| ನಿತ್ಯಾನಂದ ವಿವೇಕವಂಶಿ
ಕಾಂತಾರ ಚಿತ್ರ ಇಡೀ ದೇಶದಾದ್ಯಂತ ಸುದ್ದಿ ಮಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಬದಲಾದ ಪ್ರಪಂಚದಲ್ಲಿ ಸಿನಿಮಾದ ಯಶಸ್ಸನ್ನು ಅದು ಎಷ್ಟು ದುಡ್ಡು ಗಳಿಸುತ್ತಿದೆ ಎಂಬುದರ ಆಧಾರದ ಮೇಲೆ ನಿರ್ಧರಿಸಲು ಆರಂಭಿಸಿದ ಮೇಲೆ ಸಿನಿಮಾ ಒಂದು ಕಲೆಯಾಗಿ ಮತ್ತು ಮಾಧ್ಯಮವಾಗಿ ತನ್ನ ಪಾವಿತ್ರ್ಯವನ್ನು ಕಳೆದುಕೊಂಡಿದೆ. ಅಬ್ಬರದ ಪ್ರಚಾರ ಸಿನಿಮಾವನ್ನು ಒಂದು ಮಾರಾಟದ ಸರಕಾಗಿಸಿದೆ. ಪ್ರಚಾರವನ್ನು ಅತಿ ಎನ್ನಿಸುವಷ್ಟು ಹೆಚ್ಚು ಮಾಡಿ, ಟಿಕೆಟ್‌ಗಳಿಗೆ ಡಿಮ್ಯಾಂಡ್ ಹುಟ್ಟಿಸಿ, ಫಸ್ಟ್ ಡೇ ಫಸ್ಟ್ ಶೋ ಹಪಹಪಿ ಹುಟ್ಟಿಸಿ, ಟಿಕೆಟ್ ಬೆಲೆಯನ್ನು ಯದ್ವಾ ತದ್ವಾ ಫಿಕ್ಸ್ ಮಾಡಿ, ತಮ್ಮದೇ ಅಭಿಮಾನಿಗಳ ವರ್ಗದಿಂದ ಟೇಕಾಫ್ ಮಾಡಿಸಿ, ಚಿತ್ರದಲ್ಲೇನೂ ಕಂಟೆಂಟ್ ಇದ್ದರೂ ಇಲ್ಲದಿದ್ದರೂ, ಕೆಲವೇ ದಿನಗಳಲ್ಲಿ ಕೋಟಿ ಕ್ಲಬ್ ಸೇರಿಸಿ ಚಿತ್ರ ಯಶಸ್ವಿಯಾಯಿತು ಎಂದು ಬೆನ್ನು ತಟ್ಟಿಕೊಳ್ಳುವ ವಿಚಿತ್ರ ಮಾರ್ಕೆಟಿಂಗ್ ಪದ್ಧತಿ ಶುರುವಾಗಿದೆ. ಚಿತ್ರ ನೋಡದವರಿಗೆ ನೀವಿನ್ನೂ ನೋಡಿಲ್ವಾ? ಅನ್ನುವ ಕೀಳರಿಮೆ ಹುಟ್ಟಿಸಿ, ಚಿತ್ರಮಂದಿರಕ್ಕೆ ಸೆಳೆತಂದು ದುಡ್ಡು ಕೀಳುವ ವಿಚಿತ್ರ ತಂತ್ರವದು. ಅದು ಕೆಜಿಎಫ್ ಇರಲಿ, ವಿಕ್ರಾಂತ್ ರೋಣ ಇರಲಿ ಅಥವಾ ಕಾಂತಾರವೇ ಇರಲಿ ಪ್ರಚಾರ ಸಿನಿಮಾ ಲೋಕವನ್ನು ಆಳುತ್ತಿದೆ ಅನ್ನೋದು ಶುದ್ಧ ಸತ್ಯ. ಆದರೆ ಇದೆಲ್ಲದರ ನಡುವೆ ಸಿನಿಮಾ ಮಂದಿರಕ್ಕೆ ಹೋಗಿ ಕುಳಿತ ಪ್ರೇಕ್ಷಕ ಮಹಾಪ್ರಭುವಿಗೆ ಕೊಟ್ಟ ದುಡ್ಡಿಗೆ ಮೋಸವಿಲ್ಲ ಅಂತ ಅನ್ನಿಸುವಂತೆ ಮಾಡುವುದು ಅತ್ಯಂತ ದೊಡ್ಡ ಸವಾಲು. ಈ ಸವಾಲಿನಲ್ಲಿ ಕಾಂತಾರ ನಿಜಕ್ಕೂ ಗೆದ್ದಿದೆ. ಚಿತ್ರ ನೋಡಿದ ಪ್ರೇಕ್ಷಕನಿಗೆ ಕೊಟ್ಟ ದುಡ್ಡಿಗೆ ಚೂರೂ ಮೋಸವಿಲ್ಲದ ಹಾಗೆ ಹೊಸದೊಂದು ತುಂಬು ಅನುಭವವನ್ನು ನೀಡುವಲ್ಲಿ ಚಿತ್ರ ಯಶಸ್ವಿಯಾಗಿದೆ.
ಸಾಮಾನ್ಯವಾಗಿ ದೈವಭಕ್ತಿ ಅಂದ್ರೆ ದೇವರ ಮೇಲಿನ ಭಕ್ತಿ ಅಂತ ಅರ್ಥವೇ ಹೊರತು ಇಲ್ಲಿ “ದೈವ” ಅನ್ನೋ ಪದವೊಂದಕ್ಕೆ ಬೇರೆ ಅರ್ಥವಿರಬಹುದು ಎಂಬ ಕಲ್ಪನೆಯೂ ಕೆಲವೇ ವಾರಗಳ ಹಿಂದೆ ಅನೇಕರಿಗೆ ಇರಲಿಲ್ಲ. ಕರಾವಳಿ ಭಾಗದ ಜನಗಳಿಗೆ ಸುಪರಿಚಿತವಾಗಿರುವ ಈ “ದೈವ” ಕರಾವಳಿಯನ್ನು ದಾಟಿ ಪಶ್ಚಿಮ ಘಟ್ಟಗಳನ್ನು ಇಳಿದು ಬಯಲುಸೀಮೆಗೆ ಬಂದಿಳಿದರೆ ಸಂಪೂರ್ಣ ಅಪರಿಚಿತ. ಸಮುದ್ರದಿಂದ ನೂರು ಕಿಲೋಮೀಟರ್ ಹಿಂದೆ ನಡೆದು ಬಂದುಬಿಟ್ಟರೆ ಯಾರಿಗೂ ಗೊತ್ತಿಲ್ಲದ ಈ ದೈವದ ಕುರಿತಾದ ಕಥೆಯನ್ನು ಹಿಡಿದು ದೈವವನ್ನೇ ಚಿತ್ರದ ಕೇಂದ್ರವಾಗಿಸಿ, ಇಡೀ ದೇಶವೇ ಅದನ್ನು ತುದಿಗಾಲಲ್ಲಿ ನಿಂತು ನೋಡುವಂತೆ ಮಾಡಿರುವುದು ಕಾಂತಾರ ಚಿತ್ರದ ಅತಿದೊಡ್ಡ ಯಶಸ್ಸು!
