ಗಿಡ ಮರಗಳು (ಒಂದಾನೊಂದು ಕಾಲದಲ್ಲಿ) ಧಾರಾಳವಾಗಿದ್ದ ಮಲೆನಾಡು ಪ್ರದೇಶದಲ್ಲಿ ಮಕ್ಕಳ ಮನರಂಜನೆಯ ಮುಖ್ಯ ಮಾರ್ಗವಾಗಿದ್ದುದು ಮರಕೋತಿ ಆಟ. ಆರು ಎಂಟು ವರ್ಷದ ಮಕ್ಕಳು ಮರವನ್ನೇರುತ್ತ ಕೆಳಕ್ಕೆ ಹಾರುತ್ತ; ಒಂದು ಮರದಿಂದ ಮತ್ತೊಂದಕ್ಕೆ ನೆಗೆಯುತ್ತ; ಎಲ್ಲರನ್ನೂ ಹಿಂದಕ್ಕೆ ಹಾಕಿ ಮುಂದಕ್ಕೆ ಜಿಗಿಯುತ್ತ ದೇಹ ದಣಿಯುವವರೆಗೂ ಕಸುಬುದಾರಿಕೆ ಪ್ರದರ್ಶಿಸುತ್ತ ಮೈಮನ ತಣಿಸಿಕೊಳ್ಳುವ ಆಟ ಅದು. ಇಲ್ಲೂ ಸ್ಪರ್ಧೆ ಎನ್ನುವುದು ಸಹಜ. ಒಮ್ಮೆ ಮರವೇರಿದ ಹುಡುಗ ಅಥವಾ ಹುಡುಗಿ ಸಾಕಷ್ಟು ಅವಧಿ ಮರದ ಒಂದು ಕೊಂಬೆಯಿಂದ ಮತ್ತೊಂದರದಲ್ಲಿ ಜಾಗ ಕಂಡುಕೊಳ್ಳುತ್ತ ನೆಲವನ್ನು ಮುಟ್ಟದೇ ಸ್ಪರ್ಧೆಯನ್ನು ಜೈಸುವುದು! ಮಲೆನಾಡಿನವರಲ್ಲದವರಿಗೆ ಇದು ಒಂದು ರೀತಿ ಸರ್ಕಸ್‌ನಂತೆ ತೋಚಿದರೆ ಅಚ್ಚರಿ ಇಲ್ಲ. ಆದರೆ ಮಲೆನಾಡ ಮಕ್ಕಳಿಗೆ ಇದು ಹೇಳಿ ಮಾಡಿಸಿದ್ದು. ದೇಹಕ್ಕೆ ಕಸರತ್ತು, ಮನಸ್ಸಿಗೆ ರಂಜನೆ.
ಚುನಾವಣೆ ಹತ್ತಿರ ಬಂತೆಂದರೆ ಮತ್ತೊಂದು ಬಗೆಯ ಮರಕೋತಿ ಆಟ ಶುರುವಾಗುತ್ತದೆ. ಇದರ ಪರಿಚಯ ನಗರವಾಸಿಗಳಿಗೂ ಇದೆ; ಹಳ್ಳಿ ಹೈದರಿಗೂ ಇದೆ. ಒಂದು ಪಕ್ಷದಿಂದ ಮತ್ತೊಂದಕ್ಕೆ ಜಿಗಿಯುವ (defection) ರಾಜಕಾರಣಿಗಳ ನಿಲುವನ್ನು ಮರಕೋತಿ ಆಟಕ್ಕೆ ಹೋಲಿಸುವುದು ಸಾಮಾನ್ಯವಾಗಿದೆ. ಎಲ್ಲಕ್ಕೂ ಇತಿಹಾಸ ಇರುವಂತೆ ರಾಜಕಾರಣದಲ್ಲಿ ಶುರುವಾದ ಮರ ಕೋತಿ ಆಟಕ್ಕೂ ಅದರದೇ ಆದ ಇತಿಹಾಸವಿದೆ. ಅದಕ್ಕೆ ಬಂದ ಹೆಸರು ಆಯಾರಾಂ ಗಯಾ ರಾಂ!
