Site icon Vistara News

ಧವಳ ಧಾರಿಣಿ ಅಂಕಣ: ಸೃಷ್ಟಿ ಸ್ಥಿತಿ ಲಯಕಾರಿಣಿಯಾದ ಜಗನ್ಮಾತೆಯ ಸ್ವರೂಪ ವೈಭವ: ನವರಾತ್ರಿ

devi lalitha

ಕಾಳರಾತ್ರಿಯೊಳಗಿರುವ ಲಲಿತಾ ತ್ರಿಪುರಸುಂದರಿ

ಶಿವಃ ಶಕ್ತ್ಯಾಯುಕ್ತೋ ಯದಿ ಭವತಿ ಶಕ್ತಃ ಪ್ರಭವಿತುಮ್
ನ ಚೇದೇವಂ ದೇವೋ ನ ಖಲು ಕುಶಲಃ ಸ್ಪಂದಿತುಮಪಿ
ಅತಸ್ತ್ವಾಮಾರಾಧ್ಯಾಂ ಹರಿಹರ ವಿರಿಂಚಾದಿಭಿರಪಿ
ಪ್ರಣಂತು ಸ್ತೋತುಂ ವಾ ಕಥಮಕೃತಪುಣ್ಯಃ ಪ್ರಭವತಿ IIಸೌಂ.ಲ. 1 II

ಹೇ ಜಗನ್ಮಾತೆ ! ಸರ್ವಮಂಗಳ ಸಹಿತನಾದ ಶಿವನಿಗೆ, ಸರ್ವಶಕ್ತಿ ಸಮನ್ವಿತಳಾದ ನಿನ್ನೊಡನೆ ಸೇರಿದಾಗಲೇ ಈ ಜಗತ್ತನ್ನು ಸೃಷ್ಟಿಸಲು ಸಾಧ್ಯ. ನಿನ್ನೊಡನೆ ಕಲೆಯದಿದ್ದರೆ ಆತ ಕದಲಲೂ ಅಶಕ್ತನಾಗುತ್ತಾನೆ. ಹರಿಹರಬ್ರಹ್ಮಾದಿಗಳಿಂದ ಪೂಜಿಸಲ್ಪಡುವ ನಿನ್ನನ್ನು ಪುರಾಕೃತ ಪುಣ್ಯವಿಲ್ಲದಿದ್ದರೆ ಸ್ತ್ರೋತ್ರ ಮಾಡಲಾಗಲೀ, ಹೊಗಳಲಾಗಲೀ ಹೇಗೆ ತಾನೇ ಸಾಧ್ಯವಾದೀತು.

ಸೌಂದರ್ಯ ಲಹರಿಯ (soundrya lahari) ಮೊದಲ ಶ್ಲೋಕದಲ್ಲಿ ಶಂಕರಾಚಾರ್ಯರು (shankaracharya) ನವರಾತ್ರಿಯ ಆರಾಧ್ಯ ದೇವಿಯಾದ ಶಕ್ತಿಸ್ವರೂಪಿಯನ್ನು ಹೀಗೆ ವರ್ಣಿಸಿದ್ದಾರೆ. ಜಗನ್ಮಾತೆಯ ಕರುಣೆಯೊಂದಿದ್ದರೆ ಸಾಧಾರಣ ವ್ಯಕ್ತಿಗೂ ಅಪಾರ ಶಕ್ತಿ ಲಭ್ಯವಾಗುತ್ತದೆ ಎನ್ನುವುದನ್ನು ಇಲ್ಲಿ ಹೃದ್ಯವಾಗಿ ಚಿತ್ರಿಸಿದ್ದಾರೆ.