ಹೌದು! ಜನರಿಗೆ ಗೊತ್ತಿಲ್ಲದ ವಿಷಯವನ್ನು ಸಿನಿಮಾ ಮೂಲಕ ಗೊತ್ತುಮಾಡಿಸುವುಷ್ಟೇ ಅಲ್ಲದೇ, ಇಷ್ಟವಾಗುವಂತೆ ಮಾಡುವುದು ಸಾಮಾನ್ಯದ ಕೆಲಸವಲ್ಲ. ಬಹುಪಾಲು ನಿರ್ದೇಶಕರು ಜನರಿಗೆ ಅರ್ಥಮಾಡಿಸಲು ಹೋಗಿ ಇಷ್ಟವಾಗಿಸುವುದರಲ್ಲಿ ವಿಫಲವಾಗುತ್ತಾರೆ. ಕೆಲವರು ಇಷ್ಟಪಡಿಸಲು ಹೋಗಿ ಅರ್ಥವೇ ಆಗದಂತೆ ಮಾಡಿಬಿಡುತ್ತಾರೆ. ಆದರೆ ನಿರ್ದೇಶಕ ರಿಷಬ್ ಅರ್ಥ ಮಾಡಿಸಲೂ ಹೋಗದೇ, ಇಷ್ಟ ಪಡಿಸಲೂ ಹೋಗದೇ, ಅರ್ಥವನ್ನೂ ಮಾಡಿಸಿ, ಇಷ್ಟಪಡುವಂತೆಯೂ ಮಾಡಿಬಿಟ್ಟಿದ್ದಾರೆ. ಇನ್ ಫ್ಯಾಕ್ಟ್ ಕಾಂತಾರದಂತಾ ಚಿತ್ರವನ್ನು ಕರಾವಳಿಯನ್ನು ಹೊರತುಪಡಿಸಿ, ಬಯಲು ಸೀಮೆಯ ಅಥವಾ ದೈವ ಅನ್ನುವ ಕಾನ್ಸೆಪ್ಟಿನ ಬಗ್ಗೆ ಎಬಿಸಿಡಿ ಗೊತ್ತಿಲ್ಲದ ದೇಶದ ಇನ್ನಿತರ ಭಾಗದ ಪ್ರೇಕ್ಷಕರಿಗೆ ಅರ್ಥ ಮಾಡಿಸಲು ಚಿತ್ರವನ್ನು ತೋರಿಸುವ ಮೊದಲು ದೈವ ಅಂದರೇನು? ಅದರ ಹಿನ್ನೆಲೆ, ಆರಾಧನೆ, ನಂಬಿಕೆ ಇತ್ಯಾದಿ ಇತ್ಯಾದಿಗಳ ಬಗ್ಗೆ ಒಂದು ಪ್ರಾಥಮಿಕ ಮಾಹಿತಿ ಇರುವ ಒಂದು ಪುಟ್ಟ ಡಾಕ್ಯುಮೆಂಟರಿ ತೋರಿಸಬೇಕಾಗಿತ್ತು. ಪಂಜುರ್ಲಿ, ಕಾರಣಿಕ, ಗಗ್ಗರ, ಕೋಲ, ಲಗಾಡಿ, ಬೊಜ್ಜ ಇತ್ಯಾದಿ ಇತ್ಯಾದಿ ಪದಗಳ ಅರ್ಥ ತಿಳಿಸುವ ಚಿಕ್ಕ ಎಕ್ಸರ್ಸೈಸ್ ಅನ್ನೇ ಮಾಡಬೇಕಿತ್ತೇನೋ. ಒಂಥರಾ ಬ್ರಿಡ್ಜ್ ಕೋರ್ಸ್ ಮಾಡಿದಂತೆ! ಆದರೆ ಇದ್ಯಾವುದೂ ಇಲ್ಲದೇ ಕೇವಲ ಕಥೆಯ ಮೂಲಕ, ಭಾವನೆಗಳ ಮೂಲಕ, ಅಭಿನಯದ ಮೂಲಕ, ಭಾಷೆಯ ಗಡಿಯನ್ನು ದಾಟಿ, ಸಂಸ್ಕೃತಿಯ ವೈವಿಧ್ಯತೆ ವ್ಯತ್ಯಾಸಗಳನ್ನು ಮೀರಿ ಕಾಂತಾರ ಗೆದ್ದಿದೆ. ಇದಕ್ಕಾಗಿ ಕರಾವಳಿಗೆ ಸೇರದ ಹೊರವಲಯದ ಒಬ್ಬ ಪ್ರೇಕ್ಷಕನಾಗಿ ಚಿತ್ರರಸಿಕನಾಗಿ ನಾನು ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಚಿತ್ರದ ಹೆಸರೇ ಹೇಳುವಂತೆ ಅರಣ್ಯದೊಳಗಿನ ಗ್ರಾಮವೊಂದರಲ್ಲಿ ನಡೆವ ದೈವದ ಕಥೆ ಇದು. ಹಿಂದೆ ರಂಗಿತರಂಗ ಮತ್ತು ವಿಕ್ರಾಂತ್ ರೋಣ ಇದೇ ಪ್ಯಾಟರ್ನಿನ ಚಿತ್ರಗಳಾಗಿ ತೆರೆಕಂಡಿದ್ದರೂ ಅವೆರಡರಲ್ಲೂ ದೈವ ಅಥವಾ ಇನ್ನಿತರ ಶಕ್ತಿಗಳು ಒಂದು ಸಪೋರ್ಟಿವ್ ಸಬ್ಜೆಕ್ಟ್ ಆಗಿತ್ತು. ಆದರೆ ಈ ಚಿತ್ರದಲ್ಲಿ ಇಡೀ ಚಿತ್ರವೇ ದೈವದ ಮೇಲೆ ನಿಂತಿದೆ ಎಂದರೂ ತಪ್ಪಾಗಲಾರದು. ಟ್ರೈಲರ್‌ನಲ್ಲಿ ನೀವೆಲ್ಲಾ ನೋಡಿರುವ ಹಾಗೆ ಚಿತ್ರದ ಶೀರ್ಷಿಕೆಯಲ್ಲಿ (0) ಸೊನ್ನೆಯ ರೂಪದಲ್ಲಿ ಪಂಜು ಹಿಡಿದು ಸುತ್ತುವ ದೈವವನ್ನು ಸಾಂಕೇತಿಕವಾಗಿ ಕಾಣಿಸುವಂತೆ ಹೇಗೆ ಮಾಡಿದ್ದಾರೋ, ಹಾಗೆಯೇ ಇಡೀ ಚಿತ್ರವೇ ದೈವಕೇಂದ್ರಿತವಾಗಿ ನಿರ್ಮಿತವಾಗಿದೆ. ಆದರೆ ಅದರ ನಡುವಲ್ಲಿ ಶಿವನೆಂಬ ಸಾಮಾನ್ಯ ಮುಗ್ಧ ಆದರೆ ಒರಟ ಯುವಕನೊಬ್ಬನ ಪಾತ್ರ ಮತ್ತು ಅವನೊಟ್ಟಿಗೆ ನಿಷ್ಠಾವಂತ ಅರಣ್ಯಾಧಿಕಾರಿಯೊಬ್ಬನ ಪಾತ್ರ ಮತ್ತು ಗೋಮುಖ ವ್ಯಾಘ್ರನಾಗಿರುವ ಊರಿನ ಧಣಿ ಅಂದರೆ ಜಮೀನ್ದಾರನೊಬ್ಬನ ಪಾತ್ರಗಳು ಪ್ರಧಾನ ಭೂಮಿಕೆಯಲ್ಲಿವೆ. ಚಿತ್ರದುದ್ದಕ್ಕೂ ಈ ಮೂರು ಪ್ರಮುಖ ಪಾತ್ರಗಳು ದೈವವೆಂಬ ಆಟಮ್ಮಿನ ಒಳಗೆ ಪ್ರೋಟಾನ್ ನ್ಯೂಟ್ರಾನ್ ಮತ್ತು ಎಲೆಕ್ಟ್ರಾನುಗಳಂತೆ ನಿಲ್ಲುವ, ಓಡಾಡುವ ಅಥವಾ ಸುತ್ತುವ ಕಾರ್ಯದಲ್ಲಿ ನಿರತವಾಗಿರುತ್ತವೆ. ಆದರೆ ಕಡೆಗೆ ಆ ಎಲ್ಲ ಪಾತ್ರಗಳೂ ದೈವದ ಅಬ್ಬರದ ಒಳಗೆ ಕರಗಿಹೋಗುತ್ತವೆ. ಅಂತಿಮವಾಗಿ ವರಾಹ ರೂಪದ ದೈವವು ಇಡೀ ಕಾಡಿನ ರಕ್ಷಕನಾಗಿ ತಾನೇ ತಾನಾಗಿ ವಿಜೃಂಭಿಸುತ್ತದೆ. ಇದು ಚಿತ್ರದ ಒಂದು ರಫ್ ಸ್ಕೆಚ್. ಆದರೆ ಇಷ್ಟರೊಳಗೆ ನಿರ್ದೇಶಕರು ಕಟ್ಟಿಕೊಟ್ಟಿರುವ ವರ್ಣರಂಜಿತ ಅದ್ಭುತ ಮಾಯಾಲೋಕ ಅವರ ಅಪಾರವಾದ ಸೃಜನಶೀಲತೆಗೆ ಹಿಡಿದ ಕೈಗನ್ನಡಿ. ಅದನ್ನು ಚಿತ್ರ ನೋಡಿಯೇ ಅನುಭವಿಸಬೇಕು.
ಇದನ್ನೂ ಓದಿ | ದೃಶ್ಯ ಕಾವ್ಯ | ಕಾಂತಾರ ಸಿನೆಮಾ ನನಗೇಕೆ ಇಷ್ಟವಾಯಿತು?
ಚಿತ್ರದಲ್ಲಿ ನನಗೆ ವಯಕ್ತಿಕವಾಗಿ ಇಷ್ಟವಾದದ್ದು:
೧. ಕಥೆಯ ಆಯ್ಕೆ: ಸಹಿಪ್ರಾ ಶಾಲೆ ಕಾಸರಗೋಡು ಚಿತ್ರದಲ್ಲೇ ರಿಷಬ್ ಶೆಟ್ಟಯವರ ಅನನ್ಯತೆ ಅರ್ಥವಾಗಿತ್ತು. ಶಂಕರ್‌ನಾಗ್ ನಂತರ ಕನ್ನಡ ಚಿತ್ರರಂಗ ಕಾಣುತ್ತಿರುವ ಅಪರೂಪದ ಪ್ರತಿಭೆ ರಿಷಬ್. ಸದಭಿರುಚಿಯ ಸವಾಲಿನ ಕಥೆಗಳನ್ನು ಆರಿಸುವ ಅವರ ಇಂಥಾ ಆಸಕ್ತಿ ಬಹುವಾಗಿ ಇಷ್ಟವಾಯಿತು. ಕಾಂತಾರವೂ ಅಂತಹುದೇ ಒಂದು ಸದಭಿರುಚಿಯ ಚಿತ್ರ. ಕನ್ನಡ ಸಿನಿಮಾ ಲೋಕದಲ್ಲಿ ಕೇವಲ ಮಚ್ಚು ಕೊಚ್ಚು ಹೊಡಿ ಬಡಿಗಳು ಕಡಿಮೆಯಾಗಿ ಇಂಥಾ ಕಥಾಕೇಂದ್ರಿತ ಸಿನಿಮಾಗಳು ಇನ್ನಷ್ಟು ಬರಲಿ ಎಂಬ ಹಾರೈಕೆ ನನ್ನದು.
೨. ಅಭಿನಯ: ಕೊನೆಯ 20 ನಿಮಿಷಗಳ ರಿಷಬ್‌ರ ಅಭಿನಯ ನಮ್ಮ ಮನಸ್ಸಿನಿಂದ ರಿಷಬ್‌ರನ್ನೇ ಮರೆಸುತ್ತದೆ ಎಂದರೆ ನಟನಾಗಿ ಅವರ ಯಶಸ್ಸನ್ನು ನೀವು ಅಳತೆ ಮಾಡಬಹುದು. ದೈವ ನರ್ತಕನಾಗಿ ಕ್ಷೇತ್ರರಕ್ಷಕನಾಗಿ ಅವರ ಅಭೂತಪೂರ್ವ ಅಭಿನಯ ಅವರನ್ನು ಕನ್ನಡ ಚಿತ್ರರಂಗದ ಪ್ರಮುಖ ನಟರ ಸಾಲಿಗೆ ತಂದು ನಿಲ್ಲಿಸಿದೆಯೆಂದರೆ ಅತಿಶಯೋಕ್ತಿಯಲ್ಲ. ರಿಷಬ್ ಮಾತ್ರವಲ್ಲದೇ ಅಭಿನಯಿಸಿರುವ ತಾರಾಗಣದ ಎಲ್ಲರದ್ದೂ ಸಹಜ ಹಾಗೂ ಪರಿಪೂರ್ಣ ಅಭಿನಯ. ಅರಣ್ಯಾಧಿಕಾರಿ ಮುರಳಿಯ ಪಾತ್ರದಲ್ಲಿ ಕಿಶೋರ್, ಧಣಿಯ ಪಾತ್ರದಲ್ಲಿ ಅಚ್ಯುತ್, ಶಿವನ ತಾಯಿಯ ಪಾತ್ರದಲ್ಲಿ ಮಾನಸಿ ಸುಧೀರ್, ಪ್ರೇಯಸಿಯ ಪಾತ್ರದಲ್ಲಿ ಸಪ್ತಮಿ ಗೌಡ, ಶಿವನ ಗೆಳೆಯರ ಪಾತ್ರ, ಧಣಿಯ ಹಿಂಬಾಲಕರ ಪಾತ್ರ, ಪ್ರತಿಯೊಬ್ಬರೂ ತಮ್ಮ ಸಂಪೂರ್ಣ ಅಭಿನಯ ಸಾಮರ್ಥ್ಯವನ್ನು ಸಮರ್ಪಿಸಿದ್ದಾರೆ. ಚಿತ್ರದ ಆರಂಭದಲ್ಲಿನ ರಾಜನ ಪಾತ್ರ, ಅವನೆದುರು ನಿಲ್ಲುವ ದೈವದ ಪಾತ್ರ ಪ್ರತಿಯೊಬ್ಬ ನಟನ ಆಯ್ಕೆಯೂ ಪಾತ್ರಕ್ಕೆ 100% ಒಪ್ಪುವಂಥವೇ ಆಗಿದೆ. ಅದರಲ್ಲೂ ಗುರುವನ ಪಾತ್ರಕ್ಕೆ ಸ್ವರಾಜ್ ಶೆಟ್ಟಿ ಎಂಬ ಹುಡುಗನ ಆಯ್ಕೆ ಹೇಳಿ ಮಾಡಿಸಿದಂತಿದೆ. ಮುಗ್ಧತೆ ಮತ್ತು ದೈವಿಕತೆಯೇ ತುಂಬಿರುವ ಆ ಪಾತ್ರ ಚಿಕ್ಕದಾಗಿದ್ದರೂ ನೆನಪಿನಲ್ಲಿ ಉಳಿಯುತ್ತದೆ.
