Site icon Vistara News

ಸೈಬರ್‌ ಸೇಫ್ಟಿ ಅಂಕಣ: ಇ-ಸಿಮ್ ಮೇಲಿನ ದಾಳಿಯಲ್ಲಿ ಫೋನ್ ಸಂಖ್ಯೆಗಳ ಹೈಜಾಕ್

esim cyber safety column

ಸೈಬರ್‌ ಸೇಫ್ಟಿ ಅಂಕಣ: ಇ-ಸಿಮ್‌ ಅಂದರೆ ಇದ್ಯಾವ ಸಿಮ್‌ ಅಂತೀರಾ? ಇ-ಸಿಮ್‌(eSIM) ಎನ್ನುವುದು ಉದ್ಯಮ-ಪ್ರಮಾಣಿತ ಡಿಜಿಟಲ್ ಸಿಮ್ (dijital sim) ಆಗಿದ್ದು ಅದು ಭೌತಿಕ ಸಿಮ್ ಅನ್ನು ಬಳಸದೆಯೇ ನಿಮ್ಮ ನೆಟ್‌ವರ್ಕ್ ಪೂರೈಕೆದಾರರಿಂದ ಮೊಬೈಲ್ ಯೋಜನೆಯನ್ನು ಸಕ್ರಿಯಗೊಳಿಸಲು ನಿಮಗೆ ಅನುಮತಿಸುತ್ತದೆ. ಎಂಬೆಡೆಡ್ ಸಬ್‌ಸ್ಕ್ರೈಬರ್ ಐಡೆಂಟಿಟಿ ಮಾಡ್ಯೂಲ್‌ಗಳು (eSIMಗಳು) ಮೊಬೈಲ್ ಸಾಧನದ ಚಿಪ್‌ನಲ್ಲಿ ಸಂಗ್ರಹಿಸಲಾದ ಡಿಜಿಟಲ್ ಕಾರ್ಡ್‌ಗಳಾಗಿವೆ ಮತ್ತು ಭೌತಿಕ SIM ಕಾರ್ಡ್‌ನಂತೆಯೇ ಅದೇ ಪಾತ್ರ ಮತ್ತು ಉದ್ದೇಶವನ್ನು ಪೂರೈಸುತ್ತವೆ. ಆದರೆ ಇವುಗಳನ್ನು ಹೊರಗಿನಿಂದ (ರಿಮೋಟ್‌) ರಿಪ್ರೊಗ್ರಾಮ್ ಮಾಡಬಹುದು, ನಿಷ್ಕ್ರಿಯಗೊಳಿಸಬಹುದು, ಬದಲಾಯಿಸಬಹುದು, ಅಳಿಸಬಹುದು. ಇದನ್ನು ಬಳಸಿದರೆ ನಿಮ್ಮ ಮೊಬೈಲ್‌ ಸಾಧನವನ್ನು ಬದಲಾಯಿಸುವುದು ಸರಳವಾಗಿರುವುದಿಲ್ಲ.

ಎಲ್ಲಾ ಪ್ರಮುಖ ಮೊಬೈಲ್ ಸಾಧನ ತಯಾರಕರು eSIM ಫೋನ್‌ಗಳನ್ನು ಹೊಂದಿದ್ದಾರೆ, ಆದರೆ ಇದು ಹೊಸ ತಂತ್ರಜ್ಞಾನವಾಗಿರುವುದರಿಂದ ಎಲ್ಲಾ ಮಾದರಿಗಳು eSIMಗೆ ಹೊಂದಿಕೆಯಾಗುವುದಿಲ್ಲ. ಆಪಲ್‌ ಐಫೋನ್‌ ಸೇರಿದಂತೆ ಐಫೋನ್‌ XS ಮತ್ತು ಗೂಗಲ್‌ ಪಿಕ್ಸೆಲ್‌ ಸಾಧನಗಳು, ಮೊಟೊರೋಲಾ Razr 5G ಮತ್ತು ಸ್ಯಾಮ್‌ಸಂಗ್‌ Galaxy ಸಾಧನಗಳಲ್ಲಿ eSIM ಅನ್ನು ಬಳಸಬಹುದಾಗಿದೆ. ನೀವು iPhone ನಲ್ಲಿ ಎಂಟು ಅಥವಾ ಹೆಚ್ಚಿನ eSIM ಗಳನ್ನು ಸ್ಥಾಪಿಸಬಹುದು ಮತ್ತು ಒಂದೇ ಸಮಯದಲ್ಲಿ ಎರಡು ಫೋನ್ ಸಂಖ್ಯೆಗಳನ್ನು ಬಳಸಬಹುದು. ಎರಡು ಸಿಮ್‌ಗಳನ್ನು ಬಳಸುವ ಅವಕಾಶ iPhone ಬಳಕೆದಾರರಿಗಿಲ್ಲದಿರುವುದರಿಂದ ಅವರಲ್ಲಿ ಇ-ಸಿಮ್‌ ಬಳಕೆ ಹೆಚ್ಬಾಗಿ ಕಂಡುಬರುತ್ತದೆ.

ನೀವು eSIM ಅನ್ನು ಬಳಸುತ್ತಿದ್ದರೆ ಮತ್ತು ನೀವು ಫೋನ್‌ಗಳನ್ನು ಬದಲಾಯಿಸಬೇಕಾದರೆ, ನಿಮ್ಮ eSIM ಅನ್ನು ಹೇಗೆ ವರ್ಗಾಯಿಸುವುದು ಎಂದು ವಿಚಾರಿಸಲು ನಿಮ್ಮ ಸ್ಥಳೀಯ ಪೂರೈಕೆದಾರರನ್ನು ಸಂಪರ್ಕಿಸಬೇಕಾಗುತ್ತದೆ. ಆಂಡ್ರಾಯ್ಡ್ ಮತ್ತು iOS ಇ-ಸಿಮ್‌ ವರ್ಗಾವಣೆ ಪರಿಕರಗಳನ್ನು ಹೊಂದಿದ್ದರೂ, ಎಲ್ಲಾ ವಾಹಕರೂ eSIM ವರ್ಗಾವಣೆಯನ್ನು ಅನುಮತಿಸುವುದಿಲ್ಲ. ಸೇವೆ ಒದಗಿಸುವವರಿಂದ QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಬೆಂಬಲಿಸುವ ಸಾಧನಕ್ಕೆ ಬಳಕೆದಾರರು eSIM ಅನ್ನು ಸೇರಿಸಬಹುದು.

ಈ ತಂತ್ರಜ್ಞಾನವು ಸ್ಮಾರ್ಟ್‌ಫೋನ್ ತಯಾರಕರಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ. ಏಕೆಂದರೆ eSIMಗಳು SIM ಕಾರ್ಡ್ ಸ್ಲಾಟ್‌ನ ಅಗತ್ಯವನ್ನು ನಿವಾರಿಸುತ್ತದೆ ಮತ್ತು ಸಣ್ಣ ಧರಿಸಬಹುದಾದ (wearable) ಸಾಧನಗಳಲ್ಲಿಯೂ ಸೆಲ್ಯುಲಾರ್ ಸಂಪರ್ಕವನ್ನು ನೀಡಬಹುದು.

ಹೊಸ ತಂತ್ರಜ್ಞಾನ ಬಳಕೆಗೆ ಬರುತ್ತಿದ್ದಂತೆ ಅದನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲು ಸೈಬರ್‌ ಕ್ರಿಮಿನಲ್‌ಗಳು ಕುತಂತ್ರ ಮಾಡಿರುತ್ತಾರೆ. ಹೊಸ eSIM ಕಾರ್ಡ್‌ಗೆ ಬದಲಿಸುವಾಗ (ಪೋರ್ಟ್) ಮಾಡುವಾಗ ನಿಮ್ಮ ಫೋನ್ ಸಂಖ್ಯೆಯನ್ನು ಕದಿಯಲು ಸಿಮ್ ಸ್ವ್ಯಾಪರ್‌ಗಳು ಕಾಯುತ್ತಿರುತ್ತಾರೆ.