ಭಾರತೀಯ ಹಬ್ಬಗಳಲ್ಲಿ ನವರಾತ್ರಿ (navratri festival) ತುಂಬಾ ವಿಶಿಷ್ಟವಾದ ಹಬ್ಬ . ಮಳೆಗಾಲ ಗದ್ದೆಯಲ್ಲಿ ಬಿತ್ತಿದ ಬೀಜ ಮಾಗುವ ಹಂತದಲ್ಲಿ ಈ ಹಬ್ಬ ಬರುತ್ತದೆ. ನಾಲ್ಕು ತಿಂಗಳು ಬಿಟ್ಟೂ ಬಿಡದೇ ಬಿದ್ದ ಮಳೆ (ಈ ವರ್ಷವಲ್ಲದಿದ್ದರೂ ಮೊದಲು ಹಾಗೇ ಇತ್ತು) ಕವಿದ ಮೋಡಗಳು ಸರಿದು ನೀಲಿಯಾದ ಆಕಾಶ ತೋರುವಾಗ ಕಣ್ಣಿಗೆ ಹಬ್ಬ. ಮೇಘಗಳಲ್ಲಿ ಮರೆಯಾಗಿ ಶುಕ್ಲ ಪಕ್ಷವೋ ಕೃಷ್ಜ್ಣ ಪಕ್ಷವೋ ಎಂದು ತಿಳಿಯದ ವರ್ಷಋತುವಿನಿಂದ ಶರದೃತುವಿಗೆ ಪ್ರಕೃತಿ ಕಾಲಿಟ್ಟಿದೆ. ಜನಪದರಿಗೆ ತಾವು ಬೆಳೆದ ಸುಗ್ಗಿಯನ್ನು ನೋಡುವುದೇ ಕಣ್ಣಿಗೆ ಹಬ್ಬ. ಇವೆಲ್ಲವುದಕ್ಕೂ ಕಾರಣ ತಮ್ಮನ್ನು ಪೊರೆಯುವ ದೇವರು ಎನ್ನುವುದನ್ನು ನೆನಪಿಗೆ ತಂದು ಕೊಂಡು ದೇವರುಗಳನ್ನು ಪ್ರಕೃತಿಯ ಮೂಲಕವಾಗಿ ಆರಾಧಿಸುವುದೇ ಎಲ್ಲಾ ಹಬ್ಬಗಳ ಮೂಲ ನಿರ್ವಚನವಾಗಿದೆ. ದಕ್ಷಿಣಾಯಣವೆನ್ನುವುದು ಶುಭಕಾರ್ಯಗಳಾದ ಮದುವೆ, ಮನೆ ಗ್ರಹಪ್ರವೇಶ ಮುಂತಾದವುದಕ್ಕೆ ಪ್ರಶಸ್ತವಾದ ಕಾಲವಲ್ಲ ಎನ್ನುವುದು ಸಾಮಾನ್ಯ ನಂಬುಗೆ. ಯುಗಾದಿ ಹಬ್ಬವೊಂದನ್ನು ಬಿಟ್ಟರೆ ಬಾಕೀ ಎಲ್ಲಾ ಹಬ್ಬಗಳೂ ದಕ್ಷಿಣಾಯಣದಲ್ಲಿಯೇ ಬರುತ್ತವೆ. ಈ ಹಬ್ಬಗಳಿಗೆಲ್ಲ ವೇದಮೂಲವಿದೆಯೋ ಎಂದು ಗಮನಿಸಿದರೆ ಹೆಚ್ಚಿನ ಯಾವ ಹಬ್ಬಗಳ ಉಲ್ಲೇಖವೂ ವೇದಗಳಲ್ಲಿ ಸಿಗುವುದಿಲ್ಲ. ಹಾಗಂತ ವೇದಗಳಲ್ಲಿ ಪ್ರಕೃತಿಯ ಆರಾಧನೆ ಮಹತ್ವದ ಸ್ಥಾನ ಪಡೆಯುತ್ತದೆ. ಅವು ಬದುಕಿನ ಚಿಂತನಾಕ್ರಮಗಳು. ನೆಲ, ಜಲ, ಅರಣ್ಯ, ಬೆಟ್ಟ, ಗುಡ್ಡ, ಮಳೆ, ವಾಯು, ಅಗ್ನಿ, ಆಕಾಶ ಇವುಗಳೆಲ್ಲವೂ ಭೂಮಿಯ ಜೀವಿಗಳನ್ನು ಪೊರೆಯುವ ಕರುಣಾಮಯಿ ಎನ್ನುವುದು ವೇದದ ಋಷಿಗಳ ಅಂಬೋಣ. ಹಾಗಾಗಿ ವೇದದಲ್ಲಿ ಇವುಗಳ ಋಣವನ್ನು ನೆನೆಯುವ ಸೂಕ್ತಗಳು ಹುಟ್ಟಿಕೊಂಡಿವೆ. ಯಾವಾಗ ನಮ್ಮ ಸುತ್ತಲಿನ ಪ್ರಕೃತಿಗಳಿಗೆ ದುಷ್ಟರಿಂದ ತೊಂದರೆ ಬಂದಾಗ ಅದಕ್ಕೆ ರಕ್ಷಣೆಗಾಗಿ ಅಧಿದೇವತೆ, ಪ್ರತ್ಯಧಿದೇವತೆ ಹೀಗೆ ಅನೇಕ ದೇವತೆಗಳನ್ನು ಆರಾಧಿಸುವ ಉದ್ದೇಶದಿಂದ ನಾಲ್ಕು ವೇದಗಳ ಮತ್ತು ಉಪನಿಷತ್ತಿನಲ್ಲಿ ಬರುವ ಮಂತ್ರಗಳನ್ನು ಪೋಣಿಸಿ ತಮ್ಮ ತಮ್ಮ ಇಷ್ಟ ದೇವತೆಗಳನ್ನು ಆರಾಧಿಸುವ ಕ್ರಮ ರೂಢಿಗೆ ಬಂದಿದೆ. ನವರಾತ್ರಿಯ ಹಬ್ಬವನ್ನು ಈ ಹಿನ್ನೆಲೆಯಲ್ಲಿ ಅವಲೋಕಿಸಿದರೆ ಇದು ಪ್ರತೀ ಋತುಗಳ ಬದಲಾವಣೆಯೊಂದಿಗೆ ಆಚರಿಸುವ ಸಂಪ್ರದಾಯ ಭಾರತದಲ್ಲಿ ಇತ್ತು.

