Site icon Vistara News

D ಕೋಡ್‌ ಅಂಕಣ: ಜಗದೀಶ್‌ ಶೆಟ್ಟರು ಸ್ವತಂತ್ರ ಅಭ್ಯರ್ಥಿ ಆಗುವ ಬದಲು ಕಾಂಗ್ರೆಸ್‌ ಸೇರಿದ್ದೇಕೆ?

D Code column Why jagadish Shettar joins congress

#image_title

ಕರ್ನಾಟಕ ಚುನಾವಣೆಯಲ್ಲಿ ಸಲ ಬಿಜೆಪಿ 15 ಶಾಸಕರ ಜತೆಗೆ ಅನೇಕರಿಗೆ ಟಿಕೆಟ್‌ ತಪ್ಪಿಸಿದೆ. ಕುಟುಂಬ ರಾಜಕಾರಣದ ಸರಪಳಿಯನ್ನು ಮುರಿಯಲು, ಯುವಕರಿಗೆ ಅವಕಾಶ ನೀಡಲು ಈ ʼಪ್ರಯೋಗʼ ಮಾಡುತ್ತಿರುವುದಾಗಿ ಹೇಳಿದೆ. ಈ ಪ್ರಯೋಗದಿಂದ ಬೈಂದೂರಿನ ಅತ್ಯಂತ ಸಾಮಾನ್ಯ ಕಾರ್ಯಕರ್ತ ಗುರುರಾಜ ಗಂಟಿಹೊಳೆಯವರಂತಹ ಅನೇಕರಿಗೆ ಚುನಾವಣೆ ಸ್ಪರ್ಧೆಯ ಅವಕಾಶ ಸಿಕ್ಕಿದೆ ಎನ್ನುವುದು ಸತ್ಯ. ಆದರೆ ಹುಬ್ಬಳ್ಳಿಯಲ್ಲಿ ಪ್ರಾಬ್ಲಂ ಬಿಗಡಾಯಿಸಿದೆ.

ಮೂರು ದಶಕಕ್ಕೂ ಹೆಚ್ಚು ಬಿಜೆಪಿ ಜತೆಗೆ ಸಂಬಂಧ ಹೊಂದಿದ್ದ, ಮಾಜಿ ಸಿಎಂ ಸಹ ಆಗಿದ್ದ ಜಗದೀಶ ಶೆಟ್ಟರ್‌ಗೆ ಟಿಕೆಟ್‌ ನೀಡುವುದಿಲ್ಲ ಎಂದು ಬಿಜೆಪಿ ಹೈಕಮಾಂಡ್‌ ನಿರ್ಧಾರ ಮಾಡಿ ಅದನ್ನು ಅವರಿಗೆ ತಿಳಿಸಿತು. ಹಾಲಾಡಿ ಶ್ರೀನಿವಾಸ ಶೆಟ್ಟಿ, ಸುಕುಮಾರ ಶೆಟ್ಟಿ, ಕೆ.ಎಸ್‌. ಈಶ್ವರಪ್ಪ ಅವರಂತೆಯೇ ಪಕ್ಷದ ನಿರ್ಧಾರವನ್ನು ಶೆಟ್ಟರೂ ಒಪ್ಪಿಕೊಳ್ಳುತ್ತಾರೆ ಎಂದು ಬಿಜೆಪಿ ಊಹಿಸಿತ್ತು, ಆದರೆ ಶೆಟ್ಟರ್‌ ತಿರುಗಿ ಬಿದ್ದರು.

