Site icon Vistara News

ಗ್ಲೋಕಲ್‌ ಲೋಕ ಅಂಕಣ: 2024ರ ಹೊಸ ಭವಿಷ್ಯಕ್ಕೆ ಮುನ್ನುಡಿ ಬರೆಯಲಿದೆ ಜನರೇಟಿವ್ ಎಐ

ganarative AI

ವರ್ಷ ಪೂರ್ಣಗೊಳ್ಳುವ ಈ ಹೊತ್ತಿನಲ್ಲಿ ಅತಿ ಹೆಚ್ಚು ಜನಬಳಕೆಯಲ್ಲಿದ್ದ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (Artificial Intelligence – ಎಐ) ನ ಬಹುಮುಖ ವ್ಯಾಖ್ಯಾನಗಳನ್ನು ಈಗಾಗಲೇ ನೀವು ಸಾಕಷ್ಟು ಓದಿರುತ್ತೀರಿ. ಪ್ರಮುಖವಾಗಿ ಹೊರಹೊಮ್ಮಿದ ಎಐನ ಒಂದು ಅಂಶ ಎಂದರೆ ‘ಜನರೇಟಿವ್ ಎಐ’ (Generative AI).

ಸ್ಥೂಲವಾಗಿ ವಿವರಿಸುವುದಾದರೆ ಜನರೇಟಿವ್ ಎಐ ಎಂದರೆ ಮಷೀನ್ ಸಿಸ್ಟಮ್ ಗಳನ್ನು ಯೋಚಿಸುವುದಕ್ಕೆ ಹಾಗು ಕಲಿಕೆಗೆ ಪ್ರೇರೇಪಿಸುವುದು. ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಒಂದರಲ್ಲಿ ಎಷ್ಟು ಡೇಟಾ ಸಂಗ್ರಹವಾಗುತ್ತದೋ ಅವೆಲ್ಲವನ್ನೂ ಎಳೆ ಎಳೆಯಾಗಿ ತುಂಡರಿಸಿ ಅರ್ಥೈಸಿಕೊಳ್ಳುವುದು. ಉದಾಹರಣೆಗೆ ಟೆಕ್ಸ್ಟ್ (ಪಠ್ಯ) ಫಾರ್ಮ್ಯಾಟ್, ಇಮೇಜ್ (ಚಿತ್ರ) ಫಾರ್ಮ್ಯಾಟ್, ನಂಬರ್ಸ್ (ಅಂಕಿ) ಫಾರ್ಮ್ಯಾಟ್ ಅಥವಾ ಇನ್ನಾವುದೇ ಫಾರ್ಮ್ಯಾಟ್ ಇರಬಹುದು ಇವನ್ನು ಎಐ ಪ್ಯಾಟರ್ನ್ ಮತ್ತು ಕನೆಕ್ಷನ್‌ಗಗಳನ್ನಾಗಿ ಪರಿವರ್ತಿಸಿಕೊಳ್ಳುತ್ತದೆ. ಇದು ಅಂತಿಮವಾಗಿ ಡಿಸಿಷನ್ ಹಾಗು ಪ್ರೆಡಿಕ್ಷನ್ ರೂಪದಲ್ಲಿ ಹೊರ ಹಾಕುತ್ತದೆ. ಈ ಎಐ ಸಿಸ್ಟಮ್‌ಗಳಿಗೆ ಹೆಚ್ಚು ಹೆಚ್ಚು ಡೇಟಾ ಒದಗಿದಷ್ಟು ಡಿಸಿಷನ್ ಹಾಗು ಪ್ರೆಡಿಕ್ಷನ್ ಮತ್ತಷ್ಟು ನಿಖರವಾಗುತ್ತಾ ಹೋಗುತ್ತದೆ. ಇದುವೇ ಜನರೇಟಿವ್ ಎಐ.

ಗಮನಾರ್ಹ ವಿಷಯವೆಂದರೆ ಜನರೇಟಿವ್ ಎಐನ ಈ ಬಲಿಷ್ಠ ವೈಶಿಷ್ಟ್ಯವನ್ನು ಬಹುತೇಕ ಎಲ್ಲ ಕಂಪನಿಗಳು ತಮ್ಮ ಬಿಸಿನೆಸ್ ಪ್ಲಾನ್ ಗಳಲ್ಲಿ ಈಗಲೇ ಅಳವಡಿಸಿಕೊಂಡಿವೆ. ಬ್ಲಾಕ್ ಚೈನ್ ಕೌನ್ಸಿಲ್‌ನ ಅನುಸಾರ ಸರಾಸರಿ 83% ಕಂಪನಿಗಳು ಎಐ ಅನ್ನು ತಮ್ಮ 2024ರ ಅತ್ತ್ಯುನ್ನತ ಪ್ರಿಯಾರಿಟಿಯನ್ನಾಗಿಸಿಕೊಂಡಿವೆ.

