ಬೆಂಗಳೂರಿನಲ್ಲಿ ಮಳೆ ಬಿಟ್ಟಿದೆ ಎಂದು ಬರೆದರೆ ಧಾರಾಕಾರವಾಗಿ ಮಳೆ ಸುರಿಯುತ್ತದೆ. ಆಮೇಲೆ ಥಂಡಿ ಶುರುವಾಗುತ್ತದೆ. ಈ ಥಂಡಿಯಿಂದ ನನ್ನಂತಹ ಬೇಕಾದಷ್ಟು ಅಲರ್ಜಿ ಇರುವ ಮಕ್ಕಳು ಆಕ್ಷೀ ಆಕ್ಷೀ ಎಂದು ಶುರುಮಾಡುತ್ತಾರೆ. ನೆಗಡಿಯಾದಾಗ ಮೂಗನ್ನು ರೀಪ್ಲೇಸ್ ಮಾಡುವಷ್ಟು ಕೋಪ ಬಂದುಬಿಡುತ್ತದೆ. ಆಗಾಗ ಬರುವ ಆಕ್ಷೀ, ಆಮೇಲೆ ಮೂಗು ಒರೆಸಿಕೊಳ್ಳಬೇಕಾದ ಪ್ರಸಂಗ ಮತ್ತು ಯಾವುದೇ ವಾಸನೆ ಗೊತ್ತಾಗದೇ ಏನಾದರೂ ʻಧಿಮ್ಮ್ ರಂಗ’ ಎಂದು ಕೂತಿರಬೇಕಾದ ಪ್ರಮೇಯಗಳು. ನಮ್ಮಂತಹ ನೆಗಡಿಯ ಪರಮಾಪ್ತ ಸ್ನೇಹಿತರುಗಳಿಗೆ ವರ್ಷದಲ್ಲಿ 6 ತಿಂಗಳು ನೆಗಡಿ ಬರುತ್ತದೆ. ಚಳಿಗಾಲದಲ್ಲಿ, ಬೇಸಿಗೆಯಿಂದ ಮಳೆಗಾಲದ ಟ್ರಾನ್ಸಿಷನ್ನಿನಲ್ಲಿ, ಮಳೆಗಾಲದಲ್ಲಿ ಮತ್ತು ಬೇಸಿಗೆ ಕಾಲದಲ್ಲಿ ವಿಪರೀತ ಫ್ಯಾನ್ ಮತ್ತು ಏಸಿ ಹಾಕಿಕೊಂಡರೆ. ವಾಕಿಂಗ್ ಮಾಡುವ ಸಮಯದಲ್ಲಂತೂ ಪೋಲನ್ ಅಲರ್ಜಿ ಎಂದು ಕೋವಿಡ್ ಬರೋದಕ್ಕೆ ಮುನ್ನವೇ ಮಾಸ್ಕ್ ಹಾಕಿಕೊಂಡು ಓಡಾಡಬೇಕಾದ ಪರಿಸ್ಥಿತಿ. ಇಂತಹದರಲ್ಲೂ 10 ಸಾವಿರ ಸ್ಟೆಪ್ಸ್ ಹಾಕೋದೆಂದರೇನು ಕಡಿಮೆಯೇ, ಬಹುದೊಡ್ಡ ಸಾಧನೆ.
