Site icon Vistara News

ಬೊಮ್ಮಾಯಿ ಆಡಳಿತಕ್ಕೆ ವರ್ಷ| ಈ ಬೊಮ್ಮಾಯಿ ಸಮ್ಮುಖ ಆ ಬೊಮ್ಮಾಯಿ ನೆನಪು

SR Bommai

ಎಲ್ಲ ಊಹೆಗಳನ್ನೂ ಮೀರಿ ಮುಖ್ಯಮಂತ್ರಿ ಪಟ್ಟವನ್ನೇರಿದ ಬಸವರಾಜ ಬೊಮ್ಮಾಯಿ, ತುಯ್ಯುವ ಅಲೆಗಳ ಜತೆಜತೆಗೇ ಸಾಗುವ ನಾವೆಯಂತೆ ಮುನ್ನಡೆದಿದ್ದಾರೆ. ಸಿಎಂ ಗಾದಿ ಎನ್ನುವುದು ಬಿಸಿ ಆಸನ. ಕೂರುವವರೆಗೂ ಅದು ಬೇಕೆನಿಸುತ್ತದೆ; ಕೂತಾದ ಬಳಿಕ ಹಲವರ ಪಾಲಿಗೆ ಸಾಕುಸಾಕೆನಿಸುವ ಭಾಗ್ಯವಾಗುತ್ತದೆ. ಒಂದು ವರ್ಷ ಸಿಎಂ ಪಟ್ಟದಲ್ಲಿದ್ದು ಬೊಮ್ಮಾಯಿ ಮುನ್ನಡೆದಿದ್ದಾರೆ ಎನ್ನುವುದು ರಾಜಕೀಯವಾಗಿ ಅಂಥ ಮಹತ್ವದ್ದೇನೂ ಅಲ್ಲ. ಆದರೆ ಇತಿಹಾಸದೊಂದಿಗೆ ವರ್ತಮಾನವನ್ನು ತುಲನೆಗೆ ಇಟ್ಟು ನೋಡಿದರೆ ಬಸವರಾಜರ ಸಾಧನೆಯಲ್ಲಿ ಒಂದು ಆಕಸ್ಮಿಕವಲ್ಲದ ಮೆಚ್ಚುಗೆಗೆ ಅರ್ಹವಾದ ಅಂಶ ಹೊಳೆಯುತ್ತದೆ.

ವರ್ಷದ ಹಿಂದೆ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಉತ್ತರಾಧಿಕಾರಿಯನ್ನಾಗಿ ಬಸವರಾಜರ ಹೆಸರನ್ನು ಸೂಚಿಸಿದಾಗ ಬಿಜೆಪಿಯಲ್ಲಿ, ಬಿಜೆಪಿ ಶಾಸಕಾಂಗದಲ್ಲಿ, ಹೈಕಮಾಂಡ್‌ನ ಕೆಲವು ಸ್ತರದಲ್ಲಿ ಅಚ್ಚರಿಯ ಕಟ್ಟೆ ಒಡೆದಿತ್ತು. ಯಡಿಯೂರಪ್ಪ ಸ್ಥಾನ ಬಿಡುವುದು ಖಚಿತವಾಗಿದ್ದ ಸಮಯದಲ್ಲಿ ಎಷ್ಟೆಲ್ಲ ಹೆಸರುಗಳು ಮಾಧ್ಯಮದಲ್ಲಿ ತೇಲಿದವು. ವದಂತಿಯನ್ನೇ ಆಧರಿಸಿ ಪುಂಖಾನುಪುಂಖವಾಗಿ ಸೂಚಿತವಾದ ಹೆಸರುಗಳಲ್ಲಿ ಬೊಮ್ಮಾಯಿ ಹೆಸರಿನ ಪ್ರಸ್ತಾಪ ಮಾತ್ರ ಇರಲೇ ಇಲ್ಲ. ಯಡಿಯೂರಪ್ಪ ಸಂಪುಟದಲ್ಲಿ ಗೃಹ ಸಚಿವರಾಗಿದ್ದ ಬೊಮ್ಮಾಯಿ, ತಮಗೂ ಮತ್ತು ಬಿಜೆಪಿ ಶಾಸಕಾಂಗ ಪಕ್ಷದ ನಾಯಕತ್ವ ಬದಲಾವಣೆಗೂ ಸಂಬಂಧವೇ ಇಲ್ಲದವರಂತೆ ತಾವಾಯಿತು ತಮ್ಮ ಕೆಲಸವಾಯಿತು ಎಂಬಂತೆ ಇದ್ದರು. ಯಡಿಯೂರಪ್ಪ, ತಮ್ಮ ಹೆಸರನ್ನು ಸೂಚಿಸಿದಾಗ ಅಚ್ಚರಿಪಟ್ಟವರಲ್ಲಿ ಬೊಮ್ಮಾಯಿ ಕೂಡಾ ಒಬ್ಬರು ಎನ್ನುವುದು ಅವರನ್ನು ಹತ್ತಿರದಿಂದ ಗಮನಿಸುತ್ತಿರುವವರೆಲ್ಲರೂ ಬಲ್ಲ ಸಂಗತಿ. ರಾಜ್ಯ ಇತಿಹಾಸದಲ್ಲಿ ಮುಖ್ಯಮಂತ್ರಿಯಾಗಿದ್ದವರ ಮಗ ಮುಖ್ಯಮಂತ್ರಿಯಾದ ಎರಡನೆ ಪ್ರಕರಣ ಇದು.

ಬೊಮ್ಮಾಯಿಯರ ತಂದೆ ಎಸ್.ಆರ್.ಬೊಮ್ಮಾಯಿ ಎಂಭತ್ತರ ದಶಕದಲ್ಲಿ ಸಿಎಂ ಆಗಿದ್ದರು. ಮತ್ತೊಂದು ನಿದರ್ಶನ ಎಚ್.ಡಿ.ದೇವೇಗೌಡರು ಕುಳಿತಿದ್ದ ಸ್ಥಾನದಲ್ಲಿ ಎಚ್.ಡಿ. ಕುಮಾರಸ್ವಾಮಿ ಪ್ರತಿಷ್ಠಾಪನೆಗೊಂಡಿದ್ದು.
“ಯಡಿಯೂರಪ್ಪನವರ ಮನುಷ್ಯ” ಎಂದೇ ಕೆಲವರ ವ್ಯಂಗ್ಯದ ತಿವಿತ ಎದುರಿಸುತ್ತ ಅಧಿಕಾರ ಪದಗ್ರಹಣ ಮಾಡಿದ ಬೊಮ್ಮಾಯಿ, ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುವುದಕ್ಕೆ ವೇದಿಕೆಯಾಗಿ ಬಳಸಿಕೊಂಡಿದ್ದು ಶಾಸನ ಸಭಾಧಿವೇಶನವನ್ನು. ಆ ಹೊತ್ತಿಗೆ ಕೊರೋನಾ ಹಾವಳಿ ಮಿತಿ ಮೀರಿತ್ತು. ಕೊರೋನಾ ನಿಯಂತ್ರಣದಲ್ಲಿ ಸರ್ಕಾರ ವಿಫಲವಾಗಿದೆ, ಕೊರೋನಾ ಪೀಡಿತರ ಹೆಣ ಮುಂದಿಟ್ಟುಕೊಂಡು ಹಣ ಮಾಡಿದರು, ಅದರಲ್ಲಿ ಪ್ರಕಾಂಡ ಭ್ರಷ್ಟಾಚಾರ ನಡೆದಿದೆ ಎನ್ನುವ ಆರೋಪವನ್ನು ಬೊಮ್ಮಾಯಿ ಸರ್ಕಾರ ಎದುರಿಸಬೇಕಾಗಿ ಬಂತು. ರಾಜ್ಯ ಗುತ್ತಿಗೆದಾರರ ಸಂಘ ಮಾಡಿರುವ ಆರೋಪದಂತೆ ಸರ್ಕಾರದ ಕಾಮಗಾರಿಗಳಲ್ಲಿ ಶೇ.40ರಷ್ಟು ಕಮಿಷನ್ ದಂಧೆ ಸಾಗಿದೆ ಎಂಬ ಆರೋಪ ಬೊಮ್ಮಾಯಿ ಪಾಲಿಗೆ ಬಹುದೊಡ್ಡ ಸವಾಲಾಯಿತು. ಪಠ್ಯ ಪುಸ್ತಕ ಪರಿಷ್ಕರಣೆಯ ವಿವಾದ, ರಾಜ್ಯದ ಇತಿಹಾಸದಲ್ಲಿ ಅದೇ ಮೊದಲ ಬಾರಿಗೆ ಐಎಎಸ್, ಐಪಿಎಸ್ ಅಧಿಕಾರಿಗಳ ಬಂಧನಕ್ಕೆ ಕಾರಣವಾದ ಹಗರಣ ಮುಂತಾದವು ಬೊಮ್ಮಾಯಿ ನಿದ್ರೆಗೆಡಿಸಲು ಕಾರಣವಾಗಿದ್ದು ಸುಳ್ಳೇನೂ ಅಲ್ಲ.

