ರಾಜ್ಯಪಾಲರು ಮತ್ತು ರಾಜ್ಯ ಸರ್ಕಾರಗಳ ನಡುವಣ ಸಂಘರ್ಷ, ತಿಕ್ಕಾಟ, ಪರಸ್ಪರ ಅವಿಶ್ವಾಸ ಈ ಹಿಂದಿನ ಎಲ್ಲ ದಾಖಲೆಗಳನ್ನೂ ಮುರಿಯುವ ನಿಟ್ಟಿನಲ್ಲಿ ಸಾಗಿರುವುದು ಆರೋಗ್ಯಕರ ಪ್ರಜಾಪ್ರಭುತ್ವದ ಸುಗಮ ಕಾರ್ಯನಿರ್ವಹಣೆಗೆ ಮಾರಕ ಮತ್ತು ಒಕ್ಕೂಟ ವ್ಯವಸ್ಥೆಗೆ ಪೂರಕವಲ್ಲದ ಬೆಳವಣಿಗೆ ಎಂದು ವಿಷಾದದಲ್ಲಿ ಹೇಳಬೇಕಾಗಿದೆ. ಅನಗತ್ಯವಾಗಿರುವ ಈ ಬಗೆಯ ತಿಕ್ಕಾಟ ದೇಶದಲ್ಲಿ ಹೊಸದಲ್ಲ, ಅಪರೂಪದ್ದೂ ಅಲ್ಲ. ಸಂವಿಧಾನದ ಚೌಕಟ್ಟಿನಲ್ಲಿ ನಡೆಯಬೇಕಾಗಿರುವ ಸುಗಮ ಕಾರ್ಯನಿರ್ವಹಣೆಯಲ್ಲಿ ರಾಜಕೀಯ ಅಜೆಂಡಾ ನುಸುಳುವ ಪ್ರಕ್ರಿಯೆಗೆ ದಶಕಗಳ ಇತಿಹಾಸವಿದೆ. ಈಗ ಈ ಸಂಘರ್ಷ ಎಲ್ಲೆ ಮೀರುತ್ತಿರುವುದರ ಸೂಚನೆ ದಿನಗಳೆದಂತೆ ದಟ್ಟವಾಗುತ್ತಿದ್ದು ಆತಂಕದ ಮೂಲವಾಗಿದೆ.
ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ನೇಮಕಗೊಳ್ಳುವ ರಾಜ್ಯಪಾಲರು “ಸ್ವೇಚ್ಛೆ”ಯಲ್ಲಿ ತಮಗೆ ಇಷ್ಟಬಂದ ರೀತಿಯಲ್ಲಿ ನಡೆದುಕೊಳ್ಳುವುದಕ್ಕೆ “ಅವರು ಭಾವಿಸುವಷ್ಟು” ಸ್ವತಂತ್ರರಲ್ಲ. ಆಯಾ ರಾಜ್ಯ ಸಚಿವ ಸಂಪುಟದ ಬೇಕು ಬೇಡಗಳನ್ನು ಒಪ್ಪಿ ಕಾರ್ಯ ನಿರ್ವಹಿಸಲೇಬೇಕಾಗಿರುವ ಸಂವೈಧಾನಿಕ ನಿರ್ಬಂಧ ಅವರಿಗಿದೆ. ತಮ್ಮನ್ನು ರಾಜ್ಯಪಾಲರಾಗಿ ನೇಮಿಸುವ ಕೇಂದ್ರ ಸರ್ಕಾರವನ್ನು ನಡೆಸುವ ಪಕ್ಷ/ಒಕ್ಕೂಟದ “ಸ್ವಾಮಿನಿಷ್ಟ” ನೌಕರ ತಾವಲ್ಲ ಎನ್ನುವ ಪ್ರಜ್ಞೆ ರಾಜ್ಯಪಾಲರಲ್ಲಿ ಸದಾಕಾಲಕ್ಕೂ ಇರಬೇಕಾಗುತ್ತದೆ. ಸಂವಿಧಾನದ ಪಾತ್ರ ಕುರಿತು ಬಿ.ಆರ್. ಅಂಬೇಡ್ಕರ್ ಆಡಿರುವ “ರಾಜ್ಯಪಾಲರು ಪಕ್ಷದ ಪ್ರತಿನಿಧಿ ಅಲ್ಲ; ಅವರು ಜನರ ಪ್ರತಿನಿಧಿ” ಎಂಬ ಮಾತು ರಾಜ್ಯಪಾಲರಾಗಿ ನೇಮಕಗೊಳ್ಳುವ ಬಹುತೇಕರ ನೆನಪಿನಿಂದ ಅಳಿಸಿಹೋಗಿರುವ ಅನುಮಾನವಿದೆ. ಹಾಗಲ್ಲವಾದರೆ ತಮ್ಮ ಕೆಲಸ ರಾಜ್ಯದಲ್ಲಿರುವ (ವಿರೋಧ ಪಕ್ಷಗಳ) ಸರ್ಕಾರಕ್ಕೆ ಕಿರುಕುಳ ಕೊಡುವುದಷ್ಟೇ ಎಂದು ರಾಜ್ಯಪಾಲರಾದವರು ಯೋಚಿಸುತ್ತಿರಲಿಲ್ಲ.