ಸೌಮ್ಯ ಸ್ವಭಾವದ ಶೆಟ್ಟರಿಂದ ಇಂಥ ರೆಬಲ್‌ ಆಟಿಟ್ಯೂಡ್‌ ನಿರೀಕ್ಷೆ ಮಾಡದಿದ್ದ ಬಿಜೆಪಿ ನಾಯಕರು ಫೋನು ಮೇಲೆ ಫೋನು ಮಾಡಿದರು, ಮನೆಗೂ ಹೋಗಿ ಸಮಾಧಾನ ಮಾಡಲು ಯತ್ನಿಸಿದರು. ಆದರೆ ಇದ್ಯಾವುದಕ್ಕೂ ಶೆಟ್ಟರ್‌ ಬಗ್ಗಲಿಲ್ಲ. ತಾವು ಚುನಾವಣೆಗೆ ಸ್ಪರ್ಧಿಸುವುದು ಶತಃಸಿದ್ಧ ಎಂದು ಶೆಟ್ಟರ್‌ ಹೇಳಿದರು. ಆದರೆ ಇನ್ನೂ ಕಾಂಗ್ರೆಸ್‌ಗೆ ಸೇರಿರಲಿಲ್ಲ. ನಂತರದ ಒಂದೆರಡು ದಿನದಲ್ಲಿ ಎಲ್ಲ ಮಾತುಕತೆ ನಡೆದು ಶೆಟ್ಟರು ಕಾಂಗ್ರೆಸ್‌ ಧ್ವಜ ಹಿಡಿದರು. ಮೂವತ್ತು ವರ್ಷ ಪತಿಯ ಕೊರಳಲ್ಲಿ ಕಮಲದ ಗುರುತಿನ ಶಲ್ಯವನ್ನು ನೋಡಿದ್ದ ಪತ್ನಿಗೆ ಒಮ್ಮೆಲೇ ಕಾಂಗ್ರೆಸ್‌ ಶಲ್ಯವನ್ನು ನೋಡಿ ದುಃಖ ತಡೆಯಲಾಗದೆ ಬೀದಿಯಲ್ಲೇ ಅತ್ತರು. ಈ ಹಿಂದೆ ಯಡಿಯೂರಪ್ಪ ಅವರೂ ಪಕ್ಷ ಬಿಟ್ಟು ಕೆಜೆಪಿ ಮಾಡಿದ್ದರಲ್ಲ? ಅವರು ಇಂದು ತಮಗೆ ಪಕ್ಷ ನಿಷ್ಠೆಯ ಪಾಠ ಹೇಳಲು ಬರುವುದು ಸರಿಯೇ? ಎನ್ನುವುದು ಶೆಟ್ಟರ್‌ ವಾದ. ಯಡಿಯೂರಪ್ಪನವರು ಹೊಸ ಪಕ್ಷ ಕಟ್ಟಿದ್ದರು, ಆದರೆ ʼದೇಶದ್ರೋಹಿʼ ಕಾಂಗ್ರೆಸ್‌ ಸೇರಿರಲಿಲ್ಲ ಎನ್ನುವುದು ಬಿಜೆಪಿ ಬೆಂಬಲಿಗರ ವಾದ.

ತಮಗೆ ಇಷ್ಟೊಂದು ಪ್ರಮಾಣದಲ್ಲಿ ಜನಬೆಂಬಲ ಇದೆ ಎನ್ನುವುದಾದರೆ ಶೆಟ್ಟರ್‌ ನೇರವಾಗಿ ಸ್ವತಂತ್ರ ಅಭ್ಯರ್ಥಿ ಆಗಬಹುದಿತ್ತಲ್ಲವೇ? ಅವರು ಕಾಂಗ್ರೆಸ್‌ ಕೈ ಹಿಡಿಯುವ ಅಗತ್ಯವೇನಿತ್ತು?  ಪ್ರಶ್ನೆಗೆ ಉತ್ತರವಾಗಿ, ಈ ಹಿಂದೆ ಪಕ್ಷಾಂತರ ಸಂಬಂಧಿಸಿದ ʼಡಿ-ಕೋಡ್‌ʼ ಅಂಕಣದಲ್ಲಿ ನೀಡಿದ್ದ ಅಂಕಿಅಂಶವನ್ನು ಮತ್ತೆ ಕೊಡುತ್ತಿರುವೆ.

