Site icon Vistara News

ಗ್ಲೋಕಲ್‌ ಲೋಕ ಅಂಕಣ: ಎಐ ಇದೆ, ಚಾಟ್ ಜಿಪಿಟಿ ಬಂದಿದೆ, ಮುಂದೇನು?

ChatGPT AI

ಎಲ್ಲರ ವಾಟ್ಸ್ಯಾಪ್ ಗುಂಪುಗಳಲ್ಲಿ, ಚಹಾ ಕಾಫಿ ವಿರಾಮಗಳಲ್ಲಿ ಇತ್ತೀಚಿನ ದಿನಪತ್ರಿಕೆಗಳಲ್ಲೂ ಬಹಳಷ್ಟು ಚರ್ಚಿತ ಸುದ್ದಿ ಚಾಟ್ ಜಿಪಿಟಿ. ಚಾಟ್ ಜಿಪಿಟಿ (ChatGPT) ಎಂದರೇನು? ಅದರ ಸಾಧಕ ಬಾಧಕಗಳು ಎಂತಹವು? ಸಹಜವಾಗಿಯೇ ಭಯದ ವಾತಾವರಣ ಇರುವ ಪ್ರಸ್ತುತ ಸಂದರ್ಭದಲ್ಲಿ ಈ ಅಂಕಣ ಹೇಗೆ ಎಐ ಹಾಗು ಚಾಟ್ ಜಿಪಿಟಿ ಉದ್ಯಮಗಳಲ್ಲಿ ಮಾನವ ಆಧಾರಿತ ಕೆಲಸ ಕಮ್ಮಿ ಮಾಡುವುದಿಲ್ಲ, ಬದಲಿಗೆ ಇನ್ನೂ ಹೆಚ್ಚು ಕೆಲಸ ಸೃಷ್ಟಿಸುತ್ತದೆ ಎಂದು ವಿವರಿಸುವ ಪ್ರಯತ್ನವಿದು.

ಹೌದು, ಚಾಟ್ ಜಿಪಿಟಿ ಒಂದು ಅದ್ಭುತ ಆವಿಷ್ಕಾರ. ಆದರೆ ಇದು ಎಐ ಆಧಾರಿತ ಮೊದಲ ಪ್ಲಾಟ್‌ಫಾರಂ ಅಲ್ಲ, ಕೊನೆಯದಂತೂ ಅಲ್ಲವೇ ಅಲ್ಲ. ಎಲ್ಲಿ ಇದರ ವ್ಯತ್ಯಾಸ ಹೆಚ್ಚು ಪ್ರಶಂಸೆ ಕಂಡಿದೆ ಎಂದರೆ ಇದು ಜನಬಳಕೆಯ ಭಾಷೆಯ ಆಧಾರದ ಮೇಲೆ ಅತ್ಯಂತ ನಿಕಟ ಫಲಿತಾಂಶಗಳನ್ನು ಹೊರಹಾಕುತ್ತದೆ. ಈವರೆಗಿನ ಎಐ ಆವಿಷ್ಕಾರಗಳು ಡೇಟಾ ಮೈನಿಂಗ್ ಹಾಗು ಮೆಷೀನ್ ಲರ್ನಿಂಗ್ ಮೇಲೆ ಹೆಚ್ಚು ಒತ್ತು ಕೊಡುತ್ತಿದ್ದವು. ಆದರೆ ಆಡುಮಾತಿನ ಎಳೆಯಲ್ಲಿ ವಿಷಯ ಮಂಡನೆ ಅತಿ ಕಡಿಮೆ ಪ್ರಮಾಣದಲ್ಲಿ ಆಗುತ್ತಿತ್ತು. ಇದೇ ವಿಷಯಕ್ಕೆ ಚಾಟ್ ಜಿಪಿಟಿ ಅಷ್ಟು ಪ್ರಖ್ಯಾತಗೊಂಡಿರುವುದು ಹಾಗೂ ಕೆಲ ಉದ್ಯಮಗಳಲ್ಲಿ ತಲ್ಲಣ ಉಂಟುಮಾಡಿರುವುದು.

