Site icon Vistara News

ಧವಳ ಧಾರಿಣಿ ಅಂಕಣ: ಗೌತಮ ಬುದ್ಧ; ಭಾರತೀಯ ತತ್ತ್ವಶಾಸ್ತ್ರದ ಮುನ್ನುಡಿ

dhavala dharini column buddha ಧವಳ ಧಾರಿಣಿ

­ಧವಳ ಧಾರಿಣಿ ಅಂಕಣ: ಭಾರತದ ಇತಿಹಾಸದಲ್ಲಿ ಗೌತಮ ಬುದ್ಧ (Gautama Buddha) ಮಹತ್ವದ ಸ್ಥಾನ ಪಡೆಯುವುದು ಆತ ಹೊಸ ಧರ್ಮವನ್ನು ಸ್ಥಾಪಿಸಿದ್ದಾನೆ ಎನ್ನುವುದಕ್ಕೆ ಅಲ್ಲ. ಬೌದ್ಧ ಧರ್ಮವನ್ನು (buddhism) ನೇರವಾಗಿ ಬುದ್ಧನೇ ಸ್ಥಾಪಿಸಲಿಲ್ಲ. ಆತನ ನಿರ್ವಾಣದ ನಂತರದ ಇನ್ನೂರು ವರ್ಷಗಳ ನಂತರ ಆತನ ಶಿಷ್ಯರು ಒಂದೆಡೆ ಸೇರಿ ಬುಧ್ದನ ತತ್ತ್ವಕ್ಕೆ ಒಂದು ಧಾರ್ಮಿಕ ಸ್ವರೂಪವನ್ನು ಕೊಟ್ಟರು. ಶಾಕ್ಯಮುನಿ ಗೌತಮನಿಗೆ ಲೋಕದ ಜನತೆ ಬದುಕುತ್ತಿರುವ ವಿಧಾನದಲ್ಲಿ ಬದಲಾವಣೆ ತರಬೇಕಾಗಿತ್ತು. ವರ್ಣವ್ಯವಸ್ಥೆಯ ಮೂಲಕ ಅಸ್ತಿತ್ವಕ್ಕೆ ಬಂದ ಬ್ರಾಹ್ಮಣಿಕೆಯೆನ್ನುವುದು ಅದಾಗ ಜಾತಿಯಾಗಿ ಬದಲಾವಣೆಯಾಗಿತ್ತು. ಆದರೂ ಅದು ಅಷ್ಟು ಗಟ್ಟಿಯಾಗಿ ಅನುಷ್ಟಾನಕ್ಕೆ ಬಂದಿರಲಿಲ್ಲ. ಬ್ರಾಹ್ಮಣರ ಪಾರಮ್ಯವೆನ್ನುವುದು ಧಾರ್ಮಿಕ ರಂಗದಲ್ಲಿ ಇತ್ತು. ಆತನ ಜನನದ ಕಾಲಘಟ್ಟವಾದ ಸುಮಾರು ಕ್ರಿ. ಪೂ. 623 ಶತಮಾನದಲ್ಲಿ ಭಾರತ ಧಾರ್ಮಿಕವಾಗಿ ಹಲವು ಪಲ್ಲಟಗಳನ್ನು ಅನುಭವಿಸಿತ್ತು. ಸನಾತನ ಧರ್ಮದ ಆಚರಣೆಯಲ್ಲಿ ಸಮಗ್ರವಾದ ದಿಕ್ಕುಗಳನ್ನು ತೋರಿಸುವವರು ಇರಲಿಲ್ಲ. ಧಾರ್ಮಿಕ ನಾಯಕತ್ವವೆನ್ನುವದು ತತ್ವಜ್ಞಾನಿಗಳು ತಮಗೆ ತೋಚಿದ ದಿಕ್ಕಿನಲ್ಲಿ ಅರ್ಥೈಸಿಕೊಂಡು ಅದನ್ನೇ ಬೋಧಿಸುತ್ತಿದ್ದರು. ಈ ಕಾಲಘಟ್ಟದಲ್ಲಿಯೇ ತಂತ್ರಶಾಸ್ತ್ರ, ಅಘೋರಿಗಳು, ಕಾಪಾಲಿಕರು ಹೀಗೆ ಸಾಧನೆಗಳಿಗೆ ಸಾತ್ವಿಕಮಾರ್ಗಗಳ ಜೊತೆಗೆ ಹಟಯೋಗವೂ ಸೇರಿಹೋಗಿತ್ತು. ರಾಜರುಗಳು ಯಾವ ಹಾದಿಯನ್ನು ಹಿಡಿಯುತ್ತಿದ್ದಾರೋ ಅದೇ ಹಾದಿಯನ್ನು ಜನಸಾಮಾನ್ಯರು ನಡೆದುಕೊಳ್ಳುತ್ತಿದ್ದರು.