ಹೆಚ್ಚಿನ ರಾಜಕಾರಣಿಗಳು ಒಂದಲ್ಲಾ ಒಂದು ಪಕ್ಷವನ್ನೇ ಸೇರಲು ಏಕೆ ಬಯಸುತ್ತಾರೆ? ಸ್ವತಂತ್ರ ಅಭ್ಯರ್ಥಿ ಆದರೆ ನೆಮ್ಮದಿಯಾಗಿ ಗೆದ್ದು, ಯಾರ ಹಂಗೂ ಇಲ್ಲದೆ, ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆಯೋ ಆ ಪಕ್ಷವನ್ನು ಬೆಂಬಲಿಸಿಕೊಂಡು ಸಚಿವ ಆಗಬಹುದಲ್ಲವೇ? ಎನ್ನಿಸಬಹುದು. ಅದು ಅಷ್ಟು ಸುಲಭದ ಲೆಕ್ಕವಲ್ಲ. ಉದಾಹರಣೆಗೆ ಕರ್ನಾಟಕವನ್ನೇ ನೋಡೋಣ. ಕರ್ನಾಟಕದ ಮಟ್ಟಿಗೆ ಪಕ್ಷೇತರ ಶಾಸಕರಾಗುವುದು ಅತ್ಯಂತ ಸವಾಲಿನ ಕೆಲಸ. ಈ ಮಾತಿಗೆ ಪೂರಕವಾಗಿ ಕೆಳಗಿನ ಟೇಬಲ್‌ ನೋಡಬಹುದು.

1957ರಲ್ಲಿ 35 ಪಕ್ಷೇತರರನ್ನು ಹೊಂದಿದ್ದ ಕರ್ನಾಟಕದಲ್ಲಿ ಈ ಸಂಖ್ಯೆ ನಿರಂತರ ಇಳಿಯುತ್ತಲೇ ಸಾಗಿ 2018ರಲ್ಲಿ ಕೇವಲ 1ಕ್ಕೆ ಬಂದು ನಿಂತಿದೆ. ಪಕ್ಷೇತರರಿಗೆ ಲಭಿಸುವ ಮತ ಪ್ರಮಾಣವೂ ಅಷ್ಟೆ. ಶೇ.28.74ರಿಂದ ಶೇ.3.93ಕ್ಕೆ ಇಳಿದಿದೆ. ಪಕ್ಷೇತರರಾಗಿ ಗೆದ್ದು ಬರುವುದು ಈಗ ಕಷ್ಟದ ಕೆಲಸ. ಹಣ, ಪ್ರಚಾರ, ಕಾರ್ಯಕರ್ತರ ಪಡೆ, ಅಧಿಕಾರದಂತಹ ಅನೇಕ ಅನುಕೂಲಗಳು ಪಕ್ಷೇತರರಿಗೆ ಇರುವುದಿಲ್ಲ.

ಉದಾಹರಣೆಗೆ, ಈಗ ಕರ್ನಾಟಕದಲ್ಲಿ 58, 282 ಮತಗಟ್ಟೆಗಳಿವೆ. ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಸರಾಸರಿ 250-270 ಮತಗಟ್ಟೆಗಳಿರುತ್ತವೆ. ಈ ಪ್ರತಿಯೊಂದು ಮತಗಟ್ಟೆಯಲ್ಲೂ ತನ್ನ ಪರವಾಗಿ ಕುಳಿತುಕೊಳ್ಳಲು ಏಜೆಂಟ್‌ಗಳಿರಬೇಕು. ಪ್ರತಿ ಮತಗಟ್ಟೆಯಿಂದ 100 ಮೀಟರ್‌ ದೂರದಲ್ಲಿ ಟೇಬಲ್‌ ಹಾಕಿಕೊಂಡು ಚೀಟಿ ಕೊಡುವ 10-15 ಜನರ ಗುಂಪು ಇರಬೇಕು. ಮನೆಮನೆಗೆ ತೆರಳಿ ಪ್ರಚಾರ ಮಾಡಲು ಕಾರ್ಯಕರ್ತರು ಬೇಕು. ಚುನಾವಣಾ ಫಲಿತಾಂಶದ ದಿನ ಎಣಿಕೆ ಕೇಂದ್ರದಲ್ಲಿ ಉಪಸ್ಥಿತರಿರಲು ನುರಿತ ಕಾರ್ಯಕರ್ತರಿರಬೇಕು. ಇಷ್ಟೆಲ್ಲ ನಂತರ ಚುನಾವಣೆ ಆಯೋಗದ ಕಾನೂನು ಪಾಲನೆ, ಲೆಕ್ಕಪತ್ರ ನಿರ್ವಹಣೆಗೆ ಅನುಭವಿ ತಂಡ ಬೇಕು. ಪ್ರಚಾರ, ರೋಡ್‌ಶೋ ಸೇರಿ ಅನೇಕ ಕಾರ್ಯಕ್ರಮಗಳನ್ನು ನಡೆಸುವುದು ಒಬ್ಬ ಪಕ್ಷೇತರ ಅಭ್ಯರ್ಥಿಗೆ ಬಹಳ ಕಷ್ಟ. ಇನ್ನೂ ಒಂದು ವಿಷಯ ಎಂದರೆ, ಚುನಾವಣೆಗೆ ಎರಡು-ಮೂರು ದಿನ ಇರುವಂತೆ ನಡೆಸುವ ಹಣದ ಕಾರುಬಾರಿಗೂ ಸಂಘಟನಾತ್ಮಕ ವ್ಯವಸ್ಥೆ ಬೇಕಾಗುತ್ತದೆ.

