ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಅವರ ಮನೆಯಂಗಳದ ಹಕ್ಕಿಯಾಗಿದೆ ಟ್ವಿಟರ್! ಇದರೊಂದಿಗೆ ಕಳೆದ ಹಲವಾರು ತಿಂಗಳುಗಳಿಂದ ಉಂಟಾಗಿದ್ದ ಅನಿಶ್ಚಿತತೆಗೆ ತೆರೆ ಬಿದ್ದಿದೆ. ಅದು ಕಾರ್ಪೊರೇಟ್ ಜಗತ್ತಿನ ಅತಿ ದೊಡ್ಡ ಡೀಲ್‌ಗಳಲ್ಲೊಂದು. 44 ಶತಕೋಟಿ ಡಾಲರ್! ರೂಪಾಯಿ ಲೆಕ್ಕದಲ್ಲಿ 3 ಲಕ್ಷ 60 ಸಾವಿರ ಕೋಟಿ ರೂಪಾಯಿಗಳು! ಇದರೊಂದಿಗೆ ಮಸ್ಕ್ ಮಾಲಿಕತ್ವದ ಖಾಸಗಿ ಕಂಪನಿಯಾಗಿದೆ (Brand story ) ಟ್ವಿಟರ್.
ಹಾಗಾದರೆ ಎಲಾನ್ ಮಸ್ಕ್ ಇಷ್ಟು ದುಬಾರಿ ಸಾಮಾಜಿಕ ಜಾಲತಾಣವನ್ನು ಖರೀದಿಸಿದ್ದೇಕೆ? ಈಗ ಕಂಪನಿಯ ಏಳೂವರೆ ಸಾವಿರ ಉದ್ಯೋಗಿಗಳಲ್ಲಿ ಅರ್ಧಕ್ಕರ್ಧ ಮಂದಿಯನ್ನು ಕೆಲಸದಿಂದ ತೆಗೆದು ಹಾಕಿರುವುದೇಕೆ? ಅಲ್ಲಿ ಏಕೆ ಭಾರಿ ಕೋಲಾಹಲ ಸಂಭವಿಸಿದೆ? ಎಂಬಿತ್ಯಾದಿ ಪ್ರಶ್ನೆಗಳು ಈಗ ಚರ್ಚೆಗೀಡಾಗಿವೆ. ಭಾರತದಲ್ಲಿ ಅನೇಕ ಮಂದಿ ಟ್ವಿಟರ್‌ನ ಮನ್ವಂತರವನ್ನು ಸ್ವಾಗತಿಸಿದವರೂ ಇದ್ದಾರೆ. ಅದಕ್ಕೆ ಕಾರಣವೇನು?
ಟ್ವಿಟರ್‌ನ ಹೊಸ ಬಾಸ್ ಎಲಾನ್ ಮಸ್ಕ್ ಈಗಾಗಲೇ ಭಾರತೀಯ ಮೂಲದ ಸಿಇಒ ಪರಾಗ್ ಅಗ್ರವಾಲ್, ಮುಖ್ಯ ಹಣಕಾಸು ಅಧಿಕಾರಿ ನೆಡ್ ಸೆಗಲ್, ಪಾಲಿಸಿ ಚೀಫ್ ವಿಜಯ್ ಗದ್ದೆ, ಜನರಲ್ ಕೌನ್ಸಿಲ್ ಸಿಯಾನ್ ಎಡ್ಜ್‌ಗೆಟ್ ಅವರನ್ನು ವಜಾಗೊಳಿಸಿದ್ದಾರೆ. ಟ್ವಿಟರ್ ಖರೀದಿ ಪ್ರಕ್ರಿಯೆಯಲ್ಲಿ ಇವರೆಲ್ಲ ತಮ್ಮ ದಿಕ್ಕು ತಪ್ಪಿಸಿದ್ದಾರೆ. ಸಮರ್ಪಕ ಮಾಹಿತಿಯನ್ನು ಕೊಟ್ಟಿಲ್ಲ ಎಂದು ಆರೋಪಿಸಿದ್ದರು ಮಸ್ಕ್. ಆದರೆ ಪರಾಗ್ ಅಗ್ರವಾಲ್ ಅವರನ್ನು ಕಂಪನಿಯೇ ವಜಾಗೊಳಿಸುತ್ತಿರುವುದರಿಂದ ಬರೋಬ್ಬರಿ 475 ಕೋಟಿ ರೂ.