Site icon Vistara News

ಧವಳ ಧಾರಿಣಿ ಅಂಕಣ: ಮಾಗಿ ಮುಸುಕಿದ ಇಳೆಯ ಬೆಳಗುವ ನೀರಾಜನ: ದೀಪಾವಳಿ

deepavali diyas

ಬಾನಂಗಳದಲ್ಲಿ ನಲಿವ ಬೆಳಕಿನ ಚಿತ್ತಾರ

ಬೆಳಕು (light) ಮತ್ತು ಕತ್ತಲು (dark) ಮನುಷ್ಯನಲ್ಲಿ ಹಬ್ಬಿಸಿದಷ್ಟು ಕುತೂಹಲವನ್ನು ಮತ್ಯಾವ ವಿಷಯಗಳೂ ಮಾಡಿಲ್ಲ. ಶಿಲಾಯುಗದ ಮಾನವನಿಗೆ ಯಾವಾಗ ಹೇಗೋ ಆಕಸ್ಮಿಕವಾಗಿ ಕಂಡ ಕಾಡ್ಗಿಚ್ಚು ಅಥವಾ ಬೆಣಚುಕಲ್ಲನ್ನು ತಿಕ್ಕಿದಾಗ ಎದ್ದ ಕಿಡಿಗಳು ಅಥವಾ ರಾತ್ರಿಯಲ್ಲಿ ಆಗಸದ ನಕ್ಷತ್ರಗಳು, ತನ್ನ ಸುತ್ತಲೂ ಹಾರಡುತ್ತಿರುವ ಮಿಂಚುಳ್ಳಿಗಳ ಬೆಳಕು, ಇವೆಲ್ಲವೂ ಅನ್ವೇಷಣಾ ಪ್ರವೃತ್ತಿಗೆ ಕಾರಣಗಳಾದವು. ಹಗಲಿನಲ್ಲಿ ಬೆಳಕು ಧಂಡಿಯಾಗಿ ಬಿದ್ದಿರುವಾಗ ಕತ್ತಲ ಕುರಿತಾಗಿ ಯಾರೂ ವಿಚಾರ ಮಾಡುವುದಿಲ್ಲ. ಸಂಪೂರ್ಣ ಕತ್ತಲಾದಾಗ ಭಯಗೊಂಡು ಬೆಳಕಿಗಾಗಿ ತಡಕಾಡುತ್ತೇವೆ. ಪ್ರಖರ ಹಗಲಿನಲ್ಲಿಯೂ ಅದರ ಝಳದಿಂದ ತಪ್ಪಿಸಿಕೊಳ್ಳಲು ನೆರಳನ್ನು ಆಶ್ರಯಿಸುತ್ತೇವೆ. ಶುದ್ಧ ಚಿನ್ನದಿಂದ ಹೇಗೆ ಆಭರಣವನ್ನು ಮಾಡಲಾಗುವುದಿಲ್ಲವೋ ಅದೇ ರೀತಿ ಸಂಪೂರ್ಣ ಕತ್ತಲು ಅಥವಾ ಬೆಳಕಿನಲ್ಲಿಯೂ ಆನಂದ ಸಿಗುವುದಿಲ್ಲ. ನೆರಳು ಬೆಳಕಿನಾಟದ ಚಂದದ ಚಿತ್ತಾರ ಮಾತ್ರ ಮನಸ್ಸನ್ನು ಮುದಗೊಳಿಸುತ್ತದೆ. ಬುದ್ಧಿಗೆ ಪ್ರಚೋದನೆಯನ್ನು ಕೊಡುತ್ತದೆ. ಈ ಹಿನ್ನೆಲೆಯಲ್ಲಿ ಬೆಳಕಿನ ಹಬ್ಬವಾದ ದೀಪಾವಳಿ (deepavali 2023) ಕೇವಲ ದೈವಿಕ ಆಚರಣೆಗಳಿಗಷ್ಟೇ ಸೀಮಿತವಾಗಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.

ನಮ್ಮ ಹೆಚ್ಚಿನ ಹಬ್ಬಗಳು ಬರುವುದು ದಕ್ಷಿಣಾಯನದಲ್ಲಿ. ಪ್ರಥಮ ಏಕಾದಶಿಯಿಂದ ಪ್ರಾರಂಭವಾಗಿ ದೀಪಾವಳಿಯ ನಂತರ ತುಳಸೀ ವಿವಾಹದ ವರೆಗೆ ಹಬ್ಬಗಳ ಸಾಲು ಸಾಲು ಬರುತ್ತದೆ. ಈ ಸಂದರ್ಭದಲ್ಲಿ ರಾತ್ರಿ ದೀರ್ಘವಾಗಿರುತ್ತದೆ. ಮಳೆಯ ಮೋಡಗಳು ಮುಸುಕಿ ಆಕಾಶದಲ್ಲಿ ಚಂದ್ರ ತಾರೆಗಳ ದರ್ಶನವೂ ಹೆಚ್ಚಾಗಿ ಇರುವುದಿಲ್ಲ. ಹೊಲದಲ್ಲಿ ಬಿತ್ತಿ ಬೆಳೆ ತೆಗೆದು ಅದು ಕೈಗೆ ಬರುವ ಹೊತ್ತಿನಲ್ಲಿ ಬರುವ ನವರಾತ್ರಿ ನಂತರದ ದೀಪಾವಳಿ ಇವೆರಡೂ ಹೊಸ ಸುಗ್ಗಿಯನ್ನು ಮನೆಗೆ ತರುವ ಶರದೃತು ಬರುತ್ತದೆ. ಕೆಲ ದಿನಗಳು ಕಳೆದವೆಂದರೆ ಚಳಿಗಾಲ ಆವರಿಸಿ ಮರಗಿಡಗಳ ಎಲೆಗಳೆಲ್ಲ ಉದುರಿ ಬೋಳಾಗಿ ಬಿಡುತ್ತದೆ. ಅಂತೆಯೇ ತುಳಸೀ ವಿವಾಹದ ನಂತರ ಹಬ್ಬಗಳ ಶ್ರಾಯ ಮುಗಿದು ಶುಭಕಾರ್ಯಗಳಾದ ಮದುವೆ, ಮುಂಜಿ ಮುಂತಾದವುಗಳಿಗೆ ನಾಂದಿಹಾಡುತ್ತದೆ.

