: ಡಾ. ಜಿ. ವಿ.ಜೋಶಿ
1991ರಲ್ಲಿ ಆರ್ಥಿಕ ಸುಧಾರಣೆಗಳು ಜಾರಿಯಾದ ಮೇಲೆ ಅಭಿವೃದ್ಧಿ ದರದಲ್ಲಿ ಏರಿಕೆ ಆಯಿತಾದರೂ ಅಸಮಾನತೆ ತೀವ್ರ ಸ್ವರೂಪ ಪಡೆದ ಕಹಿ ಸತ್ಯವನ್ನು ಆಗ ಅಸ್ತಿತ್ವದಲ್ಲಿದ್ದ ಯೋಜನಾ ಆಯೋಗ ಒಪ್ಪಿಕೊಳ್ಳದೆ ಬೇರೆ ದಾರಿಯೇ ಇರಲಿಲ್ಲ. ಹೀಗಾಗಿ ಒಳಗೊಳ್ಳುವಿಕೆಯುಳ್ಳ ಅಭಿವೃದ್ಧಿಯನ್ನು ಸಾಧಿಸುವುದು 11ನೆಯ ಪಂಚವಾರ್ಷಿಕ ಯೋಜನೆಯ (2007-12) ಆದ್ಯ ಗುರಿಯೆಂದು ಸಾರುವ ಕಾರ್ಯಕ್ಕೆ ಯೋಜನಾ ಆಯೋಗ ಮುಂದಾಯಿತು. ಈ ಯೋಜನೆಯ ದಾಖಲೆಪತ್ರದ ಪ್ರತಿ ಅಧ್ಯಾಯದಲ್ಲೂ ಇದು ಗರಿಗೆದರಿ ನಿಂತಿದ್ದು ಹಳೆಯ ಸತ್ಯ. ಆದರೆ ಒಳಗೊಳ್ಳುವಿಕೆಯ ಅಭಿವೃದ್ಧಿ ಎಂದರೆ ಸಾಮಾಜಿಕ ಗೋಪುರದ ಅಥವಾ ಸಾಂಸ್ಥಿಕ ವ್ಯವಸ್ಥೆಯ ಎಲ್ಲಾ ವರ್ಗಗಳ ಸಮಾನ ಅಭಿವೃದ್ಧಿಯೆಂಬ ಪರಿಕಲ್ಪನೆ ದಾಖಲೆ ಪತ್ರದ ಯಾವ ಅಧ್ಯಾಯದಲ್ಲೂ ಮೂಡಿಬಂದಿರಲಿಲ್ಲ. ಉದ್ಯೋಗ ಸೃಷ್ಟಿಯ ಮೂಲಕ ಒಳಗೊಳ್ಳುವಿಕೆಯ ಅಭಿವೃದ್ಧಿ ಸಾಧಿಸಬೇಕೆಂಬ ವಿಚಾರವನ್ನು ದಾಖಲೆ ಪತ್ರ ಸ್ಪಷ್ಟಪಡಿಸಿದ್ದರೂ ವಾಸ್ತವದಲ್ಲಿ ಅದಕ್ಕೆ ಕಾಸಿನ ಬೆಲೆ ಬರಲಿಲ್ಲ.
