Development: ಮುಂದುವರಿದ ಒಳಗೊಳ್ಳುವಿಕೆಯ ಅಭಿವೃದ್ಧಿಯ ಅನ್ವೇಷಣೆ - Vistara News

ಅಂಕಣ

Development: ಮುಂದುವರಿದ ಒಳಗೊಳ್ಳುವಿಕೆಯ ಅಭಿವೃದ್ಧಿಯ ಅನ್ವೇಷಣೆ

ಅಭಿವೃದ್ಧಿಶೀಲ ರಾಷ್ಟ್ರವಾದ ಭಾರತದಲ್ಲಿ ಒಳಗೊಳ್ಳುವಿಕೆಯ ಅಭಿವೃದ್ಧಿಯ ಕನಸು ಕಾಗದ ಬಿಟ್ಟು ಸರಿಯಾಗಿ ನೆಲಕ್ಕಿಳಿಯಬೇಕಾದರೆ ಕೇಂದ್ರ, ರಾಜ್ಯ ಮತ್ತು ಸ್ಥಾನಿಕ ಸ್ವರಾಜ್ಯ ಸಂಸ್ಥೆಗಳ ಅಧಿಕಾರ, ಹೊಣೆಗಾರಿಕೆ ಮತ್ತು ಪರಸ್ಪರ ಸಂಬಂಧಗಳ ಬಗೆಗೆ ಮರುಚಿಂತನೆ ನಡೆಯಲೇಬೇಕಾಗಿದೆ, ಅಗತ್ಯವಿದ್ದರೆ ಸಂವಿಧಾನದಲ್ಲೂ ತಿದ್ದುಪಡಿಗಳನ್ನು ಮಾಡಬೇಕಾಗಿದೆ.

VISTARANEWS.COM


on

development
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
G V Joshi

: ಡಾ. ಜಿ. ವಿ.ಜೋಶಿ

1991ರಲ್ಲಿ ಆರ್ಥಿಕ ಸುಧಾರಣೆಗಳು ಜಾರಿಯಾದ ಮೇಲೆ ಅಭಿವೃದ್ಧಿ ದರದಲ್ಲಿ ಏರಿಕೆ ಆಯಿತಾದರೂ ಅಸಮಾನತೆ ತೀವ್ರ ಸ್ವರೂಪ ಪಡೆದ ಕಹಿ ಸತ್ಯವನ್ನು ಆಗ ಅಸ್ತಿತ್ವದಲ್ಲಿದ್ದ ಯೋಜನಾ ಆಯೋಗ ಒಪ್ಪಿಕೊಳ್ಳದೆ ಬೇರೆ ದಾರಿಯೇ ಇರಲಿಲ್ಲ. ಹೀಗಾಗಿ ಒಳಗೊಳ್ಳುವಿಕೆಯುಳ್ಳ ಅಭಿವೃದ್ಧಿಯನ್ನು ಸಾಧಿಸುವುದು 11ನೆಯ ಪಂಚವಾರ್ಷಿಕ ಯೋಜನೆಯ (2007-12) ಆದ್ಯ ಗುರಿಯೆಂದು ಸಾರುವ ಕಾರ್ಯಕ್ಕೆ ಯೋಜನಾ ಆಯೋಗ ಮುಂದಾಯಿತು. ಈ ಯೋಜನೆಯ ದಾಖಲೆಪತ್ರದ ಪ್ರತಿ ಅಧ್ಯಾಯದಲ್ಲೂ ಇದು ಗರಿಗೆದರಿ ನಿಂತಿದ್ದು ಹಳೆಯ ಸತ್ಯ. ಆದರೆ ಒಳಗೊಳ್ಳುವಿಕೆಯ ಅಭಿವೃದ್ಧಿ ಎಂದರೆ ಸಾಮಾಜಿಕ ಗೋಪುರದ ಅಥವಾ ಸಾಂಸ್ಥಿಕ ವ್ಯವಸ್ಥೆಯ ಎಲ್ಲಾ ವರ್ಗಗಳ ಸಮಾನ ಅಭಿವೃದ್ಧಿಯೆಂಬ ಪರಿಕಲ್ಪನೆ ದಾಖಲೆ ಪತ್ರದ ಯಾವ ಅಧ್ಯಾಯದಲ್ಲೂ ಮೂಡಿಬಂದಿರಲಿಲ್ಲ. ಉದ್ಯೋಗ ಸೃಷ್ಟಿಯ ಮೂಲಕ ಒಳಗೊಳ್ಳುವಿಕೆಯ ಅಭಿವೃದ್ಧಿ ಸಾಧಿಸಬೇಕೆಂಬ ವಿಚಾರವನ್ನು ದಾಖಲೆ ಪತ್ರ ಸ್ಪಷ್ಟಪಡಿಸಿದ್ದರೂ ವಾಸ್ತವದಲ್ಲಿ ಅದಕ್ಕೆ ಕಾಸಿನ ಬೆಲೆ ಬರಲಿಲ್ಲ.

2009ರ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಿಗೆ ಯುಪಿಎ ನಾಯಕಿಯಾಗಿದ್ದ ಸೋನಿಯಾ ಗಾಂಧಿ ಒಳಗೊಳ್ಳುವಿಕೆ ಅಭಿವೃದ್ಧಿ ಧ್ಯೇಯವನ್ನು ಮತ ಗಳಿಸುವ ತಂತ್ರವನ್ನಾಗಿ ಮಾಡಿಕೊಂಡುಬಿಟ್ಟರು. ಅವರು ಘೋಷಿಸಿದ್ದು ಹೀಗೆ : ʼಆರ್ಥಿಕ ಬೆಳವಣಿಗೆ ನ್ಯಾಯ-ನೀತಿಯುಳ್ಳದ್ದಾಗಬೇಕಾದರೆ ಸುದೀರ್ಘವಾಗಿರಬೇಕು.ಆರ್ಥಿಕ ಬೆಳವಣಿಗೆ ಸುದೀರ್ಘವಾಗಬೇಕಾದರೆ ಅದು ಎಲ್ಲರನ್ನೂ ಒಳಗೊಳ್ಳಬೇಕು. ಎಲ್ಲರನ್ನೂ ಒಳಗೊಳ್ಳುವುದು ಅಂದರೆ ಅತಿಹೆಚ್ಚಿನ ಸಂಖ್ಯೆಯ ಜನರ ಅತಿ ಹೆಚ್ಚಿನ ಕ್ಷೇಮಾಭಿವೃದ್ಧಿ ಎಂದು ಪರಿಭಾವಿಸಬೇಕಾದ ಅಗತ್ಯವೇ ಇಲ್ಲ. ಸತ್ಯವಾಗಿ ಇದು ಎಲ್ಲರ ಅಭ್ಯುದಯವಾಗಿದೆʼ.

ಸೋನಿಯಾ ಹೀಗೆ ಹೇಳಿದ್ದೇ ತಡ, ಮನಮೋಹನ ಸಿಂಗ್ ಸೇರಿದಂತೆ ಎಲ್ಲಾ ಹಿರಿಯ ಕಾಂಗ್ರೆಸ್ ನಾಯಕರು ಅವರ ಘೋಷಣೆಯನ್ನು ಪುರುಚ್ಚರಿಸಿ ಧನ್ಯರಾದರು! 2009 ಫೆ.16ರಂದು ಲೋಕಸಭೆಯಲ್ಲಿ ಆಗ ವಿತ್ತಸಚಿವರಾಗಿದ್ದ ಪ್ರಣವ್ ಮುಖರ್ಜಿ ಮಧ್ಯಂತರ ಬಜೆಟ್ ಮಂಡಿಸುವಾಗ ಸೋನಿಯಾರವರ ಉಪಸ್ಥಿತಿಯಲ್ಲಿ ಅವರನ್ನು ಯಥಾವತ್ತಾಗಿ ಉದ್ಧರಿಸಿ ಸೈ ಎನಿಸಿಕೊಂಡರು. ಮುಂದೆ ಪ್ರಣವ್ ನಂತರ ವಿತ್ತಸಚಿವರಾದ ಚಿದಂಬರಂ ಕೂಡ ಸೋನಿಯಾ ಹೇಳಿದ್ದು ಮೂಲ ಮಂತ್ರವೆಂದು ಲೋಕಸಭೆಯಲ್ಲಿ ಸಾರಿಯೇ ಬಿಟ್ಟರು. ಅಲ್ಲಿಗೆ 11ನೇ ಯೋಜನೆಯ ಪರಿಪತ್ರ ನೀಡಿದ ಸಮರ್ಪಕ ವಿವರಣೆ ಮೂಲ ಮಂತ್ರವಾಗಿರದೆ ಮೂಲೆಗೆ ಸರಿದು ಹೋಯಿತು.

development

ಆಗ ಪ್ರಧಾನ ಮಂತ್ರಿಗೆ ಪ್ರಮುಖ ಆರ್ಥಿಕ ಸಲಹೆಗಾರರಾದ ಸಿ. ರಂಗರಾಜನ್ ಕೂಡ ಒಳಗೊಳ್ಳುವಿಕೆಯ ಅಭಿವೃದ್ಧಿ ಸಮಾಜದ ಎಲ್ಲಾ ವರ್ಗಗಳ ಅಭಿವೃದ್ಧಿ ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕರು ನಡೆದ ದಾರಿಯಲ್ಲೇ ನಡೆಯುವ ಸಾಹಸ ಮಾಡಿದರು. ಹೀಗೆ ಆರ್ಥಿಕ ಅಸಮಾನತೆ ತೀವ್ರ ಸ್ವರೂಪ ತಾಳಿರುವಾಗಲೇ ವಾಸ್ತವದಲ್ಲಿ ಬೇಕೇ ಬೇಕಾದ ಪರಿಕಲ್ಪನೆ ಅವಗಣನೆಗೆ ಗುರಿಯಾಯಿತು.

ಆ ತನಕ ಆದ ಆರ್ಥಿಕ ಅಭಿವೃದ್ಧಿಯ ಫಲಾನುಭವಗಳಿಂದ (ಲಾಭಗಳಿಂದ) ವಂಚಿತರಾದ ಸಾಮಾಜಿಕ ವರ್ಗಗಳಿಗೆ ಇದೇ ಲಾಭಗಳನ್ನು ವಿಳಂಬ ಮಾಡದೇ ತಲುಪಿಸುವುದು ವಾಸ್ತವದಲ್ಲಿ ಬೇಕಾದ ಒಳಗೊಳ್ಳುವಿಕೆ ಅಭಿವೃದ್ಧಿ ಎನ್ನುವ ವಿಚಾರ ಹನ್ನೊಂದನೆಯ ಯೋಜನೆಯ ದಾಖಲೆ ಪತ್ರದಲ್ಲಿ ಬೇರೂರಿಕೊಂಡಿದ್ದರೂ ಅದು ಮತಗಳಿಕೆಯ ಹುನ್ನಾರದಲ್ಲಿದ್ದ ಕಾಂಗ್ರೆಸ್ ಧುರೀಣರಿಗೆ ಅಪಥ್ಯವಾಗಿತ್ತು. ಬಹಳ ವರ್ಷಗಳ ಹಿಂದೆಯೇ ಜಾನ್ ಎಫ್. ಕೆನೆಡಿ ಶ್ರೀಮಂತ ರಾಷ್ಟ್ರವಾದ ಅಮೇರಿಕೆಯ ಅಧ್ಯಕ್ಷರಾಗಿದ್ದಾಗ ಹೇಳಿದ ನುಡಿಮುತ್ತೊಂದನ್ನು ಮತ್ತೆ ಸ್ಮರಿಸಿಕೊಳ್ಳಬೇಕಾಗಿದೆ : ʼಯಾವುದೇ ಸ್ವತಂತ್ರ ಸಮಾಜವಾದರೂ ದೊಡ್ಡ ಸಂಖ್ಯೆಯಲ್ಲಿರುವ ಬಡವರಿಗೆ ನೆರವಾಗದಿದ್ದರೆ ಅದು ಸಣ್ಣ ಸಂಖ್ಯೆಯಲ್ಲಿರುವ ಶ್ರೀಮಂತರನ್ನು ರಕ್ಷಿಸಿಕೊಳ್ಳಲಾರದು.ʼ ಈಗಲೂ ಜಗತ್ತಿನ ಯಾವ ರಾಷ್ಟ್ರವೂ ಕೆನಡಿಯವರ ಈ ನುಡಿಯ ಮೌಲ್ಯವನ್ನು ಅಲ್ಲಗಳೆಯಲು ಸಾಧ್ಯವಿಲ್ಲ.

ಭಾರತದಲ್ಲಿ ಕಳೆದ ಸುಮಾರು 40 ವರ್ಷಗಳಿಂದ ಉಳ್ಳವರು ಮತ್ತು ಇಲ್ಲದಿರುವವರ ನಡುವಣ ಅಂತರ ಹೆಚ್ಚುತ್ತಿರುವುದು ಕಳವಳಕಾರಿ. ಈ ಸಮಸ್ಯೆಯ ತೀವ್ರತೆಯನ್ನು 2018ರ ಜಾಗತಿಕ ಮಟ್ಟದ ಆಕ್ಸ್‌ಫಾಮ್ ವರದಿ ಗುರುತಿಸಿತ್ತು. 2023ರ ಪ್ರಾರಂಭದಲ್ಲೇ ಬೆಳಕು ಕಂಡ ʼಶ್ರೀಮಂತರಿಗೆ ಉಳಿಗಾಲʼ ಎನ್ನುವ ಶೀರ್ಷಿಕೆ ಹೊತ್ತ ಆಕ್ಸ್‌ಫಾಮ್ ವರದಿ ಮತ್ತೆ ಇದೇ ಸಮಸ್ಯೆಯ ಆಳವನ್ನು ಪರಿಚಯಿಸಲು ದೊಡ್ಡ ಎಚ್ಚರಿಕೆಯ ಗಂಟೆ ಬಾರಿಸಿದೆ.‌

ಇದನ್ನೂ ಓದಿ: Karnataka Budget 2023 : ಬಜೆಟ್‌ನಲ್ಲಿ ಶಿಕ್ಷಣಕ್ಕೆ ಒತ್ತು; ಹರ್ಷ ವ್ಯಕ್ತಪಡಿಸಿದ ಪ್ರೊ. ಎಂ.ಆರ್.‌ ದೊರೆಸ್ವಾಮಿ

ಇದನ್ನು ಪರಿಗಣಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2023-24ನೇ ಸಾಲಿನ ಮುಂಗಡ ಪತ್ರದ ಪ್ರಾರಂಭದಲ್ಲೇ ಒಳಗೊಳ್ಳುವಿಕೆಯ ಅಗತ್ಯವನ್ನು ಪ್ರತಿಪಾದಿಸಿದ್ದು ಸಮಂಜಸವಾದರೂ ಈಗಿನ ಪರಿಸ್ಥಿತಿಯಲ್ಲಿ ಎಲ್ಲಾ ವರ್ಗಗಳ ಕ್ಷೇಮಾಭಿವೃದ್ಧಿ ಬೇಕೆಂದು ಹೇಳುವ ಬದಲು ಈ ತನಕ ಆದ ಅಭಿವೃದ್ಧಿಯ ಲಾಭಗಳಿಂದ ವಂಚಿತರಾದ ಸಮೂಹಗಳಿಗೆ ವಿಶೇ಼ಷ ನೆರವು ನೀಡುವ ನೀತಿಯನ್ನು ಬೆಂಬಲಿಸಬೇಕಾದ ತುರ್ತು ಇದೆಯೆಂಬ ವಾದ ಮಂಡಿಸಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು. ಬಜೆಟ್ ಭಾಷಣದ 14ನೇ ಕಂಡಿಕೆಯಲ್ಲಿ ಒಳಗೊಳ್ಳುವಿಕೆಯ ಅಭಿವೃದ್ಧಿಗೆ ಪ್ರಾಶಸ್ತ್ಯ ನೀಡಿದ್ದು ಸ್ವಾಗತಾರ್ಹ ಬೆಳವಣಿಗೆ. 15ನೇ ಕಂಡಿಕೆಯಲ್ಲಿ ಒಳಗೊಳ್ಳುವಿಕೆಯ ಅಭಿವೃದ್ಧಿಗೆ ಕಾಯುತ್ತಿರುವ ಸಮುದಾಯಗಳನ್ನು (ಕೃಷಿಕರು, ಹಿಂದುಳಿದ ಸಮೂಹಗಳು, ಪರಿಶಿಷ್ಠ ಜಾತಿ ಇತ್ಯಾದಿ) ಲಿಸ್ಟ್ ಮಾಡಿದ್ದು ಸೂಕ್ತವಾಗಿದೆ.

MSME

ಉದ್ಯೋಗ ಸೃಷ್ಟಿಯ ಮೂಲಕ ಬಡತನ ನಿವಾರಣೆ ಮಾಡುವ ಧ್ಯೇಯ ಹೊಂದಿದ, ಕೇಂದ್ರ ಸರಕಾರ, ರಾಜ್ಯ ಸರಕಾರ ಮತ್ತು ಗ್ರಾಮ ಪಂಚಾಯತಗಳ ಸಮನ್ವಯ ಸಾಧಿಸಿದ, ವೈಜ್ಞಾನಿಕ ಚಿಂತನೆಯುಳ್ಳ ನರೆಗಾ ಗ್ರಾಮೀಣ ಭಾರತದಲ್ಲಿ ಒಳಗೊಳ್ಳುವಿಕೆಯ ಅಭಿವೃದ್ಧಿಗೆ ದಾರಿ ಮಾಡಿಕೊಡುವ ಸಂಭಾವ್ಯತೆಯನ್ನು ಹಿಂದೆ ಕೇಂದ್ರ ವಿತ್ತ ಸಚಿವರಾಗಿದ್ದ ಅರುಣ್ ಜೇಟ್ಲಿ ತಮ್ಮ ಎಲ್ಲಾ ಬಜೆಟ್ ಭಾಷಣಗಳಲ್ಲಿ ಹೇಳಿದ್ದರು.‌ ಇದನ್ನು ನಿರ್ಮಲಾ ನೆನಪಿಸಿಕೊಳ್ಳಬೇಕು. ಜೇಟ್ಲಿ ಚಿಂತನೆಯಂತೆ ನರೆಗಾ ಕೃಷಿಗೆ ಪೂರಕವಾಗಿ ಸುಧಾರಣೆಗೊಂಡಿದ್ದರೆ ಕಷ್ಟದಲ್ಲಿರುವ ಕೃಷಿಕರಿಗೆ ಅಧಿಕ ನೆರವು ಲಭಿಸುತ್ತಿತ್ತು. ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಶಕ್ತಿಯ ವಿಕೇಂದ್ರೀಕರಣದ ಮೂಲಕ ಒಳಗೊಳ್ಳುವಿಕೆಯ ಅಭಿವೃದ್ಧಿಯ ಬಾಗಿಲು ತೆರೆಯಬಲ್ಲ ಎಂಎಸ್‌ಎಂಇ ರಂಗ ಸಮಸ್ಯೆಗಳ ಸುಳಿಯಲ್ಲಿರುವುದು ರಾಜ್ಯಗಳಿಗೂ, ಕೇಂದ್ರಕ್ಕೂ ಸವಾಲು ಒಡ್ಡುತ್ತಿದೆ.

ಅಭಿವೃದ್ಧಿಶೀಲ ರಾಷ್ಟ್ರವಾದ ಭಾರತದಲ್ಲಿ ಒಳಗೊಳ್ಳುವಿಕೆಯ ಅಭಿವೃದ್ಧಿಯ ಕನಸು ಕಾಗದ ಬಿಟ್ಟು ಸರಿಯಾಗಿ ನೆಲಕ್ಕಿಳಿಯಬೇಕಾದರೆ ಕೇಂದ್ರ, ರಾಜ್ಯ ಮತ್ತು ಸ್ಥಾನಿಕ ಸ್ವರಾಜ್ಯ ಸಂಸ್ಥೆಗಳ ಅಧಿಕಾರ, ಹೊಣೆಗಾರಿಕೆ ಮತ್ತು ಪರಸ್ಪರ ಸಂಬಂಧಗಳ ಬಗೆಗೆ ಮರುಚಿಂತನೆ ನಡೆಯಲೇಬೇಕಾಗಿದೆ, ಅಗತ್ಯವಿದ್ದರೆ ಸಂವಿಧಾನದಲ್ಲೂ ತಿದ್ದುಪಡಿಗಳನ್ನು ಮಾಡಬೇಕಾಗಿದೆ.

ಇದನ್ನೂ ಓದಿ: Agriculture budget : 9 ವರ್ಷಗಳಲ್ಲಿ ಕೃಷಿ ಬಜೆಟ್‌ 5 ಪಟ್ಟು ಹೆಚ್ಚಳ, 1.25 ಲಕ್ಷ ಕೋಟಿ ರೂ.ಗೆ ಏರಿಕೆ: ಪ್ರಧಾನಿ ಮೋದಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

ಜಗದ ಜನರ ಕೈಗಳಲ್ಲಿ ಮಿನುಗುವ ಮೊಬೈಲ್ ಫೋನುಗಳಲ್ಲೀಗ ಮೇಕ್ ಇನ್ ಇಂಡಿಯಾದ್ದೇ ಮೊಹರು!

Make in India: ಭಾರತದಲ್ಲಿ ಆ್ಯಪಲ್ ಫೋನುಗಳ ಉತ್ಪಾದನೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. 2023-24ರ ಆರ್ಥಿಕ ವರ್ಷದಲ್ಲಿ ಬರೋಬ್ಬರಿ 15 ಬಿಲಿಯನ್ ಡಾಲರುಗಳ ಮೊತ್ತದ ಮೊಬೈಲ್ ಫೋನ್ ರಫ್ತು ವಹಿವಾಟು ನಡೆಸಿದೆ ಭಾರತ. ಇದರಲ್ಲಿ ಭಾರತಲ್ಲಿಯೇ ಉತ್ಪಾದಿಸುತ್ತಿರುವ ಆ್ಯಪಲ್ ಐಫೋನ್ ಬ್ರ್ಯಾಂಡಿನ ಕೊಡುಗೆಯೂ ದೊಡ್ಡದಿದೆ. ಈ ಪೈಕಿ 10 ಬಿಲಿಯನ್ ಡಾಲರುಗಳ ವಹಿವಾಟು ಆ್ಯಪಲ್‌ನಿಂದಲೇ ಬಂದಿದೆ ಎನ್ನುವುದು ವಿಶೇಷ. 2014ರಲ್ಲಿ ಕೇವಲ ಎರಡು ಮೊಬೈಲ್ ಫೋನ್ ಉತ್ಪಾದನಾ ಘಟಕಗಳು ಭಾರತದಲ್ಲಿದ್ದವು. ಈಗವು 200 ದಾಟಿವೆ.

VISTARANEWS.COM


on

Make In India
Koo

| ಚೈತನ್ಯ ಹೆಗಡೆ
ಭಾರತವು ಈ ಬಾರಿ ಪುಷ್ಕಳವಾದ ಆ್ಯಪಲ್ ಬೆಳೆ ತೆಗೆದಿದೆ. ಕಾಶ್ಮೀರದಲ್ಲೋ, ಹಿಮಾಚಲದಲ್ಲೋ ಬೆಳೆಯುವ ಸೇಬಿನ ಬಗ್ಗೆ ಮಾತನಾಡುತ್ತಿಲ್ಲ. ಬದಲಿಗೆ ಭಾರತದಲ್ಲಿ ತಯಾರಿಕೆ ಆಗುತ್ತಿರುವ ಆ್ಯಪಲ್ ಫೋನುಗಳ ಬಗೆಗಿನ ವಿದ್ಯಮಾನ ಇದು.

ಈ ವಿದ್ಯಮಾನವು ಎರಡು ಅಂಶಗಳನ್ನು ವಿಜೃಂಭಿಸುತ್ತಿದೆ. ಮೊದಲನೆಯದು, ಚೀನಾದ ಹೊರತಾಗಿಯೂ ಏಷ್ಯದಲ್ಲಿ ತನ್ನ ಪೂರೈಕೆ ಜಾಲ ಇರಬೇಕು ಎಂದು ಭಾರತದಲ್ಲಿ ತನ್ನ ಬೇರುಗಳನ್ನು ಗಟ್ಟಿಗೊಳಿಸಿದ್ದ ಆ್ಯಪಲ್ ಕಂಪನಿಯ ನಿರ್ಧಾರ ಸರಿ ಇದೆ ಎಂಬುದನ್ನು ಈ ವಿದ್ಯಮಾನ ಸಾರುವ ಮೂಲಕ, ಚೀನಾದಿಂದ ತಮ್ಮ ಉತ್ಪಾದಕ ಘಟಕಗಳನ್ನು ಹಂತ-ಹಂತವಾಗಿ ಬೇರೆಡೆಗೆ ಸ್ಥಳಾಂತರಿಸಲು ಬಯಸುತ್ತಿರುವ ಪಾಶ್ಚಾತ್ಯ ಕಂಪನಿಗಳಿಗೆ, ಭಾರತವೇ ಅದಕ್ಕೆ ಪ್ರಶಸ್ತ ಸ್ಥಳ ಎಂಬುದನ್ನು ಹೇಳುತ್ತಿದೆ. ಎರಡನೆಯದಾಗಿ, 2014ರಿಂದೀಚೆಗೆ ಮೊಬೈಲ್ ಫೋನ್ ಉತ್ಪಾದನೆಯಲ್ಲಿ ಭಾರತ ದಾಖಲಿಸುತ್ತಿರುವ ಅತಿದೊಡ್ಡ ಯಶೋಗಾಥೆಗೆ ಈ ವಿದ್ಯಮಾನವು ಮತ್ತಷ್ಟು ಮೆರಗು ತುಂಬಿದೆ.

2023-24ರ ಆರ್ಥಿಕ ವರ್ಷದಲ್ಲಿ ಬರೋಬ್ಬರಿ 15 ಬಿಲಿಯನ್ ಡಾಲರುಗಳ ಮೊತ್ತದ ಮೊಬೈಲ್ ಫೋನ್ ರಫ್ತು ವಹಿವಾಟು ನಡೆಸಿದೆ ಭಾರತ. ಇದರಲ್ಲಿ ಭಾರತಲ್ಲಿಯೇ ಉತ್ಪಾದಿಸುತ್ತಿರುವ ಆ್ಯಪಲ್ ಐಫೋನ್ ಬ್ರ್ಯಾಂಡಿನ ಕೊಡುಗೆಯೂ ದೊಡ್ಡದಿದೆ. ಈ ಪೈಕಿ 10 ಬಿಲಿಯನ್ ಡಾಲರುಗಳ ವಹಿವಾಟು ಆ್ಯಪಲ್‌ನಿಂದಲೇ ಬಂದಿದೆ.

2014ರಲ್ಲಿ ಕೇವಲ ಎರಡು ಮೊಬೈಲ್ ಫೋನ್ ಉತ್ಪಾದನಾ ಘಟಕಗಳು ಭಾರತದಲ್ಲಿದ್ದವು. ಈಗವು 200 ದಾಟಿವೆ. ಜಗತ್ತಿನ ಎರಡನೇ ದೊಡ್ಡ ಮೊಬೈಲ್ ಫೋನ್ ಉತ್ಪಾದಕ ರಾಷ್ಟ್ರವಾಗಿ ಭಾರತ ಗುರುತಿಸಿಕೊಂಡಿದೆ. ಇಂಡಿಯಾ ಸೆಲ್ಯುಲಾರ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಅಸೋಸಿಯೇಶನ್ (ಐಸಿಇಎ) ವರದಿಯ ಪ್ರಕಾರ ಭಾರತದ ಮೊಬೈಲ್ ಫೋನ್ ಉತ್ಪಾದನಾ ಸಾಮರ್ಥ್ಯ ಈ ಹತ್ತು ವರ್ಷಗಳಲ್ಲಿ 21 ಪಟ್ಟು ಹೆಚ್ಚಾಗಿದೆ. 2014-15ರಲ್ಲಿ 18,900 ಕೋಟಿ ರುಪಾಯಿಗಳ ಮೌಲ್ಯದ ಮೊಬೈಲ್ ಫೋನ್ ಗಳನ್ನು ಭಾರತ ಉತ್ಪಾದಿಸಿತ್ತು. 2023-24ರ ವಿತ್ತೀಯ ವರ್ಷದಲ್ಲಿ ಈ ಸಂಖ್ಯೆ ಎಲ್ಲಿಗೆ ಹೋಗಿ ಮುಟ್ಟಿದೆ ಗೊತ್ತೇ? ಬರೋಬ್ಬರಿ 4,10,000 ಕೋಟಿ ರೂ!

ಇವತ್ತಿಗೆ ಭಾರತದಲ್ಲಿ ಬಳಕೆಯಾಗುತ್ತಿರುವ ಮೊಬೈಲ್ ಫೋನುಗಳ ಪೈಕಿ ಶೇ. 97ರಷ್ಟು ಭಾರತದಲ್ಲೇ ತಯಾರಾದಂಥವುಗಳು. ಇವತ್ತು ಮೊಬೈಲ್ ಫೋನ್ ರಫ್ತು 15 ಬಿಲಿಯನ್ ಡಾಲರುಗಳ ಮೌಲ್ಯದ್ದಾಗಿ ಬೆಳೆಸಿರುವ ಭಾರತ 2014-15ರ ವೇಳೆಗೆ ರಫ್ತು ಮಾಡಿದ್ದ ಮೊಬೈಲ್ ಫೋನ್ ಮೌಲ್ಯ 1,556 ಕೋಟಿ ರೂ. ಮಾತ್ರ.

ನಿಮ್ಮ ಕೈಯಲ್ಲಿ ಹಿಡಿದಿರುವ ಮೊಬೈಲ್ ಫೋನ್ ವಿದೇಶಿ ಕಂಪನಿಯದ್ದೇ ಆಗಿರಬಹುದು. ಆ್ಯಪಲ್, ಸ್ಯಾಮ್ಸಂಗ್, ಒಪ್ಪೊ, ವಿವೊ, ಶಾಮಿ ಹೀಗೆ ಫೋನ್ ಯಾವುದೇ ಆಗಿದ್ದರೂ ಉತ್ಪಾದನೆ ಭಾರತದಲ್ಲೇ ಆಗಿರುತ್ತದೆ. ಈ ಹಂತದಲ್ಲಿ ಒಂದು ಪ್ರಶ್ನೆ ಹಲವರು ಕೇಳುವುದಿದೆ. ಇವೆಲ್ಲ ಏನೇ ಇದ್ದರೂ ಭಾರತದ್ದೇ ಒಂದು ಮೊಬೈಲ್ ಫೋನ್ ಉತ್ಪಾದನೆಯ ಬ್ರ್ಯಾಂಡ್‌ ಇಲ್ಲವಲ್ಲ ಎಂದು. ಅದು ಸೆಲ್ ಫೋನ್ ಉತ್ಪಾದನೆ ಇದ್ದಿರಬಹುದು, ಕಾರು ಇಲ್ಲವೇ ಮತ್ಯಾವುದೇ ತಂತ್ರಜ್ಞಾನ ಒಳಗೊಂಡ ಉತ್ಪಾದನೆಯೇ ಇದ್ದಿರಬಹುದು…ದೇಶವೊಂದು ಹಂತ-ಹಂತಗಳಲ್ಲಿ ಒಂದು ವಲಯವನ್ನು ತನ್ನದಾಗಿಸಿಕೊಳ್ಳುತ್ತದೆ. ಉದಾಹರಣೆಗೆ, ಮೊಬೈಲ್ ಉತ್ಪಾದನೆಯನ್ನೇ ತೆಗೆದುಕೊಂಡರೆ, ಆ ಕೌಶಲವನ್ನು ಅದಾಗಲೇ ಸಿದ್ಧಿಸಿಕೊಂಡಿರುವ ಕಂಪನಿಗಳು ಭಾರತದಲ್ಲೇ ಉತ್ಪಾದನೆ ಮಾಡುವಂತೆ ಮಾಡುವುದು ಮೊದಲ ಹೆಜ್ಜೆ. ಆ ಕಂಪನಿಗಳು ಇಲ್ಲಿ ಬಂದು ಉದ್ಯೋಗ ಸೃಷ್ಟಿಸುತ್ತವೆ. ಆ ಕೌಶಲಗಳನ್ನು ತಮ್ಮದಾಗಿಸಿಕೊಂಡ ಭಾರತೀಯ ಕೆಲಸಗಾರರ ಪ್ರತಿಭಾಪುಂಜವೊಂದು ಸಿದ್ಧಗೊಳ್ಳುತ್ತದೆ. ಮೊಬೈಲ್ ಫೋನ್ ಸಿದ್ಧಪಡಿಸಲು ಬೇಕಾಗುವ ಯಂತ್ರಗಳು ಭಾರತಕ್ಕೆ ಬರುತ್ತವೆ. ಅದಕ್ಕೆ ಬೇಕಾದ ಕಚ್ಚಾವಸ್ತುಗಳ ಪೂರೈಕೆ ಜಾಲವೊಂದು ಜಗತ್ತಿನ ನಾನಾ ಕಡೆಗಳಿಂದ ಭಾರತಕ್ಕೆ ಮುಖಮಾಡುತ್ತದೆ. ಹೀಗೆಲ್ಲ ಆದ ನಂತರದಲ್ಲಿ ಭಾರತೀಯ ಕಂಪನಿಗಳೇ ತಯಾರಿಕೆಗಳಲ್ಲಿ ಮುಂದೆ ಬರುವುದಕ್ಕೆ ಅನುಕೂಲಕರ ವಾತಾವರಣ ಹುಟ್ಟುತ್ತದೆ. ಚೀನಾದಂಥ ದೇಶಗಳು ಅಲ್ಲಿನ ಏಕೀಕೃತ ರಾಜಕೀಯ ವ್ಯವಸ್ಥೆ ರೂಪಿಸಿಕೊಂಡು ಈ ಪ್ರಕ್ರಿಯೆಯನ್ನು ವೇಗಗೊಳಿಸಿದ ಹಾಗೆ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತ್ವರಿತಗೊಳಿಸಲಾಗುವುದಿಲ್ಲ.

ಅದೇನೇ ಇರಲಿ. ಮೊಬೈಲ್ ಫೋನ್ ತಯಾರಿಕಾ ವಲಯವು ಭಾರತದಲ್ಲಿ ಬೃಹತ್ ಆಗಿ ಅಭಿವೃದ್ಧಿ ಹೊಂದಿದ ಪರಿಣಾಮವಾಗಿ ಅದು ಕನಿಷ್ಠ 10 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿತು. ಆ್ಯಪಲ್ ಕಂಪನಿಯೊಂದೇ ಸುಮಾರು 1 ಲಕ್ಷ ಉದ್ಯೋಗಗಳನ್ನು ಭಾರತದಲ್ಲಿ ತನ್ನ ಉತ್ಪಾದನಾ ಚಟುವಟಿಕೆಯಿಂದ ಸೃಜಿಸಿತು.

ಇದನ್ನೂ ಓದಿ: Indian Navy Power: ಸೊಮಾಲಿಯಾದ ಕಡಲ್ಗಳ್ಳರನ್ನು ಬಗ್ಗುಬಡಿದು ಜಗತ್ತಿಗೆ ಸಂದೇಶ ನೀಡಿದೆ ಭಾರತದ ಕ್ಷಾತ್ರ!

2017ರಲ್ಲಿ ಕೇಂದ್ರ ಸರ್ಕಾರವು ಪೇಸ್ಡ್ ಮನುಫ್ಯಾಕ್ಟರಿಂಗ್ ಪ್ರೊಗ್ರಾಂ ಅಡಿಯಲ್ಲಿ ಮೊಬೈಲ್ ಫೋನಿಗೆ ಸಂಬಂಧಿಸಿದ ಹೆಡ್ಸೆಟ್, ಚಾರ್ಜರ್, ಸರ್ಕಿಟ್ ಬೋರ್ಡ್ ಇತ್ಯಾದಿಗಳಿಗೆ ದೇಸಿ ಉತ್ಪಾದನೆಗೆ ಪೂರಕವಾಗುವಂತೆ ಅವಕ್ಕೆ ಬೇಕಾದ ಕಚ್ಚಾವಸ್ತುಗಳ ಸುಂಕಗಳನ್ನು ಪರಿಷ್ಕರಿಸಿತು. ಭಾರತದಲ್ಲೇ ಮೊಬೈಲ್ ಫೋನ್ ತಯಾರಿಕೆ ಘಟಕಗಳನ್ನು ಇಟ್ಟುಕೊಳ್ಳುವುದು ಕಂಪನಿಗಳಿಗೆ ಆಕರ್ಷಕವಾಗುವಂತೆ ಮಾಡಲಾಯಿತು. ಮುಂದಿನ ಹಂತದಲ್ಲಿ, 2021-22ರಲ್ಲಿ ಮೊಬೈಲ್ ಫೋನ್ ಉತ್ಪಾದನೆಯಲ್ಲಿ ಪಿ ಎಲ್ ಐ ಸ್ಕೀಮ್, ಅಂದರೆ ಉತ್ಪಾದನೆ ಆಧರಿತ ಉತ್ತೇಜನ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಿತು. ಹೆಸರೇ ಹೇಳುವಂತೆ ಉತ್ಪಾದನೆ ಹೆಚ್ಚಿಸಿಕೊಂಡಷ್ಟೂ ಕಂಪನಿಗಳಿಗೆ ಇಲ್ಲಿ ಹಣಕಾಸು ಲಾಭಗಳು ದೊರೆಯುತ್ತವೆ. ಸ್ಯಾಮ್ಸಂಗ್, ವಿಸ್ತ್ರಾನ್, ಫಾಕ್ಸಕಾನ್ ಇತ್ಯಾದಿ ಕಂಪನಿಗಳು ಈ ಪಿ ಎಲ್ ಐ ಯೋಜನೆಯಡಿ ಬಂದಿವೆ. ಐದು ವರ್ಷಗಳ ಅವಧಿಯಲ್ಲಿ, ಮೊಬೈಲ್ ಫೋನುಗಳ ಉತ್ಪಾದನೆ ವಿಭಾಗಲ್ಲಿ ಇದರಿಂದ ಎರಡು ಲಕ್ಷ ನೇರ ಉದ್ಯೋಗಗಳು ಹಾಗೂ 6 ಲಕ್ಷ ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗುವ ಅಂದಾಜಿದೆ.

