Site icon Vistara News

ಗೋ ಸಂಪತ್ತು: ಬೆಣ್ಣೆಯೆಂಬ ನವನೀತದ ಅನಿಯಮಿತ ಉಪಯೋಗ!

go sampattu column by shylesh holla about importance of homemade butter

butter

ದಿನೆ ದಿನೆ ಯತ್‌ನವತಾಮುಪೈತಿ ಇತಿ ನವನೀತಮ್ |
ಇದರರ್ಥ ಯಾವುದು ಪ್ರತಿ ದಿನ ಹೊಸ ಉತ್ಪತ್ತಿಯನ್ನು ಮಾಡುತ್ತದೆಯೋ ಮತ್ತು ಹೊಸದೆನಿಸುತ್ತದೆಯೋ ಅದನ್ನು ನವನೀತ ಎಂದು ಹೇಳಲಾಗುತ್ತದೆ. ನಿಮಗೆ ತಿಳಿದಿರಲಿ ಬೆಣ್ಣೆಗೆ ನವನೀತ ಎಂಬ ಬದಲಿ ಶಬ್ದವಿದೆ.

ಇಂತಹ ಬೆಣ್ಣೆಯು ಪ್ರತಿ ದಿನ ಶರೀರದಲ್ಲಿ ಸೇರಿದ ಹೊಸ ಮತ್ತು ತರುಣ ಧಾತುಗಳ ಉತ್ಪತ್ತಿಯನ್ನು ಮಾಡುತ್ತದೆ ಮತ್ತು ಶರೀರದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಹೀಗಾಗಿಯೇ ಇದಕ್ಕೆ ನವನೀತ ಎಂದು ಹೇಳುತ್ತಿರುವುದು.

ಆಯುರ್ವೇದದಲ್ಲಿ ಹಲವು ರೀತಿಯ ಹಾಲು, ಹಾಲಿನ ಉತ್ಪನ್ನಗಳು, ಮೊಸರು, ಮಜ್ಜಿಗೆ, ಬೆಣ್ಣೆಯ ಬಗ್ಗೆ ವಿವರಿಸಲಾಗಿದೆ. ಹೀಗೆ ಬೆಣ್ಣೆಯ ಬಗ್ಗೆಯೂ ಸವಿಸ್ತಾರವಾದ ವಿವರಣೆಯೊಂದಿಗೆ ಅದನ್ನು ಔಷಧದ ರೂಪದಲ್ಲಿ ಬಳಸುವ ಬಗೆಯನ್ನು ತಿಳಿಸುತ್ತಾ ʻವಿಶೇಷನಾ ಬಲನಾಮ್ ಪ್ರಶ್ಯತೆ ʼಎಂಬುದಾಗಿ ಹೇಳಲಾಗಿದೆ. ಇದರ ಅಭಿಪ್ರಾಯಕ್ಕನುಸಾರ ಬೆಣ್ಣೆಯು ಅಗ್ನಿದೀಪಕ ಮತ್ತು ರುಚಿಕರವಾಗಿದೆ. ಹೊಸ ಸಂಶೋಧನೆಗನುಸಾರ ಬೆಣ್ಣೆಯಿಂದಾಗಿ ಅನೇಕ ವಿಧದ ರೋಗಾಣುಗಳಿಂದ ಜೀರ್ಣಾಂಗವ್ಯೂಹದ ಸಂರಕ್ಷಣೆಯಾಗುತ್ತದೆ. ಬೆಣ್ಣೆಯಲ್ಲಿ ಉತ್ತಮವಾಗಿರುವಂತಹ ರೋಗಾಣು ವಿರೋಧಿ ಪ್ರಕ್ರಿಯೆ ಅಂದರೆ ಆಂಟಿ ಫಂಗಲ್ ಆಕ್ಟಿವಿಟಿ ಇದೆ. ಆದುದರಿಂದ ಚಿಕಿತ್ಸೆಗೆ ಕಠಿಣವೆನಿಸುವ ಗಜಕರ್ಣವನ್ನು ನಿರ್ಮಾಣ ಮಾಡುವ ಅಂಟುರೋಗದ ಅಂದರೆ ಫಂಗಲ್ ಇನ್‌ಫೆಕ್ಷನ್‌ಗೆ ಪ್ರತಿರೋಧವನ್ನು ಬೆಣ್ಣೆಯು ಮಾಡುತ್ತದೆ.

