Site icon Vistara News

ಸೈಬರ್‌ ಸೇಫ್ಟಿ ಅಂಕಣ: ಸೈಬರ್ ಜಗತ್ತಿನ ಕರಾಳ ದಂಧೆ: ಸೆಕ್ಸ್‌ಟಾರ್ಷನ್

sextortion

ದೂರವಾಣಿಯಲ್ಲಿ ಕೆಲವೊಮ್ಮೆ ‘ಬ್ಲಾಂಕ್ʼ ಕರೆ ಅಥವಾ ರಾಂಗ್ ನಂಬರ್ ಕರೆಗಳು ಬಂದಿರಬಹುದಲ್ವಾ? ತಮಾಷೆಯ ಕರೆಗಳು ಅಥವಾ ತಪ್ಪು ಕರೆಗಳು ಸ್ಥಿರ ದೂರವಾಣಿಯ ಬಳಕೆದಾರರು ಅನುಭವಿಸಿದ ಸಾಮಾನ್ಯ ತೊಂದರೆಯಾಗಿತ್ತು. ಆದರೆ ಇಂದು, ಕ್ರಿಮಿನಲ್‌ಗಳು ಸಾಮಾಜಿಕ ಮಾಧ್ಯಮ (Social media) ಮತ್ತು ಡೇಟಿಂಗ್ ಅಪ್ಲಿಕೇಶನ್‌ಗಳಲ್ಲಿ (Dating Application) ಹದಿಹರೆಯದವರನ್ನು ಹಿಂಬಾಲಿಸಲು (Cyber stalking) ಮತ್ತು ಬ್ಲ್ಯಾಕ್‌ಮೇಲ್ ಮಾಡಲು ಮೊಬೈಲ್ ಫೋನ್‌ಗಳನ್ನು ಬಳಸುತ್ತಾರೆ.

ವೈಯಕ್ತಿಕ ಚಿತ್ರಗಳು ಅಥವಾ ವಿಡಿಯೋಗಳನ್ನು ಬಹಿರಂಗಪಡಿಸುವುದಾಗಿ ಹೆದರಿಸಿ ಹಣ ಪಾವತಿಗೆ ಅಥವಾ ಲೈಂಗಿಕ ಬೇಡಿಕೆಗಳನ್ನು ಪೂರೈಸಲು ಒತ್ತಡ ತರುವುದನ್ನು ಸೆಕ್ಸ್‌ಟಾರ್ಷನ್ (Sextortion) ಎನ್ನುತ್ತಾರೆ. ಡೀಪ್ ಫೇಕ್ (Deep Fake) ತಂತ್ರಜ್ಞಾನದಿಂದ ಯಾರ ರುಂಡಕ್ಕೆ ಇನ್ಯಾರದ್ದೋ ಮುಂಡ ಸೇರಿಸಿ ಮೋಸಗೊಳಿಸಲೂಬಹುದು. ಈ ರೀತಿ ಮಾರ್ಪಡಿಸಿದ ಚಿತ್ರ ಅಥವಾ ವಿಡಿಯೋ ಬಳಸಿಯೂ ಹಣದ ಬೇಡಿಕೆ ಇರಿಸಬಹುದು. ಕೊಡದಿದ್ದರೆ ಜಗಜ್ಜಾಹೀರು ಮಾಡುವ ಧಮಕಿಯೂ ಹಾಕಬಹುದು. ಇದು ನೀವು ಯೋಚಿಸುವುದಕ್ಕಿಂತ ಹೆಚ್ಚು ಬಳಕೆಯಾಗುತ್ತಿರುವ ಸೈಬರ್ ಕ್ರೈಮ್ (Cyber Crime) ಆಗಿದೆ. ಇದರ ಒಂದು ರೂಪವಾಗಿ ನಿಮಗೆ ಒಂದು ವಿಡಿಯೋ ಕರೆ ಬರಬಹುದು, ಮತ್ತು ಅದರಲ್ಲಿ ಮಹಿಳೆ (ನೀವು ಪುರುಷರಾಗಿದ್ದರೆ) ಅಥವಾ ಪುರುಷ (ನೀವು ಮಹಿಳೆಯಾಗಿದ್ದರೆ) ನಿಮ್ಮೊಂದಿಗೆ ಸರಸ-ಸಲ್ಲಾಪದಲ್ಲಿರುವಂತೆ ನಟಿಸಬಹುದು. ಆ ಕರೆಯನ್ನು ರೆಕಾರ್ಡ್ ಮಾಡಿಕೊಂಡು ನಂತರದಲ್ಲಿ ಕಾನೂನಿನ ಅಧಿಕಾರಿಗಳೆಂದು ನಿಮ್ಮಲ್ಲಿ ತಪ್ಪಿತಸ್ಥ ಭಾವನೆಯನ್ನು ಹುಟ್ಟುಹಾಕಿ, ಕ್ರಮ ಕೈಗೊಳ್ಳುವ ನಾಟಕ ಆರಂಭಿಸುತ್ತಾರೆ. ಜುಲ್ಮಾನೆ ಹಣ ಪಾವತಿಸಬೇಕೆಂದೂ ಹೆದರಿಸುತ್ತಾರೆ.