ಗಳ ಪರಿಹಾರವನ್ನೂ ಮಸ್ಕ್ ಕೊಡಬೇಕಾಗಿದೆ. ಲಕ್ಷಾಂತರ ಡಾಲರ್ ವೇತನ ಪಡೆಯುತ್ತಿದ್ದ ಇವರನ್ನು ಮಸ್ಕ್ ವಜಾಗೊಳಿಸಲು ಹಲವು ಕಾರಣಗಳೂ ಇವೆ ಎಂದು ವಿಶ್ಲೇಷಿಸಲಾಗಿದೆ. ವಿಜಯ್ ಗದ್ದೆ ಟ್ವಿಟರ್‌ನ ಕಾನೂನು ವಿಭಾಗದ ಮುಖ್ಯಸ್ಥರೂ ಆಗಿದ್ದರು. ಡೊನಾಲ್ಡ್ ಟ್ರಂಪ್ ಅವರ ಟ್ವಿಟರ್ ಖಾತೆಯನ್ನು ಬಂದ್ ಮಾಡುವುದರಲ್ಲಿ ವಿಜಯ್ ಗದ್ದೆ ಅವರ ಪಾತ್ರ ಇತ್ತು ಎಂದು ವರದಿಯಾಗಿದೆ. ಟ್ವಿಟರ್‌ನ ಎಡಪಂಥೀಯ ಪಕ್ಷಪಾತಿ ಧೋರಣೆ ಬಗ್ಗೆ ಎಲಾನ್ ಮಸ್ಕ್ ಈ ಹಿಂದೆ ಟೀಕಿಸಿದ್ದರು.
Smash Brahminical Patrichy ! ಟ್ವಿಟರ್ ಸ್ಥಾಪಕ ಜಾಕ್ ಡೋರ್ಸೆ ಅವರು 2018ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದಾಗ ಸಾಮಾಜಿಕ ಕಾರ್ಯಕರ್ತೆ ಸಂಘಪಲ್ಲಿ ಅರುಣಾ ಮತ್ತಿತರರ ಜತೆ ಒಂದು ವಿವಾದಾತ್ಮಕ ಪೋಸ್ಟರ್ ಹಿಡಿದ ಫೋಟೊ ವೈರಲ್ ಆಗಿತ್ತು. ಡೋರ್ಸೆ ಅವರು ಪ್ರದರ್ಶಿಸಿದ ಪೋಸ್ಟರ್‌ನಲ್ಲಿ ಸ್ಮಾಶ್ ಬ್ರಾಹ್ಮಿನಿಕಲ್ ಪೇಟ್ರಿಯಾಕಿ ಎಂಬ ವಿವಾದಾತ್ಮಕ ಹೇಳಿಕೆ ಇತ್ತು. ಟ್ವಿಟರ್‌ನಲ್ಲಿ ಜಾತಿ ದ್ವೇಷ ಬಿತ್ತುವ ಪೋಸ್ಟ್‌ಗಳು ಪ್ರಸಾರವಾಗುತ್ತಿವೆ ಎಂದು ಸಾಮಾಜಿಕ ಕಾರ್ಯಕರ್ತರು ದೂರಿದ್ದರು. ಆದರೆ ಈ ಹಿನ್ನೆಲೆಯಲ್ಲಿ ಡೋರ್ಸೆ ಹಿಡಿದಿದ್ದ ಪೋಸ್ಟರ್ ವಿವಾದ ಸೃಷ್ಟಿಸಿತ್ತು. ಭಾರತೀಯ ಸಮುದಾಯವೊಂದರ ವಿರುದ್ಧ ದ್ವೇಷ ಹರಡುವ ಕೆಲಸವನ್ನು ಟ್ವಿಟರ್ ಸಿಇಒ ಮಾಡುತ್ತಿರುವುದಕ್ಕೆ ನಿರಾಸೆಯಾಗಿದೆ ಎಂದು ಮೋಹನ್ ದಾಸ್ ಪೈ ಸೇರಿದಂತೆ ಹಲವರು ಖಂಡಿಸಿದ್ದರು. ಎಡಪಂಥೀಯ ಸೋಗಿನ ಕೆಲವರು ಸಣ್ಣ ಸಮುದಾಯವೊಂದರ ವಿರುದ್ಧ ಈ ರೀತಿ ಹರಿಹಾಯ್ದುಕೊಳ್ಳುವುದು, ದ್ವೇಷ ಕಾರುವುದು ಸರಿಯಲ್ಲ ಎಂದು ಪೈ ಟ್ವೀಟ್ ಮಾಡಿದ್ದರು. ಅಂತಿಮವಾಗಿ ಸ್ಮಾಶ್ ಬ್ರಾಹ್ಮಿನಿಕಲ್ ಪೇಟ್ರಿಯಾಕಿ ಪೋಸ್ಟರ್‌ಗೂ ಟ್ವಿಟರ್ ಕಂಪನಿಗೂ ಸಂಬಂಧ ಇಲ್ಲ ಎಂದು ಕಂಪನಿ ಸ್ಪಷ್ಟನೆ ಕೊಟ್ಟು ವಿವಾದವನ್ನು ತಣ್ಣಗಾಗಿಸಲು ಯತ್ನಿಸಿತ್ತು.