ಸರ್ಕಾರ ನಡೆಸುವವರು ಎಷ್ಟೇ ನಿರಾಕರಿಸಿದರೂ ಶೇ.40 ಕಮಿಷನ್ ದಂಧೆ ಪ್ರಕರಣ ಕ್ರಮೇಣ ಹಗರಣದ ಸ್ವರೂಪ ಪಡೆದು ಸಂಪುಟದ ಬಹು ಮುಖ್ಯ ಸಚಿವರಲ್ಲಿ ಒಬ್ಬರಾಗಿದ್ದ ಕೆ.ಎಸ್.ಈಶ್ವರಪ್ಪ ರಾಜೀನಾಮೆ ನೀಡುವಲ್ಲಿಯವರೆಗೆ ಸಾಗಿತು. ಇದೀಗ ಈಶ್ವರಪ್ಪ ಪ್ರಕರಣದಲ್ಲಿ ಪೊಲೀಸರು “ಸಾಕ್ಷ್ಯಾಧಾರದ” ಕೊರತೆ ನೆಪದಲ್ಲಿ ಬಿ-ರಿಪೋರ್ಟ್ ಸಲ್ಲಿಸಿದ್ದಾಗಿದೆ. ಅಂದ ಮಾತ್ರಕ್ಕೆ ಪ್ರಕರಣ ಪೂರ್ಣ ವಿರಾಮ ಕಂಡಿಲ್ಲ. ಈಶ್ವರಪ್ಪ ಸಂಘ ಪರಿವಾರದ ಡಾರ್ಲಿಂಗ್‌ಗಳಲ್ಲಿ ಒಬ್ಬರಷ್ಟೇ ಅಲ್ಲ, ರಾಜ್ಯದ ನೂರಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ವ್ಯಾಪಕವಾಗಿರುವ ಕುರುಬ ಸಮುದಾಯದ ಗಮನಾರ್ಹ ನಾಯಕ. ಆ ಸಮುದಾಯದಲ್ಲಿ ಸಿದ್ದರಾಮಯ್ಯ ತರುವಾಯದ ಅತ್ಯಂತ ಪ್ರಭಾವಿ ಮುಖಂಡ. ಬಿ ರಿಪೋರ್ಟ್ ಸಲ್ಲಿಕೆ ಆದ ನಂತರದಲ್ಲಿ ಅವರು ಮತ್ತೆ ಸಂಪುಟದೊಳಕ್ಕೆ ಬರುವ ದಾರಿಯಲ್ಲಿದ್ದಾರೆ. ಆದರೆ ಅದು ಅವರು ಬಯಸಿದಷ್ಟು ಸುಲಭ ಮಾರ್ಗವಲ್ಲ.