ನವರಾತ್ರಿಯನ್ನು ಋತು ಬದಲಾವಣೆಯ ಸಂಭ್ರಮದೊಂದಿಗೆ ಏಕೆ ಆಚರಿಸಲಾಗುತ್ತಿದೆ ಎನ್ನುವದನ್ನು ತಿಳಿದುಕೊಳ್ಳಬೇಕಾದರೆ ಮೊದಲು ಇದಕ್ಕೆ ಶರನ್ನವರಾತ್ರಿ ಎನ್ನುವ ಹೆಸರು ಏಕೆ ಬಂತು ಎನ್ನುವುದು ಆಸಕ್ತಿದಾಯಕ ವಿಷಯವಾಗಿದೆ. ಚೈತ್ರಮಾಸದಲ್ಲಿ ರಾಮನವಮಿಯ ಮತ್ತು ಗುಡಿಪೌಡ್ವಿ ಹಬ್ಬವನ್ನು ಆಚರಿಸುವದನ್ನು ವಸಂತ ನವರಾತ್ರಿ ಎಂದು ಕರೆಯುತ್ತಾರೆ. ಮಾಘ ನವರಾತ್ರಿ ಎನ್ನುವುದು ಮಾಘ ಮಾಸದಲ್ಲಿ ಬರುತ್ತದೆ. ಅದನ್ನು ವಸಂತ ಪಂಚಮಿ ಎಂದು ಕರೆಯುತ್ತಾರೆ. ವಿದ್ಯೆಗೆ ಅಧಿಪತಿಯಾದ ಸರಸ್ವತಿಯ ಪೂಜೆಯನ್ನು ಈ ನವರಾತ್ರಿಗಳಲ್ಲಿ ಆಚರಿಸಲಾಗುತ್ತದೆ. ಮಾಘ ನವರಾತ್ರಿಯೂ ತಂತ್ರವಿದ್ಯೆಯನ್ನು ಕೈವಶಮಾಡಿಕೊಳ್ಳುವವರಿಗೆ ಮಹತ್ವದ ನವರಾತ್ರಿ. ಈ ನವರಾತ್ರಿಗಳು ನೇಪಾಲ ಮತ್ತು ಟಿಬೇಟಗಳಲ್ಲಿ ರೂಢಿಯಲ್ಲಿದೆ. ಇನ್ನು ಆಷಾಢ ನವರಾತ್ರಿಯನ್ನು ಗುಪ್ತನವರಾತ್ರಿ ಎಂದೂ ಕರೆಯಲಾಗುತ್ತದೆ. ಶುಕ್ಲಪಕ್ಷದ ಪ್ರತಿಪದೆಯಿಂದಾರಂಭಗೊಂಡು ದಶಮಿಯತನಕ ಆಚರಿಸುವ ಈ ರಾತ್ರಿಗಳು ತಾಂತ್ರಿಕ ವಿದ್ಯೆಯನ್ನು ಕೈವಶಮಾಡಿಕೊಳ್ಳಲು ಪ್ರಶಸ್ತಕಾಲ ಎಂದು ಶಾಕ್ತರು ನಂಬಿರುತ್ತಾರೆ. ಶರದೃತು ಬರುವ ಹೊತ್ತಿಗೆ ಆಗಸದಲ್ಲಿನ ಕಪ್ಪನೆಯ ಮೋಡಗಳು ತಮ್ಮಲ್ಲಿರುವ ನೀರನ್ನೆಲ್ಲ ಕಳೆದುಕೊಂಡು ಬೆಳ್ಳಗೆ ಆಕಾಶದಲ್ಲಿ ಹೊಳೆಯುವ ಕಾರಣದಿಂದ ಶರನ್ನವರಾತ್ರಿ ಎನ್ನುವ ಈ ಹಬ್ಬ ವಿಶ್ವದಾದ್ಯಂತ ಆಚರಿಸುವ ಹಬ್ಬವಾಗಿದೆ. ನವರಾತ್ರಿಯ ಸಂಪ್ರದಾಯ ಎಷ್ಟು ಹಳೆಯದು ಅಥವಾ ಅದು ನಿಖರವಾಗಿ ಎಲ್ಲಿ ಪ್ರಾರಂಭವಾಯಿತು ಎಂದು ಹೇಳುವುದು ಕಷ್ಟ. ಇದು ಪುರಾತನ ಸುಗ್ಗಿ ಅಥವಾ ಫಲವತ್ತತೆಯ ಹಬ್ಬ ಎಂದು ಕೆಲವರು ನಂಬುತ್ತಾರೆ. ಈ ಹಬ್ಬದ ಅಧಿ ದೇವತೆ ದುರ್ಗೆ. ಈ ಹಬ್ಬದ ವಿಷಯಕ್ಕೆ ಬರುವುದಾದರೆ ಇದು ಮಾತೃಸ್ವರೂಪಿ ದೇವಿಯರ ಹಬ್ಬ. ಈ ದೇಶದಲ್ಲಿ ಪುರುಷ ದೇವತೆಗಳ ಕುರಿತು ಶಿವ ಹೆಚ್ಚೋ, ವಿಷ್ಣು ಹೆಚ್ಚೋ ಎನ್ನುವ ಚರ್ಚೆಗಳು ಅವರವರ ವಾಟ್ಸಾಪ್ ಗ್ರೂಪುಗಳಲ್ಲಿ ಆಗುವುದು ಸಾಮಾನ್ಯ. ಆದರೆ ಸ್ತ್ರೀ ದೇವತೆಗಳ ವಿಷಯಕ್ಕೆ ಬಂದಾಗ ಈ ಚರ್ಚೆ ಆಗುವುದಿಲ್ಲ. ಪ್ರಧಾನವಾಗಿ ಲಕ್ಷ್ಮಿ ಸರಸ್ವತಿ ಮತ್ತು ಪಾರ್ವತಿಯರನ್ನು ಯಾವ ವಿವಾದಗಳಿಲ್ಲದೇ ಆಚರಿಸುವ ಹಬ್ಬ ಇದು. ಐಶ್ವರ್ಯಕ್ಕೆ ಲಕ್ಷ್ಮಿ, ವಿದ್ಯೆಗೆ ಸರಸ್ವತಿ ಅಧಿಪತಿಗಳಾಗಿದ್ದಾರೆ. ಈ ಎರಡೂ ಎಲ್ಲರಿಗೂ ಬೇಕು. ಆದರೆ ಪಾರ್ವತಿಯ ವಿಷಯದಲ್ಲಿ ಹಾಗಲ್ಲ. ಆಕೆ ತಾಯಿಯಂತೆ ಹಲವು ವಿಧಗಳಲ್ಲಿ ನಮ್ಮನ್ನು ಕಾಪಾಡುವವಳು. ತೊಂದರೆ ಬಂದಾಗ ಶಕ್ತಿ ಸ್ವರೂಪಿಣಿಯಾಗಿ ವೈರಿಗಳನ್ನು ಸಂಹರಿಸುವವಳು. ಕಷ್ಟಗಳನ್ನು ಎದುರಿಸುವಾಗ ಗಟ್ಟಿಯಾಗಿ ಎದುರಿಗೆ ನಿಂತು ಕಾಪಾಡುವವಳು ಮತ್ತು ಹಸಿವಾದವರಿಗೆ ಅನ್ನಪೂರ್ಣೆಯಾಗಿ ಕಾಪಾಡಬಲ್ಲ ಕರುಣಾಮಯಿ ಆಕೆ. ವಿದ್ಯೆ, ಹಣ ಮತ್ತು ಅನ್ನ ಎಲ್ಲರಿಗೂ ಬೇಕಾಗುವುದರಿಂದ ನವರಾತ್ರಿಯಲ್ಲಿ ಈ ಮೂರು ದೇವತೆಯರಿಗೆ ಸಮಾನವಾಗಿ ಪೂಜೆ ಸಲ್ಲುತ್ತದೆ.

