ವಾಲಿಯ ಪರಾಕ್ರಮಕ್ಕೆ ಋಷ್ಯಮೂಕ ಎರವಾಗದ ಬಗೆ
ಧವಳ ಧಾರಿಣಿ ಅಂಕಣ: ವಾನರೇನ್ದ್ರೋ ಮಹಾವೀರ್ಯಸ್ತೇಜೋವಾನಮಿತಪ್ರಭಃ
ಸತ್ಯಸನ್ಧೋ ವಿನೀತಶ್ಚ ಧೃತಿಮಾನ್ಮತಿಮಾನ್ಮಹಾನ್৷৷ಅ.72.13৷৷
ವಾನರೇಂದ್ರನಾದ ಅವನು (ಸುಗ್ರೀವನು), ಮಹಾವೀರ್ಯನು, ತೇಜಸ್ಸುಳ್ಳವನು, ಅಮಿತವಾದ ಕಾಂತಿಯುಳ್ಳವನು, ಸತ್ಯಸಂಧನು, ವಿನಯಶೀಲನು, ಧರ್ಯವಂತನು, ಬುದ್ಧಿವಂತನು, ಮಹಾತ್ಮನು, ಕಾರ್ಯದಕ್ಷನು, ವಾಗ್ಮಿಯು, ಮಹಾಬಲಿಷ್ಠನು ಮತ್ತು ಅತಿಶಯವಾದ ಪರಾಕ್ರಮವುಳ್ಳವನು.
ಮಹಾಕಾವ್ಯವನ್ನು ಖಂಡವಾಗಿ ಓದುವುದರಿಂದ ಅಥವಾ ಅದರ ಯಾವುದೋ ಒಂದು ಭಾಗದ ಕಥೆ ಜನಪ್ರಿಯವಾಗಿರುವುದರಿಂದ ಅದರಲ್ಲಿ ಬರುವ ಪಾತ್ರದ ಗುಣಗಳನ್ನೇ ಆ ಪಾತ್ರದ ನಿಜವಾದ ಗುಣಾವಗುಣಗಳೆಂದು ಜನಮಾನಸದಲ್ಲಿ ಬಿಂಬಿತವಾಗಿಬಿಡುತ್ತದೆ. ರಾಮಾಯಣದಲ್ಲಿ (Ramayana) ಬಹುಚರ್ಚಿವಾಗುವ ಸಂಗತಿ ಎಂದರೆ ವಾಲಿವಧಾ (Vali Vadha) ಪ್ರಕರಣ. ಇಲ್ಲಿ ಬರುವ ಮೂರು ಮುಖ್ಯಪಾತ್ರಗಳಲ್ಲಿ ಮೊದಲನೆಯದು ವಾಲಿ, ಎರಡನೆಯದು ಹನುಮಂತ (Hanuman) ನಂತರ ಸುಗ್ರೀವ (Sugreeva). ಈ ಮೂರೂ ಪಾತ್ರಗಳೂ ರಾಮನಲ್ಲಿ ಮುಖಾಮುಖಿಯಾಗುತ್ತವೆ. ಹನುಮಂತ ರಾಮನ ದಾಸನಾಗಿ ತನ್ನ ಜೀವನವನ್ನು ಸವೆಸಿದರೆ ಸುಗ್ರೀವ ರಾಮನಿಗೆ ಸ್ನೇಹಿತನಾಗಿ ಕಿಷ್ಕಿಂಧಾ ರಾಜ್ಯವನ್ನೂ, ಪತ್ನಿಯನ್ನೂ ಅಣ್ಣನಿಂದ ಪಡೆದುಕೊಳ್ಳುತ್ತಾನೆ. ಈ ಇಬ್ಬರ ನಡುವೆ ವಾಲಿ ರಾಮನಲ್ಲಿ ಕೇಳುವ ಪ್ರಶ್ನೆಗಳು ಅದಕ್ಕೆ ರಾಮ ಕೊಡುವ ಉತ್ತರಗಳು ನಿರಂತರವಾಗಿ ರಾಮನ ವ್ಯಕ್ತಿತ್ವಕ್ಕೆ ಸವಾಲುಗಳನ್ನು ಎಸೆಯುತ್ತಲೇ ಬಂದಿವೆ. ಇದಕ್ಕೆ ಕಾರಣ ಮಹಾಕಾವ್ಯಕ್ಕಿಂತ, ಅದನ್ನು ಆಧರಿಸಿ ಬರೆದ ರೂಪಕಗಳಾದ ನಾಟಕ, ಯಕ್ಷಗಾನ ಮೊದಲಾದವುಗಳು. ಭಟ್ಟತೌತನದ್ದೆಂದು ನಂಬಲಾದ ಒಂದು ಶ್ಲೋಕದಲ್ಲಿ ಕಾವ್ಯ ಮತ್ತು ನಾಟಕಗಳ ಕುರಿತು ಹೀಗೆ ಹೇಳಲಾಗಿದೆ.
ಅನುಭಾವವಿಭಾವಾನಾಂ ವರ್ಣನಾ ಕಾವ್ಯಮುಚ್ಯತೇ I
ತೇಷಾಮೇವ ಪ್ರಯೋಗಸ್ತು ನಾಟ್ಯಂ ಗೀತಾದಿರಂಜಿತಂ II
ಅನುಭಾವ ವಿಭಾವಗಳ ವರ್ಣನೆಗೆ ಕಾವ್ಯವೆಂದು ಹೆಸರು; ಇವುಗಳನ್ನೇ ಗಾನಾದಿಗಳಿಂದ ರಂಜನೆಗೊಳಿಸಿ ಆಡಿ ತೋರಿಸಿದರೆ ನಾಟ್ಯವಾಗುತ್ತದೆ. (ಕೃಪೆ:- ತೀನಂಶ್ರೀಯವರ ಭಾರತೀಯ ಕಾವ್ಯಮೀಮಾಂಸೆಯಿಂದ).
