ಭಾಗ – 1
ಇಳೆ ಋತುಮಾನಕ್ಕನುಸಾರವಾಗಿ ತನ್ನ ಮೇಲ್ಮೈ ಮೇಲೆ ಬಣ್ಣಬಣ್ಣದ ಉಡುಪನ್ನು ತೊಡುತ್ತಿರುವಾಗ ಸೃಷ್ಟಿಯ ಸೌಂದರ್ಯವನ್ನು ನೋಡಿದ ಮಾನವನಿಗೆ ಸಹಜವಾಗಿ ಏಕತಾನತೆಯಿಂದ ಹೊರಬಂದ ಆನಂದವೇ ಹಬ್ಬಗಳ ರೂಪದಲ್ಲಿ ಆಚರಿಸಲ್ಪಟ್ಟವು. ಮನುಷ್ಯ ತನ್ನ ವಿಕಾಸದ ಹಾದಿಯಲ್ಲಿ ನಾಗರಿಕತೆಯ ಮೆಟ್ಟಿಲಿಗೆ ಏರುವಾಗ ತನ್ನ ಸುತ್ತಲಿನ ಪರಿಸರದೊಂದಿಗೆ ತಾದಾತ್ಮ್ಯಭಾವವನ್ನು ಹೊಂದಿದ್ದ. ತಾಯಿಯಿಂದ ಪ್ರೀತಿಯ ಅನುಭವವನ್ನು ಕಂಡ ಆತನಿಗೆ ಆ ಮಮತೆಯ ಅನುಭವವಕ್ಕೆ ಮೂಲ ಈ ಪ್ರಕೃತಿ ಎನ್ನುವದು ಮನದಟ್ಟಾಯಿತು. ಹಾಗಾಗಿ ಪ್ರಕೃತಿಯನ್ನು ತಾಯಿಯ ಸ್ಥಾನದಲ್ಲಿಟ್ಟು ಪೂಜಿಸಲಾರಂಭಿಸಿದ. ಅಥರ್ವವೇದದಲ್ಲಿ ಬರುವ ಭೂಮಿ ಸೂಕ್ತದಲ್ಲಿ,
ಯಸ್ಯಾಂ ಸಮುದ್ರ ಉತ ಸಿಂಧುರಾಪೋ ಯಸ್ಯಾಮನ್ನಂ ಕೃಷ್ಟಯಃ ಸಂಬಭೂವುಃ I
ಯಸ್ಯಾಮಿದಮ್ ಜಿನ್ವತಿ ಪ್ರಾಣದೇಜತ್ ಸಾ ನೋ ಭೂಮಿಃ ಪರ‍್ವಪೇಯೇ ದಧಾತು II ೧೨-೩
“ಯಾವ ಭೂಮಿಯಲ್ಲಿ ಸಮುದ್ರ, ನದಿ-ಪ್ರವಾಹಗಳು ಇರುವವೋ, ಯಾವ ಭೂಮಿಯು ಕೃಷಿಯ ಮೂಲಕ ನಮಗೆ ಸಮೃದ್ಧವಾದ ಅನ್ನಾದಿಗಳನ್ನು ನೀಡುತ್ತದೋ, ಯಾವ ಭೂಮಿಯ ಮೇಲೆ ನಾನಾ ವಿಧದ ಜೀವಿಗಳು ಉಪಜೀವಿಸುತ್ತದೆಯೋ ಅಂತಹ ಸರ್ವಾಶ್ರಯವಾದ ಭೂಮಿಯು ನಮಗೆ ದಿವ್ಯ ಆಸರೆಯನ್ನು ನೀಡಲಿ” ಎಂದು ಬೇಡಿಕೊಳ್ಳುವದನ್ನು ಗಮನಿಸಬಹುದು. ಋಗ್ವೇದದಲ್ಲಿ ಬರುವ ನಾಸಾದೀಯವಂತೂ ಸೃಷ್ಟಿ ಹೇಗಾಯಿತು ಎನ್ನುವದರ ಕುರಿತು ವಿವರಿಸುತ್ತದೆ. ವೇದಗಳಲ್ಲಿ ಉಷಾ, ಇಳಾ, ಸರಸ್ವತಿ ಈ ಎಲ್ಲಾ ಶಕ್ತಿಸ್ವರೂಪದ ಕುರಿತು ಹೇಳುತ್ತಿದ್ದರೂ ಅವರೆಲ್ಲರೂ ದುಷ್ಟರ ವಿರುದ್ಧ ಹೋರಾಡುವವರಾಗಿರಲಿಲ್ಲ. ಆ ಕೆಲಸವನ್ನು ಇಂದ್ರ, ವರುಣ ಮುಂತಾದವರು ಮಾಡುತ್ತಿದ್ದರು. ಋಗ್ವೇದದಿಂದ ಅಥರ್ವವೇದಕ್ಕೆ ಬರುವಾಗ ಈ ಚಿಂತನಾ ಕ್ರಮಗಳಿಗಿಂತ ನಮಗೆ ಆಸರೆಯನ್ನು ನೀಡುವ ಈ ಭೂಮಿಯೇ ನಮ್ಮ ನಾಥ, ಇದುವೇ ದೇವರು, ಭೂಮಿಯನ್ನು ಆರಾಧನೆಗಳ ಮೂಲಕ ಅಭಿವಂದಿಸಬೇಕೆನ್ನುವ ಭಾವ ಬಂದಿರುವದನ್ನು ಈ ಸೂಕ್ತದಲ್ಲಿ ಗಮನಿಸಬಹುದು.
