Site icon Vistara News

D ಕೋಡ್‌ ಅಂಕಣ: ಜೆಡಿಎಸ್‌ಗೆ 2023ರ ವಿಧಾನಸಭೆ ಚುನಾವಣೆ ‘Final Match’ ಏಕೆಂದರೆ…

#image_title

ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿದ್ದೇವೆ. ಚುನಾವಣೆಯ ಕಾವು 2018ರಲ್ಲಿ ಇದ್ದಷ್ಟು ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ಕಂಡುಬರುತ್ತಿಲ್ಲ. ಆಗಾಗ ಅಬ್ಬರಿಸಿದ್ದು, ಮತ್ತೆ ತಣ್ಣಗಾಗಿದ್ದು ಬಿಟ್ಟರೆ ನಿರಂತರ ಕಾವು ಇಲ್ಲ. ಬಹುಶಃ ಅಭ್ಯರ್ಥಿಗಳ ಘೋಷಣೆ ಇನ್ನೇನು ಕೆಲವೇ ದಿನಗಳಲ್ಲಿ ಆಗಲಿದ್ದು, ಆ ನಂತರ ಕಾವು ಏರಬಹುದು. ಆದರೆ ಪ್ರಾದೇಶಿಕ ಪಕ್ಷ ಜೆಡಿಎಸ್ ಮಾತ್ರ ಎರಡೂ ಪಕ್ಷಗಳಿಗಿಂತ ಮೊದಲೇ ʼಕಣʼವನ್ನು ಸಿದ್ಧ ಮಾಡಿಕೊಳ್ಳುತ್ತಿದೆ.

ಇಡೀ ಜೆಡಿಎಸ್ ಪಕ್ಷ ಎನ್ನುವುದಕ್ಕಿಂತಲೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಇಡೀ ಪಕ್ಷವನ್ನು ಹೊತ್ತೊಯ್ಯುತ್ತಿದ್ದಾರೆ ಎಂದರೆ ತಪ್ಪಿಲ್ಲ. ಈ ಬಾರಿ 123 ಸ್ಥಾನ ಗಳಿಸಿ ಸರಳ ಬಹುಮತದೊಂದಿಗೆ ಸುಸ್ಥಿರ ಸರ್ಕಾರ ರಚನೆ ಮಾಡುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ. ಪಂಚರತ್ನ ಎಂಬ ಯೋಜನೆಯೊಂದಿಗೆ ರಥಯಾತ್ರೆ ನಡೆಸುತ್ತಿದ್ದಾರೆ. ಶಿಕ್ಷಣ, ಆರೋಗ್ಯ, ಕೃಷಿ, ಯುವಜನ ಮತ್ತು ಮಹಿಳೆ ಹಾಗೂ ವಸತಿ ಎಂಬ ಐದು ಅಂಶಗಳನ್ನು ಜಾರಿ ಮಾಡಿ ರಾಜ್ಯವನ್ನು ಸಮಗ್ರ ಅಭಿವೃದ್ಧಿಯತ್ತ ಕೊಂಡೊಯ್ಯುತ್ತೇವೆ ಎಂದು ಹೇಳುತ್ತಿದ್ದಾರೆ. ಮೈಸೂರಿನಲ್ಲಿ ನಡೆದ ಬೃಹತ್‌ ಸಮಾರೋಪ ಕಾರ್ಯಕ್ರಮದಲ್ಲಿ ಸ್ವತಃ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಭಾಗವಹಿಸಿ ಮಾತನಾಡಿದ್ದಾರೆ. ಈ ಬಾರಿ ಜೆಡಿಎಸ್‌ ಪಕ್ಷವನ್ನು ಜನರು ಅಧಿಕಾರಕ್ಕೆ ತರಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪಂಚರತ್ನ ಘೋಷಣೆಯನ್ನೇ ಪ್ರಣಾಳಿಕೆ ಎಂದು ಹೇಳಬಹುದು. ಈ ರೀತಿ, ಎರಡೂ ರಾಷ್ಟ್ರೀಯ ಪಕ್ಷಗಳಿಗೂ ಮೊದಲಿನಿಂದಲೇ ಯಾತ್ರೆ ನಡೆಸುತ್ತಿರುವ ಕುಮಾರಸ್ವಾಮಿ ಅವರಿಗೆ ಕ್ಷೇತ್ರಗಳಲ್ಲಿ ಭರ್ಜರಿ ಸ್ವಾಗತಗಳು ಸಿಗುತ್ತಿವೆ ಎಂದು ಆ ಪಕ್ಷದ ನಾಯಕರು ಹೇಳುತ್ತಿದ್ದಾರೆ. ತರಕಾರಿ, ಹಣ್ಣು, ಹೂ ಸೇರಿ ವಿವಿಧ ಬಗೆಯ ಬೃಹತ್ ಹಾರಗಳನ್ನು ಕ್ರೇನ್ ಮೂಲಕ ಕುಮಾರಸ್ವಾಮಿಯವರಿಗೆ ಗೌರವ ಸೂಚಿಸಿವುದೊಂದು ಟ್ರೆಂಡ್ ಆಗಿದೆ, ದಾಖಲೆಯನ್ನೂ ಬರೆದಿದೆ. ಆದರೆ ಜೆಡಿಎಸ್‌ಗೆ ಮುಂದಿನ ದಿನ ಅಷ್ಟು ಸಲೀಸಾಗಿದೆ ಎಂದೆನಿಸುವುದಿಲ್ಲ.