2009ರ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಿಗೆ ಯುಪಿಎ ನಾಯಕಿಯಾಗಿದ್ದ ಸೋನಿಯಾ ಗಾಂಧಿ ಒಳಗೊಳ್ಳುವಿಕೆ ಅಭಿವೃದ್ಧಿ ಧ್ಯೇಯವನ್ನು ಮತ ಗಳಿಸುವ ತಂತ್ರವನ್ನಾಗಿ ಮಾಡಿಕೊಂಡುಬಿಟ್ಟರು. ಅವರು ಘೋಷಿಸಿದ್ದು ಹೀಗೆ : ʼಆರ್ಥಿಕ ಬೆಳವಣಿಗೆ ನ್ಯಾಯ-ನೀತಿಯುಳ್ಳದ್ದಾಗಬೇಕಾದರೆ ಸುದೀರ್ಘವಾಗಿರಬೇಕು.ಆರ್ಥಿಕ ಬೆಳವಣಿಗೆ ಸುದೀರ್ಘವಾಗಬೇಕಾದರೆ ಅದು ಎಲ್ಲರನ್ನೂ ಒಳಗೊಳ್ಳಬೇಕು. ಎಲ್ಲರನ್ನೂ ಒಳಗೊಳ್ಳುವುದು ಅಂದರೆ ಅತಿಹೆಚ್ಚಿನ ಸಂಖ್ಯೆಯ ಜನರ ಅತಿ ಹೆಚ್ಚಿನ ಕ್ಷೇಮಾಭಿವೃದ್ಧಿ ಎಂದು ಪರಿಭಾವಿಸಬೇಕಾದ ಅಗತ್ಯವೇ ಇಲ್ಲ. ಸತ್ಯವಾಗಿ ಇದು ಎಲ್ಲರ ಅಭ್ಯುದಯವಾಗಿದೆʼ.
ಸೋನಿಯಾ ಹೀಗೆ ಹೇಳಿದ್ದೇ ತಡ, ಮನಮೋಹನ ಸಿಂಗ್ ಸೇರಿದಂತೆ ಎಲ್ಲಾ ಹಿರಿಯ ಕಾಂಗ್ರೆಸ್ ನಾಯಕರು ಅವರ ಘೋಷಣೆಯನ್ನು ಪುರುಚ್ಚರಿಸಿ ಧನ್ಯರಾದರು! 2009 ಫೆ.16ರಂದು ಲೋಕಸಭೆಯಲ್ಲಿ ಆಗ ವಿತ್ತಸಚಿವರಾಗಿದ್ದ ಪ್ರಣವ್ ಮುಖರ್ಜಿ ಮಧ್ಯಂತರ ಬಜೆಟ್ ಮಂಡಿಸುವಾಗ ಸೋನಿಯಾರವರ ಉಪಸ್ಥಿತಿಯಲ್ಲಿ ಅವರನ್ನು ಯಥಾವತ್ತಾಗಿ ಉದ್ಧರಿಸಿ ಸೈ ಎನಿಸಿಕೊಂಡರು. ಮುಂದೆ ಪ್ರಣವ್ ನಂತರ ವಿತ್ತಸಚಿವರಾದ ಚಿದಂಬರಂ ಕೂಡ ಸೋನಿಯಾ ಹೇಳಿದ್ದು ಮೂಲ ಮಂತ್ರವೆಂದು ಲೋಕಸಭೆಯಲ್ಲಿ ಸಾರಿಯೇ ಬಿಟ್ಟರು. ಅಲ್ಲಿಗೆ 11ನೇ ಯೋಜನೆಯ ಪರಿಪತ್ರ ನೀಡಿದ ಸಮರ್ಪಕ ವಿವರಣೆ ಮೂಲ ಮಂತ್ರವಾಗಿರದೆ ಮೂಲೆಗೆ ಸರಿದು ಹೋಯಿತು.
ಆಗ ಪ್ರಧಾನ ಮಂತ್ರಿಗೆ ಪ್ರಮುಖ ಆರ್ಥಿಕ ಸಲಹೆಗಾರರಾದ ಸಿ. ರಂಗರಾಜನ್ ಕೂಡ ಒಳಗೊಳ್ಳುವಿಕೆಯ ಅಭಿವೃದ್ಧಿ ಸಮಾಜದ ಎಲ್ಲಾ ವರ್ಗಗಳ ಅಭಿವೃದ್ಧಿ ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕರು ನಡೆದ ದಾರಿಯಲ್ಲೇ ನಡೆಯುವ ಸಾಹಸ ಮಾಡಿದರು. ಹೀಗೆ ಆರ್ಥಿಕ ಅಸಮಾನತೆ ತೀವ್ರ ಸ್ವರೂಪ ತಾಳಿರುವಾಗಲೇ ವಾಸ್ತವದಲ್ಲಿ ಬೇಕೇ ಬೇಕಾದ ಪರಿಕಲ್ಪನೆ ಅವಗಣನೆಗೆ ಗುರಿಯಾಯಿತು.
