Site icon Vistara News

ಧವಳ ಧಾರಿಣಿ ಅಂಕಣ: ಪ್ರಾಚೀನ ಭಾರತದ ಗಣತಂತ್ರ ವ್ಯವಸ್ಥೆ ಹೀಗಿತ್ತು!

vedic king

ಜನಪದವೇ ಆಯ್ಕೆಮಾಡುವ ನಾಯಕ : ಸಭಾಪತಿ

ಮನೋ ಮೇ ತರ್ಪಯತ ವಾಚಂ ಮೇ ತರ್ಪಯತ
ಪ್ರಾಣಂ ಮೇ ತರ್ಪಯತ ಚಕ್ಷುರ್ಮೇ ತರ್ಪಯತ
ಶ್ರೋತ್ರಂ ಮೇ ತರ್ಪಯತಾತ್ಮಾನಂ ಮೇ ತರ್ಪಯತ ಪ್ರಜಾಂ ಮೇ ತರ್ಪಯತ
ಪಶೂನ್ ಮೇ ತರ್ಪಯತ ಗಣಾನ್ ಮೇ ತರ್ಪಯತ ಗಣಾ ಮೇ ಮಾ ವಿತೃಷನ್ (ಯ 6.31)

ನನ್ನ ವಾಕ್ ಮನಸ್ಸು ಪ್ರಾಣ, ಕಣ್ಣು, ಕಿವಿಗಳು ಪ್ರಜೆಗಳನ್ನು ತೃಪ್ತಿಪಡಿಸುವ ಕಾರ್ಯದಲ್ಲಿ ಸಂತೋಷವನ್ನು ಪಡೆಯಲಿ. ನನ್ನ ಪ್ರಜೆಗಳು ಯಾವಾಗಲೂ ತೃಪ್ತಿಯನ್ನು ಹೊಂದಲಿ, ನನ್ನ ಗೋವು ಆನೆ ಕುದುರೆಗಳನ್ನು ಯಾವತ್ತಿಗೂ ತೃಪ್ತಿ ಪಡಿಸುವ ಸಂತೋಷವು ನನ್ನದಾಗಲಿ, ನನ್ನ ರಾಜಸೇವಕರು, ಪ್ರಜೆಗಳು, ರಾಜ್ಯಾಧಿಕಾರಿಗಳು ಯಾವತ್ತೂ ಬಾಯಾರಿಕೆ ಹಸಿವು ಮುಂತಾದ ದುಃಖಗಳಿಂದ ಪೀಡಿತರಾಗದಿರಲಿ. (ಶತಪಥ ಬ್ರಾಹ್ಮಣದಲ್ಲಿನ ವ್ಯಾಖ್ಯಾನದ ಸಾರ)

ಪ್ರಜಾಪ್ರಭುತ್ವದ (democracy) ಬಹುಮುಖ್ಯ ಅಂಶವಾದ ಶಾಸಕರನ್ನು ಆರಿಸುವ ಪ್ರಕ್ರಿಯೆ ಮುಗಿದಿದೆ. ಪಲಿತಾಂಶವೂ ಹೊರಬಂದಿದ್ದು, ನಮ್ಮ ಮುಂದಿನ ಸರಕಾರವನ್ನು ನಾವು ಆರಿಸಿ ತಂದಿದ್ದೇವೆ. ಮುಗಿದ ಚುನಾವಣೆಯಲ್ಲಿ ಅಬ್ಬರದ ಪ್ರಚಾರದ ಜೊತೆಗೆ ರಾಜಕೀಯ ಪಕ್ಷಗಳು ನೀಡಿದ ಆಶ್ವಾಸನೆಯನ್ನು ಗಮನಿಸಿದ್ದೇವೆ. ನಮ್ಮ ನೇತಾರರೆನಿಸಿಕೊಂಡವರು ಆಡಿರುವ ಅಣಿಮುತ್ತುಗಳನ್ನು ಸಹಿಸಿಕೊಂಡು ಜನಪ್ರತಿನಿಧಿಗಳನ್ನು ಅರಿಸಿದ್ದೇವೆ. ಮುಂದಿನ ವರ್ಷ ನಡೆಯಲಿರುವ ಸಂಸತ್ತಿನ ಸದಸ್ಯರನ್ನು ಆಯ್ಕೆ ಮಾಡಬೇಕಾಗಿದೆ. ಗಣತಂತ್ರವನ್ನು ಅಳವಡಿಸಿಕೊಂಡ ಯಾವುದೇ ದೇಶದ ಅಂತಿಮ ಅಧಿಕಾರ ಇರುವುದು ಪ್ರಜೆಗಳಲ್ಲಿ. ಹಾಗಾಗಿ ಭಾರತದ ಮತ್ತು ಕರ್ನಾಟಕದ ಮತದಾರರು ಸ್ವಾತಂತ್ರ್ಯೋತ್ತರದ ಚುನಾವಣೆಗಳಲ್ಲಿ ಹಕ್ಕುಗಳನ್ನು ನಿಭಾಯಿಸಿದ ರೀತಿ ನಿಜಕ್ಕೂ ಶ್ಲಾಘನೀಯ.

