Site icon Vistara News

ಧವಳ ಧಾರಿಣಿ ಅಂಕಣ: ಗಂಧವತಿಗೆ ಸಿರಿಗಂಧಲೇಪನನ ಆಗಮನ

putrakameshti yaga

ರಾಮಾವತಾರ ಸಾಕಾರಗೊಂಡ ವೇದಿಕೆ: ಅಶ್ವಮೇಧ ಮತ್ತು ಪುತ್ರಕಾಮೇಷ್ಟಿ

ಹಿಂದಿನ ಸಂಚಿಕೆಯಲ್ಲಿ ದೇವತೆಗಳು ತಮ್ಮ ಅಸ್ತಿತ್ವಕ್ಕಾಗಿ ನಡೆಸಿದ ರಾಮಾವತಾರದ ಪೀಠಿಕೆಯನ್ನು ಗಮನಿಸಿದೆವು. ಅದರ ಮುಂದಿನ ಭಾಗ.

ಅಥ ಸಂವತ್ಸರೇ ಪೂರ್ಣೇ ತಸ್ಮಿನ್ಪ್ರಾಪ್ತೇ ತುರಙ್ಗಮೇ.
ಸರಯ್ವಾಶ್ಚೋತ್ತರೇ ತೀರೇ ರಾಜ್ಞೋ ಯಜ್ಞೋಭ್ಯವರ್ತತ৷৷ಬಾ.14.1৷৷

ಸಾಂಗ್ರಹಣೇಷ್ಟಿಯನ್ನು ಮಾಡಿ, ಅಶ್ವವಿಮೋಚನೆಯಾದ ನಂತರ ಒಂದು ವರ್ಷವು ಪೂರ್ಣವಾಯಿತು. ಸರಯೂ ನದಿಯ ಉತ್ತರತೀರದಲ್ಲಿ ರಾಜನು ಯಜ್ಞವನ್ನು ಆರಂಭಿಸಿದನು.

ಭೂಲೋಕದಲ್ಲಿ ಅಸ್ತಿತ್ವಕ್ಕಾಗಿ ನಡೆದ ಇನ್ನೊಂದು ಸಭೆ:-

ದೇವತೆಗಳ ಅಸ್ತಿತ್ವಕ್ಕಾಗಿ ಪುರುಷೋತ್ತಮ ಅವತರಣ ಮಾಡಬೇಕಾದ ಸುಕೃತದ ವಿಷಯವನ್ನು ಹಿಂದಿನ ಸಂಚಿಕೆಯಲ್ಲಿ ಗಮನಿಸಿದೆವು. ಈಗ ಸರಯೂ ನದಿಯ ಉತ್ತರತೀರದಲ್ಲಿ ನಡೆದ ಸಭೆಯೂ ಸಹ ದಶರಥನ ವಂಶದ ಅಸ್ತಿತ್ವವನ್ನು ಸ್ಥಾಪಿಸಲು ನಡೆದುದಾಗಿತ್ತು. ಇದು ಒಂದು ವರುಷ ತನಕ ನಡೆದ ಯಾಗವೇದಿ. ದೇವತೆಗಳ ಒಂದು ನ ಮಾನವರ ಒಂದು ವರ್ಷ. ಅಲ್ಲಿ ದೇವತೆಗಳು ಸಭೆ ಸೇರಿದ ದಿನವೇ ಇಲ್ಲಿ ದಶರಥ ತನ್ನ ವಂಶಾಭಿವೃದ್ಧಿಯ ಸಲುವಾಗಿ ಅಶ್ವಮೇಧ ಯಾಗವನ್ನು ಪ್ರಾಂಭಿಸಿದ್ದನು. ಮಕ್ಕಳಿಲ್ಲದ ದಶರಥನಿಗೆ ತನ್ನ ವಂಶದ ಅಸ್ತಿತ್ವವನ್ನು ಮುಂದುವರೆಸಿಕೊಂಡು ಹೋಗುವ ಚಿಂತೆ ಕಾಡುತ್ತಿತ್ತು. ಸೂರ್ಯವಂಶದ ದಶರಥ ಓರ್ವ ಮಹಾನ್ ದೊರೆ. ಮುಂದೇನಾಗಬಹುದೆನ್ನುವುದನ್ನು ಅರಿತು ಅದಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸುವ ದೀರ್ಘದರ್ಶಿ. ಪರಾಕ್ರಮದಲ್ಲಿ ಆತ ಹತ್ತುಸಾವಿರ ಮಹಾರಥಿಗಳೊಡನೆ ಏಕಕಾಲದಲ್ಲಿ ಯುದ್ಧಮಾಡುವಂತಹ ಅತಿರಥನಾಗಿದ್ದ. ದೇವತೆಗಳೂ ಸಹ ಈತನ ನೆರವನ್ನು ಯಾಚಿಸುತ್ತಿದ್ದರು. ದಂಡಕಾರಣ್ಯದಲ್ಲಿ ಈತ ಶಂಬರಾಸುರನನ್ನು ನಿಗ್ರಹಿಸಿದ ವಿಷಯ ಬಹು ಪ್ರಸಿದ್ಧವಾದುದು. ಯುದ್ಧಾಕಾಂಕ್ಷಿ ಎನ್ನುವುದಕ್ಕಿಂತ ಆತ ಪ್ರಜೆಗಳ ಹಿತರಕ್ಷಣೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ. ವಿಜಯನಗರದ ಲಕ್ಷ್ಮೀಧರಮಾತ್ಯನ ಶಾಸನದಲ್ಲಿ ಬರುವ ಮಾತು ಹೀಗಿದೆ.