ಇತಿಹಾಸವನ್ನೊಮ್ಮೆ ನೋಡಿದರೆ, ಈಗಿನ ಜನತಾದಳ(ಜಾತ್ಯತೀತ) ಎನ್ನುವುದು 1999ರಲ್ಲಿ ಜನದಾದಳದಿಂದ ಒಡೆದು ಎರಡು ಭಾಗವಾದ ಪಕ್ಷಗಳಲ್ಲೊಂದು. ಮತ್ತೊಂದು ಪಕ್ಷ ಶರದ್ ಯಾದವ್ ನೇತೃತ್ವದ ಜನತಾದಳ (ಸಂಯುಕ್ತ) ಅಥವಾ ಜೆಡಿಯು. 1975ರಿಂದ 1977ರವರೆಗೆ ದೇಶದ ಮೇಲೆ ಪ್ರಧಾನಿ ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ್ದು ಜಯಪ್ರಕಾಶ ನಾರಾಯಣರ ನೇತೃತ್ವದಲ್ಲಿ. ಪ್ರಮುಖ ರಾಜಕೀಯ ನಾಯಕರನ್ನು ಸರ್ಕಾರ ಬಂಧಿಸಿದ್ದರಿಂದ ಭೂಗತವಾಗಿ ಹೋರಾಟವನ್ನು ಕೈಗೊಳ್ಳಲು ಸಾಧ್ಯವಾಗಿದ್ದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು ಹಾಗೂ ಭಾರತೀಯ ಜನಸಂಘದ ಕಾರ್ಯರ್ತರಿಂದ. ಈ ಹೋರಾಟದ ನಂತರ 1977ರಲ್ಲಿ ನಡೆದ ಚುನಾವಣೆಯಲ್ಲಿ ಕೇಂದ್ರದಲ್ಲಿ ಮೊರಾರ್ಜಿ ದೇಸಾಯಿ ಪ್ರಧಾನಿಯಾಗುವ ಮೂಲಕ ಸ್ವಾತಂತ್ರ್ಯಾನಂತರ ಮೊದಲ ಬಾರಿಗೆ ಕಾಂಗ್ರೆಸೇತರ ಸರ್ಕಾರ ರಚನೆಯಾಯಿತು. ಅಂದರೆ ಜನತಾ ಪರಿವಾರ ಎಂದು ಇಡೀ ದೇಶದಲ್ಲಿ ಛಿದ್ರಛಿದ್ರವಾಗಿ ಹೋಯಿತೋ ಅದರ ಆ ವಿಚಾರಧಾರೆಯ ಮೂಲಾಧಾರ ಎಂದರೆ ಕಾಂಗ್ರೆಸ್ ವಿರೋಧ.

1978ರಲ್ಲಿ ಕರ್ನಾಟಕದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜನತಾ ಪಕ್ಷ ಹಾಗೂ ಭಾರತೀಯ ಜನಸಂಘ ಮೈತ್ರಿ ಮಾಡಿಕೊಂಡು ಜನತಾ ಪಕ್ಷದ ಚಿಹ್ನೆಯಲ್ಲೇ ಸೆಣಸಿದವು. ಜನತಾ ಪಕ್ಷ ಶೇ.37.95 ಮತದೊಂದಿಗೆ 59 ಶಾಸಕರನ್ನು ಹೊಂದಿತು. ಕಾಂಗ್ರೆಸ್ (ಐ) ಪಕ್ಷವು ಶೇ.44.25 ಮತಗಳೊಂದಿಗೆ 149 ಸ್ಥಾನ ಗಳಿಸಿ ಗದ್ದುಗೆ ಏರಿತು. ದ್ವಿಸದಸ್ಯತ್ವ ಕುರಿತ ಸಂಘರ್ಷದ ನಂತರ ಜನಸಂಘವು ವಿಸರ್ಜನೆಯಾಗಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) 1980ರಲ್ಲಿ ರಚನೆಯಾದ್ಧರಿಂದ 1983ರ ಚುನಾವಣೆಯನ್ನು ಬಿಜೆಪಿ ಪ್ರತ್ಯೇಕವಾಗಿ ಸೆಣೆಸಿತು. ಶೇ.7.93 ಮತ ಪಡೆದು 18 ಸೀಟುಗಳನ್ನು ಬಿಜೆಪಿ ಜಯಿಸಿತು. ಶೇ.33.07 ಮತದೊಂದಿಗೆ ಜನತಾ ಪಕ್ಷ 95, ಶೇ. 40.42 ಮತದೊಂದಿಗೆ ಕಾಂಗ್ರೆಸ್ 82 ಸ್ಥಾನ ಗಳಿಸಿತು. ಲಿಂಗಾಯತ ಹಾಗೂ ಒಕ್ಕಲಿಗ ನಾಯಕರ ನಡುವಿನ ಗುದ್ದಾಟದಲ್ಲಿ ಬ್ರಾಹ್ಮಣ ಸಮುದಾಯದ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಲು ಸರ್ವಸಮ್ಮತಿಯ ನಾಯಕರಾದರು. ತಮ್ಮ 95 ಸ್ಥಾನದ ಜತೆಗೆ ಬಿಜೆಪಿ(18), ಕಮ್ಯುನಿಸ್ಟ್(ಒಟ್ಟು 6) ಹಾಗೂ 16 ಪಕ್ಷೇತರರ ಬಹಿರಂಗ ಬೆಂಬಲವನ್ನು ಸಾಬೀತುಪಡಿಸಿ ಸರ್ಕಾರ ನಡೆಸಿದರು. ಆ ವೇಳೆಗಾಗಲೆ ಕಾಂಗ್ರೆಸ್‌ನಲ್ಲಿ ಎಸ್. ನಿಜಲಿಂಗಪ್ಪ ಹಾಗೂ ವೀರೇಂದ್ರ ಪಾಟೀಲರಿಗೆ ಅವಮಾನ ಮಾಡಿದ್ದರ ಕಾರಣಕ್ಕೆ ವೀರಶೈವ ಲಿಂಗಾಯತರು ಜನತಾ ಪಕ್ಷದ ಕಡೆಗೆ ವಾಲಿದ್ದರು. ಅಲ್ಲಿಗೆ ಬಿಜೆಪಿಯು ಜನತಾ ಸರ್ಕಾರಕ್ಕೆ ಬಹಿರಂಗ ಬೆಂಬಲ ನೀಡಿ ಈ ಮತಗಳನ್ನು ಪಡೆಯಲು ಸಿದ್ಧವಾಯಿತು.