ಈ ಎಲ್ಲ ಹಿನ್ನೆಲೆಯಲ್ಲಿ ನವರಾತ್ರಿಯನ್ನು ಗಮನಿಸುವುದಾದರೆ ದೇವಿಯ ಎರಡು ರೂಪದಲ್ಲಿ ಅವಳನ್ನು ಆರಾಧಿಸುವುದು ಇಲ್ಲಿ ವಿಷೇಷ. ಮೊದಲನೆಯದು ದುರ್ಗಾ ಆರಾಧನೆ. ಲೋಕವನ್ನು ಕಾಡಿದ ಮಹಿಷ ಎನ್ನುವ ರಾಕ್ಷಸನನ್ನು ಕೊಂದು ಲೋಕವನ್ನು ಕಾಪಾಡಿದ ಹಿನ್ನೆಲೆಯಲ್ಲಿ ದುರ್ಗೆಯ ರೂಪದಲ್ಲಿ ಆಕೆಗೆ ಪೂಜೆ ಸಲ್ಲುತ್ತದೆ. ದೇವಿ ಚಂಡಿಕೆಯಾಗಿ ಪ್ರಪಂಚವನ್ನು ಕಾಪಾಡಿದ ಕಥೆಯನ್ನು ವರ್ಣಿಸುವದು ಮಾರ್ಕಾಂಡೇಯ ಪುರಾಣದ ವೈಷ್ಣವಕಾಂಡದಲ್ಲಿ ಏಳುನೂರು ಶ್ಲೋಕಗಳಲ್ಲಿ ವರ್ಣಿತವಾಗಿವೆ. ಇದನ್ನೆ ದುರ್ಗಾ ಸಪ್ತಶತಿಯೆನ್ನುತ್ತಾರೆ. ಬಂಗಾಲದಲ್ಲಿ ಚಂಡೀಪಥ ಎನ್ನುತ್ತಾರೆ. ಮಹಿಷನ ಜನ್ಮದ ಕುರಿತು ದೇವಿ ಭಾಗವತ, ಮತ್ಸ್ಯ ಪುರಾಣಗಳಲ್ಲಿ ಎಲ್ಲ ಬೇರೆ ಬೇರೆಯಾಗಿವೆ. ಲೋಕ ಕಂಟಕನಾಗಿದ್ದ ಮಹಿಷನನ್ನು ಕೊಂದನಂತರದಲ್ಲಿ ದುರ್ಗೆಯ ಆವೇಶ ಇಳಿಯುವುದಿಲ್ಲ ಭಯಂಕರ ರೂಪ ಆಕೆಯದು . ಸಿಂಹವಾಹನದಲ್ಲಿ ಕಾತ್ಯಾಯಿನಿಯಾಗಿ ಮೆರೆಯುತ್ತಿದ್ದವಳನ್ನು ಸಮಾಧಾನಿಸಿದದಿದ್ದರೆ ಲೋಕ ಉಳಿಯುವುದಿಲ್ಲ. ‘ದುರ್ಗ’ ಎನ್ನುವದಕ್ಕೆ ರಾಕ್ಷಸ, ಮಹಾವಿಘ್ನ, ಕರ್ಮ, ದುಃಖ, ಯಮದಂಡ, ಮಹಾಭಯ ಹೀಗೆ ಹಲ ಅರ್ಥಗಳುಂಟು. ‘ಆ’ ಎಂದರೆ ಅವುಗಳನ್ನು ನಾಶಗೊಳಿಸುವವಳು ಎಂದು ಅರ್ಥ. ಹಾಗಾಗಿ ‘ದುರ್ಗಾ’ ಎಂದರೆ ಜೀವಿಗಳನ್ನು ಕಾಡುವ ಈ ಎಲ್ಲಾ ಅರಿಷ್ಟಗಳನ್ನು ಹೋಗಲಾಡಿಸುವವಳು ಎಂದು ಅರ್ಥ. ಆಗ ಅವಳ ರೂಪವನ್ನು ಶಾಂತಗೊಳಿಸಿ ಲೋಕ ಮಾತೆಯನ್ನಾಗಿಸುವುದಕ್ಕೆ ದೇವತೆಗಳು ಸುಮೇಧ ಎನ್ನುವ ಮುನಿಯನ್ನು ಕೇಳಿಕೊಂಡಾಗ ಆತ ಎಲ್ಲಾ ದೇವತೆಗಳನ್ನು ಸೇರಿಸಿ ದೇವಿಯ ಸ್ತ್ರೋತ್ರವನ್ನು ಮಾಡುತ್ತಾನೆ. ಅದೇ ಸಪ್ತಶತಿಯ ಹಿನ್ನೆಲೆಯಾಗಿದೆ. ಇದನ್ನು ದೇವಿ ಮಹಾತ್ಮೆಯೆಂದೂ ಸಹ ಹೇಳುತ್ತಾರೆ. ದೇವಿ ಮಹಿಷನನ್ನು ಸಂಹರಿಸಿ ಪ್ರಸನ್ನಗೊಂಡು ದೇವತೆಗಳಿಗೆ ವರಕೊಟ್ಟು ಅಂತರ್ಧಾನಳಾಗುತ್ತಾಳೆ. ಈ ಮಹಾತ್ಮೆಯನ್ನು ಸುಮೇಧ ಮುನಿ ವರ್ಣಿಸುತ್ತಾ ಶುಂಭ ನಿಶುಂಬರೆನ್ನುವ ದೈತ್ಯರನ್ನು ಸಂಹರಿಸಿದ ಕಥೆಗಳನ್ನು ಹೇಳುತ್ತಾರೆ. ಈ ನೆನಪಿಗಾಗಿ ದೇವಿಯನ್ನು ನವರಾತ್ರಿಯಂದು ದಿನಕ್ಕೊಂದರಂತೆ ಶೈಲಪುತ್ರಿ, ಬ್ರಹ್ಮಚಾರಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯನಿ, ಕಾಳರಾತ್ರಿ, ಮಹಾಗೌರಿ ಮತ್ತು ಸಿದ್ಧಿಧಾತ್ರಿ ಎನ್ನುವ ನವದುರ್ಗೆಯ ರೂಪದಲ್ಲಿ ಪೂಜಿಸುತ್ತಾರೆ.

