Site icon Vistara News

ಧವಳ ಧಾರಿಣಿ ಅಂಕಣ: ಕೃಷ್ಣ ಕುಹರದಿಂದ ಮೂಡಿದ ಬೆಳಕಿನ ಪುಂಜ

ambedkar

ಡಾ. ಬಿ. ಆರ್. ಅಂಬೇಡ್ಕರ್‌: ಅವಮಾನವನ್ನು ಅರಗಿಸಿ ಬೆಳೆದ ಮಹಾಪುರುಷ

ಭಾರತದ ಈ ಇಬ್ಬರೂ ಜಗತ್ತಿಗೆ ಹೊಸ ದಿಸೆಯನ್ನು ತೋರಿದವರು. ಮನಸ್ಸು ಮಾಡಿದರೆ ತಮ್ಮಷ್ಟಕ್ಕೇ ತಾವು ಹಾಯಾಗಿ ವಿದೇಶದಲ್ಲಿ ನೆಲೆಸಿ ಬೇಕಾದಷ್ಟನ್ನು ಗಳಿಸಿ ಸುಖವಾಗಿರಬೇಕಾದ ಸಂದರ್ಭದಲ್ಲಿ ಈ ಇಬ್ಬರೂ ಭಾರತದಲ್ಲಿ ತಾಂಡವವಾಡುತ್ತಿರುವ ಗಂಭೀರ ಸಮಸ್ಯೆಗಳಿಗೆ ಮರುಗಿದವರು. ಆಧುನಿಕ ಭಾರತವನ್ನು ಸರ್ವರಿಗೆ ಸಮಪಾಲು ಸರ್ವರಿಗೆ ಸಮಬಾಳು ಎನ್ನುವ ರೀತಿಯಲ್ಲಿ ಕಟ್ಟಬೇಕೆನ್ನುವುದು ಅವರ ಕನಸು ಮತ್ತು ಕಳಕಳಿಯಾಗಿತ್ತು. ಓರ್ವರು ಪೋರಬಂದರ ರಾಜ್ಯದ ಮುಖ್ಯಮಂತ್ರಿಯ ಮಗನಾಗಿ ಜನಿಸಿ ಎಲ್ಲವನ್ನು ಬಿಟ್ಟು ತುಂಡು ಬಟ್ಟೆಯ ಫಕೀರನಾದ ಮಹಾತ್ಮಾ ಗಾಂಧಿಯವರು. ಇನ್ನೊಬ್ಬರು ಪ್ರಖರವಾದ ಜ್ಞಾನ, ಪ್ರಪಂಚದ ಶ್ರೇಷ್ಠ ವಿಶ್ವವಿದ್ಯಾಲಯಗಳ ಪದವಿ, ಜಾಗತಿಕ ಮಟ್ಟದ ಆರ್ಥಿಕತಜ್ಞ, ವಕೀಲರಾಗಿಯೂ ಅಸ್ಪೃಶ್ಯತೆಯ ಕಾರಣದಿಂದ ಹೆಜ್ಜೆ ಹೆಜ್ಜೆಗೂ ಅವಮಾನವನ್ನು ನುಂಗಿ ಮತ್ತು ಇದೇ ಕಾರಣಕ್ಕೆ ಸಮಾಜದಿಂದ ಬಹಿಷ್ಕೃತರಾದ ತನ್ನ ಸಮಾಜಕ್ಕಾಗಿ ತನ್ನನ್ನೇ ಅರ್ಪಿಸಿಕೊಂಡ ಡಾ. ಭೀಮರಾವ್ ರಾಮಜಿ ಅಂಬೇಡ್ಕರವರು.

ಮಾನವ ಜನಾಂಗದಲ್ಲಿಯೇ ಅತ್ಯಂತ ಹೀನವಾದ ಅಸ್ಪೃಶ್ಯತೆಯನ್ನು ತೊಡೆದು ಹಾಕಲು ಈ ಇಬ್ಬರೂ ಹೋರಾಡಿದರೂ ಗಾಂಧೀಜಿಯವರಿಗೆ ದೇಶಕ್ಕೆ ಸ್ವಾತಂತ್ರ್ಯವನ್ನು ತಂದು ಕೊಡುವುದು ಮೊದಲ ಗುರಿಯಾಗಿತ್ತು. ಆಂಬೇಡ್ಕರರಿಗೆ ಅಸ್ಪೃಶ್ಯತೆಯನ್ನು ಹೋಗಲಾಡಿಸುವುದು ಮೊದಲ ಗುರಿಯಾಗಿತ್ತು. ಯಾವ ದೇಶದಲ್ಲಿ ಮನುಷ್ಯರನ್ನು ನಾಯಿ ಮತ್ತು ಬೆಕ್ಕುಗಳಿಗಿಂತಲೂ ಕಡೆಯಾಗಿ ನೋಡುವ ಸಮಾಜವಿದೆಯೋ ಆ ದೇಶ ತನ್ನದೆಂದು ಆ ಧರ್ಮ ತನ್ನದೆಂದು ತಾನು ಹೇಳಿಕೊಳ್ಳಲಾರೆ ಎಂದಿದ್ದರು. (I have no homeland; how I can call this religion as my wn religion wherein we are treated worse than cat and dogs…)

