Site icon Vistara News

ಧವಳ ಧಾರಿಣಿ ಅಂಕಣ: ಡಾ.ಬಿ. ಆರ್. ಅಂಬೇಡ್ಕರ್; ಬಹಿಷ್ಕೃತರ ಉತ್ಥಾನದ ಕಾರಣ ಪುರುಷ

ambedkar

ಭಾಗ 2- ಹಿಂದುವಾಗಿ ನಾನು ಸಾಯಲಾರೆ ಎಂದ ಅಭಿನವ ಬುದ್ಧ

ಮೊದಲ ಭಾಗವನ್ನು ಇಲ್ಲಿ ಓದಿ: ಕೃಷ್ಣ ಕುಹರದಿಂದ ಮೂಡಿದ ಬೆಳಕಿನ ಕುಂಜ

ಅಂಬೇಡ್ಕರ್ ರಾಷ್ಟ್ರವಾದದಲ್ಲಿ ನಂಬಿಕೆ ಇಟ್ಟಿದ್ದರು. ಸೈಮನ್ ಕಮಿಷನ್ನಿನ ವರದಿಯನ್ನು ಒಪ್ಪದೇ ತನ್ನದೇ ಆದ ಬೇರೆ ವರದಿಯನ್ನು ಸಲ್ಲಿಸಿದರು. ಅವರಿಗೆ ಈ ದೇಶದ ಅಖಂಡತೆಯ ಕುರಿತು ಸ್ಪಷ್ಟವಾದ ಚಿಂತನೆಗಳಿದ್ದವು. ಈ ಕುರಿತು ಅವರ ಅಭಿಪ್ರಾಯವನ್ನು ಅವರ ಈ ಕೆಳಗಿನ ಮಾತುಗಳಲ್ಲಿ ಗಮನಿಸಬಹುದಾಗಿದೆ.

“For I am of the opinion that the most vital need of the day is to create among the mass of the people the sense of a common nationality, the feeling not that they are Indians first and Hindus, Mohammedans or Sindhis and Kanarese afterwards, but that they are Indians first and Indians last. If that be the ideal then it follows that nothing should be done which will harden local patriotism and group consciousness.”(DR. BABASAHEB AMBEDKAR : WRITINGS AND SPEECHES Vol 17- page 66)

ಅವರು ಯಾವ ತೀರ್ಮಾನವನ್ನು ತೆಗೆದುಕೊಳ್ಳುವಾಗಲೂ ಅದನ್ನು ಅಳೆದು ತೂಗಿ ನಿರ್ಧರಿಸುತ್ತಿದ್ದರು. ನಿರ್ಧಾರ ಕೈಗೊಂಡಮೇಲೆ ಅದಕ್ಕೆ ಬದ್ಧರಾಗಿರುತ್ತಿದ್ದರು. ಈ ಎಲ್ಲಾ ಸಮಯದಲ್ಲಿಯೂ ಬಹಿಷ್ಕೃತರ ಹಿತರಕ್ಷಣೆಯ ಅವರ ಬದ್ಧತೆ ಮಾತ್ರ ಬಂಡೆಯಂತೆ ಸ್ಥಿರವಾಗಿರುತ್ತಿತ್ತು. ಮಹಾಡದಲ್ಲಿನ ಚೌಡರ್ ಕೆರೆಯ ನೀರನ್ನು ದಲಿತರು ಮುಟ್ಟುವದಾಗಲಿ, ಕಲಾರಾಮ ದೇವಸ್ಥಾನಕ್ಕೆ ದಲಿತರ ಪ್ರವೇಶದ ಕುರಿತಾದ ಹೋರಾಟದಲ್ಲಿ ಸವರ್ಣೀಯರು ಸ್ಪಂದಿಸದೇ ಇರುವುದು ಮಾತ್ರ ಈ ದೇಶದ ದುರಂತ ಅಧ್ಯಾಯಗಳಲ್ಲಿ ಒಂದು. ಅವರ ಹೋರಾಟ ಅಹಿಂಸಾತ್ಮಕವಾಗಿತ್ತು. ನೊಂದವರನ್ನು ಎಂತಹ ಸಂದರ್ಭದಲ್ಲಿಯೂ ತಮ್ಮ ಅಹಿಂಸಾಮಾರ್ಗದಿಂದ ವಿಮುಖರಾಗದಂತೆ ಹೋರಾಟಕ್ಕೆ ತೊಡಗಿಸುವುದು ಅಷ್ಟು ಸುಲಭದ ಕೆಲಸವಲ್ಲ. ಯಾವಾಗ ಅಹಮದಾಬಾದಿನ ಕವಿತಾ ಹಳ್ಳಿಯ ದಲಿತರಿಗೆ ಶಾಲೆಗೆ ಪ್ರವೇಶವನ್ನು ನಿರಾಕರಿಸಲಾಯಿತೋ ಆಗ ಮಾತ್ರ ಬಾಬಾಸಾಹೇಬರು ಸಿಡಿದೇಳುತ್ತಾರೆ. ಸುಮಾರು ಹತ್ತು ಸಾವಿರ ದಲಿತರ ಎದುರು 1935ರ ಅಕ್ಟೋಬರ್ ತಿಂಗಳ 14ನೆಯ ದಿವಸ ಅವರ ಐತಿಹಾಸಿಕ ಕರೆ “I solemnly assure you that I will not die a Hindu” ಘೋಷಣೆಯಾಯಿತು.

