ಮೊಗಸಾಲೆ ಅಂಕಣ: ಆಯಾರಾಂ ಗಯಾರಾಂ ಮರಕೋತಿ ಆಟ - Vistara News

ಅಂಕಣ

ಮೊಗಸಾಲೆ ಅಂಕಣ: ಆಯಾರಾಂ ಗಯಾರಾಂ ಮರಕೋತಿ ಆಟ

ಪಕ್ಷಾಂತರ ಪಿಡುಗು ಎಂಬ ಸಮಾಜಕ್ಕೆ ಅಂಟಿರುವ ಆಯಾರಾಂ ಗಯಾರಾಂ ಎಂಬ ರಾಜಕೀಯ ಅರ್ಬುದಕ್ಕೆ ದೇಶದಲ್ಲಿ ಐದೂವರೆ ದಶಕಕ್ಕೂ ಹೆಚ್ಚು ಅವಧಿಯ ಕುಖ್ಯಾತ ಇತಿಹಾಸ ಇದೆ. ಕರ್ನಾಟಕದಲ್ಲಿ ವಿಧಾನ ಸಭೆ ಚುನಾವಣೆ ದಿನಗಳೆದಂತೆ ಸಮೀಪವಾಗುತ್ತಿದೆ.

VISTARANEWS.COM


on

mogasale defection
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
mogasale logo

ಗಿಡ ಮರಗಳು (ಒಂದಾನೊಂದು ಕಾಲದಲ್ಲಿ) ಧಾರಾಳವಾಗಿದ್ದ ಮಲೆನಾಡು ಪ್ರದೇಶದಲ್ಲಿ ಮಕ್ಕಳ ಮನರಂಜನೆಯ ಮುಖ್ಯ ಮಾರ್ಗವಾಗಿದ್ದುದು ಮರಕೋತಿ ಆಟ. ಆರು ಎಂಟು ವರ್ಷದ ಮಕ್ಕಳು ಮರವನ್ನೇರುತ್ತ ಕೆಳಕ್ಕೆ ಹಾರುತ್ತ; ಒಂದು ಮರದಿಂದ ಮತ್ತೊಂದಕ್ಕೆ ನೆಗೆಯುತ್ತ; ಎಲ್ಲರನ್ನೂ ಹಿಂದಕ್ಕೆ ಹಾಕಿ ಮುಂದಕ್ಕೆ ಜಿಗಿಯುತ್ತ ದೇಹ ದಣಿಯುವವರೆಗೂ ಕಸುಬುದಾರಿಕೆ ಪ್ರದರ್ಶಿಸುತ್ತ ಮೈಮನ ತಣಿಸಿಕೊಳ್ಳುವ ಆಟ ಅದು. ಇಲ್ಲೂ ಸ್ಪರ್ಧೆ ಎನ್ನುವುದು ಸಹಜ. ಒಮ್ಮೆ ಮರವೇರಿದ ಹುಡುಗ ಅಥವಾ ಹುಡುಗಿ ಸಾಕಷ್ಟು ಅವಧಿ ಮರದ ಒಂದು ಕೊಂಬೆಯಿಂದ ಮತ್ತೊಂದರದಲ್ಲಿ ಜಾಗ ಕಂಡುಕೊಳ್ಳುತ್ತ ನೆಲವನ್ನು ಮುಟ್ಟದೇ ಸ್ಪರ್ಧೆಯನ್ನು ಜೈಸುವುದು! ಮಲೆನಾಡಿನವರಲ್ಲದವರಿಗೆ ಇದು ಒಂದು ರೀತಿ ಸರ್ಕಸ್‌ನಂತೆ ತೋಚಿದರೆ ಅಚ್ಚರಿ ಇಲ್ಲ. ಆದರೆ ಮಲೆನಾಡ ಮಕ್ಕಳಿಗೆ ಇದು ಹೇಳಿ ಮಾಡಿಸಿದ್ದು. ದೇಹಕ್ಕೆ ಕಸರತ್ತು, ಮನಸ್ಸಿಗೆ ರಂಜನೆ.

ಚುನಾವಣೆ ಹತ್ತಿರ ಬಂತೆಂದರೆ ಮತ್ತೊಂದು ಬಗೆಯ ಮರಕೋತಿ ಆಟ ಶುರುವಾಗುತ್ತದೆ. ಇದರ ಪರಿಚಯ ನಗರವಾಸಿಗಳಿಗೂ ಇದೆ; ಹಳ್ಳಿ ಹೈದರಿಗೂ ಇದೆ. ಒಂದು ಪಕ್ಷದಿಂದ ಮತ್ತೊಂದಕ್ಕೆ ಜಿಗಿಯುವ (defection) ರಾಜಕಾರಣಿಗಳ ನಿಲುವನ್ನು ಮರಕೋತಿ ಆಟಕ್ಕೆ ಹೋಲಿಸುವುದು ಸಾಮಾನ್ಯವಾಗಿದೆ. ಎಲ್ಲಕ್ಕೂ ಇತಿಹಾಸ ಇರುವಂತೆ ರಾಜಕಾರಣದಲ್ಲಿ ಶುರುವಾದ ಮರ ಕೋತಿ ಆಟಕ್ಕೂ ಅದರದೇ ಆದ ಇತಿಹಾಸವಿದೆ. ಅದಕ್ಕೆ ಬಂದ ಹೆಸರು ಆಯಾರಾಂ ಗಯಾ ರಾಂ!

ಪಕ್ಷಾಂತರ ಪಿಡುಗು ಎಂಬ ಸಮಾಜಕ್ಕೆ ಅಂಟಿರುವ ಆಯಾರಾಂ ಗಯಾರಾಂ ಎಂಬ ರಾಜಕೀಯ ಅರ್ಬುದಕ್ಕೆ ದೇಶದಲ್ಲಿ ಐದೂವರೆ ದಶಕಕ್ಕೂ ಹೆಚ್ಚು ಅವಧಿಯ ಕುಖ್ಯಾತ ಇತಿಹಾಸ ಇದೆ. ಕರ್ನಾಟಕದಲ್ಲಿ ವಿಧಾನ ಸಭೆ ಚುನಾವಣೆ ದಿನಗಳೆದಂತೆ ಸಮೀಪವಾಗುತ್ತಿದೆ. ಟಿಕೆಟ್ ತಮಗೆ ಸಿಗಬೇಕು, ತಮ್ಮೊಂದಿಗೆ ತಮ್ಮ ಮಕ್ಕಳಲ್ಲಿ ಒಬ್ಬರಿಗೆ ಕೊಡಬೇಕು ಇಲ್ಲವೆ ಸೊಸೆ-ಅಳಿಯ, ತಮ್ಮನಿಗೆ ತಪ್ಪಿಸಬಾರದು ಎಂಬಿತ್ಯಾದಿ ಯತ್ನ ಹಲವರದು. ಈ ಪಕ್ಷದಲ್ಲಿ ಸಿಗಲಿಲ್ಲವೆಂದಾದರೆ ಮತ್ತೊಂದು ಪಕ್ಷದಲ್ಲಿ ಸಿಗುತ್ತದಾ ನೋಡಬೇಕು ಎನ್ನುವುದು ಅವರ ಗುರಿ. ಎಲ್ಲೂ ಸಿಗಲಿಲ್ಲ ಎಂದಾದರೆ ಟಿಕೆಟ್ ಪಡೆದು ಕಣಕ್ಕಿಳಿದ ಸ್ವಪಕ್ಷೀಯರನ್ನು ಸೋಲಿಸುವುದು ಹೇಗೆಂಬ ಒಳ ಲೆಕ್ಕಾಚಾರ. ಕಾಂಗ್ರೆಸ್ ಇಲ್ಲವೇ ಬಿಜೆಪಿಯಲ್ಲಿ ಟಿಕೆಟ್ ಸಿಗದಿದ್ದರೆ ಕೊನೆ ಯತ್ನವಾಗಿ ಜೆಡಿಎಸ್‌ನಲ್ಲಿ ಅವಕಾಶ ಸಿಕ್ಕೀತೇ ಎಂದು ನೋಡುವುದು. ರಾಜಕಾರಣದಲ್ಲಿರುವವರಿಗೆ ನಿವೃತ್ತಿ ಎಂಬ ಶಬ್ದದ ಪರಿಚಯವೇ ಇಲ್ಲ. ಕೂತರೆ ನಿಲ್ಲಲಾಗದ, ನಿಂತರೆ ಕೂರಲಾಗದ, ತೋಳು ಹಿಡಿದು ನಡೆಸುವರ ಆಸರೆ ಇಲ್ಲದೆ ಎರಡು ಹೆಜ್ಜೆ ನಡೆಯಲಾಗದ, ಈಗಲೋ ಆಗಲೋ ಎಂಬಂತಿರುವವರಿಗೂ ಟಿಕೆಟ್ ಬೇಕು. ಟಿಕೆಟ್ ಸಿಗದವರು ದ್ರಾಕ್ಷಿ ಹುಳಿ ಎಂದು ಸುಮ್ಮನಿರುವುದಿಲ್ಲ. ಸುದೀರ್ಘ ಸೇವೆ ಸಲ್ಲಿಸಿದವರನ್ನು ಕಡೆಗಣಿಸಲಾಗಿದೆ ಎಂಬ ಆರೋಪ ಕೇಳಲು ಪಕ್ಷ ಸಿದ್ಧವಾಗಿರಬೇಕು.

ಕರ್ನಾಟಕದಲ್ಲಿ ಬಿಜೆಪಿ ಪುನಃ ಅಧಿಕಾರ ಹಿಡಿಯುವಷ್ಟು ಸರಳ ಬಹುಮತ ಗಳಿಸಲಾರದು ಎಂಬ ಭಾವನೆ ದಟ್ಟವಾಗಿದೆ. ಅವರೋ ಇವರೋ ಅಥವಾ ವಿರೋಧ ಪಕ್ಷದವರೋ ಹೇಳುವ ಮಾತಲ್ಲ ಇದು. ಸ್ವತಃ ಬಿಜೆಪಿ ಮುಖಂಡರೇ ಆಪ್ತ ಮಾತುಕತೆ ಸಂದರ್ಭದಲ್ಲಿ ತೋಡಿಕೊಳ್ಳುವ ನೋವು. ಐದು ವರ್ಷದ ಹಿಂದೆ ಕಾಂಗ್ರೆಸ್ ವಿರೋಧಿ ಅಲೆ ಇದ್ದಾಗಲೂ ಬಿಜೆಪಿ ಗಳಿಸಿದ್ದು 104 ಸೀಟನ್ನು ಮಾತ್ರ. ಸರಳ ಬಹುಮತಕ್ಕೆ 113 ಸೀಟು ಅಗತ್ಯ.

ಈ ಅವಧಿಯಲ್ಲಿ ಸರ್ಕಾರವಾಗಿ ಬಿಜೆಪಿ ಸಾಕಷ್ಟು ಮುಜುಗರಕ್ಕೆ ಒಳಗಾಗಿದೆ. ಹತ್ತಾರು ಬಗೆಯ ಹಗರಣಗಳು ಸರ್ಕಾರದ ಭವಿಷ್ಯವನ್ನು ಮುಕ್ಕತೊಡಗಿವೆ. 140 ಸೀಟು ಗೆಲ್ಲುವ “ವಿಶ್ವಾಸ”ದಲ್ಲಿರುವ ಬಿ.ಎಸ್.ಯಡಿಯೂರಪ್ಪ ಅವರಿಗಾಗಲೀ; ಮಿಷನ್-150 ಎಂದುಕೊಂಡು ಹೊರಟಿರುವ ಅಮಿತ್ ಶಾ ಅವರಿಗಾಗಲೀ; ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತೇವೆಂದು ಹೋದಲ್ಲಿ ಬಂದಲ್ಲಿ ಹೇಳುತ್ತಿರುವ ಬಸವರಾಜ ಬೊಮ್ಮಾಯಿ ಅವರಿಗಾಗಲೀ ಸೋಲಿನ ಅರಿವು ಇಲ್ಲ ಎಂದಲ್ಲ. ವಿರೋಧಿ ಅಲೆಯನ್ನು ಮೆಟ್ಟಿನಿಂತು ಮತ್ತೆ ಸರ್ಕಾರ ರಚಿಸುವ ಉಮೇದನ್ನು ತುಂಬದಿದ್ದರೆ ಯುದ್ಧಕ್ಕಿಂತ ಮೊದಲೇ ಶಸ್ತ್ರತ್ಯಾಗ ಮಾಡಿದಂತಾಗುತ್ತದೆಂಬ ಭಯ ಅವರ ಹೇಳಿಕೆಗಳ ಹಿಂದಿದೆ. ಹರಸಾಹಸ ಮಾಡಿಯಾದರೂ ಸರ್ಕಾರ ಉಳಿಸಿಕೊಳ್ಳುವ ಮಾತು ಬಿಜೆಪಿಯ ಅಧಿಕೃತ ಮೂಲಗಳದು. ಹರ ಸಾಹಸ ಎಂದರೇನು ಎನ್ನುವುದರ ವಿವರಣೆ ಅನಗತ್ಯ. ದಕ್ಷಿಣ ಭಾರತದಲ್ಲಿ ಪುದುಚೆರಿ ಕೇಂದ್ರಾಡಳಿತ ಪ್ರದೇಶ ಬಿಜೆಪಿ ಆಡಳಿತದಲ್ಲಿದೆ. ಮುಖ್ಯ ರಾಜ್ಯ ಕರ್ನಾಟಕ. ಅದನ್ನು ಕಳೆದುಕೊಳ್ಳುವುದು ಕೇಂದ್ರದ ವರಿಷ್ಠರಿಗೆ ಬೇಕಾಗಿಲ್ಲ.

