬದಲು ಅಷ್ಟು ಹಣವನ್ನು ಅವರಿಗೆ ಕೊಟ್ಟು ವಾಪಸ್ಸು ಬರುವುದು ಜಾಣತನವೆನಿಸದೇ? ಆದರೆ ಅಂತಹ ವೆಚ್ಚವನ್ನು ಭರಿಸುವುದಾದರೂ ಹೇಗೆ? ಅದಕ್ಕೆ ಉತ್ತರವಿಲ್ಲ.

ಸಿಬ್ಬಂದಿಗಳ ನಡುವಿನ ದ್ವೇಷ ಸಾಧನೆಗೆ ಲೋಕಾಯುಕ್ತವನ್ನು ಒಂದು ಅಸ್ತ್ರವಾಗಿಯೂ ಬಳಸಬಹುದು ಎಂಬುದಕ್ಕೂ ಉದಾಹರಣೆಗಳಿವೆ. ಅಧಿಕಾರ ಹಿಡಿಯಲು, ತಮ್ಮ ಕೆಲಸ ಸಾಧಿಸಲು, ಕೆಲಸಗಳ್ಳರನ್ನು ಪ್ರಶ್ನೆ ಮಾಡಿದರೆ, ವೈಯಕ್ತಿಕ ಕಾರಣಗಳಿಗಾಗಿ ಹೇಗೆಲ್ಲಾ ಮಾಡುತ್ತಾರೆ, ನೋಡಿ. ಟೆಂಡರಿಗೆ ಸಂಬಂಧಿಸಿ, ಯಾರೋ ಒಬ್ಬರಿಗೆ ಸರಿಯಾದ ಮಾಹಿತಿಯನ್ನು ಕೊಡಲಿಲ್ಲ ಎಂಬ ದೂರರ್ಜಿ ಲೋಕಾಯುಕ್ತಕ್ಕೆ ಸಲ್ಲಿಕೆಯಾಗುತ್ತದೆ, ವರ್ಷಗಳ ಕಾಲ ವಿಚಾರಣೆ ನಡೆದು ಅಂತಿಮವಾಗಿ ದೂರಿನಲ್ಲಿ ಹುರುಳಿಲ್ಲವೆಂದು ತಿರಸ್ಕೃತವಾಗುತ್ತದೆ. ಆದರೆ, ಅಲ್ಲಿಯವರೆಗೆ ಅನುಭವಿಸಿದ ಮಾನಸಿಕ ಹಿಂಸೆಗೆ ಯಾರು ಹೊಣೆ? ಆ ದೂರರ್ಜಿ ಬರೆದ ವ್ಯಕ್ತಿ ಕೂಡಾ ಸರ್ಕಾರಿ ನೌಕರ. ನಿಯಮದಂತೆ, ಸರ್ಕಾರಿ ನೌಕರರಿಗೆ ಟೆಂಡರಿನಲ್ಲಿ ಭಾಗವಹಿಸಲು ಅವಕಾಶವಿಲ್ಲ. ಅದಕ್ಕಾಗಿ ಅವರ ಮೇಲೆಯೇ ಶಿಸ್ತು ಕ್ರಮವನ್ನು, ಸುಳ್ಳು ದೂರು ನೀಡಿದ್ದಕ್ಕೆ ಲೋಕಾಯುಕ್ತ ಕಾಯಿದೆಯ ನಿಯಮ 20ರಡಿಯಲ್ಲಿ ದೂರುದಾರರ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನೂ ದಾಖಲಿಸಬೇಕಿತ್ತು. ಇದ್ಯಾವುದೂ ಆಗದಿರಲು ಕಾರಣವಿಷ್ಟೇ, ದೂರುದಾರರ ಹಿಂದೆ ಇರುವವರು ಹಾಗೆ ಆಗದಂತೆ ಎಲ್ಲಾ ʻವ್ಯವಸ್ಥೆʼ ಮಾಡಿದ್ದರು!