ನೆಗಡಿ ಬಂದರೆ ಅದೊಂದು ಜುಜುಬಿ ರೋಗ ಎಂದು ಮೊದಲು ಹೇಳುತ್ತಿದ್ದರು. ಸೈನಸ್ ತೊಂದರೆ ಇರುವವರಿಗೆ ಮತ್ತು ಅಲರ್ಜೆಟಿಕ್ ರೈನೈಟೀಸ್ ಇರುವವರಿಗೆ ನೆಗಡಿಗಿಂತ ದೊಡ್ಡ ರೋಗ ಬರೋದಕ್ಕೆ ಸಾಧ್ಯವೇ ಇಲ್ಲ ಎಂಬ ಬಲವಾದ ನಂಬಿಕೆ ನನ್ನದು. ಆಫೀಸಿನಲ್ಲಿ ನೆಗಡಿಯಾಗಿ ಕಣ್ಣಿಂದ, ಮೂಗಿಂದ ನೀರು ಬಂದು, ಮುಖ ಊದಿಕೊಂಡು, ಕೆಂಪಾಗಿ ಆಸ್ಪತ್ರೆಗೆ ಸೇರಿಸಬೇಕಾ ಎಂದು ಮ್ಯಾನೇಜರ್ ಗಾಬರಿಯಾಗಿರುವ ಪ್ರಸಂಗಗಳು ನನ್ನ ಜೀವನದಲ್ಲಿ ನಡೆದಿದೆ. ಅದಕ್ಕೆ ಎಲ್ಲಿ ಹೋದರೂ ಒಂದು ಸ್ಕಾರ್ಫೋ, ಮಾಸ್ಕೋ ನನ್ನ ಬ್ಯಾಗಲ್ಲಿ ಇದ್ದೇ ಇರುತ್ತದೆ. ವಾಕಿಂಗ್ ಬರುವ ಅದೆಷ್ಟೋ ಮಂದಿ ಇರುವ ಥಂಡಿಯಲ್ಲಿ ಒಂದು ಸ್ವೆಟರ್ ಸಹ ಹಾಕಿಕೊಳ್ಳದೆ ಮೂಗನ್ನ ಹಾಗೆ ಆರಾಮಾಗಿ ಆಡಿಸಿಕೊಂಡು, ಪಕ್ಕದ ಗಿಡದ ಹೂವನ್ನು ತಾಗಿಸಿಕೊಂಡು ಇದ್ದರೂ ಒಂದೂ ಸೀನು ಬರದೇ ಇರುವವರನ್ನ ಕಂಡರೆ ನನಗೆ ಅಗಾಧ ಹೊಟ್ಟೆ ಉರಿ. ಅವರ ಜೀನ್ಸು ಒಳ್ಳೆಯದು ಅಂದುಕೊಂಡು ಮುಂದಕ್ಕೆ ಹೋಗಬಹುದೇ ಹೊರತು ಇನ್ನೇನೂ ಮಾಡಲು ಸಾಧ್ಯವಿಲ್ಲ.
ಕೋವಿಡ್ ಮನುಷ್ಯ ಲೋಕದಲ್ಲಿ ಕಾಲಿಟ್ಟ ನಂತರ ನೆಗಡಿ, ಕೆಮ್ಮು, ಜ್ವರ, ಗಂಟಲು ನೋವು ಎಂಬ ಜುಜುಬಿ ರೋಗವನ್ನು ಎಂತಹ ಸೀರಿಯಸ್ ಕಾಯಿಲೆ ಮತ್ತು ಡಯಾಗ್ನೋಸಿಸ್ಸಿಗೆ ಒಳಪಡಿಸಿತು ಅಂದರೆ ಒಂದು ಸಣ್ಣ ಸೀನು ಬಂದರೂ ಆಫೀಸಿನಲ್ಲಿ ರಜೆ ತಗೊಂಡುಬಿಡಿ, ವಾಸಿಯಾಗುವವರೆಗೂ ಬರಬೇಡಿ ಅನ್ನುವಷ್ಟು ಭಯ ಪಡಿಸಿತು. ಇಂತಹ ಸಂದರ್ಭದಲ್ಲಿ “ಎಲ್ಲಾದರೂ ಓಡಾಡಿದ್ದರೆ ಅಕಸ್ಮಾತ್ ನಿಮಗೆ ವಾಸನೆ ಮತ್ತು ರುಚಿ ಗೊತ್ತಾಗುತ್ತಿಲ್ಲವಾ ನೋಡಿ” ಎಂದು ಡಾಕ್ಟರುಗಳು ಹೇಳುತ್ತಿದ್ದರು. ಪದೇ ಪದೇ ನೆಗಡಿ ಬರುವ ನಮ್ಮಂತವರಿಗೆ ಓಲಿಫ್ಯಾಕ್ಟರಿ ಎಪಿಥೀಲಿಯಂ ಗಬ್ಬೆದ್ದುಹೋಗಿರುವ ಪರಿಣಾಮ ಮೆಣಸಿನ ಘಾಟಿನಷ್ಟು ಪರಿಣಾಮಕಾರಿಯಾದ ಘಾಟು ಬಂದಾಗಲೇ ಮೂಗು ಕೆಲಸ ಮಾಡುವುದು. ಇನ್ನು ಸಣ್ಣದಾಗಿ ರವೆ ಸೀದಿದೆ ಎಂದು ಎಲ್ಲಿ ಗೊತ್ತಾಗತ್ತೆ ಹೇಳಿ. ಆಗ ಈ ಮೂಗು ಕಿತ್ತಾಕಿ ಇನ್ನೊಂದು ಹಾಕಿಕೊಳ್ಳೋಣ ಅನ್ನಿಸೋದು ಸುಲಭ. ಆದರೆ ಗಣೇಶನಿಗೆ ತಲೆ ರಿಪ್ಲೇಸ್ಮೆಂಟ್ ಸಿಕ್ಕ ಹಾಗೆ ನಮಗೆ ಮೂಗು ರೀಪ್ಲೇಸ್ಮೆಂಟ್ ಸಿಗೋದು ಭಾರಿ ಕಷ್ಟ. ಅದೂ ಸರಿಯಾಗಿ ಕೆಲಸ ಮಾಡುವ ಮೂಗು.
