Site icon Vistara News

Karnataka Election 2023: ಚುನಾವಣೆ ಅಶಯ: ಕಳೆಯಿಲ್ಲದ ಕರಾವಳಿ ಕರ್ನಾಟಕ ಹೊಳೆಯುವುದು ಹೇಗೆ?

coastal karnataka

:: ಡಾ.ಜಿ.ವಿ. ಜೋಶಿ

ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ –ಹೀಗೆ ಮೂರು ಜಿಲ್ಲೆಗಳನ್ನೊಳಗೊಂಡ ಕರಾವಳಿ ಕರ್ನಾಟಕ ಅಭಿವೃದ್ಧಿ ಗುರಿಯುಳ್ಳ ನೂರು ಕನಸುಗಳನ್ನು ಹೊಂದಿದ್ದರೂ ಈಗ ಕಳಾಹೀನವಾದ ಪ್ರದೇಶವಾಗಿ ಬಿದ್ದುಕೊಂಡಿರುವುದು ವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಇಡೀ ಕರ್ನಾಟಕ ರಾಜ್ಯದ ಪಾಲಿಗೆ ಒಂದು ಹಿನ್ನಡೆಯೆಂದೇ ಹೇಳಬೇಕಾಗಿದೆ. ನೋವು ಹುಟ್ಟಿಸುವ ಸಂಗತಿಯೆಂದರೆ ಉಡುಪಿ ಮತ್ತು ದ.ಕ ಜಿಲ್ಲೆಯ ಜನರ ಪಾಲಿಗೆ ಈ ಎರಡು ಜಿಲ್ಲೆಗಳು ಮಾತ್ರ ಕರಾವಳಿ ಜಿಲ್ಲೆಗಳು. ಉತ್ತರ ಕನ್ನಡವನ್ನು ಕರಾವಳಿ ಜಿಲ್ಲೆಯೆಂದು ಭಾವಿಸುವ ಗೋಜಿಗೇ ಅವರು ಹೋಗುವುದಿಲ್ಲ. ಮೂರೂ ಜಿಲ್ಲೆಗಳನ್ನು ತನ್ನ ಕಾರ್ಯಕ್ಷೇತ್ರದಲ್ಲಿ ಸೇರಿಸಿಕೊಂಡ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಯಾಗಿ ಹದಿನೈದು ವರ್ಷಗಳ ನಂತರವೂ ಈ ಸ್ಥಿತಿ ಮುಂದುವರಿಯುತ್ತಿರುವುದು ರಾಮಕೃಷ್ಣ ಹೆಗಡೆಯವರ೦ಥ ವಿಶಾಲವಾದ ಅಭಿವೃದ್ಧಿ ದೃಷ್ಟಿಕೋನ ಹೊಂದಿದ್ದ ಮಹಾ ನಾಯಕನಿಗೆ ಜನ್ಮ ಕೊಟ್ಟರೂ ಉ.ಕ ಒಂದು ನತದೃಷ್ಟ ಜಿಲ್ಲೆ ಎನ್ನುವುದಕ್ಕೆ ಮತ್ತೊಂದು ಸಾಕ್ಷಿ.

ಮೂರೂ ಜಿಲ್ಲೆಗಳ ಚಿತ್ರಣ ನೀಡುವ ಮಾನವ ಅಭಿವೃದ್ಧಿ ವರದಿಗಳು ಕೈಗಾರಿಕಾ ಅಭಿವೃದ್ಧಿಗಿರುವ ಅವಕಾಶಗಳನ್ನು, ಸಮಸ್ಯೆಗಳನ್ನು ಪರಿಚಯಿಸಿವೆ. ಅಧಿಕ ಕೈಗಾರಿಕಾ ವಲಯಗಳ ಸ್ಥಾಪನೆ, ಕೃಷಿ ಆಧಾರಿತ ಕೈಗಾರಿಕೆಗಳಿಗಿರುವ ಅವಕಾಶ, ಕೃಷಿ ರಫ್ತು ವಲಯಗಳ ಸ್ಥಾಪನೆ, ಗೋಡಂಬಿ ಸಂಸ್ಕರಣಾಗಾರಗಳ ವಿಸ್ತರಣೆ ಮತ್ತು ಸೇವಾವಲಯಾಧಾರಿತ ಕೈಗಾರಿಕೆಗಳ ಸುಧಾರಣೆ- ಹೀಗೆ ಹಲವು ಹೂಡಿಕೆ ಅವಕಾಶಗಳು ನವೋದ್ಯಮಿಗಳಿಗಿವೆಯೆಂದು ಮಾನವ ಅಭಿವೃದ್ಧಿ ವರದಿಗಳು ಸಾರಿ ಹೇಳಿದ್ದು ಹೌದು. ಆದರೆ ವಾಸ್ತವದಲ್ಲಿ ನವೋದ್ಯಮಗಳು ಹುಟ್ಟಿ ಕೆಲವೇ ದಿನಗಳಲ್ಲಿ ಕಣ್ಮರೆಯಾಗುತ್ತಿರುವ ನಿಜ ಸಂಗತಿಯನ್ನು ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿರುವ ಸಂಬಂಧಪಟ್ಟ ವಿಭಾಗ ನೀಡುವ ಅಂಕಿ-ಅಂಶಗಳು ತೆರೆದಿಡುತ್ತವೆ.