ಇದನ್ನು ಹೆಚ್ಚಾಗಿ ವಿವಿಧ ಅಧಿಕಾರದ ಅಥವಾ ಹುದ್ದೆಯಲ್ಲಿರುವರ ಮೇಲೆ ಪ್ರಯೋಗಿಸುತ್ತಿದ್ದರು. ಮಂತ್ರಿಗಳು, ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು, ನ್ಯಾಯಾಧೀಶರು, ಶಿಕ್ಷಣತಜ್ಞರು, ಕಾನೂನು ಜಾರಿ ಸಿಬ್ಬಂದಿ ಮತ್ತು ಉದ್ಯೋಗದಾತರು, ಜನಪ್ರಿಯ ನಟನಟಿಯರು, ನಿರ್ದೇಶಕರು ಮುಂತಾದವರನ್ನು ಲೈಂಗಿಕ ಆಮಿಷದ ಬಲೆಯಲ್ಲಿ ಸಿಕ್ಕಿಸಿ ಅವರಿಂದ ಬೇಕಾದ ಕೆಲಸ ಮಾಡಿಸಿಕೊಳ್ಳುವುದು ಅಥವಾ ಹಣ ಸುಲಿಗೆ ಮಾಡುತ್ತಿದ್ದರು.

ಕೆಲವರು ತಮ್ಮ ಅಧಿಕಾರವನ್ನು ದುರುಪಯೋಗಗೊಳಿಸಿಕೊಂಡು ತಮ್ಮ ಲೈಂಗಿಕ ವಾಂಛೆಯನ್ನು ಪೂರೈಸಿಕೊಳ್ಳುತ್ತಿದ್ದರು. ಉದಾಹರಣೆಗೆ ಪರವಾನಗಿಗಳು ಅಥವಾ ಟೆಂಡರ್ ಪಡೆಯಲು ಲೈಂಗಿಕ ಅನುಕೂಲವನ್ನು ವಿನಂತಿಸುವ ಸರ್ಕಾರಿ ಅಧಿಕಾರಿಗಳು, ವಿದ್ಯಾರ್ಥಿಗಳೊಂದಿಗೆ ಲೈಂಗಿಕತೆಗಾಗಿ ಉತ್ತಮ ಶ್ರೇಣಿಗಳನ್ನು ವ್ಯಾಪಾರ ಮಾಡುವ ಶಿಕ್ಷಕರು ಮತ್ತು ಉದ್ಯೋಗವನ್ನು ಕೊಡಲು ಲೈಂಗಿಕ ಅನುಕೂಲಗಳನ್ನು ಬಯಸುವ ಉದ್ಯೋಗದಾತರು. ಅಂತಹವರನ್ನು ಸೆಳೆಯಲು ‘ಹನಿ ಟ್ರಾಪ್’ (Honey Trap) ಬಳಸುತ್ತಿದ್ದರು. ನಂತರ ಅವರ ಪ್ರಣಯದಾಟವನ್ನು ರೆಕಾರ್ಡ್ ಮಾಡಿಕೊಂಡು ಆ ವ್ಯಕ್ತಿಯನ್ನು ನಿಯಂತ್ರಿಸುತ್ತಿದ್ದರು. ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದರು.