ಅಚ್ಚರಿ ಪಡಿಸುವ ಸಂಗತಿಯೆಂದರೆ ಎಐನ ಜಾಗತಿಕ ಮಾರ್ಕೆಟ್ ಮೌಲ್ಯ 136 ಬಿಲಿಯನ್ ಡಾಲರ್. 2030ರ ವೇಳೆಗೆ ಶೇಕಡಾ 37ಕ್ಕೆ ಹೆಚ್ಚಿರುತ್ತದೆ ಎಂಬ ಅಂಕಿ ಅಂಶ ಎಲ್ಲರನ್ನು ನಿಬ್ಬೆರಗಾಗಿಸಿದೆ. ಹಾಗಾದರೆ ಬರುವ ವರುಷ ಎಐನ ಹೊಸ ಟ್ರೆಂಡ್‌ಗಳು ಹಾಗು ಆವಿಷ್ಕಾರಗಳು ಯಾವುವು ಎಂದು ನೋಡೋಣ.

1) ಬಹುಮಾದರಿ (ಮಲ್ಟಿಮೋಡೆಲ್) ಲರ್ನಿಂಗ್

ಹೆಸರೇ ತಿಳಿಸುವ ಹಾಗೆ ಹೆಚ್ಚು ಮಾದರಿ ಡೇಟಾ ಸೋರ್ಸ್‌ಗಳನ್ನು ಬಳಸಿ ಎಐನ ಪ್ರೆಡಿಕ್ಟಿವ್‌ನೆಸ್ ಉತ್ಕೃಷ್ಟಗೊಳಿಸುವುದನ್ನು ಮಲ್ಟಿ ಮೋಡೆಲ್ ಎಂದು ಕರೆಯಬಹುದು. ʼಓಪನ್ ಎಐ’ ಸಂಸ್ಥೆ ಬಿಡುಗಡೆ ಮಾಡಿದ ಚಾಟ್ ಜಿಪಿಟಿ 3.5 ಮತ್ತು 4 ಇದಕ್ಕೆ ಉತ್ತಮ ಉದಾಹರಣೆ. ಇದು ಒಂದು ಚಿತ್ರವನ್ನು ವಿಶ್ಲೇಷಿಸಿ ಟೆಕ್ಸ್ಟ್ ಫಾರ್ಮ್ಯಾಟ್‌ನಲ್ಲಿ ಅರ್ಥೈಸಿಕೊಳ್ಳುವ ಸಾಮರ್ಥ್ಯ ಹೊಂದಿದೆ.

ನಮ್ಮ ಮಾನವ ಮೆದುಳು ಒಂದು ವಿಷಯವನ್ನು ಗ್ರಹಿಸುವ ಸಾಮರ್ಥ್ಯವನ್ನು ಅನುಕರಿಸುವಂತೆ ಮಾಡುವುದೇ ಈ ಮಲ್ಟಿ ಮೋಡಾಲ್ ಲರ್ನಿಂಗ್ ನ ಪ್ರಮುಖ ಗುರಿ. ಡೇಟಾ ದ ಮೂಲ (ಸೊರ್ಸ್) ಯಾವುದೇ ಇರಲಿ – ಟೆಕ್ಸ್ಟ್ ಇಮೇಜ್ ಸೌಂಡ್ ಅಥವಾ ವಿಡಿಯೋ ಇವೆಲ್ಲವನ್ನೂ ರೀಡೆಬಲ್ ಫಾರ್ಮ್ಯಾಟ್ ಗಳನ್ನಾಗಿಸಿ ಮಿಮಿಕ್ ಮಾಡುವದೇ ಇಂತಹ ಎ ಐ ಸಿಸ್ಟಮ್ ಗಳ ಉದ್ದೇಶ. ಒಂದಿಷ್ಟು ಉದಾಹರಣೆಗಳನ್ನ ನೋಡೋಣ..