ಸಂಪುಟದಲ್ಲಿ ಪ್ರಸ್ತುತ ಐದು ಸ್ಥಾನ ಖಾಲಿ ಇದ್ದು ಭರ್ತಿಗೆ ಕಾದಿವೆ. ಚುನಾವಣೆ ಬಹಳ ದೂರದಲ್ಲಿಲ್ಲ. ಅಷ್ಟರೊಳಗೆ ಗೂಟದ ಕಾರಲ್ಲಿ ಕುಳಿತು ಮಂತ್ರಿಗಿರಿ ದರ್ಬಾರು ನಡೆಸುವ ಆಸೆಯಲ್ಲಿ ಹಲವರಿದ್ದಾರೆ. ಯಡಿಯೂರಪ್ಪ ನೇತೃತ್ವದಲ್ಲಿ ಪಕ್ಷ ಅಧಿಕಾರಕ್ಕೆ ಬಂದ ದಿವಸದಿಂದಲೂ ಕನಸು ಕಾಣುತ್ತಿರುವವರೂ ಇದ್ದಾರೆ. ಈಶ್ವರಪ್ಪ ಒಬ್ಬರನ್ನೇ ಸಂಪುಟದೊಳಕ್ಕೆ ತರುವ ಇಚ್ಛೆ ಮುಖ್ಯಮಂತ್ರಿಯಲ್ಲಿದ್ದರೂ ಅಷ್ಟೆಲ್ಲ ಸುಲಭದಲ್ಲಿ ಅದು ಈಡೇರುವ ಮಾತಲ್ಲ. ಪ್ರಸ್ತುತ ಬೊಮ್ಮಾಯಿ ಎದುರಿಸುತ್ತಿರುವ ಬಹುದೊಡ್ಡ ಸವಾಲು ಇದು. ನುಂಗಲೂ ಆಗದ, ಉಗುಳಲೂ ಆಗದ ಬಿಸಿ ತುಪ್ಪದಂತೆ. ಒಂದು ಮಾತು ಸತ್ಯ, ಈಶ್ವರಪ್ಪನವರನ್ನು ಒಳಕ್ಕೆ ಸೇರಿಸಿಕೊಳ್ಳುವುದರಿಂದ ಚುನಾವಣಾ ಲಾಭವನ್ನು ಆಡಳಿತ ಪಕ್ಷ ನಿರೀಕ್ಷಿಸಬಹುದು. ಆದರೆ ಸಚಿವ ಸ್ಥಾನಾಕಾಂಕ್ಷಿ ಇತರ ಶಾಸಕರ ಉಪಟಳ ಉಬ್ಬರಿಸಲಿದೆ. ಸಚಿವ ಸ್ಥಾನ ಬಯಸಿ ದೆಹಲಿಗೆ ದಂಡಯಾತ್ರೆ ಮಾಡುತ್ತಿರುವ ಕೆಲವರಾದರೂ ಪಕ್ಷದ ಹಿತಕ್ಕೆ ಮಾರಕವಾಗುವಂಥ ಹೆಜ್ಜೆಯನ್ನು ಇಡುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು. ಎಂಭತ್ತರ ದಶಕದಲ್ಲಿ ತಂದೆ ಬೊಮ್ಮಾಯಿ ಎದುರಿಸಿದಂಥ ಬಂಡಾಯ ಸ್ವರೂಪದ ಸವಾಲು ಮಗ ಬೊಮ್ಮಾಯಿಯವರಿಗೂ ಎದುರಾಗುವ ಸಾಧ್ಯತೆಯನ್ನು ತಳ್ಳಿ ಹಾಕಲಾಗದು.

ರಾಜ್ಯ ವಿಧಾನಸಭೆಗೆ 1983ರಲ್ಲಿ ನಡೆದ ಚುನಾವಣೆ ರಾಜ್ಯ ರಾಜಕಾರಣ ಕಂಡರಿಯದ ಬದಲಾವಣೆಗೆ ಕಾರಣವಾಯಿತು. ತುರ್ತು ಪರಿಸ್ಥಿತಿ ತರುವಾಯದಲ್ಲಿ ನಡೆದ ಚುನಾವಣೆಯಲ್ಲಿ ಬಚಾವ್ ಆದ ಎರಡು ರಾಜ್ಯ ಸರ್ಕಾರಗಳಲ್ಲಿ ಒಂದು ಆಂಧ್ರಪ್ರದೇಶ ಮತ್ತೊಂದು ಕರ್ನಾಟಕ. ಇಲ್ಲಿ ಚುನಾವಣೆ ಗೆಲ್ಲುವುದಕ್ಕೆ ಕಾರಣವಾಗಿದ್ದುದು ದೇವರಾಜ ಅರಸು ಆಡಳಿತ. 83ರಲ್ಲಿ ಅದೇ ಕಾಂಗ್ರೆಸ್ ಸೋಲಿಗೆ ಕಾರಣವಾಗಿದ್ದು ಗುಂಡೂರಾವ್ ದರ್ಬಾರು. “ಇಂದಿರಾಗಾಂಧಿ ಕೃಪಾಪೋಷಿತ ನಾಟಕ ಮಂಡಳಿ” ತಮ್ಮದು ಎಂಬ ಗುಂಡೂರಾಯರ ಆತ್ಮ ನಿವೇದನೆಯನ್ನು ಜನ ತಿರಸ್ಕರಿಸಿದ್ದರ ಪರಿಣಾಮ ಅದೇ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರ ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದಿದ್ದು. ಎಚ್.ಡಿ. ದೇವೇಗೌಡ, ಎಸ್.ಆರ್.ಬೊಮ್ಮಾಯಿ, ಜೆ.ಎಚ್.ಪಟೇಲ್ ಮುಂತಾದವರು ಹೆಗಡೆ ರಥವನ್ನು ಎಳೆಯಲು ಆಗ ಕೈಜೋಡಿಸಿದ ಪ್ರಮುಖರು. ಆ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಕಳೆದುಕೊಂಡಿತ್ತು. ಆದರೆ ಜನತಾ ಪಕ್ಷಕ್ಕೆ ನಿಚ್ಚಳ ಬಹುಮತ ಬಂದಿರಲಿಲ್ಲ. ಬಿಜೆಪಿಯ 18 ಶಾಸಕರು, ಸಿಪಿಐ-ಸಿಪಿಎಂ ಶಾಸಕರು ಮತ್ತು ಹಲವು ಪಕ್ಷೇತರ ಶಾಸಕರು ನೀಡಿದ ಬೆಂಬಲದೊಂದಿಗೆ ಕಾಂಗ್ರೆಸ್ಸೇತರ ಸರ್ಕಾರದ ರಚನೆಯಾಯಿತು. ಬಿಜೆಪಿ ಮತ್ತು ಉಭಯ ಕಮ್ಯೂನಿಸ್ಟ್ ಪಕ್ಷಗಳು ತಮ್ಮ ರಾಜಕೀಯ ವೈರತ್ವ ಬದಿಗಿಟ್ಟು ಸರ್ಕಾರ ರಚನೆಯಲ್ಲಿ ಕೈ ಜೋಡಿಸಿ ಸಹಕರಿಸಿದ ಮೊದಲ ನಿದರ್ಶನ ಅದೆನಿಸಿತು. ಸಾರಾಯಿ ಬಾಟ್ಲಿಂಗ್ ಹಗರಣ, ರೇವಜಿತು ಹಗರಣ, ಎನ್‌ಜಿಇಎಫ್ ಶೇರು ಪರಭಾರೆ ಪ್ರಕರಣ, ಮೆಡಿಕಲ್ ಸೀಟ್ ಹಗರಣ, ಟೆಲಿಫೋನ್ ಕದ್ದಾಲಿಕೆ ಪ್ರಕರಣ…ಹೀಗೆ ಒಂದೊಂದೂ ಹೆಗಡೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಹು ಕೇತುಗಳಂತೆ ಅಮರಿಕೊಂಡವು. ಅದೆಲ್ಲದರ ಪರಿಣಾಮವೆಂದರೆ ಮುಖ್ಯಮಂತ್ರಿ ಸ್ಥಾನಕ್ಕೆ ಅವರು ವಿದಾಯ ಹೇಳಬೇಕಾಗಿ ಬಂದುದು.
