| ಅಜ್ಜಂಪುರ ಮಂಜುನಾಥ್
ಚಂದ್ರಶೇಖರ ಭಂಡಾರಿಯವರು ಇನ್ನಿಲ್ಲ. ಮುಗ್ಧ ಮಗುವಿನ ನಗೆಯ, ಸರಳ ವ್ಯಕ್ತಿತ್ವದ ಭಂಡಾರಿಯವರು ಇದೀಗ ಕಾಲವಶರಾಗಿದ್ದಾರೆ. ಮತ್ತೊಬ್ಬ ಭಂಡಾರಿಯವರು ಸಿಕ್ಕುವುದಿಲ್ಲವಲ್ಲಾ, ಇಂತಹವರ replacement ಇಲ್ಲವಲ್ಲಾ, ಎನಿಸಿ ಮನಸ್ಸು ಹೃದಯಗಳು ಭಾರವಾಗುತ್ತವೆ. ಅವರ ಸಾವಿಗಿಂತ ಈ ಸಂಗತಿಯೇ ಹೆಚ್ಚು ದುಃಖ ತರುತ್ತದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು “ಆರೆಸ್ಸೆಸ್” ಎಂದು ಕರೆದರೆ ಅದೇಕೋ ಸಮಾಧಾನವೇ ಆಗುವುದಿಲ್ಲ. “ಸಂಘ” ಎಂದರೆ ಮಾತ್ರ ಸಮಾಧಾನ. ಈ ಕಾರಣಕ್ಕೋ ಏನೋ ಸಂಘವನ್ನು ದೂರದಿಂದ ನೋಡಿದ, ನೋಡುವ ಪತ್ರಕರ್ತರಿಗೆ (ಕುರುಡರು ಆನೆಯನ್ನು ಮುಟ್ಟಿ ವರ್ಣಿಸಿದ ಕತೆಯ ಹಾಗೆ) ಸಂಘವನ್ನು – ಸಂಘದ ಪ್ರಚಾರಕರನ್ನು ಚಿತ್ರಿಸಲು ಆಗುವುದೇ ಇಲ್ಲ. ಏನೇ ಆಗಲಿ, ಶಾಖೆಗೆ ಹೋಗಿ, ಶಿಬಿರಗಳಿಗೂ ಹೋಗಿ, ಸ್ವಯಂಸೇವಕನಾಗಿ- ಕಾರ್ಯಕರ್ತನಾಗಿ ಕೆಲಸ ಮಾಡಿದವರಿಗೆ ಮಾತ್ರ ಸಂಘದ ಆತ್ಮದ ಅರಿವು ಉಂಟಾಗುತ್ತದೆ. ತುಂಬ ಜನ ಪ್ರತಿಭಾವಂತರೂ, ಬಹಳ ಒಳ್ಳೆಯ ಬರೆಹಗಾರರೂ ಆದ ಪತ್ರಕರ್ತರು ಸಂಘವನ್ನು ಸಂಘದ ಪ್ರಚಾರಕರನ್ನು ಕುರಿತು ಬರೆದಿರುವುದನ್ನು ನೋಡಿದ್ದೇನೆ, ಓದಿದ್ದೇನೆ. ಅವೆಲ್ಲವೂ ಅಪೂರ್ಣವೇ. ಅವೆಲ್ಲವೂ ಕುರುಡರ ಕತೆಯ ವರ್ಣನೆಗಳೇ. ಅಂತಹ ಪತ್ರಕರ್ತರ ಬಳಿ ನಾನು ಭಗವದ್ಗೀತೆಯ “ಅನುಚ್ಛಿಷ್ಟಃ” ಪರಿಕಲ್ಪನೆಯನ್ನು ಓದಿ, ಅರ್ಥ ಮಾಡಿಕೊಂಡು ಅನಂತರ ಬಂದು ಸಂಘದ ಬಗೆಗೆ, ಪ್ರಚಾರಕರ ಬಗೆಗೆ ಬರೆಯಿರಿ, ಎಂದು ಹಾಸ್ಯ ಮಾಡುತ್ತಿದ್ದೆ.
ಹೌದು. ಸಂಘದ ವಿಷಯವು ಹಾಗೆಯೇ, ಪ್ರಚಾರಕರ ವಿಷಯವೂ ಹಾಗೆಯೇ.
