Site icon Vistara News

ಸೈಬರ್‌ ಸೇಫ್ಟಿ ಅಂಕಣ: ಸೈಬರ್ ಲೋಕದ ಪ್ರಥಮ ಚಿಕಿತ್ಸಕ ಸಿಸಿಐಒ

cyber friend

ಜೀವನದ ಪಯಣದಲ್ಲಿ ನಮಗೆಲ್ಲರಿಗೂ ಹತ್ತು ಹಲವು ಅಡಚಣೆಗಳು ಆಗುವುದು ಸಹಜ. ಜೊತೆಗೆ ಕೆಲವು ಬಾರಿ ಸಣ್ಣಪುಟ್ಟ ಅಪಘಾತಗಳೂ ಆಗಬಹುದು. ನಮ್ಮದಲ್ಲದ ತಪ್ಪಿಗೆ ತೊಂದರೆಗೆ ಸಿಕ್ಕಿಕೊಂಡಿರಬಹುದು. ಹಾಗೆಯೇ ಸೈಬರ್ ಲೋಕದಲ್ಲಿಯೂ (Cyber world) ಅರಿವಿದ್ದರೂ ಅನ್ಯರ ಒತ್ತಾಯದಿಂದಲೂ ಅಥವಾ ನಮ್ಮ ಅತಿ ಆಸೆಯಿಂದಲೋ ಅಪಘಾತಕ್ಕೆ ಸಿಲುಕಬಹುದು. ನಿಮಗೆ ಗೊತ್ತಿರುವಂತೆ ದಿನನಿತ್ಯ ಹೊಸಬಗೆಯ ವಂಚನೆಯ ಬಲೆಗಳನ್ನು ಸೈಬರ್ ಕ್ರಿಮಿನಲ್‌ಗಳು (Cyber criminals) ಹಾಕುತ್ತಿರುತ್ತಾರೆ. ಇದರಲ್ಲಿ ಯಾವಾಗ ಸಿಲುಕುತ್ತೇವೋ ಅಂದಾಜಿಸುವುದು ಕಷ್ಟ. ಅಪ್ಪಿತಪ್ಪಿ ಸೈಬರ್ ಕ್ರೈಮಿಗೆ ಒಳಗಾದರೆ ಯಾರ ಮೊರೆ ಹೋಗಬೇಕು? ಮೊದಲು ಏನು ಮಾಡಬೇಕು? ಪೋಲೀಸರ ಬಳಿ ಹೇಗೆ ದೂರು ಕೊಡಬೇಕು? ಅದರಿಂದ ಪುನಃ ತೊಂದರೆಗಳಾಗುತ್ತಾ? ಮುಂತಾದ ಹಲವು ಪ್ರಶ್ನೆಗಳು ಪೆಟ್ಟು ಬಿದ್ದಾಗ ಮೂಡುವುದು ಸಹಜ. ಈ ಸಂದರ್ಭದಲ್ಲಿ ಕೈ ಹಿಡಿದು ಮೇಲೆತ್ತಿ ಸಾಂತ್ವನ ಮತ್ತು ಶುಶ್ರೂಶೆ ಮಾಡಲು ಸರ್ಕಾರದಿಂದ ಮಾನ್ಯತೆ ಪಡೆದವರೇ ಸೈಬರ್ ಕ್ರೈಮ್ ಇಂಟರ್‌ವೆಂಷನ್ ಆಫೀಸರ್ (cyber crime intervention officer) ಅಥವಾ ಸಿಸಿಐಒ (CCIO).

ನಾವು ಎಷ್ಟೇ ಜಾಣರಾಗಿದ್ದರೂ, ಜಾಗರೂಕರಾಗಿದ್ದರೂ ಸಂದರ್ಭದ ಗಡಿಬಿಡಿಯಲ್ಲಿ ಅರೆನಿಮಿಷದ ಅಜಾಗರೂಕತೆ ಅಪಘಾತಕ್ಕೆ ಕಾರಣವಾಗಬಹುದು. ಇಂತಹ ಸಮಯದಲ್ಲಿ ನಿಮ್ಮ ಪ್ರೀತಿಪಾತ್ರರನ್ನು ರಕ್ಷಿಸಲು ಮತ್ತು ಸಹಾಯದ ಅಗತ್ಯವಿರುವ ವಿಕ್ಟಿಮ್‌ಗಳನ್ನು ಬೆಂಬಲಿಸಲು ಸೈಬರ್ ಅಪರಾಧಗಳು, ಅದರ ಬಗೆಗಿನ ಪ್ರಥಮ ಮಾಹಿತಿಗಳು ಮತ್ತು ಅಗತ್ಯ ಸೈಬರ್ ಕಾನೂನುಗಳ ಬಗ್ಗೆ ತಿಳಿದು ಮಾರ್ಗದರ್ಶನ ಮಾಡುವವರೇ ಸಿಸಿಐಒ.