ದೇಶಿ ಗೋವಿನ ಹಾಲಿನ ಶೇಕಡಾ 90ರಷ್ಟು ಕೊಬ್ಬು, ಸ್ವಲ್ಪ ಭಾಗ ಪ್ರೋಟೀನ್, 50 ರಿಂದ 60 ಶೇಕಡಾ ಕ್ಯಾಲ್ಸಿಯಂ ಬೆಣ್ಣೆಯಲ್ಲಿರುತ್ತದೆ. ಇದರಲ್ಲಿರುವ ಕೊಬ್ಬು ಅತ್ಯಂತ ಶ್ರೇಷ್ಠಮಟ್ಟದ್ದು ಎಂದು ಸಾಬೀತಾಗಿದೆ. ಇದು ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಇದು ಸ್ವಾದದಲ್ಲಿ ರುಚಿಕರವಾಗಿದ್ದು, ಸಾಧಾರಣ ತುಪ್ಪದಂತೆ ಇದರ ಗುಣವಿರುತ್ತದೆ. ಇದರಲ್ಲಿ ಶೀತ ಗುಣವಿದ್ದು ಬುದ್ಧಿವರ್ಧಕವಾಗಿದೆ. ಹಾಗೆಯೇ ಇದರಲ್ಲಿ ನೇತ್ರ ರೋಗನಾಶಕ, ಕಫಕಾರಕ, ದಾಹನಾಶಕ ಗುಣವಿದ್ದು, ಧಾತುವರ್ಧಕವಾಗಿದೆ.

ಹೃದಯ ಸಂಬಂಧಿತ ಕಾಯಿಲೆ ದೂರ

ಬೆಣ್ಣೆ ಮತ್ತು ತುಪ್ಪದ ಕಣವು ಮನುಷ್ಯನ ರಕ್ತದೊಡನೆ ಸುಲಭವಾಗಿ ಬೆರೆತು ಹೃದಯ ಸಂಬಂಧಿತ ಕಾಯಿಲೆಗಳನ್ನು ದೂರ ಮಾಡುತ್ತದೆ. ಹಾಗೆಯೇ ಕುರುಡು, ಕಿವುಡು, ಮರೆವು ಮತ್ತು ಮೆದುಳಿಗೆ ಸಂಬಂಧಿಸಿದ ರೋಗಗಳಿಗೆ ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ. ದೇಶಿ ಗೋವಿನ ಬೆಣ್ಣೆಯನ್ನು ನಿಯಮಿತವಾಗಿ ಬಳಸುವುದರಿಂದ ಕಿಡ್ನಿ ಸದೃಢವಾಗುತ್ತದೆ. ಮಾನವನ ದೇಹದಲ್ಲಿ ಕೆರೋಟಿನ್ ಕೊರತೆಯಿಂದಾಗಿಯೇ ಅತ್ಯಂತ ಭಯಾನಕ ಕ್ಯಾನ್ಸರ್ ಬರುವ ಸಂಭವ ಹೆಚ್ಚಾಗಿದೆ. ಆದರೆ ದೇಶಿ ಗೋತಳಿಗಳ ತುಪ್ಪದಲ್ಲಿ ʻಕೆರೋಟಿನ್ʼ ಎಂಬ ಮಹತ್ವಪೂರ್ಣ ಅಂಶವಿದ್ದು, ಅದರ ಸೇವನೆಯಿಂದ ದೇಹದಲ್ಲಿ ವಿಟಮಿನ್ ʻಎʼ ವೃದ್ಧಿಯಾಗುತ್ತದೆ. ಇದು ಕಣ್ಣಿನ ಮತ್ತು ಚರ್ಮಕ್ಕೆ ಅತ್ಯವಶ್ಯಕವಾದುದಾಗಿದೆ.