ವೇದದಲ್ಲಿ ಇಲ್ಲದ ಅಸ್ಪೃಶ್ಯತೆ ಆಚರಣೆಯಲ್ಲಿ ತಂದ ಮನುಸ್ಮೃತಿಯ ಕುರಿತು ಅವರಿಗೆ ಅಸಹನೆಯಿತ್ತು. ಧರ್ಮ ಈ ದೇಶದಲ್ಲಿ ವ್ಯಕ್ತಿಗಳ ಭವಿಷ್ಯವನ್ನು ನಿರ್ಧರಿಸುತ್ತದೆ. ಅದಕ್ಕೆ ಬೇಕಾಗಿ ಧರ್ಮವನ್ನು ಬದಲಾಯಿಸದೇ ಈ ದೇಶದಲ್ಲಿ ದಲಿತರ ಸ್ಥಿತಿ ಸುಧಾರಿಸದು ಎಂದು ಅವರಿಗೆ ಅನಿಸಿತು. ಅವರಿಗೆ ಧರ್ಮಾಂತರವೆನ್ನುವುದು ಧಾರ್ಮಿಕ ಮತ್ತು ಸಾಮಾಜಿಕ ತುಳಿತದ ವಿರುದ್ಧದ ಪ್ರತಿಭಟನೆಯಾಗಿತ್ತು. ತಮ್ಮ ಈ ಹೋರಾಟವನ್ನು ಬಹಿಷ್ಕೃತ್ ಹಿತ್ಕರ್ಣಿ ಸಭಾಕ್ಕಿಂತ ಇನ್ನೂ ಮುಂದೆ ಕೊಂಡೊಯ್ಯಲು ನಿರ್ಧರಿಸಿದರು. ತಮ್ಮ ಹೋರಾಟಕ್ಕೆ ಇನ್ನಿತರ ಸಮಾಜದವರನ್ನೂ ಒಳಗೊಳ್ಳುವ ಉದ್ದೇಶದಿಂದ ಒಂದು ರಾಜಕೀಯ ಪಕ್ಷ “ಸ್ವತಂತ್ರ ಕಾರ್ಮಿಕ ಪಕ್ಷವನ್ನು (Independent Labour Party) ಸ್ಥಾಪಿಸಿದರು.