ಬ್ರಹ್ಮಾಂಡ ಪುರಾಣದ ಲಲಿತೋಪಾಖ್ಯಾನದಲ್ಲಿ ಶ್ರೀ ದೇವಿಯ ಮತ್ತೊಂದು ಮಹಿಮೆ ವರ್ಣಿತವಾಗಿದೆ. ಬ್ರಹ್ಮಾಂಡ ಪುರಾಣವನ್ನು ಪುರಾಣಗಳಲ್ಲೇ ಅತ್ಯಂತ ಹಳೆಯದು ಎಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಶ್ರೀ ದೇವಿ ಸಪ್ತಶತಿಯಂತೆ ಲಲಿತಾ ಪಂಚದಶಿ ಪಾರಾಯಣವೂ ನವರಾತ್ರಿ ಹಬ್ಬದಲ್ಲಿ ಫಲದಾಯಕವೆಂದು ಬಣ್ಣಿಸಲಾಗಿದೆ. ಒಟ್ಟೂ ಮೂವತ್ತೆರಡು ಅಧ್ಯಾಯಗಳಲ್ಲಿ ವರ್ಣಿತವಾಗಿರುವ ಲಲಿತೋಪಾಖ್ಯಾನವನ್ನು ಗಮನಿಸಿದರೆ ಇದರ ಪ್ರಭಾವದಿಂದಲೇ ಮುಂದೆ ಸಪ್ತಶತಿಯ ರಚನೆಯಾಗಿರಬಹುದಾಗಿದೆ. ಆರು ಅಧ್ಯಾಯಗಳಲ್ಲಿ ಕಾಂಚಿ ಕ್ಷೇತ್ರದ ಮಹಾತ್ಮೆ ಹಾಗು ಇನ್ನಿತರ ವಿಷಯಗಳು ವರ್ಣಿತವಾಗಿದೆ. ಶಂಕರಾಚಾರ್ಯರಿಂದ ರಚಿತವಾದ ಸೌಂದರ್ಯ ಲಹರಿಯಲ್ಲಿ ಬರುವ ಲಲಿತಾ ತ್ರಿಪುರಸುಂದರಿಯ ಮಹಾತ್ಮೆ ಇದು. ಆದಿಲಕ್ಷ್ಮಿ ಸ್ವರೂಪಿಣಿಯೂ ಶ್ರೀ ಲಲಿತಾ ತ್ರಿಪುರಸುಂದರಿಯ ಮತ್ತೊಂದು ರೂಪವೂ ಆದ ಶ್ರೀ ಕಾಮಾಕ್ಷಿ ದೇವಿಯ ಚರಿತ್ರೆಯೂ ಇದಾಗಿದೆ. ಇಲ್ಲಿ ಬರುವ ಮುಖ್ಯವಾದ ವಿಷಯವೆಂದರೆ ಲಲಿತೆ ಸಿಂಹವಾಹನಳಾಗಿ ಭಂಡಾಸುರನೆನ್ನುವ ದೈತ್ಯನನ್ನು ಸಂಹರಿಸುವ ಕಥೆ ಇದಾಗಿದೆ. ಮಹಾವಿಷ್ಣುವೇ ಹಯಗ್ರೀವನಾಗಿ ಅಗಸ್ತ್ಯರಿಗೆ ತ್ರಿಪುರಸುಂದರಿಯ ವರ್ಣನೆಯನ್ನು ವಿವರಿಸಿದ್ದಾನೆ.

ಕಥೆ ಪ್ರಾರಂಭವಾಗುವುದೇ ಮನ್ಮಥ ಶಿವನ ಮೂರನೆಯ ಕಣ್ಣಿಗೆ ಸಿಕ್ಕು ಭಸ್ಮವಾಗುವಲ್ಲಿಂದ. ಶಿವನ ಗಣಗಳಲ್ಲಿ ಓರ್ವನಾದ ಚಿತ್ರಕರ್ಮನೆನ್ನುವ ಗಣೇಶ್ವರ ಆ ಚಿತಾಭಸ್ಮವನ್ನು ಒಟ್ಟುಗೂಡಿಸಿ ಒಂದು ಪುರುಷಾಕಾರವನ್ನು ಮಾಡಿದನು. ಅದನ್ನು ಪರಶಿವ ಒಮ್ಮೆ ನೋಡಿದ್ದೇ ತಡ ಆ ಚಿತ್ರಾಕಾರಕ್ಕೆ ಮನ್ಮಥನ ರೂಪವೂ ಮಹಾಬಲ ಮತ್ತು ತೇಜಸ್ಸು ಸೇರಿ ಜೀವ ತಳೆಯಿತು. ಚಿತ್ರಕರ್ಮ ಅವನಿಗೆ ಶತರುದ್ರೀಯವನ್ನು ಉಪದೇಶಮಾಡಿ ಮಹಾದೇವನನ್ನು ಒಲಿಸಿ ವರಪಡೆಯಲು ಸೂಚನೆಯಿತ್ತನು. ತಪಸ್ಸಿಗೆ ಮೆಚ್ಚಿದ ಮಹಾದೇವ ಆತನೆದುರು ಪ್ರತ್ಯಕ್ಷನಾದಾಗ ಎಲ್ಲಾ ರಾಕ್ಷಸರಂತೆ ಆತ ತನಗೆ ಯುದ್ಧದಲ್ಲಿ ಎದುರಾಳಿಯ ಅರ್ಧ ಬಲ ತನಗೆ ಸೇರಲಿ ಮತ್ತು ಅವರ ಅಸ್ತ್ರ ಶಸ್ತ್ರಗಳೆಲ್ಲವೂ ತನ್ನಮೇಲೆ ನಿರರ್ಥಕವಾಗಲಿ ಎಂದು ವರ ಕೇಳಿದ. ಈಶ್ವರ ಎಂದಿನಂತೆ ಅನುಗ್ರಹಿಸುವಾಗ ಬ್ರಹ್ಮ ಇದರಿಂದ ಆತಂಕಿತನಾಗಿ “ಭಂಡ ಭಂಡ” ಎಂದು ಉದ್ಗರಿಸಲು ಆತನಿಗೆ ಭಂಡಾಸುರ ಎನ್ನುವ ಹೆಸರು ಬಂತು. ಬಲ ಪಡೆದ ಆತ ಶೂನ್ಯಪುರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡ. ದೈತ್ಯಗುರು ಶುಕ್ರಾಚಾರ್ಯ ಹಿರಣ್ಯ ಕಶಿಪುವಿಗೆ ಬ್ರಹ್ಮ ಯಾವ ಬಂಗಾರದ ಕಿರೀಟವನ್ನು ಕೊಟ್ಟಿದ್ದನೋ ಅದನ್ನೇ ಭಂಡಾಸುರನ ತಲೆಯ ಮೇಲೆ ಇಟ್ಟ. ಲೋಕದ ಎಲ್ಲಾ ದಾನವರು ಆತನ ನೇತ್ರತ್ವದಲ್ಲಿ ಒಂದಾದರು. ವರಬಲದಿಂದ ಮದಾನ್ವಿತನಾಗಿ ಸ್ವರ್ಗದಲ್ಲಿರುವ ದೇವತೆಗಳನ್ನೆಲ್ಲ ಪೀಡಿಸತೊಡಗಿದ. ಮೂರು ಲೋಕವೂ ಆತನ ಉಪಟಳದಿಂದ ನಲುಗಿತು. ಕಂಗಾಲಾದ ದೇವತೆಗಳು ಇದರಿಂದ ಪಾರಾಗಲು ಪರಾಶಕ್ತಿಯ ಅನುಗ್ರಹವೇ ಅಗತ್ಯವೆಂದು ತಿಳಿದು ಮಂಡಲಾಕಾರದ ಯಜ್ಞಕುಂಡವನ್ನು ರಚಿಸಿ ಅದರಲ್ಲಿ ತಮ್ಮ ತಮ್ಮ ಕೈ ಕಾಲುಗಳನ್ನು ಹವಿಸಿ ಯಜ್ಞವನ್ನು ಮಾಡಿದರು. ತಮ್ಮನ್ನೇ ಅರ್ಪಿಸಿಕೊಳ್ಳಲು ಮುಂದಾದಾಗ ಆ ಯಜ್ಞದಿಂದ ಪರಮ ತೇಜಃಪುಂಜವಾದ ಚಕ್ರಾಕಾರವೊಂದು ಉದಯವಾಯಿತು. ಆ ಚಕ್ರದ ಮಧ್ಯದಲ್ಲಿ ತ್ರಿಮೂರ್ತಿಗಳ ಆತ್ಮಿಕೆಯಾದ, ಸೌಂದರ್ಯ ಸಾರಕ್ಕೆ ಸೀಮಂತಪ್ರಾಯವಾದ ಆನಂದ ರಸಕ್ಕೆ ಸಾಗರಪ್ರಾಯಳಾದ ತ್ರಿಪುರಸುಂದರಿಯಾದ ಮಹಾದೇವಿ ಪಾಶ ಅಂಕುಶ ಇಕ್ಷು ಕೋದಂಡ ಪಂಚಬಾಣಗಳು ಮುಂತಾದವುಗಳಿಂದ ಅಲಂಕೃತಳಾಗಿ ಪ್ರತ್ಯಕ್ಷಳಾದಳು.

