Site icon Vistara News

ಸೈಬರ್‌ ಸೇಫ್ಟಿ ಅಂಕಣ: ಅಂತರ್ಜಾಲದಲ್ಲಿ ವಿದ್ಯಾರ್ಥಿಗಳನ್ನು ಸೆಳೆಯುತ್ತಿರುವ ಬ್ಲ್ಯಾಕ್‌ಹೋಲ್?

cyber fraud students

ಸೈಬರ್‌ ಸೇಫ್ಟಿ : ಈ ವಾರ ನನ್ನ ಕೆಲವು ವಿದ್ಯಾರ್ಥಿನಿಯರು ಬಂದು ತಮ್ಮ ತರಗತಿಯಲ್ಲಿ ಕೆಲವರು ಆನ್‌ಲೈನಿನಲ್ಲಿ ಇಂಟರ್ನ್‌ಷಿಪ್‌ (internship) ಪಡೆದಿದ್ದಾರೆ ಎಂದು ತಿಳಿಸಿದರು. ಅದೂ ಕೂಡ ‘ವರ್ಕ್ ಫ್ರಂ ಹೋಮ್’ (work from home). ಅಂದರೆ ಅವರ ತರಗತಿಗಳ ಜೊತೆಗೆ ಮಾಡುವ ಕೆಲಸ ಅಂತ ತಿಳಿಸಿದರು. ಅವರಿನ್ನೂ ನಾಲ್ಕನೆಯ ಸೆಮಿಸ್ಟರ್‌ನಲ್ಲಿದ್ದಾರೆ. ಅವರಿಗೆ ಇಂಟರ್ನ್‌ಷಿಪ್‌ ಶುರುವಾಗುವುದು ಐದನೆಯ ಸೆಮಿಸ್ಟರ್‌ನಲ್ಲಿ. ಅವರೇಕೆ ಈಗಲೇ ಕೆಲಸ ಮಾಡಲು ಶುರು ಮಾಡಿದ್ದಾರೆ ಎಂದು ಕುತೂಹಲದಿಂದ ಆ ಆನ್ಲೈನ್‌ ಇಂಟರ್ನ್‌ಷಿಪ್‌ ಕೊಡುವ ಕಂಪೆನಿಯ ವೆಬ್‌ಸೈಟ್‌ಗೆ ಹೋದೆ. ಮಕ್ಕಳು ಕೊಟ್ಟ URL ನೋಡಿದಾಗ ಆ ವೆಬ್‌ಸೈಟ್‌ನ ವಿನ್ಯಾಸದಲ್ಲಿ ವೃತ್ತಿಪರತೆಯ ಕೊರತೆ ಎದ್ದು ಕಂಡಿತು. ಯಾವುದೇ ಕಂಪೆನಿಯ ವೆಬ್‌ಸೈಟ್‌ ಅಂತರ್ಜಾಲದಲ್ಲಿರುವ ಅದರ ಮುಖ್ಯದ್ವಾರ. ಅದರಲ್ಲಿ ಕಂಪೆನಿಯ ಕುರಿತು ಮಾಹಿತಿ, ಕಂಪೆನಿಯ ಸ್ಥಾಪಕರ ವಿವರ, ವಿಳಾಸ, ಸಂಪರ್ಕಕಿಸಲು ದೂರವಾಣಿ ಸಂಖ್ಯೆ, ಇಮೇಲ್ ಇತ್ಯಾದಿ ಕನಿಷ್ಠ ವಿವರಗಳು ಇರುತ್ತದೆ. ಆದರೆ ಈ ಕಂಪೆನಿಯ ವೆಬ್‌ಸೈಟಿನಲ್ಲಿ ಆ ಮಾಹಿತಿಗಳ್ಯಾವುದೂ ಇರಲಿಲ್ಲ. ನನಗೆ ಇದು ಆಶ್ಚರ್ಯ ಮತ್ತು ಆತಂಕವನ್ನು ಉಂಟುಮಾಡಿತು. ಇದರಲ್ಲಿ ಏನೋ ಸಮಸ್ಯೆ ಇದೆ ಅಂತ ಮೇಲು ನೋಟಕ್ಕೆ ಅನಿಸಿತು.