ಮಾಹಿತಿ ಹಂಚಿಕೆ ಮತ್ತು ವಿಶ್ಲೇಷಣೆ ಕೇಂದ್ರ (Information Sharing and Analysis Center – ISAC) (https://isacfoundation.org/cyber-crime-intervention-officer/) ಎಂಬ ಸಂಸ್ಥೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಲಾಭರಹಿತವಾಗಿ ಸಂಪರ್ಕಿತ, ಡಿಜಿಟಲ್ ಪ್ರಪಂಚದ ಮೇಲೆ ಪರಿಣಾಮ ಬೀರುವ ಸೈಬರ್ ಭದ್ರತೆಯ ಸಮಸ್ಯೆಗಳನ್ನು ಪರಿಹರಿಸುವುದನ್ನು ತನ್ನ ಉದ್ದೇಶವನ್ನಾಗಿಸಿಕೊಂಡಿದೆ. ಆ ನಿಟ್ಟಿನಲ್ಲಿ ಇವರು ನೀಡುತ್ತಿರುವ ಸಿಸಿಐಒ ಕೋರ್ಸ್ ಸೈಬರ್ ಸೈಕಾಲಜಿ ಮತ್ತು ಸೈಬರ್ ಕ್ರೈಮ್‌ಗಳ ಕುರಿತು ನಿಮಗೆ ಅಗತ್ಯವಾದ ಹಿನ್ನೆಲೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ ಕೋರ್ಸ್ ಕೆಲಸದಲ್ಲಿ ಮತ್ತು ಮನೆಯಲ್ಲಿ ನಿಮ್ಮ ಸುತ್ತಮುತ್ತಲಿನ ಜನರಲ್ಲಿನ ಸಮಸ್ಯೆಗಳ ಆರಂಭಿಕ ಚಿಹ್ನೆಗಳನ್ನು ಪತ್ತೆಹಚ್ಚಲು ಅನುಮತಿಸುತ್ತದೆ ಮತ್ತು ಸೈಬರ್ ಅಪರಾಧಗಳ ಸಂದರ್ಭದಲ್ಲಿ ನಿಮ್ಮನ್ನು ಮೊದಲ ಪ್ರತಿಸ್ಪಂದಕರಾಗಲು ಸಹ ಸಜ್ಜುಗೊಳಿಸುತ್ತದೆ.

ಈ ಕೋರ್ಸನ್ನು ಪರಿಣಿತ ವಿಷಯ ತಜ್ಞರಿಂದ ಪ್ರತೀ ತಿಂಗಳೂ ಆರು ದಿನಗಳ ಕಾಲ ಸಂಜೆ 6:30 ಯಿಂದ 9:00ರವರೆಗೆ ಆನ್ಲೈನ್ ಮುಖಾಂತರ ನಡೆಸುತ್ತಾರೆ. ಹದಿನಾರು ವರ್ಷ ಮೇಲ್ಪಟ್ಟ ಆಸಕ್ತರು ಈ ಕಾರ್ಯಕ್ರಮಕ್ಕೆ ನೊಂದಾಯಿಸಿಕೊಳ್ಳಬಹುದು. ಶುಲ್ಕ ಕೇವಲ ಐದು ಸಾವಿರ ರೂಪಾಯಿಗಳು. ಕೋರ್ಸ್‌ಗೆ ಪ್ರವೇಶ ಪಡೆಯುವ ಅಪ್ಲಿಕೇಶನ್ ಅನುಮೋದನೆಗೆ ಒಳಪಟ್ಟಿರುತ್ತದೆ. ಮೇಲೆ ಕೊಟ್ಟ ಲಿಂಕಿನಲ್ಲಿ ನಿಮಗೆ ಎಲ್ಲಾ ಮಾಹಿತಿಯೂ ದೊರೆಯುತ್ತದೆ ಮತ್ತು ನೊಂದಾಯಿಸಿಕೊಳ್ಳುವ ಲಿಂಕ್ ಕೂಡ ಇದೆ.