ಇಂತಹ ಹೊತ್ತಿನಲ್ಲಿ ಪ್ರವೇಶ ಮಾಡಿದ ಬುದ್ಧನ ಉಪದೇಶಗಳು ಸನಾತನ ಧರ್ಮಕ್ಕೇ ಹೊಸ ವ್ಯಾಖ್ಯಾನವನ್ನು ಕೊಟ್ಟವು. ಹಾಗಂತ ಆತ ಭಾರತೀಯ ದರ್ಶನ ಶಾಸ್ತ್ರಕ್ಕೆ ವಿಲೋಮವಾದದ್ದನ್ನು ತನ್ನು ಬೋಧನೆಯಲ್ಲಿ ಹೇಳಲಿಲ್ಲ. ಬುದ್ಧ ಅರ್ಥವಾಗಬೇಕಾದರೆ ಭಾರತೀಯ ತತ್ತ್ವಶಾಸ್ತ್ರ ಅರ್ಥವಾಗಬೇಕು. ಸ್ವರ್ಗಕಾಮಕ್ಕಾಗಿ ಯಜ್ಞ ಯಾಗಾದಿಗಳು ಎಂದು ಸಾರುತ್ತಿದ ಪುರಾಣಗಳ ನಡುವೆ ವೇದಾಂತದ ಪರಮ ಸತ್ಯವನ್ನು ಆತನ ಉಪದೇಶಗಳಲ್ಲಿ ಗಮನಿಸಬಹುದಾಗಿದೆ. “ವೇದಗಳಲ್ಲಿ ಅಡಗಿದ್ದ ಸತ್ಯಗಳನ್ನು ಹೊರತಂದು ಜಗತ್ತಿಗೆಲ್ಲ ಘಂಟಾಘೋಷವಾಗಿ ಸಾರಿದ ವಿಶಾಲಹೃದಯಿಯಾಗಿ ಬುದ್ದ ಕಾಣಿಸಿಸಿಕೊಳ್ಳುತ್ತಾನೆ ಎಂದು ವಿವೇಕಾನಂದರು ಹೇಳುತ್ತಾರೆ. “ಕಿಸಾಗೌತಮಿಗೆ ಆಕೆಯ ಮಗನ ಸಾವಿನ ನೋವನ್ನೂ ಮರೆಯಿಸಿ ಭವಚಕ್ರಗಳ ಬಂಧನದ ಜಗತ್ತಿನ ಮಾಯೆಯನ್ನು ಹೋಗಲಾಡಿಸಿದ ಬುದ್ಧ ಬಿಡಿಸಿದಷ್ಟೂ ಬಿಡಿಸಲಾಗದ ಒಗಟು”. ಸನಾತನ ಧರ್ಮದ ಸಾರವೇ ಬುದ್ಧನ ಉಪದೇಶವೆನ್ನಬಹುದಾಗಿದೆ. ಅದಕ್ಕೇ ಸ್ವಾಮಿ ವಿವೇಕಾನಂದರು ತಮ್ಮ ಕೃತಿಶ್ರೇಣಿಯಲ್ಲಿ “ಭಾರತದಲ್ಲಿ ಬೌದ್ಧಧರ್ಮವು ನಾಶವಾಗಲಿಲ್ಲ, ಉಪನಿಷತ್ತುಗಳಲ್ಲಿ ಹುಟ್ಟಿದೆ. ಅದು ನವಯುಗದ ಹಿಂದೂ ಧರ್ಮವಾಯಿತು” ಎನ್ನುತ್ತಾರೆ.