ಭಂಡಾರಿಯವರು ಇಲ್ಲ, ಎಂಬ ಸುದ್ದಿ ಕೇಳಿದ ತಕ್ಷಣ ನನ್ನ ಮನಸ್ಸು, ತಲೆಗಳು ಖಾಲಿ ಆದಂತಾದವು. ಒಂದು
ನಿರ್ವಾತ-ಭಾವ ತುಂಬಿಕೊಂಡಿತು. ಹೊ.ವೆ.ಶೇಷಾದ್ರಿಗಳಂತಹ ಚಿಂತಕರು, ಅನುಪಮ ಅಂತಃಕರಣದ ನ.ಕೃಷ್ಣಪ್ಪನವರು, ಅದ್ಭುತ ವಾಗ್ಮಿ ವಿದ್ಯಾನಂದ ಶೆಣೈ, ಪ್ರಚಾರಕರೆಂದರೆ ಹೀಗಿರಬೇಕು ಎನ್ನುವಂತಹ ಕೃ.ಸೂರ್ಯನಾರಾಯಣ ರಾಯರು… ಎಲ್ಲರ ಚಿತ್ರಗಳು ಮನೋಪಟಲದ ಮುಂದೆ ಹಾದುಹೋದವು. ಅಂತಹ ವ್ಯಕ್ತಿಗಳೂ ಇಲ್ಲ, ಅಂತಹ ವ್ಯಕ್ತಿತ್ವಗಳೂ ಇಲ್ಲ. ಈ ಸಾಲಿಗೆ ಸರಳತೆಯ ಸಾಕಾರ ಎಂಬಂತಹ ಭಂಡಾರಿಯವರೂ ಸೇರುತ್ತಾರೆ.
ಭಂಡಾರಿಯವರನ್ನು, ಅಂತಹವರನ್ನು ಚಿತ್ರಿಸಲು ನನ್ನಂತಹವರ ಲೇಖನಿ ಸೋಲುತ್ತದೆ. ಅಂತಹ ಪ್ರಚಾರಕರು ಸಂಘವೇ ಆಗಿಹೋಗಿರುತ್ತಾರೆ. ಸಾಮಾನ್ಯ ಮನುಷ್ಯರ ಜೀವನದಲ್ಲಿ ಕಾಣುವ ಘಟನಾವಳಿಯೇ ಅಲ್ಲಿರುವುದಿಲ್ಲ. ಇದು ನನಗೆ ಅನುಭವವೇದ್ಯವಾದುದು 2007ರಲ್ಲಿ, ಹೊ.ವೆ.ಶೇಷಾದ್ರಿಯವರ ಜೀವನ-ದರ್ಶನ “ಧ್ಯೇಯಯಾತ್ರಿ” ಕೃತಿರಚನೆಯಲ್ಲಿ ತೊಡಗಿದ್ದಾಗ. ನಾಲ್ಕಾರು ಸಾಲುಗಳ ಬಾಲ್ಯದ ವಿವರ, ಶಿಕ್ಷಣ, ಇತ್ಯಾದಿ ಬಿಟ್ಟರೆ, ಇಂತಹವರ ಜೀವನವೆಲ್ಲ ಬರೀ ಸಂಘವೇ. ಇಂತಹ ಮಹಾನ್ ವ್ಯಕ್ತಿತ್ವಗಳ ಬಗೆಗೆ ಓದುವಾಗ- ತಿಳಿಯುವಾಗ- ಬರೆಯುವಾಗ ಆಗುವ ದಿವ್ಯಾನುಭೂತಿಯ ಆಯಾಮವೇ ಬೇರೆ.
“ಧ್ಯೇಯಯಾತ್ರಿ” ಕೃತಿರಚನೆಯ ಪೂರ್ವಸಿದ್ಧತೆಯ ಸಮಯದಲ್ಲಿ ಭಂಡಾರಿಯವರೊಂದಿಗೆ ಮಂಗಳೂರಿಗೆ ಹೋಗಿದ್ದೆ. ಮಾನನೀಯ ನ.ಕೃಷ್ಣಪ್ಪನವರು ಆಗ ಅಲ್ಲಿದ್ದರು. ಅವರದ್ದೇ ಬೈಠಕ್. ತುಂಬ ದೊಡ್ಡ ಬರೆಹಗಾರರಾದರೂ, ತುಂಬಾ ಸೀನಿಯರ್ ಆದರೂ, ಭಂಡಾರಿಯವರು ಹೊಸದಾಗಿ ಕಾರ್ಯಕರ್ತನಾದ ಹುಡುಗನಂತೆ ಎಲ್ಲ ಸೂಚನೆಗಳನ್ನು ಬರೆದುಕೊಳ್ಳುತ್ತಿದ್ದರು, ಮಾಹಿತಿಗಳನ್ನು ಇಂತೇದಿಸುತ್ತಿದ್ದರು (updating), ಆಗಬೇಕಾದ ಕೆಲಸದ ರೂಪರೇಖೆಗಳನ್ನು ಸಿದ್ಧಪಡಿಸಿಕೊಳ್ಳುತ್ತಿದ್ದರು. ಪೆನ್ನು, ಪುಸ್ತಕ ಹಿಡಿದುಕೊಂಡೇ ಹುಟ್ಟಿದ ನಾನು ಸಹ ಭಂಡಾರಿಯವರಿಂದ ಕಲಿತದ್ದು ತುಂಬ.