artificial intelligence

ಅಮೆಜಾನ್‌ನ ಅಲೆಕ್ಸಾ ಹಾಗು ಗೂಗಲ್ ಅಸಿಸ್ಟೆಂಟ್ ಈಗಾಗಲೇ ಬಳಕೆಯಲ್ಲಿರುವ ಸಾಧನಗಳು. ನಮ್ಮ ವಾಯ್ಸ್ ಕಮಾಂಡ್ ಅಥವಾ ಟೆಕ್ಸ್ಟ್ ಕಮಾಂಡ್ ಎರಡನ್ನು ಅರ್ಥೈಸುವ ಸಾಮರ್ಥ್ಯ ಮಲ್ಟಿ ಮೋಡೆಲ್. ಯಾವುದೇ ಹಾಡನ್ನು ಪ್ಲೇ ಮಾಡು ಎಂದು ಹೇಳುವ ನಿಮ್ಮ ದನಿ ಗುರುತಿಸುವ ಹಾಗು ಮುಂದೆ ಅದನ್ನು ಬಳಸಿಕೊಂಡು ಟ್ರೈನ್ ಆಗುವ ಚಾಣಕ್ಯ ಸಿಸ್ಟಮ್ ಎಐ.

ಮುಂದುವರೆದಂತೆ ಯಾವುದೋ ಹಾಡನ್ನು ಒಂದಷ್ಟು ಗುನುಗಿದರೂ ಇದು ಇಂತದ್ದೇ ಹಾಡು ಎಂದು ಗುರುತಿಸುವ, ಅಥವಾ ಹಾಡಿನ ಸ್ಕ್ರೀನ್ ಶಾಟ್‌ನ ಮೂಲಕ ಇಂತಹ ಹಾಡೇ ಎಂದು ಹೇಳುವ ಹಾಗು ಅದರ ಸಂಬಂಧ ಮತ್ತಷ್ಟು ಮಾಹಿತಿ ಒದಗಿಸುವ ಜಾಣ್ಮೆ ಚಾಟ್ ಜಿಪಿಟಿ ಹಾಗು ಡಾಲ್-ಇ ಸಿಸ್ಟಮ್‌ಗಳಿಗೆ ಇದೆ. ಇದನ್ನು ಅಲೆಕ್ಸಾ ಮತ್ತು ಗೂಗಲ್ ಅಸಿಸ್ಟೆಂಟ್‌ಗೆ ಅಳವಡಿಸಿ ನಿಖರತೆಯನ್ನು ವೃದ್ಧಿಸುವ ಕೆಲಸ ಈಗಾಗಲೇ ಸಾಗಿದೆ.

ಇದೇ ಹಾದಿಯಲ್ಲಿ ಮುಂದುವರಿದು ಹಲವಾರು ಕಂಪನಿಗಳು ಹೆಚ್ಚು ಜನರು ಈ ಎಐ ಸಿಸ್ಟಮ್‌ಗಳನ್ನ ಬಳಸಲು ಪ್ರೇರೇಪಿಸುವ ಹಾಗು ಅದರಿಂದ ಇನ್ನೂ ಹೆಚ್ಚು ಡೇಟಾ ಸಂಗ್ರಹಿಸುವ ಹಾಗು ಎಐನ ಮತ್ತಷ್ಟು ಶ್ರೀಮಂತಗೊಳಿಸುವ ಕಾರ್ಯದಲ್ಲಿವೆ. ತಮ್ಮ ತಮ್ಮ ಎಐ ಸಿಸ್ಟಮ್‌ಗಳನ್ನು ಹೇಗೆ ಅನನ್ಯಗೊಳಿಸುವುದು, ಮತ್ತಷ್ಟು ಹೇಗೆ ವೇಗವಾಗಿಸುವುದು ಹಾಗು ಮತ್ತಷ್ಟು ನಿಖರವಾಗಿಸುವುದು ಇದು ಕಂಪನಿಗಳ ಮುಂದಿರುವ 2024ರ ಸವಾಲುಗಳು.

2) ಎಐ ಆಗ್ಮೆಂಟೆಡ್ ಅಪ್ಲಿಕೇಶನ್

ಈ ವರ್ಷ ಗಮನ ಸೆಳೆದ ಮತ್ತೊಂದು ಟೆಕ್ ವಿಷಯವೆಂದರೆ ಆಗ್ಮೆಂಟೆಡ್ ರಿಯಾಲಿಟಿ (Augmented Reality). ವರ್ಚುಯಲ್ ಜಗತ್ತನ್ನು (Virtual world) ಸೃಷ್ಟಿಸುವ ಆವಿಷ್ಕಾರಗಳು ಮೊದಮೊದಲು ಭರದಿಂದ ಸಾಗಿದರೂ ಕೆಲ ಕೊರತೆಗಳಿಂದ ಹಿಂದುಳಿದವು. ಬಹು ನಿರೀಕ್ಷಿತ ಮೆಟಾ ವರ್ಸ್ (Meta Verse) ಕೂಡ ಇದೇ ಪಂಕ್ತಿಯಲ್ಲಿ ಸೇರುತ್ತದೆ.

ಎಐ ಹಾಗು ಎಆರ್‌ನ ಸಮ್ಮಿಲನವೇ ಆಜಿಮೆಂಟೆಡ್ ಅಪ್ಲಿಕೆಶನ್ ಗಳು. ಇರುವ ಸಾಕಷ್ಟು ಡೇಟಾ ಬಳಸಿ ಕೃತಕ ಜಗತ್ತನ್ನು ಮರುಸೃಷ್ಟಿಸುವ ಕಾರ್ಯ ಬಹಳಷ್ಟು ಆವಿಷ್ಕಾರಗಳಿಗೆ ನಾಂದಿ ಹಾಡಲಿದೆ.

ಇದನ್ನೂ ಓದಿ: ಗ್ಲೋಕಲ್‌ ಲೋಕ ಅಂಕಣ: ಆತಂಕದ ನಡುವೆ ಎಐಗೆ ಉದ್ಯಮಗಳ ಮಣೆ

ಕೆಲವೊಂದು ಉದಾಹರಣೆಗಳನ್ನು ನೋಡೋಣ.

ಗೂಗಲ್ ಲೆನ್ಸ್ ಅಪ್ಲಿಕೆಶನ್ ನಮ್ಮ ದೈನಂದಿನ ಜೀವನದ ಕಾರ್ಯಗಳನ್ನು ಸ್ಮಾರ್ಟ್ ಮಾಡುವ ಸಲುವಾಗಿ ಹುಟ್ಟಿಕೊಂಡ ಸಾಧನ. ಈ ಸಾಧನದಲ್ಲಿ ಬಿಂಬಿತವಾದ ಯಾವುದೇ ಇಮೇಜ್ ಅನ್ನು ಅರ್ಥೈಸಿ ವಿಶ್ಲೇಷಿಸಿ ಮಾಹಿತಿ ನೀಡುತ್ತದೆ. ಎಐನ ಇಂಟಿಗ್ರೇಷನ್ (ಏಕೀಕರಣ) ದಿಂದ ನಮ್ಮ ಮನೆಯ ಒಂದು ಗೋಡೆ ಒಂದು ಬಣ್ಣ ಬಳಿದರೆ ಯಾವ ರೀತಿ ಕಾಣುತ್ತದೆ ಎಂದು ನಿಖರವಾಗಿ ಪ್ರೆಡಿಕ್ಟ್ ಮಾಡಬಹುದು. ಇದನ್ನು ಪೈಂಟ್ ಕಂಪನಿಗಳು ಈಗಾಗಲೇ ಬಳಸುತ್ತಿವೆ. ಹಾಗೆಯೇ ನಿಮ್ಮ ಮನೆಯ ಚಿತ್ರಗಳನ್ನು ಅಪ್ಲೋಡ್ ಮಾಡಿದರಾಯಿತು, ವಿವಿಧ ಬಗೆಯ ಪೀಠೋಪಕರಣಗಳು ಒಂದು ಮನೆಯ ಇಮೇಜ್ ಪ್ರೊಸೆಸಿಂಗ್ ಮಾಡಿ ಮನೆಯ ಲಿವಿಂಗ್ ರೂಮ್, ಅಡುಗೆ ಕೋಣೆ, ಮಲಗುವ ಕೋಣೆ ಹೇಗೆ ಕಾಣಬಹುದು ಎಂದು ಗೂಗಲ್ ಲೆನ್ಸ್ ತೋರಿಸುವ ಸಾಮರ್ಥ್ಯ ಹೊಂದಿದೆ.

ಸದ್ಯಕ್ಕೆ ಆಶಾಭಾವನೆಯಿಂದ ನೋಡುತ್ತಿರುವ ಬಿಸಿನೆಸ್ ಟೈಕೂನ್‌ಗಳು ತಮ್ಮ ಪ್ರಾಜೆಕ್ಟ್ ಪೈಪ್ ಲೈನ್‌ಗಳತ್ತ ಎಐ ಹಾಗು ಎಂಎಲ್‌ನ ಅಧ್ಯಾಯಗಳನ್ನು ಹುಮ್ಮಸ್ಸಿನಿಂದ ಸಾಗಿಸಿವೆ. ಮತ್ತಷ್ಟು ಟ್ರೆಂಡ್‌ಗಳನ್ನು ಮುಂದಿನ ಅಂಕಣದಲ್ಲಿ ನೋಡೋಣ.

ಇದನ್ನೂ ಓದಿ: ಗ್ಲೋಕಲ್‌ ಲೋಕ ಅಂಕಣ: ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನಿಯಂತ್ರಿಸುವುದು ಹೇಗೆ?

Exit mobile version