ಮಹಾತ್ಮಾ ಗಾಂಧಿ ಸಹ ಈ ವೈರುಧ್ಯವನ್ನು ಅನುಭವಿಸಿದವರೇ. ಅವರು ವಿಲಾಯತಿಗೆ ಹೋದ ಕಾರಣದಿಂದ ಜಾತಿಯಿಂದ ಬಹಿಷ್ಕಾರದ ಬೆದರಿಕೆಯನ್ನು ಎದುರಿಸಬೇಕಾಗಿತ್ತು. ಅವರು ತಮ್ಮ ಆಶ್ರಮದಲ್ಲಿ ಸಂಡಾಸನ್ನು ಎಲ್ಲರಂತೆ ತೊಳೆಯುತ್ತಿದ್ದರು. ಅವರ ಆಶ್ರಮಕ್ಕೆ ಒಂದು ಹರಿಜನ ಕುಟುಂಬವೊಂದು ಆಶ್ರಯ ಕೇಳಿದಾಗ ಗಾಂಧಿ ಅವರನ್ನು ಸ್ವಾಗತಿಸಿದರು. ಆದರೆ ಇನ್ನಿತರ ಆಶ್ರಮದ ಸದಸ್ಯರು ಗಾಂಧೀಜಿಯವರ ಈ ಕ್ರಮವನ್ನು ಬಲವಾಗಿ ವಿರೋಧಿಸಿದರು. ಅವರಲ್ಲಿ ಅವರ ಪತ್ನಿ ಕಸ್ತೂರಿಬಾಯಿ, ಮಗನಲಾಲ್ ಗಾಂಧಿ ಮೊದಲಾದವರೂ ಇದ್ದರು. ತಾವು ಆಶ್ರಮವನ್ನು ತೊರೆಯುವುದಾಗಿ ಸಹ ಅವರು ಬೆದರಿಕೆಯನ್ನು ಹಾಕಿದರು. ಗಾಂಧೀಜಿ ಬಗ್ಗಲಿಲ್ಲ. “ಆಶ್ರಮವನ್ನು ಈ ಕಾರಣಕ್ಕಾಗಿ ಬಿಡುವುದಿದ್ದರೆ ಬಿಡಬಹುದು” ಎಂದರು. ಕಸ್ತೂರ ಬಾ ತನ್ನ ಮನಸ್ಸು ಬದಲಾಯಿಸಿದರೂ ಇನ್ನು ಕೆಲವರು ಆಶ್ರಮವನ್ನು ತೊರೆದುಬಿಟ್ಟರು. ಕೆಲ ಕಾಲದ ನಂತರ ಮಗನಲಾಲ್ ಗಾಂಧಿ ಪುನಃ ಆಶ್ರಮಕ್ಕೆ ವಾಪಾಸು ಬಂದರು.

ಗಾಂಧೀಜಿಯವರ ಕಳಕಳಿ ಅಂಬೇಡ್ಕರ್ ಅವರು ಅನುಭವಿಸಿದ ಕಿರುಕುಳದ ನಡುವೆ ಬಹಳ ಅಂತರವಿದೆ. ಗಾಂಧೀಜಿಯವರದ್ದು ನೊಂದವರಪರ ಸಹಾನುಭೂತಿಯಾದರೆ (Empathy) ಅಂಬೇಡ್ಕರ್ ಈ ಅವಮಾನವನ್ನು ಹೆಜ್ಜೆಹೆಜ್ಜೆಗೂ ಅನುಭವಿಸಿದವರು. ಹಸಿವೆಯ ಅನುಭವವನ್ನು ಹಸಿದವನೇ ಬಲ್ಲನೇ ಹೊರತು ಆ ಕುರಿತು ಸಹಾನುಭೂತಿ ತೋರಿಸುವವನಲ್ಲ. ಈ ಕಳಂಕವನ್ನು ಅಂಬೇಡ್ಕರ ತಮ್ಮ ಹುಟ್ಟಿನಿಂದಲೇ ಪಡೆದುಕೊಂಡು ಬಂದಿದ್ದರು. ಬೇಸಿಗೆಯ ರಜೆಯಲ್ಲೊಮ್ಮೆ ಅವರು ತಮ್ಮ ಅಣ್ಣ ಮತ್ತು ಸೋದರಸಂಬಂದಿಯೊಡನೆ ತನ್ನ ತಂದೆತಾಯಿಯರನ್ನು ಕಾಣಲು ಊರಿಗೆ ನಡೆದುಕೊಂಡು ಬರುತ್ತಿದ್ದರು. ದಾರಿಯಲ್ಲಿ ನಡೆದು ಬಾಯಾರಿಕೆಯಾಯಿತು. ದಲಿತರೆನ್ನುವ ಕಾರಣದಿಂದ ಎಲ್ಲಿಯೂ ಒಂದು ಲೋಟ ನೀರು ಸಿಗಲಿಲ್ಲ. ನಾಲ್ಕು ತಾಸುಗಳ ಕಾಲ ನಡೆಯುತ್ತಾ ಬಾಯಾರಿ ಬಸವಳಿದು ತಡಹೊತ್ತಿನಲ್ಲಿ ಮನೆಗೆ ಬಂದು ನೀರನ್ನು ಕುಡಿಯಬೇಕಾಯಿತು. ಶಾಲೆಯಲ್ಲಿಯೂ ಸಹ ಸಿಪಾಯಿ ಮೇಲಿನಿಂದ ಸುರಿದ ನೀರನ್ನು ಕುಡಿಯಬೇಕಾಗಿತ್ತು. ಯಾವತ್ತೋ ಒಂದು ದಿನ ಆ ಸಿಪಾಯಿ ರಜೆಯಲ್ಲಿದ್ದರೆ ಆ ದಿವಸ “ಸಿಪಾಯಿಯಿಲ್ಲದ ಕಾರಣ ನೀರು ಸಿಗುತ್ತಿರಲಿಲ್ಲ”. ಇಂತಹ ಅವಮಾನವನ್ನು ಅನುಭವಿಸಿಯೂ ಓದುವುದರಲ್ಲಿ ಪ್ರತಿಭಾವಂತರಾಗಿದ್ದರು.

ಬರೋಡಾ ಮಹಾರಾಜರ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾಗಿ ಕೋಲಂಬಿಯಾ ವಿಶ್ವವಿದ್ಯಾಲಯದಲ್ಲಿ ನಂತರ ಪ್ರತಿಷ್ಟಿತ “ಲಂಡನ್ ಸ್ಕೂಲ್ ಆಫ್ ಇಕಾನಮಿಕ್ಸ್”ನಲ್ಲಿ ಅರ್ಥಶಾಸ್ತ್ರ, ಬ್ಯಾರಿಷ್ಟರ್ ಪದವಿ ಹೀಗೆ ಹಲವು ಗರಿಗಳನ್ನು ತಮ್ಮ ಮುಡಿಗೇರಿಸಿಕೊಂಡರು. ಆ ಕಾಲದಲ್ಲಿ ಈ ಅಸ್ಪೃಶ್ಯತೆ ಎಷ್ಟು ತೀವ್ರವಾಗಿತ್ತೆಂದರೆ ವಿದೇಶದಲ್ಲಿ ಪದವಿಯನ್ನು ಪಡೆದು ಬರೋಡಾ ಸಂಸ್ಥಾನದಲ್ಲಿ ಉದ್ಯೋಗ ಮಾಡುವಾಗಲೂ ಇದು ಅವರನ್ನು ಕಾಡಿತು. ಹಿಂದುಗಳನ್ನು ಬಿಡಿ, ಪಾರ್ಸಿಗಳ ಹಾಸ್ಟೇಲಿನಲ್ಲಿಯೂ ಇವರಿಗೆ ಉಳಿಯಲು ಸ್ಥಳ ಸಿಗಲಿಲ್ಲ. ಸ್ವತಃ ಮಹಾರಾಜರೇ ಈ ವಿಷಯದಲ್ಲಿ ಅಸಹಾಯಕರಾಗಿದ್ದರು. ನಿರಾಸೆಯಿಂದ ಮುಂಬೈ ಮಹಾನಗರಕ್ಕೆ ಬಂದು ಶೇರು ವ್ಯವಹಾರದಲ್ಲಿ ತೊಡಗಿಕೊಂಡರೆ ಅಲ್ಲಿಯೂ ಇವರ ಜಾತಿಯನ್ನು ತಿಳಿದವರು ಇವರ ಹತ್ತಿರ ವ್ಯವಹರಿಸಲು ಮುಂದೆ ಬರಲಿಲ್ಲ. ಪ್ರಪಂಚದ ಶ್ರೇಷ್ಠ ವಿದ್ವಾಂಸರ ಸಾಲಿನಲ್ಲಿ ಸೇರಬಲ್ಲ ಅಂಬೇಡ್ಕರರಿಗೇ ಇಂತಹ ಸಂದರ್ಭಗಳು ಎದುರಾದರೆ ಸಾಮಾನ್ಯರ ಬದುಕು ಅದೆಷ್ಟು ನಿಕೃಷ್ಟವಾಗಿರಬಹುದು. ತುಳಿತಕ್ಕೊಳಗಾದವರಿಗೆ ಸ್ವಾತಂತ್ರ್ಯವೆಂದರೆ ಅದು ಶೋಷಣೆಯಿಂದ ಮುಕ್ತಿಯಾಗಬೇಕು. ಹಾಗಾಗಿ ಅಂಬೇಂಡ್ಕರರಿಗೆ ಭಾರತದ ಸ್ವಾತಂತ್ರ್ಯ ಹೋರಾಟವು ಬ್ರಿಟಿಷರಿಂದ ಮುಕ್ತರಾಗುವುದಕ್ಕಿಂತ ಮೊದಲು ಈ ನೆಲದಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಧಾರ್ಮಿಕ ಸ್ವಾತಂತ್ರ್ಯವನ್ನು ಜಾರಿಗೆ ತರುವುದಾಗಿತ್ತು. ದಮನಿತರಿಗೆ ನ್ಯಾಯವನ್ನು ಒದಗಿಸುವ ಭರವಸೆಯಿಲ್ಲದೇ ದೊರೆತ ಸ್ವಾತಂತ್ರ್ಯವನ್ನು ಅವರು ಒಪ್ಪಿಕೊಳ್ಳಲು ತಯಾರಿರಲಿಲ್ಲ.

