ಬಿಜೆಪಿ ಅದ್ಯಾಕೊ 10 ರಿಂದ 6 ಗಂಟೆವರೆಗೆ ಕೆಲಸ ಮಾಡಿ ತನಗೂ ಈ ಕಚೇರಿಗೂ ಸಂಬಂಧ ಇಲ್ಲ ಎಂದು ಕೊಡವಿಕೊಂಡು ಹೊರಡುವ ಸಿಬ್ಬಂದಿ ರೀತಿ ಕಾಣಿಸುತ್ತಿದೆ. ಬಿಜೆಪಿ ಈ ಚುನಾವಣೆಯನ್ನು ಏಕೆ ಸೋತಿದೆ ಎಂದು 360 ಡಿಗ್ರಿಯನ್ನೂ ಮೀರಿ ವಿಶ್ಲೇಷಣೆಗಳು ಸಾಮಾಜಿಕ ಜಾಲತಾಣಗಳಲ್ಲೇ ನಡೆದುಹೋಗಿದೆ. ಅಸಲಿಗೆ ಈ ಚುನಾವಣೆಯಲ್ಲಿ ಬಿಜೆಪಿ ಯಾವುದೇ ಕಥನವನ್ನೇ (ನರೇಟಿವ್) ಹೊಂದಿರಲಿಲ್ಲ ಎನ್ನುವುದು ಮೊದಲ ಸತ್ಯ. ಈ ಬಗ್ಗೆ ಒಂದು ಲೇಖನವನ್ನು ಜನವರಿಯಲ್ಲೇ ಬರೆಯಲಾಗಿತ್ತು. ಆ ನಂತರದಲ್ಲಿ , ಜೆಡಿಎಸ್‌ನ ಪತನದ ಕುರಿತು ಡಿ ಕೋಡ್ ಅಂಕಣದ ಮೊದಲ ಲೇಖನದಲ್ಲಿ ತಿಳಿಸುವ ಪ್ರಯತ್ನ ಮಾಡಲಾಯಿತು. ಜೆಡಿಎಸ್‌ನ ಶೀಘ್ರ ಪತನವು ನೇರವಾಗಿ ಕಾಂಗ್ರೆಸ್‌ಗೆ ಲಾಭವಾಗಿರುವುದು ಸ್ಪಷ್ಟ. ಪ್ರಧಾನಿ ನರೇಂದ್ರ ಮೋದಿ ಈಗಿನ ರಾಜಕಾರಣಿಗಳಲ್ಲಿ ಅತ್ಯಂತ ಜನಪ್ರಿಯ ಹಾಗೂ ವಿಶ್ವಾಸಾರ್ಹ ಮುಖವಾದರೂ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಪಕ್ಷಕ್ಕೆ ಲಾಭವಾಗುವುದು ಅಷ್ಟಕ್ಕಷ್ಟೆ ಎನ್ನುವುದನ್ನು ಡಿ ಕೋಡ್‌ನ ಎರಡನೇ ಲೇಖನದಲ್ಲಿ ಅಂಕಿ ಅಂಶ ಸಹಿತ ವಿವರಿಸಲಾಯಿತು. ಚುನಾವಣೆ ಸಮಯದಲ್ಲಿ ಪಕ್ಷಾಂತರ ಎನ್ನುವುದು, ಯಾವ ಪಕ್ಷದ ಕಡೆಗೆ ಗಾಳಿ ಬೀಸುತ್ತಿದೆ ಎನ್ನುವುದನ್ನು ಅಂದಾಜಿಸುವ ಒಂದು ಮಾಪನ ಎಂದು, ಈ ಬಾರಿ ಕಾಂಗ್ರೆಸ್ ಕಡೆಗೆ ಗಾಳಿ ಬೀಸುತ್ತಿದೆ ಎಂದು ಡಿ ಕೋಡ್‌ನ ಮೂರನೇ ಲೇಖನದಲ್ಲಿ ವಿವರಿಸಲಾಗಿತ್ತು. ಭಾರತದ ರಾಜಕಾರಣದಲ್ಲಿ ಕುಟುಂಬ ರಾಜಕಾರಣ ಹೇಗೆ ಕೆಲಸ ಮಾಡುತ್ತದೆ, ಅದು ಕಾಂಗ್ರೆಸ್‌ಗೆ ಹೇಗೆ ಲಾಭ ಆಗಬಹುದು ಎನ್ನುವುದನ್ನು ನಾಲ್ಕನೇ ಲೇಖನದಲ್ಲಿ ಹೇಳಲಾಗಿತ್ತು. ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರು ಕಾಂಗ್ರೆಸ್ ಸೇರುವ ಬದಲಿಗೆ ಪಕ್ಷೇತರರಾಗಬೇಕಿತ್ತು ಎಂದು ಅನೇಕರು ಆ ಸಮಯದಲ್ಲಿ ಅಭಿಪ್ರಾಯಪಟ್ಟಿದ್ದರು. ಆದರೆ ಅವರು ಕಾಂಗ್ರೆಸ್ ಪಕ್ಷ ಸೇರಿದ್ದು ರಾಜಕೀಯವಾಗಿ ಎಷ್ಟು ಸರಿಯಾದ ನಿರ್ಧಾರ ಎನ್ನುವುದನ್ನು ಐದನೇ ಲೇಖನದಲ್ಲಿ ಹೇಳಲಾಗಿತ್ತು. ಇವಿಷ್ಟೂ ಲೇಖನಗಳು ಚುನಾವಣೆಗೆ ಮುನ್ನ ಪ್ರಕಟಗೊಂಡವು. ಕರ್ನಾಟಕದಲ್ಲಿ ಬಿಜೆಪಿ ಸೋಲಿನ ಕಡೆಗೆ ಸಾಗುತ್ತಿರುವುದಕ್ಕೆ ಈ ಲೇಖನಗಳಲ್ಲಿ ಒಂದಾದರೂ ಒಂದು ಮುನ್ಸೂಚನೆ ಇದ್ದೇ ಇತ್ತು.
ಬಿಜೆಪಿ ಸೋಲಿಗೆ ಬಸವರಾಜ ಬೊಮ್ಮಾಯಿ ಅವರು ಕಾರಣ, ಬಿ.ಎಲ್. ಸಂತೋಷ್ ಅವರು ಕಾರಣ, ಅಮಿತ್ ಶಾ ಎಡವಿದರು, ನಾಯಕರ ದುರಹಂಕಾರ ಕಾರಣ, ಬಜರಂಗ ದಳ ವಿಚಾರವನ್ನು ಜಾಸ್ತಿ ಹೈಪ್ ಮಾಡಿದ್ದರಿಂದ ಕಾಂಗ್ರೆಸ್‌ಗೆ ಮುಸ್ಲಿಂ ಓಟ್ ಧ್ರುವೀಕರಣ ಆಯಿತು, ಬಜರಂಗ ದಳ ವಿಚಾರವನ್ನು ಅಬ್ಬರಿಸಬಾರದಿತ್ತು, ಇಷ್ಟು ಹೊಸಬರಿಗೆ ಏಕಾಏಕಿ ಟಿಕೆಟ್ ಬದಲಾಯಿಸಬಾರದಿತ್ತು ಎನ್ನುವ ʼವಿಶ್ಲೇಷಣೆʼಗಳು ವಿವಿಧೆಡೆ ನಡೆಯುತ್ತಿವೆ. ನಿಜವಾಗಿಯೂ ಬಿಜೆಪಿಗೆ ಈ ವಿಚಾರಗಳ್ಯಾವುವೂ ತಿಳಿಯದ್ದಲ್ಲ. ಎಲೆಕ್ಷನ್ ಮಷೀನ್ ಎಂದೇ ಬಿಜೆಪಿಯನ್ನು ಕರೆಯುವುದುಂಟು. ಹಾಗಾಗಿ ಯಾವ್ಯಾವ ವಿಷಯಗಳು ಚುನಾವಣೆಯಲ್ಲಿ ಲಾಭ ಮಾಡಬಹುದು, ಯಾವುದರಿಂದ ನಷ್ಟ ಆಗಬಹುದು, ಯಾರು ಯಾರ ಜತೆ ಅಡ್ಜಸ್ಟ್‌ಮೆಂಟ್ ಮಾಡಿಕೊಂಡಿದ್ದಾರೆ ಎನ್ನುವುದನ್ನು ತಿಳಿಯಲಾಗದಷ್ಟು ಮುಗ್ಧ, ಈಗಿನ ಬಿಜೆಪಿ ಸಂಘಟನೆ ಅಲ್ಲ. ಆದರೂ ಇಷ್ಟು ಹೀನಾಯ ಸೋಲಿಗೆ ಕಾರಣವೇನು?