ಸರ್ವಾಭರಣಸಂಯುಕ್ತಾಂ ಶೃಂಗಾರೈಕರಸಾಲಯಾಂ
ಕೃಪಾತರಂಗಿತಾಪಂಗನಯನಾ ಲೋಕಕೌಮುದೀಂ
ಪಾಶಾಂಕುಶೇಕ್ಷು ಕೋದಂಡ ಪಂಚಬಾಣಲಸತ್ಕರಾಂ
ತಾಂ ವಿಲೋಖ್ಯ ಮಹಾದೇವೀಂ ದೇವಾಃ ಸರ್ವೇ ಸವಾಸವಾಃ II

ಆಕೆಯ ರೂಪಕ್ಕೆ ಅನುರೂಪವುಳ್ಳ ವರನೆಂದರೆ ಮಹಾದೇವನ ಹೊರತೂ ಬೇರ್ಯಾರೂ ಅಲ್ಲವೆಂದು ಬ್ರಹ್ಮನು ವಿಚಾರ ಮಾಡಲು ಚಿದಂಬರನಾದ ಆತ ತನ್ನ ದಿಗಂಬರ ರೂಪವನ್ನು ಬಿಟ್ಟು ಕೋಟಿ ಮನ್ಮಥರ ಸೌಂದರ್ಯದಿಂದ ಕಂಗೊಳಿಸಿದ. ಮಹಾಲಾವಣ್ಯವತಿಯಾದ ಲಲಿತಾಂಬಿಕೆ ಕಾಮವನ್ನು ಜಯಿಸಿದವನೂ ಆನಂದ ಸ್ವರೂಪನೂ ಆದ ಮಂಗಳಮಯನಾದ ಶಿವನನ್ನು ಮೆಚ್ಚಿದಳು. ಆಕೆ ಅಗ್ನಿ ಸ್ವರೂಪಳು. ಈತ ಹಣೆಯಲ್ಲಿಯೇ ಅಗ್ನಿಯನ್ನು ಹೊತ್ತವ. ಇದು ತೇಜಸ್ಸು ತೇಜಸ್ಸಿನಲ್ಲಿಯೇ ಸೇರಿತು. ಇಲ್ಲಿ ಗಮನ ಹರಿಸಬೇಕಾದ ಸಂಗತಿಯೆಂದರೆ ಮೊದಲು ಶ್ರೀ ಚಕ್ರದ ಮತ್ತು ದೇವಿಯ ಆರಾಧನೆ ವಾಮಾಚಾರದ ಮುಖ್ಯ ಭಾಗವಾಗಿತ್ತು. ನರಬಲಿಯಂತಹ ಕ್ರೂರ ವಿಧಾನವನ್ನು ಅನುಸರಿಸುತ್ತಿದ್ದರು. ದುರ್ಗೆಯೆಂದರೆ ದುಷ್ಟಶಕ್ತಿಯ ಮೇಲಿನ ಸಾತ್ವಿಕ ವಿಜಯವೆನ್ನುವುದರ ಭಾವವಿರಲಿಲ್ಲ. ತಂತ್ರಗಳಿಗೆ ಬೇಕಾದ ಸಾತ್ವಿಕ ವಿಧಾನವನ್ನು ಅನುಗ್ರಹಿಸಿ ಹಿಂಸಾ ಮಾರ್ಗದಿಂದ ಲೋಕವನ್ನು ವಿಮುಖಮಾಡುವುದರಲ್ಲಿ ಶಂಕರರ ಪಾತ್ರ ಬಲು ದೊಡ್ಡದು. ಅದಕ್ಕಾಗಿ ಮಂತ್ರ ಹಾಗೂ ಯಂತ್ರ ಶಾಸ್ತ್ರಗಳಿಗೆ ಮಾರ್ಗದರ್ಶನವನ್ನು ನೀಡುವ ಈ ಶ್ಲೋಕದ ಮೂಲಕ ಅವರು ದುರ್ಗೆಯನ್ನು ಜಗನ್ಮಾತೆಯನ್ನಾಗಿ ಬದಲಾಯಿಸಿದರು. ಶ್ರೀ ವಿದ್ಯೆ ಅಥವಾ ಶ್ರೀ ಚಕ್ರದ ಪೂಜೆಯನ್ನು ಸಾತ್ವಿಕ ವಿಧಿಗಳಿಗನುಸಾರವಾಗಿ ಶಂಕರರಾಚಾರ್ಯರ ಮಾರ್ಗದರ್ಶನದಿಂದ ಪ್ರಾರಂಭವಾಯಿತು. ನಂತರದಲ್ಲಿ ವಿಶ್ವಕರ್ಮ ಆಕೆಗಾಗಿ ನಗರವೊಂದನ್ನು ನಿರ್ಮಾಣ ಮಾಡಿದ. ತಕ್ಷಣವೇ ಸಪ್ತಮಾತ್ರಿಕೆಯವರಾದ ಬ್ರಾಹ್ಮೀ, ಮಾಹೇಶ್ವರಿ, ಕೌಮಾರೀ, ವೈಷ್ಣವೀ, ವಾರಾಹೀ, ಇಂದ್ರಾಣೀ, ಚಾಮುಂಡಾ ಇವರುಗಳು ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ,ಪ್ರಾಕಾಮ್ಯ, ಈಶತ್ವ. ವಶಿತ್ವ ಎನ್ನುವ ಅಷ್ಟ ಸಿದ್ಧಿಯೊಡನೆ ಬಂದು ಸೇರಿಕೊಂಡರು. ಈ ಎಲ್ಲವನ್ನು ಸೇರಿಕೊಂಡು ಶಕ್ತಿಸೇನೆ ಎನ್ನುವ ಹೆಸರಿನಲ್ಲಿ ಭಂಡಾಸುರನ ಪುರಕ್ಕೆ ಹೊರಟು ಮೊದಲು ಆತನ ಒಡನಾಡಿಗಳಾದ ಕರಂಕ, ಬಲಾಹಕ, ವಿಷಂಗ, ವಿಶುಕ್ರ, ವಿಷಂಗ ಮೊದಲಾದವರನ್ನು ವಧಿಸಿದಳು. ನಂತರ ಬಂದ ಭಂಡದೈತ್ಯನಿಗೂ ದೇವಿಗೂ ಭೀಕರವಾದ ಯುದ್ಧ ನಡೆಯಿತು. ಯುದ್ಧದಲ್ಲಿ ಅವರು ಪ್ರದರ್ಶಿಸಿದ ಪರಾಕ್ರಮ ರೋಮಾಂಚನ ಗೊಳಿಸುತ್ತದೆ. ಭಂಡಾಸುರ ತಪಸ್ಸಿನ ಬಲದಿಂದ ತನ್ನ ಪರವಾಗಿ ಹೋರಾಟ ನಡೆಸಲು ರಾವಣ, ಬಲಿ, ಮೇಘನಾದ ಕುಂಭಕರ್ಣ ಹೀಗೆ ಹಲವರನ್ನು ರಣಭೂಮಿಯಲ್ಲಿ ಸೃಷ್ಟಿಸಿದರೆ; ತ್ರಿಪುರಾಂಬಿಕೆಯೂ ತನ್ನ ಸಂಕಲ್ಪಮಾತ್ರದಿಂದ ಭಾರ್ಗವರಾಮ, ಕೋದಂಡ ರಾಮ ಲಕ್ಷ್ಮಣರು, ಹಲಧರ, ವಾಸುದೇವ ಶ್ರೀ ಕೃಷ್ಣ, ಕಲ್ಕಿ ಮುಂತಾದವರನ್ನು ಸೃಷ್ಟಿಸುತ್ತಾಳೆ. ಭೀಕರ ಹೋರಾಟದಲ್ಲಿ ದೇವಿ ಬಿಟ್ಟ ನಾರಾಯಣಾಸ್ತ್ರಕ್ಕೆ ಭಂಡಾಸುರನ ವಧೆಯಾಗುತ್ತದೆ.

ಹೀಗೆ ನವರಾತ್ರಿಯ ದೇವಿ ಮಹಾತ್ಮೆಯು ಸಪ್ತಶತಿ ಮತ್ತು ತ್ರಿಪುರ ಸುಂದರಿ ಲಲಿತೋಪಖ್ಯಾನಗಳ ಮೂಲಕವಾಗಿ ದುಷ್ಟ ಶಕ್ತಿಯ ವಿರುದ್ಧ ಸಾತ್ವಿಕ ಶಕ್ತಿಯ ಜಯವನ್ನು ಸಾರುತ್ತದೆ. ಕೊನೆಯ ದಿನವಾದ ವಿಜಯ ದಶಮಿಯಂದು ಶ್ರೀ ರಾಮ ರಾವಣನನ್ನು ಕೊಂದು ಅಯೋಧ್ಯೆಗೆ ಹಿಂತಿರುಗಿದ ವಿಜಯ ದಿನಗಳನ್ನಾಗಿ ಆಚರಿಸುತ್ತಾರೆ. ಈ ಎರಡೂ ಕಥೆಗಳಲ್ಲಿ ದೇವಿಯ ಉಗ್ರ ರೂಪದ ವರ್ಣನೆಯಿದೆ. ಇಡೀ ಪುರಾಣ ಕೆಲ ಕಡೆ ಭಾಗವತದ ಪ್ರಭಾವ, ಮಹಾಭಾರತದ ಅಶ್ವಮೇದಿಕ ಪರ್ವ, ರಾಮಾಯಣ ಮಹಾಭಾರತದ ವ್ಯಕ್ತಿಗಳೆಲ್ಲ ದೇವಿಯ ಪರವಾಗಿ ಹೋರಾಡಲು ಉಗಮಿಸುವುದು, ಇವನ್ನೆಲ್ಲವನ್ನೂ ಗಮನಿಸಿದರೆ, ಇದು ಕಾವ್ಯ ಗುಣಕ್ಕಿಂತ ಆರಾಧನಾ ಭಾವದಲ್ಲಿ ಇರುವ ಕೃತಿಯಾಗಿದೆ. ಇಲ್ಲಿ ದುರ್ಗೆಯ ವೀರ ಮತ್ತು ಬೀಭತ್ಸ ರೂಪವನ್ನು ಚಿತ್ರಿಸಲಾಗಿದೆ. ತ್ರಿಪುರ ಸುಂದರಿ ಎನ್ನುವ ಆಕೆಯ ಕಾರುಣ್ಯ ಭಾವ ಮತ್ತು ಮುದಗೊಳಿಸುವ ದೇವಿಯ ಸೌಂದರ್ಯದ ಸೊಭಗನ್ನು ವರ್ಣಿಸುವುದು ಶಂಕರ ಭಗವತ್ಪಾದರಿಂದ ರಚಿತವಾದ ಸೌಂದರ್ಯ ಲಹರಿಯಲ್ಲಿ. ನೂರು ಶ್ಲೋಕಗಳುಳ್ಳ ಸೌಂದರ್ಯ ಲಹರಿಯ ಭಾರತೀಯ ಕಾವ್ಯ ಪರಂಪರೆಯಲ್ಲಿಯೇ ಒಂದು ಅತ್ಯಂತ ಮನೋಹರವಾದ ಕಾವ್ಯಗುಚ್ಛಗಳು. ಶಂಕರರ ಭಜಗೋವಿಂದವಿರಲಿ, ನಿರ್ವಾಣ ಷಟ್ಕವಿರಲಿ ರಚನಾ ಕೌಶಲ್ಯದಿಂದ ಮನಸ್ಸನ್ನು ಸೆರೆಹಿಡಿಯುವ ಗುಣ ಅವರ ಕಾವ್ಯಕ್ಕಿದೆ. ಕಾವ್ಯದ ಗೇಯತೆಯಲ್ಲಿ ತತ್ತ್ವಶಾಸ್ತ್ರವನ್ನೂ, ತತ್ತ್ವ ಶಾಸ್ತ್ರದಲ್ಲಿ ಕಾವ್ಯವನ್ನು ಹೃದಯಕ್ಕೆ ಮುಟ್ಟುವಂತೆ ತಿಳಿಸಬಲ್ಲ ಯೋಗಿ ಅವರು. ಲಹರಿ ಎಂದರೆ ತರಂಗ ಎನ್ನುವ ಅರ್ಥವಿದೆ. ನೂರು ಶ್ಲೋಕಗಳ ಸೌಂದರ್ಯ ಲಹರಿಯಲ್ಲಿ ಆನಂದ ಲಹರಿ ಮತ್ತು ಸೌಂದರ್ಯ ಲಹರಿ ಎನ್ನುವ ಎರಡು ಭಾಗಗಳಿವೆ. ನಿರ್ವಾಣ ಷಟ್ಕದಲ್ಲಿ