ಜನತಾ ಪಕ್ಷ ಒಡೆದು ಜನತಾದಳವಾದಾಗ 1994ರ ಕರ್ನಾಟಕ ಚುನಾವಣೆಯಲ್ಲಿ ಮತ ಪ್ರಮಾಣ ಶೇ.33.54ಕ್ಕೆ ಕುಸಿಯಿತು. ಮುಂದಿನ 1999ರ ಚನಾವಣೆಯಲ್ಲಿ ಜೆಡಿಎಸ್ ಆದಾಗ ಮತ ಪ್ರಮಾಣ ಕೇವಲ 10.42ಕ್ಕೆ ಕುಸಿಯಿತು. ಒಂದು ಕಡೆ ಜನತಾ ಮತಗಳು ಕುಗ್ಗುತ್ತಿದ್ದರೆ ಇನ್ನೊಂದೆಡೆ ಬಿಜೆಪಿ ಶೇ.16.99(1994), ಶೇ.20.69(1999), ಶೇ.28.33(2004), ಶೇ.33.86(2008)… ಹೀಗೆ ಏರುತ್ತಲೇ ಸಾಗಿತು. 2018ರ ಚುನಾವಣೆಯಲ್ಲಿ ಬಿಜೆಪಿ ಶೇ.36.22 ಮತ ಪಡೆದರೆ ಜೆಡಿಎಸ್ ಪಡೆದಿದ್ದು ಕೇವಲ ಶೇ.18.36. ಸ್ವಾತಂತ್ರ್ಯಾ ನಂತರ ಒಟ್ಟು ಮತದಲ್ಲಿ ಶೇ.50ರ ಆಸುಪಾಸು ಪಡೆಯುತ್ತಿದ್ದ ಕಾಂಗ್ರೆಸ್ 1983ರಲ್ಲಿ ಶೇ.40ಕ್ಕೆ ಇಳಿಯಿತು. ಜನತಾ ಪಕ್ಷದ, ನಂತರ ಜನತಾ ದಳದ ಪ್ರಾಬಲ್ಯ ಹೆಚ್ಚುತ್ತ ಹೋದಂತೆಲ್ಲ ಕಾಂಗ್ರೆಸ್ ಕುಸಿಯುತ್ತ ಸಾಗಿತು. ಆದರೆ 2004ರ ನಂತರದಲ್ಲಿ ಕಾಂಗ್ರೆಸ್ ಮತಪ್ರಮಾಣ ಶೇ. 35ರ ಆಸುಪಾಸಿಗೆ ಬಂದು ನಿಂತಿದೆ. ಕುಸಿತವನ್ನು ತಡೆಗಟ್ಟಿಕೊಂಡು ತನ್ನ ಮತಗಳನ್ನು ಹಿಡಿದಿಟ್ಟುಕೊಂಡಿದೆ. ಕಡಿಮೆ ಆಗುತ್ತಿರುವುದು ಜೆಡಿಎಸ್‌ನದ್ದು ಮಾತ್ರ.

ಈ ಹಿಂದೆ ಜನತಾ ಪಕ್ಷಕ್ಕೆ ಬಹಿರಂಗ ಬೆಂಬಲ ನೀಡಿದ ಕಾರಣಕ್ಕೆ ರಾಮಕೃಷ್ಣ ಹೆಗಡೆ ಮೂಲಕ ವೀರಶೈವ ಲಿಂಗಾಯತ ಮತಗಳು ಬಿಜೆಪಿಗೆ ಆಗಮಿಸಿದ್ದು, ಮತ್ತೆ ಬೇರೆ ಕಡೆ ಚದುರಿಲ್ಲ. ಜನತಾ ಮತಗಳು ಕುಸಿಯುತ್ತಾ ಹೋದಂತೆ ಬಿಜೆಪಿ ಬೆಳೆಯುತ್ತಾ ಸಾಗುತ್ತಿದೆ. ಅಂದರೆ ಜನತಾ ಮತಗಳನ್ನು ಬಿಜೆಪಿ ಪಡೆಯುತ್ತಿದೆ. ಈ ಹಿಂದೆಯೇ ತಿಳಿಸಿದಂತೆ ಜನತಾ ಮತಗಳು ಎಂದರೆ ಅದು ಕಾಂಗ್ರೆಸ್ ವಿರೋಧಿ ಮತಗಳು. ಕಾಂಗ್ರೆಸ್ ಪಕ್ಷವನ್ನು ವಿರೋಧಿಸಲು ಈ ಮತಗಳಿಗೆ ಒಂದು ಸದೃಢ ಪಕ್ಷ ಬೇಕು. ಈ ಹಿಂದೆ ಅದು ಜನತಾ ಪರಿವಾರ ಆಗಿತ್ತು. ಆದರೆ ಈಗ ಆ ಸ್ಥಾನವನ್ನು ಬಿಜೆಪಿ ತುಂಬುತ್ತಿದೆ.

