Site icon Vistara News

ಸೈಬರ್‌ ಸೇಫ್ಟಿ ಅಂಕಣ: ಅಂತರ್ಜಾಲದಲ್ಲಿ ಸುರಕ್ಷತೆ; ನಿಮ್ಮ ಖಾತೆಗಳನ್ನು ಸುರಕ್ಷಿತಗೊಳಿಸುವುದು ಹೇಗೆ?

Keeping digital user data secure is paramount

ಭಾಗ – 1

ಪ್ರತಿದಿನವೂ ಹೊಸ ಮತ್ತು ವೈವಿಧ್ಯಮಯ ಸೈಬರ್ ಅಪರಾಧಗಳು ನಡೆಯುತ್ತಿವೆ. ಇದು ನಮಗೆಲ್ಲಾ ಆತಂಕ ಮೂಡಿಸಿದೆ. ನೀವು ವಿವಿಧ ಇಂಟರ್ನೆಟ್ ಅಪ್ಲಿಕೇಶನ್‌ಗಳನ್ನು ಬಳಸುವುದರಿಂದ ನಿಮ್ಮನ್ನು ಸುರಕ್ಷಿತವಾಗಿರಿಸಿಕೊಳ್ಳುವ ಮೂಲಭೂತ ಅಂಶಗಳನ್ನು ತಿಳಿದುಕೊಳ್ಳುವುದು ಅತ್ಯಗತ್ಯ.

ಈ ಲೇಖನದ ಮೂಲಕ ನಿಮಗೆ ನಿಮ್ಮ ಆನ್‌ಲೈನ್ ಉಪಸ್ಥಿತಿಯಲ್ಲಿನ ಅಪಾಯಗಳನ್ನು ಗುರುತಿಸಲು ಮತ್ತು ತಿಳಿಸಲು ಪ್ರಯತ್ನ ಮಾಡುತ್ತೇನೆ. ಜೊತೆಗೆ ಕೆಲವು ಸರಳ ಮತ್ತು ಮುಖ್ಯವಾದ ಸೆಟ್ಟಿಂಗ್ಸ್‌ಗಳನ್ನು ತಿಳಿಸುತ್ತೇನೆ. ಇದರಿಂದ ನೀವು ಅಂತರ್ಜಾಲದಲ್ಲಿ ಪ್ರತಿನಿತ್ಯ ಬಳಸುವ ಮುಖ್ಯವಾದ ಆನ್ಲೈನ್ ಅಕೌಂಟ್‌ಗಳನ್ನು ಸುಭದ್ರಗೊಳಿಸಿಕೊಳ್ಳಬಹುದು.

ನಿಮ್ಮ ಸೈಬರ್ ಸುರಕ್ಷತೆಗಾಗಿ ಮಾಡಬೇಕಾದ ಕೆಲಸಗಳನ್ನು ನಾಲ್ಕು ಮುಖ್ಯವಾದ ಹಂತಗಳನ್ನಾಗಿ ವಿಂಗಡಿಸಿದ್ದೇನೆ. ಮೊದಲನೆಯ ಮತ್ತು ಎರಡನೆಯ ಹಂತಗಳನ್ನು ಈ ವಾರ ತಿಳಿದುಕೊಳ್ಳೋಣ. ಮುಂದಿನ ವಾರದಲ್ಲಿ ನಿಮ್ಮ ನೆಚ್ಚಿನ ಆನ್‌ಲೈನ್ ಖಾತೆಗಳಲ್ಲಿ ಅಳವಡಿಸಬೇಕಾದ ಸುರಕ್ಷತಾ ಕ್ರಮಗಳನ್ನು ಮತ್ತು ನಿರಾತಂಕವಾಗಿ ಅಂತರ್ಜಾಲದಲ್ಲಿ ಸರ್ಫಿಂಗ್ ಮಾಡುವುದನ್ನು ತಿಳಿಯೋಣ.