ಹೊಸ ಉದ್ಯಮಗಳಿಗೆ ನೀರು ಪೂರೈಸುವುದೇ ದೊಡ್ಡ ಕಷ್ಟ. ಬಯಲುಸೀಮೆಗೆ ಕುಡಿಯುವ ನೀರು ಒದಗಿಸಲಿರುವ, ಅವೈಜ್ಞಾನಿಕವಾದ ದಿನ ಕಳೆದಂತೆ ರಾಜ್ಯದ ಬೊಕ್ಕಸಕ್ಕೆ ಭಾರವಾಗುತ್ತಿರುವ ಎತ್ತಿನ ಹೊಳೆ ಯೋಜನೆ ಭರಾಟೆಯಲ್ಲಿ ಸಾಗುತ್ತಿದೆ. ಆದರೆ ಕರಾವಳಿ ಕರ್ನಾಟಕದಲ್ಲಿ ಕುಡಿಯುವ ನೀರಿಗಾಗಿ ಈಗಂತೂ ಜನಸಾಮಾನ್ಯರು ಪರದಾಡುವಂತಾಗಿದೆ. ವರಾಹಿ ಯೋಜನೆ ಕುಂಟುತ್ತ ಸಾಗುತ್ತಿರುವುದನ್ನು ಜನಸಾಮಾನ್ಯರು ನೋಡುವಂತಾಗಿ ಹೋಯಿತು. ಈ ತನಕ ಮಳೆಯಿಲ್ಲದೆ, ನೀರಿನ ತೀವ್ರ ಅಭಾವದಿಂದ ಅಡಿಕೆ ಕೃಷಿ ಕರಾವಳಿ ಕರ್ನಾಟಕದ ಮೂರೂ ಜಿಲ್ಲೆಗಳಲ್ಲಿ ಸೊರಗುತ್ತಿರುವುದು ಕೊರಗು ಹುಟ್ಟಿಸುವ ಸತ್ಯ. ಎತ್ತಿನಹೊಳೆ ಯೋಜನೆಯಿಂದ ಯಾವ ಸಮಸ್ಯೆಯೂ ಇಲ್ಲವೆಂದು ಕರಾವಳಿ ಕರ್ನಾಟಕದವರೇ ಆದ ಕಾಂಗ್ರೆಸ್‌ ಪಕ್ಷಕ್ಕೆ ಸೇರಿದ ಮಾಜಿ ಚೀಫ್‌ ಮಿನಿಸ್ಟರ್ ಒಬ್ಬರು ತೀರ ಇತ್ತೀಚೆಗೆ, ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿರುವಾಗಲೇ ಹೇಳಿ ಕೈತೊಳೆದುಕೊಂಡು ಬಿಟ್ಟರು, ಇಲ್ಲಿಯ ಶ್ರೀಸಾಮಾನ್ಯರಿಗೆ ಕಾಲು ತೊಳೆದುಕೊಳ್ಳಲು ಬೇಕಾದ ನೀರಿಗೂ ತತ್ವಾರವಾದಾಗಲೇ!