ಹೀಗಿದ್ದರೂ ಕಾಂಗ್ರೆಸ್ ಅಥವಾ ಜೆಡಿಎಸ್‌ನಿಂದ ಬಿಜೆಪಿಗೆ ಜಿಗಿಯುತ್ತಿರುವವರ; ಜೆಡಿಎಸ್ ಇಲ್ಲವೇ ಬಿಜೆಪಿಯಿಂದ ಕಾಂಗ್ರೆಸ್‌ಗೆ ನೆಗೆಯುತ್ತಿರುವವರ, ಈ ಎರಡೂ ಪಕ್ಷದಲ್ಲಿ ವ್ಯಕ್ತಿಗತ ಭವಿಷ್ಯವಿಲ್ಲ ಎಂದು ಜೆಡಿಎಸ್‌ಗೆ ಹಾರುತ್ತಿರುವವರ ಸಂಖ್ಯೆ ಕಡಿಮೆಯದೇನೂ ಅಲ್ಲ. ಟಿಕೆಟ್ ಹಂಚಿಕೆ ಪ್ರಕ್ರಿಯೆ ಮುಗಿಯುವವರೆಗೂ ಈ ಬಗೆಯ ಹಾರಾಟ, ನೆಗೆದಾಟ, ನಿತ್ಯ ರಂಜನೆ ನೀಡುವುದು ಗ್ಯಾರಂಟಿ. ಬಿಜೆಪಿಯಲ್ಲೇ ರಾಜಕೀಯ ಹುಟ್ಟು ಏಳಿಗೆ ಇತ್ಯಾದಿ ಕಂಡಿರುವ ಸಂಘ ಪರಿವಾರ ಮೂಲದವರು ಟಿಕೆಟ್ ಸಿಗಲಿ ಸಿಗದಿರಲಿ ಪಕ್ಷಾಂತರ ಮಾಡುವ ಸಾಧ್ಯತೆ ಕಡಿಮೆ. ಬಿ.ಎಸ್. ಯಡಿಯೂರಪ್ಪ ಕೆಜೆಪಿ ಕಟ್ಟಿದಾಗ ಅವರನ್ನು ಹಿಂಬಾಲಿಸಿದ ಶೋಭಾ ಕರಂದ್ಲಾಜೆ ಮತ್ತಿತರ ಕೆಲವು ಅಪವಾದ ಇಲ್ಲವೆಂದಲ್ಲ. ಬಹುತೇಕರು ಈ ಜಾಡಿನಲ್ಲಿ ಹೆಜ್ಜೆ ಹಾಕುವುದಿಲ್ಲ.

ಇದನ್ನೂ ಓದಿ: ಮೊಗಸಾಲೆ ಅಂಕಣ: ಮತ್ತೆ ಮಧ್ಯರಂಗಕ್ಕೆ ಬಂದ ಬಿಎಸ್‍ ಯಡಿಯೂರಪ್ಪ

ಬರಲಿರುವ ಚುನಾವಣೆ ವಿಶೇಷವೆಂದರೆ ಬಿಜೆಪಿಯ ಕೆಲವು ಹಾಲಿ ಶಾಸಕರು ಟಿಕೆಟ್‌ಗಾಗಿ ಬೇಡಿಕೆ ಮಂಡಿಸಲು ಹಿಂದೇಟು ಹಾಕಿರುವುದು. ಹೇಗಿದ್ದರೂ ಪಕ್ಷ ಮತ್ತೆ ಅಧಿಕಾರಕ್ಕೆ ಬರುವುದು ಕಷ್ಟ. ಅಷ್ಟೆಲ್ಲ ಮೈಕೈ ನೋವು ಮಾಡಿಕೊಂಡು, ಹಣವನ್ನು ವ್ಯರ್ಥ ಕಳೆದುಕೊಳ್ಳುವುದಕ್ಕಿಂತ ಐದು ವರ್ಷ ಮನೆಯಲ್ಲಿದ್ದು ಆರೋಗ್ಯ ನೋಡಿಕೊಳ್ಳುವುದೇ ವಿವೇಕಯುತ ಎಂಬ ನಿಲುವಿಗೆ ಅವರು ಬಂದಿರುವಂತಿದೆ. ಪಕ್ಷಾಂತರ ಮಾಡುವವರು ಮಾಡಿಕೊಳ್ಳಲಿ, ಟಿಕೆಟ್ ಸಿಗಲಿ ಸಿಗದಿರಲಿ ನೆಚ್ಚಿಕೊಂಡಿರುವ ಪಕ್ಷದಲ್ಲೇ ಇರೋಣ ಎನ್ನುವವರಿಗೆ ಮೂರೂ ಪಕ್ಷದಲ್ಲಿ ಕೊರತೆ ಇಲ್ಲ ಎನ್ನುವುದು ಕರ್ನಾಟಕ ರಾಜಕೀಯದ ಪುಣ್ಯ.

ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಮತ್ತು ಪ್ರಧಾನಿ ಇಂದಿರಾ ಗಾಂಧಿ ನಡುವಿನ ಸಂಬಂಧ ಹಳಸಿದ್ದ ಎಂಬತ್ತರ ದಶಕದ ರಾಜಕೀಯ ರಾಜ್ಯ ಅದುವರೆಗೆ ಕಂಡು ಕೇಳರಿಯದ ಆಯಾರಾಂ ಗಯಾರಾಂ ಪ್ರಕ್ರಿಯೆಗೆ ಸಾಕ್ಷಿಯಾಯಿತು. ಕಾಂಗ್ರೆಸ್ ಶಾಸಕ ಎಚ್.ಸಿ. ಶ್ರೀಕಂಠಯ್ಯನವರು ಎಂಬತ್ತು ಜನ ಕಾಂಗ್ರೆಸ್ ಶಾಸಕರನ್ನು ಕಟ್ಟಿಕೊಂಡು ಅರಸುಗೆ ತಿರುಗಿಬಿದ್ದರು. ಅರಸು ಸರ್ಕಾರ ಪತನವಾಯಿತು. ಆದರೆ ಶ್ರೀಕಂಠಯ್ಯ ತಾವು ನಿರೀಕ್ಷಿಸಿದಂತೆ ಮುಖ್ಯಮಂತ್ರಿ ಆಗಲಿಲ್ಲ, ಬದಲಿಗೆ ಆ ಹುದ್ದೆಗೆ ಏರಿದ್ದು ಆರ್. ಗುಂಡೂರಾವ್. ಪಕ್ಷಾಂತರ ಎಂಬೋ ಮರಕೋತಿ ಆಟ ಅದೇ ಸ್ಥಿತಿಯಲ್ಲಿ ಈ ಹೊತ್ತಿಗೂ ಮುಂದುವರಿದಿದೆ. ಪಕ್ಷಾಂತರದ ಲಾಭ ಹಲವರಿಗೆ ಆಗಿದೆ. ಶ್ರೀಕಂಠಯ್ಯ ಥರದ ಉದಾಹರಣೆ ಹತ್ತಾರು ಇದ್ದಿದ್ದರೆ ಒಂದು ನಿಯಂತ್ರಣದಲ್ಲಿ ಈ ಪಿಡುಗು ಇರುತ್ತಿತ್ತೋ ಏನೋ. ಪಕ್ಷಾಂತರ ನಿಷೇಧ ಕಾಯ್ದೆ ನಮ್ಮಲ್ಲಿದೆ. 1985ರಲ್ಲಿ ಸಂವಿಧಾನ ತಿದ್ದುಪಡಿಗೂ ಒಳಗಾದ ಕಾಯ್ದೆಯಲ್ಲಿ ಅಂತರ್ಗತವಾಗಿರುವ ಲೋಪಗಳು ರಾಜಕಾರಣಿಗಳಿಗೆ ಹುಲ್ಲುಗಾವಲಾಗಿವೆ.

ಇದನ್ನೂ ಓದಿ: ಮೊಗಸಾಲೆ ಅಂಕಣ: ಸೋನಿಯಾ, ಬಿಎಸ್‌ವೈ ಮನಸ್ಸು ಭಾರ:ಚುನಾವಣೆ ಕಣದಿಂದ ದೂರ

“ಆಯಾರಾಂ ಗಯಾರಾಂ” ಪದಪುಂಜದ ಗಂಗೋತ್ರಿ ಹರಿಯಾಣಾ. ನಂತರದಲ್ಲಿ ಅದು ದೇಶದ ಉದ್ದಗಲಕ್ಕೆ ಆ ರಾಜ್ಯ ಈ ಪ್ರದೇಶವೆನ್ನದೆ ಎಲ್ಲ ಕಡೆಯಲ್ಲೂ ಹರಿಯುತ್ತಿದೆ. 1967ರ ಮಾತು. ಹರಿಯಾಣಾ ವಿಧಾನ ಸಭೆಗೆ ಗಯಾಲಾಲ್ ಎಂಬುವವರು ಪಕ್ಷೇತರ ಶಾಸಕರಾಗಿ ಆಯ್ಕೆಯಾಗಿದ್ದರು. ಪಕ್ಷದ ಶಾಸಕರಿಗೆ ಇರದ; ಪಕ್ಷೇತರರಿಗೆ ಇರುವ ಅಗಾಧ ಅನುಕೂಲವೆಂದರೆ ಅವರು ಯಾವ ಪಕ್ಷಕ್ಕೂ ಬೆಂಬಲವಾಗಿ ನಿಲ್ಲಬಹುದು. (ಇಲ್ಲಿ ಕರ್ನಾಟಕದಲ್ಲಿ 1983ರಲ್ಲಿ ಜನತಾ ಪಕ್ಷದ ಸರ್ಕಾರ ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದಾಗ ಅವರಿಗೆ ಬಹುಮತದ ಕೊರತೆ ಇತ್ತು. ಅದನ್ನು ತುಂಬಿಕೊಟ್ಟಿದ್ದು ಬಿಜೆಪಿ, ಉಭಯ ಕಮ್ಯೂನಿಸ್ಟ್ ಪಕ್ಷಗಳು ಮತ್ತು ಪಕ್ಷೇತರ ಶಾಸಕರು) ಈ ಮನುಷ್ಯ ಗಯಾರಾಂ ವಿಧಾನ ಸಭೆ ಅಧಿವೇಶನಕ್ಕೆ ಮೊದಲೇ ಕಾಂಗ್ರೆಸ್‌ಗೆ ಸೇರಿದರು. ಚೌಕಾಸಿ ಕೆಲಸ ಮಾಡಲಿಲ್ಲವೆನ್ನಬೇಕು. ಮುಂದಿನ ಹದಿನೈದು ದಿನದಲ್ಲಿ ಈ ಮಹರಾಯ ಮೂರು ಬಾರಿ ಪಕ್ಷಾಂತರ ಮಾಡಿದರು. ಪಕ್ಷೇತರ ಆಗಿದ್ದವರು ಕಾಂಗ್ರೆಸ್ ಸೇರಿದರು. ಕಾಂಗ್ರೆಸ್ ತೊರೆದು ಸಂಯುಕ್ತ ರಂಗದಲ್ಲಿ ಬಾವುಟ ಹಾರಿಸಿದರು. ವ್ಯವಹಾರ ಕುದುರಿ ಮತ್ತೆ ಕಾಂಗ್ರೆಸ್‌ಗೆ ಬಂದರು. ಅಲ್ಲಿಂದ ಒಂಬತ್ತೇ ತಾಸಿನಲ್ಲಿ ಸಂಯುಕ್ತ ರಂಗಕ್ಕೆ ಜಿಗಿದು ಜಯದ ನಗು ಬೀರಿದರು. ಈ ನಡುವಿನ ಅವಧಿಯಲ್ಲಿ ಗಯಾರಾಂ ಅವರನ್ನು ಮಾಧ್ಯಮ ಗೋಷ್ಠಿಗೆ ಎಳೆದುತಂದಿದ್ದ ಕಾಂಗ್ರೆಸ್ ನಾಯಕ ರಾವ್ ಬೀರೇಂದ್ರ ಸಿಂಗ್ “ಗಯಾರಾಂ ಈಗ ಆಯಾರಾಂ” ಎಂದಿದ್ದರು. ಅಲ್ಲಿಂದ ಮುಂದಕ್ಕೆ ಪಕ್ಷಾಂತರ ಪಿಡುಗಿಗೆ ಹೊಸ ಹೆಸರು ಬಂತು.