ಸೈದ್ಧಾಂತಿಕ ಖಾಲಿತನ
ಜನತಾ ಪರಿವಾರವು ದುರ್ಬಲ ಆಗುತ್ತಾ ಹೋದಂತೆ ಕರ್ನಾಟಕದಲ್ಲಿ ಬಿಜೆಪಿ ಬೆಳೆಯುತ್ತಾ ಹೋಯಿತು, ಜನತಾ ಪರಿವಾರ ಒಟ್ಟಾಗಿದ್ದರೆ ಬಿಜೆಪಿ ಬೆಳೆಯುತ್ತಲೇ ಇರಲಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ ʼವಿಸ್ತಾರ ನ್ಯೂಸ್ʼ ಪ್ರಧಾನ ಸಂಪಾದಕರಾದ ʼಹರಿಪ್ರಕಾಶ್ ಕೋಣೆಮನೆʼ ಅವರೊಂದಿಗಿನ ಸಂದರ್ಶನದಲ್ಲೂ ತಿಳಿಸಿದ್ದರು. ಜನತಾ ಪರಿವಾರದಿಂದ ಸತತವಾಗಿ ಒಡೆಯುತ್ತಾ ಜೆಡಿಎಸ್ ಆಯಿತು. ಜೆಡಿಎಸ್‌ಗೆ ಅಲ್ಲಿವರೆಗೂ ಒಂದು ಸೈದ್ಧಾಂತಿಕ ಹಿನ್ನೆಲೆ ಇತ್ತು. ಆ ಸೈದ್ಧಾಂತಿಕ ಹಿನ್ನೆಲೆಯ ಮೂರ್ತ ರೂಪವಾಗಿ ಎಚ್.ಡಿ. ದೇವೇಗೌಡರು ಸಕ್ರಿಯರಾಗಿದ್ದರು.
ದೇವೇಗೌಡರು ಎಂದರೆ ಮೊದಲಿಗೆ ರೈತರ ಕುರಿತು ಕಾಳಜಿ ಹೊಂದಿರುವವರು ಎಂಬ ಭಾವನೆ. ಎಲ್ಲ ಸಮುದಾಯಗಳನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ, ಜಾತ್ಯತೀತ ನಿಲುವನ್ನು ಪ್ರತಿಪಾದಿಸುವ ಪಕ್ಷ ಎಂಬ ಬ್ರ್ಯಾಂಡ್ ಇದೆ. ಆದರೆ ಅಚಾನಕ್ಕಾಗಿ ರಾಜಕೀಯಕ್ಕೆ ಆಗಮಿಸಿದ ಎಚ್.ಡಿ. ಕುಮಾರಸ್ವಾಮಿಯವರು ತಮ್ಮ ಹಿಂದೆ ಯಾವುದೇ ಸೈದ್ಧಾಂತಿಕ ಹಿನ್ನೆಲೆಯನ್ನು ಹೊತ್ತು ತರಲಿಲ್ಲ. ಬಿಜೆಪಿಯೊಂದಿಗೆ ಸೇರಿ ಸರ್ಕಾರ ರಚನೆ ಮಾಡಿದಾಗ ಅವರನ್ನು ಕಾಂಗ್ರೆಸ್ ಟೀಕಿಸಿತು. ಜಾತ್ಯತೀತ ತತ್ವಕ್ಕೆ ತಿಲಾಂಜಲಿ ಇಟ್ಟರು ಎಂದು ಆಪಾದಿಸಿತು. ಈ ಸಂದರ್ಭದಲ್ಲಿ ಮಾತನಾಡಿದ್ದ ಕುಮಾರಸ್ವಾಮಿ, ʼಈ ಜಾತ್ಯತೀತತೆ ಎಂದರೆ ಏನು? ಇನ್ನೂ ನನಗೆ ಅರ್ಥ ಗೊತ್ತಾಗಿಲ್ಲʼ ಎಂದು ಹೇಳಿದ್ದರು. ನಾಡಿನ ಜನರಿಗೆ ಒಳ್ಳೆಯದಾಗುವ ಎಲ್ಲ ಕೆಲಸ ಮಾಡುವುದೇ ತಮ್ಮ ಸಿದ್ಧಾಂತ ಎಂಬಂತೆ ಮುನ್ನಡೆದರು. ಅದು ಆ ಸಮಯದಲ್ಲಿ ಪ್ರಸಿದ್ಧಿಯೂ ಆಗಿತ್ತು. ಇನ್ನು, ತಂದೆಯ ಗರಡಿಯಲ್ಲಿಯೇ ಬೆಳೆದು ಅನೇಕ ಬಾರಿ ಶಾಸಕರಾಗಿ, ಸಚಿವರಾದರೂ ಎಚ್.ಡಿ. ರೇವಣ್ಣ ಅವರಿಗೆ ಈ ಸಿದ್ಧಾಂತಗಳು, ವೈಚಾರಿಕತೆ ಎಲ್ಲವೂ ಆಗಿಬರದ ವಿಚಾರಗಳು. ತನ್ನ ಕ್ಷೇತ್ರದ, ಜಿಲ್ಲೆಯ ಜನರಿಗೆ ʼವಾಸ್ತು ಪ್ರಕಾರʼ ಏನೆಲ್ಲ ಕೆಲಸ ಆಗಬೇಕು ಎನ್ನುವುದೊಂದೇ ಅವರ ಆದ್ಯತೆ.

ಇದೀಗ ದೇವೇಗೌಡರ ಕುಟುಂಬದ ಮೂರನೇ ತಲೆಮಾರು ರಾಜಕಾರಣದಲ್ಲಿದೆ. ಅತ್ತ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಆಗಲಿ, ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಆಗಲಿ, ಈ ಕಡೆ ನಿಖಿಲ್ ಕುಮಾರಸ್ವಾಮಿ ಆಗಲಿ ಇಲ್ಲಿವರೆಗೆ ಯಾವುದೇ ಸೈದ್ಧಾಂತಿಕ ನಿಲುವುಗಳನ್ನು ವ್ಯಕ್ತಪಡಿಸಿದಂತೆ ತೋರುತ್ತಿಲ್ಲ. ಇಬ್ಬರು ಸೊಸೆಯಂದಿರೂ ರಾಜಕಾರಣದಲ್ಲಿದ್ದಾರೆ, ಅವರಲ್ಲೂ ಇದೇ ಮುಂದುವರಿಕೆ ಆಗುತ್ತಿದೆ.