ಇಲ್ಲಿ ರಂಜನೆಗಾಗಿ ನಾಟಕಕಾರ ಕಾವ್ಯವನ್ನು ತನಗೆ ಬೇಕಾದ ರೀತಿಯಲ್ಲಿ ಬದಲಾವಣೆಯನ್ನು ಮಾಡಿಕೊಂಡರೆ ಅದು ನಾಟ್ಯವಾಗಿ ರಂಗದಮೇಲೆ ಬಂದಾಗ ಆ ಪಾತ್ರಗಳು ಮೂಲ ಕಾವ್ಯದ ಮೂಸೆಯಲ್ಲಿ ಇದ್ದಂತೆ ಮೂಡಿಬಂದವುಗಳು ಎಂದು ಅಂದುಕೊಳ್ಳುತ್ತೇವೆ.
ಅಪಾರೇ ಕಾವ್ಯಸಂಸಾರೆ ಕವಿರೇವ ಪ್ರಜಾಪತಿಃ
ಯಥಾಸ್ಮೈ ರೋಚತೇ ವಿಶ್ವಂ ತಥೇದಂ ಪರಿವರ್ತತೇ II
ಕಾವ್ಯವೇ ಇರಲಿ ನಾಟಕ ರೂಪಕಗಳೇ ಇರಲಿ, ಇಲ್ಲಿ ಕವಿಯೇ ಸೃಷ್ಟಿಕರ್ತ. ತನಗೆ ಹೇಗೆ ರುಚಿಸುವುದೋ ಹಾಗೇ ವಿಶ್ವವನ್ನು ರೂಪಾಂತರಗೊಳಿಸುತ್ತಾನೆ ಎಂದು ಆನಂದವರ್ಧನ ತನ್ನ ಧ್ವನ್ಯಾಲೋಕದಲ್ಲಿ ಹೇಳುವುದನ್ನು ಗಮನಿಸಬಹುದು. ಈ ರೂಪಾಂತರಗೊಳಿಸಿದುದರ ಪರಿಣಾಮವೇ ಮಹಾಕಾವ್ಯಗಳ ಪ್ರತಿನಾಯಕಪಾತ್ರಗಳು ಉದಾತ್ತೀಕರಣಗೊಂಡು ನಾಯಕ ಪಾತ್ರಗಳು ಅವುಗಳ ಎದುರು ಮಂಕಾಗಿಹೋಗಿದೆ. ಅಂತಹ ಪಾತ್ರಗಳಲ್ಲಿ ಸುಗ್ರೀವನೂ ಓರ್ವ.
ಮೇಲೆ ಹೇಳಿದ “ಹನ್ನೆರಡು ಗುಣಗಳು ಸುಗ್ರೀವನಲ್ಲಿ ಇದೆ ಹಾಗಾಗಿ ನೀನು ಆತನೊಡನೆ ಸ್ನೇಹವನ್ನು ಮಾಡು’ ಎಂದು ರಾಮನಿಗೆ ಹೇಳುವುದು ಕಬಂಧನೆನ್ನುವ ರಾಕ್ಷಸ. ಕಬಂಧ ಸುಗ್ರೀವನ ಗುಣಗಳ ಕುರಿತು ಹೇಳುವಾಗ ಬಹಳ ಮುಖ್ಯವಾದ ಸಂಗತಿಯೊಂದನ್ನು ತಿಳಿಸುವುದು “ಎಲ್ಲಿಯವರೆಗೆ ಸೂರ್ಯನ ಬೆಳಕು ಪ್ರಸರಿರುವುದೋ ಅಲ್ಲಿಯವರೆಗೂ ಈ ಭೂಮಂಡಲದಲ್ಲಿ ಸುಗ್ರೀವನಿಗೆ ತಿಳಿಯದ ಸಂಗತಿಗಳು ಯಾವುದೋ ಇಲ್ಲ. ಪತ್ನಿವಿಯೋಗದಿಂದ ದುಃಖಪಡುತ್ತಿರುವ ನಿನ್ನ ಈ ಶೋಕವನ್ನು ಪರಿಹರಿಸಲು ಅವನೇ ಸಮರ್ಥನು. ಸುಂದರಿಯಾದ ಸೀತೆಯು ಮೇರುಪರ್ವತದ ತುತ್ತತುದಿಯಲ್ಲಿರಲಿ, ಪಾತಾಳದಲ್ಲಿಯೇ ಆಶ್ರಯ ಪಡೆದಿರಲಿ, ಯಾವದಿಕ್ಕಿನಲ್ಲಿಯೇ ಇರಲಿ, ಮಹಾಕಾಯರಾದ ವಾನರನ್ನು ಎಲ್ಲದಿಕ್ಕುಗಳಿಗೂ ಕಳುಹಿಸಿ ಸೀತೆಯನ್ನು ಹುಡುಕಿಸಿಕೊಡಬಲ್ಲ. ರಾವಣನ ಅರಮನೆಯಲ್ಲಿ ನಿನ್ನ ಮೈಥಿಲಿ ಇರಲಿ, ಅಲ್ಲಿಯೂ ಆತ ಸೀತೆಯನು ಹುಡುಕಿಸಬಲ್ಲ. ಅಗತ್ಯಬಿದ್ದರೆ ರಾಕ್ಷಸರನ್ನು ಸಂಹರಿಸಬಲ್ಲ” ಎನ್ನುವ ಮಾತುಗಳು ಸುಗ್ರೀವನ ನಿಪುಣತೆಯನ್ನು ತಿಳಿಸುತ್ತದೆ. ಇಲ್ಲಿ ಬರುವ ಒಂದು ವಾಕ್ಯ “ಸುಗ್ರೀವನಿಗೆ ಸೂರ್ಯನ ಕಿರಣಬೀಳುವ ಎಲ್ಲಾ ಪ್ರದೇಶಗಳ ಪರಿಚಯವಿದೆ” ಎನ್ನುವ ಮಾತಿನ ಹಿಂದೆ ಒಂದು ಘಟನೆಯ ಹಿನ್ನೆಲೆಯಿದೆ. ಅದು ವಾಲಿ ಮತು ಸುಗ್ರೀವರ ಪ್ರಸಿದ್ಧವಾದ ಜಗಳ.