ಇಷ್ಟಕ್ಕೇ ಮುಗಿಯಲಿಲ್ಲ. ಕೆಲ ವರ್ಷಗಳ ನಂತರ ಅದೇ ತಂಡ ಪುನಃ ʻಕಾರ್ಯಾಚರಣೆಗೆʼ ಇಳಿಯಿತು. ಈ ಸಲ ಇನ್ನಷ್ಟು ಪ್ರಬಲವಾದ ದಾಳಗಳನ್ನು ಉರುಳಿಸಿತು. ಹೇಗೆಂದರೆ, ಸಂಜೆ ಪತ್ರಿಕೆಯೊಂದರಲ್ಲಿ ಖರೀದಿ ಪ್ರಕ್ರಿಯೆಯೊಂದರಲ್ಲಿ ಅವ್ಯವಹಾರವಾಗಿದೆಯೆಂದು ಚಿಕ್ಕ ವರದಿಯೊಂದು ಪ್ರಕಟವಾಗುತ್ತದೆ. ವರದಿಯನ್ನು ʻಆಧರಿಸಿʼ ಸ್ಥಳೀಯ ಲೋಕಾಯುಕ್ತ ಅಧಿಕಾರಿಗಳು ʻಸ್ವಯಂಪ್ರೇರಿತ ದೂರುʼ ದಾಖಲಿಸಿಕೊಂಡು ಕಚೇರಿಗೆ ಧಾಳಿ ನಡೆಸುತ್ತಾರೆ. ಪತ್ರಿಕಾಗೋಷ್ಠಿಯಲ್ಲಿ ʻಎಲ್ಲಾ ವಿವರʼ ನೀಡುತ್ತಾರೆ. ಮಾಧ್ಯಮಗಳಲ್ಲಿ ದೊಡ್ಡದಾಗಿ ವರದಿ ಪ್ರಕಟವಾಗುತ್ತದೆ. ಸಿಬ್ಬಂದಿಗಳನ್ನು ವರ್ಗಾವಣೆ ಮಾಡಿ ವಿಚಾರಣೆ ಆರಂಭವಾಗುತ್ತದೆ. ಅವರಲ್ಲಿ ಕೆಲವರು ನಿವೃತ್ತರೂ ಆಗುತ್ತಾರೆ. ಆದರೆ ಅವರ ಪಿಂಚಣಿ ಸೌಲಭ್ಯಗಳನ್ನು ತಡೆ ಹಿಡಿಯಲಾಗುತ್ತದೆ. ಯಾರನ್ನೆಲ್ಲಾ ಗುರಿಯಾಗಿಸಲಾಗಿದೆಯೋ ಅವರ ಮೇಲೆ ವಿಚಾರಣೆ ನಡೆಸಿದ ನಾಟಕ ಮಾಡಿ ಕೇಂದ್ರ ಕಚೇರಿಗೆ ವರದಿ ಸಲ್ಲಿಸಲಾಗುತ್ತದೆ. ಲೋಕಾಯುಕ್ತ ನ್ಯಾಯಾಲಯದಲ್ಲಿ ದಾವೆ ದಾಖಲಾಗುತ್ತದೆ. ವರ್ಷಗಳ ಕಾಲ ವಿಚಾರಣೆ ನಡೆದು, ದೂರಿನಲ್ಲಿ ಯಾವುದೇ ಸತ್ಯಾಂಶವಿಲ್ಲವೆಂದು ತೀರ್ಪು ಬರುತ್ತದೆ. ʻಆಪಾದಿತʼರಲ್ಲಿ ಕೆಲವರು ಮೃತ ಪಟ್ಟರೂ, ಕೆಲವರು ನಿವೃತ್ತರಾದರೂ ಪ್ರಕರಣ ಮುಂದುವರಿಯುತ್ತದೆ. ನ್ಯಾಯಾಲಯದ ತೀರ್ಪು ಬಂದರೂ ನಾಟಕದ ಸೂತ್ರಧಾರರ ಕೈವಾಡದಿಂದ ಪುನಃ ಮೇಲ್ಮನವಿ ಸಲ್ಲಿಕೆಯಾಗುತ್ತದೆ. ಏಕೆಂದರೆ ಇದನ್ನು ಮಾಡಿಸಿದವರಿಂದ ಸಂಬಂಧಪಟ್ಟವರಿಗೆ ʻಬೇಕಾದ ವ್ಯವಸ್ಥೆʼ ಆಗುತ್ತದೆ. ತನಿಖೆ, ಮೇಲ್ಮನವಿ ಇತ್ಯಾದಿ ಪ್ರಕ್ರಿಯೆಗೆ ತಗುಲುವ ಖರ್ಚು ಏನಿದ್ದರೂ ಸರ್ಕಾರದ್ದು. ಆದರೆ ಬಲಿಪಶುಗಳು ಕಿಸೆಯಿಂದ ಖರ್ಚು ಮಾಡುವುದರ ಜತೆಗೆ ಮಾನಸಿಕ ಒತ್ತಡ! ಇದೆಲ್ಲವೂ ನಡೆದಿದ್ದು ಕಟ್ಟುನಿಟ್ಟಿನ ಲೋಕಾಯುಕ್ತರ ಅವಧಿಯಲ್ಲಿ. ಹಾಗಾದರೆ ಲೋಕಾಯುಕ್ತ ವ್ಯವಸ್ಥೆಗೆ ಕಳಂಕ ತಂದ ಭಾಸ್ಕರ್ ರಾವ್ ಅಂತಹವರ ಅವಧಿಯಲ್ಲಿ ಏನೇನು ನಡೆದಿರಬಹುದು? ದೊಡ್ಡ ಪ್ರಕರಣಗಳು ಸುದ್ದಿ ಮಾಡಿದಷ್ಟು ಇವುಗಳು ಸುದ್ದಿಯಾಗುವುದಿಲ್ಲ. ಚಿಕ್ಕ ಹೆಗ್ಗಣಗಳು ಅಜ್ಞಾತವಾಗಿಯೇ ಉಳಿದು ಬಿಡುತ್ತದೆ. ಆದರೆ ಅದರಿಂದ ಆಗುವ ಅಪಾಯ ಮಾತ್ರ ಸಣ್ಣದಲ್ಲ.