ಅನೇಕ ಸಲ ನಾವು ಆಚರಿಸುವ ಹಬ್ಬಗಳ ವಿಷಯದಲ್ಲಿ ವೇದಗಳಲ್ಲಿ ಉಲ್ಲೇಖವಿಲ್ಲ, ಹಾಗಾಗಿ ಇವುಗಳೆಲ್ಲವೂ ಸನಾತನ ಧರ್ಮ ಆಮದು ಮಾಡಿಕೊಂಡಿರುವುದು ಎನ್ನುವ ಟೀಕೆಗಳನ್ನು ಕೇಳುತ್ತೇವೆ. ನಾವು ಗಮನಿಸ ಬೇಕಾದ ವಿಷಯಗಳೆಂದರೆ ವೇದೋಪನಿಷತ್ತುಗಳು (vedic tradition) ಹೇಳುವ ವಿಷಯ ಜ್ಞಾನಕಾಂಡಗಳಿಗೆ ಸಂಬಂಧಿಸಿರುವುದು. ವೇದಗಳನ್ನು ಉಚ್ಛರಿಸುವಾಗ ಅಲ್ಲಿ ಯಜ್ಞಕ್ರಿಯೆ ಇರುತ್ತದೆ. ಹವಿಸ್ಸನ್ನು ಕೊಡಲಾಗುತ್ತದೆ. ದೇವತೆಗಳು ಯಜ್ಞಕುಂಡದ ಪಕ್ಕದಲ್ಲಿ ಇರುವ ಪ್ರಣೀತ ಪಾತ್ರೆಯಲ್ಲಿ ಬಂದು ಕುಳಿತು ಅಗ್ನಿಗೆ ಅರ್ಪಿಸುವ ಹವಿಸ್ಸುಗಳನ್ನು ಅಗ್ನಿಯಿಂದ ಶುದ್ಧೀಕರಿಸಿ ತಾವು ಸೇವಿಸುತ್ತಾರೆ ಎನ್ನುವ ನಂಬಿಕೆಯಿಂದ ಬಂದಿರುವಂತಹದ್ದು. ಅಗ್ನಿಯಿಲ್ಲದೆ ಯಾವ ವೇದಗಳೂ ಪೂರ್ತಿಯಾಗುವುದಿಲ್ಲ. ಈ ಹವಿಸ್ಸನ್ನು ಸೇವಿಸಿದ ಇಂದ್ರಾದಿಗಳು ಸಂತ್ರಪ್ತಿಗೊಂಡು ಭೂಮಿಯ ಮೇಲೆ ಮಳೆಗರೆಯುತ್ತಾರೆ ಎನ್ನುವ ನಂಬುಗೆ ಇದರ ಹಿಂದಿದೆ. ಹೆಚ್ಚಿನ ಸಂದರ್ಭಗಳಲ್ಲಿ ಯಜ್ಞಗಳು ಸ್ವರ್ಗದ ಬಯಕೆಯಿಂದ ಆಚರಿಸಲ್ಪಡುತ್ತದೆ. ಆದರೆ ಉಪನಿಷತ್ತಿನ ಮಾರ್ಗದಲ್ಲಿ ಅಗ್ನಿಸಹಿತ ಮತ್ತು ಅಗ್ನಿರಹಿತ ಆರಾಧನೆಗಳಿವೆ. ವೇದ ಹೇಳುವ ಸ್ವರ್ಗವೆಂದರೆ ಹೆಚ್ಚಿನವರು ನಂಬುವಂತೆ ಮೂವತ್ತಮೂರು ಕೋಟಿ ದೇವತೆಗಳ ಸ್ವರ್ಗವಲ್ಲ. ಅದು ಸುವರ್ಗ; ಅಲ್ಲಿ ಹೋಗುವುದರ ಮೂಲ ಉದ್ಧೇಶವೇ ಅದಕ್ಕಿಂತ ಪರಮ ಪದವಿಯನ್ನು ಬಯಸುವುದು. ಈ ಹಂತದಲ್ಲಿ ಅಲ್ಲಿಯೂ ಇಂದ್ರಿಯಗಳನ್ನು ನಿಗ್ರಹಿಸಿ ಆತ್ಮಚಿಂತನೆಯಲ್ಲಿ ತೊಡಗಿದರೆ ಆ ಲೋಕವನ್ನೂ ದಾಟಿ ಭಗವಂತನ ಸಾನ್ನಿಧ್ಯದಲ್ಲಿ ಲೀನವಾಗುವ ಅವಕಾಶ ಸಿಗುತ್ತದೆ. ಅದನ್ನೆ ಈಶಾವಾಸ್ಯೋಪನಿಷಿತ್ತಿನಲ್ಲಿ ಸ್ಪಷ್ಟವಾಗಿ ಹೀಗೆ ಹೇಳಿದೆ:

