: ಡಾ.ಜಿ.ವಿ.ಜೋಶಿ
ಎಲ್ಲಾ ಉದ್ದೇಶಗಳಿಗೆ ತಗಲುವ ಸಾರ್ವಜನಿಕ ವೆಚ್ಚ ಮತ್ತು ಎಲ್ಲ ಮೂಲಗಳಿಂದ ಬರುವ ಒಟ್ಟು ಆದಾಯಗಳ ನಡುವಣ ಅಂತರಕ್ಕೆ ವಿತ್ತೀಯ ಕೊರತೆಯೆಂಬ (Fiscal Deficit) ಹೆಸರು. ರಾಷ್ಟ್ರೀಯ ವರಮಾನ (ಜಿಡಿಪಿ) ಮತ್ತು ವಿತ್ತೀಯ ಕೊರತೆಯ (ಶೇಕಡಾವಾರು) ಅನುಪಾತದಲ್ಲಿರುವ ಏರಿಳಿತಗಳು ಆರ್ಥಿಕ ಸ್ಥಿತಿಗತಿಯನ್ನೂ, ಆರ್ಥಿಕ ಬೆಳವಣಿಗೆಯ ಸಾಧ್ಯಾಸಾಧ್ಯತೆಯನ್ನೂ ಸೂಚಿಸುವ ಪ್ರಮುಖ ಸಂಗತಿಗಳಲ್ಲೊಂದು. 1991ರ ನಂತರ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯ (ಐಎಂಎಫ್) ಒತ್ತಡಕ್ಕೆ ಮಣಿದ ಭಾರತ ಸರಕಾರ ವಿತ್ತೀಯ ಕೊರತೆಯನ್ನು ನಿಯಂತ್ರಿಸುವ ಗುರಿಯತ್ತ ಹೆಚ್ಚು ಗಮನ ನೀಡಬೇಕಾಯಿತು.
ದಾಖಲೆಗೆ ಸೇರಿದ ಅನುಭವಗಳ ಆಧಾರದಲ್ಲಿ ಹೇಳುವದಾದರೆ, ವಿತ್ತೀಯ ಕೊರತೆ ಪ್ರಮಾಣದಲ್ಲಿ ಗಣನೀಯ ಹೆಚ್ಚಳವಾದಾಗ ಅರ್ಥವ್ಯವಸ್ಥೆಯಲ್ಲಿ ಹಣದ ಹರಿವು ಮಿತಿ ಮೀರಿ ಬೆಲೆಯೇರಿಕೆಗೆ ದಾರಿಯಾಗುತ್ತದೆ. ಇದನ್ನು ತಪ್ಪಿಸುವ ಉದ್ದೇಶದಿಂದಲೇ ಗರಿಷ್ಠ ಪ್ರಮಾಣದ ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ.3ಕ್ಕೆ ನಿಗದಿಪಡಿಸಿದ ವಿತ್ತೀಯ ಹೊಣೆಗಾರಿಕೆ ಮತ್ತು ನಿರ್ವಹಣೆ ಕಾನೂನನ್ನು (ಎಫ್‌ಆರ್‌ಬಿಎಂ) ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರ ಜಾರಿಗೆ ತಂದಿದ್ದು ಹಳೆಯ ಸತ್ಯ. ಆದರೆ ನಂತರ ಬಂದ ಯುಪಿಎ ಸರಕಾರ ಮೂಲ ಕಾನೂನಿನಲ್ಲಿ ತಿದ್ದುಪಡಿ ಮಾಡಿದ್ದರಿಂದ ಮೊದಲಿನ ಬಿಗಿತನ ಉಳಿದಿಲ್ಲವೆಂಬ ದೂರಿನಲ್ಲಿ ಸತ್ಯಾಂಶವಿದೆ.