ಗಣತಂತ್ರವೆಂದ ತಕ್ಷಣವೇ ಪಾಶ್ಚಾತ್ಯದೇಶಗಳತ್ತ ಗಮನ ಹರಿಯುತ್ತದೆ. ಬ್ರಿಟನನ್ನು ಪ್ರಜಾಪ್ರಭುತ್ವದ ತಾಯಿ ಎಂದು ಕರೆಯುತ್ತಾರೆ. ಹೊರದೇಶಗಳತ್ತ ಕಣ್ಣುಹಾಯಿಸುವ ಮುನ್ನ ಪ್ರಾಚೀನ ಭಾರತದಲ್ಲಿ ಗಣತಂತ್ರ ವ್ಯವಸ್ಥೆ ಚೆನ್ನಾಗಿಯೇ ಕಾರ್ಯನಿರ್ವಹಿಸುತ್ತಿತ್ತು. ಈ ಬೇರು ವೇದಕಾಲದಿಂದಲೇ ಇತ್ತು ಎನ್ನುವುದು ಇತಿಹಾಸದ ಗರ್ಭದಲ್ಲಿ ಅಡಗಿಹೋಗಿದೆ. ಗೌತಮ ಬುದ್ಧ ತನ್ನ ಶಿಷ್ಯರಿಗೆ ನೀಡಿದ ಮುಖ್ಯವಾದ ಸಂದೇಶವೇ “ಬಹುಜನ ಸುಖಾಯ ಬಹುಜನ ಹಿತಾಯ ಚ” ಎನ್ನುವ ಆದೇಶದ ಮೂಲಕ. ಈ ಸಾರೋಕ್ತಿ ಇರುವುದೇ ಋಗ್ವೇದದಲ್ಲಿ. ಕಲ್ಯಾಣ ಸರಕಾರದ ಸ್ಥಾಪನೆಗಾಗಿ ಸ್ವಾಮಿ ವಿವೇಕಾನಂದ, ಅರಬಿಂದೋ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರೂ ಸಹ ಈ ಮಂತ್ರವನ್ನೇ ಪ್ರತಿಪಾದಿಸುತ್ತಿದ್ದರು. ಇದನ್ನು ಸ್ವಾಂತತ್ರ್ಯೋತ್ತರದಲ್ಲಿ ಆಕಾಶವಾಣಿ ತನ್ನ ಧ್ಯೇಯ ವಾಕ್ಯವನ್ನಾಗಿ ಇದನ್ನು ಸ್ವೀಕರಿಸಿದೆ.

ಭೌಗೋಳಿಕವಾಗಿ ತನ್ನ ಸೀಮೆಯನ್ನು ಗುರುತಿಸಿಕೊಂಡ ದೇಶವೊಂದು ಆ ಗಡಿಗಳನ್ನು ರಕ್ಷಿಸಿಕೊಳ್ಳುವ ಮೊದಲು ತನ್ನ ಸೀಮೆಯೊಳಗೆ ಬರುವ ಪ್ರಜೆಗಳ ಮನಸ್ಸನ್ನು ಗೆಲ್ಲಬೇಕಾಗುತ್ತದೆ. ಆದರೆ ಈ ರಾಜ್ಯವೆನ್ನುವುದು ಧಿಡೀರ್ ಅಂತ ಮೇಲಿನಿಂದ ಕೆಳಗೆ ಬಿದ್ದು ಪ್ರಜೆಗಳ ಮೇಲೆ ಹೇರಿಕೆಯಾಗಿರುವುದಲ್ಲ. ರಾಜ ಮತ್ತು ರಾಜ್ಯದ ಉಗಮದ ಕುರಿತು ಪುರಾಣಗಳಲ್ಲಿ ಒಂದು ಸೂಕ್ತಿಯಿದೆ. ಮೊದಲು ಸತ್ಯಯುಗವೆಂಬುದೊಂದಿತ್ತು. ಅದನ್ನು ಪುರಾಣಗಳು ವಿವರಿಸುವುದು ಹೀಗೆ:

ನ ರಾಜ್ಯಂ ನ ಚ ರಾಜಾಸೀತ ನ ದಂಡೋ ನ ಚ ದಾಂಡಿಕಃ
ಸತ್ಯಮೇವ ಪ್ರಜಾಃ ಸರ್ವೋ ರಕ್ಷಂತಿಸ್ಮ ಪರಸ್ಪರಂ

ʼʼಆಗ ರಾಜ್ಯವೆನ್ನುವುದು ಇರಲಿಲ್ಲ, ಆಳುವ ರಾಜನೂ ಇರಲಿಲ್ಲ. ಶಿಕ್ಷಿಸುವ ದಂಡವೂ ಇರಲಿಲ್ಲ, ಶಿಕ್ಷಿಸಲು ಡಂಡಾಧಿಕಾರಿಯೂ ಇರಲಿಲ್ಲ. ಸತ್ಯವೊಂದೆ ಪ್ರಜೆಗಳನ್ನು ರಕ್ಷಿಸುತ್ತಿತ್ತು. ಈ ಸತ್ಯದ ಆಧಾರದಿಂದಲೇ ಪರಸ್ಪರರು ರಕ್ಷಿಸಿಕೊಳ್ಳುತ್ತಿದ್ದರು.ʼʼ ರಾಜ್ಯದ ಉಗಮದ ಹಿಂದಿನ ಮಹತ್ವದ ವಿಷಯವನ್ನು ಇದು ಪ್ರತಿಪಾದಿಸುತ್ತದೆ.