ಹಿರಣ್ಮಯೇನ ಪಾತ್ರೇಣ ಸತ್ಯಸ್ಯಾಪಿಹಿತಂ ಮುಖಮ್
ತತ್ತ್ವಂ ಪೂಷನ್ನಪಾವೃಣು ಸತ್ಯಧರ್ಮಾಯ ದೃಷ್ಟಯೇ II 15 II

“ಸತ್ಯದ ಮುಖವೆನ್ನುವುದು ಹಿರಣ್ಮಯವಾದ ಪಾತ್ರೆಯಿಂದ ಮುಚ್ಚಲ್ಪಟಿದೆ. ಸತ್ಯಧರ್ಮನಾದ ಪೂಷನೆ (ಸೂರ್ಯನೇ) ನನಗೆ ಕಾಣುವುದಕ್ಕಾಗಿ ನೀನು ಅದನ್ನು ತೆಗೆ”

Women Sitting on the Floor Holding Candles Beside Colorful Flowers During Diwali Festival

ಶಬ್ಧ ಸ್ಪರ್ಶ ರಸ ರೂಪ ಗಂಧಗಳಿಂದ ಕೂಡಿದ ಬಾಹ್ಯ ಸ್ವರೂಪವನ್ನು ಸೂರ್ಯ ಕಿರಣಗಳು ಸ್ಪರ್ಶಿಸಿ ನಮಗೆ ತೋರಿಸುತ್ತದೆ. ಈ ಆಕರ್ಷಣೆಗಳಿಗೆ ಒಳಗಾಗದೇ, ಆ ಹೊನ್ನಕಿರಣಗಳ ಮುಚ್ಚಳವನ್ನು ಸರಿಸಿ ಅಂತರಂಗದೊಳಗಿರುವ ಬೆಳಕಿನ ಕಡೆಗೆ ನಮ್ಮ ಗಮನವನ್ನು ಹರಿಸು; ನಮ್ಮನ್ನು ಮುಸುಕಿರುವ ಮಾಯೆಯನ್ನು ಸರಿಸಲು ಸಾಧ್ಯವಿರುವುದು ಪೂಷನ್ ಎನ್ನುವ ಸೂರ್ಯನ ಇನ್ನೊಂದು ಹೆಸರಿಗೆ ಸಾಧ್ಯ. ದಾರಿಯಲ್ಲಿ ಅಡ್ದಲಾಗಿ ಬಿದ್ದ ಹಗ್ಗ ಅದು ಹಾವು ಎಂದು ತೋರುವ ಅರಿವನ್ನು ತಲುಪುವ ವರೆಗೆ ಭ್ರಮೆಗೆ ಒಳಗಾಗಿಸುವುದೋ, ಅದೇ ರೀತಿ ಬಾಹ್ಯ ಬೆಳಕು ತೋರುವ ವಸ್ತುವಿಗೆ ಅರಿವಿನ ಜಾಗ್ರತಿಯ ಕಿರಣ ಬಿದ್ದಾಗ ಮಾತ್ರ ಅದರ ನಿಜದ ಮರ್ಮ ತಿಳಿಯುತ್ತದೆ. ಬೆಳಕಿನಲ್ಲಿ ಕಾಣುವುದೆಲ್ಲವೂ ಸತ್ಯವಾಗಬೇಕಿಲ್ಲ. ಈ ಮಹತ್ವವನ್ನು ಅರಿಯದೇ ಇದ್ದರೆ ಯಾವ ಸ್ವರ್ಗದಲ್ಲಿದ್ದರೂ ಗಳಿಸಿದ ಪುಣ್ಯ ತೀರಿದ ಮೇಲೆ ಮತ್ತೆ ಭೂಮಿಗೆ ಬರಲೇ ಬೇಕೆನ್ನುವುದು ಇದರ ಹಿಂದಿರುವ ತಿರುಳು. ಸನಾತನ ಧರ್ಮದಲ್ಲಿ ಗ್ರಹಸ್ಥರಾದವರು ಅಗ್ನಿಯನ್ನು ಆರಾಧಿಸಲೇ ಬೇಕು. ಆದರೆ ಸಂನ್ಯಾಸಿ ಮಾರ್ಗವನ್ನು ಅಪ್ಪಿಕೊಂಡಮೇಲೆ ಅಗ್ನಿಯನ್ನು ತ್ಯಜಿಸಬೇಕು. ಆತ ಯಾವ ಕಾರಣಕ್ಕೂ ಅಗ್ನಿಯ ಋಣದಲ್ಲಿ ಇರಬಾರದು. ಹಾಗಾಗಿ ಸಂನ್ಯಾಸಿಗಳಿಗೆ ಅಗ್ನಿ ವರ್ಜ್ಯ. ವೇದ ಮತ್ತು ಉಪನಿಷತ್ತುಗಳು ಸತ್ಯವನ್ನು ತಿಳಿಯಲಿರುವ ಸಾಧನಗಳು. ಅವೇ ಅಂತಿಮ ಸತ್ಯವಲ್ಲ. ವೇದೋಪನಿಷತ್ತುಗಳು ಅಗ್ನಿಯನ್ನು ಒಂದು ಆತ್ಮೋನತಿಯ ಮಾಧ್ಯಮವನ್ನಾಗಿ ಕಂಡಿದ್ದಾರೆ ಅಷ್ಟೆ. ಹಾಗಾಗಿ ಅಗ್ನಿಯ ಹತ್ತಿರ ನಿನಗೆ ಪ್ರಪಂಚದ ಅಂತಿಮ ಗುರಿಗೆ ಹೋಗುವ ಮಾರ್ಗಗಳೆಲ್ಲವೂ ತಿಳಿದಿದೆ. ನಮ್ಮನ್ನು ಸುಪಥವಾದ ಆ ಹಾದಿಯಲ್ಲಿ ಕರೆದುಕೊಂಡು ಹೋಗು ಎಂದು ಬೇಡಿಕೊಳ್ಳುವ ಮಂತ್ರ ಈಶಾವಾಸ್ಯದಲ್ಲಿ ಬರುತ್ತದೆ. ಯಾರಿಗೆ ಪ್ರಪಂಚದ ಈ ಸತ್ಯದ ಅರಿವು ಮೂಡುತ್ತದೋ ಆಗ ಆತನಿಗೆ ಪ್ರಣೋಪಾಸನೆ ಮಾತ್ರ ಮಂತ್ರ. ಸನ್ಯಾಸಿಯ ಕಾಯ ಅಳಿದ ಮೇಲೆ ಅದನ್ನು ಸಮಾಧಿ ಮಾಡುವುದು ಈ ಕಾರಣಕ್ಕಾಗಿ.

