Site icon Vistara News

D ಕೋಡ್‌ ಅಂಕಣ: ಕ್ರೀಡಾ ಸಂಸ್ಥೆಗಳಿಂದ ರಾಜಕಾರಣಿಗಳನ್ನು ಹೊರಹಾಕುವುದು ಯಾವಾಗ?

Cricketer ricky ponting and politician Sharad pawar wrestler sakshi mallik and wfi chairman brij bhushan sharan singh

#image_title

ಈ ಘಟನೆ ನಡೆದು ಇನ್ನೂ ಇಪ್ಪತ್ತು ವರ್ಷ ಕೂಡ ಆಗಿಲ್ಲ. 2006ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿಯನ್ನು ಆಸ್ಟ್ರೇಲಿಯಾ ಕ್ರಿಕೆಟ್‌ ಟೀಂ ಗೆದ್ದಿತು. ಮುಂಬೈಯಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ತಂಡವನ್ನು ಸೋಲಿಸಿದ ರಿಕಿ ಪಾಂಟಿಂಗ್‌ ನೇತೃತ್ವದ ತಂಡಕ್ಕೆ ಟ್ರೋಫಿ ನೀಡುವ ಸಮಯ. ತಂಡದ ಸದಸ್ಯರೆಲ್ಲರೂ ಟ್ರೋಫಿಗಾಗಿ ಕಾದು ಕುಳಿತಿದ್ದಾರೆ, ಸ್ಟೇಡಿಯಂನಲ್ಲಿರುವ ಜನರು ಶಿಳ್ಳೆ ಹಾಕುತ್ತ, ಆ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ಟ್ರೋಫಿಯನ್ನು ಹಿಡಿದು ನಿಂತಿದ್ದವರು ಬಿಸಿಸಿಐ ಅಧ್ಯಕ್ಷ ಹಾಗೂ ರಾಜಕಾರಣಿ ಶರದ್‌ ಪವಾರ್‌. ರಿಕಿ ಪಾಂಟಿಂಗ್‌ ಒಂದಷ್ಟು ಸಮಯ ನೋಡಿದವರೇ, ಶರದ್‌ ಪವಾರನ್ನು ಮುಟ್ಟಿ, ಈ ಕಡೆ ಕೊಡಿ ಟ್ರೋಫಿಯನ್ನ ಅಂತ ಬೆರಳಲ್ಲಿ ಸನ್ನೆ ಮಾಡಿದರು. ಮುಂದೆ ಬನ್ನಿ ಎಂದ ಶರದ್‌ ಪವಾರ್‌, ನಗುನಗುತ್ತ ಟ್ರೋಫಿಯನ್ನು ನೀಡಿದರು. ಇದರಿಂದ ಮತ್ತಷ್ಟು ಸಂತೋಷಗೊಂಡ ತಂಡದ ಸದಸ್ಯರು ಟ್ರೋಫಿ ಜತೆಗೆ ಫೋಟೊ ತೆಗೆದುಕೊಳ್ಳಲು ಗುಂಪಾದರು. ಈ ಸಮಯದಲ್ಲಿ ನೀನ್ಯಾಕಪ್ಪ ಮಧ್ಯದಲ್ಲಿ ನಿಂತಿದ್ದೀಯ ಎನ್ನುವ ರೀತಿಯಲ್ಲಿ ಪವಾರನ್ನು ಬದಿಗೆ ಸರಿಸಿ ಫೋಟೊಗೆ ಪೋಸ್‌ ನೀಡಿದರು. ಅತ್ತಿಂದಿತ್ತ ನೋಡಿದ ಪವಾರ್‌, ವೇದಿಕೆಯಿಂದ ಇಳಿದು ಹೋದರು.

