Site icon Vistara News

ಸೈಬರ್ ಸೇಫ್ಟಿ ಅಂಕಣ: ಸೈಬರ್‌ ಲೋಕದೊಳಗೆ ಒಂದು ಪ್ರಯಾಣ, ಮೊದಲ ಸುತ್ತು

deep web dark web and other thins in internet

ನಾವೆಲ್ಲರೂ ಡಿಜಿಟಲ್ ಯುಗದಲ್ಲಿ ಬದುಕುತ್ತಿದ್ದೇವೆ. ನಮ್ಮ ಎಲ್ಲಾ ದೈನಂದಿನ ಚಟುವಟಿಕೆಗಳು ಭಾಗಶಃ ಅಥವಾ ಸಂಪೂರ್ಣವಾಗಿ ಡಿಜಿಟಲ್ ಸಾಧನಗಳು ಅಥವಾ ಇಂಟರ್ನೆಟ್ ಅನ್ನು ಅವಲಂಬಿಸಿರುತ್ತದೆ. ಪ್ರತಿಯೊಂದು ಸಂಸ್ಥೆ (ಸರ್ಕಾರಿ ಅಥವಾ ಸರ್ಕಾರೇತರ) ಮತ್ತು ವ್ಯಕ್ತಿಗಳು ಕಂಪ್ಯೂಟರ್ ನೆಟ್‌ವರ್ಕ್‌ಗಳು, ಸಿಸ್ಟಮ್‌ಗಳು ಮತ್ತು ಸಂಬಂಧಿತ ತಂತ್ರಜ್ಞಾನಗಳ ಬಳಕೆಯನ್ನು ಅವಲಂಬಿಸಿರುತ್ತಾರೆ. ವೈಯಕ್ತಿಕ ಮತ್ತು ವೃತ್ತಿಪರ ಚಟುವಟಿಕೆಗಳನ್ನು ಒಳಗೊಂಡಂತೆ ನಮ್ಮ ಹೆಚ್ಚಿನ ದೈನಂದಿನ ದಿನಚರಿಗಳು ಸಾರ್ವಜನಿಕ ಮತ್ತು ಖಾಸಗಿ ನೆಟ್‌ವರ್ಕ್‌ಗಳು ಮತ್ತು ಇಂಟರ್ನೆಟ್ ಮೂಲಕ ಸಂಪರ್ಕಗೊಂಡಿರುವ ಡಿಜಿಟಲ್ ಸಾಧನಗಳನ್ನು ಅವಲಂಬಿಸಿರುತ್ತದೆ.

ನಾವು ಎಲ್ಲಿ ಕಾರ್ಯನಿರ್ವಹಿಸುತ್ತೇವೆ ಮತ್ತು ಯಾವುದು ನಮ್ಮನ್ನು ಸಂಪರ್ಕಿಸುತ್ತದೆ? ಸಂವಹನಕ್ಕಾಗಿ ನಾವು ಇಂಟರ್ನೆಟ್ ಮತ್ತು ಇತರ ಸಂಪನ್ಮೂಲಗಳನ್ನು ಬಳಸುವ ವಿಧಾನದ ಬಗ್ಗೆ ಯೋಚಿಸಿದಾಗ ನಮ್ಮಲ್ಲಿ ಹೆಚ್ಚಿನವರು ಎತ್ತುವ ಪ್ರಮುಖ ಪ್ರಶ್ನೆಗಳು ಇವು. ಉತ್ತರ: ಸೈಬರ್ ಸ್ಪೇಸ್. ಸೈಬರ್ ಸ್ಪೇಸ್ ಎನ್ನುವುದು ನಮ್ಮೆಲ್ಲರನ್ನೂ ಸಂಪರ್ಕಿಸುವ ಮತ್ತು ಡಿಜಿಟಲ್ ಯುಗದಲ್ಲಿ ಸಂವಹನಗಳನ್ನು ಬೆಂಬಲಿಸಲು ಅಗತ್ಯವಾದ ಮಾಹಿತಿ ವಿನಿಮಯವನ್ನು ಸಕ್ರಿಯಗೊಳಿಸುವ ವರ್ಚುವಲ್ ಸ್ಥಳವಾಗಿದೆ.

