Site icon Vistara News

Engineers day | ಭವಿಷ್ಯದ ಭಾರತವನ್ನು ಅಂದೇ ಕೆತ್ತಿದ್ದ ಶಿಲ್ಪಿ ಸರ್‌ಎಂವಿ!

sir m visvesvaraya

ಒಮ್ಮೆ ಸರ್‌ ಎಂ ವಿಶ್ವೇಶ್ವರಯ್ಯ ಅವರಿಗೆ ವಿದ್ಯಾಭ್ಯಾಸದ ಸಮಯದಲ್ಲಿ ಎಸ್‌ ಎಸ್‌ ಎಲ್‌ಸಿ ಪರೀಕ್ಷೆ ಮುಗಿಸಿ ಬೆಂಗಳೂರಿನಿಂದ ಮನೆಗೆ ಬರಲು ಹಣವಿರಲಿಲ್ಲವಂತೆ. ಬೆಂಗಳೂರಿನಿಂದ ಮುದ್ದೇನಹಳ್ಳಿಯ ಅವರ ಮನೆಗೆ ೩೫ ಕಿಮೀ. ದೂರವಿದ್ದರೂ ಪರೀಕ್ಷೆ ಮುಗಿಸಿ ಅಷ್ಟೂ ದೂರವನ್ನು ನಡೆದೇ ಮನೆಗೆ ಮರಳಿದರಂತೆ ವಿಶ್ವೇಶ್ವರಯ್ಯನವರು. ಎಷ್ಟೇ ಕಷ್ಟ ಇದ್ದರೂ ಬದುಕಿನಲ್ಲಿ ಮುಂದೆ ಬರಲು ಸ್ವಪರಿಶ್ರಮ ಹಾಗೂ ಛಲ ಇರಬೇಕು ಎಂದು ವಿಶ್ವೇಶ್ವರಯ್ಯ ಅವರನ್ನು ಉದಾಹರಿಸುವ ಹಲವು ಕಥೆಗಳನ್ನು ನಾವು ಸಣ್ಣವರಿದ್ದಾಗಿನಿಂದ ಕೇಳಿ ಬೆಳೆದಿದ್ದೇವೆ. ಇಂತಹ ಹಲವು ಸಂದರ್ಭಗಳಲ್ಲಿ ಆಗ ಉದಾಹರಿಸಲು ತೆಗೆದುಕೊಳ್ಳುತ್ತಿದ್ದ ಮೊದಲ ಹೆಸರೇ ಸರ್‌ ಎಂ ವಿಶ್ವೇಶ್ವರಯ್ಯನವರು. ಯಾಕೆಂದರೆ ವಿಶ್ವೇಶ್ವರಯ್ಯನವರ ಎಲ್ಲರ ಮನೆಮನಗಳಲ್ಲಿ ಗಟ್ಟಿಯಾಗಿ ಸ್ಥಾನ ಪಡೆದಿದ್ದರು.

ಕನ್ನಂಬಾಡಿ ಕಟ್ಟೆಯನ್ನು ಕಟ್ಟಿದವರು ನಮ್ಮ ಸರ್‌ ಎಂ ವಿಶ್ವೇಶ್ವರಯ್ಯನವರು ಎಂಬ ಆಪ್ತತೆಯಿಂದಲೇ ಅವರ ಬಗೆಗೆ ತಿಳಿಯಲು ಹೊರಟ ನಮಗೆ ಇಂದು ಅವರ ಸಾಧನೆಯನ್ನು ಶಬ್ದಗಳಲ್ಲಿ ಹಿಡಿದಿಡುವುದು ಕಷ್ಟ. ಅಂತಹ ಮೇರು ವ್ಯಕ್ತಿತ್ವ ಅವರದ್ದು. ನೂರ ಎರಡು ವರುಷಗಳ ಕಾಲ ಬದುಕಿದ್ದ ಅವರು ತಮ್ಮ ಬದುಕಿನ ಅವಧಿಯಲ್ಲಿ ನಾಡಿನ ಸರ್ವತೋಮುಖ ಅಭಿವೃದ್ಧಿಗೆ ನೀಡಿದ ಕೊಡುಗೆ ಬೆರಳೆಣಿಕೆಯದ್ದಲ್ಲ. ಇಡಿಯ ಭಾರತದ ಅಭಿವೃದ್ಧಿಯ ಭವಿಷ್ಯಕ್ಕೊಂದು ಭದ್ರ ಬುನಾದಿ ಹಾಕಿ ಕೊಟ್ಟವರು ಅವರು. ಅದಕ್ಕಾಗಿಯೇ ಅವರ ಜನ್ಮದಿನವನ್ನು ಇಂಜಿನಿಯರುಗಳ ದಿನವನ್ನಾಗಿ ಆಚರಿಸಲಾಗುತ್ತಿದೆ.