ದೇಶಿ ಗೋವಿನ ಬೆಣ್ಣೆಯಲ್ಲಿ ಸಮೃದ್ಧವಾಗಿರುವ ಚಿಕ್ಕ ಮತ್ತು ಮಧ್ಯಮ ಚೇನ್ ಫ್ಯಾಟಿ ಆಸಿಡ್‌ನಿಂದಾಗಿ ಅದರಲ್ಲಿ ಕ್ಯಾನ್ಸರ್ ರೋಗದ ವಿರುದ್ಧ ಕಾರ್ಯ ಮಾಡುವ ಶಕ್ತಿ ಇರುತ್ತದೆ. ಇದರಲ್ಲಿನ ಕಾಂಜೂಗೇಟೆಡ್ ಲಿನೊಲಿಕ್ ಆಸಿಡ್‌ನಿಂದಲೂ ಶರೀರಕ್ಕೆ ಕ್ಯಾನ್ಸರ್ ರೋಗದ ವಿರುದ್ಧ ಉತ್ತಮ ಪ್ರತಿರೋಧ ಕ್ಷಮತೆಯು ಪ್ರಾಪ್ತವಾಗುತ್ತದೆ. ಇದರಲ್ಲಿನ ವಿಟಮನ್‌ ʻಎʼ ಮತ್ತುʻಇ’ ಎಂಬ ಎರಡು ಘಟಕಗಳು ಶರೀರಕ್ಕೆ ಆ್ಯಂಟಿ ಆಕ್ಸಿಡೆಂಟ್ಸ್‌ನ ಪೂರೈಕೆ ಮಾಡುತ್ತವೆ ಮತ್ತು ಇದರಲ್ಲಿರುವ ಸೆಲೆನಿಯಮ್ ಮತ್ತು ಕೊಲೆಸ್ಟ್ರಾಲ್‌ ಸಹ ಕ್ಯಾನ್ಸರ್ ರೋಗದ ವಿರುದ್ಧ ಉತ್ತಮ ಪ್ರತಿರೋಧವನ್ನು ಮಾಡುವುದು ಕಂಡುಬಂದಿದೆ.

ಕೊಲೆಸ್ಟ್ರಾಲ್‌ಗೆ ಉತ್ತಮ ಮೂಲ

ದೇಶಿ ಗೋವಿನ ಬೆಣ್ಣೆಯಲ್ಲಿ ಲೆಸಿಥೀನ್ ಎಂಬ ಹೆಸರಿನ ಘಟಕವಿರುತ್ತದೆ. ಇದು ಶರೀರದಲ್ಲಿನ ಕೊಲೆಸ್ಟ್ರಾಲ್‌ನ ಚಯಾಪಚಯವನ್ನು ಉತ್ತಮ ರೀತಿಯಲ್ಲಿ ಕಾಪಾಡುತ್ತದೆ. ಇದರಿಂದ ಶರೀರದ ಫ್ರಿರ‍್ಯಾಡಿಕಲ್ಸ್‌ನಿಂದ ರಕ್ಷಣೆಯಾಗುತ್ತದೆ. ಫ್ರಿರ‍್ಯಾಡಿಕಲ್ಸ್‌ನಿಂದ ರಕ್ತನಾಳಗಳಿಗಾಗುವ ತೊಂದರೆಯಿಂದ ಬೆಣ್ಣೆಯ ಕವಚವು ರಕ್ತನಾಳಗಳನ್ನು ಕಾಪಾಡುತ್ತದೆ. ಸೆಲೆನಿಯಮ್ ಇದು ಆ್ಯಂಟಿ ಆಕ್ಸಿಡೆಂಟ್‌ನ ಬೆಣ್ಣೆಯಲ್ಲಿನ ಪ್ರಮಾಣವು ಇತರ ಪದಾರ್ಥಗಳಿಗಿಂತ ಹೆಚ್ಚಿರುತ್ತದೆ. ಶರೀರಕ್ಕೆ ಅವಶ್ಯಕವಿರುವ ಒಳ್ಳೆಯ ಕೊಲೆಸ್ಟ್ರಾಲ್‌ಗೆ ಬೆಣ್ಣೆಯು ಒಂದು ಉತ್ತಮ ಮೂಲವಾಗಿದೆ.
ಸಂಧಿವಾತದ ತೊಂದರೆಯನ್ನು ತಡೆಗಟ್ಟಲು ಬೆಣ್ಣೆಯು ಅತಿ ಉಪಯುಕ್ತವಾದುದು ಎಂಬುದು ಸಾಬೀತಾಗಿದೆ.