ಯಾವುದೇ ಪ್ರಶ್ನೆಗೆ ಸಮಂಜಸ ಉತ್ತರ, ಇಮೇಲ್ ಬರೆಯುವುದು, ಕವನ ಬರೆಯುವುದು, ಕಥೆ ಹೆಣೆಯುವುದು, ಪ್ರಶ್ನೆ ಪತ್ರಿಕೆಗಳನ್ನು ಸರಾಗವಾಗಿ ಉತ್ತರಿಸುವುದು, ಅಷ್ಟೇ ಏಕೆ ಹಲವಾರು ತಾಸು ಬಳಸಿ ಬ್ಯಾಕ್ ಎಂಡ್ ಕೋಡ್ (ಇದು ಲಕ್ಷಾಂತರ ಆಪ್‌ಗಳ ಜೀವನಾಡಿ) ಇದನ್ನು ಕ್ಷಣಾರ್ಧದಲ್ಲಿ ಕಂಪೈಲ್ ಮಾಡುವುದು- ಹೀಗೆ ದಿನದಿಂದ ದಿನಕ್ಕೆ ಚಾಟ್ ಜಿಪಿಟಿ ತನ್ನ ವೈಖರಿಯಿಂದ ಸದ್ದು ಮಾಡುತ್ತಲೇ ಇದೆ.

ಚಾಟ್‌ ಜಿಪಿಟಿ ಬಗ್ಗೆ ಎನ್.‌ ರವಿಶಂಕರ್ ಅವರ ವಿಡಿಯೋ ಅಂಕಣ ಇದೇ ತಾಣದಲ್ಲಿ ನೀವು ನೋಡಬಹುದು:

ಆತಂಕ ಬೇಡ

ಪ್ರಸ್ತುತ ಅತ್ಯಂತ ದಿಗ್ಗಜ ಕಂಪನಿಗಳು ಎಐ ಅನ್ನು ಅತ್ಯಂತ ಸವಿಸ್ತಾರವಾಗಿ ಬಳಸುತ್ತಿವೆ ಹಾಗು ಆವಿಷ್ಕರಿಸುತ್ತಿವೆ. ಇದಕ್ಕೆ ಉದಾಹರಣೆ ಗೂಗಲ್ ಮೈಕ್ರೋಸಾಫ್ಟ್ ಮೆಟಾ ಹಾಗು ಆಪಲ್. ಹೆಚ್ಚು ಕಂಪನಿಗಳು ಬಳಸಲು ಮುಂದಾಗುವ ಎಲ್ಲ ಸಾಧ್ಯತೆಗಳನ್ನು ಮನಗಂಡು ಹೆಚ್ಚು ಎಐ ಆಧಾರಿತ ಕೋರ್ಸ್‌ಗಳು ಪ್ರಾಮುಖ್ಯತೆ ಪಡೆಯುತ್ತಿವೆ. ಹೀಗಾಗಿ ಕಾಲ ಕ್ರಮೇಣ ಎಐ ಎಲ್ಲ ಉದ್ಯಮಗಳಲ್ಲೂ ಎಲ್ಲ ವಲಯದಲ್ಲೂ ಎಲ್ಲ ಹಂತಗಳಲ್ಲೂ ಅಡಾಪ್ಟ್ ಆಗುವುದು.

ಆ ಸಮಯದಲ್ಲಿ ಡೇಟಾ ಕ್ಯುರೇಟ್ ಮಾಡುವ, ಇರುವ ಡೇಟಾ ಮೂಲಕ ಪರಿಷ್ಕರಿಸುವ ಹಾಗೂ ಸೊಲ್ಯೂಷನ್ ಶಿಫಾರಸು ಮಾಡುವ ಕೆಲಸ ಮಾನವರೇ ಮಾಡಬೇಕು. ಹಾಗಾಗಿ ಹೆಚ್ಚೆಚ್ಚು ಉದ್ಯಮಗಳು ಎಐ ಅಡಾಪ್ಟ್ ಮಾಡಿಕೊಂಡಷ್ಟು ಮತ್ತಷ್ಟು ಮಾನವ ಆಧಾರಿತ ಕೆಲಸಗಳು ಹುಟ್ಟಿಕೊಳ್ಳುತ್ತವೆ ಅಥವಾ ಇರುವ ರೋಲ್ಸ್ ಮತ್ತಷ್ಟು ಡಿಫೈನ್ ಹಾಗು ರಿಫೈನ್ ಆಗುತ್ತಾ ಬರುತ್ತದೆ. ಒಂದು ಅಂದಾಜಿನ ಪ್ರಕಾರ ಸುಮಾರು 2 ಲಕ್ಷ ಎಐ ಆಧಾರಿತ ಪ್ರೊಫೆಶನಲ್ಸ್ ಅವಶ್ಯಕತೆ ಸದ್ಯಕ್ಕಿದೆ ಹಾಗೂ ವರ್ಷದಿಂದ ವರ್ಷಕ್ಕೆ 8% ಹೆಚ್ಚಾಗುತ್ತಿದೆ.