ನಮ್ಮ ಪ್ರಜಾಪ್ರಭುತ್ವ ಮತ್ತಷ್ಟು ಪ್ರಬುದ್ಧತೆ ಗಳಿಸಿದ್ದರೆ, ಜನರು ಯಾವುದೇ ಪ್ರಚಾರದ ಅವಶ್ಯಕತೆಯಿಲ್ಲದೆ ಜನರೇ ಅಭ್ಯರ್ಥಿಯನ್ನು ಹುಡುಕಿಕೊಂಡು ಬಂದು ಮತ ಚಲಾಯಿಸುತ್ತಿದ್ದರೇನೊ. ಆದರೆ ಇನ್ನೂ ಆ ಸ್ಥಿತಿ ಬಂದಿಲ್ಲ. ಅದರಲ್ಲೂ ಬಿಜೆಪಿ ರೀತಿ ವ್ಯವಸ್ಥಿತ ಬೂತ್‌ ಸಮಿತಿ, ಪೇಜ್‌ ಪ್ರಮುಖರನ್ನೆಲ್ಲ ಹೊಂದುವುದು ಪಕ್ಷೇತರರಿಗೆ ಕನಸು. ಕಾಂಗ್ರೆಸ್‌ ರೀತಿ ಬೀದಿಬೀದಿಯಲ್ಲಿ ಬೆಂಬಲಿಗರೂ ಇರುವುದಿಲ್ಲ. ಪುತ್ತೂರಿನಲ್ಲಿ ಸಂಘಟನೆಯ ಶಕ್ತಿಯನ್ನು ತೋರಲು ಹೋದ ಬಿಜೆಪಿಗೆ ಅರುಣ್‌ ಕುಮಾರ್‌ ಪುತ್ತಿಲ ಬಿಸಿ ಮುಟ್ಟಿದೆ. ಅವರು ಕಾಂಗ್ರೆಸ್‌ ಸೇರುವ ಬದಲಿಗೆ ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದಾರೆ.