ಇಂತಹ ಸಂದರ್ಭದಲ್ಲಿ ಬಡಪಾಯಿಗಳ ಕೂಗನ್ನು ದಯಾಮಯನಾದ ಭಗವಂತ ಕೇಳದೇ ಮತ್ತೊಬ್ಬ ಮನುಷ್ಯನೇ ಕೇಳಿ ಒಂದು ಒಳ್ಳೆಯ ಫೇಕ್ ಮೂಗನ್ನು ಸೃಷ್ಟಿ ಮಾಡಿದ್ದಾನೆ. ಅದೂ ಹೀಗೆ ವಾಸನೆಯ ಗುಣವನ್ನು ಕಳೆದುಕೊಂಡ ಮೂಗಿಗೆ ಸಹಾಯಕಾರಿಯಾಗಲೆಂದು. ಇದು ನಮ್ಮ ಫೋನಿನ ಹಾಗೆ ಎಲ್ಲೆಂದರಲ್ಲಿ ತೆಗೆದುಕೊಂಡು ಹೋಗಬಹುದು. ಮೂಗಿನ ಆಕಾರದಲ್ಲೇ ಇರುವ ಈ ವಸ್ತುವನ್ನು ಮೈಕ್ರೋಸಾಫ್ಟಿನ ಪ್ರೋಗ್ರಾಮ್ ಮ್ಯಾನೇಜರ್ ಬೆಂಜಮಿನ್ ಕೇಬ್ ಕಂಡುಹಿಡಿದಿದ್ದಾನೆ. ಮೂಗಿನ ಆಕಾರದ ಈ ಮೆಷೀನಿನ ತುಂಬಾ ಓಡರ್ ರಿಸೆಪ್ಟರ್ಸ್ ಅಂಟಿಸಿ ಹಿಂದೆ ಒಂದು ಸಣ್ಣ ಸ್ಕ್ರೀನ್ ಇಟ್ಟು, ಆ ಮೂಗನ್ನು ಕಾಫಿಯ ಹತ್ತಿರ ಹಿಡಿದರೆ “ಆಂಬಿಯೆಂಟ್ ಸ್ಮೆಲ್” ಎಂದು ಹೇಳುವಷ್ಟು ಅದಕ್ಕೆ ಬುದ್ಧಿ ಇದೆ. ಅಂದರೆ ಅದರಲ್ಲಿರುವ ಓಡರ್ ರಿಸೆಪ್ಟರ್ಸ್‌ಗೆ ಮುಂಚೇನೆ ಇಂತಿಂತಹ ವಸ್ತುವಿಗೆ ಇಂತಿಂತಹ ವಾಸನೆ ಇರುತ್ತದೆ, ಮತ್ತು ಬರುವ ವಾಸನೆಯನ್ನು ಪರಿಗಣಿಸಿ ಅದು ಸುವಾಸನೆಯೋ ದುರ್ವಾಸನೆಯೋ ಎಂದು ಹೇಳುವಷ್ಟು ಕೃತಕ ಬುದ್ಧಿಮತ್ತೆ ಅದಕ್ಕಿದೆ. ಸದ್ಯಕ್ಕೆ ಕೋವಿಡ್ ಬಂದು ಗುಣವಾದರೂ ಕೆಲವರಿಗೆ ಇನ್ನೂ ವಾಸನೆ ಮತ್ತು ರುಚಿ ಸರಿಯಾಗಿಲ್ಲ ಅವರಿಗೆ ಈ ಮೂಗು ಬಹಳ ಉಪಯೋಗಕ್ಕೆ ಬರುತ್ತದೆ. ಅಥವಾ ಕೆಲವೊಮ್ಮೆ ಸೀದಿದೆ ಎಂದು ಹೇಳಿದರೂ ವಿತಂಡವಾದ ಮಾಡುವ ಜನರಿಗೆ ಪುರಾವೆ ತೋರಿಸುವ ಕೆಲಸಕ್ಕೂ ಸಹಾಯಕಾರಿ.