೩. ಛಾಯಾಗ್ರಹಣ: ಅರಣ್ಯದೊಳಗಿನ ಕ್ಯಾಮೆರಾದ ಚಲನೆ ಅದ್ಭುತವಾಗಿದೆ. ಹಾಗೆಯೇ ಕಂಬಳದ ಗದ್ದೆಯೊಳಗೂ ಸಹಾ! ಬೆಳಕು ಮತ್ತು ಕತ್ತಲೆಯ ನಡುವೆ ನಡೆಯುವ ಆಟ ಕಣ್ಣಿಗೆ ಮುದ ನೀಡುತ್ತದೆ. ಕೊನೆಯ ದೃಶ್ಯಗಳಲ್ಲಿ ದೈವದ ಅಬ್ಬರವನ್ನು ಹೇಗೆ ತೋರಿಸಿದೆಯೋ ಅಷ್ಟೇ ಅದ್ಭುತವಾಗಿ ಕೋಲದ ದೈವದ ಕಳೆಯನ್ನೂ ಅಷ್ಟೇ ವರ್ಣರಂಜಿತವಾಗಿ ಕಟ್ಟಿಕೊಟ್ಟಿದೆ.
೪. ಸಂಕಲನ: ಇತ್ತೀಚಿನ ಬಹು ಯಶಸ್ವಿ ಸಿನಿಮಾಗಳಂತೆ ಒಂದು ಸೆಕೆಂಡಿನ ದೃಶ್ಯವನ್ನು ಹತ್ತು ಭಾಗ ಮಾಡದಿರುವುದು ಛಾಯಾಗ್ರಾಹಕರ ಹೆಗ್ಗಳಿಕೆ. ಅವಶ್ಯಕತೆ ಇಲ್ಲದ ಕಡೆ ತಂತ್ರಜ್ಞಾನದ ಹೆಸರಿನಲ್ಲಿ ಕತ್ತರಿ ಹಾಕುವ ಅಂಟಿಸುವ ಅನವಶ್ಯಕ ಕೆಲಸ ಇಲ್ಲಿ ನಡೆದಿಲ್ಲ. ಅದೇ ಸಂಕಲನಕಾರನ ಯಶಸ್ಸು.
೫. ಸಾಹಸ: ಸಂಪೂರ್ಣ ಸಹಜವಾಗಿದೆ. ಗಾಳಿಯಲ್ಲಿ ಹಾರುವ, ಎತ್ತಿ ಕಿಲೋಮೀಟರ್ ದೂರಕ್ಕೆ ಬಿಸಾಡುವ ಅಸಹಜ ಸ್ಟಂಟ್‌ಗಳಿಲ್ಲ. ಸಹಜ ಹೊಡೆದಾಟವನ್ನೇ ರೋಚಕವಾಗಿ ಕಟ್ಟಿಕೊಟ್ಟಿದ್ದಾರೆ. ಕಮ್ಮಾರನ ಅಂಗಡಿಯ ಹೊಡೆದಾಟ ಮತ್ತು ಕಂಬಳ ಗದ್ದೆಯ ಹೊಡೆದಾಟವೆರಡೂ ರೋಚಕವಾಗಿವೆ.
೬. ಸಂಗೀತ: ಚಿತ್ರದ ಮಹತ್ವದ ಅಂಶಗಳಲ್ಲಿ ಒಂದು. ಇಡೀ ಚಿತ್ರದಲ್ಲಿ ಆವರಿಸಿಕೊಳ್ಳುವ ಮೂರು ಹಿನ್ನೆಲೆ ಸಂಗೀತ ಅಥವಾ ಬಿಜಿಎಂ ಅತ್ಯಂತ ಆಕರ್ಷಕವಾಗಿವೆ. ಕಥೆಯ ಓಟಕ್ಕೆ ಪೂರಕವಾಗಿದೆ. ವರಾಹ ರೂಪಂ ಅಂತೂ ಸಿನಿಮಾದ ಕ್ಲೈಮ್ಯಾಕ್ಸ್ ಅನ್ನು ದೈವಿಕತೆಯ ಭಾವಕ್ಕೆ ಏರಿಸುತ್ತದೆ. ಹೀಗಾಗಿ ಈ ಗೀತೆ ಅದಾಗಲೇ ಸೂಪರ್ ಹಿಟ್ ಆಗಿದೆ. ಇನ್ನು ಶಿವ ಹಾಗೂ ಲೀಲಾರ ಪ್ರಣಯ ಸನ್ನಿವೇಶದ ಹಿನ್ನೆಲೆ ಗೀತೆಯೂ ಯುವ ಮನಸ್ಸುಗಳಿಗೆ ಮುದ ನೀಡುತ್ತದೆ.
೭. ಸಂಭಾಷಣೆ: ಸಂಭಾಷಣೆಯು ಭಾಷೆಯ ಕಾರಣದಿಂದ ಎಲ್ಲರಿಗೂ ಅರ್ಥವಾಗುವುದು ಕಷ್ಟ. ಕೆಲವೊಮ್ಮೆ ಅಡಿಯಲ್ಲಿ ಸಬ್ ಟೈಟಲ್ ಕೊಡುವುದರಿಂದ ಅನುಕೂಲವಾಗಿದೆ. ಆದರೆ ಸಹಜವಾಗಿ ಮೂಡಿಬರಬೇಕೆನ್ನುವ ಕಾರಣಕ್ಕೋ ಏನೋ ವೇಗದ ಮಾತುಗಳು ಸ್ಥಳೀಯರಿಗಲ್ಲದೇ ಬೇರೆಯವರಿಗೆ ಅರ್ಥವಾಗದ ಪದಗಳು ಮಧ್ಯೆ ಮಧ್ಯೆ ಪ್ರೇಕ್ಷಕನಿಗೆ ಕಿರಿಕಿರಿ ಮಾಡುವುದು ಸತ್ಯ. ತಮಿಳು, ತೆಲುಗು, ಹಿಂದಿ, ಮಲಯಾಳಂಗೆ ಡಬ್ ಮಾಡಿದಂತೆ ಮೈಸೂರು ಕನ್ನಡಕ್ಕೂ ಡಬ್ ಮಾಡಿದರೆ ಇನ್ನೂ ಚೆನ್ನಾಗಿ ಅರ್ಥವಾಗುತ್ತದೇನೋ ಎನ್ನುವಷ್ಟು ಸಮಸ್ಯೆಯಾಗುತ್ತದೆ. ಆದರೆ ಹಾಗೆ ಮಾಡಿದರೆ ಚಿತ್ರದ ಮೂಲ ಸೊಗಡೇ ಮರೆಯಾಗಿಬಿಡುವ ಅಪಾಯವಿರುತ್ತದೆ. ಹೀಗಾಗಿ ಎರಡು ಮೂರು ಸಲ ಚಿತ್ರ ನೋಡುವುದೊಂದೇ ಚಿತ್ರವನ್ನು ಸಂಪೂರ್ಣ ಅರ್ಥ ಮಾಡಿಕೊಳ್ಳಲು ಇರುವ ಪರಿಹಾರ.
