ಕರ್ನಾಟಕ ವಿಧಾನ ಸಭೆಗೆ ಹದಿನಾರನೇ ಚುನಾವಣೆ (karnataka election 2023) ಸಮೀಪಿಸಿದ್ದು ಅದರ ಸದ್ದುಗದ್ದಲ ಎಲ್ಲ ಎಲ್ಲೆಯನ್ನೂ ಮೀರಿ, ಎಲ್ಲ ಮರ್ಯಾದಾ ಮಿತಿಯನ್ನೂ ಬದಿಗೊತ್ತಿ ಮತದಾರರನ್ನು ಬೆಕ್ಕಸ ಬೆರಗಿನ ಮಡುವಿಗೆ ನೂಕಿದೆ. ಈ ಹಿಂದಿನ ಹಲವು ಚುನಾವಣೆಗಳನ್ನೂ ಅವು ನಡೆದ ರೀತಿಯನ್ನೂ ನೋಡಿರುವ ಅನೇಕ ಮಂದಿ ಅಜ್ಜ ಅಜ್ಜಿಯರು ನಮ್ಮ ನಡುವೆ ಈ ಬಾರಿಯೂ ಓಟು ಹಾಕುವ ಸಡಗರದಲ್ಲಿದ್ದಾರೆ. ಚುನಾವಣೆಯೆಂದರೆ ಮತದಾನ ಮಾತ್ರವೇ ಆಗಿರುತ್ತಿದ್ದ ಆ ದಿನಗಳಿಗೂ ಈ ಹೊತ್ತು ಅದು ನಡೆದಿರುವ ರೀತಿಗೂ ತಾಳಮೇಳವೇ ಇಲ್ಲದ ಸ್ಥಿತಿಯಲ್ಲಿ ಹಳೆಯದನ್ನು ಮೆಲುಕು ಹಾಕುತ್ತ ರಾಜಕಾರಣದಲ್ಲಿ ಮಕ್ಕಳ ಮೊಮ್ಮಕ್ಕಳ ಹಿತ ಅರಸುತ್ತ ಅವರೆಲ್ಲ ಮತಗಟ್ಟೆಯತ್ತ ದೊಣ್ಣೆಯೂರುತ್ತ ಹೆಜ್ಜೆ ಹಾಕಲಿದ್ದಾರೆ. ಚುನಾವಣೆಯೊಂದು ಹೀಗೂ ನಡೆಯಬಹುದೆ ಎಂಬ ಅಚ್ಚರಿ ಅವರೆಲ್ಲರ ನೊಸಲ ಗೆರೆಗಳನ್ನು ಇಮ್ಮಡಿಗೊಳಿಸಿದೆ.
ಸಂಕೋಚ ಪ್ರವೃತ್ತಿಯವರು, ಮಾನ-ಮರ್ಯಾದೆಗೆ ಅಂಜುವವರು, ತಮ್ಮತ್ತ ಬೆರಳು ತೋರಿ ಆಕ್ಷೇಪ ಮಾಡಬಾರದೆಂದು ಜಾಗೃತೆ ವಹಿಸುತ್ತಿದ್ದವರು, ಧನ ಬಲ, ಜಾತಿಬಲ, ತೋಳ್ಬಲ ಚುನಾವಣೆ ಸರಕಲ್ಲ ಎಂದು ಭಾವಿಸಿದ್ದ ಪೀಳಿಗೆ ಪಾಲ್ಗೊಂಡ ಆ ಚುನಾವಣೆಗಳಲ್ಲಿ ಸಭ್ಯತೆಯ ಸರಹದ್ದು ಲಕ್ಷ್ಮಣ ರೇಖೆಯಂತೆ ಕೆಲಸ ಮಾಡುತ್ತಿದ್ದುದನ್ನು ಕಂಡವರ ಅಚ್ಚರಿಗೆ, ದಿಗ್ಭ್ರಮೆಗೆ ಈಗ ನಡೆಯುವ ಚುನಾವಣೆಗಳು ಸಾಕಷ್ಟು ಗಾಬರಿಗೆ ಗ್ರಾಸವೊದಗಿಸುತ್ತಿವೆ. ಈ ಮಾತು ಪ್ರಸ್ತುತ ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಹೆಚ್ಚು ನಿಜವಾಗಿದೆ.
