ಸಂಬಂಧ ಎಂದರೆ ಸಮಾನತೆಯ ಬಂಧ, ಪರಸ್ಪರರೊಂದಿಗಿನ ಸಮಾನ ಮನಸ್ಥಿತಿ, ವಿನಿಮಯದ ವ್ಯವಹಾರ. ಒಂದು ರೀತಿಯ ಯೋಗ. ಸಂಬಂಧವು ಸಮಾನ ಅಥವ ವಿರುದ್ಧ ವ್ಯವಹಾರದ್ದೂ ಆಗಿರಬಹುದು. ಬಯಸಿ ಅಥವಾ ಬಯಸದೆಯೂ ಬಂದ ಸಂಬಂಧವಾಗಿರಬಹುದು. ಕರ್ತವ್ಯವಶರಾಗಿ ಸಂಬಂಧ ಉಳಿಸಿಕೊಳ್ಳಬೇಕಾಗಬಹುದು. ಸಂಬಂಧವು ಕೆಲವೊಮ್ಮೆ ವಿಷಮ ಬಂಧವಾಗಿಯೂ ಕಾಣಬಹುದು.
ಪ್ರಶ್ನೆ- ಯಾರೊಂದಿಗೆ ಯಾರ ಸಂಬಂಧ? ಏಕೆ ಸಂಬಂಧ? ಇದರಲ್ಲಿ ಇಡೀ ವಿಶ್ವ ವ್ಯಾಪಾರ ಮತ್ತು ಸಾಮಾಜಿಕ ಜೀವನದ ನಡವಳಿಕೆ ಬಂದುಬಿಡುತ್ತದೆ. ನೀವು ಜೀವನದಲ್ಲಿ ಅನೇಕ ರೂಪಗಳಲ್ಲಿ ಜೀವಿಸುತ್ತಾ, ಹಲವು ಸಂಬಂಧಗಳನ್ನು ಕಟ್ಟಿಕೊಳ್ಳುತ್ತೀರಿ. ಪರಿಸರದಿಂದ ಅನೇಕ ಸಂಬಂಧಗಳನ್ನು ಪಡೆಯುತ್ತೀರಿ. ಸೃಷ್ಟಿಯ ಅನುಕ್ರಮದಿಂದ ಎಷ್ಟೋ ಸಂಬಂಧಗಳು ಸಿಗುತ್ತವೆ. ಮೊದಲನೆಯದಾಗಿ, ಸಂಬಂಧವನ್ನು ಆನುವಂಶಿಕ ಸ್ವಭಾವದ ಆಧಾರದ ಮೇಲೆ ನೋಡಲಾಗುತ್ತದೆ. ನಿಮ್ಮ ಪರಿಜನರು ಮತ್ತು ಪರಿವಾರದಲ್ಲಿಯ ಸ್ಥಾನವು ನಿಮ್ಮ ಮೊದಲ ವ್ಯವಹಾರವನ್ನು ನಿರ್ಧರಿಸುತ್ತದೆ. ಇಲ್ಲಿಂದ ನಿಮ್ಮ ವ್ಯವಹಾರ-ಮೂಲದ ಆಚಾರ-ಸಂಹಿತೆಯು ರೂಪುಗೊಳ್ಳುತ್ತದೆ. ನಿಮ್ಮ ಆಚರಣೆಗಳು ಅರಳುತ್ತವೆ. ಸಮಾಜದ ಕಡೆಗೆ ನಿಮ್ಮ ಮನೋಭಾವ ರೂಪುಗೊಳ್ಳುತ್ತದೆ. ಅನೇಕ ಧಾರ್ಮಿಕ ಮಾನ್ಯತೆಗಳು ಅಥವಾ ಧಾರಣೆಗಳು ನಿಮ್ಮ ಮನಸ್ಸಿನೊಳಗೆ ಇಳಿಯುತ್ತವೆ.