ಆಗಿನ ಕಾಲಕ್ಕೆ ಇದು ಅತಿ ದೊಡ್ಡ ವಿವಾದ. ದೇಶದ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿದ್ದವರು, ಮಹಾರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ಹೆಸರು, ಅದಕ್ಕೂ ಮಿಗಿಲಾಗಿ ಈ ಟೂರ್ನಿಯನ್ನು ಭಾರತದಲ್ಲಿ ಹೋಸ್ಟ್‌ ಮಾಡಿರುವ ಬಿಸಿಸಿಐ ಅಧ್ಯಕ್ಷರೇ ಶರದ್‌ ಪವಾರ್‌. ಅವರನ್ನು ಬದಿಗೆ ಸರಿಸಿ ಪಾಂಟಿಂಗ್‌ ಅವಮಾನ ಮಾಡಿದರು ಅಂತ ವಿವಾದ ಆಗಿತ್ತು. ಆಸ್ಟ್ರೇಲಿಯಾದ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ ಪವಾರ್‌, ಇದು ಅನಾಗರಿಕ ವರ್ತನೆ ಎಂದಿದ್ದರು. ಆನಂತರ ಸ್ವತಃ ಎಲ್ಲಿಯೂ ಅಸಮಾಧಾನ ಹೊರಹಾಕದಿದ್ದರೂ, ಬಿಸಿಸಿಐ ಪದಾಧಿಕಾರಿಗಳ ಮೂಲಕ ಆಟ್ರೇಲಿಯಾ ಕ್ರಿಕೆಟ್‌ ಮಂಡಳಿಗೆ (ಸಿಎ) ʼಬಿಸಿʼ ಮುಟ್ಟಿಸಿದರು. ಕೊನೆಗೆ ಸಿಎ ಕ್ಷಮಾಪಣೆ ಪತ್ರ ಬರೆಯುವುದಷ್ಟೆ ಅಲ್ಲದೆ ಸ್ವತಃ ಪಾಂಟಿಂಗ್‌ ಫೋನ್‌ ಮಾಡಿ ಶರದ್‌ ಪವಾರ್‌ ಕ್ಷಮೆ ಯಾಚಿಸಿದರು. ಈ ಒಂದು ಫೋನ್‌ ಕಾಲ್‌ಗೂ ಮುನ್ನ ಪಾಂಟಿಂಗ್‌ ಹತ್ತಾರು ಸಾರಿ ಪ್ರಯತ್ನಿಸಿದ್ದರು, ಆದರೆ ಪವಾರ್‌ ಮಾತನಾಡಿರಲಿಲ್ಲ.

ಇದು ಒಂದು ಪ್ರಕರಣ, ವೈಯಕ್ತಿಕವಾಗಿ ಶರದ್‌ ಪವಾರ್‌ ಉದಾಹರಣೆಯಾಗಿ ತೆಗೆದುಕೊಂಡರೆ, ಹಿರಿಯ ರಾಜಕಾರಣಿಗೆ ಮಾಡಿದ ಅವಮಾನ ಎಂದು ಕಾಣುತ್ತದೆ. ಆದರೆ ನಿಜವಾಗಿ ಕ್ರೀಡಾ ಕ್ಷೇತ್ರದಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ನೋಡಿದರೆ ಪಾಂಟಿಂಗ್‌ ಮಾಡಿದ್ದು ಮಹಾಪರಾಧ ಏನೂ ಅಲ್ಲ ಎನ್ನಿಸುತ್ತದೆ. ಈಗ ನವದೆಹಲಿಯಲ್ಲಿ ಕುಸ್ತಿಪಟುಗಳು, ಭಾರತೀಯ ಕುಸ್ತಿ ಸಂಸ್ಥೆ(ಡಬ್ಲ್ಯುಎಫ್‌ಐ) ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್‌ ಭೂಷಣ್ ಶರಣ್‌‌ ಸಿಂಗ್‌ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಸಂಸದನ ವಿರುದ್ಧ ಇರುವುದು ಕೇವಲ ಹಣಕಾಸು ಭ್ರಷ್ಟಾಚಾರದ ಆರೋಪ ಅಲ್ಲ ಬದಲಿಗೆ ನೈತಿಕ ಭ್ರಷ್ಟಾಚಾರದ ಆರೋಪ.