ಕೆರೆಯಂ ಕಟ್ಟಿಸು, ಬಾವಿಯಂ ಸವೆಸು, ದೇವಾಗಾರಮಂ ಮಾಡಿಸ
ಜ್ಜರೆಯೊಳ್ ಸಿಲ್ಕಿದನಾಥರಂ ಬಿಡಿಸು, ಮಿತ್ರರ್ಗಿಂಬುಕೆಯ್ ನಂಬಿದ
ರ್ಗೆರೆವಟ್ಟಾಗಿರು, ಶಿಷ್ಟರಂ ಪೊರೆ ಎನುತ್ತಿಂತೆಲ್ಲಮಂ ಪಿಂತೆ ತಾ
ನೆರೆದಳ್ ಪಾಲೆರೆವೆಂದು ತೊಟ್ಟು ಕಿವಿಯೊಳ್ ಲಕ್ಷ್ಮೀಧರಾಮಾತ್ಯನಾ

‘ಕೆರೆಯನ್ನು ಕಟ್ಟಿಸು, ಬಾವಿಯನ್ನು ತೋಡಿಸು, ದೇವಾಲಯಗಳನ್ನು ನಿರ್ಮಿಸು, ಬಂಧನಕ್ಕೆ ಸಿಕ್ಕ ಅನಾಥರನ್ನು ಬಿಡಿಸು, ಸ್ನೇಹಿತರಿಗೆ ಸಹಾಯಕನಾಗು, ನಂಬಿದವರಿಗೆ ಆಶ್ರಯದಾತನಾಗು, ಸತ್ಪುಷರನ್ನು ರಕ್ಷಿಸು.’ ಲಕ್ಷ್ಮೀಧರಮಾತ್ಯನ ತಾಯಿ ಹಾಲನು ಕುಡಿಸುವಾಗ ಅವನಿಗೆ ಕಿವಿಯಲ್ಲಿ ಹೇಳಿದ ಮಾತುಗಳಿವು:

ಧಶರಥನ ಆಡಳಿತ ಯಥಾರ್ಥವಾಗಿ ಹೀಗೆ ಇತ್ತು. ಓರ್ವ ಯೋಧನಾಗಿ ಆತ ಎಷ್ಟು ಪರಾಕ್ರಮಿಯೋ ಅಷ್ಟೇ ಸಮಾಜಸುಧಾರಕನೂ ಆಗಿದ್ದನು. ಆತ ಸಂಯಮಿಯಾಗಿದ್ದನು. ಲೋಭಿಯಾಗಿರಲಿಲ್ಲ. ದಶರಥ ಎಂದರೆ ಹತ್ತು ಇಂದ್ರಿಯಗಳನ್ನು ತನ್ನ ತನ್ನ ನಿಯಂತ್ರಣದಲ್ಲಿ ಇರಿಸಿಕೊಂಡು ಪರಮಾತ್ಮನ ತತ್ತ್ವವನ್ನು ದೇಹದ ತತ್ತ್ವವಾಗಿರಿಸಿಕೊಂಡವ ಎನ್ನುವ ಅರ್ಥವನ್ನು ವ್ಯಾಖ್ಯಾನಕಾರರು ಮಾಡುತ್ತಾರೆ. ತನ್ನ ಪ್ರಜೆಗಳನ್ನು ಆತ ನಿತ್ಯಸಂತುಷ್ಠರಾಗಿ ಇರಿಸಿದ್ದನು. ಶಥಪಥಬ್ರಾಹ್ಮಣದಲ್ಲಿ ರಾಜನಾದವ ಸಿಂಹಾಸನವನ್ನು ಏರಬೇಕಾದಾಗ ತನ್ನ ಆಡಳಿತ ಹೇಗಿರುವುದೆನ್ನುವುದನ್ನು ಹೇಳುವುದು :-

ಮನೋ ಮೇ ತರ್ಪಯತ ವಾಚಂ ಮೇ ತರ್ಪಯತ ಪ್ರಾಣಂ ಮೇ ತರ್ಪಯತ ಚಕ್ಷುರ್ಮೇ ತರ್ಪಯತ
ಶ್ರೋತ್ರಂ ಮೇ ತರ್ಪಯತಾತ್ಮಾನಂ ಮೇ ತರ್ಪಯತ ಪ್ರಜಾಂ ಮೇ ತರ್ಪಯತ
ಪಶೂನ್ ಮೇ ತರ್ಪಯತ ಗಣಾನ್ ಮೇ ತರ್ಪಯತ ಗಣಾ ಮೇ ಮಾ ವಿತೃಷನ್ (ಯ 6.31)

ನನ್ನ ವಾಕ್ ಮನಸ್ಸು ಪ್ರಾಣ, ಕಣ್ಣು, ಕಿವಿಗಳು ಪ್ರಜೆಗಳನ್ನು ತೃಪ್ತಿಪಡಿಸುವ ಕಾರ್ಯದಲ್ಲಿ ಸಂತೋಷವನ್ನು ಪಡೆಯಲಿ. ನನ್ನ ಪ್ರಜೆಗಳು ಯಾವಾಗಲೂ ತೃಪ್ತಿಯನ್ನು ಹೊಂದಲಿ, ನನ್ನ ಗೋವು ಆನೆ ಕುದುರೆಗಳನ್ನು ಯಾವತ್ತಿಗೂ ತೃಪ್ತಿ ಪಡಿಸುವ ಸಂತೋಷವು ನನ್ನದಾಗಲಿ, ನನ್ನ ರಾಜಸೇವಕರು, ಪ್ರಜೆಗಳು, ರಾಜ್ಯಾಧಿಕಾರಿಗಳು ಯಾವತ್ತೂ ಬಾಯಾರಿಕೆ ಹಸಿವು ಮುಂತಾದ ದುಃಖಗಳಿಂದ ಪೀಡಿತರಾಗದಿರಲಿ. (ಶತಪಥ ಬ್ರಾಹ್ಮಣದಲ್ಲಿನ ವ್ಯಾಖ್ಯಾನದ ಸಾರ)