ಸೆಕ್ಸ್‌ಟಾರ್ಶನ್ ಎನ್ನುವುದು ಬ್ಲ್ಯಾಕ್‌ಮೇಲ್‌ನ ಒಂದು ರೂಪವನ್ನು ಸಹ ಸೂಚಿಸುತ್ತದೆ, ಇದರಲ್ಲಿ ಮಾಹಿತಿ ಅಥವಾ ಚಿತ್ರಗಳನ್ನು ಬಳಸಿ ವಿಕ್ಟಿಮ್‌ಗಳಿಂದ ಹಣ ಅಥವಾ ಲೈಂಗಿಕ ಪ್ರಯೋಜನ ಪಡೆಯಲು ಮಾಡಲು ಬಳಸಲಾಗುತ್ತದೆ. ಸಾಮಾಜಿಕ ಮಾಧ್ಯಮದಲ್ಲಿ ಮತ್ತು ವೈಯಕ್ತಿಕ ಪಠ್ಯ ಸಂದೇಶಗಳಲ್ಲಿ ಹೆಚ್ಚಾಗಿ ಲೈಂಗಿಕ ವಿಷಯಗಳು ಚರ್ಚೆಯಾಗುತ್ತಿದ್ದರೆ ಅದನ್ನು ಇತರರೊಂದಿಗೆ ಹಂಚಿಕೊಳ್ಳುವ ಬೆದರಿಕೆಯ ಕರೆ ಬರುವ ಸಾಧ್ಯತೆ ಹೆಚ್ಚಿದೆ.

Cyber crime

ಸೆಕ್ಸ್‌ಟಾರ್ಷನ್‌ ಸಂಬಂಧಿಸಿದ ಕೆಲವು ಸುದ್ದಿಗಳು ವಿವಿಧ ದಿನಪತ್ರಿಕೆಗಳಲ್ಲಿ ಬಂದಿದ್ದು ನಿಮ್ಮ ಗಮನಕ್ಕೆ:

• ಪುಣೆಯಲ್ಲಿ ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳು, ಮಾನಸಿಕ ಆಘಾತದಿಂದ ಇಬ್ಬರು ಆತ್ಮಹತ್ಯೆ.
• ದೆಹಲಿ: 200ಕ್ಕೂ ಹೆಚ್ಚು ಮಂದಿಯನ್ನು ಸುಲಿಗೆ ಮಾಡಿದ ಸೆಕ್ಸ್‌ಟಾರ್ಷನ್‌ ಜಾಲದ ಬಂಧನ.
• ಪುಣೆಯ ದತ್ತವಾಡಿ ಪ್ರದೇಶದಲ್ಲಿ ಆನ್‌ಲೈನ್ ವಂಚಕರ ಕಿರುಕುಳ ಮತ್ತು ಬ್ಲ್ಯಾಕ್‌ಮೇಲ್‌ನಿಂದಾಗಿ 19 ವರ್ಷದ ವ್ಯಕ್ತಿಯ ಆತ್ಮಹತ್ಯೆ.
• ಮುಂಬೈನಲ್ಲಿ ʼಸೆಕ್ಸ್ ವಿಡಿಯೋ’ ಸುಲಿಗೆ ಬಿಡ್‌ನಲ್ಲಿ “ನಕಲಿ” ಆತ್ಮಹತ್ಯೆ
• ಮುಂಬೈ ಫೈನಾನ್ಸ್ ಎಕ್ಸಿಕ್ಯೂಟಿವ್ ಸೆಕ್ಸ್ಟಾರ್ಶನ್ ರಾಕೆಟ್‌ನಲ್ಲಿ ಲಕ್ಷಗಟ್ಟಲೆ ಹಣ ಕಳೆದುಕೊಂಡಿದ್ದಾರೆ.
• ಜನಸಾಮಾನ್ಯರಿಂದ ಶಾಸಕರ ವರೆಗೆ: ಕರ್ನಾಟಕದಲ್ಲಿ ‘ಸೆಕ್ಸ್ಟಾರ್ಶನ್’ ಜನರನ್ನು ಕಾಡುತ್ತಲೇ ಇದೆ.