ಮೊದಲ ಹಂತದಲ್ಲಿ ನಿಮ್ಮ ನೆಚ್ಚಿನ ಅಥವಾ ಹೆಚ್ಚಿನ ಆನ್‌ಲೈನ್ ಸ್ಥಳಗಳನ್ನು ಗುರುತಿಸಿಕೊಳ್ಳಿ: ನಿಮ್ಮ ಆನ್‌ಲೈನ್ ಉಪಸ್ಥಿತಿಯನ್ನು ಸುರಕ್ಷಿತವಾಗಿರಿಸುವ ಮೊದಲ ಹಂತವೆಂದರೆ ಸೈಬರ್ ಜಗತ್ತಿನಲ್ಲಿ ನೀವು ಹೆಚ್ಚಾಗಿ ಎಲ್ಲಿರುವಿರಿ ಎಂಬುದನ್ನು ಗುರುತಿಸಲು ಕೆಲವು ಪ್ರಮುಖವಾದ ವಿವಿಧ ರೀತಿಯ ಖಾತೆಗಳನ್ನು ಪಟ್ಟಿ ಮಾಡಿದ್ದೇನೆ.

a. ಆನ್‌ಲೈನ್ ಬ್ಯಾಂಕಿಂಗ್ ಖಾತೆಗಳು
b. ಡಿಜಿಟಲ್ ವ್ಯಾಲೆಟ್ಟುಗಳು
c. UPI ಖಾತೆಗಳು
d. ವಿಮೆ, ಮ್ಯೂಚುಯಲ್ ಫಂಡ್ ಖಾತೆಗಳು
e. ಸಾಮಾಜಿಕ ಮಾಧ್ಯಮ ಖಾತೆಗಳು
f. ದಿನಸಿ, ಆಹಾರ, ಉಪಯುಕ್ತತೆ ಮತ್ತು ಬಿಲ್ ಪಾವತಿ ಖಾತೆಗಳು
g. ನಿಮ್ಮ ಮನರಂಜನೆ (OTT) ಮತ್ತು ಮಲ್ಟಿಮೀಡಿಯಾ ಖಾತೆಗಳು
h. ನಿಮ್ಮ ಬಳಿಯಿರುವ ಎಲ್ಲಾ ಸ್ಮಾರ್ಟ್ ಸಾಧನಗಳ ನಿರ್ವಹಣೆ ಖಾತೆಗಳು

ಈ ಪಟ್ಟಿಯಲ್ಲಿರುವ ವಿಭಾಗಗಳಿಗೆ ಸಂಬಂಧಿಸಿದಂತೆ ನೀವು ಯಾವುದಕ್ಕೆ ನಿಮ್ಮ ಕಂಪ್ಯೂಟರ್/ಲ್ಯಾಪ್‌ಟಾಪ್ ಬಳಸುವುದು ಮತ್ತು ಯಾವುದಕ್ಕೆಲ್ಲಾ ನಿಮ್ಮ ಮೊಬೈಲ್ ಬಳಸುವುದು ಎನ್ನುವ ನಿಖರವಾಗಿ ದಾಖಲಿಸಿಕೊಳ್ಳಿ. ನಂತರ ಮೊಬೈಲಿನಲ್ಲಿ ಬಳಸುವ ವಿಭಾಗಗಳಲ್ಲಿ ಎಷ್ಟು ಆಪ್ (App) ಬಳಸುತ್ತಿದ್ದೀರಿ ಎಂದು ನೋಡಿಕೊಳ್ಳಿ.

ಇದು ಬಹಳ ಪ್ರಮುಖವಾದ ಹಂತ. ನಿಮಗೆ ಯಾವುದನ್ನು ರಕ್ಷಿಸಬೇಕೆಂದು ತಿಳಿದಿಲ್ಲದಿದ್ದರೆ, ಅದನ್ನು ರಕ್ಷಿಸಲು ಕ್ರಮಗಳನ್ನು ನೀವು ಜಾರಿಗೊಳಿಸಲು ಸಾಧ್ಯವೇ? ಸಾಮಾನ್ಯವಾಗಿ ಕೆಲವು ಖಾತೆಗಳ ಸುರಕ್ಷತೆ ಸೆಟ್ ಆಗಿದ್ದರೂ ಅವುಗಳನ್ನು ಬಹಳ ಅಪರೂಪವಾಗಿ ಅಥವಾ ಎಂದಿಗೂ ಬಳಸದೆ ನಿರ್ಲಕ್ಷಿಸುತ್ತೇವೆ. ಹಾಗಾಗಿ ಸ್ವಲ್ಪ ಸಮಯ ನಿಮ್ಮ ಆನ್ಲೈನ್ ಖಾತೆಗಳನ್ನೆಲ್ಲಾ ನೆನಪಿಸಿಕೊಳ್ಳಿ.