ಇದು ಅಯೋಧ್ಯೆಯನ್ನು ಆಳಿದ ಎಲ್ಲಾ ರಾಜರುಗಳ ನಡತೆಯಾಗಿತ್ತು. ದಶರಥ ಅದಕ್ಕೆ ಹೊರತಾಗಿರಲಿಲ್ಲ. ಇಷ್ಟೆಲ್ಲಾ ಇದ್ದು ಆತನಿಗಿರುವ ಒಂದೇ ಒಂದು ಕೊರಗೆಂದರೆ ತನಗೆ ಮಕ್ಕಳಾಗಿಲ್ಲವೆನ್ನುವುದು. ಪ್ರಜೋತ್ಪತ್ತಿಯೇ ಗ್ರಹಸ್ಥಜೀವನದ ನಿಜವಾದ ಉದ್ಧೇಶ. ಅದು ಐಹಿಕ ಸುಖಕ್ಕಾಗಿ ಅಲ್ಲ; ತಾನೇ ತನ್ನ ಮಡದಿಯ ಮೂಲಕ ಮತ್ತು ಜನಿಸಿ ಚಿರಂಜೀವತ್ವವನ್ನು ಪಡೆಯುವುದು. ಐಹಿಕದಲ್ಲಿ ತಮ್ಮ ಕುಲದ ಪರಂಪರೆಯನ್ನು ಕಾಪಿಟ್ಟುಕೊಂಡವ ಪಾರಮಾರ್ಥದಲ್ಲಿರುವ ತನ್ನ ಪಿತೃಗಳಿಗೆ ಸಂಪೂರ್ಣ ತೃಪ್ತಿಯನ್ನುಂಟುಮಾಡುತ್ತಾನೆ. ಮಕ್ಕಳಾಗದಿದ್ದರೆ ಪ್ರಜಾಪಾಲನಾ ಧರ್ಮದ ಮುಂದುವರಿಯುವಿಕೆಗೆ ಚ್ಯುತಿಯುಂಟಾಗುತ್ತದೆ. ಅದಕ್ಕೆ ಕಾರಣನಾದ ರಾಜನಿಗೆ ದೋಷ ಒದಗುತ್ತದೆ. ಆ ಕಾರಣಕ್ಕಾಗಿ ಸಂತಾನಕ್ಕಾಗಿ ಏನು ಮಾಡಬೇಕೆಂದು ಕೇಳಿಕೊಳ್ಳಲು, ಕುಲಪುರೋಹಿತರಾದ ವಶಿಷ್ಠ ಮತ್ತು ವಾಮದೇವರು ಆತನಿಗೆ ದೈವಾನುಗ್ರಹದಿಂದ ಮಕ್ಕಳನ್ನು ಪಡೆಯಬಹುದು. ಅದಕ್ಕೆ ಅಶ್ವಮೇಧ ಯಜ್ಞ ಸೂಕ್ತವೆನ್ನುವ ಮಾತುಗಳನ್ನು ಹೇಳಿದರು. ಅಶ್ವಮೇಧ ಯಜ್ಞವೆಂದರೆ ಯಜ್ಞಗಳಲ್ಲಿಯೇ ಅತ್ಯಂತ ಶ್ರೇಷ್ಟವಾದುದು. ಬ್ರಹ್ಮಹತ್ಯಾ ಸಹಿತವಾಗಿ ಸರ್ವ ಪಾಪಗಳನ್ನೂ (ಸರ್ವಂ ಪಾಪ್ಮಾನಂ ತರತಿ ತರತಿ ಬ್ರಹ್ಮಹತ್ಯಾಂ ಯೋsಶ್ವಮೇಧೇನ ಯಜೇತೇII) ಎನ್ನುವ ಮಾತಿದೆ. ನೇರವಾಗಿ ಅದು ಸಾಮ್ರಾಜ್ಯಕ್ಕೆ ಸಂಬಂಧಪಟ್ಟಿರುವ ಯಜ್ಞವಲ್ಲ. ಪುರುಷಬಲ ಹೆಚ್ಚಲು ವಾಜೀಕರಣದ ವಿದ್ಯೆಯೊಂದಿತ್ತು. ದಶರಥನಿಗೆ ಅದರ ಅಗತ್ಯವಿತ್ತು. ಸಂತಾನಕ್ಕಾಗಿ ನಡೆಸುವ ಯಜ್ಞವಾಗಿರುವುದರಿಂದ ಅದಕ್ಕೆ ಋಷ್ಯಶೃಂಗನೇ ಯೋಗ್ಯನೆಂದು ಆತನ ಮಂತ್ರಿ ಸುಮಂತ್ರ ಈ ಯಾಗದ ಬ್ರಹ್ಮತ್ವಕ್ಕೆ ಅವನನ್ನು ಕರೆತರಲು ಸಲಹೆ ನೀಡುತ್ತಾನೆ.