ರಾಜಕಾರಣದಲ್ಲಿ ಸಿದ್ಧಾಂತಗಳು ಏಕೆ ಎಂದು ಯಾರಾದರೂ ಪ್ರಶ್ನಿಸಬಹುದು. ಅದು ಅತ್ಯಾವಶ್ಯಕ. ಸಿದ್ಧಾಂತಗಳೇ ಒಂದು ಪಕ್ಷವನ್ನು ಮತ್ತೊಂದು ಪಕ್ಷದಿಂದ ಭಿನ್ನವಾಗಿಸುತ್ತವೆ. ಈ ಪಕ್ಷ ಅಧಿಕಾರಕ್ಕೆ ಬಂದರೆ ಹೀಗೆ ಮಾಡುತ್ತದೆ, ಹೀಗೆ ಮಾಡುವುದಿಲ್ಲ ಎಂಬ ಸೈದ್ಧಾಂತಿಕ ಸ್ಪಷ್ಟತೆ ಮತದಾರರಲ್ಲಿ ಮೂಡುವುದೇ ಸಿದ್ಧಾಂತದಿಂದ. ಉದಾಹರಣೆಗೆ, ಕರ್ನಾಟಕದಲ್ಲಿಯಾಗಲಿ ದೇಶದಲ್ಲೇ ಆಗಲಿ ಕಾಂಗ್ರೆಸ್ ಹಾಗೂ ಬಿಜೆಪಿ ಮೈತ್ರಿ ಸರ್ಕಾರ ರಚನೆ ಆಗುತ್ತದೆ ಎಂದು ಯಾರೂ ಊಹಿಸಲೂ ಸಾಧ್ಯವಿಲ್ಲ. ಏಕೆಂದರೆ ಅವುಗಳ ಸೈದ್ಧಾಂತಿಕ ಹಿನ್ನೆಲೆಯ ಕಾರಣಕ್ಕೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಒಟ್ಟಾರೆ ಹಿಂದುಗಳಿಗೆ ಒಳ್ಳೆಯದಾಗುತ್ತದೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಾಮಾಜಿಕ ಕಲ್ಯಾಣ ಯೋಜನೆಗಳ ಜಾರಿಯಾಗುತ್ತದೆ ಎಂದು ಜನರಿಗೆ ಅನ್ನಿಸುವುದು ಅವುಗಳ ಸಿದ್ಧಾಂತದ ಕಾರಣಕ್ಕೆ.
ಯಾವುದೇ ಸಿದ್ಧಾಂತ ಇಲ್ಲ, ಜನರಿಗೆ ಒಳ್ಳೆಯದಾಗುವುದನ್ನು ಮಾಡುತ್ತೇವೆ ಎಂದರೆ ಅದು ನಂಬಿಕೆ ಮೂಡಿಸುವುದಿಲ್ಲ. ಇವರು ಅಧಿಕಾರಕ್ಕೆ ಬಂದರೆ ಅತ್ತ ಕಾಂಗ್ರೆಸ್ ಜತೆಗೂ ಸೇರಬಹುದು, ಇತ್ತ ಬಿಜೆಪಿ ಜತೆಗೂ ಸೇರಬಹುದು ಎಂಬ ಭಾವನೆ ಬರುತ್ತದೆ. ಈಗಾಗಲೆ ಜೆಡಿಎಸ್ ಕುರಿತು ಅಂತಹ ಭಾವನೆ ಇದೆ. ಎರಡು ಬಾರಿ ಕಾಂಗ್ರೆಸ್ ಜತೆ, ಒಮ್ಮೆ ಬಿಜೆಪಿ ಜತೆಗೆ ಸರ್ಕಾರ ರಚಿಸಿದೆ. ಜೆಡಿಎಸ್‌ನ ಮೂರನೆಯ ತಲೆಮಾರು ಸಹ ಯಾವುದೇ ಸಿದ್ಧಾಂತಗಳನ್ನು ಅನುಸರಿಸುವುದಾಗಲಿ, ತಮ್ಮದೇ ಸಿದ್ಧಾಂತವನ್ನು ಸೃಷ್ಟಿಸುವುದಾಗಲಿ ಮಾಡಿಲ್ಲ. ಸೈದ್ಧಾಂತಿಕವಾಗಿ ಪಕ್ಷವನ್ನು ಒಂದಷ್ಟು ಬೆಂಬಲಿಸುತ್ತಿದ್ದ ಬಸವರಾಜ ಹೊರಟ್ಟಿ, ವೈಎಸ್ವಿ ದತ್ತ, ರಮೇಶ್ ಬಾಬು ಅಂಥವರೆಲ್ಲ ಈಗ ಬಿಜೆಪಿ ಹಾಗೂ ಕಾಂಗ್ರೆಸ್ನಲ್ಲಿ ಹಂಚಿಹೋಗಿದ್ದಾರೆ. ಹೀಗಾಗಿ ಜೆಡಿಎಸ್‌ನಲ್ಲಿ ಈಗ ಸೈದ್ಧಾಂತಿಕ ಖಾಲಿತನ ಕಾಣುತ್ತಿದೆ, ಕಾಡುತ್ತಿದೆ.

ಜಾತಿ ಕೇಂದ್ರಿತ
ಸಾಮಾನ್ಯವಾಗಿ ಜೆಡಿಎಸ್ ಪಕ್ಷವನ್ನು ಕುರಿತು ಮಾತನಾಡುವಾಗ ಅದು ಕುಟುಂಬ ಆಧಾರಿತ ಪಕ್ಷ ಎನ್ನಲಾಗುತ್ತದೆ. ಒಂದು ಕುಟುಂಬಕ್ಕೆ ಸೀಮಿತವಾದ್ಧರಿಂದ ಪಕ್ಷವು ಇಡೀ ಕರ್ನಾಟಕದಲ್ಲಿ ಅಸ್ತಿತ್ವ ಹೊಂದಲು ಸಾಧ್ಯವಾಗಲಿಲ್ಲ ಎನ್ನಲಾಗುತ್ತದೆ. ಅಸಲಿಗೆ ದೇಶದ ಬಹಳಷ್ಟು ಪ್ರಾದೇಶಿಕ ಪಕ್ಷಗಳು ಕುಟುಂಬ ಕೇಂದ್ರಿತವೇ ಆಗಿವೆ. ಉದಾಹರಣೆಗೆ ತೆಲಂಗಾಣದ ಬಿಆಆರ್‌ಎಸ್‌, ಆಂದ್ರ ಪ್ರದೇಶದ ವೈಎಸ್ಆರ್ ಕಾಂಗ್ರೆಸ್, ಬಿಹಾರದ ಆರ್‌ಜೆಡಿ, ಡಿಎಂಕೆ, ಎನ್‌ಸಿಪಿ, ಸಮಾಜವಾದಿ ಪಕ್ಷ… ಹೀಗೆ ಅನೇಕ ಉದಾಹರಣೆಗಳಿವೆ. ಆದರೆ ಈ ಪಕ್ಷಗಳಲ್ಲಿ ಅನೇಕವು ರಾಜ್ಯವ್ಯಾಪಿ ಅಸ್ತಿತ್ವವನ್ನು ಹೊಂದಿವೆ. ಸ್ವಂತ ಬಲದ ಮೇಲೆ ಸರ್ಕಾರ ರಚಿಸಿವೆ. ಆದರೆ ಜೆಡಿಎಸ್‌ಗೆ ಏಕೆ ಅದು ಸಾಧ್ಯವಾಗುತ್ತಿಲ್ಲ? ಏಕೆಂದರೆ ಇದು ಕುಟುಂಬ ಆಧಾರಿತವಲ್ಲ, ಜಾತಿ ಆಧಾರಿತ ಪಕ್ಷವಾಗಿ ಬ್ರ್ಯಾಂಡ್‌ ಆಗಿದೆ.