ಸ್ವಾತಂತ್ರ್ಯ ಬಂದು ಗಣರಾಜ್ಯ ಸ್ಥಾಪನೆಯಾದ ದಿವಸದಿಂದಲೂ ಕೇಂದ್ರ ಸರ್ಕಾರದ್ದು ದೊಡ್ಡಣ್ಣ ಮನಃಸ್ಥಿತಿ. ರಾಜ್ಯಗಳನ್ನು ತೊತ್ತು ಎಂಬಂತೆ ನೋಡಿದ್ದೇ ಜಾಸ್ತಿ. ಅಜಮಾಸು ನಾಲ್ಕು ದಶಕ ಕಾಲ ಕೇಂದ್ರ ಸರ್ಕಾರದ ದಬ್ಬಾಳಿಕೆ ಹೀಗೆ ಮರ್ಯಾದಾ ಮಿತಿಯನ್ನು ಮೀರಿ ನಡೆಯಿತು ಎನ್ನುವುದು ಜನತಂತ್ರಕ್ಕೆ ಮೆತ್ತಿಕೊಂಡಿರುವ ಕಪ್ಪು ಚುಕ್ಕೆ. ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ಸಮಯದಲ್ಲಿ ಕಾಂಗ್ರೆಸ್ಸೇತರ ಪಕ್ಷ ಸರ್ಕಾರಗಳಿರುವ ರಾಜ್ಯಗಳಲ್ಲಿ ರಾಜ್ಯಪಾಲರು ಮಾಡಿದ ಹಾವಳಿ ಎಲ್ಲ ಇತಿಮಿತಿಯನ್ನೂ ಮೀರಿತ್ತು. ಆ ಸಂದರ್ಭದಲ್ಲಿ ರಾಜ್ಯ-ಕೇಂದ್ರ ಸಂಬಂಧ ಕುರಿತಂತೆ ಪುನರ್‌ವ್ಯಾಖ್ಯಾನ ಮಾಡಬೇಕಾದ ಚರ್ಚೆ ಬಹು ವಿಸ್ತಾರವಾಗಿ ನಡೆದು ಒಂದು ಪರಿಹಾರ ರೂಪಿಸಬೇಕಾದ ಅಗತ್ಯ ರೂಪುಗೊಂಡಿತು. ಅದರ ಫಲಿತವೇ ಎಂಬತ್ತರ ದಶಕದಲ್ಲಿ ರಚನೆಯಾದ ನ್ಯಾಯಮೂರ್ತಿ ಸರ್ಕಾರಿಯಾ ಆಯೋಗ.
ಅದು ತನ್ನ ವರದಿಯಲ್ಲಿ ಒಂದಿಷ್ಟು ಪರಿಹಾರ ಸೂತ್ರಗಳನ್ನು ರೂಪಿಸಿತು. ಅದರಲ್ಲಿ ಮುಖ್ಯವಾದುದು ರಾಜ್ಯಗಳಿಗೆ ಕೇಂದ್ರದ ಪ್ರತಿನಿಧಿಯಾಗಿ ಹೋಗುವ ರಾಜ್ಯಪಾಲರ “ಕರ್ತವ್ಯದ ಇತಿಮಿತಿ”. ರಾಜ್ಯಪಾಲರಲ್ಲಿ ಬಹುತೇಕರು ಸಂವಿಧಾನ ತಮಗೆ ಹಾಕಿರುವ ಬೇಲಿಯನ್ನು ಮುರಿಯುತ್ತಾರೆ ಅಥವಾ ನೆಗೆಯುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ರಾಜ್ಯಪಾಲರು ತಮ್ಮನ್ನು ತಾವು ಕೇಂದ್ರ ಸರ್ಕಾರದ ಕಾರಕೂನ ಎಂದು ಭಾವಿಸಿದ್ದೂ ಇದೆ. ಇಂಥ ಅಪಸವ್ಯಗಳನ್ನು ಸರ್ಕಾರಿಯಾ ಆಯೋಗ ವಿಶ್ಲೇಷಣೆಗೆ ಒಳಪಡಿಸಿತ್ತು.
ಇಂದಿರಾ ಯುಗ ಪ್ರಧಾನಿ ನರೇಂದ್ರ ಮೋದಿ ಕಾಲದಲ್ಲಿ ಮರುಕಳಿಸಿದೆ. ದಕ್ಷಿಣ ಭಾರತದ ರಾಜ್ಯಗಳಾದ ತಮಿಳುನಾಡು, ಕೇರಳ, ತೆಲಂಗಾಣ ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೆರಿಯಲ್ಲಿ ಆಯಾ ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವಣ ಸಂಘರ್ಷ ಯಾರಿಗೂ ಮರ್ಯಾದೆ ತರುವ ನಡವಳಿಕೆಯಾಗಿಲ್ಲ. ದಿನನಿತ್ಯದ ಆಡಳಿತದಲ್ಲಿ ರಾಜ್ಯಪಾಲರಿಗೆ ಪಾತ್ರವಿಲ್ಲ. ಅದೇನಿದ್ದರೂ ಚುನಾಯಿತ ಸರ್ಕಾರದ ಜವಾಬ್ದಾರಿ. ಸರ್ಕಾರ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಂಡ ಸಂದರ್ಭಗಳಲ್ಲಿ ಮಧ್ಯ ಪ್ರವೇಶಿಸಿ ಸೂಕ್ತ ಸಲಹೆ ಸೂಚನೆ ಕೊಡುವ ಗೌರವದ ಸ್ಥಾನಮಾನ ರಾಜ್ಯಪಾಲರಿಗೆ ಇದೆ. ಹೀಗೆಂದ ಮಾತ್ರಕ್ಕೆ ರಾಜ್ಯ ಸರ್ಕಾರಕ್ಕೆ ಹೀಗೇ ಮಾಡಿ ಎಂದು ನಿರ್ದೇಶಿಸುವ, ಆದೇಶಿಸುವ ಹಕ್ಕನ್ನು ಸಂವಿಧಾನ ರಾಜ್ಯಪಾಲರಿಗೆ ಕೊಟ್ಟಿಲ್ಲ. ಸಂವಿಧಾನದ ಚೌಕಟ್ಟಿನಲ್ಲಿ ಕೆಲಸ ಮಾಡುವ ಸ್ವಾತಂತ್ರ್ಯವನ್ನು ಕೇಂದ್ರದಲ್ಲಿ ಅಧಿಕಾರ ನಡೆಸಿದ ಸರ್ಕಾರಗಳು ರಾಜ್ಯಪಾಲರಿಗೆ ನೀಡಿದ್ದು ಅಪರೂಪ. ಇದು ಸ್ವಾತಂತ್ರ್ಯದ ಏಳೂವರೆ ದಶಕದ ವೈಪರೀತ್ಯ.