ಇದನ್ನೂ ಓದಿ: Fiscal Deficit: ಮೂಲೆಗೆ ಸರಿದ ವಿತ್ತೀಯ ಹೊಣೆಗಾರಿಕೆ ಮತ್ತು ನಿರ್ವಹಣೆ ಕಾನೂನು

ರಾಜ್ಯದ ವಾರ್ಷಿಕ ಆರ್ಥಿಕ ಸಮೀಕ್ಷೆ ವಾಡಿಕೆಯಂತೆ ರಸ್ತೆ, ಪ್ರವಾಸೋದ್ಯಮ, ಬಂದರು, ಉದ್ದಿಮೆ, ತಂತ್ರಜ್ಞಾನ ಪಾರ್ಕ್, ಮೇಲು ಸೇತುವೆಗಳು…ಹೀಗೆ ಕೆಲವು ವಿಷಯಗಳಿಗೆ ಹೊಂದಿಕೆಯಾಗುವ ಭವಿತವ್ಯದ ಪ್ರಾಜೆಕ್ಟ್‌ಗಳನ್ನು ಗುರುತಿಸುವುದು ಕೇವಲ ಸಲಹಾ ಸಮಿತಿಯಾಗಿರುವ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ (ಕಅಪ್ರಾ) ಪ್ರಥಮ ಉದ್ದೇಶ. ಈ ಪ್ರಾಜೆಕ್ಟ್‌ಗಳನ್ನು ರಾಜ್ಯಮಟ್ಟದ ಯೋಜನೆಯೊಳಗೆ ಸೇರಿಸುವಂತೆ ಶಿಫಾರಸು ಮಾಡುವುದು ಮತ್ತೊಂದು ಉದ್ದೇಶ. ಇಂತಹ ಯೋಜನೆಗಳ ಕಾಲಮಿತಿ ಅನುಷ್ಠಾನಕ್ಕಾಗಿ ಬೇಕಾದ ಕ್ರಮಗಳನ್ನು ತೆಗೆದುಕೊಳ್ಳುವ ಅಧಿಕಾರ ಕಅಪ್ರಾಕ್ಕೆ ಇದೆಯೆಂಬ ಭಾವನೆ ಸರಕಾರದ ದಾಖಲೆಗಳನ್ನು ಓದಿದಾಗ ಬರುತ್ತದೆ. ಆದರೆ ವಾಸ್ತವದಲ್ಲಿ ರಾಜ್ಯದಲ್ಲಿ ಓಲೈಕೆ ರಾಜಕೀಯದ ಭಾಗವಾಗಿ ಹೇಗೋ ಹುಟ್ಟಿಕೊಂಡು ಹೇಗೋ ಜೀವಂತವಾಗಿರುವ ಪ್ರಾಧಿಕಾರಗಳಲ್ಲಿ ಕಅಪ್ರಾವೂ ಒಂದಾಗಿದೆ. ಕರಾವಳಿ ಕರ್ನಾಟಕದ ಜಿಲ್ಲಾಧಿಕಾರಿಗಳಿಗಾಗಲಿ. ಉಸ್ತುವಾರಿ ಸಚಿವರಿಗಾಗಲಿ, ಶಾಸಕರಿಗಾಗಲಿ ಕಅಪ್ರಾ ಲೆಕ್ಕಕ್ಕೇ ಇಲ್ಲ.

ಸುಮಾರು ಒಂದು ದಶಕದ ಹಿಂದೆ ಮೀನು ಮಾರುಕಟ್ಟೆ ನಿರ್ಮಾಣದಲ್ಲಿ ಕಅಪ್ರಾ ಕೆಲಸ ಮಾಡಿದ್ದು ಸತ್ಯವಾದರೂ ನಂತರ ರಾಜ್ಯ ಆಡಳಿತದ ಅವಗಣನೆಗೆ ಗುರಿಯಾದ ಅದು ಈಗ ನೀರಿನಿಂದ ಹೊರಗೆ ಬಿದ್ದ ಮೀನಿನಂತೆ ಚಡಪಡಿಸುತ್ತಿದೆ. ಮೂರು ಜಿಲ್ಲೆಗಳಲ್ಲಿ ಒಟ್ಟು 207 ಅಭಿವೃದ್ಧಿ ಕಾರ್ಯಗಳಿಗೆ 2022-23ನೇ ಸಾಲಿನಲ್ಲಿ ಮ೦ಜೂರಾದ ಹಣ ಕೇವಲ 35 ಕೋಟಿ ರೂ.ಗಳು ಎಂದು ಕಅಪ್ರಾದ ಅಧ್ಯಕ್ಷರು ಬಹಿರಂಗ ಪಡಿಸಿದ್ದರು. ವಾದ-ವಿವಾದಗಳೇನೇ ಇರಲಿ, ಇದೊಂದೇ ಸಾಕು ಕಅಪ್ರಾ ಇದ್ದೂ ಇಲ್ಲವಾಗಿದೆಯೆಂಬ ನಗ್ನ ಸತ್ಯದ ದರ್ಶನ ಮಾಡಿಸಲು! ಆದರೆ ಚುನಾವಣೆ ಸಮಯದಲ್ಲೂ ಇದೆಲ್ಲ ಚರ್ಚೆಗೆ ಬರುವುದೇ ಇಲ್ಲ.