ಎರಡನೆಯ ಹಂತದಲ್ಲಿ ಖಾತೆಗಳನ್ನು ಸುಭದ್ರ ಪಾಸ್‌ವರ್ಡ್‌ಗಳೊಂದಿಗೆ ಸುರಕ್ಷಿತಗೊಳಿಸುವುದು: ಮೊದಲ ಹಂತದಲ್ಲಿ ನೆನಪಿನಿಂದ ಪಟ್ಟಿ ಮಾಡಿಕೊಂಡ ನಿಮ್ಮ ಆನ್ಲೈನ್ ಖಾತೆಗಳು ಮತ್ತು ಆಪ್‌ಗಳಿಗೆ ಸುಭದ್ರವಾದ ಪಾಸ್‌ವರ್ಡ್‌ಗಳನ್ನು ಅಳವಡಿಸುವುದು ಈ ಹಂತದಲ್ಲಿ ಮಾಡಬೇಕಾದ ಕೆಲಸ.

ಸೈಬರ್ ದಾಳಿಕೋರರು ನಿಮ್ಮ ಪಾಸ್‌ವರ್ಡ್ ಅನ್ನು ಊಹಿಸಲು ಮತ್ತು ನಿಮ್ಮ ಖಾತೆಗೆ ಪ್ರವೇಶಿಸಲು ಸ್ವಯಂಚಾಲಿತವಾಗಿ ಕೆಲಸ ಮಾಡುವಂತಹ ಹ್ಯಾಕಿಂಗ್ ತಂತ್ರಗಳು ಮತ್ತು ಅದಕ್ಕೆ ಬೇಕಾದ ಪ್ರೋಗ್ರಾಂಗಳ ಶಸ್ತ್ರಾಸ್ತ್ರಗಳನ್ನು ಹೊಂದಿದ್ದಾರೆ. ಇದನ್ನು ಬ್ರೂಟ್ ಫೋರ್ಸ್ ಅಟ್ಯಾಕ್ ಎಂದೂ ಕರೆಯಲಾಗುತ್ತದೆ. ಆದ್ದರಿಂದ ನಿಮ್ಮ ಪಾಸ್‌ವರ್ಡ್‌ಗಳನ್ನು ಊಹಿಸಲು ಕಷ್ಟವಾಗಿಸುವುದು ಮತ್ತು ಆಕ್ರಮಣಕಾರರಿಗೆ ಯಶಸ್ವಿಯಾಗಲು ಕಷ್ಟವಾಗುವಂತೆ ಆಗಾಗ್ಗೆ ಬದಲಾಯಿಸುವುದು ಬಹಳ ಮುಖ್ಯ. ಸುಭದ್ರ ಪಾಸ್‌ವರ್ಡ್ ಸೆಟ್ ಮಾಡಲು ಕೆಳಗಿನ ಸೂಚನೆಗಳನ್ನು ಬಳಸಿ.

i. ನಿಮ್ಮ ಪಾಸ್‌ವರ್ಡ್‌ಗಳು ಕನಿಷ್ಠ 8 ಅಕ್ಷರಗಳಷ್ಟಾದರೂ ಇರಲಿ.
ii. ಇಂಗ್ಲೀಷ್ ವರ್ಣಮಾಲೆಯ ಕ್ಯಾಪಿಟಲ್ ಮತ್ತು ಸ್ಮಾಲ್ ಅಕ್ಷರಗಳು, ಸಂಖ್ಯೆಗಳು ಮತ್ತು ವಿಶೇಷ ಅಕ್ಷರಗಳ ಮಿಶ್ರಣವನ್ನು ಬಳಸಿ.
iii. ಊಹಿಸಬಹುದಾದ ಅಥವಾ ಸುಲಭವಾಗಿ ಕಂಡುಹಿಡಿಯಬಹುದಾದ ವೈಯಕ್ತಿಕ ಉಲ್ಲೇಖಗಳು, ಅಡ್ಡಹೆಸರುಗಳು, ನಿಘಂಟು ಪದಗಳನ್ನು ಬಳಸಬೇಡಿ.
iv. ಪ್ರತಿ ಎರಡು ತಿಂಗಳಿಗೊಮ್ಮೆ ನಿಮ್ಮ ಪಾಸ್‌ವರ್ಡ್ ಬದಲಾಯಿಸಿ ಮತ್ತು ಅದನ್ನು ಬೇರೆಡೆ ಮರುಬಳಕೆ ಮಾಡಬೇಡಿ.
v. ಸಾಧ್ಯವಾದರೆ ದೀರ್ಘ ಪದಗುಚ್ಛವನ್ನು ಬಳಸಿ ಮತ್ತು ವಿಶೇಷ ಅಕ್ಷರಗಳೊಂದಿಗೆ (special characters) ಕೆಲವು ಅಕ್ಷರಗಳನ್ನು ಬದಲಿಸುವ ಮೂಲಕ ಅದನ್ನು ನಿಮ್ಮ ಪಾಸ್‌ವರ್ಡ್ ಮಾಡಿ.
i. ಉದಾಹರಣೆಗೆ: a -> @, e -> 3, o -> 0, s -> $