ರಾಜತ್ವದ ಉಗಮದ ಹಿಂದೆ ಸಾಮಾಜಿಕ ಒಪ್ಪಂದ ಸಿದ್ಧಾಂತ, ದೈವಿಕ ಮೂಲ ಸಿದ್ಧಾಂತ ಮತ್ತು ಅವಯವಗಳ ಸಿದ್ಧಾಂತವೆನ್ನುವ ಮೂರು ಸಿದ್ಧಾಂತವನ್ನು ರಾಜ್ಯಶಾಸ್ತ್ರಜ್ಞರು ಹೇಳುತ್ತಾರೆ. ಇದರಲ್ಲಿ ಮೊದಲನೆಯದಾದ ಸಾಮಾಜಿಕ ಒಪ್ಪಂದದ ಸಿದ್ಧಾತಕ್ಕೆ ಈ ಸೂಕ್ತದ ಕೊನೆಯ ಸಾಲಾದ “ಸರ್ವೋ ರಕ್ಷಂತಿ ಪರಸ್ಪರಂ” ಒಬ್ಬರಿಗೊಬ್ಬರು ನೆರವಾಗುತ್ತಿದ್ದರು ಎನ್ನುವುದರಲ್ಲಿ ಕಾಣಬಹುದಾಗಿದೆ. ಸೃಷ್ಟಿಯ ಉಗಮದ ಕಾಲದಲ್ಲಿ ಸತ್ವ ರಜ ತಮಗಳು ಸಮಸ್ಥಿತಿಯಲ್ಲಿರುವಾಗ ಎಲ್ಲವೂ ಶಾಂತವಾಗಿತ್ತು. ಭಗವದ್ಗೀತೆಯ ಕೃಷ್ಣ ಗುಣತ್ರಯವಿಭಾಗ ಯೋಗದಲ್ಲಿ ಈ ಮೂರೂ ಗುಣಗಳು ಸಮಸ್ಥಿತಿಯಲ್ಲಿದ್ದಾಗ ಎಲ್ಲವೂ ಒಂದಕ್ಕೊಂದು ಪೂರಕವಾಗಿದ್ದಿತ್ತು ಎನ್ನುತ್ತಾನೆ. “ಸಮುದ್ರ ಪ್ರಶಾಂತ ಸ್ಥಿತಿಯಲ್ಲಿದ್ದಾಗ ಅಲೆಗಳು ಏಳುವುದಿಲ್ಲ. ಆಗ ಪ್ರಪಂಚ ಜಡದ ಸ್ಥಿತಿಯಲ್ಲಿ ಇರುತ್ತವೆ. ನಂತರ ಜಡದಲ್ಲಿ ಅಂದರೆ ತನ್ನ ಮಹದ್ ಬ್ರಹ್ಮರೂಪಿಯೆನ್ನುವ ಜಡದ ಮೂಲಪ್ರಕೃತಿ, ಸಮಸ್ತ ಪ್ರಾಣಿಗಳಿಗೆ ಗರ್ಭಾದಾನದ ಸ್ಥಾನವಾಗಿತ್ತು. ಅದರಲ್ಲಿ ಪರಮಾತ್ಮ ಚೇತನ ಸಮುದಾಯರೂಪಿ ಗರ್ಭವನ್ನು ಸ್ಥಾಪಿಸುವ ಮೂಲಕ ಜಡ ಮತ್ತು ಚೇತನಗಳ ಸಂಯೋಗವಾಗಿ ಅದರಿಂದ ಎಲ್ಲಾ ಪ್ರಾಣಿಗಳು ಉತ್ಪನ್ನವಾಗುವಂತೆ ಮಾಡಿದ. ಈ ಪ್ರಾಣಿಗಳಲ್ಲಿ ಜೀವಾತ್ಮ ಬಂದು ಸೇರುವಾಗ ಆತನ ದೇಹದೊಳಗೆ ಸತ್ವ ರಜ ಮತ್ತು ತಮೋಗುಣಗಳು ಬಂಧಿಸುತ್ತವೆ” ಎಂದು ಗೀತೆ ವಿವರಿಸುತ್ತದೆ.