ಪಕ್ಷಾಂತರ ನಿಷೇಧ ಕಾಯ್ದೆ ವಿಚಾರದಲ್ಲಿ ಯಾವ ರಾಜಕೀಯ ಪಕ್ಷವೂ ಗಂಭೀರವಾಗಿಲ್ಲ. ರಾಷ್ಟ್ರೀಯ ಪಕ್ಷಗಳಂತೆ ಪ್ರಾದೇಶಿಕ ಪಕ್ಷಗಳೂ ಪಕ್ಷಾಂತರಿಗಳನ್ನು ಆಧರಿಸಿ ಉತ್ತೇಜಿಸಿ ಅವರ ಬೇಕುಗಳಿಗೆ ಸ್ಪಂದಿಸಿ ರಾಜಕಾರಣ ಮಾಡುವ ಚಾಳಿಗೆ ಒಳಗಗಿವೆ. ತಾನಿರುವ ಪಕ್ಷದಲ್ಲಿ ಉಸಿರುಗಟ್ಟಿಸುವ ಸನ್ನಿವೇಶವಿದ್ದು ಅದನ್ನು ತ್ಯಜಿಸಿ ಸೇರಲಿರುವ ಪಕ್ಷದ ಸಿದ್ಧಾಂತ ಒಪ್ಪಿ ಬಂದಿರುವುದಾಗಿ ಒಂದು ಹೇಳಿಕೆ ನೀಡಿದರೆ ಅಲ್ಲಿಗೆ ಕಥೆ ಖತಂ ಆಗುತ್ತದೆ. ನಿನ್ನೆಯವರೆಗೆ ಕೋಮುವಾದಿಯಾಗಿದ್ದ ರಾಜಕಾರಣಿಯೊಬ್ಬ ಹೀಗೆ 24 ತಾಸು ಕಳೆಯುವುದರ ಒಳಗಾಗಿ ಜಾತ್ಯತೀತ ಆಗುವ ಪವಾಡ ಘಟಿಸುವುದು ಇಂಡಿಯಾದಲ್ಲಿ ಮಾತ್ರ. ಜಾತ್ಯತೀತ ಆಗಿದ್ದವರು 24 ತಾಸಿನಲ್ಲಿ ಕೋಮುವಾದಿ ಆಗುವುದು ಕೂಡಾ ಪವಾಡವೇ.

ಇದನ್ನೂ ಓದಿ: ಮೊಗಸಾಲೆ ಅಂಕಣ: ರೋಹಿಣಿ, ರೂಪಾ ರಂಪಾಟ: ಸರ್ಕಾರಕ್ಕೆ ಪೇಚಾಟ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

ರಾಜಮಾರ್ಗ ಅಂಕಣ: ಪ್ರತಿಭೆಗಳು ಹಾವುಗಳ ಹಾಗೆ, ಯಾವುದೋ ಹುತ್ತದಲ್ಲಿ ಅಡಗಿರುತ್ತವೆ!

ರಾಜಮಾರ್ಗ ಅಂಕಣ: ಭಾರತೀಯ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಭವಿಷ್ಯದ ಕೋಲ್ಮಿಂಚು ಮಯಾಂಕ್‌ ಯಾದವ್. ಆತನು ಮುಂದಿನ ಟಿ 20 ವಿಶ್ವಕಪ್ ಆಡಬೇಕು ಎಂದು ಕ್ರಿಕೆಟ್ ಅಭಿಮಾನಿಗಳು ಆಗ್ರಹ ಮಾಡುತ್ತಿದ್ದಾರೆ ಅಂದರೆ ಆತನ ದೈತ್ಯ ಪ್ರತಿಭೆ ಥಟ್ಟನೆ ಗಮನ ಸೆಳೆಯುತ್ತದೆ.

VISTARANEWS.COM


on

mayank yadav
Koo

ಮಯಾಂಕ್ ಯಾದವ್ 156.7 ಕಿಮೀ ವೇಗವನ್ನು ಪಡೆದದ್ದು ಹೇಗೆ?

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ವರ್ಷ ಐಪಿಎಲ್ (IPL) ಪಂದ್ಯಗಳನ್ನು ನೀವು ನೋಡುತ್ತಿದ್ದರೆ ಈ ಬೌಲರ್ (Bowler) ಮಿಸ್ ಆಗುವ ಸಾಧ್ಯತೆಯೇ ಇಲ್ಲ. ಲಕ್ನೋ ಸೂಪರ್ ಜಯಂಟ್ಸ್ (Lucknow Super Jaints) ತಂಡದ ಪರವಾಗಿ ಆಡುತ್ತಿರುವ ಈ ವೇಗದ ಬೌಲರ್ ದಾಖಲೆಯ 156.7 ಕಿಲೋಮೀಟರ್ ವೇಗದಲ್ಲಿ ಬೌಲಿಂಗ್ ಮಾಡಿದ್ದು, ಸತತ ಎರಡು ಪಂದ್ಯಗಳಲ್ಲಿ ದಿಗ್ಗಜ ಆಟಗಾರರನ್ನು ಔಟ್ ಮಾಡಿದ್ದು, ಎರಡೂ ಪಂದ್ಯಗಳಲ್ಲಿ ‘ಮ್ಯಾನ್ ಆಫ್ ದ ಮ್ಯಾಚ್’ ಪ್ರಶಸ್ತಿಗಳನ್ನು ತನ್ನದಾಗಿಸಿದ್ದನ್ನು ನೋಡುತ್ತಿದ್ದರೆ ಭಾರತೀಯ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಭವಿಷ್ಯದ ಕೋಲ್ಮಿಂಚು ಕಣ್ಣ ಮುಂದೆ ಬರುತ್ತದೆ. ಆತನು ಮುಂದಿನ ಟಿ 20 ವಿಶ್ವಕಪ್ (T20 Worldcup) ಆಡಬೇಕು ಎಂದು ಕ್ರಿಕೆಟ್ ಅಭಿಮಾನಿಗಳು ಆಗ್ರಹ ಮಾಡುತ್ತಿದ್ದಾರೆ ಅಂದರೆ ಆತನ ದೈತ್ಯ ಪ್ರತಿಭೆ ಥಟ್ಟನೆ ಗಮನ ಸೆಳೆಯುತ್ತದೆ.

ಯಾರೀ ಮಯಾಂಕ್ ಯಾದವ್?

ದೆಹಲಿಯಲ್ಲಿ ಪೊಲೀಸ್ ವಾಹನಗಳಿಗೆ ಸೈರನ್ ಅಳವಡಿಸುವ ಸಣ್ಣ ಉದ್ಯಮ ನಡೆಸುತ್ತಿರುವ ಪ್ರಭು ಯಾದವ್ ಅವರ ಮಗ ಮಯಾಂಕ್. ಚಿಕ್ಕಂದಿನಿಂದ ವೇಗದ ಬೌಲರ್ ಆಗಬೇಕು ಎನ್ನುವ ಕನಸು. ಆತನ ಕನಸಿಗೆ ಎಲ್ಲಾ ರೀತಿಯ ಸಪೋರ್ಟ್ ಅಪ್ಪನದ್ದು. ಮಗನನ್ನು ಕರೆದುಕೊಂಡು ದೆಹಲಿಯ ಎಲ್ಲ ಕ್ರಿಕೆಟ್ ಕ್ಲಬ್ ಬಾಗಿಲು ಬಡಿದರೂ ಯಾರೂ ಅವರನ್ನು ಕರೆದು ಮಾತನಾಡಿಸಲಿಲ್ಲ. ಯಾರೂ ಒಳಗೆ ಬಿಡಲಿಲ್ಲ. ಕೊನೆಗೆ ಅಪ್ಪ ದುಂಬಾಲು ಬಿದ್ದ ನಂತರ ಪ್ರಸಿದ್ಧವಾದ ಸಾನೆಟ್ ಕ್ಲಬ್ ಆತನ ಮೇಲೆ ಭರವಸೆ ಇಟ್ಟಿತು. ಖ್ಯಾತ ಕ್ರಿಕೆಟ್ ಕೋಚ್ ತಾರಕ್ ಸಿನ್ಹಾ ಆತನ ಪ್ರತಿಭೆಯನ್ನು ಗುರುತಿಸಿದರು. ಆತನ ಶಕ್ತಿಶಾಲಿ ಮತ್ತು ಉದ್ದವಾದ ತೋಳುಗಳಿಗೆ ಹೈ ಆರ್ಮ್ ಆಕ್ಷನ್ ಕಲಿಸಿಕೊಟ್ಟರು. ವೇಗದ ಜೊತೆಗೆ ನಿಖರತೆ, ಗುಡ್ ಲೆಂಥ್, ನಿಯಂತ್ರಣ, ಬೌನ್ಸ್, ಸ್ವಿಂಗ್ ಎಲ್ಲವನ್ನೂ ಕಲಿಸಿದರು. ಮಯಾಂಕ್ ಎಲ್ಲವನ್ನೂ ವೇಗವಾಗಿ ಕಲಿಯುತ್ತಾ ಹೋದರು. ಕೋಚ್ ತಾರಕ್ ಸಿನ್ಹಾ ಆತನಿಗೆ ಪ್ರತಿಭೆಗೆ ಮಾರುಹೋಗಿ ಶುಲ್ಕವನ್ನು ಪಡೆಯದೆ ಆತನಿಗೆ ಕೋಚಿಂಗ್ ನೀಡಿದರು.

ವಿಜಯ್ ಹಜಾರೆ ಟ್ರೋಫಿ ಆತನಿಗೆ ಉಡ್ಡಯನ ವೇದಿಕೆ ಆಯ್ತು

2021ರ ವಿಜಯ ಹಜಾರೆ ಟ್ರೋಫಿಗೆ ಆತನಿಗೆ ಅವಕಾಶ ದೊರಕಿದ್ದು ಆತನ ಭಾಗ್ಯದ ಬಾಗಿಲು ತೆರೆಯುವಂತೆ ಮಾಡಿತ್ತು. ಗುರುಶರಣ್ ಸಿಂಘ್ ಆತನನ್ನು ದೊಡ್ಡ ರೀತಿಯಲ್ಲಿ ಪ್ರಭಾವ ಬಳಸಿ ದೆಹಲಿ ತಂಡಕ್ಕೆ ಆಯ್ಕೆ ಆಗುವಂತೆ ಮಾಡಿದ್ದರು. ಮೊದಲ ವರ್ಷದ ಎರಡು ಪಂದ್ಯಗಳಲ್ಲಿ ಆರು ವಿಕೆಟ್ ಪಡೆದಾಗ, ಮುಂದಿನ ವರ್ಷ ಮತ್ತೆ ಹತ್ತು ವಿಕೆಟ್ ಪಡೆದಾಗ ಕ್ರಿಕೆಟ್ ಪಂಡಿತರು ಹುಬ್ಬೇರಿಸಿ ಆತನನ್ನು ಗಮನಿಸಿದರು. ಕಪಿಲ್ ದೇವ್, ಚೇತನ್ ಶರ್ಮಾ, ಆಶೀಶ್ ನೆಹ್ರಾ, ವರುಣ್ ಆರೋನ್, ಉಮ್ರಾನ್ ಮಲಿಕ್, ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್, ಅಜಿತ್ ಅಗರ್ಕರ್, ಇರ್ಫಾನ್ ಪಠಾಣ್ ಮೊದಲಾದ ವೇಗದ ಬೌಲಿಂಗ್ ಲೆಜೆಂಡಗಳ ಸಾಲಿನಲ್ಲಿ ಒಬ್ಬ ಉತ್ತರಾಧಿಕಾರಿ ದೊರೆತಿದ್ದಾನೆ ಎಂದು ಕೊಂಡಾಡಿದರು. ಕ್ರಿಕೆಟ್ ಪಂಡಿತರ ನಿರೀಕ್ಷೆಗೆ ಸರಿಯಾಗಿ ಮಯಾಂಕ್ ಆಟವಾಡುತ್ತ ಹೋದರು. ದೆಹಲಿ ಪರವಾಗಿ ಹಲವು ರಣಜಿ ಪಂದ್ಯಗಳನ್ನೂ ಆಡಿದರು.