ಭಂಡಾರಿಯವರ ಕೃತಿಗಳು ಇಂದು ಭಂಡಾರಿಯವರ ಸ್ಮಾರಕಗಳಾಗಿವೆ. ಅವೇ ಅವರ ದ್ಯೋತಕಗಳಾಗಿವೆ. ಪ್ರಚಾರಕರು ಅರಿಷಡ್ವರ್ಗಗಳನ್ನು ಗೆದ್ದು ವೈರಾಗ್ಯ, ಸೇವೆ, ಸಂಘಕಾರ್ಯಗಳಿಂದಲೇ ತಮ್ಮ ಛಾಪು ಮೂಡಿಸಿರುತ್ತಾರೆ. ಸಂಘದ ವಿಷಯವೂ ಅಂತೆಯೇ, ಹಾಗೆಯೇ. ಸಂಘದ ಇತಿಹಾಸವೇ ಎಲ್ಲೂ ಸಿಕ್ಕುವುದಿಲ್ಲ. ಈ ಪರಿಪ್ರೇಕ್ಷ್ಯದಲ್ಲಿ ಸಂಘದ ಅದರಲ್ಲೂ ವಿಶೇಷವಾಗಿ ಕರ್ನಾಟಕದ ಇತಿಹಾಸವನ್ನು ದಾಖಲಿಸಿರುವ ಭಂಡಾರಿಯವರು ಅಪೂರ್ವವಾದ ಕೃತಿಯನ್ನೇ ನಮ್ಮ ಕೈಗಿಟ್ಟುಹೋಗಿದ್ದಾರೆ. “ಕಡಲ ತಡಿಯ ಸಂಘವಟ” (ಮಂಗಳೂರಿನಲ್ಲಿ ಸಂಘ ಬೆಳೆದ ಬಗೆ) ಅಂತಹ ಕೃತಿಗಳು ಅಚ್ಚರಿ ಮೂಡಿಸುತ್ತವೆ. ಹಿರಿಯ ಕಾರ್ಯಕರ್ತರು, ಪ್ರಚಾರಕರು ಸಹ ಇಷ್ಟೆಲ್ಲಾ ವಿಷಯಗಳು ನಮಗೇ ಗೊತ್ತಿರಲಿಲ್ಲ, ಎಂದಿದ್ದಾರೆ. ನಿಜ. ಸಹಜ. ಸಾಕ್ಷ್ಯಾಧಾರಗಳನ್ನು ಬಿಟ್ಟುಹೋಗುವುದಕ್ಕಿಂತ ಒಟ್ಟು ಮಾಡುವುದಕ್ಕಿಂತ, ಸಂಘಕ್ಕೆ ಸಮಾಜಕಾರ್ಯವೇ ಮುಖ್ಯ. ಈ ಹಿನ್ನೆಲೆಯಲ್ಲಿ ಭಂಡಾರಿಯವರ ಈ ಬಗೆಯ, ಅಂದರೆ ಐತಿಹಾಸಿಕ ಹೆಜ್ಜೆಗುರುತುಗಳನ್ನು ಗ್ರಂಥರೂಪದಲ್ಲಿ ದಾಖಲಿಸುವ ಸುಕಾರ್ಯವು ಸ್ವತಃ ಒಂದು ದಾಖಲೆಯಾಗಿದೆ. ಒಂದಂತೂ ನಿಜ, ಭಂಡಾರಿಯವರ ಹೊರತಾಗಿ ಬೇರಾರಿಗೂ ಇದು, ಇಂತಹುದು ಸಾಧ್ಯವಿರಲಿಲ್ಲ.