ಸೈಬರ್‌ ಸ್ಪೇಸ್ ಎನ್ನುವುದು ಜಾಗತಿಕ ಸಂವಹನಕ್ಕಾಗಿ ಅಗತ್ಯವಿರುವ ಮೂಲಸೌಕರ್ಯ, ಎಲೆಕ್ಟ್ರಾನಿಕ್ ಮಾಧ್ಯಮ ಮತ್ತು ಸಂಬಂಧಿತ ಅಂಶಗಳು ಲಭ್ಯವಿರುವ ಒಂದು ವರ್ಚುವಲ್ ಸ್ಪೇಸ್ ಅನ್ನು ಸೂಚಿಸುತ್ತದೆ. ಇದು ನಮ್ಮಿಂದಲೇ ತಾಂತ್ರಿಕವಾಗಿ ರಚಿಸಲಾದ ವರ್ಚುವಲ್ ಸ್ಪೇಸ್ ಆಗಿದೆ. ಸಾಮಾಜಿಕ ಸಂವಹನ, ಮನರಂಜನೆ, ವ್ಯಾಪಾರ ಕಾರ್ಯಾಚರಣೆಗಳು ಮತ್ತು ವೈಯಕ್ತಿಕ ಚಟುವಟಿಕೆಗಳು ಮತ್ತು ಆಸಕ್ತಿಗಳಿಗಾಗಿ ನಾವು ಕಾರ್ಯನಿರ್ವಹಿಸುತ್ತಿರುವ ಎರಡನೇ ಲೋಕವೆಂದು ಇದನ್ನು ಪರಿಗಣಿಸಬಹುದು.

ಸೈಬರ್‌ಸ್ಪೇಸ್ ಎಂಬ ಪದವು ಸೈಬರ್ನೆಟಿಕ್ಸ್ ಎಂಬ ಪದದಿಂದ ಬಂದಿದೆ. ಇದರ ಮೂಲ ಪದ ಪುರಾತನ ಗ್ರೀಕ್ ಭಾಷೆಯ ಕುಬರ್ನೆಟೆಸ್‌. ಅಂದರೆ ದಾರಿ ತೋರಿಸುವುದು ಅಥವಾ ನಿರ್ದೇಶಿಸುವುದು ಎಂದರ್ಥ. ಇದು 1940, 1960 ಮತ್ತು 1984ರಲ್ಲಿ ದೃಶ್ಯ ಕಲೆಗಳು ಮತ್ತು ವೈಜ್ಞಾನಿಕ ಕಾದಂಬರಿಗಳಲ್ಲಿ ವಿವಿಧ ಸಂದರ್ಭಗಳಲ್ಲಿ ಮೊದಲು ಬಳಕೆಗೆ ಬಂದಿತು. ಎಲೆಕ್ಟ್ರಾನಿಕ್ ಫ್ರಾಂಟಿಯರ್ ಫೌಂಡೇಶನ್‌ನ ಸಂಸ್ಥಾಪಕರು 1990ರಲ್ಲಿ ಮೊದಲ ಉಲ್ಲೇಖವನ್ನು ಮಾಡಿದರು. ಇದು ಕಂಪ್ಯೂಟರ್ ಮತ್ತು ದೂರಸಂಪರ್ಕ ವ್ಯವಸ್ಥೆಗಳ ಅಸ್ತಿತ್ವದಲ್ಲಿರುವ ಸಂಬಂಧವನ್ನು ತಿಳಿಸುತ್ತದೆ.