ಕರಾವಳಿ ಕರ್ನಾಟಕ ಭತ್ತದ ಕೃಷಿಗೆ ಹೆಸರಾಗಿತ್ತೆಂಬ ಸಂಗತಿಯನ್ನು 1801ರಲ್ಲಿ ಬುಖಾನನ್ ತನ್ನ ಪ್ರವಾಸ ಕಥನದಲ್ಲಿ ದಾಖಲಿಸಿದ್ದ. 1970ರ ದಶಕದಲ್ಲಿ ಮುರೂ ಜಿಲ್ಲೆಗಳಲ್ಲಿ ಹಸಿರುಕ್ರಾಂತಿ ಆಗಿದ್ದು ಸತ್ಯವೇ. ಈಗ ಕರಾವಳಿ ಕರ್ನಾಟಕದಾದ್ಯಂತ ಭತ್ತದ ಕೃಷಿ ಸೊರಗಿ ಹೋಗಿದೆ. ಶಿವರಾಮ ಕಾರಂತರ ಕಾದಂಬರಿಗಳಲ್ಲಿ ಮಹತ್ವ ಪಡೆದಿದ್ದ, ದಿನಕರ ದೇಸಾಯಿಯವರ ಚೌಪದಿಗಳಲ್ಲಿ ಸ್ಥಾನ ಗಳಿಸಿದ್ದ ಅನೇಕಾನೇಕ ಭತ್ತದ ಗದ್ದೆಗಳು ಹಾಳುಬಿದ್ದು ದಶಕಗಳೇ ಕಳೆದುಹೋದವು. ಇದನ್ನೆಲ್ಲ ತಡೆಗಟ್ಟಲು ಕಾನೂನು ಇದೆಯಾದರೂ ಅದು ನಿದ್ರಿಸುತ್ತಿದೆ. ಉಳುವವನೇ ಹೊಲದೊಡೆಯನನ್ನಾಗಿ ಮಾಡಲು ಸಾಧನವಾಗಿದ್ದ 1974ರ ಕಾನೂನು ಈಗ ನೆನಪು ಮಾತ್ರ. ಕರ್ನಾಟಕ ರಾಜ್ಯ ಯೋಜನಾ ಮಂಡಳಿಯ ಸಭೆಯಲ್ಲಿ ಆಗ ಯೋಜನಾ ಸಚಿರಾಗಿದ್ದ ವಿ. ಎಸ್.ಆಚಾರ್ಯ ದುರ್ಗತಿಯಲ್ಲಿರುವ ಭತ್ತದ ಗದ್ದೆಗಳನ್ನು ದೃಷ್ಟಿಯಲ್ಲಿಟ್ಟು “ ಅನೇಕ ವರ್ಷಗಳಿಂದ ಸಾಗುವಳಿಯಾಗದ ಭತ್ತದ ಗದ್ದೆಗಳನ್ನು ಯಾವುದೇ ಸಾರ್ವಜನಿಕ ಅಭಿವೃದ್ಧಿ ಯೋಜನೆಗಳಿಗೆ ಬಿಟ್ಟುಕೊಡಲು ತೀವ್ರ ವಿರೋಧ ವ್ಯಕ್ತವಾಗುತ್ತಿರುವುದು ದುರದೃಷ್ಟಕರ “ ಎಂದು ಹೇಳಿದ್ದರು. ವಿಧಾನ ಸಭಾಚುನಾವಣೆಯ ಸಮಯದಲ್ಲೂ ಇಂತಹ ಕಹಿ ಸತ್ಯಗಳು ಚರ್ಚೆಯಾಗುವುದೇ ಇಲ್ಲ. ಸಮಸ್ಯೆಗಳಿಗೆ ಪರಿಹಾರ ಒದಗಿಸಬಲ್ಲ ಭರವಸೆಗಳು ಗ್ರೀನ್‌ರೂಮಿನಲ್ಲೇ ಉಳಿದು ಬಿಡುತ್ತವೆ.