ರಾಜ್ಯ ರಾಜಕಾರಣದ ಜುಟ್ಟು ಜನಿವಾರ ಹಿಡಿದು ಅಬ್ಬೆಪಾರಿ ಮತದಾರರೊಂದಿಗೆ ಆಟ ಆಡುತ್ತಿರುವ ಬಿಜೆಪಿ, ಕಾಂಗ್ರೆಸ್, ಜೆಡಿಎಸ್- ಈ ಮೂರೂ ಪಕ್ಷಗಳು ಟಿಕೆಟ್ ಕೊಡುವಾಗ ಮುಂದಿಟ್ಟುಕೊಂಡ ಮಾನದಂಡ ಅಭ್ಯರ್ಥಿಗೆ ಇರುವ ಧನ ಬಲ, ಜಾತಿ ಬಲ, ತೋಳ್ಬಲದ ಸಾಮರ್ಥ್ಯ. ಟಿಕೆಟ್ ಆಯ್ಕೆ ಪ್ರಕ್ರಿಯೆಯಲ್ಲಿ ಯಾವೆಲ್ಲ ಅಂಶಗಳು ಮಾನದಂಡವಾಗಿ ಮೇಲುಗೈ ಪಡೆಯುತ್ತವೆಯೋ ಅವೇ ಅವೇ ಮಾನದಂಡ ಚುನಾವಣೆ ದಿವಸ ಮತದಾನ ಪ್ರಕ್ರಿಯೆ ಮುಕ್ತಾಯವಾಯಿತೆಂದು ಚುನಾವಣಾ ಆಯೋಗ (election commission) ಘೋಷಿಸುವ ತನಕವೂ ಜೀವಂತವಿದ್ದು ಕರಾಮತ್ತು ನಡೆಸಿರುತ್ತದೆ.
ಚುನಾವಣಾ ಭ್ರಷ್ಟಾಚಾರವನ್ನು (corruption) ನಿಗ್ರಹಿಸುವ ಪರಮಾಧಿಕಾರವನ್ನು ಏಳೂವರೆ ದಶಕದ ಬಳಿಕವೂ ಸಂಸತ್ತು ಚುನಾವಣಾ ಆಯೋಗಕ್ಕೆ ನೀಡಿಲ್ಲ. ಇಲ್ಲಿ ಕೆಲವು ನಿದರ್ಶನ ನೋಡೋಣ. ಚುನಾವಣೆಗೆ ಸ್ಪರ್ಧಿಸುವ ಪ್ರತಿಯೊಬ್ಬ ಅಭ್ಯರ್ಥಿಯೂ ತನ್ನ ಕುಟುಂಬದ ಆದಾಯವನ್ನು ಸ್ಥಿರಾಸ್ತಿ ಚರಾಸ್ತಿ ಒಳಗೊಂಡು ಸಕಲ ಸಂಪತ್ತಿನ ನಿಶ್ಚಿತ ಠೇವಣಿ, ಬಾಂಡ್‍ಗಳಲ್ಲಿ ಹೂಡಿರುವ ಮೊತ್ತ, ಸಾಲದ ಸಾದ್ಯಂತ ವಿವರವನ್ನು ನಾಮಪತ್ರದೊಂದಿಗೆ ಸಲ್ಲಿಸುವುದು ಕಡ್ಡಾಯ. ಇದನ್ನು ಅಭ್ಯರ್ಥಿಗಳು ತಪ್ಪದೆ ಪಾಲಿಸಿಕೊಂಡು ಬಂದಿದ್ದಾರೆ. ಯಾರೊಬ್ಬರೂ ವಿವರ ಸಲ್ಲಿಸುವುದಕ್ಕೆ ತಕರಾರು ಮಾಡಿದ್ದು ವರದಿಯಾಗಿಲ್ಲ. ಇಲ್ಲವೇ ಇಂಥವರೊಬ್ಬರು ಕ್ಯಾತೆ ತೆಗೆದಿದ್ದಾರೆಂದು ಆಯೋಗ ಬಹಿರಂಗಪಡಿಸಿಲ್ಲ.