ಕರ್ನಾಟಕದ ಮಟ್ಟಿಗೆ ಬಿಜೆಪಿಯಲ್ಲಿ ದ್ರವತೆ (Fluidity) ಇಲ್ಲವಾಗಿದೆ ಎನ್ನುವುದು ಸ್ಪಷ್ಟ. ಅಂದರೆ ಅಗತ್ಯಕ್ಕೆ ತಕ್ಕಂತೆ ತನ್ನ ತಂತ್ರವನ್ನು ಬದಲಾಯಿಸಿಕೊಳ್ಳುವ ಫ್ಲ್ಯೂಯಿಡಿಟಿ ಕಾಣೆಯಾಗಿದೆ. ಒಂದು ಗುರಿಯನ್ನು ನಿರ್ಧಾರ ಮಾಡಿಕೊಂಡು ಹೊರಟ ನಂತರ ಮಾರ್ಗ ಮಧ್ಯೆ ಇದು ಸರಿಯಾದ ದಾರಿಯಲ್ಲ ಎನ್ನಿಸಿದರೆ ನಡುವಿನಲ್ಲೇ ಸರಿಪಡಿಸಿಕೊಳ್ಳಲು (ಕೋರ್ಸ್ ಕರೆಕ್ಷನ್) ಮಾಡಿಕೊಳ್ಳಲು ಆಗುವಷ್ಟು ವ್ಯವಸ್ಥೆ ಹೊಂದಿಕೆಯಾಗಬೇಕು. ಹಾಗೇನಾದರೂ ಆಗದಿದ್ದರೆ, ಎದುರಿಗೆ ಸೋಲು ಕಂಡರೂ, ಮೇಲಿನಿಂದ ಆದೇಶ ಬಂದಿಲ್ಲವಲ್ಲ, ನಮಗೇನು ಆಗಬೇಕು ಎನ್ನುತ್ತ ಅದೇ ದಾರಿಯಲ್ಲಿ ನಡೆಯುತ್ತಿರುತ್ತಾರೆ. ಸೋಲು ನಿಶ್ಚಿತ ಎಂದು ತಿಳಿದ ನಂತರವೂ ಕೋರ್ಸ್ ಕರೆಕ್ಷನ್‌ಗೆ ಅವಕಾಶ ಇಲ್ಲದಂತಾಗಿದ್ದು ಬಿಜೆಪಿಯ ಈಗಿನ ಸ್ಥಿತಿಗೆ ಕಾರಣ. ಅದರಲ್ಲಿನ ಗೆಲ್ಲುವ ಜೋಶ್, ಗೆದ್ದರೂ ಸೋತರೂ ಇದು ನನಗೆ ಸೇರಿದ್ದು ಎನ್ನುವ ಹೊಣೆಗಾರಿಕೆ, ಚೈತನ್ಯ ಇಲ್ಲದಂತಾಗಿ, 10-6ರವರೆಗಿನ ಕಚೇರಿ ರೀತಿ ಆಗಿದೆ ಎನ್ನುವುದಕ್ಕೆ ಸಾಕ್ಷಿ. ಫಲಿತಾಂಶ ಹೊರಬಂದು ತಿಂಗಳು ಕಳೆದರೂ ಇನ್ನೂ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಆಯ್ಕೆ ಮಾಡಲು ಬಿಜೆಪಿ ಮುಂದಾಗಿಲ್ಲ ಎನ್ನುವುದೂ ಮತ್ತೊಂದು ನಿದರ್ಶನ.
ತಮ್ಮ ನೇತೃತ್ವದಲ್ಲಿ ಚುನಾವಣೆ ಸೋತಿದ್ದೇವೆ, ರಾಜೀನಾಮೆ ಕೊಡುತ್ತೇನೆ ಎಂದು ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿ 15 ದಿನದ ಮೇಲಾಗುತ್ತ ಬಂದರೂ ಇನ್ನೂ ಆ ಕಡೆಯಿಂದ ಏನೂ ʼಸೂಚನೆʼ ಬಂದಿಲ್ಲ. ಸೂಚನೆ ಬಾರದೆ ನಳಿನ್ ಕುಮಾರ್ ಕಟೀಲ್ ಅವರು ಯಾವುದೇ ಕೆಲಸ ಮಾಡದ ಶಿಸ್ತಿನ ಸಿಪಾಯಿ. ಅವರು ಸೂಚನೆಗಾಗಿ ಕಾದು ಕುಳಿತಿದ್ದಾರೆ. ಇನ್ನು ವಿಧಾನಸಭೆ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡುವುದು ಎಂಬ ಗೊಂದಲ ಬಿಜೆಪಿಯಲ್ಲಿದೆ ಎಂಬ ಚರ್ಚೆಯಿದೆ. ಅಸಲಿಗೆ ಈ ಬಗ್ಗೆ ಯಾವುದೇ ಸಭೆಯೇ ಇಲ್ಲಿವರೆಗೂ ನಡೆದಿಲ್ಲ. ದೆಹಲಿ ಮಟ್ಟದಲ್ಲಿ ಬಿಜೆಪಿಯ ನಂ.1, ಹಾಗೂ ನಂ.2 ಎಂದು ಕರೆಯಲಾಗುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಜತೆ ಈ ಬಗ್ಗೆ ಚರ್ಚೆಯೇ ಆಗದೆ ತೀರ್ಮಾನ ಆಗಲು ಅಸಾಧ್ಯ. ಈ ವಿಚಾರಗಳನ್ನು ಚರ್ಚೆಗೆ ತೆಗೆದುಕೊಳ್ಳಬೇಕೆ ಬೇಡವೇ ಎಂದು ನಿರ್ಧಾರ ಮಾಡಲಾಗದಷ್ಟು ಮೌನ ದೆಹಲಿ ಮಟ್ಟದಲ್ಲಿ ಆವರಿಸಿದೆ. ಆ ಪಕ್ಷದ ಕಾರ್ಯಕರ್ತರು ಹಾಗೂ ಮತದಾರರು, ಶೋಲೆ ಸಿನಿಮಾದಲ್ಲಿ ರಹೀಮ್ ಚಾಚಾ ಹೇಳುವ ʼಇತನಾ ಸನ್ನಾಟಾ ಕ್ಯೂ ಹೈ ಭಾಯ್?ʼ(ಯಾಕೆ ಈ ಗಾಢ ಮೌನ ಆವರಿಸಿದೆ?) ಎಂಬ ಡೈಲಾಗ್ ರೀತಿ ಆಗಿದೆ.
ಆದರೆ ಪಕ್ಷದ ಕಾರ್ಯಕರ್ತರ ವಲಯದಲ್ಲಿ, ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಯಾರು ಸೂಕ್ತ ಎಂಬ ಚರ್ಚೆ ಜೋರಾಗಿ ನಡೆದಿದೆ. ಇದರ ಕುರಿತು ಸಾಮಾಜಿಕ ಜಾಲತಾಣ ಬಳಕೆದಾರರಲ್ಲಿ ಯಾವ ಅಭಿಪ್ರಾಯ ಇರಬಹುದು ಎಂದು ತಿಳಿಯಲು ನನ್ನ ವೈಯಕ್ತಿಕ ಫೇಸ್‌ಬುಕ್ ಖಾತೆಯಲ್ಲಿ ಕಳೆದ ವಾರ ಒಂದು ಸಣ್ಣ ಸಮೀಕ್ಷೆ ನಡೆಸಲಾಯಿತು. ಆರು ಕಾಂಬಿನೇಷನ್ ನೀಡಿ, ಯಾವುದು ಬೆಸ್ಟ್ ಎಂದು ಕೇಳಲಾಗಿತ್ತು. ಇದೇನೋ ಲಕ್ಷಾಂತರ ಜನರು ಪ್ರತಿಕ್ರಿಯಿಸಿದ ಸಮೀಕ್ಷೆಯೊ, ವೈಜ್ಞಾನಿಕವಾಗಿ ಡಿಸೈನ್ ಮಾಡಿದ ಎಕ್ಸಿಟ್ ಪೋಲ್ ಅಲ್ಲ. ಇದರ ಸಂಖ್ಯೆಯು ಕರ್ನಾಟಕದ ಜನಸಂಖ್ಯೆ ಹೋಲಿಕೆಯಲ್ಲಿ ಸ್ಟ್ಯಾಂಡರ್ಡ್ ಸ್ಯಾಂಪಲ್ ಸೈಜ್ ಅಲ್ಲ. ಆದರೆ ಬಿಜೆಪಿ ಕುರಿತು ಸಾರ್ವಜನಿಕರು ಹೊಂದಿರುವ ಅಭಿಪ್ರಾಯವನ್ನು ಅಂದಾಜು ಮಾಡಲು ಸಾಕಾಗುತ್ತದೆ. 6 ಕಾಂಬಿನೇಷನ್‌ನಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿದವರಲ್ಲಿ ಶೇಕಡಾವಾರು ಫಲಿತಾಂಶ ಈ ಕೆಳಕಂಡಂತೆ ಇದೆ.