1886ರಿಂದ ದೇಶಕ್ಕೆ ಸ್ವಾತಂತ್ರ್ಯವನ್ನು ತಂದು ಕೊಡಲು ಹೋರಾಡುತ್ತಿದ್ದ ಕಾಂಗ್ರೆಸ್ಸು ಯಾಕೋ ಈ ಸಾಮಾಜಿಕ ಪಿಡುಗಿನ ಕಡೆ ಲಕ್ಷ್ಯ ಹರಿಸಿರಲೇ ಇಲ್ಲ. ಅದು ನಗರ ಕೇಂದ್ರಿಕೃತ ಮತ್ತು ಆ ಕಾಲದಲ್ಲಿ ಮೇಲ್ವರ್ಗದವರ ಪಕ್ಷವಾಗಿತ್ತು. ಕಿಸಾನ್ ಸಂಘಟನೆಯನ್ನು ಸಹ ಅದು ನಿರ್ಲಕ್ಷಿಸಿತ್ತು. ಗಾಂಧೀಜಿ ದಕ್ಷಿಣ ಆಫ್ರಿಕಾದಿಂದ ಬಂದ ಮೇಲೆ ಕಾಂಗ್ರೆಸ್ಸಿಗೆ ತಾನು ಎಲ್ಲರನ್ನು ಒಳಗೊಳ್ಳುವ ಪಕ್ಷವಾಗಿ ನಿಲ್ಲಬೇಕೆನ್ನುವುದು ಅರಿವಾಯಿತು. ಹಾಗಾಗಿ ಜಸ್ಟಿಸ್ ನಾರಾಯಣ ಚಂದಾವರ್ಕರ್ ಅವರ ನೇತೃತ್ವದಲ್ಲಿ 1917ರಲ್ಲಿ ಮೊದಲ ಅಖಿಲ ಭಾರತೀಯ ಶೋಷಿತವರ್ಗಗಳ ಸಮ್ಮೇಳನವನ್ನು ಮುಂಬೈನಲ್ಲಿ ನಡೆಸಿದರು. ಇದಕ್ಕೆ ಡಾ. ಅಂಬೇಡ್ಕರರನ್ನು ಆಹ್ವಾನಿಸಿದ್ದರು. ಮೇಲ್ವರ್ಗದವರೇ ನಾಯಕತ್ವವನ್ನು ತಮ್ಮಲ್ಲಿಟ್ಟುಕೊಳ್ಳುವ ಈ ಕಾರ್ಯಕ್ರಮದ ಬದ್ಧತೆಯನ್ನೇ ಪ್ರಶ್ನಿಸಿದ ಅಂಬೇಡ್ಕರ್ ಈ ಸಮ್ಮೇಳನವನ್ನು ಬಹಿಷ್ಕರಿಸಿದರು. ಹೊರಗಿನವರು ಬಂದು ದಲಿತರ ನಾಯಕತ್ವವನ್ನು ವಹಿಸಲಾಗದು, ದಲಿತರೇ ತಮ್ಮ ಭವಿಷ್ಯವನ್ನು ಚಿಂತಿಸಲು ಇದು ಸಕಾಲವೆನ್ನುವುದು ಅವರ ನಂಬಿಕೆ. ಹಾಗಾಗಿ 1920ರಲ್ಲಿ ಮೊದಲ ಐತಿಹಾಸಿಕ ಅಖಿಲ ಭಾರತ ದಲಿತರ ಶೋಷಿತರ ಸಮ್ಮೇಳನವನ್ನು ನಡೆಸಿದರು. ಈ ಸಮ್ಮೇಳನದ ಪ್ರತಿನಿಧಿಗಳನ್ನು ರೂಪುರೇಷಗಳನ್ನು ಕರ್ಮವೀರ್ ಶಿಂಧೆಯವರ ನೇತೃತ್ವದಲ್ಲಿ ಅಸ್ಪೃಶ್ಯರೇ ನಿರ್ವಹಿಸಿದರು. ಈ ಸಮ್ಮೇಳನದಲ್ಲಿ ಅಂಬೇಡ್ಕರರವರ ಚಿಂತನೆಗಳು ಸ್ಪಷ್ಟವಾಗಿ ಹೊರಹೊಮ್ಮಿದವು.