ತನ್ನ ಜನರ ನೋವಿಗಾಗಿ ಮಿಡಿವ ಅಂಬೇಡ್ಕರರನ್ನು ಗಾಂಧೀಜಿಯಾಗಲಿ, ಅಂದಿನ ಇನ್ನಿತರ ನಾಯಕರಾಗಲೀ ಯಾವತ್ತಿಗೂ ವಿಶ್ವಾಸಕ್ಕೆ ತೆಗೆದುಕೊಳ್ಳಲೇ ಇಲ್ಲದಿರುವುದು ಅವರ ಮನಸ್ಸಿನಲ್ಲಿ ನೋವು ಉಂಟುಮಾಡಿತ್ತು. ಅದರೆ ಗಾಂಧೀಜಿಯವರಿಗೆ ಅಂಬೇಡ್ಕರರ ಕುರಿತು ಅಭಿಮಾನವಿತ್ತು. ಕವಿತಾ ಗ್ರಾಮದ ಘಟನೆಯನ್ನು ಗಾಂಧೀಜಿಯವರೂ ಉಗ್ರವಾಗಿ ಖಂಡಿಸಿದರು. ಆದರೆ ಇದಕ್ಕೆ ಧರ್ಮಾಂತರ ಪರಿಹಾರವಲ್ಲವೆನ್ನುವುದನ್ನು ಅವರು ಸಾರಿದರು. ಅವರ ಪ್ರಕಾರ “ಧರ್ಮವೆಂದರೆ ಮನೆಯೋ ಅಥವಾ ಗೋಡೆ ಗಡಿಯಾರದಂತೆ ಮನಸ್ಸಿಗೆ ಬಂದಂತೆ ಬದಲಾಯಿಸಲಾಗದು”. ಯಾವಾಗ ಬಾಬಾಸಾಹೇಬರು ಧರ್ಮಾಂತರದ ಘೋಷಣೆಯನ್ನು ಮಾಡಿದ ತಕ್ಷಣವೇ ಅವರನ್ನು ಕ್ರಿಶ್ಚಿಯನ್, ಮುಸ್ಲಿಮ್ ಸಿಖ್ ನಾಯಕರು ಭೇಟಿಯಾಗಿ ತಮ್ಮತಮ್ಮ ಧರ್ಮವನ್ನು ಅಪ್ಪಿಕೊಳ್ಳುವಂತೆ ಆಹ್ವಾನಿಸತೊಡಗಿದರು. ಬಾಬಾಸಾಹೇಬರ ಈ ಘೋಷಣೆಯ ಹಿಂದೆ ಭಾವಾವೇಶವಿರಲಿಲ್ಲ. ಅದು ಅವರ ತಾಳ್ಮೆಯ ಕಟ್ಟೆಯೊಡೆದ ಕ್ಷಣ. ಹಾಗಂತ ಧರ್ಮಾಂತರವೆನ್ನುವುದು ಗೋಡೆಯ ಗಡಿಯಾರ ಬದಲಾಯಿಸಿದಂತೆ ಅಲ್ಲವೆನ್ನುವುದನ್ನೂ ಅವರು ತಿಳಿದಿದ್ದರು. ಹಾಗಾಗಿ ತಮ್ಮ ನಿರ್ಧಾರವನ್ನು ಕಾರ್ಯರೂಪಕ್ಕೆ ತರಲು ಅವರು ಮುಂದಿನ ಇಪ್ಪತ್ತು ವರ್ಷಗಳನ್ನು ತೆಗೆದುಕೊಳ್ಳುತ್ತಾರೆ. 1936ರಿಂದಲೇ ತಾನು ಸ್ವೀಕರಿಸುವ ಧರ್ಮ ತನಗೊಬ್ಬನಿಗೆ ಅಲ್ಲ; ಅದು ಸಮಷ್ಟಿಯ ಹಿತವನ್ನು ಒಳಗೊಂಡಿರಬೇಕೆನ್ನುವುದಾಗಿತ್ತು. ಎಲ್ಲ ಧರ್ಮಗಳ ತಿರುಳನ್ನು ಅವರು ಅಭ್ಯಸಿಸಲು ಪ್ರಾರಂಭಿಸುತ್ತಾರೆ.