ನಾಸಾದೀಯದ ಪ್ರಕಾರ ಹಿಂದಿನ ಕಲ್ಪದ ಪಾಪ ಪುಣ್ಯಗಳು ಈ ಕಲ್ಪದಲ್ಲಿ ಬೀಜರೂಪವಾಗಿ ಸೃಷ್ಟಿಗೆ ಕಾರಣವಾಗುತ್ತವೆ. ಹೀಗೆ ಸತ್ಯವೇ ಎಲ್ಲರನ್ನೂ ರಕ್ಷಿಸುತ್ತಿರುವ ಕಾಲದ ನಂತರದಲ್ಲಿ ಅಲ್ಲೆಲ್ಲೋ ಯಾರಿಗೋ ಒಬ್ಬನಿಗೆ ಅಥವಾ ಒಂದು ಗುಂಪಿನವರಿಗೆ ತಾನು ಇತರರಿಗಿಂತ ಮೇಲೆ ಎನ್ನುವ ಭಾವನೆ ಬಂತು. ಬ್ರಹ್ಮ ಜೀವಿಗಳನ್ನು ಸೃಷ್ಟಿಸುವಾಗ ಎರಡು ಪ್ರಕಾರದ ಜೀವಿಗಳನ್ನು ಮೊದಲು ಸೃಷ್ಟಿಸಿದ. ಅವುಗಳಲ್ಲಿ ಒಂದು ತಾವು ಯಕ್ಷರಾಗುತ್ತೇವೆ (ಪೂಜಿಸುತ್ತೇವೆ) ಎಂದರೆ ಇನ್ನೊಂದು ‘ರಕ್ಷಾಮ’ – ರಕ್ಷಿಸುತ್ತೇವೆ ಎಂದಿತು. ಅವರನ್ನು ರಾಕ್ಷಸರು ಎಂದು ಕರೆಯುಲಾಯಿತು. ಮೂಲತಃ ರಾಕ್ಷಸರು ಎಂದರೆ ರಕ್ಷಿಸುವವರು ಎಂದು ಅರ್ಥ. ಅದಕ್ಕೆ ರಾಕ್ಷಸರನ್ನು “ಪೂರ್ವ ದೇವಾಃ’ ಎಂದು ಕರೆಯುತ್ತಾರೆ. ಕಾಲಾಂತರದಲ್ಲಿ ಸತ್ವರಜತಮಗಳೆಂಬ ಈ ತರತಮ ಭಾವಗಳ ವೆತ್ಯಯದಿಂದಾಗಿ ರಕ್ಷಿಸುವ ರಾಕ್ಷಸರು ಭಕ್ಷಕರಾಗಿ ಬದಲಾದರು. ಆಗ ದೇವತೆಗಳು ಅವರ ಸ್ಥಾನವನ್ನು ತುಂಬಿದರು. ಇಂದ್ರಾದಿಗಳು ಆಗ ಅಧಿಕಾರಕ್ಕೆ ಬಂದರು. ಇಲ್ಲಿಂದಲೇ ವೇದಗಳಲ್ಲಿ ಹೇಳುವ ಇಂದ್ರನ ಪ್ರಾಬಲ್ಯ ಮುನ್ನೆಲೆಗೆ ಬಂತು.

ಆತ ರಾಕ್ಷಸರ ನೂರು ಪುರಗಳನ್ನು ಧ್ವಂಸ ಮಾಡಿರುವ ಕಾರಣ ಆತನಿಗೆ ಪುರಂದರನೆನ್ನುವ ಹೆಸರು ಬಂತು. ಇದನ್ನು ದೈವೀ ಮೂಲಸಿದ್ಧಾಂತವೆನ್ನಬಹುದು. ಮಹತ್ವದ ವಿಷಯವೆಂದರೆ ಋಗ್ವೇದದಲ್ಲಿ ಇಂದ್ರನ ವಿಷಯ ಮತ್ತು ಆತನ ಪರಾಕ್ರಮದ ವಿಷಯಗಳು ಬಂದರೂ ಆತನ ಪಟ್ಟಾಭಿಷೇಕದ ವಿವರಣೆ ಬರುವುದಿಲ್ಲ. ರಾಜ್ಯಶಾಸ್ತ್ರಜ್ಞರು ಈ ವಿಷಯವನ್ನು ಉಲ್ಲೇಖಿಸಿ ಹೇಳುವುದು ಹೀಗೆ- ಆಗಿನ ಕಾಲದ ಜನರು ತಮ್ಮ ರಕ್ಷಣೆಯ ಹೊಣೆಯನ್ನು ರಾಜನಾದವನಿಗೆ ವಹಿಸಿ ರಕ್ಷಣೆಯನ್ನು ಆತನಿಂದ ಬಯಸುತ್ತಿದ್ದರು. ಇದೇ ಕಾಲದಲ್ಲಿಯೇ ಆತನಿಂದ ಅಧಿಕಾರ ಚ್ಯುತರಾದ ರಾಕ್ಷಸರಿಗೂ ಮತ್ತು ದೇವತೆಗಳಿಗೂ ಯುದ್ಧಗಳು ಆಗುತ್ತಿದ್ದವು. ತಮ್ಮನ್ನು ರಕ್ಷಿಸುವ ಇಂದ್ರನಿಗೆ ಋಷಿಗಳು ಆಹುತಿಯಾಗಿ ಅರ್ಪಣೆ ಮಾಡುವ ಸೋಮರಸ, ಬಲಿ ಮತ್ತು ಯಜ್ಞಗಳೇ ಕರಗಳ ಕಲ್ಪನೆಗೆ ಮೂಲವಾಗಿದೆ. ಋಗ್ವೇದದ ಕಾಲವನ್ನು ಅವಲೋಕಿಸಿದರೆ ರಾಜತ್ವವೆನ್ನುವದು ಆಯಾ ಬುಡಕಟ್ಟುಗಳು ತಮ್ಮೊಳಗೆ ಒಬ್ಬನನ್ನು ನಾಯಕನ್ನಾಗಿಸಿ ಕಾಡು ಪ್ರಾಣಿಗಳ, ವೈರಿಗಳ ವಿರುದ್ಧ ರಕ್ಷಣೆಯನ್ನು ಪಡೆದರು. ಸಹಜವಾಗಿಯೇ ಬಲವಿದ್ದವನು ನಾಯಕನಾಗುತ್ತಾನೆ. ಇಲ್ಲಿ ರಾಜ್ಯವೆನ್ನುವುದು ಗಣಗಳ ಸ್ವರೂಪವನ್ನು ಸೂಚಿಸುತ್ತದೆ. ಮೂರನೆಯದಾದ “ಅವಯವಗಳ ಸಿದ್ಧಾಂತ” ಅಂದರೆ ಅಧಿಕಾರದ ವಿಕೇಂದ್ರಿಕರಣ ಅದಾಗ ಆಚರಣೆಗೆ ಬಂದಿತ್ತು. ರಕ್ಷಣೆಗೆ ಸೈನ್ಯ, ವಣಿಕ, ಸಚಿವ, ಅಧಿಕಾರಿಗಳು ಈ ಎಲ್ಲ ಹುದ್ದೆಗಳೂ ಈ ಕಾಲದಲ್ಲಿ ಬೆಳವಣಿಗೆಯನ್ನು ಹೊಂದಿದ್ದವು.