ನೆತ್ತಿಯ ಮೇಲೆ ಜಿಂಕೆಯ ಕೋಡುಳ್ಳವ ಋಷ್ಯಶೃಂಗ. ಆತ ಇದ್ದಲ್ಲಿ ಮಳೆಯಾಗುತ್ತದೆ. ಭೂಮಿಯಲ್ಲಿ ಎಲ್ಲ ಧಾತು ಇದ್ದರೆ ಸಾಲದು ಅದಕ್ಕೆ ಚೈತನ್ಯ ತುಂಬುವ ಜೀವಜಲ ಬೇಕು. ಆಗ ಬಿದ್ದ ಬೀಜ ಫಲಬರುತ್ತದೆ. ಋಷ್ಯಶೃಂಗನಿದ್ದಲ್ಲಿ ಮಳೆ ಬರುತ್ತದೆ ಎನ್ನುವುದು ಪರ್ಯಾಯವಾಗಿ ಇಳೆಗೆ ಫಲವತಿಯಾಗುವ ಕಾಲ ಎಂತ ಅರ್ಥ. ಈ ಅಪರೂಪದ ವಿದ್ಯೆ ಋಷ್ಯಶೃಂಗನಿಗೆ ತಿಳಿದಿದೆ. ಹಾಗಾಗಿ ಅಶ್ವಮೇಧ ಯಾಗವೆಲ್ಲ ಮುಗಿದಮೇಲೆ ಬಂದ ಋತ್ವಿಜರೆಲ್ಲ ಧಶರಥನಿಗೆ ಮಕ್ಕಳಾಗಲಿ ಎಂದು ಆಶೀರ್ವದಿಸಿ ಹೋದರು. ಅದಾಗಲೇ ವೃದ್ಧಾಪ್ಯಕ್ಕೆ ಸಮೀಪಿಸಿದ ಧಶರಥನಿಗೆ ಹೊಸ ಆಸೆ ಚಿಗುರಿತು. ಋಷ್ಯಶೃಂಗನ ಹತ್ತಿರ ತನ್ನ ಕುಲವರ್ಧನೆಯಾಗುವಂತೆ ಅನುಗ್ರಹಿಸಿ ಎಂದು ಕೇಳಿದ. ಅಶ್ವಮೇಧವೆನ್ನುವುದು ದಶರಥನಲ್ಲಿ ಹಾಗೂ ಅವನ ರಾಣಿಯರಲ್ಲಿ ಹೊಸ ಉತ್ಸಾಹವನ್ನು ತುಂಬಿತ್ತು. ಕಾಲ ಪಕ್ವವಾಗಿದೆ ಎಂದು ಆಲೋಚಿಸಿದ ಋಷ್ಯಶೃಂಗ, ಪುತ್ರರಾಗಲು ಅಶ್ವಮೇಧ ಸಾಕಾಗುವುದಿಲ್ಲ, ಪುತ್ರಕಾಮೇಷ್ಟಿ ಎನ್ನುವ ಯಾಗವನ್ನು ಮಾಡಬೇಕೆಂದು ಹೇಳಿದ. ಪುತ್ರಕಾಮೇಷ್ಟಿಯಾಗ ಅಥರ್ವವೇದಕ್ಕೆ ಸಂಬಂಧಿಸಿದ್ದು ಹಾಗೂ ಇದನ್ನು ಕಲ್ಪಸೂತ್ರವಿಧಾನದಿಂದ ಮಾಡುತ್ತೇನೆ ಎಂದ.

ಅಥರ್ವವೇದವೆನ್ನುವುದು ಒಂದು ಕೀಳು ಸಂಸ್ಕಾರವಲ್ಲ. ಇದು ರಾಕ್ಷಸರ ವೇದ, ಮಾಯಾ ತಂತ್ರ, ಮಾಟ, ಇನ್ನೊಬ್ಬರ ಮನೆಯನ್ನು ಹಾಳುಮಾಡಲು ಬಳಸುವ ವೇದ ಎನ್ನುವ ನಂಬಿಕೆ ಸಾಮಾನ್ಯರಲ್ಲಿದೆ. ಅಥರ್ವವೂ ಸಹ ಅಪೌರುಷೇಯ ಮತ್ತು ನಿಖರವಾದ ವೇದವೂ ಹೌದು. ಅಥರ್ವಕ್ಕೆ ಬ್ರಹ್ಮವೇದ, ಅಂಗಿರೋವೇದ, ಛಂದೋವೇದ ಎನ್ನುವ ಹೆಸರೂ ಇದೆ. ಥರ್ವಣವೆಂದರೆ ಚರಿಸುವಂತಹದ್ದು. ಅಥರ್ವವೆಂದರೆ ಅದರ ವಿರುದ್ಧವಾದದ್ದು. ಯಾವ ಮಂತ್ರಗಳಿಂದ ಚಂಚಲತೆ ದೂರವಾಗಿ ಸ್ಥಿರತೆ, ನಿಶ್ಚಲತೆ ಲಭಿಸುವುದೋ ಅದನ್ನು ಅಥರ್ವ ಮಂತ್ರಗಳೆನ್ನುತ್ತಾರೆ. ಋಗ್ವೇದ “ಮೊಟ್ಟಮೊದಲು ಅಥರ್ವದಿಂದ ಅಗ್ನಿ ಬೆಳಗಿತು (ಯಜ್ಞೈರಥರ್ವಾ ಪ್ರಥಮಃ ಪಥಸ್ತತೆ) ಎನ್ನುತ್ತದೆ. ಯಜುರ್ವೇದವಂತೂ ಅಥರ್ವವೇದೀಯನ ಸ್ಥಾನ ಪ್ರಥಮ ಶ್ರೇಣಿಯದು ಎನ್ನುತ್ತದೆ (ಅಥರ್ವಾ ತ್ವಾ ಪ್ರಥಮೋ ನಿರಮಂಥತಾ). ಇಲ್ಲಿ ಅನಿಶ್ಚಿತತವಾದ ಧಶರಥನ ಬದುಕಿನಲ್ಲಿ ಒಂದು ಸ್ಥಿರತೆ ಬೇಕಾಗಿದೆ. ರಾಜನಾದವ ತನ್ನ ಮುಂದಿನ ಅಧಿಕಾರಿಯನ್ನೂ ಸಹ ಸಮರ್ಥರಾದವರಿಗೇ ಕೊಟ್ಟು ಹೋಗಬೇಕೆನ್ನುತ್ತದೆ. ಶೃತಿಗಳು. ತನ್ನ ಮಕ್ಕಳು ಅಪ್ರಯೋಜಕರು ಎಂದು ತಿಳಿದ ಶಶಾದ, ದಂಡಕ, ಅಸಮಂಜಸ ಇವರನ್ನೆಲ್ಲ ಅವರ ತಂದೆಯಂದಿರೆ ರಾಜ್ಯದಿಂದ ಓಡಿಸಿದ್ದರು. ಹಾಗಾಗಿ ಮಕ್ಕಳಾಗುವ ಉದ್ಧೇಶಕ್ಕಾಗಿ ಋಷ್ಯಶೃಂಗ ವಿಧಾನದಿಂದ ಪುತ್ರಕಾಮೇಷ್ಟಿಯಾಗವನ್ನು ಪ್ರಾರಂಭಿಸಿದನು.