ಕುಸ್ತಿಪಟುಗಳು ಆರೋಪಿಸಿದಂತೆ ಅನೇಕ ಮಹಿಳಾ ಕುಸ್ತಿಪಟುಗಳ ವಿರುದ್ಧ  ಸಂಸದ ಅಸಭ್ಯ ವರ್ತನೆ ತೋರಿದ್ದಾರೆ. ಅಪ್ರಾಪ್ತ ವಯಸ್ಸಿನ ಆಟಗಾರ್ತಿಯ ಎದೆ ಸುತ್ತಲೂ ಕೈಗಳನ್ನು ಆಡಿಸಿದ್ದರು ಮತ್ತು ಆಕೆಯನ್ನು ದುರುಗುಟ್ಟಿ ನೋಡುತ್ತಿದ್ದರು, ಉಸಿರಾಟವನ್ನು ಪರೀಕ್ಷಿಸುವ ನೆಪದಲ್ಲಿ ಅವರನ್ನು ಅಸಭ್ಯವಾಗಿ ಸ್ಪರ್ಶಿಸಿದ, ಮೈ ಸವರಿದ, ಮುಜುಗರ ಉಂಟುಮಾಡುವ ವೈಯಕ್ತಿಕ ಪ್ರಶ್ನೆಗಳನ್ನು ಕೇಳಿದ, ಟೂರ್ನಮೆಂಟ್ ಸಂದರ್ಭದಲ್ಲಿ ಗಾಯಗೊಂಡರೆ ಸಂಸ್ಥೆಯೇ ಚಿಕಿತ್ಸೆ ವೆಚ್ಚ ಭರಿಸುವುದಕ್ಕೆ ಪ್ರತಿಯಾಗಿ ಲೈಂಗಿಕ ಸುಖದ ಬೇಡಿಕೆ ಇರಿಸಿದ ಆರೋಪಗಳನ್ನು ಈ ಸಂಸದನ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ಗಳಲ್ಲಿ ವಿವರಿಸಲಾಗಿದೆ. ಈ ಪ್ರತಿಭಟನೆಯು ಇದೀಗ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವಿನ ರಾಜಕೀಯ ಸಮರವಾಗಿಯೂ ರೂಪುಗೊಂಡಿದೆ. ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕ್ರೀಡಾಪಟುಗಳನ್ನು ಎತ್ತಿಕಟ್ಟಲಾಗುತ್ತಿದೆ ಎನ್ನುವುದರಿಂದ, ಸ್ವತಃ ಕ್ರೀಡಾಪಟುಗಳೇ ʼದೇಶವಿರೋಧಿ ಟೂಲ್‌ಕಿಟ್‌ʼಗಳಾಗಿದ್ದಾರೆ ಎಂದೂ ಆರೋಪಿಸಲಾಗುತ್ತಿದೆ. ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌, ಡಬ್ಲ್ಯುಎಫ್‌ಐನಿಂದ ರಾಜೀನಾಮೆ ನೀಡಬೇಕು ಹಾಗೂ ಅವರನ್ನು ಬಂಧಿಸಬೇಕು ಎಂದು ಕುಸ್ತಿಪಟುಗಳು ಪಟ್ಟು ಹಿಡಿದಿದ್ದಾರೆ. ಒಂದೆಡೆ ಪ್ರತಿಭಟನೆ ನಡೆಯುತ್ತಿದ್ದರೆ ಮತ್ತೊಂದೆಡೆ ಕಾನೂನು ಪ್ರಕ್ರಿಯೆಯೂ ನಡೆಯುತ್ತಿದೆ. ಅವೆರಡೂ ಅದರ ಪಾಡಿಗೆ ನಡೆಯಲಿ, ಆದರೆ ಈ ಕ್ರೀಡಾ ಸಂಸ್ಥೆಯಲ್ಲಿ ರಾಜಕಾರಣಿಗೆ ಏನು ಕೆಲಸ?

ಕ್ರೀಡಾ ಸಂಸ್ಥೆಗಳಲ್ಲಿ ರಾಜಕಾರಣಿಗಳು:
 ಭಾರತದ ಜುಡೊ ಫೆಡರೇಷನ್‌ಗೆ 2013ರವರೆಗೆ, ನವದೆಹಲಿಯಲ್ಲಿ ಸಿಖ್ಖರ ನರಮೇಧ ಪ್ರಕರಣದಲ್ಲಿ ಆರೋಪಿ, ಕಾಂಗ್ರೆಸ್‌ನ ಜಗದೀಶ್‌ ಟೈಟ್ಲರ್‌ ಅಧ್ಯಕ್ಷರಾಗಿದ್ದರು. ನಂತರ ಅನೇಕ ವಿವಾದಗಳಾಗಿದ್ದವು. ಮತ್ತೆ ಚುನಾವಣೆ ನಡೆದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಪಂಜಾಬ್‌ನ ಕಾಂಗ್ರೆಸ್‌ ಸಂಸದ ಪ್ರತಾಪ್‌ ಸಿಂಗ್‌ ಬಾಜವಾ. ಈಗ ಮತ್ತೆ ವಿವಾದಕ್ಕೀಡಾಗಿ ಆಡಳಿತಾಧಿಕಾರಿಯನ್ನು ನೇಮಿಸಲಾಗಿದೆ.

ಕಾಂಗ್ರೆಸ್‌ನ ಹಿರಿಯ ನಾಯಕರಾಗಿದ್ದ ಪ್ರಿಯರಂಜನ್‌ ದಾಸ್‌ ಮುನ್ಷಿ, ಫುಟ್‌ಬಾಲ್‌ ಫೆಡರೇಷನ್ನಿನ ಅಧ್ಯಕ್ಷರಾಗಿ ಬರೊಬ್ಬರಿ 20 ವರ್ಷ ಇದ್ದರು. 2008ರಲ್ಲಿ ದಾಸ್‌ಮುನ್ಷಿಗೆ ಅನಾರೋಗ್ಯವಾದಾಗ ಆ ಸ್ಥಾನವನ್ನು ಅಲಂಕರಿಸಿದ್ದು ಮತ್ತೊಬ್ಬ ರಾಜಕಾರಣಿ ಪ್ರಫುಲ್‌ ಪಟೇಲ್‌. ಅನಾರೋಗ್ಯದ ನಡುವೆಯೇ ದಾಸ್‌ಮುನ್ಷಿ ಅವರನ್ನು ಗೌರವ ಅಧ್ಯಕ್ಷರಾಗಿ ನೇಮಿಸಲಾಯಿತು. ವಿಶ್ವದ ಟಾಪ್‌-100 ರ‍್ಯಾಂಕಿಂಗ್‌ ಒಳಕ್ಕೂ ಭಾರತವನ್ನು ತರಲಾಗದಿದ್ದರೂ ಫುಟ್‌ಬಾಲ್‌ ಆಡಳಿತದಲ್ಲಿ ದಾಸ್‌ಮುನ್ಷಿ ಪವರ್‌ಫುಲ್‌. ವರ್ಲ್ಡ್‌ ಕಪ್‌ ಕಮಿಷನರ್‌ ಆಗಿ, ವಿಶ್ವಕಪ್‌ ಸ್ಥಳಗಳ ಹೊಣೆಹೊರುವುದೂ ಸೇರಿ ಅನೇಕ ಜವಾಬ್ದಾರಿಗಳನ್ನು ನಿಭಾಯಿಸಿ ಸೈ ಎನ್ನಿಸಿಕೊಂಡವರು. ಫುಟ್‌ಬಾಲ್‌ ಕ್ರೀಡೆ ಭಾರತದಲ್ಲಿ ಬೆಳೆಯಲಿಲ್ಲ ಎನ್ನುವುದನ್ನು ಬಿಟ್ಟರೆ ಉಳಿದೆಲ್ಲ ಒಳ್ಳೆಯದೇ ಆಯಿತು.