ಈ ವರ್ಷದ ಐಪಿಎಲ್ ತಾರೆ ಮಯಾಂಕ್.

ಸಾಕಷ್ಟು ನವೋದಿತ ತಾರೆಗಳೇ ತುಂಬಿರುವ ಲಕ್ನೋ ಸೂಪರ್ ಜಯಂಟ್ಸ್ ತಂಡವು ಕಳೆದ ವರ್ಷ ಆತನನ್ನು 20 ಲಕ್ಷ ಕೊಟ್ಟು ಖರೀದಿ ಮಾಡಿತ್ತು. ಆದರೆ ಗಾಯದ ಕಾರಣಕ್ಕೆ ಮಯಾಂಕ್ ಒಂದು ಪಂದ್ಯವನ್ನೂ ಆಡಲು ಸಾಧ್ಯ ಆಗಲಿಲ್ಲ. ಆದರೆ ಈ ಬಾರಿ ಮತ್ತೆ ಅದೇ ತಂಡ ಆತನ ಮೇಲೆ ವಿಶ್ವಾಸ ಇಟ್ಟು ಖರೀದಿ ಮಾಡಿದಾಗ ಮಯಾಂಕ್ ಆ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡ ಹಾಗೆ ಅನ್ನಿಸುತ್ತದೆ. ಮೊದಲ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಖ್ಯಾತನಾಮ ಬ್ಯಾಟರಗಳಾದ ಜಾನಿ ಬೇರ್ಸ್ಟ್ರೋ, ಪ್ರಭಸಿಮ್ರನ್ ಸಿಂಗ್, ಜಿತೆಶ್ ಶರ್ಮ ಅವರನ್ನು ಔಟ್ ಮಾಡಿದ ರೀತಿ ಅದ್ಬುತವಾಗಿ ಇತ್ತು. ಮೊದಲ ಪಂದ್ಯದಲ್ಲಿ ‘ಮ್ಯಾನ್ ಆಫ್ ದ ಮ್ಯಾಚ್’ ಪ್ರಶಸ್ತಿ ದೊರೆಯಿತು. ಎರಡನೇ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ. ಅಲ್ಲಿ ಗ್ಲೆನ್ ಮ್ಯಾಕ್ಸ್ವೆಲ್, ಕ್ಯಾಮರೂನ್ ಗ್ರೀನ್ ಅವರನ್ನು ಬೀಟ್ ಮಾಡಿದ ಎಸೆತಗಳು ಅದ್ಭುತವೇ ಆಗಿದ್ದವು. ಆ ಪಂದ್ಯದಲ್ಲಿ ದಾಖಲೆಯ 156.7 ಕಿಮೀ ವೇಗದ ಬಾಲ್ ದಾಖಲಾಯಿತು. ಆ ಪಂದ್ಯದಲ್ಲಿ ಕೇವಲ 14 ರನ್ನಿಗೆ ಮೂರು ವಿಕೆಟ್ ಮತ್ತು ‘ಮ್ಯಾನ್ ಆಫ್ ದ ಮ್ಯಾಚ್’ ಪ್ರಶಸ್ತಿ ದೊರೆಯಿತು.

ಇದನ್ನೂ ಓದಿ: ರಾಜಮಾರ್ಗ ಅಂಕಣ: ನೇಪಾಳ ಸರಕಾರದ ದುರಾಸೆಗೆ ಬಲಿ ಆಗುತ್ತಿದೆ ದೇವ ಶಿಖರ

ದಿಗ್ಗಜರಿಂದ ಶಹಬ್ಬಾಸ್

ಕ್ರಿಕೆಟ ದಿಗ್ಗಜರಾದ ಡೆಲ್ ಸ್ಟೇನ್, ಸ್ಟುವರ್ಟ್ ಬ್ರಾಡ್, ಸ್ಟೀವ್ ಸ್ಮಿತ್ ಆತನ ಬೌಲಿಂಗ್ ಕೌಶಲ್ಯವನ್ನು ಹಾಡಿ ಹೊಗಳಿದ್ದಾರೆ. ಆತನ ಪ್ರತೀಯೊಂದು ಎಸೆತವು ಗುಡ್ ಲೆಂಥ್ ಸ್ಪಾಟನಲ್ಲಿ ಬಿದ್ದು ಆಫ್ ಸ್ಟಂಪ್ ಸೀಳಿಕೊಂಡು ಹೋಗುವುದನ್ನು ನೋಡುವುದೇ ಒಂದು ವಿಸ್ಮಯ ಎಂದು ಡೆಲ್ ಸ್ಟೆನ್ ಹೇಳಿದ್ದಾರೆ.

ದೇಶಕ್ಕಾಗಿ ಆಡುವ ಬಯಕೆ

ಭಾರತೀಯ ಕ್ರಿಕೆಟ್ ತಂಡದಲ್ಲಿ ಆಡುವ ಬಯಕೆ ತನಗಿದೆ ಎಂದು ಹೇಳಿರುವ ಮಯಾಂಕ್ ಪ್ರತಿಭೆಯನ್ನು ಜತನದಿಂದ ಕಾಪಾಡುವುದು ಬಿಸಿಸಿಐ ಹೊಣೆ. ಹಾಗೆಯೇ ವೇಗದ ಬೌಲರಗಳಿಗೆ ಶಾಪವಾಗಿ ಕಾಡುವ ಬೆನ್ನು ನೋವು ಮೊದಲಾದ ದೈಹಿಕ ಸಮಸ್ಯೆಗಳಿಗೆ ಮಯಾಂಕ್ ಸಿಲುಕದಿರಲಿ ಎಂಬ ಹಾರೈಕೆ ಕ್ರಿಕೆಟ್ ಪ್ರೇಮಿಗಳದ್ದು. ಮಯಾಂಕ್ ಭಾರತದ ಭವಿಷ್ಯದ ಕ್ರಿಕೆಟ್ ತಾರೆ ಎನ್ನುವುದರಲ್ಲಿ ಯಾವ ಅನುಮಾನ ಕೂಡ ಬೇಡ.

ಆಲ್ ದ ಬೆಸ್ಟ್ ಮಯಾಂಕ್.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಮೊಂಡು ಕೈಗಳಿಂದ ಜಗತ್ತನ್ನು ಗೆಲ್ಲಲು ಹೊರಟ ಹೋರಾಟಗಾರನ ಕಥೆ

Continue Reading

ಅಂಕಣ

ದಶಮುಖ ಅಂಕಣ: “ಮಧುಮಾಸವೆ ಅಡಿ ಇಡುತಿದೆ ಹೊಸವರ್ಷದ ಬೆಳಗೆ”

ದಶಮುಖ ಅಂಕಣ: ವಸಂತ ಎನ್ನಿ, ಬೈಸಾಖಿ ಎನ್ನಿ, ಸ್ಪ್ರಿಂಗ್ (Spring) ಎನ್ನಿ, ಹೆಸರು ಯಾವುದಾದರೇನು… ಎಲ್ಲವೂ ಒಂದೇ ಋತುವಿಗೆ ಸಂಬಂಧಿಸಿದ್ದು. ʻಬೇವಿನ ಕಹಿ ಬಾಳಿನಲ್ಲಿ ಹೂವಿನ ನಸುಗಂಪು ಸೂಸಿ ಜೀವಕಳೆಯʼ ತರುವುದಕ್ಕೆ ಪ್ರಕೃತಿಗೆ ಗಡಿ, ಸೀಮೆಗಳ ಹಂಗಿಲ್ಲ. ಇದೇ ಹಿನ್ನೆಲೆಯಲ್ಲಿ ಹೊಸತನಕ್ಕೂ ವಸಂತನಿಗೂ ಇರುವ ಅಂಟು ಕುತೂಹಲಕ್ಕೆ ಕಾರಣವಾಗಿದೆ.

VISTARANEWS.COM


on

dashamukha column spring time
Koo

ಈ ಅಂಕಣವನ್ನು ಇಲ್ಲಿ ಓದಿ:

dashamukha column logo

ದಶಮುಖ ಅಂಕಣ: ಋತುಗಳು (Seasons) ವಿಶ್ವದೆಲ್ಲೆಡೆ ಒಂದೇ ತೆರನಾಗಿಲ್ಲ. ಕೆನಡಾ, ಅಮೆರಿಕದ ಬೇಸಿಗೆಯ (Summer) ಋತುವಿನಲ್ಲಿ ಭಾರತದಲ್ಲಿ ಮಳೆಗಾಲ (monsoon); ಈ ದಿನಗಳಲ್ಲಿ ನ್ಯೂಜಿಲೆಂಡ್, ಆಸ್ಟ್ರೇಲಿಯದಲ್ಲಿ ಚಳಿಗಾಲ (winter)! ಭೌಗೋಳಿಕವಾಗಿ ಆ ದೇಶಗಳು ಎಲ್ಲೆಲ್ಲಿವೆ ಎನ್ನುವುದರ ಮೇಲೆ ಯಾವ ದಿನಗಳಲ್ಲಿ ಯಾವ ಋತು ಎನ್ನುವುದು ನಿರ್ಧಾರವಾಗುವುದು ಸಾಮಾನ್ಯ ವಿದ್ಯಮಾನ. ಸ್ಪ್ರಿಂಗ್ ಟೈಮ್ ಅಥವಾ ಹೂ ಬಿಡುವ ದಿನಗಳು ಸಹ ಸಹಜವಾಗಿ ಭಿನ್ನವೇ ಆಗಿರುತ್ತದೆ. ದಿನಗಳು ಬೇರೆಯಾದರೂ, ಆ ದಿನಗಳಲ್ಲಿ ಪ್ರಕೃತಿಯಲ್ಲಿ ನಡೆಯುವ ಚಟುವಟಿಕೆಗಳು ಬೇರೆಯಲ್ಲವಲ್ಲ. ನಮ್ಮಲ್ಲಿದು ವಸಂತ ಋತು. ವಸಂತ ಎನ್ನಿ, ಬೈಸಾಖಿ ಎನ್ನಿ, ಸ್ಪ್ರಿಂಗ್ (Spring) ಎನ್ನಿ, ಹೆಸರು ಯಾವುದಾದರೇನು… ಎಲ್ಲವೂ ಒಂದೇ ಋತುವಿಗೆ ಸಂಬಂಧಿಸಿದ್ದು. ʻಬೇವಿನ ಕಹಿ ಬಾಳಿನಲ್ಲಿ ಹೂವಿನ ನಸುಗಂಪು ಸೂಸಿ ಜೀವಕಳೆಯʼ ತರುವುದಕ್ಕೆ ಪ್ರಕೃತಿಗೆ ಗಡಿ, ಸೀಮೆಗಳ ಹಂಗಿಲ್ಲ. ಇದೇ ಹಿನ್ನೆಲೆಯಲ್ಲಿ ಹೊಸತನಕ್ಕೂ ವಸಂತನಿಗೂ ಇರುವ ಅಂಟು ಕುತೂಹಲಕ್ಕೆ ಕಾರಣವಾಗಿದೆ.

