Site icon Vistara News

ಸೈಬರ್‌ ಸೇಫ್ಟಿ ಅಂಕಣ: ಸ್ಮಾರ್ಟ್‌ ಫೋನಿನ ಸ್ಮಾರ್ಟ್ ಬಳಕೆಗೆ 12 ಸೂತ್ರಗಳು

ಸೈಬರ್‌ ಸೇಫ್ಟಿ cyber safety rules

ಸೈಬರ್‌ ಸೇಫ್ಟಿ ಅಂಕಣ: ಇತ್ತೀಚಿನ ವರದಿಯ ಪ್ರಕಾರ ಭಾರತದಲ್ಲಿ ಒಟ್ಟು 1.12 ಬಿಲಿಯನ್‌ ಮೊಬೈಲ್‌ ಸಂಪರ್ಕಗಳು (mobile connections) ಸಕ್ರಿಯವಾಗಿವೆಯಂತೆ. ಅದರಲ್ಲಿ ಶೇಕಡ 68.4ರಷ್ಟು ಅಂದರೆ 974.69 ಮಿಲಿಯನ್‌ ಸ್ಮಾರ್ಟ್‌ ಫೋನ್‌ (Smartphone) ಬಳಕೆದಾರರು. ಇಷ್ಟೆಲ್ಲಾ ಜನರು ದಿನ ನಿತ್ಯ ತಮ್ಮ ಬಹುತೇಕ ಸಮಯವನ್ನು ಇದರೊಂದಿಗೆ ಕಳೆಯುತ್ತಾರೆ. ಡಿಜಿಟೈಸೇಶನ್‌ (digitisation) ಆದ ಮೇಲಂತೂ ಎಲ್ಲಿ ಹೊಗುವುದಾದರೂ ಮೊಬೈಲ್‌ ಕೈಯಲ್ಲಿರಲೇ ಬೇಕು. ಜೇಬಿನಲ್ಲಿ ಪರ್ಸ್ ಇರುತ್ತೋ ಇಲ್ವೊ, ಮೊಬೈಲ್‌ ಅಂತೂ ಬೇಕೇ ಬೇಕು. ದೂರವಾಣಿಯ ಬದಲಿಗೆ ಸಂಪರ್ಕ ಸಾಧನವಾಗಿ ಬಂದ ಮೊಬೈಲ್‌ ಇಂದು ನಮ್ಮ ಜೀವನದಿಂದ ಬಹಳಷ್ಟು ವಸ್ತುಗಳನ್ನು ನುಂಗಿ ನಮ್ಮ ಕೈಯಲ್ಲಿ ಬೇರೂರಿದೆ. ಸೆಲ್ಯುಲಾರ್ ಫೋನ್ ಅಥವಾ ಸೆಲ್‌ ಫೋನ್‌ ಎಂದು ಮಾರುಕಟ್ಟೆಗೆ ಬಂದು ತನ್ನ ಬಳಕೆದಾರರನ್ನೇ ತನ್ನ ಸೆಲ್‌ನಲ್ಲಿ ಬಂಧಿಸಿದೆ.

ಸ್ಮಾರ್ಟ್ ಫೋನ್‌ಗಳನ್ನೇನೋ ಬಳಸುತ್ತಿದ್ದೇವೆ. ಆದರೆ ನಾವೆಷ್ಟು ಸ್ಮಾರ್ಟ್‌ ಆಗಿದ್ದೇವೆ?

ಇಂದು ಇಂಟರ್ನೆಟ್ (ಅಂತರ್ಜಾಲ), ಕಂಪ್ಯೂಟರ್ (ಗಣಕ ಯಂತ್ರ), ಸ್ಮಾರ್ಟ್ ಫೋನ್ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಈ ಸ್ಮಾರ್ಟ್ ಸಾಧನಗಳಲ್ಲಿ ನಾವು ಪ್ರತಿದಿನ ಎಷ್ಟು ಸಮಯವನ್ನು ಕಳೆಯುತ್ತೇವೆ ಎಂದು ಯೋಚಿಸಿದ್ದೀರಾ? ಅಂಗೈಯಲ್ಲೇ ಅಂತರ್ಜಾಲ, ಅರಿವಿದೆಯೇ ಅಪಾಯ?