ಇದನ್ನೂ ಓದಿ | ತ್ರಯಸ್ಥ ಅಂಕಣ | ಮೋದಿಯಿಸಂನ ಉಚ್ಛ್ರಾಯ ಕಾಲದಲ್ಲಿ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರಾರು?
೮. ಹಾಸ್ಯ: ಇಡೀ ಸಿನಿಮಾ ಗಂಭೀರ ಕಥೆಯಿಂದ ಕೂಡಿದ್ದರೂ ತಿಳಿ ಹಾಸ್ಯದಿಂದ ತುಂಬಿಹೋಗಿದೆ. ಹೀಗಾಗಿಯೇ ಇಡೀ ಸಿನಿಮಾ ಎಲ್ಲೂ ಬೋರ್ ಆಗುವುದಿಲ್ಲ. ಕೆಲವು ಕಡೆಗಳಲ್ಲಿ ಅಶ್ಲೀಲವೆನಿಸುವ ಸಂಭಾಷಣೆ ಮತ್ತು ಹಾಸ್ಯ ಸನ್ನಿವೇಶಗಳಿದ್ದರೂ ಕಥೆಗೆ ಮತ್ತು ಅಲ್ಲಿನ ಸನ್ನಿವೇಶಕ್ಕೆ ಅದು ಪೂರಕವಾಗಿರುವುದರಿಂದ ನೈಜತೆಯ ಸ್ಪರ್ಶವನ್ನು ನೀಡಿದೆ. ಕಾಡಿನ ಅವಿದ್ಯಾವಂತ ಜನರ ನಡುವೆ ಸಹಜವಾಗಿ ನಡೆಯುವ ಇಂಥಾ ಹಾಸ್ಯಗಳು ಅಶ್ಲೀಲವಾಗಿದ್ದರೂ ಸಹಜವಾಗಿರುವುದರಿಂದ ಅದನ್ನು ತಪ್ಪೆನ್ನಲಾಗದು.
೯. ವೇಷಭೂಷಣ, ಮೇಕಪ್ ಮತ್ತು ಸೆಟ್: ಅದ್ಭುತ ಮತ್ತು ಪರಿಪೂರ್ಣತೆಯನ್ನು ಅವಾಹಿಸಿಕೊಂಡಿದೆ. ದೈವದ ಸುಂದರ ಅರಿಶಿನ ಮುಖಬಣ್ಣ ಮತ್ತು ವೈಭವಯುತ ವೇಷಭೂಷಣ ಹಾಗೂ ಆಭರಣದಷ್ಟೇ ಸುಂದರವಾಗಿ ಕಂಬಳದಲ್ಲಿ ಓಡುವಾಗ ಶಿವನ ಬಾಯ ಕೆಂಪು ಮತ್ತು ಹಲ್ಲಿನ ಹಳದಿ ಅತ್ಯಂತ ಸಹಜವಾಗಿ ತೋರಿಸಲ್ಪಟ್ಟಿದೆ. ಧಣಿಯ ಶುಭ್ರ ಬಟ್ಟೆ, ಗುರುವನ ಶ್ವೇತವಸ್ತ್ರ, ಶಿವನ ತಾಯಿಯ ಹರಿದ ಕೊಳಕು ಬಟ್ಟೆ ಮತ್ತು ಲೀಲಾಳ ಡೀಗ್ಲಾಮರಸ್ ಮುಖದ ಬಣ್ಣ ಅನೇಕ ಸಣ್ಣ ಸಣ್ಣ ಸಂಗತಿಗಳನ್ನು ಹೇಳುವ ಮೂಲಕ ಚಿತ್ರಕ್ಕೆ ನೈಜತೆ ಮತ್ತು ಸಹಜತೆಗಳ ಉಡುಗೊರೆ ನೀಡಿದೆ. ಹಳ್ಳಿಯ ಮನೆಗಳು, ರಸ್ತೆಗಳು, ಕೈಲಾಸವೆಂಬ ಮರದ ಮೇಲಿನ ಅಟ್ಟಣಿಗೆ ಎಲ್ಲವೂ ನೈಜ ಮತ್ತು ಸುಂದರ.