ಈ ಕ್ರಮವೇ ಮುಂದುವರಿದಂತೆ ಈ ಭೂಮಿ, ಆಕಾಶ, ಸಮಷ್ಟಿಗಳಿಗೆಲ್ಲಾ ಸರ್ವ ಅಧಿನಾಯಕನಿದ್ದಾನೆ, ಅದು ಮಾತೃಸ್ವರೂಪದ ದೇವರು ಎನ್ನುವ ಮೂಲಕ ಧಾರ್ಮಿಕ ಹಬ್ಬಗಳು ರೂಢಿಗೆ ಬಂದುದಿರಬೇಕು. ಹಾಗಾಗಿ ವೇದಕಾಲದ ಕೆಲವೇ ಜನರನ್ನು ಒಳಗೊಂಡ ಬ್ರಹ್ಮತ್ವದ ಚಿಂತನಾಪ್ರಧಾನವಾದ ಸಮಾಜಕ್ಕಿಂತ ನಂತರದ ಪುರಾಣದ ಕಾಲದ ಹೊತ್ತಿಗೆ ಆರಾಧನಾ ಪ್ರಧಾನವಾಗಿ ಸಮಗ್ರ ಜನಪದವನ್ನು ಒಳಗೊಂಡ ಉತ್ಸವವಾಗಿ ರೂಪಾಂತರಗೊಂಡಿರಬೇಕು. ಹಾಗಾಗಿ ಹಬ್ಬಗಳು ಭಾರತೀಯರ ಸಂಸ್ಕೃತಿಯಲ್ಲಿ ಬಹು ಮುಖ್ಯವಾದ ಅಂಗ.
ಈ ಹಿನ್ನೆಲೆಯಲ್ಲಿ ನವರಾತ್ರಿ ಹಬ್ಬವನ್ನು ನೋಡುವದಾದರೆ ಹಬ್ಬಗಳಲ್ಲೇ ಪ್ರಾಚೀನವಾದ ಹಬ್ಬವಾಗಿದೆ ಇದು. ಮೊದಲು ಇದು ಸುಗ್ಗಿ ಅಥವಾ ಫಲವತ್ತತೆಯ ಸಂಕೇತವಾಗಿ ಆಚರಿಸುತ್ತಿರಬೇಕು. ನಮ್ಮ ಹಬ್ಬಗಳೆಲ್ಲ ಸೂರ್ಯ, ಚಂದ್ರ, ನಕ್ಷತ್ರಗಳಿಗೆ ಸಂಬಂಧಿಸಿವೆ. ಮಳೆಗಾಲ ಕಳೆದು ಆಕಾಶ ಶುಭ್ರವಾಗುತ್ತಿರುವಂತೆ ಪ್ರಕೃತಿ ತೊಳೆದಿಟ್ಟಂತೆ ಕಾಣುತ್ತಾಳೆ. ಗದ್ದೆಯಲ್ಲಿ ನೆಟ್ಟ ಫಸಲಿನಲ್ಲಿ ತೆನೆ ಬಂದು ತೊನೆದಾಡುತ್ತಿರುತ್ತದೆ. ಕೊಟ್ಟಿಗೆಯಲ್ಲಿ ಹಸು ಕರುಗಳನ್ನು ಈಯುವದೂ ಸಹ ಹೆಚ್ಚಾಗಿ ಇದೇ ಕಾಲದಲ್ಲಿ. ಬೆಳೆ ಬಿತ್ತಿದಾಗ ಇದನ್ನು ಕದ್ದೊಯ್ಯಲು ಬರುವ ವಿರೋಧಿಗಳನ್ನು, ಕಾಡುಪ್ರಾಣಿಗಳಾದ ಕಾಡೆಮ್ಮೆ, ಆನೆ ಮೊದಲಾದವುಗಳನ್ನು ಹಣಿಯಲು ತಾಯಿಯನ್ನು ಯಾಚಿಸುವದು ಒಂದು ಸಹಜವಾದ ಪ್ರತಿಕ್ರಿಯೆ. ಹಾಗಾಗಿ ಈ ಪ್ರಾಣಿಗಳನ್ನು ಎದುರಿಸಲು ಉಗ್ರರೂಪದ ದುರ್ಗೆ ಸಿಂಹದ ಮೇಲೆ ಬಂದು ದುಷ್ಟ ಮಹಿಷಾಸುರನನ್ನು ಕೊಲ್ಲುವ ಕಥೆ ರೂಪುಗೊಂಡಿರಬೇಕು.
