Site icon Vistara News

ಸೈಬರ್‌ ಸೇಫ್ಟಿ ಅಂಕಣ: ಕಾಪ್‌ಕನೆಕ್ಟ್- ಸೈಬರ್ ಅಪರಾಧಕ್ಕೆ ತ್ವರಿತ ಸಹಾಯ

copconnect app

ಅಂತಾರಾಷ್ಟ್ರೀಯ ಲಾಭರಹಿತ, ಡಿಜಿಟಲ್ ಮತ್ತು ಸಂಪರ್ಕಿತ ಪ್ರಪಂಚದ ಮೇಲೆ ಪರಿಣಾಮ ಬೀರುವಂತಹ ಸೈಬರ್ ಭದ್ರತೆಯ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ಸ್ಥಾಪಿತವಾಗಿರುವ ಮಾಹಿತಿ ಹಂಚಿಕೆ ಮತ್ತು ವಿಶ್ಲೇಷಣೆ ಕೇಂದ್ರದ (Information Sharing and Analysis Center – ISAC) ಕಾರ್ಯ ಬಾಹುಳ್ಯ ಮತ್ತು ಉಪಯೋಗಗಳನ್ನು ಈ ವಾರ ತಿಳಿಯೋಣ.

ಸೈಬರ್ ಸುರಕ್ಷತೆಯಲ್ಲಿ ಹಲವು ಹಂತಗಳಲ್ಲಿ ವಿವಿಧ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ನಡೆಸುವ ISAC, ಎಲ್ಲರಿಗೂ ಸೈಬರ್ ಭದ್ರತೆ ಮತ್ತು ಸೈಬರ್ ಕ್ರೈಂಗಳ ಬಗ್ಗೆ ಅನೇಕ ಮಾಹಿತಿಗಳನ್ನು ತನ್ನ ವೆಬ್‌ಸೈಟಿನಲ್ಲಿ ಹಂಚಿಕೊಂಡಿದೆ. (https://isacfoundation.org/)

ಇವರ ಒಂದು ಪ್ರಮುಖವಾದ ಪ್ರಮಾಣ ಪತ್ರ ಸೈಬರ್ ಕ್ರೈಂ ಇಂಟರ್‌ವೆಂಷನ್‌ಆಫೀಸರ್ (CCIO). ಸೈಬರ್ ಲೋಕದ ಆಯಾಮಗಳ ಬಗ್ಗೆ ಆಸಕ್ತಿ ಇರುವವರು ಈ ವೆಬ್‌ಸೈಟಿನಲ್ಲಿ ಈ ಕೋರ್ಸಿನ ಅರ್ಹತೆಯನ್ನು ಖಚಿತಪಡಿಸಿಕೊಂಡು ಸೇರಿಕೊಳ್ಳಬಹುದು.

ಕಳೆದ ವರ್ಷದ ಅಂತರಾಷ್ಟ್ರೀಯ ಸೈಬರ್ ಜಾಗೃತಿ ಮಾಸ ಅಕ್ಟೋಬರ್ ತಿಂಗಳಿನಲ್ಲಿ ನಾನು ಈ ಕೋರ್ಸನ್ನು ಯಶಸ್ವಿಯಾಗಿ ಮುಗಿಸಿ CCIO ಆಗಿದ್ದೇನೆ. ಇದು ನನಗೆ ಸೈಬರ್ ಲೋಕದಲ್ಲಿ ವಂಚನೆಗೀಡಾದವರ ಪ್ರಥಮ ಚಿಕಿತ್ಸೆ ಮಾಡಲು ಅಧಿಕಾರ ಕೊಟ್ಟಿದೆ. (https://isacfoundation.org/copconnect/)