ನಮ್ಮ ವಸಂತ ಋತುವಿಗೂ ಹೊಸತನಕ್ಕೂ ಇರುವುದು ಅಂಟು, ನಂಟು- ಎರಡೂ ಹೌದು. ಹಾಗೆಂದೇ ಭಾರತದ ಒಳಗಿನ ಲೆಕ್ಕವಿಲ್ಲದಷ್ಟು ಜಾತಿ, ಭಾಷೆ, ಪ್ರಾಂತ್ಯಗಳ ಜನ ವಸಂತ ಋತುವಿನುದ್ದಕ್ಕೂ ಹೊಸ ವರ್ಷ ಇಲ್ಲವೇ ಸುಗ್ಗಿಯ ಹಬ್ಬವನ್ನಾಚರಿಸುತ್ತಾರೆ. ಸಾಮಾನ್ಯವಾಗಿ ಕೇಳಿಬರುವ ಯುಗಾದಿ, ಗುಡಿಪಡ್ವಾಗಳ ಹೊರತಾಗಿ ಸಿಖ್ ಬಾಂಧವರು ಆಚರಿಸುವ ಬೈಸಾಖಿ, ಅಸ್ಸಾಂನ ಬೋಹಾಗ್ ಬಿಹು ಅಥವಾ ರಂಗೋಲಿ ಬಿಹು, ಬಂಗಾಳದ ಪೊಲೇಹ ಬೊಐಸಾಖ್, ಕಾಶ್ಮೀರದ ನವ್ರಿ, ಸಿಂಧಿ ಜನರ ಚೇತಿ ಚಾಂದ್, ಸೌರಮಾನ ಯುಗಾದಿ ಅಥವಾ ವಿಶು, ಹಿಮಾಚಲ ಪ್ರದೇಶದ ದೋಗ್ರಾ, ಒಡಿಸ್ಸಾದ ವಿಶು ಸಂಕ್ರಾಂತಿ, ಮಣಿಪುರದ ಚೈರೋಬ… ಅಂತೂ ದೇಶದ ಉದ್ದಗಲಕ್ಕೂ ಒಂದಿಲ್ಲೊಂದು ಹೆಸರಿನಿಂದ ವಸಂತನ ಆಗಮನವನ್ನು ಹೊಸವರ್ಷವೆಂದೇ ಸಂಭ್ರಮಿಸುತ್ತಾರೆ. ಶಿಶಿರದಲ್ಲಿ ಬೋಳಾಗಿ ನಿಂತ ಪ್ರಕೃತಿಯೆಲ್ಲ ಹಸಿರು ಧರಿಸಿ, ಲೋಕಕ್ಕೆಲ್ಲ ಉಸಿರು ತುಂಬುವ ಈ ದಿನಗಳಲ್ಲಿ ನಾವು ಮಾತ್ರವೇ ಯುಗಾದಿ ಆಚರಿಸುತ್ತೇವೆ ಎಂದು ಭಾವಿಸುವಂತಿಲ್ಲ. ವಿಶ್ವದ ಎಷ್ಟೊಂದು ಸಂಸ್ಕೃತಿಗಳು ಹೊಸ ವರ್ಷದ ಸಂಭ್ರಮವನ್ನು ಆಚರಿಸುತ್ತವೆ ಗೊತ್ತೆ?

ಹೌದು, ಭಾರತದಲ್ಲಿ ಮಾತ್ರವೇ ಅಲ್ಲ, ಇನ್ನೂ ಬಹಳಷ್ಟು ದೇಶಗಳಲ್ಲಿ ವಸಂತ ಋತುವಿನಲ್ಲೇ ಹೊಸ ವರ್ಷದ ಆಚರಣೆಯಿದೆ. ಜನವರಿ ಮೊದಲ ತಾರೀಖಿನ ಹೊಸವರ್ಷವೆಂಬುದು ಬೇರೆಯದೇ ಆದ ಕ್ಯಾಲೆಂಡರಿನ ಲೆಕ್ಕಾಚಾರ. ಆದರೆ ಪ್ರಕೃತಿಯ ಎಣಿಕೆಗೆ ಸ್ಪಂದಿಸುವುದು ನಮ್ಮ ಯುಗಧರ್ಮ. ಪ್ರಕೃತಿಯಂತೆಯೇ ಶತಶತಮಾನಗಳಿಂದ ನಡೆದು ಬಂದಂಥ ನಿರಂತರತೆಯಿದು. ಪ್ರಕೃತಿಯ ಆರಾಧನೆಯೇ ಪರಮನ ಆರಾಧನೆ ಎಂಬ ತತ್ವ ಬಹುಶಃ ನಾಗರೀಕತೆಯಷ್ಟೇ ಹಳೆಯದಿರಬೇಕು. ಈ ಮಾತಿನ ವ್ಯಾಪ್ತಿಯನ್ನು ತಿಳಿಯುವುದಕ್ಕೆ ಫೆಬ್ರವರಿಯಿಂದ ಪ್ರಾರಂಭವಾಗಿ ಎಪ್ರಿಲ್ವರೆಗಿನ ದಿನಗಳಲ್ಲಿ ಬರುವ ಬೇರೆಬೇರೆ ದೇಶಗಳ ಸಾಂಪ್ರದಾಯಿಕ ಹೊಸವರ್ಷಗಳನ್ನು ಸಹ ತಿಳಿಯಬೇಕು ನಾವು. ಚೀನಾ, ಕೊರಿಯ, ವಿಯೆತ್ನಾಂ, ಟಿಬೆಟ್, ಇರಾನ್, ಕಜಕಿಸ್ತಾನ, ಉಜ್ಬೆಕಿಸ್ತಾನ, ನೇಪಾಳ, ಶ್ರೀಲಂಕಾ, ಮ್ಯಾನ್ಮಾರ್, ಲಾವೊಸ್, ಕಾಂಬೋಡಿಯ, ಥಾಯ್ಲೆಂಡ್… ಪಟ್ಟಿ ಇನ್ನೂ ಉದ್ದವಿದೆ. ಈ ಎಲ್ಲಾ ದೇಶಗಳಲ್ಲಿ ಕ್ಯಾಲೆಂಡರ್ ಹೊಸ ವರ್ಷದ ಹೊರತಾಗಿ ಹೂ ಬಿಡುವ ಕಾಲದಲ್ಲಿ ಸಾಂಪ್ರದಾಯಿಕವಾದ ಬೇರೆಯದೇ ರೀತಿಯಲ್ಲಿ ನವವರ್ಷವನ್ನು ಸ್ವಾಗತಿಸುತ್ತಾರೆ.

ಯಾವುದೇ ದೇಶದಲ್ಲಾದರೂ, ವಸಂತವೆಂದರೆ ಹಿತವಾದ ಕಾಲ. ಚಳಿಯ ಆರ್ಭಟವೆಲ್ಲಾ ಮುಗಿದಿದೆ, ಆದರೆ ಬಿಸಲಿನ ಪ್ರಕೋಪವಿನ್ನೂ ಜೋರಾಗಿಲ್ಲ ಎಂಬಂಥ ದಿನಗಳು. ಹೊಸ ಹಸಿರಿನ ನಡುವೆ ನಾನಾ ವರ್ಣ ಮತ್ತು ವಿನ್ಯಾಸಗಳ ಹೂ-ಮಿಡಿಗಳ ವೈಭೋಗ. ಶಿಶಿರ ಸುರಿಯುವ ಕಸಿವಿಸಿಯನ್ನು ಸಂಪೂರ್ಣವಾಗಿ ತೊಡೆದು, ಎಲ್ಲೆಡೆ ಆಹ್ಲಾದ, ಉತ್ಸಾಹ, ಉಲ್ಲಾಸಗಳನ್ನು ಚೆಲ್ಲುವುದರಲ್ಲಿ ನಮ್ಮ ವಸಂತ ಲೋಭ ತೋರುವವನೇ ಅಲ್ಲ. ಹಾಗಾದರೆ ವಸಂತ ಎಂದರೆ ಸಂತಸ ಮಾತ್ರವೇ? ಏನೆಲ್ಲಾ ಭಾವಗಳು ಬೆರೆತಿವೆ ಇದೊಂದು ಋತುವಿನೊಂದಿಗೆ? ಹೊಸತನ, ಏಳಿಗೆ, ಸಮೃದ್ಧಿ, ನಿರೀಕ್ಷೆ, ಭರವಸೆ, ಹರುಷ, ಪ್ರೀತಿ, ಒಲವು, ಶೃಂಗಾರ, ಝೇಂಕಾರ, ಕವಿಸಮಯ- ಹೇಳುತ್ತಿದ್ದರೆ ಇನ್ನೂ ಎಷ್ಟೊಂದು ಇದೆಯಲ್ಲ. ಅಲ್ಲಿಗೆ ವಸಂತನಿಗೂ ಹೊಸತನಕ್ಕೂ ತಳುಕು ಹಾಕುವುದು ಗಡಿ, ಸೀಮೆಗಳನ್ನು ಮೀರಿದ ಭಾವ; ಇಡೀ ಯುಗಧರ್ಮದ ಸ್ವಭಾವ ಎಂದಾಯಿತು.

Spring Tourism

ವಸಂತನ ಋತುವಿನ ಅಥವಾ ಚೈತ್ರಮಾಸದ ವರ್ಣನೆಗಳು ಸಂಸ್ಕೃತ ಕಾವ್ಯಗಳಿಂದ ತೊಡಗಿ, ಹಳೆಗನ್ನಡ ಕಾವ್ಯಗಳಿಂದ ಹಿಡಿದು, ಇಂದಿನವರೆಗೂ ಕಂಡುಬರುತ್ತದೆ. ಇವೆಲ್ಲವುಗಳಲ್ಲಿ ಕಾಣುವುದು ಪ್ರಕೃತಿಯಲ್ಲಿರುವ, ಆ ಮೂಲಕ ನಮ್ಮಲ್ಲೂ ಇರುವಂಥ ಹೊಸತನ. ಈ ವಿಷಯಗಳಲ್ಲಿ ಮೊದಲು ನೆನಪಾಗುವುದು ನಮ್ಮ ಕಾಳಿದಾಸ. ಆತನ ʻಮಾಳವಿಕಾಗ್ನಿ ಮಿತ್ರʼದಲ್ಲಿ ವಸಂತನ ಒಂದಿಷ್ಟು ವರ್ಣನೆಗಳನ್ನು ಕಾಣಬಹುದು. ಆದರೆ ಎಲ್ಲಕ್ಕಿಂತ ಮನಸೆಳೆಯುವುದು ಆತನ ʻಋತುಸಂಹಾರʼದಲ್ಲಿನ ವರ್ಣನೆಗಳು. ವರುಷದ ಆರೂ ಋತುಗಳನ್ನು ವರ್ಣಿಸುವ ಈ ಖಂಡಕಾವ್ಯದ ಕೊನೆಯ ಸರ್ಗದಲ್ಲಿ ಬರುವ ವಸಂತನ ವರ್ಣನೆಗಳ ಕನ್ನಡಾನುವಾದ (ಕೃಪೆ- ಹಂಸಾನಂದಿ) ಹೀಗಿವೆ- “ಹೊಮ್ಮಿರುವ ಮಾಂದಳಿರ ಮೊನಚು ಬಾಣಗಳನ್ನು/ ಚಿಮ್ಮಿಸಲು ದುಂಬಿಸಾಲಿನ ಬಿಲ್ಲ ಹೆದೆಯ/ ಹಮ್ಮುಗೊಳಿಸುತ ಯೋಧ ಬಂದಿಹ ವಸಂತನಿವ/ ನೊಮ್ಮೆಗೇ ಪ್ರಣಯಿಗಳ ಮನವ ಪೀಡಿಸಲು// ಕುಸುಮಿಸಿಹ ವೃಕ್ಷಗಳು ಕೊಳದಲ್ಲಿ ಕಮಲಗಳು/ ನಸುಗಂಪು ಗಾಳಿ; ಜೊತೆ ಬಯಸುವೆಣ್ಣುಗಳು/ ಮಸುಕು ಸಂಜೆಯ ನಲಿವು ಹಾಯಾದ ಹಗಲುಗಳು/ ಎಸೆದಾವು ಮಿಗೆ ಗೆಳತಿ ಹಿತ ವಸಂತದಲಿ”