ಸರ್‌ ಎಂ ವಿಶ್ವೇಶ್ವರಯ್ಯ ಅವರು ೧೮೬೦ ಸೆಪ್ಟೆಂಬರ್‌ ೧೫ರಂದು ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯಲ್ಲಿ ಜನಿಸಿದರು. ಇವರ ತಂದೆ ಮೋಕ್ಷಗುಂಡಂ ಶ್ರೀನಿವಾಸ ಶಾಸ್ತ್ರಿ ಹಾಗೂ ತಾಯಿ ವೆಂಕಟಲಕ್ಷ್ಮಮ್ಮ. ತಂದೆ ಆಗಲೇ ಸಂಸ್ಕೃತ ಪಂಡಿತರಾಗಿ ಹೆಸರು ಮಾಡಿದ್ದವರು. ಆದರೆ ವಿಶ್ವೇಶ್ವರಯ್ಯನವರಿಗೆ ೧೨ರ ಹರೆಯವಿದ್ದಾಗ ಅವರು ತೀರಿಕೊಂಡರು. ತಂದೆಯ ನಿಧನಾ ನಂತರ ನಿಜವಾಗಿಯೂ ವಿಶ್ವೇಶ್ವರಯ್ಯ ಅವರ ಜೀವನ ಇನ್ನೂ ದಾರಿದ್ರ್ಯಕ್ಕೆ ಇಳಿಯಿತು. ಅಮ್ಮ ವೆಂಕಟಲಕ್ಷ್ಮಮ್ಮ ಅವರಿವರ ಮನೆಯಲ್ಲಿ ಕೆಲಸ ಮಾಡಿ ಮಗನನ್ನು ಬೆಳೆಸುವ ಜವಾಬ್ದಾರಿಯನ್ನು ಹೊತ್ತುಕೊಂಡಳು. ಪ್ರಾಥಮಿಕ ಶಿಕ್ಷಣ ಚಿಕ್ಕಬಳ್ಳಾಪುರದ ಸರ್ಕಾರಿ ಶಾಳೆಯಲ್ಲಿ ಆದರೆ, ಪ್ರೌಢ ಶಿಕ್ಷಣ ಬೆಂಗಳೂರಿನ ವೆಸ್ಲಿ ಮಿಶನ್‌ ಹೈಸ್ಕೂಲಿನಲ್ಲಿ ಪಡೆದರು. ಉನ್ನತ ಶಿಕ್ಷಣಕ್ಕೆ ಸೋದರ ಮಾವನ ಸಹಾಯವೂ ಸಿಕ್ಕಿ, ಬದುಕು ಹೇಗೋ ಕಷ್ಟದಲ್ಲಿ ಸುಧಾರಿಸಿಕೊಂಡಿತು. ಮದರಾಸು ವಿಶ್ವವಿದ್ಯಾನಿಲಯದಲ್ಲಿ ಕಲಾ ಪದವಿ, ಅದಾದ ನಂತರ ಪುಣೆ ಕಾಲೇಜ್‌ ಆಫ್‌ ಇಂಜಿನಿಯರಿಂಗ್‌ನಲ್ಲಿ ಇಂಜಿನಿಯರಿಂಗ್‌ ಪದವಿ ಪಡೆದ ಅವರು ಅಕ್ಷರಶಃ ದೇಶದ ಆಸ್ತಿಯೇ ಆದರು.