ವಾನರರು ಎಂದರೆ ಮಂಗಗಳು ಎನ್ನುವುದಕ್ಕಿಂತ ಮುಖ್ಯವಾಗಿ ಅವರೊಂದು ಜನಾಂಗವಾಗಿರಬಹುದು ಎನ್ನುವ ವಿವರಣೆ ಕೆಲವುಕಡೆ ಇದೆ. ವಾಲ್ಮೀಕಿರಾಮಾಯಣದಲ್ಲಿ ಇದಕ್ಕೆ ಪುಷ್ಟಿಕೊಡುವ ಕೆಲಶ್ಲೋಕಗಳು ಇದೆ. ಆದರೂ ಹೆಚ್ಚಿನ ಕಡೆಯಲ್ಲಿ ಅವರನ್ನು ವಾನರರು, ಕಪಿಗಳು ಎಂದೆಲ್ಲ ವರ್ಣಿಸಿರುವುದರಿಂದ ಅವರು ಯಾವುದೋ ಒಂದು ಬುಡಕಟ್ಟು ಜನಾಂಗವೆನ್ನುವದನ್ನು ಸಿದ್ಢಪಡಿಸಲು ಸಾಕಾಗುವುದಿಲ್ಲ. ಹಾಗಂತ ಅಲ್ಲವೆಂದು ಹೇಳುವಂತೆಯೂ ಇಲ್ಲ. ವಾನರರ ಹಿನ್ನೆಲೆಯನ್ನು ಗಮನಿಸುವಾಗ ವಾಲಿ ಮತ್ತು ಸುಗ್ರೀವ ಇವರೆಲ್ಲರೂ ಬ್ರಹ್ಮನಿಗೆ ನೇರ ಸಂಬಂಧವುಳ್ಳವರು. ಅವರ ತಂದೆ ಋಕ್ಷರಜಸ್ ಎನ್ನುವಾತ. ಬ್ರಹ್ಮನೊಮ್ಮೆ ಮೇರುಪರ್ವತದಲ್ಲಿ ತಪಸ್ಸನ್ನು ಆಚರಿಸುವಾಗ ಆತನ ಕಣ್ಣಿನಿಂದ ಬಿದ್ದ ಒಂದು ಹನಿ ವಾನರರೂಪದ ಪುರಷಾಕಾರ ತಾಳಿತು. ಅಲ್ಲಿಯೇ ಆತ ವೇದಗಳನ್ನು ಕಲಿತ. ಒಂದು ದಿವಸ ಆತ ಮೇರು ಪರ್ವತದಲ್ಲಿ ತಿರುಗಾಡುತ್ತಿರುವಾಗ ಸರೋವರವೊಂದರಲ್ಲಿ ತನ್ನ ಪ್ರತಿಬಿಂಬವನ್ನು ನೋಡಿ, ಯಾರೋ ಬೇರೆಯವನೆಂದು ಭಾವಿಸಿ ಅವನನ್ನುಹಿಡಿಯಲು ಸರೋವರದೊಳಗೆ ಧುಮುಕಿದ. ಅಲ್ಲಿಂದ ಮೇಲೆ ಬರುವಾಗ ಆತ ಸುಂದರಿಯಾದ ಸ್ತ್ರೀರೂಪವನ್ನು ತಾಳಿದ್ದ. ಸಂಜೆಯಾಗುತ್ತಿತ್ತು. ಅಸ್ತಮಿಸುತ್ತಿರುವ ಸೂರ್ಯ ಮತ್ತು ಬ್ರಹ್ಮನ ಸಂದರ್ಶನಕ್ಕಾಗಿ ಹೋಗುತ್ತಿರುವ ಇಂದ್ರ ಇಬ್ಬರೂ ಆತನನ್ನು ನೋಡಿ ಮೋಹಗೊಂಡರು. ಇಂದ್ರನ ತೇಜಸ್ಸು ಆತನ ಬಾಲದ ಮೇಲೆಯೂ, ಸೂರ್ಯನ ತೇಜಸ್ಸು ಕುತ್ತಿಗೆಯ ಮೇಲೂ ಬಿತ್ತು. ಅದರ ಪರಿಣಾಮ ಬಾಲದಿಂದ ವಾಲಿ, ಗ್ರೀವ-ಕುತ್ತಿಗೆಯಿಂದ ಸುಗ್ರೀವ ಜನಿಸಿದರು. ಮಾರನೆಯ ದಿನ ಬೆಳಗಾಗುತ್ತಿರುವಂತೆ ಋಕ್ಷರಜಸ್ ಪುನಃ ಗಂಡಸಾದ. ಆತನ ಅವಸ್ಥೆಯನ್ನು ಗಮನಿಸಿದ ಬ್ರಹ್ಮ, ಋಕ್ಷರಜಸ್ಸನಿಗೆ ಅಲ್ಲಿಂದ ಕಿಷ್ಕಿಂಧೆಗೆ ಹೋಗಿ ರಾಜ್ಯಭಾರಮಾಡುವಂತೆ ಅಪ್ಪಣೆಯಿತ್ತ.
ಆತ ತನ್ನ ಮಕ್ಕಳಾದ ವಾಲಿ ಸುಗ್ರೀವರೊಂದಿಗೆ ಕಿಷ್ಕಿಂಧೆಗೆ ಬಂದು ವಾನರರ ಸಾಮ್ರಾಜ್ಯವನ್ನು ಸ್ಥಾಪಿಸಿದ. ಕೆಲಕಾಲದ ನಂತರ ವಾಲಿಗೆ ಪಟ್ಟವನ್ನು, ಸುಗ್ರೀವನಿಗೆ ಯುವರಾಜ ಪಟ್ಟವನ್ನು ಕಟ್ಟಿ ತಪಸ್ಸಿಗೆ ತೆರಳಿದ. ವಾಲಿ ಕಿಷ್ಕಿಂಧೆಯಲ್ಲಿ ರಾಜನಾದ ಮೇಲೆ ಚದುರಿಹೋಗಿದ್ದ ವಾನರರನ್ನೆಲ್ಲಾ ಒಂದುಗೂಡಿಸಿ ಬಲಿಷ್ಠವಾದ ಸಾಮ್ರಾಜ್ಯವನ್ನು ಕಟ್ಟಿದ. ವಾನರರ ಆಚಾರಗಳೆಲ್ಲವೂ ಮನುಷ್ಯರ ನಡವಳಿಕೆಯಂತೆಯೇ ಇದ್ದವು. ಪಟ್ಟಾಭಿಷೇಕ, ಪಾಣಿಗ್ರಹಣಪೂರ್ವಕ ವಿವಾಹ, ಕುಟುಂಬಪದ್ಧತಿ, ರಾಜನೀತಿ ಇವೆಲ್ಲದರಲ್ಲಿಯೂ ಅವರ ಆಚಾರಗಳು ಅಗಸ್ತ್ಯರಿಂದ ಪ್ರಭಾವಿತರಾಗಿರಬಹುದು ಎನಿಸುತ್ತದೆ. ಸುಗ್ರೀವ ಅನೇಕ ಸಾರಿ ಅಗಸ್ತ್ಯರ ಆಶ್ರಮದ ವಿಷಯವನ್ನು ಪ್ರಸ್ತಾಪಿಸುತ್ತಾನೆ. ಸೀತಾನ್ವೇಷಣೆಗೆ ವಾನರರನ್ನು ಕಳಿಸುವಾಗ ಅಗಸ್ತ್ಯರ ಆಶ್ರಮದ ಸಮೀಪ ಯಾವಕಾರಣಕ್ಕೂ ಅಪಮಾನಕ್ಕೆ ಕಾರಣವಾಗಬಹುದಾದ ಕಾರ್ಯವನ್ನು ಎಸಗಬೇಡಿ ಎನ್ನುತ್ತಾನೆ. ಅವರ ಆಶ್ರಮದೆಡೆಗೆ ರಾಕ್ಷಸರು ಅಪ್ಪಿತಪ್ಪಿಯೂ ಕಾಲಿಡಿಸುತ್ತಿರಲಿಲ್ಲ. ಮುನಿಗಳು ರಾಕ್ಷಸರನ್ನು ಜನಸ್ಥಾನದಿಂದ ನಿಗ್ರಹಿಸಲು ವಾನರರನ್ನು ಉಪಯೋಗಿಸಕೊಳ್ಳಬೇಕೆಂದಿದ್ದರೇನೋ; ಆದರೆ ವಾಲಿ ಮತ್ತು ರಾವಣರ ಗೆಳೆತನದಿಂದಾಗಿ ಕಾರ್ಯಸಾಧ್ಯವಾಗದೇ ಹೋಗಿರಬೇಕು. ಈ ಹಂತದಲ್ಲಿಯೇ ಅಗಸ್ತ್ಯರು ಮತ್ತು ವಾನರರಿಗೆ ಸಂಪರ್ಕ ದೂರವಾಯಿತು. ಪರಿಣಾಮ ವಾನರರಿಗೆ ಅರ್ಷೇಯ ಮತ್ತು ಬುಡಕಟ್ಟು ಎರಡೂ ಸೇರಿದ ಅನುಕೂಲಕರ ಮಿಶ್ರ ಪದ್ಧತಿಗಳ ಆಚರಣೆ ರೂಢಿಗೆಬಂತು ಎನ್ನಬಹುದು.
ವಾನರರ ಸಾಮ್ರಾಜ್ಯವೆನ್ನುವುದು ಕೇವಲ ಕಿಷ್ಕಿಂಧೆಗೆ ಮಾತ್ರ ಸೀಮಿತವಾಗಿತ್ತೇ ಎನ್ನುವ ಪ್ರಶ್ನೆಗೆ ಉತ್ತರ ರಾಮಾಯಣದಲ್ಲಿಯೇ ಸಿಗುತ್ತದೆ. ವಾನರರ ಸಾಮ್ರಾಜ್ಯ ಮಹೇಂದ್ರಪರ್ವತ, ಹಿಮವತ್ಪರ್ವತ, ಕೈಲಾಸ ಪರ್ವತ, ವಿಂಧ್ಯಪರ್ವತ ಮತ್ತು ಬಿಳಿಯ ಬಣ್ಣದ ಶಿಖರಗಳಿರುವ ಮಂದರ ಪರ್ವತ ಇಲ್ಲೆಲ್ಲ ಹಂಚಿಹೋಗಿತ್ತು. ಇವುಗಳಲ್ಲಿ ಮಂದರ ಪರ್ವತ ಯಾವುದಾಗಿತ್ತು ಎನ್ನುವುದು ಸಿಗುತ್ತಿಲ್ಲ. (ಇಂಡೋನೇಷ್ಯಾದ ಬಾಲಿ ದ್ವೀಪದಲ್ಲಿರುವವರು ತಮ್ಮದು ವಾಲಿ ಹುಟ್ಟಿದ ಪ್ರದೇಶ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಅಲ್ಲಿನ ದ್ವೀಪಗಳು ಪರ್ವತ ಮತ್ತು ದಿಣ್ಣೆಗಳಿಂದ ತುಂಬಿದೆ. ಉಲುವಾಟು ದೇವಾಲಯದಲ್ಲಿ ಪ್ರತಿನಿತ್ಯ ರಾಮಾಯಣ ನೃತ್ಯ ನಡೆಯುತ್ತದೆ. ಇಲ್ಲಿ ವಿಷಯಾಂತರವಾಗುವುದರಿಂದ ಆ ಕುರಿತು ಹೆಚ್ಚು ವಿವರಿಸುವುದಿಲ್ಲ). ಈ ಪ್ರದೇಶದ ವಾನರರ ಪ್ರಬೇಧಗಳ ವಿಷಯ ಕಿಷ್ಕಿಂಧಾ ಕಾಂಡದ್ದುದ್ದಕ್ಕೂ ಅಲ್ಲಲ್ಲಿ ವಿವರಿಸಿದೆ. ಅವರೆಲ್ಲರೂ ಕಾಮರೂಪಿಗಳಾಗಿದ್ದರು. ಮಹಾಬಲಿಷ್ಠರಾಗಿದ್ದರು. ಪರ್ವತಗಳಲ್ಲಿ ವಾಸಿಸುತ್ತಿದ್ದರು ಮತ್ತು ಅವರ್ಯಾರೂ ಮಂಸಾಹಾರಿಗಳಾಗಿರಲಿಲ್ಲ. ಅವರ ಭಾಷೆಗಳು ಸಂಸ್ಕೃತವನ್ನು ಹೋಲುತ್ತಿರುವ ಪ್ರಾಕೃತವಾಗಿತ್ತು. ಆದರೆ ವಾನರ ಮತ್ತು ಋಕ್ಷಪ್ರಮುಖರಿಗೆ ಗೀರ್ವಾಣ ಭಾಷೆ ಚನ್ನಾಗಿ ಬರುತ್ತಿತ್ತು ಎನ್ನುವುದು ಬಲುಮಹತ್ವವಾದ ಸಂಗತಿ.