IndiaFightsCyberCrime ಎನ್ನುವ ಹ್ಯಾಶ್‌ಟ್ಯಾಗ್ ಕಾಪ್‌ಕನೆಕ್ಟ್‌ ಮೊಬೈಲ್‌ ಆ್ಯಪ್‌ಗೆ ಸೇರಿದೆ. ಇದು ಸೈಬರ್ ಅಪರಾಧ ತನಿಖೆಗಳು ಮತ್ತು ಪ್ರಕರಣಗಳಲ್ಲಿ ತಾಂತ್ರಿಕ ಮತ್ತು ಕಾನೂನು ಸಹಾಯವನ್ನು ಹುಡುಕಲು ಪೊಲೀಸ್ ಮತ್ತು ಕಾನೂನು ಜಾರಿ ಸಂಸ್ಥೆಗಳು, ವಕೀಲರು ಮತ್ತು ಕಂಪೆನಿಗಳ ಚೀಫ್ ಇನ್ಫರ್‌ಮೇಶನ್‌ ಸೆಕ್ಯೂರಿಟಿ ಆಫೀಸರ್‌(CISO)ಗಳಿಗೆ ಇರುವ ವಿಶೇಷ ಮೊಬೈಲ್ ಅಪ್ಲಿಕೇಶನ್ ಆಗಿದೆ.

ಇದರ ಮೂಲಕ ನಿಮಗೆ ಅಗತ್ಯವಿರುವ ಸಹಾಯವನ್ನು ತಕ್ಷಣವೇ ಒದಗಿಸುವ ನೂರಾರು ಭದ್ರತಾ ವೃತ್ತಿಪರರು ಮತ್ತು ಸೈಬರ್ ಅಪರಾಧ ವಕೀಲರನ್ನು ಪತ್ತೆ ಮಾಡಬಹುದು. ವಿಷಯ ತಜ್ಞರೊಂದಿಗೆ ಖಾಸಗಿಯಾಗಿ ಚಾಟ್ ಮಾಡಬಹುದು ಮತ್ತು ಪ್ರಕರಣ ಸಂಬಂಧಿತ ಸಮಸ್ಯೆಗಳನ್ನು ಚರ್ಚಿಸಲು ಮತ್ತು ಜ್ಞಾನವನ್ನು ವಿನಿಮಯ ಮಾಡಿಕೊಳ್ಳಲು ಸಮಾನ ಮನಸ್ಕರೊಂದಿಗೆ ಸಂಪರ್ಕ ಸಾಧಿಸಬಹುದು. ಸೈಬರ್ ಅಪರಾಧ ಎಷ್ಟೇ ಚಿಕ್ಕದಾಗಿದ್ದರೂ, ನಿಮ್ಮ ಸಮಸ್ಯೆಗಳಿಗೆ ವೇಗವಾಗಿ ಪರಿಹಾರವನ್ನು ಪಡೆಯಲು ನೇರವಾಗಿ ಕಾಪ್‌ಕನೆಕ್ಟ್ ಅಪ್ಲಿಕೇಶನ್‌ನಿಂದ ಸಹಾಯವನ್ನು ವಿನಂತಿಸಬಹುದು. ಪೆನಿಟ್ರೇಶನ್ ಟೆಸ್ಟಿಂಗ್, ಫೊರೆನ್ಸಿಕ್ ಇನ್ವೆಸ್ಟಿಗೇಶನ್‌ನಿಂದ ಮಧ್ಯಸ್ಥಿಕೆ ಅಧಿಕಾರಿಗಳವರೆಗೆ, ಕಾಪ್‌ಕನೆಕ್ಟ್ ಪ್ಲಾಟ್‌ಫಾರ್ಮ್‌ನಿಂದ ಸರಿಯಾದ ಸಹಾಯವನ್ನು ಪಡೆಯಬಹುದು.