ಆದರೆ ಇದೊಂದು ಬಗೆಯಲ್ಲಿ ತೌಡು ಕುಟ್ಟುವ ಪ್ರಕ್ರಿಯೆ. ಜನರ ಕಣ್ಣಿಗೆ ಮಣ್ಣೆರಚುವ ತಂತ್ರಗಾರಿಕೆ. ಇದರಲ್ಲಿ ಚುನಾವಣಾ ಆಯೋಗದ ಕಡೆಯಿಂದ ತಿಲಮಾತ್ರವೂ ತಪ್ಪಿಲ್ಲ. ನಾವು ಮತದಾರರು ಮೆಚ್ಚಿ ನೆಚ್ಚಿ ಆಯ್ಕೆ ಮಾಡಿ ಕಳಿಸಿರುವ ನಮ್ಮವರೇ ಆದ ಜನ ಪ್ರತಿನಿಧಿಗಳು ತುಂಬಿರುವ ಸಂಸತ್ತು ರೂಪಿಸಿರುವ ಕಾಯ್ದೆ ಕಾನೂನು ಚುನಾವಣಾ ಆಯೋಗಕ್ಕೆ ಕೊಟ್ಟಿರುವ ಅಧಿಕಾರವೆಂದರೆ ನಾಮಪತ್ರದೊಂದಿಗೆ ಸಂಪತ್ತಿನ ವಿವರವನ್ನು ಕಡ್ಡಾಯವಾಗಿ ಪಡೆಯಬೇಕೆಂಬುದು ಮಾತ್ರ. ಅಭ್ಯರ್ಥಿಗಳ ಸಂಪತ್ತಿನ ವಿವರ ಮಾಧ್ಯಮಗಳ ಕಾರಣವಾಗಿ ಬಟಾಬಯಲಾಗುತ್ತದೆ. ಅವನಲ್ಲಿ/ಅವಳಲ್ಲಿ ಇಷ್ಟು ದುಡ್ಡಿದೆ; ಅವನು/ಅವಳು ಅಷ್ಟೆಲ್ಲ ಸಂಪತ್ತಿಗೆ ವಾರಸುದಾರರು ಎಂದು ಜನ ಪರಸ್ಪರ ಮಾತಾಡಿಕೊಳ್ಳುವ ಹೊತ್ತಿಗೆ ಮತದಾನ ಪ್ರಕ್ರಿಯೆ ಮುಗಿಯುತ್ತದೆ. ನದಿ ದಾಟಿಸಿದ ಅಂಬಿಗನನ್ನು ಮರೆಯುವಂತೆ ಗೆಲ್ಲಿಸಿದ ಮತದಾರರನ್ನು ಆಯ್ಕೆಯಾದ ಬಹುತೇಕರು ಮರೆಯುವ ಪರಂಪರೆ ನಮ್ಮದು. ಜನರಿಗೂ ಅದರಿಂದ ಬೇಸರವಿಲ್ಲ. ಮತ್ತೊಂದು ಚುನಾವಣೆವರೆಗೆ ಗೆದ್ದ ಅಥವಾ ಸೋತವರ ಸಂಪತ್ತಿನ ವಿವರ ಚರ್ಚೆಗೆ ಬರುವುದೇ ಇಲ್ಲ.
ಮುಂದಿನ ಚುನಾವಣೆ ಘೋಷಣೆಯಾದಾಗ ಇದೇ ಪ್ರಹಸನದ ಪುನರಾವರ್ತನೆಯಾಗುತ್ತದೆ. ಅಭ್ಯರ್ಥಿಗಳು ನಾಮಪತ್ರದೊಂದಿಗೆ ಆ ಸಂದರ್ಭದಲ್ಲಿ ತಾವು ತಮ್ಮ ಕುಟುಂಬ ಹೊಂದಿರುವ ಆಸ್ತಿಪಾಸ್ತಿ ಸಂಪತ್ತಿನ ವಿವರ ಸಲ್ಲಿಸುತ್ತಾರೆ. ಜನ ಹೌಹಾರುತ್ತಾರೆ. ಆಯ್ಕೆಯಾದ ಹಲವರ ಸಂಪತ್ತು ಪ್ರತಿಶತ 200-300ರಷ್ಟು ಹೆಚ್ಚಿರುತ್ತದೆ. ( ಈ ಬಾರಿಯ ಈ ವಿವರಗಳ ಮೇಲೆ ಒಮ್ಮೆ ಕಣ್ಣಾಡಿಸಿದರೆ ಸಂಪತ್ತಿನ ಏರಿಕೆ ರಾಕೆಟ್ ವೇಗದಲ್ಲಿ ಚಿಮ್ಮಿರುವುದರ ದರ್ಶನವಾಗುತ್ತದೆ). ಸೋತವರ ಸಂಪತ್ತಿನಲ್ಲೂ ಗಮನಾರ್ಹ ಏರಿಕೆ ಇರುತ್ತದೆ. ರಾಜಕೀಯವೆಂದರೆ ಇಷ್ಟೆಲ್ಲ ಸಂಪಾದಿಸಬಹುದಾದ ಸುಲಭದ ವ್ಯಾಪಾರ ಎಂಬ ಸಹಜ ಜಿಜ್ಞಾಸೆ ನಡೆಯುತ್ತದೆ. ಇಷ್ಟೆಲ್ಲ ಮಾಡ್ತಾರಲ್ಲ, ಚುನಾವಣಾ ಆಯೋಗ ಏನು ಮಾಡುತ್ತಿದೆ, ಕತ್ತೆ ಕಾಯ್ತಾ ಇದೆಯಾ…? ಎಂಬ ಆಕ್ರೋಶದ ಮಾತು ಅಲ್ಲಿ ಇಲ್ಲಿ ಕೇಳಿಬರುತ್ತದೆ. ಈ ಆಕ್ಷೇಪಿಸುವವರ ನಡವಳಿಕೆಯಲ್ಲಿ ತಪ್ಪಿಲ್ಲ, ಏಕೆಂದರೆ ವಾಸ್ತವದ ಅರಿವು ಅವರಲ್ಲಿಲ್ಲ.
ಚುನಾವಣಾ ಆಯೋಗಕ್ಕೆ ಪ್ರತೀ ಅಭ್ಯರ್ಥಿಯ ಸಂಪತ್ತಿನ ವಿವರ ಪಡೆಯುವ ಅಧಿಕಾರವಿದೆಯೇ ಹೊರತೂ ಇಷ್ಟೆಲ್ಲ ಅಗಾಧ ಮೊತ್ತದ ಸಂಪತ್ತು ಕ್ರೋಡೀಕರಣಗೊಂಡ ಬಗೆ ಹೇಗೆ ಎಂದು ಕೇಳುವ ಕಾನೂನಾತ್ಮಕ ಅಧಿಕಾರವಿಲ್ಲ. ಆ ಸಂಪತ್ತು ಸಹಜ ಸಂಪಾದನೆ ಮಾರ್ಗದಲ್ಲಿ ಬಂದಿದ್ದಲ್ಲ ಎನ್ನುವುದು ಜನ ಊಹಿಸುವಂತೆ ಚುನಾವಣಾ ಆಯೋಗವೂ ಮನಗಂಡಿರುತ್ತದೆ. ಶಿಕ್ಷಿಸುವ ಅಧಿಕಾರವನ್ನು ಸಂಸತ್ತು ಅದಕ್ಕೆ ಕೊಟ್ಟಿಲ್ಲ. ಹಾಗಾಗಿ ಆಯೋಗ ಜನ ಆಡಿಕೊಳ್ಳುವಂತೆಯೇ ಸುಮ್ಮನಿರುತ್ತದೆ. ಈ ವಿಪರೀತಕ್ಕೆ ಯಾರನ್ನು ದೂಷಿಸಬೇಕು…? ಆಯೋಗವನ್ನೋ ಸಂಸತ್ತನ್ನೋ…? ವಿವೇಕದಲ್ಲಿ ಜನ ತೀರ್ಮಾನಿಸಬೇಕು.
ಇದನ್ನೂ ಓದಿ: ಮೊಗಸಾಲೆ ಅಂಕಣ: ನಿಚ್ಚಳ ಬಹುಮತ ಮರೀಚಿಕೆ; ನಡೆದಿದೆ ಹೊಸ ಹೊಸ ಹಂಚಿಕೆ
ಟೀಕೆ ವ್ಯಾಪಕವಾದ ಸಂದರ್ಭ ಸನ್ನಿವೇಶಗಳಲ್ಲಿ ಸರ್ಕಾರದ ಕಡೆಯಿಂದ ವಿವರಣೆ ಇರುತ್ತದೆ. ಸಂಪತ್ತು ಶೇಖರವಾದ ರೀತಿ ಅಕ್ರಮವೋ ಸಕ್ರಮವೋ ಎನ್ನುವುದನ್ನು ನೋಡುವುದಕ್ಕೆ ಅಕ್ರಮ ನಡೆದಿರುವುದು ಖಚಿತವಾದಲ್ಲಿ ಕಾನೂನು ಕ್ರಮ ಜರುಗಿಸುವುದಕ್ಕೆ ಆದಾಯ ತೆರಿಗೆ ಇಲಾಖೆ ಇದೆ. ಅಕ್ರಮ ಸಂಪತ್ತು ಎಂದು ಅದು ತೀರ್ಮಾನಕ್ಕೆ ಬಂದ ಸಂದರ್ಭದಲ್ಲಿ ಮುಂದಿನ ಕ್ರಮ ಜರುಗಿಸುವುದಕ್ಕೆ ಜಾರಿ ನಿರ್ದೇಶನಾಲಯ (ಎನ್‍ಫೋರ್ಸ್‍ಮೆಂಟ್ ಡೈರೆಕ್ಟೊರೆಟ್), ಕೇಂದ್ರ ಬೇಹುಗಾರಿಕೆ ದಳ (ಸಿಬಿಐ) ಇವೆ. ಒಂದು ಶಿಸ್ತಿನಲ್ಲಿ ನಡೆಯಬೇಕಾದ ಕಾನೂನು ಜಾರಿ ಕ್ರಮದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಸಂಸ್ಥೆಗಳ ಹಸ್ತಕ್ಷೇಪಕ್ಕೆ ಅವಕಾಶ ಕಲ್ಪಿಸಿದರೆ ವ್ಯವಸ್ಥೆ ಮೂರಾಬಟ್ಟೆ ಆಗುತ್ತದೆಂಬುದು ಸರ್ಕಾರ ನೀಡಿಕೊಂಡು ಬಂದಿರುವ ವಿವರಣೆ. ಇದನ್ನು ಜನ ಒಪ್ಪದಿರಬಹುದು; ಆದರೆ ಸಂಸತ್ತನ್ನು ತುಂಬಿರುವ ರಾಜಕಾರಣಿಗಳು ಒಪ್ಪುತ್ತಾರೆ. ತಕರಾರೇ ಇಲ್ಲದ ಸಮ್ಮತಿಗೆ ಅವರದೇ ಆದ ಕಾರಣ ಇದೆ. ಆ ಕಾರಣ ಏನೆನ್ನುವುದು ಜನರಿಗೂ ಈಗ ಅರ್ಥವಾಗಿದೆ. ಹಾಗಂತ ಚುನಾವಣಾ ಆಯೋಗದ ಮೇಲಿನ ಆರೋಪ ಕಡಿಮೆಯಾಗಿಲ್ಲ.
ಒಬ್ಬ ಅಭ್ಯರ್ಥಿ ಒಂದಕ್ಕಿಂತ ಹೆಚ್ಚಿನ ಕ್ಷೇತ್ರಗಳಲ್ಲಿ ಯಾಕೆ ಸ್ಪರ್ಧಿಸುವ ಅವಕಾಶವಿದೆ, ಚುನಾವಣಾ ಆಯೋಗ ಇದಕ್ಕೆ ಅವಕಾಶ ಕೊಡಕೂಡದು ಎನ್ನುವುದು ಜನ ಸಾಮಾನ್ಯರ ಚರ್ಚೆಯಲ್ಲಿ ಕೇಳಿಬರುವ ದೂರು. ಸ್ವಾತಂತ್ರ್ಯ ಬಂದ ತರುವಾಯ ಮೊದಲ ಸಾರ್ವತ್ರಿಕ ಚುನಾವಣೆ ನಡೆದುದು 1952ರಲ್ಲಿ. ಅಲ್ಲಿಂದ 1996ರವರೆಗೂ ಒಬ್ಬ ಅಭ್ಯರ್ಥಿ ಎಷ್ಟೂ ಕ್ಷೇತ್ರದಲ್ಲಿ ಕಣಕ್ಕೆ ಇಳಿಯುವ ಸ್ವಾತಂತ್ರ್ಯವನ್ನೂ ಅವಕಾಶವನ್ನೂ ನಮ್ಮ ಜನತಂತ್ರ ನೀಡಿತ್ತು. ಕೆಲವು ರಾಜಕಾರಣಿಗಳು ಈ ಅವಕಾಶದ ಉಪಯೋಗ ಪಡೆದರು; ಹಲವರು ದುರುಪಯೋಗಪಡಿಸಿಕೊಂಡರು. 1996ರಲ್ಲಿ ಜನತಾ ಪ್ರಾತಿನಿಧ್ಯ ಕಾಯ್ದೆಗೆ ತಿದ್ದುಪಡಿ ತಂದು ಒಬ್ಬರು ಗರಿಷ್ಠ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುವುದಕ್ಕೆ ಮಾತ್ರವೇ ಅವಕಾಶ ಕಲ್ಪಿಸಲಾಯಿತು. ಆದರೆ ಎರಡು ಕ್ಷೇತ್ರದಲ್ಲಿ ಸ್ಪರ್ಧೆಗೆ ಅವಕಾಶ ಕೊಡುವುದು ಕೂಡಾ ಸಲ್ಲದು; ಒಬ್ಬರಿಗೆ ಒಂದು ಓಟು ಎಂಬಂತೆ ಒಬ್ಬ ಅಭ್ಯರ್ಥಿಗೆ ಒಂದು ಕ್ಷೇತ್ರ ಎಂಬ ನಿಯಮ ಅಗತ್ಯವೆನ್ನುವುದು ಆಯೋಗದ ವಾದ.
ಇದನ್ನೂ ಓದಿ: ಮೊಗಸಾಲೆ ಅಂಕಣ: ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಎಂಬ ಕೌತುಕದ ಗೂಡು
ಒಬ್ಬರಿಗೆ ಎರಡು ಕ್ಷೇತ್ರ ಬೇಕಾಗಿಲ್ಲ, ಎರಡರಲ್ಲೂ ಒಬ್ಬರೇ ಗೆದ್ದರೆ ಉಪ ಚುನಾವಣೆ ಅನಿವಾರ್ಯವಾಗಿ ಅನಗತ್ಯ ವೆಚ್ಚಕ್ಕೆ ದಾರಿಯಾಗುತ್ತದೆಂಬ ದೃಷ್ಟಿಯಲ್ಲಿ ಆಯೋಗ ಬಯಸಿದ್ದು ಜನತಾ ಪ್ರಾತಿನಿಧ್ಯ ಕಾಯ್ದೆಗೆ (ಪೀಪಲ್ ರೆಪ್ರೆಸೆಂಟೇಷನ್ ಆಕ್ಟ್) ತಿದ್ದುಪಡಿಯನ್ನು. ಕೇಂದ್ರ ಸರ್ಕಾರಕ್ಕೆ 2004ರಲ್ಲಿ; 2010ರಲ್ಲಿ; 2016ರಲ್ಲಿ ಹಾಗೂ 2018ರಲ್ಲಿ ಆಯೋಗ ಒತ್ತಾಯ ಮಾಡಿತ್ತು. ವಿಚಾರ ಸುಪ್ರೀಂ ಕೋರ್ಟ್ ಮೆಟ್ಟಿಲನ್ನೂ ಏರಿ ಸಾಂವೈಧಾನಿಕ ಚರ್ಚೆಗೆ ಅವಕಾಶವಾಗಿತ್ತು. ನಂತರದಲ್ಲಿ “ಈ ವಿಚಾರದಲ್ಲಿ ಸಂಸತ್ತಿನ ಸಾರ್ವಭೌಮ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ” ಎಂದು ಸುಪ್ರೀಂ ಕೋರ್ಟ್ ತೀರ್ಪಿತ್ತಿತ್ತು. ಚುನಾವಣಾ ಆಯೋಗದ ಅಧಿಕಾರ ವ್ಯಾಪ್ತಿಪ್ರಾಪ್ತಿ ಈ ವಿಚಾರದಲ್ಲಿ ಎಷ್ಟು ಎನ್ನುವುದನ್ನು ಜನ ಅರ್ಥ ಮಾಡಿಕೊಂಡರೆ ಜನ ಪ್ರತಿನಿಧಿಗಳ ಮೇಲೆ ಒತ್ತಡ ಹಾಕಬಹುದು. ಒಂದಕ್ಕಿಂತ ಹೆಚ್ಚಿನ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಅದರ ರಾಜಕೀಯ ಲಾಭ ಪಡೆದವರಲ್ಲಿ ವಾಜಪೇಯಿ, ಇಂದಿರಾ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ನರೇಂದ್ರ ಮೋದಿ, ಸಿದ್ದರಾಮಯ್ಯ ಹೀಗೆ ಹಲವರು ಇದ್ದಾರೆ. ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿಯೂ ಸೋತ ದೇವೇಗೌಡರಂಥವರೂ ಇದ್ದಾರೆ.