ಇದನ್ನೂ ಓದಿ | ಧವಳ ಧಾರಿಣಿ ಅಂಕಣ | ಕರುಣೆಯೇ ಎದೆಯೊಳಗೆ ತುಂಬಿಕೊಂಡ ಮಮತಾಮಯಿ ಮಾತೆ ಕೌಸಲ್ಯಾದೇವಿ
ನವರಾತ್ರಿಯೆಂದರೆ ಶರನ್ನವರಾತ್ರಿ ಮಾತ್ರವಲ್ಲ. ವಸಂತ ನವರಾತ್ರಿ, ಆಷಾಢ ನವರಾತ್ರಿ ಮತ್ತು ಮಾಘ ನವರಾತ್ರಿ ಎಂದು ಇನ್ನೂ ಮೂರು ನವರಾತ್ರಿಗಳಿವೆ. ಉತ್ತರ ಭಾರತ ಮತ್ತು ಪೂರ್ವಾಂಚಲದ ಕಡೆ ವಸಂತ ನವರಾತ್ರಿಯನ್ನು ಗುಡಿಪೌಡ್ವ ಹಬ್ಬವನ್ನಾಗಿ ಆಚರಿಸುತ್ತಾರೆ. ಚೈತ್ರ ಮಾಸದಲ್ಲಿ ರಾಮನ ಜನನವಾಗಿರುವದರಿಂದ ರಾಮನವಮಿಯೂ ಸಹ ಈ ನವರಾತ್ರಿಯ ದಿನಗಳಲ್ಲಿ ಬರುವದರಿಂದ ಈ ಹಬ್ಬದ ಸಂಭ್ರಮ ಮತ್ತೂ ಮಹತ್ವದ್ದಾಗಿದೆ. ಇಲ್ಲಿಯೂ ಸಹ ಶಕ್ತಿಯ ಆರಾಧನೆಗೆ ಒತ್ತು ಕೊಡಲಾಗುತ್ತದೆ.