ಸೈಬರ್‌ ಭದ್ರತೆಯ ವಿಷಯದಲ್ಲಿ ನನಗೆ ಸ್ಫೂರ್ತಿ ಮತ್ತು ಮಾರ್ಗದರ್ಶಕರಾಗಿರುವ ಡಾ.ಅನಂತ ಪ್ರಭು ಅವರನ್ನು ಮತ್ತು ನನ್ನ ಹಳೆಯ ವಿದ್ಯಾರ್ಥಿನಿ ಈಗ ಸೈಬರ್‌ಪೊರಾನ್ಸಿಕ್ಸ್ ತರಬೇತುದಾರಳಾಗಿರುವ ಡಾ. ಅಮೂಲ್ಯ ಸಾಹುಕಾರ್‌ರನ್ನು ಸಂಪರ್ಕಿಸಿ ಈ ವಿಚಾರದ ಬಗ್ಗೆ ಚರ್ಚಿಸಿದೆ. ಅವರು ತಿಳಿಸಿದಂತೆ RoC (Registrar of Company)ಯಿಂದ ಕಂಪೆನಿಯ ಬಗ್ಗೆ ಪರಿಶೀಲಿಸಲು ಹೇಳಿದರು. ಕಂಪೆನಿ ನೋಂದಣಿ ಆದ ಹೆಸರು, ದಿನಾಂಕ, ವಹಿವಾಟಿನ ವಿವರ ಇತ್ಯಾದಿ, ಜೊತೆಗೆ ಗೂಗಲ್‌ ಮತ್ತು ಇತರ ಸೈಟ್‌ಗಳಲ್ಲಿ ವಿಮರ್ಶೆಗಳು, ಮಾನ್ಯತೆಗಳು, ಗ್ರಾಹಕರ ಸಂಪರ್ಕ ಸಂಖ್ಯೆ, ಮತ್ತು ಕಂಪೆನಿಯ ಸಂಪರ್ಕ ಇಮೇಲ್‌ ಮುಂತಾದವುಗಳ ಬಗ್ಗೆ ಪರಿಶೀಲಿಸಿದೆ. ವೆಬ್‌ಸೈಟಿನಲ್ಲಿ ಕಂಪನಿಯ ನೊಂದಾವಣೆಯ ಬಗ್ಗೆ, ಅದರ ಸ್ಥಾಪಕರ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಕಂಪೆನಿಯನ್ನು ಸಂಪರ್ಕಿಸಲು ಇರುವ ಲಿಂಕ್ (Contact/Contact Us) ಕೂಡ ಹೋಮ್‌ಪೇಜಿನಲ್ಲಿ ಇರಲಿಲ್ಲ. ಅದು Career ಎಂಬ ಇನ್ನೊಂದು ಪುಟವನ್ನು ತೆರೆದಾಗ ಕಾಣಿಸಿತು. ಅದನ್ನು ಕ್ಲಿಕ್‌ ಮಾಡಿದಾಗ ತೆರೆದ ಟ್ಯಾಬ್‌ನ ಶೀರ್ಷಿಕೆ ‘Countact us’ ಎಂದಿತ್ತು. ಜೊತೆಗೆ ಇಮೇಲ್‌ ಐಡಿ ಬೇರೆ ಡೊಮೈನ್‌ದಾಗಿತ್ತು. ಕಂಪೆನಿಯ ವೆಬ್‌ಸೈಟ್‌ .io ಇದ್ದರೆ ಅದನ್ನು ಸಂಪರ್ಕಿಸಲು ಕೊಟ್ಟಿರುವ ಇಮೇಲ್‌ .in ಇತ್ತು. ವಿಳಾಸದಲ್ಲಿದ್ದ ಪಿನ್‌ಕೋಡ್‌ ಪರಿಶೀಲಿಸಿದಾಗ India Postನಲ್ಲಿ ಅದು ರಾಜಸ್ಥಾನದ ಜೈಪುರ ಜಿಲ್ಲೆಯ ದುರ್ಗಾಪುರ ಅಂಚೆ ಕಛೇರಿಯ ವ್ಯಾಪ್ತಿ ಎಂದು ತಿಳಿಯಿತು. ಆದ್ದರಿಂದ ವಿಳಾಸ ಸರಿಯಾಗಿರಬಹುದು ಅನಿಸಿತು.