ಚುನಾವಣಾ ಆಯೋಗ ಜನತಾ ಪ್ರಾತಿನಿಧ್ಯ ಕಾಯ್ದೆಯಲ್ಲಿ ಆಗಬೇಕೆಂದು ಬಯಸಿರುವ ಅತ್ಯಂತ ಮುಖ್ಯ ಸಂಗತಿಯೆಂದರೆ ಪಕ್ಷಾಂತರ ತಡೆಗೆ ರಾಮಬಾಣ ಎಂದು ಆಯೋಗ ಭಾವಿಸಿರುವ ತಿದ್ದುಪಡಿ. ಗೆದ್ದವರು ತಮ್ಮ ಚುನಾಯಿತ ಅವಧಿ ಪೂರೈಸುವ ಮೊದಲೇ ರಾಜೀನಾಮೆ ನೀಡಿದರೆ ಅವರ ವಿರುದ್ಧ ಕಣದಲ್ಲಿದ್ದು ಅತ್ಯಂತ ಕಡಿಮೆ ಅಂತರದಲ್ಲಿ ಸೋತವರನ್ನು ಜನಪ್ರತಿನಿಧಿ ಎಂದು ಪರಿಗಣಿಸಿ ಘೋಷಿಸುವುದಕ್ಕೆ ಆಯೋಗ ಬಯಸಿರುವ ತಿದ್ದುಪಡಿ ನೆರವಾಗುತ್ತದೆ. ಪಕ್ಷಾಂತರ ಕಾಯ್ದೆ ಕಾರಣವಾಗಿ ಜನ ಪ್ರತಿನಿಧಿ ಸ್ಥಾನ ಚ್ಯುತರಾದ ಸಂದರ್ಭದಲ್ಲಿಯೂ ಇದೇ ಮಾನದಂಡ ಅನುಸರಿಸಿದರೆ ಪಕ್ಷಂತರ ಪಿಡುಗು ಗಮನಾರ್ಹವಾಗಿ ತಗ್ಗುತ್ತದೆ ಎನ್ನುವುದು ಆಯೋಗದ ಅಭಿಮತ. (ನೆನಪು ಮಾಡಿಕೊಳ್ಳಿ: 2018ರ ನಮ್ಮ ವಿಧಾನ ಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸರಳ ಬಹುಮತ ಬರಲಿಲ್ಲ. ಒಂದಿಷ್ಟು ದಿವಸ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ. ಆ ಎರಡು ಪಕ್ಷಗಳಿಂದ ಆಯ್ಕೆಯಾಗಿದ್ದ 17 ಶಾಸಕರು ಬಂಡೆದ್ದು ಬಿಜೆಪಿ ಜೊತೆ ಕೈಜೋಡಿಸಿ ಉಪ ಚುನಾವಣೆ ನಡೆಯುವಂತೆ ಮಾಡಿದ ಪ್ರಕರಣ. ಬಡ ತೆರಿಗೆದಾರರು ಅದಕ್ಕೆ ತಲೆದಂಡ ತೆತ್ತಿದ್ದು ಮರೆಯಬಾರದ ವಿದ್ಯಮಾನ). ಜನತಾ ಪ್ರಾತಿನಿಧ್ಯ ಕಾಯ್ದೆಗೆ ಇಂಥ ಅತಿರೇಕ ನಿಯಂತ್ರಿಸುವ ತಿದ್ದುಪಡಿ ತರುವ ಪರಮಾಧಿಕಾರ ಇರುವುದು ಸಂಸತ್ತಿಗೆ ಮಾತ್ರ. ಸಂಸತ್ತಿನ ತುಂಬ ಅವೇ ಅವೇ ರಾಜಕೀಯ ಪಕ್ಷಗಳ ಅವೇ ಅವೇ ಪ್ರತಿನಿಧಿಗಳು. ಅವರಿಗೆ ತಿದ್ದುಪಡಿ ಬೇಕಾಗಿಲ್ಲ. ಜನ ರೋಸಿ ಬೈಯಲಾರಂಭಿಸಿದರೆ ಬೈಸಿಕೊಳ್ಳಲು ಹೇಗೂ ಚುನಾವಣಾ ಆಯೋಗ ಇದ್ದೇ ಇದೆ.
ಇದನ್ನೂ ಓದಿ: ಮೊಗಸಾಲೆ ಅಂಕಣ: ಮೋದಿ, ಖರ್ಗೆ ಹಣಾಹಣಿಗೆ ವೇದಿಕೆ ಸಜ್ಜು