ತಮಿಳುನಾಡಿನ ರಾಜ್ಯಪಾಲ ಆರ್.ಎನ್.ರವಿ ಈಗ ಬಹಳ ಸುದ್ದಿಯಲ್ಲಿದ್ದಾರೆ. ವಿಧಾನ ಸಭೆ ಅಧಿವೇಶನವನ್ನುದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡುತ್ತಾರೆ. ಆದರೆ ಆ ಭಾಷಣವನ್ನು ಸಿದ್ಧಪಡಿಸುವುದು ರಾಜ್ಯ ಸಚಿವ ಸಂಪುಟ. ರವಿಯವರು ಮುದ್ರಿತ ಭಾಷಣದ (ರಾಜ್ಯದ ಡಿಎಂಕೆ ಸರ್ಕಾರ ಭಾವಿಸಿರುವಂತೆ) ಕೆಲವು ಮುಖ್ಯ ಸಾಲುಗಳನ್ನು ಓದಲಿಲ್ಲ. ಇದು ಹೊಸ ವಿವಾದ. ಇದಕ್ಕೂ ಮೊದಲು ಹಲವು ವಿವಾದಗಳನ್ನು ರಾಜ್ಯಪಾಲರು ಮೈಮೇಲೆ ಎಳೆದುಕೊಂಡಿದ್ದಾರೆ. “ಈ ರಾಜ್ಯಪಾಲರು ಬೇಡ, ಹಿಂದಕ್ಕೆ ಕರೆಸಿಕೊಳ್ಳಿ” ಎಂದು ಪಟ್ಟು ಹಿಡಿದಿರುವ ಸ್ಥಳೀಯ ಸರ್ಕಾರ ರಾಜ್ಯಪಾಲರ ಜೊತೆ ನೇರ ಸಂಘರ್ಷಕ್ಕೆ ಮುಂದಾಗಿದೆ. ತಮ್ಮ ಭಾಷಣದ ಸುಗಮ ಓದಿಗೆ ಭಂಗ ತಂದ ಆಡಳಿತಾರೂಢ ಡಿಎಂಕೆ ಶಾಸಕರ ವರ್ತನೆಯಿಂದ ಬೇಸರಗೊಂಡ ರಾಜ್ಯಪಾಲರು ವಿಧಾನ ಸಭೆಯಿಂದ ಸಭಾತ್ಯಾಗ ಮಾಡಿರುವುದು ಅಚ್ಚರಿಯ ಬೆಳವಣಿಗೆ.
ಸಚಿವ ಸಂಪುಟ ಸಿದ್ಧಪಡಿಸಿಕೊಡುವ ಭಾಷಣವನ್ನು ಓದುವುದು ರಾಜ್ಯಪಾಲರ ಕೆಲಸ. “ನನ್ನ ಸರ್ಕಾರ” ಎಂದು ಆರಂಭಿಸಿ (ತಮ್ಮದಲ್ಲದ) ಸರ್ಕಾರ ಮಾಡಿರುವ ಮಾಡಲಿರುವ ಕೆಲಸ ಕಾರ್ಯಕ್ರಮಗಳನ್ನು ರಾಜ್ಯಪಾಲರ ಭಾಷಣ ಬಿಂಬಿಸುತ್ತದೆ. ರಾಜ್ಯಪಾಲರ ವೈಯಕ್ತಿಕ ಅನಿಸಿಕೆಗಳಿಗೆ ಆ ಭಾಷಣದಲ್ಲಿ ಅವಕಾಶ ಇರುವುದಿಲ್ಲ. ಹೀಗಿದ್ದರೂ ಕೆಲವು ಸಾಲು, ವಾಕ್ಯಗಳನ್ನು ಮುದ್ರಿತ ಭಾಷಣ ಓದುವ ಹಂತದಲ್ಲಿ ಹಾರಿಸಿ ಕೈಬಿಟ್ಟು ಸರ್ಕಾರಕ್ಕೆ ಮುಜುಗರ ತಂದ ರಾಜ್ಯಪಾಲರ ಸಂಖ್ಯೆ ಕಡಿಮೆಯದೇನೂ ಅಲ್ಲ. ರವಿಯವರದು ಈ ಸಾಲಿನಲ್ಲಿ ಇತ್ತೀಚಿನ ಹೆಸರು. ಈ ರಾಜ್ಯಪಾಲರೊಂದಿಗೆ ಏಗುವುದು ಸಾಧ್ಯವೇ ಇಲ್ಲ ಎಂಬ ತೀರ್ಮಾನಕ್ಕೆ ಡಿಎಂಕೆ ಸರ್ಕಾರ ಬಂದಿರುವುದಕ್ಕೆ ಮುಖ್ಯ ಕಾರಣಗಳಲ್ಲಿ ಒಂದು ದಿನನಿತ್ಯದ ಆಡಳಿತದಲ್ಲಿ ಅವರದು ಅನಿಯಂತ್ರಿತ ಹಸ್ತಕ್ಷೇಪ ಎನ್ನುವುದು.
ತಿರುವನಂತಪುರದಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣವನ್ನು ಕೇಂದ್ರ ಅಧೀನದ ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‍ಐಎ) ವಹಿಸಬೇಕು ಎಂದಿರುವ ರವಿ ನಿಲುವನ್ನು ಡಿಎಂಕೆ ಬಲವಾಗಿ ಖಂಡಿಸಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದು ಚುನಾಯಿತ ಸರ್ಕಾರದ ಕೆಲಸ. ಇಲ್ಲಿ ರಾಜ್ಯಪಾಲರ ಹಸ್ತಕ್ಷೇಪ ಒಕ್ಕೂಟ ವ್ಯವಸ್ಥೆಯಲ್ಲಿ ಅನುಸರಿಸಿಕೊಂಡು ಬಂದಿರುವ ಪರಂಪರೆಗೆ ಚ್ಯುತಿ ತರುವಂತಿದೆ ಎನ್ನುವುದು ಡಿಎಂಕೆ ಆರೋಪ. ರಾಜ್ಯಪಾಲರ ನೇಮಕ ಆಜ್ಞೆಗೆ ಸಹಿ ಮಾಡುವ ರಾಷ್ಟ್ರಪತಿಯವರನ್ನೇ ಡಿಎಂಕೆ ನಿಯೋಗ ಭೇಟಿ ಮಾಡಿ ಒತ್ತಾಯ ಮಂಡಿಸಿದೆ. ಹೆಚ್ಚೆಂದರೆ ರಾಜ್ಯಪಾಲರು ಈ ಮನವಿಯನ್ನು ಪ್ರಧಾನಿ ಕಚೇರಿಗೆ “ಟಪಾಲು” ಮಾಡುತ್ತದೆ. ಈ ಬಗೆಯ ಮನವಿಗಳಿಗೆ ಕೇಂದ್ರ ಸರ್ಕಾರ ಕವಡೆ ಕಾಸಿನ ಕಿಮ್ಮತ್ತನ್ನಾದರೂ ನೀಡಿದ ನಿದರ್ಶನವಿಲ್ಲ ಎನ್ನುವುದು ಡಿಎಂಕೆಗೆ ಗೊತ್ತಿಲ್ಲವೆಂದೇನೂ ಅಲ್ಲ. ಒಕ್ಕೂಟ ವ್ಯವಸ್ಥೆ ಹೇಗೆ ದುರ್ಬಲವಾಗುತ್ತಿದೆ ಎನ್ನುವುದನ್ನು ಜಗತ್ತಿಗೆ ವಿವರಿಸುವ ಒಂದು ಕ್ರಮವಾಗಿ ಈ ಮನವಿ ಒತ್ತಾಯ ಬೇಡಿಕೆ ಇತ್ಯಾದಿ.
ಕೇರಳದಲ್ಲಿ ಸತತ ಎರಡನೆ ಬಾರಿಗೆ ಎಂಬಂತೆ ಮಾರ್ಕ್ಸ್‌ವಾದಿ ಕಮ್ಯೂನಿಸ್ಟ್ ಪಕ್ಷ ನೇತೃತ್ವದ ಎಲ್‍ಡಿಎಫ್ ಅಧಿಕಾರಕ್ಕೆ ಬಂದಿರುವುದು ಕೇಂದ್ರದ ಬಿಜೆಪಿ/ಎನ್‍ಡಿಎ ಸರ್ಕಾರಕ್ಕೆ ಅರಗಿಸಿಕೊಳ್ಳಲಾಗದ ಬೆಳವಣಿಗೆ. ಎಲ್‍ಡಿಎಫ್ ನಿರ್ಗಮಿಸಿ ತಾನು ಅಧಿಕಾರಕ್ಕೆ ಬರುವ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಕನಸು ಕೂಡಾ ನುಚ್ಚು ನೂರಾಗಿರುವುದು ಆ ಪಕ್ಷದ ಸಂಕಟ. ಎಲ್‍ಡಿಎಫ್ ಸರ್ಕಾರಕ್ಕೆ ರಾಜ್ಯಪಾಲ ಆರಿಫ್ ಮೊಹಮದ್ ಖಾನ್ ನೀಡುತ್ತಿದ್ದಾರೆ ಎನ್ನಲಾದ “ಕಿರುಕುಳ” ಸ್ವತಃ ಕಾಂಗ್ರೆಸ್‍ಗೆ ಒಳಗೊಳಗೇ ಖುಷಿ ತಂದಿರುವ ಬೆಳವಣಿಗೆ. ಕೇರಳದಲ್ಲಿ ರಾಜ್ಯಪಾಲರು ನಿತ್ಯವೂ ಅನಗತ್ಯವೂ ಆಗಿರುವ ಸುದ್ದಿ ಜನಕರೆನಿಸಿರುವುದು ವಿಪರ್ಯಾಸ. ಆಯಾ ರಾಜ್ಯದ ವಿಶ್ವ ವಿದ್ಯಾಲಯಗಳಿಗೆ ಆಯಾ ರಾಜ್ಯದ ರಾಜ್ಯಪಾಲರೇ ಕುಲಾಧಿಪತಿಗಳಾಗಿ ಕಾರ್ಯ ನಿರ್ವಹಿಸುವುದು ಸಾಮಾನ್ಯ. ಎಷ್ಟೋ ರಾಜ್ಯಗಳು ಸಾಮಾನ್ಯ ಎನ್ನುವ ನಿಯಮಕ್ಕೆ ತಿದ್ದುಪಡಿ ತಂದಿವೆ. ಕುಲಪತಿ ನೇಮಕ, ಸಿಂಡಿಕೇಟ್, ಸೆನೆಟ್ ಸದಸ್ಯರ ನೇಮಕ, ನಾಮಕರಣ, ಗೌರವ ಡಾಕ್ಟರೇಟ್ ನೀಡಿಕೆಯೇ ಮುಂತಾದ ಹತ್ತು ಹಲವು ಅಧಿಕಾರ ರಾಜ್ಯಪಾಲರ ಕೈಯಲ್ಲಿದೆ. ಆದರೆ ಈ ಅಧಿಕಾರವನ್ನು ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ತನ್ನ ಕೈವಶ ಮಾಡಿಕೊಳ್ಳುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ. ಕುಲಾಧಿಪತಿಯ ಅಧಿಕಾರ ಮೊಟಕುಗೊಳಿಸುವ ಕೇರಳ ಸರ್ಕಾರದ ತೀರ್ಮಾನ ರಾಜ್ಯಪಾಲ ಆರಿಫ್ ಮೊಹಮದ್ ಖಾನ್‍ರು ಕೆಂಡದ ಮೇಲೆ ಕುಣಿಯುವಂತೆ ಮಾಡಿದೆ.
ಇದನ್ನೂ ಓದಿ | ಮೊಗಸಾಲೆ ಅಂಕಣ | ʼಆರೆಸ್ಸೆಸ್ ಮುಳ್ಳುʼ ತೆಗೆಯಲು ʼಸಿಪಿಎಂ ಮುಳ್ಳುʼ | ಮಾರ್ಕ್ಸ್‌ವಾದಿ ಮುಖಂಡ ಪ್ರಕಾಶ್ ಕಾರಟ್ ವರಸೆ
ಗುಜರಾತ್‍ನಲ್ಲಿ 2013ರಲ್ಲಿ ವಿಶ್ವ ವಿದ್ಯಾಲಯ ಕಾಯ್ದೆಗೆ ತಿದ್ದುಪಡಿ ತಂದು ರಾಜ್ಯಪಾಲರ ವಿಶೇಷಾಧಿಕಾರಕ್ಕೆ ಕೊಕ್ಕೆ ಹಾಕಲಾಯಿತು. ಆಗ ಆ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಆಗಿದ್ದವರು ಪ್ರಧಾನಿ ನರೇಂದ್ರ ಮೋದಿ. ಗುಜರಾತದಲ್ಲಿ ಕಾಯ್ದೆಗೆ ತಿದ್ದುಪಡಿ ತಂದ ರೀತಿ ಕೇರಳ ಸರ್ಕಾರಕ್ಕೆ ಮಾದರಿಯಾಗಿದ್ದರೆ “ಕೇಂದ್ರದ ಪ್ರತಿನಿಧಿ” ಆಗಿರುವ ರಾಜ್ಯಪಾಲರಿಗೆ ಕಿರಿಕಿರಿಯಾಗುವ ಪ್ರಶ್ನೆಯೇ ಉದ್ಭವಿಸಬಾರದು. ಆದರೆ ಆರಿಫ್ ಮೊಹಮದ್ ಖಾನ್ ಸಾಹೇಬರು ಯೋಚಿಸುತ್ತಿರುವುದೇ ಬೇರೆ. ಇದು ಕರ್ನಾಟಕದ ಕಥೆಯೂ ಹೌದು. ಇಲ್ಲಿ ಬಿಜೆಪಿ ಸರ್ಕಾರವಿದೆ. ಥಾವರ್‌ಚಂದ್ ಗೆಹ್ಲೋಟ್ ರಾಜಭವನಕ್ಕೆ ಬರುವ ಪೂರ್ವದಲ್ಲಿ ವಜುಭಾಯಿ ರುಢಾಭಾಯಿ ವಾಲಾ ರಾಜ್ಯಪಾಲರಾಗಿದ್ದರು. 2018ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನವಿತ್ತಾದರೂ ಬಹುಮತವಿರಲಿಲ್ಲ. ಜೆಡಿಎಸ್-ಕಾಂಗ್ರೆಸ್ ಒಂದಾಗಿ ಸರ್ಕಾರ ರಚಿಸಿದವು. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದರೂ ಇಪ್ಪತ್ತೇ ತಿಂಗಳಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಶಾಸಕಾಂಗ ಪಕ್ಷದ ಹದಿನೇಳು ಶಾಸಕರು ರಾಜೀನಾಮೆ ನೀಡಿ ಸರ್ಕಾರ ಉರುಳುವಂತೆ ಮಾಡಿದರು. ಆ ಸಂದರ್ಭದಲ್ಲಿ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಅಮಲಿಗೆ ತರುವ ನಿಟ್ಟಿನಲ್ಲಿ ದೊಡ್ಡ ಹಂಗಾಮವೇ ನಡೆದುಹೋಯಿತು. ರಾಜ್ಯಪಾಲರು, ಬಿಜೆಪಿ ಪರವಾಗಿ ನಿಂತ ಆರೋಪಕ್ಕೆ ಗುರಿಯಾದರು.
ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾದರು. ಆ ಸಮಯದಲ್ಲಿ ವಿಶ್ವ ವಿದ್ಯಾಲಯ ಕಾಯ್ದೆಗೆ ತಿದ್ದುಪಡಿ ತಂದು ರಾಜ್ಯಪಾಲರ ಅಧಿಕಾರವನ್ನು ಮೊಟಕುಗೊಳಿಸುವ ಯತ್ನ ನಡೆಯಿತು. ಆ ಕಾಯ್ದೆಗೆ ರೂಡಾವಾಲಾ ಸಹಿ ಮಾಡಲಿಲ್ಲ. ಆಡಳಿತಾರೂಢ ಬಿಜೆಪಿ ಅದನ್ನು ಹಾದಿಬೀದಿಗೆ ತರಲಿಲ್ಲ, ರಾಜ್ಯಪಾಲರೂ ಕೇರಳದ ರಾಜ್ಯಪಾಲರಂತೆ ಹಾದಿಬೀದಿ ರಂಪಾಟಕ್ಕೆ ಇಳಿಯಲಿಲ್ಲ. ಏಕೆಂದರೆ ರಾಜ್ಯಪಾಲರು ಬಿಜೆಪಿ ಸರ್ಕಾರದಿಂದ ನಿಯುಕ್ತರಾದವರು. ಇನ್ನು ಸರ್ಕಾರ, ಸ್ವತಃ ಬಿಜೆಪಿಯದೇ.
ಕೇರಳದಲ್ಲಿ ರಾಜ್ಯಪಾಲರೊಂದಿಗೆ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಅವರ ಸಂಪುಟ ಸಚಿವರ ಸಂಘರ್ಷಕ್ಕೆ ಒಂದು ಕೊನೆಯೇ ಇಲ್ಲ ಎಂದು ರಾಜ್ಯ/ದೇಶದ ಜನ ಭಾವಿಸುವಂತಾಗಿದೆ. ಆ ರಾಜ್ಯ ಸರ್ಕಾರದ ವಕ್ತಾರರ ಪ್ರಕಾರ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರದ ಆಣತಿಯಂತೆ ಕಮ್ಯೂನಿಸ್ಟ್ ಸರ್ಕಾರಕ್ಕೆ ನಿತ್ಯ ಕಿರುಕುಳ ನೀಡುವುದನ್ನು ರಾಜ್ಯಪಾಲ ಆರಿಫ್ ಮೊಹಮದ್ ಖಾನ್ ರೂಢಿ ಮಾಡಿಕೊಂಡಿದ್ದಾರೆ. ಹಾಗೆ ನೋಡಿದರೆ ರಾಜ್ಯಪಾಲರ ಸ್ಥಾನವನ್ನು ದುರುಪಯೋಗ ಪಡಿಸಿಕೊಳ್ಳುವ ಕೇಂದ್ರದ ಕಥೆ ಶುರುವಾಗುವುದು ಐವತ್ತರ ದಶಕದಲ್ಲಿ, ಅದೂ ಕೇರಳದಿಂದಲೇ ಶುರುವಾಗಿದ್ದು. ಜಗತ್ತಿನಲ್ಲಿ ಮೊತ್ತ ಮೊದಲಿಗೆ ಪಾರ್ಲಿಮೆಂಟರಿ ಪ್ರಜಾಪ್ರಭುತ್ವಕ್ಕೆ ಅನುಗುಣವಾಗಿ ಜನರಿಂದ ಚುನಾಯಿತವಾದ ಕಮ್ಯೂನಿಸ್ಟ್ ಸರ್ಕಾರ ಕೇರಳದ್ದಾಗಿತ್ತು. ಆದರೆ “ಅಪ್ಪಟ ಪ್ರಜಾಪ್ರಭುತ್ವವಾದಿ” ಎಂದು ಹೊಗಳಿಸಿಕೊಂಡ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರಿಗೆ “ಕಮ್ಯೂನಿಸ್ಟರದು ದೇಶದ್ರೋಹಿ ಸರ್ಕಾರವಾಗಿತ್ತು”. ಸಂವಿಧಾನವನ್ನು ದುರುಪಯೋಗಪಡಿಸಿಕೊಂಡು ಆ ಸರ್ಕಾರವನ್ನು ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಿದರು. ಈ ಕೆಲಸದಲ್ಲಿ ಘಳಿಗೆಯೂ ನಷ್ಟ ಆಗದಂತೆ ತಮ್ಮ ತಂದೆಯ ಮೇಲೆ ಒತ್ತಡ ಹೇರಿದ್ದು ಅಂದಿನ ಏಐಸಿಸಿ ಅಧ್ಯಕ್ಷೆ ಇಂದಿರಾ ಗಾಂಧಿ. ತಾವೇ ಪ್ರಧಾನಿಯಾದ ಬಳಿಕವಂತೂ ಇಂದಿರಾ ಗಾಂಧಿಯವರು ತಮಗೆ ಆಗದ ರಾಜ್ಯ ಸರ್ಕಾರಗಳನ್ನು ಒಂದರ ಬಳಿಕ ಒಂದರಂತೆ ವಜಾಗೊಳಿಸಿ ಗಿನ್ನಿಸ್ ದಾಖಲೆಗೆ ಸೇರಬಹುದಾದ “ಸಂವಿಧಾನ ವಿರೋಧಿ” ಕೃತ್ಯಗಳ ಸರಮಾಲೆಗೆ ಕಾರಣರಾದರು.
ಇದನ್ನೂ ಓದಿ | ಮೊಗಸಾಲೆ ಅಂಕಣ | ಕರ್ನಾಟಕದ ಪ್ರಾದೇಶಿಕ ಪಕ್ಷಗಳು ಮಣ್ಣು ಮುಕ್ಕಿದ ಇತಿಹಾಸ
ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಸರ್ಕಾರವನ್ನು ಹಣಿಯುವುದೇ ಮುಖ್ಯ ಅಜೆಂಡಾವಾಗಿದ್ದ ರಾಜ್ಯಪಾಲ ಜಗದೀಪ ಧನಕರ್ ಈಗ ಉಪರಾಷ್ಟ್ರಪತಿ ಆಗಿದ್ದಾರೆ. ಕೋಲ್ಕೊತ್ತಾದ ರಾಜಭವನದಲ್ಲಿ ಅವರು ಇದ್ದಷ್ಟೂ ಕಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ರಾಜ್ಯಪಾಲರ ನಡುವೆ ನಿತ್ಯ ಸಂಘರ್ಷ ಸಾಮಾನ್ಯ ಎನ್ನುವಂತಾಗಿತ್ತು. ಪಶ್ಚಿಮ ಬಂಗಾಳಾ ವಿಧಾನ ಸಭೆಗೆ ಚುನಾವಣೆ ನಡೆದ ತರುವಾಯದಲ್ಲಿ ಸಾವು ನೋವಿಗೆ ಕಾರಣವಾದ ಬ್ರಹ್ಮಾಂಡ ಹಿಂಸಾಚಾರ ಆ ರಾಜ್ಯದಲ್ಲಿ ನಡೆಯಿತು. ಅದನ್ನು ಪ್ರಸ್ತಾಪ ಮಾಡಿದ್ದೇ ಮಮತಾ ಪ್ರಕಾರ ರಾಜ್ಯಪಾಲರು ಮಾಡಿದ ತಪ್ಪು. ಸ್ವತಂತ್ರ ಸಂಸ್ಥೆಯೊಂದು ವಾಸ್ತವಾಂಶ ವರದಿ ಸಲ್ಲಿಸುವವರೆಗೂ ರಾಜ್ಯದಲ್ಲಿ ಹಿಂಸಾಚಾರ ನಡೆದೇ ಇಲ್ಲ ಎನ್ನುವುದು ಮಮತಾ ವಾದವಾಗಿತ್ತು. ಅಷ್ಟೇನೂ ಮಹತ್ವದ್ದಲ್ಲದ ಸಣ್ಣಪುಟ್ಟ ಸಂಗತಿಗಳನ್ನು ಮುಂದಿಟ್ಟುಕೊಂಡು ಕಿರಿಕಿರಿ ಮಾಡುವ ಪ್ರವೃತ್ತಿಯನ್ನು ರಾಜ್ಯಪಾಲರು ಬೆಳೆಸಿಕೊಂಡಿದ್ದಾರೆಂಬ ವಾದ ಮಮತಾರದು.
ಕೇರಳದಲ್ಲಿ ರಾಜ್ಯಪಾಲರೊಂದಿಗೆ ಕಾಂಗ್ರೆಸ್ ನೇತೃತ್ವದ ಒಕ್ಕೂಟ ಎಲ್‍ಡಿಎಫ್ ನಿಂತಿರುವಂತೆ ಕೋಲ್ಕೋತ್ತಾದಲ್ಲಿ ಆಡಳಿತ ಪಕ್ಷದ ವಿರೋಧಿಗಳು ರಾಜ್ಯಪಾಲ ಜಗದೀಪ ಧನಕರ್ ಜೊತೆ ನಿಂತಿಲ್ಲ ಎಂಬುದು ಗಮನಾರ್ಹ. ತೃಣಮೂಲ ಕಾಂಗ್ರೆಸ್ಸನ್ನು ನಖಶಿಖಾಂತ ದ್ವೇಷಿಸುವ ಕಮ್ಯೂನಿಸ್ಟ್ ಮತ್ತು ಕಾಂಗ್ರೆಸ್ ಪಕ್ಷಗಳು ರಾಜ್ಯಪಾಲರ ವಿರುದ್ಧ ಮಮತಾ ಸಾರಿರುವ ಯುದ್ಧದಲ್ಲಿ ಕೈಜೋಡಿಸಿದರು. ಜಗದೀಪ ದೆಹಲಿಗೆ ತೆರಳಿ ಉಪರಾಷ್ಟ್ರಪತಿ ಭವನದಲ್ಲಿ ನೆಲೆಕಂಡುಕೊಂಡ ಬಳಿಕ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ನೇಮಕವಾದವರು ಸಿ.ವಿ. ಆನಂದ ಬೋಸ್. ಜಗದೀಪ ಶುರು ಮಾಡಿದ್ದ ಕೆಲಸವನ್ನು ಬೋಸ್ ಮುಂದುವರಿಸಿದ್ದಾರೆ ಎನ್ನುವುದು ಆಡಳಿತ ಪಕ್ಷದ ಕೊರಗು.
ತೆಲಂಗಾಣದಲ್ಲಿ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಅವರ ನಿದ್ರೆಗೆಡಿಸಿರುವ ರಾಜ್ಯಪಾಲರಾದ ತಮಿಳ್‍ಸಾಯಿ ಸೌಂದರರಾಜನ್ ಪುದುಚೇರಿಗೆ ಲೆಫ್ಟಿನೆಂಟ್ ಗೌರ್ನರ್ ಕೂಡಾ. ತೆಲಂಗಾಣ ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೆರಿಯ ಆಡಳಿತದಲ್ಲಿ ನಿತ್ಯ ಹಸ್ತಕ್ಷೇಪ ಮಾಡುತ್ತಿರುವ ಆರೋಪ ತಮಿಳ್‍ಸಾಯಿ ಅವರ ಮೇಲಿದೆ. ಎರಡೂ ರಾಜ್ಯಗಳಲ್ಲಿ ರಾಜ್ಯಪಾಲರ ಅಜೆಂಡಾ ಗುಟ್ಟಿನ ಸಂಗತಿಯಾಗಿಲ್ಲ. ಪುದುಚೆರಿಗೆ ಈ ಮೊದಲು ಲೆಫ್ಟಿನೆಂಟ್ ಗೌರ್ನರ್ ಆಗಿದ್ದವರು ಐಪಿಎಸ್ ಅಧಿಕಾರಿಯಾಗಿದ್ದ ಕಿರಣ್ ಬೇಡಿ. ಅವರು ಪೊಲೀಸ್ ಅಧಿಕಾರಿಯಾಗಿ ದೆಹಲಿಯ ತಿಹಾರ್ ಜೈಲಿಗೆ ಒಂದು ಸವರೂಪ ತಂದ ಖ್ಯಾತಿ ಹೊಂದಿದ್ದಾರೆ. ಆದರೆ ಪುದುಚೆರಿ ಆಡಳಿತದಲ್ಲಿ ಅವರ ಹಸ್ತಕ್ಷೇಪ, ಅವರನ್ನು ನೇಮಿಸಿದ ಕೇಂದ್ರ ಸರ್ಕಾರಕ್ಕೇ ಮುಜುಗರ ತಂದು ಅವರನ್ನು ಬದಲಿಸಿದ್ದು ಒಂದು ದೊಡ್ಡ ಕಥೆಯನ್ನೇ ಹೇಳುತ್ತದೆ.
ಇದನ್ನೂ ಓದಿ | ಮೊಗಸಾಲೆ ಅಂಕಣ | ಗಡಿ ತಂಟೆ: ಕೇಂದ್ರದ ತಾರಮ್ಮಯ್ಯ ನೀತಿಯ ಫಲ
ಅತ್ತ ಜಾರ್ಖಂಡ್ ರಾಜ್ಯದಲ್ಲೂ ಮುಖ್ಯಮಂತ್ರಿ ಹೇಮಂತ್ ಸೋರೆನ್ ಮತ್ತು ರಾಜ್ಯಪಾಲ ರಮೇಶ್ ಬಾಯಿಸ್ ನಿತ್ಯ ಜಟಾಪಟಿ ನಡೆಸಿದ್ದಾರೆ. ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸುವ ಜನತಂತ್ರ ವಿರೋಧಿ ಕೆಲಸವನ್ನು ಮಾಡುತ್ತಿರುವ ಆರೋಪ ರಾಜ್ಯಪಾಲರ ತಲೆಗೆ ಮೆತ್ತಿಕೊಂಡಿದೆ. ಕೇಂದ್ರ ರಾಜ್ಯ ಸಂಬಂಧ ಹೀಗೆ ಹದಗೆಡುವುದು ಸಲ್ಲಕ್ಷಣ ಅಲ್ಲ. ರಾಜ್ಯಪಾಲರ ಆಯ್ಕೆ, ನೇಮಕ, ವರ್ಗಾವಣೆ ಮುಂತಾದವು ನೇರವಾಗಿ ಕೇಂದ್ರ ಗೃಹ ಸಚಿವರ ವ್ಯಾಪ್ತಿಗೆ ಬರುತ್ತದೆ. ವಿರೋಧ ಪಕ್ಷದ ಸರ್ಕಾರವಿರುವ ರಾಜ್ಯಗಳಲ್ಲಿ ರಾಜ್ಯಪಾಲರು ಮಾಡುತ್ತಿರುವ ಕಿತಾಪತಿ ಕಿರಿಕಿರಿಗಳಿಗೆ ಗೃಹ ಸಚಿವ ಅಮಿತ್ ಶಾ ನೇರ ಬೆಂಬಲವಾಗಿ ನಿಂತಿದ್ದಾರೆಂಬ ಆರೋಪವೂ ಇದೆ. ಸಬ್ ಕಾ ಸಾಥ್ ಸಬ್ ಕಾ ವಿಕಸ್ ಎನ್ನುವ ಪ್ರಧಾನಿ ಮೋದಿಯವರು ಕೂಡಾ ಶಾ ನಿಲುವಿನಲ್ಲಿ ಶಾಮೀಲಾಗಿರಬಹುದು ಎಂಬ ಅನುಮಾನ ವಿರೋಧ ಪಕ್ಷಗಳಲ್ಲಿದೆ. ಪ್ರಧಾನಿಯದವರು ಅನುಮಾನ ಹುಟ್ಟಿಸುವ ಯಾವುದೇ ಸ್ವರೂಪದ ಕ್ರಿಯೆಗೆ ಕಾರಣವಾಗಬಾರದು ಎನ್ನುವುದು ಜನತಂತ್ರದ ಆಶಯ.