“ಸೈಬರ್ ಲೋಕ” ಜಗತ್ತನ್ನೇ ಬದಲಿಸಿದ ಅದ್ಭುತ. ಡೇವಿಡ್ ಹಾರ್ಸೆ ಎಂಬ ಒಬ್ಬ ಅಮೇರಿಕನ್ ಸಂಪಾದಕ, ವ್ಯಂಗ್ಯಚಿತ್ರಕಾರ ಮತ್ತು ನಿರೂಪಕ ಹೇಳ್ತಾರೆ “ದೇವರುಗಳಂತೆ, ನಾವು ಸೈಬರ್‌ಸ್ಪೇಸ್ ಎಂಬ ಹೊಸ ವಿಶ್ವವನ್ನು ರಚಿಸಿದ್ದೇವೆ, ಅದು ಒಳಿತು ಮತ್ತು ಕೆಡುಕನ್ನು ಒಳಗೊಂಡಿದೆ. ಈ ಹೊಸ ಆಯಾಮವು ಅದ್ಭುತಗಳಿಗಿಂತ ಹೆಚ್ಚು ಅನಾಹುತಗಳನ್ನು ಉತ್ಪಾದಿಸುತ್ತದೆಯೇ ಎಂದು ನಮಗೆ ಇನ್ನೂ ತಿಳಿದಿಲ್ಲ. ಆದರೆ ಹಿಂತಿರುಗಲು ತುಂಬಾ ತಡವಾಗಿದೆ.”

ತಂತ್ರಜ್ಞಾನದ ಬಳಕೆ ಮತ್ತು ಅದರ ಮೇಲಿನ ಅವಲಂಬನೆ ಇವತ್ತು ಅತಿಯಾಗಿದೆ. ಜೊತೆಗೆ ನಾವು ಬಳಸುತ್ತಿರುವ ಸಾಧನಗಳನ್ನು ಬಿಟ್ಟು ಮೊದಲಿನ ತರಹದ ಜೀವನಕ್ಕೆ ಮರಳುವುದು ಸಾಧ್ಯವಿಲ್ಲ ಅಲ್ಲವೇ? ಇಂದಿನ ಕಾಲಮಾನದಲ್ಲಿ ಕೃತಕ ಬುದ್ಧಿಮತ್ತೆ ಮತ್ತಿತರ ತಂತ್ರಜ್ಞಾನಗಳು ನಮ್ಮ ಜೀವನವನ್ನು ಯಾವ ರೀತಿ ಬದಲಾಯಿಸುತ್ತದೆ ಎಂಬುದರ ಸ್ಪಷ್ಟ ಕಲ್ಪನೆಯೇ ನಮಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾವು ಉಪಯುಕ್ತವಾಗಿ, ನಮಗೂ ಮತ್ತಿತರರಿಗೂ ತೊಂದರೆ ಆಗದಂತೆ ತಂತ್ರಜ್ಞಾನದ ವಿವಿಧ ಸಾಧನಗಳನ್ನು ಬಳಸುವುದು ಹೇಗೆ ಎಂದು ತಿಳಿಯುವುದು ಸಮಂಜಸ ಅನಿಸುವುದಿಲ್ಲವೇ?

