ಭಾರತೀಯ ಜನತಾ ಪಾರ್ಟಿ ರಾಜಕೀಯವಾಗಿ ಕಲಿಯುವುದು ಬೆಟ್ಟದಷ್ಟಿದೆ ಎನ್ನುವುದಕ್ಕೆ ಮತ್ತೆ ಮತ್ತೆ ಪುರಾವೆಗಳು ಕರ್ನಾಟಕದಲ್ಲಿ ಕಾಣಿಸುತ್ತಿವೆ. ಇತ್ತೀಚಿನ ಎರಡು ಉದಾಹರಣೆ ಗಮನಿಸಿ ಹೇಳುವುದಾದರೆ ಪಕ್ಷಕ್ಕೆ ಆಗಿರುವ ಅನಾಹುತ ಅಪಾರ; ಮುಖಭಂಗಕ್ಕೆ ಸಾಕುಬೇಕೆನಿಸುವಷ್ಟು ಮುಜುಗರ. ಇದರಲ್ಲಿ ಒಂದನೆಯದು ವಿಧಾನ ಪರಿಷತ್‍ನ ಇಬ್ಬರು ಸದಸ್ಯರಾದ ಪುಟ್ಟಣ್ಣ ಮತ್ತು ಬಾಬುರಾವ್ ಚಿಂಚನಸೂರರ ಬಂಡಾಯ. ಪಕ್ಷಕ್ಕೂ ವಿಧಾನ ಪರಿಷತ್ ಸದಸ್ಯತ್ವಕ್ಕೂ ರಾಜೀನಾಮೆ ಕೊಟ್ಟು ಬಿಜೆಪಿ ವರಿಷ್ಠರು ಕಂಗಾಲಾಗುವಂತೆ ಮಾಡುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಬಿಜೆಪಿಗೆ ಟಾಟಾ ಹೇಳಿರುವ ಪುಟ್ಟಣ್ಣ ಕಾಂಗ್ರೆಸ್ ಸೇರಿದ್ದಾಗಿದೆ. ಚಿಂಚನಸೂರರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮನೆ ಮುಂದೆ ನಿಂತು “ಬಾಗಿಲನು ತೆರೆದು ಸೇವೆಯನು ಕೊಡೋ…” ಎಂದು ರಾಗಾಲಾಪ ನಡೆಸಿದ್ದಾರೆ.
ವಿಧಾನ ಸಭೆಯಿಂದ ವಿಧಾನ ಪರಿಷತ್‍ಗೆ ಚಿಂಚನಸೂರರು ಆಯ್ಕೆಯಾಗಿದ್ದರು. ವಿಧಾನ ಸಭೆಯಲ್ಲಿ ಬಿಜೆಪಿ ಶಾಸಕ ಬಲ ಚೆನ್ನಾಗೇ ಇರುವುದರಿಂದ ಇನ್ನೊಬ್ಬರನ್ನು ಅಲ್ಲಿ ಆಯ್ಕೆ ಮಾಡಿ ಕೂರಿಸುವುದು ಬಿಜೆಪಿಗೆ ಕಷ್ಟವೇನಲ್ಲ. ಆದರೆ ಆ ಆಯ್ಕೆ ಈಗಲೇ ನಡೆಯುತ್ತದೆಂದು ಹೇಳಲಾಗದು. ಚುನಾವಣೆ ಬಳಿಕ ಆಯ್ಕೆ ಪ್ರಕ್ರಿಯೆ ಎಂದಾದಲ್ಲಿ ಬಹುಮತ ಬಿಜೆಪಿಗೇ ಬರುತ್ತದೆಂಬ ಖಾತ್ರಿ ಇಲ್ಲ. ಚಿಂಚನಸೂರರಿಗೆ ಟಿಕೆಟ್ ಕೊಡುವ ಪೂರ್ವದಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಲಿಯ ಅಧ್ಯಕ್ಷ ಎಚ್.