ಇದನ್ನೂ ಓದಿ: Pak Afghan Conflict: ಸಡಿಲವಾಯ್ತು ಆಫ್ಘಾನ್‌ನೊಂದಿಗಿನ ಪಾಕ್‌ ಸಖ್ಯ, ತಾಲಿಬಾನಿಗಳಿಗೂ ಈಗ ಭಾರತವೇ ಮುಖ್ಯ!

ಈ ವಿತ್ತೀಯ ವರ್ಷದಲ್ಲಿ ಆ್ಯಪಲ್ ಕಂಪನಿಯ ಚೀನಾ ಘಟಕದಿಂದ ಆಗುತ್ತಿರುವ ಸಾಗಣೆಯಲ್ಲಿ ಕುಸಿತ ಕಂಡಿದ್ದರೆ, ಭಾರತದಲ್ಲಿ ಮಾತ್ರ ಏರಿಕೆ ಕಂಡಿರುವುದು ಗಮನಾರ್ಹ. ಭಾರತದಲ್ಲಿ ಯಾವುದೇ ಕಂಪನಿಗೆ ಆಗುವ ಶ್ರೇಯೋವೃದ್ಧಿ ಅದು ಇಲ್ಲಿ ತನ್ನ ಹೂಡಿಕೆಯನ್ನು ಇನ್ನಷ್ಟು ಹೆಚ್ಚಿಸುವುದಕ್ಕೆ, ಆರ್ಥಿಕ ಚಟುವಟಿಕೆಯಲ್ಲಿ ಮತ್ತಷ್ಟು ತೊಡಗಿಕೊಳ್ಳುವುದಕ್ಕೆ ಕಾರಣವಾಗುತ್ತದೆ. ಉದಾಹರಣೆಗೆ, ಆ್ಯಪಲ್ ಅದಾಗಲೇ ತನ್ನ ಫೋನಿನಲ್ಲಿ ಬಳಸುವ ಕೆಮರಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಭಾರತದಲ್ಲೇ ರೂಪಿಸುವುದಕ್ಕೆ ಟಾಟಾದ ಟೈಟಾನ್ ಸಮೂಹ ಹಾಗೂ ಮುರುಗಪ್ಪ ಸಮೂಹಗಳೊಂದಿಗೆ ಮಾತುಕತೆಯಲ್ಲಿರುವುದಾಗಿ ವರದಿಯಾಗಿದೆ. ಮೊಬೈಲ್ ಫೋನ್ ವಹಿವಾಟು ಎಂದಷ್ಟೇ ಅಲ್ಲದೇ, ಭಾರತದಲ್ಲಿ ನವೀಕೃತ ಇಂಧನ ಮೂಲಗಳ ವಿಸ್ತರಣೆಗೆ ಸಹಕರಿಸಿ ಇಂಗಾಲ ವಿಸರ್ಜನೆ ತಗ್ಗಿಸಿದ ಶ್ರೇಯಸ್ಸು ಪಡೆಯುವುದಕ್ಕಾಗಿ ಆ್ಯಪಲ್ ಕಂಪನಿಯು ಕ್ಲೀನ್ ಮ್ಯಾಕ್ಸ್ ಎಂಬ ನವೀಕೃತ ಇಂಧನಕ್ಕೆ ಸಂಬಂಧಿಸಿದ ಉದ್ದಿಮೆ ಜತೆ ಕೈಜೋಡಿಸಿದೆ. ಭಾರತದಾದ್ಯಂತ 6 ಕೈಗಾರಿಕಾ ಘಟಕಗಳ ಮೇಲೆ ಸೌರಫಲಕಗಳನ್ನು ಅಳವಡಿಸಿ, 14.4 ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದನೆ ಸಾಮರ್ಥ್ಯವನ್ನು ಈ ಪ್ರಯತ್ನ ಹುಟ್ಟು ಹಾಕಿದೆ.

ಮೊಬೈಲ್ ಫೋನುಗಳ ಉತ್ಪಾದನೆ ಮತ್ತು ವಹಿವಾಟುಗಳಲ್ಲಿ ಆಗುತ್ತಿರುವ ಈ ಅಭಿವೃದ್ಧಿ ಭಾರತದ ಒಟ್ಟಾರೆ ಎಲೆಕ್ಟ್ರಾನಿಕ್ ವಲಯಕ್ಕೆ ಹೊಸ ಸಾಮರ್ಥ್ಯ ಕೊಟ್ಟಿದೆ. ಮೊಬೈಲ್ ಫೋನುಗಳ ರಫ್ತಿನಲ್ಲಾಗಿರುವ ಹೆಚ್ಚಳವು ಒಟ್ಟಾರೆ ಭಾರತದ ಎಲೆಕ್ಟ್ರಾನಿಕ್ಸ್ ವಲಯದಲ್ಲೂ ಬಿಂಬಿಸಿದೆ. ಹಿಂದಿನ ವಿತ್ತೀಯ ವರ್ಷದಲ್ಲಿ 23.55 ಬಿಲಿಯನ್ ಡಾಲರುಗಳ ಮೌಲ್ಯದ ಎಲೆಕ್ಟ್ರಾನಿಕ್ಸ್ ರಫ್ತಾಗಿದ್ದರೆ ಈ ಬಾರಿ ಅದು 29.12 ಬಿಲಿಯನ್ ಡಾಲರುಗಳಿಗೆ ಹೆಚ್ಚಳವಾಗಿದೆ.

ಇದನ್ನೂ ಓದಿ: Narendra Modi: ಟ್ವಿಟರ್-ವಾಟ್ಸಾಪ್ ಹಳೇದಾಯ್ತು; ಈ ಬಾರಿ ಮೋದಿ ಚುನಾವಣೆ ಪ್ರಚಾರಕ್ಕೆ ʼಭಾಷಿಣಿʼಯ ಬಲ!

ಮೇಕ್ ಇನ್ ಇಂಡಿಯಾ ಕೆಲಸ ಮಾಡುತ್ತಿದೆಯಾ ಎಂದು ಕೇಳುವವರು ನೋಡಲೇಬೇಕಾದ ಯಶೋಗಾಥೆ ಭಾರತದ ಮೊಬೈಲ್ ಫೋನುಗಳ ಉತ್ಪಾದನೆಯದ್ದು.

Continue Reading

ಅಂಕಣ

ರಾಜಮಾರ್ಗ ಅಂಕಣ: ಶ್ರೀರಾಮ ಆಗುವುದು ಕಷ್ಟ, ರಾವಣ ಆಗುವುದು ಕೂಡ ಕಷ್ಟವೇ!

ರಾಜಮಾರ್ಗ ಅಂಕಣ: ಇಂದು ಶ್ರೀರಾಮ ನವಮಿ. ಯಾವ ಕೋನದಲ್ಲಿ ನೋಡಿದರೂ ರಾಮನ ವ್ಯಕ್ತಿತ್ವದಲ್ಲಿ ಒಂದು ಕಪ್ಪುಚುಕ್ಕೆ ಕೂಡ ಕಂಡು ಬರುವುದು ಸಾಧ್ಯ ಇಲ್ಲ. ಆದ್ದರಿಂದ ರಾಮ ಆಗುವುದು ಎಲ್ಲರಿಗೂ ಕಷ್ಟ!

VISTARANEWS.COM


on

sri rama rajamarga column
Koo

ಈ ಕತೆಯನ್ನು ಓದಿದ ನಂತರ ನೀವು ಯಾರನ್ನೂ ದ್ವೇಷ ಮಾಡುವುದಿಲ್ಲ!

Rajendra-Bhat-Raja-Marga-Main-logo

ಇಂದು ರಾಮನವಮಿ (Sri Ram Navami). ನನ್ನ ಜನ್ಮ ನಕ್ಷತ್ರ ಪುನರ್ವಸು. ಅದು ಶ್ರೀ ರಾಮಚಂದ್ರನ ಜನ್ಮ ನಕ್ಷತ್ರವೂ ಹೌದು! ನಾನು ಕೂಡ ರಾಮನ ಹಾಗೆ ನನ್ನ ಹೆತ್ತವರಿಗೆ ಹಿರಿಯ ಮಗ. ಆದರೆ ನಮ್ಮ ಹೋಲಿಕೆಯು ಅಷ್ಟಕ್ಕೇ ನಿಂತು ಬಿಡುತ್ತದೆ!

ಏಕೆಂದರೆ ಶ್ರೀರಾಮನ ಹಾಗೆ ಬದುಕುವುದು ತುಂಬಾನೆ ಕಷ್ಟ. ಶ್ರೀಕೃಷ್ಣನ ಹಾಗೆ ಯೋಚನೆ ಮಾಡುವುದು ಕೂಡ ಕಷ್ಟ. ನನಗೆ ಎರಡೂ ಈವರೆಗೆ ಸಾಧ್ಯವಾಗಲೇ ಇಲ್ಲ ಅನ್ನುವುದು ವಾಸ್ತವ. ಅದರಲ್ಲಿಯೂ ಮೊದಲನೆಯದ್ದು ಭಾರೀ ಕಷ್ಟ.

ವಾಲ್ಮೀಕಿಯು ಕೆತ್ತಿದ್ದು ಅದ್ಭುತವಾದ ವ್ಯಕ್ತಿತ್ವ ರಾಮ

ಶ್ರೀರಾಮನ ಬಗ್ಗೆ ಬೇರೆ ಬೇರೆ ವೇದಿಕೆಗಳಲ್ಲಿ ಗಂಟೆಗಳ ಕಾಲ ಮಾತಾಡಿದ್ದೇನೆ. ಅವನ ಜೀವನದ ಪ್ರತೀ ಒಂದು ಘಟನೆ ಕೂಡ ನನಗೆ ಬೆರಗನ್ನೇ ಮೂಡಿಸುತ್ತದೆ. ಆದಿ ಕವಿ ವಾಲ್ಮೀಕಿಯು ರಾಮಾಯಣದ ಮೂಲಕ ಕೆತ್ತಿದ ರಾಮನ ಪಾತ್ರವು ಅದು ವಿಶ್ವದ ಅದ್ಭುತ!

ನನಗೆ ಅಚ್ಚರಿ ಮೂಡಿಸಿದ ಒಂದೆರಡು ಘಟನೆಗಳು

ಶ್ರೀ ರಾಮನಿಗೆ ಪಟ್ಟಾಭಿಷೇಕಕ್ಕೆ ಸಂಕಲ್ಪವನ್ನು ದಶರಥನು ತೆಗೆದುಕೊಂಡಾಗಿತ್ತು. ಅದಕ್ಕಾಗಿ ತೀವ್ರ ಹಂಬಲ ಪಟ್ಟವರು ಅಯೋಧ್ಯೆಯ ಪ್ರತೀ ಒಬ್ಬ ನಾಗರಿಕರು. ರಾಮನು ಅರಸ ಆಗಬಾರದು ಅಂತ ಒಬ್ಬರೂ ಹೇಳಿರಲಿಲ್ಲ. ಪಟ್ಟಾಭಿಷೇಕಕ್ಕೆ ದಿನವನ್ನು ನಿಗದಿ ಮಾಡಿದ ದಶರಥ ಮಹಾರಾಜನು ಇಡೀ ಅಯೋಧ್ಯಾ ನಗರವನ್ನು ಸಿಂಗಾರ ಮಾಡಿ ಪಟ್ಟಕ್ಕೆ ಸಿದ್ಧತೆ ಮಾಡಿದ್ದನು.

ಆದರೆ ಮಂಥರೆ ಎಂಬ ಅತೃಪ್ತ ಆತ್ಮವು ಕೈಕೇಯಿ ರಾಣಿಯ ತಲೆಯನ್ನು ಕೆಡಿಸಿ ರಾಮನ ಪಟ್ಟಾಭಿಷೇಕಕ್ಕೆ ವಿಘ್ನವನ್ನು ಒಡ್ಡಿದ್ದು ನಮಗೆಲ್ಲ ಗೊತ್ತಿದೆ. ಹಿಂದೆ ಯಾವುದೋ ಒಂದು ಕಾಲದಲ್ಲಿ ಕೊಟ್ಟಿದ್ದ ಎರಡು ವರಗಳನ್ನು ಕೈಕೇಯಿಯು ಆ ಮಧ್ಯರಾತ್ರಿ ದಶರಥ ಮಹಾರಾಜನಿಗೆ ಕೇಳಿದಾಗ ರಾಜನು ಅದನ್ನು ನೆರವೇರಿಸಲು ಸಾಧ್ಯವೇ ಆಗದೇ ಕುಸಿದು ಬಿದ್ದ ಕಥೆಯು ಕೂಡ ನಮಗೆ ಗೊತ್ತಿದೆ.

ಪಿತೃ ವಾಕ್ಯಂ ಶಿರೋಧಾರ್ಯಂ!

ಆಗ ಶ್ರೀ ರಾಮನು ಕಟ್ಟು ಬಿದ್ದದ್ದು ಯಾವುದೋ ಒಂದು ಗಳಿಗೆಯಲ್ಲಿ ತನ್ನ ಅಪ್ಪ ತನ್ನ ಚಿಕ್ಕಮ್ಮನಿಗೆ ಕೊಟ್ಟಿದ್ದ ಒಂದು ಮಾತಿಗೆ! ಅದನ್ನು ತಂದೆಯು ನೇರವಾಗಿ ಹೇಳಲು ಸಾಧ್ಯ ಆಗದೆ ಕಣ್ಣೀರನ್ನು ಸುರಿಸುತ್ತ ನೆಲಕ್ಕೆ ಒರಗಿದಾಗಲೂ ರಾಮನಿಗೆ ಅದು ಖಂಡಿತವಾಗಿಯೂ ‘ಪಿತೃ ವಾಕ್ಯಮ್ ಶಿರೋಧಾರ್ಯಮ್’!

king dasharatha

ರಾಮನು ಅರಸ ಆಗಬಾರದು ಎಂದು ರಾಣಿ ಕೈಕೇಯಿಯ ಮನಸ್ಸಿನಲ್ಲಿ ಕೂಡ ಇರಲಿಲ್ಲ. ಆದರೆ ಆಕೆಯಲ್ಲಿ ಆ ಭ್ರಮೆ ಮತ್ತು ಪುತ್ರ ವಾತ್ಸಲ್ಯವನ್ನು ಹುಟ್ಟಿಸಿದವಳು ಆ ಗೂನಜ್ಜಿ ಮಂಥರೆ!

ಅವಳು ಹೇಗೂ ಅಯೋಧ್ಯೆಯ ಪ್ರಜೆ ಆಗಿರಲಿಲ್ಲ. ಅವಳು ಕೈಕೇಯಿಯ ತಾಯಿಯ ಮನೆಯಿಂದ ಕೈಕೇಯಿ ಜೊತೆಗೆ ಬಂದವಳು. ಒಂದು ರೀತಿಯಲ್ಲಿ ಶ್ರೀರಾಮನು ಪಟ್ಟವೇರಿ ಅರಸನಾಗಲು ಆ ಅಯೋಧ್ಯೆಯಲ್ಲಿ ನೂರು ಪ್ರತಿಶತದ ಬಹುಮತದ ಮುದ್ರೆ ಇತ್ತು! ಆದರೆ ರಾಮನು ತಂದೆ ಬಹಳ ಹಿಂದೆ ತನ್ನ ರಾಣಿಗೆ ಕೊಟ್ಟ ಒಂದು ಮಾತಿಗೆ ಕಟ್ಟು ಬಿದ್ದು ಅರಸೊತ್ತಿಗೆಯನ್ನು ಎಡಗಾಲಿನಿಂದ ಒದ್ದು ನಾರು ಮುಡಿ ತೊಟ್ಟು ಕಾಡಿಗೆ ಹೋದವನು. ತನ್ನದೇ ಹಕ್ಕಿನ ರಾಜ್ಯವನ್ನು ತ್ಯಾಗ ಮಾಡಲು ಆತ ಹಿಂದೆ ಮುಂದೆ ನೋಡಲಿಲ್ಲ!

‘ನೀನು ಕೊಟ್ಟ ಮಾತಿಗೆ ನಾನು ಹೇಗೆ ಹೊಣೆ ಆಗಬೇಕು?’ ಎಂದು ಅಪ್ಪನನ್ನು ಒಂದು ಮಾತು ಕೂಡ ಶ್ರೀ ರಾಮನು ಕೇಳಲಿಲ್ಲ! ಆ ರೀತಿಯ ಸಣ್ಣ ಯೋಚನೆ ಕೂಡ ಆತನ ಮನದಲ್ಲಿ ಬರಲಿಲ್ಲ ಅಂದರೆ ಅದು ಅದ್ಭುತವೇ ಹೌದು! ಸರ್ವಾಲಂಕಾರ ಆಗಿದ್ದ ಅಯೋಧ್ಯೆಯ ನಡುವೆ ಯಾವ ವಿಷಾದ ಕೂಡ ಇಲ್ಲದೆ ಎದ್ದು ಹೋಗುವುದು ಸುಲಭ ಅಲ್ಲ! ಅದು ರಾಮನಿಗೆ ಮಾತ್ರ ಸಾಧ್ಯವಾಗುವ ನಡೆ.

ರಾಮನಿಗೆ ನೂರು ಪ್ರತಿಶತ ಜನಮತದ ಬೆಂಬಲ ಇತ್ತು!

