Site icon Vistara News

ಸೈಬರ್‌ ಸೇಫ್ಟಿ ಅಂಕಣ: ‘ಡೀಪ್ ಫೇಕ್’ ತಂತ್ರಜ್ಞಾನದಿಂದ ಸೆಕ್ಸ್‌ಟಾರ್ಷನ್

sextortion

ಸಾಮಾಜಿಕ ಜಾಲತಾಣಗಳಲ್ಲಿ (social media) ಹಂಚಿಕೊಳ್ಳುವ ನಮ್ಮ ಫೋಟೊ, ವೀಡಿಯೊಗಳನ್ನು ಕ್ರಿಮಿನಲ್‌ಗಳು ವಿರೂಪಗೊಳಿಸಿ ದುರುಪಯೋಗಿಸುವ ಬಗ್ಗೆ ಕಳೆದೆರಡು ವಾರ ಓದಿರಬಹುದು. ಜೊತೆಗೆ ನೀವು ಹಂಚಿಕೊಳ್ಳುವುದನ್ನು ಯಾರೆಲ್ಲಾ ನೋಡಬಹುದು ಎಂದು ನಿಯಂತ್ರಿಸುವುದೂ ನಿಮ್ಮ ಕೈಯಲ್ಲಿಯೇ ಇರುವ ಬಗ್ಗೆಯೂ ತಿಳಿಸಿದ್ದೆ. ಹಾಗೆ ಎಲ್ಲರೂ ನಿಮ್ಮ ಫೇಸ್‌ಬುಕ್, ಇನ್ಸ್‌ಟಾಗ್ರಾಂ ಖಾತೆಗಳನ್ನು ಭದ್ರಗೊಳಿಸಿಕೊಂಡಿದ್ದೀರಾ? ನಿಮ್ಮ ಸಂತೋಷದ ಕ್ಷಣಗಳನ್ನು ನೆನಪಿಸಲು ಇರುವ ಫೋಟೊ ಮತ್ತು ವೀಡಿಯೊಗಳು ನಿಮಗೆ ದುಃಸ್ವಪ್ನವಾಗಿ ಕಾಡಬಾರದಲ್ವಾ?

ಈಗಂತೂ ತಂತ್ರಜ್ಞಾನದ ದಾಪುಗಾಲಿನ ಓಟದಿಂದಾಗಿ ಎಲ್ಲಾಕಡೆ ಅನುಕ್ಷಣವೂ ಹೊಸತನ. ನಾವು ವ್ಯವಹರಿಸುವ ರೀತಿಯಿರಬಹದು, ಸಂವಹಿಸುವ ವಿಧಾನವಿರಬಹುದು. ಎಲ್ಲಾ ಬದಲಾಗುತ್ತಲೇ ಇದೆ. ಬದಲಾವಣೆ ಜಗದ ನಿಯಮ. ಆದರೆ ಸೈಬರ್‌ ಲೋಕದಲ್ಲಂತೂ ಬದಲಾವಣೆಯೇ ನಿತ್ಯ, ನಿರಂತರ. ಹಾಗೆಯೇ ಸೈಬರ್ ಕ್ರೈಮ್‌ಗಳೂ (cyber crime) ದಿನದಿಂದ ದಿನಕ್ಕೆ ಹೆಚ್ಚಿನ ಮಜಲಿಗೆ ಹೋಗುತ್ತಿವೆ.

ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ಧದ ಸಮಯದಲ್ಲಿ, ಸೈಬರ್ ಅಪರಾಧಿಗಳು ಉಕ್ರೇನಿಯನ್ ಟೆಲಿವಿಷನ್ ಚಾನೆಲ್ ಅನ್ನು ಹ್ಯಾಕ್ ಮಾಡಿದರು ಮತ್ತು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಶರಣಾಗುವುದನ್ನು ತೋರಿಸಿದರು. ಡೀಪ್ ಫೇಕ್ (Deep fake) ತಂತ್ರಜ್ಞಾನವನ್ನು ಬಳಸಿಕೊಂಡು ನಕಲಿ ವಿಡಿಯೋವನ್ನು ರಚಿಸಲಾಗಿದೆ.