೧೦. ನೀತಿ: ದುಷ್ಟರಿಗೆ ಶಿಕ್ಷೆ ಶಿಷ್ಟರಿಗೆ ರಕ್ಷೆ. ಸತ್ಯಮೇವ ಜಯತೇ ಎಂಬ ಸನಾತನ ಸತ್ಯವನ್ನು ಸಿನಿಮಾದ ಮೂಲಕ ಸಾರಲಾಗಿದೆ. ನಂಬಿದ ದೈವ ನಂಬಿದವರನ್ನು ಖಂಡಿತಾ ಕಾಯುತ್ತದೆ ಎಂಬ ಕರಾವಳಿ ಮಾತ್ರವಲ್ಲದೇ ಭಾರತೀಯ ಅಥವಾ ವಿಶ್ವದ ಆಸ್ತಿಕ ಸಮುದಾಯದ ನಂಬಿಕೆ ಚಿತ್ರದಲ್ಲಿ ಪ್ರತಿಧ್ವನಿಸಿದೆ. ಹಿಂದು ಧರ್ಮದ ವಿಶಿಷ್ಠ ನಂಬಿಕೆಯಾದ ವೈಜ್ಞಾನಿಕ ಕರ್ಮ ಸಿದ್ಧಾಂತ ಈ ಕಥೆಯಲ್ಲಿ ಸತ್ಯವೆಂದು ನಿರೂಪಿಸಲ್ಪಟ್ಟು ಪ್ರೇಕ್ಷಕರ ನಂಬಿಕೆ ಹಾಗೂ ಭಾವನೆಗಳ ಬೇರುಗಳನ್ನು ಗಟ್ಟಿಗೊಳಿಸುತ್ತದೆ. ಚಿತ್ರದ ಕೊನೆಗೆ ಪ್ರೇಕ್ಷಕರು ಸ್ವಯಂಪ್ರೇರಿತರಾಗಿ ತಮಗರಿವಿಲ್ಲದೇ ಜೋರಾಗಿ ತಟ್ಟುವ ಚಪ್ಪಾಳೆಗಳೇ ಇದಕ್ಕೆ ಸಾಕ್ಷಿ. ಇನ್ನು ಚಿತ್ರದಲ್ಲಿ ಮಾರ್ಮಿಕವಾಗಿ ತೋರಿರುವ ಸಮಾಜದ ಮೇಲು ಕೀಳು ಭಾವನೆಯ ಕುರಿತಾದ ದೃಶ್ಯ ಮತ್ತು ಸಂಭಾಷಣೆಗಳು ಮಾರ್ಮಿಕವಾಗಿವೆ. ಧಣಿಗಳು ಸಾಮಾನ್ಯ ಜನರನ್ನು ತಮ್ಮ ಸ್ವಾರ್ಥಕ್ಕಾಗಿ ಉಪಯೋಗಿಸಿಕೊಳ್ಳುವುದು. ಮನುಷ್ಯನನ್ನು ನಾಯಿಯಂತೆ ಕಾಣುವುದು. ಶಿವ ಧಣಿಯ ಮನೆಯೊಳಗೆ ಪ್ರವೇಶ ಮಾಡಿ ಅವನ ಸಮ ಕೂತು ಊಟ ಮಾಡಿ ಅದಕ್ಕೆಲ್ಲಾ ಉತ್ತರ ನೀಡುವ ಬಂಡಾಯಗಾರನಂತೆ ಕಂಡರೂ ಅದರ ಗೂಡಾರ್ಥ ಬೇರೆ ಇದೆ. ದೈವಾಕರ್ಷಣೆಯಾದ ನಂತರದ “ಶುದ್ಧ”ವಾದ ಶಿವನ ಕೈಲಿ ಈ ಕೆಲಸವನ್ನು ಮಾಡಿ ತೋರಿಸುವ ಮೂಲಕ ದೇವರಿಗೆ ಅಥವಾ ದೈವಕ್ಕೆ ಜಾತಿಬೇಧ ಇನ್ನಿತರ ಯಾವುದೇ ಬೇಧಭಾವಗಳಿಲ್ಲ ಇದೆಲ್ಲಾ ಮನುಷ್ಯ ತಾನೇ ಸೃಷ್ಟಿಸಿಕೊಂಡಿರುವುದಷ್ಟೇ ಎನ್ನುವುದನ್ನು ಪ್ರತಿಪಾದಿಸುವುದೇ ಆಗಿದೆ. ಕೊಟ್ಟ ಮಾತಿಗೆ ತಪ್ಪುವುದು ಇಂದಿನ ಆಧುನಿಕ ಯುಗದಲ್ಲಿ ಸರ್ವೇಸಾಮಾನ್ಯವಾಗಿದ್ದರೂ, ಅದೆಲ್ಲಕ್ಕೂ ಮೀರಿದ ಸದಾ ಕಾಲ ಉಳಿಯುವ ಸರ್ವಕಾಲಿಕ ಸತ್ಯ ಮತ್ತು ಮೌಲ್ಯವೊಂದಿರುತ್ತದೆ ಎಂಬುದನ್ನು ಚಿತ್ರದ ಮೂಲಕ ತೋರಿಸಿ ಸಮಾಜಕ್ಕೆ ಉತ್ತಮವಾದ ಸಂದೇಶ ನೀಡಿದೆ.
ಇದನ್ನೂ ಓದಿ | Kantara Movie | ವರ್ಲ್ಡ್ ಆಫ್ ಕಾಂತಾರ -ಭಾಗ 1 ವಿಡಿಯೊ ಹಂಚಿಕೊಂಡ ಹೊಂಬಾಳೆ : ಕಂಬಳ ಪ್ರಮುಖ ಹೈಲೈಟ್!
ಇನ್ನುಳಿದಂತೆ, ಎಲ್ಲ ಚಿತ್ರಗಳಂತೆ ಈ ಚಿತ್ರವೂ ನ್ಯೂನತೆಗೆ ಹೊರತಾದುದೇನಲ್ಲ. ಮೊದಲನೇ ನ್ಯೂನತೆ ಏನೆಂದರೆ ಚಿತ್ರದ ವಾರಸುದಾರರೆಂದು ಭಾವಿಸುತ್ತಿರುವ ಸ್ಥಳೀಯರೇ ಆಗಿದ್ದಾರೆ. ತಮಗೆ ಇಷ್ಟವಾದ ಚಿತ್ರ ಜಗತ್ತಿಗೇ ಇಷ್ಟವಾಗಬೇಕೆನ್ನುವ ಮನಸ್ಥಿತಿಯೇ ಮತಾಂಧತೆಯಾಗಿದೆ. ಹೇಗೆ ಕೆಲವು ಸಿನಿಮಾ ನಟರ ಭಕ್ತರು, ಟೀಕೆ ಅಥವಾ ವಿಮರ್ಶೆಗೆ ಸಲುವಾಗಿ ತಮ್ಮ ನೆಚ್ಚಿನ ನಟನ ಹೆಸರೆತ್ತಿದರೂ ಉರಿದು ಬೀಳುತ್ತಾರೋ ಹಾಗೆ ಕೆಲವರು ಈ ಸಿನಿಮಾದ ವಿಮರ್ಶೆಗೂ ಅವಕಾಶ ನೀಡದಂತೆ ಮುಗಿಬೀಳುತ್ತಿರುವುದು ಚಿತ್ರಕ್ಕೆ ಹಿನ್ನಡೆಯನ್ನು ತರುತ್ತದೆಯೇ ಹೊರತು ಮುನ್ನಡೆಯನ್ನಲ್ಲ. ವೈವಿಧ್ಯತೆಯನ್ನು ಗೌರವಿಸಿದಾಗ ಮಾತ್ರ ನಮ್ಮ ಸಂಸ್ಕೃತಿ ಪರರಿಗೆ ಇಷ್ಟವಾಗುತ್ತದೆಯೇ ಹೊರತು ಹೇರಿಕೆ ಅಥವಾ ಒತ್ತಾಯದ ಮೂಲಕವಲ್ಲ ಎಂಬುದನ್ನು ಅಭಿಮಾನಿ ದೇವರುಗಳು ಅರ್ಥ ಮಾಡಿಕೊಳ್ಳಬೇಕಾಗಿದೆ! ಇದು ಚಿತ್ರಕ್ಕೆ ಅಥವಾ ಚಿತ್ರತಂಡಕ್ಕೆ ಸಂಬಂಧಿಸಿಲ್ಲವಾದರೂ ಈ ಥರದ ಅಭಿಮಾನಿಗಳ ಅತಿರೇಕದ ನಡೆಗಳು ಚಿತ್ರಕ್ಕೆ ಸಲ್ಲುವ ಪೂರ್ಣ ಗೌರವವನ್ನು ಕಳಂಕಿತಗೊಳಿಸುತ್ತದೆ. ಅದು ಕೆಜಿಎಫ್ ಇರಬಹುದು, ವಿಕ್ರಾಂತ್ ರೋಣ ಇರಬಹುದು ಅಥವಾ ಕಾಂತಾರವೇ ಇರಬಹುದು. ಕೆಲವರಿಗೆ ಇಷ್ಟವಾಗಬಹುದು ಇಷ್ಟವಾಗದೇ ಇರಬಹುದು ಅದನ್ನು ಒಪ್ಪುವ ಅಥವಾ ಅದನ್ನು ಬದಿಗಿಡುವ ಸೌಜನ್ಯ ನಮ್ಮ ಸಂಸ್ಕೃತಿಗೆ ಇನ್ನಷ್ಟು ಗೌರವ ತಂದುಕೊಡುತ್ತದೆ.