ಇದರೊಂದಿಗೆ, ನಿಮ್ಮ ಪ್ರಕೃತಿ, ದೈಹಿಕ ರಚನೆ, ಮಾನಸಿಕ ಸಂವಿಧಾನ ಮತ್ತು ವ್ಯವಹಾರಗಳೂ ನಿಮ್ಮ ಸಂಬಂಧಗಳನ್ನು ಸೂಚಿಸುತ್ತದೆ. ಅಂತೆಯೇ, ನಿಮಗೆ ವ್ಯಾವಹಾರಿಕ ಪ್ರತಿಕ್ರಿಯೆಗಳು ದಕ್ಕುತ್ತವೆ. ಇದರ ಪರಿಣಾಮವಾಗಿ ನಿಮ್ಮ ಚಿಂತನೆಯು ಬೆಳೆಯುತ್ತದೆ. ನಿಮ್ಮ ಕರ್ಮಗಳು ಕಾಲಕಾಲಕ್ಕೆ ನಿಮ್ಮ ನಡವಳಿಕೆಯಲ್ಲಿ ಬದಲಾವಣೆಗಳನ್ನು ತರುತ್ತವೆ. ಇದು ನಿಮ್ಮ ಸಂತೋಷ ಮತ್ತು ದುಃಖದ ಅನುಭವ, ನಿಮ್ಮ ವ್ಯಕ್ತಿತ್ವದ ಪ್ರಭಾವದ ಕ್ಷೇತ್ರವಾಗಿದೆ.
ಈ ಅನುಭವಗಳ ಆಧಾರದ ಮೇಲೆ ನಿಮ್ಮ ಉಪಚೇತನ ಮನದ ವಿಕಾಸವಾಗುತ್ತದೆ. ಕ್ರಿಯೆ-ಪ್ರತಿಕ್ರಿಯೆಯ ಸ್ವರೂಪವು ರೂಪುಗೊಳ್ಳುತ್ತದೆ. ಏನು ಮಾಡಬೇಕು, ಏನು ಮಾಡಬಾರದು ಎಂಬಂತಹಾ ಪರಿಕಲ್ಪನೆಗಳು ಬಲಗೊಳ್ಳುತ್ತವೆ. ನೀವು ನಿಮ್ಮದು ಎಂದು ಏನು ಭಾವಿಸುತ್ತೀರೋ, ಏನನ್ನು ಭಾವಿಸುವುದಿಲ್ಲವೋ, ಯಾರ ಮೇಲೆ ಎಷ್ಟು ಅಧಿಕಾರವಿದೆ, ಇತ್ಯಾದಿ ಕ್ರಿಯಾ-ಕಾರಣ ಭಾವನೆಗಳತ್ತ ನಿಮ್ಮ ವರ್ತನೆ ರೂಪುಗೊಳ್ಳುತ್ತದೆ. ಅಂದರೆ, ನಿಮ್ಮ ಮನೋವೈಜ್ಞಾನಿಕ ಪಕ್ಷವು ಸಿದ್ಧವಾಗುತ್ತದೆ. ನಿಮ್ಮ ಮನಸ್ಸಿನ ಪ್ರಪಂಚವು ತಯಾರಾಗುತ್ತದೆ, ಭಾವನಾತ್ಮಕ ಬೆಳವಣಿಗೆ ಮತ್ತು ವ್ಯಕ್ತಿತ್ವವು ರೂಪುಗೊಳ್ಳುತ್ತದೆ. ಸ್ವತಂತ್ರತೆ ಮತ್ತು ಸ್ವಚ್ಛಂದತೆಯು ಪ್ರತಿಫಲಿಸುತ್ತದೆ. ಇದರೊಂದಿಗೆ ನಿಮ್ಮ ಸಾಮಾಜಿಕ ಪರಿಸರವೂ ಸೇರಿಕೊಳ್ಳುತ್ತದೆ. ನಿಮ್ಮ ಜಾತಿ, ಸಮಾಜ ಮತ್ತು ಸ್ಥಳದ ಪ್ರಭಾವವು ಕಡಿಮೆಯೇನಲ್ಲ. ನಿಮ್ಮ ಮುಂದೆ ಹಲವಾರು ಮರ್ಯಾದೆಗಳಿವೆ, ಸಾಮಾಜಿಕ ಜವಾಬ್ದಾರಿಗಳಿವೆ, ಇಷ್ಟ ಮಿತ್ರರಿದ್ದಾರೆ, ನಂಬಿಕೆಗಳಿವೆ, ಧಾರ್ಮಿಕ ವಾತಾವರಣವಿದೆ. ಅದನ್ನು ಒಪ್ಪಿಕೊಂಡು ಅಥವಾ ನಿರಾಕರಿಸಿ ಅಥವಾ ಮಧ್ಯದಲ್ಲಿ ಯಾವುದಾದರೂ ಮಾರ್ಗವನ್ನು ಕಂಡುಕೊಂಡು ಸಂಬಂಧಗಳನ್ನು ಬೆಳೆಸಬೇಕಾಗುತ್ತದೆ. ಇದೇ ವ್ಯಕ್ತಿತ್ವದ ಆಧಾರದ ಮೇಲೆ, ಸಮಾಜವು ನಿಮ್ಮನ್ನು ಸ್ವೀಕರಿಸುತ್ತದೆ ಅಥವಾ ತಿರಸ್ಕರಿಸುತ್ತದೆ, ನಿಮ್ಮ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳುತ್ತದೆ ಅಥವಾ ಇಲ್ಲ.
ಇಂದು ಶಿಕ್ಷಣದ ಜೊತೆಗೆ ನಗರೀಕರಣವು, ಜಾಗತಿಕ ಔದ್ಯೋಗೀಕರಣವು ಈ ಪರಿಸರದಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿದೆ. ಒಬ್ಬರಿಗೊಬ್ಬರು ತುಂಬಾ ಹತ್ತಿರದಲ್ಲಿ ಬದುಕಲು ಸಾಧ್ಯವಿಲ್ಲ. ಜೀವನವೂ ಬಿಡುವಿಲ್ಲದಂತಾಗಿದೆ. ಸಾಮಾಜಿಕ ಪರಿಸರದ ಪ್ರಭಾವ ಕಡಿಮೆಯಾಗುತ್ತಿದೆ. ವ್ಯಕ್ತಿಯು ಸಂತೋಷ ಮತ್ತು ದುಃಖದಲ್ಲಿ ಏಕಾಂಗಿತನವನ್ನು ಅನುಭವಿಸುತ್ತಿದ್ದಾನೆ. ಇದು ನಗರಗಳಲ್ಲಿ ಹೊಸ ಬಗೆಯ ಸಮುದಾಯಗಳ ರಚನೆಗೆ ಕಾರಣವಾಗಿರುವುದಂತೂ ನಿಜ; ಆದರೆ ಅದು ವ್ಯಕ್ತಿಯ ಉಪಚೇತನಾ ಮನದ ಮೇಲೆ ಪರಿಣಾಮ ಬೀರಲು ಸಾಧ್ಯವಾಗುವುದಿಲ್ಲ. ಅಂತಹ ಸಂಘಗಳು ಮತ್ತು ಸಂಘಟನೆಗಳು (ಅಸೋಸಿಯೇಷನ್‌ಗಳು) ಸಾಮಾಜಿಕವಾಗಿ ಪರಿಣಾಮಕಾರಿಯಾಗುವುದಿಲ್ಲ. ಯಾವುದನ್ನೂ ಕೇವಲ ವ್ಯಕ್ತಿಯ ಮಿತಿಯಲ್ಲಿ ನಿರ್ಧರಿಸಲು ಸಾಧ್ಯವಿಲ್ಲ. ಜವಾಬ್ದಾರಿಯ ಬಗ್ಗೆ ಯಾರಾದರೂ ಯಾರಿಗಾದರೂ ಎಚ್ಚರಿಸುತ್ತಿರುವ ಪ್ರಶ್ನೆಯೇ ಇಲ್ಲ. ಇವರ ಚಟುವಟಿಕೆಗಳು ಎಷ್ಟು ಸೀಮಿತವಾಗಿವೆ ಎಂದರೆ ಇವರು ನಿಯಮಿತವಾಗಿ ಭೇಟಿಯೂ ಆಗಲಾಗುವುದಿಲ್ಲ.