ನಂತರ ನನಗೆ ಈ ಇಂಟರ್ನ್‌ಷಿಪ್‌ ಬಲೆಯನ್ನು ನಮ್ಮ ಕಾಲೇಜಿನಲ್ಲಿ ಹೆಣೆಯಲು ಶುರು ಮಾಡಿದ ವಿದ್ಯಾರ್ಥಿನಿಯೇ ಸಿಕ್ಕಿದಳು. ಪಾಪ ಅವಳು ಈ ಗಾಳಕ್ಕೆ LinkedIn ಮುಖಾಂತರ ಸಿಕ್ಕಿಕೊಂಡಿದ್ದಳು. ಈ ಕಂಪೆನಿಯ ಜಾಹಿರಾತನ್ನು ನೋಡಿ ಕ್ಲಿಕ್ಕಿಸಿ ಅದರ ಫಾರಂ ತುಂಬಿಸಿದ್ದಳು. ಎರಡು ದಿನಗಳ ನಂತರ ಅವಳಿಗೆ ಕಂಪೆನಿಯ ಕಡೆಯಿಂದ ಕರೆ ಬಂತು ಮತ್ತು ಟ್ರೈನಿಯಾಗಿ ಆಯ್ಕೆ ಆಗಿದ್ದನ್ನು ತಿಳಿಸಲಾಯಿತು. ಅದರ ಪ್ರಕಾರ ಅವಳು ಕೆಲವು ಟ್ರೈನಿ ಟಾಸ್ಕ್‌ಗಳನ್ನು ಮಾಡಬೇಕಿತ್ತು. ಅದೇ ಅವಳ ಇಂಟರ್ನ್‌ಷಿಪ್. ಅದಕ್ಕೆ ಅವಳಿಗೆ ಎರಡು ತಿಂಗಳಿಗೆ ರೂ.10,000 ಸ್ಟೈಫಂಡ್, ತರಬೇತಿ ಮುಗಿಸಿದ ಪ್ರಮಾಣ ಪತ್ರ, ಉತ್ತಮ ಕೆಲಸಗಾರ್ತಿ ಎನ್ನುವ ಪ್ರಮಾಣ ಪತ್ರದ ಜೊತೆಗೆ Letter of Recommendation, Pre-placement Offer ಕೂಡ ಕೊಡುವುದಾಗಿ ಕಂಪೆನಿ ತಿಳಿಸಿತ್ತು. ಅವಳ ದಿನದ ಟಾಸ್ಕ್‌ಗಳನ್ನು ಯಶಸ್ವಿಯಾಗಿ ಮಾಡಿದರೆ ಕಮಿಷನ್‌ಗಳಿಸುವ ಸಾಧ್ಯತೆಯೂ ಇತ್ತು. ಈ ಟಾಸ್ಕ್‌ಗಳು ಪೂರ್ಣಗೊಳ್ಳುತ್ತಿದ್ದಂತೆ ಮುಂದಿನ ಹಂತಕ್ಕೆ ತೇರ್ಗಡೆಯಾಗುತ್ತಿದ್ದರು. ಅದರಲ್ಲಿ ಮೂರನೆಯ ಹಂತದಿಂದ ಇನ್ಸೆಂಟಿವ್ಸ್ ಗಳಿಸುವ ಅವಕಾಶವೂ ಇತ್ತು. ಈ ವಿದ್ಯಾರ್ಥಿನಿಗೆ ಕಂಪೆನಿಯ ಕಡೆಯಿಂದ ಬಂದ ಇಮೇಲ್‌ಗಳನ್ನು ನೋಡಿದಾಗ ಇನ್ನೊಂದು ಸೋಜಿಗ. @.in ಜೊತೆಗೆ @.org ಮತ್ತು @*** .co. in ಡೊಮೈನ್‌ಗಳಿಂದಲೂ ಮಿಂಚಂಚೆಗಳು ಬಂದಿದ್ದವು. ಅವಳ ಜೊತೆ ನಿತ್ಯ ಸಂಪರ್ಕದಲ್ಲಿದ್ದ ವ್ಯಕ್ತಿ ತನ್ನೆಲ್ಲಾ ಇಮೇಲ್‌ಸಂವಹನಕ್ಕೆ ಕಂಪೆನಿಯ ಐಡಿಯ ಬದಲು ತನ್ನ ವೈಯಕ್ತಿಕ ಐಡಿ ಬಳಸಿದ್ದರು.