ಮನಮೋಹನ ಸಿಂಗ್ ನಾಯಕತ್ವದ ಯುಪಿಎ ಸರಕಾರದಲ್ಲಿ ಕೇಂದ್ರ ವಿತ್ತ ಸಚಿವರಾಗಿದ್ದಾಗ ಬಜೆಟ್ ಕಸರತ್ತಿನಲ್ಲಿ ನಿಪುಣರಾದ ಪ್ರಣವ್ ಮುಖರ್ಜಿ ʼಪರಿಣಾಮಕಾರಿ ವಿತ್ತೀಯ ಕೊರತೆ ʼ ಎಂಬ ಹೊಸ ಪರಿಕಲ್ಪನೆಯ ಬಾಣ ಪ್ರಯೋಗ ಮಾಡಿದರು. ಅದರಿಂದ ದೇಶಕ್ಕೆ ಯಾವ ಹಿತವೂ ಆಗಲಿಲ್ಲ. 2014ರಲ್ಲಿ ಅಸ್ತಿತ್ವಕ್ಕೆ ಬಂದ ಮೋದಿ ಸರಕಾರದಲ್ಲಿ ವಿತ್ತ ಮಂತ್ರಿಯಾಗಿ ಮಿನುಗಿದ್ದ ಅರುಣ ಜೇಟ್ಲಿ ಈ ಪರಿಕಲ್ಪನೆಗೆ ವಿದಾಯ ಹೇಳುವ ಭರವಸೆ ನೀಡಿದ್ದರು. ಆ ವಿದಾಯ ಸಮಾರಂಭ ನಡೆಯಲೇ ಇಲ್ಲ!
ಕೇಂದ್ರ ಆಯವ್ಯಯದಲ್ಲಿ ಆದಾಯ, ಅಂದರೆ ರೆವೆನ್ಯು ಕೊರತೆ ವಿತ್ತೀಯ ಕೊರತೆಯ ಜತೆಗೆ ಅಂಟಿಕೊಂಡಿರುವ ಇನ್ನೊಂದು ಪರಿಕಲ್ಪನೆ. ರೆವೆನ್ಯು ಖಾತೆಯ ವಾರ್ಷಿಕ ವೆಚ್ಚ ಎಲ್ಲಾ ಸರಕಾರಿ ನೌಕರರ ಸಂಬಳ, ಸಹಾಯಧನಗಳು ಮತ್ತು ಸಾಲದ ಮೇಲಿನ ಬಡ್ಡಿ ಮತ್ತು ರೆವೆನ್ಯು ಖಾತೆಯ ವಾರ್ಷಿಕ ಆದಾಯಗಳ ನಡುವಣ ಅಂತರವನ್ನು ರೆವೆನ್ಯು ಖಾತೆಯ ಕೊರತೆಯೆಂದು ಪರಿಗಣಿಸಲಾಗುತ್ತದೆ. ಈ ಕೊರತೆ ಜಾಸ್ತಿಯಾಗಿ ಅದನ್ನು ನೀಗಲು ಸರಕಾರ ಮುಂದಾದಾಗ ಹಣದ ಚಲಾವಣೆ ಏರಿಕೆಯಾಗುವದರಿಂದ ಅತಿಪ್ರಸರಣದ ಶಕ್ತಿಗಳಿಗೆ ಚಾಲನೆ ಬರುತ್ತದೆ. ಆಗ ಆರ್ಥಿಕ ಬೆಳವಣಿಗೆ ದರ ಕುಂಠಿತಗೊಳ್ಳುವ ಪ್ರಸಂಗ ನಿರ್ಮಾಣವಾಗುತ್ತದೆ. ಇದು ಯುಪಿಎ ಸರಕಾರದ ಎರಡನೇ ಅವಧಿಯಲ್ಲಾದ ಅನುಭವ. ವಿತ್ತೀಯ ಕೊರತೆಯನ್ನು ಶೇ.3ಕ್ಕೆ ಸೀಮಿತಗೊಳಿಸುವ ಜತೆಗೆ ರೆವೆನ್ಯು ಕೊರತೆಯನ್ನು ಶೂನ್ಯಕ್ಕೆ ಇಳಿಸಬೇಕೆಂಬ ಭಾರತ ಸರಕಾರದ ಹಂಬಲ ಕಾಗದದ ಮೇಲೆಯೇ ಈ ತನಕ ಸುರಕ್ಷಿತವಾಗಿ ಉಳಿದು ಬಿಟ್ಟಿದೆ. ಒಂದ೦ತೂ ಸತ್ಯ: ಅಭಿವೃದ್ಧಿಶೀಲ ರಾಷ್ಟ್ರದಲ್ಲಿ ಇದೆಲ್ಲಾ ಅನಿವಾರ್ಯ ಎನ್ನುವ ವಾದದಿಂದ ಈ ವರೆಗೆ ಆದ ಹಾನಿ ಲಾಭಕ್ಕಿಂತ ಎಷ್ಟೋ ಹೆಚ್ಚು
2008-2009ರಲ್ಲಿ ಕೇಂದ್ರ ವಿತ್ತ ಸಚಿವರಾಗಿ ಅತಿ ಬುದ್ಧಿವಂತಿಕೆ ಮೆರೆಯುತ್ತಿದ್ದ ಚಿದಂಬರಂ ಮಂಡಿಸಿದ ಬಜೆಟ್‌ನಲ್ಲಿ ಒಟ್ಟು 71 ಸಾವಿರ ಕೋಟಿ ರೂ.ಗಳ ಕೃಷಿ ಸಾಲ ಮನ್ನಾ ಮಾಡಿದಾಗ ವಿತ್ತೀಯ ಶಿಸ್ತಿಗೆ ದೊಡ್ಡ ಕುತ್ತು ಬಂದಿತ್ತು. ಅದರ ಬೆನ್ನಲ್ಲೇ ಅವರ ಉತ್ತರಾಧಿಕಾರಿಯಾದ ( ಚಿದಂಬರಂ ಅವರ ಶತ್ರು- ಮಿತ್ರ !) ಪ್ರಣವ್ ಜಾಗತಿಕ ಮಹಾ ಆರ್ಥಿಕ ಹಿಂಜರಿತದ ಹೊಡೆತವನ್ನು ಎದುರಿಸಲು ಮೂರು ಸುತ್ತಿನಲ್ಲಿ ಭಾರಿ ಪ್ರಮಾಣದ ವಿತ್ತೀಯ ಉತ್ತೇಜಕಗಳನ್ನು ಘೋಷಿಸಿದರು. ಪರಿಣಾಮವಾಗಿ 2009ರ ಫೆ.16ರ ಮಧ್ಯಂತರ ಬಜೆಟ್ ಭಾಷಣದಲ್ಲಿ ವಿತ್ತೀಯ ಕೊರತೆಯ ಪ್ರಮಾಣ ಶೇ.6ರಷ್ಟಾಗಬಹುದೆಂಬ ಸುಳಿವು ನೀಡಿದ್ದರು.
2010ರ ಮಾರ್ಚ್ ಅಂತ್ಯಕ್ಕೆ ದೇಶದಲ್ಲಿ ಒಟ್ಟು ವಿತ್ತೀಯ ಕೊರತೆ ಜಿಡಿಪಿಯ ಶೇ.9.3ರಷ್ಟಾದಾಗ ಐಎಂಎಫ್‌ನ ಕಟುವಾದ ಟೀಕೆ. ಅದು ಆಗಲೇ ನಿಗದಿ ಪಡಿಸಿದಂತೆ ಭಾರತದಲ್ಲಿ ಒಟ್ಟೂ ವಿತ್ತೀಯ ಕೊರತೆಯ ಪ್ರಮಾಣ (ಕೇಂದ್ರ ಸರಕಾರದ, ಎಲ್ಲಾ ರಾಜ್ಯಗಳ ಮತ್ತು ಸರಕಾರದ ಸ್ವಾಮ್ಯದಲ್ಲಿರುವ ಉದ್ಯಮಗಳನ್ನೊಳಗೊಂಡ ಒಟ್ಟಾರೆ ಚಿತ್ರಣ) ಶೇ.4.5ಕ್ಕಿಂತ ಹೆಚ್ಚು ಆಗುವಂತಿರಲಿಲ್ಲ. ಈ ಲಕ್ಷ್ಮಣ ರೇಖೆ ಆಗಲೇ ಮೂಲೆಗೆ ಸರಿದು ರಾವಣನಂತೆ ವಿತ್ತೀಯ ಕೊರತೆ ಮೆರೆಯುತ್ತಿದ್ದ ಆ ಕಾಲದಲ್ಲಿ ಬೆಲೆಗಳು ಅಕಾಶ ಸಖಿಗಳಾಗಿ ಬಿಟ್ಟಿದ್ದನ್ನು ವಿತ್ತ ಸಚಿವ ಪ್ರಣವ್ ಒಪ್ಪಿಕೊಂಡರು.
