Site icon Vistara News

Karnataka Election: ಸ್ಪಷ್ಟ ಜನಾದೇಶ ಬೇಕು, ನೀಡುತ್ತಾನಾ ಮತದಾರ?

Karnataka Election 2023 LIVE

: ಮಾರುತಿ ಪಾವಗಡ

ರಾಜ್ಯದಲ್ಲಿ ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ದಿನಾಂಕ ನಿಗದಿಯಾಗಿದೆ. ನಗರ ಪ್ರದೇಶದಿಂದ ಹಳ್ಳಿಯವರೆಗೂ ಚುನಾವಣೆಯ ಕಾವು ಜೋರಾಗಿದೆ. ಎಂದೂ ಇಲ್ಲದ ಸಂಬಂಧಗಳಿಗೆ ಬೆಲೆ ಬರುವ ಕಾಲ ಬಂದಿದೆ. ಮೊಬೈಲ್‌ನಲ್ಲಂತೂ ಅಭ್ಯರ್ಥಿಗಳು, ಅವರ ಬೆಂಬಲಿಗರು ಮತದಾರರಿಗೆ ಫೋನ್ ಮಾಡುವುದು, ಮೆಸೇಜ್ ಮಾಡುವುದು, ಇದೊಂದು ಸಲ ನನಗೆ ಅವಕಾಶ ಕೊಡಿ ಅಂತ ಕೇಳುವುದು ಸಾಮಾನ್ಯವಾಗಿಬಿಟ್ಟಿದೆ.

ಕ್ಷೇತ್ರ ಗಟ್ಟಿ ಮಾಡಿಕೊಳ್ಳಿ

ಈ ನಡುವೆ, ಐದು ವರ್ಷಕ್ಕೆ ಒಮ್ಮೆ ಬರುವ ಅವಕಾಶವನ್ನು ಸರಿಯಾಗಿ ಬಳಸಿ. ನಿಮ್ಮ ಊರು, ತಾಲ್ಲೂಕು, ಮತ್ತು ರಾಜ್ಯದ ಅಭಿವೃದ್ಧಿ ಬಗ್ಗೆ ಯೋಚನೆ ಮಾಡಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಸುಸಮಯ. ಐದು ವರ್ಷಗಳ ರಾಜ್ಯದ ಅಭಿವೃದ್ಧಿ ಆಲೋಚಿಸಿ ನಿಮ್ಮ ಜಾತಿ, ಭಾವನೆಗಳನ್ನು ಬದಿಗೊತ್ತಿ ಅಭಿವೃದ್ಧಿ ಪರ ಮತ ನೀಡಿ. ಕರ್ನಾಟಕ ಒಂದು ಮಾದರಿ ರಾಜ್ಯ ಅನ್ನೋದನ್ನ ಸಾಬೀತು ಮಾಡಿ ಎಂದು ಅಭ್ಯರ್ಥಿಗಳು ಹೇಳುವುದು ಸಾಮಾನ್ಯವಾಗಿಬಿಟ್ಟಿದೆ. ಇದರಲ್ಲಿ ಯಾರ ಮಾತು ಎಷ್ಟು ನಿಜ ಅನ್ನುವುದನ್ನು ಮತದಾರ ಕಣ್ಣಿಟ್ಟು ನೋಡುತ್ತಿರುತ್ತಾನೆ.