ಗಾಂಧೀಜಿಯವರಿಗೆ ಅಂಬೇಡ್ಕರರ ಕುರಿತು ಅಭಿಮಾನವಿತ್ತು. ಅವರ ಒತ್ತಾಯದಿಂದಲೇ ಸ್ವತಂತ್ರಭಾರತದ ಪ್ರಥಮ ಕಾನೂನು ಮಂತ್ರಿಗಳಾಗಿ ನೆಹರೂವಿನ ಸಂಪುಟವನ್ನು ಸೇರುವಂತಾಗಿರುವುದು. ಈ ಮೂಲಕವಾಗಿಯಾದರೂ ದಲಿತರಿಗೆ ಒಳಿತನ್ನು ಮಾಡುವ ಅವಕಾಶ ಅಂಬೇಡ್ಕರರಿಗೆ ಸಿಗಲಿ ಎನ್ನುವುದಾಗಿತ್ತು. ಬಹುಶಃ ಈ ಇಬ್ಬರೂ ಒಟ್ಟಾಗಿ ಕಲಸ ಮಾಡಿದ್ದರೆ ಭಾರತದ ಭವಿಷ್ಯವೇ ಬೇರೆಯಾಗುತ್ತಿತ್ತು. ಡಾ. ಅಂಬೇಡ್ಕರ್ ಇದೊಂದು ದೇಶದ ಮತ್ತು ಶೋಷಿತರ ಹಿತರಕ್ಷಣೆಗೆ ಸಿಕ್ಕ ಅವಕಾಶವೆಂದು ಒಪ್ಪಿಕೊಳ್ಳುವುದಲ್ಲದೇ, ಭಾರತದ ಘನ ಸಂವಿಧಾನವನ್ನು ಈ ದೇಶಕ್ಕೆ ಕೊಡುಗೆಯಾಗಿ ನೀಡಿದ್ದಾರೆ. 1951ರಲ್ಲಿ ಹಿಂದೂ ಕೋಡ್ ಮಸೂದೆಯನ್ನು ತರಲು ಡಾ. ಅಂಬೇಡ್ಕರ್ ನಿರ್ಧರಿಸಿದರೆ ಅದಕ್ಕೆ ನೆಹರೂ ಅವರ ಸರಕಾರದಿಂದ ಸಮರ್ಪಕ ಬೆಂಬಲ ಸಿಗಲಿಲ್ಲ. ನಿರಾಸೆಗೊಂಡ ಅಂಬೇಡ್ಕರ್ ಸಂಪುಟಕ್ಕೆ ರಾಜಿನಾಮೆಯನ್ನು ನೀಡಿ ಹೊರಬರುತ್ತಾರೆ. ಮಹಾತ್ಮಾ ಗಾಂಧಿ ಬದುಕಿದ್ದರೆ ಬೇರೆಯೇ ಆಗುತ್ತಿತ್ತೋ ಏನೋ. ಇದೇ ಹೊತ್ತಿನಲ್ಲಿ ಪಾಕಿಸ್ತಾನ ಮತ್ತು ನಿಜಾಮನ ಹೈದರಾಬಾದಿನಲ್ಲಿ ಪರಿಶಿಷ್ಟರಿಗೆ ಕಿರುಕುಳ ಕೊಡುವುದು ಅವರ ಗಮನಕ್ಕೆ ಬರುತ್ತದೆ. ಬಲವಂತದ ಮತಾಂತರವನ್ನು ಉಗ್ರವಾಗಿ ಖಂಡಿಸುತ್ತಾ, ಅವರೆಲ್ಲರನ್ನು ಭಾರತಕ್ಕೆ ಬರುವಂತೆ ಆಹ್ವಾನ ನೀಡುತ್ತಾರೆ. “As regards conversion, we Scheduled Castes must look upon it as a last resort forced upon them by violence. And even to those who are converted by force and violence, I say that they must not regard themselves as lost to the fold forever. I pledge my word that if they wish to come back I shall see that they are received back into the fold and tressed as brethren in the same manner in which they were treated before their conversion” (DR. BABASAHEB AMBEDKAR : WRITINGS AND SPEECHES Vol 17- 368).

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ರಾಮನೆನ್ನುವ ನಿತ್ಯ ಆದರ್ಶ

ಜಿನ್ನಾನನ್ನು ಮಿತ್ರದ್ರೋಹಿ ಎಂದು ಹೈದರಾಬಾದಿನ ನಿಜಾಮ ದಯೆಗೆ ಅನರ್ಹನಾದವನೆಂದರು. ಆ ಕಾಲದ ಸವರ್ಣೀಯರು ಇದನ್ನು ಗಮನಿಸಿ ಅಂಬೇಡ್ಕರರನ್ನು ಸ್ವೀಕರಿಸಬೇಕಾಗಿತ್ತು. ಬದಲಾಗದ ಹಿಂದೂಗಳ ಮನೋಭಾವಕ್ಕೆ ಪ್ರತಿಯಾಗಿ ತಮ್ಮ ಸುಮಾರು 3,60,000 ಅನುಯಾಯಿಗಳೊಂದಿಗೆ 1956 ಡಿಸೆಂಬರ್ 6ರಂದು ಬೌದ್ಧ ಧರ್ಮವನ್ನು ಸ್ವೀಕರಿಸುತ್ತಾರೆ. ಈ ತೀರ್ಮಾನದ ಹಿಂದೆ ಸುಮಾರು ಇಪ್ಪತ್ತು ವರ್ಷಗಳ ಅಧ್ಯಯನವಿತ್ತು. ರಾಷ್ಟ್ರೀಯತೆಯ ವಿಚಾರದಲ್ಲಿ ಯಾವತ್ತಿಗೂ ರಾಜಿಯಾಗದ ಡಾ. ಅಂಬೇಡ್ಕರ್ ಅವರು ಈ ವಿಷಯದಲ್ಲಿ ಗಾಂಧಿಯವರೊಂದಿಗೆ “I will choose only the least harmful way for the country. And that is the greatest benefit I am conferring on the country by embracing Buddhism; for Buddhism is a part and parcel of Bharatiya culture. I have taken care that my conversion will not harm the tradition of the culture and history of this land (My life My message – M. K. Gandhi)”. ನಿಜವಾಗಿಯೂ ಘನವೆತ್ತ ನಡತೆ ಅವರದು.