ಮನುಷ್ಯನ ವಯಸ್ಸು ಹೆಚ್ಚಾದ ನಂತರ ಸಂದುಗಳು ಶುಷ್ಕವಾಗ ತೊಡಗುತ್ತವೆ. ಅವುಗಳ ಒಂದರ ಮೇಲೊಂದರ ಘರ್ಷಣೆಯಿಂದ ಸಂದುಗಳಲ್ಲಿನ ಎಲುಬುಗಳು ಸವೆಯತೊಡಗುತ್ತವೆ. ಶುಷ್ಕತೆಯಿಂದಾಗಿ ಸಂದುಗಳಿಗೆ ರಕ್ತ ಪೂರೈಕೆಯನ್ನು ಮಾಡುವ ರಕ್ತನಾಳಗಳು ಬಿರುಸಾಗುತ್ತವೆ. ಎಲುಬುಗಳಲ್ಲಿ ಕ್ಯಾಲ್ಸಿಯಂ ಸಂಗ್ರಹವಾಗಿ ಅವು ಮೃದುವಾಗಿರಬೇಕು. ಆದರೆ ವಯಸ್ಸಾದಂತೆ ಇಂತಹ ಭಾಗವು ಹೆಚ್ಚು ಗಟ್ಟಿಯಾಗುತ್ತದೆ ಮತ್ತು ಎಲುಬುಗಳು ಟೊಳ್ಳಾಗುತ್ತವೆ. ಇವುಗಳ ಪೈಕಿ ಯಾವುದೇ ವಿಕೃತಿಯಾದರೂ, ಸಂದು ನೋವು ಪ್ರಾರಂಭವಾಗುತ್ತದೆ. ನಿಯಮಿತವಾಗಿ ಬೆಣ್ಣೆ ತಿನ್ನುವುದರಿಂದ ಎಲ್ಲಾ ವಿಕೃತಿಗಳನ್ನು ತಡೆಗಟ್ಟಬಹುದು.

ಹಾಲಿನ ಪಾಶ್ಚರೈಸೇಷನ್ ಮಾಡುತ್ತಿರುವಾಗ ಹಾಲಿನಲ್ಲಿನ ಜಿಡ್ಡು ನಾಶವಾಗುತ್ತದೆ. ಇಂತಹ ಹಾಲನ್ನು ಕುಡಿದರೆ ಭವಿಷ್ಯದಲ್ಲಿ ಖಂಡಿತವಾಗಿಯೂ ಸಂದು ನೋವಿನ ತೊಂದರೆಯಾಗಬಹುದು. ಆದರೆ ಆಹಾರದಲ್ಲಿ ಬೆಣ್ಣೆಯನ್ನು ಸೇರಿಸಿದರೆ ಈ ಅಪಾಯವನ್ನು ತಡೆಗಟ್ಟಲು ಸಾಧ್ಯವಾಗುತ್ತದೆ.

ಬೆಣ್ಣೆಯಲ್ಲಿಯೂ ಆಯೋಡಿನ್‌ ಉಂಟು!