ಎಸ್. ಸಚ್ಚಿದಾನಂದಮೂರ್ತಿ ಅವರ ಹೆಸರನ್ನು ಪಕ್ಷ ಬಹುತೇಕ ಆಖೈರುಗೊಳಿಸಿತ್ತು. ಅದೇನು ಮಾಯೆ ಘಟಿಸಿತೋ. ಬೆಸ್ತ ಸಮುದಾಯದ ಮುಖಂಡ (ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕೋಲಿ ಸಮುದಾಯ ಎನ್ನುತ್ತಾರೆ) ಚಿಂಚನಸೂರರಿಗೆ ಅವರು ಬಯಸಿದ ಲಾಟರಿ ಹೊಡೆಯಿತು. ಇಂದಲ್ಲ ನಾಳೆ ಸಚಿವ ಸಂಪುಟದ ವಿಸ್ತರಣೆ ಅಥವಾ ಪುನಾರಚನೆ ಆಗುತ್ತದೆ, ಮಂತ್ರಿ ಆಗಿ ಗೂಟದ ಕಾರಿನಲ್ಲಿ ಮೆರೆಯುವ ಅದೃಷ್ಟ ತನ್ನಷ್ಟಕ್ಕೆ ತಾನೇ ಒಲಿಯುತ್ತದೆ ಎಂಬ ಲೆಕ್ಕಾಚಾರದಲ್ಲಿ ಮನಸ್ಸಿನಲ್ಲೆ ಮಂಡಿಗೆ ಮೆಲ್ಲುತ್ತಿದ್ದ ಅವರಿಗೆ ಭ್ರಮನಿರಸನವಾಗಿದ್ದರ ಫಲ ಪಕ್ಷಕ್ಕೆ ಮತ್ತು ಅದರಿಂದಾಗಿ ಒಲಿದ ಶಾಸಕ ಸ್ಥಾನಕ್ಕೆ ರಾಜೀನಾಮೆ.
2019ರ ಲೋಕಸಭೆ ಚುನಾವಣೆಗೆ ಮೊದಲು ಬಿಜೆಪಿಗೆ ಬಂದವರು ಚಿಂಚನಸೂರ್. ಖರ್ಗೆಯವರನ್ನು ಸೋಲಿಸಲೆಂದೇ ತಾವು ಬಿಜೆಪಿಗೆ ಬಂದುದಾಗಿ ವೀರಾವೇಶದಲ್ಲಿ ಚುನಾವಣಾ ಪ್ರಚಾರ ಸಭೆಗಳಲ್ಲಿ ಗುಟುರು ಹಾಕಿದ್ದರು. ಕೋಲಿ ಸಮುದಾಯದ ಮತದಾರರು ನಿರ್ಣಾಯಕವಾಗಿರುವ ಕಲಬುರ್ಗಿ ಲೋಕಸಭಾ ಕ್ಷೇತ್ರದಲ್ಲಿ ಚಿಂಚನಸೂರ್ ವ್ಯಾಪಕ ಪ್ರಚಾರ ಮಾಡಿದ್ದು ನಿಜ. ಕಾಗೆ ಕೂರುವುದಕ್ಕೂ ಕೊಂಬೆ ಮುರಿಯುವುದಕ್ಕೂ ಸರಿ ಹೋಯಿತು ಎನ್ನುತ್ತಾರಲ್ಲ ಹಾಗೆ. ಕಾಕತಾಳೀಯ ನ್ಯಾಯ. ಖರ್ಗೆ ಸೋತರು. ಖರ್ಗೆಯವರನ್ನು ಸೋಲಿಸಿದ ಕೀರ್ತಿ ಕಿರೀಟವನ್ನು ಚಿಂಚನಸೂರ್ ತಮಗೆ ತಾವೇ ತೊಡಿಸಿಕೊಂಡರು. ಕಾಂಗ್ರೆಸ್ ತೊರೆದು ಬಿಜೆಪಿಗೆ ಹೋಗುವಾಗ ಕಂಡಿದ್ದ ಕನಸೆಲ್ಲವೂ ಕನ್ನಡಿಯೊಳಗಿನ ಗಂಟಾಗಿಯೇ ಉಳಿಯುವುದು ಖಾತ್ರಿ ಎನಿಸಿದ ನಂತರ ಹಳೆ ಗಂಡನ ಪಾದವೇ ಗತಿ ಎಂಬಂತೆ ಕಾಂಗ್ರೆಸ್‍ಗೆ ಮರಳಿ ಸೇರುವುದಕ್ಕೆ ಅರ್ಜಿ ಹಿಡಿದು ಖರ್ಗೆ ಮನೆ ಬಾಗಿಲಲ್ಲಿ ನಿಂತಿದ್ದಾರೆ. ಇಷ್ಟರಲ್ಲೇ ಅವರಿಗೆ ಕೈ ಬಾಗಿಲು ತೆರೆಯಲಿದೆ.