ಕಂಪೆನಿಯ ವೃತ್ತಿ (Career) ಪುಟದಲ್ಲಿದ್ದ ಮಾಹಿತಿ ನಿಮ್ಮ ಅವಗಾಹನೆಗೆ ಅನುವಾದಿಸಿ ಕೊಡ್ತಿದ್ದೇನೆ. Internship Drive 2023 ಎಂಬ ಶೀರ್ಷಿಕೆಯೊಂದಿಗೆ ಇದ್ದ ಸರಳವಾದ HTML ಪುಟದಲ್ಲಿ ಕೆಳಗಿನಂತೆ ಮೂರು ವಿಭಾಗಗಳಿದ್ದವು.
‘ಸವಲತ್ತುಗಳು’ (Perks):,

  1. ಇಂಟರ್ನ್‌ಶಿಪ್ ಪ್ರಮಾಣಪತ್ರ.
  2. ಕಾರ್ಯಕ್ಷಮತೆ ಆಧಾರಿತ ಸ್ಟೈಫಂಡ್.
  3. ಪೂರ್ವ ನಿಯೋಜನೆ ಅವಕಾಶ.
  4. ಉನ್ನತ ಪ್ರದರ್ಶನಕಾರರಿಗೆ MBA ವಿದ್ಯಾರ್ಥಿವೇತನವನ್ನು ಪಡೆಯುವ ಅವಕಾಶ.
    ‘ಆಯ್ಕೆಯಾದ ಇಂಟರ್ನ್‌ನಿನ ದಿನನಿತ್ಯದ ಜವಾಬ್ದಾರಿಗಳು’ (Selected intern’s day-to-day responsibilities include):
  5. ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸುವುದು ಮತ್ತು ಪೋಸ್ಟ್‌ಗಳನ್ನು ವಿವಿಧ ವೇದಿಕೆಗಳಲ್ಲಿ ಹಂಚಿಕೊಳ್ಳಲು ಸಹಾಯ ಮಾಡುವುದು.
  6. ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಈವೆಂಟ್‌ಗಳನ್ನು ಆಯೋಜಿಸುವುದು.
  7. ವಿವಿಧ ಕಾಲೇಜುಗಳಲ್ಲಿ ವಿವಿಧ ಕ್ಲಬ್‌ಗಳು ಮತ್ತು ಅಧ್ಯಾಯಗಳೊಂದಿಗೆ ಸಂಪರ್ಕಗಳನ್ನು ರಚಿಸುವುದು.
  8. ಸಂಭಾವ್ಯ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು.
  9. ಸಂದರ್ಶನ ಮತ್ತು ಸ್ಕ್ರೀನಿಂಗ್.
  10. ಪ್ರತಿಭೆಯ ಸ್ವಾಧೀನ.
  11. ಸಾಂಸ್ಥಿಕ ಗುರಿಗಳನ್ನು ಸಾಧಿಸಲು ವಿವಿಧ ಇಲಾಖೆಗಳ ಕೆಲಸವನ್ನು ಸಂಘಟಿಸಲು.
    ಮತ್ತು
    ‘ಯಾರು ಅರ್ಜಿ ಸಲ್ಲಿಸಬಹುದು’ (Only those candidates can apply who):
  12. ಅರೆಕಾಲಿಕ ಇಂಟರ್ನ್‌ಶಿಪ್‌ಲಭ್ಯವಿದೆ ಮತ್ತು ದಿನಕ್ಕೆ 4 ರಿಂದ 5 ಗಂಟೆಗಳ ಕಾಲ ವಿನಿಯೋಗಿಸುವವರು.
  13. 2 ತಿಂಗಳ ಅವಧಿಗೆ ಲಭ್ಯವಿದೆ.
  14. ಸಂಬಂಧಿತ ಕೌಶಲ್ಯ ಮತ್ತು ಆಸಕ್ತಿಗಳನ್ನು ಹೊಂದಿರಬೇಕು.
  15. ಯಾವುದೇ ಶಿಕ್ಷಣ ಸಂಸ್ಥೆಯ ಭಾಗವಾಗಿರಬೇಕು.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಆನ್‌ಲೈನ್ ವಂಚನೆಗೆ ಪ್ರಥಮ ಚಿಕಿತ್ಸೆ‌