ಮುಂದೆ ಯಾರು ಎಂಬ ಪ್ರಶ್ನೆ ಎದುರಾದಾಗ ಮುಖ್ಯವಾಗಿ ಕೇಳಿ ಬಂದ ಎರಡು ಹೆಸರುಗಳಲ್ಲಿ ಒಂದು ದೇವೇಗೌಡರದು, ಮತ್ತೊಂದು ಎಸ್ ಆರ್ ಬೊಮ್ಮಾಯಿ ಅವರದು. ನೀರ್‌ಸಾಬ್ ಎಂದೇ ಖ್ಯಾತರಾಗಿದ್ದ ಅಬ್ದುಲ್ ನಜೀರ್ ಸಾಬ್ ಕಾಯಿಲೆಗೆ ಬಲಿ ಆಗದೆ ಇದ್ದಿದ್ದರೆ ಅವರನ್ನೆ ಉತ್ತರಾಧಿಕಾರಿಯನ್ನಾಗಿ ಘೋಷಿಸುವ ಹಂಬಲ ಹೆಗಡೆಯವರಲ್ಲಿತ್ತು. ಮಾಧ್ಯಮದ ಕೆಲವರ ಮುಂದೆ ಅದನ್ನು ಹೇಳಿಕೊಂಡಿದ್ದರು. ಅದು ಕಾರ್ಯರೂಪಕ್ಕೆ ಬಂದಿದ್ದರೆ ರಾಜ್ಯದ ಮೊದಲ ಮುಸ್ಲಿಂ ಮುಖ್ಯಮಂತ್ರಿಯಾಗಿ ನೀರ್ ಸಾಬ್ ಕೂರುತ್ತಿದ್ದರು. ಹೆಗಡೆಯವರ ಆ ಯೋಚನೆಯೊಂದಿಗೆ ವಿಧಿ ಕೈಜೋಡಿಸಲಿಲ್ಲ. ಹೆಗಡೆಯವರ ಮತ್ತೊಬ್ಬ ಕಣ್ಮಣಿ ಜೆ.ಎಚ್.ಪಟೇಲ್. ದೇವೇಗೌಡರು ಪ್ರಧಾನಿಯಾಗಿ ದೆಹಲಿಗೆ ಹೊರಟ ಸಂದರ್ಭದಲ್ಲಿ ಪಟೇಲರನ್ನು ಸಿಎಂ ಸ್ಥಾನದಲ್ಲಿ ಕುಳ್ಳಿರಿಸಿ ಹಳೆ ಕನಸನ್ನು ಹೆಗಡೆ ನನಸು ಮಾಡಿಕೊಂಡಿದ್ದು ಎಷ್ಟೋ ವರ್ಷ ತರುವಾಯದ ಘಟನೆ. ಮುಖ್ಯಮಂತ್ರಿ ಪದ ತ್ಯಾಗದ ಯೋಚನೆಯನ್ನು ಪಕ್ಷದ ನಾಯಕರ ಸಮ್ಮುಖದಲ್ಲಿ ಹೆಗಡೆ ಸ್ಪಷ್ಟಪಡಿಸಿದಾಗ ಆ ಸ್ಥಾನವನ್ನು ದೇವೇಗೌಡರು ಬಯಸಿದ್ದರು. ಆದರೆ ಹೆಗಡೆ, ಬೊಮ್ಮಾಯಿ ಪರವಾಗಿ ನಿಂತರು. ಆ ಬೊಮ್ಮಾಯಿ ಸಮುದ್ರದ ಅಲೆಯನ್ನಲ್ಲ ಸುನಾಮಿಯನ್ನೇ ಎದುರಿಸಬೇಕಾಯಿತು. 1989ರ ಏಪ್ರಿಲ್‌ನಲ್ಲಿ ಸಿಎಂ ಆದ ದಿವಸದಿಂದಲೂ ಪಕ್ಷದ ಒಳಗೆ ಹೊರಗೆ ತೀವ್ರ ಸ್ವರೂಪದ ಕಾಟವನ್ನು ಅವರು ಎದುರಿಸಬೇಕಾಯಿತು. ಆಡಳಿತ ಶಾಸಕಾಂಗ ಪಕ್ಷ ಹೋಳಾಯಿತು. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕ್ಷಣದಿಂದಲೂ ಜನತಾ ಪರಿವಾರ ಸರ್ಕಾರದ ಪತನಕ್ಕೆ ಕಾಯುತ್ತಿದ್ದ ಕಾಂಗ್ರೆಸ್ಸು ಆಡಳಿತ ಪಕ್ಷದ ಆಂತರಿಕ ಸಂಘರ್ಷದ ಈ ಸಂದರ್ಭವನ್ನು ತನ್ನ ಅನುಕೂಲಕ್ಕೆ ಬಳಸಿಕೊಂಡಿತು. ರಾಜ್ಯಪಾಲ ವೆಂಕಟಸುಬ್ಬಯ್ಯ, ಕಾಂಗ್ರೆಸ್ ತಾಳಕ್ಕೆ ಹೆಜ್ಜೆ ಹಾಕಿದರು. ಬೊಮ್ಮಾಯಿ ಸರ್ಕಾರ ಬಹುಮತ ಕಳೆದುಕೊಂಡಿದೆ ಎಂಬ ಅವರ ವರದಿಯನ್ನು “ಅಂಗೀಕರಿಸಿದ” ಕೇಂದ್ರ ಸರ್ಕಾರದ ಸಲಹೆಯಂತೆ ಬೊಮ್ಮಾಯಿ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಲಾಯಿತು.
