Site icon Vistara News

ಪಂಡಿತ್‌ ದೀನದಯಾಳ್‌ ಉಪಾಧ್ಯಾಯ ಜನ್ಮದಿನ | ಏಕಾತ್ಮ ಮಾನವತಾವಾದ ಮಾತ್ರವೇ ಸಮಾಜವನ್ನು ಮುನ್ನಡೆಸಬಲ್ಲದು: ಪಿ. ರಾಜೀವ್‌ ವಿಶೇಷ ಲೇಖನ

deendayal upadhyaya

ಪಿ. ರಾಜೀವ್‌, ಶಾಸಕರು, ಕುಡಚಿ ವಿಧಾನಸಭಾ ಕ್ಷೇತ್ರ
ಇಪ್ಪತ್ತನೇ ಶತಮಾನದ ಆರಂಭದಲ್ಲಿ ಜಗತ್ತಿನಲ್ಲಿ ಎರಡು ವಿಚಾರಧಾರೆಗಳು ಪ್ರಬಲವಾಗುತ್ತಿದ್ದವು. ಮೊದಲನೆಯದು ಬಂಡವಾಳವಾದ, ಎರಡನೆಯದು ಸಮಾಜವಾದ. ಬಂಡವಾಳವಾದ ಕೆಲವೇ ವ್ಯಕ್ತಿಗಳಿಗೆ ಸೀಮಿತವಾಗಿ ಜನ ಹಾಗೂ ಸಂಪನ್ಮೂಲವನ್ನು ಶೋಷಣೆ ಮಾಡಲು ಮುಂದಾಗುತ್ತದೆ. ಸಮಾಜವಾದ ವರ್ಗ ಸಂಘರ್ಷವನ್ನು ಹುಟ್ಟುಹಾಕುತ್ತದೆ. ಇಡೀ ಪಾಶ್ಚಾತ್ಯ ಜಗತ್ತಿನಲ್ಲಿ ಇವೆರಡರ ಬಗ್ಗೆಯೇ ಚರ್ಚೆ ನಡೆಯುತ್ತಿರುತ್ತದೆ. ಭಾರತದಲ್ಲಿರುವವರೂ ಇವೆರಡರಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಲೇಬೇಕು ಎಂಬ ವಾತಾವರಣ ಇರುತ್ತದೆ. ಈ ಸಂದರ್ಭದಲ್ಲಿ ದಾರ್ಶನಿಕ ಪಂಡಿತ್‌ ದೀನದಯಾಳ್‌ ಉಪಾಧ್ಯಾಯ ಅವರು (25 ಸೆಪ್ಟೆಂಬರ್‌ 1916- 11 ಫೆಬ್ರವರಿ 1968) ಏಕಾತ್ಮ ಮಾನವತಾವಾದವನ್ನು ಜಗತ್ತಿನ ಮುಂದಿಟ್ಟರು.

ದೀನದಯಾಳರ ಜೀವನ ಭಾರತ ದರ್ಶನದಂತೆ ಕಾಣುತ್ತದೆ. ಅವರೊಬ್ಬ ಅಪ್ರತಿಮ ಸಂಘಟಕ, ಪ್ರಬುದ್ಧ ಲೇಖಕ, ಭಾರತಕ್ಕೆ ಮುನ್ನೋಟ ನೀಡಿದ ದಿಗ್ದರ್ಶಕ. ಒಬ್ಬ ವ್ಯಕ್ತಿಯನ್ನು ಕೇವಲ ಒಂದು ದೃಷ್ಟಿಕೋನದಿಂದ ನೋಡಬಾರದು. ಒಬ್ಬ ವ್ಯಕ್ತಿ ಶರೀರ ಮಾತ್ರವಲ್ಲ. ಆತನನ್ನು ಮನಸ್ಸು, ಬುದ್ಧಿ, ಆತ್ಮವನ್ನು ಒಳಗೊಂಡಂತೆ ಸಮಗ್ರವಾಗಿ ನೋಡಬೇಕು ಎಂಬ ಚಿಂತನೆಯನ್ನು ದೀನದಯಾಳರು ನೀಡಿದರು.