ಈ ಕೋರ್ಸ್ ಪೋಷಕರು (ವಿಶೇಷವಾಗಿ ತಾಯಂದಿರು), ಶಿಕ್ಷಕರು ಮತ್ತು ಶಿಕ್ಷಕರ ತರಬೇತಿದಾರರು, ಸಲಹೆಗಾರರು ವೈದ್ಯಕೀಯ ವೃತ್ತಿಪರರು, ನ್ಯಾಯಾಂಗ ಅಧಿಕಾರಿಗಳು, ವಕೀಲರು ಮತ್ತು ಕಾನೂನು ವಿದ್ಯಾರ್ಥಿಗಳು, ಸೈಬರ್ ಸೆಕ್ಯುರಿಟಿ ವೃತ್ತಿಪರರು, ಸಶಸ್ತ್ರ ಪಡೆಗಳ ಸಿಬ್ಬಂದಿ, ಕಾನೂನು ಜಾರಿ ಅಧಿಕಾರಿಗಳು (ಪೊಲೀಸರು), ವಿದ್ಯಾರ್ಥಿಗಳು ಎಲ್ಲಾ ನೆಟಿಜನ್‌ಗಳಿಗೆ ಸೂಕ್ತವಾಗಿರುತ್ತದೆ.

ಕೋರ್ಸಿನಲ್ಲಿ ತಿಳಿಸುವ ವಿಷಯಗಳ ಪಟ್ಟಿ ಇಲ್ಲಿದೆ. ಇದು ನಿಮ್ಮಲ್ಲಿ ಒಬ್ಬರಿಗಾದರೂ ಸಿಸಿಐಒ ಆಗುವ ಆಸಕ್ತಿ ಮೂಡಿಸಿದರೆ ನನ್ನ ಈ ಮಾಹಿತಿಯ ಬರಹ ಸಾರ್ಥಕವಾದಂತೆ.