ಬಿಜೆಪಿಯ ವಿಜಯ್‌ಕುಮಾರ್‌ ಮಲ್ಹೋತ್ರಾ, ಆರ್ಚರಿ ಫೆಡರೇಷನ್‌ ಅಧ್ಯಕ್ಷರಾಗಿ 31 ವರ್ಷ ಇದ್ದರು. ಮಹಾರಾಷ್ಟ್ರದ ಖೊಖೊ ಹಾಗೂ ಕಬಡ್ಡಿ ಸಂಸ್ಥೆಗಳ ಅಧ್ಯಕ್ಷ ಸ್ಥಾನದಿಂದ ರಾಜಕೀಯ ಜೀವನ ಆರಂಭಿಸಿ ಕೊನೆಗೆ ಬಿಸಿಸಿಐ ಅಧ್ಯಕ್ಷರೂ ಆಗಿದ್ದವರು ಶರದ್‌ ಪವಾರ್‌. ರಾಜ್ಯ ಕ್ರಿಕೆಟ್‌ ಅಸೋಸಿಯೇಷನ್‌ಗಳಲ್ಲಂತೂ ರಾಜಕಾರಣಿಗಳು ಲೆಕ್ಕಕ್ಕಿಲ್ಲ. ಕ್ರೀಡಾಪಟುಗಳನ್ನು ಕ್ರೀಡಾ ಸಂಸ್ಥೆಗಳಲ್ಲಿ ಇರುವಂತೆ ಮಾಡಲು ಕೆಲವು ನಿಯಮಗಳಿವೆ. ಅದನ್ನು ರಾಜಕಾರಣಿಗಳು ಹೇಗೆ ಬಳಸಿಕೊಳ್ಳುತ್ತಾರೆ ಎನ್ನುವುದಕ್ಕೆ ಕ್ಲಾಸಿಕ್‌ ಉದಾಹರಣೆ ಎಂದರೆ ಈಗಿನ ಕೇಂದ್ರ ಸರ್ಕಾರದಲ್ಲಿ ಅತ್ಯಂತ ಕ್ರಿಯಾಶೀಲ ಹಾಗೂ ಪರಿಶ್ರಮಿ ಸಚಿವರಲ್ಲೊಬ್ಬರಾದ ಅನುರಾಗ್‌ ಸಿಂಗ್‌ ಠಾಕುರ್‌.