ಬೆಣ್ಣೆಯು ಆಯೋಡಿನ್‌ನ ಒಂದು ಉತ್ತಮ ಮೂಲವಾಗಿದೆ. ಇದರಲ್ಲಿನ ಆಯೋಡಿನ್ ಶರೀರದಲ್ಲಿ ಪಚನವಾಗಲು ಸಹಾಯಕವಾದುದಾಗಿದೆ. ಸಾಮಾನ್ಯವಾಗಿ ಪರ್ವತ ಪ್ರದೇಶಗಳು ಸಮುದ್ರದಿಂದ ದೂರವಿರುತ್ತವೆ. ಅಲ್ಲಿ ಆಯೋಡಿನ್‌ಯುಕ್ತ ಉಪ್ಪು ಸಹಜವಾಗಿ ಸಿಗುವುದಿಲ್ಲ. ಆದುದರಿಂದ ಆ ಸ್ಥಳದಲ್ಲಿ ಬೆಣ್ಣೆ ಉಪಯುಕ್ತವಾದುದು ಎಂದೇ ಹೇಳಲಾಗಿದೆ.

ಪಾರ್ಶ್ವವಾಯುವಾದಾಗ ಶರೀರದ ಯಾವುದಾದರೂ ಅವಯವ ಅಥವಾ ಯಾವುದಾದರೊಂದು ಬದಿ ಅಥವಾ ಅರ್ಧ ಶರೀರವು ಶಕ್ತಿಗುಂದುತ್ತದೆ. ಪಾಶ್ಚಾತ್ಯ ಚಿಕಿತ್ಸಾ ಪದ್ಧತಿಯಲ್ಲಿ ಇದಕ್ಕೆ ಫಿಜಿಯೋಥೆರಪಿ ಬಿಟ್ಟು ಇತರ ಚಿಕಿತ್ಸೆ ಲಭ್ಯವಿಲ್ಲ. ಆದರೆ ಫಿಜಿಯೋಥೆರಪಿ ಮಾಡುವುದಕ್ಕೆ ಸ್ನಾಯುಗಳಲ್ಲಿ ಶಕ್ತಿ ಬರಲು ಯಾವುದೇ ಉಪಾಯವಿಲ್ಲ. ಆದರೆ ಈ ಕೆಲಸವನ್ನು ಬೆಣ್ಣೆಯು ಮಾಡುತ್ತದೆ. ಆದುದರಿಂದ ಪಾರ್ಶ್ವವಾಯು ಪೀಡಿತರ ಆಹಾರದಲ್ಲಿ ಬೆಣ್ಣೆಯನ್ನು ಬಳಸಬೇಕು ಎಂದು ವೈಜ್ಞಾನಿಕರೇ ಹೇಳುವಂತಾಗಿದೆ.

ಜ್ವರದ ಕಾಯಿಲೆಯ ನಂತರ ಶರೀರದಲ್ಲಿನ ಯಾವುದೇ ಭಾಗದಿಂದಾಗುವ ರಕ್ತಸ್ತ್ರಾವಕ್ಕೆ ಆಯುರ್ವೇದ ಶಾಸ್ತ್ರದಲ್ಲಿ ರಕ್ತಪಿತ್ತ ಎಂದು ಹೇಳಲಾಗಿದೆ. ಈ ಕಾಯಿಲೆಯಲ್ಲಿ ಬೆಣ್ಣೆಯು ರಕ್ತ ಮತ್ತು ಪಿತ್ತ ಎರಡನ್ನೂ ಶಮನಗೊಳಿಸಿ ರಕ್ತ ಪ್ರವಾಹವನ್ನು ತಡೆಯಲು ಸಹಾಯ ಮಾಡುತ್ತದೆ. ಇದರಲ್ಲಿನ ಜಿಡ್ಡಿನಂಶವು ರೋಗಿಯ ಶಕ್ತಿಯನ್ನು ಉತ್ತಮಪಡಿಸುವುದರೊಂದಿಗೆ ಇದರ ಸೇವನೆಯಿಂದ ಹೊಸ ಕೋಶಗಳ ನಿರ್ಮಾಣಕ್ಕೆ ಸಹಾಯಕವಾಗುತ್ತದೆ.