ಜೀವನದ ನಶ್ವರತೆಯೆನ್ನುವುದು ಬುದ್ಧನ ಬದುಕಿನಲ್ಲಿ ಬಂದ ಮೊದಲ ತಿರುವು. ಪ್ರಸಿದ್ಧವಾದ ಆತನ ವಾಕ್ಯ “ಆಸೆಯೇ ದುಃಖಕ್ಕೆ ಕಾರಣ” ಎನ್ನುವುದು ನೋಡಲು ಸರಳವಾಗಿ ಕಂಡರೂ ಈ ಸತ್ಯವನ್ನು ಮನಗಾಣುವಲ್ಲಿ ಬುದ್ಧ ಸುಮಾರು ಆರುವರ್ಷಗಳ ಕಾಲ ಹುಡುಕಾಡಿದ್ದಾನೆ. ತನ್ನ ಕುಲಗುರು ಅಸಿತದೇವಲನಿಂದ ಹಿಡಿದು ಆಲಾರಾ ಕಲಮ್, ಉದ್ಧತ ರಾಮಪುತ್ತ ಮುಂತಾದ ಅನೇಕರ ಹತ್ತಿರ ಈ ವಿಷಯವನ್ನು ಚರ್ಚಿಸಿದ್ದಾನೆ. ಹಿಮಾಲಯದ ತಪ್ಪಲಿನ ಕೆಲ ಸನ್ಯಾಸಿಗಳು ಪ್ರಾಪಂಚಿಕ ಸುಖ ಮತ್ತು ದುಃಖಗಳ ಕಾರಣವನ್ನು ಅರಿತು ವೇದೋಪನಿಷತ್ತುಗಳ ನಿಜವಾದ ಅರ್ಥಗಳನ್ನು ತಿಳಿದು ಅದನ್ನೇ ಬೊಧಿಸುತ್ತಿದ್ದರು. ಅವರೆಲ್ಲರೂ ಈತನಿಗೆ ತಮ್ಮಲ್ಲಿದ ವಿದ್ಯೆಯನ್ನು ಧಾರೆ ಎರೆದರೂ ಅವೆಲ್ಲವೂ ಬದುಕಿನ ಪರಮ ಸತ್ಯವನ್ನು ಸಾಧಿಸುವತ್ತ ಪ್ರಯೋಜನಕ್ಕೆ ಬಾರದವುಗಳು ಎನ್ನುವುದು ಅರಿವಾಯಿತು. ಉದ್ಧಕ ರಾಪಪುತ್ತನ ಹತ್ತಿರ ಸಮಾಧಿಗೆ ಹೋಗುವ ತಂತ್ರವನ್ನು ಕೇವಲ ಹದಿನೈದನೇ ದಿನಗಳಲ್ಲಿ ಕಲಿತ. ಆಗ ಅವನಿಗೆ ಅರಿವಾಗಿದ್ದು ಎಚ್ಚರಕ್ಕೂ ಮತ್ತು ಸಮಾಧಿಗೂ ಇರುವ ಸ್ಥಿತಿಯೆಂದರೆ ಗ್ರಹಿಕೆ ಮತ್ತು ಗ್ರಹಿಕೆಯಲ್ಲದ ಸ್ಥಿತಿ ಎನ್ನುವುದು. ಆದರೆ ಎಚ್ಚರಾದ ಮೇಲೆ ಮತ್ತೆ ಈ ಲೋಕದ ಅವಸ್ಥೆಗಳಲ್ಲೇ ಇರುತ್ತೇವೆ ಎನ್ನುವುದು ಅರಿತಾಗ ಸಮಾಧಿಯೆನ್ನುವುದು ಸ್ವಪ್ನ ಅಥವಾ ಸುಷುಪ್ತಿಯ ಅವಸ್ಥೆಗಳಲ್ಲಿರುವ ಸ್ಥಿತಿಯೇ ಹೊರತೂ ಬೇರೆನೂ ಅಲ್ಲವೆಂದು ಅರಿವಿಗೆ ಬಂತು. ಪರಿಪೂರ್ಣ ಜ್ಞಾನವೆನ್ನುವುದನ್ನು ಸಾಧಿಸಿದ ವ್ಯಕ್ತಿಗೆ ಮತ್ತೆ ಲೌಕಿಕ ಬಾಧಿಸಬಾರದು. ಹಾಗಾಗಿ ಯಾವುದು ಸ್ಥಾಯಿ ಸ್ವರೂಪವಲ್ಲವೋ ಅವೆಲ್ಲವೂ ಅವಿದ್ಯೆ ಎನ್ನುವ ತೀರ್ಮಾನಕ್ಕೆ ಬಂದವ ಗಯಾಕ್ಕೆ ಬಂದು ಅಲ್ಲಿನ ಸ್ಮಶಾನದಲ್ಲಿರುವ ಬೋಧಿವೃಕ್ಷದ ಕೆಳಗೆ ಧ್ಯಾನಮಾಡಲು ತೊಡಗಿದ. ಜ್ಞಾನವೆನ್ನುವದು ಪ್ರಾಪಂಚಿಕ ವಸ್ತುಗಳಿಂದ ವಿಮುಖನಾಗುವದಲ್ಲ, ನಮ್ಮ ಉಸಿರು, ಹಕ್ಕಿಯ ಹಾಡು, ಎಲೆ, ಸೂರ್ಯನ ಕಿರಣ ಇವೆಲ್ಲವೂ ಧ್ಯಾನಕ್ಕೆ ಸಾಧನವಾಗಬಹುದೆಂದು ಆತನಿಗೆ ಅನಿಸಿತು. ಒಂದು ಧೂಳಿನ ಕಣದಿಂದಲೇ ಸಮಗ್ರವಾಗಿ ಬ್ರಹ್ಮಾಂಡದ ಲಕ್ಷಣವನ್ನು ಅರಿಯಬಹುದೆನ್ನುವ ವಿಷಯ ಹೊಳೆಯಿತು. ಜ್ಞಾನೋದಯವೆನ್ನುವದು ವಾಸ್ತವ ಪ್ರಪಂಚದಲ್ಲಿದೆಯೇ ಹೊರತು ಕಾಣದ ಆತ್ಮ ಅಥವಾ ಬ್ರಹ್ಮದ ವಿಷಯದಲ್ಲಿ ಇಲ್ಲ. ಆತ್ಮ ಪ್ರತ್ಯೇಕವೆನ್ನುವ ಭಾವನೆಯನ್ನು ಮೀರಿ ಪ್ರಕೃತಿಯ ಪ್ರತೀ ವಸ್ತುವಿನಲ್ಲಿ ಸೌಂದರ್ಯವಿದೆಯೆನ್ನುವದನ್ನು ಗೌತಮನ ಅರಿತುಕೊಂಡ. ಪ್ರಪಂಚವೇ ಪರಸ್ಪರ ಅವಲಂಬಿತ ಮತ್ತು ಸ್ವಯಂ ಸ್ವಭಾವವುಳ್ಳ ಸತ್ಯವೆನ್ನುವ ಸೂತ್ರ ಆತನಿಗೆ ಅರಿವಾಯಿತು. ಜ್ಞಾನವೆನ್ನುವದು ಒಳಗಣ್ಣು ಎನ್ನುವ ಭ್ರಮೆಗಿಂತ ಹೊರಗಣ್ಣಿಗೆ ಕಾಣುವ ಪ್ರಪಂಚದ ಸಮಸ್ಥವಸ್ತುವಿನಲ್ಲಿ ಇದೆ ಎನ್ನುವದು ಸ್ಪಷ್ಟವಾಯಿತು.