ಜ್ಞಾನಕಾಂಡ ಅಂತಿಮ ಸತ್ಯವಾದರೂ ಬದುಕಿರುವುದು ವ್ಯಾವಹಾರಿಕ ಜಗತ್ತಿನಲ್ಲಿಯಾದುದರಿಂದ, ವಿಹಿತವಾದ ಸುಖಭೋಗಗಳನ್ನು ಜನಸಾಮಾನ್ಯರಿಗೆ ವಿಧಿಸಲ್ಪಟ್ಟಿದೆ. ಸಂಸಾರಿಗಳಿಗೆ ವಿಧಿ ಮತ್ತು ನಿಷೇಧಗಳೆಂಬ ಎರಡು ಧರ್ಮ ಮಾರ್ಗಗಳಿವೆ. ಇದು ಕರ್ಮಮಾರ್ಗ; ಎಲ್ಲಿಯೂ ಕರ್ಮಮಾರ್ಗ ಕೀಳೆಂದು ಹೇಳಿಲ್ಲ. ಭವದ್ಗೀತೆಯಲ್ಲಿ ಕೃಷ್ಣ “ಗುಣತ್ರಯಾ ವಿಭಾಗ ಯೋಗದಲ್ಲಿ” ಸತ್ವ ರಜ ತಮವೆನ್ನುವ ಮೂರುಗುಣಗಳ ಕುರಿತು ವಿವರಿಸಿದ್ದಾನೆ. ಈ ಮೂರೂ ಗುಣಗಳು ವಿಷಮ ಸ್ಥಿತಿಯಲ್ಲಿದ್ದಾಗ ಪ್ರಪಂಚದ ಸೃಷ್ಟಿಯಾಗುತ್ತದೆ. ಭೂಮಿಗೆ ಬೀಜ ಬಿತ್ತಿದರೆ ಅದು ತಮಸ್ಸು (ಮುಚ್ಚಿರುವುದು), ನೀರು ಹಾಯಿಸಿದಾಗ ಅದು ರಜಸ್ಸು. ಆಗ ಮೊಳಕೆಯೊಡೆದ ಅದು ಸೂರ್ಯನ ಕಿರಣವನ್ನು ಹೀರಿ ಫಲಕೊಡುವುದು ಸತ್ವಗುಣ. ಈ ಸತ್ಯವನ್ನು ಅರಿತವ ಬೆಳೆಯ ಹಿಂದಿನ ಮರ್ಮವನ್ನು ಅರಿಯುತ್ತಾನೆ. ಹೇಗೆ ಅನ್ನದ ಹಿಂದೆ ಅದನ್ನು ಬೆಳೆದ ರೈತನಿಗೆ ಬತ್ತದ ಬೀಜ ಕಾಣಿಸುವುದೋ ಅದೇ ರೀತಿ ಜ್ಞಾನಿಯಾದವನಿಗೆ ಪ್ರಪಂಚದ ಪ್ರತಿಯೊಂದೂ ವಸ್ತುವಿನಲ್ಲಿ ಪರಮಾತ್ಮನ ಸ್ವರೂಪ ಕಾಣಿಸುತ್ತದೆ. ಇದೇ ಸತ್ಯವನ್ನು ಮುಚ್ಚಿರುವ ಹಿರಣ್ಮಯವಾದ ಪಾತ್ರೆ ಎನ್ನುವುದರ ಅರಿಯುವಿಕೆಯಾಗಿದೆ. ಆರಾಧನೆ ಮತ್ತು ಆಚರಣೆ ಇವೆರಡೂ ಹಬ್ಬಗಳ ಹಿಂದಿರುವ ತಿರುಳು. ಆಚರಣೆಯ ಮೂಲಕ ಭಗವಂತನನ್ನು ಅರಿಯುವುದಕ್ಕಿರುವ ಮಾರ್ಗಗಳೇ ಆರಾಧನಾ ವಿಧಾನಗಳು.