ಅವರು ಹಿಮಾಚಲ ಪ್ರದೇಶ ಕ್ರಿಕೆಟ್‌ ಅಸೋಸಿಯೇಷನ್‌ ಅಧ್ಯಕ್ಷರಾಗಿದ್ದರು.(ಅವರ ತಂದೆ ಪ್ರೇಮ್‌ಕುಮಾರ್‌ ಧುಮಾಲ್‌ ಅವರು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಆಗಿದ್ದವರು). ರಾಜ್ಯ ಮಟ್ಟದಲ್ಲಿ ಕ್ರೀಡಾಪಟುಗಳನ್ನು ಆಯ್ಕೆ ಮಾಡಬೇಕೆಂದರೆ ಕನಿಷ್ಠ ಒಂದು ಫರ್ಸ್ಟ್‌ ಕ್ಲಾಸ್‌ ಮ್ಯಾಚ್‌ ಆಡಬೇಕೆಂಬ ನಿಯಮವಿತ್ತು. ಅದಕ್ಕಾಗಿ ತಮ್ಮನ್ನು ತಾವೇ ತಂಡಕ್ಕೆ ಆಯ್ಕೆ ಮಾಡಿಕೊಂಡ ಠಾಕೂರ್‌ಜಿ, 2000ದಲ್ಲಿ ಜಮ್ಮು ಕಾಶ್ಮೀರದ ವಿರುದ್ಧದ ಪಂದ್ಯದಲ್ಲಿ ಕ್ಯಾಪ್ಟನ್‌ ಆಗಿ ಆಡಿದರು. ಆ ಮ್ಯಾಚ್‌ನಲ್ಲಿ ಹಿಮಾಚಲಕ್ಕೆ ಸೋಲಾಯಿತು. ಆದರೆ ಹಿಮಾಚಲದ ರಣಜಿ ಟ್ರೋಫಿ ತಂಡವನ್ನು ಆಯ್ಕೆ ಮಾಡುವ ಸಮಿತಿಯ ಅಧ್ಯಕ್ಷರಾಗಲು ಅಷ್ಟು ಸಾಕಾಗಿತ್ತು. ಇದೇ ಒಂದು ಮ್ಯಾಚಿನ ಅನುಭವವು, ಅವರನ್ನು ಬಿಸಿಸಿಐನ ರಾಷ್ಟ್ರೀಯ ಜೂನಿಯರ್‌ ಆಯ್ಕೆ ಸಮಿತಿ ಪ್ರವೇಶಕ್ಕೂ ಅವಕಾಶ ನೀಡಿತು. ನಂತರ ಬಿಸಿಸಿಐ ಅಧ್ಯಕ್ಷರೂ ಆದರು. ಬಿಜೆಪಿ ನಾಯಕ, ದಿವಂಗತ ಅರುಣ್‌ ಜೇಟ್ಲಿ ಅವರು ಸಾಕಷ್ಟು ವರ್ಷ ಕ್ರಿಕೆಟ್‌ ಸಂಸ್ಥೆಯಲ್ಲಿ ಸಕ್ರಿಯರಾಗಿದ್ದವರು. ಶರದ್‌ ಪವಾರ್‌, ಅನುರಾಗ್‌ ಠಾಕೂರ್‌ ಅಷ್ಟೆ ಅಲ್ಲದೆ ಎನ್‌ಸಿಪಿಯ ಮಾಧವರಾವ್‌ ಸಿಂಧಿಯಾ ಸಹ ಬಿಸಿಸಿಐ ಅಧ್ಯಕ್ಷರಾಗಿದ್ದವರು. ವಿಶ್ವದ ಅತ್ಯಂತ ಶ್ರೀಮಂತ ಕ್ರೀಡಾ ಸಂಸ್ಥೆಗಳಲ್ಲೊಂದಾದ ಬಿಸಿಸಿಐನಲ್ಲಿ ಅನುರಾಗ್‌ ಠಾಕೂರ್‌ ಅವರ ಸಹೋದರ ಅರುಣ್‌ ಸಿಂಗ್‌ ಧುಮಾಲ್‌ ಐಪಿಎಲ್‌ ಅಧ್ಯಕ್ಷರಾಗಿ, ಕೇಂದ್ರ ಗೃಹಸಚಿವ ಅಮಿತ್‌ ಶಾ ಪುತ್ರ ಜಯ್‌ ಶಾ ಕಾರ್ಯದರ್ಶಿಯಾಗಿ, ಕಾಂಗ್ರೆಸ್‌ ಪಕ್ಷದ ರಾಜೀವ್‌ ಶುಕ್ಲ ಉಪಾಧ್ಯಕ್ಷರಾಗಿ ಹಾಗೂ ಬಿಜೆಪಿಯ ಆಶೀಶ್‌ ಶೆಲ್ಲಾರ್‌ ಖಜಾಂಚಿಯಾಗಿದ್ದಾರೆ. ಇವಿಷ್ಟೆ ಅಲ್ಲ, ವಿವಿಧ ಕ್ರೀಡಾ ಸಂಸ್ಥೆಗಳಲ್ಲಿ ರಾಜಕಾರಣಿಗಳು ಅಧ್ಯಕ್ಷರಾಗಿದ್ದವರ ವಿವರ ಹೀಗಿದೆ.

ಇವರಲ್ಲಿ ಅನೇಕರು ಈಗಲೂ ಮುಂದುವರಿದಿದ್ದರೆ ಕೆಲವರು ಬದಲಾಗಿರಲೂಬಹುದು. ಕರ್ನಾಟಕದ ಕಾಂಗ್ರೆಸ್‌ ಶಾಸಕ ಎನ್‌.ಎ ಹ್ಯಾರಿಸ್‌ ಅವರು ಫುಟ್‌ಬಾಲ್‌ ಫೆಡರೇಷನ್‌ ಉಪಾಧ್ಯಕ್ಷರಾಗಿ 2022ರಲ್ಲಷ್ಟೆ ಆಯ್ಕೆಯಾಗಿದ್ದಾರೆ. ಇನ್ನು ಕರ್ನಾಟಕ ಒಲಿಂಪಿಕ್‌ ಅಸೋಸಿಯೇಷನ್‌ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಕೆ. ಗೋವಿಂದರಾಜು ಅವರು 2002ರಿಂದಲೂ ಸೇವೆ ಸಲ್ಲಿಸುತ್ತಿದ್ದಾರೆ. ಅಂದರೆ ಸತತ 21 ವರ್ಷದಿಂದ ಕರ್ನಾಟಕ ಒಲಿಂಪಿಕ್‌ ಅಸೋಸಿಯೇಷನ್‌ನ ಕ್ರೀಡಾ ಜ್ಯೋತಿಯನ್ನು ಹಿಡಿದು ಓಡುತ್ತಿದ್ದಾರೆ.