ಕೆಲವು ವರ್ಷಗಳ ಹಿಂದೆ, ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಮನೋಜ್ ತಿವಾರಿ ಹರ್ಯಾನ್ವಿ, ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತನಾಡುವ ಆಳವಾದ ನಕಲಿ ವೀಡಿಯೊವನ್ನು ರಚಿಸಲಾಗಿದೆ ಎಂದು ವರದಿಯಾಗಿದೆ. 2020ರಲ್ಲಿ ದೆಹಲಿಯಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಮುನ್ನ ಈ ವಿಡಿಯೋವನ್ನು ವಿವಿಧ ವಾಟ್ಸಾಪ್ ಗ್ರೂಪ್‌ಗಳ ಮೂಲಕ ಪ್ರಸಾರ ಮಾಡಲಾಗಿತ್ತು.

ಕಳೆದ ವಾರ ನೀವೂ ಗಮನಿಸಿರಬಹುದು. ವಿವಿಧ ಆಂಗ್ಲ ಭಾಷಾ ದಿನಪತ್ರಿಕೆಗಳಲ್ಲಿ ರಾರಾಜಿಸಿದ ಶೀರ್ಷಿಕೆ: ಉತ್ತರಪ್ರದೇಶದಲ್ಲಿ ಸೆಕ್ಸ್‌ಟಾರ್ಷನಿಸ್ಟ್‌ಗಳು (Sextortion) ನಿವೃತ್ತ ಐಪಿಎಸ್ ಅಧಿಕಾರಿಯ ಡೀಪ್‌ಫೇಕ್ ಅನ್ನು ಬಳಸಿ ಹಿರಿಯ ನಾಗರಿಕರನ್ನು ವಂಚಿಸಿದ ಪ್ರಕರಣ.

ಮೊದಲಿಗೆ ಈ ಸೆಕ್ಸ್‌ಟಾರ್ಷನಿಸ್ಟ್‌ಗಳೆಂದರೆ ಯಾರು ಅಂತ ತಿಳಿಯೋಣ. ಯಾರೊಬ್ಬರ ಖಾಸಗಿ ಲೈಂಗಿಕ ವಿಷಯವನ್ನು ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕುವ ಮೂಲಕ ಹಣವನ್ನು ಸುಲಿಗೆ ಮಾಡುವವರನ್ನು ಸೆಕ್ಸ್‌ಟಾರ್ಷನಿಸ್ಟ್‌ ಎನ್ನುತ್ತಾರೆ. ಈ ಅಪರಾಧಿಗಳ ಏಕಮಾತ್ರ ಗುರಿ ಸುಲಭವಾಗಿ “ಹಣ” ಮಾಡುವುದು. ಅವರು ನಿಮ್ಮ ಸಾಮಾಜಿಕ ಜೀವನವನ್ನೇ ಬುಡಮೇಲು ಮಾಡುವ ಬೆದರಿಕೆಗಳನ್ನು ಒಡ್ದಿದಾಗ ನೀವು ಅವರ ಎಲ್ಲಾ ಬೇಡಿಕೆಗಳನ್ನು ಒಪ್ಪಿ ಹಣ ಕೊಡುತ್ತೀರಿ. ಇದು ಕೂಡ ಒಂದು ರೀತಿಯ ಲೈಂಗಿಕ ದೌರ್ಜನ್ಯ. ಭೌತಿಕವಾಗಿಯಲ್ಲದಿದ್ದರೂ ಮಾನಸಿಕವಾಗಿ ನೀವು ದೌರ್ಜನ್ಯಕ್ಕೆ ಒಳಗಾದವರ ಹಾಗೆ ಕ್ಷೋಭೆಗೊಳಗಾಗುತ್ತೀರಿ.‌

ಒಮ್ಮೆ ನೀವು ಅವರಿಗೆ ಹೆದರಿ ಹಣ ಕೊಟ್ಟರೆ ಮುಗೀತು. ನಿಮ್ಮ ಮೈಗೆ ಹತ್ತಿ ಅಂಟಿಕೊಂಡ ಜಿಗಣೆಯಂತೆ ನಿಮ್ಮಿಂದ ಹಣ ಹೀರುತ್ತಲೇ ಇರುತ್ತಾರೆ. ಅವರ ಬಳಿ ಇರುವ ನಿಮ್ಮ ರಹಸ್ಯ ಬಯಲಾಗುವ ಭಯದಿಂದ ನೀವು ಅವರ ಬಲೆಯಿಂದ ಹೊರಬರಲಾರದೆ ನರಳುತ್ತೀರಿ.