ಇದನ್ನು ಓದಿದ ಮೇಲೆ ನನ್ನ ವಿದ್ಯಾರ್ಥಿನಿಯನ್ನು ಹಣಕಾಸಿನ ವಹಿವಾಟೇನಾದರೂ ಆಗಿದೆಯಾ ಎಂದು ಪ್ರಶ್ನಿಸಿದೆ. ಆಗ ಅವಳು ತನ್ನ ಲಾಗಿನ್ನಿನ ಮುಖಾಂತರ ಆ ಕಂಪೆನಿಯು ಕೊಟ್ಟಿರುವ ಕೋರ್ಸ್‌ಗಳನ್ನು ತೋರಿಸಿದಳು. ಪ್ರತಿಯೊಂದು ಕೋರ್ಸ್‌ಗೆ ರೂ.399/- ಆದರೆ ಎಲ್ಲಾ ಇಪ್ಪತ್ತೊಂದು ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಂಡರೆ ಕೇವಲ ರೂ.699/- ಮಾತ್ರ ಎಂದು ತಿಳಿಯಿತು. ಆ ಕೋರ್ಸ್‌ಗಳು ಒಂದು ಲರ್ನಿಂಗ್‌ ಮ್ಯಾನೇಜ್ಮೆಂಟ್‌ ಆ್ಯಪ್ ಮೂಲಕ ಲಭ್ಯವಿದೆ. ಅದರಲ್ಲಿ ವಿಡಿಯೋ ಪಾಠಗಳು ಮತ್ತು ನೋಟ್ಸ್‌ಗಳನ್ನು ಅಪ್‌ಲೋಡ್‌ ಮಾಡಿದ್ದಾರೆ ಎಂದು ತೋರಿಸಿದಳು. ಜೊತೆಗೆ ಅವಳ ಕೆಲವು ದಿನಗಳ ಅನುಭವವನ್ನೂ ಹಂಚಿಕೊಂಡಳು. ನಾಲ್ಕು ದಿನಗಳಲ್ಲಿ ತನ್ನ ಜೊತೆಗೆ ಐದು ಸಹಪಾಠಿಗಳಿಗೆ ಇದರ ಬಗ್ಗೆ ವಿವರಿಸಿ ಅವರೂ ರೂ.699/- ಕೊಟ್ಟು ಈ ಕೋರ್ಸ್ ಪ್ಯಾಕ್‌ ತೆಗೆದುಕೊಳ್ಳುವಂತೆ ಮಾಡಿದ್ದಳು. ಅವರಲ್ಲಿ ಒಬ್ಬ ಕೋರ್ಸ್ ತೆಗೆದುಕೊಳ್ಳದೆ ಬರೀ ‘ರಿಕ್ರೂಟ್‌ಮೆಂಟ್‌’ ಅಂದರೆ ಜನ ಸೇರಿಸುವ ಕೆಲಸ ಒಪ್ಪಿಕೊಂಡಿದ್ದ. ನಾಲ್ಕು ಜನ ಬರೀ ಕೋರ್ಸ್‌ಗೆ ಹಣ ಪಾವತಿಸಿ ಸುಮ್ಮನಾದರು. ಈ ವಿದ್ಯಾರ್ಥಿನಿಯು ಅತ್ಯುತ್ಸಾಹದಿಂದ ಒಟ್ಟು 24 ಜನರಿಂದ ಗೂಗಲ್‌ ಫಾರ್ಮ್ ತುಂಬಿಸಿದ್ದಳು. ಅದರಲ್ಲಿ ನಾಲ್ಕು ಜನ ಆಯ್ಕೆಯಾದರೂ ಅವಕಾಶವನ್ನು ತಿರಸ್ಕರಿಸಿದರಂತೆ. 10 ಜನರ ಅಪ್ಲಿಕೇಶನ್‌ ತಿರಸ್ಕೃತವಾಯಿತಂತೆ. ಇನ್ನು ಹತ್ತು ಜನರಲ್ಲಿ ಒಬ್ಬ ಮಾತ್ರ ಇವಳ ಕೆಳಗೆ ರಿಕ್ರೂಟ್‌ಮೆಂಟ್‌ ಮಾಡುತ್ತಿರುವುದು, ಉಳಿದವರ ಬಗ್ಗೆ ಗೊತ್ತಿಲ್ಲ ಎಂದು ತಿಳಿಸಿದಳು.