2006ರಲ್ಲಿ ಸ್ಥಾಪನೆಯಾಗಿದ್ದ ಟ್ವಿಟರ್:
ಟ್ವಿಟರ್ ಅನ್ನು 2006ರ ಮಾರ್ಚ್‌ನಲ್ಲಿ ಅಮೆರಿಕದ ಇಂಟರ್‌ನೆಟ್ ಉದ್ಯಮಿ ಜಾಕ್ ಪ್ಯಾಟ್ರಿಕ್ ಡೋರ್ಸೆ, ನೋವಾ ಗ್ಲಾಸ್ಸ್, ಬಿಜ್ ಸ್ಟೋನ್ ಮತ್ತು ಇವಾನ್ ವಿಲಿಯಮ್ಸ್ ಸೇರಿ ಸ್ಥಾಪಿಸಿದರು. ಇದನ್ನು ಮೈಕ್ರೊ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಆಗಿ ಆರಂಭಿಸಲಾಗಿತ್ತು. ಇದರ ಪ್ರಧಾನ ಕಚೇರಿ ಸ್ಯಾನ್ ಫ್ರಾನ್ಸಿಸ್ಕೊದಲ್ಲಿದೆ. ವಿಶ್ವಾದ್ಯಂತ 25 ಕ್ಕೂ ಹೆಚ್ಚು ಕಚೇರಿಗಳನ್ನು ಒಳಗೊಂಡಿದೆ. 2012ರ ವೇಳೆಗೆ 10 ಕೋಟಿಗೂ ಹೆಚ್ಚು ಬಳಕೆದಾರರು ಪ್ರತಿ ದಿನ 3.4 ಕೋಟಿ ಟ್ವೀಟ್‌ಗಳನ್ನು ಮಾಡುತ್ತಿದ್ದರು. 2013ರ ವೇಳೆಗೆ ಅತಿ ಹೆಚ್ಚು ಮಂದಿ ಸರ್ಚ್ ಮಾಡಿದ ಸಾಮಾಜಿಕ ಜಾಲತಾಣ ಎನ್ನಿಸಿತ್ತು. ಇದನ್ನು ಇಂಟರ್‌ನೆಟ್‌ನ ಎಸ್ಸೆಮ್ಮೆಸ್ ಎನ್ನಲಾಗುತ್ತಿತ್ತು. 2019ರ ವೇಳೆಗೆ ಮಾಸಿಕ 33 ಕೋಟಿ ಸಕ್ರಿಯ ಬಳಕೆದಾರರಿದ್ದರು. 2022ರ ಏಪ್ರಿಲ್ 25ರಂದು ಟ್ವಿಟರ್ ನಿರ್ದೇಶಕರ ಆಡಳಿತ ಮಂಡಳಿಯು 44 ಶತಕೋಟಿ ಡಾಲರ್‌ಗೆ ಖರೀದಿಸುವ ಎಲಾನ್ ಮಸ್ಕ್ ಅವರ ಪ್ರಸ್ತಾಪವನ್ನು ಅಂಗೀಕರಿಸಿತು. ಕಾನೂನು ಸಂಘರ್ಷ, ಚೌಕಾಸಿಗಳ ಬಳಿಕ 2022ರ ಅಕ್ಟೋಬರ್ 27ರಂದು ಡೀಲ್ ಕುದುರಿತು.