• ಆನ್‌ಲೈನ್‌ನಲ್ಲಿ ಅಸಹಜವಾಗಿ ವರ್ತಿಸುವ ಜನರು – ಕೇಸ್ ಸ್ಟಡೀಸ್ ಮತ್ತು ಪಾಠಗಳು,
• ಆನ್‌ಲೈನ್‌ನಲ್ಲಿ ನಕಾರಾತ್ಮಕ ಸಂಬಂಧಗಳು – ಇದು ಕುಟುಂಬದ ಮೇಲೆ ಹೇಗೆ ಪರಿಣಾಮ ಬೀರುತ್ತದೆ
• ಸಾಮಾಜಿಕ ಪ್ರತ್ಯೇಕತೆ – ಆಫ್‌ಲೈನ್ ಮತ್ತು ಆನ್‌ಲೈನ್ ಸಮಸ್ಯೆಗಳು
• ಕಡಿಮೆ ಸ್ವಾಭಿಮಾನ ಮತ್ತು ಖಿನ್ನತೆ – ಆನ್‌ಲೈನ್‌ನಲ್ಲಿ ಆರಂಭಿಕ ಚಿಹ್ನೆಗಳನ್ನು ಪತ್ತೆಹಚ್ಚುವುದು
• ಆನ್‌ಲೈನ್ ಚಟುವಟಿಕೆಗಳಿಂದ ಹಿಂಸೆಯ ಪ್ರವೃತ್ತಿ – ಲಕ್ಷಣಗಳನ್ನು ಗುರುತಿಸುವುದು ಮತ್ತು ಅವುಗಳನ್ನು ತಡೆಯುವುದು ಹೇಗೆ
• ಇಂಟರ್ನೆಟ್ ಗೇಮಿಂಗ್ ಡಿಸಾರ್ಡರ್- ಚಟ ಮತ್ತು ಇತರ ಅಪಾಯಗಳನ್ನು ಗುರುತಿಸುವುದು
• ಆನ್‌ಲೈನ್ ಶಿಶುಕಾಮಿಗಳಿಂದ ಮಕ್ಕಳನ್ನು ಹೇಗೆ ರಕ್ಷಿಸುವುದು
• ಆನ್‌ಲೈನ್ ಚಟ – ವಿವಿಧ ಪ್ರಕಾರಗಳು ಮತ್ತು ಅವುಗಳ ಬಗ್ಗೆ ಏನು ಮಾಡಬೇಕು
• ನಾರ್ಕೋಟಿಕ್ಸ್ – ಹದಿಹರೆಯದವರು ಬಳಸುವ ವಿವಿಧ ರೀತಿಯ ಔಷಧಗಳು, ಕ್ರಿಪ್ಟೋಕರೆನ್ಸಿಗಳು ಮತ್ತು ಡಾರ್ಕ್ ವೆಬ್ ಮಾರುಕಟ್ಟೆ ಸ್ಥಳಗಳನ್ನು ಅರ್ಥಮಾಡಿಕೊಳ್ಳುವುದು
• ಟೆಕ್ ನಿಂದನೆ – ಮಕ್ಕಳು ಮತ್ತು ಪೋಷಕರಿಗೆ ಹೇಗೆ ಸಲಹೆ ನೀಡುವುದು
• ಬ್ಯಾಂಕ್ ವಂಚನೆಗಳು / ವಾಲೆಟ್ ವಂಚನೆಗಳು – ಪ್ರಕರಣಗಳನ್ನು ಹೇಗೆ ನಿರ್ವಹಿಸುವುದು
• ಸೆಕ್ಸ್ಟಾರ್ಶನ್, ಸೈಬರ್ಬುಲ್ಲಿಂಗ್ ಮತ್ತು ಇತರ ಆನ್‌ಲೈನ್ ಅಪರಾಧಗಳು – ಅದನ್ನು ಹೇಗೆ ಎದುರಿಸುವುದು
• ವರ್ಚುವಲ್ ಸ್ನೇಹಿತರು – ಮಕ್ಕಳು ಭಾಗಿಯಾಗಿದ್ದರೆ ಹೇಗೆ ಹೇಳುವುದು
• ಸೈಬರ್‌ಕಾಂಡ್ರಿಯಾ – ಆನ್‌ಲೈನ್‌ನಲ್ಲಿ ವೈದ್ಯಕೀಯ ಸ್ವಯಂ ರೋಗನಿರ್ಣಯ ಮತ್ತು ಅದರ ಅಪಾಯಗಳು
• ಡೀಪ್ ವೆಬ್ – ಅದು ಏನು?
• ಕ್ರಿಮಿನಲ್ ಪ್ರಚಾರ – ಅದನ್ನು ತಡೆಗಟ್ಟಲು ಕ್ರಮಗಳು
• ಸೈಬರ್ ಬೇಹುಗಾರಿಕೆ ಮತ್ತು ಹನಿ ಟ್ರಾಪ್ಸ್
• ಸೈಬರ್ ಕ್ರೈಮ್ ನಿಂದ ಬಾಧಿತರಾದ ಸಂತ್ರಸ್ತರಿಗೆ ಮಾರ್ಗದರ್ಶನ ನೀಡುವುದು
• ಆನ್‌ಲೈನ್ ಸುರಕ್ಷತೆಗಾಗಿ ಮಕ್ಕಳನ್ನು ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡುವ ಪರಿಕರಗಳು ಮತ್ತು ತಂತ್ರಗಳು
• ಪ್ರತಿಯೊಬ್ಬರೂ ತಿಳಿದಿರಬೇಕಾದ ಮೂಲಭೂತ ಐಟಿ ಕಾನೂನುಗಳು
• ಸೈಬರ್ ಅಪರಾಧಗಳ ಬಲಿಪಶುಗಳಿಗೆ ಸಮಾಲೋಚನೆ
• ಸೈಬರ್ ಕ್ರೈಮ್ ಪ್ರಕರಣಗಳೊಂದಿಗೆ ಪೊಲೀಸರು ಮತ್ತು ವಕೀಲರೊಂದಿಗೆ ಸಂವಹನ ಮತ್ತು ಬೆಂಬಲ
• ಶಾಲೆಗಳಲ್ಲಿ ಸೈಬರ್‌ ಸುರಕ್ಷತೆಯ ಜಾಗೃತಿಯನ್ನು ಹೆಚ್ಚಿಸಲು ನೀವು ತೆಗೆದುಕೊಳ್ಳಬಹುದಾದ ಕ್ರಮಗಳು
• ಕೆಲಸದ ಸ್ಥಳದಲ್ಲಿ ವೃತ್ತಿಪರ ನೀತಿಶಾಸ್ತ್ರದ ಪರಿಚಯ
• ವೃತ್ತಿಪರ ನೀತಿಶಾಸ್ತ್ರದ ಕುರಿತು 50+ ಕೇಸ್ ಸ್ಟಡೀಸ್
• ನಿಮ್ಮ ಮೊಬೈಲ್ ಸಾಧನಗಳು ಮತ್ತು ಕಂಪ್ಯೂಟರ್‌ಗಳು / ಲ್ಯಾಪ್‌ಟಾಪ್‌ಗಳನ್ನು ರಕ್ಷಿಸಲು ಕ್ರಮಗಳು
• ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ತಪ್ಪಿಸಬೇಕಾದ ತಪ್ಪುಗಳು

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ‘ಡೀಪ್ ಫೇಕ್’ ತಂತ್ರಜ್ಞಾನದಿಂದ ಸೆಕ್ಸ್‌ಟಾರ್ಷನ್