ಹಳೆಗನ್ನಡದ ವಿಷಯಕ್ಕೆ ಬಂದರೆ ಮೊದಲು ನೆನಪಾಗುವವನು ಪಂಪ. ʻನೀನೇ ಭುವನಕ್ಕಾರಾಧ್ಯನೈ, ಭೃಂಗ ಕೋಕಿಳ ಕೀರ ಪ್ರಿಯ ಚೂತರಾಜ, ತರುಗಳ್ ನಿನ್ನಂತೆ ಚೆನ್ನಂಗಳೇʼ ಎಂದು ವಸಂತದಲ್ಲಿ ತೂಗುವ ಮಾವಿನ ಮರವನ್ನು ಕೊಂಡಾಡುತ್ತಾನೆ. ಅಭಿನವ ಪಂಪನೆಂದೇ ಹೆಸರಾಗಿದ್ದ ನಾಗಚಂದ್ರನ ರಾಮಚಂದ್ರಚರಿತ ಪುರಾಣದಲ್ಲಿನ ರಾಮ, ಕಳೆದು ಹೋದ ತನ್ನ ಸೀತೆಯನ್ನು ಹುಡುಕುತ್ತಾ, ʻತಳಿರೇ ತಾಮರೆಯೇ ಮೃಗಾಳಿ ಸಂಕುಲಮೇ ಮತ್ತ ಕೋಕಿಲಮೇ ಕಂಡಿರೇ ಪಲ್ಲವಾಧರೆಯʼ ಎಂದು ಸುತ್ತಲಿನ ಪ್ರಕೃತಿಯನ್ನು ಕೇಳುತ್ತಾ ಹೋಗುವ ವರ್ಣನೆಯಿದೆ. ಹಿಂದಿನವರು ನಿಸರ್ಗದೊಂದಿಗೆ ಇಷ್ಟೊಂದು ನಿಕಟವಾಗಿ ಬೆರೆತು ಬದುಕಿದ್ದರ ಹಿನ್ನೆಲೆಯಲ್ಲೇ, ಪ್ರಕೃತಿಗೆ ಹೊಸತನ ಬಂದ ಕಾಲದಲ್ಲಿ ಅವರಿಗೂ ಹೊಸತನ ಬಂದಂತೆನಿಸಿದ್ದರಲ್ಲಿ ಅಚ್ಚರಿಯಿಲ್ಲ. ಹರಿಹರ, ಕುಮಾರವ್ಯಾಸನಿಂದ ತೊಡಗಿ ಅವರಿಗಿಂತ ಇತ್ತೀಚಿನ ಜಯದೇವ ಕವಿಯ ಕಾವ್ಯಗಳೆಲ್ಲ ವಸಂತನಿಂದ, ಚೈತ್ರದಿಂದ ಸಿಂಗಾರಗೊಂಡಂಥವು.

ಇದನ್ನೂ ಓದಿ: ದಶಮುಖ ಅಂಕಣ: ಮೌನವೆಂಬ ಭಾವಸೇತು

ಹೊಸಗನ್ನಡ ಕವಿಗಳೂ ಹೊಸವರ್ಷದ ಹೊಸತನಕ್ಕೆ ಸೋತವರೇ. ರಸಋಷಿ ಕುವೆಂಪು ಅವರು, “ಗೀತೆಯ ಘೋಷದಿ ನವ ಅತಿಥಿಯ ಕರೆ/ ಹೃದಯ ದ್ವಾರವನಗಲಕೆ ತೆರೆ ತೆರೆ/ ನವಜೀವನ ರಸ ಬಾಳಿಗೆ ಬರಲಿ/ ನೂತನ ಸಾಹಸವೈತರಲಿ” ಎಂದು ತಮ್ಮ ʻಯುಗಾದಿʼ ಎನ್ನುವ ಕವನದಲ್ಲಿ ಆಶಿಸುತ್ತಾರೆ. ಕೆ.ಎಸ್. ನರಸಿಂಹಸ್ವಾಮಿಯವರ ಮಧುಮಾಸದ ಹೊಸತನ ಇದಕ್ಕಿಂತ ಭಿನ್ನವಲ್ಲ. “ಬಾನ್ನೀಲಿಯ ಕೊನೆಯಿಲ್ಲದ ನೀಲಾಂಬರದೊಳಗೆ/ ಬಂದಾಡುವ ಬಿಳಿಮುಗಿಲಿನ ತಣ್ಣೆಳಲಿನ ಕೆಳಗೆ/ ಮಾಂದಳಿರಿನ ತೋರಣವಿಹ ಮುಂಬಾಗಿಲ ಬಳಿಗೆ/ ಮಧುಮಾಸವೆ ಅಡಿ ಇಡುತಿದೆ ಹೊಸವರ್ಷದ ಬೆಳಗೆ” ಎಂದು ಸಂಭ್ರಮಿಸುತ್ತಾರೆ. ನಿಸಾರ್ ಅಹಮದ್ ಅವರ ʻವರ್ಷಾದಿʼ ಕವಿತೆಯಲ್ಲಿ, “ಹೊಸ ಬಟ್ಟೆಯ ತೊಟ್ಟ ಚೈತ್ರ/ ಜಲದರ್ಪಣ ಮಗ್ನ ನೇತ್ರ/ ಮುಗಿಲಿನ ಪಂಚಾಂಗ ತೆರೆಸಿ/ ಕುಳಿತಿಹ ಫಲ ತಿಳಿಯ ಬಯಸಿ” ಎಂದು ಚೈತ್ರಮಾಸದ ನವ್ಯತೆಯನ್ನು ಭವ್ಯತೆಯನ್ನು ವರ್ಣಿಸುತ್ತಾರೆ. ಜಿ.ಎಸ್.ಶಿವರುದ್ರಪ್ಪನವರ ʻಯುಗಾದಿಯ ಹಾಡʼನ್ನೂ ಕಾಡುವುದು ಚೈತ್ರ ಮಾಸಕ್ಕಿರುವ ಹೊಸ ಸ್ಪರ್ಶವೇ. “ಬಂದ ಚೈತ್ರದ ಹಾದಿ ತೆರೆದಿದೆ/ ಬಣ್ಣ-ಬೆಡಗಿನ ಮೋಡಿಗೆ/ ಹೊಸತು ವರ್ಷದ ಹೊಸತು ಹರ್ಷದ/ ಬೇವು ಬೆಲ್ಲದ ಬೀಡಿಗೆ” ಎಂದು ಹಾಡುತ್ತಾರೆ. ಇವರುಗಳು ಮಾತ್ರವಲ್ಲ, ವರಕವಿ ಬೇಂದ್ರೆ, ಪು.ತಿ.ನರಸಿಂಹಾಚಾರ್, ಗೋಪಾಲಕೃಷ್ಣ ಅಡಿಗರ ಆದಿಯಾಗಿ ನಮ್ಮೆಲ್ಲ ಮೇರು ಕವಿಗಳಿಗೆ ವಸಂತನಿಗೂ ಹೊಸತನಕ್ಕೂ ನಡುವೆ ಪ್ರವಹಿಸುವ ವಾಹಿನಿ ಕಾಡಿದೆ.

ಎಲೆಗಳು ಉದುರುವಾಗಲೂ, ಚಿಗುರುವಾಗಲೂ ಪ್ರಕೃತಿಯದ್ದು ಅದೇ ಹದ. ಈ ನಡುವಿನ ಅವಧಿಯಲ್ಲಿ ಏನು ನಡೆಯುತ್ತದೆಂಬ ಗುಟ್ಟನ್ನೆಂದೂ ಬಿಟ್ಟುಕೊಡದ ನಿಸರ್ಗ, ನಮಗೆ ತೋರಿಸಿ ಕೊಡುವುದು ಹೊಸತನವನ್ನು ಮಾತ್ರ. ಇದನ್ನೇ ಉಂಡು, ಉಟ್ಟು ನಡೆಯೋಣ. ಎಲ್ಲರ ಕಂಗಳಲ್ಲಿ ಪಲ್ಲವಿಸಿರುವ ಹೊಸ ಚಿಗುರು ಬೆಳೆಯಲಿ, ಹೂವಾಗಿ, ಕಾಯಾಗಿ, ಹಣ್ಣಾಗಲಿ. ಪ್ರಕೃತಿಯಂತೆಯೇ ತನ್ನ ನಿರಂತರತೆಯನ್ನು ಕಾಯ್ದುಕೊಳ್ಳಲಿ ಬದುಕು.

ಇದನ್ನೂ ಓದಿ: ದಶಮುಖ ಅಂಕಣ: ಉಪವಾಸದ ಹಿಂದೆ ಎಷ್ಟೊಂದು ನೆನಪುಗಳು!

Continue Reading

ಕರ್ನಾಟಕ

Ramadan 2024: ಉಪವಾಸಿಗರ ಸಮಾಗಮ ಈದುಲ್ ಫಿತ್ರ್

Ramadan 2024: ರಂಜಾನ್ ಒಂದು ತಿಂಗಳ ಕಾಲ ನಿರಂತರ ಕೆಡುಕುಗಳಿಂದ ದೂರ ಉಳಿದು, ಉಪವಾಸವಿದ್ದು; ಸಹರಿ, ಇಫ್ತಾರ್, ವಿಶೇಷ ನಮಾಜ್‌, ಪ್ರಾರ್ಥನೆ ಮತ್ತು ದಾನ ಧರ್ಮ ಮುಂತಾದ ಪುಣ್ಯ ಕಾರ್ಯಗಳನ್ನು ಪೂರೈಸಬೇಕಾಗುತ್ತದೆ. ಪವಿತ್ರ ರಂಜಾನ್ ತಿಂಗಳ ದಿನಗಳಲ್ಲಿ ಆರಾಧನೆಯಲ್ಲಿ ತಲ್ಲೀನರಾಗಿ ಧನ್ಯರಾಗುವ ಮೂಲಕ ಮುಸ್ಲಿಂ ಬಾಂಧವರು ದೇವರ ಪ್ರೀತಿಗೆ ಕರುಣೆಗೆ ಪಾತ್ರರಾಗುವ ಕ್ಷಣವಾಗಿದೆ.

VISTARANEWS.COM


on

Ramadan 2024
Koo

| ಹಾಶಿಂ ಬನ್ನೂರು
ಜಗತ್ತಿನ ಮುಸ್ಲಿಂ ಬಾಂಧವರು ಇಂದು ಸಡಗರದಿಂದ ಸಂಭ್ರಮಿಸುವ ಸಮಯ. ರಂಜಾನ್ (Ramadan 2024) ಒಂದು ತಿಂಗಳ ಕಾಲ ನಿರಂತರ ಕೆಡುಕುಗಳಿಂದ ದೂರ ಉಳಿದು ಉಪವಾಸವಿದ್ದು, ಸಹರಿ, ಇಫ್ತಾರ್, ವಿಶೇಷ ನಮಾಜ್, ಪ್ರಾರ್ಥನೆ ಮತ್ತು ದಾನ ಧರ್ಮ ಮುಂತಾದ ಪುಣ್ಯ ಕಾರ್ಯಗಳನ್ನು ಪೂರೈಸಿ ಪವಿತ್ರ ರಂಜಾನ್ ತಿಂಗಳ ದಿನಗಳಲ್ಲಿ ಆರಾಧನೆಯಲ್ಲಿ ತಲ್ಲೀನರಾಗಿ ಧನ್ಯರಾಗುವ ಮೂಲಕ ಮುಸ್ಲಿಂ ಬಾಂಧವರು ದೇವರ ಪ್ರೀತಿಗೆ ಕರುಣೆಗೆ ಪಾತ್ರರಾಗುವ ಕ್ಷಣ.

ಮುಸ್ಲಿಮರ ವಿಶೇಷ ಎರಡು ಈದ್ ಹಬ್ಬ ಈದುಲ್ ಫಿತ್ರ್ ಮತ್ತು ಈದುಲ್ ಅಝ್ಹಾ. ರಂಜಾನ್ ತಿಂಗಳು ಪೂರ್ಣಗೊಂಡು ಇಸ್ಲಾಮಿಕ್ ವರ್ಷದ 10ನೇ ತಿಂಗಳು ಶವ್ವಾಲ್ ತಿಂಗಳ ಮೊದಲನೇ ದಿನ ಆಚರಿಸುವ ಹಬ್ಬ ಈದುಲ್ ಫಿತ್ರ್. ಚಂದ್ರ ದರ್ಶನ ಮೂಲಕ ರಂಜಾನ್ ಉಪವಾಸ ಪ್ರಾರಂಭ ಮತ್ತು ಈದುಲ್ ಫಿತ್ರ್ ಹಬ್ಬದ ದಿನವನ್ನು ನಿಗದಿ ಪಡಿಸುತ್ತಾರೆ. ಈದುಲ್ ಫಿತ್ರ್ ಹಬ್ಬವನ್ನು ಚಿಕ್ಕ ಪೆರ್ನಾಳ್ ಎಂಬ ಹೆಸರಿನಿಂದಲೂ ಕೂಡ ಕರೆಯುತ್ತಾರೆ.

