Site icon Vistara News

ಗೋ ಸಂಪತ್ತು : ಕೃಷ್ಣನೇಕೆ ಬೆಣ್ಣೆ ಕದ್ದ? ಇಲ್ಲಿದೆ ವೈಜ್ಞಾನಿಕ ಸತ್ಯ!

Importance of Dairy Products in Our Daily Life

#image_title

ಕೃಷ್ಣನ ಬಾಲ ಲೀಲೆಗಳಲ್ಲಿ ಆತ ತನ್ನ ಸಂಗಡಿಗರೊಂದಿಗೆ ಬೆಣ್ಣೆಯನ್ನು ಕದಿಯುತ್ತಿದ್ದುದು ಅವಿಸ್ಮರಣೀಯವಾದುದು. ಹೀಗಾಗಿ ಈತನಿಗೆ ಬೆಣ್ಣೆ ಕಳ್ಳ ಎಂಬ ಹೆಸರು ಬಂದಿತ್ತು. ಈತ ಹೀಗೆ ಬೆಣ್ಣೆಯನ್ನು ಕದಿಯುತ್ತಿದ್ದುದರ ಹಿಂದೆ ಗೋಕುಲದಲ್ಲಿದ್ದ ಮಕ್ಕಳ ಸ್ವಾಸ್ಥ್ಯ ದ ರಹಸ್ಯವೇ ಅಡಗಿತ್ತು.

ಗೋಕುಲದಲ್ಲಿ ಅಪಾರ ಪ್ರಮಾಣದಲ್ಲಿ ಗೋವಂಶವಿತ್ತು. ಇದರಿಂದ ಅಪಾರ ಪ್ರಮಾಣದ ಹಾಲು ಹಾಗೂ ಅದರ ಉತ್ಪನ್ನಗಳ ಹೊಳೆಯೇ ಹರಿಯುತ್ತಿತ್ತು. ಹೀಗೆ ಅಪಾರವಾಗಿ ದೊರೆಯುತ್ತಿದ್ದ ಹೈನನ್ನು ಉಂಡ ಅಲ್ಲಿಯ ಮಕ್ಕಳಾದಿಯಾಗಿ ಎಲ್ಲರೂ ಸ್ವಾಸ್ಥ್ಯ ದಿಂದಿದ್ದರು. ಒಮ್ಮೆ ಇಲ್ಲಿ ಅಪಾರ ಪ್ರಮಾಣದಲ್ಲಿ ದೊರೆಯುತ್ತಿದ್ದ ಹಾಲು ಮತ್ತು ಹಾಲಿನ ಉತ್ಪನ್ನಗಳ ಮೇಲೆ ಕ್ರೂರಿ ಕಂಸನ ಕಣ್ಣು ಬಿತ್ತು. ಕೂಡಲೇ ಆತ ಅಲ್ಲಿ ಉತ್ಪತ್ತಿಯಾಗುತ್ತಿದ್ದ ಅಷ್ಟು ಹೈನೋತ್ಪನ್ನಗಳನ್ನು ತನ್ನ ರಾಜಧಾನಿಯಾಗಿದ್ದ ಮಥುರಾಗೆ ಕಳುಹಿಸುವಂತೆ ರಾಜಾಜ್ಞೆ ಹೊರಡಿಸಿದ.