ವಿಶ್ವೇಶ್ವರಯ್ಯನವರು ಮೊದಲು ಕೆಲಸಕ್ಕೆ ಸೇರಿದ್ದು ಮುಂಬೈನ ಲೋಕೋಪಯೋಗಿ ಇಲಾಖೆಯಲ್ಲಿ. ನಂತರ ನೀರಾವರಿ ಆಯೋಗಕ್ಕೆ ಸೇರಿದರು. ದಖ್ಖನ್‌ ಪ್ರದೇಶದಲ್ಲಿ ಹಲವು ಮಹತ್ತರ ನೀರಾವರಿ ಯೋಜನೆಗಳನ್ನು ಕೈಗೊಂಡು ಯಶಸ್ವೀ ಎನಿಸಿಕೊಂಡರು. ೧೯೦೬-೦೭ರ ಅವಧಿಯಲ್ಲಿ ಅವರನ್ನು ಯೆಮನ್‌ ದೇಶದ ಏಡನ್‌ಗೆ ಅಲ್ಲಿನ ಒಳಚರಂಡಿ ವ್ಯವಸ್ಥೆ ಅರಿಯಲು ಕಳುಹಿಸಲಾಗಿತ್ತು. ಅಲ್ಲಿನ ಭೂಪ್ರದೇಶವನ್ನು ಕೂಲಂಕುಷವಾಗಿ ಅಧ್ಯಯನ ಮಾಡಿದ ವಿಶ್ವೇಶ್ವರಯ್ಯನವರು ಅಲ್ಲಿನ ನೀರಿಂಗುವ ಜಾಗ ಏಡನ್‌ ನಗರದಿಂದ ೧೮ ಮೈಲು ದೂರದಲ್ಲಿದೆಯೆಂದೂ, ಅಲ್ಲಿ ನೆಲದಾಳದಲ್ಲಿ ಜಲಾಶಯವಿರುವುದಾಗಿಯೂ ತಿಳಿಸಿದರು. ಅಲ್ಲಿನ ಜನತೆಗೆ ಕುಡಿಯುವ ನೀರಿನ ಯೋಜನೆ ತಯಾರಿಸಿಕೊಟ್ಟರು. ಇಂದಿಗೂ ಯೆಮನ್‌ ದೇಶದ ಮಂದಿ ವಿಶ್ವೇಶ್ವರಯ್ಯ ಅವರ ಕೊಡುಗೆಯನ್ನು ನೆನೆಸಿಕೊಳ್ಳುತ್ತಾರೆ. ಇದಾಗಿ ಇನ್ನೊಮ್ಮೆ ಅವರು ವಿದೇಶ ಪ್ರವಾಸದಲ್ಲಿದ್ದಾಗ, ಹೈದರಾಬಾದ್‌ ನಗರ ಭಾರೀ ಪ್ರವಾಹದಿಂದ ತತ್ತರಿಸಿತ್ತು. ಆಗ, ಹೈದರಾಬಾದ್‌ ನಿಜಾಮರ ಕರೆಗೆ ಓಗೊಟ್ಟು ವಿದೇಶ ಪ್ರವಾಸವನ್ನು ಅರ್ಧಕ್ಕೇ ನಿಲ್ಲಿಸಿ ಹೈದರಾಬಾದ್‌ಗೆ ಬಂದು ಹೈದರಾಬಾದ್‌ ನಗರದ ದೂರದೃಷ್ಟೀ ಯೋಜನೆಯೊಂದನ್ನು ರೂಪಿಸಿ ಕೊಟ್ಟರು. ಅದರ ಪ್ರಕಾರ ಕಟ್ಟಲ್ಪಟ್ಟ ನಗರ ಇಂದಿಗೂ ಯಾವುದೇ ತೊಂದರೆಗಳನ್ನು ಅನುಭವಿಸಿಲ್ಲ.

ಮೈಸೂರಿನ ದಿವಾನರಾಗಿ ವಿಶ್ವೇಶ್ವರಯ್ಯನವರು ಸೇವೆ ಆರಂಭಿಸುವ ಮೊದಲು ಹೈದರಾಬಾದಿನ ದಿವಾನರಾಗಿ ಕೆಲಸ ಮಾಡಿದ್ದರು. ಆದರೆ ಮೈಸೂರಿನ ದಿವಾನರಾಗಿ ವೃತ್ತಿ ಆರಂಭಿಸಿದ್ದೇ ತಡ, ವಿಶ್ವೇಶ್ವರಯ್ಯನವರು, ಅಂದಿನ ಮೈಸೂರು ಸಂಸ್ಥಾನದಲ್ಲಿ ನೂರಾರು ಅಭಿವೃದ್ಧಿ ಕೈಂಕರ್ಯಗಳನ್ನು ಕೈಗೆತ್ತಿಕೊಂಡರು. ಕೃಷ್ಣರಾಜಸಾಗರ ಅಣೆಕಟ್ಟು, ಬೃಂದಾವನ ಉದ್ಯಾನವನ, ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಮೈಸೂರು ಶ್ರೀಗಂಧದ ಎಣ್ಣೆ ಹಾಗೂ ಸಾಬೂನು ಕಾರ್ಖಾನೆ, ಮೈಸೂರು ಛೇಂಬರ್‌ ಆಫ್‌ ಕಾಮರ್ಸ್‌, ದಿ ಸೆಂಚುರಿ ಕ್ಲಬ್‌, ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ಕೇಂದ್ರ ಗ್ರಂಥಾಲಯ, ಮೈಸೂರು ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು, ಕನ್ನಡ ಭಾಷೆ ಉಳಿಸಿ ಬೆಳೆಸಲು ಕನ್ನಡ ಅಕಾಡೆಮಿ (ಕನ್ನಡ ಸಾಹಿತ್ಯ ಪರಿಷತ್ತು), ಮೈಸೂರಿನಲ್ಲಿ ಹೆಣ್ಣುಮಕ್ಕಳ ವಿಧ್ಯಾಭ್ಯಾಸಕ್ಕಾಗಿ ಮಹಾರಾಣಿ ಕಾಲೇಜು, ಹಲವಾರು ಶಿಕ್ಷಣ ಸಂಸ್ಥೆಗಳು, ಹಾಸ್ಟೆಲ್‌ಗಳು, ವಿಧವಿಧವಾದ ಕೈಗಾರಿಕೆಗಳು, ಹೀಗೆ ಪಟ್ಟಿ ಬರೆದಷ್ಟೂ ಉದ್ದ ಹೋಗುತ್ತದೆ.!‌

ಇದನ್ನೂ ಓದಿ | INS Vikrant | ದೇಶದ ಹೆಮ್ಮೆ ಐಎನ್ಎಸ್ ವಿಕ್ರಾಂತ್, ನಮಗೆ ಇನ್ನ್ಯಾರಿಲ್ಲ ಸಮ! ಸೆ.2ಕ್ಕೆ ದೇಶಕ್ಕೆ ಸಮರ್ಪಣೆ