ಇದನ್ನೂ ಓದಿ: Fiscal deficit | ತೆರಿಗೆ ಸಂಗ್ರಹ ಏರಿಕೆ, ವಿತ್ತೀಯ ಕೊರತೆಯ ಬಜೆಟ್ ಗುರಿ ಮುಟ್ಟುವ ನಿರೀಕ್ಷೆ
ಪ್ರಣವ್ ರಾಷ್ಟ್ರಪತಿಯಾದ ನಂತರ ಮತ್ತೆ ಕೇಂದ್ರ ವಿತ್ತ ಸಚಿವರಾದ ಚಿದಂಬರಂ ಬೆಲೆಯೇರಿಕೆ ಜಾಸ್ತಿಯಾಗಲು ಪ್ರಣವ್ ಹಣಕಾಸಿನ ಮಂತ್ರಿಯಾಗಿದ್ದಾಗ ಸಾರಿದ ವಿತ್ತೀಯ ಉತ್ತೇಜಕಗಳು ಕಾರಣವೆಂದು ಹೇಳುವ ಜಾಣ್ಮೆ ಪ್ರದರ್ಶಿಸಿದರು. ಹಿಂದೆ ತಾವೇ ಸಾರಿದ ಕೃಷಿ ಸಾಲಮನ್ನಾ ಕಾರಣವೆಂದು ಹೇಳುವ ಗೋಜಿಗೆ ಹೋಗಲಿಲ್ಲ. 2014 ಫೆ.17ರಂದು ಸೋತ ಸ್ವರದಲ್ಲಿ ಮಧ್ಯಂತರ ಬಜೆಟ್ ಮಂಡಿಸುವಾಗ ವಿತ್ತೀಯ ಕೊರತೆಯನ್ನು ತಗ್ಗಿಸಲು ತಾವು ಮಾಡಿದ ಪ್ರಯತ್ನವನ್ನು ವಿವರಿಸುತ್ತಲೇ ಅದನ್ನು ಶೇ.4.6ಕ್ಕೆ, ಮತ್ತು ರವೆನ್ಯು ಕೊರತೆಯನ್ನು ಶೇ.3.3ಕ್ಕೆ ಸೀಮಿತಗೊಳಿಸುವ ಆಶಯವನ್ನು ವ್ಯಕ್ತಪಡಿಸಿದರು. ಕೆಲವೇ ದಿನಗಳ ನಂತರ ಯುಪಿಎ ಸರಕಾರ ಹೋಗಿ ಪ್ರಥಮ ಮೋದಿ ಸರಕಾರ ಬಂದಿದ್ದರಿಂದ ಅವರ ಮಧ್ಯಂತರ ಬಜೆಟ್ ಆಯಸ್ಸು ಮುಗಿದೇ ಹೋಯಿತು.