ಆಗ ಪೂರ್ಣ ಜನಮತ ತನ್ನ ಪರವಾಗಿ ಇದ್ದಾಗ ರಾಮನು ಪಿತೃ ವಾಕ್ಯವನ್ನು ಧಿಕ್ಕರಿಸಿ ಆಡಳಿತವನ್ನು ಮಾಡಬಹುದಿತ್ತು ಎಂದು ನನಗೆ ಹಲವರು ಕೇಳಿದ್ದಾರೆ. ಆದರೆ ಆಗ ರಾಮನು ಕೇವಲ ದಶರಥನ ಮಗ ಮಾತ್ರ ಆಗಿದ್ದ. ಅರಸ ಆಗಿರಲಿಲ್ಲ ಅನ್ನುವುದು ನನ್ನ ಉತ್ತರ!

ಮುಂದೆ ರಾಣಿ ಕೈಕೇಯಿ ಕಾಡಿಗೆ ಬಂದು ತಮ್ಮ ತಪ್ಪಿಗೆ ಕ್ಷಮೆ ಕೇಳಿ ಮತ್ತೆ ಅಯೋಧ್ಯೆಗೆ ಬರಬೇಕು ಎಂದು ಎಷ್ಟು ವಿನಂತಿ ಮಾಡಿದರೂ ರಾಮಚಂದ್ರನ ಮನಸ್ಸು ಒಂದಿಷ್ಟೂ ವಿಚಲಿತ ಆಗಲಿಲ್ಲ. ಕಣ್ಣೀರು ಸುರಿಸುತ್ತಾ ಬಂದ ಭರತನನ್ನು ಧೈರ್ಯ ತುಂಬಿಸಿ ಅರಸನಾಗಲು ಮಾನಸಿಕವಾಗಿ ಸಿದ್ಧತೆ ಮಾಡಿ ಕಳುಹಿಸಿದ್ದು ಅದೇ ರಾಮ. ಈ ರೀತಿಯ ನಿರ್ಧಾರಗಳು ರಾಮನ ವ್ಯಕ್ತಿತ್ವದ ಕೈಗನ್ನಡಿ.

Sri Ramachandra

ಮುಂದೆ ಅದೇ ರಾಮನು ರಾವಣನ ವಧೆಯಾದ ನಂತರ ಅತ್ಯಂತ ವಿಧಿವತ್ತಾಗಿ ಲಂಕೆಯಲ್ಲಿ ಆತನ ಕ್ರಿಯಾಕರ್ಮ ಮುಗಿಸುತ್ತಾನೆ. ಆಗ ರಾಮ ಹೇಳಿದ ಎರಡು ಮಾತುಗಳನ್ನು ಕೇಳಿ.

ರಾಮನು ದ್ವೇಷ ಮಾಡಿದ್ದು ರಾವಣನನ್ನು ಅಲ್ಲ!

‘ನಾನು ದ್ವೇಷ ಮಾಡಿದ್ದು ರಾವಣನನ್ನು ಅಲ್ಲ. ಅವನ ಒಳಗಿದ್ದ ರಾವಣತ್ವವನ್ನು! ಯಾರನ್ನೇ ಆದರೂ ಮರಣದ ನಂತರ ದ್ವೇಷ ಮಾಡಬಾರದು. ರಾವಣನು ಹೇಳಿ ಕೇಳಿ ಮಹಾ ಬ್ರಾಹ್ಮಣ. ಆತನು ದೈವಭಕ್ತ. ಆದ್ದರಿಂದ ಅವನನ್ನು ಗೌರವಿಸುವುದು ನಮ್ಮ ಕರ್ತವ್ಯ!’

ಸೀತೆಯನ್ನು ಅಗ್ನಿಪರೀಕ್ಷೆ ಮಾಡಿದ್ದು ಸರಿಯಾ?

ಮುಂದೆ ಅದೇ ರಾಮಚಂದ್ರನು ಅಯೋಧ್ಯೆಗೆ ಬಂದು ಪಟ್ಟಾಭಿಷೇಕ ಆಗುವ ಮೊದಲು ತನ್ನ ಪತ್ನಿ ಸೀತೆಯನ್ನು ಅಯೋಧ್ಯೆಯ ಜನರ ಮುಂದೆ ಅಗ್ನಿ ಪರೀಕ್ಷೆಗೆ ಒಡ್ಡಿದ ವಿಷಯದ ಬಗ್ಗೆ ತುಂಬಾ ಟೀಕೆಗಳು ಇವೆ. ಅದೇ ರೀತಿ ಒಬ್ಬ ಸಾಮಾನ್ಯ ಅಗಸನ ಮಾತನ್ನು ಕೇಳಿ ತನ್ನ ಕೈ ಹಿಡಿದ ಮಡದಿ ಸೀತೆಯನ್ನು ಮತ್ತೆ ಕಾಡಿಗೆ ಕಳುಹಿಸಿದ ನಿರ್ಧಾರದ ಬಗ್ಗೆ ಕೂಡ ಸಾಕಷ್ಟು ಟೀಕೆಗಳು ಬಂದಿವೆ.

ಆದರೆ ಅವೆರಡು ಕೂಡ ಶ್ರೀರಾಮನು ರಾಜಾರಾಮನಾಗಿ ತೆಗೆದುಕೊಂಡ ನಿರ್ಧಾರಗಳು. ಅವು ಸೀತಾರಾಮನಾಗಿ ತೆಗೆದುಕೊಂಡ ನಿರ್ಧಾರಗಳು ಅಲ್ಲ!

ರಾಜನ ನಡೆಗಳು ಸಂಶಯಾಸ್ಪದ ಆಗಿರಬಾರದು!

ರಾಜಾರಾಮನಾಗಿ ತನ್ನ ಪ್ರತಿಯೊಬ್ಬ ಪ್ರಜೆಯ ಮುಂದೆ ಸಂಶಯಾತೀತವಾಗಿ ಇರಬೇಕು ಮತ್ತು ಕಾಣಿಸಿಕೊಳ್ಳಬೇಕು ಎನ್ನುವುದು ರಾಜನ ಆದ್ಯ ಕರ್ತವ್ಯ. ತಾನು ನೆಟ್ಟಗಿರುವುದು ಮಾತ್ರವಲ್ಲ, ತನ್ನ ನೆರಳು ಕೂಡ ನೆಟ್ಟಗಿರಬೇಕು ಎಂದು ಭಾವಿಸುವುದು ಒಬ್ಬ ರಾಜನ ಆದ್ಯತೆಯೇ ಆಗಿದೆ. ಒಬ್ಬ ಬಹು ಸಾಮಾನ್ಯ ಅಗಸನೂ ಅರಸನಿಗೆ ಒಬ್ಬ ಗೌರವಾನ್ವಿತ ಪ್ರಜೆಯೇ ಆಗಿದ್ದಾನೆ. ಆತನ ಮನದ ಸಂಶಯವನ್ನು ಕೂಡ ನಿವಾರಣೆ ಮಾಡುವುದು ಒಬ್ಬ ಅರಸನ ಕರ್ತವ್ಯ. ಹೀಗೆ ಯಾವ ಕೋನದಲ್ಲಿ ನೋಡಿದರೂ ರಾಮನ ವ್ಯಕ್ತಿತ್ವದಲ್ಲಿ ಒಂದು ಕಪ್ಪುಚುಕ್ಕೆ ಕೂಡ ಕಂಡು ಬರುವುದು ಸಾಧ್ಯ ಇಲ್ಲ. ಆದ್ದರಿಂದ ರಾಮ ಆಗುವುದು ಎಲ್ಲರಿಗೂ ಕಷ್ಟ!

ರಾವಣ ಆಗುವುದು ಕಷ್ಟವೇ!

ರಾಮ ಆಗುವುದು ಎಷ್ಟು ಕಷ್ಟವೋ ರಾವಣ ಆಗುವುದು ಅಷ್ಟೇ ಕಷ್ಟ! ಕವಿ ವಾಲ್ಮೀಕಿಯು ಕಥಾ ನಾಯಕ ರಾಮನ ಪಾತ್ರಕ್ಕೆ ಎಷ್ಟು ಶಕ್ತಿ ತುಂಬಿದ್ದಾನೋ ಖಳನಾದ ರಾವಣನ ಪಾತ್ರಕ್ಕೆ ಕೂಡ ಅಷ್ಟೇ ಶಕ್ತಿಯನ್ನು ತುಂಬಿದ್ದಾನೆ. ಆತನ ಪಾತ್ರವೂ ಅಮೋಘವೆ ಆಗಿದೆ!

ಸೀತಾ ಸ್ವಯಂವರದಲ್ಲಿ ತನಗಾದ ಅಪಮಾನದಿಂದ ಕುದ್ದು ಹೋಗಿದ್ದ ರಾವಣನ ಅಂತರ್ಯದಲ್ಲಿ ಸೀತೆಯನ್ನು ಒಮ್ಮೆ ಗೆಲ್ಲಬೇಕು ಎಂದು ಮಾತ್ರ ಇತ್ತು. ಅನುಭವಿಸುವುದು ಆಗಿರಲಿಲ್ಲ. ಅನುಭವಿಸುವ ಆಸೆ ಇದ್ದಿದ್ದರೆ ಅವನದ್ದೇ ಲಂಕೆಯಲ್ಲಿ ಏಕಾಂಗಿ ಆಗಿದ್ದ ಸೀತೆಯು ತನ್ನ ಮಾನವನ್ನು ಉಳಿಸಿಕೊಳ್ಳಲು ಸಾಧ್ಯವೇ ಇರಲಿಲ್ಲ!

ಹೀಗೊಂದು ಕಥೆಯನ್ನು ನಾನು ಓದಿದ್ದು!

ಈ ಕಥೆಯು ಮೂಲ ರಾಮಾಯಣದಲ್ಲಿ ಇಲ್ಲ. ಆದರೆ ಅದ್ಭುತವಾಗಿದೆ. ಕಾಲ್ಪನಿಕ ಎಂದು ಬೇಕಾದರೂ ಕರೆಯಿರಿ. ಸೀತೆಯನ್ನು ಹುಡುಕುತ್ತಾ ಲಂಕೆಗೆ ಬಂದಿದ್ದ ಶ್ರೀರಾಮನಿಗೆ ರಾವಣನ ಬಗ್ಗೆ ಸಾಕಷ್ಟು ಒಳ್ಳೆಯ ಮಾತುಗಳು ಆಲ್ಲಿ ಕೇಳಿಬರುತ್ತವೆ. ಆತನು ಮಹಾ ಯೋಧ. ಆತನನ್ನು ಸೋಲಿಸುವುದು ಖಂಡಿತ ಸುಲಭದ ಕೆಲಸ ಅಲ್ಲ ಎಂದು ಗೊತ್ತಾಗುತ್ತದೆ. ಅದಕ್ಕೆ ‘ಶತ್ರು ಸಂಹಾರ’ದ ಯಾಗವನ್ನು ಮಾಡಬೇಕು ಎಂದು ಅಲ್ಲಿದ್ದ ಹಿರಿಯರು ಹೇಳುತ್ತಾರೆ.

ಲಂಕೆ ಹೇಳಿ ಕೇಳಿ ರಾಕ್ಷಸರ ನಾಡು! ಅಲ್ಲಿ ಆ ಯಾಗವನ್ನು ಮಾಡಬೇಕು ಅಂತಾದರೆ ಪುರೋಹಿತರು ಯಾರು ಸಿಗುತ್ತಾರೆ? ಆಗ ಹಿರಿಯರು ಇನ್ನೊಂದು ಉಪಾಯವನ್ನು ಹೇಳುತ್ತಾರೆ. ಲಂಕೆಯಲ್ಲಿ ಒಬ್ಬನೇ ಬ್ರಾಹ್ಮಣ ಇರುವುದು ಅದು ರಾವಣ! ಆತನಿಗೆ ಎಲ್ಲಾ ವೇದ ವಿದ್ಯೆಗಳು ಗೊತ್ತಿವೆ. ಆತ ಪುರೋಹಿತನಾಗಿ ಬರಲು ಒಪ್ಪಿದರೆ ಆದೀತು ಎಂಬ ಅಭಿಪ್ರಾಯ ಬಂತು.

ತನ್ನದೇ ವಧೆಯನ್ನು ಮಾಡುವ ‘ಶತ್ರುಸಂಹಾರ ಯಾಗ’ಕ್ಕೆ ಪುರೋಹಿತನಾಗಿ ರಾವಣನು ಬರಬಹುದೇ? ಈ ಪ್ರಶ್ನೆಯು ಎದ್ದಾಗ ನೋಡೋಣ, ಒಮ್ಮೆ ಪ್ರಯತ್ನ ಮಾಡೋಣ ಎಂಬ ಮಾತು ಬಂತು. ಆಗ ರಾವಣನಿಗೆ ಶ್ರೀರಾಮನ ಕಡೆಯಿಂದ ಗೌರವಪೂರ್ವಕ ಆಮಂತ್ರಣವು ಹೋಯಿತು. ರಾವಣ ಬರಲು ಸಾಧ್ಯ ಇಲ್ಲವೇ ಇಲ್ಲ ಎಂದು ಎಲ್ಲರೂ ನಂಬಿದ್ದರು.

ಇದನ್ನೂ ಓದಿ: ರಾಜಮಾರ್ಗ ಅಂಕಣ: RCB- ʼಹೊಸ ಅಧ್ಯಾಯʼ ಆರಂಭ ಆಗೋದು ಯಾವಾಗ?

ಆದರೆ ಶ್ರೀರಾಮನ ಆಮಂತ್ರಣಕ್ಕೆ ತಲೆ ಬಾಗಿ ರಾವಣನು ಬಂದೇ ಬಿಟ್ಟ! ಪುರೋಹಿತನಾಗಿ ಕೂತು ‘ಶತ್ರು ಸಂಹಾರ’ ಯಾಗವನ್ನು ಪೂರ್ತಿ ಮಾಡಿದ. ಪೂರ್ಣಾಹುತಿ ಆದ ನಂತರ ಶ್ರೀರಾಮನು ಪುರೋಹಿತ ರಾವಣನ ಪಾದ ಮುಟ್ಟಿ ನಮಸ್ಕಾರ ಮಾಡಿದ!

ಆಗ ರಾವಣ ರಾಮನಿಗೆ ಕೈ ಮುಗಿದು ಹೇಳಿದ ಮಾತು ಕೇಳಿ.

“ಶ್ರೀರಾಮ, ಸೀತೆಯನ್ನು ಅಪಹರಣ ಮಾಡಿಕೊಂಡು ಬಂದ ನಂತರ ಪಾಪ ಪ್ರಜ್ಞೆಯಿಂದ ಸರಿಯಾಗಿ ನಿದ್ದೆಯು ಬರುತ್ತಿಲ್ಲ. ನಿದ್ದೆ, ವಿಶ್ರಾಂತಿ ಇಲ್ಲದೆ ದಣಿದು ಬಿಟ್ಟಿದ್ದೇನೆ. ನಿನ್ನ ಕಾಲ ಮೇಲೆ ಒಂದು ಗಳಿಗೆ ಮಲಗಬೇಕು ಅನ್ನಿಸ್ತಾ ಇದೆ! ನಿನ್ನ ಅನುಮತಿಯನ್ನು ಕೊಡುವೆಯಾ?’

ತನ್ನ ಗೆಲುವಿಗೆ ಬೇಕಾಗಿ ದೊಡ್ಡ ಯಾಗವನ್ನೇ ಮಾಡಿಕೊಟ್ಟ ರಾವಣನ ವಿನಂತಿಯನ್ನು ಶ್ರೀರಾಮನು ನಿರಾಕರಿಸಲು ಸಾಧ್ಯವೇ ಇರಲಿಲ್ಲ. ಶ್ರೀರಾಮ ಅಸ್ತು ಅಂದ. ರಾವಣನು ಪುಟ್ಟ ಮಗುವಿನ ಹಾಗೆ ರಾಮನ ಕಾಲಿನ ಮೇಲೆ ಸುದೀರ್ಘ ಕಾಲ ಮೈಮರೆತು ಮಲಗಿದ. ಎಲ್ಲವನ್ನೂ ಮರೆತು ಬಿಟ್ಟನು! ತನ್ನ ಪಾಪದ ಭೀತಿಯನ್ನು ರಾಮನ ಪಾದಮೂಲದಲ್ಲಿ ಇಟ್ಟು ಎದೆಯ ಭಾರವನ್ನು ಇಳಿಸಿ ಹೊರಟು ಹೋದನು ರಾವಣ!

ಈಗ ಹೇಳಿ ರಾವಣ ಆಗುವುದು ಅಷ್ಟು ಸುಲಭವಾ?

ಇದನ್ನೂ ಓದಿ: Ram Navami : ಇಂದು ದೇಶಾದ್ಯಂತ ರಾಮ ನವಮಿ ಸಂಭ್ರಮ; ಏನು ಈ ದಿನದ ಮಹತ್ವ?

Continue Reading

ಅಂಕಣ

ಧವಳ ಧಾರಿಣಿ ಅಂಕಣ: ರಾಮಾಯಣದ ಕವಿಗೆ ಕಾಡಿದ ಮೂರು ಚಿಂತೆಗಳು

ಧವಳ ಧಾರಿಣಿ ಅಂಕಣ: ರಾಮಾಯಣವನ್ನು ರಚಿಸಿದ ಮುನಿಗೆ ತನ್ನ ಕಾವ್ಯದ ಮೇಲೆ ಮೋಹವುಂಟಾಯಿತು. ಮತ್ತೆ ಮತ್ತೆ ಕಾವ್ಯಾನುಸಂಧಾನವನ್ನು ಮಾಡತೊಡಗಿದ. ಕವಿಗೆ ಪ್ರತಿಯೊಂದು ಕೃತಿಯೂ ಮಕ್ಕಳಂತೆ. ಕೃತಿ ಆತನನ್ನು ಮೋಹಪರವಶತೆಗೆ ಈಡುಮಾಡುತ್ತದೆ.