ಇದನ್ನೂ ಓದಿ | ಲೈಫ್ ಸರ್ಕಲ್ ಅಂಕಣ | ಒಳಹೊರಗಿರುವ ಎಲ್ಲರೊಂದಿಗೆ ಮಾತನಾಡುವ ಕಲೆ
ಸಮಾಜದಿಂದ ದೂರ ಉಳಿಯುವುದರಿಂದ ವ್ಯಕ್ತಿಯಲ್ಲಿ ವಿಶೇಷ ರೀತಿಯ ಅಭದ್ರತೆ ಉಂಟಾಗುತ್ತದೆ. ಕಾಲಾನಂತರದಲ್ಲಿ, ಅವರು ಸಮಾಜದ ಮಧ್ಯದಲ್ಲಿ ಬದುಕುವ ಅಗತ್ಯವನ್ನು ಮನಗಾಣುತ್ತಾರೆ. ಅದೇ ಸಮಯದಲ್ಲಿ, ಅವರ ವ್ಯಕ್ತಿತ್ವವು ತುಂಬಾ ಬದಲಾಗುತ್ತದೆ. ಮುಖದಿಂದ ನಗು, ಪ್ರಸನ್ನತೆ ಮಾಯವಾಗುತ್ತದೆ. ಆದರೂ ಅವರ ಅಹಂ ಅವರನ್ನು ಸಮಾಜದ ಕಡೆಗೆ ಪ್ರತಿಗಾಮಿಯಾಗಿಸುತ್ತದೆ. ಮಕ್ಕಳಿಗೆ ದೊಡ್ಡವರಾದ ನಂತರ ಸಮಾಜದೊಂದಿಗೆ ಸೇರಿಕೊಳ್ಳಬೇಕೆಂಬ ವಿಶೇಷ ಆಸೆ ಇರುತ್ತದೆ. ನಂತರ, ಸಮಾಜದೊಂದಿಗೆ ಬೆರೆಯಲು ಆಗದಿದ್ದರೆ ಅದೇ ಕೊರತೆ ಕಾಡುತ್ತಿರುತ್ತದೆ.