ಪುಣೆಯಲ್ಲಿ ಅವರ ನಡೆಸಿದ ಅನ್ವೇಷಣೆಗಳು ಇಂದಿಗೂ ಅವರ ವೃತ್ತಿ ಬದುಕಿನ ಪ್ರಮುಖ ಘಟ್ಟವಾಗಿದೆ. ಇವರೇ ಸ್ವತಃ ಕಂಡುಹಿಡಿದ ಅಟೋಮ್ಯಾಟಿಕ್‌ ಸ್ಲೂಸ್‌ ಗೇಟ್‌ ಅಣೆಕಟ್ಟುಗಳಲ್ಲಿ ಸ್ವಯಂಚಾಲಿತವಾಗಿ ಜಾರುವ ಬಾಗಿಲುಗಳು ಅದ್ಭುತವಾದ ಅನ್ವೇಷಣೆ! ಈ ಆವಿಷ್ಕಾರಕ್ಕಾಗಿ ವಿಶ್ವೇಶ್ವರಯ್ಯನವರು ಪೇಟೆಂಟ್‌ ಪಡೆದರೂ ಸಂಭಾವನೆಯನ್ನು ಪಡೆಯಲು ಮಾತ್ರ ನಿರಾಕರಿಸಿದರು. ೧೯೧೦ರಲ್ಲಿ ಇಂತಹ ಸ್ವಯಂಚಾಲಿತ ದ್ವಾರಗಳನ್ನು ಅಲ್ಲಿನ ಅಣೆಕಟ್ಟಿಗೆ ಜೋಡಿಸಿದ್ದ ಅವರು ೪೫ ವರ್ಷ ಬಿಟ್ಟು ನೋಡಿದಾಗಲೂ ಹಾಗೆಯೇ ಕಾರ್ಯನಿರ್ವಹಿಸುತ್ತಿದ್ದುದು ವಿಶೇಷ.

ವಿಶ್ವೇಶ್ವರಯ್ಯನವರು ಜನಪ್ರಿಯತೆಯ ಹಿಂದೆ ಬಿದ್ದವರಲ್ಲ. ಆದರೆ ಅವರಿಗೆ ಸಾಲು ಸಾಲು ಪ್ರಶಸ್ತಿಗಳೂ ವಿಶ್ವವಿದ್ಯಾನಿಲಯಗಳ ಮನ್ನಣೆಗಳೂ ತಾನಾಗಿಯೇ ಒಲಿದು ಬಂದಿವೆ. ಇವುಗಳಲ್ಲಿ ಪ್ರಮುಖವಾದುದು ಭಾರತದ ಸರ್ವೋಚ್ಛ ಗೌರವ ಭಾರತ ರತ್ನ.

ಭಾರತದ ಇತಿಹಾಸದಲ್ಲಿ ಸರ್‌ ಎಂ ವಿಯಂತಹ ಇನ್ನೊಬ್ಬ ವ್ಯಕ್ತಿ ಇಲ್ಲ. ಭಾರತದ ಸರ್ವತೋಮುಖ ಅಭಿವೃದ್ಧಿ ಈ ಇಂಜಿನಿಯರ್‌ನ ಕಣ್ಣಿನಲ್ಲಿ ಮೂಡಿ ಅದನ್ನು ಸಾಕಾರಗೊಳಿಸುವಲ್ಲಿ ಅವರು ನೀಡಿದ ಕೊಡುಗೆ ಮಹತ್ತರವಾದ್ದು. ಅವರ ಕೊಡುಗೆಯಿಲ್ಲದ ಭಾರತದ ಕಲ್ಪನೆಯೂ ಅಸಾಧ್ಯ ಎಂದರೆ ತಪ್ಪಲ್ಲ. ತನ್ನ ೯೦ನೇ ವಯಸ್ಸಿನಲ್ಲೂ ಅಣೆಕಟ್ಟುಗಳ ನಿರ್ಮಾಣಕ್ಕೆ ವಿನ್ಯಾಸ ಮಾಡುವ ಕೆಲಸದಲ್ಲಿ ತೊಡಗಿದ್ದಂತಹ ಇಂತಹ ಮಹಾನ್‌ ಚೇತನ ಭವಿಷ್ಯದ ಇಂಜಿನಿಯರುಗಳಿಗೆ ಪ್ರೇರಕ ಶಕ್ತಿಯಾಗಲಿ. ಸರ್ವರಿಗೂ ಇಂಜಿನಿಯರುಗಳ ದಿನಾಚರಣೆಯ ಶುಭಾಶಯಗಳು!

ಇದನ್ನೂ ಓದಿ | Britain Royal Family | ಬ್ರಿಟನ್ ರಾಯಲ್ ಫ್ಯಾಮಿಲಿಯ ಸ್ಟೋರಿಗಳು ಸಖತ್ ಇಂಟರೆಸ್ಟಿಂಗ್‌!

Exit mobile version