ಇವಾನ್ ವಿಲಿಯಮ್ಸ್, ಬಿಜ್ ಸ್ಟೋನ್ ಮತ್ತು ನೋವಾ ಗ್ಲಾಸ್ಸ್ 2005ರಲ್ಲಿ ಒಡೆಯೊ (ODEO) ಎಂಬ ಪಾಡ್‌ಕಾಸ್ಟ್ ಪಬ್ಲೀಷಿಂಗ್ ಕಂಪನಿಯನ್ನು ಸ್ಥಾಪಿಸಿದ್ದರು. ಆಗ ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಪದವಿ ಪೂರ್ವ ವಿದ್ಯಾರ್ಥಿಯಾಗಿದ್ದ ಜಾಕ್ ಡೋರ್ಸೆ ಅವರೂ ಇವರ ಜತೆಗಿದ್ದರು. ಈ ಸಣ್ಣ ಗುಂಪು ಎಸ್ಸೆಮ್ಮೆಸ್ ತಂತ್ರಜ್ಞಾನ ಆಧರಿತ ಸಾಮಾಜಿಕ ಜಾಲತಾಣವೊಂದನ್ನು ಸ್ಥಾಪಿಸಲು ಯೋಚಿಸಿತು. ಜಾಕ್ ಡೋರ್ಸೆ ಅದರ ನೀಲನಕ್ಷೆ ಸಿದ್ಧಪಡಿಸಿದರು. ಪ್ರಾಜೆಕ್ಟ್ ಕೋಡ್ ನೇಮ್ twttr ಎಂಬುದಾಗಿತ್ತು. ಈ ಹೆಸರನ್ನೇ ಟ್ವಿಟರ್ ಎಂದು ಬದಲಿಸಲಾಯಿತು. 2006ರ ಮಾರ್ಚ್ 21ರಂದು ಮಧ್ಯ ರಾತ್ರಿ 12:50ಕ್ಕೆ ಜಾಕ್ ಡೋರ್ಸೆ ಮೊದಲ ಟ್ವಿಟರ್ ಮೆಸೇಜ್ ಟೈಪ್ ಮಾಡಿದರು- just setting my twttr
ಟ್ವಿಟರ್ ಪದ ಅತ್ಯಂತ ಸೂಕ್ತವಾಗಿತ್ತು. ಇದು ಹಕ್ಕಿಯ ಚಿಲಿಪಿಲಿಯಂತೆ ಅಸಂಗತ, ಅಷ್ಟೊಂದು ಮಹತ್ವವಲ್ಲದ ಸಂಭಾಷಣೆಗಳಿಗೆ ಮಾಧ್ಯಮವಾಗುವಂತಿತ್ತು ಎನ್ನುತ್ತಾರೆ ಡೋರ್ಸೆ. ಆದರೆ ಮುಂದೊಂದು ದಿನ ಇಷ್ಟು ದೊಡ್ಡ ಜಾಲತಾಣವಾಗಬಹುದು ಎಂದು ಆಗ ಯಾರೂ ಅಂದಾಜಿಸಿದ್ದಿರಲಿಲ್ಲ. ಟ್ವಿಟರ್ ಆರಂಭದಲ್ಲಿ ಒಡಿಯೊದ ಉದ್ಯೋಗಿಗಳ ವರ್ತುಲದಲ್ಲಿ ಆಂತರಿಕವಾಗಿ ಬಳಕೆಯಲ್ಲಿತ್ತು. 2006ರ ಜುಲೈ 15ರಂದು ಸಾರ್ವಜನಿಕ ಆವೃತ್ತಿ ಮೂಡಿ ಬಂದಿತು.
39 ಕೋಟಿ ಬಳಕೆದಾರರು, ಪ್ರತಿ ದಿನ 50 ಕೋಟಿ ಟ್ವೀಟ್!
2007-2010ರ ಅವಧಿಯಲ್ಲಿ ಟ್ವಿಟರ್ ಜನಪ್ರಿಯವಾಗುವ ಲಕ್ಷಣ ತೋರಿಸಿತು. ಟ್ವಿಟರ್‌ನ ನಿತ್ಯ ಟ್ವೀಟ್‌ಗಳ ಸಂಖ್ಯೆ 20,000 ದಿಂದ 60,000ಕ್ಕೆ ಏರಿತು. 2007ರ ವೇಳೆಗೆ ಪ್ರತಿ ತ್ರೈಮಾಸಿಕದಲ್ಲೂ 4 ಲಕ್ಷ ಟ್ವೀಟ್‌ಗಳಿಗೆ ಏರಿತು. 2010ರಲ್ಲಿ ಟ್ವಿಟರ್ 70,000 ನೋಂದಾಯಿತ ಅಪ್ಲಿಕೇಷನ್‌ಗಳನ್ನು ಹೊಂದಿತ್ತು. 2011ರಲ್ಲಿ ನಿತ್ಯ 1.4 ಕೋಟಿ ಟ್ವೀಟ್ ಪ್ರಕಟವಾಗುತ್ತಿತ್ತು. ಅದೇ ವರ್ಷ ಹೊಸ ಹೋಮ್ ಪೇಜ್ ಸೃಷ್ಟಿಯಾಯಿತು. 2015ರಲ್ಲಿ ಮತ್ತೆ ಹೋಮ್ ಪೇಜ್ ಬದಲಾಯಿತು. ಈಗ ಟ್ವಿಟರ್ 23 ಕೋಟಿಗೂ ಹೆಚ್ಚು ದಿನವಹಿ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಜಗತ್ತಿನಾದ್ಯಂತ 39 ಕೋಟಿಗೂ ಹೆಚ್ಚು ಮಂದಿ ಟ್ವಿಟರ್ ಬಳಕೆದಾರರಿದ್ದಾರೆ. ಪ್ರತಿ ದಿನ ಕನಿಷ್ಠ 50 ಕೋಟಿ ಟ್ವೀಟ್‌ಗಳು ಪೋಸ್ಟ್ ಆಗುತ್ತವೆ.