ಕತ್ತಲು ತುಂಬಿದ ಪ್ರಪಂಚದಲ್ಲಿ ಒಂದು ಬೆಳಕಿನ ಕಿರಣವನ್ನು ಅವರು ತೂರಿದ್ದರು. ಶತಮಾನಗಳಿಂದ ಮರೆತೇ ಹೋಗಿದ್ದ ದಲಿತರ ಆತ್ಮಪ್ರಜ್ಞೆಯನ್ನು ಅವರು ಜಾಗ್ರತಗೊಳಿಸಿದರು. ಶೋಷಿತ ವರ್ಗಗಳಿಗೆ ಸಿಗಬೇಕಾದ ಹಕ್ಕುಗಳನ್ನು ಖಾತ್ರಿಪಡಿಸುವಂತೆ ಬ್ರಿಟಿಷ್ ಸರಕಾರಕ್ಕೆ ಹಕ್ಕೊತ್ತಾಯವನ್ನು ಮಂಡಿಸಲಾಯಿತು. ದಲಿತರ ಹೋರಾಟಕ್ಕೆ ಬೆಂಬಲವಾಗಿ ನಿಲ್ಲಲು “ಮೂಕನಾಯಕ”ವೆನ್ನುವ ಪಾಕ್ಷಿಕ ಪತ್ರಿಕೆಯನ್ನು ಹೊರತಂದರು. ಹೋರಾಟಕ್ಕೆಲ್ಲವೂ ತಾವೇ ಮಂಚೂಣಿಯಲ್ಲಿರಬೇಕೆನ್ನುವ ಕಾಂಗ್ರೆಸ್ಸಿನವರಿಗೆ ಇದರಿಂದ ಇರಿಸುಮುರಿಸಾಯಿತು. ಗಾಂಧೀಜಿಯವರು ಮತ್ತು ಅಂಬೇಡ್ಕರ್ ಅವರ ನಡುವೆ ಭಿನ್ನಾಭಿಪ್ರಾಯ ಮೂಡಿಸುವಲ್ಲಿ ಇದು ಕಾರಣವಾಯಿತು. ಅಂಬೇಡ್ಕರ್ ಅವರಲ್ಲಿ ಬದ್ಧತೆ, ಮುಂದಿನ ಗುರಿಗಳೆಲ್ಲವೂ ಸ್ಪಷ್ಟವಾಗಿದ್ದವು. ತಾನು ಬ್ಯಾರಿಷ್ಟರನಾದರೆ ಈ ಹೋರಾಟಕ್ಕೆ ಇನ್ನಷ್ಟು ಬಲ ಬರುವುದೆನ್ನುವ ಕಾರಣದಿಂದ 1920ರಲ್ಲಿ ಮತ್ತೊಮ್ಮೆ ಇಂಗ್ಲೆಂಡಿಗೆ ಹೋಗಿ ಅರ್ಥಶಾಸ್ತ್ರ ಮತ್ತು ಬ್ಯಾರಿಷ್ಟರ್ ಪದವಿಯನ್ನು ಪಡೆದರು. ಹಾಗೇ ಹೋಗುವಾಗಲೂ ದಲಿತರ ಈ ಸಂಘಟನೆ ಮತ್ತು ಪತ್ರಿಕೆ ನಿರಂತರವಾಗಿ ನಡೆಯುವಂತೆ ನೋಡಿಕೊಂಡರು.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ರಾಮನೆನ್ನುವ ನಿತ್ಯ ಆದರ್ಶ