ಅಶ್ವಮೇಧ ಮತ್ತು ಪುತ್ರಕಾಮೇಷ್ಟಿ ಈ ಎರಡೂ ಯಜ್ಞ ರಾಮಾವತಾರಕ್ಕೆ ಮುನ್ನುಡಿಯನ್ನು ಬರೆದಿದ್ದವು. ಅಶ್ವಮೇಧವೆನ್ನುವುದು ರಾಜನ ಪರಾಕ್ರಮದ ಸಂಕೇತವೆನ್ನುವುದಕ್ಕಿಂತ ಅದು ತ್ಯಾಗದ ಸಂಕೇತವೂ ಹೌದು. ಮೊದಲು ಯಜ್ಞದ ಕುದೆರೆಯನ್ನು ಗುರುತಿಸಿ ಅದನ್ನು ಸ್ವೇಚ್ಛೆಯಿಂದ ಒಂದು ವರ್ಷದ ತನಕ ಬಿಡಲಾಗುತ್ತದೆ. ಈ ಒಂದು ವರ್ಷದ ತನಕ ರಾಜ ತನ್ನ ಪತ್ನಿಯರೊಡಗೂಡಿ ವೃತಾಚರಣೆಯಲ್ಲಿ ತೊಡಗಬೇಕಾಗುತ್ತದೆ. ಕ್ಷತ್ರಿಯರಿದ್ದಲ್ಲಿ ಅಗ್ನಿ ಬರುವುದಿಲ್ಲ. ಹಾಗಾಗಿ ದೀಕ್ಷಿತನಾಗುವ ಮೊದಲು ರಾಜ ತನ್ನ ಕ್ಷತ್ರಿಯತ್ವವನ್ನು ಇಂದ್ರನಲ್ಲಿಯೂ ತೇಜಸ್ಸನ್ನು ಸೋಮನಲ್ಲಿಯೂ ನ್ಯಾಸವಾಗಿಡುತ್ತಾನೆ. ಆತನಲ್ಲಿ ಕೇವಲ ದ್ವಿಜತ್ವ ಮಾತ್ರ ಇರುತ್ತದೆ. ಯಜ್ಞ ಪೂರ್ತಿಯಾದ ನಂತರ ತನ್ನ ಕ್ಷತ್ರಿಯತ್ವವನ್ನು ಮತ್ತು ತೇಜಸ್ಸನ್ನೂ ಮರಳಿ ಆಯಾ ದೇವತೆಗಳಿಂದ ಪಡೆಯುತ್ತಾನೆ. ಹಿಂದೆ ಯಜ್ಞ ದೀಕ್ಷಿತನಾಗಿದ್ದ ದಶರಥನ ಪೂರ್ವಜ ಅನರಣ್ಯನನ್ನು ರಾವಣ ಏಕಾಏಕಿ ಯುದ್ಧಮಾಡಿ ಕೊಂದಿದ್ದ. ಅದೇ ರೀತಿ ಯಜ್ಞ ದೀಕ್ಷಾಬದ್ಧರಾಗಿರುವ ಋತ್ವಿಜರಿಗೂ ನಿಯಮಗಳುಂಟು. ಅವರ ಓಡಾಟ, ಆಹಾರ ನಿದ್ರಾ, ಆತ್ಮ ಸಂಯಮ ಇವುಗಳಿಗೆಲ್ಲಾ ಕಠಿಣವಾದ ನಿಯಮವುಂಟು. ಮುಖ್ಯವಾಗಿ ಧನದಾಸೆಗಾಗಿ ಅಂತವರು ಯಜ್ಞದಲ್ಲಿ ಋತ್ವಿಜರಾಗಕೂಡದು. ಯುಕ್ತಾ ಯುಕ್ತವಾದದ್ದನ್ನೇ ದಾನವಾಗಿ ಪಡೆಯಬೇಕು. ಯಜ್ಞವನ್ನು ಪೂರೈಸಿದ ಮೇಲೆ ರಾಜನಾದವ ತನ್ನದೆನ್ನುವುದನ್ನು ಏನನ್ನೂ ಇಟ್ಟುಕೊಳ್ಳುವ ಹಾಗಿಲ್ಲ. ಯಜ್ಞಪೂರ್ತಿಯಾದಾಗ ಕೊಡುವ ದಕ್ಷಿಣೆಯೂ ಅನ್ಯಾದೃಶ್ಯವಾದುದು. ತನ್ನ ಪತ್ನಿಯರನ್ನೂ ಸಹ ಬ್ರಹ್ಮ ಹೋತೃ, ಉದ್ಗಾತೃ, ಅಧ್ವರ್ಯುವಿಗೇ ದಾನವಾಗಿ ಕೊಡಬೇಕು. ಜೊತೆಗೆ ತನ್ನ ರಾಜ್ಯವನ್ನು ನಾಲ್ಕು ವಿಭಾಗವನ್ನಾಗಿ ಮಾಡಿ ಪೂರ್ವ ದಿಕ್ಕಿನ ರಾಜ್ಯವನ್ನು ಹೋತೃವಿಗೂ, ಪಶ್ಚಿಮ ದಿಕ್ಕಿನ ರಾಜ್ಯವನ್ನು ಅಧ್ವರ್ಯುವಿಗೂ, ದಕ್ಷಿಣ ದಿಕ್ಕಿನ ರಾಜ್ಯವನ್ನು ಬ್ರಹ್ಮನಿಗೂ, ಉತ್ತರದಿಕ್ಕಿನ ರಾಜ್ಯವನ್ನು ಉದ್ಗಾತೃವಿಗೂ ದಾನವನ್ನಾಗಿ ಕೊಡಬೇಕು.