ಕ್ರೀಡಾಪಟುಗಳೇ ವಿರಳ:
2016ರಲ್ಲಿ ಇನ್‌ಗವರ್ನ್‌ ರಿಸರ್ಚ್‌ ಸರ್ವೀಸಸ್‌ ಎಂಬ ಸಂಸ್ಥೆ ತಯಾರಿಸಿದ ವರದಿಯ ಪ್ರಕಾರ 27 ವಿವಿಧ ಕ್ರೀಡಾ ಒಕ್ಕೂಟ ಅಥವಾ ಸಂಸ್ಥೆಗಳಲ್ಲಿ ಕೇವಲ ಒಂದರಲ್ಲಿ, ಅದರೂ ಅಥ್ಲೆಟಿಕ್ಸ್‌ ಫೆಡರೇಷನ್‌ ಆಫ್‌ ಇಂಡಿಯಾ ಮಾತ್ರವೇ ರಾಷ್ಟ್ರೀಯ ಮಟ್ಟದ ಮಾಜಿ ಕ್ರೀಡಾಪಟುವನ್ನು ಅಧ್ಯಕ್ಷನನ್ನಾಗಿ ಹೊಂದಿತ್ತು. ಎಲ್ಲ ಕ್ರೀಡಾ ಸಂಸ್ಥೆಗಳನ್ನೂ ಸೇರಿಸಿದರೆ ಶೇ.47ರಲ್ಲಿ ರಾಜಕಾರಣಿಗಳೇ ಅಧ್ಯಕ್ಷರಾಗಿದ್ದರು. 32 ಒಲಿಂಪಿಕ್‌ ಕ್ರೀಡಾ ಸಂಸ್ಥೆಗಳ ಪೈಕಿ 15 ಅಧ್ಯಕ್ಷರು ರಾಜಕಾರಣಿಗಳು. ಅಧ್ಯಕ್ಷರಾಗದಿದ್ದರೆ ಹೋಗಲಿ, ತಮ್ಮ ಆಡಳಿತ ಮಂಡಳಿಗಳಲ್ಲಿ ರಾಷ್ಟ್ರೀಯ ಮಟ್ಟದ ಮಾಜಿ ಕ್ರೀಡಾಪಟುಗಳನ್ನು ಹೊಂದಿದ್ದ ಸಂಸ್ಥೆಗಳ ಸಂಖ್ಯೆ ಕೇವಲ 9.

100 ಮೀಟರ್‌ ಸ್ಪ್ರಿಂಟರ್‌ ದುತೀ ಚಾಂದ್‌ ಒಮ್ಮೆ ಹೇಳಿದ್ದರು. “ಹೈದರಾಬಾದ್‌ನಿಂದ ನಾನು ಒಬ್ಬಳೇ ಪ್ರಯಾಣಿಸಿದ್ದೆ, ನನ್ನ ಕೋಚ್‌ ಸಹಿತ ಜತೆಗೆ ಬರಲಿಲ್ಲ. ಮ್ಯಾನೇಜರ್‌ ಹಾಗೂ ಇತರೆ ಸಿಬ್ಬಂದಿಗೆ ಬಿಸಿನೆಸ್‌ ಕ್ಲಾಸ್‌ ವಿಮಾನದ ಟಿಕೆಟ್‌ ನೀಡಿದರೆ ಆಟಗಾರರಿಗೆ ಎಕಾನಮಿ ಕ್ಲಾಸ್‌ ಬುಕ್‌ ಮಾಡಲಾಗುತ್ತದೆ. 36 ಗಂಟೆಗಳ ಪ್ರಯಾಣದಲ್ಲಿ ಸರಿಯಾಗಿ ನಿದ್ದೆ ಹಾಗೂ ವಿಶ್ರಾಂತಿ ಪಡೆಯಲು ಆಗಲಿಲ್ಲ. ಆಟಗಾರರನ್ನು ಹೀಗೆ ನಡೆಸಿಕೊಂಡರೆ ಅವರು ಒಲಿಂಪಿಕ್‌ನಲ್ಲಿ ಪದಕ ಹೇಗೆ ತರುತ್ತಾರೆ?” ಎಂದಿದ್ದರು.