ಒಬ್ಬ ವ್ಯಕ್ತಿಯ ಜೀವನ ಸಂಪೂರ್ಣ ಆಗಬೇಕೆಂದರೆ ಸುಖ, ಸಮೃದ್ದಿ, ಸಂಸ್ಕಾರ ಹಾಗೂ ಶಿಕ್ಷಣ ಇರಬೇಕು ಎಂಬ ವ್ಯವಸ್ಥೆಯನ್ನು ನಿರ್ಮಾಣ ಮಾಡಬೇಕು ಎಂದು ದೀನದಯಾಳರು ಪ್ರತಿಪಾದಿಸಿದರು. ಆಗ ಮಾತ್ರ ಸಮಗ್ರ ಸ್ವರೂಪದ ಸಮಾಜ ಕಟ್ಟಬಹುದು ಎಂದು ಅವರು ನಂಬಿದ್ದರು. ಏಕಾತ್ಮ ಮಾನವತಾವಾದ ಎನ್ನುವುದು ಭಾರತದ ಅಸ್ಮಿತೆ, ವಿಚಾರಧಾರೆಗೆ ಹೊಂದಿಕೊಂಡಿದೆ. ಹಾಗಾಗಿ ಬಂಡವಾಳವಾದ ಅಥವಾ ಸಮಾಜವಾದ ಈ ದೇಶಕ್ಕೆ ಪ್ರಸ್ತುತ ಅಲ್ಲ. ಏಕಾತ್ಮ ಮಾನವತಾವಾದದಿಂದ ಮಾತ್ರವೇ ಈ ದೇಶವನ್ನು ಅಖಂಡವಾಗಿ ಕಟ್ಟಲು ಸಾಧ್ಯ ಎಂಬ ಸಂದೇಶವನ್ನು ದೀನದಯಾಳ್‌ಜೀ ನೀಡುತ್ತಾರೆ.

ವ್ಯಕ್ತಿ, ನಂತರ ಕುಟುಂಬ, ನಂತರ ಸಮಾಜ, ಆನಂತರ ರಾಷ್ಟ್ರ. ವ್ಯಕ್ತಿಯಿಂದ ರಾಷ್ಟ್ರದವರೆಗೆ ಒಂದಕ್ಕೊಂದು ಸಂಪರ್ಕ ಕೊಂಡಿಯಿದೆ. ವ್ಯಕ್ತಿ ಚೆನ್ನಾಗಿದ್ದರೆ ಕುಟುಂಬ ಚೆನ್ನಾಗಿರುತ್ತದೆ, ಕುಟುಂಬಗಳು ಚೆನ್ನಾಗಿದ್ದಾಗ ಆರೋಗ್ಯವಂತ ಸಮಾಜ ನಿರ್ಮಾಣವಾಗುತ್ತದೆ, ಆಗ ಮಾತ್ರ ಸದೃಢ ರಾಷ್ಟ್ರ ಕಟ್ಟಬಹುದು.

ಯಾರನ್ನು ಎಷ್ಟು ಬೇಕಾದರೂ ಶೋಷಣೆ ಮಾಡಿ ಲಾಭ ಮಾಡಿಕೊಳ್ಳಬೇಕು ಎಂಬ ಬಂಡವಾಳವಾದ ಒಂದು ಕಡೆ, ವರ್ಗ ಸಂಘರ್ಷವನ್ನು ಹುಟ್ಟುಹಾಕುವ, ಕಾರ್ಮಿಕ ತನ್ನ ತೃಪ್ತಿಗಾಗಿ ಮಾಲೀಕನನ್ನು ಹೇಗೆ ಬೇಕಾದರೂ ಹೆದರಿಸಬಹುದು ಎಂಬ ಸಮಾಜವಾದ ಇನ್ನೊಂದು ಕಡೆ. ಇವೆರಡದ ಆಚೆಗೆ, ಈ ಸಮಯದಲ್ಲಿ ಏಕಾತ್ಮ ಮಾನವತಾವಾದ ನಮಗೆಲ್ಲ ಸ್ಫೂರ್ತಿಯಾಗುತ್ತದೆ.