ಜೆಡಿಎಸ್‍ನಿಂದ ರಾಜಕೀಯ ಆರಂಭಿಸಿ ಬಿಜೆಪಿಗೆ ಹೋಗಿ ಈಗ ಕಾಂಗ್ರೆಸ್ ಸೇರಿರುವ ಪುಟ್ಟಣ್ಣ, ರಾಜ್ಯದಲ್ಲಿ ಖಾಸಗಿ ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ನಡೆಸುವ ವಿವಿಧ ಪಕ್ಷ ರಾಜಕೀಯ ಮುಖಂಡರ ಟೀಮಿನ ಅಘೋಷಿತ ಮುಂದಾಳು. ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಮಾಧ್ಯಮಕ್ಕೆ ಆದ್ಯತೆ ನೀಡುವ ಪ್ರಸ್ತಾಪ ಬಂದಾಗಲೆಲ್ಲ ಅದರ ವಿರುದ್ಧ ಸಿಡಿದೇಳುವ ಪ್ರತಿಭಟನೆಯ ಸೂತ್ರಧಾರರಲ್ಲಿ ಪುಟ್ಟಣ್ಣನವರೂ ಒಬ್ಬರು ಎಂಬ ಆರೋಪ ಇದೆ. ಜೆಡಿಎಸ್ ಮೂಲಗಳ ಪ್ರಕಾರ ಆ ಪಕ್ಷದಲ್ಲಿ ಅವರಿಗೆ ಅನ್ಯಾಯವೇನೂ ಆಗಿರಲಿಲ್ಲ. ಹಾಗಿದ್ದರೂ ಪಕ್ಷ ತೊರೆದು ಬಿಜೆಪಿಗೆ ಜಿಗಿದರೇಕೆ…? ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಹೊರಟರೆ ಚಿಂಚನಸೂರರು ಮನಸ್ಸಿನಲ್ಲೇ ಮೆದ್ದ ಮಂಡಿಗೆಯ ಕಥೆ ಇಲ್ಲೂ ಪುನರಾವರ್ತನೆ ಆಗುತ್ತದೆ. ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆ ಒಳಗೊಂಡ ಶಿಕ್ಷಕರ ಕ್ಷೇತ್ರದಿಂದ ಸತತ ನಾಲ್ಕನೆ ಬಾರಿಗೆ ಆಯ್ಕೆಯಾದವರು ಪುಟ್ಟಣ್ಣ. ಮೊದಲು ಮೂರು ಅವಧಿ ಜೆಡಿಎಸ್‍ನಿಂದ ಗೆದ್ದವರು. ಈ ಎರಡೂ ಜಿಲ್ಲೆಗಳಲ್ಲಿ ಬಿಜೆಪಿ ಪ್ರಭಾವ ನಗಣ್ಯ. ಪುಟ್ಟಣ್ಣನವರನ್ನು ಒಳಕ್ಕೆ ಎಳೆದುಕೊಳ್ಳಲು ಬಿಜೆಪಿಗೆ ಇದ್ದ ಕಾರಣ, ಒಕ್ಕಲಿಗ ಪ್ರಧಾನ ಜಿಲ್ಲೆಗಳಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳುವ ಆಶಯ.