ಈ ಸೈಬರ್ ಲೋಕದ ಒಡಲಾಳವನ್ನು ತಿಳಿಯಲು ತಯಾರಿದ್ದೀರಾ? ಹಾಗಾದರೆ ತಡಮಾಡದೆ ಒಂದು ಸುತ್ತು ಹೋಗಿ ಬರೋಣ. ನಿಮಗೆ ಈ ಸಂಚಾರಕ್ಕೆ ಅಂತರ್ಜಾಲದ ಸಂಪರ್ಕ ಬೇಕು ಮತ್ತು ನಿಮ್ಮ ಕಂಪ್ಯೂಟರ್ ಅಥವಾ ಮೊಬೈಲಿನಲ್ಲಿ ಬ್ರೌಸರ್ ಎಂಬ ಸಾಫ್ಟ್‌ವೇರ್ ಇರಬೇಕು. ಅದೇ ರೀತಿ ನಿಮ್ಮ ಮೊಬೈಲಿನಲ್ಲಿರುವ ಬಹಳಷ್ಟು ಆಪ್‌ಗಳಿಗೂ ಇಂಟರ್‌ನೆಟ್ ಸಂಪರ್ಕ ಬೇಕು. ಅಲ್ಲೇ ಇರೋದು ಅಪಾಯ. ನಿಮ್ಮ ಗೂಗಲ್, ಫೇಸ್‌ಬುಕ್, ಇನ್ಸ್ಟಾಗ್ರಾಮ್, ಟ್ವಿಟ್ಟರ್ ಅಕೌಂಟುಗಳನ್ನು ಸುರಕ್ಷತೆಗೊಳಿಸುವುದು ಹೇಗೆ ಎಂದು ಹಿಂದಿನ ಲೇಖನಗಳಲ್ಲಿ ತಿಳಿಸಿದ್ದೇನೆ. ತಂತ್ರಜ್ಞಾನದ ಬಗ್ಗೆ ಮಧು ವೈ. ಎನ್ ಅವರು ʼಡಾರ್ಕ್ ವೆಬ್ – ಇಂಟರ್‌ನೆಟ್ಟಿನಲ್ಲಿ ನೀವು ಎಷ್ಟು ಸುರಕ್ಷಿತರು?ʼ ಎಂಬ ಪುಸ್ತಕ ಬರೆದಿದ್ದಾರೆ. ನಿಮ್ಮ ತಂತ್ರಜ್ಞಾನದ ಜ್ಞಾನವನ್ನು ಹೆಚ್ಚಿಸಿಕೊಳ್ಳ ಬಯಸುವವರು ಓದಲೇ ಬೇಕಾದ ಪುಸ್ತಕ.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಸೈಬರ್ ಬೆದರಿಕೆಗೆ ಧೈರ್ಯವೇ ಔಷಧ

ನಮ್ಮ ಭೌತಿಕಲೋಕದಲ್ಲಿ ಹೇಗೆ ನಮ್ಮ ದೈನಂದಿನ ವ್ಯವಹಾರಗಳು ನಡೆಯುತ್ತವೆಯೋ, ಹಾಗೇ ಸೈಬರ್ ಲೋಕದಲ್ಲೂ ನಡೆಯುತ್ತದೆ. ಸಾಮಾನ್ಯ ಜಗತ್ತಿನಂತೇ ಇರುವ ಅಪರಾಧಗಳ ಜಗತ್ತಿನ ಬಗ್ಗೆ ಕೇಳಿರುತ್ತೀರಿ. ಭೂಗತ ಜಗತ್ತು, ಅಂಡರ್ ವರ್ಲ್ಡ್ ಇತ್ಯಾದಿ ಪದಪ್ರಯೋಗಗಳು ಪರಿಚಿತವಾಗಿರುತ್ತದೆ. ಅದೇ ರೀತಿ ಸೈಬರ್ ಲೋಕದಲ್ಲೂ ಕತ್ತಲ ಜಗತ್ತಿದೆ. ಅದನ್ನೇ ಡಾರ್ಕ್ ವೆಬ್ ಎನ್ನುತ್ತಾರೆ. ಸೈಬರ್ ಲೋಕದಲ್ಲಿ ನಿಮ್ಮ ಪರಿಚಿತ ಜಾಲತಾಣಗಳು, ಆಪ್‌ಗಳ ಮೂಲಕ ನಿಮಗೆ ಕಾಣೋದು ಸಮುದ್ರದಲ್ಲಿ ತೇಲುವ ಮಂಜುಗಡ್ದೆಯ ತುದಿ ಮಾತ್ರ. ನೀರೊಳಗೆ ಹೇಗೆ ಬೃಹತ್ ಹಿಮಗಡ್ಡೆ ಮುಳುಗಿರುತ್ತೋ ಹಾಗೆ ಸರ್ಫೇಸ್ ವೆಬ್‌ನ ಕೆಳಗೆ ಡೀಪ್ ವೆಬ್ ಮತ್ತು ಡಾರ್ಕ್ ವೆಬ್‌ಗಳಿವೆ.