ಮೂರು ವರ್ಷಗಳ ನಂತರ ಹಿಂತಿರುಗಿ ಬಂದವರೇ ಮುಂದಿನ ಹಂತದ ಹೋರಾಟಕ್ಕೆ ಸಿದ್ಧರಾದರು. ದಲಿತರ ಆರ್ಥಿಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಗತ್ಯಗಳನ್ನು ಒದಗಿಸಿಕೊಡಲು “ಬಹಿಷ್ಕೃತ್ ಹಿತ್ಕಾರ್ಣಿ ಸಭಾ” ಸ್ಥಾಪಿಸಿದರು. ಈ ಸಭಾ “ವಿದ್ಯೆ, ಹೋರಾಟ ಮತ್ತು ಸಂಘಟನೆ (Educate, Agitate and Organize)” ಎನ್ನುವ ಧ್ಯೇಯವಾಕ್ಯಗಳನ್ನು ಒಳಗೊಂಡಿತ್ತು. ಸಭಾ ದಲಿತರಿಗಾಗಿ ಹಾಸ್ಟೆಲ್, ವಾಚನಾಲಯ ಮುಂತಾದವುಗಳನ್ನು ಆರಂಭಿಸಿತು. ದಲಿತರು ತಮ್ಮ ಅಭಿವೃದ್ಧಿಗೆ ತಾವುಗಳೇ ಒಟ್ಟುಗೂಡಿ Self-help, Self-Elevation and Self-respect ತಮ್ಮ ಸಮಾಜಕ್ಕೆ ಪುನಃ-ಪುನಃ ನೆರವಾಗುವಂತೆ ಶ್ರಮಿಸಬೇಕೆಂದು ಕರೆನೀಡಿದರು. ಮೊಟ್ಟಮೊದಲು ದಲಿತರು ಹಳಸಿದ ಪದಾರ್ಥವನ್ನು ತಿನ್ನುವುದನ್ನು ಬಿಡಲು ಕರೆನೀಡಲಾಯಿತು. ನಿಧಾನವಾಗಿಯಾದರೂ ದಲಿತರಲ್ಲಿ ಸ್ವಾಭಿಮಾನದ ಕಿಚ್ಚನ್ನು ಹೆಚ್ಚಿಸುವಲ್ಲಿ ಇದು ಕಾರಣವಾಯಿತು.