ಆರಂಭದಲ್ಲಿ 140 ಪದಗಳಲ್ಲಿ ಟ್ವೀಟ್ : ಆರಂಭದಲ್ಲಿ ಒಂದು ಟ್ವೀಟ್ ಅನ್ನು 140 ಪದ ಮಿತಿಯೊಳಗೆ ಬರೆಯಬೇಕಾಗುತ್ತಿತ್ತು. ಈ ಮಿತಿಯನ್ನು 280 ಪದಗಳಿಗೆ ವಿಸ್ತರಿಸಲಾಯಿತು. ಆರಂಭದಲ್ಲಿ ಜನ ಹೆಚ್ಚು ವಿಷಯ ದಾಟಿಸಲು ur, b4, gr8 ಇತ್ಯಾದಿ ಹೊಸ ಪದಗಳನ್ನು ಬಳಸುತ್ತಿದ್ದರು. ಬಳಕೆದಾರರ ಸಂಖ್ಯೆಯ ದೃಷ್ಟಿಯಿಂದ 15ನೃ ಜನಪ್ರಿಯ ಸಾಮಾಜಿಕ ಜಾಲತಾಣ ಟ್ವಿಟರ್. ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಟಿಕ್‌ಟಾಕ್, ಸ್ನಾಪ್‌ಚಾಟ್, ಪಿನ್‌ಟರೆಸ್ಟ್‌ಗಿಂತ ಹಿಂದಿದೆ. 92% ಟ್ವೀಟ್‌ಗಳನ್ನು 10% ಟ್ವಿಟರ್ ಬಳಕೆದಾರರು ಮಾಡುತ್ತಾರೆ. ಉಳಿದವರೆಲ್ಲ ಸಕ್ರಿಯ ಬಳಕೆದಾರರಲ್ಲ. ಸಮೀಕ್ಷೆಯೊಂದರ ಪ್ರಕಾರ ಅಮೆರಿಕದಲ್ಲಿ 48% ಮಂದಿ ಸುದ್ದಿಯ ಮೂಲವಾಗಿ ಟ್ವಿಟರ್ ಅನ್ನು ಬಳಸುತ್ತಾರೆ. 48% ಮಂದಿ ಮನರಂಜನೆಗೆ ಬಳಸುತ್ತಾರೆ. 34% ಮಂದಿ ಸ್ನೇಹಿತರು ಮತ್ತು ಬಂಧುಗಳ ಜತೆಗೆ ಸಂಪರ್ಕ, ಸಂವಹನಕ್ಕೆ ಬಳಸುತ್ತಾರೆ. 33% ಮಂದಿ ಬ್ರಾಂಡ್, ಕಂಪನಿಗಳನ್ನು ಅನುಸರಿಸಲು ಬಳಸುತ್ತಾರೆ. 14% ಮಂದಿ ತಮ್ಮ ವೃತ್ತಿಪರ ನೆಟ್ ವರ್ಕ್ ವೃದ್ಧಿಸಿಕೊಳ್ಳಲು ಟ್ವಿಟರ್ ಉಪಯೋಗಿಸುತ್ತಾರೆ. 12% ಮಂದಿ ಇತರ ಉದ್ದೇಶಗಳಿಗೆ ಬಳಸುತ್ತಾರೆ. ಇತರ ದೇಶಗಳಲ್ಲಿಯೂ ಟ್ವಿಟರ್ ಇದೇ ರೀತಿ ಹಲವು ಉದ್ದೇಶಗಳಿಗೆ ಜನಪ್ರಿಯವಾಗಿದೆ. ಇಲ್ಲಿ ಜಗತ್ತಿನ ನಾನಾ ಬ್ರೇಕಿಂಗ್ ನ್ಯೂಸ್‌ಗಳು, ಮನರಂಜನೆಯ ಸುದ್ದಿಗಳು, ಸಂಗತಿಗಳು ಬಿತ್ತರವಾಗುತ್ತವೆ. ಅನೇಕ ಮಂದಿ ಗಣ್ಯರು ಟ್ವೀಟ್ ಮೂಲಕ ಸಂಚಲನ ಸೃಷ್ಟಿಸುತ್ತಾರೆ. ಹೊಸ ಘೋಷಣೆಗಳನ್ನು ಹೊರಡಿಸುತ್ತಾರೆ. ಪತ್ರಿಕಾಗೋಷ್ಠಿಗಿಂತ ಟ್ವೀಟ್ ಮೂಲಕವೇ ಎಷ್ಟೋ ಸುದ್ದಿಗಳು ಪ್ರಕಟವಾಗುತ್ತವೆ. ಹೀಗಾಗಿ ಎಲ್ಲರೂ ಟ್ವಿಟರ್ ಮೇಲೆ ಕಣ್ಣು ಹಾಯಿಸುತ್ತಾರೆ.