ಇದರ ಅರ್ಥ ಗಹನವಾಗಿದೆ. ಇಲ್ಲಿ ದಾನ ಕೊಡುವವ ಮತ್ತು ಅದನ್ನು ಪರಿಗ್ರಹಿಸುವ ಇಬ್ಬರ ಸತ್ವಪರೀಕ್ಷೆಯಿದೆ. ಎಲ್ಲವೂ ಲೋಕಕಲ್ಯಾಣಕ್ಕಾಗಿ ಇರುವ ಕಾರಣ ಯಾವುದರಮೇಲೂ ತನ್ನ ಅಧಿಕಾರವಿಲ್ಲ ಎಂದು ರಾಜನ ಮನೋಭಾವ ಇರಬೇಕಾದುದು. ಒಂದು ಅರ್ಥದಲ್ಲಿ ಆತನ ತ್ಯಾಗ ಬುದ್ಧಿಯನ್ನು ಒರೆಗೆ ಹಚ್ಚುವಂತಹುದು. ಜೊತೆಗೆ ಋತ್ವಿಜರ ಸತ್ವ ಪರೀಕ್ಷೆಯ ಕಾಲವೂ ಹೌದು. ರಾಜ ಇವುಗಳನ್ನೆಲ್ಲವನ್ನೂ ಕೊಟ್ಟತಕ್ಷಣ ಅವರೆಲ್ಲರೂ “ಮಹಾರಾಜಾ, ಈ ಭೂಮಿಯನ್ನು ಆಳಲು ನೀನೊಬ್ಬನೇ ಸಮರ್ಥ. ಪರನಾರಿ ಮತ್ತು ಪರರ ವಸ್ತುಗಳ ಮೇಲೆ ತಮಗೆ ಅಧಿಕಾರವೇ ಇಲ್ಲ. ಈ ಕಾರಣ ಈ ಎಲ್ಲವನ್ನೂ ನೀನು ಪುನಃ ತೆಗೆದುಕೊಂಡು ಧರ್ಮಮಾರ್ಗದಲ್ಲಿ ಅನುಭವಿಸಬೇಕು. ಅಧ್ಯಯನ ಅಧ್ಯಾಪನಗಳಲ್ಲಿ ನಿರತರಾಗಿರುವ ತಮಗೆ ಜೀವನ ನಿರ್ವಹಣೆಗೆ ಎಷ್ಟು ಬೇಕೋ ಅಷ್ಟು ಗೋ ಮತ್ತು ಸುವರ್ಣವನ್ನು ನೀಡಿದರೆ ಸಾಕು ಎಂದು ಹೇಳಬೇಕು. ಇದನ್ನು ಪ್ರತ್ಯಾಮ್ನಾಯ ಎನ್ನುತ್ತಾರೆ. ಈ ಹಿಂದೆ ಪರಶುರಾಮ ಸಮಗ್ರ ಭೂಮಿಯನ್ನು ಗೆದ್ದು ಅದನ್ನು ಕಶ್ಯಪರಿಗೆ ದಾನವಾಗಿ ಕೊಟ್ಟಾಗ ಅವರು ಅದನ್ನು ಪುನಃ ಕ್ಷತ್ರಿಯರಿಗೇ ಕೊಟ್ಟು ಮತ್ತೆ ಭೂಮಂಡಳದಲ್ಲಿ ರಾಜರಾಳುವಿಕೆಯನ್ನು ಪ್ರಾರಂಭಿಸಿದ್ದರು. ವೇದಗಳಲ್ಲಿ ಇರುವ ಎಲ್ಲವನ್ನೂ ಇದ್ದಂತೆ ಅರ್ಥಮಾಡಲು ಆಗುವುದಿಲ್ಲ. ಅದಕ್ಕೆಲ್ಲ ಗೂಢಾರ್ಥವಿರುತ್ತದೆ. ದೇವತೆಗಳು ಪರೋಕ್ಷ ಪ್ರಿಯರು. ಮನುಷ್ಯರಿಗೆ ಮಾದುಷರು ಎನ್ನುತ್ತಾರೆ. ಇಲ್ಲಿ ರಾಜನ ತ್ಯಾಗ ಮತ್ತು ಋತ್ವಿಜರ ನಿಷ್ಕಲಂಕ ಮನೋಭಾವ ಎರಡೂ ನಿಕಷಕ್ಕೆ ಒಡ್ಡಲ್ಪಡುತ್ತದೆ. ಅಶ್ವವೆಂದರೆ ಮನಸ್ಸು. ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಕ್ರಿಯೆ ಅದು. ಕಷ್ಮಲವನ್ನೇ ಅರಿಯದವ ಋಷ್ಯಶೃಂಗ; ತ್ಯಾಗದ ಮಹೋನ್ನತೆಯನ್ನು ಪ್ರದರ್ಶಿದ ಅತಿರಥನಾದ ದಶರಥ. ಹಾಗಾಗಿ ಆತ್ಮಸಂಯಮವನ್ನು, ಲೋಕಹಿತವನ್ನು ಬಯಸಿದ ಈ ಸಭೆ ಅದುತನಕ ಭೂಲೋಕದಲ್ಲಿ ನಡೆದ ಮಹತ್ವದ ಸಭೆಯೆನಿಸಿ ದೇವತೆಗಳ ಗಮನವನ್ನು ಸೆಳೆಯುವಲ್ಲಿ ಸಫಲವಾಯಿತು.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ರಾಮಾವತಾರಕ್ಕೊಂದು ಪೀಠಿಕಾ ಪ್ರಕರಣ