ಗಾಂಧೀಜಿಯವರೂ ಸಹ ದಲಿತರು ಹಳಸಿದ ಪದಾರ್ಥವನ್ನು ತ್ಯಜಿಸಬೇಕೆಂದು ಕರೆನೀಡಿದ್ದರು. ಆದರೆ ಅದು ಗಾಂಧೀಜಿಯವರ ಏಕಾಂಗಿ ಹೋರಾಟವಾಗಿತ್ತೇ ಹೊರತು ಇತರ ನಾಯಕರ ಧ್ವನಿಯಾಗಿರಲಿಲ್ಲ. ಇದು ಅಂಬೇಡ್ಕರರಿಗೆ ಕಾಂಗ್ರೆಸ್ಸಿನ ಮೇಲೆ ಸಂಶಯಕ್ಕೆ ಕಾರಣವಾಗಿತ್ತು. ದಲಿತರ ಧ್ವನಿಯಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದಾಗಲೇ ಗುರುತಿಸಿಕೊಂಡಿದ್ದ ಅಂಬೇಡ್ಕರರನ್ನು ಗಾಂಧಿ 1931ರತನಕ ಭೇಟಿಯಾಗುವ ಇಚ್ಛೆಯನ್ನೇ ತೋರಿಸಿರಲಿಲ್ಲ. ಯಾವಾಗ 1931ರ ಎರಡನೇ ದುಂಡುಮೇಜಿನ ಪರಿಷತ್ತಿಗೆ ಭಾರತದಿಂದ ಡಾ. ಅಂಬೇಂಡ್ಕರರಿಗೆ ಆಹ್ವಾನ ಬಂದಿತೋ ಆಗ ಗಾಂಧೀಜಿಯವರಿಗೆ ಅಂಬೇಡ್ಕರರನ್ನು ಭೇಟಿಯಾಗುವ ಅಗತ್ಯ ತೋರಿತು. ಅದಾಗಲೇ ಅಂಬೇಡ್ಕರ್ ಮುಸ್ಲಿಮರಿಗೆ ಕೊಟ್ಟಿರುವ ರೀತಿಯಲ್ಲಿಯೇ ದಲಿತರಿಗೂ ಪ್ರತ್ಯೇಕ ಪ್ರತಿನಿಧಿಗಳನ್ನು ಆರಿಸುವ ಕುರಿತು ಹೋರಾಟ ನಡೆಸಿದ್ದರು. ಕಾಂಗ್ರೆಸ್ಸು ಇದನ್ನು ವಿರೋಧಿಸಿತ್ತು. 1928ರಲ್ಲಿ ಬಂದ ಸೈಮನ್ ಕಮಿಷನ್ನಿನ ಎದುರು ಪಂ. ಜವಹಾರಲಾಲ್ ನೆಹರು ತಾವೇ ರೂಪಿಸಿದ (Nehru Committee draft Aug. 1928) ಸ್ವರಾಜ್ ಸಂವಿಧಾನದ ಕರಡಿನ ಪ್ರಕಾರ ದಲಿತರಿಗೆ ಪ್ರತ್ಯೇಕ ಪ್ರತಿನಿಧಿಗಳನ್ನು ಆರಿಸಲು ಅವಕಾಶವೇ ಇಲ್ಲವೆಂದು ಬಿಟ್ಟರು. ಇದೇ ವಿಷಯದಲ್ಲಿ ಕಾಂಗ್ರೆಸ್ಸಿನ ವರ್ಕಿಂಗ್ ಕಮಿಟಿ ಮುಸ್ಲಿಮರಿಗೆ, ಕ್ರಿಶ್ಚಿಯನ್ನರಿಗೆ, ಸಿಖ್, ಆಂಗ್ಲೋ ಇಂಡಿಯನ್ ಹಾಗೂ ಬ್ರಾಹ್ಮಣೇತರ ಸಂಸ್ಥೆಗಳಿಗೆ ಮತ್ತು ದ್ರಾವಿಡ ಮಹಾಸಭಾದವರಿಗೂ ಆಹ್ವಾನವನ್ನು ಕೊಟ್ಟಿತ್ತು. ಆದರೆ ದೇಶದ್ಯಾಂತ ಹರಡಿರುವ ಆದರೆ ದಮನಿತರಾಗಿರುವ ದಲಿತರಿಗೆ ಅವಕಾಶವಿರಲಿಲ್ಲ. ಸೈಮನ್ ಕಮಿಷನ್ನಿಗಿಂತ ಹತ್ತು ವರ್ಷಗಳ ಮೊದಲೇ Southborough Commissionನ ಎದುರು ಡಾ. ಅಂಬೇಡ್ಕರ್ ಪ್ರತ್ಯೇಕ ಪ್ರತಿನಿಧಿಗಳನ್ನು ಚುನಾಯಿಸುವ ಕುರಿತು ತಮ್ಮ ಹೇಳಿಕೆಗಳನ್ನು ದಾಖಲಿಸಿದ್ದರು.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಮಾವಿನ ಬೇವಿನ ಬೆಲ್ಲದ ನೋಂಪಿನ ಹೊಸ ಹರುಷದ ಹಬ್ಬ