ಸಿದ್ದರಾಮಯ್ಯ ಕ್ಷೇತ್ರ ಗದ್ದಲ

ರಾಜ್ಯದ 224 ವಿಧಾನ ಸಭಾ ಕ್ಷೇತ್ರಗಳಿಗೂ ಚುನಾವಣೆ ನಡೆಯುತ್ತಿದ್ದರೂ ಸದ್ದು ಆಗುತ್ತಿರುವುದು ಸಿದ್ದರಾಮಯ್ಯ, ಕುಮಾರಸ್ವಾಮಿ, ಯಡಿಯೂರಪ್ಪ, ಬೊಮ್ಮಾಯಿ, ವಿಜೇಯೇಂದ್ರ, ಭವಾನಿ ರೇವಣ್ಣ ಅವರ ಕ್ಷೇತ್ರ ಯಾವುದು ಎಂಬುದು. ಮೂರೂ ಪಕ್ಷಗಳ ಟಿಕೆಟ್ ಹಂಚಿಕೆ ಗಲಾಟೆ ಹೆಚ್ಚು ಸದ್ದು ಆಗುತ್ತಿದೆ. ಸಿದ್ದರಾಮಯ್ಯನವರಿಗೆ ಈ ಬಾರಿ ಬಾದಾಮಿ ದೂರ. ಕೋಲಾರದಲ್ಲಿ ನಿಲ್ಲುವ ಯೋಚನೆ ಮಾಡಿದರು. ಆ ನಡುವೆ ರಾಹುಲ್ ಗಾಂಧಿ ಅವರ ಸೂಚನೆ ಮೇರೆಗೆ ವರುಣಾ ಕಡೆ ಪಯಣ ಬೆಳೆಸಿದರು. ಆದರೆ ಕೋಲಾರದಲ್ಲಿ ರಮೇಶ್ ಕುಮಾರ್, ನಂಜೇಗೌಡ, ನಾರಾಯಣ ಸ್ವಾಮಿ, ನಸೀರ್ ಅಹಮದ್ ಒತ್ತಾಯದಿಂದ ಮತ್ತೆ ಕೋಲಾರ ಎರಡನೇ ಕ್ಷೇತ್ರ ಮಾಡಿಕೊಂಡು ಕೊನೆಯ ಚುನಾವಣೆ ಎದುರಿಸಲು ಸಿದ್ದರಾಮಯ್ಯ ಸಿದ್ದತೆ ನಡೆಸಿದ್ದಾರೆ.

ಈ ನಡುವೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಹೆಸರು ವರುಣಾದಲ್ಲಿ ಹೆಚ್ಚು ಚರ್ಚೆ ಆಗಿದೆ. ಇದು ಸಹ ಸಿದ್ದರಾಮಯ್ಯನವರಿಗೆ ತಲೆಬಿಸಿ ಶುರುವಾಗಲು ಕಾರಣವಾಯಿತು. ವಿಜಯೇಂದ್ರ ವರುಣಾ ಕಡೆ ಹುಮ್ಮಸ್ಸಿನಲ್ಲಿ ಇದ್ದರೂ, ಅನುಭವಿ ರಾಜಕಾರಣಿ ಯಡಿಯೂರಪ್ಪಗೆ ಮೈಸೂರಿನಲ್ಲಿ ವಿಜಯೇಂದ್ರಗೆ ಒಳಪೆಟ್ಟು ಸಿಗಬಹುದು ಅಂತ ಗೊತ್ತಾಯಿತು. ಕಡೆಗೆ ವಿಜಯೇಂದ್ರ ನಡೆ ಶಿಕಾರಿಪುರದ ಕಡೆ ಅಂತ ಈಗಾಗಲೇ ಘೋಷಿಸಲಾಗಿದೆ ಎಂದಿದ್ದಾರೆ. ಆದರೆ ನಾಡಿದ್ದು ದೆಹಲಿಯಲ್ಲಿ ನಡೆಯಲಿರುವ ಸಂಸದೀಯ ಮಂಡಳಿ ಸಭೆಯಲ್ಲಿ ಸಿದ್ದರಾಮಯ್ಯನವರ ವಿರುದ್ಧ ವಿಜಯೇಂದ್ರ ಅನಿವಾರ್ಯ ಅಂತ ಹೈಕಮಾಂಡ್‌ ಹೇಳಿದರೆ ವಿಜಯೇಂದ್ರ ಸಹ ಚೊಚ್ಚಲ ಚುನಾವಣೆಯಲ್ಲಿ ಎರಡು ಕ್ಷೇತ್ರ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಸಿದ್ದರಾಮಯ್ಯ ಮನಸ್ಸು ದೆಹಲಿ ಬಿಜೆಪಿ ಸಂಸದೀಯ ಮಂಡಳಿ ಸಭೆ ಕಡೆ ನೆಟ್ಟಿದೆ.