ನಿವೃತ್ತರ ಪ್ರಕರಣಗಳಲ್ಲಿ ನೌಕರರ ತಪ್ಪಿಲ್ಲವೆಂದು ಸಾಬೀತಾದರೆ, ಪಿಂಚಣಿ ಮೊತ್ತಕ್ಕೆ ಬಡ್ಡಿ ನೀಡಬೇಕು. ಅಧಿಕೃತ ಮಾಹಿತಿಯಂತೆ ವರ್ಷಕ್ಕೆ ಒಂದು ಕೋಟಿಗೂ ಹೆಚ್ಚು ಮೊತ್ತವನ್ನು ಈ ಉದ್ದೇಶಕ್ಕೆ ಸರ್ಕಾರ ಖರ್ಚು ಮಾಡುತ್ತಿದೆ. ಇಂತಹ ಅಪವ್ಯಯಕ್ಕೆ ಅಥವಾ ಕೃತ್ಯಗಳಿಗೆ ಕಾರಣಕರ್ತರಾದವರಿಗೆ, ಅದಕ್ಕೆ ಬೆಂಬಲ ನೀಡಿದವರಿಗೆ ಏನು ಶಿಕ್ಷೆ? ಏನೂ ಇಲ್ಲ! ಅಂತವರು ಎಲ್ಲಾ ಸೌಲಭ್ಯಗಳನ್ನು ಅನುಭವಿಸುತ್ತಾ ಆರಾಮವಾಗಿ ಇದ್ದು ಬಿಡುತ್ತಾರೆ.

ಇದನ್ನೂ ಓದಿ | ಸವಿಸ್ತಾರ ಅಂಕಣ | ಅಲ್ಲಮ ಪ್ರಭುಗಳು ಹೇಳಿದ ಮಾತು ಕಾಂಗ್ರೆಸ್‌ ಕುರಿತೇ ಆಗಿರಬೇಕು ಎನ್ನಿಸುವಂತಿದೆ!