ನಾವು ಇಂಟರ್ನೆಟ್ ಸಂವಹನ ಮಾಧ್ಯಮಗಳಾದ Google, ಇಮೇಲ್‌ಗಳು, ವಾಟ್ಸಪ್ (WhatsApp), ಫೇಸ್ಬುಕ್ (Facebook), ಇನ್ಸಟಗ್ರಾಮ್ (Instagram), ಯೂ ಟ್ಯೂಬ್ (YouTube), ಟ್ವಿಟ್ಟರ್ (Twitter) ಇತ್ಯಾದಿಗಳನ್ನು ನಮ್ಮ ದೈನಂದಿನ ಚಟುವಟಿಕೆಗಳ ಭಾಗವಾಗಿ ಮಾಡಿದ್ದೇವೆ. ಇದೆಲ್ಲವೂ ನಮಗೆ ಸ್ಮಾರ್ಟ್‌ಫೋನಿನಲ್ಲೇ ಲಭ್ಯ. ಜೊತೆಗೆ ವಿಧ ವಿಧವಾದ ಆಟಗಳು, ಆಕರ್ಷಿಸುವ ವಿಡಿಯೋಗಳು ನಮ್ಮ ಗಮನವನ್ನು ಯಾವಾಗಲೂ ತಮ್ಮತ್ತ ಸೆಳೆಯುತ್ತಿರುತ್ತದೆ. ಆನ್ಲೈನ್ ತರಗತಿಗಳಿಗೆ, ಮತ್ತು ಶೈಕ್ಷಣಿಕ ವಿಚಾರಗಳಿಗೆ, ಕಲಿಕೆಗೆ ಕೊಂಡ ಮೊಬೈಲ್ ದುರ್ಬಳಕೆ ಆಗಬಹುದು. ಈ ಸಂದರ್ಭದಲ್ಲಿ, ಸೈಬರ್ ಜಗತ್ತಿನ ಬಗ್ಗೆ, ಮತ್ತು ಅಲ್ಲಿ ಸುರಕ್ಷಿತವಾಗಿರಲು ಹೇಗಿರಬೇಕು ಅಥವಾ ಏನು ಮಾಡಬಾರದು ಎಂದು ತಿಳಿದಿರುವುದಿಲ್ಲ. ಜೊತೆಗೆ, ನಮ್ಮಲ್ಲಿ ಹೆಚ್ಚಿನವರಿಗೆ ಸೈಬರ್ ಸುರಕ್ಷತೆ ಮತ್ತು ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಭದ್ರತಾ ಅಗತ್ಯಗಳ ಬಗ್ಗೆ ತಿಳಿದಿಲ್ಲ.

ಇಂಟರ್ನೆಟ್ ಒಂದು ಜಾಗತಿಕ ನೆಟ್ವರ್ಕ್. ಜಗದೆಲ್ಲಾ ಮಾಹಿತಿಗಳ ಆಗರ. ನಿಮ್ಮ ಮೆಸೇಜ್, ನೀವು ಓದುವ ವಿಷಯಗಳು, ವಾಟ್ಸಪ್, ಫೇಸ್ಬುಕ್, ಗೂಗಲ್ ಮುಂತಾದ ಆಪ್ಗಳು ಕೆಲಸಮಾಡಲು ಇಂಟರ್ನೆಟ್ ಸೌಲಭ್ಯ ಅತ್ಯವಶ್ಯಕ. ಇಂಟರ್ನೆಟ್‌ ಮುಖಾಂತರ ಹಂಚಿಕೊಳ್ಳಲಾದ ಯಾವುದೇ ಮಾಹಿತಿ ಅಥವಾ ವೈಯಕ್ತಿಕ ವಿವರಗಳು ಆನ್‌ಲೈನ್‌ನಲ್ಲಿ ಶಾಶ್ವತವಾಗಿ ಉಳಿಯುತ್ತವೆ ಎಂದು ನಿಮಗೆ ತಿಳಿದಿದೆಯೇ? ಏಕೆಂದರೆ ಆನ್ಲೈನ್ ಗೆ ಅಪ್ ಲೋಡ್ ಆದ ಮಾಹಿತಿಯನ್ನು ಸಂಪೂರ್ಣವಾಗಿ ಅಳಿಸುವುದು ತುಂಬಾ ಕಷ್ಟ. ಮತ್ತು ನೀವು ನೋಡಿದ ಪ್ರತಿಯೊಂದು ವೆಬ್ ಸೈಟ್, ವಿಡಿಯೋ, ನೋಡಿದ ಯಾವುದೇ ತರಹದ ಮಾಹಿತಿ ನಿಮ್ಮ ಆನ್ಲೈನ್ ವರ್ತನೆಯನ್ನು ಯಾರಿಗಾದರೂ ತಿಳಿಸುತ್ತದೆ. ಇದನ್ನು ‘ಡಿಜಿಟಲ್ ಫುಟ್ ಪ್ರಿಂಟ್’ ಎನ್ನುತ್ತಾರೆ. ಈ ಫುಟ್ ಪ್ರಿಂಟನ್ನು ಅಳಿಸುವುದು ಅಸಾಧ್ಯ. ಅದು ನಿಮ್ಮ ಬಗ್ಗೆ ನಿಮ್ಮ ಸ್ನೇಹಿತರು, ಸಂಬಂಧಿಗಳ ಬಗ್ಗೆ, ನಿಮ್ಮ ಇಷ್ಟ ಮತ್ತು ಆಧ್ಯತೆಗಳ ಬಗ್ಗೆ ತಿಳಿಯುವ ಆಸಕ್ತರಿಗೆ ಸುಲಭವಾಗಿ ತಿಳಿಸುತ್ತದೆ.