ಮನೋ ಬುದ್ಧಿ ಅಹಂಕಾರ ಚಿತ್ತಾನಿ ನಾಹಮ್ ॥
ನ ಚ ಶ್ರೋತ್ರಜಿಹ್ವೇ ನ ಚ ಘ್ರಾಣ ನೇತ್ರೇ
ನ ಚ ವ್ಯೋಮ ಭೂಮಿರ್ ನ ತೇಜೋ ನ ವಾಯುಃ
ಚಿದಾನಂದ ರೂಪಃ ಶಿವೋಹಂ ಶಿವೋಹಂ॥

ಚಿದಾನಂದ ಸ್ವರೂಪನಾದ ಶಿವನೇ ತಾನು ಎಂದು ಹೇಳಿಕೊಂಡ, “ಬ್ರಹ್ಮ ಸತ್ಯಂ, ಜಗನ್ಮಿಥ್ಯಾ ಜೀವೋ ಬ್ರಹ್ಮೈವ ನಾಪರಃ” ಎಂದು ಮಾಯೆಯ ಕುರಿತಾಗಿ ಹೇಳಿದ ವ್ಯಕ್ತಿ ಇಲ್ಲಿ ಪಾರ್ವತಿಯ ಸೌಂದರ್ಯವನ್ನು ವರ್ಣಿಸುವುದು ವಿರೋಧಾಭಾಸವಾಗಿ ಕಾಣಬಹುದು. ಶಂಕರರ ಭಾಷ್ಯಗಳನ್ನುಳಿದು ಇತರ ಕೃತಿಗಳಲ್ಲಿ ಗೃಹಸ್ಥರಿಗೆ ಅಗತ್ಯವಾದ ಬದುಕ್ನ ರೀತಿಯನ್ನು ವಿವರಿಸುತ್ತಾರೆ. ಅವರು ವ್ಯಾವಹಾರಿಕ ಸತ್ಯವನ್ನು ಹೇಳುತ್ತಾ ಆ ಮೂಲಕ ಬ್ರಹ್ಮ ಸತ್ಯದ ಕಡೆ ಸಾಗಬೇಕೆನ್ನುವುದನ್ನು ತಿಳಿಸುತ್ತಾರೆ. ಇಲ್ಲಿಯೂ ದೇವಿಯ ವರ್ಣನೆಯನ್ನು ನಂತರ ಕೇಂದ್ರೀಕರಿಸುವುದು ಶ್ರೀ ಚಕ್ರದಲ್ಲಿ. ಅದು ಪರಬ್ರಹ್ಮವನ್ನು ಏರಲಿಕ್ಕೆ ಇರುವ ಕೊನೆಯ ಮೆಟ್ಟಿಲು. ಸೌಂದರ್ಯ ಲಹರಿಯೆನ್ನುವುದು ಭಗವತ್ಪಾದರು ಯಾವ ಚಿದಾನಂದ ಸ್ವರೂಪವನ್ನು ಕಂಡು ಆನಂದಿಸಿದ್ದರೋ ಅದನ್ನು ಸೌಂದರ್ಯದ ಪರಿಭಾಷೆಯಲ್ಲಿ ವಿವರಿಸಿದ್ದಾರೆ. ಇಲ್ಲಿ ಬರುವ ಪಾರ್ವತಿಯ ಸೌಂದರ್ಯದ ವರ್ಣನೆಯ ಹಿಂದೆ ಮಗು ತನ್ನ ತಾಯಿಯನ್ನು ನೋಡಿ ವರ್ಣಿಸಿದಂತಿದೆ. ರಾಗವಾಗಿ ಹಾಡಿಕೊಂಡು ಹೋದಾಗ ದೇವಿ ಶಿವೆಯಾಗಿ ಲೋಕಕ್ಕೆ ಮಂಗಳವನ್ನು ಕರುಣಿಸುವ ಕರುಣಾಮಯಿಯಾಗಿ ಮೂರ್ತಗೊಳ್ಳುತ್ತಾಳೆ.

ದೇವಿಯ ಆ ಅನುಪಮ ದಿವ್ಯ ದೃಷ್ಟಿ ನಮ್ಮಮೇಲೆ ಸದಾ ಇರಲಿ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಭಾರತದ ಅಂತಃಶಕ್ತಿಯನ್ನು ಜಾಗೃತಗೊಳಿಸಿದ ವಾಮನ ಮೂರ್ತಿ

Exit mobile version