ನಂತರದ ಯಜುರ್ವೇದದ ಕಾಲದಲ್ಲಿ ಈ ರಾಜತ್ವವೆನ್ನುವುದು ಒಂದು ವ್ಯವಸ್ಥಿತ ರೂಪವನ್ನು ಪಡೆದುಕೊಂಡಿತು. ಇಂದ್ರನ ಪ್ರೀತ್ಯರ್ಥವಾಗಿ ನಡೆಸುವ ಯಾಗಗಳ ಜೊತೆಗೆ ಅಶ್ವಮೇಧದ ಸಂಪೂರ್ಣ ವಿವರ ಯಜುರ್ವೇದದಲ್ಲಿ ಸುಗುತ್ತದೆ. ರಾಜನಾದವನ ಹಕ್ಕು ಮತ್ತು ಕರ್ತವ್ಯಗಳನ್ನು ಯಜುರ್ವೇದದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ರಾಜ್ಯಾಡಳಿತ ಅನುವಂಶವಾಗಿದ್ದರೂ ಅದು ಪ್ರಜೆಗಳ ಮೇಲೆ ಹೇರಿಕೆಯಾಗಿರಲಿಲ್ಲ. ಪ್ರಜೆಗಳೆಲ್ಲರೂ ತಮ್ಮ ದೊರೆಯನ್ನು ಆರಿಸುವ ಕಾಲಕ್ಕೆ ಆತ ಹೇಗಿರಬೇಕೆನ್ನುವದನ್ನು ಯಜುರ್ವೇದದ ಅನೇಕ ಮಂತ್ರಗಳು ವಿವರಿಸುತ್ತವೆ. ರಾಜತ್ವವೆನ್ನುವುದು ಭೋಗದ ಸ್ಥಾನವಾಗಿರದೇ, ಅದೊಂದು ಹೊಣೆಗಾರಿಕೆಯ ಸ್ಥಾನವಾಗಿತ್ತು. ಆಗ ಸಮಾಜದ ಪ್ರಮುಖರೆಲ್ಲರೂ ಸೇರಿ ತಮ್ಮ ನಾಯಕನನ್ನು ಆಯ್ಕೆ ಮಾಡುತ್ತಿದ್ದರು. “ಪರಾಕ್ರಮದಲ್ಲಿ ಆತ ಇಂದ್ರನಿಗೆ ಸಮನಾಗಿರಬೇಕು. ಯಮ ಸೂರ್ಯ ಅಗ್ನಿ ವರುಣ ಚಂದ್ರ ಮತ್ತು ಕುಬೇರ ಇವರುಗಳ ಗುಣಗಳು ಆತನಲ್ಲಿರಬೇಕು. ಧುರಭಿಮಾನಿಗಳಾದ ಶತ್ರುಗಳನ್ನು ಗಿಡುಗಪಕ್ಷಿ ಹೇಗೆ ಶತ್ರುಗಳ ಮೇಲೆ ಬಿದ್ದು ಅವುಗಳನ್ನು ನಿಗ್ರಹಿಸುತ್ತದೆಯೋ ಅದೇ ರೀತಿ ಪರಾಕ್ರಮವನ್ನು ಹೊಂದಿದವನಾಗಿರಬೇಕು. “ರಾಯಸ್ಪೋಷದೇ” ಪ್ರಜೆಗಳಿಗೆಲ್ಲರಿಗೂ ಧನಸಮೃದ್ಧಿಯನ್ನು ಉಂಟುಮಾಡುವವ ಆತನಾಗಿರಬೇಕು. ಇಂತಹ ಗುಣಗಳು ಯಾರಲ್ಲಿ ಇರುತ್ತದೆಯೋ, ಅಂತಹ ಸಮರ್ಥನನ್ನು ಎಲ್ಲ ಪ್ರಜೆಗಳು ಸೇರಿ ಅಂಗೀಕರಸಲು ಬಯಸುತ್ತೇವೆ” ಎನ್ನುವ ವಿವರಣೆಗಳಿವೆ.