ರಾಜ್ಯದ ಬೊಕ್ಕಸಕ್ಕೆ ದೊಡ್ಡ ಆದಾಯ ತರಬಲ್ಲ, ಉದ್ಯೋಗ ಸೃಷ್ಟಿಸಬಲ್ಲ ವಿವಿಧ ಪ್ರಕಾರದ ಪ್ರವಾಸೋದ್ಯಮಗಳನ್ನು ಅಭಿವೃದ್ಧಿಪಡಿಸುವ ಅವಕಾಶಗಳನ್ನು ಹೊಂದಿದ ಪ್ರದೇಶ ಕರಾವಳಿ ಕರ್ನಾಟಕ. ಕರಾವಳಿ ಉತ್ಸವದ ಸಮಯದಲ್ಲಿ ಇಲ್ಲಿಯ ಜಿಲ್ಲಾಧಿಕಾರಿಗಳು ಪ್ರವಾಸೋದ್ಯಮಕ್ಕೆ ಇರುವ ಅದ್ಭುತ ಅವಕಾಶಗಳನ್ನು ಸ್ಮರಿಸುವುದು ಒಂದು ಮಾಮೂಲಿ ಸಂಪ್ರದಾಯ ಅಷ್ಟೆ. ನೆರೆಯ ರಾಜ್ಯಗಳಾದ ಕೇರಳ ಮತ್ತು ಗೋವಾ ರಾಜ್ಯಗಳಲ್ಲಾದ ಪ್ರವಾಸೋದ್ಯಮದ ಪ್ರಗತಿಯ ಗುಣಗಾನ ಇದ್ದದ್ದೆ. ಕರಾವಳಿ ಉತ್ಸವಗಳು ವಂದನಾರ್ಪಣೆಯೊಂದಿಗೆ ಹೇಗೋ ಮುಗಿಯುತ್ತವೆ, ಆದರೆ ಇಲ್ಲಿಯ ಸಮಸ್ಯೆಗಳು ಸುರಕ್ಷಿತ ಮುಂದುವರಿಯುತ್ತವೆ.

2018 ಫೆ.16ರಂದು ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ತಮ್ಮ ಕೊನೆಯ ಬಜೆಟ್‌ನಲ್ಲಿ ಕರಾವಳಿ ಭಾಗದ ಪ್ರವಾಸೋದ್ಯಮಕ್ಕೆ “ಹೊಸ ಭಾಷ್ಯ” ಬರೆಯಲು ʼಹೌಸ್‌ಬೋಟ್ʼ ಮತ್ತು ʼತೇಲುವ ರೆಸ್ಟೋರೆಂಟ್ʼ ಮಂಜೂರು ಮಾಡಿದ್ದರು. ನಂತರ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಅವರ ಪಕ್ಷಕ್ಕೆ ನಿರೀಕ್ಷಿಸಿದಷ್ಟು ಜಯ ಸಿಗಲಿಲ್ಲ. ಕರಾವಳಿ ಕರ್ನಾಟಕದಲ್ಲೂ ಪ್ರವಾಸೋದ್ಯಮ ಹಿಂದೇಟು ಹಾಕಿದೆ. ಹೊರವಲಸೆಯಿಂದಾಗಿ ದೊಡ್ಡ ಆಸ್ತಿಯಾಗಬಲ್ಲ ಯುವಶಕ್ತಿಯ ಲಾಭದಿಂದ ಕರಾವಳಿ ಜಿಲ್ಲೆಗಳು ವಂಚಿತವಾಗುತ್ತಿವೆಯೆಂದು ಸಿದ್ದು ಅವಧಿಯಲ್ಲಿ ಮಂಗಳೂರಿನ ಶಾಸಕರಾಗಿದ್ದ ಜೆ.ಆರ್‌ ಲೋಬೊ ಸಾರ್ವಜನಿಕ ಸಭೆಯಲ್ಲಿ ಹೇಳಿದ್ದರು. ಈಗ ಮತ್ತೆ ಸಿದ್ದು ಮತ್ತು ಲೋಬೋ ಚುನಾವಣೆಯಲ್ಲಿ ಹುರಿಯಾಳುಗಳಾಗಿದ್ದಾರೆ. ಕಳೆಯಿಲ್ಲದ ಕರಾವಳಿ ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗೆಗೆ ಚಿಂತನೆ ಮಾಡುವ ಹುರಿಯಾಳುಗಳು ಅಪರೂಪ, ತೀರ ಅಪರೂಪ.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಉಚಿತ ಕೊಡುಗೆಗಳು ರಾಜ್ಯವನ್ನು ದಿವಾಳಿ ಮಾಡದಿರಲಿ

Exit mobile version