ಬೇರೆ ದಾರಿ ಕಾಣದೇ ಗೋಕುಲ ವಾಸಿಗಳು ತಮ್ಮಲ್ಲಿ ಉತ್ಪತ್ತಿಯಾಗುತ್ತಿದ್ದ ಅಷ್ಟು ಪ್ರಮಾಣದ ಹಾಲು, ಮೊಸರು, ಬೆಣ್ಣೆ ಸೇರಿದಂತೆ ಎಲ್ಲಾ ಹೈನೋತ್ಪನ್ನಗಳನ್ನು ಪ್ರತಿ ನಿತ್ಯ ಮಥುರಾಗೆ ಕಳುಹಿಸತೊಡಗಿದರು. ಇದರಿಂದ ಮನೆಯಲ್ಲಿ ಪೌಷ್ಟಿಕ ಅಂಶಗಳನ್ನೊಳಗೊಂಡ ಹಾಲು ಹಾಗೂ ಹಾಲಿನ ಉತ್ಪನ್ನಗಳು ಕಡಿಮೆಯಾಗಿ ದಿನದಿಂದ ದಿನಕ್ಕೆ ಮಕ್ಕಳಾದಿಯಾಗಿ ಗೋಕುಲದ ಜನರೆಲ್ಲಾ ಸೊರಗುವಂತಾಗಿ ದುರ್ಬಲರಾಗತೊಡಗಿದರು. ಇದನ್ನೆಲ್ಲಾ ಗಮನಿಸಿದ ಕೃಷ್ಣ ಪ್ರತಿ ನಿತ್ಯ ಕಂಸನ ರಾಜಧಾನಿಗೆ ಸಾಗಾಟವಾಗುತ್ತಿದ್ದ ಹೈನೋತ್ಪನ್ನಗಳನ್ನು ತಡೆದು ಮಕ್ಕಳನ್ನು ಬಲಿಷ್ಠರನ್ನಾಗಿಸುವ ಯೋಜನೆಯೊಂದನ್ನು ರೂಪಿಸಿದ. ಬೆಣ್ಣೆಯನ್ನು ತಾನು ಮತ್ತು ತನ್ನ ಸ್ನೇಹಿತರು ಕದ್ದು ತಿನ್ನುವ ಮೂಲಕ ಆ ಯೋಜನೆಗೆ ಚಾಲನೆಯನ್ನು ನೀಡಿದ.

ಗೋಲೋಕದ ನಿವಾಸಿಗಳನ್ನು ಸದೃಢಗೊಳಿಸುವ ಉದ್ದೇಶದಿಂದ ಬೃಂದಾವನದಲ್ಲಿದ್ದ ಅಷ್ಟು ಬೆಣ್ಣೆಯ ಮಡಿಕೆಗಳನ್ನು ಕದ್ದು ಮುಚ್ಚಿ ತನ್ನ ಸಹಪಾಠಿಗಳೊಂದಿಗೆ ಒಡೆಯಲಾರಂಭಿಸಿದ, ಜೊತೆಯಲ್ಲಿದ್ದವರಿಗೂ ತಿನ್ನಲು ಪ್ರೇರೇಪಿಸಿದ. ಹೀಗೆ ಪ್ರತಿ ನಿತ್ಯ ಇದನ್ನೇ ಕಾಯಕವನ್ನಾಗಿಸಿಕೊಂಡು ಜೊತೆಯಲ್ಲಿದ್ದ ಮಕ್ಕಳನ್ನು ಅವರಿಗೆ ತಿಳಿಯದಂತೆ ದಷ್ಟಪುಷ್ಟರನ್ನಾಗಿಸಿದ. ಈ ರೀತಿ ಊರಿನ ತರುಣ ಪೀಳಿಗೆ ಹಾಲು ಮತ್ತು ಹೈನನ್ನು ಸೇವಿಸಿ ದಷ್ಟಪುಷ್ಟರಾಗಲು ಪರೋಕ್ಷವಾಗಿ ಸಹಾಯಕನಾದ. ಈ ಕುರಿತಂತೆ ಪುರಾಣಗಳಲ್ಲ್ಲಿ ಸವಿಸ್ತಾರವಾದ ವರ್ಣನೆಯೇ ಇದೆ. ನಮಗೆ ಇದೊಂದು ಪೌರಾಣಿಕ ಕಥೆ ಎಂದೆನಿಸಬಹುದು. ಆದರೆ ಇದರ ಹಿಂದೆ ಅರಿವಿಲ್ಲದ ಸ್ವಾಸ್ಥ್ಯ ದ ಸತ್ಯದ ಭಂಡಾರವೇ ಅಡಗಿದೆ.