ಈಗ ಪ್ರಕರಣಕ್ಕೆ ಬರೋಣ. ಬಲೆಗೆ ಬಿದ್ದ ಹಿರಿಯ ನಾಗರೀಕರ ಸೆಕ್ಸ್‌ನಲ್ಲಿ ನಿರತರಾಗಿರುವಂತಿರುವ ಚಿತ್ರವನ್ನು ಬಳಸಿ
ಪೊಲೀಸ್ ಅಧಿಕಾರಿಯಂತೆ ಮಾತಾಡಿ ಕಾನೂನು ಕ್ರಮಗಳ ಬಗ್ಗೆ ಹೆದರಿಸಿದ್ದಾರೆ. ಪಾಪ, ವೃದ್ಧರು ತಮ್ಮ ಚಿತ್ರವೇ ಅಲ್ಲದಿದ್ದರೂ ಮರ್ಯಾದೆಗೆ ಅಂಜಿದರು ಜೊತೆಗೆ ಮಾತಾಡಿದವರು ನಿಜವಾದ ಪೋಲೀಸ್ ಅಧಿಕಾರಿಯೇ ಎಂದು ನಂಬಿದರು. ಅವರು ಕೇಳಿದ ಹಣವನ್ನು ಹೇಳಿದ ಹಾಗೆ ಹಲವು ಬಾರಿ ಪಾವತಿಸಿದರು. ನಿಜವಾದ ಪೊಲೀಸ್ ಅಧಿಕಾರಿಗಳು ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಡೀಪ್‌ಫೇಕ್ ತಂತ್ರಜ್ಞಾನದ ನೆರವಿನಿಂದ ಸೈಬರ್ ವಂಚನೆಯು ಅಪಾಯಕಾರಿ ಹೊಸ ಆಯಾಮವನ್ನು ಪಡೆದುಕೊಂಡಿರುವುದನ್ನು ಈ ಪ್ರಕರಣವು ಗುರುತಿಸುತ್ತದೆ. ಡೀಪ್‌ಫೇಕ್ ತಂತ್ರಜ್ಞಾನ ಸುಧಾರಿತ ಆಳವಾದ ಕಲಿಕೆಯ (advanced deep learning) ತಂತ್ರಗಳನ್ನು ಬಳಸಿಕೊಂಡು ಆಡಿಯೋ, ವಿಡಿಯೋ ಮತ್ತು ಚಿತ್ರಗಳನ್ನು ಬದಲಿಸುವ ಡಿಜಿಟಲ್ ಕುಶಲತೆಯನ್ನು ಸೂಚಿಸುತ್ತದೆ. ಅದಕ್ಕೆ ನಿಮ್ಮ ಫೊಟೋ, ವಿಡಿಯೋಗಳು ಯಾರು ನೋಡಬಹುದು ಎಂದು ಸರಿಯಾಗಿ ಭದ್ರ ಮಾಡಿಕೊಳ್ಳಿ ಅಂತ ಕಳೆದೆರಡು ವಾರಗಳಿಂದ ಹೇಳ್ತಿರೋದು.

Rashmika Mandanna Deepfake Video Goes Viral

ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಡೀಪ್‌ಫೇಕ್‌ಗಳು ಮತ್ತು ತಪ್ಪು ಮಾಹಿತಿಗಳ ಪ್ರಸರಣವನ್ನು ಎದುರಿಸಲು ನಿಯಮಾವಳಿಗಳನ್ನು ರೂಪಿಸುವ ಸರ್ಕಾರದ ಉದ್ದೇಶವನ್ನು ಘೋಷಿಸಿದ ಸಮಯದಲ್ಲಿ ಈ ಘಟನೆ ನಡೆದಿದೆ. ನಟಿ ರಶ್ಮಿಕಾ ಮಂದಣ್ಣ ಒಳಗೊಂಡ ಡೀಪ್‌ಫೇಕ್ ವೀಡಿಯೊ ಪ್ರಸಾರವಾದ ನಂತರ ಸಚಿವರು ಇತ್ತೀಚೆಗೆ ಸಾಮಾಜಿಕ ಮಾಧ್ಯಮ ಕಂಪನಿಗಳ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದರು.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಫೋಟೊಗಳು, ಸೆಲ್ಫಿಗಳು, ಮತ್ತು ರೀಲ್ಸ್‌ಗಳ ನಿಯಂತ್ರಣ