ಆ ತನಕ ಆದ ಆರ್ಥಿಕ ಅಭಿವೃದ್ಧಿಯ ಫಲಾನುಭವಗಳಿಂದ (ಲಾಭಗಳಿಂದ) ವಂಚಿತರಾದ ಸಾಮಾಜಿಕ ವರ್ಗಗಳಿಗೆ ಇದೇ ಲಾಭಗಳನ್ನು ವಿಳಂಬ ಮಾಡದೇ ತಲುಪಿಸುವುದು ವಾಸ್ತವದಲ್ಲಿ ಬೇಕಾದ ಒಳಗೊಳ್ಳುವಿಕೆ ಅಭಿವೃದ್ಧಿ ಎನ್ನುವ ವಿಚಾರ ಹನ್ನೊಂದನೆಯ ಯೋಜನೆಯ ದಾಖಲೆ ಪತ್ರದಲ್ಲಿ ಬೇರೂರಿಕೊಂಡಿದ್ದರೂ ಅದು ಮತಗಳಿಕೆಯ ಹುನ್ನಾರದಲ್ಲಿದ್ದ ಕಾಂಗ್ರೆಸ್ ಧುರೀಣರಿಗೆ ಅಪಥ್ಯವಾಗಿತ್ತು. ಬಹಳ ವರ್ಷಗಳ ಹಿಂದೆಯೇ ಜಾನ್ ಎಫ್. ಕೆನೆಡಿ ಶ್ರೀಮಂತ ರಾಷ್ಟ್ರವಾದ ಅಮೇರಿಕೆಯ ಅಧ್ಯಕ್ಷರಾಗಿದ್ದಾಗ ಹೇಳಿದ ನುಡಿಮುತ್ತೊಂದನ್ನು ಮತ್ತೆ ಸ್ಮರಿಸಿಕೊಳ್ಳಬೇಕಾಗಿದೆ : ʼಯಾವುದೇ ಸ್ವತಂತ್ರ ಸಮಾಜವಾದರೂ ದೊಡ್ಡ ಸಂಖ್ಯೆಯಲ್ಲಿರುವ ಬಡವರಿಗೆ ನೆರವಾಗದಿದ್ದರೆ ಅದು ಸಣ್ಣ ಸಂಖ್ಯೆಯಲ್ಲಿರುವ ಶ್ರೀಮಂತರನ್ನು ರಕ್ಷಿಸಿಕೊಳ್ಳಲಾರದು.ʼ ಈಗಲೂ ಜಗತ್ತಿನ ಯಾವ ರಾಷ್ಟ್ರವೂ ಕೆನಡಿಯವರ ಈ ನುಡಿಯ ಮೌಲ್ಯವನ್ನು ಅಲ್ಲಗಳೆಯಲು ಸಾಧ್ಯವಿಲ್ಲ.
ಭಾರತದಲ್ಲಿ ಕಳೆದ ಸುಮಾರು 40 ವರ್ಷಗಳಿಂದ ಉಳ್ಳವರು ಮತ್ತು ಇಲ್ಲದಿರುವವರ ನಡುವಣ ಅಂತರ ಹೆಚ್ಚುತ್ತಿರುವುದು ಕಳವಳಕಾರಿ. ಈ ಸಮಸ್ಯೆಯ ತೀವ್ರತೆಯನ್ನು 2018ರ ಜಾಗತಿಕ ಮಟ್ಟದ ಆಕ್ಸ್‌ಫಾಮ್ ವರದಿ ಗುರುತಿಸಿತ್ತು. 2023ರ ಪ್ರಾರಂಭದಲ್ಲೇ ಬೆಳಕು ಕಂಡ ʼಶ್ರೀಮಂತರಿಗೆ ಉಳಿಗಾಲʼ ಎನ್ನುವ ಶೀರ್ಷಿಕೆ ಹೊತ್ತ ಆಕ್ಸ್‌ಫಾಮ್ ವರದಿ ಮತ್ತೆ ಇದೇ ಸಮಸ್ಯೆಯ ಆಳವನ್ನು ಪರಿಚಯಿಸಲು ದೊಡ್ಡ ಎಚ್ಚರಿಕೆಯ ಗಂಟೆ ಬಾರಿಸಿದೆ.
ಇದನ್ನೂ ಓದಿ: Karnataka Budget 2023 : ಬಜೆಟ್‌ನಲ್ಲಿ ಶಿಕ್ಷಣಕ್ಕೆ ಒತ್ತು; ಹರ್ಷ ವ್ಯಕ್ತಪಡಿಸಿದ ಪ್ರೊ. ಎಂ.ಆರ್. ದೊರೆಸ್ವಾಮಿ
ಇದನ್ನು ಪರಿಗಣಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2023-24ನೇ ಸಾಲಿನ ಮುಂಗಡ ಪತ್ರದ ಪ್ರಾರಂಭದಲ್ಲೇ ಒಳಗೊಳ್ಳುವಿಕೆಯ ಅಗತ್ಯವನ್ನು ಪ್ರತಿಪಾದಿಸಿದ್ದು ಸಮಂಜಸವಾದರೂ ಈಗಿನ ಪರಿಸ್ಥಿತಿಯಲ್ಲಿ ಎಲ್ಲಾ ವರ್ಗಗಳ ಕ್ಷೇಮಾಭಿವೃದ್ಧಿ ಬೇಕೆಂದು ಹೇಳುವ ಬದಲು ಈ ತನಕ ಆದ ಅಭಿವೃದ್ಧಿಯ ಲಾಭಗಳಿಂದ ವಂಚಿತರಾದ ಸಮೂಹಗಳಿಗೆ ವಿಶೇ಼ಷ ನೆರವು ನೀಡುವ ನೀತಿಯನ್ನು ಬೆಂಬಲಿಸಬೇಕಾದ ತುರ್ತು ಇದೆಯೆಂಬ ವಾದ ಮಂಡಿಸಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು. ಬಜೆಟ್ ಭಾಷಣದ 14ನೇ ಕಂಡಿಕೆಯಲ್ಲಿ ಒಳಗೊಳ್ಳುವಿಕೆಯ ಅಭಿವೃದ್ಧಿಗೆ ಪ್ರಾಶಸ್ತ್ಯ ನೀಡಿದ್ದು ಸ್ವಾಗತಾರ್ಹ ಬೆಳವಣಿಗೆ. 15ನೇ ಕಂಡಿಕೆಯಲ್ಲಿ ಒಳಗೊಳ್ಳುವಿಕೆಯ ಅಭಿವೃದ್ಧಿಗೆ ಕಾಯುತ್ತಿರುವ ಸಮುದಾಯಗಳನ್ನು (ಕೃಷಿಕರು, ಹಿಂದುಳಿದ ಸಮೂಹಗಳು, ಪರಿಶಿಷ್ಠ ಜಾತಿ ಇತ್ಯಾದಿ) ಲಿಸ್ಟ್ ಮಾಡಿದ್ದು ಸೂಕ್ತವಾಗಿದೆ.