ಬುದ್ಧನ ಬೋಧನೆಗಳು ಮೊದಲನೆಯದಾಗಿ ಜೀವನವು ದುಃಖದಿಂದ ಕೂಡಿದೆ. ಜನನ, ಮರಣ, ರೋಗ, ವೃದ್ಧಾಪ್ಯ, ವಿರಹ, ಮನಸ್ಸು ಮತ್ತು ದೇಹಗಳ ವ್ಯವಸ್ಥೆಯೇ ದುಃಖಮಯ, ಎರಡನೆಯದಾಗಿ ಈ ದುಃಖಕ್ಕೆ ಕಾರಣವಿದೆ. ಮನುಷ್ಯ ತನ್ನ ಮೂಲರೂಪವನ್ನು ಅರಿಯದಿರುವದು, ಈ ಅಜ್ಞಾನಗಳಿಂದಾಗಿಯೇ ಆತ ದೇಹ-ಮನಸ್ಸುಗಳಿಗೆ ಅಂಟಿಕೊಳ್ಳುತ್ತಾನೆ. ಈ ಕಾರ್ಯಕಾರಣ ಸಂಬಂಧದಿಂದಾಗಿ ಕರ್ಮಚಕ್ರಗಳ ಮೂಲಕ ಪುನರ್ಜನದ ಭವಚಕ್ರಗಳಿಗೆ ಸಿಕ್ಕುಬೀಳುತ್ತಾನೆ, ಈ ಯಾತನೆಗಳಿಗೆ ಕಾರಣ ಆಯಾ ವ್ಯಕ್ತಿಯೇ ಹೊರತೂ ವಿಧಿ, ಆಕಸ್ಮಿಕ ಇತ್ಯಾದಿಗಳೆಲ್ಲ ಸುಳ್ಳು. ಮೂರನೆಯದು ಈ ಭವಚಕ್ರಗಳಿಂದ ಬಿಡುಗಡೆ. ಬುದ್ಧ ಇದು ಅವಿದ್ಯೆ, ಅಜ್ಞಾನಾವಸ್ಥೆಯೆನುತ್ತಾನೆ. ಲೋಕದಲ್ಲಿನ ಎಲ್ಲಾ ಅವಸ್ಥೆಗಳಿಗೂ ಇದೇ ಕಾರಣ, ಇದೇ “ಪ್ರತ್ಯೀತ್ಯಸಮುತ್ಪಾದ” ಸಿದ್ಧಾಂತ. ನಾಲ್ಕನೆಯದೇ ಈ ಭವಚಕ್ರಗಳಿಂದ ಬಿಡುಗಡೆಯ ಮಾರ್ಗವೆಂದರೆ ಈ ದುಃಖದಿಂದ ಬಿಡುಗಡೆ. ಅದೇ ಅವಿಧ್ಯಾ ಜಿವನದಿಂದ ಬಿಡುಗಡೆ. ಇದನ್ನು ಸಾಧಿಸಲು ಅಷ್ಟಾಂಗಿಕ ಮಾರ್ಗಗಳಾದ ಸಮ್ಯಕ್ ದೃಷ್ಟಿ, ಸಮ್ಯಕ್ ಸಂಕಲ್ಪ, ಸಮ್ಯಕ್ ವಾಕ್ಕು, ಸಮ್ಯಕ್ ಕ್ರಿಯಾ ಸಮ್ಯಕ್ ಆಜೀವ, ಸಮ್ಯಕ್ ವ್ಯಾಯಾಮ, ಸಮ್ಯಕ್ ಸ್ಮೃತಿ ಮತ್ತು ಸಮ್ಯಕ ಸಮಾಧಿಯ ಮೂಲಕ ಸಾಧಿಸಬಹುದು. ಈ ಅಷ್ಟಾಂಗ ಮಾರ್ಗವೆಂದರೆ ನೈತಿಕತೆ, ಸಾಧನೆ, ಸಾಕ್ಷಾತ್ಕಾರ, ಸ್ವಾರ್ಥವನ್ನು ತ್ಯಜಿಸುವದು, ಬೂತದಯೆಗಳು. ಬುದ್ದ ಇದನ್ನು ಸ್ವಯಂ ತನ್ನ ಕೊನೆಯಕ್ಷಣದವರೆಗೂತಾನೇ ಆಚರಿಸಿದ್ದನು. ಕುಂಡ ಕಮ್ಮಾರಪುತ್ತ ನೀಡಿದ ವಿಷಯುಕ್ತ ಆಹಾರದಿಂದ ಸಾಯುವ ಸಂದರ್ಭದಲ್ಲಿಯೂ ಅವನನ್ನು ಕ್ಷಮಿಸಿದನು. ಪ್ರಪಂಚದಲ್ಲಿ ಕಾಣುವ ವಸ್ತುಗಳನ್ನು ಅವು ಇರುವಂತೆಯೇ ತಿಳಿದವ ಬುದ್ಧ. ಹಾಗಂತ ಇದು ಚಾರ್ವಾಕ ಮತಕ್ಕೆ ಹತ್ತಿರವಾದಂತೆ ಕಂಡರೂ ಆತ ನಾಸ್ತಿಕವಾದಿಯಲ್ಲ. ಬುದ್ಧ ಅಸ್ತಿತ್ವವನ್ನು ಒಪ್ಪಿಕೊಳ್ಳುತ್ತಾನೆ, ಅದು ಅದ್ವೈತವನ್ನು ಹೋಲುತ್ತದೆ. ಬೌದ್ಧರು ಆತ್ಮದ ಅಸ್ತಿತ್ವವನ್ನು ಒಪ್ಪುವದಿಲ್ಲ ಎನ್ನುವ ಸಾಮಾನ್ಯ ನಂಬಿಕೆ. ಆದರೆ ಇದಕ್ಕೆ ಆಧಾರವಿಲ್ಲ.

ಬೌದ್ಧ ದರ್ಶನಗಳಲ್ಲಿ ಬುದ್ಧತ್ತ್ವಕ್ಕೆ ಏರುವುದು ಅಂದರೆ ಅದು ತುರೀಯಾವಸ್ಥೆ. ಸಾಮಾನ್ಯ ವ್ಯಕ್ತಿ ಬುದ್ಧನಾಗಲಿಕ್ಕೆ ಅನೇಕ ಜನ್ಮಗಳನ್ನು ಪಡೆಯಬೇಕಾಗುತ್ತದೆ. ಅದರಲ್ಲಿಯೂ ಕೊನೆಯ ಮೂರು ಹಂತಗಳಾದ ಅರಿಹಂತ, ಪಚ್ಛೇಕ ಬುದ್ಧತ್ವವನ್ನು ಸಾಧಿಸಿದ ಮೇಲೆ ಗೌತಮ ಬುದ್ಧ ತಲುಪಿದ ಸ್ಥಿತಿ ಸಮ ಸಂಬುದ್ಧತ್ವದ ಸ್ಥಿತಿ. ಜಾತಕದ ಕತೆಗಳಲ್ಲಿ ಬುದ್ಧನ ಹಿಂದಿನ ಜನ್ಮದ ವಿವರಗಳು ಕಥೆಯ ರೂಪದಲ್ಲಿ ಬರುವುದನ್ನು ಗಮನಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಆತ್ಮದ ಅಸ್ತಿತ್ವವನ್ನು ಬುದ್ಧ ಒಪ್ಪುವದೂ ಇಲ್ಲ ಅಥವಾ ನಿರಾಕರಿಸುವುದೂ ಇಲ್ಲ. ವಚ್ಚಗೋತ್ತ ಎನ್ನುವ ಬ್ರಾಹ್ಮಣ ಇದೇ ವಿಷಯದಲ್ಲಿ ಬುದ್ಧನ ಹತ್ತಿರ ಕೇಳುವ ಪ್ರಶ್ನೆ ತೆವಿಜ್ಜ ಸುತ್ತದಲ್ಲಿ ಬರುತ್ತದೆ. ಆತ ಬುದ್ಧನಲ್ಲಿ ಕೇಳುವ ಆತ್ಮವಿದೆಯೇ ಅಥವಾ ಇಲ್ಲವೇ ಎನ್ನುವ ಪ್ರಶ್ನೆಗೆ ಆತ ಮೌನವಾಗಿಬಿಡುತ್ತಾನೆ. ಆತನ ಪ್ರಕಾರ ಆತ್ಮವಿದೆ ಎಂದು ಸಾರಿದ್ದರೆ ಅನಿತ್ಯಕ್ಕೇ ನಿತ್ಯವೆಂದು ಆತನ ಶಿಷ್ಯರು ಪರಿಗಣಿಸಬಹುದು, ಇಲ್ಲವೆಂದರೆ ಉಚ್ಛೇದವಾದ (ವಿನಾಶವಾದ)ವನ್ನು ಉಪದೇಶಿಸುವ ದಾರ್ಶನಿಕರು ಹೇಳಿದ್ದು ಸತ್ಯವೆಂದು ಅವರು ನಂಬುತ್ತಾರೆ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ರಾಮಪಟ್ಟಾಭಿಷೇಕ ಭಂಗ

ಇದರ ಅರ್ಥವಿಷ್ಟೇ ಬುದ್ಧ ಅಸ್ತಿತ್ವವಾದಿಯಾಗಿದ್ದ. ತನ್ನ ಶಿಷ್ಯರಿಗೆ “ನಿಮಗೆ ನೀವೇ ಬೆಳಕಾಗಿರಿ” ಎಂದು ಉಪದೇಶವನ್ನು ಮಾಡಿದ್ದ. ಬದುಕಿನಲ್ಲಿ ಕಾಣುವ ವಸ್ತುಗಳಲ್ಲಿಯೇ ಆನಂದವಿದೆ ಎನ್ನುವದರ ಮೂಲಕವೇ ಆತನಿಗೆ ಜ್ಞಾನೋದಯವಾದದ್ದರಿಂದ ಆತ “ತಿವಿಜ್ಜಸುತ್ತ”ದಲ್ಲಿ ಹೇಳುವಂತೆ. “ಹಳೆಯ ಓಲೆಗರಿಯಲ್ಲಿ ಹೇಳಿದೆ ಎನ್ನುವ ಮಾತ್ರಕ್ಕೆ ನಂಬಬಾರದು. ಎಲ್ಲವನ್ನೂ ವಿಚಾರಣೆ ಮಾಡಿ ವಿಶ್ಲೇಷಿಸಿ ಅದರಿಂದ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದಾದರೆ ಅದರಂತೆ ನೀವೂ ಬಾಳಿ” ಎಂದಿದ್ದಾನೆ. ಬುದ್ಧನ ಪ್ರಕಾರ ನಿರ್ವಾಣವೆಂದರೆ ಅದು ‘ಸಂವೇದನೆ ಮತ್ತು ಭಾವನೆಗಳು ನಿಂತುಹೋಗುವ ಕ್ರಿಯೆ’. ಇದು ಜ್ಞಾತ್ರಾಜ್ಞೇಯದ ಸಂಬಂಧದ ಆಭಾವ. ಈ ನಿರ್ವಾಣಕ್ರಿಯೆಯನ್ನು ಮಾಂಡುಕ್ಯೋಪನಿಷತ್ತಿನ ತುರೀಯಾವಸ್ಥೆಗೆ ಹೋಲಿಸಬಹುದು. (ನಾಂತಃಪ್ರಜ್ಞಂ ನ ಬಹಿಃಪ್ರಜ್ಞಂ..