ಈ ಫಲಿತಾಂಶವನ್ನು ನೋಡಿದರೆ, ಸಿ.ಟಿ. ರವಿ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಪಕ್ಷ ಸಂಘಟಿಸಲು ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ವಿಧಾನಸಭೆ ಪ್ರತಿಪಕ್ಷ ನಾಯಕನಾಗಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನು ಎದುರಿಸಲು ಹೆಚ್ಚು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಎರಡನೇ ಸ್ಥಾನದಲ್ಲಿ ಎನ್. ರವಿಕುಮಾರ್ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಕಾಂಬಿನೇಷನ್ ಇದ್ದರೆ ಮೂರನೆಯ ಸ್ಥಾನದಲ್ಲಿ ಶೋಭಾ ಕರಂದ್ಲಾಜೆ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್, ನಾಲ್ಕನೇ ಸ್ಥಾನದಲ್ಲಿ ಅರವಿಂದ ಬೆಲ್ಲದ್ ಹಾಗೂ ವಿ. ಸುನಿಲ್ ಕುಮಾರ್, ಐದರಲ್ಲಿ ಡಾ. ಸಿ.ಎನ್. ಅಶ್ವತ್ಥನಾರಾಯಣ-ಬಸನಗೌಡ ಪಾಟೀಲ್ ಯತ್ನಾಳ್ ಕಾಂಬಿನೇಷನ್ ಇದೆ. ಪ್ರಲ್ಹಾದ ಜೋಶಿ-ಆರ್. ಅಶೋಕ್ ಜೋಡಿಗೆ ಯಾರೂ ಮತ ನೀಡಿಲ್ಲ. ಈ ಆರು ಆಯ್ಕೆಗಳನ್ನು ಹೊರತುಪಡಿಸಿದ ಕಾಂಬಿನೇಷನ್‌ಗಳನ್ನು ಅನೇಕರು ಸೂಚಿಸಿದ್ದಾರೆ. ಪ್ರತಾಪ್ ಸಿಂಹ-ಯತ್ನಾಳ್, ಅನಂತಕುಮಾರ್ ಹೆಗಡೆ-ಯತ್ನಾಳ್, ಬಿ.ವೈ. ವಿಜಯೇಂದ್ರ-ಯತ್ನಾಳ್, ಪ್ರಲ್ಹಾದ ಜೋಶಿ-ಸುರೇಶ್ ಕುಮಾರ್, ಪ್ರಲ್ಹಾದ ಜೋಶಿ-ಯತ್ನಾಳ್, ಅರುಣ್ ಕುಮಾರ್ ಪುತ್ತಿಲ-ಯತ್ನಾಳ್, ಪ್ರತಾಪ್ ಸಿಂಹ- ಸುನಿಲ್ ಕುಮಾರ್, ಸಿ.ಟಿ. ರವಿ-ಸುನಿಲ್ ಕುಮಾರ್, ಅನಂತಕುಮಾರ್ ಹೆಗಡೆ-ಸುನಿಲ್ ಕುಮಾರ್… ಮುಂತಾದ ಹೊಸ ಕಾಂಬಿನೇಷನ್‌ಗಳನ್ನು ಹೇಳಿದ್ದಾರೆ.
ಒಟ್ಟಾರೆ ನೋಡಿದರೆ ಬಿಜೆಪಿ ನಾಯಕರ ಕುರಿತು ಇರುವ ಪ್ರಬಲವಾದ ಅಭಿಪ್ರಾಯ ಎಂದರೆ ʼಮ್ಯಾನೇಜರ್‌ಗಳುʼ ಬೇಡ, ʼಲೀಡರ್‌ಗಳುʼ ಬೇಕು ಎನ್ನುವುದು. ಮೇಲಿನಿಂದ ಬರುವ ಸೂಚನೆಗಳನ್ನು ಪಾಲಿಸುವ ಬೊಂಬೆಗಳು ಬೇಡ. ನರೇಂದ್ರ ಮೋದಿಯವರ ರೀತಿ, ಯೋಗಿ ಆದಿತ್ಯನಾಥ ಅವರ ರೀತಿ ಸ್ವಯಂ ನಿರ್ಧಾರ ಕೈಗೊಳ್ಳುವ, ಎದುರಾಳಿಗಳನ್ನು ಎದುರು ಹಾಕಿಕೊಳ್ಳುವ, ಕಾರ್ಯಕರ್ತರಿಗೆ ಸ್ಪಂದಿಸುವ, ಜನರ ಕುರಿತು ಒಂದಷ್ಟಾದರೂ ಕಾಳಜಿ ಇರುವವರು ಬೇಕು ಎನ್ನುವುದು ಸ್ಪಷ್ಟವಾಗಿ ಕಾಣಬಹುದು.