ಪುತ್ತೂರಿನಲ್ಲಿ 25-30 ವರ್ಷದೊಳಗಿನ ಬಿಸಿ ರಕ್ತದ ಯುವರ ದೊಡ್ಡ ಪಡೆಯೇ ಪುತ್ತಿಲ ಬೆನ್ನಿಗೆ ನಿಂತಿದೆ. ನಾಮಪತ್ರ ಸಲ್ಲಿಸಲು ಹೋದಾಗಲೇ ಬಹುತೇಕ ಬಿಜೆಪಿಯಷ್ಟೆ ಶಕ್ತಿಪ್ರದರ್ಶನ ಮಾಡಿದ್ದಾರೆ. ಪುತ್ತೂರಿನಲ್ಲಿ ಬಿಜೆಪಿ ಅಭ್ಯರ್ಥಿ ಆಶಾ ಅವರು ಗೆಲ್ಲುತ್ತಾರೊ, ಇಲ್ಲವೊ. ಆದರೆ ಪುತ್ತಿಲ ಸ್ಪರ್ಧೆಯನ್ನು ಬಿಜೆಪಿ ಅತ್ಯಂತ ಗಂಭೀರವಾಗಿ ಸ್ವೀಕರಿಸಿದೆ ಎನ್ನುವುದಂತೂ ಸತ್ಯ. ಇಷ್ಟೆಲ್ಲ ಜನರ ಬೆಂಬಲ ಇದ್ದಾಗ್ಯೂ ಚುನಾವಣಾ ಪ್ರಕ್ರಿಯೆಯನ್ನು ಸುಸೂತ್ರವಾಗಿ ನಡೆಸುವುದು ಬಹುಕಷ್ಟ. ಆದರೆ ಶೆಟ್ಟರ್‌ಗೆ ಈ ರೀತಿಯ ಅಲೆ ಇಲ್ಲ. ಅವರು ಒಳ್ಳೆಯವರು, ಹೀಗಾಗಬಾರದಿತ್ತು ಪಾಪ ಎನ್ನುವ ಭಾವನೆ ಬಿಟ್ಟು ಅಗಾಧ ಫ್ಯಾನ್‌ ಫಾಲೋಯಿಂಗ್‌ ಇಲ್ಲ. ಅವರು ಯಾವುದಾದರೂ ಒಂದು ಪಕ್ಷವನ್ನು ಅವಲಂಬಿಸಲೇಬೇಕಾಗಿತ್ತು.

ಇದರ ಜತೆಗೆ, ಕಾಂಗ್ರೆಸ್‌ ಪಕ್ಷವು ಲಿಂಗಾಯತರಿಗೆ ಅವಮಾನದ ಶಾಪದಿಂದ ಹೊರಬರಬೇಕಿತ್ತು. ವೀರೇಂದ್ರ ಪಾಟೀಲರು ಹಾಗೂ ಎಸ್‌. ನಿಜಲಿಂಗಪ್ಪ ಅವರನ್ನು ಅವಮಾನಿಸಿದ್ದಕ್ಕೆ ಕಾಂಗ್ರೆಸ್‌ಗೆ ಲಿಂಗಾಯತರು ಒಟ್ಟಾಗಿ ಓಟ್‌ ಮಾಡುತ್ತಿಲ್ಲ. ಒಂದೆಡೆ ಲಕ್ಷ್ಮಣ ಸವದಿ, ಮತ್ತೊಂದೆಡೆ ಶೆಟ್ಟರ್‌ ಬಂದರೆ ಅಷ್ಟರ ಮಟ್ಟಿಗೆ ಶಾಪದಿಂದ ವಿಮೋಚನೆಯತ್ತ ಸಾಗಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್‌ನದ್ದು. ಇದರ ನಡುವೆಯೇ, ತಮ್ಮ ಅಳಿಯ ರಜತ್‌ ಉಳ್ಳಾಗಡ್ಡಿಮಠ ಭವಿಷ್ಯ ರೂಪಿಸಲು ಕಾಂಗ್ರೆಸ್‌ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಮುಂದಾಗಿದ್ದಾರೆ.