ಪಾಶ್ಚಾತ್ಯರಿಗೂ ಗೊತ್ತು ಬೆಣ್ಣೆಯ ಮಹತ್ವ

ಡಾ. ವೆಸ್ಟನ್ ಪ್ರಾಯಿಸ್ ಎಂಬ ಒಬ್ಬ ಖ್ಯಾತ ಸಂಶೋಧಕ 1930ನೇ ಇಸವಿಯಲ್ಲಿ ಬೆಣ್ಣೆಯ ಕುರಿತಂತೆ ಅಧ್ಯಯನವೊಂದನ್ನು ಮಾಡಿ ಅದರಲ್ಲಿ ಜಗತ್ತಿನಲ್ಲಿ ಸದೃಢವಾಗಿರುವ ಮತ್ತು ದೀರ್ಘಾಯುಷ್ಯವನ್ನು ಹೊಂದಿರುವ ಬಹುತೇಕ ಜನರ ಆಹಾರ ಪದ್ಧತಿಯಲ್ಲಿ ಬೆಣ್ಣೆ ಎಂಬುದು ಪ್ರಾಮುಖ್ಯತೆಯನ್ನು ಹೊಂದಿದೆ. ಹಾಗೆಯೇ ಇವರೆಲ್ಲರ ಸ್ವಾಸ್ಥ್ಯ ರಹಸ್ಯವೇ ಬೆಣ್ಣೆಯ ಸೇವನೆ ಎಂಬುದಾಗಿ ತಿಳಿಸಿದ್ದಾನೆ. ಹೀಗೆ ಪಾಶ್ಚಾತ್ಯರು ಇಂದಿಗೂ ಬೆಣ್ಣೆಯನ್ನು ನಿಯಮಿತವಾಗಿ ತಮ್ಮ ಭೋಜನ ಕ್ರಮದಲ್ಲಿ ಅಳವಡಿಸಿಕೊಂಡಿದ್ದಾರೆ.

ಇಂದಿಗೂ ಸ್ವಿರ್ಜಲ್ಯಾಂಡ್‌ನಲ್ಲಿನ ಸಾಕಷ್ಟು ಹಳ್ಳಿಗಳಲ್ಲಿನ ಚರ್ಚಗಳಲ್ಲಿ ಬೆಣ್ಣೆಗೆ ದೈವೀ ಪದಾರ್ಥವೆಂದು ಗೌರವಿಸಲಾಗುತ್ತದೆ. ಅರಬ್ಬಿ ಜನರಲ್ಲಿಯೂ ಬೆಣ್ಣೆಗೆ ಗೌರವ ಸ್ಥಾನವಿದೆ. ಅಮೆರಿಕದ ಒಂದೆರಡು ತಲೆಮಾರಿನ ಹಿಂದಿನವರಲ್ಲಿ, ಬೆಣ್ಣೆ ತಿಂದು ಬೆಳೆದ ಮಕ್ಕಳೇ ಹೆಚ್ಚು ಬಲಿಷ್ಠ ಮತ್ತು ಶಕ್ತಿಶಾಲಿಯಾಗಿರುತ್ತಾರೆ ಎಂಬ ಶ್ರದ್ಧೆಯಿದ್ದುದು ಕಂಡುಬರುತ್ತದೆ. ಹೀಗೆ ಕೇವಲ ನಮ್ಮ ದೇಶದಲ್ಲಷ್ಟೇ ಅಲ್ಲ, ಜಗತ್ತಿನ ಸಾಕಷ್ಟು ದೇಶಗಳಲ್ಲಿ ಇಂದಿಗೂ ಪರಂಪರಾಗತವಾಗಿ ಬೆಣ್ಣೆಗೆ ಮಹತ್ವದ ಸ್ಥಾನವನ್ನು ನೀಡಿರುವುದು ಕಂಡುಬರುತ್ತದೆ.

ಬೆಣ್ಣೆ ಯೋಗ್ಯ, ಬಟರ್‌ ಅಲ್ಲ!