ಹೀಗೆ ಗೋಕುಲದ ಮುಂದಿನ ಪ್ರಜೆಗಳಿಗೆ ಭಗವಂತನು ಬೆಣ್ಣೆಯನ್ನು ತಿನ್ನಿಸಿ ಅವರನ್ನು ಆರೋಗ್ಯವಂತರನ್ನಾಗಿಸುವ ಮಾರ್ಗವನ್ನು ತೋರಿದ. ಸನ್ಮಾರ್ಗದಲ್ಲಿ ನಡೆದು ಗೋವುಗಳ ಸೇವೆಯನ್ನು ಮಾಡಲು ಶಕ್ತಿಯನ್ನು ತುಂಬಿದ. ಅವರಲ್ಲಿ ರೋಗ ನಿರೋಧಕ ಶಕ್ತಿಯನ್ನು ಅವರಿಗೆ ತಿಳಿಯದಂತೆ ಹೆಚ್ಚಿಸಿ ಅವರನ್ನು ನಿರೋಗಿಗಳನ್ನಾಗಿಸಿದ. ಹಾಗಾದರೆ ಶ್ರೀಕೃಷ್ಣ ಬೆಣ್ಣೆಯನ್ನು ಕದ್ದು ತಿನ್ನಿಸುವಷ್ಟರ ಮಟ್ಟಿಗೆ ಅದರಲ್ಲಿ ಅಂತಹದ್ದೇನಿದೆ ಎಂಬ ಸತ್ಯ ಇತ್ತೀಚೆಗೆ ವೈಜ್ಞಾನಿಕ ರೂಪದಲ್ಲಿ ಬೆಳಕಿಗೆ ಬರುತ್ತಿದೆ.

ಆಧುನಿಕ ವಿಜ್ಞಾನದಲ್ಲಿ ಮಕ್ಕಳಿಗೆ ದೇಶಿ ಗೋವಿನ ಬೆಣ್ಣೆಯ ಸೇವನೆ ಅಮೃತವೆಂದೇ ಹೇಳಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಪ್ರೀ ಮೆಚ್ಯುರ್ ಬರ್ಥ್ ಎಂಬುದು ಒಂದು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ತಾಯಿಯ ಗರ್ಭದಲ್ಲಿ 6-7 ಅಥವಾ 8 ತಿಂಗಳಿದ್ದು ಸಮಯಕ್ಕೆ ಮುಂಚೆಯೇ ಮಗುವಿನ ಜನ್ಮವಾಗುತ್ತಿರುವುದು ಸಾಮಾನ್ಯ ಸಂಗತಿಯಂತಾಗುತ್ತಿದೆ. ಇಂತಹ ಸಮಯದಲ್ಲಿ ಹುಟ್ಟಿದ ಆ ಮಗುವಿನ ಶಾರೀರಿಕ ಬೆಳವಣಿಗೆ ಅಷ್ಟಾಗಿ ಆಗಿರುವುದಿಲ್ಲ. ತಾಯಿಯ ಗರ್ಭದಲ್ಲಿ ಯಾವ ವೇಗದಿಂದ ಬೆಳವಣಿಗೆ ಆಗುತ್ತದೋ, ಆ ವೇಗವು ಹುಟ್ಟಿದ ನಂತರ ಇರುವುದಿಲ್ಲ. ಇದರೊಂದಿಗೆ ಪೂರ್ಣ ಬೆಳವಣಿಗೆಯಾಗದಿರುವ ಮಗುವಿಗೆ ವಿವಿಧ ಕಾಯಿಲೆಗಳು ಸೋಂಕಿ ಅದರ ಬೆಳವಣಿಗೆಯ ವೇಗವು ಇನ್ನೂ ಕುಂಠಿತವಾಗುವುದರೊಂದಿಗೆ ದೇಹದ ತೂಕವು ಹೆಚ್ಚಾಗದೇ ಮಗು ಕ್ರಮೇಣ ಕ್ಷೀಣಿಸುತ್ತಾ ಹೋಗುತ್ತದೆ.