ಅದೇ ರೀತಿ ಮಾಘ ನವರಾತ್ರಿ ಚಳಿಗಾಲದಲ್ಲಿ ಬರುತ್ತಿದ್ದು, ಈ ದಿನಗಳಲ್ಲಿ ವಸಂತ ಪಂಚಮಿಯನ್ನು ಆಚರಿಸುತ್ತಾರೆ. ವಿದ್ಯೆಗೆ ಅಧಿಪತಿಯಾದ ಸರಸ್ವತಿಯ ಪೂಜೆಯನ್ನು ಈ ನವರಾತ್ರಿಗಳಲ್ಲಿ ಆಚರಿಸಲಾಗುತ್ತದೆ. ಇನ್ನು ಆಷಾಢ ನವರಾತ್ರಿಯನ್ನು ಗುಪ್ತ ನವರಾತ್ರಿ ಎಂದೂ ಕರೆಯಲಾಗುತ್ತದೆ. ಶುಕ್ಲಪಕ್ಷದ ಪ್ರತಿಪದೆಯಿಂದಾರಂಭಗೊಂಡು ದಶಮಿಯ ತನಕ ಆಚರಿಸುವ ಈ ರಾತ್ರಿಗಳು ತಾಂತ್ರಿಕ ವಿದ್ಯೆಯನ್ನು ಕೈವಶ ಮಾಡಿಕೊಳ್ಳಲು ಪ್ರಶಸ್ತ ಕಾಲ ಎಂದು ಶಾಕ್ತರು ನಂಬಿರುತ್ತಾರೆ. ಇದೂ ಸಹ ದೇವಿಯ ಆರಾಧನೆಯೇ ಆಗಿದ್ದು ದೇವಿಯ ಹತ್ತು ರೂಪಗಳಾದ ಕಾಲಿ, ತಾರ, ತ್ರಿಪುರಸುಂದರಿ, ಭುವನೇಶ್ವರಿ, ಭೈರವಿ, ಛಿನ್ನಮಸ್ತಾ (ತನ್ನ ತಲೆಯನ್ನು ತಾನೇ ತರಿದುಕೊಳ್ಳುವವಳು, ಟಿಬೇಟಿನಲ್ಲಿನ ಬೌದ್ಧರಿಗೆ ಈಕೆ ಛಿನ್ನಮುಂಡಾದೇವಿ) ಶತ್ರುಗಳನ್ನು ನಿಗ್ರಹಿಸುವ ಬಗಲಾಮುಖೀ, ಧೂಮಾವತೀ, ಮಾತಂಗಿ ಮತ್ತು ಪ್ರಸನ್ನವದನಳಾದ ಕಮಲಮುಖಿಯನ್ನು ಪೂಜಿಸುತ್ತಾರೆ. ದೇವಿಯನ್ನು ಅತ್ಯಂತ ಗುಪ್ತವಾಗಿ ಆರಾಧಿಸುವದರಿಂದ ಇದನ್ನು ಗುಪ್ತನವರಾತ್ರಿ ಎಂತಲೂ ಕರೆಯುತ್ತಾರೆ. ಮಾಘ ನವರಾತ್ರಿಯೂ ತಂತ್ರವಿದ್ಯೆಯನ್ನು ಕೈವಶ ಮಾಡಿಕೊಳ್ಳುವವರಿಗೆ ಮಹತ್ವದ ನವರಾತ್ರಿ. ಈ ನವರಾತ್ರಿಗಳು ನೇಪಾಲ ಮತ್ತು ಟಿಬೆಟ್‌ಗಳಲ್ಲಿ ರೂಢಿಯಲ್ಲಿದೆ.
ವಿಶ್ವದಾದ್ಯಂತ ಹೆಚ್ಚಾಗಿ ಎಲ್ಲರೂ ಆಚರಿಸುವ ಹಬ್ಬ ಶರನ್ನವರಾತ್ರಿಯಾದುದರಿಂದ ಅಶ್ವಯುಜ ಮಾಸದಲ್ಲಿ ಪ್ರತಿಪದೆಯಿಂದಾರಂಭಿಸಿ ದಶಮಿಯ ತನಕ ವಿಶ್ವದಾದ್ಯಂತ ಆಚರಿಸುವ ಹಬ್ಬವೇ ನವರಾತ್ರಿ ಎಂದೇ ಪ್ರಸಿದ್ಧವಾಗಿದೆ. ಕೃಷ್ಣಾವತಾರದಲ್ಲಿಯೂ ಶರದೃತುವಿನ ಮಹಿಮೆಯ ಬಣ್ಣನೆಯಿದೆ. ಇದೇ ಋತುವಿನಲ್ಲಿಯೇ ಶ್ರೀಕೃಷ್ಣ ಗೋವರ್ಧನ ಪರ್ವತವನ್ನು ಎತ್ತಿರುವದು. ವಿಷ್ಣುಪುರಾಣದಲ್ಲಿ ಈ ಋತುವಿನ ಕುರಿತು “ಮಳೆಗಾಲದಲ್ಲಿ ಕುಣಿದು ಕುಪ್ಪಳಿಸಿದ ನವಿಲುಗಳು ಈ ಶರದೃತು ಬಂದ ತಕ್ಷಣ ಈ ಸಂಸಾರವು ಅಸಂಸಾರವಾಗಿದೆಯೆಂದು ತಿಳಿದು ಮೌನವಾಗಿಬಿಟ್ಟವಂತೆ. ಅದು ತನಕ ನೀರಿನ ಭಾರದಿಂದ ಕಪ್ಪಾಗಿರುವ ಮೋಡಗಳು ತಮ್ಮಲ್ಲಿದ್ದ ಸಮಸ್ತ ನೀರನ್ನೂ ಸುರಿಸಿ ಬೆಳ್ಳಗಾಗಿ ಆತ್ಮಜ್ಞಾನಿಗಳು ತಮ್ಮಲ್ಲಿರುವ ಜಡಸ್ವಭಾವವನ್ನು ಬಿಟ್ಟು ಶುದ್ಧಸ್ವರೂಪರಾಗಿ ಅಂಬರವನ್ನು (ವಸ್ತ್ರವನ್ನು) ತ್ಯಾಗ ಮಾಡುವಂತೆ ಆಕಾಶವನ್ನು (ಅಂಬರ) ಬಿಟ್ಟುಹೋದವು” ಎನ್ನುವ ವಿವರ ಬರುತ್ತದೆ.