ರಷ್ಯಾದ ಸೈಬರ್‌ ಸೆಕ್ಯುರಿಟಿ ಸಂಸ್ಥೆ F.A.C.C.T. ದೇಶ ಮತ್ತು ಪ್ರಪಂಚದಾದ್ಯಂತದ ಸಿಮ್ ಸ್ವ್ಯಾಪರ್‌ಗಳು ಫೋನ್ ಸಂಖ್ಯೆಗಳನ್ನು ಹೈಜಾಕ್ ಮಾಡಲು ಮತ್ತು ಬ್ಯಾಂಕ್ ಖಾತೆಗಳನ್ನು ಪ್ರವೇಶಿಸಲು, ರಕ್ಷಣೆಗಳನ್ನು ಬೈಪಾಸ್ ಮಾಡಲು ಈ ಬದಲಾವಣೆಯ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ವರದಿ ಮಾಡಿದೆ. F.A.C.C.T. ಯ ರಕ್ಷಣೆಯ ವಿಶ್ಲೇಷಕರು ಕೇವಲ ಒಂದು ಹಣಕಾಸು ಸಂಸ್ಥೆಯ ಆನ್‌ಲೈನ್ ಸೇವೆ ಬಳಸುವ ಗ್ರಾಹಕರ ವೈಯಕ್ತಿಕ ಖಾತೆಗಳನ್ನು ಪ್ರವೇಶಿಸಲು ನೂರಕ್ಕೂ ಹೆಚ್ಚು ಪ್ರಯತ್ನಗಳನ್ನು ದಾಖಲಿಸಿದ್ದಾರೆ ಎಂದು ತಿಳಿಸಿದೆ. ಮೊಬೈಲ್ ಸಂಖ್ಯೆಯೊಳಗೆ ಪ್ರವೇಶಿಸಲು, ಅಪರಾಧಿಗಳು ಡಿಜಿಟಲ್ ಸಿಮ್ ಕಾರ್ಡ್ ಅನ್ನು ಬದಲಿಸುವ ಅಥವಾ ಮರುಸ್ಥಾಪಿಸುವ ಕಾರ್ಯವನ್ನು ಉಪಯೋಗಿಸುತ್ತಾರೆ. ಹಿಂದೆ, SIM ಸ್ವ್ಯಾಪರ್‌ಗಳು ದಾಳಿ ಮಾಡಲು ಸೋಷಿಯಲ್‌ ಇಂಜಿನಿಯರಿಂಗ್‌ನ ವಿವಿಧ ತಂತ್ರಗಳನ್ನು ಬಳಸುತ್ತಿದ್ದರು. ವಿಕ್ಟಿಮ್‌ನ ಸಂಖ್ಯೆಯನ್ನು ಪೋರ್ಟ್ ಮಾಡಲು ಸಹಾಯ ಮಾಡುವ ಮೊಬೈಲ್ ಕ್ಯಾರಿಯರ್ ಸೇವೆಗಳಲ್ಲಿ ಕೆಲಸ ಮಾಡುತ್ತಿರುವವರ ಸಹಕಾರದೊಂದಿಗೆ ತಮ್ಮ ತಂತ್ರಗಳನ್ನು ಕಾರ್ಯರೂಪಕ್ಕೆ ತರುತ್ತಿದ್ದರು. ಈ ಕುತಂತ್ರವನ್ನು ತಡೆಯಲು ಕಂಪನಿಗಳು ಹೆಚ್ಚಿನ ರಕ್ಷಣೆಗಳನ್ನು ಜಾರಿಗೆ ತಂದಿದ್ದರಿಂದ, ಸೈಬರ್ ಅಪರಾಧಿಗಳು ಹೊಸ ತಂತ್ರಜ್ಞಾನಗಳನ್ನು ಬಳಸುವ ಅವಕಾಶಗಳತ್ತ ತಮ್ಮ ಗಮನವನ್ನು ಹರಿಸಿದರು.

ಈಗ, ಆಕ್ರಮಣಕಾರರು ಕದ್ದ, ವಿವೇಚನಾರಹಿತವಾಗಿ ಬಳಸಿದ ಅಥವಾ ಸೋರಿಕೆಯಾದ ರುಜುವಾತುಗಳೊಂದಿಗೆ ಬಳಕೆದಾರರ ಮೊಬೈಲ್ ಖಾತೆಯನ್ನು ಬಳಸುತ್ತಾರೆ. ಬಲಿಪಶುವಿನ ಸಂಖ್ಯೆಯನ್ನು ತಮ್ಮದೇ ಆದ ಮತ್ತೊಂದು ಸಾಧನಕ್ಕೆ ಪೋರ್ಟ್ ಮಾಡಲು ಪ್ರಾರಂಭಿಸುತ್ತಾರೆ. ಹೊಸ eSIM ಅನ್ನು ಸಕ್ರಿಯಗೊಳಿಸಲು ಬಳಸಬಹುದಾದ ಮೊಬೈಲ್ ಖಾತೆಯನ್ನು ಹೈಜಾಕ್‌ಮಾಡಿ QR ಕೋಡ್ ಅನ್ನು ಪಡೆಯುತ್ತಾರೆ. ನಂತರ ಅವರು ಅದನ್ನು ತಮ್ಮ ಸಾಧನದೊಂದಿಗೆ ಸ್ಕ್ಯಾನ್ ಮಾಡುತ್ತಾರೆ. ಆಗ ಸಂಖ್ಯೆಯು ಹೈಜಾಕ್ ಆಗುತ್ತದೆ. ಸಂತ್ರಸ್ತರ ಮೊಬೈಲ್ ಫೋನ್ ಸಂಖ್ಯೆಗೆ ಪ್ರವೇಶವನ್ನು ಪಡೆದ ನಂತರ, ಸೈಬರ್ ಅಪರಾಧಿಗಳು ಬ್ಯಾಂಕ್‌ಗಳು ಮತ್ತು ಮೆಸೆಂಜರ್‌ಗಳು ಸೇರಿದಂತೆ ವಿವಿಧ ಸೇವೆಗಳಿಗೆ ಪ್ರವೇಶ ಕೋಡ್‌ಗಳು ಮತ್ತು ಎರಡು ಅಂಶಗಳ ದೃಢೀಕರಣವನ್ನು (2-Factor Authentication) ಪಡೆಯಬಹುದು. ಅಪರಾಧಿಗಳಿಗೆ ಮೋಸದ ಯೋಜನೆಗಳನ್ನು ಜಾರಿಗೆ ತರಲು ಹೆಚ್ಚಿನ ಅವಕಾಶಗಳನ್ನು ಕೊಡುತ್ತದೆ. ಯೋಜನೆಯಲ್ಲಿ ವಿವಿಧ ಮಾರ್ಪಾಡುಗಳಿವೆ ಆದರೆ ವಂಚಕರು ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ ಎಂದು ಎಫ್‌ಎಸಿಸಿಟಿ ವಿಶ್ಲೇಷಕ ಡಿಮಿಟ್ರಿ ಡುಡ್ಕೋವ್ ವಿವರಿಸಿದ್ದಾರೆ.

ದಾಳಿಕೋರರಿಗೆ ಒಂದು ಬೋನಸ್ ಏನೆಂದರೆ, ಸಂಖ್ಯೆಯನ್ನು ತಮ್ಮ ಸಾಧನಕ್ಕೆ ಪೋರ್ಟ್ ಮಾಡುವ ಮೂಲಕ, ಅವರು ವಿವಿಧ ಮೆಸೆಂಜರ್ ಅಪ್ಲಿಕೇಶನ್‌ಗಳಲ್ಲಿ ಸಿಮ್-ಸಂಪರ್ಕಿತ ಖಾತೆಗಳಿಗೆ ಪ್ರವೇಶವನ್ನು ಪಡೆಯುತ್ತಾರೆ. ನಂತರ ಬಲಿಪಶುವಿನಂತೆ ನಟಿಸಿ ಅವರ ಬಂಧುಮಿತ್ರರಿಗೆ ಹಣವನ್ನು ಕಳುಹಿಸುವಂತೆ ಮೋಸದ ಸಂದೇಶಗಳನ್ನು ಕಳುಹಿಸಬಹುದು. ವಿಕ್ಟಿಮ್‌ನ ಬ್ಯಾಂಕ್‌ಖಾತೆಗಳನ್ನೂ ಬಳಸಬಹುದು. eSIM-ಸ್ವಾಪಿಂಗ್ ದಾಳಿಯ ವಿರುದ್ಧ ರಕ್ಷಿಸಲು, ಸಂಶೋಧಕರು ಮೊಬೈಲ್‌ ಸೇವಾ ಪೂರೈಕೆದಾರರ ಖಾತೆಗೆ ಸಂಕೀರ್ಣ ಮತ್ತು ಅನನ್ಯ ಪಾಸ್‌ವರ್ಡ್‌ಗಳನ್ನು ಬಳಸಲು ಶಿಫಾರಸು ಮಾಡುತ್ತಾರೆ. ಜೊತೆಗೆ ಎರಡು ಅಂಶದ ದೃಢೀಕರಣವನ್ನು ಸಕ್ರಿಯಗೊಳಿಸುವಂತೆ ತಿಳಿಸುತ್ತಾರೆ.

ಯಾವುದೇ ಹೊಸ ತಂತ್ರಜ್ಞಾನವನ್ನು ಬಳಸುವಾಗ ಅದರ ಸಾಧಕ ಬಾಧಕಗಳ ಬಗ್ಗೆ ಸರಿಯಾಗಿ ತಿಳಿದು ಮುಂದುವರಿಯುವುದು ಒಳ್ಳೆಯದು. ಸೈಬರ್‌ ಲೋಕದಲ್ಲಿ ಆತುರ ತೋರದೆ, ಆಮಿಷಕ್ಕೆ ಒಳಗಾಗದೆ ಜಾಗರೂಕರಾಗಿರಿ. ಯಾವುದೇ ಸಂಚಿಗೆ ಸಿಲುಕಿದರೆ 1930 ಕ್ಕೆ ಕರೆ ಮಾಡಿ ನಿಮ್ಮ ದೂರು ದಾಖಲಿಸಲು ಮರೆಯಬೇಡಿ.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಅಂತರ್ಜಾಲದಲ್ಲಿ ವಿದ್ಯಾರ್ಥಿಗಳನ್ನು ಸೆಳೆಯುತ್ತಿರುವ ಬ್ಲ್ಯಾಕ್‌ಹೋಲ್?

Exit mobile version