VISTARANEWS.COM


on

valmiki dhavala dharini column
Koo

ರಾಮಾಯಣದ ಪೂರ್ವರಂಗ ಮತ್ತು ಅಂತರಂಗ

dhavala dharini by Narayana yaji

ಧವಳ ಧಾರಿಣಿ ಅಂಕಣ: ಕೃತ್ವಾಪಿ ತನ್ಮಹಾಪ್ರಾಜ್ಞಸ್ಸಭವಿಷ್ಯಂ ಸಹೋತ್ತರಮ್
ಚಿನ್ತಯಾಮಾಸ ಕೋನ್ವೇತತ್ಪ್ರಯುಞ್ಜೀಯಾದಿತಿ ಪ್ರಭುಃ ৷৷ಬಾ.4.3৷৷

ಮಹಾ ಪ್ರಾಜ್ಞರು ಮತ್ತು ತ್ರಿಕಾಲವನ್ನು ಬಲ್ಲವರಾದ ವಾಲ್ಮೀಕಿ ಮಹರ್ಷಿಗಳು ಶ್ರೀರಾಮನ ಪಟ್ಟಾಭಿಷೇಕದ ನಂತರ ಭವಿಷ್ಯವನ್ನು ಹೇಳುವ ಉತ್ತರಕಾಂಡ ಸಹಿತವಾದ ರಾಮಾಯಣವನ್ನು ರಚಿಸಿದ ನಂತರ ನನ್ನಿಂದ ಇದರ (ರಾಮಾಯಣದ) ಉಪದೇಶವನ್ನು ಪಡೆದು ಸರಿಯಾಗಿ ಪ್ರಯೋಗಿಸಬಲ್ಲ ಸಮರ್ಥರು ಯಾರಿದ್ದಾರೆ ಎನ್ನುವ ಚಿಂತೆಗೊಳಗಾದರು (ಭಾವಾರ್ಥ).

ಕವಿಗೆ ಕಾವ್ಯವನ್ನು ರಚಿಸುವಾಗ ಹೇಗೆ ಮತ್ತು ಯಾಕೆ ಎನ್ನುವ ಚಿಂತೆ ಉಂಟಾಗುವುದು ಸಹಜದ ಕ್ರಿಯೆ. ಮನಸ್ಸಿನಲ್ಲಿ ಯಾವುದೋ ಅಮೂರ್ತವಾದ ಭಾವವನ್ನು ಇರಿಸಿಕೊಂಡು ಅದನ್ನು ಮೂರ್ತರೂಪಕ್ಕೆ ತರುವಾಗ ಕವಿ ಪ್ರಸವವೇದನೆಯನ್ನು ಅನುಭವಿಸುತ್ತಾನೆ. ಇಲ್ಲಿ ಕಾವ್ಯ ರೂಪುಗೊಳ್ಳುವಿಕೆಯೆನ್ನುವುದನ್ನು ಕೀಟವೊಂದು ಪತಂಗವಾಗಿ ಪರಿವರ್ತಿತವಾಗುವುದಕ್ಕೆ ಹೋಲಿಸಬಹುದು. ಕಾವ್ಯದ ವಸ್ತು ಮನಸ್ಸಿನಲ್ಲಿ ರೂಪುಗೊಳ್ಳುತ್ತಲೇ ಅದು ಹೊರ ಬರುವುದಕ್ಕೆ ಧ್ಯಾನಸ್ಥ ಸ್ಥಿತಿ ಬೇಕಾಗುತ್ತದೆ. ಮನಸ್ಸಿನಲ್ಲಿ ಮಥನ ನಡೆಯುತ್ತಾ ನಂತರದಲ್ಲಿ ಅದು ತನ್ನ ಸುತ್ತಲೂ ಕಟ್ಟಿದ ಗೂಡನ್ನು ತಾನೇ ಒಡೆದುಕೊಂಡು ಮನೋಹರವಾದ ಪಾತರಗಿತ್ತಿಯಾಗಿ ಹಾರತೊಡಗುತ್ತದೆ. ಮೊದಲು ಕವಿ ರಸಭಾವದಲ್ಲಿ ಲೀನವಾಗುತ್ತಾನೆ. ತುರೀಯಾವಸ್ಥೆಗೆ ತಲುಪುವಾಗ ಭಾವದ ಆವರಣದೊಳಗೆ ಸಿಕ್ಕಿಬೀಳುತ್ತಾನೆ. ಹುತ್ತಗಟ್ಟುವ ಕ್ರಿಯೆ ಎಂದರೆ ಇದೆ. ರತ್ನಾಕರನೆನ್ನುವ ಬೇಡ ಹೆಂಡತಿ ಮಕ್ಕಳನ್ನು ಸುಖವಾಗಿರಿಸಲು ಹಿಂಸಾವೃತ್ತಿಯನ್ನೇ ಮೈಗೂಡಿಸಿಕೊಂಡು ಬದುಕಿದವ. ಲೌಕಿಕದ ಸುಖವನ್ನು ಹಂಚಿಕೊಳ್ಳಲು ಬಯಸುವ ಅವರ ಕುಟುಂಬದವರು ಅದರಿಂದ ಉಂಟಾಗಬಹುದಾದಂತಹ ಪಾಪಕ್ಕೆ ಹೊಣೆಗಾರರಾಗಲು ಸಿದ್ಧರಿಲ್ಲದಾಗ ಆಘಾತಗೊಂಡ.

ಬದುಕೆನ್ನುವುದು ಆದರ್ಶವನ್ನು ಹುಡುಕುವುದಕ್ಕಾಗಿಯಲ್ಲ; ಆದರ್ಶವೇ ಬದುಕಾಗಬೇಕೆಂದು ಆಗ ಅನಿಸಿತು. ಅಂಗುಲಿಮಾಲ ಬುದ್ಧನಿಂದ ಪ್ರಭಾವಿತನಾಗಿರುವುದು ಇಂತಹುದೇ ಸಂದರ್ಭದಲ್ಲಿ. “ನಾನೃಷಿಃ ಕುರುತೇ ಕಾವ್ಯಂ” ಕವಿ ಜ್ಞಾನಿಯಷ್ಟೇ ಅಲ್ಲ, ಋಷಿಯೂ ಆಗಿರಬೇಕು. ಈ ಬದಲಾವಣೆಯ ಪರ್ವದಲ್ಲಿ, ತನಗಾಗಿ ಅಲ್ಲ ಲೋಕಕ್ಕಾಗಿ ಬದುಕಿದವ ಜಗತ್ತಿನಲ್ಲಿ ಇರಬಹುದೇ ಎನ್ನುವ ಸಂಶಯದ ಹುತ್ತ ಕಾಡಿದಾಗ ಹುಡುಕಾಟ ಪ್ರಾರಂಭವಾಯಿತು. ಆಗ ದರ್ಶನವಾಗಿರುವುದು ವೇದೋಪನಿಷತ್ತುಗಳಲ್ಲಿ ಅವಿತಿರುವ ಅಮೂರ್ತ ಜ್ಞಾನಭಂಡಾರ. ದರ್ಶನ ಆದರ್ಶವಾಗಬೇಕಾದರೆ ಅದಕ್ಕೊಂದು ಮೂರ್ತರೂಪ ಬೇಕು. ಅದೆಲ್ಲಿ ಎಂದು ಮತ್ತೆ ಮತ್ತೆ ಹಂಬಲಿಸುತ್ತಾ ಎಚ್ಚರವಾಗಿಯೂ ಎಚ್ಚರಗೊಳ್ಳದ ಸ್ಥಿತಿಯಲ್ಲಿ ಇದ್ದ. ಅಕ್ಷರವೆನ್ನುವುದು ಅವಿನಾಶಿ. ಅದು ಒಂದೂ ಅಲ್ಲದ ಬಹುತ್ವವೂ ಅಲ್ಲದ ವ್ಯಾಪಕತ್ವ. ಅದಕ್ಕೆ ಮತ್ತೊಂದು ಅಕ್ಷರ ಸೇರಿದಾಗ ಅದಕ್ಕೊಂದು ಮೂರ್ತರೂಪ ಬರುತ್ತದೆ. ಅದುವೇ ರಾಮ ಎನ್ನುವುದನ್ನು ಸಪ್ತರ್ಷಿಗಳೇ ಹೇಳಿದಾಗ ಮನಸ್ಸಿನೊಳಗೆ ಪಡಿಮೂಡಿತು ಆ ಆಕೃತಿ.

ಕವಿಸೃಷ್ಟಿಯನ್ನು “ನಿಯತಿಕೃತ ನಿಯಮರಹಿತ”ವೆಂದು ಹೇಳುತ್ತಾರೆ. ಲೋಕಾತೀತವಾದ ವಿಷಯಗಳನ್ನು ಅನುಭವಿಸುವಿಕೆಗೆ ದರ್ಶನವೆಂದು ಕರೆಯುತ್ತಾರೆ. ಅದು ಅಲೌಕಿಕ ಆನಂದವನ್ನು ನೀಡುತ್ತದೆ. ರತ್ನಾಕರ, ಪ್ರಾಚೇತಸ, ಋಕ್ಷ ಹೀಗೆ ಹಲವು ಹೆಸರುಳ್ಳ, ಆದರೆ ಹಿಂಸಾರತಿಯಲ್ಲಿ ಮನವಿಟ್ಟವನಿಗೆ ಸ್ವಾರ್ಥವನ್ನು ಬಿಟ್ಟು ಕೇವಲ ಕರ್ತವ್ಯವನ್ನೇ ತನ್ನ ಆಹ್ನಿಕವೆಂದುಕೊಂಡ ವ್ಯಕ್ತಿ ಇರಲು ಸಾಧ್ಯವೇ ಎನ್ನುವ ಸಂಶಯ ಬರುತ್ತಿತ್ತು. ಅನುಭವ ಪಕ್ವವಾಗಬೇಕಾದರೆ ಅದಕ್ಕೆ ನಿದರ್ಶನ ಬೇಕು. ನಾಟ್ಯದ ಭಾಷೆಯಲ್ಲಿ ಇದನ್ನು ಅಮೂರ್ತದಿಂದ ಮೂರ್ತಕ್ಕೆ ಮತ್ತು ಮೂರ್ತದಿಂದ ಅಮೂರ್ತಕ್ಕೆ ಎನ್ನುವ ಅವಸ್ಥೆಗಳಿಗೆ ತಲುಪುವ ಕ್ರಿಯೆ ಎನ್ನುತ್ತಾರೆ. ಸರಳವಾದ ರಂಗದ ಮೇಲೆ ತಾನು ಅನುಭವಿಸಿದ ವಿಷಯಗಳನ್ನು ನಟ ಕಣ್ಣಿಗೆ ಕಟ್ಟುವಂತೆ ಅಭಿನಯಿಸುತ್ತಾನೆ. ರಥ, ದೇವೇಂದ್ರನ ಸಭೆ, ಅರಣ್ಯ ಇವೆಲ್ಲವುಗಳ ಅಭಿನಯ ನಟನ ಸಾಮರ್ಥ್ಯದ ಮೇಲೆ ಪ್ರೇಕ್ಷಕನಿಗೆ ದರ್ಶನವಾಗಿ ಆತ ಪ್ರತ್ಯಕ್ಷವಾಗಿ ಅದನ್ನು ಅನುಭವಿಸಿ ತನ್ನನ್ನು ಸಂಪೂರ್ಣವಾಗಿ ಮರೆಯುತ್ತಾನೆ. ರಸದಲ್ಲಿ ಲೀನವಾಗುತ್ತಾನೆ. ಅಲ್ಲಿಗೆ ಪ್ರೇಕ್ಷಕನಿಗೆ ಮೂರ್ತಸ್ವರೂಪದಲ್ಲಿ ಕಾಣಿಸಿಕೊಂಡು ಆತನನ್ನು ತನ್ನೊಟ್ಟಿಗೆ ಅಮೂರ್ತಲೋಕಕ್ಕೆ ಒಯ್ಯುತ್ತದೆ. (ಯಕ್ಷಗಾನ ಇದಕ್ಕೆ ಸ್ಪಷ್ಟ ಉದಾಹರಣೆ). ಈ ಅನುಭವದ ಸಾಕ್ಷಾತ್ಕಾರಕ್ಕಾಗಿ ಋಷಿ ವಾಲ್ಮೀಕಿ ಹಂಬಲಿಸುತ್ತಿದ್ದ.

ರಾಮಾಯಣದ ಸಂದರ್ಭದಲ್ಲಿ ವಾಲ್ಮೀಕಿ ಮಹರ್ಷಿಗೆ ಮೂರುಸಲ ಚಿಂತೆಯುಂಟಾಗಿತ್ತು. ಬದುಕಬೇಕಾದರೆ ಹಿಂಸೆಯೇ ಮಾರ್ಗವೆಂದು ಅದೇ ಹಾದಿ ಹಿಡಿದು ಇದೀಗ ಆದರ್ಶದ ಬೆನ್ನು ಹತ್ತಿದವನಿಗೆ, ಎಲ್ಲಾ ಕಡೆಯೂ ಇದ್ದು ಎಲ್ಲದರಿಂದಲೂ ಅಂತರವನ್ನು ಕಾಯ್ದುಕೊಂಡಂತಹ ವ್ಯಕ್ತಿ ಈ ಲೋಕದಲ್ಲಿ ಇರಲು ಸಾಧ್ಯವೇ ಎನ್ನುವ ಸಂಶಯ ಬಿಟ್ಟೂ ಬಿಡದೇ ಕಾಡುತ್ತಿತ್ತು. ಒಂದು ವೇಳೆ ಇಲ್ಲದೇ ಹೋದರೆ…??? ಎನ್ನುವ ಚಿಂತೆಗೂ ಇದೇ ಕಾರಣವಾಗಿತ್ತು. ಮುನಿಪುಂಗವ ಆ ಕುರಿತೇ ತಪಸ್ಸು ಮಾಡುತ್ತಿದ್ದ; ಈ ವಿಷಯದ ಕುರಿತು ಸ್ಪಷ್ಟ ನಿದರ್ಶನವನ್ನು ಬಯಸುತ್ತಿದ್ದ. ಸಪ್ತರ್ಷಿಗಳೇನೋ ಮಹಾಮಹಿಮನ ವಿಷಯಗಳ ಕುರಿತು ರಾಮ ಎನ್ನುವ ಹೆಸರನ್ನು ಹೇಳಿದ್ದಾರೆ. ಲೋಕದಲ್ಲಿ ಸಂಭಾವಿತನಾಗಿ ಬದುಕುವದೆನ್ನುವದು ಒಂದು ಆದರ್ಶ ಸ್ಥಿತಿ (Utopian State). ಆದರ್ಶವೆನ್ನುವುದು ವಾಸ್ತವವೂ ಆಗಬಹುದೇ ಎನ್ನುವ ಚಿಂತೆ ನಿರಂತರವಾಗಿ ಕಾಡುತ್ತಿರುವಾಗಲೇ, ಇದಕ್ಕೆ ಉತ್ತರಿಸಬಲ್ಲವರು ಅಧ್ಯಯನ ಅಧ್ಯಾಪನಗಳಲ್ಲಿ ನಿರತರಾದ ತಪಸ್ವಿಗಳಾಗಿರಬೇಕು; ಏಕಾಗ್ರತೆಯನ್ನು ವಾಲ್ಮೀಕಿಗಿಂತಲೂ ಚನ್ನಾಗಿ ಸಾಧಿಸಿದವರಾಗಿರಬೇಕು. ಮಾತು ಬಲ್ಲವರಲ್ಲಿ ಶ್ರೇಷ್ಠರಾಗಿರಬೇಕು. ಅಂಥವರು ಯಾರಿದ್ದಾರೆ ಎನ್ನುವ ಪ್ರಶ್ನೆ ನಿರಂತರವಾಗಿ ವಾಲ್ಮೀಕಿಯನ್ನು ಕಾಡುತ್ತಿತ್ತು.

ಹೀಗಿರುತ್ತಿರುವಾಗ ಅವರಲ್ಲಿಗೆ ನಾರದ ಬರುತ್ತಾನೆ. ಮಹರ್ಷಿಯ ಪ್ರಶ್ನೆಗೆ ಉತ್ತರಿಸಲು ಇವರಿಗಿಂತಲೂ ಬೇರೆ ಯಾರು ಸಮರ್ಥರಿಲ್ಲ ಎಂದುಕೊಳ್ಳುತ್ತಾನೆ. (ತಪಸ್ಸ್ವಾಧ್ಯಾಯನಿರತಂ ತಪಸ್ವೀ ವಾಗ್ವಿದಾಂ ವರಮ್). ನೇರವಾಗಿ ಅವರಲ್ಲಿಯೇ ತನ್ನನ್ನು ಕಾಡುತ್ತಿರುವ ಚಿಂತೆಯನ್ನು ಹೇಳುತ್ತಾ “ಲೋಕದಲ್ಲಿ ಯಾವ ದೋಷವೂ ಇಲ್ಲದ ವ್ಯಕ್ತಿ ಎಂದರೆ ಆತನಲ್ಲಿ ಈ ಕೆಳಗಿನ ಹದಿನಾರು ಗುಣಗಳಿರಬೇಕು. (ಅವು ಕಲ್ಯಾಣವಂತ, ವೀರ್ಯವಂತ, ದರ್ಮಜ್ಞ, ಕೃತಜ್ಞ, ಸತ್ಯಭಾಷಿ, ದೃಢವ್ರತನಿಷ್ಠ, ಕುಲಾಚಾರಗಳನ್ನು ತಪ್ಪದೇ ನಡೆಸುಕೊಂಡು ಬರುವಾತ, ಭೂತದಯೆ, ಚತುರ್ದಶವಿದ್ಯೆಗಳಲ್ಲಿಯೂ ಪಾರಂಗತ, ಸರ್ವಕಾರ್ಯ ದುರಂಧರ, ಮೋಹಕರೂಪಿನವ, ಧೈರ್ಯವಂತ, ಕೋಪವನ್ನು ಗೆದ್ದವ, ಎಣೆಯಿಲ್ಲದ ಕಾಂತಿಯುಳ್ಳವ, ಅನಸೂಯ, ದೇವತೆಗಳಿಗೂ ಅಂಜದ ಪರಾಕ್ರಮಿ) ಇಂಥಹ ಮಾನವನು “ಕೋನ್ವಸ್ಮಿನ್ ಸಾಂಪ್ರತಂ ಲೋಕೇ- ಈ ಕಾಲದಲ್ಲಿ” ಇದ್ದಾನೆಯೇ; ಇದ್ದರೆ ಆತನ ಕುರಿತು ವಿವರಿಸಿ ಎಂದು ಕೇಳಿಕೊಳ್ಳುತ್ತಾರೆ. ಆಗ ನಾರದರು ಇಕ್ಷಾಕುವಂಶದಲ್ಲಿ ಜನಿಸಿದ ರಾಮ ರಾಮ ಎಂದು ಜನಗಳು ಕರೆಯುವ ನರಪುಂಗವನಿದ್ದಾನೆ ಎಂದು ಆತನ ಕುರಿತು ವಿವರಿಸುತ್ತಾರೆ.