ಶೆಟ್ಟರ್‌ ವಿರುದ್ಧ 2018ರಲ್ಲಿ ಸ್ಪರ್ಧಿಸಿದ್ದ ಡಾ. ಮಹೇಶ್‌ ನಲವಡ ಅವರನ್ನು ಶೆಟ್ಟರು ಬಿಜೆಪಿಗೇ ಸೆಳೆದಿದ್ದರು. ಹಾಗಾಗಿ ಹುಬ್ಬಳ್ಳಿ ಧಾರವಾಡ ಸೆಂಟ್ರಲ್‌ನಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಲು ರಜತ್‌ ಉಳ್ಳಾಗಡ್ಡಿಮಠ ಸಕಲ ಸಿದ್ಧತೆ ನಡೆಸಿದ್ದರು. ಅತ್ತೆಯ ರೀತಿಯಲ್ಲೇ ಕುಕ್ಕರ್‌, ತವಾ, ಸೀರೆಗಳನ್ನು ಹಂಚಿ ಫುಲ್‌ ಫೇಮಸ್‌ ಆಗಿದ್ದರು. ಈ ಸಮಯಕ್ಕೆ ಶೆಟ್ಟರ್‌ ವಿವಾದ ಗರಿಗೆದರಿತು. ಶೆಟ್ಟರನ್ನು ಕಾಂಗ್ರೆಸ್‌ಗೆ ಕರೆತರುವ ಉಪಾಯ ಮಾಡಿದರು ಲಕ್ಷ್ಮೀ ಹೆಬ್ಬಾಳ್ಕರ್. ಬಿಜೆಪಿಯಲ್ಲಿ ಅವಮಾನಿತರಾಗಿದ್ದ ಲಿಂಗಾಯತ ನಾಯಕನನ್ನು ಗೌರವಿಸುವ ಸಲುವಾಗಿ ರಜತ್‌ ಉಳ್ಳಾಗಡ್ಡಿ ಮಠ ʼಕ್ಷೇತ್ರ ತ್ಯಾಗʼ ಮಾಡಿದ್ದಾರೆ ಎಂಬ ಮಾತು ಈಗ ಕ್ಷೇತ್ರದಲ್ಲಿ ಹರಿದಾಡುತ್ತಿದೆ. ಶೆಟ್ಟರ್‌ ಗೆದ್ದರೂ ಇದು ಕೊನೆಯ ಚುನಾವಣೆ, ಸೋತರಂತೂ ಕೊನೆಯದೆನ್ನುವುದು ಖಚಿತ. ನಂತರ ಕ್ಷೇತ್ರದಲ್ಲೆ ತಮ್ಮ ಸ್ಪರ್ಧೆಯನ್ನು ಮುಂದುವರಿಸಬಹುದು. ಲಿಂಗಾಯತ ಸಮುದಾಯದಲ್ಲಿ ತಮ್ಮ ಪರ ಮೃದು ಧೋರಣೆ ಬರುತ್ತದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್‌ ಅವರು ದೂರಗಾಮಿ ಆಲೋಚನೆ ಮಾಡಿ ಶೆಟ್ಟರನ್ನು ಕರೆತಂದರು.

ಇನ್ನೂ ವಿಶೇಷ ಎಂದರೆ, ಗಾಣಿಗ ಲಿಂಗಾಯತ ಸಮುದಾಯದ ಲಕ್ಷ್ಮಣ ಸವದಿ ಅವರನ್ನೂ ಕಾಂಗ್ರೆಸ್‌ಗೆ ಆಪರೇಷನ್‌ ಮಾಡಿದ್ದು ಇದೇ ಲಕ್ಷ್ಮೀ ಹೆಬ್ಬಾಳ್ಕರ್‌. ತಮ್ಮ ಸಹೋದರ ಚನ್ನರಾಜ್‌ ಹಟ್ಟಿಹೊಳಿ ಮೂಲಕ ಸವದಿ ಮನವೊಲಿಸಿ, ಹೈಕಮಾಂಡ್‌ ಭೇಟಿ ಮಾಡಿಸಿ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. ಈಗಾಗಲೆ ಬೆಳಗಾವಿಯಲ್ಲಿ ಜಾರಕಿಹೊಳಿ ಕುಟುಂಬ, ಕತ್ತಿ ಕುಟುಂಬ… ಈ ರೀತಿ ಕುಟುಂಬಗಳ ಹಿಡಿತ ಇದೆ. ಇದೀಗ ನಿಧಾನವಾಗಿ ಹೆಬ್ಬಾಳ್ಕರ್‌ ಈ ರೀತಿ ಪ್ರಭಾವವನ್ನು ಹೆಚ್ಚಿಸಿಕೊಳ್ಳುತ್ತಿರುವುದು ಕಾಣಬಹುದು.

ಸ್ವತಂತ್ರ ಅಭ್ಯರ್ಥಿಯಾಗುವುದರ ಅನುಕೂಲ ಹಾಗೂ ಕಾಂಗ್ರೆಸ್‌ ಅನಿವಾರ್ಯತೆಯ ನಡುವೆ ಶೆಟ್ಟರ್‌ ಕಾಂಗ್ರೆಸ್‌ ಸೇರಿದ್ದಾರೆ. ಬಿಜೆಪಿ ಸಂಘಟಿತವಾಗಿ ಶೆಟ್ಟರನ್ನು ಎದುರಿಸುತ್ತಿದೆ. ಫಲಿತಾಂಶದ ಕುತೂಹಲ ಇಡೀ ರಾಜ್ಯಕ್ಕಿದೆ.

—————————–

40 ವರ್ಷ ಇಬ್ಬರೇ ಕಾದಾಡುತ್ತ ಜೀವನ ಕಳೆದ ರಮೇಶ್‌ ಕುಮಾರ್‌-ವೆಂಕಟಶಿವಾ ರೆಡ್ಡಿ

ಚುನಾವಣೆಗಳಲ್ಲಿ ಅಭ್ಯರ್ಥಿಗಳು ಸೋಲುವುದು, ಗೆಲ್ಲುವುದು ಸಾಮಾನ್ಯ. ಆದರೆ ಬೆಂಗಳೂರಿಗೆ ಹತ್ತಿರದಲ್ಲೆ ಇರುವ ಕೋಲಾರದ ಶ್ರೀನಿವಾಸಪುರದಲ್ಲಿ ಇಬ್ಬರೇ ಅಭ್ಯರ್ಥಿಗಳು ಸತತ 40 ವರ್ಷದಿಂದ ಸ್ಪರ್ಧೆಇಸುತ್ತಿದ್ದಾರೆ. ಕೆ.ಆರ್‌. ರಮೇಶ್‌ ಕುಮಾರ್‌ ಹಾಗೂ ಜಿ.ಕೆ. ವೆಂಕಟಶಿವಾ ರೆಡ್ಡಿ 1983ರಿಂದಲೂ ಪ್ರತಿಸ್ಪರ್ಧಿಗಳು. ಇವರಿಬ್ಬರೇ ಮೊದಲು ಹಾಗೂ ಎರಡನೇ ಸ್ಥಾನ ಪಡೆಯುತ್ತಿದ್ದಾರೆ. ಪಕ್ಷಗಳು ಬದಲಾಗಿವೆ, ಆದರೆ ವ್ಯಕ್ತಿಗಳು ಅವರಿಬ್ಬರೆ. ಮೂರನೇ ವ್ಯಕ್ತಿಗೆ ಪ್ರವೇಶವನ್ನೇ ನೀಡಿಲ್ಲ.

1978ರಲ್ಲಿ ರಮೇಶ್‌ ಕುಮಾರ್‌ ಮೊದಲಿಗೆ ಜಯಗಳಿಸಿದರು. 1983ರಿಂದ ವೆಂಕಟಶಿವಾ ರೆಡ್ಡಿ ಜತೆಯಾಗಿದ್ದಾರೆ. ಇಬ್ಬರೂ ಮೊದಲಿಗೆ ಎದರುಬದರು ಸ್ಪರ್ಧಿಸಿದಾಗ ರಮೇಶ್‌ ಕುಮಾರ್‌ಗೆ  33 ವರ್ಷ, ವೆಂಕಟಶಿವಾ ರೆಡ್ಡಿಗೆ 36 ವರ್ಷ. ಈಗ ರಮೇಶ್‌ ಕುಮಾರ್‌ಗೆ  73 ವರ್ಷ, ವೆಂಕಟಶಿವಾರೆಡ್ಡಿಗೆ 76 ವರ್ಷ.