ಈಗಾಗಲೆ ಅಧಿಕಾರ ಅನುಭವಿಸಿರುವ ಕೆಲವು ನಾಯಕರ ಕುರಿತು ಮಾತನಾಡಿದರೆ ಕಾರ್ಯಕರ್ತರು ಉರಿದುಬೀಳುವಷ್ಟು ಹೆಸರು ಕೆಡಿಸಿಕೊಂಡಿದ್ದಾರೆ. ಕರ್ನಾಟಕದಲ್ಲಿ ಮೂರು ಬಾರಿ ಅಧಿಕಾರಕ್ಕೆ ಬಂದ ಸಮಯದಲ್ಲೇ ಬಿಜೆಪಿಯ ಅನೇಕ ನಾಯಕರು ನಂಬಿಕೆಯ ಕೊರತೆ (Trust Deficit) ಎದುರಿಸುತ್ತಿದ್ದಾರೆ ಎನ್ನುವುದು ಗಂಭೀರ ವಿಚಾರ. ತಾವು ಯಾವ ಘೋಷಣೆಗಳನ್ನು ಮಾಡಿಕೊಂಡು ಅಧಿಕಾರಕ್ಕೆ ಬಂದರೋ ಅದರಿಂದ ದೂರ ಸರಿದಿದ್ದಾರೆ. ಭ್ರಷ್ಟರಾಗಿದ್ದಾರೆ, ದುರಹಂಕಾರಿಗಳಾಗಿದ್ದಾರೆ, ವಿಷಯಲಂಪಟರಾಗಿದ್ದಾರೆ, ಜಾತಿವಾದಿಗಳಾಗಿದ್ದಾರೆ, ಗುಂಪುಗಳನ್ನು ಕಟ್ಟಿದ್ದಾರೆ, ಒಬ್ಬರ ಕಾಲು ಮತ್ತೊಬ್ಬರು ಎಳೆದುಕೊಳ್ಳುವುದರಲ್ಲಿ ನಿರತರಾಗಿದ್ದಾರೆ, ಒಬ್ಬರ ಹೆಗಲಮೇಲೆ ಮತ್ತೊಬ್ಬರು ಬಂದೂಕು ಇಟ್ಟು ಹೊಡೆಯುತ್ತಿದ್ದಾರೆ… ಇಂತಹ ಅನೇಕ ಅಪಸವ್ಯಗಳು ಬಿಜೆಪಿ ಸಂಘಟನೆಯಲ್ಲಿ ತೂರಿಕೊಂಡಿವೆ. ಈಗ ರಾಜ್ಯ ಅಧ್ಯಕ್ಷರಾಗುವವರು ಹಾಗೂ ವಿಪಕ್ಷ ನಾಯಕನಾಗುವವರು ಈ ಅಪಸವ್ಯಗಳನ್ನು ಮೀರುವವರಾಗಿರಬೇಕು ಎಂದು ಆ ಪಕ್ಷದ ಹಿತೈಷಿಗಳು, ಕಾರ್ಯಕರ್ತರು ಬಯಸುತ್ತಿದ್ದಾರೆ ಎನ್ನುವುದನ್ನು ಇಲ್ಲಿ ಕಾಣಬಹುದು.