ಉದ್ಯೋಗ ಸೃಷ್ಟಿಯ ಮೂಲಕ ಬಡತನ ನಿವಾರಣೆ ಮಾಡುವ ಧ್ಯೇಯ ಹೊಂದಿದ, ಕೇಂದ್ರ ಸರಕಾರ, ರಾಜ್ಯ ಸರಕಾರ ಮತ್ತು ಗ್ರಾಮ ಪಂಚಾಯತಗಳ ಸಮನ್ವಯ ಸಾಧಿಸಿದ, ವೈಜ್ಞಾನಿಕ ಚಿಂತನೆಯುಳ್ಳ ನರೆಗಾ ಗ್ರಾಮೀಣ ಭಾರತದಲ್ಲಿ ಒಳಗೊಳ್ಳುವಿಕೆಯ ಅಭಿವೃದ್ಧಿಗೆ ದಾರಿ ಮಾಡಿಕೊಡುವ ಸಂಭಾವ್ಯತೆಯನ್ನು ಹಿಂದೆ ಕೇಂದ್ರ ವಿತ್ತ ಸಚಿವರಾಗಿದ್ದ ಅರುಣ್ ಜೇಟ್ಲಿ ತಮ್ಮ ಎಲ್ಲಾ ಬಜೆಟ್ ಭಾಷಣಗಳಲ್ಲಿ ಹೇಳಿದ್ದರು. ಇದನ್ನು ನಿರ್ಮಲಾ ನೆನಪಿಸಿಕೊಳ್ಳಬೇಕು. ಜೇಟ್ಲಿ ಚಿಂತನೆಯಂತೆ ನರೆಗಾ ಕೃಷಿಗೆ ಪೂರಕವಾಗಿ ಸುಧಾರಣೆಗೊಂಡಿದ್ದರೆ ಕಷ್ಟದಲ್ಲಿರುವ ಕೃಷಿಕರಿಗೆ ಅಧಿಕ ನೆರವು ಲಭಿಸುತ್ತಿತ್ತು. ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಶಕ್ತಿಯ ವಿಕೇಂದ್ರೀಕರಣದ ಮೂಲಕ ಒಳಗೊಳ್ಳುವಿಕೆಯ ಅಭಿವೃದ್ಧಿಯ ಬಾಗಿಲು ತೆರೆಯಬಲ್ಲ ಎಂಎಸ್‌ಎಂಇ ರಂಗ ಸಮಸ್ಯೆಗಳ ಸುಳಿಯಲ್ಲಿರುವುದು ರಾಜ್ಯಗಳಿಗೂ, ಕೇಂದ್ರಕ್ಕೂ ಸವಾಲು ಒಡ್ಡುತ್ತಿದೆ.
ಅಭಿವೃದ್ಧಿಶೀಲ ರಾಷ್ಟ್ರವಾದ ಭಾರತದಲ್ಲಿ ಒಳಗೊಳ್ಳುವಿಕೆಯ ಅಭಿವೃದ್ಧಿಯ ಕನಸು ಕಾಗದ ಬಿಟ್ಟು ಸರಿಯಾಗಿ ನೆಲಕ್ಕಿಳಿಯಬೇಕಾದರೆ ಕೇಂದ್ರ, ರಾಜ್ಯ ಮತ್ತು ಸ್ಥಾನಿಕ ಸ್ವರಾಜ್ಯ ಸಂಸ್ಥೆಗಳ ಅಧಿಕಾರ, ಹೊಣೆಗಾರಿಕೆ ಮತ್ತು ಪರಸ್ಪರ ಸಂಬಂಧಗಳ ಬಗೆಗೆ ಮರುಚಿಂತನೆ ನಡೆಯಲೇಬೇಕಾಗಿದೆ, ಅಗತ್ಯವಿದ್ದರೆ ಸಂವಿಧಾನದಲ್ಲೂ ತಿದ್ದುಪಡಿಗಳನ್ನು ಮಾಡಬೇಕಾಗಿದೆ.
ಇದನ್ನೂ ಓದಿ: Agriculture budget : 9 ವರ್ಷಗಳಲ್ಲಿ ಕೃಷಿ ಬಜೆಟ್ 5 ಪಟ್ಟು ಹೆಚ್ಚಳ, 1.25 ಲಕ್ಷ ಕೋಟಿ ರೂ.ಗೆ ಏರಿಕೆ: ಪ್ರಧಾನಿ ಮೋದಿ