ಯಾವ ಚಿತ್ರವೇ ಆಗಲಿ ಅದು ಸಮಾಜಸೇವೆ ಮಾಡುವುದಿಲ್ಲ. ಅದರಲ್ಲೂ ಇತ್ತೀಚಿಗಂತೂ ಹಣಗಳಿಕೆಯೇ ಪ್ರಧಾನವಾಗಿರುತ್ತದೆ. ದೊಡ್ಡ ಮನಸ್ಸು ಮಾಡಿ ಕಲಾವಿದರೋ ನಿರ್ದೇಶಕರೋ ಪ್ಯಾಶನ್‌ಗೆ ಮಾಡಿದ್ದಾರೆ ಎಂದುಕೊಂಡುಬಿಟ್ಟರೂ ಚಿತ್ರಕ್ಕೆ ಹಣ ಹೂಡಿದ ನಿರ್ಮಾಪಕ ಅಥವಾ ನಿರ್ಮಾಣ ಸಂಸ್ಥೆಯು ಸಮಾಜೋದ್ಧಾರವನ್ನೇ ಪ್ರಧಾನವನ್ನಾಗಿಸಿಕೊಂಡು ಚಿತ್ರ ಮಾಡಿರುವುದಿಲ್ಲ. ಹೀಗಾಗಿ ಜನಸಾಮಾನ್ಯರೇ ಯಾವುದೋ ಭಾವನಾತ್ಮಕ ಕಾರಣಗಳನ್ನಿಟ್ಟುಕೊಂಡು ಚಿತ್ರದ ಗೆಲುವಿಗಾಗಿ ಕಾಲಾಳುಗಳಂತೆ ಬಡಿದಾಡುವುದು ಅಷ್ಟು ಸೆನ್ಸಿಬಲ್ ಅನ್ನಿಸುವುದಿಲ್ಲ. ಈ ಚಿತ್ರದ ಮೂಲಕ ರಿಷಬ್ ಶೆಟ್ಟಿಯವರು ಹಿಂದು ಧರ್ಮದ ಪುನರುತ್ಥಾನ ಮಾಡಿಬಿಟ್ಟರು ಎನ್ನುವಷ್ಟು ಮರುಳಾಗುವುದು ಪ್ರಾಕ್ಟಿಕಲ್ ಅಲ್ಲ. ಅಭಿಮಾನದ ಅತಿರೇಕ ಕೆಲವೊಮ್ಮೆ ಹಾಗೆ ಮಾಡಿಸುತ್ತದೆ. ಆದರೆ ಬುದ್ಧಿವಂತ ಜನರಾದರೂ ಇದರಿಂದ ಹೊರಗಿರಲಿ ಎಂಬುದಷ್ಟೇ ಬಯಕೆ. ಪೇಯ್ಡ್ ರಿವ್ಯೂಗಳು, ಪೇಯ್ಡ್ ಪ್ರಚಾರಗಳು ಇಂದು ಸೋಷಿಯಲ್ ಮೀಡಿಯಾವನ್ನೂ ಬಿಟ್ಟಿಲ್ಲ. ಟ್ರೋಲರ್‌ಗಳನ್ನು ಇನ್ಫ್ಲೂಯೆನ್ಸರ್‌ಗಳನ್ನು ಖರೀದಿಸುವ ಕಾಲ ಆರಂಭವಾಗಿ ಅದ್ಯಾವುದೋ ಕಾಲವಾಗಿದೆ. ಮೂವಿ ಪ್ರಮೋಷನ್‌ಗಳು ಟಿವಿಯಲ್ಲಿ ಬರುವ ಜಾಹಿರಾತುಗಳಷ್ಟೇ ಹಗುರವಾಗಿಬಿಟ್ಟಿವೆ. ಇಂತಹಾ ಸಂದರ್ಭದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಬಂದದ್ದೇ ಸತ್ಯವೆಂದುಕೊಳ್ಳುವುದು ದಡ್ಡತನ ಅಥವಾ ಒಳ್ಳೆಯ ಪದಗಳಲ್ಲಿ ಹೇಳುವುದಾದರೆ ಮುಗ್ಧತೆಯಷ್ಟೇ. ಬಹುಶಃ ರಿಷಬ್ ಕಾಲಿಗೆ ಬಿದ್ದು ನನ್ನ ಗರ್ಲ್‌ಫ್ರೆಂಡ್‌ಗಿಂತಾ ನೀವೇ ಇಷ್ಟ ಎನ್ನುವ ಯೂಟ್ಯೂಬರ್ ಸ್ವತಃ ರಿಷಬ್‌ಗೇ ಮುಜುಗರವುಂಟುಮಾಡಿರಬಹುದು! ಇನ್ನು ಈ ಘಟನೆಯಲ್ಲಿ ಹಿಂದಿ ಯೂಟ್ಯೂಬರ್‌ನನ್ನು ಸಮಸ್ತ ಬಾಲಿವುಡ್ ಗೆ ಹೋಲಿಸಿ ಸ್ಯಾಂಡಲ್‌ವುಡ್ ಕಾಲಿಗೆ ಬಿದ್ದ ಬಾಲಿವುಡ್ ಎಂಬಂತೆ ಚಿತ್ರಿಸುತ್ತಿರುವ ಅಭಿಮಾನಿ ವರ್ಗ ಕೆಜಿಎಫ್ ಅನ್ನು ಹಾಡಿ ಹೊಗಳಿದ ಸೈಕ್ ನವಾಜ್, ತಂದಾನಿತಾನೇ, ಇನ್ನೊಬ್ಬ ಬ್ರದರ್‌ಗಳು ಆಮೇಲೆ ಇನ್ನೂ ಎಂಥೆಂಥಾ ಚಿತ್ರಗಳಿಗೆ ಪೇಯ್ಡ್ ಪ್ರಚಾರ ಕೊಟ್ಟರು ಎಂಬುದನ್ನು ಗಮನಿಸಬೇಕು! ಈ ಥರದ ಪ್ರಚಾರಗಳನ್ನು ಕೇಳಿ ನೋಡಿ ಓದಿ ಹೋಗಿದ್ದರಿಂದ ಮೊದಲ ಸಲ ಚಿತ್ರ ನೋಡಿದಾಗ ನಿರಾಶೆಯಾಯಿತು. ಅಸಹಜವಾದ ನಿರೀಕ್ಷೆಗಳ ಉದ್ದೀಪನೆ ಒಳ್ಳೆಯ ಚಿತ್ರಕ್ಕೆ ನಿಜಕ್ಕೂ ಹಿನ್ನಡೆ ತರುತ್ತದೆ.