ಸ್ವರ್ಗದಲ್ಲಿ ಸೇರಿದ ಸಭೆಯಲ್ಲಿ ರಾವಣನ ಸಂಹಾರಕ್ಕಾಗಿ ದೇವತೆಗಳೆಲ್ಲರ ವಿನಂತಿಯಂತೆ ಮಹಾವಿಷ್ಣು ತಾನು ಮಾನವನಾಗಿ ಜನಿಸಲು ಒಪ್ಪಿದ್ದ ಘಳಿಗೆಗೂ ಇಲ್ಲಿ ಪುತ್ರಕಾಮೇಷ್ಟಿಯಾಗದ ಸಂಕಲ್ಪಕ್ಕೂ ಸರಿಯಾಯಿತು. ಮೇಲಿನ ಸಭೆಯಲ್ಲಿ ಕುಳಿತವರು ಇಲ್ಲಿನ ಈ ಸಭೆಯನ್ನು ಗಮನಿಸಿದರು. ದಶರಥನ ಕೀರ್ತಿ ಆ ಮೊದಲೇ ದೇವತೆಗಳಿಗೂ ತ್ರಿಮೂರ್ತಿಗಳಿಗೂ ತಿಳಿದಿತ್ತು. ಯಜ್ಞವನ್ನು ಸಾಂಗವಾಗಿ ಮಾಡಿದ ದಶರರಥ ಹೇರಳವಾದ ದಾನವನ್ನು ಮಾಡುತ್ತಿದ್ದ. ಅಲ್ಲಿ ಯಾವ ಬೇಧವಿರಲಿಲ್ಲ. ಈ ಹೊತ್ತಿನಲ್ಲಿ ಬಡ ವಿಪ್ರನೋರ್ವನ ಗಮನ ದಶರಥನ ಕೈಯಲ್ಲಿರುವ ಬೆಲೆಬಾಳುವ ಕಡಗದ ಕಡೆ ಹೋಯಿತು. ಸಹಜವಾಗಿ ಅದರ ಕುರಿತು ಆಸೆಯಾಯಿತು. ಅದನ್ನುಬಾಯಿಬಿಟ್ಟು ಕೇಳುವುದರೊಳಗೆ ರಾಜ ಆ ಕಡಗವನ್ನು ತೆಗೆದು ಆ ಮುದಿವಿಪ್ರನಿಗೆ ದಾನವಾಗಿ ನೀಡಿದ. ಇದನ್ನೆಲ್ಲ ನಿರೀಕ್ಷಿಸುತ್ತಿದ್ದ ಮಹಾವಿಷ್ಣು ತನ್ನ ಅವತರಣಿಕೆಗೆ ಪ್ರಶಸ್ತವಾದ ಕ್ಷೇತ್ರವೆಂದರೆ ಅಯೋಧ್ಯೆಯ ಅರಸು ಮನೆತನವೇ ಎಂದು ಹೊಳೆಯಿತು. ಘನತೆ, ವಿವೇಕ, ಸಂಯಮ, ಸಿದ್ಧಿ, ನಿಪುಣತೆ, ಧರ್ಮಪ್ರಜ್ಞೆ ಮತ್ತು ಬೂತದಯೆ ಇವೆಲ್ಲವೂ ಮೇಳೈಸಿರುವ ಈ ಮನೆತನಕ್ಕಿಂತ ಬೇರೆ ಯಾವುದೂ ಇಲ್ಲವೆಂದು ತಿಳಿದ ಪುರುಷೋತ್ತಮ ತನ್ನನ್ನು ಧಾರಣ ಮಾಡುವ ಶಕ್ತಿ ದಶರಥನಲ್ಲಿದೆ ಎಂದವನೆ ಅಲ್ಲಿಯೇ ಅವತರಿಸಲು ಸಂಕಲ್ಪ ಮಾಡಿದ. ದೇವತೆಗಳಿಗೂ ತನ್ನೊಂದಿಗೆ ಸಹಕಾರಿಯಾಗಲು ಭಲ್ಲೂಕ, ವಾನರ ಹೀಗೆ ಬೇರೆ ಬೇರೆ ಕಡೆ ಜನಿಸುವಂತೆ ಸಲಹೆ ಕೊಟ್ಟ. ವಿಷ್ಣು ತನ್ನ ಮಹಿಮೆಯ ಎಲ್ಲ ಗುಣಗಳನ್ನು ರಸರೂಪಕ್ಕೆ ತಂದು ಪಾಯಸವನ್ನು ಮಾಡುವಂತೆ ದೇವತೆಗಳಿಗೆ ಹೇಳಿದ. ಅದರ ಫಲವೇ ಸುಕೃತವಾದ ಪಾಯಸ. ಲೋಕವನ್ನು ಕೂಗಿಸಿದ ಶಕ್ತಿ ಅಡಗಿದರೆ ಅಲ್ಲಿರುವುದು ಆನಂದ ಮಾತ್ರ. ಆ ಅನಂದವೆನ್ನುವುದು ಬ್ರಹ್ಮವೇ. ಅದೇ ರಸರೂಪದಲ್ಲಿ ಇರುವಂತಹದ್ದು. ಅಲ್ಲಿಂದ ಭೂಲೋಕಕ್ಕೆ ಇಳಿದು ಭೂಮಿಯ ಗಂಧವನ್ನು ಹೊದ್ದುಕೊಳ್ಳಲು ಬಯಸಿದ ಕ್ಷಣ.