ಅನೇಕ ಸಂದರ್ಭದಲ್ಲಿ ಆಟಗಾರರು ರೈಲ್ವೆ ನಿಲ್ದಾಣದಲ್ಲಿ ಸಂಕಷ್ಟಪಡುತ್ತಿರುವ, ಸಿಲುಕಿರುವ ಸುದ್ದಿಗಳೂ ಪ್ರಸಾರವಾಗಿವೆ. ಇದಕ್ಕೆಲ್ಲ ಕಾರಣವೆಂದರೆ ಭಾರತದ ಕ್ರೀಡಾ ಸಂಸ್ಥೆಗಳನ್ನು, ಈ ಕ್ರೀಡೆಗಳ ಗಂಧ ಗಾಳಿ ಗೊತ್ತಿಲ್ಲದ ರಾಜಕಾರಣಿಗಳು ವಹಿಸಿಕೊಂಡಿದ್ದಾರೆ.

ಭಾರತದಲ್ಲಿ ಪ್ರಜಾಪ್ರಭುತ್ವ ಇದೆ ಎನ್ನುತ್ತಲೇ 75 ವರ್ಷ ಆಡಳಿತ ನಡೆಸಿದ ರಾಜಕಾರಣಿಗಳು ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಆವರಿಸಿಕೊಂಡಿದ್ದಾರೆ. ಅದು ಸಾಂಸ್ಕೃತಿಕ ಸಂಸ್ಥೆಯಿರಬಹುದು, ಭಜನಾ ಮಂಡಳಿ ಇರಬಹುದು, ದೇವಸ್ಥಾನ ಇರಬಹುದು, ಸಹಕಾರಿ ಸಂಸ್ಥೆ ಇರಬಹುದು… ಎಲ್ಲದರಲ್ಲಿಯೂ ರಾಜಕಾರಣಿಗಳಿದ್ದಾರೆ. ಹಾಗೂ ಅವರು ಆ ಕ್ಷೇತ್ರಕ್ಕೆ ಕೊಡುಗೆ ನೀಡುವುದಕ್ಕಿಂತಲೂ ಹೆಚ್ಚಾಗಿ ಪಡೆದುಕೊಂಡಿರುವುದೇ ಹೆಚ್ಚು.

ರಾಜಕಾರಣದಲ್ಲಿ ಸೋತಾಗ ಅಥವಾ ತಮ್ಮ ಪಕ್ಷದ ಅಧಿಕಾರ ಇಲ್ಲದಿರುವಾಗ ಈ ರಾಜಕಾರಣಿಗಳನ್ನು ʼಬ್ಯುಸಿʼಯಾಗಿಡಲು ಕ್ರೀಡಾ ಸಂಸ್ಥೆಗಳ ಉಪಯೋಗವಾಗುತ್ತದೆ. ತಾವು ಕ್ರೀಡಾ ಸಂಸ್ಥೆಗಳಲ್ಲಿರುವುದರಿಂದ ಕ್ರೀಡೆಗೇ ಲಾಭ ಎನ್ನುವುದು ಇವರುಗಳ ವಾದ. ತಾವು ಇರುವುದರಿಂದ ಸಂಸ್ಥೆಗೆ ಹಣಕಾಸು ನೆರವು, ಸ್ಪಾನ್ಸರ್‌ ಹುಡುಕುವುದು ಸುಲಭ ಎನ್ನುತ್ತಾರೆ.