ಮಾಹಿತಿ ತಂತ್ರಜ್ಞಾನದ ಭದ್ರತಾ ತಜ್ಞರಿಂದ ಸಹಾಯವನ್ನು ಪಡೆಯಲು ನೆರವಾಗುವ ಕಾಪ್‌ಕನೆಕ್ಟ್ ಸೈಬರ್ ಅಪರಾಧಗಳ ವಿರುದ್ಧ ಹೋರಾಡಲು ಮಾಹಿತಿ ಹಂಚಿಕೆ ಮತ್ತು ವಿಶ್ಲೇಷಣೆ ಕೇಂದ್ರದ ಉಪಕ್ರಮವಾಗಿದೆ. ಇದರ ಉದ್ದೇಶ ಎಫ್‌ಐಆರ್ ಅಥವಾ ವಿಚಾರಣೆ ಹಂತವನ್ನು ಸಹ ತಲುಪದ ಮತ್ತು ಪರಿಣತಿ ಮತ್ತು ಕಾರ್ಯಾಚರಣೆಯ ಕೊರತೆಯಿಂದಾಗಿ ಮುಚ್ಚಿಹೋಗಿರುವ ಪ್ರಕರಣಗಳನ್ನು ಪರಿಹರಿಸಲು ಕಾನೂನು ಜಾರಿ ಸಂಸ್ಥೆಗಳಿಗೆ ಭದ್ರತಾ ವೃತ್ತಿಪರರು ಸಹಾಯ ಮಾಡುವುದು.

ಕಾಪ್‌ಕನೆಕ್ಟ್‌ನಲ್ಲಿ ನಿಮಗೆ ಈ ಕೆಳಗಿನ ತಜ್ಞರ ನೆರವು ಸಿಗುತ್ತದೆ.

1) ಸೈಬರ್ ಕ್ರೈಂ ಇಂಟರ್‌ವೆನ್ಷನ್ ಆಫೀಸರ್ (CCIO): ಇಂಟರ್ವೆನ್ಷನ್ ಆಫೀಸರ್ ತರಬೇತಿಯನ್ನು ಪಡೆದಿರುವ ವೃತ್ತಿಪರರು ಮತ್ತು ಮೊದಲನೆಯ ಹಂತದ ಸೈಬರ್ ಅಪರಾಧದ ಸಮಸ್ಯೆಗಳ ನಿರ್ವಹಣೆಯನ್ನು ಬೆಂಬಲಿಸಲು ಸಮರ್ಥರಾಗಿರುವವರು ಪ್ರಥಮ ಪ್ರತಿಸ್ಪಂದಕರಾಗಿ ಕಾರ್ಯನಿರ್ವಹಿಸುತ್ತಾರೆ.

2) ಸೈಬರ್ ಭದ್ರತಾ ವೃತ್ತಿಪರರು: ಸೈಬರ್ ದಾಳಿಗಳು ಮತ್ತು ಉಲ್ಲಂಘನೆಗಳ ತನಿಖೆಯಲ್ಲಿ ಭಾಗವಹಿಸುವ ಕಾನೂನು ಜಾರಿ ಸಂಸ್ಥೆಯ ಅಧಿಕಾರಿಗಳು, ಮತ್ತು ಉದ್ಯಮಕ್ಕೆ ಸಹಾಯ ಮಾಡುವ ಮಾಹಿತಿ ಭದ್ರತೆಯ ವಿವಿಧ ವಿಭಾಗಗಳಲ್ಲಿ ಕೌಶಲ್ಯಗಳನ್ನು ಹೊಂದಿರುವ ವೃತ್ತಿಪರರು.

3) ಪ್ರಮಾಣೀಕೃತ ಸೈಬರ್ ಅಪರಾಧ ವಕೀಲರು: ಸೈಬರ್ ಅಪರಾಧಗಳನ್ನು ನಿರ್ವಹಿಸಲು ತಾಂತ್ರಿಕವಾಗಿ ಸಮರ್ಥರಾಗಿರುವ ವಕೀಲರನ್ನು ವೇದಿಕೆಯಲ್ಲಿ ಪಟ್ಟಿ ಮಾಡಲಾಗುತ್ತದೆ.