ದೀನದಯಾಳರು ಈ ರಾಷ್ಟ್ರದ ಅಖಂಡತೆಯ ಕುರಿತು ಬಲವಾದ ಪ್ರತಿಪಾದನೆ ಮಾಡುತ್ತಿದ್ದರು. ಅವರ ವಿಚಾರ ಸ್ಪಷ್ಟತೆಯು ವಜ್ರದಷ್ಟು ಕಠಿಣವಾಗಿದ್ದರೂ ಅದನ್ನು ನೀರಿನಂತೆ, ಯಾರಿಗೂ ನೋವಾಗದಂತೆ ಮೃದುವಾಗಿ ಹೇಳುತ್ತಿದ್ದರು. ಅಂತ್ಯೋದಯ ಪರಿಕಲ್ಪನೆ ನೀಡಿದವರು ದೀನದಯಾಳ್‌ ಉಪಾಧ್ಯಾಯರು. ರೋಗಗ್ರಸ್ಥ ವ್ಯಕ್ತಿಗಳನ್ನು ಇಟ್ಟುಕೊಂಡು ಆರೋಗ್ಯವಂತ ಸಮಾಜ ಕಟ್ಟಲು ಸಾಧ್ಯವಿಲ್ಲ. ಕಲ್ಯಾಣ ರಾಜ್ಯದ ಪರಿಕಲ್ಪನೆಯನ್ನು ರೂಪಿಸುವಾಗ, ಕಟ್ಟಕಡೆಯ ವ್ಯಕ್ತಿಯನ್ನು ಕಣ್ಣಮುಂದೆ ಇರಿಸಿಕೊಂಡು ಯೋಜನೆಗಳು ಅನುಷ್ಠಾನವಾಗಬೇಕು ಎಂದರು.

ಪ್ರಧಾನಿ ನರೇಂದ್ರ ಮೋದಿಯವರು ಪಠಿಸುವ ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌, ಸಬ್‌ ಕಾ ವಿಶ್ವಾಸ್‌, ಸಬ್‌ ಕಾ ಪ್ರಯಾಸ್‌ ಎನ್ನುವ ಮಂತ್ರಕ್ಕೆ ದೀನದಯಾಳರ ಜೀವನವೇ ಪ್ರೇರಣೆ. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಸದೃಢನನ್ನಾಗಿ ಮಾಡಲು ವ್ಯಕ್ತಿಯಾಗಿ, ಕುಟುಂಬವಾಗಿ, ಸಮಾಜವಾಗಿ ಹಾಗೂ ರಾಷ್ಟ್ರವಾಗಿ ಏನೆಲ್ಲ ಕೆಲಸಗಳನ್ನು ಮಾಡಬೇಕಾಗಿದೆ ಎಂಬ ಚಿಂತನೆಯನ್ನು ದೀನದಯಾಳರು ಈ ದೇಶಕ್ಕೆ ಕೊಟ್ಟರು.

ಹೂವಿನ ಹಾಸಿಗೆಯಲ್ಲ ಜೀವನ

ದೀನದಯಾಳರು ಸಂಘದ ಸ್ವಯಂಸೇವಕರು. ರಾಜಕೀಯ ಕ್ಷೇತ್ರದಲ್ಲಿ ಸುಧಾರಣೆಯನ್ನು ತರುವ ಮೂಲಕ ದೀನದಯಾಳರು ತಮ್ಮ ಸಾಮಾಜಿಕ ಸೇವೆಯನ್ನು ಸಲ್ಲಿಸಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ದ್ವಿತೀಯ ಸರಸಂಘಚಾಲಕರಾದ ಗುರೂಜಿ ಅವರು ಅಪೇಕ್ಷಿಸಿದರು. ದೀನದಯಾಳರನ್ನು, ಜನಸಂಘದ ಕಾರ್ಯದರ್ಶಿಯಾಗಿ ಕಳಿಸಿಕೊಟ್ಟರು.