ಕರ್ನಾಟಕ ದಕ್ಷಿಣದಲ್ಲಿ ಜೆಡಿಎಸ್ ಅಸ್ತಿತ್ವ ಹೊಂದಿದೆ, ಏಕೆಂದರೆ ಇಲ್ಲಿ ಒಕ್ಕಲಿಗ ಸಮುದಾಯ ಪ್ರಬಲವಾಗಿದೆ ಎನ್ನುವುದೇ ಬಹುದೊಡ್ಡ ಕಾರಣ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಉತ್ತರ ಕರ್ನಾಟಕದಲ್ಲೂ ಪ್ರಸಿದ್ಧರು. ಎಚ್.ಡಿ. ಕುಮಾರಸ್ವಾಮಿಯವರು ಉತ್ತರ ಕರ್ನಾಟಕದಲ್ಲಿ ಕಾರ್ಯಕ್ರಮ ಮಾಡಿದರೂ ಜನರು ಸೇರುತ್ತಾರೆ, ಆದರೆ ಅವು ಮತಗಳಾಗಿ ಪರಿವರ್ತನೆ ಆಗುತ್ತಿಲ್ಲ. ಏಕೆಂದರೆ ಜೆಡಿಎಸ್ ಎಂದರೆ ಒಕ್ಕಲಿಗರ ಪಕ್ಷ ಎಂದು ಬ್ರ್ಯಾಂಡ್ ಆಗಿಬಿಟ್ಟಿದೆ. ಒಕ್ಕಲಿಗರ ಪಕ್ಷ ಎಂಬ ಬ್ರ್ಯಾಂಡ್ ಜತೆಜತೆಗೇ ಲಿಂಗಾಯತ ವಿರೋಧಿ ಎಂಬ ಹಣೆಪಟ್ಟಿಯೂ, ಐತಿಹಾಸಿಕ ಕಾರಣಗಳಿಂದಾಗಿ ಬಂದುಬಿಟ್ಟಿದೆ.

ಒಕ್ಕಲಿಗರ ಜತೆಗೆ ಜೆಡಿಎಸ್ ಜತೆಗೆ ಇದ್ದ ಬಹುದೊಡ್ಡ ಶಕ್ತಿ ಎಂದರೆ ಮುಸ್ಲಿಂ ಸಮುದಾಯ. ದೇವೇಗೌಡರ ಕಾರಣಕ್ಕೆ ಜೆಡಿಎಸ್ ಜತೆಗಿದ್ದ ಮುಸ್ಲಿಂ ಮತಗಳನ್ನು ಬಿಜೆಪಿ ಹಾಗೂ ಕಾಂಗ್ರೆಸ್ ಒಟ್ಟಾಗಿ ಹೊರತರುವಲ್ಲಿ 2018ರ ಚುನಾವಣೆಯಲ್ಲಿ ಯಶಸ್ವಿಯಾದವು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಟಿಪ್ಪು ಜಯಂತಿ ಘೋಷಣೆ ಮಾಡಿತು. ಇದರಿಂದಾಗಿ ಮುಸ್ಲಿಮರಿಗೆ ಕಾಂಗ್ರೆಸ್ ಹೆಚ್ಚು ಪ್ರಿಯವಾಯಿತು. ಟಿಪ್ಪು ಜಯಂತಿ ವಿರುದ್ಧ ಬಿಜೆಪಿ ನಡೆಸಿದ ಪ್ರಚಾರದ ಕಾರಣಕ್ಕೆ ಮುಸ್ಲಿಂ ಮತದಾರರಲ್ಲಿ ಅಭದ್ರತೆ ಉಂಟಾಯಿತು. ಜೆಡಿಎಸ್ ಕಡೆಗೆ ಒಲವಿದ್ದರೂ, ತನ್ನನ್ನು ಕಾಪಾಡಲು ಕಾಂಗ್ರೆಸ್‌ನಿಂದ, ಅದರಲ್ಲೂ ಸಿದ್ದರಾಮಯ್ಯ ಅವರಿಂದ ಮಾತ್ರ ಸಾಧ್ಯ ಎಂಬ ಭಾವನೆ ಮೂಡಿ ಮುಸ್ಲಿಂ ಮತಗಳು 2018ರಲ್ಲಿ ಸಂಪೂರ್ಣವಾಗಿ ಕಾಂಗ್ರೆಸ್ ಕಡೆ ವಾಲಿದವು. ಇದು ಜೆಡಿಎಸ್ ಪಕ್ಷಕ್ಕೆ ಭಾರೀ ಹೊಡೆತ ನೀಡಿತು. ಹಾಸನ, ಮೈಸೂರಿನಂತಹ ಅನೇಕ ಕಡೆಗಳಲ್ಲಿ ಸಾಂಪ್ರದಾಯಿಕವಾಗಿ ಜೆಡಿಎಸ್‌ಗೆ ಬರುತ್ತಿದ್ದ ಮುಸ್ಲಿಂ ಮತಗಳು ಸಾರಾಸಗಟಾಗಿ ಕಾಂಗ್ರೆಸ್‌ಗೆ ಹೋಗಿದ್ದು ಜೆಡಿಎಸ್ ಜಂಘಾಬಲವನ್ನು ಕುಗ್ಗಿಸಿತು.

ಈಗಿನ ಚುನಾವಣೆಯಲ್ಲಿ ಮತ್ತೆ ಮುಸ್ಲಿಂ ಮತಗಳನ್ನು ಪಡೆಯಲು ರಾಜ್ಯ ಅಧ್ಯಕ್ಷರಾಗಿ ಸಿ.ಎಂ. ಇಬ್ರಾಹಿಂ ಅವರನ್ನು ನೇಮಿಸಲಾಗಿದೆ. ರಾಜ್ಯಸಭೆಯ ಮಾಜಿ ಸದಸ್ಯ, ಉತ್ತರ ಪ್ರದೇಶ ಮೂಲದ ಒಬೈದುಲ್ಲಾ ಖಾನ್ ಆಜ್ಮಿ ಅವರನ್ನು ಕೆಲ ದಿನದ ಹಿಂದಷ್ಟೆ ದೇವೇಗೌಡರ ಸಮ್ಮುಖದಲ್ಲಿ ಜೆಡಿಎಸ್‌ಗೆ ಸೇರಿಸಿಕೊಳ್ಳಲಾಗಿದೆ. ಆದರೆ ಕಾಂಗ್ರೆಸ್‌ನಲ್ಲಿರುವಂತೆ ಜಮೀರ್ ಅಹ್ಮದ್ ಖಾನ್, ತನ್ವೀರ್ ಸೇಠ್, ಯು.ಟಿ. ಖಾದರ್ ಮುಂತಾದವರ ರೀತಿಯಲ್ಲಿ ಸ್ಥಳೀಯವಾಗಿ ಮುಸ್ಲಿಂ ಮತಗಳನ್ನು ಸೆಳೆಯಬಲ್ಲ ಪ್ರಬಲ ವ್ಯಕ್ತಿತ್ವಗಳು ಜೆಡಿಎಸ್‌ನಲ್ಲಿ ಇಲ್ಲ ಎನ್ನುವುದು ಬಹುದೊಡ್ಡ ಕೊರತೆ. ಈ ಕೊರತೆಯನ್ನು ಮೀರಿ ಹೇಗೆ ಕುಮಾರಸ್ವಾಮಿಯವರು ಮುಸ್ಲಿಂ ಮತ ಗಳಿಸುತ್ತಾರೆ ಎನ್ನುವುದು ಯಕ್ಷ ಪ್ರಶ್ನೆ.