ಕುಟುಂಬ ಮತ್ತು ಸಮಾಜವು ವ್ಯಕ್ತಿಯ ಆನುವಂಶಿಕ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತವೆ. ಇವುಗಳ ವಿಭಿನ್ನ ನಿಯಮಗಳು ಮತ್ತು ನಿಬಂಧನೆಗಳು ವ್ಯಕ್ತಿತ್ವವನ್ನು ಬದಲಾಯಿಸುತ್ತಲೇ ಇರುತ್ತವೆ. ಆನುವಂಶಿಕ ಮನೋಧರ್ಮವು ಬದಲಾಗುವುದಿಲ್ಲವಾದ್ದರಿಂದ, ಮೂಲಭೂತವಾಗಿ ಈ ವ್ಯಕ್ತಿತ್ವವು ಜೀವನದುದ್ದಕ್ಕೂ ಅವರ ಸಂಬಂಧಗಳಲ್ಲಿ ಪ್ರತಿಫಲಿಸುತ್ತದೆ. ವಿದೇಶಿ ಪ್ರವಾಸಗಳ ಈ ಯುಗದಲ್ಲಿ, ದೇಶ ಮತ್ತು ಭೂಮಿಯ ಸಂಬಂಧಗಳ ಮೇಲೆ ದೊಡ್ಡ ಪ್ರಭಾವವನ್ನು ತೋರಿಸಲಾರಂಭಿಸಿದೆ. ಭಾರತದಲ್ಲಿ ವಾಸಿಸುವ ಹಲವರಿಗೆ ವಿದೇಶಿ ಮೋಹದ ಕಾರಣ, ಹೊರಗಿನವರನ್ನು ನೋಡುವಷ್ಟು ಸಂವೇದನಾಶೀಲತೆಯು ಭಾರತೀಯರನ್ನು ಕಂಡಾಗ ಉಂಟಾಗುವುದಿಲ್ಲ. ದೇಶದಲ್ಲಿ ವಾಸಿಸುತ್ತಿರುವಾಗಲೂ, ತನ್ನ ಪ್ರದೇಶದ ಜನರೊಂದಿಗೆ ಮಾತ್ರ ಗುಂಪು ಕಟ್ಟುವ, ಬೇರೆ ಊರು ಅಥವಾ ರಾಜ್ಯದ ಜನರೊಂದಿಗೆ ಬೆರೆಯದ ಈ ಪ್ರವೃತ್ತಿಯು ಇದರ ಸ್ಪಷ್ಟ ಸೂಚನೆಯನ್ನು ನೀಡುತ್ತಿದೆ. ಈ ಆಧಾರದ ಮೇಲೆ, ದೇಶದಲ್ಲಿ ಅನೇಕ ಸಮಸ್ಯೆಗಳು ಸಹ ಗೋಚರಿಸುತ್ತವೆ. ಅದರಂತೆ, ನಮ್ಮ ಭೌಗೋಳಿಕ ಸಂಬಂಧಗಳನ್ನು ಸ್ಥಾಪಿಸಲಾಗಿದೆ.
ಈ ಸಂಬಂಧಗಳ ಪರಿಣಾಮವೇನು? ಈ ಸಂಬಂಧಗಳಿಂದ ನಾವು ಪಡೆಯುವ ಅನುಭವಗಳು ನಮ್ಮ ನಡವಳಿಕೆಯನ್ನು ನಿರ್ಧರಿಸುತ್ತವೆ. ನಮ್ಮ ಮತ್ತು ಇತರರ ಬಗ್ಗೆ ನಮ್ಮ ದೃಷ್ಟಿಕೋನವು ರೂಪುಗೊಳ್ಳುತ್ತದೆ. ನಾವು ವಿಭಿನ್ನ ಸಂದರ್ಭಗಳಲ್ಲಿ ಹೋರಾಡುವ ಸಾಮರ್ಥ್ಯವನ್ನು ಪಡೆಯುತ್ತೇವೆ. ಕ್ರಿಯೆ-ಪ್ರತಿಕ್ರಿಯೆಗಳ ಸ್ವರೂಪದ ನಿರ್ಧಾರವಾಗುತ್ತದೆ. ಜೀವನದಲ್ಲಿ ಆಸೆ-ನಿರಾಸೆಗಳ ಭಾವನೆಗಳೇಳುತ್ತವೆ. ನಮ್ಮ ಸುಖ-ದುಃಖದ ಪರಿಕಲ್ಪನೆಯಲ್ಲಿ ಏರಿಳಿಕೆಯೂ ಇದೇ ಅನುಭೂತಿಗಳಿಂದ ಅನುಭವಕ್ಕೆ ಬರುತ್ತವೆ.
ಇದನ್ನೂ ಓದಿ | ಲೈಫ್ ಸರ್ಕಲ್ ಅಂಕಣ | ಧ್ಯಾನದ ಮೂಲಕ ಜ್ಞಾನದ ಬೆಳಕು