ರಾಮಾಯಣದ ಕಥೆಯನ್ನು ಕೇಳಿದ ವಾಲ್ಮೀಕಿಗೆ ಮನಸ್ಸು ಪ್ರಪುಲ್ಲವಾಗಿದೆ. ಹಗುರವಾಗಿದೆ. ಪ್ರಪಂಚದಲ್ಲಿ ಎಲ್ಲವೂ ಸುಂದರವಾಗಿ ಕಾಣಿಸುತ್ತಿದೆ. ಹೀಗೆ ತಮಸಾ ನದಿಯಲ್ಲಿ ಸ್ನಾನ ಮಾಡಿ ಬರುವಾಗ ಬೇಡನೊಬ್ಬ ಮಿಥುನ ಸ್ಥಿತಿಯಲ್ಲಿದ್ದ ಜೋಡಿ ಕ್ರೌಂಚಪಕ್ಷಿಗೆ ಬಾಣ ಬಿಟ್ಟು ಗಂಡು ಹಕ್ಕಿಯನ್ನು ಕೊಂದುಬಿಟ್ಟ. ಹೆಣ್ಣು ಹಕ್ಕಿ ಅದನ್ನು ನೋಡಿ ಗೋಳಾಡತೊಡಗಿತು. ಅದರ ಸ್ಥಿತಿಯನ್ನು ನೋಡಿದ ಮುನಿಯ ಮನಸ್ಸಿನಲ್ಲಿ ಕರುಣಾರಸವು ಉಕ್ಕೇರಿತು. ಬೇಡನೆಡೆಗೆ ನೋಡಿ ಹೇಳಿದ ಮಾತು-

sage and poet valmiki

ಮಾ ನಿಷಾದ ಪ್ರತಿಷ್ಠಾಂ ತ್ವಮಗಮಶ್ಶಾಶ್ವತೀಸ್ಸಮಾಃ
ಯತ್ಕ್ರೌಞ್ಚಮಿಥುನಾದೇಕಮವಧೀ: ಕಾಮಮೋಹಿತಮ್ ৷৷ಬಾ. 15৷৷

“ಎಲೈ ನಿಷಾದನೇ! ಮಿಥುನದಲ್ಲಿ ನಿರತವಾಗಿದ್ದ ಕ್ರೌಂಚ ಪಕ್ಷಿಗಳಲ್ಲಿ ಒಂದನ್ನು ಹೊಡೆದು ಕೊಂದಿರುವುದರಿಂದ ನೀನು ಬಹಳ ಕಾಲದವರೆಗೆ ಸ್ಥಿರವಾಗಿ ಬದುಕಲಾರೆ”

ಒಂದು ಕಾಲದಲ್ಲಿ ಆ ಬೇಡನಂತೆ ತಾನೂ ಹಿಂಸಾವೃತ್ತಿಯನ್ನು ಅನುಸರಿಸುತ್ತಿದ್ದ ವಾಲ್ಮೀಕಿ ಈಗ ಅದನ್ನು ತ್ಯಜಿಸಿದ್ದಾರೆ. ಬೇಡನಿಗೆ ಶಾಪವನ್ನು ಕೊಡುವಾಗಲೂ ಸಾಯಿ ಎಂದು ಹೇಳುವದಕ್ಕಿಂತ “ಬಹಳ ಕಾಲ ಸ್ಥಿರವಾಗಿ ಬದುಕಲಾರೆ” ಎನ್ನುವ ಮಾತನ್ನು ಆಡುತ್ತಾನೆ. “ಸಾಯಿ ಎನ್ನುವುದಕ್ಕಿಂತ ಬದುಕಲಾರೆ” ಎನ್ನುವ ಮಾತುಗಳು ಬಹು ಅರ್ಥಪೂರ್ಣ! ರಾಮಾಯಣವನ್ನು ಕೇಳಿದ ಪ್ರಭಾವದಿಂದ ಹಿಂಸೆಯ ಲವಲೇಶವೂ ಮನಸ್ಸಿನಲ್ಲಿ ಇಲ್ಲ. ಮರುಕ್ಷಣದಲ್ಲಿಯೇ ಬೇಡನ ವೃತ್ತಿಯೇ ಬೇಟೆಯಾಡುವುದು, ತನ್ನ ಶಾಪ ಅಗತ್ಯವಿತ್ತೇ ಎನ್ನುವ ಇನ್ನೊಂದು ಚಿಂತೆ ಅವರನ್ನು ಕಾಡಿತು. ಹೆಣ್ಣು ಕ್ರೌಂಚದ ಶೋಕ ವಾಲ್ಮೀಕಿಯ ಮನವನ್ನು ಕಲಕಿತ್ತು. ಅದಕ್ಕೆ ಪ್ರತಿಯಾಗಿ “ಬಹಳ ಕಾಲ ಬದುಕಲಾರೆ” ಎನ್ನುವುದು ಉತ್ತರವಾಗಲಾರದು. ತನ್ನ ಶಾಪ ನಿಜವಾದರೆ ಬೇಡನ ಹೆಂಡತಿಗೆ ದುಃಖವಾಗದೇ ಇದ್ದೀತೆ ಎನ್ನುವ ಮನೋಭಾವವೂ ಇದ್ದಿರಬಹುದಾಗಿದೆ. ಹಿಂಸೆಗೆ ಇನ್ನೊಂದು ಹಿಂಸೆ ಉತ್ತರವಾಗಲಾರದು. ಹಾಗಾಗಿ ಚಿಂತೆಗೆ ಪರಿಹಾರವೆಂದರೆ ಶೋಕ ಶ್ಲೋಕವಾಗುವುದು. ಶೋಕವೆಂದರೆ ದುಃಖ; ಶೋಕಕ್ಕೆ ಕಾರಣ ವಿಯೋಗ. ರಾಮಾಯಣವೂ ವಿಯೋಗದ ಕಥೆಯೇ. ಇಲ್ಲಿ ತಂದೆಗೆ ಮಕ್ಕಳ ವಿಯೋಗ, ಅಣ್ಣನಿಗೆ ತಮ್ಮನ ವಿಯೋಗ, ಗಂಡನಿಗೆ ಹೆಂಡತಿಯ ವಿಯೋಗ. ಕ್ರೌಂಚವೆಂದರೆ ಕುಟಿಲ ಸ್ವರೂಪರಾದ ರಾಕ್ಷಸರು ಎನ್ನುವ ಅರ್ಥವೂ ಇದೆ. ಸೀತೆಯನ್ನು ರಾಮನಿಂದ ಅಗಲಿಸಿದ ಕಾರಣಕ್ಕೆ ಮಂಡೋದರಿಗೂ ಇಲ್ಲಿ ರಾವಣನ ವಿಯೋಗವನ್ನು ಅನುಭವಿಸಬೇಕಾಯಿತು ಎನ್ನುವದೂ ಆಗುತ್ತದೆ. ಕಾಮದಿಂದ ಸುಗ್ರೀವನ ಹೆಂಡತಿಯನ್ನು ಅಪಹರಿಸಿದ ವಾಲಿಯನ್ನು ರಾಮ ಕೊಂದು ಸುಗ್ರೀವನಿಗೆ ಆತನ ಪತ್ನಿ ಪುನಃ ಸಿಗುವಂತೆ ಮಾಡಿದ್ದಾನೆ.

ಕರುಣರಸದ ಸ್ಥಾಯಿಭಾವವೇ ಶೋಕ. ಈ ಸ್ಥಾಯಿಭಾವವನ್ನು ಶ್ಲೋಕವಾಗಿಸುವುದು ಎಂದರೆ ಸ್ತೋತ್ರರೂಪವಾದ ಪದ್ಯವನ್ನಾಗಿಸುವುದು. ಸ್ತೋತ್ರವೆಂದರೆ ಸದ್ಗುಣಗಳನ್ನು (ದೇವರನ್ನು) ಹೊಗಳುವುದು. ನಿಷಾದ ಎಂದರೆ ಪೀಡಿಸುವವ ಎನ್ನುವ ಅರ್ಥವೂ ಆಗುತ್ತದೆ. ಅಲ್ಪೀಭೂತವಾದ ಮಿಥುನದಿಂದ ಎಂದರೆ ರಾಜ್ಯಭ್ರಂಶವನವಾಸಾದಿ ಕ್ಲೇಷಗಳಿಂದ ಕೃಶರಾದ ಸೀತಾರಾಮರೆನ್ನುವವರಲ್ಲಿ ಒಬ್ಬಳಾದ ಸೀತೆಯನ್ನು ಅವಧೀಃ- ಅಗಲಿಸಿದ ಕಾರಣದಿಂದಾಗಿ ಬ್ರಹ್ಮವರದಿಂದ ಲಭಿಸಿದ ರಾಜ್ಯವನ್ನು ರಾವಣ ಇನ್ನು ಬಹಳಕಾಲದ ವರೆಗೆ ಅನುಭವಿಸಲಾರೆ. ತ್ರಿಲೋಕಕಂಟಕನಾದ ರಾವಣನನ್ನು ಶಪಿಸಿರುವುದರಿಂದ ಸಕಲ ಲೋಕಕ್ಕೂ ಸನ್ಮಂಗಳವುಂಟಾಯಿತು ಎನ್ನುವುದಾಗಿಯೂ ಅರ್ಥವನ್ನು ಮಾಡಬಹುದು. ಶೋಕರೂಪವಾಗಿ ಹೊರಬಂದ ಮಾತು ಅನುಷ್ಟುಪ್ ಛಂದಸ್ಸಿನಲ್ಲಿತ್ತು. ಅದೇ ಶ್ಲೋಕವಾಗಿ ಮಂಗಳಕರ ನಾಂದೀ ಪದ್ಯವಾಯಿತು ಎನ್ನುವ ಸಮಾಧಾನವೂ ಇದೀಗ ಮುನಿಯಲ್ಲಿ ಮೂಡಿತು. ತನ್ನ ಶಿಷ್ಯ ಭಾರದ್ವಾಜನಿಗೆ “ತನ್ನ ಮಾತು ಕೇವಲ ಪದಜಾಲವಾಗದಿರಲಿ. ಪ್ರಾಸಬದ್ಧವಾಗಿ ಬಂದಿರುವ ಇದು ತಂತಿಯ ವಾದ್ಯದೊಡನೆ ಹಾಡುವ ಲಯಬದ್ಧಶ್ಲೋಕವಾಗಿ ಪರಿಣಮಿಸಲಿ” ಎನ್ನುತ್ತಾನೆ. ಅದನ್ನು ಭಾರದ್ವಾಜ ಕಂಠಪಾಠ ಮಾಡುತ್ತಾನೆ.

king dasharatha

ಇತ್ತ ಆಶ್ರಮಕ್ಕೆ ಬಂದರೆ, ಕವಿಯನ್ನು ನೋಡಲು ಬ್ರಹ್ಮನೇ ಬಂದಿರುತ್ತಾನೆ. ರಾಮಾಯಣದ ಕಾವ್ಯವನ್ನು ರಚಿಸು ಎಂದು ವರ ನೀಡುತ್ತಾನೆ. ವರದ ಫಲದಿಂದ ರಾಮಾಯಣದಲ್ಲಿ ನಡೆದ ವೃತ್ತಾಂತಗಳು, ಎಲ್ಲಾ ಪಾತ್ರಗಳ ರಹಸ್ಯಗಳು ವಾಲ್ಮೀಕಿಗೆ ಅಂಗೈಯಲ್ಲಿನ ನೆಲ್ಲಿಕಾಯಿಯಂತೆ ತೋರುತ್ತದೆ. ಎಲ್ಲಿ ಹೃದಯದ ಕಣ್ಣು ತೆರೆಯುತ್ತದೆಯೋ ಅಲ್ಲಿ ಕಾವ್ಯದ ರಸಸೃಷ್ಟಿಯಾಗುತ್ತದೆ. ಲೋಕದಲ್ಲಿ ಸಾಮಾನ್ಯವಾಗಿ ಕಂಡ ಸಂಗತಿಗಳು ಕವಿಗೆ ವಿಶೇಷ ರೂಪವಾಗಿ ಗೋಚರವಾಗುವುದು. ತೀ. ನಂ. ಶ್ರೀಕಂಠಯ್ಯನವರು ಕಾವ್ಯ ಹುಟ್ಟುವ ಹೊತ್ತನ್ನು “ತನ್ನೊಳಗೆ ತುಂಬಿರುವ ರಸಕ್ಕೆ ಅನುಗುಣವಾದ ಶಬ್ದಾರ್ಥಗಳನ್ನು ಕುರಿತು ಚಿಂತನೆಯಲ್ಲಿ ಕವಿಯ ಚೇತಸ್ಸು ನಿಶ್ಚಲವಾಗಿರುವಾಗ, ವಸ್ತುವಿನ ನಿಜಸ್ವರೂಪವನ್ನು ಮುಟ್ಟಿದ ಪ್ರಜ್ಞೆ ಅವನಲ್ಲಿ ಥಟ್ಟನೆ ಹೊಮ್ಮುತ್ತದೆ. ಇದೇ ಕವಿಯ ಪ್ರತಿಭೆ, ಪರಮೇಶ್ವರನ ಮೂರನೆಯ ಕಣ್ಣೆಂದೇ ಕೀರ್ತಿಸುತ್ತಾರೆ. ಇದರ ಮೂಲಕ ತ್ರಿಕಾಲದಲ್ಲಿ ನಡೆಯುವ ಸಂಗತಿಗಳನ್ನು ಸಾಕ್ಷಾತ್ತಾಗಿ ಕಾಣಬಲ್ಲನು(ಭಾ. ಕಾ. ಮೀ-10)” ಎಂದು ವಿವರಿಸುತ್ತಾರೆ. ವಾಲ್ಮೀಕಿ ಕುಳಿತಲ್ಲಿಯೇ ರಾಮಾಯಣದ ಎಲ್ಲಾ ವಿವರಗಳನ್ನು ಕಾಣುವದು ಈ ವಿಶೇಷದೃಷ್ಟಿಯಿಂದಲೇ. ಅದನ್ನೇ ಬ್ರಹ್ಮ ಆತನಿಗೆ ಕೊಟ್ಟ ವರ ಎಂದು ಅಲಂಕಾರಿಕವಾಗಿ ಹೇಳಲಾಗಿದೆ. ಸಕಲ ಚರಾಚರಗಳ ಸೃಷ್ಟಿಗೆ ಕಾರಣ ಬ್ರಹ್ಮ; ಆತನೇ ತನಗಿರುವ ಅಪೂರ್ವ ಕಾವ್ಯಸೃಷ್ಟಿಯನ್ನು ವಾಲ್ಮೀಕಿಗೆ ಅನುಗ್ರಹಿಸಿದ್ದಾನೆ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಶ್ರೀರಾಮ ಪಟ್ಟಾಭಿಷೇಕದ ಕನಸಿನ ವಿಹಾರ

ರಾಮಾಯಣವನ್ನು ರಚಿಸಿದ ಮುನಿಗೆ ತನ್ನ ಕಾವ್ಯದ ಮೇಲೆ ಮೋಹವುಂಟಾಯಿತು. ಮತ್ತೆ ಮತ್ತೆ ಕಾವ್ಯಾನುಸಂಧಾನವನ್ನು ಮಾಡತೊಡಗಿದ. ಕವಿಗೆ ಪ್ರತಿಯೊಂದು ಕೃತಿಯೂ ಮಕ್ಕಳಂತೆ. ಕೃತಿ ಆತನನ್ನು ಮೋಹಪರವಶತೆಗೆ ಈಡುಮಾಡುತ್ತದೆ. ವಾಲ್ಮೀಕಿಗೆ ತನ್ನ ಕಾವ್ಯ ಅದ್ವಿತೀಯವಾದುದೆನ್ನುವ ವಿಶ್ವಾಸ ಬಂದಿದೆ. ಈ ಮೊದಲು ಹದಿನಾರು ಗುಣಗಳುಳ್ಳ ಮನುಷ್ಯ ಇದ್ದಿರಬಹುದೇ ಎನ್ನುವ ಚಿಂತೆ ಅವರನ್ನು ಕಾಡಿತ್ತು. ನಂತರ ಹೆಣ್ಣು ಕ್ರೌಂಚದ ವಿರಹದ ಅಳುವನ್ನು ನೋಡಿ “ಹೆಚ್ಚು ಕಾಲ ಬದುಕಲಾರೆ” ಎನ್ನುವ ಶಾಪವನ್ನು ಕೊಟ್ಟ ಕಾರಣ ಚಿಂತೆ ಕಾಡಿತ್ತು. “ಸೃಷ್ಟಿ ಎನ್ನುವ ಶಬ್ಧದಲ್ಲಿ ಸಾವು ಎನ್ನುವುದು ಇರುವುದಿಲ್ಲ. ಸಾವಿನಲ್ಲಿ ಸೃಷ್ಟಿ ಇರುವುದಿಲ್ಲ, ಇವೆರಡೂ ಯಾವತ್ತಿಗೂ ಒಟ್ಟಿಗೆ ಇರಲಾರದು” ಬ್ರಹ್ಮನಿಗೆ ಸೃಷ್ಟಿಸುವುದು ತಿಳಿದಿದೆಯೇ ಹೊರತೂ ನಾಶದ ಅರಿವಿಲ್ಲ. ವಾಲ್ಮೀಕಿಗೆ ಈ ಕಾರಣಕ್ಕಾಗಿ ಬದುಕಲಾರೆ ಎನ್ನುವ ಮಾತು ಕವಿಸೃಷ್ಟಿಗೆ ವಿರುದ್ಧವಾಗಿ ತೋರಿದೆ. ಹಾಗಾಗಿ ಎರಡನೇ ಸಾರಿ ಚಿಂತೆಗೊಳಗಾದ. ಅದಕ್ಕೆ ಬ್ರಹ್ಮನೇ ಬಂದು ಸಮಾಧಾನ ಹೇಳಿ ನಂತರದಲ್ಲಿ ಮಹಾಕಾವ್ಯವನ್ನು ರಚಿಸಿದ ಬಳಿಕ “ಚಿನ್ತಯಾಮಾಸ ಕೋನ್ವೇತತ್ಪ್ರಯುಞ್ಜೀಯಾದಿತಿ ಪ್ರಭುಃ” ಇಂತಹ ಕಾವ್ಯವನ್ನು ಉಪದೇಶ ಪಡೆಯಬಲ್ಲ ಸಮರ್ಥರು ಯಾರಿದ್ದಾರೆ ಎನ್ನುವ ಚಿಂತೆ ಮೂರನೇ ಬಾರಿಗೆ ಉದ್ಭವಿಸಿತು. ಹೀಗೆ ಚಿಂತಿಸುತ್ತಾ ಕಣ್ಮುಚ್ಚಿ ಕುಳಿತಿರುವ ಹೊತ್ತಿನಲ್ಲಿ ಅವರ ಕಾಲನ್ನು ಯಾರೋ ಹಿಡಿದುಕೊಂಡಿದ್ದು ಗಮನಕ್ಕೆ ಬಂತು. ಯಾರೆಂದು ಕಣ್ಣುತೆರೆದು ನೋಡಿದರೆ ಬಾಲಕರಾದ ಲವ-ಕುಶರು.

