ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಅಧ್ಯಕ್ಷರೂ ಪಕ್ಷದ ವಕ್ತಾರರೂ ಆಗಿರುವ ಎನ್.ಆರ್. ರಮೇಶ್ ಹಲವು ವರ್ಷಗಳಿಂದ ಪಕ್ಷದಲ್ಲಿ ದುಡಿದಿರುವ; ಭವಿಷ್ಯದ ದಿನಗಳಲ್ಲಿ ಶಾಸಕನೋ ಸಂಸದನೋ ತಾನಾಗಬೇಕೆಂಬ ಗುರಿಯೊಂದಿಗೆ ಮುನ್ನಡೆಯುತ್ತಿದ್ದ ಮುಖಂಡ. ಹಾಲಿ ವಿಧಾನ ಸಭಾ ಚುನಾವಣಾ ಪ್ರಕ್ರಿಯೆ ಸಾಗಿದ್ದು ಬಿಜೆಪಿ ಟಿಕೆಟ್ ಹಂಚಿಕೆಯಲ್ಲಿ ತಮಗೆ ಅನ್ಯಾಯವಾಗಿದೆ ಎಂದು ಹಲವರು ಬಂಡಾಯ ಸಾರಿರುವಂತೆ ಇವರೂ ಕೇಸರಿ ಪಕ್ಷದ ವಿರುದ್ಧ ಕೆಂಪು ಬಾವುಟ ಹಿಡಿದು ಬೀದಿಗೆ ಬಂದಿದ್ದಾರೆ. ಬಿಜೆಪಿಯ ಹಲವರು ಟಿಕೆಟ್ ಸಿಗದೇ ಇರುವುದನ್ನು; ಇರುವುದು ಕೈತಪ್ಪಿ ಹೋಗಿರುವುದನ್ನು ಕಾರಣವಾಗಿಟ್ಟುಕೊಂಡು ಬಂಡಾಯವೆದ್ದಿದ್ದು ಬೇರೆ ಬೇರೆ ಪಕ್ಷಗಳಲ್ಲಿ ಅದೃಷ್ಟ ಅರಸುವ ಕೆಲಸಕ್ಕೆ ಮುಂದಾಗಿದ್ದಾರೆ. ಕೆಲವರಂತೂ ಕಾಂಗ್ರೆಸ್, ಜೆಡಿಎಸ್‍ನಲ್ಲಿ ಈಗಾಗಲೇ ಆಶ್ರಯ ಕಂಡುಕೊಂಡಿದ್ದಾರೆ.
ರಮೇಶ್ ಸಾರಿರುವ ಬಂಡಾಯದ ಮಾತು ಒತ್ತಟ್ಟಿಗೆ ಇರಲಿ; ಏಕೆಂದರೆ ಪ್ರತಿಬಾರಿಯ ಚುನಾವಣೆಯಲ್ಲೂ ಇಂಥದು ಸಾಮಾನ್ಯ. ಇದು ಯಾವುದೇ ಒಂದು ನಿರ್ದಿಷ್ಟ ಪಕ್ಷಕ್ಕೆ ಮಾತ್ರವೇ ಸೀಮಿತವಾಗಿರುವ ಬೆಳವಣಿಗೆಯಲ್ಲ. ಮಾರ್ಕ್ಸ್‌ವಾದಿ ಕಮ್ಯೂನಿಸ್ಟ್ (ಸಿಪಿಎಂ) ಮತ್ತು ಭಾರತ ಕಮ್ಯೂನಿಸ್ಟ್ (ಸಿಪಿಐ) ಪಕ್ಷಗಳಲ್ಲಿ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಆ ಪಕ್ಷಗಳು ಉಚ್ಛ್ರಾಯ ಸ್ಥಿತಿಯಲ್ಲಿ ಇದ್ದಾಗಲೂ ಬಂಡಾಯದಂಥ ಅಪಸ್ವರ ಕೇಳಿದ್ದು ಇಲ್ಲವೇ ಇಲ್ಲ ಎಂಬಷ್ಟು ಕಡಿಮೆ. ಗೊಣಗಾಟ ಸಹಜವೇ ಆಗಿದ್ದರೂ ತಾವು ಬೆಳೆಸಿದ ಇಲ್ಲವೇ ತಾವು ಬೆಳೆದ ಪಕ್ಷಗಳ ಮರ್ಯಾದೆಯನ್ನು ಮಣ್ಣುಗೂಡಿಸುವ ಸಾಹಸಕ್ಕೆ, ಮರಕ್ಕೆ ಕೊಡಲಿ ಕಾವೇ ಮೃತ್ಯುವಾಗುವ ಹಂತಕ್ಕೆ ಅವರೆಂದೂ ಹೋದವರಲ್ಲ. ಆದರೆ ಕಾಂಗ್ರೆಸ್, ಬಿಜೆಪಿಯಿಂದ ಹಿಡಿದು ಸಣ್ಣಪುಟ್ಟ ದೊಡ್ಡ ಪ್ರಾದೇಶಿಕ ಪಕ್ಷಗಳಲ್ಲಿ ಈ ರೋಗ ವ್ಯಾಪಕವಾಗಿದೆ.
ಇರುವ 224 ಕ್ಷೇತ್ರಗಳಲ್ಲಿ 224 ಅಭ್ಯರ್ಥಿಗಳಿಗೆ ಮಾತ್ರವೇ ಯಾವುದೇ ಒಂದು ಪಕ್ಷ ಟಿಕೆಟ್ ಕೊಡಲು ಸಾಧ್ಯ. ರಾಜಕೀಯ ಪಕ್ಷಗಳಲ್ಲಿ ಒಂದೆರಡು ಅವಧಿಗೆ ಗೆದ್ದವರನ್ನು ಧನಾಢ್ಯರೆಂದು, ಜಾತಿ ಬಲ ಉಳ್ಳವರೆಂದು, ತೋಳ್ಬಲಕ್ಕೆ ಕೊರತೆ ಇಲ್ಲದವರೆಂದು ಗುರುತಿಸಿ ಅವರಿಗೇ ಮತ್ತೆ ಮತ್ತೆ ಟಿಕೆಟ್ ಕೊಡುವ ಪದ್ಧತಿ ಪರಂಪರೆಯಾಗಿ ಬೆಳೆದುಬಂದಿದೆ. ಶಾಸಕರಾಗಿ ಸಂಸದರಾಗಿ ಚುನಾಯಿತಗೊಂಡ ಕಾರಣಕ್ಕೇ “ಅಭಿವೃದ್ಧಿಯ ಹರಿಕಾರರಾಗುವ” ಜನಪ್ರತಿನಿಧಿಗಳು ಮೊದಲಿಗೆ ಮಾಡುವ ಕೆಲಸವೆಂದರೆ ತಮ್ಮದೇ ಆದೊಂದು ಸೇನೆಯನ್ನು ಸ್ಥಾಪಿಸಿ ಪೋಷಿಸಿ ಅದರ ಬಲದಲ್ಲಿ ಬೀಗುವುದು. ಇಲ್ಲಿ ಪಕ್ಷ ನೇಪಥ್ಯಕ್ಕೆ ಸರಿದು ವ್ಯಕ್ತಿ ಮುಖ್ಯವಾಗುವ ದಾರಿಯೊಂದು ತೆರೆದುಕೊಳ್ಳುತ್ತದೆ. ಪುಟ್ಟದೊಂದು ನಿದರ್ಶನ ಗಮನಿಸಿದರೆ ಈ ಮಾತಿನಲ್ಲಿರುವ ಸತ್ಯ ಎಷ್ಟೆನ್ನುವುದು ಯಾರಿಗೂ ಗೊತ್ತಾಗುತ್ತದೆ.
ಹತ್ತು ಹದಿನೈದು ವರ್ಷ ಹಿಂದಿನ ಮಾತು. ಕರ್ನಾಟಕ ವಿಧಾನ ಪರಿಷತ್‍ನಲ್ಲಿ ಆರೋಗ್ಯ ಇಲಾಖೆ ಸಂಬಂಧವಾಗಿ ಚರ್ಚೆ ನಡೆದಿತ್ತು. ಆಗಿನ ಆರೋಗ್ಯ ಸಚಿವರ ಕಿವಿ ಸ್ವಲ್ಪ ಮಂದ. ಕಿವಿಗಳೆರಡಕ್ಕೂ ಶ್ರವಣ ಸಾಧನವಿದ್ದರೂ ಗ್ರಹಿಸುವುದು ಅವರಿಗೆ ಕಷ್ಟವಾಗುತ್ತಿತ್ತು. ವಿರೋಧ ಪಕ್ಷದ ಒಬ್ಬ ಶಾಸಕರು ಸಚಿವರ ಗಮನ ಸೆಳೆಯುವ ಯತ್ನದಲ್ಲಿ ವಿಫಲರಾದ ಕೋಪದಲ್ಲಿ “ಈ ಸಚಿವರು ಕಿವುಡ” ಎಂದುಬಿಟ್ಟರು. ಕೋಲಾಹಲಕ್ಕೆ ಇನ್ನೇನು ಬೇಕು ಹೇಳಿ. ಆಡಳಿತ ಪಕ್ಷದ ಶಾಸಕರೆಲ್ಲರೂ ಎದ್ದು ನಿಂತು ವ್ಯಕ್ತಿಗತ ನಿಂದನೆಗೆ ಆಕ್ಷೇಪ ವ್ಯಕ್ತಪಡಿಸಿ ವಿರೋಧ ಪಕ್ಷದ ಶಾಸಕ ಕ್ಷಮೆ ಯಾಚಿಸಬೇಕೆಂದೂ, ಅವರು ಬಳಸಿದ “ಈ ಸಚಿವರು ಕಿವುಡ” ಎಂಬ ವಾಕ್ಯವನ್ನು ಅಧಿಕೃತ ದಾಖಲೆಯಿಂದ ತೆಗೆದುಹಾಕಬೇಕೆಂದೂ ಪಟ್ಟು ಹಿಡಿದರು. ಹಾವು ಸಾಯದು, ಕೋಲು ಮುರಿಯದು ಎಂಬಂಥ ಸ್ಥಿತಿ. ಹರಸಾಹಸಪಟ್ಟು ಸಭೆಯನ್ನು ನಿಯಂತ್ರಣಕ್ಕೆ ತರುವ ಹೊತ್ತಿಗೆ ಸಭಾಪತಿಗೆ ಹಿಮಾಲಯ ಹತ್ತಿಳಿದಷ್ಟು ಹೈರಾಣವಾಗಿದ್ದರು.
ಸಚಿವರ ಮನಸ್ಸಿಗೆ ನೋವಾಗಿದ್ದರೆ ಕ್ಷಮೆಯಾಚಿಸುವುದಾಗಿ ಸಂಧಾನದ ಬಳಿಕ ವಿರೋಧಿ ಶಾಸಕ ಹೇಳಿದರು. ಅಲ್ಲಿಗೇ ಅವರು ನಿಲ್ಲಿಸಲಿಲ್ಲ. ನನ್ನ ಉದ್ದೇಶ ಈ ಸರ್ಕಾರ ಕಿವುಡು ಎನ್ನುವುದಾಗಿತ್ತು ಎಂದು ತೇಪೆ ಹಚ್ಚಿದರು. ಸರ್ಕಾರವನ್ನು ನಡೆಸುತ್ತಿರುವುದು ಒಂದು ಪಕ್ಷ. ಸರ್ಕಾರ ಕಿವುಡು ಎಂದರೆ ಪಕ್ಷವೂ ಕಿವುಡು ಎಂದೇ ಅರ್ಥ. ಪಕ್ಷ ಸರ್ಕಾರದ ಭಾಗವಾಗಿರುವ ಆರೋಗ್ಯ ಸಚಿವರೂ ಸೇರಿದಂತೆ ಎಲ್ಲರೂ ಎಲ್ಲವೂ ಕಿವುಡು ಎಂದೇ ಅರ್ಥ. ಪಕ್ಷಕ್ಕೆ ಅದು ನಡೆಸುವ ಸರ್ಕಾರಕ್ಕೆ ಅವಹೇಳನ ಮಾಡುವ ವಿರೋಧಿ ಶಾಸಕರ ಜಾಣ್ಮೆ ಆಡಳಿತ ಪಕ್ಷದವರಿಗೆ ಅರ್ಥವೇ ಆಗಲಿಲ್ಲ. ಸಭೆ ತಣ್ಣಗಾಗಿ ಕಲಾಪ ಮುಂದಕ್ಕೆ ಸಾಗಿತು.
ಯಾವುದೇ ಪಕ್ಷದಲ್ಲಿ ವ್ಯಕ್ತಿಗೆ ಹಿಂಬಾಲಕರು ಇರುವಷ್ಟು ಪ್ರಮಾಣದಲ್ಲಿ ಪಕ್ಷಕ್ಕೆ ಇರುವುದಿಲ್ಲ ಎಂಬ ಮಾತು ಇಂಥ ಘಟನೆ ಕಾರಣವಾಗಿ ನಿಜವಾದ ಹಲವು ನಿದರ್ಶನಗಳಲ್ಲಿ ಇದು ಒಂದು. ಬಿಜೆಪಿ ಟಿಕೆಟ್ ವಂಚಿತ ಎನ್.ಆರ್. ರಮೇಶ್ ಆಡಿರುವ ಬಂಡಾಯದ ಮಾತುಗಳಲ್ಲಿ ಗಮನ ಸೆಳೆಯುತ್ತಿರುವುದು “ಬಿಜೆಪಿ ಟಿಕೆಟನ್ನು ಮಾರಲಾಗಿದೆ” ಎಂಬ ಆರೋಪ. ಸಾಮಾಜಿಕ ಜಾಲ ತಾಣಗಳಲ್ಲಿ ಈ ಹೇಳಿಕೆ ಈಗಾಗಲೇ ವೈರಲ್ ಆಗಿದೆ. ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ಬಾರದಂತೆ ತಡೆಯುವ ಯತ್ನದಲ್ಲಿರುವ ಕಾಂಗ್ರೆಸ್ ಮತ್ತು ಅದರ ಕಾರ್ಯಕರ್ತರು ರಮೇಶ್ ಹೇಳಿಕೆಯ ಸಂಪೂರ್ಣ ಲಾಭ ಪಡೆಯುವ ಕೆಲಸ ಮಾಡುತ್ತಿದ್ದಾರೆ; ಇದು ಅಸಹಜವೇನಲ್ಲ. ರಾಜಕೀಯವೆಂದರೆ ಇದೇ ತಾನೇ. ಜೆಡಿಎಸ್ ಕೂಡಾ ಒಂದಿಷ್ಟು ಯತ್ನ ನಡೆಸಿದೆ.
ಇದನ್ನೂ ಓದಿ: ಮೊಗಸಾಲೆ ಅಂಕಣ: ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಎಂಬ ಕೌತುಕದ ಗೂಡು
ಕಾಂಗ್ರೆಸ್ಸು ಜೆಡಿಎಸ್ ಇಲ್ಲವೇ ಆಮ್ ಆದ್ಮಿ ಪಾರ್ಟಿ, ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷ, ಸಿಪಿಐ ಈ ಹೇಳಿಕೆಯನ್ನು ರಾಜಕೀಯಕ್ಕೆ ಬಳಸುತ್ತಿದ್ದರೆ ಅದರಲ್ಲಿ ಆಕ್ಷೇಪ ಹುಡುಕುವುದಕ್ಕೆ ಎಡೆ ಇಲ್ಲ. ಬಿಜೆಪಿ ಅಸಂತುಷ್ಟರೇ ಈ ಕೆಲಸ ಮಾಡಿದರೆ…? ರಾಜ್ಯದ 224 ಕ್ಷೇತ್ರಗಳಲ್ಲಿ ಬಹುತೇಕ ಎಲ್ಲ ಕಡೆಗಳಲ್ಲಿ ತಲೆ ಎತ್ತಿರುವ ಬಿಜೆಪಿ ಅತೃಪ್ತರು ರಮೇಶ್ ಹೇಳಿಕೆಯ ಫಸಲು ಸುಗ್ಗಿಗೆ ಪೈಪೋಟಿ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕತ್ವ ತೆಗೆದುಕೊಂಡಿರುವ ನಿಲುವಾದರೂ ಏನು..? ಇನ್ನೂ ಸ್ಪಷ್ಟವಾಗಿಲ್ಲ. ರಮೇಶ್‍ರ ಆರೋಪವನ್ನು ಬಿಜೆಪಿ ನಾಯಕತ್ವ ಗಂಭೀರವಾಗಿ ಪರಿಗಣಿಸಿದೆಯೇ…? ಹಾಗಿದ್ದರೆ ತೆಗೆದುಕೊಂಡ ಶಿಸ್ತು ಕ್ರಮವೇನು…? ಗೊತ್ತಿಲ್ಲ. ರಮೇಶ್ ಹೇಳಿಕೆಯನ್ನು ಗಾಳಿಯಲ್ಲಿ ಹಾರಿ ಹೋಗಲು ಬಿಟ್ಟು ಬಿಜೆಪಿ ನಾಯಕತ್ವ ಸುಮ್ಮನಾಗುತ್ತದೆಯೇ…? ಗೊತ್ತಿಲ್ಲ. ಶಿಸ್ತುಕ್ರಮದ ಅಗತ್ಯವಿಲ್ಲ ಎಂದು ನಾಯಕತ್ವ ಭಾವಿಸಿದ್ದರೆ ಅದರ ಹಿಂದಿರುವ ಅಸಲಿಯತ್ತಾದರೂ ಏನಿರಬಹುದು…? ಈ ಕ್ಷಣದವರೆಗೆ ಗೊತ್ತಾಗಿಲ್ಲ.
ಟಿಕೆಟ್ ಸಿಗದೇ ಇದ್ದಾಗ ಅದನ್ನು ನಿರೀಕ್ಷಿಸಿರುವ ಆಕಾಂಕ್ಷಿಗಳು ಬಗೆಬಗೆಯ ಆರೋಪ ಮಾಡುವುದು ಹೊಸದೂ ಅಲ್ಲ, ಅಪರೂಪದ್ದೂ ಅಲ್ಲ. ಬಾಯಿಗೆ ಬಂದಿದ್ದೆಲ್ಲವೂ ಬಡಬಡಿಕೆ ರೂಪದಲ್ಲಿ ಹೊರಕ್ಕೆ ಬರುತ್ತದೆ. ಒಮ್ಮೆ ಶಾಸಕನೋ ಸಂಸದನೋ ಆದರೆಂದಾದರೆ ಮೂರು ಮೂರ್ನಾಲ್ಕು ಪೀಳಿಗೆಗೆ ತಿಂದು ತೇಗಿದರೂ ಕರಗದಷ್ಟು ಸಂಪತ್ತು ಅವರಲ್ಲಿ ಶೇಖರ ಆಗುತ್ತದೆಂಬ (ಈ ಮಾತಿಗೆ ಅಲ್ಲಿ ಇಲ್ಲಿ ಅಪವಾದವೂ ಇವೆ) ವಾಸ್ತವ ಟಿಕೆಟ್‍ಗೆ ದುಂಬಾಲು ಬೀಳುವಂತೆ ಮಾಡುತ್ತದೆ. ಈಗಾಗಲೇ ಜನ ಪ್ರತಿನಿಧಿ ಆದವರಿಗೆ ಆ ಲಕ್ಷುರಿ ಕೈತಪ್ಪಿ ಹೋಗದಂತೆ ಕಾಪಾಡಿಕೊಳ್ಳುವುದಕ್ಕೆ ಟಿಕೆಟ್ ಬೇಕು; ಆಯ್ಕೆ ಆಗಬೇಕು. ಆ ಲಕ್ಷುರಿಯ ಕನಸಿನಲ್ಲಿರುವವರಿಗೆ ಅದು ನನಸಾಗಲು ಟಿಕೆಟ್ ಬೇಕೇಬೇಕು. ಟಿಕೆಟ್ ಸಿಗದೇ ಹೋದಾಗ “ಬಾಯಿಗೆ ಸಿಗದ ದ್ರಾಕ್ಷಿ ಹುಳಿ” ಎಂಬ ಪಂಚತಂತ್ರದ ಕಥೆ ಚುನಾವಣಾ ರಾಜಕೀಯದಲ್ಲಿ ಕೆಲಸಕ್ಕೆ ಬರುವುದಿಲ್ಲ.
ಇದನ್ನೂ ಓದಿ: ಮೊಗಸಾಲೆ ಅಂಕಣ: ಮೋದಿ, ಖರ್ಗೆ ಹಣಾಹಣಿಗೆ ವೇದಿಕೆ ಸಜ್ಜು
ಬಿಜೆಪಿಯಲ್ಲಿ ಟಿಕೆಟನ್ನು ಮಾರಲಾಗುತ್ತಿದೆ ಎಂಬ ರಮೇಶ್ ಆರೋಪ ಒಂದು ಕಾಲದಲ್ಲಿ ಕಾಂಗ್ರೆಸ್‍ನಲ್ಲೂ ಕೇಳಿಬಂದಿತ್ತು. ಈ ಹೊತ್ತಿಗೆ ಬರೋಬ್ಬರಿ 24 ವರ್ಷ ಹಿಂದೆ 2008ರ ಕರ್ನಾಟಕ ವಿಧಾನ ಸಭೆ ಚುನಾವಣೆ ಹತ್ತಿರದಲ್ಲಿದ್ದಾಗ ಈ ಆರೋಪ ಸಂಚಲನ ಮೂಡಿಸಿತ್ತು. ಬಹುಷಃ ಕರ್ನಾಟಕದಲ್ಲಿ ಈ ಬಗೆಯ ಆರೋಪ ಕೇಳಿಬಂದಿದ್ದು ಅದೇ ಮೊದಲು ಎನ್ನುವುದು ನನ್ನ ಗ್ರಹಿಕೆ. ಆಗ ಕಾಂಗ್ರೆಸ್ ಟಿಕೆಟ್ ಬಯಸಿದವರಲ್ಲಿ ಕೇಂದ್ರದ ಮಾಜಿ ಸಚಿವೆ, ರಾಜಸ್ತಾನದ ಮಾಜಿ ರಾಜ್ಯಪಾಲರಾಗಿರುವ ಮಾರ್ಗರೆಟ್ ಆಳ್ವಾ ಕೂಡಾ ಒಬ್ಬರಾಗಿದ್ದರು. ಟಿಕೆಟ್ ಬಯಸಿದ್ದು ತಮಗಾಗಿರಲಿಲ್ಲ, ಬದಲಿಗೆ ಮಗ ನಿವೇದಿತ್ ಆಳ್ವಾಗೆ. ಕಾರವಾರ ಲೋಕಸಭಾ ಕ್ಷೇತ್ರದ ಭಾಗವಾಗಿರುವ ಬೆಳಗಾವಿ ಜಿಲ್ಲೆ ಖಾನಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ಕಣಕ್ಕಿಳಿಯಲು ಮಗನಿಗೆ ಟಿಕೆಟ್ ಬೇಕೆಂಬ ಅವರ ಆಗ್ರಹಪೂರ್ವಕ ಕೋರಿಕೆಯನ್ನು ಪಕ್ಷ ತಿರಸ್ಕರಿಸಿದ ಮರು ಕ್ಷಣದಲ್ಲಿ ಅವರು ಸಿಡಿಸಿದ ಬಾಂಬ್ “ಕ್ಯಾಷ್ ಫಾರ್ ಟಿಕೆಟ್ಸ್” ಸೂತ್ರ ಕರ್ನಾಟಕದಲ್ಲಿದೆ ಎನ್ನುವುದಾಗಿತ್ತು. ಆಗ ಏಐಸಿಸಿ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿಯವರ ಆಪ್ತ ವಲಯದಲ್ಲಿದ್ದ (ಈಗಲೂ ಆಪ್ತರಾಗಿರುವ) ಮಾರ್ಗರೆಟ್‍ರ ಟೀಕೆ ಪಕ್ಷದಲ್ಲಿ ದೇಶದ ಉದ್ದಗಲಕ್ಕೆ ದೊಡ್ಡ ಕೋಲಾಹಲಕ್ಕೆ ಕಾರಣವಾಗಿತ್ತು.
ಚುನಾವಣೆ ಸಮಯದಲ್ಲಿ ಇಂಥ ಅಸ್ತ್ರಗಳು ವಿರೋಧ ಪಕ್ಷಗಳ ಬತ್ತಳಿಕೆಯಲ್ಲಿ ಜಾಗ ಪಡೆಯುತ್ತವೆ; ರಾಮಬಾಣದಂತೆ ಕೆಲಸಕ್ಕೂ ಬರುತ್ತವೆ. ಕಾಂಗ್ರೆಸ್ ಪಕ್ಷದಲ್ಲಿ ಚುನಾವಣಾ ಟಿಕೆಟ್ ಮಾರಾಟ ನಡೆದಿದ್ದು ಇದೊಂದು ಭಾರೀ ದೊಡ್ಡ ಹಗರಣ ಎಂಬಂತೆ ಬಿಜೆಪಿ ಬಿಂಬಿಸಿತ್ತು. ಆರೋಪ ಹಿಮದುಂಡೆ ಸ್ವರೂಪ ಪಡೆಯುತ್ತಿದೆ ಎನಿಸಿದಾಗ ಕಾವಿನ ಶಮನಕ್ಕೆ ಕಾಂಗ್ರೆಸ್ ಹೈಕಮಾಂಡ್ ಮಾರ್ಗರೆಟ್‍ರನ್ನು ಪಕ್ಷದಿಂದ ಸಸ್ಪೆಂಡ್ ಮಾಡಬೇಕಾಗಿ ಬಂತು. ಮಾರ್ಗರೆಟ್ ಹೇಳಿಕೆಯನ್ನು ಪಕ್ಷ ಸಹಿಸಿಕೊಂಡರೆ ಟಿಕೆಟ್ ಸಿಗದ ಪ್ರತಿಯೊಬ್ಬರೂ ಇಂಥ ಆರೋಪ ಮಾಡಿ ಪಕ್ಷದ ಚುನಾವಣಾ ಭವಿಷ್ಯಕ್ಕೆ ಮುಕುರ ತರುತ್ತಾರೆಂಬ ಭಾವನೆಯಲ್ಲಿ ಮಾರ್ಗರೆಟ್‍ರ ಅಮಾನತು ಜಾರಿಗೆ ಬಂದಿತ್ತು. ಇದೊಂದು ದೊಡ್ಡ ಹಗರಣವೆಂದು ಆರೋಪಿಸುವ ಸರದಿ ಈಗ ಕಾಂಗ್ರೆಸ್‍ನದು. ರಮೇಶ್ ಹೇಳಿರುವುದನ್ನು ನಂಬಬಹುದಾದರೆ ಬಿಜೆಪಿಯಲ್ಲಿ ಟಿಕೆಟ್ ಮಾರಾಟಕ್ಕಿದೆ. ವಿಪರ್ಯಾಸದ ಬೆಳವಣಿಗೆ ಎಂದರೆ ಬಿಜೆಪಿ ವರಿಷ್ಟರಂತೆ ಕಾಂಗ್ರೆಸ್‍ನ ನಾಯಕರೂ ರಮೇಶರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದಂತಿಲ್ಲ.
ಇದನ್ನೂ ಓದಿ: ಮೊಗಸಾಲೆ ಅಂಕಣ: ರಾಜ್ಯ ಬಿಜೆಪಿ ಕಲಿಯಲೊಲ್ಲದ ಪಾಠ