ಮೊಬೈಲನ್ನು ಸರಿಯಾದ ರೀತಿಯಲ್ಲಿ ಬಳಸದಿದ್ದರೆ ಸೈಬರ್ ಜಗತ್ತಿನಲ್ಲಿ ಮಾಲ್‌ವೇರ್, ಫಿಶರ್ ಗಳು, ಅಶ್ಲೀಲ ವೆಬ್‌ಸೈಟ್‌ಗಳು, ಡೇಟಾ ಕಳ್ಳತನ, ಗುರುತಿನ ಕಳ್ಳತನ ಅಥವಾ ಹ್ಯಾಕಿಂಗ್ ಪ್ರಯತ್ನಗಳು, ಮೋಸದ ಯೋಜನೆಗಳು ಮತ್ತಿತರ ವಂಚನೆಗಳಿಗೀಡಾಗುವ ಸಾಧ್ಯತೆಗಳಿವೆ. ಸರಿಯಾದ ಮಾಹಿತಿ ತಿಳಿದುಕೊಂಡು ನಮ್ಮ ದೈನಂದಿನ ಅವಶ್ಯಕತೆಗೆ ಪೂರಕವಾಗಿ, ಜಾಗರೂಕರಾಗಿ ಮೊಬೈಲ್ ಬಳಸುವುದರಿಂದ ಸೈಬರ್ ಅಪರಾಧಗಳಿಗೆ ಬಲಿಯಾಗೋದು ತಪ್ಪುತ್ತದೆ.

ಈ ಕೆಳಗಿನ ಮುನ್ನೆಚ್ಚರಿಕೆಗಳನ್ನು ಅನುಸರಿಸಿ ಜಾಗರೂಕತೆಯಿಂದಿದ್ದರೆ ನೀವು ಸೈಬರ್ ವಂಚನೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಬಹುದು.

ಸುರಕ್ಷಿತವಾಗಿ ಮೊಬೈಲ್ ಬಳಸಲು ಹನ್ನೆರಡು ಸೂತ್ರಗಳು:

1) ಪಿನ್‌ಗಳು ಮತ್ತು ಪಾಸ್‌ವರ್ಡ್‌ಗಳನ್ನು ಅಳವಡಿಸಿಕೊಳ್ಳಿ. ನಿಮ್ಮ ಫೋನ್‌ಗೆ ಅನಧಿಕೃತ ಪ್ರವೇಶವನ್ನು ತಡೆಯಲು, ನಿಮ್ಮ ಫೋನ್ ಕಳೆದುಹೋದರೆ ಅಥವಾ ಕಳುವಾದಾಗ ರಕ್ಷಣೆಯ ಮೊದಲ ಸಾಲಿನಂತೆ (first line of defence) ನಿಮ್ಮ ಫೋನ್‌ನ ಮುಖಪುಟದಲ್ಲಿ ಪಾಸ್‌ವರ್ಡ್ ಅಥವಾ ವೈಯಕ್ತಿಕ ಗುರುತಿನ ಸಂಖ್ಯೆಯನ್ನು (ಪಿನ್) ಹೊಂದಿಸಿ. ನಿಮ್ಮ ಪ್ರತಿಯೊಂದು ಪ್ರಮುಖ ಲಾಗ್-ಇನ್‌ಗಳಿಗೆ (ಇಮೇಲ್, ಬ್ಯಾಂಕಿಂಗ್, ವೈಯಕ್ತಿಕ ಸೈಟ್‌ಗಳು, ಇತ್ಯಾದಿ) ಬೇರೆ ಪಾಸ್‌ವರ್ಡ್ ಬಳಸಿ. ನಿಮ್ಮ ಫೋನ್ ನಿಷ್ಕ್ರಿಯವಾಗಿರುವಾಗ ಐದು ನಿಮಿಷ ಅಥವಾ ಅದಕ್ಕಿಂತ ಕಡಿಮೆ ಸಮಯದ ನಂತರ ಸ್ವಯಂಚಾಲಿತವಾಗಿ ಲಾಕ್ ಆಗುವಂತೆ ನಿಮ್ಮ ಫೋನಿನಲ್ಲಿ ಸಂಯೋಜಿಸಿಕೊಳ್ಳಿ.