ಇಲ್ಲಿ ಎರಡು ಸಂಗತಿಗಳನ್ನು ವಾಲ್ಮೀಕಿ ಹೇಳುವುದು ಬಲು ಮುಖ್ಯ. ಮೊದಲನೆಯದು ಅವರು ಮುನಿವೇಷಧಾರಿಗಳಾಗಿದ್ದರು, ಅವರು ಆಶ್ರಮವಾಸಿಗಳಾಗಿರಲಿಲ್ಲವೆಂದು ಮುನಿವೇಷಧಾರಿಗಳಾಗಿದ್ದರು ಎನ್ನುವುದರ ಮೂಲಕ ಸೂಚಿಸುತ್ತಾರೆ, ಎರಡನೆಯದು ಆ ಬಾಲಕರಿಗೆ ಹಾಡುವುದಕ್ಕೆ ಯೋಗ್ಯವಾದ ಶಾರಿರ ಸಂಪತ್ತು – “ಭ್ರಾತರೌ ಸ್ವರಸಮ್ಪನ್ನೌ ದದರ್ಶಾಶ್ರಮವಾಸಿನೌ” ಇತ್ತು ಎನ್ನುವುದು. ರಾಮಾಯಣವನ್ನು ವಾಲ್ಮೀಕಿ ರಚಿಸುವಾಗಲೇ ತನ್ನ ಕಾವ್ಯ ಹಾಡುವುದಕ್ಕೆ ಯೋಗ್ಯವಾಗಿ ಇರಬೇಕೆನ್ನುವುದನ್ನು ಬಯಸಿದ್ದರು. ರಾಮಾಯಣದಲ್ಲಿ ಅಧ್ಯಯನ ಮಾಧುರ್ಯವೂ ಇದೆ, ಗಾನ ಮಾಧುರ್ಯವೂ ಇದೆ. ನವರಸಭರಿತವಾಗಿದೆ ಎನ್ನುವುದು ಬಲು ಮುಖ್ಯ. ಕವಿಯ ಮನಸ್ಸನ್ನು ಅರಿತು ಹಾಡುವ ಯೋಗ್ಯರಾದ ಗಾಯಕರು ಸಿಕ್ಕಿದರೆಂದು ಮುನಿಗೆ ಸಂತೋಷವಾಯಿತು. ಶಿಷ್ಯರೂ ಅಷ್ಟೇ, ರಾಮಾಯಣವನ್ನು ಆಮೂಲಾಗ್ರವಾಗಿ ಕಲಿತು ಕವಿ ವಾಲ್ಮೀಕಿಯ ಮನಸ್ಸು ತೃಪ್ತಿಯಾಗುವಂತೆ ಮಹರ್ಷಿಗಳ ಸಭೆಯಲ್ಲಿ ಹಾಡಿ ತೋರಿಸಿದರು.

ಇಲ್ಲಿಗೆ ಮುನಿಯನ್ನು ಕಾಡಿದ ಮೂರನೆಯ ಚಿಂತೆ ಯೋಗ್ಯರಾದ ಗಾಯಕರು ಸಿಕ್ಕಿದರು ಎನ್ನುವ ಸಂತೋಷದಲ್ಲಿ ಪರಿವರ್ತಿತವಾಯಿತು.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ರಾಮಾಯಣದ ಮಹಾ ಮಥನದ ಕಡೆಗೋಲು ಮಂಥರೆ

Continue Reading

ಅಂಕಣ

ನನ್ನ ದೇಶ ನನ್ನ ದನಿ ಅಂಕಣ: ಜೈಶಂಕರ್‌ ಕೃತಿ ʻಭಾರತ ಪಥʼ ತೆರೆದಿಡುವ ವಿದೇಶಾಂಗ ಸಂಬಂಧಗಳ ರೋಚಕ ಆಯಾಮ

ನನ್ನ ದೇಶ ನನ್ನ ದನಿ ಅಂಕಣ: ಅಪಾರ ಅನುಭವದ ಜೈಶಂಕರ್ ತಮ್ಮ “THE INDIA WAY” ಕೃತಿಯಲ್ಲಿ ಅಂತಾರಾಷ್ಟ್ರೀಯ ಜಗತ್ತಿನ ಅನೇಕ ಆಯಾಮಗಳ ಬಗೆಗೆ ಅದ್ಭುತವಾದ ವ್ಯಾಖ್ಯಾನ ನೀಡುತ್ತಾರೆ. ಇದು ಈಗ ಕನ್ನಡದಲ್ಲೂ ಲಭ್ಯವಿದೆ.

VISTARANEWS.COM


on

s jaishankar book the india way
Koo

ಈ ಅಂಕಣವನ್ನು ಇಲ್ಲಿ ಆಲಿಸಿ:

ajjampura manjunath

ನನ್ನ ದೇಶ ನನ್ನ ದನಿ ಅಂಕಣ: ನಮ್ಮ ಪರಂಪರೆಯನ್ನು, ನಮ್ಮ ಶಾಸ್ತ್ರಗ್ರಂಥಗಳನ್ನು, ನಮ್ಮ ಆರ್ಷ ಚಿಂತನೆಯನ್ನು ನಾವು ಮರೆತೇಬಿಟ್ಟಿದ್ದೇವೆ. ಸಾಮುದಾಯಿಕವಾಗಿ ಸೂಕ್ತವಾಗಿ ಗೌರವಿಸುವುದೂ ಹಿನ್ನೆಲೆಗೆ ಸರಿದಿದೆ. ಯಾರಾದರೂ ನೆನಪು ಮಾಡಿದರೂ, ಉಲ್ಲೇಖಿಸಿದರೂ “ಬಿಡ್ರೀ, obsolete – old – outdated ವಿಚಾರಗಳನ್ನು ಒದರಬೇಡ್ರೀ” ಎಂದು ಝಾಡಿಸುತ್ತೇವೆ. ಹೌದು. ನಮ್ಮ “ಆಧುನಿಕ” ಶಿಕ್ಷಣ ವ್ಯವಸ್ಥೆಯು, ಭಾರತೀಯರಾದ ನಮ್ಮ ಮನೋಭೂಮಿಕೆಯನ್ನು ರೂಪಿಸಿರುವುದೇ ಹಾಗೆ. ಯಾರಾದರೂ ಅಂತಾರಾಷ್ಟ್ರೀಯ ರಾಜಕೀಯದ ಬಗೆಗೆ, ವಿಶ್ವ ಮಾರುಕಟ್ಟೆಯ ಬಗೆಗೆ, ಭಾರತೀಯ ಅರ್ಥ ವ್ಯವಸ್ಥೆಯ ಬಗೆಗೆ ಮಾತನಾಡುವಾಗ, ಅಪ್ಪಿತಪ್ಪಿ ಯಾರಾದರೂ “ಚತುರ್ವಿಧ ಪುರುಷಾರ್ಥ”ಗಳನ್ನು ಉಲ್ಲೇಖಿಸಿದರೆ, ಧರ್ಮ – ಅರ್ಥ – ಕಾಮ – ಮೋಕ್ಷಗಳಿಗೆ ನಮ್ಮ ಪೂರ್ವಿಕರು ಸಮಾನ ಮಹತ್ತ್ವ ನೀಡಿದ್ದರು, ಎಂದರೆ ಸೇರಿದವರು ಗಹಗಹಿಸಿ ನಗಬಹುದು. ಮೂರ್ನಾಲ್ಕು ದಶಕಗಳ ಹಿಂದೆ ವಿಜೃಂಭಿಸುತ್ತಿದ್ದ ಸಮಾಜವಾದಿ ಹಿನ್ನೆಲೆಯ ಕೆಲವು ಸಂಪಾದಕರೋ ಪತ್ರಕರ್ತರೋ ಈಗ ಇದ್ದಿದ್ದರೆ, ಉಲ್ಲೇಖಿಸಿದವರು “Get lost” “Get out” ಎಂದು ಅನ್ನಿಸಿಕೊಳ್ಳಬೇಕಾಗಿತ್ತೋ ಏನೋ!

ಕಾಲ ಬದಲಾಗಿದೆ, ಬಿಡಿ. 2014ರ ಅನಂತರ ತುಂಬ ತುಂಬ ಬದಲಾಗುತ್ತಲೂ ಇದೆ.

ಹಿಂದೊಮ್ಮೆ ವಾಜಪೇಯಿ ಅವರು ಹೇಳಿದ್ದರು, ನಾವು ಇತಿಹಾಸ ಬದಲಿಸಬಹುದು, ಆದರೆ, ಭೂಗೋಳವನ್ನು (Geography) ಬದಲಿಸಲಾರೆವು ಎಂದು. ಪಾಕಿಸ್ತಾನ, ಬಾಂಗ್ಲಾದೇಶ, ಚೀನಾ ದೇಶಗಳಂತಹ ಮಗ್ಗುಲ ಮುಳ್ಳುಗಳು ಆ ಉದ್ಗಾರಕ್ಕೆ ಕಾರಣವಾಗಿದ್ದವು. ಹಿಂದೂ ಸಮಾಜ ಎಚ್ಚೆತ್ತುಕೊಂಡರೆ, of course, ಜಡತ್ವವನ್ನು ಮೈಕೊಡವಿಕೊಂಡು ಎದ್ದರೆ ಅಸಾಧ್ಯವೂ ಸಾಧ್ಯವಾದೀತು.

ರಾಷ್ಟ್ರೀಯ ಅರ್ಥವ್ಯವಸ್ಥೆಯಿರಲಿ, ಅಂತಾರಾಷ್ಟ್ರೀಯ ಅರ್ಥವ್ಯವಸ್ಥೆಯಿರಲಿ, ಅರ್ಥ ಮಾಡಿಕೊಳ್ಳಲು ನಾವು ಸಾಮಾನು ಸರಂಜಾಮು ಸಾಗಿಸುವ ಹಡಗುಗಳನ್ನು, ಕಾರ್ಗೋ (cargo) ವಿಮಾನಗಳನ್ನು, ಗೂಡ್ಸ್ ಗಾಡಿಗಳನ್ನು, ದೊಡ್ಡ ದೊಡ್ಡ ಹೆದ್ದಾರಿಗಳನ್ನು ಒಂದಿಷ್ಟು ವಿಚಕ್ಷಣೆಯಿಂದ ನೋಡಬೇಕು. ತೈಲ ಸಾಗಣೆಯ ಹಡಗುಗಳನ್ನೂ, ಕಲ್ಲಿದ್ದಲು ಸಾಗಿಸುವ ರೈಲು ಗಾಡಿಗಳನ್ನೂ ಗಮನಿಸಬೇಕು. ಆಗ ಮನುಕುಲದ ಎಂಟು ಶತಕೋಟಿ ಮಾನವಜೀವಿಗಳ ಅಗತ್ಯಗಳನ್ನು ಪೂರೈಸುವ ವಿಶಾಲ ಅರ್ಥವ್ಯವಸ್ಥೆಯ ಸ್ಥೂಲ ನೋಟ ದೊರೆಯುತ್ತದೆ. ಈ ವ್ಯವಸ್ಥೆ ನಮ್ಮ ನರಮಂಡಲದಂತೆ. ಅರೆಕ್ಷಣವೂ ಸಹ ಈ ವ್ಯವಸ್ಥೆಯಿಲ್ಲದೆ ಮನುಷ್ಯ ಬದುಕಲಾರ. ಇತಿಹಾಸದ ಹಿನ್ನೋಟದಲ್ಲಿ ಸಾವಿರಾರು ವರ್ಷಗಳ ಹಿಂದೆ, ಜಾಗತಿಕ ಅರ್ಥವ್ಯವಸ್ಥೆಯಲ್ಲಿ ಭಾರತದ್ದೇ ಸಿಂಹಪಾಲು. ಅಂದಿನ ಸಿಲ್ಕ್ ರೂಟ್, ಸಾರ್ಥಗಳು, ಯೂರೋಪಿನಲ್ಲಿಯೂ ಹೆಸರು ಮಾಡಿದ್ದ ನಮ್ಮ ಸಿದ್ಧವಸ್ತುಗಳು, ಬಟ್ಟೆಗಳು ಎಲ್ಲವೂ ಜಗತ್ತಿನ ಆರ್ಥಿಕತೆಯ ಬಹು-ಆಯಾಮಗಳನ್ನು ನೆನಪಿಸುತ್ತವೆ. ಭಾರತ ಇದ್ದುದೇ ಹಾಗೆ. ಅಧ್ಯಾತ್ಮ – ಅರ್ಥ ವ್ಯವಸ್ಥೆ ಎರಡರಲ್ಲಿಯೂ ನಾವು ಔನ್ನತ್ಯ ಸಾಧಿಸಿದ್ದೆವು. ಶತ್ರುಗಳನ್ನು – ಪಾಶವೀ ರಿಲಿಜನ್ನುಗಳನ್ನು ಅರ್ಥ ಮಾಡಿಕೊಳ್ಳದೇ, ಶತಶತಮಾನಗಳ ಕಾಲ ಗುಲಾಮರಾಗಿಬಿಟ್ಟೆವು, ದರಿದ್ರರಾಗಿಬಿಟ್ಟೆವು, ಕಿಂಕರ್ತವ್ಯಮೂಢರಾಗಿಬಿಟ್ಟೆವು.

ಅರ್ಥ ವ್ಯವಸ್ಥೆ ಅಷ್ಟೇ ಅಲ್ಲ, ಜಗತ್ತಿನ ಅಂತಾರಾಷ್ಟ್ರೀಯ ಸಂಬಂಧಗಳು ತೀರಾ ತೀರಾ ಸಂಕೀರ್ಣ. ಅಂತಾರಾಷ್ಟ್ರೀಯ ಸ್ತರದಲ್ಲಿ ಕಳೆದ ನೂರು ವರ್ಷಗಳ ಭಾರತದ ಇತಿಹಾಸವನ್ನು ಗಮನಿಸಿದರೆ, ನಾವು ಉಳಿದಿರುವುದೇ ಹೆಚ್ಚು ಎಂಬುದು ಸ್ಪಷ್ಟವಾಗಿಬಿಡುತ್ತದೆ. ಐವತ್ತು ವರ್ಷಗಳ ಹಿಂದೆ, ಬ್ರಿಟಿಷರ ಪ್ರೀತಿಪಾತ್ರ ಪಕ್ಷವು ಅಧಿಕಾರದಲ್ಲಿದ್ದಾಗ, ಸಂಸತ್ತಿನಲ್ಲಿ ಅಕ್ಷರಶಃ ನೂರಾರು ಜನ ಸಂಸತ್ ಸದಸ್ಯರು CIA – KGB ಸಂಸ್ಥೆಗಳ Pay Rollನಲ್ಲಿದ್ದರಂತೆ. ಅವರಿಗೆ regular ಆಗಿ ವಿದೇಶೀ ಹಣ ಬರುತ್ತಿತ್ತು. ಕೆಲವು ವರ್ಷಗಳ ಹಿಂದೆ, ಈ ಗೂಢಚಾರೀ ಸಂಸ್ಥೆಗಳ ದಾಖಲೆಗಳು ಬಯಲಾದಾಗ (De-classification) ವಿಷಯ ತಿಳಿದ ನಾವೆಲ್ಲಾ ಚೇತರಿಸಿಕೊಳ್ಳಲು ಬಹಳ ಕಾಲವೇ ಹಿಡಿಯಿತು.

ಬಹಳ ವರ್ಷಗಳ ಕಾಲ ನಮ್ಮ ದೇಶದ ವಿದೇಶಾಂಗ ಮಂತ್ರಿಗಳು ಅಕ್ಷರಶಃ ಜೋಕರ್‌ಗಳಾಗಿಬಿಟ್ಟಿದ್ದರು. ತೈಲ ರಾಷ್ಟ್ರಗಳ ಮುಂದೆಹೋಗಿ, ಹಲ್ಲು ಗಿಂಜುತ್ತಿದ್ದರು, ಕರೆಯದಿದ್ದರೂ ಹೋಗಿ ಥೂ ಎನ್ನಿಸಿಕೊಂಡು ಬರುತ್ತಿದ್ದರು. ಅವರೆಲ್ಲಾ ಅಮೆರಿಕಾ ಇಲ್ಲವೇ ಸೋವಿಯತ್ ಒಕ್ಕೂಟದ ಆಜ್ಞಾನುವರ್ತಿಯಾಗಿರುವುದೇ ವಿದೇಶಾಂಗ ನೀತಿ ಎಂದುಕೊಂಡುಬಿಟ್ಟಿದ್ದರು. ಎರಡೂ ಶಕ್ತಿಕೇಂದ್ರದವರಿಂದ ಭಾರತ ಒದೆ ತಿಂದಿದ್ದೇ ಹೆಚ್ಚು. ಇಂಟೆಲಿಜೆನ್ಸ್ ಬ್ಯೂರೋ ಅಧಿಕಾರಿಗಳೂ, ಲೇಖಕರೂ, ಚಿಂತಕರೂ ಆಗಿದ್ದ ಆರ್.ಎನ್.ಕುಲಕರ್ಣಿಯವರು ವಿಷಾದದಿಂದ “ನಮ್ಮ ದೇಶಕ್ಕೆ ವಿದೇಶಾಂಗ ನೀತಿ ಎಂಬುದೇ ಇಲ್ಲ” ಎಂದಿದ್ದರು. ಹಲವಾರು ದೇಶಗಳಲ್ಲಿ ವಿದೇಶಾಂಗ ಇಲಾಖೆಯ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿ, ಕಟು-ಸತ್ಯಗಳನ್ನು ಕಂಡಿದ್ದ ಅವರಿಗೆ ಅಂದಿನ ಗೊಂದಲದ ವಿದೇಶಾಂಗ ನೀತಿ (?) ಭ್ರಮನಿರಸನ ಉಂಟುಮಾಡಿತ್ತು.