ಬುದ್ಧ ಅಂಬೇಡ್ಕರರ ಮೇಲೆ ಅಪಾರ ಪ್ರಭಾವವನ್ನು ಬೀರಿದವ. ಬುದ್ಧನನ್ನು ಆಳವಾಗಿ ಅಧ್ಯಯನ ಮಾಡಿ “The Buddha and His Dhamma” ಎನ್ನುವ ಕೃತಿಯೊಂದನ್ನು ರಚಿಸಿದ್ದರು. ಪ್ರಕಟಿಸಲು ಬೇಕಾದ ಇಪ್ಪತ್ತು ಸಾವಿರ ರೂಪಾಯಿ ಅವರ ಹತ್ತಿರವಿರಲಿಲ್ಲ. ಅದೇ ಹೊತ್ತಿನಲ್ಲಿ ಭಗವಾನ್‌ ಬುದ್ಧನ 2500ನೆ ಜಯಂತಿಯೂ ಬರುತ್ತಿತ್ತು. ಸರಕಾರ ಇದನ್ನು ಆಚರಿಸಲು ತೀರ್ಮಾನಿಸಿತ್ತು. ಆಗ ಅಂಬೇಡ್ಕರ್ ಪ್ರಧಾನ ಮಂತ್ರಿ ನೆಹರೂರವರಿಗೆ ತನ್ನ ಈ ಕೃತಿಯ 500 ಪ್ರತಿಯನ್ನು ಸರಕಾರದ ವಿವಿಧ ಸಂಘ ಸಂಸ್ಥೆಗಳು ಮತ್ತು ವಾಚನಾಲಯಗಳಿಗೆ ವಿತರಿಸಲು ಖರೀದಿಸುವಂತೆ 1956 ಸೆಪ್ಟೆಂಬರ್ 14ರಂದು ಪತ್ರ ಬರೆಯುತ್ತಾರೆ. ನೆಹರೂ ಅದನ್ನು ತಣ್ಣಗೆ ಬುದ್ಧ ಜಯಂತಿಯ ಅಧ್ಯಕ್ಷರಾದ ಡಾ. ರಾಧಾಕೃಷ್ಣನ್ನರಿಗೆ ಕಳುಹಿಸಿರುವೆ ಎಂದು ಉತ್ತರಿಸುತ್ತಾರೆ. ಡಾ. ರಾಧಾಕೃಷ್ಣನ್ ಅವರು ಡಾ. ಬಿ. ಆರ್. ಅಂಬೇಡ್ಕರರಿಗೆ ಫೋನಿನಲ್ಲಿ ಈ ವಿಷಯದಲ್ಲಿ ತಮ್ಮ ಅಸಹಾಯಕತೆಯನ್ನು ತಿಳಿಸುತ್ತಾರೆ. ಬದುಕಿನಲ್ಲಿ ಇಂತಹ ಸಂದರ್ಭಗಳು ಹೆಜ್ಜೆ ಹೆಜ್ಜೆಗೂ ಅವರಿಗೆ ಎದುರಾಗುತ್ತಲೇ ಇತ್ತು. ಆದರೆ ಅವನ್ನೆಲ್ಲವನ್ನು ಮೀರಿದ ಎತ್ತರದ ವ್ಯಕ್ತಿತ್ವ ಸಂವಿಧಾನದ ಶಿಲ್ಪಿ ಡಾ. ಅಂಬೇಡ್ಕರ್ ಅವರದಾಗಿತ್ತು.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಮಾವಿನ ಬೇವಿನ ಬೆಲ್ಲದ ನೋಂಪಿನ ಹೊಸ ಹರುಷದ ಹಬ್ಬ

Exit mobile version