ಗಣಗಳ ಒಡಯನೇ ರಾಜನಾಗಿರುತ್ತಿದ್ದ. ರಾಜನನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಜನಸಾಮಾನ್ಯರೆಲ್ಲರೂ ಪಾಲ್ಗೊಳ್ಳುತ್ತಿರಲಿಲ್ಲ. ಈಗಿನಂತೆ ಮತದಾನದ ವ್ಯವಸ್ಥೆಯಿಲ್ಲವಾಗಿತ್ತು. ರಾಜನ ಆಯ್ಕೆ “ಮೇಧಾ, ಪ್ರಜ್ಞಾ, ಧಾರಣಾ ಎನ್ನುವ ಮೂರು ಪ್ರಕ್ರಿಯೆಯನ್ನು ಒಳಗೊಳ್ಳಬೇಕುʼʼ ಎಂದು ಯಜುರ್ವೇದದಲ್ಲಿ ಹೇಳಲಾಗಿದೆ. ಋಷಿಮುನಿಗಳು ಪುರೋಹಿತರು ಮತ್ತು ಗಣ್ಯರು ಈ ಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಪ್ರಶಂಸನೀಯವಾದ ರೂಪಿನ, ವಿದ್ಯಾವಂತ, ನ್ಯಾಯಶಾಸ್ತ್ರ ಪರಿಣತ, ವಿನಯವಂತ, ಶೌರ್ಯವಂತ, ತೇಜಸ್ಸುಳ್ಳವ, ಪ್ರಜೆಗಳನ್ನು ನಿಷ್ಪಕ್ಷಪಾತದಿಂದ ಕಾಣುವವ, ಮೈತ್ರೀ, ಉತ್ಸಾಹ, ಆರೋಗ್ಯವಂತ, ಜಿತೇಂದ್ರಿಯತೆ, ವೇದವನ್ನು ಚನ್ನಾಗಿ ಮನನ ಮಾಡಿಕೊಂಡ ಪುರುಷನನ್ನೇ ಸಭಾಸದರು ತಮ್ಮ ಸಭಾಪತಿಯನ್ನಾಗಿ ಸ್ವೀಕರಿಸುತ್ತಿದ್ದರು. ರಾಜ, ರಾಜ ಸಭಾ ಮತ್ತು ಪ್ರಜಾ ಜನರು ಇತರ ಜನರಿಗೆ ಯಾವತ್ತಿಗೂ ಉಪಕಾರವನ್ನು ಮಾಡಬೇಕು ಎನ್ನುವ ವಿಧಿಗನುಸಾರವಾಗಿ ಈ ಆಯ್ಕೆಯ ಹಿಂದಿರುವ ವಿಚಾರಗಳನ್ನು ವೇದ ವಿವರಿಸುತ್ತದೆ.