ಪ್ರತಿಯೊಂದು ವೆಬ್‌ಸೈಟ್‌ ಸರ್ಫೇಸ್ ವೆಬ್‌ನಲ್ಲಿರುತ್ತದೆ. ನೀವು ಪಾಸ್ವರ್ಡ್ ಹಾಕಿ ಎಂಟರ್ ಆಗೋದೇ ಡೀಪ್ ವೆಬ್ ಪ್ರದೇಶ. ಉದಾಹರಣೆಗೆ, ನಿಮ್ಮ ಜಿಮೇಲ್ ಲಾಗಿನ್ ಸ್ಕ್ರೀನ್ ಅಂತರ್ಜಾಲದ ಮೇಲ್ಪದರದಲ್ಲಿ ಇರುತ್ತದೆ. ನಿಮ್ಮ ಪ್ರವೇಶವನ್ನು ಅನುಮತಿಸುತ್ತಿದ್ದಂತೆ ನೀವು ಡೀಪ್ ವೆಬ್ ಪ್ರವೇಶಿಸುತ್ತೀರಿ. ಇಲ್ಲಿಯವರೆಗೂ ನಿಮಗೆ ಸಾಧಾರಣ ಬ್ರೌಸರ್‌ಗಳಾದ ಗೂಗಲ್ ಕ್ರೋಮ್, ಫೈರ್ ಫಾಕ್ಸ್, ಸಫಾರಿ, ಬಿಂಜ್‌ಗಳು ನಿಮ್ಮ ಪ್ರಯಾಣಕ್ಕೆ ಸಹಕಾರಿ. ಇನ್ನೂ ಒಳಗೆ ಹೋಗಬೇಕಾದರೆ ಅದಕ್ಕೆ ವಿಶೇಷವಾದ ಬ್ರೌಸರ್‌ಗಳು ಬೇಕು ಮತ್ತು ಆ ಲೋಕ ನಮಗೆ ತಿಳಿದಿರುವ ಭೂಗತ ಲೋಕಕ್ಕಿಂತ ಭಯಾನಕ. ಕಳ್ಳಸಾಗಾಣಿಕೆ, ಡ್ರಗ್ಸ್, ಶಸ್ತ್ರಾಸ್ತ್ರಗಳು – ಸಾಮಾನ್ಯ ಪಿಸ್ತೂಲಿಂದ anti-aircraft gunವರೆಗೂ, ಅಶ್ಲೀಲ ಚಿತ್ರಗಳು, ವಿಡಿಯೋಗಳು, ವೇಶ್ಯಾವಾಟಿಕೆಗಳು, ಸೋರಿಕೆಯಾದ ಮಾಹಿತಿಗಳು, ಸುಫಾರಿ ಕೆಲಸ ಮಾಡುವ ಸೈಬರ್ ಕ್ರಿಮಿನಲ್ಲುಗಳ ಅಡ್ಡಾ, ಎಲ್ವೂ ಇರುತ್ತವೆ. ವಿವಿಧ ರೀತಿಯ ಹ್ಯಾಕರುಗಳು ವಿಹರಿಸುವ ತಾಣ ಡಾರ್ಕ್ ವೆಬ್. ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡು ಹುಷಾರಾಗಿ ಪ್ರಯಾಣಿಸಿದರೆ ಸೈಬರ್ ಲೋಕ ನಿಮಗೆ ಅಪರಿಮಿತ ಮಾಹಿತಿಯ ಕಣಜ. ಇದನ್ನು ನೀವು ಹೇಗೆ ಉಪಯೋಗಿಸ್ತೀರಾ ಎನ್ನುವುದಿಂದ ಅದು ಉಪಯುಕ್ತವೋ ಅಥವಾ ಉಪದ್ರವೋ ಎಂಬ ಅನುಭವ ನಿಮಗಾಗುತ್ತದೆ. ಮುಂದಿನ ವಾರ ಡಾರ್ಕ್ ವೆಬ್‌ನ ಕರಾಳತೆಯನ್ನು ನಿಮಗೆ ಪರಿಚಯಿಸುವ ಪ್ರಯತ್ನ ಮಾಡುತ್ತೇನೆ.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಫೇಸ್‌ಬುಕ್ ‘ಫ್ರೆಂಡ್ ರಿಕ್ವೆಸ್ಟ್’ ಎಂಬ ಮೋಸದ ಜಾಲ

Exit mobile version