ಕಳೆದ ತಿಂಗಳ ಆರಂಭದಲ್ಲಿ ಜಿ20 ರಾಷ್ಟ್ರಗಳ ವರ್ಚುವಲ್ ಶೃಂಗಸಭೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ‘ಕೃತಕ ಬುದ್ಧಿಮತ್ತೆಯ (Artificial Intelligence/AI) ಋಣಾತ್ಮಕ ಪರಿಣಾಮಗಳ’ ಬಗ್ಗೆ ಗಮನ ಸೆಳೆದರು ಮತ್ತು ಕೃತಕ ಬುದ್ಧಿಮತ್ತೆಯ ಸುರಕ್ಷಿತ ನಿಯೋಜನೆಯನ್ನು ಖಚಿತಪಡಿಸಿಕೊಳ್ಳಲು ಜಾಗತಿಕ ನಿಯಂತ್ರಣಗಳನ್ನು ಬೆಳೆಸುವ ಭಾರತದ ಬದ್ಧತೆಯ ಬಗ್ಗೆ ಹೇಳಿದ್ದರು. ಸಮಾಜವನ್ನು ಅದರ ಸಂಭಾವ್ಯ ಅಪಾಯಗಳಿಂದ ರಕ್ಷಿಸುವ ಜೊತೆಗೆ ಕೃತಕ ಬುದ್ಧಿಮತ್ತೆಯ ಉಪಯೋಗವೂ ಜನಸಾಮಾನ್ಯರಿಗೆ ದೊರಕಬೇಕು ಎಂದು ಹೇಳಿದ್ದರು.

ಇತ್ತೀಚೆಗೆ ನಮ್ಮ ಅಧ್ಯಕ್ಷೆ ದ್ರೌಪದಿ ಮುರ್ಮು ಅವರು ಕೂಡ ‘ಡೀಪ್ ಫೇಕ್ ಸಮಸ್ಯೆ’ ಯ ಬಗ್ಗೆ ಮಾತಾಡುತ್ತಾ ಪೊಲೀಸರು ತಮ್ಮ ತಂತ್ರಜ್ಞಾನವನ್ನು ನವೀಕರಿಸಿಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ. ವಿಶ್ವದಾದ್ಯಂತ ಎಲ್ಲಾ ನಾಯಕರೂ ಹೊಸ ತಂತ್ರಜ್ಞಾನದಿಂದ ಶುರುವಾದ ತೊಂದರೆಯನ್ನು ಬಗೆಹರಿಸಲು ಒತ್ತು ಕೊಡ್ತಿದ್ದಾರೆ. ಆದರೆ ಯಾರೂ ಆ ತಂತ್ರಜ್ಞಾನವನ್ನೇ ಕೈಬಿಡುವ ಮಾತು ಆಡ್ತಿಲ್ಲ ಎನ್ನುವುದು ಮುಂದಿನ ದಾರಿಯ ಬಗ್ಗೆ ಬರವಸೆ ಮೂಡಿಸುತ್ತದೆ. ತಂತ್ರಜ್ಞಾನದ ದುರುಪಯೋಗವನ್ನು ನಿಯಂತ್ರಿಸಲು ಆಗಲಿಲ್ಲ ಆಂತ ಅದರ ಉಪಯೋಗವನ್ನೇ ನಿಲ್ಲಿಸುವುದು ನೆಗಡಿ ಜಾಸ್ತಿಯಾಯಿತು ಅಂತ ಮೂಗು ಕೊಯ್ಯಿದುಕೊಂಡಂತೆ ಅಲ್ಲವೇ?

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ನಿಮ್ಮ ಸೋಶಿಯಲ್‌ ಮೀಡಿಯಾದಿಂದಲೇ ನಿಮ್ಮ ಸುರಕ್ಷತೆಗೆ ಅಪಾಯ!

Exit mobile version