ಇದರೊಂದಿಗೆ ಬುದ್ಧಿಯ ಬೆಳವಣಿಗೆಯೂ ಸಹ ಸಾಕಷ್ಟು ಆಗದೆ, ರೋಗ ನಿರೋಧಕ ಕ್ಷಮತೆಯು ಕಡಿಮೆ ಇರುತ್ತದೆ. ವೈಜ್ಞಾನಿಕರೇ ಹೇಳುವಂತೆ ಇದಕ್ಕೆ ಒಂದೇ ಪರಿಹಾರ. ಅದೇ ತಾಯಂದಿರು ಮಗು ಗರ್ಭದಲ್ಲಿದ್ದಾಗ ಬೆಣ್ಣೆಯನ್ನು ಸೇವಿಸುವುದು. ಬೆಣ್ಣೆ ಬೆಳೆಯುತ್ತಿರುವ ಮಕ್ಕಳಿಗೆ ಎಲ್ಲದಕ್ಕಿಂತ ಉತ್ತಮ ಆಹಾರ. ಇದು ಮಗುವಿನ ಸರ್ವಾಂಗೀಣ ಬೆಳವಣಿಗೆಗೆ ಹೇಳಿ ಮಾಡಿಸಿದಂತಿದ್ದು, ಮಗು ತಾಯಿಯ ಗರ್ಭದಲ್ಲಿದ್ದಾಗ ಮತ್ತು ನಂತರದ ದಿನಗಳಲ್ಲೂ ಮಕ್ಕಳನ್ನು ದಷ್ಟಪುಷ್ಟರನ್ನಾಗಿಸುತ್ತದೆ. ಇದರೊಂದಿಗೆ ಮಕ್ಕಳ ಬುದ್ಧಿಯನ್ನು ಕುಶಾಗ್ರ ಮಾಡುವ ಕೆಲಸವನ್ನು ಸಹ ಇದು ಮಾಡುತ್ತದೆ.

ಬೆಣ್ಣೆಯು ರುಚಿಯಲ್ಲಿ ಮಧುರ, ತಂಪು ಮತ್ತು ಜಿಗುಟಾಗಿದ್ದು ಅದು ಹೃದಯಕ್ಕೆ ಹಿತಕರವಾದುದಾಗಿದೆ. ಬೆಣ್ಣೆಯಲ್ಲಿರುವ ವಿಟಮಿನ್ ʻಎʼ ನೈಸರ್ಗಿಕವಾಗಿ ಶರೀರವು ಸ್ವೀಕರಿಸಬಹುದಾದ ವಿಧವಾಗಿದೆ. ಈ ವಿಟಮಿನ್ ʻಎ’ ಅಡ್ರೆನಾಲೀನ್ ಮತ್ತು ಥೈರಾಯ್ಡ್ ಗ್ಲ್ಯಾಂಡ್‌ನ ಕೆಲಸವನ್ನು ಸರಾಗವಾಗಿ ನಡೆಸುತ್ತದೆ. ಇದರಿಂದ ರಕ್ತ ಪರಿಚಲನಾ ವ್ಯೂಹ ಮತ್ತು ಹೃದಯ ಅವುಗಳ ಕೆಲಸವನ್ನೂ ಯೋಗ್ಯವಾಗಿ ಮಾಡಲು ಅನುಕೂಲವಾಗುತ್ತದೆ. ವಿಟಮಿನ್ `ಎ’ ಕಡಿಮೆಯಾದರೆ ಮಗುವಿನ ಹೃದಯದಲ್ಲಿ ಹುಟ್ಟುವಾಗಲೇ ಕೆಲವು ರೋಗಗಳು ಹುಟ್ಟಿಕೊಳ್ಳುವ ಸಾಧ್ಯತೆಯೇ ಹೆಚ್ಚು. ಸಾವಿರಾರು ವರ್ಷಗಳಿಂದ ವೈದ್ಯರು ಗರ್ಭಿಣಿಗೆ ನಾಲ್ಕು ತಿಂಗಳಿನಿಂದಲೇ ಬೆಣ್ಣೆಯನ್ನು ತಿನ್ನಲು ಹೇಳುತ್ತಿದ್ದುದರ ಹಿಂದಿನ ಮರ್ಮ ಇಂದು ಅರ್ಥವಾಗುತ್ತಿದೆ. ಏಕೆಂದರೆ ಮಗು ತಾಯಿಯ ಗರ್ಭದಲ್ಲಿರುವ ನಾಲ್ಕನೇ ತಿಂಗಳಿನಲ್ಲಿಯೇ ಶರೀರದಲ್ಲಿ ಹೃದಯದ ರಚನೆಯಾಗುತ್ತದೆ.