ಅನುಕಂಪಕ್ಕೆ ಆಯಸ್ಸು ಕಡಿಮೆ
ಜೆಡಿಎಸ್ ಪಕ್ಷಕ್ಕೆ ಎಲ್ಲ ಬಾರಿಯೂ ಅರ್ಧಮರ್ಧ ಸೀಟುಗಳನ್ನು ನೀಡಿ ಮೈತ್ರಿ ಸರ್ಕಾರ ರಚನೆ ಆಗುವಂತೆ ಮಾಡಿದ್ದೀರಿ, ಈ ಬಾರಿ ಪೂರ್ಣ ಬಹುಮತ ನೀಡಿ ಎಂದು ಎಚ್.ಡಿ. ಕುಮಾರಸ್ವಾಮಿ ಕೇಳುತ್ತಿದ್ದಾರೆ. 2018ರ ಚುನಾವಣೆಯಲ್ಲಿ ಜೆಡಿಎಸ್ ಪಡೆದಿರುವುದು ಶೇ.18.36 ಮತ. ಕರ್ನಾಟಕದಲ್ಲಿ ಇಲ್ಲಿವರೆಗಿನ ಲೆಕ್ಕದ ಪ್ರಕಾರ ಸರಳ ಬಹುಮತದ 113 ಸ್ಥಾನ ಸಿಗಬೇಕೆಂದರೆ ಕನಿಷ್ಠ ಶೇ.35ಕ್ಕಿಂತ ಹೆಚ್ಚಿನ ಮತಗಳನ್ನು ಪಡೆಯಬೇಕು. ಅಂದರೆ ಜೆಡಿಎಸ್ ಬಹುತೇಕ ಶೇ.17ರಷ್ಟು ಹೆಚ್ಚು ಮತವನ್ನು ಅಂದರೆ ಕಳೆದ ಬಾರಿಗಿಂತ ದುಪ್ಪಟ್ಟು ಮತ ಪಡೆಯಬೇಕು. ಆದರೆ ಕರ್ನಾಟಕದಲ್ಲಿ ಇಲ್ಲಿವರೆಗಿನ ಇತಿಹಾಸದಲ್ಲಿ ಅಷ್ಟು ಪ್ರಮಾಣದ ಮತಗಳು ಯಾವುದೇ ಪಕ್ಷಕ್ಕೆ ಒಂದೇ ಚುನಾವಣೆಯಲ್ಲಿ ಏರಿಕೆ ಆಗಿಲ್ಲ. ಬಿಜೆಪಿಯು 1989ರಲ್ಲಿ ಶೇ.4.14 ಮತದಿಂದ 1994ರಲ್ಲಿ ಶೇ. 16.99ಕ್ಕೆ ಜಿಗಿಯಿತು. ಆನಂತರದಲ್ಲಿ ಶೇ. 20.69(1999), ಶೇ. 28.33(2004), ಶೇ. 33.86(2008) ಮತ ಗಳಿಸಿತು. 2013ರಲ್ಲಿ ಕೆಜೆಪಿ ಕಾರಣಕ್ಕೆ ಬಿಜೆಪಿ ಮತಗಳು ದಿಢೀರನೆ ಶೇ.19.89ಕ್ಕೆ ಕುಸಿದು 2018ರಲ್ಲಿ ಮತ್ತೆ ಶೇ.36.22ಕ್ಕೆ ಏರಿತು. ಅಂದರೆ 2013ರಲ್ಲಿ ಹಳೆಯ ಮತಗಳನ್ನು ಪಡೆದದ್ದು ಬಿಟ್ಟರೆ ಬಿಜೆಪಿ ಇಲ್ಲಿವರೆಗೆ ಅತಿ ದೊಡ್ಡ ಜಿಗಿತ ಕಂಡಿರುವುದು ಶೇ.8 (2004) ಮತಗಳು ಮಾತ್ರ. ಕಾಂಗ್ರೆಸ್‌ ಪಕ್ಷವು 2004ರಿಂದ 2018ರವರೆಗೆ ನಾಲ್ಕು ವರ್ಷ ಕ್ರಮವಾಗಿ ಶೇ.35.27, ಶೇ.34.76, ಶೇ.36.59 ಹಾಗೂ ಶೇ.38.04 ಮತ ಗಳಿಸುತ್ತಿದೆ. ಇಲ್ಲಿವರೆಗೆ ಕಾಂಗ್ರೆಸ್ ಕಂಡಿರುವುದು ಗರಿಷ್ಠ ಶೇ.2 ಮತ ಹೆಚ್ಚಳ ಮಾತ್ರ. ಅತ್ಯಂತ ವ್ಯವಸ್ಥಿತ ಸಂಘಟನೆ, ಸೈದ್ಧಾಂತಿಕ ಬಲ, ಹಣಬಲವನ್ನು ಹೊಂದಿರುವ ಎರಡೂ ಪಕ್ಷಗಳು ಒಂದಂಕಿಯ ಮತ ಹೆಚ್ಚಳಕ್ಕೆ ತಿಣುಕಾಡುತ್ತಿರುವಾಗ ಜೆಡಿಎಸ್ ಪಕ್ಷವು ದಿಢೀರನೆ ಶೇ.17 ಮತ ಗಳಿಕೆ ಮಾಡಬೇಕು ಎನ್ನುವುದು ಊಹಿಸಲೂ ಕಷ್ಟವಾದ ಫಲಿತಾಂಶ.