ಈ ಹಿನ್ನೆಲೆಯಲ್ಲಿ ಗಮನಿಸಿದಾಗ ವೇದಕಾಲದಲ್ಲಿ ಹಬ್ಬಗಳ ಆಚರಣೆ ಇತ್ತು ಎನ್ನುವುದಕ್ಕೆ ಯಾವ ಸಂಶಯವೂ ಬೇಕಾಗಿಲ್ಲ. ಬೆಳಕು ಮತ್ತು ಜ್ಞಾನ ಭಾರತೀಯ ಪರಂಪರೆಯಲ್ಲಿ ಅವಿನಾಭಾವ ಸಂಬಂಧವನ್ನು ಹೊಂದಿರುವಂತವುಗಳು. ಬೆಳಕಿನ ಹಬ್ಬವಾದ ದೀಪಾವಳಿ ಜ್ಞಾನದ ಸಂಕೇತವೂ ಹೌದು. ಸಿಂಧೂಕಣಿವೆಯ ನಾಗರಿಕತೆಯ ಕುರುಹುಗಳನ್ನು ಗಮನಿಸುವಾಗ ಮಣ್ಣಿನ ಹಣತೆಗಳು ಸಿಕ್ಕಿವೆ. ಮೋಹಾಂಜೋದಾರೋದಲ್ಲಿ ನಗರದ ಮುಖ್ಯದ್ವಾರಗಳನ್ನು ಬೆಳಗಿಸಲು ಗೂಡುಗಳ ಸರಪಳಿ ಇತ್ತು. ಆ ಕಾಲದ ಮಣ್ಣಿನ ವಿಗ್ರಹ ಒಂದರಲ್ಲಿ ಎರಡೂ ಬದಿಗೆ ದೀಪಗಳು ಉರಿಯುತ್ತಿರುವ ಕುರುಹುಗಳಿದೆ. ಭಾರತೀಯ ಸಂಸ್ಕೃತಿಯಲ್ಲಿ ಮೂರ್ತಿಪೂಜೆಗೂ ಮುನ್ನ ರೂಢಿಯಲ್ಲಿರುವದು ದೀಪ ಪ್ರಜ್ವಲನ. ಯಜ್ಞಗಳೆನ್ನುವದು ಋಷಿಮುನಿಗಳು ಮತ್ತು ರಾಜರುಗಳಿಗಾದರೆ, ಜನಸಾಮಾನ್ಯರು ತಮ್ಮ ತಮ್ಮ ಮನೆಮನೆಗಳಲ್ಲಿ ದೀಪವನ್ನು ಹಚ್ಚಿ ನಮಸ್ಕಾರ ಮಾಡುವ ಪದ್ಧತಿ ಇಂದಿಗೂ ಇದೆ. ಅಶ್ವಯುಜ ಚತುರ್ದಶಿಯಿಂದ ಪ್ರಾರಂಭವಾಗುವ ದೀಪಾವಳಿ ಹಬ್ಬದಲ್ಲಿ ಸುರಿವ ಮಳೆಯ ಅಬ್ಬರವಿಲ್ಲದೇ ದೀರ್ಘವಾದ ರಾತ್ರಿಕಾಲದಲ್ಲಿ ಚಳಿಯೂ ತನ್ನ ಆಗಮನವನ್ನು ಸೂಚಿಸುತ್ತಾ ಮಂದವಾಗಿ ಅಡಿಯಿಡುತ್ತಿರುತ್ತದೆ. ಪ್ರತೀ ಋತುಗಳ ಬದಾಲಾವಣೆಯಲ್ಲಿಯೂ ಇಳೆ ಹೊಸತನದಿಂದ ಕಂಗೊಳಿಸುತ್ತಿರುತ್ತಾಳೆ.

Women Sitting on the Floor Holding Candles Beside Colorful Flowers During Diwali Festival

ವೇದ ಉಪನಿಷತ್ತುಗಳಲ್ಲಿ ದೀಪಾವಳಿಯ ಹಬ್ಬದ ನೇರವಾದ ಉಲ್ಲೇಖ ಇಲ್ಲದೇ ಇರಬಹುದು. ಆದರೆ ದೀಪಾವಳಿ ಹಬ್ಬದ ಕುರಿತು ಪುರಾಣ ಮತ್ತು ಮಹಾಕಾವ್ಯದಲ್ಲಿ ಹೇರಳವಾದ ಉಲ್ಲೇಖಗಳಿವೆ. ದೀಪಾವಳಿಯೆಂದರೆ ನರಕಾಸುರನ ಕೊಂದ ಕಥೆ ಭಾಗವತ ಮತ್ತು ಹರಿವಂಶಗಳಲ್ಲಿ ವಿವರವಾಗಿ ಬಂದಿದೆ. ಬಲಿಯನ್ನು ವಾಮನ ಪಾತಾಳಕ್ಕೆ ತಳ್ಳಿದ ದಿವಸವನ್ನಾಗಿಯೂ ಅಚರಿಸುತ್ತಾರೆ. ಇದೇ ದಿನ ಶ್ರೀ ಕೃಷ್ಣ ಗೋವರ್ಧನ ಗಿರಿಯನ್ನೆತ್ತಿ ಗೋವುಗಳನ್ನು ಮತ್ತು ಗೋಪಾಲಕರನ್ನು ರಕ್ಷಿಸಿದ ಹಿನ್ನೆಲೆಯಲ್ಲಿ ಗೋವನ್ನು ಪೂಜಿಸುವ ಪದ್ಧತಿಯೂ ಇದೆ. ಅಶ್ವಯುಜ ಚತುರ್ದಶಿಯಿಂದ ಹಿಡಿದು ಕಾರ್ತೀಕ ಪ್ರತಿಪದೆಯ ದಿವಸದ ತನಕ ಮೂರು ದಿನಗಳ ಕಾಲ ಹಬ್ಬವನ್ನು ಆಚರಿಸುವ ಹಿನ್ನೆಲೆಯ ಕಥೆಗಳನ್ನು ಗಮನಿಸಿದಾಗ ಪ್ರಪಂಚವನ್ನು ಕಾಡುತ್ತಿರುವ ದುಷ್ಟ ಶಕ್ತಿಗಳ ನಿರ್ಮೂಲವಾದಾಗ ಲೋಕ ಸಂಭ್ರಮಿಸುವ ವಿಧಾನವೇ ಕತ್ತಲಿನಲ್ಲಿ ದೀಪಗಳನ್ನು ಹಚ್ಚಿ ಶೃಂಗರಿಸುವ ಮೂಲಕ. ಇಂದೂ ಸಹ ಸಂತಸದ ಸಂಧರ್ಭಗಳಲ್ಲಿ ಆದಾಗ ಪಟಾಕಿ ಹಚ್ಚುವುದು, ದೀಪಾಲಂಕಾರವನ್ನು ಮಾಡುವುದು ಸರ್ವೇ ಸಾಮಾನ್ಯ ಸಂಗತಿ. ನವರಾತ್ರಿ ಹಬ್ಬವನ್ನು ದುರ್ಗಾ ಸರಸ್ವತಿಯ ಹಬ್ಬವನ್ನಾಗಿ ಆಚರಿಸಿದರೆ ದೀಪಾವಳಿ ಲಕ್ಷ್ಮಿಯ ಕೃಪಾಕಟಾಕ್ಷಕ್ಕಾಗಿ ಆಚರಿಸುವ ಹಬ್ಬವಾಗಿ ಆಚರಿಸುತ್ತಾರೆ. ಸಮುದ್ರ ಮಥನದ ಕಾಲಕ್ಕೆ ಲಕ್ಷ್ಮಿ ದೊರೆತಿರುವುದೂ ದೀಪಾವಳಿಯ ಸಂಧರ್ಭದಲ್ಲಿಯೇ. ನಾರಾಯಣನನ್ನು ಕೈಹಿಡಿದ ಆಕೆಯನ್ನು ಪೂಜಿಸಿಸುವಲ್ಲಿ ಅಪಾರ ಶೃದ್ಧಾ ಭಕ್ತಿಗಳಿರುತ್ತವೆ. ಸದಾ ಕಾಲ ಅರ್ಚಿಸಿದವರ ಮನೆಗಳಲ್ಲಿ ಆಕೆ ನೆಲಸಿರಲಿ ಎನ್ನುವ ಕಾರಣಕ್ಕೆ ಲಕ್ಷ್ಮೀದೇವಿಯನ್ನು ಬೇರೆ ದೇವರಂತೆ ಪೂಜೆಯಾದಮೇಲೆ ವಿಸರ್ಜಿಸುವುದಿಲ್ಲ. ಸ್ಕಂದ ಪುರಾಣದಲ್ಲಿ ದೀಪದ ಹಬ್ಬವಾಗಿ ಈ ಮೂರು ದಿನಗಳನ್ನು ಆರ್ಚಿಸುವ ಹಿಂದಿನ ಕಾರಣ ವಿವರವಾಗಿ ವರ್ಣಿಸಿದೆ. ಮುಖ್ಯವಾಗಿ ದೀಪಗಳನ್ನು ಹಚ್ಚುವುದರ ಧಾರ್ಮಿಕ ಹಿನ್ನೆಲೆ ಹೀಗಿದೆ.

ಸೂರ್ಯಾಂಶ ಸಂಭವಾ ದೀಪಾ ಅಂಧಕಾರ ವಿನಾಶಕಾಃ
ತ್ರಿಕಾಲೇ ಮಾಂ ದೀಪಯಂತು ದಿಶಂತು ಚ ಶುಭಾSಶುಭಂ II 9-10 II

Women Sitting on the Floor Holding Candles Beside Colorful Flowers During Diwali Festival

“ಸೂರ್ಯಾಂಶದಿಂದ ಸಂಭವಿಸಿದ ದೀಪ ಅಂಧಕಾರವನ್ನು ನಿವಾರಿಸುವವು. ಈ ದೀಪಗಳು ತ್ರಿಕಾಲದಲ್ಲಿಯೂ ನನ್ನನ್ನು ದೀಪ್ತಿಸುತ್ತಿರಲಿ, ಶುಭಾಶುಭಗಳನ್ನು ತೋರಿಸಲಿ”

ದೀಪಾವಳಿ ಎನ್ನುವದು ಭಾರತೀಯರ ಪಾಲಿಗೆ ಬರೀ ಬೆಳಕಿನ ಹಬ್ಬವಲ್ಲ. ಪ್ರಾಚೀನ ಋಷಿಗಳಿಗೆ ಬೆಳಕು ಜ್ಞಾನದ ಸಂಕೇತವಾದರೆ ಜನಸಾಮಾನ್ಯರಿಗೆ ಅದು ಹಬ್ಬವಾಯಿತು. ಆ ಮೂಲಕ ಮನಸ್ಸು ಲೋಕದ ಸೃಷ್ಟಿಕರ್ತನ ಕುರಿತು ಚಿಂತಿಸಲು ಮತ್ತು ಆತ ಮನುಷ್ಯರಿಗೆ ಎಲ್ಲಾ ಅನುಕೂಲವನ್ನು ಕೊಟ್ಟಿರುವುದರ ಪ್ರತಿಫಲವಾಗಿ ಭಕ್ತಿಯಿಂದ ಗೌರವಿಸುವ ಕಾಲ. ಧರ್ಮವೆಂದರೆ ಜೀವನ ಮಾರ್ಗ. ಅಚಲವಲ್ಲ, ಸದಾ ಚಲನಶೀಲ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಭಾರತದ ಅಂತಃಶಕ್ತಿಯನ್ನು ಜಾಗೃತಗೊಳಿಸಿದ ವಾಮನ ಮೂರ್ತಿ