ಮಹಾವಿಷ್ಣುವೇ ದಶರಥ ರಾಜನನ್ನು ತನ್ನ ತಂದೆಯನ್ನಾಗಿ ಮಾಡಿಕೊಳ್ಳಲು ನಿಶ್ಚಯಿಸಿದ. ಅದೇ ಭಾವವೇ ಮಧುರವಾಗಿ ಯಜ್ಞಕುಂಡದಲ್ಲಿ ದೇವನಿರ್ಮಿತ ಪಾತ್ರವನ್ನು ಕೊಡುವ ಸಲುವಾಗಿ ಅಗ್ನಿಯಲ್ಲಿ ಮಹಾಪುರುಷನೊಬ್ಬ ಪಾಯಸದ ಪಾತ್ರೆಯನ್ನು ಧರಿಸಿ ಪ್ರಕಟವಾದ. ಅಗ್ನಿಯ ತೇಜಸ್ಸನ್ನು ಮೀರಿದ ದಿವ್ಯಾಭರಣಗಳನ್ನು ಧರಿಸಿದ ದಿವ್ಯಪ್ರಭಾವಳಿಯಿಂದ ಆವೃತನಾದ ಆತ ನಗಾರಿಯಂತೆ ಕಂಠನಿನಾದದೊಂದಿಗೆ ತಾನು ಪ್ರಜಾಪತಿಯಿಂದ(ಬ್ರಹ್ಮ) ಕಳುಹಿಸಲ್ಪಟ್ಟವ ಎಂದು ಪರಿಚಯಿಸಿಕೊಂಡ. “ದೇವನಿರ್ಮಿತವಾದ ಈ ದಿವ್ಯಪಾಯಸವು ನೀನು ಮಾಡಿದ ಅಶ್ವಮೇಧ ಮತ್ತು ಪುತ್ರಕಾಮೇಷ್ಟಿ ಯಾಗದ ಫಲ, ಅದನ್ನು ನಿನ್ನ ಪತ್ನಿಯರಿಗೆ ಕೊಡು. ಯಾವ ಫಲಕ್ಕಾಗಿ ನೀನು ಈ ಯಜ್ಞವನ್ನು ಮಾಡಿರುವೆಯೋ ಅದು ಈಡೇರುತ್ತದೆ. ಈ ದಿವ್ಯ ಪಾಯಸವನ್ನು ಭುಂಜಿಸಿದ ಪತ್ನಿಯರಲ್ಲಿ ನೀನು ಪುತ್ರರನ್ನು ಪಡೆಯುವೆ” ಎನ್ನುವ ಮಾತನ್ನು ನುಡಿದು ಆ ಸ್ವರ್ಣ ಪಾತ್ರೆಯನ್ನು ದಶರಥನಿಗೆ ನೀಡಿ ಯಜ್ಞದಲ್ಲಿ ಐಕ್ಯನಾದ. ಕಡುಬಡವನಿಗೆ ಅಪಾರ ಸಂಪತ್ತು ದೊರಕಿದರೆ ಎಷ್ಟು ಸಂತೋಷವಾಯಿತೋ ಅದೇ ಸಂತೋಷ ಆ ಮಾತನ್ನು ಕೇಳಿದ ದಶರಥನ ಸಹಿತ ಎಲ್ಲರಿಗೂ ಆಯಿತು. ದೇವತೆಗಳೂ ಸಹ ಸಂತಸದಲ್ಲಿ ತಮ್ಮ ಕಷ್ಟಗಳು ಪರಿಹಾರವಾಗುವ ಕಾಲ ಬಂತು ಎಂದು ಹರ್ಷಿತರಾದರು.

ರಾಮ ಅವತರಿಸುವ ಕಾಲ ಸನ್ನಿಹಿತವಾಯಿತು.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಸರಯೂತೀರದ ಅಪರಿ; ಅಯೋಧ್ಯೆಯೆನ್ನುವ ಪ್ರಾಚೀನ ನಗರಿ

Exit mobile version