ಈ ಸಂದರ್ಭದಲ್ಲಿ ಒಂದು ವಿಶೇಷ ಘಟನೆ ನಡೆಯುತ್ತದೆ. ಜನಸಂಘಕ್ಕೆ ಕಳಿಸಿಕೊಟ್ಟ ಎರಡು ವರ್ಷದ ನಂತರ ಗುರೂಜಿ ಹಾಗೂ ದೀನದಯಾಳರು ಭೇಟಿ ಆಗುತ್ತಾರೆ. ದೇಶದಲ್ಲಿ ಈಗಿನ ರಾಜಕೀಯ ಬೆಳವಣಿಗೆಯನ್ನು ನೋಡಿದಾಗ, ಅದೇಕೊ ರಾಜಕೀಯ ಹಿಡಿಸುತ್ತಿಲ್ಲ ಎಂದು ದೀನದಯಾಳರು ಹೇಳುತ್ತಾರೆ. ಅದಕ್ಕೆ ಗುರೂಜಿ ಹೇಳುತ್ತಾರೆ; ರಾಜಕೀಯ ಕ್ಷೇತ್ರ ಯಾವತ್ತು ನಿನಗೆ ಹಿಡಿಸುತ್ತದೆಯೋ ಆಗ ನಿನ್ನನ್ನು ವಾಪಸ್‌ ಕರೆಸಿಕೊಳ್ಳುತ್ತೇನೆ. ನಿನಗೆ ಎಲ್ಲಿಯವರೆಗೆ ಅದು ಹಿಡಿಸುವುದಿಲ್ಲವೋ ಅಲ್ಲಿಯವರೆಗೆ ಅದನ್ನು ಶುದ್ಧೀಕರಿಸಲು ಪ್ರಯತ್ನ ಮಾಡಬೇಕು ಎಂದು ಗುರೂಜಿ ಹೇಳಿದ್ದರು.

ದೀನದಯಾಳರ ಜೀವನ ಹೂವಿನ ಹಾಸಿಗೆ ಆಗಿರಲಿಲ್ಲ. ಬಾಲ್ಯದಲ್ಲಿಯೇ ತಂದೆಯನ್ನು, ನಂತರ ತಾಯಿಯನ್ನು, ಆನಂತರ ಮಾವನನ್ನು, ಕೊನೆಗೆ ತಮ್ಮನನ್ನೂ ಕಳೆದುಕೊಳ್ಳುತ್ತಾರೆ. ಹಾಗೂ ಹೀಗೂ ಕಷ್ಟಗಳ ನಡುವೆಯೇ ಡಿಗ್ರಿ ಮುಗಿಸುತ್ತಾರೆ, ಆದರೆ ಸ್ನಾತಕೋತ್ತರ ಸಾಧ್ಯವಾಗುವುದಿಲ್ಲ. ತಮ್ಮ ಜೀವನದಲ್ಲಿ ಕಂಡ ಎಲ್ಲ ಕಷ್ಟ, ನೋವುಗಳು, ಅವರು ಮುಂದೆ ಕೈಗೊಳ್ಳುವ ಸಾಮಾಜಿಕ ಸೇವೆಯಲ್ಲಿ ಬಹುದೊಡ್ಡ ಪಾತ್ರ ವಹಿಸುತ್ತವೆ. ಸಮಾಜದ ಕಷ್ಟವನ್ನು ಅರ್ಥ ಮಾಡಿಕೊಳ್ಳಲು ಇವು ಸಹಾಯಕವಾಗುತ್ತವೆ.ಈ ಮೂಲಕ ದೀನದಯಾಳರು ಸಮಾಜಕ್ಕೆ ತಮ್ಮನ್ನು ತಾವು ಸಮರ್ಪಣೆ ಮಾಡಿಕಂಡ ಮಹಾನ್‌ ದಾರ್ಶನಿಕರಾದರು.

ಇದನ್ನೂ ಓದಿ | ಹೈಫಾ ಮುಕ್ತಿ ದಿನ | ಮೈಸೂರು ಮಹಾರಾಜರ ಸೇನೆಯಿಂದ ಇಸ್ರೇಲಿನ ಹೈಫಾ ನಗರ ರಕ್ಷಿಸಲ್ಪಟ್ಟ ದಿನ ಇಂದು

ಉಪವಾಸವಿದ್ದು ಸಂಘಟನೆ ಕಟ್ಟಿದರು

ದೀನದಯಾಳರು ಉದಾತ್ತ ವಿಚಾರಧಾರೆಯನ್ನು ಇಟ್ಟುಕೊಂಡು ದೇಶವನ್ನು ಕಟ್ಟಲು ಅವಿರತ ಶ್ರಮ ಹಾಕಿದರು. ದೇಶವನ್ನು ಮುನ್ನಡೆಸುವ ದೊಡ್ಡ ಯುವ ಪಡೆಯನ್ನು ಕಟ್ಟಲು, ಒಗ್ಗೂಡಿಸಲು ಅಪ್ರತಿಮ ಸಂಘಟನಾ ಕೆಲಸ ಮಾಡಿದರು. ಆದರೆ ಈ ಎಲ್ಲ ಚಟುವಟಿಕೆಗಳ ಸಂದರ್ಭದಲ್ಲಿ ಅವರ ವೈಯಕ್ತಿಕ ಕಷ್ಟಗಳನ್ನು ಅವರು ಎಲ್ಲಿಯೂ ತೋರಿಸಿಕೊಳ್ಳುತ್ತಿರಲಿಲ್ಲ.

ದೀನದಯಾಳರು ಭಾಷಣ ಮಾಡುತ್ತಿದ್ದಾರೆ, ವಿಚಾರವನ್ನು ಮಂಡನೆ ಮಾಡುತ್ತಿದ್ದಾರೆ ಎಂದರೆ ಹಿರಿಯರೂ ಬಂದು ಕೇಳುತ್ತಿದ್ದರು. ಶ್ರೀಮಂತರು, ಬಡವರು, ಹೋರಾಟಗಾರರೆಂಬ ಭೇದವಿಲ್ಲದೆ ಅವರ ಮಾತನ್ನು ಆಲಿಸುತ್ತಿದ್ದರು. ಎದುರು ಸಿಕ್ಕಾಗ ದೀನದಯಾಳರಿಗೆ ಶ್ರೀಮಂತರು ಹಾಗೂ ಬಡವರು ಎಂಬ ಭೇದ ಇರುತ್ತಿರಲಿಲ್ಲ.

ಅನೇಕ ಸಂದರ್ಭದಲ್ಲಿ ಊಟ ಮಾಡಲು ಸಾಧ್ಯವಾಗದೆ, ಸಮೀಪದ ಒಂದು ಗೂಡಂಗಡಿಯಿಂದ ಶೇಂಗಾ ಕಾಳುಗಳನ್ನು ಖರೀದಿಸಿ ಅದನ್ನು ಸೇವಿಸಿ ಮಲಗುತ್ತಿದ್ದರು. ದೀನದಯಾಳರ ಭಾಷಣದಿಂದ ಪ್ರೇರಿತನಾಗಿದ್ದ ಶ್ರೀಮಂತನೊಬ್ಬ, ಒಮ್ಮೆ ದೀನದಯಾಳರು ಶೇಂಗಾ ಖರೀದಿಸುತ್ತಿರುವುದನ್ನು ನೋಡಿದ. ದೀನದಯಾಳರು ಅತ್ತ ಹೋದ ನಂತರ ಅಂಗಡಿಗೆ ತೆರಳಿದ ವ್ಯಕ್ತಿ, ಇವರು ಯಾರು ಗೊತ್ತೇ ಎಂದು ಅಂಗಡಿಯವನನ್ನು ಕೇಳಿದ. ಅವರು ಇಲ್ಲೇ ಸಮೀಪದಲ್ಲಿ ವಾಸಿಸುತ್ತಾರೆ, ಆಗಾಗ್ಗೆ ಬಂದು ಶೇಂಗಾ ಖರೀದಿ ಮಾಡುತ್ತಾರೆ ಎಂದು ಹೇಳುತ್ತಾನೆ.

ಅದಕ್ಕೆ ಆ ಶ್ರೀಮಂತ, ಇವರು ಬಹಳ ದೊಡ್ಡ ವ್ಯಕ್ತಿ. ಅವರ ಭಾಷಣದಿಂದ ಬಹಳ ಪ್ರೇರಣೆಗೊಂಡಿದ್ದೇನೆ ಎಂದು ಹೇಳುತ್ತಾರೆ. ಆಗ ಅಂಗಡಿಯವನು ಅಚ್ಚರಿಗೊಂಡು, ಅವರಿಗೆ ಊಟ ಇಲ್ಲದ ಸಂದರ್ಭದಲ್ಲಿ ಶೇಂಗಾ ಸೇವಿಸಿ ಹಾಗೇಯೇ ಮಲಗಿಬಿಡುತ್ತಾರೆ ಎಂದು ಕೇಳಿದ್ದೇನೆ. ಇಲ್ಲುವೆ ಅತ್ಯಂತ ಸಾಮಾನ್ಯ ವ್ಯಕ್ತಿಯಂತೆ ಬಂದು ಹೋಗುತ್ತಾರೆ ಎಂದು ಹೇಳುತ್ತಾನೆ. ಇಷ್ಟು ಸರಳವಾಗಿದ್ದವರು ನಮ್ಮ ದೀನದಯಾಳರು.

ತಮ್ಮ ವೈಯಕ್ತಿಕ ಜೀವನವನ್ನು ಕಟ್ಟಿಕೊಂಡು ಅವರು ಸುಖವಾಗಿ ಇರಬಹುದಿತ್ತು. ಆದರೆ ಅಂದಿನ ಸಾಮಾಜಿಕ ಸ್ಥಿತಿ, ಅಂದಿನ ನೆಹರೂ ಸರ್ಕಾರ ಕೈಗೊಳ್ಳುತ್ತಿದ್ದ ತೀರ್ಮಾನಗಳು ಅವರನ್ನು ವೈಯಕ್ತಿಕ ಜೀವನದ ಕಡೆಗೆ ನೋಡಲು ಬಿಡಲಿಲ್ಲ. ಈ ದೇಶದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಪರಿಶ್ರಮಗಳು ವ್ಯರ್ಥವಾಗಬಾರದು ಎಂಬ ಕಾರಣಕ್ಕೆ ಅವರು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದ್ದವು.

ಸಾವಿನ ಸುತ್ತ ಅನುಮಾನ

ದಿನಗಳೆದಂತೆ ದೀನದಯಾಳರ ಏಕಾತ್ಮ ಮಾನವತಾವಾದ ಬಹಳ ಪ್ರಸಿದ್ಧಿಯಾಗುತ್ತದೆ. ಬಂಡವಾಳಶಾಹಿಗಳಿಗೆ ಹಾಗೂ ಸಮಾಜವಾದಿಗಳಿಗೆ ಏಕಾತ್ಮಮಾನವತಾವಾದ ಒಂದು ದೊಡ್ಡ ಆತಂಕವನ್ನೇ ಹುಟ್ಟುಹಾಕುತ್ತದೆ. ಇದೇ ಸಮಯದಲ್ಲಿ ಅವರ ಸಾವು ಅನುಮಾನಾಸ್ಪದವಾಗಿ ನಡೆದುಹೋಗುತ್ತದೆ. ಉತ್ತರ ಪ್ರದೇಶದ ಮುಘಲ್‌ಸರಾಯ್‌ ರೈಲ್ವೆ ನಿಲ್ದಾಣದಲ್ಲಿ ಶವವಾಗಿ ದೀನದಯಾಳರು ಈ ಸಮಾಜವನ್ನು ಬಿಟ್ಟು ತೆರಳುತ್ತಾರೆ. ಅವರ ಸಾವಿನ ಸತ್ಯಕ್ಕಾಗಿ ಇಂದಿಗೂ ಕೋಟ್ಯಂತರ ಜನರು ಹುಡುಕಾಟದಲ್ಲಿದ್ದಾರೆ. ದೀನದಯಾಳ ಸ್ಮರಣೆಗಾಗಿ 2018ರಲ್ಲಿ ಮುಘಲ್‌ಸರಾಯ್‌ ನಿಲ್ದಾಣವನ್ನು ಪಂಡಿತ್‌ ದೀನದಯಾಳ್‌ ಉಪಾಧ್ಯಾಯ ಜಂಕ್ಷನ್‌ ಎಂದು ನಾಮಕರಣ ಮಾಡಲಾಗಿದೆ.

ದೀನದಯಾಳರ ಆದರ್ಶ, ದೀನದಯಾಳರ ಪ್ರೇರಣೆ ಇಂದಿಗೂ ನಮ್ಮೆಲ್ಲರನ್ನೂ ಸ್ಫೂರ್ತಿಗೊಳಿಸಿದೆ. ಈ ದೇಶಕ್ಕೆ ಮುನ್ನೋಟದ ಅಡಿಪಾಯವನ್ನು ಹಾಕಿಕೊಟ್ಟಿದ್ದು ದೀನದಯಾಳರು. ಜನಸಂಘ ಈಗ ಭಾರತೀಯ ಜನತಾ ಪಕ್ಷವಾಗಿ ಬದಲಾವಣೆ ಆಗಿದೆ. ಆದರೆ ಜನಸಂಘ ಹುಟ್ಟಿದಾಗ ಇದ್ದ ವಿಚಾರಧಾರೆಗಳನ್ನೇ ಇಟ್ಟುಕೊಂಡು ಬಿಜೆಪಿ ಸಾಗುತ್ತಿರುವುದಕ್ಕೆ ದೀನದಯಾಳರು ಹಾಕಿಕೊಟ್ಟ ಮಾರ್ಗದರ್ಶಕ ಸೂತ್ರಗಳು ಕಾರಣ. ಏಕಾತ್ಮ ಮಾನವತಾವಾದ ಹಾಗೂ ಅಂತ್ಯೋದಯ ಪರಿಕಲ್ಪನೆಗಳು ಬಿಜೆಪಿಯ ವಿಚಾರಧಾರೆಗಳೇ ಆಗಿವೆ. ಅವಕಾಶ ಸಿಕ್ಕಾಗೆಲ್ಲ ಅವುಗಳ ಅನುಷ್ಠಾನ ಮಾಡುವ ಬದ್ಧತೆಯನ್ನು ಬಿಜೆಪಿ ನಮ್ಮೆಲ್ಲರಿಗೂ ತೋರಿಸಿಕೊಟ್ಟಿದೆ.

ನಮ್ಮೆಲ್ಲರಿಗೂ ಪ್ರೇರಣೆಯಾಗಿರುವ ದೀನದಯಾಳರನ್ನು ಅವರ ಜನ್ಮದಿನದ ಸಂದರ್ಭದಲ್ಲಿ ಸ್ಮರಿಸಿಕೊಳ್ಳುವುದು ಪುಣ್ಯದ ಕ್ಷಣ.

ಇದನ್ನೂ ಓದಿ | Amrit Mahotsav | ಬಂಗಾಳದ ಕ್ರಾಂತಿಕಾರಿ ಆಂದೋಲನದ ಜನಕ ಅಶಾಂತ ಸಂತ ರಾಜನಾರಾಯಣ ಬಸು

Exit mobile version