ಅಲ್ಲಿಂದ 2018ರವರೆಗೆ 9 ಚುನಾವಣೆಗಳು ನಡೆದಿವೆ. 2013ರವರೆಗೂ ಒಮ್ಮೆ ರಮೇಶ್‌ ಕುಮಾರ್‌, ಮತ್ತೊಮ್ಮೆ ವೆಂಕಟಶಿವಾ ರೆಡ್ಡಿ ಎನ್ನುವಂತೆ ಹಾವು ಏಣಿ ಆಟ ನಡೆಯುತ್ತಲೇ ಇತ್ತು. ಈ ನಡುವೆ ರಮೇಶ್‌ ಕುಮಾರ್‌ ಸ್ವತಂತ್ರ ಅಭ್ಯರ್ಥಿಯಾಗಿ, ಜನತಾ ಪಾರ್ಟಿ, ಜನತಾ ದಳದ ನಂತರ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಾರೆ. ವೆಂಕಟಶಿವಾರೆಡ್ಡಿ ಅವರು ಕಾಂಗ್ರೆಸ್‌, ಬಿಜೆಪಿ ಹಾಗೂ ಜನತಾದಳದಿಂದ ಕಣಕ್ಕಿಳಿದಿದ್ದಾರೆ. ಈ ಅವಧಿಯಲ್ಲಿ ವೆಂಕಟಶಿವಾರೆಡ್ಡಿ ನಾಲ್ಕು ಬಾರಿ, ರಮೇಶ್‌ ಕುಮಾರ್‌ ನಾಲ್ಕು ಬಾರಿ ಜಯಗಳಿಸಿದ್ದರು. ಆದರೆ 2018ರಲ್ಲಿ ಹಾವು ಏಣಿ ಆಟವನ್ನು ರಮೇಶ್‌ ಕುಮಾರ್‌ ಬದಲಿಸಿದರು. ಸತತ ಎರಡನೇ ಬಾರಿಗೆ ಗೆಲ್ಲುವ ಮೂಲಕ ಎರಡನೇ ಅವಧಿಗೂ ಜಿ.ಕೆ. ವೆಂಕಟಶಿವಾ ರೆಡ್ಡಿ ಎರಡನೇ ಸ್ಥಾನಕ್ಕೆ ತೃಪ್ತರಾಗುವಂತೆ ಮಾಡಿದರು.

ಈಗ ಸತತ 40 ವರ್ಷದ ನಂತರವೂ ಇದೇ ಇಬ್ಬರಿಗೆ ಪಕ್ಷಗಳು ಟಿಕೆಟ್‌ ನೀಡಿವೆ. ಕಾಂಗ್ರೆಸ್‌ನಿಂದ ಕೆ.ಆರ್‌. ರಮೇಶ್‌ ಕುಮಾರ್‌ ಸ್ಪರ್ಧಿಸಿದರೆ, ವೆಂಕಟಶಿವಾ ರೆಡ್ಡಿ ಜೆಡಿಎಸ್‌ನಿಂದ ಕಣಕ್ಕಿಳಿದಿದ್ದಾರೆ. ಇಬ್ಬರೂ ಈಗ 75ರ ಆಸುಪಾಸಿನಲ್ಲಿದ್ದಾರೆ. ಬಹುಶಃ ಇಡೀ ರಾಜ್ಯದಲ್ಲಿ ಈ ರೀತಿ ಇಬ್ಬರೇ ಅಭ್ಯರ್ಥಿಗಳು ಸತತ 40 ವರ್ಷ ಸ್ಪರ್ಧಿಸಿದ ಉದಾಹರಣೆ ಇನ್ನೊಂದಿಲ್ಲ. ಈ ಚುನಾವಣೆಯಲ್ಲೂ ರಮೇಶ್‌ ಕುಮಾರ್‌ ಗೆದ್ದರೆ ಹ್ಯಾಟ್ರಿಕ್‌ ಜಯವಾಗುತ್ತದೆ. ವೆಂಕಟಶಿವಾರೆಡ್ಡಿ ಗೆದ್ದರೆ ಇಬ್ಬರೂ ತಲಾ 5 ಬಾರಿ ಗೆದ್ದಂತಾಗುತ್ತದೆ. ಮುಂದಿನ ಅಥವಾ ಅದರ ಮುಂದಿನ ಚುನಾವಣೆಯಲ್ಲಿ ಶ್ರೀನಿವಾಸಪುರ ಕ್ಷೇತ್ರಕ್ಕೆ ಹೊಸ ನೀರು ಪ್ರವೇಶಿಸಬಹುದು.

ಇದನ್ನೂ ಓದಿ: D ಕೋಡ್‌ ಅಂಕಣ: ರಾಹುಲ್‌ ಗಾಂಧಿ ವಿರುದ್ಧ ನರೇಂದ್ರ ಮೋದಿ ನಿರಂತರ ವಾಗ್ದಾಳಿ ನಡೆಸಲು ಏನು ಕಾರಣ?

Exit mobile version