ಇದನ್ನೂ ಓದಿ | ಧೀಮಹಿ ಅಂಕಣ | ಪ್ರಾಚೀನ ಭಾರತದ ಸಂಪತ್ತು ಲೂಟಿಯಾಗಿರಬಹುದು, ಜ್ಞಾನವನ್ನು ಕದಿಯಲಾಗಲಿಲ್ಲ!
ಭಾರತೀಯ ಸಂಸ್ಕೃತಿಯಲ್ಲಿ ಪ್ರಕೃತಿಯನ್ನು ತಾಯಿಸ್ಥಾನದಲ್ಲಿ ಇಟ್ಟು ಹೋಲಿಸಲಾಗುತ್ತದೆ. ಪ್ರಪಂಚದ ಸೃಷ್ಟಿಗೆ ಪ್ರಕೃತಿ ಮತ್ತು ಪುರುಷ ಇಬ್ಬರೂ ಕಾರಣರು. ಪೂಜಾ ವಿಧಾನಕ್ಕೆ ಬರುವಾಗ ಶಿವ ಮತ್ತು ವಿಷ್ಣುವಿನ ವಿಷಯದಲ್ಲಿ ಯಾರು ಹೆಚ್ಚು ಎಂದು ಚರ್ಚೆಗಳಾಗಿರುವದನ್ನು ಕಾಣಬಹುದಾಗಿದೆ. ಆದರೆ ದೇವಿಯರ ವಿಷಯಕ್ಕೆ ಬಂದಾಗ ಪಾರ್ವತಿ, ಲಕ್ಷ್ಮಿ, ಸರಸ್ವತಿಯರ ವಿಷಯದಲ್ಲಿ ಯಾವ ವಿವಾದಗಳೂ ಆಗಿರುವದಿಲ್ಲ. ಸಂಪತ್ತಿನ ಕಾರಣಕ್ಕೆ ಲಕ್ಷ್ಮಿ, ವಿದ್ಯೆಗೆ ಅಧಿಪತಿಯಾದ ಸರಸ್ವತಿ ಮತ್ತು ಕರುಣೆಯೇ ತುಂಬಿಕೊಂಡು ಮಾತೃಸ್ಥಾನದಲ್ಲಿರುವ ಅನ್ನಪೂರ್ಣೆಯರು ಎಲ್ಲರಿಗೂ ಬೇಕು. ಹಾಗಾಗಿ ನವರಾತ್ರಿಯಲ್ಲಿ ಈ ಮೂರೂ ದೇವತೆಗಳಿಗೆ ಪೂಜೆ ಸಲ್ಲುವದು. ಲಕ್ಷ್ಮಿ ಪೂಜೆ ದೀಪಾವಳಿಗೆ ಮಹತ್ವದ್ದಾದರೂ ಎಂಟನೆಯ ನವರಾತ್ರಿಯಂದು ಲಕ್ಷ್ಮಿಪೂಜೆ ಮಾಡುವ ಕ್ರಮವುಂಟು. ಮೂಲಾ ನಕ್ಷತ್ರ ಮೆಟ್ಟಿದ ದಿನ ಸರಸ್ವತಿಯನ್ನು ಇರಿಸಿ ಪೂಜಿಸುತ್ತಾರೆ. ಶಾಲೆಗೆ ಹೋಗುವಾಗ ಕಬ್ಬಿಣದ ಕಡಲೆಯಾದ ಗಣಿತಪುಸ್ತಕವನ್ನು ಪೂಜೆಗೆ ಇರಿಸಿರುವ ದಿನಗಳ ನೆನಪು ಬರುವದುಂಟು. ಮೂರು ದಿನ ಪೂಜೆ, ಹಾಗೇ ಆ ಮೂರು ದಿನಗಳೂ ಅನಧ್ಯಯನ. ಖುಷಿಯೋ ಖುಷಿ ನಮಗೆಲ್ಲ.