ಹನುಮಂತ ಅಶೋಕವನದಲ್ಲಿ ಸೀತೆಯೊಡನೆ ತಾನು “ವಾಚಂ ಚೋದಾಹರಿಷ್ಯಾಮಿ ಮಾನಿಷೀಮಿಹ ಸಂಸ್ಕೃತಾಂ- ಸೀತೆಯಲ್ಲಿ ತಾನು ಮನುಷ್ಯರಾಡುವ ಸಂಸ್ಕೃತದಲ್ಲಿಯೇ ಮಾತಾಡುತ್ತೇನೆ, ದ್ವಿಜರಾಡುವ ಸಂಸ್ಕೃತದಲ್ಲಿ ಮಾತನ್ನಾಡಿಸಿದರೆ ಆಕೆ ತನ್ನನ್ನು ರಾವಣನೆಂದೇ ತಿಳಿದು ಭಯಪಡುತ್ತಾಳೆ” ಎನ್ನುತ್ತಾನೆ. ಈ ಎಲ್ಲದರೆ ಅರ್ಥ ವಾನರರೆಂದರೆ ಬುಡಕಟ್ಟು ಜನಾಂಗವೆನ್ನುವುದನ್ನು ಪುಷ್ಟೀಕರಿಸುತ್ತದೆ. ಇನ್ನು ಬಾಲಗಳ ವಿಷಯಕ್ಕೆ ಬಂದರೆ ಯುದ್ಧಕಾಂಡದಲ್ಲಿ ಕೆಂಪು, ಹಳದಿ, ಬಿಳಿ, ಮಿಶವರ್ಣದವು ಮೊದಲಾದ ಬಾಲಗಳಿರುವ ವಿಷಯ ಬರುತ್ತದೆ. ಕೆಲವು ವಾನರರು ಗೋಲಾಂಗುಲ- ಹಸುವಿನ ಬಾಲದ ಪುಚ್ಛವನ್ನು ಹೊಂದಿದವು, ಮತ್ತೆ ಕೆಲವು ಕಪಿಗಳು ಎಂದಿದೆ. ರಾಮ ಯುದ್ಧಕಾಂಡದಲ್ಲಿ ಇನ್ನು ನೀವು ಮನುಷ್ಯರೂಪದಲ್ಲಿ ಕಾಣಿಸಿಕೊಳ್ಳದೇ ವಾನರರ ಚಿನ್ಹೆ, ಲಕ್ಷಣದಲ್ಲೇ ಇರತಕ್ಕದ್ದು ಎನ್ನುತ್ತಾನೆ. ಸುಗ್ರೀವ ತನ್ನವರೆಲ್ಲರನ್ನೂ ಕಾಮರೂಪಿಗಳು ಎಂದು ಮೊದಲೇ ವರ್ಣಿಸಿದ್ದಾನೆ.
ವಿಶೇಷವೆಂದರೆ ವಾನರರ ಸ್ತ್ರೀಯರಿಗೆ ಬಾಲವಿರಲಿಲ್ಲ. ತಾರೆಯ ಸೌಂದರ್ಯದ ಕುರಿತು “ತಾರಾ ತಾರಾಧಿಪ ನಿಭಾನನಾ- ತಾರಾಧಿಪನಾದ ಚಂದ್ರನ ಕಾಂತಿಗೆ ಸಮಾನವಾದ ಮುಖಕಾಂತಿಯಿಂದ ಬೆಳಗುತ್ತಿದ್ದ ತಾರೆಯು” ಎಂದು ವರ್ಣಿಸಲಾಗಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಗೋಲಾಂಗೂಲವಾಗಲೀ, ಬಣ್ಣಬಣ್ಣದ ಬಾಲಗಳ ಪುಚ್ಛಗಳು ಅವರ ಚಿನ್ಹೆಗಳು ಎಂದು ದೇವದತ್ತ ಪಟ್ಟನಾಯಕ ಮೊದಲಾದ ವಿದ್ವಾಂಸರು ತರ್ಕಿಸುತ್ತಾರೆ. ವಿಕಾಸವಾದದ ಹಾದಿಯಲ್ಲಿ ಗಮನಿಸುವಾಗ ವಿಕಸನವಾದ ಅಂಗಗಳು ಮತ್ತೆ ಪೂರ್ವ ಸ್ವರೂಪಕ್ಕೆ ತಿರುಗುವುದಿಲ್ಲ. ಹಾಗಾಗಿ ಮಾತನ್ನಾಡಬಲ್ಲ ಮಂಗಗಳು ಮತ್ತೆ ಮಂಗನ ಭಾಷೆಯನ್ನು ಮಾತಾಡುವುದಿಲ್ಲ. ಈ ಎಲ್ಲ ಕಾರಣಗಳಿಂದ ಇನ್ನು ಋಕ್ಷ ಎಂದರೆ ಕರಡಿ. ವಾಲಿ ಸುಗ್ರೀವರ ತಂದೆ ತಾಯಿಯಾದ ಋಕ್ಷ ಕರಡಿಯಾಗಿ ಆತನ ಮಕ್ಕಳು ಮಂಗಗಳ ಜಾತಿಗೆ ಸೇರಿದವು ಎನ್ನುವುದು ಅಸಾಧ್ಯವೂ ಹೌದು. ಈ ಎಲ್ಲ ಹಿನ್ನೆಲೆಯಲ್ಲಿ ವಾಲಿ ಸುಗ್ರೀವ ಎನ್ನುವ ಸಹೋದರರ ವಿಷಯದಲ್ಲಿ ಹೋಲಿಸಿದಾಗ ಇವರು ವನದಲ್ಲಿರುವ ನರರು ಅಥವಾ Humanoid ಜಾತಿಯ ಪಳೆಯುಳಿಕೆಗಳು ಸಿಕ್ಕಿರುವುದರಿಂದ ಆ ಜಾತಿಗೆ ಸೇರಿರಬಹುದೆನ್ನುವುದು ಸೂಕ್ತ (Morphologically -similar to human but not identical).