ಕ್ರೀಡೆ ಎನ್ನುವುದು ಯುವಜನರ ಕ್ಷೇತ್ರ. ಇಲ್ಲಿಯೂ ತಮ್ಮ ಪ್ರಭಾವವನ್ನು ಬೀರಬೇಕು ಎಂದು ಒಂದೆಡೆ ತಮ್ಮ ಪ್ರಚಾರದ ಗೀಳನ್ನು ಈಡೇರಿಸಿಕೊಳ್ಳಲು ರಾಜಕಾರಣಿಗಳು ಕ್ರೀಡಾ ಕ್ಷೇತ್ರವನ್ನು ಬಳಸಿಕೊಳ್ಳುತ್ತಾರೆ ಎನ್ನುವುದು ನಿಜ. ಆದರೆ ಕ್ರೀಡೆ ಹಾಗೂ ಸೆಕ್ಸ್‌ಗೆ ಅವಿನಾಭಾವ ಸಂಬಂಧ ಇರುವುದು ಜಗಜ್ಜಾಹೀರಾದ ವಿಚಾರ. ಅದೇ ರೀತಿ ಸೆಕ್ಸ್‌ ಮತ್ತು ರಾಜಕಾರಣಕ್ಕಿರುವ ಸಂಬಂಧವೂ ಎಲ್ಲರಿಗೂ ತಿಳಿದಿರುವಂಥದ್ದು. ಕ್ರೀಡಾಪಟುಗಳಿಗೆ ಅವಕಾಶಗಳನ್ನು ನೀಡುವ ʼವಿವೇಚನಾಧಿಕಾರʼವನ್ನು ದುರುಪಯೋಗಪಡಿಸಿಕೊಂಡ ಉದಾಹರಣೆಗಳು ಆಗಿಂದಾಗ್ಗೆ ಆರೋಪಗಳಾಗಿ ಕೇಳುತ್ತವೆ. ಎಂದಿನಂತೆ ಇವುಗಳಿಗೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲದೆ ಬಿದ್ದುಹೋಗುತ್ತವೆ. ರಾಜಕಾರಣ-ಅಧಿಕಾರ- ಸೆಕ್ಸ್‌ನ ತ್ರಿಕೋನ ಜಾಲದಲ್ಲಿ ಕ್ರೀಡೆ ಸಿಲುಕೊಕೊಂಡಿರುವುದಂತೂ ನಿಜ. ಕೆಲವು ರಾಜಕಾರಣಿಗಳು ಕ್ರೀಡಾ ಸಂಸ್ಥೆಗಳಿಗೆ ಒಳಿತು ಮಾಡಿದವರೂ ಇರಬಹುದು. ಆದರೆ ಅವರನ್ನು ಗುರಾಣಿಯಾಗಿಸಿಕೊಂಡು ನೂರಾರು ರಾಜಕಾರಣಿಗಳು ಕ್ರೀಡಾಕ್ಷೇತ್ರವನ್ನು ಗಬ್ಬೆಬ್ಬಿಸುತ್ತಿರುವುದಂತೂ ನಿಜ. ವಿಶ್ವದಲ್ಲೆ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗುವತ್ತ ಸಾಗಿರುವ ಭಾರತವು ಒಲಿಂಪಿಕ್‌ ಸೇರಿ ಯಾವುದೇ ಅಂತಾರಾಷ್ಟ್ರೀಯ ಕ್ರೀಡೆಯಲ್ಲಿ ಕಳಪೆ ಪ್ರದರ್ಶನ ನೀಡಲು ಇಲ್ಲಿನ ಆಡಳಿತ ಸಂಸ್ಥೆಗಳಲ್ಲಿ ರಾಜಕಾರಣಿಗಳು ಸೇರಿಕೊಂಡು ವ್ಯವಸ್ಥೆಯನ್ನು ಹಾಳುಮಾಡಿರುವುದು ಕಾರಣವೇ ಹೊರತು ನಮ್ಮ ಕ್ರೀಡಾಪಟುಗಳ ಅಸಾಮರ್ಥ್ಯವಲ್ಲ. ಕ್ರೀಡಾ ಸಂಸ್ಥೆಗಳಲ್ಲಿ ರಾಜಕಾರಣಿಗಳಿಗೆ ಒಂದೆರಡು ಸ್ಥಾನ ನೀಡಬಹುದಾದರೂ ಅಧ್ಯಕ್ಷ, ಕಾರ್ಯದರ್ಶಿಯಂತಹ ಮುಖ್ಯ ಹುದ್ದೆಗಳನ್ನು ಮಾಜಿ ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಕ್ರೀಡಾಪಡುಗಳು, ಕೋಚ್‌ಗಳು, ಆಡಳಿತದ ಅನುಭವವಿರುವ ನಿವೃತ್ತ ಅಧಿಕಾರಿಗಳಿಗೆ ನೀಡುವುದು ಒಳ್ಳೆಯದು.

ಕ್ರೀಡೆ ಎನ್ನುವುದು ಕ್ರೀಡಾಪಟುಗಳ ಬೆವರಿನ ಫಲವೇ ಹೊರತು ರಾಜಕಾರಣಿಗಳ ಆಡುಂಬೊಲ ಅಲ್ಲ. ರಿಕಿ ಪಾಂಟಿಂಗ್‌ ನಿರ್ದಾಕ್ಷಿಣ್ಯವಾಗಿ ತನ್ನ ಬೆವರು ಹನಿಯ ಫಲವಾದ ಚಾಂಪಿಯನ್ಸ್‌ ಕಪ್‌ಅನ್ನು ಕಿತ್ತುಕೊಂಡು ಕೆಳಗೆ ಕಳಿಸಿದ ರೀತಿ ಭಾರತದ ರಾಜಕಾರಣಗಿಳನ್ನು ಕ್ರೀಡಾ ಕ್ಷೇತ್ರದಿಂದ ಹೊರಗಟ್ಟುವ ಕಾರ್ಯ ಆದಷ್ಟು ಬೇಗ ಆಗಬೇಕು. ಇಲ್ಲದಿದ್ದರೆ ಯಾವುದೇ ಸರ್ಕಾರ ಕ್ರೀಡೆಗೆ ನೀಡುವ ಪ್ರೋತ್ಸಾಹಕ ನೀರಿನಲ್ಲಿ ಹೋಮ ಮಾಡಿದಂತೆ ಆಗುತ್ತದೆ.

ಇದನ್ನೂ ಓದಿ: D ಕೋಡ್ ಅಂಕಣ: ಬಿಜೆಪಿಗೆ ಲಿಂಗಾಯತ ಮತಗಳು ನಷ್ಟವಾಗಿಲ್ಲ ಎನ್ನುವುದು ಎಷ್ಟು ಸುಳ್ಳು? ಮೀಸಲು ಜೇನು ಕಚ್ಚಿದ್ದೆಷ್ಟು?

Exit mobile version