ಆದರೆ ನವರಾತ್ರಿಯ ಮಹಿಮೆ ಇರುವದು ಮಾತ್ರ ದೇವಿ ಪಾರ್ವತಿಯ ಕುರಿತಾಗಿ. ಒಂದೆಡೆ ಲೋಕಕಂಟಕನಾದ ತಾರಕನೆನ್ನುವ ರಾಕ್ಷಸ ಶಿವನ ಪುತ್ರನ ಹೊರತು ತನಗೆ ಮರಣ ಬಾರದ ಹಾಗೇ ಬ್ರಹ್ಮನಿಂದ ವರವನ್ನು ಪಡೆದಿದ್ದ. ತನ್ನ ತಂದೆ ಮಾಡಿದ ನಿರೀಶ್ವರ ಯಾಗದ ಕಾರಣ ಯೋಗಾಗ್ನಿಯಲ್ಲಿ ಭಸ್ಮವಾದ ಸತಿ ಹಿಮವಂತನ ಮಗಳಾಗಿ ಜನಿಸಿ ಶಿವನನ್ನೇ ಗಂಡನನ್ನಾಗಿ ಪಡೆಯಬೇಕೆಂದು ತಪಸ್ಸನ್ನು ಆಚರಿಸುತ್ತಿದ್ದಳು. ಕಾಳಿದಾಸ ಕುಮಾರಸಂಭವದಲ್ಲಿ ತುಂಬಾ ಚೆನ್ನಾಗಿ ಈ ಕುರಿತು ಬರೆದಿದ್ದಾನೆ. ಶಿವಪುರಾಣದಲ್ಲಿ ಶಿವ ಪಾರ್ವತಿಯರ ಮದುವೆಯ ವಿಷಯ ಪುರಾಣೋಕ್ತವಾಗಿ ಬಂದರೆ ಕಾಳಿದಾಸನ ಲೇಖನಿಯಲ್ಲಿ ಇದೊಂದು ರಸಕಾವ್ಯವಾಗಿದೆ. ಪಾರ್ವತಿ ಶಿವನನ್ನು ಒಲಿಸಿಕೊಳ್ಳಲು ಅನ್ನಾಹಾರವನ್ನು ತ್ಯಜಿಸಿದಳು. ಗಿರಿರಾಜನ ಮಗಳಾಗಿ ಜನಿಸಿ ಲೋಕಕಂಟಕನಾದ ತಾರಕನನ್ನು ವಧಿಸುವ ದಿನ ಬಂತು ಎಂದು ಲೋಕವೆಲ್ಲ ಸಂತೋಷಪಟ್ಟ ಕಾರಣಕ್ಕೆ ಶೈಲಪುತ್ರಿಯಾಗಿ ಮೊದಲ ದಿನ ಪೂಜೆಗೊಳ್ಳುವ ಈಕೆ ನಂತರ ಪ್ರತಿದಿನವೂ ಇದಕ್ಕೆ ಸಂಬಂಧಪಟ್ಟಂತೆ ಪ್ರತಿಯೊಂದು ಘಟನೆಗಳಿಗೂ ಪೂಜಿಸಲ್ಪಡುತ್ತಾಳೆ. ಕನ್ನಿಕೆಯಿಂದ ಹಿಡಿದು ಲೋಕಪಾವನೆಯಾದ ಸಿದ್ಧಿಧಾತ್ರಿಯಾಗಿಯೂ ಪೂಜೆಗೊಳ್ಳುವ ಪಾವನಾಮೂರ್ತಿ ಈಕೆ. ಈ ಕಾರಣಕ್ಕೆ ನವರಾತ್ರಿಯ ಪ್ರಧಾನ ದೇವತೆ ಈಕೆ ಆಗಿದ್ದಾಳೆ.
ಜಗತ್ತನ್ನು ಆವರಿಸಿದ ಕಂಟಕಗಳಿಂದ ದುರ್ಗೆಯಾಗಿ ನಮ್ಮನ್ನು ರಕ್ಷಿಸಿದ ನವರಾತ್ರಿಯ ಮಹಿಮೆಯನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ.