ಕರ್ನಾಟಕ ಶಾಸನ ಸಭೆಯ ಮುಂಗಾರು ಅಧಿವೇಶನ ಮುಕ್ತಾಯಗೊಂಡಿದೆ. ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ನಡೆಯುವ ನಿರೀಕ್ಷೆಯಲ್ಲಿ ಉಭಯ ಸದನ ಕಲಾಪವನ್ನು ಮುಂದಕ್ಕೆ ಹಾಕಲಾಗಿದೆ. ಆಡಳಿತಾರೂಢ ಪಕ್ಷಕ್ಕೆ ಅನುಕೂಲವಾಗುವಂತೆ ವಿರೋಧ ಪಕ್ಷಗಳು ವರ್ತಿಸುತ್ತವೆಂಬ ಸಾರ್ವಜನಿಕರ ಮಾತು ನಿಜವೂ ಇರಬಹುದೇನೋ ಎಂಬಂತೆ ಮುಕ್ತಾಯಗೊಂಡ ಅಧಿವೇಶನದ ಕಲಾಪವೂ ಕೂಗು ಗದ್ದಲ ಗಲಾಟೆ ಕೋಲಾಹಲದಲ್ಲಿ ಅಂತ್ಯವಾಯಿತು. ಕೊನೆಯ ಎರಡು ದಿವಸ ವಿಧಾನ ಪರಿಷತ್‌ನಲ್ಲಿ ವಿರೋಧ ಪಕ್ಷಗಳ ವರ್ತನೆ ಜನರ ಅಭಿಪ್ರಾಯವನ್ನು ಪುಷ್ಟೀಕರಿಸುವ ರೀತಿಯಲ್ಲೇ ಇತ್ತು.
ಪ್ರಸ್ತುತದ ಬಿಜೆಪಿ ಸರ್ಕಾರ ಹತ್ತು ಹಲವು ಬಗೆಯ ಆರೋಪವನ್ನು ಹೊತ್ತು ಬೆತ್ತಲಾಗುವ ರೀತಿಯಲ್ಲಿ ನಿಂತಿರುವುದು ವಿರೋಧ ಪಕ್ಷಗಳ ಪಾಲಿಗೆ ಅನಾಯಾಸವಾಗಿ ಕೈಗೆ ಬಿದ್ದ ವರ. ಯಾವುದೇ ರೀತಿಯ ತಪಸ್ಸು, ಪೂಜೆ, ವ್ರತ ಕೈಂಕರ್ಯವಿಲ್ಲದೆ ಬಂದೊದಗಿರುವ ವರ. ಮುಖ್ಯ ವಿರೋಧ ಪಕ್ಷ ಕಾಂಗ್ರೆಸ್ಸು ವಿಧಾನ ಪರಿಷತ್‌ನಲ್ಲಿ ಎತ್ತಿಕೊಂಡ “ಹಗರಣ” ಶೇಕಡಾ ೪೦ ಲಂಚದ ಆರೋಪದ್ದು. ಇಂಥ ಆರೋಪ ಸರ್ಕಾರದ ವಿರುದ್ಧ ಕೇಳಿಬಂದಾಗ ವಿರೋಧ ಪಕ್ಷಗಳಿಗೆ ಕಿವುಡು ಸಂಯಮ ಸಲ್ಲದು. ಆ ದೃಷ್ಟಿಯಿಂದ ಅದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು ಉಚಿತವೇ ಸರಿ. ಆದರೆ ಭ್ರಷ್ಟಾಚಾರದ ವಿರುದ್ಧ ಆಕ್ರೋಶವನ್ನು ಹೊರಕ್ಕೆ ಹಾಕುವಾಗ ಅದು ನಡೆದುಕೊಂಡ ಸಂಯಮಹೀನ ರೀತಿ ಮಾತ್ರ ಸದನದ ಘನತೆಗೆ ಉಚಿತವಲ್ಲದ ನಡವಳಿಕೆ ಎಂದು ಹೇಳಲೇಬೇಕಾಗಿದೆ.
ಪ್ರಕಾಶ್ ರಾಠೋಡರು ಕಾಂಗ್ರೆಸ್‌ನ ಸದಸ್ಯರಲ್ಲಿ ಒಬ್ಬರಷ್ಟೇ ಅಲ್ಲ ವಿರೋಧ ಪಕ್ಷದ ಸಚೇತಕರೂ ಹೌದು. ಸದನದಲ್ಲಿ ಪಕ್ಷದ ಶಾಸಕರು ಹೇಗೆ ಇರಬೇಕು ಎನ್ನುವುದರ “ಮಾನಿಟರಿಂಗ್” ಮಾಡುವ ಕೆಲಸ ಸಚೇತಕರದು. ಆದರೆ ಅದನ್ನೆಲ್ಲ ಮರೆತವರಂತೆ ಸ್ವತಃ ತಾವೇ ತಮಗೆ ನಿಗದಿಪಡಿಸಿದ ಕುರ್ಚಿ ಮೇಲೇರಿ ನಿಂತು ಸರ್ಕಾರದ ವಿರುದ್ಧ ಸಿಟ್ಟು ಸೆಡವು ಕೋಪ ತಾಪ ಅಸಮಾಧಾನಗಳನ್ನು ಉಕ್ಕಿ ಹರಿಸಿದರು. ಇದು ಆಡಳಿತ ಮತ್ತು ವಿರೋಧ ಪಕ್ಷದ ನಡುವೆ ವಾಕ್ಸಮರಕ್ಕೆ ಎಡೆಯಾಯಿತು. ಸದನ ಕಲಾಪ ದಾರಿ ತಪ್ಪುತ್ತಿದೆ ಎಂಬ ಭಾವನೆಯನ್ನು ಸ್ಪಷ್ಟವಾಗಿ ಹೇಳಿದ ಜೆಡಿಎಸ್‌ನ ಮರಿತಿಬ್ಬೇಗೌಡರು ತಾವೇನು ಕಡಿಮೆ ಎನ್ನುವವರಂತೆ ಕುರ್ಚಿ ಮೇಲೇರಿ ಸದನ ಸರಿಯಾಗಿ ನಡೆಯುತ್ತಿಲ್ಲ ಎಂದು ದೂರಿದರು. ಹಲವು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ಬೆಂಗಳೂರಿನ ಬಿಎಂಎಸ್ ಟ್ರಸ್ಟ್‌ನಲ್ಲಿ ನಡೆದಿದೆ ಎನ್ನಲಾಗಿರುವ ಅವ್ಯವಹಾರವನ್ನು ಬಯಲಿಗೆ ಎಳೆಯುವ ಉದ್ದೇಶ ಜೆಡಿಎಸ್‌ನದಾಗಿತ್ತು. ವಿಧಾನ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಈ ಕುರಿತು ವಿಸ್ತೃತ ವಾದ ಮಂಡಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಕ್ಕಿಸುವಲ್ಲಿ ಗಣನೀಯ ಯಶ ಕಂಡರು. ಆದರೆ ವಿಧಾನ ಪರಿಷತ್‌ನಲ್ಲಿ ಚರ್ಚೆಗೆ ಸಮಯಾವಕಾಶವೇ ದೊರೆಯಲಿಲ್ಲ ಎಂಬ ಸಿಟ್ಟು ಮರಿತಿಬ್ಬೇಗೌಡರನ್ನು ಕುರ್ಚಿಯನ್ನೇರಿ ನಿಂತು ಪ್ರತಿಭಟಿಸುವಂತೆ ಮಾಡಿತು.
ಯಾವುದೇ ಪಕ್ಷದ ಸರ್ಕಾರವಾಗಿರಲಿ, ಅದು ಸದನದಲ್ಲಿ ಭುಗಿಲೇಳುವ ಗದ್ದಲ ಕೋಲಾಹಲವನ್ನು ಒಳಗೊಳಗೇ ಆನಂದಿಸುತ್ತಿರುತ್ತದೆ. ತನ್ನ ಅಜೆಂಡಾವನ್ನು ಗಂಭೀರ ವಿರೋಧ ಇಲ್ಲದೆಯೇ ಆಗುಮಾಡಿಕೊಳ್ಳುವ ಹುನ್ನಾರದ ಭಾಗ ಆ ಒಳಾನಂದ. ಗಲಾಟೆ ಕೋಲಾಹಲದ ಅಂತ್ಯ ಹೆಚ್ಚಿನ ಸಮಯದಲ್ಲಿ ಸಭಾತ್ಯಾಗದೊಂದಿಗೆ ಮುಗಿಯುತ್ತದೆ. ವಿರೋಧ ಪಕ್ಷಗಳು ಸಭಾತ್ಯಾಗ ಮಾಡುವುದನ್ನೇ ಕಾಯುತ್ತಿರುವ ಆಡಳಿತ ಪಕ್ಷ ತನಗೆ ಬೇಕಾದ ಮಸೂದೆಗಳನ್ನು ಚರ್ಚೆಯೇ ಇಲ್ಲದೆ ಏಕಪಕ್ಷೀಯವಾಗಿ ಅಂಗೀಕಾರ ಮಾಡಿಸಿಕೊಳ್ಳುತ್ತದೆ. ಸ್ವಾತಂತ್ರ್ಯಾನಂತರದ ಭಾರತದಲ್ಲಿ ಕೇಂದ್ರ ಮತ್ತು ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದ ಎಲ್ಲ ಪಕ್ಷ/ಒಕ್ಕೂಟ ಮಾಡಿದ್ದು ಇದನ್ನೇ. ಕರ್ನಾಟಕದಲ್ಲೀಗ ಬೊಮ್ಮಾಯಿ ಸರ್ಕಾರ ಮಾಡುತ್ತಿರುವುದೂ ಇದನ್ನೇ.
ಸದನ ನಡೆಯುವಾಗ ಜನರ ಸಮಸ್ಯೆಗಳನ್ನು ಸರ್ಕಾರದ ಮುಂದೆ ತಂದು ತಕ್ಕ ಪರಿಹಾರ ಪಡೆಯುವ ಆಸೆಯಲ್ಲಿ ಬಂದ ಕೆಲವು ಶಾಸಕರಾದರೂ ಗದ್ದಲ ಕೋಲಾಹಲದಲ್ಲಿ ತಮ್ಮ ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ ಎಂಬ ಹಳಹಳಿಕೆಯಲ್ಲಿರುತ್ತಾರೆ. “ಶಾಸಕಾಂಗ ಪಕ್ಷದ ನಾಯಕರು ತೆಗೆದುಕೊಳ್ಳುವ” ತೀರ್ಮಾನಕ್ಕೆ ಅಂಥವರೂ ಬದ್ಧವಾಗಿರಬೇಕಾಗಿರುವುದು ವ್ಯವಸ್ಥೆಯ ದೌರ್ಬಲ್ಯ. ಹಾಗಾಗಿ ಅವರ ಗೋಳು ಧ್ವನಿರೂಪ ಪಡೆಯದೆ ಗಂಟಲಲ್ಲೇ ಕರಗಿಹೋಗುತ್ತದೆ.
ಕುರ್ಚಿ ಮೇಲೇರಿ ನಿಂತೋ, ಸಭಾಧ್ಯಕ್ಷ/ ಸಭಾಪತಿ ಪೀಠದ ಮುಂದೆ ಜಮಾಯಿಸಿ ಸರ್ಕಾರಕ್ಕೆ ಧಿಕ್ಕಾರ ಹಾಕಿ ಆಕ್ರೋಶ ವ್ಯಕ್ತಪಡಿಸುವುದಕ್ಕೆ ಸದನ ನಿಯಮಾವಳಿಯಲ್ಲಿ ಯಾವುದೇ ಪ್ರತಿರೋಧವೂ ಇಲ್ಲ ಎಂದೇ ಹೇಳಬೇಕು. ಅಂಥ ಯಾವುದೇ ನಿರ್ಬಂಧವಿದ್ದ ಪಕ್ಷದಲ್ಲಿ ಕಲಾಪ ನಿಯಮ ಉಲ್ಲಂಘಿಸುವ ಶಾಸಕರನ್ನು ದಂಡಿಸಲು ಸದನಗಳ ಅಧ್ಯಕ್ಷ/ ಸಭಾಪತಿಗೆ ಸಾಕಷ್ಟು ಅಧಿಕಾರವಿರುತ್ತದೆ. ಸದಸ್ಯರಿಂದ “ಅನುಚಿತ” ರೀತಿಯ ಕೋಲಾಹಲಕಾರಿ ಪ್ರತಿಭಟನೆ ಅದರ ಪಾಡಿಗೆ ನಡೆಯುತ್ತಿರುವಾಗ ಸದನ ಕಲಾಪ ತನ್ನ ಪಾಡಿಗೆ ತಾನು ನಡೆಯುವುದು ಸತ್ಯ ಆದರೂ ವಿಚಿತ್ರ ಎಂಬಂಥ ಬೆಳವಣಿಗೆ.
ವರ್ಷದಲ್ಲಿ ಸದನ ಕಲಾಪ ಅಬ್ಬಬ್ಬಾ ಎಂದರೆ ಎರಡು ತಿಂಗಳೂ ನಡೆಯದ ಸ್ಥಿತಿಗೆ ಕರ್ನಾಟಕ ಶಾಸನ ಸಭೆ ಬಂದಿದೆ. ವರ್ಷದಿಂದ ವರ್ಷಕ್ಕೆ ಕಲಾಪದ ಅವಧಿ ಕುಗ್ಗುತ್ತಿರುವುದಕ್ಕೆ ವಿರೋಧ ಪಕ್ಷಗಳು ಅಸಮಾಧಾನ ವ್ಯಕ್ತಪಡಿಸುವುದು; ವಿರೋಧ ಪಕ್ಷವೇ ಆಡಳಿತ ಪಕ್ಷವಾದಾಗ ತಾನು ಟೀಕಿಸಿದ್ದನ್ನು ಮರೆತು ಒಂದು ದಿವಸ ಹೆಚ್ಚೂ ಇಲ್ಲದ ಕಡಿಮೆಯೂ ಆಗದ ಯಥಾಸ್ಥಿತಿಯಲ್ಲಿ ಸದನ ಕಲಾಪಕ್ಕೆ ಬೇಲಿ ಹಾಕಿ ನಡೆಸುವುದು ಮಾಮೂಲು. ಅಂಥ ಸಂದರ್ಭಗಳಲ್ಲಿ ವಿರೋಧಿ ಸಾಲಿನಿಂದ ಟೀಕೆ ಮಾರ್ದನಿಸುತ್ತದೆ. ಆಡಳಿತ ಪಕ್ಷದ ಸಾಲಿನಿಂದ ನಿರ್ಲಕ್ಷ್ಯ ಮೊಳಗುತ್ತದೆ. ಇದು ಯಾವುದೇ ಒಂದು ರಾಜ್ಯ, ಒಂದು ಪಕ್ಷಕ್ಕೆ ಸೀಮಿತವಲ್ಲದ ದೇಶವ್ಯಾಪಿ ಎನ್ನಬಹುದಾದ ವಿದ್ಯಮಾನ. ಇಂಥ ಅಪಸವ್ಯಗಳಿಗೆ ಏನು ಮಾಡಬಹುದು ಎಂಬ ವಿಚಾರವಾಗಿ ದೇಶದ ಎಲ್ಲ ರಾಜ್ಯ ವಿಧಾನ ಸಭಾಧ್ಯಕ್ಷರ ಸಮಾವೇಶದಲ್ಲಿ ಆಗಾಗ ಚರ್ಚೆ ಆಗುತ್ತಿರುತ್ತದೆ. ಒಂದಿಷ್ಟು ಠರಾವು ಅಂಗೀಕಾರವಾಗುವುದರೊಂದಿಗೆ ಅದು ದಾಖಲೆಯೊಳಗೆ ಮುದುರಿ ಬೆಚ್ಚಗೆ ಕೂರುತ್ತದೆ.
ಇದನ್ನೂ ಓದಿ | ಮೊಗಸಾಲೆ ಅಂಕಣ | ಬಸವರಾಜ ಹೊರಟ್ಟಿಯವರ ಮುಂದಿನ ನಡೆ?
ಅಸಲಿಗೆ ಪ್ರತಿಭಟನೆ ಜನತಂತ್ರದ ಅವಿಭಾಜ್ಯ ಅಂಗ. ಅದನ್ನು ಹತ್ತಿಕ್ಕುವುದು ಇಲ್ಲವೇ ತಡೆಯುವುದು ಶಾಸಕರ ಸ್ವಾತಂತ್ರ್ಯವನ್ನು ಮೊಟಕುಗೊಳಿಸಿದಂತೆ ಎಂಬ ವ್ಯಾಖ್ಯಾನವೂ ಇದೆ. ಪ್ರತಿಭಟನೆ ತಡೆಯುವ ಕ್ರಮ ಶಾಸಕರ ಕರ್ತವ್ಯ ಚ್ಯುತಿ ಆಗಬಹುದೇ, ಗೊತ್ತಿಲ್ಲ. ಅಧ್ಯಕ್ಷ/ ಸಭಾಪತಿ ಇಂಥ ಪ್ರತಿಭಟನೆಗಳ ಸಂಬಂಧ ಉಗ್ರ ಕ್ರಮಕ್ಕೆ ಮುಂದಾಗಿದ್ದಾಗಲೀ ಸದನ ಮುಖ್ಯಸ್ಥರ ಕ್ರಮದ ಕಾರಣವಾಗಿ ಶಾಸಕರಾಗಿ ಕರ್ತವ್ಯ ನಿರ್ವಹಿಸುವ ತಮ್ಮ ಹಕ್ಕಿಗೆ ಚ್ಯುತಿ ಬಂದಿದೆ ಎಂದು ಶಾಸಕರು ಅಲವತ್ತುಕೊಂಡಿದ್ದಾಗಲೀ ಇಲ್ಲವೇ ಇಲ್ಲ ಎಂಬಷ್ಟು ಅಪರೂಪ. ಹಾಗಾಗಿ ಪ್ರತಿಭಟನೆ ಅತ್ತ, ಕಲಾಪ ಇತ್ತ ನಡೆಯುತ್ತಿರುತ್ತದೆ. ಈ ಬಗೆಯ ಗದ್ದಲ ಗಲಾಟೆಯೇ ಪ್ರಧಾನವಾದ ಪ್ರತಿಭಟನೆಗಳಿಗೆ ಹರಕೆಯ ಕುರಿ ಆಗುವುದು ಸಾರ್ವಜನಿಕ ಹಿತಾಸಕ್ತಿ. ಹಿಂದೆ ಇಂಥದು ನಡೆದಿಲ್ಲ ಎಂದಾಗಲೀ ಈಗ ನಡೆಯುತ್ತಿರುವುದು ಸರಿಯಲ್ಲವೇ ಅಲ್ಲ ಎನ್ನುವುದಾಗಲೀ ವಾದವಲ್ಲ. ಸಾರ್ವಜನಿಕ ಹಿತವೇ ಪ್ರಧಾನವಾಗಿದ್ದರೆ ಅದನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯುವ ಇತರ ಸಾಂವೈಧಾನಿಕ ಮಾರ್ಗಗಳ ಹುಡುಕಾಟ ನಡೆಯುತ್ತಿಲ್ಲವೇಕೆ ಎನ್ನುವುದು ಪ್ರಶ್ನೆ.
ಶಾಂತವೇರಿ ಗೋಪಾಲಗೌಡರು ಮೊದಲಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದು ೧೯೫೨ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ. ಅವರು ಗೆದ್ದುದು ಸಾಗರ ಮತಕ್ಷೇತ್ರದಿಂದ. ಈ ದಿನಕ್ಕೂ ಸಾಗರ, ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರದ ಪ್ರಜ್ಞಾವಂತರ ಪಾಲಿಗೆ ಗೌಡರದು ಪ್ರಾತಃಸ್ಮರಣೀಯ ಹೆಸರು. ಮೈಸೂರು ಪ್ರಾಂತ್ಯ ಗಣರಾಜ್ಯದ ಭಾಗವಾಗಿತ್ತು. ಮೈಸೂರಿನ ಕೊನೆಯ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರನ್ನು ಮೈಸೂರು ರಾಜ್ಯದ ರಾಜಪ್ರಮುಖರನ್ನಾಗಿ ಕೇಂದ್ರ ಸರ್ಕಾರ ನೇಮಿಸಿತ್ತು. ಒಡೆಯರ್ ತರುವಾಯದಲ್ಲಿ ಆ ಹುದ್ದೆ ರಾಜ್ಯಪಾಲ ಎಂದಾಯಿತು. ಶಾಸನ ಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಸಿ ಭಾಷಣ ಮಾಡುವುದು ರಾಜಪ್ರಮುಖರ/ರಾಜ್ಯಪಾಲರ ಪ್ರಮುಖ ಹೊಣೆಗಾರಿಕೆಗಳಲ್ಲಿ ಒಂದು. ಜಂಟಿ ಅಧಿವೇಶನದಲ್ಲಿ ಜಯಚಾಮರಾಜೇಂದ್ರ ಒಡೆಯರ್ ತಮ್ಮ ಭಾಷಣವನ್ನು ಇಂಗ್ಲಿಷಿನಲ್ಲಿ ಓದಿದ್ದು ಗೌಡರನ್ನು ಕೆರಳಿ ಕೆಂಡಾಮಂಡಲವಾಗುವಂತೆ ಮಾಡಿತು.
ನಾಡಿನ ಸಾರ್ವಭೌಮ ಭಾಷೆಯಾಗಿರುವ ಕನ್ನಡ ಮತ್ತು ರಾಜ್ಯದ ಬಹುಶ್ರುತ ಸಂಸ್ಕೃತಿ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗದ ಸ್ವಭಾವದ ಗೌಡರ ಸಿಟ್ಟಿಗೆ ಕಾರಣವಾಗಿದ್ದು ಕನ್ನಡ ಬಲ್ಲ ಒಡೆಯರ್, ಇಂಗ್ಲಿಷ್ ಭಾಷೆಗೆ ಮೊರೆಹೋದ ಬೆಳವಣಿಗೆ. ರಾಜಪ್ರಮುಖರ ಭಾಷಣದ ಮುದ್ರಿತ ಪ್ರತಿಯನ್ನು ಚೂರುಚೂರಾಗಿ ಹರಿದು ಕೆಳಕ್ಕೆ ಹಾಕಿ ತುಳಿಯುವಷ್ಟರ ಮಟ್ಟಿಗೆ ಅವರ ಸಿಟ್ಟು ಆಕ್ರೋಶ ಮುಗಿಲು ಮುಟ್ಟಿತ್ತು. ಅದನ್ನು ಅಂದಿನ ವಿಧಾನ ಸಭೆ ಅಶಿಸ್ತಿನ ಪರಮಾವಧಿ ಎಂದು ಪರಿಗಣಿಸಿ ಆಗಿರುವ “ಅನಾಹುತ”ದ ಉಪ ಶಮನಕ್ಕೆ ಅಗತ್ಯವಿರುವ ಕ್ರಮ ಕೈಗೊಂಡಿತು. ಸದನದಲ್ಲಿ ಸರ್ಕಾರವನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡುತ್ತಿದ್ದ ಗೌಡರು ಈ ಘಟನೆ ಹೊರತಾಗಿ ಕಲಾಪ ದಿಕ್ಕೆಡುವಂತೆ ಎಂದೆಂದೂ ಮಾಡಲಿಲ್ಲ ಎನ್ನುವುದು ಮತ್ತು ಸರ್ಕಾರವನ್ನು ಹಣಿಯಲು ತಾವು ವಿಧಾನ ಸಭೆಯಲ್ಲಿದ್ದಷ್ಟು ಕಾಲವೂ ಸಾಂವೊಧಾನಿಕ ಭಾಷೆಯನ್ನು ದಿವಿನಾಗಿ ಬಳಸಿಕೊಂಡರು ಎನ್ನುವುದು ನಮ್ಮ ಶಾಸನ ಸಭೆಯ ಚರಿತ್ರೆ.
ಇದನ್ನೂ ಓದಿ | ಮೊಗಸಾಲೆ ಅಂಕಣ | ಭಾರತದಲ್ಲಿ ಪಾದಯಾತ್ರೆ ಪಾಲಿಟಿಕ್ಸ್
ಭೀಮಣ್ಣ ಖಂಡ್ರೆ ಕಲ್ಯಾಣ ಕರ್ನಾಟಕದ (ಆಗ ಹೈದರಾಬಾದ್ ಕರ್ನಾಟಕ) ಜನಪ್ರತಿನಿಧಿ. ರಾಜ್ಯದ ತುತ್ತತುದಿ ಜಿಲ್ಲೆ ಬೀದರ್‌ನಿಂದ ಎಪ್ಪತ್ತರ ದಶಕದಲ್ಲಿ ಅವರು ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿ ಬಂದಾಗ ಅವರದು ಯೌವನಭರಿತ ಹುಮ್ಮಸ್ಸು. ಆಡಳಿತ ಪಕ್ಷದ ಶಾಸಕರಿಗೆ ಶಾಸನ ಸಭೆಯಲ್ಲಿ ಮಾತಾಡುವ ಅವಕಾಶ ಸಾಮಾನ್ಯವಾಗಿ ಕಡಿಮೆ. ಸರ್ಕಾರ ನಡೆಸುವ ಪಕ್ಷದ ಶಾಸಕರಾಗಿ ಆರೋಪ, ಟೀಕೆ ಇತ್ಯಾದಿ ಮಾಡಲಂತೂ ಅವರಿಗೆ ಅವಕಾಶ ಇಲ್ಲವೇ ಇಲ್ಲ. ಸರ್ಕಾರದ ವಿರುದ್ಧ ಮಾತಾಡಿದರೆ ಅದನ್ನು ಅಶಿಸ್ತು ಎಂದು ಪರಿಗಣಿಸುವ ಅಪಾಯ ಮೈಮೇಲೆ ಬರುವುದೂ ಉಂಟು. ಖಂಡ್ರೆಯವರಿಗೆ ಸದನದಲ್ಲಿ ಏನನ್ನೋ ಪ್ರಸ್ತಾಪಿಸಿ ಸರ್ಕಾರದಿಂದ ಸಮಾಧಾನಕರ ಉತ್ತರ ಪಡೆಯಬೇಕೆಂಬ ತಹತಹ. ಅವಕಾಶ ಕೋರಿ ಸಭಾಧ್ಯಕ್ಷರ ಗಮನ ಸೆಳೆಯಲು ಅವರು ಮಾಡಿದ ಯತ್ನವೆಲ್ಲ ವಿಫಲವಾದ ಬಳಿಕ ಅವರು ಕಂಡುಕೊಂಡ ಉಪಾಯ ಕುರ್ಚಿಯ ಮೇಲೇರಿ ನಿಂತು ಸ್ಪೀಕರ್ ಗಮನ ಸೆಳೆಯುವುದು! ಖಂಡ್ರೆಯವರು ಅದೇ ಮೊದಲಬಾರಿಗೆ ಶಾಸಕರಾದ್ದರಿಂದ ಆಡಳಿತ ಪಕ್ಷದ ಕೊನೆ ಸಾಲಿನಲ್ಲಿ ಅವರ ಸೀಟು. ಅವರು ಪದೇ ಪದೇ ಕೈ ಎತ್ತುತ್ತಿದ್ದರೂ ಸ್ಪೀಕರ್ ಅದರತ್ತ ಗಮನ ಹರಿಸಲಿಲ್ಲ. ಸದನದಲ್ಲಿ ಹೀಗೆಲ್ಲ ವರ್ತಿಸಬಾರದು ಎಂಬ ಎಚ್ಚರಿಕೆಯೊಂದಿಗೆ ಖಂಡ್ರೆ ಪ್ರಕರಣ ಸುಖಾಂತ್ಯ ಕಂಡಿತು.
ತಮ್ಮ ರಾಜಕೀಯವನ್ನು ಸಮಾಜವಾದಿ ಪಕ್ಷದೊಂದಿಗೆ ಆರಂಭಿಸಿ, ಆ ಪಕ್ಷದ ಶಾಸಕರಾಗಿದ್ದ ಅಜೀಜ್ ಸೇಠ್ ಮೊದಲ ಬಾರಿ ವಿಧಾನ ಸಭೆ ಪ್ರವೇಶಿಸಿದ್ದೂ ೭೦-೮೦ ರ ದಶಕದಲ್ಲಿ. ಆಗ ಅವರದು ಪುಟಿಯುವ ಉತ್ಸಾಹ. ತಾವು ಪ್ರತಿನಿಧಿಸುವ ಕ್ಷೇತ್ರದ ಸಮಸ್ಯೆಯನ್ನು ಸದನದಲ್ಲಿ ಪ್ರಸ್ತಾಪಿಸುವ ತವಕ. ತಮ್ಮ ಕಡೆಯಿಂದ ಮಾತಾಡುವವರು ಎಂದು ಪಕ್ಷ ಕೊಟ್ಟಿದ್ದ ಪಟ್ಟಿಯಲ್ಲಿ ಸೇಠರ ಹೆಸರು ಕೊನೆಯಲ್ಲಿತ್ತಾದ ಕಾರಣ ಸ್ಪೀಕರ್ ಆ ಹೆಸರನ್ನು ಕರೆಯುವುದು ತಡವಾಗಿತ್ತು. ಹೊಸಬರಾದ ಕಾರಣ ಸೇಠ್‌ರಿಗೆ ಕಲಾಪ ನಡೆಯುವ ಈ ರೀತಿ ಇನ್ನೂ ಮನದಟ್ಟಾಗಿರಲಿಲ್ಲ. ಸ್ಪೀಕರ್ ಬೇಕೆಂದೇ ತಮ್ಮ ಹೆಸರನ್ನು ಕರೆಯುತ್ತಿಲ್ಲ ಎನ್ನುವುದು ಅವರ ಆಕ್ಷೇಪ. ಸಿಟ್ಟಿನಿಂದಲೆ ಎದ್ದು ನಿಂತ ಸೇಠ್, “ನಾವು ಏನು ಇಲ್ಲಿಗೆ ಇದು ಮಾಡೋಕೆ ಬಂದಿದೀವಿ” ಎಂದು ಆಂಗಿಕ ಭಾಷೆಯಲ್ಲಿ ಕ್ಷೌರದ ರೇಜರನ್ನು ಹರಿತಗೊಳಿಸುವ ರೀತಿಯನ್ನು ಪ್ರದರ್ಶಿಸಿದರು. ಇದು ಇಷ್ಟವಾಗದ ಸ್ಪೀಕರ್, ಏರಿದ ಧ್ವನಿಯಲ್ಲಿ ಸುಮ್ಮನೆ ಕೂರುವಂತೆ ಸೇಠ್‌ರಿಗೆ ತಾಕೀತು ಮಾಡಿದ್ದಲ್ಲದೆ ಘಟನೆಯನ್ನು ವರದಿ ಮಾಡದಂತೆ ಮಾಧ್ಯಮಕ್ಕೂ ಆದೇಶಿಸಿದರು.
ಇದನ್ನೂ ಓದಿ | ಮೊಗಸಾಲೆ ಅಂಕಣ | ಸಿಪಿಎಂ ಮತ್ತು ತೋಳ ಕುರಿಮರಿ ಕಥೆ
ಇತ್ತೀಚೆಗೆ ಅಂದರೆ ಕೆಲವೇ ಕೆಲವು ವರ್ಷದ ಹಿಂದೆ ಶಾಸಕ ಗೂಳಿಹಟ್ಟಿ ಶೇಖರ್ ಅವರು ಸೀಟು ಹತ್ತಿ ನಿಂತು ಬನಿಯನ್ ಹರಿದುಕೊಂಡು ಪ್ರತಿಭಟಿಸಿ ಸ್ಪೀಕರ್ ಸಿಟ್ಟಿಗೆ ಕಾರಣವಾಗಿದ್ದ ಘಟನೆ ಬಹುತೇಕ ಎಲ್ಲರ ಮನಸ್ಸಿನಲ್ಲೂ ಹಸಿರಾಗಿದೆ. ವಿಧಾನ ಮಂಡಲ ಅಧಿವೇಶನ ಶುರುವಾಗುವ ಹೊತ್ತಿಗೆ ಶಾಸಕರ ಸಹನೆಯ ಕಟ್ಟೆ ಒಡೆದಿರುತ್ತದೆ. ಇದಕ್ಕೆ ಕಾರಣ ಆಯಾ ಕ್ಷೇತ್ರದ ಮತದಾರರ ಅಗತ್ಯ, ಕ್ಷೇತ್ರದಲ್ಲಿ ಕುಂಠಿತವಾಗಿರುವ ಕಾಮಗಾರಿ, ಹೇಳಿದ ಮಾತು ಕೇಳದ ಅಧಿಕಾರಶಾಹಿ, ಭರವಸೆಯಂತೆ ಹಣ ಬಿಡುಗಡೆ ಮಾಡದ ಸರ್ಕಾರದ ತಾತ್ಸಾರ ಪ್ರವೃತ್ತಿ.. ಇತ್ಯಾದಿ ಇತ್ಯಾದಿ. ಶಾಸಕರಾದವರಿಗೆ ಆಡಳಿತ ಕೇಂದ್ರ ವಿಧಾನ ಸೌಧ, ವಿಕಾಸ ಸೌಧ ಪ್ರವೇಶ ಸುಲಭ. ಆದರೆ ಅವರಿಗೆ ಬೇಕಾದ ಸಚಿವರು ಸಿಕ್ಕೇ ಸಿಗುತ್ತಾರೆ ಎನ್ನುವುದಕ್ಕೆ ಯಾವ ಭರವಸೆಯೂ ಇರುವುದಿಲ್ಲ. ಮುಖ್ಯಮಂತ್ರಿಯನ್ನು ಭೇಟಿಯಾಗುವುದಂತೂ ಇನ್ನೂ ದುಸ್ತರ. ವಿರೋಧ ಪಕ್ಷದ ಶಾಸಕರಾದರೆ ಅವರ ಅವಸ್ಥೆಯನ್ನು ಕೇಳುವುದೇ ಬೇಡ. ಇದೇ ದುಸ್ಥಿತಿ ಆಡಳಿತ ಪಕ್ಷದಲ್ಲಿದ್ದೂ ಭಿನ್ನಮತೀಯರಾಗಿರುವ ಶಾಸಕರದು. ಇಲ್ಲಿ ಶಾಂತವೇರಿ, ಅಜೀಜ್ ಸೇಠ್, ಗೂಳಿಹಟ್ಟಿ, ರಾಠೋಡ್, ಮರಿತಿಬ್ಬೇಗೌಡರ ಹೆಸರು ಪ್ರಸಂಗಿಕವಾಗಿ ಪ್ರಸ್ತಾಪವಾಗಿದೆ. ಈ ಸಾಲಿಗೆ ಇನ್ನೂ ಹಲವರು ಸೇರುತ್ತಾರೆ. ಪಟ್ಟಿ ಬಹಳ ಉದ್ದದ್ದೂ ಇದೆ.
ಸದನದಲ್ಲಿ ಪರಸ್ಪರ ಮಾತು ಚಕಮಕಿಗೆ ತಿರುಗುತ್ತದೆ. ಆರೋಪ ಪ್ರತ್ಯಾರೋಪ ಗಲಾಟೆಗೆ ತಿದಿಯೊತ್ತುತ್ತದೆ. ಗಲಾಟೆ ತಣಿಯದ ಕೋಲಾಹಲದ ರೂಪ ತಾಳಿದಾಗ ಸಹನೆ ಕಳೆದು ಹೋಗುತ್ತದೆ. ಚರ್ಚೆ ದಿಕ್ಕು ತಪ್ಪುತ್ತದೆ. ಚರ್ಚೆ ದಿಕ್ಕುತಪ್ಪುವ ಕ್ಷಣಕ್ಕೆ ಆಡಳಿತ ಪಕ್ಷ ಕಾಯುತ್ತಿರುತ್ತದೆ. ಸಭಾತ್ಯಾಗ, ಧರಣಿಯಂಥ ಪ್ರತಿಭಟನೆಗಳ ಹಿಂದೆ ವಿರೋಧ ಪಕ್ಷಗಳಿಗೆ ಒಂದು ಲೆಕ್ಕಾಚಾರವಿದ್ದರೆ ಆಡಳಿತ ಪಕ್ಷಕ್ಕೆ ಅದರದೇ ಆದೊಂದು ಬೇರೆಯದೇ ಆಗಿರುವ ಲೆಕ್ಕಾಚಾರವಿರುತ್ತದೆ. ಧರಣಿ ಸಭಾತ್ಯಾಗದ ದೊಡ್ಡ ಫಲಾನುಭವಿ ಆಡಳಿತ ಪಕ್ಷವೇ ಆಗಿರುತ್ತದೆಂಬ ಪ್ರಜ್ಞೆ ಮೂಡುವವರೆಗೂ ಇಂಥ ಪ್ರಹಸನಗಳು ನಡೆಯುತ್ತಲೇ ಇರುತ್ತವೆ.