ಇದನ್ನೂ ಓದಿ | ವಾಕಿಂಗ್ ಚಿತ್ರಗಳು ಅಂಕಣ | ಮನಸ್ಸನ್ನು ಓದಿ ಕತೆ ಬರೆಯಬಲ್ಲ ಮೆಶೀನು!
ನಮ್ಮ ಮೂಗು ವಾಸನೆಯನ್ನು ಕಂಡು ಹಿಡಿಯುವುದು ಹೇಗೆ ಎಂದರೆ ನಮ್ಮ ಮುಂದೆ ಇರುವ ಯಾವುದೇ ವಸ್ತುವಿನ ವಾಸನೆ ಕಣಗಳು ಆವಿಯಾಗಿ, ನಮ್ಮ ಮೂಗಿನ ಹೊಳ್ಳೆಗೆ ಹೋಗಿ, ಮೂಗಿನ ಕ್ಯಾವಿಟಿ ಅದನ್ನು ಹೀರಿಕೊಳ್ಳುತ್ತದೆ. ಈ ವಾಸನೆ ಕಣಗಳು ನಮ್ಮ ಓಲಿಫ್ಯಾಕ್ಟರಿ ನರಕೋಶವನ್ನು ಪ್ರಚೋದಿಸಿ ಮೆದುಳಿಗೆ ಸಂದೇಶ ಕಳಿಸುತ್ತವೆ. ನಮ್ಮ ಮೆದುಳು ತನ್ನ ನೆನಪಿನಲ್ಲಿರುವ ವಾಸನೆಯ ಸಿಗ್ನಲ್ ಜೊತೆ ಮ್ಯಾಚ್ ಮಾಡಿ ಅದಕ್ಕೇನು ಪ್ರತಿಕ್ರಿಯೆ ಕೊಡಬೇಕೆಂದು ತೀರ್ಮಾನ ಮಾಡುತ್ತದೆ. ಬಯೋ ಸೆನ್ಸರುಗಳನ್ನು ಈ ಕೆಲಸ ಮಾಡೋದಕ್ಕೆ ಕೃತಕ ಮೂಗುಗಳಲ್ಲಿ ನಿಯೋಜಿಸಬಹುದು. ವಯಸ್ಸಾಗುತ್ತಾ ಆಗುತ್ತಾ ವಾಸನೆಗಳು ಗೊತ್ತಾಗದಿದ್ದರೆ ಈ ಒಂದು ಸಹಾಯಕ ಮೂಗನ್ನು ನಾವು ಮುಂದೆ ತರಿಸಿಟ್ಟುಕೊಳ್ಳಬಹುದು. ಕೆಲವೊಮ್ಮೆ ಗ್ಯಾಸ್ ಲೀಕ್ ಆಗಿರುವ ಸಂದರ್ಭದಲ್ಲಿ ಸ್ಟವ್ ಹತ್ತಿಸಬಾರದು ಎಂದು ಹೇಳುವುದಕ್ಕೂ ಈ ಮೂಗನ್ನು ಬಳಸಿಕೊಳ್ಳಬಹುದು. ಅಟೋಮೊಬೈಲ್ ಇಂಡಸ್ಟ್ರಿಗಳಲ್ಲಿ ರಿಪೇರಿ ಸಲುವಾಗಿಯೋ ಅಥವಾ ಎಲ್ಲಾದರೂ ಆಹಾರ ಕೊಳೆತಿದೆಯೋ ಎಂದು ಫುಡ್ ಇಂಡಸ್ಟ್ರಿಗಳಲ್ಲೂ ಇದನ್ನು ಬಳಸಬಹುದು.
ಮನುಷ್ಯನಿಗೆ ಮಾತ್ರ ಸೆನ್ಸ್ ಆಫ್ ಸ್ಮೆಲ್ ಕಾಲ ಕ್ರಮೇಣ ಕಡಿಮೆಯಾಗುತ್ತಿದೆ. ಕಾಡಿನ ಪ್ರಾಣಿಗಳು ಈಗಲೂ ಬರುವ ಪ್ರಾಣಿಯನ್ನು ವಾಸನೆಯಿಂದ ಕಂಡು ಹಿಡಿಯುತ್ತವೆ, ಮನುಷ್ಯರೂ ಹಾಗೇ ಇದ್ದರೂ ಜೀವನಶೈಲಿ ಬದಲಾವಣೆಯಿಂದ ಬಹುಮುಖ್ಯವಾದ ಅಂಶವನ್ನು ಕಳೆದುಕೊಳ್ಳುತ್ತಾ ಬರುತ್ತಿದ್ದೇವೆ.