ಕಳೆದ ವರ್ಷ, ಕರ್ನಾಟಕದ ಚಿತ್ರದುರ್ಗದ ಹಿರಿಯ ಬಿಜೆಪಿ ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ ಅವರಿಗೆ ಅಪರಿಚಿತ ಸಂಖ್ಯೆಯಿಂದ ವಾಟ್ಸಾಪ್‌ನಲ್ಲಿ ವೀಡಿಯೊ ಕರೆ ಬಂದಿದೆ. ಕರೆ ಕೊನೆಗೊಂಡ ಕೆಲವೇ ಸಮಯದಲ್ಲಿ, ಕರೆ ಮಾಡಿದ ವ್ಯಕ್ತಿ ಮಹಿಳೆಯ ಖಾಸಗಿ ಅಂಗಗಳನ್ನು ಶಾಸಕರಿಗೆ ಪ್ರದರ್ಶಿಸಿ, ಕರೆಯನ್ನು ಸ್ಕ್ರೀನ್-ರೆಕಾರ್ಡ್ ಮಾಡಿ ವೀಡಿಯೊವನ್ನು ತಿಪ್ಪಾರೆಡ್ಡಿ ಅವರ ಸಂಖ್ಯೆಗೆ ಕಳುಹಿಸಿದ್ದಾರೆ.

ಇಂತಹ ಯಾವುದೇ ರೀತಿಯ ವಂಚನೆಗೆ ಅಥವಾ ಬೆದರಿಕೆಗೆ ಒಳಗಾದರೆ, ನೀವು ಪೊಲೀಸ್ ಠಾಣೆಗೆ ಹೋಗಲು ಬಯಸದಿದ್ದರೆ ನೀವು ಭಾರತದ ಗೃಹ ವ್ಯವಹಾರಗಳ ಸಚಿವಾಲಯದೊಂದಿಗೆ ಆನ್‌ಲೈನ್‌ನಲ್ಲಿ ದೂರು ನೀಡಬಹುದು. ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಸುವುದಕ್ಕಿಂತ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ದೂರು ನೀಡುವುದು ಸುಲಭ ಏಕೆಂದರೆ ಇದಕ್ಕೆ ಕಡಿಮೆ ಸಮಯ ಮತ್ತು ಶ್ರಮ ಬೇಕಾಗುತ್ತದೆ. ಗೃಹ ಸಚಿವಾಲಯದ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್‌ಗೆ ಹೋಗಿ. ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ- https://cybercrime.gov.in/

‘ಫೈಲ್ ಎ ಕಂಪ್ಲೇಂಟ್’ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ನಂತರ ನಿಯಮಗಳು ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಲು ‘ಸಮ್ಮತಿಸಿ’ ಆಯ್ಕೆಯನ್ನು ಕ್ಲಿಕ್ ಮಾಡಿ. ಇದು ನಿಮ್ಮನ್ನು ಬೇರೆ ಪುಟಕ್ಕೆ ಕೊಂಡೊಯ್ಯುತ್ತದೆ. ಹೊಸ ಪುಟದಲ್ಲಿ ನಿಮಗೆ ಎರಡು ಪರ್ಯಾಯಗಳನ್ನು ನೀಡಲಾಗುವುದು. ನಿಮ್ಮ ದೂರು ಮಹಿಳೆ ಅಥವಾ ಮಗುವನ್ನು ಒಳಗೊಂಡಿರುವ ಸೈಬರ್ ಅಪರಾಧದ ಬಗ್ಗೆ ಇದ್ದರೆ, “ಮಹಿಳೆಯರು/ಮಕ್ಕಳನ್ನು ಒಳಗೊಂಡ ಸೈಬರ್ ಅಪರಾಧವನ್ನು ವರದಿ ಮಾಡಿ” ಆಯ್ಕೆಯನ್ನು ಆರಿಸಿ ಮತ್ತು “ವರದಿ” ಕ್ಲಿಕ್ ಮಾಡಿ. ಈ ಸಂದರ್ಭಗಳಲ್ಲಿ ನೀವು ಅನಾಮಧೇಯವಾಗಿಯೂ ವರದಿ ಮಾಡಬಹುದು.