ದೇವೇಗೌಡರ ಕೊನೆಯ ಆಸೆ ಈಡೇರಿಸುತ್ತೇನೆ ಒಮ್ಮೆ ಪೂರ್ಣ ಬಹುಮತ ನೀಡಿ ಎನ್ನುವುದೂ ಸೇರಿ ಕುಮಾರಸ್ವಾಮಿ ಅವರು ಆಡುತ್ತಿರುವ ಅನುಕಂಪದ ಮಾತುಗಳು ಎಷ್ಟರ ಮಟ್ಟಿಗೆ ಜನರ ಮನವನ್ನು ತಟ್ಟುತ್ತವೆ ಕಾದುನೋಡಬೇಕು. ಅದರಲ್ಲೂ ಹಳೆ ಮೈಸೂರಿನಲ್ಲಿ ಈ ಬಾರಿ ಶತಾಯ ಗತಾಯ ಉತ್ತಮ ಸಾಧನೆ ಮಾಡಬೇಕು ಎಂದು ಮುಂದಾಗಿರುವ ಬಿಜೆಪಿ ಬಹಿರಂಗವಾಗಿ ಕಾಂಗ್ರೆಸ್ ವಿರುದ್ಧ ದಾಳಿ ನಡೆಸುತ್ತಿದೆ. ಇತ್ತೀಚೆಗೆ ಬೆಂಗಳೂರು ಮೈಸೂರು ಹೆದ್ದಾರಿ ಉದ್ಘಾಟನೆ ವೇಳೆಯೂ ಪ್ರಧಾನಿ ನರೇಂದ್ರ ಮೋದಿ ಕೇವಲ ಕಾಂಗ್ರೆಸ್ ವಿರುದ್ಧ ಮಾತ್ರ ವಾಗ್ದಾಳಿ ನಡೆಸಿದ್ದಾರೆಯೇ ವಿನಃ ಜೆಡಿಎಸ್ ವಿರುದ್ಧ ತುಟಿ ಬಿಚ್ಚಿಲ್ಲ. ಈಗಾಗಲೆ ಚರ್ಚಿಸಿದಂತೆ ಬಿಜೆಪಿಗೆ ಬೇಕಾಗಿರುವುದು ಕಾಂಗ್ರೆಸ್ ವಿರೋಧಿ ಮತಗಳು. ಕಾಂಗ್ರೆಸನ್ನು ಧೈರ್ಯವಾಗಿ ಎದುರು ಹಾಕಿಕೊಳ್ಳುತ್ತಾರೆ ಎಂಬ ನಂಬಿಕೆ ಜನರಲ್ಲಿ ಮೂಡಿದರೆ ಜೆಡಿಎಸ್ ಮತದಾರರು ನೇರವಾಗಿ ಬಿಜೆಪಿ ಕಡೆ ವಾಲುತ್ತಾರೆ ಎಂಬ ಸತ್ಯ ಬಿಜೆಪಿ ನಾಯಕರಿಗೆ ತಿಳಿದಿದೆ. ಇನ್ನು, ಈಗಾಗಲೆ ವೃದ್ಧಾಪ್ಯದಲ್ಲಿರುವ ದೇವೇಗೌಡರ ಹಾಗೂ ಮೇಲ್ನೋಟಕ್ಕೇ ಶಕ್ತಿಗುಂದಿದಂತೆ ಕಾಣುತ್ತಿರುವ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದಷ್ಟೂ ಆ ಪಕ್ಷದ ಮತದಾರರಿಗೆ, ಮುಖ್ಯವಾಗಿ ಒಕ್ಕಲಿಗರಿಗೆ ಬಿಜೆಪಿ ಕುರಿತು ಕ್ರೋಧ ಉಂಟಾಗುತ್ತದೆ, ಬಿಜೆಪಿ ಕುರಿತು ಮೃದು ಧೋರಣೆ ಹೊರಟುಹೋಗುತ್ತದೆ ಎಂಬ ಸತ್ಯವೂ ಬಿಜೆಪಿಗೆ ತಿಳಿದಿದೆ. ನೇರವಾಗಿ ಜೆಡಿಎಸ್ ಮತಗಳನ್ನೇ ಕಸಿಯಬೇಕು ಎಂದು ಕಾಂಗ್ರೆಸ್ ಮೇಲೆ ಬಿಜೆಪಿ ದಾಳಿ ನಡೆಸುತ್ತಿರುವಾಗ ಅನುಕಂಪದ ಮತಯಾಚನೆ ಕುಮಾರಸ್ವಾಮಿ ಅವರ ಸಹಾಯಕ್ಕೆ ಬರುತ್ತದೆಯೇ ಕಾದುನೋಡಬೇಕು.
ಈ ಚುನಾವಣೆ ಜೆಡಿಎಸ್ ಪಾಲಿನ ಫೈನಲ್ ಪಂದ್ಯ. ಈ ಪಂದ್ಯದಲ್ಲಿ 123 ಸ್ಥಾನ ಗಳಿಸಿ ಗೆಲ್ಲಬಹುದು ಅಥವಾ 2018ರ 37ಕ್ಕಿಂತಲೂ ಕಡಿಮೆ ಸಂಖ್ಯೆಗೆ ಇಳಿಯಬಹುದು. 123 ಗೆದ್ದರೆ ಜೆಡಿಎಸ್ ಪಕ್ಷದ ಹೊಸ ಅಧ್ಯಾಯ ಅದಾಗಿಯೇ ಆರಂಭವಾಗುತ್ತದೆ. ಈಗಿನದ್ದಕ್ಕಿಂತಲೂ ಕುಸಿದರೆ ಹೊಸ ಅಧ್ಯಾಯವನ್ನು ಮುಂದಿನ ಪೀಳಿಗೆ ತಾನಾಗಿಯೇ ಆರಂಭಿಸಬೇಕಾಗುತ್ತದೆ. ಇಡೀ ರಾಜ್ಯದ ಜನರನ್ನು ಒಳಗೊಳ್ಳುವಂತಹ ಗಟ್ಟಿ ಸೈದ್ಧಾಂತಿಕ ಅಡಿಪಾಯದೊಂದಿಗೆ ಪಕ್ಷವನ್ನು ಮತ್ತೆ ಕಟ್ಟಿ ಪಂದ್ಯದಲ್ಲೇ ಉಳಿಯುವಂತೆ ಮಾಡುವ ಸವಾಲು ಹೆಗಲೇರಲಿದೆ. ಏನು ಆಗಲಿದೆ ಎನ್ನುವುದು 2023ರ ವಿಧಾನಸಭೆ ಫಲಿತಾಂಶ ತಿಳಿಸಲಿದೆ.

Exit mobile version