ಹಲ್ಲುಗಳ ರಕ್ಷಣೆಯಲ್ಲಿ ಬೆಣ್ಣೆ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅದರಲ್ಲೂ ಮಕ್ಕಳ ಹಲ್ಲುಗಳ ರಕ್ಷಣೆಯಲ್ಲಿ ಇದು ಅತ್ಯವಶ್ಯಕ. ಇತ್ತೀಚೆಗೆ ಮೈದಾ ಹಿಟ್ಟಿನಿಂದ ಮಾಡಿದ ಪದಾರ್ಥಗಳು, ಬೇಕರಿಯ ಸಿಹಿ ಪದಾರ್ಥಗಳು, ಚಾಕಲೇಟ್‌ಗಳು, ಹಲ್ಲುಗಳಿಗೆ ಅಂಟಿಕೊಳ್ಳುವ ಜಂಕ್‌ಫುಡ್, ತಂಪು ಮತ್ತು ಮೃದು ಪದಾರ್ಥಗಳ ಸೇವನೆಯ ಪ್ರಮಾಣ ಹೆಚ್ಚಾಗುತ್ತಿದೆ. ಹೀಗೆ ಮೇಲಿಂದ ಮೇಲೆ ದೊರೆಯುವ ತಿನ್ನುವ ಪದಾರ್ಥಗಳನ್ನು ಮಕ್ಕಳು ಆಗಾಗ ತಿನ್ನುವುದು ಸಹಜ. ಹೀಗೆ ಪ್ರತಿ ಬಾರಿ ತಿಂದಾಗಲೂ ಬಾಯಿಯನ್ನು ಮುಕ್ಕಳಿಸಿ ಹಲ್ಲುಗಳನ್ನು ಸ್ವಚ್ಛ ಮಾಡುವ ಅಭ್ಯಾಸ ಅವುಗಳಿಗಿರುವುದಿಲ್ಲ. ಹೀಗಾಗಿ ಹಲ್ಲುಗಳ ಸಮಸ್ಯೆ ಅತಿ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಲ್ಲಿ ಪ್ರಾರಂಭವಾಗುತ್ತದೆ. ಇದರೊಂದಿಗೆ ಹಲ್ಲುಗಳ ಸವೆಯುವಿಕೆ ಮತ್ತು ಹುಳಗಳಾಗುವುದು ಸಾಮಾನ್ಯವಾದುದಾಗಿದೆ. ಬೆಣ್ಣೆ ಮತ್ತು ಹಾಲಿನಲ್ಲಿ ಇವುಗಳನ್ನು ಪ್ರತಿರೋಧಿಸುವ ಸಾಮರ್ಥ್ಯವು ಹೆಚ್ಚಿದ್ದು ಇವುಗಳ ಸೇವನೆ ಮಕ್ಕಳಿಗೆ ಅವಶ್ಯಕವೂ ಮತ್ತು ಅನಿವಾರ್ಯವೂ ಆಗಿದೆ.

ಆಯುರ್ವೇದದ ಪ್ರಕಾರ ಬೆಣ್ಣೆಯು ಕಣ್ಣುಗಳಿಗೆ ಹಿತಕರವಾದುದಾಗಿದೆ. ಹೀಗಾಗಿಯೇ ಇಂದಿಗೂ ಬಹುತೇಕ ವೈದ್ಯರು ಕಣ್ಣಿನ ಹಲವು ವ್ಯಾಧಿಗಳಿಗೆ ಕೊಡುವ ಔಷಧಿಗಳನ್ನು ಬೆಣ್ಣೆಯೊಂದಿಗೆ ತೆಗೆದುಕೊಳ್ಳಲು ಹೇಳುತ್ತಿರುವುದು. ಹಿಂದೆ ಮನೆಮನೆಗಳಲ್ಲಿ ಗೋಸಂಪತ್ತು ಸಾಕಷ್ಟು ಸಂಖ್ಯೆಯಲ್ಲಿ ಇರುತ್ತಿತ್ತು. ಹೀಗಾಗಿ ಚಿಕ್ಕ ಮಕ್ಕಳಿಂದ ಹಿಡಿದು ಹದಿಹರೆಯದವರು, ಯುವಕರು, ಯುವತಿಯರು ಮತ್ತು ವೃದ್ಧರಾದಿಯಾಗಿ ಎಲ್ಲಾ ವಯೋಗುಂಪಿನ ಜನರು ಬೇಕಾದಷ್ಟು ಬೆಣ್ಣೆಯನ್ನು ಸೇವಿಸುತ್ತಿದ್ದರು. ಇದರಿಂದ ಸಹಜವಾಗಿಯೇ ನೈಸರ್ಗಿಕ ಸಮಸ್ಯೆಗಳ ಪ್ರಮಾಣವು ಅವರಲ್ಲಿ ಕಡಿಮೆ ಇರುತ್ತಿದ್ದವು.

90ರ ವಯಸ್ಸಿನವರೆಗೂ ಕನ್ನಡಕ ಹಾಕಿಕೊಳ್ಳದೇ ತಿರುಗಾಡುವ ಪೀಳಿಗೆಯನ್ನು ಬೆಣ್ಣೆ ಪೋಷಿಸುತ್ತಿತ್ತು. ಆದರೆ ಇಂದು ಬೆಣ್ಣೆಯ ಸೇವನೆ ಕಡಿಮೆಯಾಗಿ ಪ್ರಸ್ತುತ ದೇಶದಲ್ಲಿ ಮಕ್ಕಳಲ್ಲಿ ಕನ್ನಡಕದ ಪ್ರೊಗ್ರೆಸಿವ್ ಕ್ರಮಾಂಕ ಇರುವ ಪ್ರಮಾಣವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ದೇಹದ ಎತ್ತರದ ಬೆಳವಣಿಗೆ ಹೆಚ್ಚಾದಂತೆಲ್ಲಾ ಕನ್ನಡಕದ ಕ್ರಮಂಕವೂ ಬೆಳೆಯುತ್ತಾ ಹೋಗುತ್ತಿದೆ. ಅದೇ ರೀತಿ ಇಳಿವಯಸ್ಸಿನಲ್ಲಿನ ದೃಷ್ಟಿಮಾಂದ್ಯ, ಕಣ್ಣಿನಪೊರೆ ಇಂತಹ ಸಮಸ್ಯೆಗಳು ತುಂಬಾ ಹೆಚ್ಚಾಗಿ ಅವು ನಲವತ್ತರ ವಯಸ್ಸಿನಲ್ಲಿಯೇ ಪ್ರಾರಂಭವಾಗುತ್ತಿದೆ. ಪಾಶ್ಚಾತ್ಯ ವೈದ್ಯರಿಗೆ ಈ ಸಮಸ್ಯೆಗಳಿಗೆ ಯಾವುದೇ ಯೋಗ್ಯವಾದ ಪರಿಹಾರ ಇದುವರೆಗೆ ದೊರೆತಿಲ್ಲ.