ಉಪವಾಸ ಮುಖ್ಯ

ಇಸ್ಲಾಮಿಕ್ ಪಂಚ ಸ್ತಂಭಗಳ ಪೈಕಿ ಆಚರಿಸುವ ಎರಡು ಕರ್ಮಗಳು ಒಂದು ರಂಜಾನ್ ತಿಂಗಳ ಉಪವಾಸ ಮತ್ತು ಎರಡು ದಾನ ನೀಡುವುದು. ಇವೆರಡೂ ಕರ್ಮಗಳ ಆಚರಣೆ ರಂಜಾನ್ ಮತ್ತು ಈದ್ ದಿನಗಳ ಒಂದು ಭಾಗವಾಗಿದೆ. ಈ ಎರಡೂ ಕರ್ಮಗಳನ್ನು ಪ್ರತಿಯೊಬ್ಬ ಮುಸಲ್ಮಾನನೂ ಕಡ್ಡಾಯವಾಗಿ ಪಾಲನೆ ಮಾಡಬೇಕು. ಆದ್ದರಿಂದ ರಂಜಾನ್ ತಿಂಗಳು ದಾನ ನೀಡುವುದು ಬಹಳ ಮಹತ್ವದ ಕಾರ್ಯವಾಗಿದೆ. ಹಣ ಮತ್ತು ಧಾನ್ಯ ಹಾಗೂ ಇನ್ನಿತರ ದೈನಂದಿನ ಬಳಕೆಗೆ ಅವಶ್ಯಕವಾದ ವಸ್ತುಗಳನ್ನು ಬಡವರಿಗೆ ದಾನವಾಗಿ ನೀಡುತ್ತಾರೆ. ಆಯಾ ಪ್ರದೇಶದ ಜನರ ಆಹಾರವನ್ನು ಗೋಧಿ, ಜೋಳ, ಅಕ್ಕಿ, ಬೇಳೆ ದಾನದ ರೂಪದಲ್ಲಿ ನೀಡಲಾಗುತ್ತದೆ.

ಇಸ್ಲಾಮಿನ ಪವಿತ್ರ ಗ್ರಂಥ ಕುರಾನ್ ಅವತರಣೆಗೊಂಡದ್ದು ರಂಜಾನ್ ತಿಂಗಳಿನಲ್ಲಾಗಿದೆ. ಕುರಾನ್ ಪರಿಪೂರ್ಣ ಪಠಣ ಮಾಡುವುದು ಈ ತಿಂಗಳ ವಿಶೇಷ. ರಂಜಾನ್ ಒಂದು ತಿಂಗಳು ನಿರಂತರವಾಗಿ ಉಪವಾಸ ಇರುವುದರಿಂದ ಆರೋಗ್ಯ ಮತ್ತು ಆಧ್ಯಾತ್ಮಿಕ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಇದು ಧಾರ್ಮಿಕ ಮತ್ತು ವೈಜ್ಞಾನಿಕವಾಗಿ ಸಾಬೀತಾಗಿದೆ.

ಇದನ್ನೂ ಓದಿ | Ugadi Ramzan Fashion: ರಂಜಾನ್-ಯುಗಾದಿ ಫೆಸ್ಟೀವ್‌ ಸೀಸನ್‌ನಲ್ಲಿ ಒಟ್ಟೊಟ್ಟಿಗೆ ಲಗ್ಗೆ ಇಟ್ಟ ಗ್ರ್ಯಾಂಡ್‌ ಎಥ್ನಿಕ್‌ವೇರ್ಸ್

ನಿರಂತರವಾಗಿ ಒಂದು ತಿಂಗಳ ಕಾಲ ಉಪವಾಸವಿದ್ದು, ಉಪವಾಸಿಗರ ಸಂತೋಷಕ್ಕಾಗಿ ಈದ್ ಹಬ್ಬವನ್ನು ಎಲ್ಲರೂ ಒಂದಾಗಿ ಒಗ್ಗಟ್ಟಾಗಿ ಆಚರಿಸುತ್ತಾರೆ. ಈದ್ ದಿನದಂದು ಎಲ್ಲಾ ಮುಸ್ಲಿಂ ಬಾಂಧವರು ಸೇರಿ ಈದ್ಗಾ ಅಥವಾ ಮಸೀದಿಗೆ ತಕ್ಬೀರ್ ಹೇಳುತ್ತಾ ಹಬ್ಬದ ಶುಭವನ್ನು ಕೋರುತ್ತಾ ತೆರಳಿ ಈದ್ ನಮಾಜ್ ನಿರ್ವಹಿಸುತ್ತಾರೆ, ಈದ್ ಸಂದೇಶ ಸಾರುವ ಪ್ರವಚನ, ಸರ್ವ ಸಹೋದರರಿಗಾಗಿ ಮತ್ತು ನಾಡಿನ ಶಾಂತಿ ಸಮಾಧಾನಕ್ಕಾಗಿ ವಿಶೇಷ ಪ್ರಾರ್ಥನೆ ಮಾಡುತ್ತಾರೆ, ಸುಗಂಧ ದ್ರವ್ಯಗಳು ಹೊಸ ಉಡುಪು ಧರಿಸುವುದು, ಮನೆಗಳಲ್ಲಿ ವಿಶೇಷ ಊಟ ಮತ್ತು ಸಿಹಿ ಪದಾರ್ಥಗಳನ್ನು ಮಾಡಿ ಎಲ್ಲರಿಗೂ ಹಂಚುತ್ತಾರೆ. ಎಲ್ಲರೂ ಪರಸ್ಪರ ಹಸ್ತ ಲಾಘವ, ಆಲಿಂಗನ ಮಾಡಿ ದ್ವೇಷವನ್ನು ಮರೆತು ಸ್ನೇಹವನ್ನು ಕೋರಿ ಪ್ರೀತಿಯಿಂದ ಒಂದಾಗುತ್ತಾರೆ. ಕುಟುಂಬಸ್ಥರ, ಸ್ನೇಹಿತರ ನೆರೆಹೊರೆಯವರ, ಮನೆಗೆ ಬೇಟಿ ನೀಡುತ್ತಾರೆ, ಪರಸ್ಪರ ಹಬ್ಬದ ಸಂದೇಶ ಸಂತೋಷಗಳನ್ನು ಹಂಚಿಕೊಳ್ಳುತ್ತಾರೆ.‌ ಶರೀರ ಮತ್ತು ಮನಸ್ಸು ಶುದ್ಧೀಕರಣವೇ ರಂಜಾನ್ ಮತ್ತು ಈದ್ ಆಚರಣೆಯ ಮುಖ್ಯ ಉದ್ದೇಶವಾಗಿದೆ.

Continue Reading

ಪ್ರಮುಖ ಸುದ್ದಿ

ರಾಜಮಾರ್ಗ ಅಂಕಣ: ಮೊಂಡು ಕೈಗಳಿಂದ ಜಗತ್ತನ್ನು ಗೆಲ್ಲಲು ಹೊರಟ ಹೋರಾಟಗಾರನ ಕಥೆ

ರಾಜಮಾರ್ಗ ಅಂಕಣ: ‘ಈಸಬೇಕು ಇದ್ದು ಜೈಸಬೇಕು’ ಎಂಬ ದಾಸವಾಣಿಯಂತೆ ನೀರಿಗೆ ಧುಮುಕಿದಾಗ ತನಗೆ ಕೈಗಳು ಇಲ್ಲ ಎಂಬುದನ್ನು ಮರೆಯುವ ಅವರು ಈಗಾಗಲೇ ಅಂತಾರಾಷ್ಟ್ರೀಯ ಪಾರಾ ಈಜು ಸ್ಪರ್ಧೆಯಲ್ಲಿ ಎಂಟು ಪದಕಗಳನ್ನು ಗೆದ್ದಿದ್ದಾರೆ. ಏಳು ಸಾಗರಗಳನ್ನು ಈಜಿ ಬಂದಿದ್ದಾರೆ ವಿಶ್ವಾಸ್.

VISTARANEWS.COM


on

vishwas ks rajamarga
Koo

ಪಾರಾ ಸ್ವಿಮ್ಮರ್ ವಿಶ್ವಾಸ್ ಕೆ.ಎಸ್ ಅವರ ಹೃದಯ ಗೆಲ್ಲುವ ಕಥನ

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಯು ಟ್ಯೂಬ್ (Youtube) ವೇದಿಕೆಗಳಲ್ಲಿ ಈ ವಿಶ್ವಾಸ್ ಕೆ.ಎಸ್ (Vishwas KS) ಅವರ ಟೆಡ್ ಟಾಕ್ (Ted Talk) ಕೇಳುತ್ತಾ ಹೋದಂತೆ ಕಣ್ಣು ತುಂಬಿ ಬಂದು ಗಲ್ಲ ಒದ್ದೆಯಾದ ಅನುಭವ ನನಗಾಗಿದೆ. ಅವರ ಬದುಕೇ ಒಂದು ರೋಚಕವಾದ ಯಶೋಗಾಥೆ.

ಈ ವಿಶ್ವಾಸ್ ಬಿಕಾಂ ಪದವೀಧರ. ಎರಡೂ ಕೈಗಳು ಇಲ್ಲದ ಅನೇಕ ವ್ಯಕ್ತಿಗಳು ಭಿಕ್ಷೆಯನ್ನು ಬೇಡಿ ಬದುಕುತ್ತಿರುವ ಇಂದಿನ ದಿನಗಳಲ್ಲಿ ಕೋಲಾರದ ಕಾಳಹಸ್ತಿಪುರದ ಯುವಕ ವಿಶ್ವಾಸ್ ತನ್ನ ಬದುಕನ್ನು ತಾನೇ ರೂಪಿಸಿಕೊಂಡಿದ್ದಾರೆ. ಅದಕ್ಕೆ ಅವರು ಆರಿಸಿಕೊಂಡ ಕ್ಷೇತ್ರ ಅಂದರೆ ಈಜು. ‘ಈಸಬೇಕು ಇದ್ದು ಜೈಸಬೇಕು’ ಎಂಬ ದಾಸವಾಣಿಯಂತೆ ನೀರಿಗೆ ಧುಮುಕಿದಾಗ ತನಗೆ ಕೈಗಳು ಇಲ್ಲ ಎಂಬುದನ್ನು ಮರೆಯುವ ಅವರು ಈಗಾಗಲೇ ಅಂತಾರಾಷ್ಟ್ರೀಯ ಪಾರಾ ಈಜು ಸ್ಪರ್ಧೆಯಲ್ಲಿ ಎಂಟು ಪದಕಗಳನ್ನು ಗೆದ್ದಿದ್ದಾರೆ. ಏಳು ಸಾಗರಗಳನ್ನು ಈಜಿ ಬಂದಿದ್ದಾರೆ.

ಅದೇ ರೀತಿ ಮಾರ್ಷಿಯಲ್ ಆರ್ಟಿನಲ್ಲಿ ರೆಡ್ ಬೆಲ್ಟ್ ಪಡೆದಿದ್ದಾರೆ. ‘ಡಾನ್ಸ್ ಕರ್ನಾಟಕ ಡಾನ್ಸ್’ ರಿಯಾಲಿಟಿ ಶೋʼದಲ್ಲಿ ನೃತ್ಯ ಮಾಡಿದ್ದಾರೆ. ಕಾಲಿನಲ್ಲಿಯೇ ಅಡುಗೆ ಮಾಡುತ್ತಾರೆ. ಕಾಲಿನ ಬೆರಳುಗಳ ನಡುವೆ ಪೆನ್ನು ಹಿಡಿದು ಬರೆಯುತ್ತಾರೆ. ಮೊಬೈಲ್ ಆಪರೇಟ್ ಮಾಡುತ್ತಾರೆ. ಬಟ್ಟೆ ಒಗೆಯುತ್ತಾರೆ. ತನ್ನ ಕೆಲಸವನ್ನು ತಾನೇ ಮಾಡುತ್ತಾರೆ. ವೇದಿಕೆಯಲ್ಲಿ ನಿಂತು ಮೋಟಿವೇಶನ್ ಮಾತು ಆಡುತ್ತಾರೆ. ಅವರಿಗೆ ತನಗೆ ಕೈಗಳು ಇಲ್ಲ ಅನ್ನುವುದು ಮರೆತೇ ಹೋಗಿದೆ ಎಂದು ನನ್ನ ಭಾವನೆ.