ಈ ಕೃತಕ ಮೂಗನ್ನು ತಯಾರು ಮಾಡಿರುವ ಬೆಂಜಮಿನ್ ಕೇಬ್ ಎಂತಹ ಒಳ್ಳೆಯ ಮನುಷ್ಯ ಎಂದರೆ ಇಡೀ ಟೆಕ್ನಾಲಜಿಯ ಕೋಡ್ ಅನ್ನು ಗಿಟ್ ಹಬ್‌ಗೆ ಹಾಕಿಬಿಟ್ಟಿದ್ದಾನೆ. ಅಂದರೆ ನಾವೂ ಕೂಡ ಮನೆಯಲ್ಲಿ ಒಂದು ಮೂಗನ್ನು ಬಿಲ್ಡ್ ಮಾಡಬಹುದು. ತ್ರೀಡಿ ಪ್ರಿಂಟೆಡ್ ಒಂದು ಮೂಗಿನ ಆಕಾರದ ಕೊಳವೆಗೆ ಸೆನ್ಸರು, ಅದಕ್ಕೊಂದು ಸಣ್ಣ ಪ್ರಾಸೆಸರ್ ಹಾಕಿದರೆ ಹೊರಭಾಗ ಮುಗಿಯಿತು. ಒಳಭಾಗದದಲ್ಲಿ ಆಗುವ ಕೃತಕ ಬುದ್ಧಿಮತ್ತೆಯ ಕೆಲಸಗಳಿಗೆ ಆತನ ಕೋಡುಗಳು ಸಹಾಯ ಮಾಡುತ್ತದೆ. ಮೊದಮೊದಲು ಅನ್ಸೋಮಿಯಾ ಪೇಷೆಂಟುಗಳ ಮೇಲೆ ಇದನ್ನ ಪ್ರಯೋಗವೂ ಮಾಡಲಾಗಿದೆ. ಅನ್ಸೋಮಿಯಾ ವಾಸನೆ ಗ್ರಹಿಕೆ ನಲವತ್ತು ವಯಸ್ಸಿನ ನಂತರ ಕಡಿಮೆ ಆಗುತ್ತಾ ಬರುವುದು. ಈಗ ಅಮೇರಿಕಾದಲ್ಲಿ 40 ವಯಸ್ಸಿನ ನಂತರ 23 ಪ್ರತಿಶತ ಜನರಿಗೆ ಈ ರೋಗ ಬಾಧಿಸುತ್ತದಂತೆ. ಕೋವಿಡ್ ಬಂದ ನಂತರವಂತೂ ಅದಿನ್ನೂ ಜಾಸ್ತಿಯಾಗಿದೆ ಅನ್ನೋದು ಸುಳ್ಳಲ್ಲ. ಅಂತಹ ಸಂದರ್ಭದಲ್ಲಿ ಇದು ಬಹಳ ಸಹಕಾರಿ.
ಇದನ್ನೂ ಓದಿ | ವಾಕಿಂಗ್ ಚಿತ್ರಗಳು ಅಂಕಣ: ಸ್ಮಾರ್ಟ್ ವಾಚಿಗೆ ಯಾಮಾರಿಸೋ ಪ್ರೋಗ್ರಾಂಗಳು
ಬೇರೆಯವರ ವಿಷಯದಲ್ಲಿ ಮೂಗು ತೂರಿಸಬೇಡಿ, ಕೋಪದಿಂದ ಮೂಗು ಕುಯ್ದುಕೊಳ್ಳಬೇಡಿ ಎಂದೆಲ್ಲಾ ಹೇಳುವಾಗ ಇರೋದೊಂದೇ ಮೂಗು ಕಾಪಾಡಿಕೊಳ್ಳಿ ಎಂದು ಎಚ್ಚರ ಕೊಡುವ ಹಾಗಿರುತ್ತದೆ. ಆದರೆ “ಹೋದ್ರೆ ಹೋಗ್ಲಿ ಬಿಡು ಇನ್ನೊಂದು ಮಾಡಿಸಿಕೊಂಡರೆ ಆಯ್ತು” ಎಂದು ಹೇಳುವ ಭಂಡ ಧೈರ್ಯ ಇನ್ನು ಮುಂದೆ ಎಲ್ಲರಿಗೂ ಬರಬಹುದು. ಈ ಕೃತಕ ಮೂಗಿಗೆ ನೆಗಡಿ ಬರುವ ಛಾನ್ಸುಗಳು ಕಡಿಮೆ ಇರುವ ಕಾರಣ ವರ್ಷಕ್ಕೆ ಆರು ತಿಂಗಳು ನೆಗಡಿ ಇರುವ, ದಿನ ಬೆಳಗಾದರೆ 10 ಸೀನುಗಳನ್ನು ಸೀನುವ ಜನರಿಗೆ ಒಂದು ಸಣ್ಣ ಪರಿಹಾರವೂ ಸಿಗಬಹುದು. ಅಥವಾ ಈ ಕಾಫಿ ಪುಡಿಗೆ 10 ಪರ್ಸೆಂಟಿಗಿಂತ ಜಾಸ್ತಿ ಚಿಕೋರಿ ಹಾಕಿದ್ದಾರೆ ಎಂದು ಕಂಡುಹಿಡಿಯಬಹುದು, ಅಮ್ಮ ನಾನು ಅಡುಗೆಗೆ ಇದನ್ನ ಹಾಕಿಲ್ಲ ಎಂದು ಹೇಳಿದಾಗಲೂ ಕಂಡುಹಿಡಿಯಬಹುದು, ಇಲ್ಲ ಸಿಗರೇಟು ಸೇದಿಲ್ಲ ಎಂದು ಹೇಳುವ ಗೆಳೆಯರ ಬಾಯನ್ನೂ ಪರೀಕ್ಷಿಸಬಹುದು. ಬೈಕ್ ಸವಾರರ ಡ್ರಂಕನ್ ಡ್ರೈವ್ ಟೆಸ್ಟ್ ಮಾಡಲು ಅವರ ಬಾಯಿಗೆ ಮೂಗಿಡಲು ಮುಂದಾಗುವ ಟ್ರಾಫಿಕ್ ಪೊಲೀಸರು ಇದನ್ನೇ ಇಡಬಹುದು.
ಟೆಕ್ನಾಲಜಿಯನ್ನು ಕಂಡುಹಿಡಿಯೋದು ಒಂದು ಕಡೆ ಆದರೆ ಅದನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಓಪನ್ ಸೋರ್ಸ್ ಆಗಿ ಬಿಡೋದು ದೊಡ್ಡತನವೇ. ಮಿಲಿಯನ್ನುಗಟ್ಟಲೆ ಹಣ ಗಳಿಸಬಹುದಾದ ಕೆಲಸಕ್ಕೆ ಮಿಲಿಯನ್ನುಗಟ್ಟಲೆ ಹಾರ್ಟ್ ಇಮೋಜಿ ಸಂಪಾದಿಸಿರುವ ಬೆಂಜಮಿನ್ ಕೇಬ್ ನಿಜಕ್ಕೂ ಪ್ರಶಂಸನೀಯ. ವಾಕಿಂಗಿಗೆ ಈ ಮೂಗನ್ನು ತೆಗೆದುಕೊಂಡು ಹೋಗಿ ಒಳ್ಳೆ ಮಸಾಲೆ ಪುರಿ ಮತ್ತು ಕೆಟ್ಟ ಮಸಾಲೆ ಪುರಿಯ ವ್ಯತ್ಯಾಸವನ್ನು ಕಂಡುಹಿಡಿಯುವ ಕೆಲಸ ತುರ್ತಾಗಿ ಮಾಡಬೇಕು.
(ಲೇಖಕರು ಕೃತಕ ಬುದ್ಧಿಮತ್ತೆ ವಲಯದಲ್ಲಿ ಉದ್ಯೋಗಿ. ಕತೆಗಾರ್ತಿ ಮತ್ತು ಅಂಕಣಗಾರ್ತಿ. ಪ್ರೀತಿ ಗೀತಿ ಇತ್ಯಾದಿ, ಜಯನಗರದ ಹುಡುಗಿ, ಲಿಪಿಯ ಪತ್ರಗಳು, AI ಕಥೆಗಳು, ಬೆಂಗಳೂರು ಕಲರ್ಸ್ ಇವರ ಕೃತಿಗಳು. ಕನ್ನಡೇತರರರಿಗೆ ಕನ್ನಡ ಕಲಿಸುವ ʼಕನ್ನಡ ಗೊತ್ತಿಲ್ಲʼದಲ್ಲೂ ಸಕ್ರಿಯ.)