ಜೆಡಿಎಸ್‍ನಲ್ಲಿದ್ದಾಗ ವಿಧಾನ ಪರಿಷತ್‍ನ ಉಪ ಸಭಾಪತಿ ಸ್ಥಾನದಲ್ಲೂ ಕೆಲಸ ಮಾಡಿದ್ದ ಪುಟ್ಟಣ್ಣನವರು ಮಾತೃ ಪಕ್ಷ ತೊರೆಯಲು ಬಲವತ್ತರವಾಗಿದ್ದ ಅಸಲಿ ಕಾರಣ ಅವರಿಂದ ಬಹಿರಂಗ ಆಗಿಲ್ಲ. ಬೆಂಗಳೂರು ದಕ್ಷಿಣ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ಮಾಧ್ಯಮಕ್ಕೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿರುವುದು ನಿಜವೇ ಆಗಿದ್ದರೆ ಪುಟ್ಟಣ್ಣ, ಜೆಡಿಎಸ್ ತೊರೆದು ಬಿಜೆಪಿಗೆ ಸೇರಿದ್ದರ ನಿಜವಾದ ಕಾರಣ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಚಿವರಾಗುವುದು. ಚಿಂಚನಸೂರರಂತೆ ಪುಟ್ಟಣ್ಣನವರಿಗೆ ಕೂಡಾ ಮಂತ್ರಿಯಾಗುವ ಕನಸು ಇತ್ತು. ಅವರಂತೆ ಪುಟ್ಟಣ್ಣನವರ ಕನಸೂ ಕೈಗೂಡಲಿಲ್ಲ. ಕೈಗೆಟುಕದ ದ್ರಾಕ್ಷಿ ಹುಳಿ. ಬಿಜೆಪಿ ತೊರೆದಿರುವ ಅವರು ಕಾಂಗ್ರೆಸ್ ಸೇರಿದ್ದಾಗಿದೆ.
ಪುಟ್ಟಣ್ಣ ಅಥವಾ ಚಿಂಚನಸೂರರು ಪಕ್ಷ ತೊರೆಯುವ, ಶಾಸಕ ಸ್ಥಾನಕ್ಕೆ ಬೈಬೈ ಹೇಳುವಲ್ಲಿ ತೋರಿರುವ ಧೈರ್ಯದ ಪ್ರದರ್ಶನ ಮಾಡುವುದು ಬಿಜೆಪಿಯ ಇನ್ನೊಬ್ಬ ಬಂಡುಕೋರ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್‍ರವರಿಗೆ ಸಾಧ್ಯವಾಗಿಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರುವಂತಾಗಲು, ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಲು “ತ್ಯಾಗ” ಮಾಡಿದ ಕಾಂಗ್ರೆಸ್, ಜೆಡಿಎಸ್ ಪಕ್ಷದ ಹದಿನೇಳು ಶಾಸಕರಲ್ಲಿ ವಿಶ್ವನಾಥ್ ಕೂಡಾ ಒಬ್ಬರು. ಉಳಿದವರು ತಾವು ಬಯಸಿದ ಖಾತೆ ಮಂತ್ರಿಗಳಾಗಿ “ತ್ಯಾಗ”ಕ್ಕೆ ಪ್ರತಿಫಲ ಪಡೆದರು. ಆದರೆ ವಿಶ್ವನಾಥರ ಆಸೆ ಈಡೇರಲೇ ಇಲ್ಲ, ಕಂಡ ಕನಸು ಕೊನರಲಿಲ್ಲ. ಕೋರ್ಟ್ ಆದೇಶದ ತಾಂತ್ರಿಕ ಸಮಸ್ಯೆ ಕಾರಣವಾಗಿ ಮಂತ್ರಿಯಾಗುವ ಯೋಗ ಅವರಿಗೆ ಒಲಿಯಲಿಲ್ಲ. ಬಿಜೆಪಿ ಕೇಂದ್ರ ನಾಯಕತ್ವದ ಮಸಲತ್ತಿನ ಕಾರಣವಾಗಿ ತಮಗೆ ಬಹಳ ದೊಡ್ಡ ಪ್ರಮಾಣದಲ್ಲಿ ಅನ್ಯಾಯವಾಯಿತು ಎನ್ನುವ ವಿಶ್ವನಾಥ್, ಈಗ ಕಾಂಗ್ರೆಸ್ ಬಾಗಿಲು ಬಡಿದಿದ್ದಾರೆ.
ಪಕ್ಷ ತೊರೆಯುವ ಪೂರ್ವದಲ್ಲಿ ವಿಶ್ವನಾಥ್, ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷರಾಗಿದ್ದರು. ಹುಣಸೂರು ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯೂ ಆಗಿದ್ದರು. ಅದೇನು ಹುಚ್ಚು ತಗುಲಿಕೊಂಡಿತೋ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು “ತ್ಯಾಗರಾಜ” ಆಗುವ ಹಂಬಲದಲ್ಲಿ ಸ್ವಬಲಿಯಾದರು. ಹದಿನೇಳು ಶಾಸಕರಲ್ಲಿ ಮಂತ್ರಿಗಳಾಗಿದ್ದವರೂ ಸೇರಿದಂತೆ ಪಕ್ಷಕ್ಕೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ಬಿಸುಟು ಉಪ ಚುನಾವಣೆಗೆ ವೇದಿಕೆ ಕಲ್ಪಿಸಿಸಿದರು. ಬೇಡವೇ ಬೇಡ, ನೀವು ಗೆಲ್ಲೋಲ್ಲ ಎಂದು ಬಿಜೆಪಿ ಗಿಳಿ ಪಾಠದಂತೆ ಹೇಳಿದರೂ ಹಟ ಹಿಡಿದ ವಿಶ್ವನಾಥ್, ಹುಣಸೂರು ಕ್ಷೇತ್ರದಲ್ಲಿ ಮರು ಆಯ್ಕೆ ಬಯಸಿ ಕಣಕ್ಕಿಳಿದು ಸೋತರು. ಅಲ್ಲಿಂದ ಇಲ್ಲೀವರೆಗೂ ಒಂದಲ್ಲಾ ಒಂದು ಹಿನ್ನಡೆಯಲ್ಲಿರುವ ಅವರು ಕಾಂಗ್ರೆಸ್‍ನೊಳಕ್ಕೆ ತೂರಿಕೊಳ್ಳುವುದಕ್ಕೆ ಸಿದ್ದರಾಮಯ್ಯ ಕೃಪೆ ಬಯಸಿ ನಿಂತಿದ್ದಾರೆ. ತಮ್ಮದು ಪಕ್ಷಾಂತರ ಅಲ್ಲವೆಂದೂ ಕಾಂಗ್ರೆಸ್ ತಮ್ಮ ಮೂಲ ಪಕ್ಷವಾಗಿರುವುದರಿಂದ ತಮ್ಮ ಕಾಂಗ್ರೆಸ್ ಸೇರ್ಪಡೆ “ಮರಳಿ ತವರು ಮನೆಗೆ” ಎಂಬಂತೆಂದೂ ಅವರು ಸಮರ್ಥಿಸಿಕೊಂಡಿದ್ದಾರೆ.