ಸಣ್ಣ ಪ್ರಾಯದಲ್ಲಿ ದುರಂತ

ನಾಲ್ಕನೇ ತರಗತಿಯಲ್ಲಿ ಆದ ದುರಂತ ಅದು. ವಿಶ್ವಾಸ್ ನಾಲ್ಕನೇ ತರಗತಿಯಲ್ಲಿ ಇರುವಾಗ ಕಾಂಕ್ರೀಟ್ ಆಗ್ತಾ ಇದ್ದ ಒಂದು ಕಟ್ಟಡವನ್ನು ಹತ್ತುತ್ತಿದ್ದಾಗ ಕಾಲು ಜಾರಿ ಬೀಳುತ್ತಾರೆ. ಆಗ ಹೈ ಟೆನ್ಶನ್ ಕೇಬಲ್ ಹಿಡಿದು ನೇತಾಡುವ ಪ್ರಸಂಗ ಬರುತ್ತದೆ. ಆಗ ಅವರನ್ನು ಬಿಡಿಸುವ ಪ್ರಯತ್ನ ಮಾಡಿದ ಅವರ ಅಪ್ಪ ವಿದ್ಯುತ್ ಆಘಾತಕ್ಕೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಾರೆ. ಈ ಹುಡುಗನು ಎರಡೂ ಕೈ ಸುಟ್ಟು ಹೋಗಿ ಈ ಸ್ಥಿತಿಗೆ ಬರುತ್ತಾರೆ.

ಆಸ್ಪತ್ರೆಯಲ್ಲಿ ಹಲವಾರು ತಿಂಗಳು ನೋವು ಪಟ್ಟು ಮಲಗಿ ಹೊರಬರುವಾಗ ಆತನ ಕೈಗೆ ಪ್ಲಾಸ್ಟಿಕ್ ಕೈ ಜೋಡಿಸಿರುತ್ತಾರೆ. ಅದು ಕೈಗಳ ಫೀಲ್ ಕೊಡದೆ ಹೋದಾಗ ಮತ್ತು ಯಾವ ಕೆಲಸಕ್ಕೂ ಬೇರೆಯವರನ್ನು ಅವಲಂಬನೆ ಮಾಡುವ ಪ್ರಸಂಗ ಬಂದಾಗ ಅದನ್ನು ಕಿತ್ತು ಬಿಸಾಡಿ ಮೊಂಡು ಕೈ ಹಿಡಿದೇ ಇಲ್ಲಿಯವರೆಗೆ ಬಂದಿದ್ದಾರೆ.

ಹಲವು ಕಡೆಯಲ್ಲಿ ಉದ್ಯೋಗ ಪ್ರಯತ್ನ ಪಟ್ಟು ಸೋತಾಗ ಡಿಪ್ರೆಸ್ ಆದದ್ದೂ ಇದೆ. ಹೊಟ್ಟೆಪಾಡಿಗಾಗಿ ಹಲವು ವೃತ್ತಿಗಳನ್ನು ಮಾಡಲು ಪ್ರಯತ್ನ ಪಟ್ಟು ಸೋತದ್ದು ಇದೆ. ಆದರೆ ಅವರ ಅದ್ಭುತವಾದ ಇಚ್ಛಾಶಕ್ತಿ ಅವರನ್ನು ಇಲ್ಲಿಯವರೆಗೆ ಕರೆದುಕೊಂಡು ಬಂದಿದೆ. ಈ ಹೋರಾಟದ ಪ್ರತೀ ಹಂತದಲ್ಲೂ ಅವರ ಅಮ್ಮ ಅವರ ಜೊತೆಗೆ ನಿಂತಿದ್ದಾರೆ. ಇತ್ತೀಚೆಗೆ ಒಬ್ಬರು ಶಿಕ್ಷಕಿ, ಲಕ್ಷ್ಮಿ ಎಂದು ಅವರ ಹೆಸರು, ಅವರನ್ನು ಪ್ರೀತಿಸಿ ಮದುವೆ ಆಗಿದ್ದಾರೆ. ಆ ದಂಪತಿಗೆ ಒಬ್ಬ ಮಗನೂ ಇದ್ದಾನೆ. ಪತ್ನಿ ಲಕ್ಷ್ಮಿ ಈಗ ವಿಶ್ವಾಸ್ ಅವರ ಸಾಧನೆಗಳಿಗೆ ಸ್ಫೂರ್ತಿಯಾಗಿ ನಿಂತಿದ್ದಾರೆ.

ಬದುಕಿನ ಕಥೆ ಸಿನೆಮಾ ಆಯಿತು.

ವಿಶ್ವಾಸ್ ಅವರ ಬದುಕಿನ ಕಥೆಯು ʻಅರಬ್ಬೀ’ ಎಂಬ ಸಿನೆಮಾ ಆಗಿ ಜನಪ್ರಿಯ ಆಗಿದೆ. ಮುಂದಿನ ಪಾರಾ ಒಲಿಂಪಿಕ್ಸನಲ್ಲಿ ಭಾಗವಹಿಸಬೇಕು ಎನ್ನುವ ಹಠದಲ್ಲಿ ವಿಶ್ವಾಸ್ ಬೆಂಗಳೂರಿನ ಬಸವನಗುಡಿಯ ಈಜುಕೊಳದಲ್ಲಿ ದಿನಕ್ಕೆ ಹಲವಾರು ಗಂಟೆ ಕಠಿಣ ಅಭ್ಯಾಸ ಮಾಡುತ್ತಿದ್ದಾರೆ. ಒಬ್ಬ ಒಳ್ಳೆಯ ಕೋಚ್ ಅವರ ನೆರವಿಗೆ ನಿಂತಿದ್ದಾರೆ.

ವಿಶ್ವಾಸದ ಕಡಲಲ್ಲಿ ಈಜುತ್ತಿರುವ ಈ ವಿಶ್ವಾಸ್ ಅವರಿಗೆ ನಿಮ್ಮ ಒಂದು ಶಾಭಾಷ್ ಹೇಳಿ ಮುಂದೆ ಹೋಗೋಣ ಅಲ್ಲವೇ?

ಇದನ್ನೂ ಓದಿ: ರಾಜಮಾರ್ಗ ಅಂಕಣ: ಭಾರತೀಯ ಸೇನೆಯ ಬಗ್ಗೆ ಎದೆ ಉಬ್ಬಿಸಿ ನಡೆಯಲು ಇನ್ನೊಂದು ಕಾರಣ

Continue Reading
Advertisement
Siddaramaiah
ಕರ್ನಾಟಕ2 mins ago

Siddaramaiah: ಯಾವ ಮುಖ ಇಟ್ಕೊಂಡು ಮೋದಿ ಮತ ಕೇಳ್ತಾರೆ? ಸಿದ್ದರಾಮಯ್ಯ ವಾಗ್ದಾಳಿ

Health Drink
ದೇಶ8 mins ago

Health Drink: ಬೋರ್ನ್‌ವೀಟಾವನ್ನು ‘ಆರೋಗ್ಯ ಪಾನೀಯ’ ವಿಭಾಗದಿಂದ ತೆಗೆದು ಹಾಕಿ; ಕೇಂದ್ರದ ಆದೇಶ

CSK vs MI
ಕ್ರಿಕೆಟ್23 mins ago

CSK vs MI: ಬದ್ಧ ವೈರಿಗಳಾದ ಮುಂಬೈ-ಚೆನ್ನೈ ಕಾದಾಟಕ್ಕೆ ವೇದಿಕೆ ಸಿದ್ಧ; ಯಾರಿಗೆ ಗೆಲುವಿನ ಲಕ್​?

IPL 2024 BMTC And Namma Metro
ಬೆಂಗಳೂರು32 mins ago

IPL 2024: ಐಪಿಎಲ್‌ ಪಂದ್ಯಕ್ಕೆ ಬೆಂಗಳೂರಿನಲ್ಲಿ ಬಿಎಂಟಿಸಿ ವಿಶೇಷ ಕಾರ್ಯಾಚರಣೆ; ಮೆಟ್ರೋ ರೈಲು ಓಡಾಟ ವಿಸ್ತರಣೆ

Kannada New Movie Puksatte Paisa set on theator
ಸಿನಿಮಾ43 mins ago

Kannada New Movie: ಕಾಸಿನ ಹಿಂದೆ ಬಿದ್ದವರ ಕನಸಿನ ಕಥೆ `ಪುಕ್ಸಟ್ಟೆ ಪೈಸ’ ಥಿಯೇಟರಿನತ್ತ

Terror Attack
ವಿದೇಶ1 hour ago

Terror Attack: ಪಾಕಿಸ್ತಾನದಲ್ಲಿ ಉಗ್ರರ ಅಟ್ಟಹಾಸ; 11 ಜನರನ್ನು ಅಪಹರಿಸಿ ಬರ್ಬರ ಹತ್ಯೆ

Urvashi Rautela
ಕ್ರೀಡೆ1 hour ago

Urvashi Rautela: ಕ್ರಿಕೆಟಿಗರಾದ ಪಂತ್​,ನಸೀಮ್​ಗೆ ಕೈಕೊಟ್ಟು ಖ್ಯಾತ ಫುಟ್ಬಾಲರ್​ ಜತೆ ಡೇಟಿಂಗ್ ಆರಂಭಿಸಿದ ಊರ್ವಶಿ ರೌಟೇಲಾ​

murder-case
ಕ್ರೈಂ2 hours ago

Murder Case: ಹೆಂಡತಿಯ ಕೊಂದ ಗಂಡನ ಸುಳಿವಿಗೆ 3 ಕೋಟಿ ರೂ. ಬಹುಮಾನ!

Gold price
ಚಿನ್ನದ ದರ2 hours ago

Gold Price Explainer: ಚಿನ್ನದ ದರ ಇಷ್ಟೊಂದು ಏರಲು ಏನು ಕಾರಣ? ಬಂಗಾರದ ಮೇಲೆ ಹೂಡಿಕೆಗಿದು ಸಕಾಲವೇ?

Lok Sabha Election 2024
ಬೆಂಗಳೂರು2 hours ago

Lok Sabha Election 2024 : ಮಾವಿನ ಹಣ್ಣಿನ ಬ್ಯಾಗ್‌ ಬಿಡ್ರೀ ಎಂದವರ ಬಳಿ ಗರಿ ಗರಿ ನೋಟು; ಜಯನಗರದಲ್ಲಿ 4 ಕೋಟಿ ರೂ. ಸೀಜ್‌

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ11 hours ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ1 day ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ1 day ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ2 days ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

Lok Sabha Election 2024 Rahul Gandhi should apologise for lying demand BS Yediyurappa
Lok Sabha Election 20242 days ago

Lok Sabha Election 2024: ಸುಳ್ಳು ಹೇಳಿದ ರಾಹುಲ್‌ ಗಾಂಧಿ ಕ್ಷಮೆ ಕೋರಲಿ: ಬಿ.ಎಸ್.‌ ಯಡಿಯೂರಪ್ಪ ಆಗ್ರಹ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಹೂಡಿಕೆ ವ್ಯವಹಾರದಲ್ಲಿ ಅಧಿಕ ಲಾಭ

Ugadi 2024
ಬಾಗಲಕೋಟೆ4 days ago

Ugadi 2024 : ಬೀಳಗಿಯ ಎಕ್ಕೆ ಎಲೆ ಭವಿಷ್ಯ; ಈಶಾನ್ಯ, ಪಶ್ಚಿಮ ಭಾಗದಲ್ಲಿ ಭಾರಿ ಕಂಟಕ!

ugadi 2024
ಧಾರವಾಡ4 days ago

Ugadi 2024 : ಹನುಮನಕೊಪ್ಪದಲ್ಲಿ ಭವಿಷ್ಯ ನುಡಿದ ಬೊಂಬೆ! ಮುಂದಿನ ಪ್ರಧಾನಿ ಯಾರಾಗ್ತಾರೆ?

Dina Bhavishya
ಭವಿಷ್ಯ4 days ago

Dina Bhavishya : ನೂತನ ಸಂವತ್ಸರದಲ್ಲಿ ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಶುಭ ಸುದ್ದಿ

Dina Bhavishya
ಭವಿಷ್ಯ5 days ago

Dina Bhavishya : ಅತಿರೇಕದ ಮಾತು ಈ ರಾಶಿಯವರಿಗೆ ಒಳ್ಳೆಯದಲ್ಲ

ಟ್ರೆಂಡಿಂಗ್‌