2) ನಿಮ್ಮ ಡೇಟಾವನ್ನು ಬ್ಯಾಕಪ್ ಮಾಡಿ ಮತ್ತು ಸುರಕ್ಷಿತಗೊಳಿಸಿ. ನಿಮ್ಮ ಫೋನ್‌ನಲ್ಲಿ ಸಂಗ್ರಹವಾಗಿರುವ ಎಲ್ಲಾ ಡೇಟಾವನ್ನು ನೀವು ಬ್ಯಾಕಪ್ ಮಾಡಬೇಕು – ಉದಾಹರಣೆಗೆ ನಿಮ್ಮ ಸಂಪರ್ಕಗಳು, ಡಾಕ್ಯುಮೆಂಟ್‌ಗಳು ಮತ್ತು ಫೋಟೋಗಳು. ಈ ಫೈಲ್‌ಗಳನ್ನು ನಿಮ್ಮ ಕಂಪ್ಯೂಟರ್‌ನಲ್ಲಿ, ಅಥವಾ ಕ್ಲೌಡ್‌ನಲ್ಲಿ ಸಂಗ್ರಹಿಸಬಹುದು. ನಿಮ್ಮ ಫೋನ್ ಕಳೆದುಹೋದರೆ, ಕದ್ದಿದ್ದರೆ ಅಥವಾ ಅಳಿಸಿದರೆ ಅದನ್ನು ಅನುಕೂಲಕರವಾಗಿ ಮರುಸ್ಥಾಪಿಸಲು ಇದು ಸಹಾಯಮಾಡುತ್ತದೆ.

3) ವಿಶ್ವಾಸಾರ್ಹ ಮೂಲಗಳಿಂದ ಮಾತ್ರ ಅಪ್ಲಿಕೇಶನ್‌ಗಳನ್ನು ಸ್ಥಾಪಿಸಿ. ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವ ಮೊದಲು, ಅಪ್ಲಿಕೇಶನ್ ಕಾನೂನುಬದ್ಧವಾಗಿದೆ ಎಂದು ಖಚಿತಪಡಿಸಿಕೊಡು ಅಳವಡಿಸಿಕೊಳ್ಳಿ. ಅಪ್ಲಿಕೇಶನ್‌ನ ನ್ಯಾಯಸಮ್ಮತತೆಯನ್ನು ಪರಿಶೀಲಿಸಲು ಅದರ ಬಗ್ಗೆ ಇರುವ ವಿಮರ್ಶೆಗಳನ್ನು ನೋಡಿ, ಅಪ್ಲಿಕೇಶನ್ ಸ್ಟೋರ್‌ನ ಕಾನೂನುಬದ್ಧತೆಯನ್ನು ದೃಢೀಕರಿಸಿಕೊಳ್ಳಿ, ಮತ್ತು ಅಪ್ಲಿಕೇಶನ್ ಪ್ರಾಯೋಜಕರ ಅಧಿಕೃತ ವೆಬ್‌ಸೈಟ್ ಅನ್ನು ನೋಡಿ. ವಿಶ್ವಾಸಾರ್ಹವಲ್ಲದ ಮೂಲಗಳಿಂದ ಅಳವಡಿಸುವ ಅನೇಕ ಅಪ್ಲಿಕೇಶನ್‌ಗಳು ಮಾಲ್‌ವೇರ್ ಅನ್ನು ಒಳಗೊಂಡಿರುತ್ತವೆ. ಅದು ಒಮ್ಮೆ ನಿಮ್ಮ ಫೋನಿನಲ್ಲಿ ಸ್ಥಾಪಿತವಾದರೆ ಮಾಹಿತಿಯನ್ನು ಕದಿಯಬಹುದು, ವೈರಸ್‌ಗಳನ್ನು ಸಕ್ರಿಯಗೊಳಿಸಬಹುದು ಮತ್ತು ನಿಮ್ಮ ಫೋನ್‌ನಲ್ಲಿರುವ ವಿಷಯಗಳಿಗೆ ಹಾನಿಯನ್ನು ಉಂಟುಮಾಡಬಹುದು.