ಬಳಕೆದಾರರಲ್ಲಿ 70% ಮಂದಿ ಪುರುಷರು!
ವರದಿಗಳ ಪ್ರಕಾರ ಅಮೆರಿಕದಲ್ಲಿ ಟ್ವಿಟರ್ ಬಳಕೆದಾರರು ಪ್ರತಿ ದಿನ ಸರಾಸರಿ ಆರು ನಿಮಿಷಗಳನ್ನು ಟ್ವಿಟರ್‌ನಲ್ಲಿ ಕಾಲ ಕಳೆಯುತ್ತಾರೆ. ಬ್ರಿಟನ್‌ನಲ್ಲಿ ಸರಾಸರಿ ನಾಲ್ಕು ನಿಮಿಷಗಳನ್ನು ಕಳೆಯುತ್ತಾರೆ. ಅತಿ ಹೆಚ್ಚು ಬಳಕೆದಾರರು ಅಮೆರಿಕದಲ್ಲಿ ಇದ್ದಾರೆ ( 7 ಕೋಟಿಗೂ ಹೆಚ್ಚು). ಉಳಿದಂತೆ ಜಪಾನ್, ಭಾರತ, ಬ್ರೆಜಿಲ್ ಮತ್ತು ಬ್ರಿಟನ್‌ನಲ್ಲಿ ಹೆಚ್ಚಿನ ಸಕ್ರಿಯ ಟ್ವಿಟಿಗರಿದ್ದಾರೆ. ಜಪಾನ್‌ನಲ್ಲಿ 5.82 ಕೋಟಿ, ಭಾರತದಲ್ಲಿ 2.44 ಕೋಟಿ, ಬ್ರೆಜಿಲ್‌ನಲ್ಲಿ 1.9 ಕೋಟಿ, ಬ್ರಿಟನ್‌ನಲ್ಲಿ 1.9 ಕೋಟಿ ಸಕ್ರಿಯ ಬಳಕೆದಾರರು ಇದ್ದಾರೆ. ಜಗತ್ತಿನಾದ್ಯಂತ 25-34 ವರ್ಷ ವಯೋಮಿತಿಯ ಯುವಜನತೆ ಹೆಚ್ಚಾಗಿ ಟ್ವಿಟರ್ ಅನ್ನು ಬಳಸುತ್ತಾರೆ. ಟ್ವಿಟರ್ ಬಳಕೆದಾರರಲ್ಲಿ ಪುರುಷರೇ ಹೆಚ್ಚು. 70%ಕ್ಕೂ ಹೆಚ್ಚು ಮಂದಿ ಪುರುಷ ಬಳಕೆದಾರರಿದ್ದಾರೆ. ಕೇವಲ 29.6% ಮಂದಿ ಮಹಿಳಾ ಬಳಕೆದಾರರಿದ್ದಾರೆ. 2021ರಲ್ಲಿ ಟ್ವಿಟರ್‌ನ ವಾರ್ಷಿಕ ಆದಾಯ 5.08 ಶತಕೋಟಿ ಡಾಲರ್‌ನಷ್ಟಿತ್ತು. (41,656 ಕೋಟಿ ರೂ.)
ಟ್ವಿಟರ್ ಹೇಗೆ ದುಡ್ಡು ಗಳಿಸುತ್ತದೆ?