ಹಾಸನದ ಸಿಂಹಾಸನ ಸಿಂಹಸ್ವಪ್ನ

ಈ ಹಿಂದಿನ ವಿಧಾನ ಸಭಾ ಚುನಾವಣೆಗಳನ್ನು ಹೋಲಿಸಿದರೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಈ ಬಾರಿ ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಮಾಡಲಿಲ್ಲ. ಎರಡು ರಾಷ್ಟ್ರೀಯ ಪಕ್ಷಗಳಿಗಿಂತ ಮೊದಲೇ ಪಂಚರತ್ನ ಯಾತ್ರೆ ಆರಂಭಿಸಿ ಕೋಲಾರದಿಂದ ಬೀದರ್ ವರೆಗೂ ಪ್ರವಾಸ ಮುಗಿಸಿದ್ದಾರೆ. ಆದರೆ ಈಗ ಅವರಿಗೆ ಕಂಟಕವಾಗಿ ಕುಳಿತಿರುವುದು ಹಾಸನ ಟಿಕೆಟ್ ಗೊಂದಲ. ಅತ್ತ ಭವಾನಿ ರೇವಣ್ಣ ಟಿಕೆಟ್ ಸಿಗಲೇಬೇಕು ಅಂತ ಪಟ್ಟು ಹಿಡಿದಿದ್ದಾರೆ. ರೇವಣ್ಣ, ಪ್ರಜ್ವಲ್, ಸೂರಜ್ ರೇವಣ್ಣ ಬಿಗಿಪಟ್ಟು ಹಿಡಿದಿದ್ದಾರೆ. ಇದು ಕುಮಾರಸ್ವಾಮಿ ಅವರ ನಿದ್ದೆಗೆಡಿಸಿದೆ. ಪಂಚರತ್ನ ಫಲ ಸಿಗುವ ಮೊದಲೇ ಮಣ್ಣುಪಾಲಾದೀತು ಅನ್ನೋ ಯೋಚನೆ ಶುರುವಾಗಿದೆ.

ಏನೇ ಆದರೂ ಯಡಿಯೂರಪ್ಪ ಕಾರಣ

ಸದ್ಯದ ಟ್ರೆಂಡ್ ಪ್ರಕಾರ ರಾಜ್ಯದಲ್ಲಿ ಇರುವ ಬಿಜೆಪಿ ಸರ್ಕಾರಕ್ಕೆ ಆಡಳಿತ ವಿರೋಧಿ ಅಲೆ ಇದೆ. ಭ್ರಷ್ಟಾಚಾರದ ಆರೋಪ ಮೈತುಂಬ ಮೆತ್ತಿಕೊಂಡಿದೆ. 40% ಕಮಿಷನ್‌ ಆರೋಪಕ್ಕೆ ಉತ್ತರ ಕೊಟ್ಟು ನಾಯಕರು ಸುಸ್ತು ಹೊಡೆದುಬಿಟ್ಟಿದ್ದಾರೆ. ಆದರೆ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಪದೇ ಪದೆ ಭೇಟಿ ಕೊಟ್ಟು ಬಿಜೆಪಿ ವರ್ಚಸ್ಸು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹೀಗಾಗಿಯೇ ಬಿಜೆಪಿ 85 ಗಡಿ ದಾಟುವುದು ಕಷ್ಟ ಆಗಲ್ಲ ಅನ್ನುವ ಲೆಕ್ಕಾಚಾರ ಇದೆ.