ಮಾಂಡೂಕ್ಯ-7) ಇವೆರಡರಲ್ಲೂ ಭಾವನಾತ್ಮಕವಾದ ವಿಷಯಗಳಿಲ್ಲ. ಅವು ವಿಷಯ, ವಿಷಯಿ ಸಂಬಂಧ, ದೇಶ ಕಾಲ ನಿಮಿತ್ತ ಇವುಗಳಿಗೆ ಅತೀತವಾಗಿದೆ. ಇವೆರಡರಲ್ಲೂ ಚೇತನಾವಿಷಯಗಳಿಲ್ಲ; ಚೈತನ್ಯಸ್ವರೂಪವಿದೆ. ಪಾಲಿ ಭಾಷೆಯಲ್ಲಿರುವ ತೇರವಾದ ಬೌದ್ಧಗ್ರಂಥ ‘ಉದಾನ”ದಲ್ಲಿ “ಅಜವೂ ಅನಾದಿಯೂ ಅಕೃತವೂ ಅಸಂಯುಕ್ತವೂ ಆದುದೊಂದಿದೆ. ಎಲೈ ಭಿಕ್ಕು, ಅದಿಲ್ಲವಾದರೆ ಹುಟ್ಟುಳ್ಳದ್ದೂ, ಸಾದಿಯೂ ಕೃತವೂ ಸಂಯುಕ್ತವೂ ಆದ ಜಗತ್ತಿನಿಂದ ಮುಕ್ತಿಯೇ ಇರುವದಿಲ್ಲ” (ಉದಾನ 8-3) ಎಂದಿದ್ದಾನೆ. ಆತ ನಿರ್ವಿಕಾರವೂ ಶಾಶ್ವತವೂ ಆದ ಶಾಶ್ವತ ಸತ್ಯವನ್ನು ಒಪ್ಪುತ್ತಾನೆಂಬುದು ಇದರಿಂದ ಸ್ಪಷ್ಟ. ಇದಲ್ಲದಿದ್ದರೆ ಅವನ ನಿರ್ವಾಣವಾದವೇ ಬಿದ್ದುಹೋಗುತ್ತದೆ. ಆತ ಹೇಳಿದ್ದು “ಆತ್ಮ ಮತ್ತು ಬ್ರಹ್ಮ ವಿಷಯಕವಾದ ವಿಚಾರಗಳಿಂದ ಯಾವ ಪ್ರಯೋಜನವೂ ಇಲ್ಲ, ಒಳ್ಳೆಯದನ್ನು ಮಾಡಿರಿ; ಒಳ್ಳೆಯವರಾಗಿರಿ, ಇದೇ ನಿಮ್ಮನ್ನು ನಿರ್ವಾಣಕ್ಕೆ ಕೊಂಡೊಯ್ಯುತ್ತದೆ”. ಬುದ್ಧನೇ ನೇರವಾಗಿ ಬೋಧಿಸಿದ ತತ್ತ್ವಗಳನ್ನು ಗಮನಿಸಿದಾಗ ಆತನ ತತ್ತ್ವಗಳು ಭಾರತೀಯ ದರ್ಶನ ಶಾಸ್ತ್ರದ ಮುನ್ನುಡಿಯಾಗಿವೆ ಎನ್ನಬಹುದು.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಆತುರಗೆಟ್ಟು ಸ್ತಿಮಿತ ಕಳೆದುಕೊಂಡವನ ವಿಲಾಪ

Exit mobile version