ಹೀಗೆ ಆಯ್ಕೆ ಮಾಡುವ ವಿಷಯದಲ್ಲಿ ಮಹಿಳೆಯರಿಗೆ ಪ್ರಾತಿನಿದ್ಯವಿತ್ತೋ ಇಲ್ಲವೋ ಎನ್ನುವುದು ಸ್ಪಷ್ಟವಾಗುತ್ತಿಲ್ಲ. ಆದರೆ ಧಾರ್ಮಿಕ ಸಭೆಗಳಲ್ಲಿ ಅವರು ಪುರುಷರಷ್ಟೇ ಸಮರ್ಥರಾಗಿ ಭಾಗವಹಿಸುತ್ತಿದ್ದರು. ಮಹಿಳೆಯರೇ ರಾಜನಾಗಲು ಆಗಿನ ಸಮಾಜದಲ್ಲಿ ಯಾವ ಅಡ್ಡಿಯೂ ಇರಲಿಲ್ಲ. ಋಗ್ವೇದದಲ್ಲಿ ಪುರುಕುತ್ಸಾನಿ ಎನ್ನುವವಳು ಅಯೋಧ್ಯೆಯನ್ನು ಆಳಿದ ವಿಷಯ ಬರುತ್ತದೆ. ಆಕೆ ಅಪ್ರತಿಮ ಪರಾಕ್ರಮಿಯೂ ಆಗಿದ್ದಳು. ಅದೇ ರೀತಿ ವಿಶ್ಪಲಾ ಎನ್ನುವವಳ ಪರಾಕ್ರಮದ ಕುರಿತು ಋಗ್ವೇದದ ಹತ್ತನೆಯ ಮಂಡಲದಲ್ಲಿ ವಿವರಣೆಯಿದೆ. ಇನ್ನೋರ್ವ ಸ್ತ್ರೀ ಮುದ್ಗಲಾನಿ ಎನ್ನುವವಳು ತನ್ನ ಪತಿ ಮುದ್ಗಲನಿಗೆ ರಥ ಓಡಿಸುವ ಸ್ಪರ್ಧೆಯಲ್ಲಿ ಮಾಡಿದ ಸಹಕಾರದ ವಿವರ ಋಗ್ವೇದದ ಹತ್ತನೆಯ ಮಂಡಲದಲ್ಲಿದೆ. ಯಜುರ್ವೇದದ ಎಂಟನೆಯ ಅಧ್ಯಾಯದಲ್ಲಿ, ಸ್ತ್ರೀಯ ಕರ್ತವ್ಯಗಳನ್ನು ಹೇಳುತ್ತಾ ಮುಖ್ಯವಾಗಿ ವಿದುಷಿಯಾದ ಸ್ತ್ರೀಯು ಇತರರಿಗೆ ವಿದ್ಯೆಯನ್ನು ಧರ್ಮವನ್ನು ತಿಳಿಸಿಕೊಡಬೇಕು. ತನ್ನ ಮಕ್ಕಳನ್ನು ಸುಶಿಕ್ಷಿತರನ್ನಾಗಿ ಮಾಡಬೇಕು. ತನ್ನ ಪತಿಯು ಮಾಡುವ ಕಾರ್ಯಗಳಲ್ಲಿ ಲಕ್ಷ್ಯ ವಹಿಸಿ, ತಪ್ಪಿದಲ್ಲಿ ಆತನಿಗೆ ತಿಳಿಸಿ ಆತನನ್ನು ಸರಿದಾರಿಗೆ ತರಬೇಕೆಂದು ಹೇಳಿದೆ. ಮುಂದಿನ ಮಂತ್ರಗಳು ರಾಜನ ಆಯ್ಕೆ ಮತ್ತು ಆತನ ಗುಣಗಳನ್ನು ವಿವರಿಸುವುದರಿಂದ ಇಲ್ಲಿ ಸ್ತ್ರೀಯರ ಕರ್ತವ್ಯದ ಕುರಿತಾಗಿ ಹೇಳಿರುವುದು ರಾಜನೀತಿಯಲ್ಲಿಯೂ ಆಕೆಯ ಪಾಲ್ಗೊಳ್ಳುವಿಕೆಗೆ ಸಂಬಂಧಿಸಿದ್ದೆನ್ನುವುದು ಸ್ಪಷ್ಟವಾಗುತ್ತದೆ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಬುದ್ಧ ಪೂರ್ಣಿಮೆ: ಶಾಕ್ಯಮುನಿ ಗೌತಮ: ಮಧ್ಯಮಮಾರ್ಗದ ಹರಿಕಾರ

ಪ್ರಾಚೀನ ಗ್ರೀಸಿನಲ್ಲಿಯೂ ಇಂತಹುದೇ ವ್ಯವಸ್ಥೆ ಇದ್ದಿತೆನ್ನುವುದು ಪ್ಲೇಟೋನ “ರಿಪಬ್ಲಿಕ್” ಕೃತಿಯಲ್ಲಿದೆ. ಆದರೆ ಅಲ್ಲಿ ಸ್ತ್ರೀ ಮತ್ತು ಗುಲಾಮರಿಗೆ ಅಧಿಕಾರದ ಹಂಚಿಕೆಯಲ್ಲಿ ಪಾಲ್ಗೊಳ್ಳುವುದನ್ನು ಸ್ಪಷ್ಟವಾಗಿ ನಿರಾಕರಿಸಲಾಗಿದೆ. ಪ್ರಾಚೀನ ಭಾರತದಲ್ಲಿ ಗುಲಾಮಗಿರಿ ಇರಲಿಲ್ಲ. ವರ್ಣವ್ಯವಸ್ಥೆಯಲ್ಲಿ ಶೂದ್ರರು ಎನ್ನುವುದಿದ್ದರೂ ಅವರನ್ನು ಗೌರವದಿಂದ ನೋಡಿಕೊಳ್ಳುವುದು ರಾಜನ ಕರ್ತವ್ಯವೆಂದು ಶಾಂತಿಪರ್ವದಲ್ಲಿ ಹೇಳಲಾಗಿದೆ. ಭೀಷ್ಮ ಶೂದ್ರರಿಗೂ ಅಗ್ನಿಯನ್ನು ಆರಾಧಿಸುವ ಅಧಿಕಾರ ಇದೆಯೆನ್ನುತ್ತಾನೆ. ಶೂದ್ರರೂ ಸಹ ಓದಿ ಬ್ರಹ್ಮಜ್ಞರಾಗುತ್ತಿದ್ದರು. ಯಜುರ್ವೇದದ ಹೆಚ್ಚಿನ ಮಂತ್ರಗಳಲ್ಲಿ ರಾಜನನ್ನು ಸಭಾಪತಿ (ವಿಶಃ) ಎಂದು ಕರೆದಿದೆ. ಒಮ್ಮೆ ರಾಜನನ್ನಾಗಿ ಯಾರನ್ನು ಆರಿಸಲಾಯಿತೋ, ಆ ಕ್ಷಣದಿಂದ ಪ್ರಜೆಗಳು ಆತನಲ್ಲಿ ಈಶ್ವರಸ್ವರೂಪವನ್ನು ಕಾಣಬೇಕು. ಆತನನ್ನು ತಿರಸ್ಕರಿಸಬಾರದು. ಸಭಾಪತಿಯಾದವನೂ ಅಷ್ಟೆ, ತನ್ನ ಪ್ರಜೆಗಳ (ಸಮನಮಂತ) ಹಿತರಕ್ಷಣೆಯನ್ನು ಮರೆಯಕೂಡದು. ಪ್ರಜೆಗಳನ್ನು ಅವಗಣನೆ ಮಾಡಿದ ಯಾವ ರಾಜನೂ ಏಳ್ಗೆಯನ್ನು ಹೊಂದಲಾರ ಎನ್ನುವುದು ಶತಪಥ ಬ್ರಾಹ್ಮಣದ ವ್ಯಾಖ್ಯಾನದಲ್ಲಿದೆ.