ಇದನ್ನೂ ಓದಿ: Karnataka Elections : ಕೋಲಾರದಲ್ಲಿ ಸಿದ್ದು ಸ್ಪರ್ಧೆ; ಸುರ್ಜೇವಾಲ ಮುಂದೆಯೇ ಕಾರ್ಯಕರ್ತರ ಪಟ್ಟು, ನಿಲ್ತೇನೆ ಎಂದ ಮಾಜಿ ಸಿಎಂ

ಇದರ ಜತೆಗೆ ಯಡಿಯೂರಪ್ಪ ಎರಡು ರೌಂಡ್ ಜಾಸ್ತಿ ಹೊಡೆದರೆ ನೂರರ ಗಡಿ ದಾಟುವುದು ಕಷ್ಟವಲ್ಲ. ಸರ್ಕಾರ ನಾವೇ ರಚಿಸಬಹುದು ಅನ್ನುವ ಲೆಕ್ಕಾಚಾರ ಬಿಜೆಪಿ ನಾಯಕರದ್ದು. ಒಂದು ವೇಳೆ ಫಲಿತಾಂಶ ವ್ಯತಿರಿಕ್ತವಾಗಿ ಬಂದರೂ ಯಡಿಯೂರಪ್ಪ ಅವರನ್ನು ಅವಧಿ ಪೂರ್ಣ ಮಾಡಲು ಬಿಡದಿರುವುದು ಬಿಜೆಪಿ ಸೋಲುವುದಕ್ಕೆ ಕಾರಣವಾಯಿತು, ಇದನ್ನು ಯಡಿಯೂರಪ್ಪ ಪಡೆ ಜನರಿಗೆ ಮನದಟ್ಟು ಮಾಡಿಸಿ ಬಿಜೆಪಿ ಸೋಲುವುದಕ್ಕೆ ಕಾರಣವಾಯಿತು ಅನ್ನುವ ಅಭಿಪ್ರಾಯವೂ ಬರಬಹುದು. ಹೀಗಾಗಿ ಬಿಜೆಪಿಗೆ ಈ ಬಾರಿ ಪ್ಲಸ್ ಮೈನಸ್ ಏನೇ ಆದರೂ ಯಡಿಯೂರಪ್ಪ ಹೆಸರು ಮಾತ್ರ ಅದರ ಹಿಂದೆ ಇರುತ್ತದೆ.

2004, 2008, 2018ರ ಅಸ್ಪಷ್ಟ ಜನಾದೇಶ

ರಾಜ್ಯದಲ್ಲಿ ಒಳ್ಳೆಯ ಸರ್ಕಾರ ಬಂದು ಕೆಲಸ ಆಗಲೂ ಬಲಾಢ್ಯ ಆಡಳಿತ ಮತ್ತು ವಿಪಕ್ಷಗಳು ಇರಬೇಕು. ಇದು 2004ರಿಂದ ರಾಜ್ಯದಲ್ಲಿ ತಾಳ ತಪ್ಪಿದೆ. 2004ರಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಆದರೂ 20 ತಿಂಗಳಿಗೆ ಕಾಂಗ್ರೆಸ್ ಜತೆ ಮುನಿಸಿಕೊಂಡ ಜೆಡಿಎಸ್ ನಾಯಕರು ಬಿಜೆಪಿ ಜತೆ ಸಖ್ಯ ಬೆಳೆಸಿದರು. 20 ತಿಂಗಳ ಬಳಿಕ ಅವರ ಜತೆಯೂ ವಿರಸ ಮೂಡಿ ಮೈತ್ರಿ ಮುರಿದುಕೊಂಡಾಗ ಬಿಜೆಪಿ ಚುನಾವಣೆಗೆ ಹೋಯಿತು. ಆಗಲೂ ಅವರನ್ನು 110 ಸ್ಥಾನಕ್ಕೆ ನಿಲ್ಲಿಸಿದರು ಜನ. ಸರ್ಕಾರ ಗಟ್ಟಿ ಮಾಡಿಕೊಳ್ಳಲು ಬಿಜೆಪಿ ಆಪರೇಷನ್ ಕಮಲದ ಮಾರ್ಗ ಹಿಡಿಯಿತು. 2018ರಲ್ಲಿ ಮತ್ತೆ ಬಿಜೆಪಿ ಅಧಿಕ ಸ್ಥಾನ ಗೆದ್ದರೂ 104 ಸ್ಥಾನಕ್ಕೆ ನಿಂತಿತು. ಮತ್ತೊಮ್ಮೆ ಮೈತ್ರಿ ಸರ್ಕಾರ ರಚನೆ ಆಗಲು ಕಾರಣವಾಯಿತು. ಮೈತ್ರಿ ಸರ್ಕಾರಗಳಲ್ಲಿ ರಾಜಕೀಯ ಮೈತ್ರಿ ಇರುತ್ತದೆ ಹೊರತು ಅಭಿವೃದ್ಧಿ ವಿಚಾರಗಳಲ್ಲಿ ಮೈತ್ರಿ ಆಗುವುದಿಲ್ಲ. ಕೊನೆಗೆ ಆಪರೇಷನ್ ಕಮಲದಲ್ಲಿ ಮೈತ್ರಿ ಸರ್ಕಾರ ಪತನವಾಯಿತು.