ನಾನು ವೈಯಕ್ತಿಕವಾಗಿ ನೂರಾರು ಜೀವನ-ವೃತ್ತಾಂತಗಳನ್ನು, ಜೀವನಚರಿತ್ರೆಗಳನ್ನು, ಆತ್ಮಕತೆಗಳನ್ನು, ಓದಿದ್ದೇನೆ. ಭಂಡಾರಿಯವರ “ನಿರ್ಮಾಲ್ಯ”, “ಜನಮನಶಿಲ್ಪಿ” ಕೃತಿಗಳು ನಭೂತೋ ಎನ್ನುವಂತೆಯೇ ಇವೆ. ಮತ್ತೊಮ್ಮೆ ಹೇಳುವುದಾದರೆ, ಭಂಡಾರಿಯವರ ಹೊರತಾಗಿ ಬೇರಾರಿಗೂ ಇವು, ಇಂತಹವು ಸಾಧ್ಯವಿರಲಿಲ್ಲ.
ನನಗೆ ನ. ಕೃಷ್ಣಪ್ಪನವರ ಮಹಾನ್ ವ್ಯಕ್ತಿತ್ವದ ಪರಿಚಯವಾದುದು 1967ರಲ್ಲಿ. ನನ್ನ ಜೀವನಕ್ಕೊಂದು ದಿಕ್ಕು- ಗತಿ ತೋರಿದವರೇ ಅವರು. ಅವರ ಬಗೆಗೆ ಭಂಡಾರಿಯವರು ರಚಿಸಿದ “ನಿರ್ಮಾಲ್ಯ” ಒಂದು ಅಪರೂಪದ ಹೃದಯಂಗಮ ಕಥಾನಕ. ಅಲ್ಲಿನ ವಿವರಗಳ ಅಧಿಕೃತತೆಗೆ, ಖಾಚಿತ್ಯಕ್ಕೆ ಭಂಡಾರಿಯವರು ವಹಿಸಿದ ಎಚ್ಚರ, ಪಟ್ಟ ಶ್ರಮ ಮತ್ತು ಮತ್ತೆಮತ್ತೆ ಎಲ್ಲ ಸಂಗತಿಗಳನ್ನು ಪರಿಷ್ಕರಿಸಿದ್ದು ಮಹತ್ತರ ಕಾರ್ಯವೇ ಸರಿ. “ನಿರ್ಮಾಲ್ಯ” ಕೃತಿರಚನೆಯ ಈ ಇತಿಹಾಸವೂ ಮಹತ್ತ್ವದ್ದೇ.
ಇದನ್ನೂ ಓದಿ | ನನ್ನ ದೇಶ ನನ್ನ ದನಿ ಅಂಕಣ | ದ್ರಷ್ಟಾರ, ಚಿಂತಕ ಸೀತಾರಾಮ ಗೋಯಲ್
ಕರ್ನಾಟಕದಲ್ಲಿ ಸಂಘಕಾರ್ಯವನ್ನು ಪ್ರಾರಂಭಿಸಿದ ಯಾದವರಾವ್ ಜೋಶಿಯವರು ಬಹಳ ದೊಡ್ಡವರು. ಅವರನ್ನು ನಾನು ನೋಡಿದ್ದೆನಾದರೂ ಅವರ ಅಪಾರ ಸಾಧನೆಯ ಪರಿಚಯವಾದುದು “ಜನಮನಶಿಲ್ಪಿ” ಕೃತಿಯಿಂದ. ಅದು ಅದೆಷ್ಟು ಚಂದದ ಪುಸ್ತಕವೆಂದರೆ, ಪ್ರತಿ ಬಾರಿ ಯಾದವರಾವ್ ಜೋಶಿಯವರ ನೆನಪಾದಾಗಲೆಲ್ಲಾ, ಉಲ್ಲೇಖವಾದಾಗಲೆಲ್ಲಾ ಭಂಡಾರಿಯವರ ಪುಸ್ತಕವೇ ಕಣ್ಮುಂದೆ ಬರುತ್ತದೆ.
“ಕರ್ನಾಟಕದಲ್ಲಿ ಸಂಘ” ಕೃತಿಯೂ ಅಂತೆಯೇ. ಸಂಘದ ಬೆಳವಣಿಗೆಯ ಮಹತ್ತ್ವದ ವಿವರಗಳನ್ನು ದಾಖಲಿಸಿದೆ. ಗುರೂಜಿ ಎಂದೇ ಖ್ಯಾತರಾದ ಮಾಧವ ಸದಾಶಿವ ಗೋಳವಲಕರ್ ಅವರು 1940ರಿಂದ 1973ರವರೆಗೆ ಸರಸಂಘಚಾಲಕರಾಗಿ ಸಂಘವನ್ನು, ಹಿಂದೂ ಸಮಾಜವನ್ನು ಮುನ್ನಡೆಸಿದವರು. ಅವರು ಹಿಂದೂ ಸಮಾಜದ ಸಂಘಟನೆಗಾಗಿ ಅದೆಷ್ಟು ಬಾರಿ ಭಾರತಾದ್ಯಂತ ಪ್ರವಾಸ ಮಾಡಿದರೋ? ಅವರ ಕರ್ನಾಟಕದ ಭೇಟಿಯ ಐತಿಹಾಸಿಕ ಮಹತ್ತ್ವದ ಸಂಗತಿಗಳನ್ನು ಭಂಡಾರಿಯವರು ತಮ್ಮ “ವಿದ್ಯಾರಣ್ಯರ ಭೂಮಿಯಲ್ಲಿ ಶ್ರೀಮಾಧವ” ಕೃತಿಯಲ್ಲಿ ದಾಖಲಿಸಿದ್ದಾರೆ.