ಈ ವಿಷಯ ತಾರಕಕ್ಕೆ ಹೋಗುತ್ತಿದ್ದಂತೆ ಅಂಬೇಡ್ಕರರಿಗೆ ಎರಡನೆಯ ದುಂಡುಮೇಜಿನ ಪರಿಷತ್ತಿಗೆ ಆಹ್ವಾನ ಬಂತು. ಗಾಂಧಿ ಮತ್ತು ಬಾಬಾಸಾಹೇಬ ಇಬ್ಬರೂ 1915 ಮತ್ತು 1916ರಲ್ಲಿ ಭಾರತಕ್ಕೆ ಬಂದರೂ ಅವರಿಬ್ಬರ ಮುಖಾಮುಖಿ ನಡೆಯಲು 1931 ಆಗಸ್ಟ್‌ 14ರವರೆಗೆ ಕಾಯಬೇಕಾಗಿ ಬಂದಿರುವುದಕ್ಕೆ ಕಾರಣ ನಿಗೂಢ! ಡಾ. ಅಂಬೇಡ್ಕರ್ ಗಾಂಧೀಜಿಯವರ ಪತ್ರದ ಆಪೇಕ್ಷೆಯ ಮೇರೆಗೆ ಮಣಿಭವನಕ್ಕೆ ಬಂದು ಜಮಖಾನೆಯ ಮೇಲೆ ಕುಳಿತರೂ ಗಾಂಧಿ ಇವರೆಡೆ ಲಕ್ಷ್ಯ ಕೊಡದೇ ಅಲ್ಲಿಗೆ ಬಂದ Miss. Slad ಹಾಗೂ ಇತರರಲ್ಲಿ ಮಾತುಕತೆಯಾಡುತ್ತಿದ್ದರು. ನಂತರ ನಡೆದ ಮಾತುಕತೆ ಯಾವ ಫಲವನ್ನೂ ಕೊಡಲಿಲ್ಲ. ಇದು ಲಂಡನ್ನಿನ ಎರಡನೆಯ ದುಂಡುಮೇಜಿನ ಪರಿಷತ್ತಿನಲ್ಲಿಯೂ ಮುಂದುವರೆಯಿತು. ಈ ಕುರಿತು ಅಂಬೇಡ್ಕರ್ Everybody was therefore looking forward to the Congress to lead the Conference to success. Unfortunately, the Congress chose Mr. Gandhi as its representative. A worse person could not have been chosen to guide India’s destiny. As a unifying force he was a failure… (Page No. 55 “WHAT CONGRESS AND GANDHI HAVE DONE TO THE UNTOUCHABLES). ದಲಿತರಿಗೆ ಪ್ರತ್ಯೇಕ ಪ್ರಾತಿನಿಧ್ಯವನ್ನು (Electorates) ಕೊಡಲು ಬ್ರಿಟಿಷ್ ಪ್ರಧಾನಮಂತ್ರಿ ರಾಮ್ಸೆ ಮ್ಯಾಕ್ಡೊನಾಲ್ಡ್ ಒಪ್ಪಿದಾಗ ಗಾಂಧಿ ಇದನ್ನು ವಿರೋಧಿಸಿ ಯರವಡಾ ಜೈಲಿನಲ್ಲಿ ಆಮರಣಾಂತ ಉಪವಾಸಕ್ಕೆ ಕುಳಿತರು. ಮುಸ್ಲಿಮರು ಮತ್ತು ಸಿಖ್ಖರಿಗೆ ಕೊಡುವುದಕ್ಕೆ ಗಾಂಧೀಜಿಯವರಿಗೆ ತಕರಾರಿಲ್ಲ; ಆದರೆ ದಲಿತರ ವಿಷಯ ಬಂದಾಗ ಪ್ರತ್ಯೇಕ ಮತದಾನವನ್ನು ವಿರೋಧಿಸುವ ಗಾಂಧೀಜಿಯ ನಡೆಯಿಂದಾಗಿ ಈ ಕಂದಕ ಮತ್ತಷ್ಟು ಬೆಳೆಯಿತು. ಪೂನಾ ಒಪ್ಪಂದಕ್ಕೆ ಅಂಬೇಡ್ಕರ್ ಸಹಿ ಹಾಕುವಾಗ “ತಾನು ತನ್ನ ಜನರ ಭವಿಷ್ಯವನ್ನು ಗಾಂಧೀಜಿಯವರ ಜೀವನಕ್ಕೆ ಪ್ರತಿಯಾಗಿ ಒತ್ತೆ ಇಡುತ್ತಿದ್ದೇನೆ” ಎಂದಿದ್ದರು. ದಲಿತರಿಗೆ ಮೀಸಲು ಸೀಟು ನೀಡುವ ಪದ್ಧತಿ ಜಾರಿಗೆ ಬಂದಿರುವುದು ಪೂನಾ ಒಪ್ಪಂದದ ಫಲಶ್ರುತಿ.

ಅಂಬೇಡ್ಕರ್ ಅವರ ರಾಷ್ಟ್ರವಾದ ಮತ್ತು ದಲಿತರ ಹೋರಾಟದ ಎರಡನೆಯ ಮಜಲು ಮುಂದಿನ ಸಂಚಿಕೆಯಲ್ಲಿ…

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಸುವರ್ಚಲೆ: ಮದುವೆ ಎನ್ನುವುದು ಕನ್ಯೆಯದೇ ಆಯ್ಕೆ

Exit mobile version