ಆದರೆ ಇಂದಿನ ಕೇಂದ್ರ ಬಿಜೆಪಿ ನಾಯಕತ್ವ ಅತ್ಯಂತ ಪ್ರಬಲವಾಗಿದೆ. ಪ್ರಬಲ ನಾಯಕತ್ವವು ತನ್ನ ಕೆಳಗೆ ಪ್ರಬಲವಾದ ನಾಯಕರನ್ನು ಆಯ್ಕೆ ಮಾಡುತ್ತದೆಯೇ ಎನ್ನುವುದು ಅನುಮಾನ. ಇಂದಿರಾ ಗಾಂಧಿ ಸಮಯದಲ್ಲೂ ಹೀಗೆಯೇ ಆಗಿ ಪಕ್ಷದಿಂದ ಅನೇಕ ಪ್ರಬಲ ನಾಯಕರು ಹೊರನಡೆದರು. ಪ್ರಬಲ ನಾಯಕತ್ವ ಎನ್ನುವುದು ಸಾಮಾನ್ಯವಾಗಿ ಕೆಲಸ ಮಾಡುವುದೇ ಹೀಗೆ. ಅವರು ಹೇಳುವ ಆದೇಶಗಳನ್ನು ಚಾಚೂ ತಪ್ಪದೆ ಕೆಲಸ ಮಾಡುವವರು ಇದ್ದರೆ ಸಾಕಾಗಿರುತ್ತದೆ. ಅಂತಹ ಸ್ಥಿತಿಯಲ್ಲಿ, ಸ್ವತಂತ್ರ ಆಲೋಚನೆಯುಳ್ಳವರನ್ನು, ಪ್ರಬಲರನ್ನು ರಾಜ್ಯ ಬಿಜೆಪಿಗೆ ಆಯ್ಕೆ ಮಾಡಲಾಗುತ್ತದೆಯೇ ಎನ್ನುವುದಕ್ಕೆ ಕಾಲವೇ ಉತ್ತರಿಸಬೇಕು.
ಒಂದಷ್ಟು ಚಟುವಟಿಕೆ ಕಾಣುತ್ತಿದೆ:
ಕೆಲ ದಿನಗಳಿಂದ ಬಿಜೆಪಿಯಲ್ಲಿ ಒಂದಷ್ಟು ಹಲ್‌ಚಲ್ ಆಗುತ್ತಿದೆ. ರಾಜ್ಯದಲ್ಲಿ ನಡೆಯುವ ಬೆಳವಣಿಗೆಗಳ ಕುರಿತು ಪ್ರಮುಖವಾಗಿ ಸಿ.ಟಿ. ರವಿ, ಬಸವರಾಜ ಬೊಮ್ಮಾಯಿ, ಸುನಿಲ್ ಕುಮಾರ್, ಎನ್. ರವಿಕುಮಾರ್, ಪ್ರಲ್ಹಾದ ಜೋಶಿ, ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಪ್ರತಿಕ್ರಿಯಿಸುವಿಕೆ, ಸ್ಪಂದಿಸುವಿಕೆ ಹೆಚ್ಚಾಗಿದೆ. ಆದರೆ ರಾಜ್ಯ ರಾಜಕಾರಣದಿಂದ ಶೋಭಾ ಕರಂದ್ಲಾಜೆ ಗಾಯಬ್ ಆಗಿದ್ದಾರೆ. ಚುನಾವಣಾ ನಿರ್ವಹಣಾ ಸಮಿತಿ ಹೊಣೆ ಹೊತ್ತಿದ್ದ ಶೋಭಾ ಅವರು ತಾವಾಯಿತು, ತಮ್ಮ ಇಲಾಖೆಯಾಯಿತು, ಅದರ ಸಮ್ಮೇಳನಗಳಾಯಿತು, ಜಿ20 ಸಭೆಗಳಾಯಿತು ಎನ್ನುತ್ತ ಕಾರ್ಯನಿರತರಾಗಿದ್ದಾರೆ. ಸಮಾಜದ ಆಗುಹೋಗುಗಳಿಗೆ ಸ್ಪಂದಿಸುವುದು ಒಂದು ಸಂದೇಶವಾದರೆ, ತನ್ನ ಪಾಡಿಗೆ ಕೆಲಸ ಮಾಡುತ್ತಿರುವುದೂ ರಾಜಕೀಯದಲ್ಲಿ ಸಂದೇಶ ಎಂದೇ ಪರಿಗಣಿತವಾಗುತ್ತದೆ.
ಇದನ್ನೂ ಓದಿ: D ಕೋಡ್ ಅಂಕಣ: ಕ್ರೀಡಾ ಸಂಸ್ಥೆಗಳಿಂದ ರಾಜಕಾರಣಿಗಳನ್ನು ಹೊರಹಾಕುವುದು ಯಾವಾಗ?