ಪ್ರಪಂಚದಲ್ಲೆಲ್ಲ ಹರಡಿದ್ದ ವಾನರ ಸಾಮ್ರಾಜ್ಯವನ್ನು ವಾಲಿ ಮತ್ತು ಸುಗ್ರೀವರು ಕಿಷ್ಕೆಂಧೆಯಿಂದ ನಿಯಂತ್ರಿಸುತ್ತಿದ್ದರು. ವಾಲಿ ಮಹಾ ಪರಾಕ್ರಮಿಯಾಗಿದ್ದ. ತನ್ನ ತಮ್ಮನಾದ ಸುಗ್ರೀವನಲ್ಲಿ ಅಮಿತವಾದ ಪ್ರೀತಿಯೂ ಆತನಿಗೆ ಇತ್ತು. ತಾನೇ ಮುಂದೆ ನಿಂತು ತಾರನ ಮಗಳಾದ ರುಮೆಯನ್ನು ಸುಗ್ರೀವನಿಗೆ ಮದುವೆ ಮಾಡಿಸಿದ್ದನು. ಸಾಹಸಿಯಾಗಿದ್ದರೂ ಆತ ಅನ್ಯಾಕ್ರಮಣವನ್ನು ಮಾಡುತ್ತಿರಲಿಲ್ಲ. ವಾಲಿಯ ದೊಡ್ಡದಾದ ದೌರ್ಬಲ್ಯವೆಂದರೆ ಹೆಣ್ಣಿನ ಮೋಹ. ಒಮ್ಮೆ ಮಾಯಾವಿ ಎನ್ನುವ ರಾಕ್ಷಸನಿಗೂ ಮತ್ತು ವಾಲಿಗೂ ಹೆಣ್ಣಿನ ವಿಷಯದಲ್ಲಿ ಮಹಾವೈರವುಂಟಾಯಿತು.
ಮಾಯಾವೀ ನಾಮ ತೇಜಸ್ವೀ ಪೂರ್ವಜೋ ದುನ್ದುಭೇಃ ಸುತಃ.
ತೇನ ತಸ್ಯ ಮಹದ್ವೈರಂ ಸ್ತ್ರೀಕೃತಂ ವಿಶ್ಶ್ರುತಂ ಪುರಾ IIಕಿ. 9-4II
ದುಂದುಭೀರಾಕ್ಷಸನ ಅಣ್ಣನಾದ ಮಯಾಸುರನ ಮಗನಾದ ಮಾಯಾವಿ ಎನ್ನುವವ ಮಹಾಬಲಿಷ್ಠನಾಗಿದ್ದನು. ಅವನಿಗೂ ವಾಲಿಗೂ ಹೆಂಗಸೊಬ್ಬಳ ವಿಷಯದಲ್ಲಿ ಮಹಾವೈರವುಂಟಾಯಿತು. ಹೀಗೆ ಜಗಳಕ್ಕೆ ಕಾರಣವಾದ ಹೆಂಗಸು ಯಾರೆನ್ನುವ ವಿವರ ರಾಮಾಯಣದಲ್ಲಿಲ್ಲ. ಇದು ವಾಲಿಗಿರುವ ಸ್ತ್ರೀಯರ ಮೇಲಿರುವ ದೌರ್ಬಲ್ಯವನ್ನು ಸ್ಪಷ್ಟವಾಗಿ ತಿಳಿಸುತ್ತದೆ. ಈ ವೈರ ಪ್ರಕರಣ ಎಲ್ಲಿಯೋ ಬೇರೆಕಡೆ ಆಗಿರಬೇಕು, ಅದರಲ್ಲಿ ವಾಲಿ ಮಾಯಾವಿ ಕಣ್ಣುಹಾಕಿದ್ದ ಹೆಂಗಸನ್ನು ತಾನು ಅನುಭವಿಸಿರಬೇಕು. ಆ ಸೇಡನ್ನು ತೀರಿಸಿಕೊಳ್ಳಲು ಮಾಯಾವಿ ರಾತ್ರಿಕಾಲದಲ್ಲಿ ಕಿಷ್ಕಿಂಧಾ ಪಟ್ಟಣಕ್ಕೆ ಬಂದು ವಾಲಿಯನ್ನು ಯುದ್ಧಕ್ಕೆ ಆಹ್ವಾನಿಸಿದ. ವಾಲಿ ಹುಂಬತನದಿಂದ ಆತನೊಡನೆ ಯುದ್ಧಕ್ಕೆ ಧಾವಿಸಿದ. ಅವನನ್ನು ನೋಡಿ ಭಯಗೊಂಡು ಮಾಯಾವಿ ಪಲಾಯನ ಮಾಡಿ ಬಹುದೂರಕ್ಕೆ ಓಡಿದರೆ ಆತನನ್ನು ಅಟ್ಟಿಸಿಕೊಂಡು ವಾಲಿಯೂ ಅವನನ್ನು ಅನುಸರಿಸಿ ಸುಗ್ರೀವನೂ ಧಾವಿಸಿದರು.