4) ಅಪ್ಲಿಕೇಶನ್ ಅನುಮತಿಗಳನ್ನು ಸ್ವೀಕರಿಸುವ ಮೊದಲು ಅವುಗಳನ್ನು ಅರ್ಥಮಾಡಿಕೊಳ್ಳಿ. ನಿಮ್ಮ ಫೋನ್‌ನಲ್ಲಿನ ವೈಯಕ್ತಿಕ ಮಾಹಿತಿಗೆ ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ನೀಡುವ ಬಗ್ಗೆ ಅಥವಾ ನಿಮ್ಮ ಫೋನ್‌ನಲ್ಲಿ ಕಾರ್ಯಗಳನ್ನು ನಿರ್ವಹಿಸಲು ಅಪ್ಲಿಕೇಶನ್‌ಗೆ ಪ್ರವೇಶವನ್ನು ಅನುಮತಿಸುವ ಬಗ್ಗೆ ನೀವು ಜಾಗರೂಕರಾಗಿರಬೇಕು. ಸ್ಥಾಪಿಸುವ ಮೊದಲು ಪ್ರತಿ ಅಪ್ಲಿಕೇಶನ್‌ನ ಗೌಪ್ಯತೆ ಸೆಟ್ಟಿಂಗ್‌ಗಳನ್ನು ಸಹ ಪರಿಶೀಲಿಸುವುದನ್ನು ಖಚಿತಪಡಿಸಿಕೊಳ್ಳಿ.

5) ಉಪಯೋಗಿಸದ ಆಪ್ ಗಳನ್ನು ತೆಗೆದು ಹಾಕಿ. ನಿಮ್ಮ ಮೊಬೈಲ್‌ನಲ್ಲಿ ನೀವು ನಿತ್ಯ ಬಳಸುವ ಎಷ್ಟು ಆ್ಯಪ್‌ಗಳಿವೆ? ಅವುಗಳು ಉಪಯೋಗ ಆಗದಿದ್ದರೂ ನಿಮ್ಮ ಫೋನಿನಿಂದ ಮಾಹಿತಿಯನ್ನು ಹೊರಗೆ ಕಳಿಸಬಹುದಲ್ಲವೇ? ಅನಗತ್ಯ ಆ್ಯಪ್‌ಗಳನ್ನು ‘ಅನ್‌ಇನ್ಸ್‌ಟಾಲ್‌’ ಮಾಡಿ. ನಿಮ್ಮ ಫೋನಿನ ಸೆಟ್ಟಿಂಗ್ಸ್‌ನಲ್ಲಿ ಅಪ್ಲಿಕೇಶನ್ಸ್ ವಿಭಾಗದಲ್ಲಿ ಅಳವಡಿಕೆಯಾಗಿರುವ ಎಲ್ಲಾ ಆ್ಯಪ್‌ಗಳನ್ನು ನೋಡಬಹುದು. ಅಲ್ಲಿಂದಲೇ ಅಸ್ಥಾಪಿಸಿ.

6) ನಿಮ್ಮ ಮೊಬೈಲ್ ನ ಆಪರೇಟಿಂಗ್ ಸಿಸ್ಟಮ್ ಅನ್ನು ಕಾಲಕಾಲಕ್ಕೆ ಅಪ್ಡೇಟ್ ಮಾಡಿಕೊಳ್ಳಿ. ಜೊತೆಗೆ ನಿಮ್ಮ ಮೊಬೈಲ್ ಸುರಕ್ಷತೆಗೆ ಸರಿಯಾದ ಆಂಟಿವೈರಸ್ ಸಾಫ್ಟ್ ವೇರ್ ಬಳಸಿರಿ.