ಪೂರ್ತಿಯಾಗಿ ಏಳು ತಿಂಗಳೂ ಮುಖ್ಯಮಂತ್ರಿ ಸ್ಥಾನದಲ್ಲಿರಲಾಗದ ಬೊಮ್ಮಾಯಿ, ಕೇಂದ್ರ ಸರ್ಕಾರ ಸಂವಿಧಾನದ 356 ನೇ ವಿಧಿಯನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಿ ದೂರನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಿಸಿದರು. ಮುಂದೆ ಅದು ಕೇಂದ್ರ ಸರ್ಕಾರ ವರ್ಸಸ್ ಎಸ್.ಆರ್. ಬೊಮ್ಮಾಯಿ ಪ್ರಕರಣವೆಂದೇ ಸಾಂವೈಧಾನಿಕ ಇತಿಹಾಸದಲ್ಲಿ ದಾಖಲಾಯಿತು.

“ಒಂದು ಸರ್ಕಾರಕ್ಕೆ ಬಹುಮತ ಇದೆಯೆ ಇಲ್ಲವೆ ಎನ್ನುವುದು ತೀರ್ಮಾನವಾಗಬೇಕಿರುವುದು ವಿಧಾನ ಸಭೆಯಲ್ಲೆ ಹೊರತು ರಾಜಭವನದ ಅಂಗಳದಲ್ಲಲ್ಲ” ಎಂಬ ಸರ್ವೋಚ್ಚ ನ್ಯಾಯಾಲಯದ ತೀರ್ಪು ಆರೋಗ್ಯಕರ ಜನತಂತ್ರಕ್ಕೆ ಕೊಟ್ಟ ಅಗಣಿತ ಕಾಣಿಕೆ. 1947ರಿಂದ 1977ರವರೆಗೂ ಕೇಂದ್ರದಲ್ಲಿ ಸತತ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷ ಸಂವಿಧಾನದ 356 ನೇ ವಿಧಿಯನ್ನು ಬಳಸಿ, ವಿರೋಧ ಪಕ್ಷಗಳ ಸರ್ಕಾರಗಳನ್ನು ವಜಾ ಮಾಡುವ ಕೆಟ್ಟ ಚಾಳಿಯನ್ನು ಮೈಗೂಡಿಸಿಕೊಂಡಿತ್ತು. ಜನತಂತ್ರದಲ್ಲಿ ಅಂಥ ದುರ್ವರ್ತನೆಗೆ ಅವಕಾಶವಿಲ್ಲ ಎನ್ನುವುದನ್ನು ಎತ್ತಿ ಹಿಡಿದ ತೀರ್ಪಿನ ಕಾರಣಪುರುಷ ಎಸ್.ಆರ್.ಬೊಮ್ಮಾಯಿಯವರು. ಆ ಮೊಕದ್ದಮೆಯಲ್ಲಿ ನ್ಯಾಯ ಅವರ ಕೈ ಹಿಡಿಯಿತು. ಆದರೆ ಅವರು ಕಳೆದುಕೊಂಡ ಸಿಎಂ ಹುದ್ದೆ ಅವರಿಗೆ ಮತ್ತೆ ಎಟುಕಲಿಲ್ಲ.