ರಾಕ್ಷಸ ಬಹುದೂರಕ್ಕೆ ಓಡುತ್ತಾ ಹೋಗಿ ಪರ್ವತದ ಗುಹೆಯೊಂದನ್ನು ಹೊಕ್ಕ. ಅದು ಮಾಯಾವಿಯ ಪಟ್ಟಣವಾಗಿತ್ತು. ವಾಲಿ ಆತನನ್ನು ಕೊಲ್ಲುತ್ತೇನೆ ಎಂದು ಗುಹೆಯನ್ನು ಹೊಕ್ಕಿರುವುದು ಮತ್ತು ಹೊರಗಡೆ ಗುಹಾದ್ವಾರವನ್ನು ಕಾಯಲು ಸುಗ್ರೀವನನ್ನು ನಿಲ್ಲಿಸಿದ ಕಥೆ ಎಲ್ಲರಿಗೂ ಗೊತ್ತು. ಒಂದು ವರ್ಷವಾದರೂ ವಾಲಿ ಬರದೇ ಇರುವುದನ್ನು ಗಮನಿಸಿದ ಸುಗ್ರೀವ ಕಳವಳಗೊಂಡ. ಇದ್ದಕ್ಕಿದ್ದಂತೆ ರಕ್ತ ನೊರೆನೊರೆಯಾಗಿ ಹೊರಬಂದಾಗ ಅದು ವಾಲಿಯೇ ಇರಬೇಕು ಎಂದುಕೊಂಡ ಸುಗ್ರೀವ ಗುಹಾದ್ವಾರಕ್ಕೆ ದೊಡ್ಡದಾದ ಬಂಡೆಯನ್ನು ಮುಚ್ಚಿ, ಅಣ್ಣ ತೀರಿಕೊಂಡ ಎಂದು ಆತನಿಗೆ ತರ್ಪಣವನ್ನೂ ಬಿಟ್ಟು ಕಿಷ್ಕಿಂಧೆಗೆ ಮರಳಿ ಸುಮ್ಮನಿದ್ದ. ಮಂತ್ರಿಗಳು ಪ್ರಯತ್ನಪೂರ್ವಕವಾಗಿ ಈ ವಿಷಯತಿಳಿದುಕೊಂಡರು. ಸುಗ್ರೀವನನ್ನೇ ರಾಜನನ್ನಾಗಿ ಅಭಿಷೇಕಮಾಡಿದರು. ತಾರೆ ಮತ್ತು ರುಮೆಯ ಸಹಿತ ಸುಗ್ರೀವ ರಾಜನಾಗಿ ಆಳತೊಡಗಿದ. ವಾಲಿ ಪುನಃ ಬಂದರೆ ಈ ದೃಶ್ಯವನ್ನು ನೋಡಿ ಇದೆಲ್ಲ ಸುಗ್ರೀವನಿಗೆ ರಾಜ್ಯದ ಆಸೆಗಾಗಿ ಮಾಡಿದ ಬಂಡಾಯವೆಂದು ಅಂದುಕೊಂಡವನೇ ಆತನನ್ನು ಕೊಲ್ಲಲೆಂದು ಮೈಮೇಲೆ ಏರಿಬಂದ.
ಸುಗ್ರೀವನಲ್ಲಿ ಈ ಲೇಖನದ ಮೊದಲು ತಿಳಿಸಿದ ಗುಣಗಳಿರುವಂತೆಯೇ ವಾನರಸಹಜವಾದ ಅವಸರದ ಗುಣಗಳೂ ಇದ್ದವು. ಅದರಿಂದಲೇ ಆತ ತೊಂದರೆಗೆ ಸಿಕ್ಕುಬಿದ್ದಿದ್ದು ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಮಂಗೋಪಿಯಾದ ವಾಲಿಗೆ ಇಷ್ಟೇ ಸಾಕಾಯಿತು. ಆತ ಸುಗ್ರೀವನನ್ನು ಕೊಂದೇ ತೀರುತ್ತೇನೆ ಎಂದು ಅಟ್ಟಿಸಿಕೊಂಡು ಹೋದ. ಆತನ ಪತ್ನಿಯಾದ ರುಮೆಯನ್ನು ಬಲತ್ಕಾರದಿಂದ ಇಟ್ಟುಕೊಂಡ. ಜೀವ ಉಳಿಸಿಕೊಳ್ಳಲು ಸುಗ್ರೀವ ಓಡುವುದೂ, ವಾಲಿ ಆತನನ್ನು ಮುಗಿಸಿಯೇ ಬೀಡುವೆನೆಂದು ಬೆನ್ನಟ್ಟಿ ಬರುವುದೂ ನಡೆದಾಗ ಸುಗ್ರೀವ ಆಕಾಶಕ್ಕೆ ಹಾರಿದ. ಭೂಮಿ ಆತನಿಗೆ,
ಆದರ್ಶತಲಸಙ್ಕಾಶಾ ತತೋ ವೈ ಪೃಥಿವೀ ಮಯಾ.
ಅಲಾತಚಕ್ರಪ್ರತಿಮಾ ದೃಷ್ಟಾ ಗೋಷ್ಪದವತ್ತದಾ৷৷ಕಿ.46.13৷৷
ಅಲಾತಚಕ್ರದಂತೆ (ಬೆಂಕಿಹಚ್ಚಿದ ಕೊಳ್ಳಿಯನ್ನು ತಿರುಗಿಸಿದಾಗ ಕಾಣುವ ಚಕ್ರದಂತೆ) ಗೋಪಾದದಷ್ಟು ಚಿಕ್ಕದಾಗಿ ಕಂಡಿತು ಎನ್ನುತ್ತಾನೆ. ಅಂತರಿಕ್ಷದಿಂದ ಭೂಮಿಯನ್ನು ನೋಡಿದಾಗ ಭೂಮಿಕಾಣಿಸುವ ಬಗೆಯನ್ನು ಇಲ್ಲಿ ವರ್ಣಿಸಲಾಗಿದೆ. ಆತನ ಜೊತೆಯಲ್ಲಿ ಹನುಮಂತನೂ ಇದ್ದ. ಹೀಗೆ ವಾಲಿಯ ಭಯದಲ್ಲಿ ಅವರು ಪ್ರಪಂಚವನ್ನೆಲ್ಲಾ ಸುತ್ತಿ ಸುತ್ತಿ ಸಾಗುತ್ತಿರುವಾಗ ಬದುಕುವ ಸಾಧ್ಯತೆಯನ್ನೇ ಬಿಟ್ಟ. ಹೀಗೆ ಢಾವಿಸುವಾಗ ಇಡೀ ಭೂಮಂಡಲವನ್ನೇ ಅನೇಕ ಸಾರೆ ಪೂರ್ವದಿಂದ ಪಶ್ಚಿಮಕ್ಕೂ ಉತ್ತರದಿಂದ ದಕ್ಷಿಣಕ್ಕೂ, ಹಿಮಾಲಯದಿಂದ ಉತ್ತರಕುರು ಪ್ರದೇಶಕ್ಕೂ, ಹೀಗೆ ಭೂಮಿಯ ಎಲ್ಲಿಯಾದರೂ ತನಗೆ ಆಶ್ರಯಸಿಗುವುದೋ ಎಂದು ಹುಡುಕಾಡಿದ. ಅಲ್ಲಿಗೂ ಅವನನ್ನು ಕೊಲ್ಲಲು ವಾಲಿ ಘರ್ಜಿಸುತ್ತಾ ಬಂದಾಗ ಬದುಕುವ ಆಸೆಯನ್ನೇ ಬಿಟ್ಟ. ಪ್ರಾಣರಕ್ಷಣೆಗಾಗಿ ಭೂಮಂಡಲದ ಎಲ್ಲಾ ಸ್ಥಳವನ್ನೂ ಅಲೆದಿದ್ದ. ಅಂತಹ ಹೊತ್ತಿನಲ್ಲಿ ಹನುಮಂತ ಆತನಿಗೆ ಋಷ್ಯಮೂಕ ಪರ್ವತದ ಕಥೆಯನ್ನು ಹೇಳಿ ಅಲ್ಲಿಗೆ ವಾಲಿ ಬರುವುದಿಲ್ಲ: ಮತಂಗ ಮುನಿಗಳು ವಾಲಿ ಅಥವಾ ಆತನ ಮಂತ್ರಿಗಳೇನಾದರೂ ಋಷ್ಯಮೂಕ ಪರ್ವತಕ್ಕೆ ಬಂದರೆ ಆತನ ತಲೆಯು ನೂರು ಹೋಳಾಗಲಿ ಎನ್ನುವ ಶಾಪಕೊಟ್ಟ ವಿಷಯವನ್ನು ತಿಳಿಸಿದ. ಆ ಪ್ರದೇಶಕ್ಕೆ ವಾಲಿ ಬರಲಾರದ ಕಾರಣ ಅಲ್ಲಿ ಮಾತ್ರ ಸುರಕ್ಷಿತವಾಗಿ ಇರಬಹುದು ಎಂದು ಹೇಳಿದಾಗ, ಲಗುಬಗೆಯಿಂದ ಮತಂಗಮಹರ್ಷಿಗಳ ಆಶ್ರಮಮಂಡಲದಲ್ಲಿ ಉಳಿದುಕೊಂಡ.
ಸುಗ್ರೀವನಿಗೆ ಸಮಗ್ರ ಭೂಮಂಡಲದ ಪರಿಚಯ ಹೇಗಾಯಿತು ಎನ್ನುವ ಕುತೂಹಲ ರಾಮನಿಗೆ ಇತ್ತು. “ಕಥಂ ಭವಾನ್ವಿಜಾನೀತೇ ಸರ್ವಂ ವೈ ಮಣ್ಡಲಂ ಭುವಃ” ಇಡೀ ಭೂಮಂಡಲದ ಪರಿಚಯ ನಿನಗೆ ಹೇಗಾಯಿತು ಎಂದು ಕೇಳಿದಾಗ ಸುಗ್ರೀವ ರಾಮನಲ್ಲಿ ತನ್ನ ಭೂಮಂಡಲದ ಯಾತ್ರೆಯ ಕಥೆಯನ್ನು ಹಂಚಿಕೊಂಡ. ಪ್ರಚಲಿತದಲ್ಲಿರುವಂತೆ ಆತ ಸೂರ್ಯನಲ್ಲಿ ಆಶ್ರಯ ಕೋರಿ ಆತನ ಬೆನ್ನ ಹಿಂದೆ ಅಡಗಿಕೊಂಡಿದ್ದ ಎನ್ನುವುದು ಮೂಲ ರಾಮಾಯಣದಲ್ಲಿ ಇಲ್ಲ.
ಮುಂದಿನ ಭಾಗದಲ್ಲಿ ಕಿಷ್ಕಿಂಧಾಕಾಂಡದ ಇನ್ನಷ್ಟು ರೋಚಕ ವಿಷಯಗಳನ್ನು ಗಮನಿಸೋಣ.
ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಕಿಷ್ಕಿಂಧಾ ಕಾಂಡದಲ್ಲಿನ ರಾಜನೀತಿಯ ವಿಲಕ್ಷಣ ಘಟನೆ