ಟ್ವಿಟರ್ ತನ್ನ ಬಹುತೇಕ ಆದಾಯವನ್ನು ಜಾಗತಿಕ ಮಟ್ಟದ ಜಾಹೀರಾತುದಾರರ ಮೂಲಕ ಪಡೆಯುತ್ತದೆ. ತನ್ನ ಜಾಗವನ್ನು ಜಾಹೀರಾತುಗಳಿಗೆ ಮಾರಾಟ ಮಾಡುತ್ತದೆ. ಹೀಗಾಗಿ ಸಕ್ರಿಯ ಬಳಕೆದಾರರು ಇರುವುದೂ ಟ್ವಿಟರ್‌ಗೆ ಮುಖ್ಯ. ಟ್ವಿಟರ್‌ನ 89% ಆದಾಯ ಜಾಹೀರಾತುಗಳಿಂದ ಹಾಗೂ 11% ಆದಾಯ ಡೇಟಾ ಲೈಸೆನ್ಸಿಂಗ್ ಮತ್ತು ಇತರ ಮೂಲಗಳಿಂದ ಸಿಗುತ್ತದೆ. 2020-21ರಲ್ಲಿ ಟ್ವಿಟರ್ ಜಾಹೀರಾತುಗಳಿಂದ 4.5 ಶತಕೋಟಿ ಡಾಲರ್ ಆದಾಯವನ್ನು ಗಳಿಸಿತ್ತು. (36,900 ಕೋಟಿ ರೂ.) ಟ್ವಿಟರ್ ಸ್ವತಃ ಯಾವುದೇ ಉತ್ಪನ್ನವನ್ನು ತಯಾರಿಸುವುದಿಲ್ಲ. ಮಾರಾಟ ಮಾಡುವುದಿಲ್ಲ. ಟ್ವಿಟರ್‌ನ ಸಕ್ರಿಯ ಬಳಕೆದಾರರೇ ಅದರ ಆದಾಯದ ಜೀವ ಸೆಲೆ. ಬಳಕೆದಾರರು ಕರಗಿದರೆ, ಜಾಹೀರಾತುದಾರರೂ ಹತ್ತಿರ ಸುಳಿಯಲಾರರು. ಆದರೆ ಸಾಮಾಜಿಕ ಜಾಲತಾಣ ಟ್ವಿಟರ್ ಮಾರಾಟವಾಗಿರುವ ಮೊತ್ತವೇ ಅದರ ಅಪಾರ ಸಾಧ್ಯತೆಗಳನ್ನು, ಕಿಮ್ಮತ್ತನ್ನು ಬಿಂಬಿಸಿದೆ.
ಉದ್ಯೋಗ ಕಡಿತ ಏಕೆ? ಟ್ವಿಟರ್‌ನಲ್ಲಿ ಒಬ್ಬ ವ್ಯಕ್ತಿ ಮಾಡಬಹುದಾದ ಕೆಲಸವನ್ನು ಹತ್ತು ಜನ ಸೇರಿ ಮಾಡುತ್ತಾರೆ ಎಂದು ಹೇಳಿದ್ದ ಎಲಾನ್ ಮಸ್ಕ್, ಉದ್ಯೋಗ ಕಡಿತದ ಮುನ್ಸೂಚನೆಯನ್ನು ಮೊದಲೇ ಕೊಟ್ಟಿದ್ದರು. ಅದರಂತೆ ಸ್ವಾಧೀನಪಡಿಸಿದ ಕೂಡಲೇ ಅರ್ಧಕ್ಕರ್ಧ ಮಂದಿಯನ್ನು ವಜಾಗೊಳಿಸಿದ್ದಾರೆ. ಭಾರತದಲ್ಲಿ ಟ್ವಿಟರ್‌ನ 200 ಸಿಬ್ಬಂದಿಯಲ್ಲಿ ಈಗ ಕೇವಲ 20 ಮಂದಿ ಮಾತ್ರ ಉಳಿದಿದ್ದಾರೆ ಎಂದು ವರದಿಯಾಗಿದೆ. ಹಿರಿಯ ಮ್ಯಾನೇಜರ್‌ಗಳಿಗೆ ವಾರದ ಏಳೂ ದಿನಗಳಲ್ಲಿ ಪ್ರತಿ ದಿನ ಸರಾಸರಿ 12 ಗಂಟೆ ಕೆಲಸ ಮಾಡುವಂತೆ ಸೂಚಿಸಲಾಗಿದೆ ಎಂಬ ವದಂತಿಯೂ ಇದೆ. ಪ್ರಾಡಕ್ಟ್ ಮ್ಯಾನೇಜರ್ ಒಬ್ಬರು ಕಚೇರಿಯಲ್ಲಿಯೇ ನೆಲದ ಮೇಲೆ ಮಲಗಿ ರಾತ್ರಿ ಕಳೆದ ಚಿತ್ರ ವೈರಲ್ ಆಗಿದೆ. ವಾರದೊಳಗೆ ಟ್ವಿಟರ್‌ನ ಪ್ರಾಡಕ್ಟ್ ಡಿಸೈನ್, ಎಂಜಿನಿಯರಿಂಗ್, ಮಾರುಕಟ್ಟೆ ತಂತ್ರಗಾರಿಕೆ ಬದಲಾಗಬೇಕು ಎಂದು ಗಡುವನ್ನು ವಿಧಿಸಲಾಗಿದೆ.