2007ರಲ್ಲಿ ಅವರ ನಿಧನದ ಬಳಿಕ ನಾನೇ ಬರೆದ ಲೇಖನವೊಂದರ ಸಾಲು ಇಲ್ಲಿ ನೆನಪಾಗುತ್ತಿದೆ. “ಸೂರ್ಯ ಚಂದ್ರರು ಇರುವತನಕ ಎಸ್.ಆರ್. ಬೊಮ್ಮಾಯಿ ಹೆಸರು ಇರುತ್ತದೊ ಇಲ್ಲವೋ ಹೇಳಲಾಗದು. ಆದರೆ ನಮ್ಮ ಸಂವಿಧಾನ ಇರುವ ತನಕ ಅವರ ಹೆಸರೂ ಶಾಶ್ವತವಾಗಿರುತ್ತದೆ” ಎಂದು ಸುಪ್ರೀಂಕೋರ್ಟ್‌ನ ಐತಿಹಾಸಿಕ ತೀರ್ಪನ್ನು ಉಲ್ಲೇಖಿಸಿ ಬರೆದಿದ್ದೆ.
ಅವರ ಮಗ ಬೊಮ್ಮಾಯಿಯವರಿಗೆ ತಂದೆ ಬೊಮ್ಮಾಯಿ ಎದರಿಸಿದ ಕಾಣದ ಭೂತದ ಭಯ ಇಲ್ಲ. ಕೇಂದ್ರದಲ್ಲಿ ಅವರದೇ ಪಕ್ಷದ ಸರ್ಕಾರವಿದೆ. ಬೇರೆ ಪಕ್ಷದ ಸರ್ಕಾರವಿದ್ದರೂ 356ನೇ ವಿಧಿ ಬಳಸುವ ಧೈರ್ಯ ಯಾವ ಪಕ್ಷಕ್ಕೂ ಇಲ್ಲ. ಆ ನೆಮ್ಮದಿಯಲ್ಲಿ ಬಸವರಾಜ ಬೊಮ್ಮಾಯಿ ಈಗ ಎದುರಿಸಬೇಕಾಗಿರುವುದು ಒಳ ಬಂಡಾಯವನ್ನು. ಹೈಕಮಾಂಡ್ ತೀರಾ ದುರ್ಬಲವಾಗಿದ್ದರೆ ಇಂಥ ಬಂಡಾಯ ಹದ್ದು ಮೀರುತ್ತದೆ. ಕರ್ನಾಟಕದಲ್ಲಿ ಲಕ್ಷ್ಮಣರೇಖೆಯನ್ನು ದಾಟುವ ಛಾತಿಯುಳ್ಳವರು ಬಿಜೆಪಿಯಲ್ಲಿಲ್ಲ ಎನ್ನುವುದು ಬೊಮ್ಮಾಯಿಯವರು ಬೇಡದೆ ಒಲಿದು ಬಂದಿರುವ ವರ. ಸದ್ಯದ ಸ್ಥಿತಿಯಲ್ಲಿ ಹಾಲಿ ಮುಖ್ಯಮಂತ್ರಿಗೆ ಎಲ್ಲವೂ ಅನುಕೂಲಕರವಾಗಿಯೇ ಇದೆ. ಮುಖ್ಯವಾಗಿ ವಿರೋಧ ಪಕ್ಷ ಕಾಂಗ್ರೆಸ್ “ಕನ್ನಡಿಯೊಳಗಿನ ಕುರ್ಚಿಗಾಗಿ ಬಡಿದಾಡುತ್ತಿರುವುದು” ಕೂಡಾ ಬೊಮ್ಮಾಯಿ ಪಾಲಿಗೆ ಹುಗ್ಗಿಯಾಗಿದೆ. ಚುನಾವಣೆ ಬಾಗಿಲು ಬಡಿಯಲಿರುವ ಈ ಘಟ್ಟದಲ್ಲಿ ಕನ್ನಡಿ ಮತ್ತಷ್ಟು ಒಡೆಯದಂತೆ ನಿಗಾ ವಹಿಸುವ ತುರ್ತು ಅವರಿಗೆ ಇದೆ.

(ಲೇಖಕರು, ಹಿರಿಯ ಪತ್ರಕರ್ತರು)

ಇದನ್ನೂ ಓದಿ | ಸಮಸ್ಯೆ ಪರಿಹಾರದ ಭಾಗವಾಗಲಿ ವಿಸ್ತಾರ ನ್ಯೂಸ್‌: ಸಿಎಂ ಬಸವರಾಜ ಬೊಮ್ಮಾಯಿ ಆಶಯ

Exit mobile version