ನಂತರ ಕೇಂದ್ರ ವಿತ್ತಸಚಿವರಾದ ಅರುಣ ಜೇಟ್ಲಿ 2014ರ ಜುಲೈ 10ರಂದು ಮಂಡಿಸಿದ ಚೊಚ್ಚಲ ಬಜೆಟ್‌ನಲ್ಲಿ ವಿತ್ತೀಯ ಕೊರತೆಯನ್ನು ಕಡಿತಗೊಳಿಸುವ ಉದ್ದೇಶವನ್ನು ಸಾರಿದರು. ಅವರು ಬಿಮಲ್ ಜಲಾನ್ ನೇತ್ತೃತ್ವದ ಸಾರ್ವಜನಿಕ ವೆಚ್ಚ ಆಯೋಗ ಮಾಡಿದ ಶಿಫಾರಸ್ಸಿನ ಪ್ರಕಾರ ಸಾರ್ವಜನಿಕ ವೆಚ್ಚಗಳನ್ನು ಪರಿಷ್ಕರಿಸಿದ್ದರಿಂದ 2015-16ನೇ ಸಾಲಿನಲ್ಲಿ ವಿತ್ತೀಯ ಕೊರತೆಯ ಪ್ರಮಾಣ 3.9ರಷ್ಟಕ್ಕೆ ಇಳಿಕೆಯಾಗಿದ್ದು ಹಿತಕಾರಿ ಬದಲಾವಣೆಯಾಗಿತ್ತು. ತಮ್ಮ ಚೊಚ್ಚಲ ಬಜೆಟ್‌ನಲ್ಲೇ ಜೇಟ್ಲಿ ನೀಡಿದ ಹೊಸ ಎಫ್. ಆರ್. ಬಿ. ಎಂ ಕಾನೂನು ರಚಿಸುವ ಬರವಸೆ ಈಡೇರಲೇ ಇಲ್ಲ. ಮುಂದೆ ನೋಟ್ ಬ್ಯಾನ್ ಅವಾಂತರ ಮತ್ತು ಜಿಎಸಟಿ ಕಾನೂನು ಅನು಼ಷ್ಠಾನಕ್ಕೆ ಬಂದಾಗ ಆದ ತೀವ್ರ ಬದಲಾವಣೆಯಿಂದ ವಿತ್ತೀಯ ಕೊರತೆಯನ್ನು ಗಣನೀಯವಾಗಿ ಇಳಿಸುವ ಜೇಟ್ಲಿಯವರ ವಿಚಾರಕ್ಕೆ ಆಗಿದ್ದು ಹಿನ್ನಡೆಯೇ.
2019ರ ಮಹಾ ಚುನಾವಣೆಯ ನಂತರ ಕೇಂದ್ರ ವಿತ್ತ ಸಚಿವೆಯಾದ ನಿರ್ಮಲಾ ಸೀತಾರಾಮನ್ ಅವರ ಮುಂದೆ ಕೊರೊನಾವೂ ಸೇರಿದಂತೆ ಅನೇಕ ಸಂಕಷ್ಟಗಳು, ಸಮಸ್ಯೆಗಳು ಮತ್ತು ಸವಾಲುಗಳು ಸಾಲು ಸಾಲಾಗಿ ನಿಂತಿವೆ. ವಿತ್ತೀಯ ಕೊರೆತೆಯ ಭಾರವೂ ಹೆಚ್ಚಿದ್ದು ಅವರ ಪಾಲಿಗೆ ಪಂಥಾಹ್ವಾನ ಒಡ್ಡುತ್ತಿರುವುದು ಹೌದು. ಈ ಭಾರ ಈಗ ಜಿಡಿಪಿಯ ಶೇ.6.4ರಷ್ಟಾಗಿರುವುದರಿಂದ ಎಫ್ಆರ್ ಬಿಎಂ ಮೂಲೆಗೆ ಸರಿದಿದೆ. ಕಳೆದ ಫೆ.1ರಂದು 2023-24ನೇ ಸಾಲಿನ ಬಜೆಟ್ ಮಂಡಿಸುವಾಗ ವಿತ್ತೀಯ ಬಲವರ್ಧನೆಯನ್ನು ಖಚಿತಪಡಿಸಲು 2025-26ರ ಹೊತ್ತಿಗೆ ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ.4.5ಕ್ಕಿಂತ ಕೆಳಗೆ ತರುವದು ಸರಕಾರದ ಗುರಿ ಎಂದರು. ಅಚಾನಕ್ ಆಗಿ ಅದು ಶಕ್ಯವಾದರೂ ಈಗಿರುವ ಎಫ್ ಆರ್ ಬಿಎಂ ಮೂಲೆಯಲ್ಲೇ ಉಳಿಯಲಿದೆ.
ಇದನ್ನೂ ಓದಿ: PAN-Aadhaar linking : ಪ್ಯಾನ್ -ಆಧಾರ್ ಮಾತ್ರವಲ್ಲ, ಈ ಹಣಕಾಸು ವಿಚಾರಗಳಿಗೂ ಗಡುವು ವಿಸ್ತರಣೆ