7) ನೀವು ನಿಮ್ಮನ್ನು ಸುರಕ್ಷಿತವಾಗಿರಿಸಿಕೊಳ್ಳುವಂತೆಯೇ ನಿಮ್ಮ ಆನ್‌ಲೈನ್ ಉಪಸ್ಥಿತಿಯನ್ನು ಸುರಕ್ಷಿತಗೊಳಿಸಿ: ನಿಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ನೀವು ಸರಿಯಾದ ಸೆಟ್ಟಿಂಗ್‌ಗಳನ್ನು ಆಯ್ಕೆ ಮಾಡದಿದ್ದರೆ, ಪೋಸ್ಟ್ ಮಾಡಿದ ಫೋಟೋಗಳು ಮತ್ತು ವೀಡಿಯೊಗಳನ್ನು ನಿಮಗೆ ತಿಳಿಯದೆ ಇತರರು ವೀಕ್ಷಿಸಬಹುದು, ಡೌನ್‌ಲೋಡ್ ಮಾಡಬಹುದು ಮತ್ತು ಬಳಸಬಹುದು.

8) ವೀಡಿಯೊ ಚಾಟ್ ಮತ್ತು ವೀಡಿಯೊ ಕರೆಗಳಲ್ಲಿ ನಿಮ್ಮ ಗೋಚರಿಸುವಿಕೆಯ ಬಗ್ಗೆ ಗಮನವಿರಲಿ: ಸಾಮಾಜಿಕ ಮಾಧ್ಯಮ ಸೈಟ್‌ಗಳಲ್ಲಿನ ನಿಮ್ಮ ವೀಡಿಯೊ ಚಾಟ್‌ಗಳನ್ನು ಇನ್ನೊಂದು ಬದಿಯಲ್ಲಿರುವ ವ್ಯಕ್ತಿ ರೆಕಾರ್ಡ್ ಮಾಡಬಹುದು. ಅಪರಿಚಿತರಿಂದ ಚಾಟ್ ವಿನಂತಿಗಳನ್ನು ಸ್ವೀಕರಿಸುವಾಗ ಜಾಗರೂಕರಾಗಿರಿ.

9) ಸೂಕ್ಷ್ಮ ವೈಯಕ್ತಿಕ ಛಾಯಾಚಿತ್ರಗಳು ಮತ್ತು ವೀಡಿಯೊಗಳನ್ನು ತೆಗೆಯಲು ಸ್ಮಾರ್ಟ್‌ಫೋನ್ ಬಳಸಬೇಡಿ: ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು ಇಂಟರ್ನೆಟ್ ಮತ್ತು ಕ್ಲೌಡ್ ಸ್ಟೋರೇಜ್‌ಗೆ ಸಂಪರ್ಕ ಹೊಂದಿರುತ್ತದೆ. ಕ್ಲೌಡ್‌ನೊಂದಿಗೆ ಸಂಪರ್ಕಗೊಂಡಿರುವ ಸ್ಮಾರ್ಟ್‌ಫೋನ್ ಬಳಸಿ ಚಿತ್ರ ಅಥವಾ ವೀಡಿಯೊವನ್ನು ಕ್ಲಿಕ್ ಮಾಡಿದ್ದರೆ/ರೆಕಾರ್ಡ್ ಮಾಡಿದ್ದರೆ, ಅದು ಸ್ವಯಂಚಾಲಿತವಾಗಿ ಕ್ಲೌಡ್‌ನಲ್ಲಿ ಸೇವ್ ಆಗಬಹುದು. ಬಳಕೆದಾರರು ತಮ್ಮ ಫೋನ್‌ನಿಂದ ತಮ್ಮ ಫೋಟೋಗಳು ಅಥವಾ ವೀಡಿಯೊಗಳನ್ನು ಅಳಿಸಿದರೂ ಸಹ, ಅದೇ ಫೋಟೋ ಅಥವಾ ವೀಡಿಯೊವನ್ನು ಕ್ಲೌಡ್ ಖಾತೆಯಿಂದ ಅಥವಾ ಅದೇ ಖಾತೆಯನ್ನು ಬಳಸಿಕೊಂಡು ಕ್ಲೌಡ್‌ಗೆ ಸಂಪರ್ಕಗೊಂಡಿರುವ ಯಾವುದೇ ಇತರ ಸಾಧನ/ಪಿಸಿಯಿಂದ ಮರುಪಡೆಯಬಹುದು.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಜೀವನವೇ ಸ್ಕ್ರೋಲಿಂಗ್: ನೀವು ಸಾಮಾಜಿಕ ಮಾಧ್ಯಮದ ವ್ಯಸನಿಯಾಗಿದ್ದೀರಾ?