ದೀಪಾವಳಿಯ ವಿಶೇಷವೇ ಆಕಾಶ ಗೂಡುಗಳು. ಮುಗಿಲಲ್ಲಿರುವ ನಕ್ಷತ್ರಗಳೆಲ್ಲವೂ ಮರದ ತುದಿಗಳ ಮೇಲೆ, ಮನೆಯ ಮುಂಬಾಗದಲ್ಲಿ ಹಾಕಿದ ಎತ್ತರದ ಕಂಭಗಳ ಮೇಲೆ ಇಳಿದು ಕುಳಿತಿವೆಯೋ ಎನ್ನುವಂತೆ ತೋರುವ ಇವುಗಳನ್ನು ಕಂಡಾಗ ಮನಸ್ಸು ಅರಳುತ್ತದೆ. ಈ ಆಕಾಶ ದೀಪವನ್ನು ಯಾವಾತ ಬೆಳಗುತ್ತಾನೋ ಆತನ ಬ್ರಹ್ಮಹತ್ಯಾ ಪಾಪವು ನಾಶವಾಗುತ್ತದೆ, ಯಮ ಪ್ರಸನ್ನನಾಗುತ್ತಾನೆ ಎಂದು ಪದ್ಮ ಪುರಾಣ ವರ್ಣಿಸಿದೆ. ಆಸಕ್ತಿದಾಯಕ ವಿಷಯವೆಂದರೆ ಬೆಳಗಿದ ದೀಪದ ಕುಡಿ ಶಕುನವನ್ನು ನುಡಿಯುತ್ತದೆ ಎನ್ನುವುದನ್ನು ಪುರಾಣಗಳು ಮತ್ತು ಜ್ಯೋತಿಷ್ಯಶಾಸ್ತ್ರ ವಿವರಿಸುತ್ತದೆ. ಧರ್ಮರಾಜನಿಗೆ ವಾಲಖಿಲ್ಯರು ದೀಪಾವಳಿಯಂದು ದೀಪಗಳನ್ನು ನೀರಾಜನ ಮಾಡುವ ವಿಧಾನವನ್ನು ತಿಳಿಸಿಕೊಡುತ್ತಾರೆ. ಚಿನ್ನ, ಬೆಳ್ಳಿ, ಹಿತ್ತಾಳೆ, ತಾಮ್ರದ ಲೋಹದ ಇಲ್ಲವೇ ಮಣ್ಣಿನ ಹಣತೆಯಲ್ಲಿ ಹಚ್ಚಿದ ದೀಪಗಳನ್ನು ಉತ್ತರ ದಿಕ್ಕಿಗೆ ಇಟ್ಟು ನೀರಾಜನ ಮಾಡಬೇಕು. ಮುಖ್ಯವಾಗಿ ಒಂಭತ್ತು ದೀಪಗಳನ್ನು ಹಚ್ಚಬೇಕು. ಮನೆಯಲ್ಲಿ ಸುಖ ಸಂತಸ ನೆಲೆಸುವಂತೆ ಭಗವಂತನ ಅನುಗ್ರಹಕ್ಕಾಗಿ ಪ್ರಾರ್ಥಿಸಬೇಕು. ಕಠಿಣವಾದ ಕುಡಿಗಳುಳ್ಳ ದೀಪ ಪ್ರಜ್ವಲಿಸಿದರೆ ಲಕ್ಷ್ಮೀವಿನಾಶವಾಗುತ್ತದೆ, ಪೇಲವಾಗಿ ಬಿಳಚಿಕೊಂಡು ಕುಡಿ ಉರಿದರೆ ಅನ್ನಕ್ಷಯವಾಗುತ್ತದೆ. ಅತಿರಿಕ್ತಕುಡಿಗಳಿಂದ ಜ್ವಾಲೆ ಕಂಡರೆ ಯುದ್ಧಗಳು ತಲೆದೋರುತ್ತದೆ. ಕಪ್ಪುಬಣ್ಣದ ಜ್ವಾಲೆ ಬಂದರೆ ಮೃತ್ಯುವುಂಟಾಗುತ್ತದೆ. ದೀಪದ ಉರಿಯು ಶಾಂತವಾಗಿ ತೇಜಸ್ಸುಉಳ್ಳದ್ದಾಗಿ, ಶಿಖೆಯಿಂದ ಕೂಡಿ ಸ್ಥಿರವಾಗಿ ಹೊಳೆಯುತ್ತಾ ಇದ್ದರೆ ಸುಖ ಸಂಪತ್ತು ಸ್ಥಿರವಾಗಿ ಇರುತ್ತದೆ. ಮನಸ್ಸಿನ ಸಂಕಲ್ಪ ಸಿದ್ಧಿಸುತ್ತದೆ ಎಂದು ಸ್ಕಂದಪುರಾಣ ವಿರರಿಸುತ್ತದೆ. ಇಂದಿಗೂ ಅಷ್ಟಮಂಗಲ ಪ್ರಶ್ನೆಯಲ್ಲಿ ಮೊದಲು ಕನ್ನಿಕೆಯಿಂದ ದೀಪವನ್ನು ಬೆಳಗಿಸುತ್ತಾರೆ. ಆಗ ಉರಿಯುವ ಜ್ಯೋತಿಯ ಲಕ್ಷಣಗಳನ್ನು ನೋಡಿ ಮುಂದಿನ ಆರೂಢ ಪ್ರಶ್ನೆಗಳಿಗೆ ಬುನಾದಿಯನ್ನು ಹಾಕುತ್ತಾರೆ. ಧರ್ಮರಾಜ ಹೀಗೆ ಅಶ್ವಯುಜ ಮಾಸದ ಚತುರ್ದಶಿಯಿಂದ ಮೊದಲ್ಗೊಂಡು ಪ್ರತಿಪದೆಯತನಕ ಭಕ್ತಿಯಿಂದ ದೀಪಾರಾಧನೆ ಮಾಡಿ ಕಳೆದುಕೊಂಡ ತನ್ನ ರಾಜ್ಯವನ್ನು ಮರಳಿ ಪಡೆದ ಎನ್ನುವದಾಗಿ ಪುರಾಣಗಳಲ್ಲಿ ವಿವರಣೆಯಿದೆ.