Cyber crime

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ‘ಡೀಪ್ ಫೇಕ್’ ತಂತ್ರಜ್ಞಾನದಿಂದ ಸೆಕ್ಸ್‌ಟಾರ್ಷನ್

ಮಾಹಿತಿ ತಂತ್ರಜ್ಞಾನ ಕಾಯಿದೆ, 2000, (ಐಟಿ ಕಾಯಿದೆ) ಅಡಿಯಲ್ಲಿ ಆನ್‌ಲೈನ್ ಕಿರುಕುಳವು ಮತ್ತೊಂದು ಪಕ್ಷಕ್ಕೆ ಕಿರುಕುಳ ನೀಡಲು, ಬೆದರಿಕೆ ಅಥವಾ ದುರುದ್ದೇಶಪೂರಿತವಾಗಿ ಮುಜುಗರಕ್ಕೆ ಒಳಗಾಗಲು ಇಂಟರ್ನೆಟ್ ಬಳಕೆಯನ್ನು ವಿವರಿಸಲು ಛತ್ರಿ ಪದವಾಗಿ ಬಳಸಲಾಗುತ್ತದೆ. ಇದು ಮೌಖಿಕ, ಲೈಂಗಿಕ, ಭಾವನಾತ್ಮಕ ಅಥವಾ ಸಾಮಾಜಿಕ ನಿಂದನೆಯ ರೂಪದಲ್ಲಿರಬಹುದು ಮತ್ತು ಒಬ್ಬ ವ್ಯಕ್ತಿ, ವ್ಯಕ್ತಿಗಳ ಗುಂಪು ಅಥವಾ ಸಂಸ್ಥೆಯನ್ನು ಗುರಿಯಾಗಿರಿಸಿಕೊಳ್ಳಬಹುದು.

ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 345A ಅಡಿಯಲ್ಲಿ, ಸಾಮಾಜಿಕ ಮಾಧ್ಯಮದಲ್ಲಿ ಅಶ್ಲೀಲ ಕಾಮೆಂಟ್‌ಗಳನ್ನು ಪೋಸ್ಟ್ ಮಾಡುವವರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಬಹುದು ಮತ್ತು ದಂಡವನ್ನು ಸಹ ಪಾವತಿಸಲು ಕೇಳಬಹುದು. ಮಹಿಳೆಯ ಒಪ್ಪಿಗೆಯಿಲ್ಲದೆ ಅಶ್ಲೀಲ ವಿಷಯವನ್ನು ಪೋಸ್ಟ್ ಮಾಡುವ ಮತ್ತು ಸಂದೇಶ ಕಳುಹಿಸುವ ಅಥವಾ ಲೈಂಗಿಕ ಪರವಾಗಿ ವಿನಂತಿಸುವವರಿಗೆ ಅದೇ ಸೆಕ್ಷನ್ ಅಡಿಯಲ್ಲಿ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು. ನಿಮ್ಮ ಫೋನಿನಲ್ಲಿ ಅನಾಮಧೇಯ ವಿಡಿಯೋ ಕಾಲ್ ಬಂದರೆ ಉತ್ತರಿಸಬೇಡಿ. ಪದೇ ಪದೇ ಕರೆ ಬರುತ್ತಿದ್ದರೆ ನಂಬರ್ ಬ್ಲಾಕ್ ಮಾಡಿ, 1930ಗೆ ದೂರು ನೀಡಿ. ಜೊತೆಗೆ ನಿಮ್ಮ ಫೊಟೋ, ವಿಡಿಯೋಗಳನ್ನು ಯಾರು ನೋಡಬಹುದು ಎಂದು ನಿರ್ಧರಿಸಿ, ನಿಯಂತ್ರಿಸಿ.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಫೋಟೊಗಳು, ಸೆಲ್ಫಿಗಳು, ಮತ್ತು ರೀಲ್ಸ್‌ಗಳ ನಿಯಂತ್ರಣ

Exit mobile version