ಈ ಕೋರ್ಸನ್ನು ಯಶಸ್ವಿಯಾಗಿ ಮುಗಿಸಲು ಮೇಲೆ ತಿಳಿಸಿದ ವಿಷಯಗಳಲ್ಲಿ ಆಯ್ದ ಕೆಲವು ವಿಷಯಗಳ ಕುರಿತು ಅಸೈನ್‌ಮೆಂಟ್‌ಗಳನ್ನು ಪೂರ್ಣಗೊಳಿಸಬೇಕು. ಆಗ ನಿಮಗೆ ISACನಿಂದ ಸಿಸಿಐಒ ಸರ್ಟಿಫಿಕೇಟ್ ದೊರೆಯುತ್ತದೆ ಮತ್ತು ರಾಷ್ಟ್ರೀಯ ಭದ್ರತಾ ಡಾಟಾಬೇಸ್‌ನಲ್ಲಿ ನೊಂದಣಿ ಆಗುತ್ತದೆ. ಜೊತೆಗೆ ISACಯ ಕಾಪ್‌ಕನೆಕ್ಟ್ ಎನ್ನುವ ಆ್ಯಪ್‌ ಮುಖಾಂತರ ನಿಮ್ಮ ಸೇವೆಯ ಕುರಿತು ಅಧಿಕೃತವಾಗಿ ತಿಳಿಸಬಹದು.
ಕಾಪ್‌ಕನೆಕ್ಟ್ ಆ್ಯಪನ್ನು ಯಾರು ಬೇಕಾದರೂ https://copconnect.app/ ಲಿಂಕಿನ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದು IOS ಮತ್ತು ಆಂಡ್ರಾಯಿಡ್‌ ಫೋನುಗಳಿಗೂ ಲಭ್ಯವಿದೆ. ಈ ಆ್ಯಪ್ ಬಳಸಿ ನಿಮಗೇನಾದರೂ ಸೈಬರ್ ಲೋಕದಲ್ಲಿ ಅಪಘಾತವಾದರೆ ಪ್ರಥಮಚಿಕಿತ್ಸಕರನ್ನು ಸಂಪರ್ಕಿಸಬಹುದು.

ಕಾಪ್‌ಕನೆಕ್ಟ್ ಪ್ಲಾಟ್‌ಫಾರ್ಮ್ ವಿಶ್ವದ ಪ್ರತಿಯೊಬ್ಬ ಸೈಬರ್ ಕ್ರೈಮ್ ಸಂತ್ರಸ್ತರಿಗೆ ವಿಷಯ ತಜ್ಞರ ವಿಶಿಷ್ಟ ಪರಿಸರ ವ್ಯವಸ್ಥೆಯೊಂದಿಗೆ ಸಹಾಯವನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ ಮತ್ತು ದೇಶದಲ್ಲಿ ಸೈಬರ್ ಅಪರಾಧಗಳ ಮಟ್ಟವನ್ನು ಕಡಿಮೆ ಮಾಡುವತ್ತ ತನ್ನ ಪ್ರಯತ್ನ ಮಾಡುತ್ತಿದೆ. ಇದರ ಸಹಾಯದಿಂದ ಶೇಕಡ 90ರಷ್ಟು ವಿಕ್ಟಿಮ್‌ಗಳು ತಮ್ಮ ಹ್ಯಾಕ್ ಮಾಡಿದ ಹಣವನ್ನು ಎರಡು ವಾರಗಳಲ್ಲಿ ಹಿಂಪಡೆದಿದ್ದಾರೆ.

ಅಂತರಾಷ್ಟ್ರೀಯ ಸೈಬರ್ ಸುರಕ್ಷತಾ ಅರಿವು ಮೂಡಿಸುವ ಮಾಸವಾದ ಅಕ್ಟೋಬರ್ ತಿಂಗಳಲ್ಲಿ ನನಗೆ ಈ ಕೋರ್ಸ್ ಮಾಡುವ ಅವಕಾಶ ಆಕಸ್ಮಿಕವಾಗಿ ಸಿಕ್ಕಿ ನಾನೂ ಈಗ ಒಬ್ಬ ಸಿಸಿಐಒ ಆಗಿ ಸೈಬರ್ ಅಪರಾಧಗಳ ಸಂದರ್ಭದಲ್ಲಿ ಮೊದಲ ಪ್ರತಿಸ್ಪಂದಕನಾಗಿದ್ದೇನೆ ಎಂದು ತಿಳಿಸಲು ಬಯಸುತ್ತೇನೆ.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಸೈಬರ್ ಜಗತ್ತಿನ ಕರಾಳ ದಂಧೆ: ಸೆಕ್ಸ್‌ಟಾರ್ಷನ್

Exit mobile version