ನಿಮಗೆ ಕಂಪೆನಿಯಿಂದ ನಡೆಯುತ್ತಿರುವ ಈ ರೀತಿಯ ಕಾರ್ಯತಂತ್ರ ಓದಿ ಏನಾದರೂ ನೆನಪಾಯಿತಾ? ನನಗಂತೂ ಇದು ಒಂತರಾ ಚೈನ್‌ಲಿಂಕ್‌ ಅಥವಾ ಮಲ್ಟಿ ಲೆವೆಲ್‌ ಮಾರ್ಕೆಟಿಂಗ್ ತಂತ್ರವನ್ನು ಬಳಸಿ ಅಮಾಯಕ ಮಕ್ಕಳನ್ನು ಬಲಿಪಶುವನ್ನಾಗಿಸುತ್ತಿದ್ದಾರೆ. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ವಿಷಯಗಳಿಂದ ವಿಮುಖರಾಗಿ ಈ ಕಂಪೆನಿಯು ಹೆಣೆದ ಟಾಸ್ಕ್‌ಗಳ ಜಾಲದಲ್ಲಿ ಸಿಕ್ಕಿ ತಮ್ಮ ಸಮಯ ಮತ್ತು ಶಕ್ತಿಯನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ ಎಂದು ಬೇಸರವಾಯಿತು. ಈ ಜಾಲದಲ್ಲಿ ಸಿಲುಕಿದವರಿಗೆ ಮಾರ್ಗದರ್ಶನ ಮಾಡಿ ಕೆಲವು ವಿಚಾರಗಳನ್ನು ಸ್ಪಷ್ಟಪಡಿಸಿ ಅದರಿಂದ ಹೊರಬರುವಂತೆ ತಿಳಿಸಿದೆ. ಭಾಗಿಯಾದವರ ಗೌಪ್ಯತೆಯನ್ನು ರಕ್ಷಿಸುವ ಕಾರಣ ಕಂಪೆನಿಯ ಹೆಸರು, ಕಾಲೇಜಿನ ಹೆಸರು ಮತ್ತು ವಿದ್ಯಾರ್ಥಿಗಳ ಹೆಸರನ್ನು ಬಹಿರಂಗ ಪಡಿಸಿಲ್ಲ.

ನಿಮ್ಮ ಮನೆಯಲ್ಲಿ ಅಥವಾ ನಿಮ್ಮ ಬಂಧುಮಿತ್ರರ ಮನೆಯಲ್ಲಿ ಕಾಲೇಜಿಗೆ ಹೋಗುತ್ತಿರುವ ಮಕ್ಕಳಿದ್ದರೆ ಅವರ ಜೊತೆ ಈ ರೀತಿ ಆನ್ಲೈನ್‌ ಇಂಟರ್ನ್‌ಷಿಪ್‌ ಕೊಡುವ ಕಂಪೆನಿಯ ವಿಚಾರ ಪ್ರಸ್ತಾಪಿಸಿ ಅವರನ್ನೂ ಜಾಗ್ರತರನ್ನಾಗಿ ಮಾಡಿ. ನಮ್ಮ ಯುವ ಪೀಳಿಗೆ ಅಂತರ್ಜಾಲದಲ್ಲಿ ಅಂತರ್ಗತವಾಗಿರುವ ಇಂತಹ ಚೈನ್‌ಲಿಂಕ್‌ಗಳಿಗೆ ಸಿಲುಕದಂತೆ ರಕ್ಷಿಸಿ.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಸೈಬರ್ ಕ್ರೈಮ್ – ತಡೆಗಟ್ಟುವುದು ಹೇಗೆ?

Exit mobile version