ಮೋದಿ ಸರ್ಕಾರದ ಪ್ರಥಮ ವಿದೇಶಾಂಗ ಮಂತ್ರಿಯಾಗಿ ಸುಷ್ಮಾ ಅದ್ಭುತವಾಗಿ ಕಾರ್ಯನಿರ್ವಹಿಸಿದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರ ಅನಂತರ ಉತ್ತರಾಧಿಕಾರಿ ಯಾರು ಎಂಬುದು ದೇಶಕ್ಕೆ ಚಿಂತೆಯ ಸಂಗತಿಯಾಗಿತ್ತು. ರಾಜಕಾರಣಿಗಳನ್ನು ಮಾತ್ರವೇ ವಿದೇಶಾಂಗ ಮಂತ್ರಿ ಸ್ಥಾನದಲ್ಲಿ ಕಲ್ಪಿಸಿಕೊಳ್ಳುತ್ತಿದ್ದವರಿಗೆ IFS ಅಧಿಕಾರಿಯೊಬ್ಬರು ಅತಿ-ಮಹತ್ತ್ವದ ಆ ಸ್ಥಾನಕ್ಕೆ ಆಯ್ಕೆ ಆಗಬಹುದು, ಎಂದು ಬಹಳ ಜನ ಪತ್ರಕರ್ತರೇ ಊಹಿಸಿರಲಿಲ್ಲ. ಇನ್ನು ಬಹುಪಾಲು ಕಾಂಗ್ರೆಸ್ ಆಡಳಿತದಲ್ಲಿಯೇ ವಿದೇಶಾಂಗ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ ಜೈಶಂಕರ್ ಅಂತಹವರು, ಬೇರೆಯೇ ಕಾರ್ಯಶೈಲಿಯ ಮೋದಿ ತಂಡದಲ್ಲಿ, ಸುಷ್ಮಾ ಅವರಿಗೆ ಸಮರ್ಥ ಉತ್ತರಾಧಿಕಾರಿಯಾಗಿ ಯಶಸ್ಸು ಪಡೆಯಬಲ್ಲರೇ ಎಂಬ ಸಂದೇಹ ಇದ್ದುದೂ ನಿಜವೇ.

S jaishankar

ಯುದ್ಧಗಳು, ಅಂಟುರೋಗಗಳು, ಬದಲಾಗುವ ದೇಶ-ದೇಶಗಳ ನಡುವಿನ ಸಂಬಂಧಗಳು, ಔಷಧಿ – ಶಸ್ತ್ರಾಸ್ತ್ರಗಳನ್ನು ತಯಾರಿಸುವವರ ಕಟ್-ಥ್ರೋಟ್ ರಾಜಕೀಯಗಳ ನಡುವೆ ದೇಶವೊಂದರ ಪ್ರಧಾನಮಂತ್ರಿ – ವಿದೇಶಾಂಗ ಮಂತ್ರಿಗಳ ಪಾತ್ರ ಯಾವಾಗಲೂ ಕಷ್ಟತಮವಾದುದೇ, ಸಂಕೀರ್ಣವಾದುದೇ. ತುಂಬ ಯೋಚಿಸಿ ಇಟ್ಟ ಹೆಜ್ಜೆಯೂ ಕೆಲವೊಮ್ಮೆ ಮುಜುಗರಕ್ಕೆ ಕಾರಣವಾಗುತ್ತದೆ. ಭೂಕಂಪಕ್ಕೆ ತುತ್ತಾದ ಟರ್ಕಿ ದೇಶಕ್ಕೆ ತ್ವರಿತ ಸಹಾಯ ಹಸ್ತ ಚಾಚಿದ ಮತ್ತು ತುರ್ತು ಅಗತ್ಯಗಳನ್ನು ಪೂರೈಸಿದ ಭಾರತಕ್ಕೆ, ಕೆಲವೇ ದಿನಗಳಲ್ಲಿ ಆ ಜಿಹಾದೀ ಟರ್ಕಿ ದೇಶವು ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನವನ್ನು ಬೆಂಬಲಿಸಿ ದ್ರೋಹ ಬಗೆಯಿತು. ಮಾಲ್ಡೀವ್ಸ್ ನಂತಹ ಜಿರಳೆ ಗಾತ್ರದ ದೇಶವು ಭಾರತಕ್ಕೆ ಸೆಡ್ಡು ಹೊಡೆಯುತ್ತದೆ, ಸವಾಲು ಹಾಕುತ್ತದೆ, ಅವಮಾನ ಮಾಡುತ್ತದೆ. ಇಂತಹ ನೂರೆಂಟು ಅಪಸವ್ಯಗಳು ಅಂತಾರಾಷ್ಟ್ರೀಯ ರಾಜಕಾರಣದಲ್ಲಿ ಇರುವಂತಹುವೇ! ಈ ಹಿನ್ನೆಲೆಯಲ್ಲಿ ವಿದೇಶಾಂಗ ಖಾತೆಯನ್ನು ನಿಭಾಯಿಸುವುದು ಸರಳವೂ ಅಲ್ಲ, ಸುಲಭವೂ ಅಲ್ಲ.

ಅಪಾರ ಅನುಭವದ ಜೈಶಂಕರ್ ತಮ್ಮ “THE INDIA WAY” ಕೃತಿಯಲ್ಲಿ ಅಂತಾರಾಷ್ಟ್ರೀಯ ಜಗತ್ತಿನ ಅನೇಕ ಆಯಾಮಗಳ ಬಗೆಗೆ ಅದ್ಭುತವಾದ ವ್ಯಾಖ್ಯಾನ ನೀಡುತ್ತಾರೆ. ಅಮೆರಿಕದಂತಹ ದೇಶದ ಸ್ಥಾನಮಾನದ ಬಗೆಗೆ, ನಮ್ಮ ದೇಶದ ಕಾರ್ಯತಂತ್ರ ಸಂಸ್ಕೃತಿಯ ಬಗೆಗೆ, ಭಾರತದ ಮೇಲಿರುವ ಗತಕಾಲದ ಭಾರದ ಬಗೆಗೆ, ಜಾಗತಿಕ ಮಟ್ಟದಲ್ಲಿ ತಡವಾಗಿಯಾದರೂ ದೊರೆತಿರುವ – ದೊರೆಯುತ್ತಿರುವ ಅವಕಾಶಗಳ ಬಗೆಗೆ, ಅಂತಾರಾಷ್ಟ್ರೀಯ ಶಕ್ತಿಗಳ ಹೊಸ ಸಮೀಕರಣದ ಬಗೆಗೆ, ತುಂಬಾ ಮೌಲಿಕವಾದ ಬರೆಹವನ್ನು ನೀಡಿದ್ದಾರೆ. ಈ ಅಂತಾರಾಷ್ಟ್ರೀಯ ಸಂಗತಿಗಳ ಜಗತ್ತೇ ಹೀಗೆ, ದೇಶದೊಳಗಿನ ರಾಜಕಾರಣದ ಒಳಹೂರಣವನ್ನು ಬಗೆದು – ತೆಗೆದು ಬರೆದಂತೆ ಅಲ್ಲವೇ ಅಲ್ಲ. ಪ್ರತಿಯೊಂದು ಸಾಲಿಗೂ ಪ್ರತಿಯೊಂದು ಸಂಗತಿಗೂ, ಬಹು-ಆಯಾಮದ ಮುಖಗಳಿರುತ್ತವೆ, ಅಷ್ಟೇ ಅಲ್ಲ, ವೈಫಲ್ಯದ ವಿಸಂಗತಿಗಳೂ ಇರುತ್ತವೆ. ಏನೇ ನಿರ್ಧಾರ ತೆಗೆದುಕೊಂಡರೂ, ಅನಂತರ ಹೇಗೆ ವಿಶ್ಲೇಷಿಸಿದರೂ ಪ್ರತಿಯೊಂದಕ್ಕೂ ಕೊಂಕು ತೆಗೆಯುವ ಟೀಕಾಕಾರರೂ ಇರುತ್ತಾರೆ.

ವಿದೇಶಾಂಗ ವ್ಯವಹಾರ ಇರುವುದೇ ಹಾಗೆ.

ಜೈಶಂಕರ್ ತಮ್ಮ ಕಾರ್ಯನಿರ್ವಹಣೆಯಲ್ಲಿ ಯಶಸ್ಸು ಪಡೆದಂತೆಯೇ, ಈ ಕೃತಿ ರಚನೆಯಲ್ಲಿಯೂ ಔನ್ನತ್ಯ ಸಾಧಿಸಿದ್ದಾರೆ. ವಿಶೇಷವೆಂದರೆ ಕ್ಲಿಷ್ಟವೂ ಸಂಕೀರ್ಣವೂ, ಮುಖ್ಯವಾಗಿ ತುಂಬಾ ತಾಂತ್ರಿಕವೂ ಆದ ಇಂತಹ ಕೃತಿಗಳನ್ನು ಸಮರ್ಪಕವಾಗಿ ಕನ್ನಡಕ್ಕೆ ಭಾಷಾಂತರಿಸುವುದು ಬಹಳ ದೊಡ್ಡ ಸವಾಲಿನ ಕೆಲಸ. ಸಾಮಾನ್ಯ ಅನುವಾದವನ್ನು ಮೀರಿದ, ಇಂತಹ ರಾಜತಾಂತ್ರಿಕ ಮತ್ತು ವಿದೇಶಾಂಗ ಮಗ್ಗುಲುಗಳ ಗ್ರಂಥವೊಂದನ್ನು ಬಿ.ಎಸ್.ಜಯಪ್ರಕಾಶ ನಾರಾಯಣ ತುಂಬಾ ಚೆನ್ನಾಗಿ ಕನ್ನಡಕ್ಕೆ ತಂದಿದ್ದಾರೆ. ಮೂಲ ಇಂಗ್ಲಿಷ್ ಮತ್ತು ಕನ್ನಡಾನುವಾದದ ಎರಡೂ ಪಠ್ಯಗಳನ್ನು ಜೊತೆಜೊತೆಯಲ್ಲಿಯೇ ನೋಡಿದಾಗ, ಗಮನಿಸಿದಾಗ, ಹೋಲಿಸಿದಾಗ ಜಯಪ್ರಕಾಶರ ಶ್ರಮ ಎಂತಹುದು ಎಂಬುದು ತಿಳಿಯುತ್ತದೆ. ನಿಜಕ್ಕೂ JP ಅಭಿನಂದನೀಯರು.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಆ ಕರಾಳ ದಿನಗಳನ್ನು ನೆನಪಿಸಿ ಅಂತರಂಗ ಕಲಕುವ ಬುಗುರಿ

“…..ನಾವು ದೇಶಗಳ ಗಡಿ ಮತ್ತು ಸಾಂಪ್ರದಾಯಿಕ ಮಾದರಿಯ ರಾಜಕಾರಣದ ಆಚೆಗೆ ಕೂಡ ಮಾತನಾಡುತ್ತಿದ್ದೇವೆ. ಅಧಿಕಾರವನ್ನು ವ್ಯಾಖ್ಯಾನಿಸುತ್ತಿದ್ದ ಸಂಗತಿಗಳಾಗಲೀ, ರಾಷ್ಟ್ರೀಯ ನಿಲುವನ್ನು ನಿರ್ಧರಿಸುತ್ತಿದ್ದ ಸಂಗತಿಗಳಾಗಲೀ, ಈಗ ಹಿಂದಿನಂತೆಯೇ ಉಳಿದಿಲ್ಲ. ಅವುಗಳ ಜಾಗದಲ್ಲಿ ತಂತ್ರಜ್ಞಾನ, ಸಂಪರ್ಕ ಸೌಲಭ್ಯ ಮತ್ತು ವಾಣಿಜ್ಯ ವಹಿವಾಟುಗಳು ಮುನ್ನೆಲೆಗೆ ಬಂದಿವೆ. ನಿರ್ಬಂಧಿತವೂ ಅಂತರವಲಂಬಿತವೂ ಆಗಿರುವ ಸದ್ಯದ ಜಗತ್ತಿನಲ್ಲಿ ನಮಗೆ ಎದುರಾಗುವ ಸ್ಪರ್ಧೆಯನ್ನು ನಾವು ಹೆಚ್ಚು ಜಾಣ್ಮೆಯಿಂದ ಎದುರಿಸಬೇಕು. ಬಹುಧ್ರುವೀಯ ವ್ಯವಸ್ಥೆಯು ದುರ್ಬಲವಾಗುತ್ತಿದ್ದಂತೆಯೇ, ಜಾಗತಿಕ ಒಳಿತು ಎನ್ನುವುದು ಕೂಡ ಹೆಚ್ಚು ವಿವಾದಾಸ್ಪದವಾಗಿದೆ. ಒಂದು “ಆರ್ಕ್ಟಿಕ್ ಪ್ಯಾಸೇಜ್”ಅನ್ನು ತೆರೆಯುವ ಮೂಲಕ ಹವಾಮಾನ ಬದಲಾವಣೆಯಂತಹ ವಿಚಾರ ಕೂಡ ಜಾಗತಿಕ ರಾಜಕಾರಣಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿದೆ. ಇಷ್ಟೇ ಅಲ್ಲ, ಎಲ್ಲರ ನಿರೀಕ್ಷೆಯನ್ನು ಮೀರಿ ಕರೋನಾ ಸಾಂಕ್ರಾಮಿಕ ಕೂಡ ಇಲ್ಲಿ “ವೈಲ್ಡ್ ಕಾರ್ಡ್” ಆಗಿ ಹೊರಹೊಮ್ಮಿದೆ. ಚುಟುಕಾಗಿ ಹೇಳುವುದಾದರೆ, ಬದಲಾವಣೆಗಳು ಹಿಂದೆಂದೂ ಇಲ್ಲದಂತಹ ರೀತಿಯಲ್ಲಿ ಅಭೂತಪೂರ್ವವಾಗಿ ಸಂಭವಿಸುತ್ತಿವೆ……” (“ಭಾರತ ಪಥ” ಪುಟ ೧೧೮).

20ನೆಯ ಶತಮಾನದ ಪರಿಪ್ರೇಕ್ಷ್ಯದಲ್ಲಿ, ವಿದೇಶಾಂಗ – ಆರ್ಥಿಕ – ಅಂತಾರಾಷ್ಟ್ರೀಯ ಆಯಾಮಗಳ ಭಾರತೇತಿಹಾಸದ ಒಂದು ಮಹತ್ತ್ವದ ಚಿತ್ರ ನೀಡುವಲ್ಲಿ ಜೈಶಂಕರ್ ಯಶಸ್ವಿಯಾಗಿದ್ದಾರೆ ಮತ್ತು ಒಂದು ರೀತಿಯಲ್ಲಿ ಇತಿಹಾಸಕಾರರೂ ಆಗಿಬಿಟ್ಟಿದ್ದಾರೆ.

“ಭಾರತ ಪಥ” ನಾವೆಲ್ಲ ಗಮನಿಸಲೇಬೇಕಾದ ಕೃತಿಗಳಲ್ಲೊಂದು.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ವಾರಾಣಸಿಯ ನಂದಿ ಮುಖ ಮಾಡಿದ ಕಡೆಗೆ ಶಿವ ಬರಲು ಇನ್ನೆಷ್ಟು ಕಾಯಬೇಕು?

Continue Reading
Advertisement
Dina bhavishya
ಭವಿಷ್ಯ2 mins ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Steet Food
ಆಹಾರ/ಅಡುಗೆ5 hours ago

ವಿಸ್ತಾರ ಸಂಪಾದಕೀಯ: ಸಾರ್ವಜನಿಕ ಆಹಾರದಲ್ಲಿ ಆರೋಗ್ಯ ಕಾಳಜಿ ಪ್ರಮುಖವಾಗಿರಲಿ

IPL 2024
ಪ್ರಮುಖ ಸುದ್ದಿ5 hours ago

IPL 2024 : ಪಂಜಾಬ್​ ತಂಡಕ್ಕೆ ವಿರೋಚಿತ 9 ರನ್ ಸೋಲು, ಜಯದ ಹಳಿಗೆ ಮರಳಿದ ಮುಂಬೈ

Physical Abuse
ದೇಶ5 hours ago

Physical Abuse : ಸ್ಪೇನ್​ನ ಮಹಿಳೆ ಮೇಲೆ ಜಾರ್ಖಂಡ್​ನಲ್ಲಿ ಗ್ಯಾಂಗ್​ ರೇಪ್​; ತಿಂಗಳ ಬಳಿಕ ಪ್ರಕರಣ ಬಯಲು

Amanatullah Khan
ದೇಶ6 hours ago

Amanatullah Khan: ಆಪ್‌ಗೆ ಮತ್ತಷ್ಟು ಸಂಕಷ್ಟ; ಶಾಸಕ ಅಮಾನತುಲ್ಲಾ ಖಾನ್ ಅರೆಸ್ಟ್‌

Moral policing
ಪ್ರಮುಖ ಸುದ್ದಿ6 hours ago

Moral policing : ನೈತಿಕ ಪೊಲೀಸ್​ಗಿರಿ; ಮುಸ್ಲಿಮರ ಗುಂಪಿನಿಂದ ಹಿಂದೂ ಯುವಕನ ಮೇಲೆ ಹಲ್ಲೆ

Rishab Shetty
ಸಿನಿಮಾ6 hours ago

Rishab Shetty: ರಿಷಬ್‌ ಮೀಟ್ಸ್‌ ಮೋಹನ್‌ಲಾಲ್‌; ʼಕಾಂತಾರʼ ಪ್ರೀಕ್ವೆಲ್​ನಲ್ಲಿ ಅಭಿನಯಿಸುತ್ತಾರಾ ಮಾಲಿವುಡ್‌ ಸೂಪರ್‌ ಸ್ಟಾರ್‌?

lok Sabha Election
ಪ್ರಮುಖ ಸುದ್ದಿ6 hours ago

Lok Sabha Election : ಕಾಂಗ್ರೆಸ್​​ಗೆ ಹಿನ್ನಡೆಯಾದರೆ ಸಿದ್ದರಾಮಯ್ಯ ಸ್ಥಾನಕ್ಕೆಕಂಟಕ​​​; ಚರ್ಚೆ ಹುಟ್ಟು ಹಾಕಿದ ಬೈರತಿ ಸುರೇಶ್​ ಹೇಳಿಕೆ

Hubli Murder Case
ಪ್ರಮುಖ ಸುದ್ದಿ7 hours ago

Hubli murder case : ನೇಹಾಳನ್ನು ಕೊಲ್ಲಲೆಂದೇ ಕಾಲೇಜಿಗೆ ಸಜ್ಜಾಗಿ ಬಂದಿದ್ದ ಶಿಕ್ಷಕರ ಪುತ್ರ ಫಯಾಜ್!

congress workers meeting in kudligi
ವಿಜಯನಗರ7 hours ago

Lok Sabha Election 2024: ಬಳ್ಳಾರಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಈ. ತುಕಾರಾಂ ಗೆಲ್ಲಿಸಲು ಸಂತೋಷ್‌ ಲಾಡ್‌ ಮನವಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina bhavishya
ಭವಿಷ್ಯ2 mins ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ2 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ3 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20244 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20244 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ5 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ6 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ7 days ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ1 week ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

ಟ್ರೆಂಡಿಂಗ್‌