ಭಂಡಾರಿಯವರು ರಚಿಸಿರುವ ಕೃತಿಗಳ ಸಂಖ್ಯೆ ದೊಡ್ಡದಿದೆ. ಅನುವಾದವನ್ನೂ ಮಾಡಿದ್ದಾರೆ. ಪ್ರಶಸ್ತಿಗಳೂ ಅವರನ್ನು ಗೌರವಿಸಿವೆ. ಅವರ ಎಲ್ಲ ಪುಸ್ತಕಗಳನ್ನು ಕಣ್ಮುಂದೆ ತಂದುಕೊಂಡಾಗ ಭಂಡಾರಿಯವರಿಂದಲ್ಲದೆ, ಬೇರಾರಿಂದಲೂ ಈ ಕೊಡುಗೆ, ಇಂತಹ ಕೊಡುಗೆ ಸಾಧ್ಯವಿರುತ್ತಿರಲಿಲ್ಲ, ಎನಿಸುತ್ತದೆ. ಅದು ಅವರು ಬಿಟ್ಟುಹೋದ ಬೆಳಕು.
ಇದನ್ನೂ ಓದಿ | ನನ್ನ ದೇಶ ನನ್ನ ದನಿ ಅಂಕಣ | ಸ್ವಾತಂತ್ರ್ಯ ಸೇನಾನಿಗಳ ರುಧಿರಾಭಿಷೇಕ
ನಿಜ-ಇತಿಹಾಸದ, ಇತಿಹಾಸರಚನಶಾಸ್ತ್ರದ ಪರಿಕಲ್ಪನೆಗಳನ್ನು ಕನ್ನಡದಲ್ಲಿ ಪರಿಚಯಿಸುವ ರಾಷ್ಟ್ರೀಯ ಮಹತ್ತ್ವದ ನಮ್ಮ “ವಾಯ್ಸ್ ಆಫ್ ಇಂಡಿಯಾ” ಗ್ರಂಥ ಸರಣಿಗಾಗಿ, ಹಮೀದ್ ದಲವಾಯಿ ಅವರ “ಸೆಕ್ಯುಲರ್ ಭಾರತದಲ್ಲಿನ ಮುಸ್ಲಿಂ ರಾಜಕಾರಣ” ಕೃತಿಯನ್ನು ಭಂಡಾರಿಯವರು ಕನ್ನಡದಲ್ಲಿ ಅನುವಾದಿಸಿಕೊಟ್ಟರು. ಆ ದಿನಗಳಲ್ಲಿ ಅವರ ಸಹಯೋಗ ನನಗೆ ಬಹಳ ಒಳ್ಳೆಯ ಶಿಕ್ಷಣವೇ ಆಯಿತು. ಕೆಲವು ವ್ಯಕ್ತಿಗಳು ಮೂಡಿಸುವ ಛಾಪು ವಿಶಿಷ್ಟವಾದುದು. ಅನುವಾದಕ್ಕೆ ಸಂಭಾವನೆ ಕೊಡುವ ವಿಷಯ ಬಂದಾಗ, “ನಾವು ಪ್ರಚಾರಕರು, ಯಾವ ಸಂಭಾವನೆಯೂ ಬೇಡ” ಎಂದು ಒಂದೇ ಮಾತಿನಲ್ಲಿ ಹೇಳಿ, ವಿಷಯಾಂತರ ಮಾಡಿದರು.
ಬೆಳಕು ನೀಡುವ ಅನೇಕ ಕೃತಿಗಳನ್ನು ಕೊಟ್ಟುಹೋಗಿರುವ ಭಂಡಾರಿಯವರ ಪುಸ್ತಕಗಳೇ ಅವರ ಸ್ಮಾರಕಗಳು.