10) ಸೈಬರ್ ಹಿಂಬಾಲಿಸುವಿಕೆಯಿಂದ (stalking) ನಿಮ್ಮನ್ನು ರಕ್ಷಿಸಿಕೊಳ್ಳಿ: ನಿಮ್ಮಿಂದ ನಿರಾಸಕ್ತಿಯ ಸ್ಪಷ್ಟ ಸೂಚನೆಯ ಹೊರತಾಗಿಯೂ ಸೈಬರ್ ಹಿಂಬಾಲಕರು ನಿಮ್ಮ ಮೇಲೆ ಪದೇ ಪದೇ ಆಸಕ್ತಿಯನ್ನು ತೋರಿಸುತ್ತಾರೆ. ಅವರು ಹಿಂಬಾಲಿಸಲು ಇಂಟರ್ನೆಟ್, ಇಮೇಲ್, ಸಾಮಾಜಿಕ ಮಾಧ್ಯಮ ಅಥವಾ ಯಾವುದೇ ರೀತಿಯ ಎಲೆಕ್ಟ್ರಾನಿಕ್ ಸಂವಹನವನ್ನು ಬಳಸುತ್ತಾರೆ. ಸಾಮಾಜಿಕ ಮಾಧ್ಯಮ ಸೈಟ್‌ಗಳು, ಮೊಬೈಲ್ ಸಾಧನಗಳು ಇತ್ಯಾದಿಗಳಿಗೆ ಸ್ಥಳ ಸೇವೆಗಳನ್ನು(location) ನಿಷ್ಕ್ರಿಯಗೊಳಿಸಿ. ನಿಮ್ಮ ವೈಯಕ್ತಿಕ ಮಾಹಿತಿಯಾದ ಫೋನ್ ಸಂಖ್ಯೆ, ಇಮೇಲ್ ವಿಳಾಸ, ಛಾಯಾಚಿತ್ರಗಳನ್ನು ಅಪರಿಚಿತ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳುವುದನ್ನು ತಡೆಯಿರಿ. ನೀವು ಸೈಬರ್ ಹಿಂಬಾಲಿಕೆಗೆ ಸಿಕ್ಕಿದ್ದೀರಿ ಎಂದು ನೀವು ಭಾವಿಸಿದರೆ, ನಿಮ್ಮ ಸಂಬಂಧಿಕರು ಮತ್ತು ಸ್ನೇಹಿತರ ಸಹಾಯ ಪಡೆಯಿರಿ.

11) ನಕಲಿ ಸಾಮಾಜಿಕ ಮಾಧ್ಯಮ ಖಾತೆಗಳ ಬಗ್ಗೆ ಎಚ್ಚರದಿಂದಿರಿ- ಎಲ್ಲಾ ಖಾತೆಗಳು ನಿಜವಲ್ಲ ಮತ್ತು ಖಾತೆಗಳಲ್ಲಿ ಒದಗಿಸಲಾದ ಎಲ್ಲಾ ಮಾಹಿತಿಯು ನಿಜವಲ್ಲ. ಅಪರಿಚಿತರಿಂದ ಸ್ನೇಹಿತರ ವಿನಂತಿಗಳನ್ನು ಸ್ವೀಕರಿಸುವಾಗ ಜಾಗರೂಕರಾಗಿರಿ.

12) ಸೇವೆ/ದುರಸ್ತಿ/ಮಾರಾಟ ಅಥವಾ ರಿಚಾರ್ಜ್ ಗೆ ನಿಮ್ಮ ಮೊಬೈಲ್ ಸಾಧನಗಳನ್ನು ನೀಡುವಾಗ ಜಾಗರೂಕರಾಗಿರಿ.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಜೀವನವೇ ಸ್ಕ್ರೋಲಿಂಗ್: ನೀವು ಸಾಮಾಜಿಕ ಮಾಧ್ಯಮದ ವ್ಯಸನಿಯಾಗಿದ್ದೀರಾ?

Exit mobile version