ಮಾನವ ಹಾಗು ಯಂತ್ರದ ನಡುವಿನ ಡೇಟಾ ವ್ಯಾಖ್ಯಾನ

ಡೇಟಾ ಸಂಗ್ರಹಣೆ ಮೊದಲ ಹಂತ. ಹಿಡಿದಿಟ್ಟಿರುವ ಡೇಟಾ ಪರಿಷ್ಕರಣೆ ಮುಂದಿನ ಹಂತ. ಸದ್ಯಕ್ಕೆ ಮೊದಲ ಹಂತ ಹಾಗು ಸ್ವಲ್ಪ ಮಟ್ಟಿಗೆ ಎರಡನೇ ಹಂತ ಮಾತ್ರ ಯಂತ್ರ ಕಲಿಕೆಗೆ ಒಳಪಡುತ್ತದೆ. ಉಳಿದಂತೆ ಡೇಟಾ ಲೇಬಲಿಂಗ್, ಡೇಟಾ ಅನೋಟಷನ್/ಟಿಪ್ಪಣಿ, ಡೇಟಾ ಪ್ರೇರೇಪಣೆ/ ಪ್ರಾಂಪ್ಟ್ ಹಾಗೂ ಅತ್ಯಂತ ನಿಖರ ಡೇಟಾ ಮಾಡೆಲ್ಸ್ ಇವೆಲ್ಲವೂ ಎಐನ ಬಹು ಮುಖ್ಯ ಭಾಗ. ಇವೆಲ್ಲವೂ ಮಾನವರೇ ಮಾಡುವ ಕೆಲಸ ಅಥವಾ ಕೈಗೊಳ್ಳುವ ನಿರ್ಧಾರಗಳಾಗಿವೆ.

ಹೆಚ್ಚೆಚ್ಚು ಕಂಪನಿಗಳು ಹೆಚ್ಚು ಡೇಟಾ ಗಣಿಗಾರಿಕೆ ತಜ್ಞರು, ಡೇಟಾ ಪ್ರಾಂಪ್ಟ್ ತಜ್ಞರು ಹಾಗು ಡೇಟಾ ಲೇಬಲಿಂಗ್ ವೃತ್ತಿಪರರನ್ನು ಹುಡುಕಿ ನೇಮಕಾತಿಗೊಳಿಸುತ್ತಾರೆ. ಮಷೀನ್ ಒಳಗೆ ಹೊಕ್ಕುವ ಡೇಟಾ ಲಾಜಿಕ್ ಕೂಡ ಮಾನವ ನಿರ್ಮಿತವಾದ್ದರಿಂದ ಹೆಚ್ಚು ನಿಖರ ಪರಿಹಾರ ಮಾದರಿಯ ವೃತ್ತಿಪರರು ಹೆಚ್ಚು ಬೇಡಿಕೆಯಲ್ಲಿರುತ್ತಾರೆ. ಅಂದಹಾಗೆ ಚಾಟ್ ಜಿಪಿಟಿ ಹೊರಹಾಕುವ ಫಲಿತಾಂಶಗಳು ಕೂಡ ಮಾನವ ಆಧಾರಿತ.

ಇದನ್ನೂ ಓದಿ: ChatGPT and Whatsapp: ವಾಟ್ಸಾಪ್‌ನಲ್ಲಿ ಜಾಟ್‌ಜಿಪಿಟಿ ಬಳಸಬಹುದಾ? ಇದರಿಂದ ಏನು ಲಾಭ?

ಕೇಳುವ ಪ್ರಶ್ನೆಗೆ ಕಡಿಮೆ ಎಂದರೂ ನಾಲ್ಕು, ಐದು ಉತ್ತರ ಸಿದ್ಧವಿದ್ದರೆ ಅದರಲ್ಲಿ ಅತ್ಯಂತ ನಿಖರ ಉತ್ತರ ಒದಗಿಸುವ ಕೆಲಸ ಮಾನವರೇ ಮಾಡುವಂತದು. ಇದನ್ನು ರಿಎನ್‌ಫೋರ್ಸ್‌ಮೆಂಟ್‌ ಲರ್ನಿಂಗ್ ವಿಥ್ ಹ್ಯೂಮನ್ ಫೀಡ್‌ಬ್ಯಾಕ್ ಎಂದು ಟೆಕ್ನಿಕಲ್ ಭಾಷೆಯಲ್ಲಿ ಕರೆಯುವುದು ವಾಡಿಕೆ. ಹೆಚ್ಚು ಡೇಟಾ ಹರಿದಂತೆ ಹೆಚ್ಚು ಉತ್ತರಗಳು ಒದಗಿದಂತೆ ಅದರಲ್ಲಿ ಅತ್ಯಂತ ಸನಿಹದ್ದನ್ನು ಆಯ್ಕೆ ಮಾಡುವ ಜಾಣ್ಮೆ ಸದ್ಯ ಮನುಷ್ಯನಿಗೆ ಮಾತ್ರ ಇದೆ!

ಕೊನೆಯದಾಗಿ…

ರೊಬಾಟಿಕ್ಸ್ ಮೊದಲು ಪ್ರಖ್ಯಾತಿಗೊಂಡಂತೆ ಇದೇ ರೀತಿಯ ಸಹಜ ಆತಂಕ ಉಂಟಾಗಿತ್ತು. ಕಾರು ನಿರ್ಮಿಸುವ ಕಾರ್ಖಾನೆಗಳು ಮುಚ್ಚುತ್ತವೆ, ಉಪಕರಣ ಸಂಸ್ಥೆಗಳು ಕೇವಲ ರೋಬಾಟ್ ಬಳಸುತ್ತವೆ ಎಂಬ ಕೆಲ ಸುದ್ದಿಗಳು ತೀರಾ ಹಳೆಯದ್ದೇನಲ್ಲ. ಆದರೆ ರೊಬಾಟಿಕ್ಸ್ ಉದ್ಯಮದಲ್ಲೇ ಆವಿಷ್ಕಾರಗಳು ಅನೇಕ ವರ್ಷಗಳಿಂದ ಮೂಡುತ್ತಿವೆ ಹಾಗು ಮನುಷ್ಯ ಕೇಂದ್ರಿತ ಕೆಲಸಗಳು ವಿಕಸನಗೊಂಡಿವೆ. ಹಾಗೆಯೇ ರಿಟೇಲ್, ಾರೋಗ್ಯಸೇವೆ, ಬ್ಯಾಂಕಿಂಗ್, ಐಟಿ ಉದ್ಯಮಗಳಲ್ಲಿ ಎಐ ಕೂಡ ಹೆಚ್ಚು ಆವಿಷ್ಕಾರಗಳಿಗೆ ಕಾರಣವಾಗುತ್ತದೆ ಹಾಗು ಹೆಚ್ಚೆಚ್ಚು ಕಂಪನಿಗಳು ಅಡಾಪ್ಟ್ ಆಗುವ ಹೊತ್ತಿನಲ್ಲೇ ಹೆಚ್ಚು ಮಾನವ ಕೇಂದ್ರಿತ ಕೆಲಸಗಳು ವಿಕಸನ ಗೊಳ್ಳುತ್ತವೆ ಹೊರತು ಕ್ಷೀಣಿಸುವುದಿಲ್ಲ.

ಇದನ್ನೂ ಓದಿ: ಬೆಂಗಳೂರಿನ ಕಾಲೇಜುಗಳಲ್ಲಿ ChatGPT Banned! ವಿದ್ಯಾರ್ಥಿಗಳು ಬಳಸುವಂತಿಲ್ಲ ಈ ಎಐ ಟೂಲ್

Exit mobile version