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಆಧಾರ್‌ಗೆ ಬ್ಲಾಕ್‌ಚೈನ್ ತಂತ್ರಜ್ಞಾನ ಆಧಾರ ಆಗಬಲ್ಲದೇ?

ಅಪರಿಚಿತ ವ್ಯಕ್ತಿಗಳ ಕೈಗೆ ಸಿಗಬಹುದಾದ ಪುಸ್ತಕ ಅಥವಾ ಪುಟದಲ್ಲಿ ನಿಮ್ಮ ಪಾಸ್‌ವರ್ಡ್‌ಗಳನ್ನು ಎಂದಿಗೂ ಬರೆಯಬೇಡಿ. ಬದಲಾಗಿ ನಿಮ್ಮ ಪಾಸ್‌ವರ್ಡ್‌ಗಳನ್ನು ತಲುಪಲು ತರ್ಕವನ್ನು ಮಾತ್ರ ಸಂಗ್ರಹಿಸಿ.
ನೀವು ಹಲವಾರು ಬಲವಾದ ಪಾಸ್‌ವರ್ಡ್‌ಗಳನ್ನು ಸಂಗ್ರಹಿಸಲು, ಹೊಂದಿಸಲು ಮತ್ತು ನಿರ್ವಹಿಸಲು ಬಯಸಿದರೆ, ಪಾಸ್‌ವರ್ಡ್ ನಿರ್ವಾಹಕವನ್ನು ಬಳಸುವುದನ್ನು ಪರಿಗಣಿಸಿ ಏಕೆಂದರೆ ಅದು ಬಹು ಪಾಸ್‌ವರ್ಡ್‌ಗಳನ್ನು ನೆನಪಿಟ್ಟುಕೊಳ್ಳಲು ಮತ್ತು ಹೊಸ ಮತ್ತು ಬಲವಾದ ಪಾಸ್‌ವರ್ಡ್‌ಗಳೊಂದಿಗೆ ಅವುಗಳನ್ನು ಬದಲಾಯಿಸಲು ಸುಲಭವಾಗುತ್ತದೆ.

ಪಾಸ್ವರ್ಡ್ ನಿರ್ವಾಹಕ (ಮ್ಯಾನೇಜರ್)

ಪಾಸ್‌ವರ್ಡ್ ನಿರ್ವಾಹಕ ಪ್ರೋಗ್ರಾಮ್‌ಗಳು ನೀವು ಬಳಸುವ ಎಲ್ಲಾ ವೆಬ್‌ಸೈಟ್‌ಗಳಿಗೆ ನಿಮ್ಮ ಲಾಗಿನ್ ಮಾಹಿತಿಯನ್ನು ಸಂಗ್ರಹಿಸುವ ಅಪ್ಲಿಕೇಶನ್‌ಗಳಾಗಿವೆ. ಇವು ನಿಮಗೆ ಯಾವುದೇ ವೈಯಕ್ತಿಕ ಪಾಸ್‌ವರ್ಡ್‌ಗಳನ್ನು ನೆನಪಿಟ್ಟುಕೊಳ್ಳದೆ ಮತ್ತು ನಮೂದಿಸದೆಯೇ ಸ್ವಯಂಚಾಲಿತವಾಗಿ ಲಾಗ್ ಇನ್ ಮಾಡಲು ಸಹಾಯ ಮಾಡುತ್ತದೆ.