ಈ ಬೆಳವಣಿಗೆ ನೋಡಿದರೆ 20 ವರ್ಷಗಳಲ್ಲಿ 2013 ಹೊರತುಪಡಿಸಿ ಮತದಾರ ಸ್ಪಷ್ಟ ಜನಾದೇಶ ನೀಡುವಲ್ಲಿ ವಿಫಲನಾದ. ಹೀಗಾಗಿ ರಾಜಕೀಯ ಕೂಡಿಕೆ ಅನಿವಾರ್ಯವಾಯಿತು. ಈ ಬಾರಿ ಮತದಾರ ಮತ ಚಲಾಯಿಸುವಾಗ ಏನು ಯೋಚನೆ ಮಾಡುತ್ತಾನೋ! ಒಂದು ಪಕ್ಷಕ್ಕೆ 113 ಸ್ಥಾನಗಳ ಗೆಲುವಿನ ಗಡಿ ದಾಟಿಸಿದರೆ ಮಾತ್ರ ಸುಸ್ಥಿರ ಸರ್ಕಾರ ಸಾಧ್ಯ. ಅದರ ಜತೆಗೆ ಕರ್ನಾಟಕದ ಅಭಿವೃದ್ಧಿಯ ಗೆರೆಯನ್ನೂ ದಾಟಿಸಬಹುದು. ಇದನ್ನು ಮತದಾರ ಯೋಚನೆ ಮಾಡಿ ನಿರ್ಧಾರ ಮಾಡಬೇಕು. ಮತದಾರ ಭ್ರಷ್ಟನಾಗಿ, ಕಡೆಗೆ ರಾಜಕಾರಣಿಗಳು ಆಪರೇಷನ್ ಹೆಸರಲ್ಲಿ ಭ್ರಷ್ಟಾರಾದಾಗ ಅವರನ್ನು ಶಪಿಸುವ ಕಾಲ ಮತ್ತೆ ಬರದಿರಲಿ. ಇಂದು ನೀನು ತೆಗೆದುಕೊಂಡ ನಿರ್ಧಾರ ಮುಂದೆ ನಿನ್ನ ತಲೆ ಎತ್ತುವಂತೆ ಮಾಡಬೇಕೇ ಹೊರತು ತಲೆ ತಗ್ಗಿಸುವಂತೆ ಅಲ್ಲ. ಇದು ನಿನ್ನ ನೆನಪಿನಲ್ಲಿ ಇರಲಿ, ಈ ಸಮಯ ನಿನ್ನದು ಎಂಬುದು ಮತದಾರರಿಗೆ ಪ್ರಜ್ಞಾವಂತರು ಹೇಳುವ ಮಾತು.

ಇದನ್ನೂ ಓದಿ: Karnataka Election: ಹಾಸನ ಟಿಕೆಟ್‌ ಸಂಧಾನ ಸಭೆ; ಎಚ್‌ಡಿಕೆ ಪರ ಬ್ಯಾಟ್ ಬೀಸಿದ ದೇವೇಗೌಡ, ಬೇಸತ್ತು ಹೊರನಡೆದ ಭವಾನಿ

Exit mobile version