4) ಸೈಬರ್ ಸೆಕ್ಯುರಿಟಿ ಕನ್ಸಲ್ಟಿಂಗ್ ಕಂಪನಿಗಳು: ಡಿಜಿಟಲ್ ಫೊರೆನ್ಸಿಕ್ಸ್ ತನಿಖೆ, ಘಟನೆಯ ಪ್ರತಿಕ್ರಿಯೆ ಮತ್ತು ಬೆದರಿಕೆ ಬೇಟೆಯಲ್ಲಿ ಪರಿಣತಿ ಹೊಂದಿರುವ ಕಂಪನಿಗಳು ತಮ್ಮ ಸೇವೆಗಳನ್ನು ವೇದಿಕೆಯಲ್ಲಿ ಪಟ್ಟಿ ಮಾಡಬಹುದು.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಕೊಲೆ, ಅಪಹರಣವನ್ನೂ ಮೀರಿಸಿದ ಸೈಬರ್ ವಂಚನೆಗಳು

ಕಾಪ್‌ಕನೆಕ್ಟ್‌ ಆ್ಯಪ್‌ ಮೂಲಕ ಇದರಲ್ಲಿ ನೊಂದಾಯಿಸಿಕೊಂಡಿರುವ ನೂರಾರು ಸ್ವಯಂಸೇವಕರು, ಸೈಬರ್ ಕ್ರೈಮ್ ವಕೀಲರು, ಸಲಹೆಗಾರರು ಮತ್ತು ಆನ್‌ಲೈನ್‌ನಲ್ಲಿ ನಿಮಗೆ ತಕ್ಷಣ ಸಹಾಯ ಮಾಡುವ ತಾಂತ್ರಿಕ ತಜ್ಞರನ್ನು ಪತ್ತೆ ಮಾಡಬಹುದು. ನಿಮ್ಮ ಸಮಸ್ಯೆಯು ಸೂಕ್ಷ್ಮ ವಿಚಾರವೇ? ಭಾರತದಾದ್ಯಂತ ಕಾಪ್‌ಕನೆಕ್ಟ್ ಕೆಫೆಯಲ್ಲಿ ಸೈಬರ್ ಕ್ರೈಮ್ ತಜ್ಞರನ್ನು ಖಾಸಗಿಯಾಗಿ ಭೇಟಿ ಮಾಡಿ ಮಾತನಾಡಬಹುದು.

cyber crime

ಕಾಪ್‌ಕನೆಕ್ಟ್ ಅಪ್ಲಿಕೇಶನ್ ಅನ್ನು ಯಾರಾದರೂ ಆಂಡ್ರೋಯಿಡ್ ಮತ್ತು ಐಓಎಸ್ (iOS)ನಲ್ಲಿ ಡೌನ್‌ಲೋಡ್ ಮಾಡಬಹುದು. ಇದರಲ್ಲಿ ನೀವು OTP/UPI ಫ್ರಾಡ್, ಆನ್ಲೈನ್‌ ಬ್ಲಾಕ್‌ಮೇಲ್, ಮಾಲ್‌ವೇರ್, ಮೊಬೈಲ್‌ ಸ್ಪೈವೇರ್, ಗೇಮಿಂಗ್ ಅಡಿಕ್ಷನ್‌, ರಾನ್‌ಸಂವೇರ್ ದಾಳಿಗಳು, ಮತ್ತು ಸೈಬರ್‌ ಕ್ರೈಮ್‌ ವಕೀಲರ ಸಹಾಯ ಪಡೆಯಬಹುದು.

ಈ ಅಂಕಣವನ್ನು ಓದಿದವರೆಲ್ಲಾ ಕಾಪ್‌ಕನೆಕ್ಟ್ ಆ್ಯಪ್ ಅಳವಡಿಸಿಕೊಳ್ಳಿ. ನೀವೇನಾದರೂ ಸೈಬರ್ ವಂಚನೆಗೊಳಗಾದಲ್ಲಿ ಇದರ ಮೂಲಕ ತಜ್ಞರನ್ನು ಸಂಪರ್ಕಿಸಿ ನಿಮ್ಮ ತೊಂದರೆ ಪರಿಹರಿಸಿಕೊಳ್ಳಬಹುದು. ಜಾಣರಾಗಿರಿ, ಜಾಗರೂಕರಾಗಿರಿ.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಆನ್‌ಲೈನ್‌ ದಾಳಿಗೆ ಒಳಗಾದ ಭಾರತೀಯ ಸೈಬರ್‌ ಸೆಕ್ಯುರಿಟಿ ಸಂಸ್ಥೆ

Exit mobile version