ನಮ್ಮಲ್ಲಿ ಹೆಚ್ಚಿನವರು ವಿಭಿನ್ನ ವೆಬ್‌ಸೈಟ್‌ಗಳಲ್ಲಿ ಒಂದೇ ಪಾಸ್‌ವರ್ಡ್‌ಗಳನ್ನು ಹೊಂದಿರುತ್ತಾರೆ. ಆದ್ದರಿಂದ ಯಾರಾದರೂ ಒಂದೇ ಲಾಗಿನ್ ಮಾಹಿತಿಯನ್ನು ಎಲ್ಲೆಡೆ ಬಳಸಿದರೆ, ಯಾವುದೇ ಒಂದು ವೆಬ್‌ಸೈಟ್‌ನಲ್ಲಿನ ಪಾಸ್‌ವರ್ಡ್‌ ಸೈಬರ್ ದಾಳಿಕೋರರಿಗೆ ಸಿಕ್ಕಿದರೆ ಅದು ನಿಮ್ಮ ಎಲ್ಲಾ ಖಾತೆಗಳಿಗೆ ಪ್ರವೇಶವನ್ನು ನೀಡುತ್ತದೆ.

ನೀವು ನೋಂದಾಯಿಸುವ ಪ್ರತಿಯೊಂದು ವೆಬ್‌ಸೈಟ್‌ ಖಾತೆಗೆ ಬಲವಾದ, ಸಂಕೀರ್ಣ ಮತ್ತು ಪುನರಾವರ್ತಿತವಲ್ಲದ ಪಾಸ್‌ವರ್ಡ್‌ಗಳನ್ನು ಹೊಂದಿಸಲು ಪಾಸ್‌ವರ್ಡ್ ನಿರ್ವಾಹಕ ಅಪ್ಲಿಕೇಶನ್‌ಗಳು ಸಹಾಯ ಮಾಡುತ್ತವೆ. ಎಲ್ಲಾ ಪಾಸ್‌ವರ್ಡ್‌ಗಳನ್ನು ಬರೆದುಕೊಳ್ಳುವ ಕಾರ್ಯದ ಬಗ್ಗೆ ಚಿಂತಿಸದಿರಲು ಇದು ನಿಮಗೆ ಸಹಾಯ ಮಾಡುತ್ತದೆ.

ಪಾಸ್‌ವರ್ಡ್ ನಿರ್ವಾಹಕ ನಿಮ್ಮ ಎಲ್ಲಾ ಪಾಸ್‌ವರ್ಡ್‌ಗಳನ್ನು ಸುರಕ್ಷಿತವಾಗಿರಿಸುವ ಲಾಕರ್‌ನಂತೆ. ಆದರೆ ಗಮನಿಸಿ, ಪಾಸ್‌ವರ್ಡ್ ನಿರ್ವಾಹಕ ಅಪ್ಲಿಕೇಶನ್ ಅನ್ನು ಪ್ರವೇಶಿಸಲು ಬಳಸಿದ ಮಾಸ್ಟರ್ ಪಾಸ್‌ವರ್ಡ್, ರಾಜಿಯಾಗದಂತೆ ತಡೆಯಲು ಅದು ಬಹಳ ಸುರಕ್ಷಿತವಾಗಿರಬೇಕು ಮತ್ತು ಬಲವಾಗಿರಬೇಕು.

ನಿಮ್ಮ ನೆಚ್ಚಿನ ಆನ್‌ಲೈನ್ ಖಾತೆಗಳಾದ ಫೇಸ್‌ಬುಕ್, ಗೂಗಲ್, ವಾಟ್ಸ್ಯಾಪ್ ಮತ್ತು ಟ್ವಿಟ್ಟರ್‌ಗಳಲ್ಲಿ ಅಳವಡಿಸಬೇಕಾದ ಸುರಕ್ಷತಾ ಕ್ರಮಗಳನ್ನು ಮತ್ತು ನಿರಾತಂಕವಾಗಿ ಅಂತರ್ಜಾಲದಲ್ಲಿ ಸರ್ಫಿಂಗ್ ಮಾಡುವುದನ್ನು ಮುಂದಿನ ಭಾಗದಲ್ಲಿ ವಿವರಿಸುತ್ತೇನೆ.

ಇದನ್ನೂ ಓದಿ: Social Media ಬಳಕೆಗೆ ಇಲ್ಲಿವೆ ಸೈಬರ್‌ ಸುರಕ್ಷತೆ ಸಲಹೆಗಳು

Exit mobile version