ಹೀಗೆ ಸಾವಿರಾರು ವರ್ಷಗಳಿಂದ ಮನುಷ್ಯನಿಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಶರೀರದ ಪ್ರತಿಕರ ಕ್ಷಮತೆಯನ್ನು ಉತ್ತಮವನ್ನಾಗಿರಿಸಿ ನೂರಾರು ಪ್ರಯೋಜನಗಳನ್ನು ಕೊಟ್ಟ ಜೀವದ್ರವವಿಂದು ಮನುಷ್ಯನ ಸ್ವಾರ್ಥದಿಂದ ಹತ್ತಾರು ಆಪಾದನೆಗಳನ್ನು ತನ್ನ ಮೇಲೆ ಹಾಕಿಕೊಂಡಿದೆ. ಇಂತಹ ಬೆಣ್ಣೆ ಹೊಸತಾದಷ್ಟೂ ಆರೋಗ್ಯಕರವಾದುದು. ಹಾಗೆಯೇ ಹಳೆಯದಾದಲ್ಲಿ ಅದರಲ್ಲಿ ಆಮ್ಲಗುಣ ಹೆಚ್ಚುತ್ತದೆ. ಇದರ ಸೇವನೆ ದೇಹಕ್ಕೆ ಹಿತಕರವಲ್ಲ ಎಂದೇ ಹೇಳಲಾಗಿದೆ. ಹಾಗೆಯೇ ಇಂದು ಬೆಣ್ಣೆಯ ಹೆಸರಿನಲ್ಲಿ ಪೇಟೆಯಲ್ಲಿ ಸಿಗುವ ಬಟರ್ ಇದು ಸೇವನೆಗೆ ಯೋಗ್ಯವಾದುದಲ್ಲ.

ಪೇಟೆಯಲ್ಲಿನ ಬಹುತೇಕ ಬೆಣ್ಣೆಗಳು ವಿದೇಶಿ ಹಸುವಿನ ಹಾಲಿನ ಕ್ರೀಮ್‌ನಿಂದ ಮಾಡಲ್ಪಟ್ಟಿರುತ್ತದೆ. ಸಾಂಪ್ರದಾಯಿಕವಾಗಿ ದೇಶಿ ಗೋವಿನ ಹಾಲಿನ ಕೆನೆಗೆ ಹೆಪ್ಪು ಹಾಕಿ, ಅದನ್ನು ಮೊಸರು ಮಾಡಿ, ಅಂತಹ ಮೊಸರಿನಿಂದ ತಯಾರಿಸಿದ ಬೆಣ್ಣೆಯಲ್ಲಿ ಮಾತ್ರ ಮೇಲೆ ಹೇಳಿರುವ ಅಷ್ಟು ಔಷಧೀಯ ಗುಣಗಳು ಅಡಕವಾಗಿರುತ್ತವೆ. ಹೀಗಾಗಿ ಮನೆಯಲ್ಲಿ ದೇಶಿ ಆಕಳ ಹಾಲಿನಿಂದ ಮೊಸರು ಮಾಡಿ, ಕಡೆದು ಬೆಣ್ಣೆ ತೆಗೆದು ಅದನ್ನು ಸೇವಿಸುವುದು ಒಳಿತು. ಇಲ್ಲವೇ ಅದರಿಂದ ತುಪ್ಪ ತಯಾರಿಸಿ ಅದನ್ನು ಸೇವಿಸುವುದು ಸಹ ಒಳಿತು. ಇಲ್ಲವಾದರೆ ನಂಬಿಕೆಯ ಮೂಲಗಳಿಂದ ಶುದ್ಧ ದೇಶಿ ಗೋವಿನ ಬೆಣ್ಣೆ ಅಥವಾ ತುಪ್ಪ ತರಿಸಿ ಸೇವಿಸುವುದು ಅತ್ಯಂತ ಸೂಕ್ತ.

ಇದನ್ನೂ ಓದಿ : ಗೋ ಸಂಪತ್ತು : ಕೃಷ್ಣನೇಕೆ ಬೆಣ್ಣೆ ಕದ್ದ? ಇಲ್ಲಿದೆ ವೈಜ್ಞಾನಿಕ ಸತ್ಯ!

Exit mobile version