ಆದರೆ ಉದಯೋಗ ಕಡಿತ ಈಗ ಟ್ವಿಟರ್‌ಗೆ ಸೀಮಿತವಾಗಿಲ್ಲ. ಗೂಗಲ್, ನೆಟ್ ಫ್ಲಿಕ್ಸ್, ಮೈಕ್ರೊಸಾಫ್ಟ್, ಅಮೆಜಾನ್, ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾದಲ್ಲೂ ಸಾವಿರಾರು ಉದ್ಯೋಗ ಕಡಿತ ಸಂಭವಿಸಿದೆ. ಸಾಮಾಜಿಕ ಜಾಲತಾಣವಾಗಿ ಟ್ವಿಟರ್ ಮುಕ್ತವಾಗಬೇಕು. ಇಲ್ಲಿ ವಾಕ್ ಸ್ವಾತಂತ್ರ್ಯ, ಸೃಜನಶೀಲತೆಗೆ ಮುಕ್ತ ವಾತಾವರಣ ಇರಬೇಕು. ಪ್ರಜಾಪ್ರಭುತ್ವ ಮತ್ತು ನಾಗರಿಕತೆಯ ಸಂರಕ್ಷಣೆ, ಹಿತಾಸಕ್ತಿ ದೃಷ್ಟಿಯಿಂದ ಇದು ಅನಿವಾರ್ಯ ಎಂದಿದ್ದಾರೆ ಮಸ್ಕ್. ಈ ಸಾಮಾಜಿಕ ಜಾಲತಾಣ ಆರೋಗ್ಯಕರ ವಿಷಯಗಳ ಚರ್ಚೆಗೆ ವೇದಿಕೆಯಾಗಬೇಕು. ದ್ವೇಷ ಬಿತ್ತುವ ತಾಣವಾಗಬಾರದು. ಜಗತ್ತಿನಲ್ಲಿ ಅತ್ಯಂತ ಗೌರವಾರ್ಹ ಜಾಹೀರಾತು ತಾಣವಾಗಿ ಟ್ವಿಟರ್‌ಗೆ ಮಹತ್ವ ಇದೆ. ಅದನ್ನು ಮತ್ತಷ್ಟು ಸುಧಾರಿಸೋಣ ಎಂದು ಮಸ್ಕ್ ವಿವರಿಸಿದ್ದಾರೆ. ಹೀಗಾಗಿ ಕುತೂಹಲ ಮೂಡಿಸಿದೆ. ಏಕೆಂದರೆ ಎಲಾನ್ ಮಸ್ಕ್ ಸಾಮಾನ್ಯ ಉದ್ಯಮಿಯಲ್ಲ. ಜಗತ್ತಿನ ಅತ್ಯಂತ ಶ್ರೀಮಂತ ಉದ್ಯಮಿ, ಸಾಹಸಿಗ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ಸ್ಪೇಸ್ ಎಕ್ಸ್‌ನ ಸ್ಥಾಪಕ, ಎಲೆಕ್ಟ್ರಿಕ್ ಕಾರು ಉತ್ಪಾದಕ ಟೆಸ್ಲಾದ ಸಿಇಒ ಆಗಿ ಯಶಸ್ವಿಯಾದವರು. ಕ್ರಿಯಾಶೀಲತೆ ಅವರ ಜೀವಾಳ. ಹೊಸ ಪ್ರಯೋಗಗಳಿಗೆ, ರಿಸ್ಕ್‌ಗಳನ್ನು ಕೈಗೆತ್ತಿಕೊಳ್ಳುವ ಇಚ್ಛಾಶಕ್ತಿಗೆ ಹೆಸರಾದವರು. ಹೀಗಾಗಿ ಟ್ವಿಟರ್ ಹೇಗೆ ಮರುಹುಟ್ಟು ಪಡೆಯಲಿದೆ ಎಂಬ ಕುತೂಹಲ ಉಂಟಾಗಿದೆ.
ಇದನ್ನೂ ಓದಿ | Brand story | ಬಿಗ್ ಬಾಸ್, ಬಿಗ್ ಕಾಸ್, ಬಿಗ್ ಸಕ್ಸಸ್!