ಬಿಜೆಪಿಯನ್ನೂ ಅದರ ನಾಯಕತ್ವವನ್ನೂ ವಿಧಾನ ಪರಿಷತ್‍ನ ಒಳಗೆ ಹೊರಗೆ ಜಾಲಾಡುತ್ತಿರುವ ವಿಶ್ವನಾಥ್, ಪಕ್ಷ ತಮ್ಮನ್ನು ಉಚ್ಚಾಟಿಸಲಿ ಎಂಬ ಆಸೆಯಲ್ಲಿದ್ದಾರೆ. ದಿನವೂ ಬಿಜೆಪಿ ಮತ್ತು ಅದರ ನಾಯಕರ ವಿರುದ್ಧ ವಿಶ್ವನಾಥ್ ಮಾಡುತ್ತಿರುವ ಟೀಕಾ ಪ್ರಹಾರದ ಅರಿವು ಬಿಜೆಪಿ ವರಿಷ್ಠರಿಗೆ ಇಲ್ಲ ಎಂದೇನೂ ಅಲ್ಲ. ಆದರೆ ಟೀಕೆ ತೆಗಳಿಕೆ ಮೂಲಕವೇ ರಾಜಕೀಯ ಗೆಲುವು ಸಾಧಿಸಬಹುದು ಎಂಬ ವಿಶ್ವನಾಥರ ಯೋಚನೆ ಯೋಜನೆ ಎರಡೂ ಸಫಲವಾಗದಂತೆ ಮಾಡುವ ತಂತ್ರಗಾರಿಕೆಯನ್ನು ಬಿಜೆಪಿ ಅನುಸರಿಸುತ್ತಿರುವಂತಿದೆ. ಈವರೆಗಂತೂ ಅದು ಈ ನೀತಿ ಪಾಲಿಸಿಕೊಂಡು ಬಂದಿದೆ. ಮುಂದೆ ಏನೋ ಹೇಗೋ.
ಪಕ್ಷಾಂತರ ನಿಷೇಧ ಕಾಯ್ದೆಯ ಆಳ ಅಗಲ ವಿಶ್ವನಾಥ್‍ರಿಗೆ ಗೊತ್ತಿದೆ. ಪಕ್ಷಕ್ಕೆ ವಿಶ್ವನಾಥ್ ತಾವಾಗಿಯೇ ರಾಜೀನಾಮೆ ಕೊಟ್ಟರೆ ಅವರು ಈಗ ಹೊಂದಿರುವ ವಿಧಾನ ಪರಿಷತ್ ಸದಸ್ಯತ್ವ ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ಅನೂರ್ಜಿತವಾಗುತ್ತದೆ. ಪಕ್ಷವೇ ಅವರನ್ನು ಹೊರಕ್ಕೆ ಹಾಕಿದರೆ ಸದಸ್ಯತ್ವ ಅವರದಾಗಿ ಅವರ ಆಯ್ಕೆ ಅವಧಿಪೂರ್ತಿ ಮುಂದುವರಿಯುತ್ತದೆ. ಶಾಸಕ ಸ್ಥಾನ ತರುವ ಮಾನ ಸಂಮ್ಮಾನದ ಮಹತ್ವ ಬಲ್ಲ ವಿಶ್ವನಾಥ್, ಪಕ್ಷದಿಂದ ಹೊರಕ್ಕೆ ಹಾಕಿಸಿಕೊಂಡು ಸುಖಸವಲತ್ತು ಕೈತಪ್ಪದಂತೆ ಅನುಭವಿಸುವ ಯತ್ನ ನಡೆಸಿದ್ದಾರೆಯೇ ಹೊರತೂ ತಾವಾಗೇ ನಿರ್ಗಮಿಸುವ ತಯಾರಿಯಲ್ಲಿಲ್ಲ. ಇದನ್ನು ಬಲ್ಲ ಬಿಜೆಪಿ, ಇನ್ನಷ್ಟು ದಿವಸ ಕಾದು ನೋಡುವ ಭಾವನೆಯಲ್ಲಿರುವಂತಿದೆ. ಅವರ ಕಾಂಗ್ರೆಸ್ ಪ್ರವೇಶದ ಪಾಸು ಸಿದ್ದರಾಮಯ್ಯ ಕೈಯಲ್ಲಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಷ್ಟೂ ಕಾಲ ಹರಿಶ್ಚಂದ್ರನಿಗೆ ನಕ್ಷತ್ರಿಕ ಬೆನ್ನು ಹತ್ತಿ ಪೀಡಿಸಿದಂತೆ ಕಾಡಿದವರು ವಿಶ್ವನಾಥ್. ಇದನ್ನು ಬಲ್ಲವರಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಒಕೆ ಎಂದರೆ ಮಾತ್ರವೇ ವಿಶ್ವನಾಥರನ್ನು ಒಳಕ್ಕೆ ಬಿಟ್ಟುಕೊಳ್ಳುತ್ತಾರೆ. ಇದು ವಿಶ್ವನಾಥ್‍ರಿಗೆ ಗೊತ್ತಿದೆ. ಹಾಗೆಂದೇ ಅಪ್ಪನ ಮನಸ್ಸು ಮೃದುವಾಗಿಸುವ ಕೆಲಸಕ್ಕಾಗಿ ಮಗನ ಬೆನ್ನು ಹತ್ತಿದ್ದಾರೆ. ಸಿದ್ದರಾಮಯ್ಯನವರ ಮನವೊಲಿಸುವ ನಿಟ್ಟಿನಲ್ಲಿ ವರುಣಾ ಕ್ಷೇತ್ರದ ಶಾಸಕ ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರನ್ನು ವಿಶ್ವನಾಥ್ ಭೇಟಿ ಮಾಡಿ ಸಹಾಯ ಬಯಸಿದ್ದಾರೆಂಬ ಸುದ್ದಿ ವ್ಯಾಪಕವಾಗಿದೆ.
ಇದನ್ನೂ ಓದಿ: ಮೊಗಸಾಲೆ ಅಂಕಣ: ಆಯಾರಾಂ ಗಯಾರಾಂ ಮರಕೋತಿ ಆಟ
ಭಾರತೀಯ ಜನತಾ ಪಾರ್ಟಿ ಪಾಠ ಕಲಿಯದ ಇನ್ನೊಂದು ಸಂಗತಿ ಎಂದರೆ ಗೆಲ್ಲುವುದೊಂದೇ ಮಾನದಂಡ ಎಂಬ ನಿಲುವು. 2008ರ ವಿಧಾನ ಸಭಾ ಚುನಾವಣೆ ದಿನಗಳಲ್ಲಿ ಬಿ.ಎಸ್.ಯಡಿಯೂರಪ್ಪ ಆಡಿದ ಮಾತು “ಗೆಲ್ಲುವುದೊಂದೇ ಮಾನದಂಡ”. ಬಿಜೆಪಿ ಗೆಲ್ಲುವ ಕುದುರೆ ಎಂದು ನಂಬಿದ ಬೇರೆ ಬೇರೆ ಪಕ್ಷಗಳ ಹಣವಂತರು, ಜಾತಿಬಲ ಹಾಗೂ ತೋಳ್ಬಲವುಳ್ಳ ಅನೇಕರು ಬಿಜೆಪಿಯೊಳಗೆ ತೂರಿಕೊಂಡರು. ಇನ್ನು ಹಲವರನ್ನು ಬಿಜೆಪಿಯೇ ಸ್ವಾಗತಿಸಿತು. ಹಾಗೆ ಬಂದವರಲ್ಲಿ ಅನೇಕರು ಪಕ್ಷಕ್ಕೆ ಈಗ ತಲೆನೋವಾಗಿದ್ದಾರೆಂದು ಆರ್‍ಎಸ್‍ಎಸ್, ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಮಾರ್ಗವಾಗಿ ಬಿಜೆಪಿಗೆ ಬಂದಿರುವ ಕೆಲವರು ಅಲವತ್ತುಕೊಳ್ಳುತ್ತಿದ್ದಾರೆ. ಹೀಗೆಂದ ಮಾತ್ರಕ್ಕೆ ದೆಹಲಿ ಹಂತದ ಬಿಜೆಪಿ ವರಿಷ್ಠರು ತಲೆ ಬಿಸಿ ಮಾಡಿಕೊಂಡಿದ್ದಾರೆಂದೇನೂ ಅರ್ಥವಲ್ಲ. 2008ರ ಮತ್ತು 2018ರ ಚುನಾವಣೆ ಬಳಿಕ ಬಿಜೆಪಿ ಅಧಿಕಾರ ಹಿಡಿಯಿತು. ಅಧಿಕಾರಕ್ಕೆ ಅದು ಬಹುಮತದೊಂದಿಗೆ ಬರಲಿಲ್ಲ ಎನ್ನುವುದು ಗಮನಾರ್ಹ. 2008ರಲ್ಲಿ ಅದು ಗಳಿಸಿದ್ದು 110 ಸ್ಥಾನ; 2018ರಲ್ಲಿ ದಕ್ಕಿದ್ದು 104 ಸ್ಥಾನ. ಆಪರೇಷನ್ ಕಮಲ ಎಂಬ ಅಡ್ಡಮಾರ್ಗ ಹಿಡಿದು ಅಧಿಕಾರಕ್ಕೆ ಬಂದ ಪಕ್ಷ, ಈಗ ಬರಲಿರುವ ಚುನಾವಣೆಯನ್ನು ಗೆಲ್ಲುವುದಕ್ಕೆ ಏನೆಲ್ಲ ತಂತ್ರ ಬಳಸುತ್ತದೋ ಗೊತ್ತಿಲ್ಲ. ಒಂದಂತೂ ಸತ್ಯ, ಅದರ ಗೆಲುವಿನ ದಾರಿಯಲ್ಲಿ ಹೂ ಹಾಸಿಲ್ಲ ಬದಲಿಗೆ ಕಲ್ಲುಮುಳ್ಳು ಹರಡಿವೆ.
ಬಿಜೆಪಿಗೆ 2023ರ ಕರ್ನಾಟಕ ವಿಧಾನ ಸಭೆ ಚುನಾವಣೆ ಗೆಲ್ಲುವುದು ಮುಖ್ಯವೇ ಹೌದಾದರೂ 2024ರ ಲೋಕಸಭಾ ಚುನಾವಣೆ ಇದಕ್ಕಿಂತ ಮುಖ್ಯವಾದುದು. 2019ರಲ್ಲಿ ರಾಜ್ಯದ 28 ಲೋಕಸಭೆ ಸ್ಥಾನದ ಪೈಕಿ 25 ಬಿಜೆಪಿ ಪಾಲಾಗಿತ್ತು. ಕಾಂಗ್ರೆಸ್, ಜೆಡಿಎಸ್ ತಲಾ ಒಂದು ಸ್ಥಾನ ಗಳಿಸಿದ್ದರೆ ಬಿಜೆಪಿ ಬೆಂಬಲಿತ ಪಕ್ಷೇತರ ಸದಸ್ಯೆ ಸುಮಲತಾ ಮತ್ತೊಂದು ಸೀಟನ್ನು ಬಾಚಿಕೊಂಡಿದ್ದರು. ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಸೋತರೆ ಅದು ಲೋಕಸಭಾ ಚುನಾವಣೆಯ ಮೇಲೆ ಅಡ್ಡ ಪರಿಣಾಮ ಬೀರುವುದು ನೂರಕ್ಕೆ ನೂರು ಪರ್ಸೆಂಟ್ ಸತ್ಯ. ಪಕ್ಷದ ಹೈಕಮಾಂಡ್‍ನ ಮಂಡೆಬಿಸಿ ಹೆಚ್ಚಿಸಿರುವ ಈ ಆತಂಕಕಾರಿ ಬೆಳವಣಿಗೆಗೆ ಬಿಜೆಪಿ ವರಿಷ್ಟರಲ್ಲಿರುವ ಮದ್ದು ಯಾವುದು ಎನ್ನುವುದು ಗೊತ್ತಿಲ್ಲ.
ಇದನ್ನೂ ಓದಿ: ಮೊಗಸಾಲೆ ಅಂಕಣ: ಮತ್ತೆ ಮಧ್ಯರಂಗಕ್ಕೆ ಬಂದ ಬಿಎಸ್ ಯಡಿಯೂರಪ್ಪ