ಪ್ರಸ್ತುತ ಮಹಿಳೆಯರಲ್ಲಿ ಪಿಸಿಓಡಿ ಹಾಗೂ ಪುರುಷರಲ್ಲಿ ಶುಕ್ರಾಣುಗಳ ಸಂಖ್ಯೆಯು ಕಡಿಮೆಯಿರುವ ಪ್ರಮಾಣವು ಹೆಚ್ಚಾಗುತ್ತಿದೆ. ಇದರ ಪರಿಣಾಮ ಬಹುತೇಕ ನಗರದಲ್ಲಿ ವಾಸಿಸುವ ಶೇಕಡಾ 70ಕ್ಕಿಂತಲೂ ಹೆಚ್ಚು ಯುವಕರಿಗೆ ಮೊದಲನೇ ಸಂತಾನವಾಗಲೂ ಸಹ ಚಿಕಿತ್ಸೆಯನ್ನು ಪಡೆದು ಕೊಳ್ಳಬೇಕಾಗುತ್ತಿದೆ. ಬಾಲ್ಯದಿಂದಲೇ ಆಹಾರದಲ್ಲಿ ಬೆಣ್ಣೆಯನ್ನು ಬಳಸಿದ್ದರೆ ತಾರುಣ್ಯದಲ್ಲಿ ಬರುವ ಈ ರೀತಿಯ ಸಂತಾನೋತ್ಪತ್ತಿಯ ಸಮಸ್ಯೆಯನ್ನು ತಡೆಗಟ್ಟಬಹುದು ಎಂದೇ ಹೇಳಲಾಗಿದೆ. ಹಾಗೆಯೇ ಬೆಣ್ಣೆ ವೀರ್ಯವರ್ಧಕವಾಗಿದ್ದು, ಹಸಿವನ್ನು ಹೆಚ್ಚಿಸುತ್ತದೆ. ಇದರೊಂದಿಗೆ ರಕ್ತ ಸೇರಿದಂತೆ ಮತ್ತಿತರ ಧಾತುಗಳನ್ನು ವರ್ಧಿಸುತ್ತದೆ. ವಾತ ಮತ್ತು ಪಿತ್ತ ನಾಶಕವಾಗಿ ಮೂಳೆರೋಗ, ಕ್ಷಯ, ಕೆಮ್ಮು ಹಾಗೂ ಅತಿಸಾರಕ್ಕೆ ಶಮನಕಾರಿಯಾಗಿರುವುದು ಸಾಬೀತಾಗಿದೆ. ಹೀಗಾಗಿಯೇ ಬೆಣ್ಣೆಯ ಸೇವನೆ ಬಾಲಕರು ಹಾಗೂ ವೃದ್ಧರಿಗೆ ಹೆಚ್ಚು ಲಾಭಕಾರಿ ಎಂದು ಹೇಳಲಾಗಿರುವುದು. ಒಂದರ್ಥದಲ್ಲಿ ಬೆಣ್ಣೆ ಸೇರಿದಂತೆ ಹಾಲಿನಿಂದ ತಯಾರಿಸಿದ ಎಲ್ಲಾ ಪದಾರ್ಥಗಳು ಚಿಕ್ಕ ಮಕ್ಕಳಿಂದ ಹಿಡಿದು ಯುವಕರು ಮತ್ತು ವೃದ್ಧರಾದಿಯಾಗಿ ಎಲ್ಲರ ಆರೋಗ್ಯಕ್ಕೂ ಅತಿ ಉಪಯುಕ್ತವಾದುದಾಗಿದೆ.

ಇದನ್ನೂ ಓದಿ : ಗೋ ಸಂಪತ್ತು : ಹಸು ಮತ್ತು ಮನುಷ್ಯರಿಗೆ ಸಂಜೀವಿನಿ ಗಿಣ್ಣು ಹಾಲು

Exit mobile version