ಇನ್ನುಳಿದಂತೆ ಚಿತ್ರದಲ್ಲಿ ನನಗೆ ಕೊರತೆ ಅನ್ನಿಸಿದ್ದು ಅರಣ್ಯಾಧಿಕಾರಿಯ ಪಾತ್ರವೊಂದೇ. ಶಿವನನ್ನು ಮುಖ್ಯ ಪಾತ್ರವಾಗಿಸುವ ಹಂಬಲದಲ್ಲೋ ಅಥವಾ ಕಥೆಯನ್ನು ಸರಿದೂಗಿಸುವ ಪ್ರಯತ್ನದಲ್ಲೋ ಅರಣ್ಯಾಧಿಕಾರಿಯ ಪಾತ್ರ ಪದೇ ಪದೇ ಆರಕ್ಕೇರಿ ಮೂರಕ್ಕಿಳಿಯುವ ಪಾತ್ರವಾಗಿ ಹೋಗಿದೆ. ಶಿವನಿಗೆ ಕೊಟ್ಟ ಹೀರೋಯಿಸಂ ಅನ್ನು ಅಷ್ಟೇ ಪ್ರಧಾನ ಪಾತ್ರವಾಗಿದ್ದ ಮುರಳಿ ಪಾತ್ರಕ್ಕೆ ಕೊಟ್ಟಂತೆ ಮಾಡಿ, ಕೊಡುವ ಹಂತಕ್ಕೆ ಹೋಗಿ, ಮತ್ತೆ ವಾಪಾಸು ತೆಗೆದುಕೊಂಡಂತೆ ಅನಿಸುತ್ತದೆ. ಇಡೀ ಚಿತ್ರ ಸಂಪೂರ್ಣ ಲಾಜಿಕಲ್ಲಾಗಿ ಇರುವಾಗ ಕ್ಲೈಮ್ಯಾಕ್ಸ್‌ನಲ್ಲಿ ಊರವರ ಸಶಸ್ತ್ರ ಹೋರಾಟದಲ್ಲಿ ಅರಣ್ಯಾಧಿಕಾರಿಯ ಸೇರ್ಪಡೆ ಸ್ವಲ್ಪ ಇಂಪ್ರಾಕ್ಟಿಕಲ್ ಅಥವಾ ಇಲ್ಲಾಜಿಕಲ್ ಅನ್ನಿಸಿತು. ನಿರ್ದೇಶಕರು ಇದಕ್ಕೆ ಚಿತ್ರದಲ್ಲೇ ಒಂದು ಚಿಕ್ಕ ಸ್ಪಷ್ಟನೆಯನ್ನೋ ಲಾಜಿಕ್ಕನ್ನೋ ಸೇರಿಸಿದ್ದಿದ್ದರೆ ಇನ್ನಷ್ಟು ಪೂರ್ಣವಾಗುತ್ತಿತ್ತೇನೋ ಅನ್ನಿಸಿತು. ಹಾಗೆಯೇ ಶಿವ ಮತ್ತು ಅರಣ್ಯಾಧಿಕಾರಿಯ ಕಾಂಪ್ರಮೈಸ್ ದೃಶ್ಯ ಪರಿಣಾಮಕಾರಿಯಾಗಲು ಇನ್ನಷ್ಟು ಸಮಯ ಬೇಕಿತ್ತು. ಆದರೆ ಅದು ಚುಟುಕಾಯಿತು ಎನಿಸಿತು. ಇವೆಲ್ಲವೂ ವೈಯಕ್ತಿಕ ಅಭಿಪ್ರಾಯಗಳು. ನೂರಕ್ಕೆ ನೂರು ಸರಿ ಅಂತಲೂ ಅಲ್ಲ. ಎಲ್ಲರಿಗೂ ಒಪ್ಪಿಗೆಯಾಗಬೇಕೆಂದೂ ಇಲ್ಲ.
ಅದು ಬಿಟ್ಟರೆ ಇಡೀ ಸಿನಿಮಾ ಆವರಿಸಿಕೊಳ್ಳುವ ಎಣ್ಣೆ ಮತ್ತು ಬೀಡಿಗಳು ಕಥೆಗೆ ಪಾತ್ರಕ್ಕೆ ಪೂರಕವಾಗಿ ಬೇಕಿತ್ತು ಹಾಗಾಗಿ ತಪ್ಪೆನ್ನಲಾಗುವುದಿಲ್ಲ. ಆದರೆ ಕೊನೆಯಲ್ಲಿ ಧಣಿ ನೀಡುವ ಹೆಂಡವನ್ನು ನಿರಾಕರಿಸಿ “ಶುದ್ಧವಾಗಿದ್ದೇನೆ ಆದ್ದರಿಂದ ಮುಟ್ಟುವುದಿಲ್ಲ” ಎಂಬ ಡೈಲಾಗ್ ಇಡೀ ಸಿನಿಮಾದಿಂದ ಮದ್ಯಪಾನ ವಿರೋಧಿ ಸಂದೇಶವನ್ನು ಹೊರಡಿಸಿದೆ. ಇದು ಮೆಚ್ಚತಕ್ಕ ಅಂಶ. ಇನ್ನು ನಾಯಕ ನಾಯಕಿಯ ಪ್ರಣಯ ಸನ್ನಿವೇಶಗಳೂ ಸಹಾ ಕಥೆಗೆ ಪೂರಕವಾಗಿಯೇ ಇದ್ದು, ಮಕ್ಕಳನ್ನು ಬಿಟ್ಟು ಯುವಕರು ಮತ್ತು ವಯಸ್ಕರು ಅಸ್ವಾದಿಸಬಹುದಾಗಿದೆ.
ಒಟ್ಟಿನಲ್ಲಿ ಕಾಂತಾರ ಸಿನಿಮಾ ಒಂದು ಸುಂದರ ಚಿತ್ರವಾಗಿದ್ದು ಕೆಜಿಎಫ್‌ಗಿಂತ ಹತ್ತಾರು ಪಟ್ಟು ಸುಂದರವಾಗಿದೆ. ಇದು ಬಹಳ ಕಾಲ ಸಿನಿಪ್ರಿಯರ ಮನಸ್ಸಿನಲ್ಲಿ ಉಳಿದುಕೊಳ್ಳುವುದಷ್ಟೇ ಅಲ್ಲದೇ, ಭಾರತೀಯರ ವೈವಿಧ್ಯಮಯ ನಂಬಿಕೆಗಳ ಬೇರುಗಳನ್ನು ಗಟ್ಟಿಗೊಳಿಸುವಲ್ಲಿಯೂ ತನ್ನದೇ ಆದ ಕೊಡುಗೆಯನ್ನು ನೀಡಿದೆ. ಕನ್ನಡ ಸಿನಿಮಾ ರಂಗವನ್ನು ಜಗತ್ತು ತಿರುಗಿ ನೋಡುವಂತೆ ಮಾಡಿದೆ. ಜೊತೆಗೆ ರಿಷಬ್ ಶೆಟ್ಟಿ ಎಂಬ ಕಲಾದೈತ್ಯನ ಮೇಲೆ ಹೊಸಾ ಭರವಸೆಗಳನ್ನು ಕನಸುಗಳನ್ನೂ ನಿರೀಕ್ಷೆಗಳನ್ನೂ ಕಟ್ಟುವಂತಾಗಿದೆ. ಕಂಗ್ರಾಟ್ಸ್ ರಿಷಬ್ ಶೆಟ್ಟಿಯವರೇ!