ಭಗವದ್ಗೀತೆಯಲ್ಲಿ ಗೀತಾಚಾರ್ಯ ಮಾಸಗಳಲ್ಲಿ ಮಾರ್ಗಶೀರ್ಷ ಮಾಸ ತನಗೆ ಶ್ರೇಷ್ಠವೆಂದು ಹೇಳುತ್ತಾನೆ. ಆದರೆ ಪುರಾಣಗಳಿಗೆ ಬರುವಾಗ ದೀಪಾವಳಿಯ ಪ್ರತಿಪದೆಯಿಂದ ಆರಂಭವಾಗುವ ಕಾರ್ತಿಕಮಾಸವು ಮಾಸಗಳಲ್ಲೇ ಶ್ರೇಷ್ಠವೆನ್ನುವ ವಿವರಣೆಗಳಿವೆ. ಸ್ಕಂದ ಪುರಾಣದಲ್ಲಿ ನ ಕಾರ್ತೀಕಸಮೋ ಮಾಸೋ ನ ಕಾಶೀ ಸದೃಶೀ ಪುರಿ ಕಾರ್ತೀಕಕ್ಕೆ ಸಮನಾದ ಮಾಸವಿಲ್ಲ, ಕಾಶಿ ಸಮನಾದ ಪುರಿಯಿಲ್ಲ ಎಂದು ಈ ಮಾಸವನ್ನು ಹೊಗಳಿದ್ದಾರೆ. ಬ್ರಹ್ಮನೇ ಮಾಸಗಳಲ್ಲಿ ಕಾರ್ತೀಕ ಮಾಸವು ಶ್ರೇಷ್ಠವಾದುದು, ದೇವತೆಗಳಲ್ಲಿ ಮಧುಸೂದನನು ಶ್ರೇಷ್ಠ, ತೀರ್ಥಗಳಲ್ಲಿ ನಾರಾಯಣನೆನ್ನುವ ತೀರ್ಥಶ್ರೇಷ್ಠವೆಂದು ವರ್ಣಿಸಿದ್ದಾನೆ.

ಬೆಳಗುವ ಸ್ವಭಾವ ಜ್ಯೋತಿಯದು, ಸುಡುವ ಗುಣ ಕಿಚ್ಚಿನದು. ಸಂಸ್ಕರಿಸಿ ಕುಂಡದಲ್ಲಿ ಹೋಮಿಸಿದರೆ ಅದು ಯಜ್ಞ. ಸ್ವಂಚ್ಛಂದವಾಗಿ ಹರಿಯಬಿಟ್ಟರೆ ಅದೇ ಕಾಡ್ಗಿಚ್ಚು. ಕೊನೆಯದಾಗಿ ದೀಪಾವಳಿ ಹಬ್ಬದಂದು ಎಣ್ಣೆ ಹಚ್ಚಿ ಸ್ನಾನ ಮಾಡುವ ಹಿನ್ನೆಲೆಯನ್ನು ಗಮನಿಸಿ:

ತೈಲೇ ಲಕ್ಷ್ಮೀರ್ಜಲೇ ಗಂಗಾ ದೀಪಾವಲ್ಯಾಶ್ಚತುರ್ದಶೀಮ್ ।
ಪ್ರಾತಃಕಾಲೇ ತು ಯಃ ಕುರ್ಯಾತ್ ಯಮಲೋಕಮ್ ನ ಪಶ್ಯತಿ ।।

ದೀಪಾವಳಿಯ ಚತುರ್ದಶಿಯ ಮುಂಜಾನೆ ಲಕ್ಷ್ಮೀ ತೈಲದಲ್ಲಿ ನೆಲೆಸಿರುತ್ತಾಳೆ.ಮತ್ತು ಗಂಗಾ ನೀರಿನಲ್ಲಿ ನೆಲೆಸಿರುತ್ತಾರೆ. ಯಾರು ತೈಲ ಅಭ್ಯಂಜನಮಾಡಿ ಸ್ನಾನ ಮಾಡುತ್ತಾರೋ ಅವರು ಯಮಲೋಕಕ್ಕೆ ಹೋಗುವುದಿಲ್ಲ.

ಯಮಲೋಕದ ವಿಷಯ ಹೇಗೂ ಇರಲಿ. ಅಭ್ಯಂಜನ ಮಾಡಿ ದೀಪ ಬೆಳಗಿ ಜಗದ ತಮವನ್ನು ಕಳೆಯಲು ಮುಂದಾಗೋಣ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಸೃಷ್ಟಿ ಸ್ಥಿತಿ ಲಯಕಾರಿಣಿಯಾದ ಜಗನ್ಮಾತೆಯ ಸ್ವರೂಪ ವೈಭವ: ನವರಾತ್ರಿ

Exit mobile version