ಕೇವಲ ವ್ಯವಸ್ಥೆ ಮಾತ್ರ ಭದ್ರವಾಗಿದ್ದರೆ ಸಾಲದು, ಎಲ್ಲರೂ ಎಲ್ಲಾ ರೀತಿಯಲ್ಲೂ ಜವಾಬ್ದಾರಿಯಿಂದ, ಪ್ರಾಮಾಣಿಕತೆಯಿಂದ ನಡೆದುಕೊಂಡಾಗ ಮಾತ್ರ ಸುಧಾರಣೆ ಸಾಧ್ಯ. ಇತ್ತೀಚೆಗೆ ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರು ಒಂದು ಭಾಷಣದಲ್ಲಿ ಪ್ರಸ್ತಾಪಿಸಿದ ವಿಷಯ ಹೀಗಿತ್ತು: ಓರ್ವ ವಯೋವೃದ್ಧೆ ಹೆಗ್ಡೆಯವರನ್ನು ಭೇಟಿಯಾಗಿ ಪೋಸ್ಟ್‌ಮ್ಯಾನ್ ಬಗ್ಗೆ ದೂರು ನೀಡಿದ್ದರಂತೆ.‌ ದೂರಿನ ಸಾರಾಂಶವೆಂದರೆ ಆಕೆಗೆ ಮಗ ಪ್ರತಿತಿಂಗಳು ಕಳುಹಿಸುತ್ತಿದ್ದ 250/- ಮನಿಯಾರ್ಡರ್‌ನಿಂದ 25ನ್ನು ಕಿಸೆಗಿಳಿಸುತ್ತಿದ್ದನಂತೆ. ಪೋಸ್ಟ್‌ಮ್ಯಾನ್ ಕೇಂದ್ರ ಸರ್ಕಾರದ ಉದ್ಯೋಗಿಯಾಗಿರುವುದರಿಂದ ಲೋಕಾಯುಕ್ತ ವ್ಯಾಪ್ತಿಗೆ ಬರದ ಕಾರಣ, ಹೆಗ್ಡೆಯವರು ಸಂಬಂಧಿಸಿದ ಇಲಾಖೆಗೆ ಫೋನ್ ಮಾಡಿ ಹೇಳಿದರೆ, ಆ ಅಧಿಕಾರಿಯ ಉತ್ತರ: ಅಷ್ಟು ಸಣ್ಣ ಮೊತ್ತದ ಪ್ರಕರಣಗಳನ್ನೆಲ್ಲಾ ತನಿಖೆ ಮಾಡಲಾಗುವುದಿಲ್ಲ! ಅಧಿಕಾರಿಗೆ ಅದು ಸಣ್ಣ ಮೊತ್ತವಾಗಿರಬಹುದು, ಆದರೆ ಆಕೆಗೆ ದೊಡ್ಡದೇ ತಾನೇ? ಹಾಗಾದರೆ ನ್ಯಾಯ ಎಲ್ಲಿದೆ?

ಹಾಗಂತ ಎಲ್ಲರೂ ಹೀಗಿರುತ್ತಾರೆಂದರ್ಥವಲ್ಲ. ನೂರಾರು ಮುತ್ತುಗಳ ನಡುವಿನ ಚಿಕ್ಕ ಗಾಜಿನ ಚೂರು ಮೇಲ್ನೋಟಕ್ಕೆ ಚಿಕ್ಕ ವಿಷಯವಾಗಿ ಕಾಣಬಹುದು. ಕಟ್ಟಡ ಎಷ್ಟೇ ದೊಡ್ಡದಾದರೂ ಒಳಗಿರುವ ಇಂತಹ ಹೆಗ್ಗಣಗಳನ್ನು ನಿರ್ಲಕ್ಷಿಸಿದರೆ ಅವು ಇಡೀ ವ್ಯವಸ್ಥೆಯನ್ನು ಹಾಳುಗೆಡವಿದರೆ ಆಶ್ಚರ್ಯವೇನಿಲ್ಲ.

ಇದನ್ನೂ ಓದಿ | ಸವಿಸ್ತಾರ ಅಂಕಣ | ನೈತಿಕತೆ ಮೆರೆಯಲು ಅಂದು 6 ಶಾಸಕರನ್ನು ಉಚ್ಚಾಟಿಸಿದ ಪಕ್ಷಕ್ಕೆ ಇಂದು ರೌಡಿಗಳ ಅವಶ್ಯಕತೆ ಏಕೆ ಬಂತು?

Exit mobile version