ಪಕ್ಷಾಂತರ ಪಿಡುಗು ಎಂಬ ಸಮಾಜಕ್ಕೆ ಅಂಟಿರುವ ಆಯಾರಾಂ ಗಯಾರಾಂ ಎಂಬ ರಾಜಕೀಯ ಅರ್ಬುದಕ್ಕೆ ದೇಶದಲ್ಲಿ ಐದೂವರೆ ದಶಕಕ್ಕೂ ಹೆಚ್ಚು ಅವಧಿಯ ಕುಖ್ಯಾತ ಇತಿಹಾಸ ಇದೆ. ಕರ್ನಾಟಕದಲ್ಲಿ ವಿಧಾನ ಸಭೆ ಚುನಾವಣೆ ದಿನಗಳೆದಂತೆ ಸಮೀಪವಾಗುತ್ತಿದೆ. ಟಿಕೆಟ್ ತಮಗೆ ಸಿಗಬೇಕು, ತಮ್ಮೊಂದಿಗೆ ತಮ್ಮ ಮಕ್ಕಳಲ್ಲಿ ಒಬ್ಬರಿಗೆ ಕೊಡಬೇಕು ಇಲ್ಲವೆ ಸೊಸೆ-ಅಳಿಯ, ತಮ್ಮನಿಗೆ ತಪ್ಪಿಸಬಾರದು ಎಂಬಿತ್ಯಾದಿ ಯತ್ನ ಹಲವರದು. ಈ ಪಕ್ಷದಲ್ಲಿ ಸಿಗಲಿಲ್ಲವೆಂದಾದರೆ ಮತ್ತೊಂದು ಪಕ್ಷದಲ್ಲಿ ಸಿಗುತ್ತದಾ ನೋಡಬೇಕು ಎನ್ನುವುದು ಅವರ ಗುರಿ. ಎಲ್ಲೂ ಸಿಗಲಿಲ್ಲ ಎಂದಾದರೆ ಟಿಕೆಟ್ ಪಡೆದು ಕಣಕ್ಕಿಳಿದ ಸ್ವಪಕ್ಷೀಯರನ್ನು ಸೋಲಿಸುವುದು ಹೇಗೆಂಬ ಒಳ ಲೆಕ್ಕಾಚಾರ. ಕಾಂಗ್ರೆಸ್ ಇಲ್ಲವೇ ಬಿಜೆಪಿಯಲ್ಲಿ ಟಿಕೆಟ್ ಸಿಗದಿದ್ದರೆ ಕೊನೆ ಯತ್ನವಾಗಿ ಜೆಡಿಎಸ್‌ನಲ್ಲಿ ಅವಕಾಶ ಸಿಕ್ಕೀತೇ ಎಂದು ನೋಡುವುದು. ರಾಜಕಾರಣದಲ್ಲಿರುವವರಿಗೆ ನಿವೃತ್ತಿ ಎಂಬ ಶಬ್ದದ ಪರಿಚಯವೇ ಇಲ್ಲ. ಕೂತರೆ ನಿಲ್ಲಲಾಗದ, ನಿಂತರೆ ಕೂರಲಾಗದ, ತೋಳು ಹಿಡಿದು ನಡೆಸುವರ ಆಸರೆ ಇಲ್ಲದೆ ಎರಡು ಹೆಜ್ಜೆ ನಡೆಯಲಾಗದ, ಈಗಲೋ ಆಗಲೋ ಎಂಬಂತಿರುವವರಿಗೂ ಟಿಕೆಟ್ ಬೇಕು. ಟಿಕೆಟ್ ಸಿಗದವರು ದ್ರಾಕ್ಷಿ ಹುಳಿ ಎಂದು ಸುಮ್ಮನಿರುವುದಿಲ್ಲ. ಸುದೀರ್ಘ ಸೇವೆ ಸಲ್ಲಿಸಿದವರನ್ನು ಕಡೆಗಣಿಸಲಾಗಿದೆ ಎಂಬ ಆರೋಪ ಕೇಳಲು ಪಕ್ಷ ಸಿದ್ಧವಾಗಿರಬೇಕು.
ಕರ್ನಾಟಕದಲ್ಲಿ ಬಿಜೆಪಿ ಪುನಃ ಅಧಿಕಾರ ಹಿಡಿಯುವಷ್ಟು ಸರಳ ಬಹುಮತ ಗಳಿಸಲಾರದು ಎಂಬ ಭಾವನೆ ದಟ್ಟವಾಗಿದೆ. ಅವರೋ ಇವರೋ ಅಥವಾ ವಿರೋಧ ಪಕ್ಷದವರೋ ಹೇಳುವ ಮಾತಲ್ಲ ಇದು. ಸ್ವತಃ ಬಿಜೆಪಿ ಮುಖಂಡರೇ ಆಪ್ತ ಮಾತುಕತೆ ಸಂದರ್ಭದಲ್ಲಿ ತೋಡಿಕೊಳ್ಳುವ ನೋವು. ಐದು ವರ್ಷದ ಹಿಂದೆ ಕಾಂಗ್ರೆಸ್ ವಿರೋಧಿ ಅಲೆ ಇದ್ದಾಗಲೂ ಬಿಜೆಪಿ ಗಳಿಸಿದ್ದು 104 ಸೀಟನ್ನು ಮಾತ್ರ. ಸರಳ ಬಹುಮತಕ್ಕೆ 113 ಸೀಟು ಅಗತ್ಯ.
ಈ ಅವಧಿಯಲ್ಲಿ ಸರ್ಕಾರವಾಗಿ ಬಿಜೆಪಿ ಸಾಕಷ್ಟು ಮುಜುಗರಕ್ಕೆ ಒಳಗಾಗಿದೆ. ಹತ್ತಾರು ಬಗೆಯ ಹಗರಣಗಳು ಸರ್ಕಾರದ ಭವಿಷ್ಯವನ್ನು ಮುಕ್ಕತೊಡಗಿವೆ. 140 ಸೀಟು ಗೆಲ್ಲುವ “ವಿಶ್ವಾಸ”ದಲ್ಲಿರುವ ಬಿ.ಎಸ್.ಯಡಿಯೂರಪ್ಪ ಅವರಿಗಾಗಲೀ; ಮಿಷನ್-150 ಎಂದುಕೊಂಡು ಹೊರಟಿರುವ ಅಮಿತ್ ಶಾ ಅವರಿಗಾಗಲೀ; ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತೇವೆಂದು ಹೋದಲ್ಲಿ ಬಂದಲ್ಲಿ ಹೇಳುತ್ತಿರುವ ಬಸವರಾಜ ಬೊಮ್ಮಾಯಿ ಅವರಿಗಾಗಲೀ ಸೋಲಿನ ಅರಿವು ಇಲ್ಲ ಎಂದಲ್ಲ. ವಿರೋಧಿ ಅಲೆಯನ್ನು ಮೆಟ್ಟಿನಿಂತು ಮತ್ತೆ ಸರ್ಕಾರ ರಚಿಸುವ ಉಮೇದನ್ನು ತುಂಬದಿದ್ದರೆ ಯುದ್ಧಕ್ಕಿಂತ ಮೊದಲೇ ಶಸ್ತ್ರತ್ಯಾಗ ಮಾಡಿದಂತಾಗುತ್ತದೆಂಬ ಭಯ ಅವರ ಹೇಳಿಕೆಗಳ ಹಿಂದಿದೆ. ಹರಸಾಹಸ ಮಾಡಿಯಾದರೂ ಸರ್ಕಾರ ಉಳಿಸಿಕೊಳ್ಳುವ ಮಾತು ಬಿಜೆಪಿಯ ಅಧಿಕೃತ ಮೂಲಗಳದು. ಹರ ಸಾಹಸ ಎಂದರೇನು ಎನ್ನುವುದರ ವಿವರಣೆ ಅನಗತ್ಯ. ದಕ್ಷಿಣ ಭಾರತದಲ್ಲಿ ಪುದುಚೆರಿ ಕೇಂದ್ರಾಡಳಿತ ಪ್ರದೇಶ ಬಿಜೆಪಿ ಆಡಳಿತದಲ್ಲಿದೆ. ಮುಖ್ಯ ರಾಜ್ಯ ಕರ್ನಾಟಕ. ಅದನ್ನು ಕಳೆದುಕೊಳ್ಳುವುದು ಕೇಂದ್ರದ ವರಿಷ್ಠರಿಗೆ ಬೇಕಾಗಿಲ್ಲ.
ಹೀಗಿದ್ದರೂ ಕಾಂಗ್ರೆಸ್ ಅಥವಾ ಜೆಡಿಎಸ್‌ನಿಂದ ಬಿಜೆಪಿಗೆ ಜಿಗಿಯುತ್ತಿರುವವರ; ಜೆಡಿಎಸ್ ಇಲ್ಲವೇ ಬಿಜೆಪಿಯಿಂದ ಕಾಂಗ್ರೆಸ್‌ಗೆ ನೆಗೆಯುತ್ತಿರುವವರ, ಈ ಎರಡೂ ಪಕ್ಷದಲ್ಲಿ ವ್ಯಕ್ತಿಗತ ಭವಿಷ್ಯವಿಲ್ಲ ಎಂದು ಜೆಡಿಎಸ್‌ಗೆ ಹಾರುತ್ತಿರುವವರ ಸಂಖ್ಯೆ ಕಡಿಮೆಯದೇನೂ ಅಲ್ಲ. ಟಿಕೆಟ್ ಹಂಚಿಕೆ ಪ್ರಕ್ರಿಯೆ ಮುಗಿಯುವವರೆಗೂ ಈ ಬಗೆಯ ಹಾರಾಟ, ನೆಗೆದಾಟ, ನಿತ್ಯ ರಂಜನೆ ನೀಡುವುದು ಗ್ಯಾರಂಟಿ. ಬಿಜೆಪಿಯಲ್ಲೇ ರಾಜಕೀಯ ಹುಟ್ಟು ಏಳಿಗೆ ಇತ್ಯಾದಿ ಕಂಡಿರುವ ಸಂಘ ಪರಿವಾರ ಮೂಲದವರು ಟಿಕೆಟ್ ಸಿಗಲಿ ಸಿಗದಿರಲಿ ಪಕ್ಷಾಂತರ ಮಾಡುವ ಸಾಧ್ಯತೆ ಕಡಿಮೆ. ಬಿ.ಎಸ್. ಯಡಿಯೂರಪ್ಪ ಕೆಜೆಪಿ ಕಟ್ಟಿದಾಗ ಅವರನ್ನು ಹಿಂಬಾಲಿಸಿದ ಶೋಭಾ ಕರಂದ್ಲಾಜೆ ಮತ್ತಿತರ ಕೆಲವು ಅಪವಾದ ಇಲ್ಲವೆಂದಲ್ಲ. ಬಹುತೇಕರು ಈ ಜಾಡಿನಲ್ಲಿ ಹೆಜ್ಜೆ ಹಾಕುವುದಿಲ್ಲ.
ಇದನ್ನೂ ಓದಿ: ಮೊಗಸಾಲೆ ಅಂಕಣ: ಮತ್ತೆ ಮಧ್ಯರಂಗಕ್ಕೆ ಬಂದ ಬಿಎಸ್ ಯಡಿಯೂರಪ್ಪ
ಬರಲಿರುವ ಚುನಾವಣೆ ವಿಶೇಷವೆಂದರೆ ಬಿಜೆಪಿಯ ಕೆಲವು ಹಾಲಿ ಶಾಸಕರು ಟಿಕೆಟ್‌ಗಾಗಿ ಬೇಡಿಕೆ ಮಂಡಿಸಲು ಹಿಂದೇಟು ಹಾಕಿರುವುದು. ಹೇಗಿದ್ದರೂ ಪಕ್ಷ ಮತ್ತೆ ಅಧಿಕಾರಕ್ಕೆ ಬರುವುದು ಕಷ್ಟ. ಅಷ್ಟೆಲ್ಲ ಮೈಕೈ ನೋವು ಮಾಡಿಕೊಂಡು, ಹಣವನ್ನು ವ್ಯರ್ಥ ಕಳೆದುಕೊಳ್ಳುವುದಕ್ಕಿಂತ ಐದು ವರ್ಷ ಮನೆಯಲ್ಲಿದ್ದು ಆರೋಗ್ಯ ನೋಡಿಕೊಳ್ಳುವುದೇ ವಿವೇಕಯುತ ಎಂಬ ನಿಲುವಿಗೆ ಅವರು ಬಂದಿರುವಂತಿದೆ. ಪಕ್ಷಾಂತರ ಮಾಡುವವರು ಮಾಡಿಕೊಳ್ಳಲಿ, ಟಿಕೆಟ್ ಸಿಗಲಿ ಸಿಗದಿರಲಿ ನೆಚ್ಚಿಕೊಂಡಿರುವ ಪಕ್ಷದಲ್ಲೇ ಇರೋಣ ಎನ್ನುವವರಿಗೆ ಮೂರೂ ಪಕ್ಷದಲ್ಲಿ ಕೊರತೆ ಇಲ್ಲ ಎನ್ನುವುದು ಕರ್ನಾಟಕ ರಾಜಕೀಯದ ಪುಣ್ಯ.
ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಮತ್ತು ಪ್ರಧಾನಿ ಇಂದಿರಾ ಗಾಂಧಿ ನಡುವಿನ ಸಂಬಂಧ ಹಳಸಿದ್ದ ಎಂಬತ್ತರ ದಶಕದ ರಾಜಕೀಯ ರಾಜ್ಯ ಅದುವರೆಗೆ ಕಂಡು ಕೇಳರಿಯದ ಆಯಾರಾಂ ಗಯಾರಾಂ ಪ್ರಕ್ರಿಯೆಗೆ ಸಾಕ್ಷಿಯಾಯಿತು. ಕಾಂಗ್ರೆಸ್ ಶಾಸಕ ಎಚ್.ಸಿ. ಶ್ರೀಕಂಠಯ್ಯನವರು ಎಂಬತ್ತು ಜನ ಕಾಂಗ್ರೆಸ್ ಶಾಸಕರನ್ನು ಕಟ್ಟಿಕೊಂಡು ಅರಸುಗೆ ತಿರುಗಿಬಿದ್ದರು. ಅರಸು ಸರ್ಕಾರ ಪತನವಾಯಿತು. ಆದರೆ ಶ್ರೀಕಂಠಯ್ಯ ತಾವು ನಿರೀಕ್ಷಿಸಿದಂತೆ ಮುಖ್ಯಮಂತ್ರಿ ಆಗಲಿಲ್ಲ, ಬದಲಿಗೆ ಆ ಹುದ್ದೆಗೆ ಏರಿದ್ದು ಆರ್. ಗುಂಡೂರಾವ್. ಪಕ್ಷಾಂತರ ಎಂಬೋ ಮರಕೋತಿ ಆಟ ಅದೇ ಸ್ಥಿತಿಯಲ್ಲಿ ಈ ಹೊತ್ತಿಗೂ ಮುಂದುವರಿದಿದೆ. ಪಕ್ಷಾಂತರದ ಲಾಭ ಹಲವರಿಗೆ ಆಗಿದೆ. ಶ್ರೀಕಂಠಯ್ಯ ಥರದ ಉದಾಹರಣೆ ಹತ್ತಾರು ಇದ್ದಿದ್ದರೆ ಒಂದು ನಿಯಂತ್ರಣದಲ್ಲಿ ಈ ಪಿಡುಗು ಇರುತ್ತಿತ್ತೋ ಏನೋ. ಪಕ್ಷಾಂತರ ನಿಷೇಧ ಕಾಯ್ದೆ ನಮ್ಮಲ್ಲಿದೆ. 1985ರಲ್ಲಿ ಸಂವಿಧಾನ ತಿದ್ದುಪಡಿಗೂ ಒಳಗಾದ ಕಾಯ್ದೆಯಲ್ಲಿ ಅಂತರ್ಗತವಾಗಿರುವ ಲೋಪಗಳು ರಾಜಕಾರಣಿಗಳಿಗೆ ಹುಲ್ಲುಗಾವಲಾಗಿವೆ.
ಇದನ್ನೂ ಓದಿ: ಮೊಗಸಾಲೆ ಅಂಕಣ: ಸೋನಿಯಾ, ಬಿಎಸ್‌ವೈ ಮನಸ್ಸು ಭಾರ:ಚುನಾವಣೆ ಕಣದಿಂದ ದೂರ
“ಆಯಾರಾಂ ಗಯಾರಾಂ” ಪದಪುಂಜದ ಗಂಗೋತ್ರಿ ಹರಿಯಾಣಾ. ನಂತರದಲ್ಲಿ ಅದು ದೇಶದ ಉದ್ದಗಲಕ್ಕೆ ಆ ರಾಜ್ಯ ಈ ಪ್ರದೇಶವೆನ್ನದೆ ಎಲ್ಲ ಕಡೆಯಲ್ಲೂ ಹರಿಯುತ್ತಿದೆ. 1967ರ ಮಾತು. ಹರಿಯಾಣಾ ವಿಧಾನ ಸಭೆಗೆ ಗಯಾಲಾಲ್ ಎಂಬುವವರು ಪಕ್ಷೇತರ ಶಾಸಕರಾಗಿ ಆಯ್ಕೆಯಾಗಿದ್ದರು. ಪಕ್ಷದ ಶಾಸಕರಿಗೆ ಇರದ; ಪಕ್ಷೇತರರಿಗೆ ಇರುವ ಅಗಾಧ ಅನುಕೂಲವೆಂದರೆ ಅವರು ಯಾವ ಪಕ್ಷಕ್ಕೂ ಬೆಂಬಲವಾಗಿ ನಿಲ್ಲಬಹುದು. (ಇಲ್ಲಿ ಕರ್ನಾಟಕದಲ್ಲಿ 1983ರಲ್ಲಿ ಜನತಾ ಪಕ್ಷದ ಸರ್ಕಾರ ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದಾಗ ಅವರಿಗೆ ಬಹುಮತದ ಕೊರತೆ ಇತ್ತು. ಅದನ್ನು ತುಂಬಿಕೊಟ್ಟಿದ್ದು ಬಿಜೆಪಿ, ಉಭಯ ಕಮ್ಯೂನಿಸ್ಟ್ ಪಕ್ಷಗಳು ಮತ್ತು ಪಕ್ಷೇತರ ಶಾಸಕರು) ಈ ಮನುಷ್ಯ ಗಯಾರಾಂ ವಿಧಾನ ಸಭೆ ಅಧಿವೇಶನಕ್ಕೆ ಮೊದಲೇ ಕಾಂಗ್ರೆಸ್‌ಗೆ ಸೇರಿದರು. ಚೌಕಾಸಿ ಕೆಲಸ ಮಾಡಲಿಲ್ಲವೆನ್ನಬೇಕು. ಮುಂದಿನ ಹದಿನೈದು ದಿನದಲ್ಲಿ ಈ ಮಹರಾಯ ಮೂರು ಬಾರಿ ಪಕ್ಷಾಂತರ ಮಾಡಿದರು. ಪಕ್ಷೇತರ ಆಗಿದ್ದವರು ಕಾಂಗ್ರೆಸ್ ಸೇರಿದರು. ಕಾಂಗ್ರೆಸ್ ತೊರೆದು ಸಂಯುಕ್ತ ರಂಗದಲ್ಲಿ ಬಾವುಟ ಹಾರಿಸಿದರು. ವ್ಯವಹಾರ ಕುದುರಿ ಮತ್ತೆ ಕಾಂಗ್ರೆಸ್‌ಗೆ ಬಂದರು. ಅಲ್ಲಿಂದ ಒಂಬತ್ತೇ ತಾಸಿನಲ್ಲಿ ಸಂಯುಕ್ತ ರಂಗಕ್ಕೆ ಜಿಗಿದು ಜಯದ ನಗು ಬೀರಿದರು. ಈ ನಡುವಿನ ಅವಧಿಯಲ್ಲಿ ಗಯಾರಾಂ ಅವರನ್ನು ಮಾಧ್ಯಮ ಗೋಷ್ಠಿಗೆ ಎಳೆದುತಂದಿದ್ದ ಕಾಂಗ್ರೆಸ್ ನಾಯಕ ರಾವ್ ಬೀರೇಂದ್ರ ಸಿಂಗ್ “ಗಯಾರಾಂ ಈಗ ಆಯಾರಾಂ” ಎಂದಿದ್ದರು. ಅಲ್ಲಿಂದ ಮುಂದಕ್ಕೆ ಪಕ್ಷಾಂತರ ಪಿಡುಗಿಗೆ ಹೊಸ ಹೆಸರು ಬಂತು.
ಪಕ್ಷಾಂತರ ನಿಷೇಧ ಕಾಯ್ದೆ ವಿಚಾರದಲ್ಲಿ ಯಾವ ರಾಜಕೀಯ ಪಕ್ಷವೂ ಗಂಭೀರವಾಗಿಲ್ಲ. ರಾಷ್ಟ್ರೀಯ ಪಕ್ಷಗಳಂತೆ ಪ್ರಾದೇಶಿಕ ಪಕ್ಷಗಳೂ ಪಕ್ಷಾಂತರಿಗಳನ್ನು ಆಧರಿಸಿ ಉತ್ತೇಜಿಸಿ ಅವರ ಬೇಕುಗಳಿಗೆ ಸ್ಪಂದಿಸಿ ರಾಜಕಾರಣ ಮಾಡುವ ಚಾಳಿಗೆ ಒಳಗಗಿವೆ. ತಾನಿರುವ ಪಕ್ಷದಲ್ಲಿ ಉಸಿರುಗಟ್ಟಿಸುವ ಸನ್ನಿವೇಶವಿದ್ದು ಅದನ್ನು ತ್ಯಜಿಸಿ ಸೇರಲಿರುವ ಪಕ್ಷದ ಸಿದ್ಧಾಂತ ಒಪ್ಪಿ ಬಂದಿರುವುದಾಗಿ ಒಂದು ಹೇಳಿಕೆ ನೀಡಿದರೆ ಅಲ್ಲಿಗೆ ಕಥೆ ಖತಂ ಆಗುತ್ತದೆ. ನಿನ್ನೆಯವರೆಗೆ ಕೋಮುವಾದಿಯಾಗಿದ್ದ ರಾಜಕಾರಣಿಯೊಬ್ಬ ಹೀಗೆ 24 ತಾಸು ಕಳೆಯುವುದರ ಒಳಗಾಗಿ ಜಾತ್ಯತೀತ ಆಗುವ ಪವಾಡ ಘಟಿಸುವುದು ಇಂಡಿಯಾದಲ್ಲಿ ಮಾತ್ರ. ಜಾತ್ಯತೀತ ಆಗಿದ್ದವರು 24 ತಾಸಿನಲ್ಲಿ ಕೋಮುವಾದಿ ಆಗುವುದು ಕೂಡಾ ಪವಾಡವೇ.
ಇದನ್ನೂ ಓದಿ: ಮೊಗಸಾಲೆ ಅಂಕಣ: ರೋಹಿಣಿ, ರೂಪಾ ರಂಪಾಟ: ಸರ್ಕಾರಕ್ಕೆ ಪೇಚಾಟ