ವೇದದ ಹೆಚ್ಚಿನ ಮಂತ್ರಗಳು ಇಂದ್ರನನ್ನು ಸ್ತುತಿಸುತ್ತವೆ. ಆದರೆ ಈ ಇಂದ್ರ ಎನ್ನುವ ಶಬ್ದದ ಅರ್ಥ ಇಂದ್ರಿಯಗಳನ್ನು ಜಯಿಸಿದವ ಎಂದಾಗುತ್ತದೆ. ಅದು ಒಂದು ಪದವಿಯೇ ಹೊರತು ವ್ಯಕ್ತಿಯ ಹೆಸರಲ್ಲ. ಇಂದ್ರ ಪದವಿ ಆನುವಂಶಿಕವಾಗಿ ಬರುವುದಲ್ಲ. ನೂರು ಅಶ್ವಮೇಧವನ್ನು ಮಾಡಿದವನನ್ನು ಇಂದ್ರಪದವಿಗೆ ಋಷಿಮುನಿಗಳು ನಿಯುಕ್ತಿ ಮಾಡುತ್ತಾರೆ. ಅದಕ್ಕೆ ತ್ರಿಮೂರ್ತಿಗಳ ಅನುಗ್ರಹವೂ ಇರಬೇಕೆಂದು ಪುರಾಣಗಳು ಹೇಳುತ್ತವೆ. ತಾತ್ಪರ್ಯವಿಷ್ಟೆ. ಸಮರ್ಥರಾದವರು ಸೇರಿ ಆಯ್ಕೆ ಮಾಡಿದಾತನೇ ಇಂದ್ರ ಎನ್ನುವುದು ಸ್ಪಷ್ಟ. ಈ ಪದವಿಯೂ ಶಾಶ್ವತವಲ್ಲ. ನಿರ್ದಿಷ್ಟ ಅವಧಿಗೆ ಇಂದ್ರನೂ ಬದಲಾವಣೆಯಾಗುತ್ತಾನೆ. ಪ್ರಸಕ್ತ ಪುರಂದರ ಎನ್ನುವವ ಇಂದ್ರನಾಗಿದ್ದಾನೆ. ಈ ಎಲ್ಲ ವಿವರಣೆಗಳನ್ನು ಗಮನಿಸಿದರೆ ಪ್ರಾಚೀನ ಭಾರತದಲ್ಲಿದ್ದುದು ನಿರಂಕುಶ ಪ್ರಭುತ್ವವಲ್ಲ; ಗಣರಾಜ್ಯದ ತಳಹದಿಯ ಮೇಲೆ ಸ್ಥಾಪಿತವಾದ ಸರಕಾರವಾಗಿತ್ತು. ಇಷ್ಟೆಲ್ಲವನ್ನೂ ಮಾಡಿ ರಾಜತ್ವಕ್ಕೆ ಏರಿಸುವ ಕ್ರಿಯೆಯಲ್ಲಿ ಆತನಿಗೆ ಅಭಿಷೇಕ ಮಾಡುವಾಗ ತಾನು ಇನ್ನು ಮುಂದೆ ಯಾರಿಗೂ ಹೆದರಬೇಕಿಲ್ಲವೆನ್ನುವ ಮದ ಬರಬಹುದು. ಆಗ ಆತನ ತಲೆಯ ಮೇಲೆ ಧರ್ಮದಂಡವನ್ನು ಮೊಟಕಿ ಪುರೋಹಿತರು “ನಿನ್ನ ತಲೆಯ ಮೇಲೆ ಧರ್ಮದಂಡವಿರುತ್ತದೆ. ನೀನು ಧರ್ಮಮಾರ್ಗವನ್ನೂ, ಋಜು ಮಾರ್ಗವನ್ನು ಬಿಡಕೂಡದು” ಎಂದು ಎಚ್ಚರಿಸುತ್ತಾರೆ.

ಧರ್ಮಭ್ರಷ್ಟನಾದ ರಾಜನನ್ನು ನಿವಾರಿಸುವ ಉದಾಹರಣೆಗಳ ಕುರಿತು ಮುಂದಿನ ಸಂಚಿಕೆಯಲ್ಲಿ ಗಮನಿಸೋಣ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಡಾ.ಬಿ. ಆರ್. ಅಂಬೇಡ್ಕರ್; ಬಹಿಷ್ಕೃತರ ಉತ್ಥಾನದ ಕಾರಣ ಪುರುಷ

Exit mobile version